Gandhi Jayanthi | October 2 | MK Gandhi – ಗಾಂಧೀಜಿ ಬಗ್ಗೆ ಓದಲು ಪುರುಸೊತ್ತಿದೆಯಾ?

Mahatma Gandhi

ಗಾಂಧಿ ಜಯಂತಿ ಅಂದ್ರೆ ಅಕ್ಟೋಬರ್ 2, ಮತ್ತೊಂದು ರಜಾ! ಅನ್ನುವಷ್ಟರ ಮಟ್ಟಿಗೆ ಗಾಂಧೀಜಿ ಹಿಂದಿನ ಇಂದಿನ ಪೀಳಿಗೆಗೆ ಮರೆತುಹೋಗಿದೆ. ಗಾಂಧೀಜಿ ರಾಷ್ಟ್ರಪಿತ, ಅವರಿಗೆ ಮಕ್ಕಳೆಂದರೆ ಪ್ರೀತಿ, ಸ್ವಾತಂತ್ರ್ಯಕ್ಕಾಗಿ ಅವರು ಬ್ರಿಟಿಷರ ವಿರುದ್ಧ ಹೋರಾಡಿದರು… ಎಂಬಂತಹ ಮುದ್ದಾದ ಭಾಷಣಗಳು ಕೂಡ ಇಂದು ಕೇಳಲು ಸಿಗುವುದಿಲ್ಲ. ಗಾಂಧೀಜಿ ಪಾಲಿಸಿದ ಸತ್ಯ, ಅಹಿಂಸೆ, ರಾಮರಾಜ್ಯ, ಗ್ರಾಮೀಣ ಉದ್ಯೋಗ, ಶ್ರಮ ಸಂಸ್ಕೃತಿಗಳೆಲ್ಲ ಇಂದು ಜಂಗು ಹಿಡಿದಿವೆ. ಆದರೂ, ಗೊತ್ತಿದ್ದೋ ಗೊತ್ತಿಲ್ಲದೆಯೇ ನಮಗೆ ಬಿಟ್ಟು ಹೋದ ಗಾಂಧೀಜಿ ತತ್ತ್ವಗಳನ್ನು ನಾವು ಪಾಲಿಸುತ್ತಿದ್ದೇವೆ, ಅಥವಾ ಅವಮಾನಿಸುತ್ತಿದ್ದೇವೆ. ಹೇಗಂತೀರಾ? ಮುಂದೆ ಓದಿ.

ಅಮೇರಿಕದ ಅಧ್ಯಕ್ಷ ಒಬಾಮರವರಿಗೆ ಮಹಾತ್ಮ ಗಾಂಧೀಜಿ ಹೀರೋ ಆಗಿ ಕಾಣಿಸತೊಡಗಿದ್ದಾರೆ. ಮಹಾತ್ಮಾ ಗಾಂಧಿ ನನ್ನ ಹೀರೋ ಎನ್ನುವ ಈ ಒಂದು ಹೇಳಿಕೆನೇ ಅನೇಕ ಭಾರತೀಯರಿಗೆ ಒಬಾಮನೇ ಹೀರೋ ಆಗಿಬಿಟ್ಟಿದ್ದರಲ್ಲಿ ಆಶ್ಚರ್ಯವಿಲ್ಲ. ಜಗತ್ತಿನ ದೊಡ್ಡಣ್ಣನ ಒಂದೊಂದು ಶಬ್ಧವನ್ನು ಸಹ ಜಗತ್ತಿನ ದೇಶಗಳೆಲ್ಲಾ ಆಲಿಸುತ್ತಿರುತ್ತವೆ. ಅಂತಹದರಲ್ಲಿ ದೊಡ್ಡಣ್ಣನ ಬಾಯಲ್ಲಿ ಗಾಂಧೀಜಿ ಗುಣಗಾನ ಕೇಳಿದ ಭಾರತೀಯರಿಗೂ ಮರೆತು ಹೋಗಿದ್ದ ಮಹಾತ್ಮ ಗಾಂಧಿ ನೆನಪಾಗಿದ್ದರಲ್ಲಿ ಆಶ್ಚರ್‍ಯವಿಲ್ಲಾ.

ಮಹಾತ್ಮ ಗಾಂಧಿ ನೆನಪು ಇವತ್ತು ಅಕ್ಟೋಬರ್ 2ಕ್ಕೆ ಅಷ್ಟೇ ಸೀಮೀತವಾಗಿರುವುದು ನಮ್ಮ ದುರ್ದೈವ. ಇನ್ನು ಮಹಾತ್ಮರ ತತ್ತ್ವ, ವಿಚಾರಧಾರೆಗಳಿಗೆ ಹಿಂತಿರುಗಲಾರದಷ್ಟು ಮುಂದಕ್ಕೆ ಬಂದಿದ್ದೇವೆ. ಇವತ್ತಿನ ಪೀಳಿಗೆಗೆ ಮಹಾತ್ಮ ಗಾಂಧಿಯ ವಿಚಾರಧಾರೆಗಳು ತತ್ತ್ವಗಳು ಬೆರಗುಗಣ್ಣುಗಳಿಂದ ಓದುವುದು ಕೇಳುವುದು ಆಗಿದೇ ಹೊರತು, ಪರಿಪಾಲನೆ ಸಾದ್ಯವಿಲ್ಲದಾಗಿದೆ. ಮೊದಲೆಲ್ಲಾ ಕೊನೆಪಕ್ಷ ಜನಪ್ರತಿನಿಧಿಗಳ, ರಾಜಕಾರಣಿಗಳ ಭಾಷಣಗಳಲ್ಲಿಯಾದರೂ ಮಹಾತ್ಮನ ಬಗ್ಗೆ ಪುಂಖಾನುಪುಂಖವಾಗಿ ಮಾತುಗಳು ಬರುತ್ತಿತ್ತು. ಈಗಿನವರ ಭಾಷಣವೂ ‘ಗಾಂಧಿ’ ಗುಣಗಾನದಿಂದಲೇ ಮುಕ್ತಾಯವಾಗುತ್ತಿದೆ!

ಜಾಗತಿಕ ಆರ್ಥಿಕ ಕುಸಿತದ ಪರಿಣಾಮ ಎಲ್ಲ ರಾಷ್ಟ್ರಗಳು ಸಂಕಷ್ಟದ ಸುಳಿಯಲ್ಲಿ ಸಿಲುಕಿದ್ದು ಎಲ್ಲರಿಗೆ ಗೊತ್ತೇ ಇದೆ. ಇದಕ್ಕೆ ಭಾರತವೂ ಹೊರತಾಗಿಲ್ಲ. ಆದರೆ ಉಳಿದ ರಾಷ್ಟ್ರಗಳಿಗೆ ಹೋಲಿಸಿದರೆ ಭಾರತದಲ್ಲಿ ಇದರ ಬಿಸಿ ತಟ್ಟಿದ್ದು ಕಡಿಮೆ ಎನ್ನಬಹುದು. ಇದಕ್ಕೆ ಕಾರಣ ತಳಮಟ್ಟದಲ್ಲಿ ಗಾಂಧೀಜಿಯ ತತ್ತ್ವಗಳು, ವಿಚಾರಧಾರೆಗಳು ಇನ್ನು ಉಳಿದುಕೊಂಡಿರುವುದೇ ಕಾರಣ ಎನ್ನಬಹುದು. ಗಾಂಧೀಜಿಯವರ ಅಧಿಕಾರ ವಿಕೇಂದ್ರೀಕರಣ ತತ್ತ್ವ, ರೈತರ ಸ್ವಾವಲಂಬಿ ಬದುಕು, ಗುಡಿಕೈಗಾರಿಕೆಗೆ ಒತ್ತು ನೀಡುವಿಕೆ, ಶ್ರಮ ಸಂಸ್ಕ್ರತಿ, ಸರಳ ಜೀವನ, ನೈತಿಕ ವ್ಯಾಪಾರ, ಅತಿಯಾದ ಯಂತ್ರಗಳ ಅವಲಂಭನೆ ಇಲ್ಲದಿರುವುದು ಇವೆಲ್ಲವೂ ಇಂದಿಗೂ ಭಾರತದ ಗ್ರಾಮಗಳಲ್ಲಿ ಅಲ್ಪ ಸ್ವಲ್ಪ ಉಳಿದುಕೊಂಡಿದೆ. ಇದೆಲ್ಲದರ ಪರಿಣಾಮವೇ ಆರ್ಥಿಕ ಬಿಕ್ಕಟ್ಟಿನ ವಿರುದ್ಧ ಭಾರತ ಸೆಟೆದು ನಿಂತಿರುವುದು.

ಕೃಷಿ ಮಾನವ ಶ್ರಮವನ್ನು ಬೇಡುತ್ತದೆ. ಗಾಂಧಿಜೀ ಹೇಳಿದ್ದು ಸಹ ಶ್ರಮ ಸಂಸ್ಕ್ರತಿ. ಇವತ್ತು ಸರಕಾರಗಳು ಗ್ರಾಮಗಳಲ್ಲಿ ಜಾರಿಗೆ ತಂದಿರುವ ಗ್ರಾಮೀಣ ಉದ್ಯೋಗ [^] ಖಾತರಿ ಯೋಜನೆ ಸಹ ಗಾಂಧೀಜಿ ತತ್ತ್ವಗಳ ಆಚರಣೆಯ ಮುಖ್ಯ ಭಾಗವಾಗಿದೆ. ಮೊದಲೆಲ್ಲಾ ಸರಕಾರದ ಗ್ರಾಮೀಣಾಭಿವ್ರದ್ಧಿ ಯೋಜನೆಗಳು ಗುತ್ತಿಗೆದಾರರನ್ನು ಶ್ರೀಮಂತರನ್ನಾಗಿ ಮಾಡಿದೆ. ಅತಿಯಾದ ಯಂತ್ರಗಳ ಬಳಕೆಯಿಂದ ಮಾನವ ಕೆಲಸಗಳನ್ನು ಕಸಿದುಕೊಳ್ಳುತ್ತಿದ್ದವು. ಗ್ರಾಮೀಣ ಜನ ಉದ್ಯೋಗವಿಲ್ಲದೆ ಪಟ್ಟಣಗಳಿಗೆ ವಲಸೆಹೋಗುತ್ತಿದ್ದರು. ಇಂತಹ ಮುಂದಾಲೋಚನೆಯಿಂದಲೇ ಬಹುಶ: ಅಂದು ಗಾಂಧೀಜಿ ಅತಿಯಾದ ಯಂತ್ರ ಬಳಕೆ ವಿರೋಧಿಸಿದ್ದರು. ಇವತ್ತು ಅದು ನಿಜವಾಗುತ್ತಿದೆ. ಸರಕಾರಗಳು ಇದನ್ನು ಅರಿತೇ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಯಂತ್ರಗಳ ಬಳಕೆಯನ್ನು ನಿಷೇಧಿಸಿದೆ. ಅಷ್ಟರ ಮಟ್ಟಿಗೆ ಗೊತ್ತಿದ್ದೋ ಗೊತ್ತಿಲ್ಲದೆಯೋ, ಇಲ್ಲಿ ಗಾಂಧೀ ತತ್ತ್ವ ಆಚರಣೆಗೆ ಬಂದಿದೆ.

ಹಿಂಸೆಯಿಂದಲೇ ದೊಡ್ಡಣ್ಣನಾದ ಅಮೇರಿಕಕ್ಕೆ ಸಹ ಇಂದು ಗಾಂಧಿ ನೆನಪಾಗುತ್ತಿದ್ದಾನೆ. ನಾವೂ ಅಪರೂಪಕ್ಕೆ ಅಹಿಂಸಾ ತತ್ತ್ವ ಪಾಲಿಸುತ್ತೇವೆ. ಯಾವಾಗ ಗೋತ್ತೆ.? ಮಹಾತ್ಮ ಗಾಂಧಿ ಪುತ್ಥಳಿಯನ್ನು ವಿರೂಪಗೊಳಿಸಿದ ಘಟನೆಗಳು ನಡೆದಾಗ ಖಂಡನಾ ಹೇಳಿಕೆ ಬಿಟ್ಟರೆ ಮತ್ತೇನನ್ನೂ ಮಾಡುವುದಿಲ್ಲ. ಅಷ್ಟರ ಮಟ್ಟಿಗೆ ಶಾಂತಿಯುತವಾಗಿರುತ್ತೇವೆ. ಅದೇ ಅಂಬೇಡ್ಕರ ವಿಷಯದಲ್ಲಿ ಹೀಗಾದರೆ ಆ ಪ್ರದೇಶವೇ ಹೊತ್ತಿ ಉರಿಯುತ್ತದೆ. ಸಾರ್ವಜನಿಕ ಆಸ್ತಿಪಾಸ್ತಿ ನಷ್ಟ ಅನುಭವಿಸುತ್ತವೆ.

ಇವತ್ತು ಗಾಂಧಿ ತತ್ತ್ವಗಳ ಬಳಕೆ ಕೂಡ ಫ್ಯಾಶನ್ ಆಗಿಬಿಟ್ಟಿದೆ. ಅಥವಾ ಅವರ ತತ್ತ್ವಗಳನ್ನು ಆಚರಿಸುವಂತೆ ತೋರಿಸುವದರ ಮೂಲಕ ಅವರ ತತ್ತ್ವಗಳನ್ನು ಅವಮಾನಿಸುತ್ತಿದ್ದೆವಾ? ಆಯ್ಕೆ ನಿಮಗೆ ಬಿಟ್ಟಿದ್ದು. ಅದಕ್ಕೆ ಒಂದಿಷ್ಷು ಉದಾಹರಣೆಗಳು.

* ಮಹಾತ್ಮ ಗಾಂಧಿಯ ಸರಳ ಜೀವನ ಎಲ್ಲರಿಗೂ ಮಾದರಿ. ಇವತ್ತಿನ ರಾಜಕಾರಣಿಗಳಿಗೆ ಅಪರೂಪಕ್ಕೆ ಮಾಧ್ಯಮದವರ ಮುಂದೆ ಸಾಮನ್ಯ ಹೊಟೆಲ್ ಊಟ, ವಸತಿ, ಸಾಮನ್ಯ ದರ್ಜೆಯಲ್ಲಿ ವಿಮಾನ ಪ್ರಯಾಣ ಮಾಡುವದರ ಮೂಲಕ ಭರ್ಜರಿ ಪ್ರಚಾರ ಪಡೆಯುತ್ತಾರೆ.
* ಮದ್ಯದ ದೊರೆ ವಿಜಯ್ ಮಲ್ಯರಿಂದ ಮದ್ಯದ ಕಡು ವಿರೋಧಿಯಾದ ಮಹಾತ್ಮ ಗಾಂಧಿಯ ಕೆಲವು ಪರಿಕರಗಳನ್ನು ಹರಾಜಿನಲ್ಲಿ ಕೊಂಡಿದ್ದು ಇಂದಿನ ಪರಿಸ್ಥಿತಿಗೆ ಹಿಡಿದ ಕೈಗನ್ನಡಿ.
* ಗಾಂಧಿ ಬಳುಸುತ್ತಿದ್ದ ಖಾದಿ ಬಟ್ಟೆ ಇಂದಿನ ಯುವಜನಾಂಗಕ್ಕೆ ಫ್ಯಾಶನ್ ಬಟ್ಟೆಯಾಗಿ ಜೀನ್ಸ್ ಜೊತೆ ಬಳಸುತ್ತಿದ್ದಾರೆ. ರಾಜಕಾಣಿಗಳಿಗೆ ಬಿಡಿ, ಖಾದಿ ಬಟ್ಟೆ ಬಳಸುವುದು ರಾಜಕಾರಣಿಯ ಟ್ರೆಡ್ ಮಾರ್ಕ್.
* ಮೊದಲು ರಾಜಕಾರಣಿಗಳ ಸ್ಥಾನಮಾನಗಳನ್ನು ಆತನು ಅನುಸರಿಸುತ್ತಿದ್ದ ಗಾಂಧಿ ತತ್ತ್ವಗಳ ಮೇಲೆ ನಿರ್ಧರಿಸಲಾಗುತ್ತಿತ್ತು. ಇವತ್ತು ಆತನಲ್ಲಿರುವ ಗಾಂಧಿ ಚಿತ್ರವಿರುವ ನೋಟುಗಳ ಮೇಲೆ ಸ್ಥಾನಮಾನ ನಿರ್ಧರಿತವಾಗುತ್ತಿದೆ.
* ಗಾಂಧಿ ಟೋಪಿ ಹಾಕಿದವರನ್ನು ಮೊದಲು ಗೌರವದಿಂದ ಕಾಣಲಾಗುತ್ತಿತ್ತು. ಇಂದು ಗಾಂಧಿ ಟೋಪಿ ಹಾಕಿದವರನ್ನು ಕಂಡರೆ ಜನ ತಮಗೆ ಟೋಪಿ ಹಾಕಲು (ಮೋಸ ಮಾಡಲು) ಬಂದರೆಂದು ಅನುಮಾನದಿಂದ ನೊಡುತ್ತಾರೆ. ಇಂದಿನ ರಾಜಕಾರಣಿಗಳ ಜನೋ(ಅ)ಪಕಾರದ ಪರಿಣಾಮ ಗಾಂಧಿ ಟೋಪಿಗೆ ಸಿಕ್ಕ ಮರ್‍ಯಾದೆ ಇದು!
* ಗಾಂಧಿ ಪ್ರತಿಪಾದಿಸಿದ ಸತ್ಯಕ್ಕೆ ಇಂದು ಎಲ್ಲಿಲ್ಲದ ಬೇಡಿಕೆ. ಸತ್ಯ ಹೇಳಿ ಲಕ್ಷಾಂತರ ಗಳಿಸಬಹುದು. ನಾವು ಮಾಡಿದ ಹಾದರದ ಬಗ್ಗೆ ಟಿವಿ ಚಾನೆಲ್ ಒಂದರ ಮುಂದೆ ಹೇಳಿಕೊಂಡರೆ ಆಯಿತು. ಹೆಚ್ಚು ಹೆಚ್ಚು ಹಾದರದ ಬಗ್ಗೆ ಸತ್ಯ ಹೇಳಿಕೊಂಡಷ್ಟೂ ಹೆಚ್ಚು ಹೆಚ್ಚು ಹಣ. ಇಲ್ಲಿ ಸತ್ಯ ಗೆದ್ದಿತಾ ಸತ್ತಿತಾ, ನೀವೇ ನಿರ್ಧರಿಸಿ.

ಮುಂದಿನ ದಿನಗಳಲ್ಲಿ ಗಾಂಧಿ ಜೀವನ ಚರಿತ್ರೆ ಮಕ್ಕಳಿಗೆ ರಾಮಾಯಣ ಮಾಹಾಭಾರತ ಚರಿತ್ರೆಯಂತೆ ಆಗಲಿದೆ. ಇದು ವಾಸ್ತವ ಎಂದರೆ ನಂಬಲು ಮುಂದಿನ ಪೀಳಿಗೆಗೆ ಕಷ್ಟವಾಗಬಹುದು. ಸಾಮಾಜಿಕ ಪರಿಸ್ಥಿತಿಗಳ ಬದಲಾವಣೆಗಳು ಗಾಂಧಿ ತತ್ತ್ವಗಳಿಂದ ಸಾಕಷ್ಟು ದೂರ ಹೋಗಿರುತ್ತದೆ. ಮಹಾತ್ಮ ಗಾಂಧಿ ಅಂದರೆ ಅಕ್ಟೋಬರ್ 2, ಒಂದು ದಿನದ ಸರಕಾರಿ ರಜೆ ಅಷ್ಟೇ ಅಲ್ವಾ?!


Advertisements

About sujankumarshetty

kadik helthi akka

Posted on ಅಕ್ಟೋಬರ್ 3, 2009, in Uncategorized. Bookmark the permalink. ನಿಮ್ಮ ಟಿಪ್ಪಣಿ ಬರೆಯಿರಿ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: