ಜೀವನವನ್ನೇ ಬದಲಾಯಿಸಿದ ಜಾಹೀರಾತುಗಳು

Irving Wallace, american author
ನನ್ನ ಜೀವನದಲ್ಲಿಯ ಅವಿಸ್ಮರಣೀಯ ದಿನಗಳನ್ನು ಮೆಲಕುಹಾಕುತ್ತಿರುವೆ. ಆ ದಿನಗಳಲ್ಲಿ ನಾನು ನಾನು ಬೋಧಿಸುತ್ತಿದ್ದ ಕಾಲೇಜಿನಲ್ಲಿ ಪ್ರಾಂಶುಪಾಲನಾಗಿ ನಿಯುಕ್ತನಾಗಿದ್ದೆ. ಕನ್ನಡ [^] ವಿದ್ಯಾರ್ಥಿಗಳಿಗೆಲ್ಲ ವಿಶೇಷ ಅಭಿಮಾನ. ನನ್ನ ಒಬ್ಬ ನೆಚ್ಚಿನ ವಿದ್ಯಾರ್ಥಿ, ಬಿ.ಕಾಂ. ಹಾಗೂ ಎಂ.ಕಾಂ. ಪದವಿಗಳಲ್ಲಿ ಪ್ರಥಮ ದರ್ಜೆ ಪಡೆದು ಪಾಸಾಗಿ, ನಮ್ಮಲ್ಲೇ ಪ್ರಾಧ್ಯಾಪಕನಾಗಿದ್ದ. ಒಳ್ಳೆಯ ಪಾಧ್ಯಾಪಕನೆಂದು ಕಾಲೇಜಿನಲ್ಲಿ ಹೆಸರು ಮಾಡಿದ್ದ.

ಒಮ್ಮೆ ಯವುದೋ ಕೆಲಸಕ್ಕೆ ನನ್ನ ಚೇಂಬರ್‌ಗೆ ಅವನು ಬಂದಿದ್ದ. ನಾನು ಅವನನ್ನು ಕೇಳಿದೆ, “ರಿಬೆಲ್ಲೋ, ನೀನು ಬಹಳ ವಿದ್ಯಾರ್ಥಿಪ್ರಿಯ ಪ್ರಾಧ್ಯಾಪಕರಲ್ಲಿ ಒಬ್ಬವ ಎಂದು ಕೇಳಿರುವೆ. ನಿನ್ನ ಒಂದು ಲೆಕ್ಚರ್ ಕೇಳಲು ನಿನ್ನ ಕ್ಲಾಸ್‌ರೂಮಿಗೆ ಬಂದು ಕುಳಿತುಕೊಳ್ಳುವ ಆಸೆಯಾಗಿದೆ. ನಾನು ಬರಬಹುದೇ?”ಎಂದು. ಅವನೆಂದ, “ಸರ್, ತಾವು ನನ್ನ ಲೆಕ್ಚರ್‌ಗೆ ಬಂದು ಕುಳಿತರೆ ಅದು ನನ್ನ ಭಾಗ್ಯ. ಆದರೆ ಅದಕ್ಕೊಂದು ಕಂಡಿಶನ್ ಇದೆ.” ಅದೇನು ಎಂದು ಕೇಳಿದೆ. “ನನ್ನ ಒಂದು ಕ್ಲಾಸ್ ನೀವು ತೆಗೆದುಕೊಳ್ಳಬೇಕು. ನಾನು ವಿದ್ಯಾರ್ಥಿಗಳೊಂದಿಗೆ ಕುಳಿತು ಕೇಳುವೆ. ನಂತರ ನನ್ನ ಯಾವುದೇ ಕ್ಲಾಸ್ ನೀವು ಅಟೆಂಡ್ ಮಾಡಬಹುದು.” ಎಂದನು. “ನಿನ್ನ ಬಿ.ಕಾಂ.ವಿದ್ಯಾಥಿಗಳಿಗೆ ನಾನು ಯಾವ ವಿಷಯ ಪಾಠ ಮಾಡಲಿ?” ಎಂದು ಕೇಳಿದೆ. “ನಮ್ಮ ವಿದ್ಯಾರ್ಥಿಗಳಿಗೆ `ಎಡ್‌ವರ್ಟೈಸ್‌ಮೆಂಟ್’ ಎಂಬ ಒಂದು ಪೇಪರ್ ಇದೆ. ತಾವು ಅದರ ಮಹತ್ವದ ಬಗ್ಗೆ ಮಾತಾಡಬಹುದು” ಎಂದನು. ನಾನು ಅವನ ಆಹ್ವಾನವನ್ನು ಸ್ವೀಕರಿಸಿದೆ.

ಗೊತ್ತುಪಡಿಸಿದ ದಿನ ನಾನು ಪ್ರೊ. ರಿಬೆಲ್ಲೋನ ಕ್ಲಾಸ್‌ರೂಮ್ ಪ್ರವೇಶಿಸಿದೆ. ನನ್ನ ಪರಿಚಯ ಮಾಡುತ್ತ ಅವನು ಹೇಳಿದ, “ಸರ್ ನಮ್ಮ ಕಾಲೇಜಿನ ಪ್ರಿನ್ಸಿಪಾಲರೆಂದು ನಿಮಗೆ ಗೊತ್ತಿದೆ, ಆದರೆ ಅವರು ನನ್ನ ನೆಚ್ಚಿನ ಕನ್ನಡ ಪ್ರೊಫೆಸರ್ ಆಗಿದ್ದರು ಎಂಬ ವಿಷಯ ನಿಮಗೆ ಗೊತ್ತಿಲ್ಲ. ಇಂದು ಅವರು ಅತಿಥಿ ಉಪನ್ಯಾಸ ನೀಡಲು ಬಂದಿದ್ದಾರೆ. ಅವರ ಬದಿಯಲ್ಲಿರುವ ಕುರ್ಸಿಯಲ್ಲಿ ನಾನು ಕೂಡುವುದಿಲ್ಲ. ವಿದ್ಯಾರ್ಥಿಗಳೊಂದಿಗೆ ಕುಳಿತು ಮತ್ತೆ ವಿದ್ಯಾರ್ಥಿಯಾಗಿ ಅವರ ಉಪನ್ಯಾಸ ಕೇಳುವೆ.” ಎಂದವನೇ ಮುಂದಿನ ಡೆಸ್ಕ್ ಅಲಂಕರಿಸಿದ.

ನಾನು ಅರ್ಧ ಗಂಟೆ ಜಾಹೀರಾತಿನ ಅವಶ್ಯಕತೆ, ಅದರ ಮಹತ್ವದ ಬಗ್ಗೆ ಮಾತಾಡಿದೆ. ನಂತರ ನಾನು ಕೈಯಲ್ಲಿ ಹಿಡಿದ ಒಂದು ಪುಸ್ತಕವನ್ನು ತೋರಿಸುತ್ತ ಹೀಗೆ ಹೇಳಿದೆ:
“ನೀವು ಪ್ರಸಿದ್ಧ ಅಮೇರಿಕನ್ ಕಾದಂಬರಿಕಾರ ಐರ್ವಿಂಗ್ ವ್ಯಾಲೇಸ್‌ನ ಹೆಸರು ಕೇಳಿರಬೇಕು. ಅವರು ತಮ್ಮ ಮನೆಯ ಸದಸ್ಯರ, ಅಂದರೆ- ಮಗ, ಹೆಂಡತಿ, ಮಗಳ (ಡೆವಿಡ್, ಅಮಿ, ಸಿಲ್ವಿಯಾ) ಸಹಕಾರದಿಂದ `ದಿ ಬುಕ್ ಆಫ್ ಲಿಸ್ಟ್‌ಸ್’ ಎಂಬ ಮೂರು ಸಂಪುಟಗಳ ಗ್ರಂಥವನ್ನು ಸಂಪಾದಿಸಿದ್ದಾರೆ. ಈ ಸಂಪುಟಗಳಲ್ಲಿ ಜ್ಞಾನವಿದೆ, ವಿಜ್ಞಾನವಿದೆ, ಮನರಂಜನೆ ಇದೆ. ಬ್ಯಾಬಿಲೋನದ ರಾಜ ಹಮೂರಾಬಿಯು (ಕ್ರಿ.ಪೂ.1750) 282 ಕಾಯಿದೆಗಳ `ಲಿಸ್ಟ್’ ಪ್ರಕಟಿಸಿದ್ದ. ಅಂದಿನಿಂದ ಆಧುನಿಕ ಕಾಲದವರೆಗೆ ವಿವಿಧ ಕ್ಷೇತ್ರಗಳ ದಾಖಲೆಗಳನ್ನು ಪಟ್ಟಿಮಾಡಿದ್ದಾರೆ. ಈ ಬೃಹತ್ ಕೆಲಸಕ್ಕೆ ಸಹಾಯ ಮಾಡಲು 150 ಲೇಖಕರ ತಂಡವೇ ಇವರೊಂದಿಗೆ ದುಡಿದಿದೆ. ಜಾಹೀರಾತು ನೀಡಿ ಸಾಮಾನ್ಯ ಜನರಿಂದ ಕೂಡ ಮಾಹಿತಿ ಸಂಗ್ರಹಿಸಿದ್ದಾರೆ, ಪ್ರಕಟವಾದ ಮಾಹಿತಿ ಕಳಿಸಿದವರಿಗೆ ಸಂಭಾವನೆಯನ್ನೂ ನೀಡಿದ್ದಾರೆ. ಮೊದಲನೆಯ ಸಂಪುಟ 1977ರಲ್ಲಿ ಪ್ರಕಟವಾಯಿತು. ಕೂಡಲೇ ಹಲವಾರು ಆವೃತ್ತಿ ಪಡೆಯಿತು. 18 ದಶಲಕ್ಷ ಪ್ರತಿಗಳು 23 ದೇಶಗಳಲ್ಲಿ ಫಿನ್‌ಲ್ಯಾಂಡ್, ಫ್ರಾನ್ಸ್, ಜಪಾನ್ ಮತ್ತು ಭಾರತ ಕೂಡ) ಖರ್ಚಾದವು. ಹಲವಾರು ಪತ್ರಿಕೆಗಳು ಇದರ ವಿಷಯ ಧಾರಾವಾಹಿಯಾಗಿ ಪ್ರಕಟಿಸಿದವು.

ಎರಡನೆಯ ಸಂಪುಟದಲ್ಲಿ, “ಜನರ ಜೀವನವನ್ನೇ ಬದಲಿಸಿದ ಎಂಟು ಜಾಹೀರಾತುಗಳು” ಎಂಬ ಶೀರ್ಷಿಕೆಯಡಿಯಲ್ಲಿ ಕುತೂಹಲಕಾರಿ ಜಾಹೀರಾತುಗಳ `ಲಿಸ್ಟ್’ ಪ್ರಕಟವಾಗಿದೆ. ಜಾಹೀರಾತು ಪಾಠಮಾಡುವ ಬಹಳ ಜನ ಪ್ರಾಧ್ಯಾಪಕರಿಗೆ ಈ ವಿಷಯ ಹೊಸತು. ನಾನು ಮೆಚ್ಚಿದ ಒಂದು ಜಾಹೀರಾತಿನ ಬಗ್ಗೆ ನಾನು ಈಗ ಹೇಳಲಿರುವೆ.

2 ಮೇ, 1962ರಂದು, ಸ್ಯಾನ್ ಫ್ರಾನ್ಸಿಸ್ಕೋದ `ಎಗ್ಝಾಮಿನರ್’ ಎಂಬ ಪತ್ರಿಕೆಯಲ್ಲಿ ಒಂದು ನಾಟಕೀಯ ಎನ್ನಬಹುದಾದಂತಹ ಜಾಹೀರಾತು ಪ್ರಕಟವಾಗಿತ್ತು. ಅದರ ಹೆಡಲೈನ್ ಹೀಗಿತ್ತು, “ನನ್ನ ಗಂಡ ತಾನು ಮಾಡದೇ ಇದ್ದ ಅಪರಾಧಕ್ಕಾಗಿ ಫಾಶಿ ಶಿಕ್ಷೆ ಅನುಭವಿಸಿ ಸಾಯಬೇಕಿಲ್ಲ.” ನನ್ನ ಗಂಡ ಈಗ ಜೇಲಿನಲ್ಲಿದ್ದಾನೆ. ಅವನ ಮೇಲೆ ಕೊಲೆಯ ಆರೋಪವಿದೆ. ಅವನ ಪರವಾಗಿ ವಾದಿಸಿ ಅವನ ಜೀವ ಉಳಿಸಲು ಹಿರಿಯ ವಕೀಲರ ಗಮನಕ್ಕೆ ಈ ಜಾಹೀರಾತು ಇದೆ. ಹಿರಿಯ, ಉದಾರ ಮನಸ್ಸಿನ ವಕೀಲರು ನನ್ನನ್ನು ಸಂಪರ್ಕಿಸಿ, ನನ್ನ ಗಂಡನ ಪರವಾಗಿ ವಾದಿಸಿ, ಅವನ ಜೀವ ಉಳಿಸಿಕೊಟ್ಟರೆ, ನಾನು ಆ ವಕೀಲರ ಸೇವಕಿಯಾಗಿ ಅವರ ಮನೆಯಲ್ಲಿ ಸಂಬಳವಿಲ್ಲದೆ ಹತ್ತು ವರ್ಷ ಕಾಲ ದುಡಿಯಲು ಸಿದ್ಧಳಿದ್ದೇನೆ. ಕಸಗುಡಿಸುವದು, ಬಟ್ಟೆ ಒಗೆಯುವುದು, ಅಡುಗೆ ಮಾಡುವದು, ಮಕ್ಕಳನ್ನು ಪಾಲಿಸುವುದು – ಯಾವುದೇ ಕೆಲಸಕ್ಕೂ ನಾನು ಸಿದ್ಧ. ಅವರ ಮನೆಯ ಎಲ್ಲ ಕೆಲಸ ಮಾಡಿ ಋಣಮುಕ್ತಳಾಗುವೆ.” ಕೆಳಗೆ ಮಹಿಳೆಯ ಹೆಸರು (ಗ್ಲ್ಯಾಡಿ ಕಿಡ್), ವಿಳಾಸ, ದೂರಧ್ವನಿ ಪ್ರಕಟವಾಗಿತ್ತು.

ನಾನಿ ಪಾಲ್ಖಿವಾಲಾನಂಥಹ ವರಿಷ್ಠ ನ್ಯಾಯವಾದಿಯೊಬ್ಬ ಸ್ಯಾನ್ ಫ್ರಾಸ್ನಿಸ್ಕೋದಲ್ಲಿದ್ದ. ಅವನ ಹೆಸರು ವಿನ್ಸೆಂಟ್ ಹಲಿನನ್. ಅವನ ಹೆಂಡತಿ ಈ ಜಾಹೀರಾತು ಓದಿ ಗಂಡನ ಗಮನ ಇದರೆಡೆ ಹರಿಸಿದಳು. ಅವನು ಗ್ಲ್ಯಾಡಿ ಕಿಡ್ ಅವಳನ್ನು ಸಂಪರ್ಕಿಸಿ ತನ್ನ ಆಫೀಸಿಗೆ ಕರೆಸಿದ. ಅವಳ ಕಥೆ [^] ಕೇಳಿದ. ಅದು ಹೀಗಿತ್ತು. ಅವಳ ಗಂಡ ರಾಬರ್ಟ ಲೀ ಕಿಡ್ ಎಂಬಾತ ಒಂದು `ಪುರಾತನ ವಸ್ತು ವ್ಯಾಪಾರಿ’ (ಎಂಟಿಕ್ ಡೀಲರ್) ಬಳಿ ಕೆಲಸಕ್ಕಿದ್ದ. ಒಮ್ಮೆ ಅವನು ವಿರಾಮದ ವೇಳೆಯಲ್ಲಿ ತನ್ನ ಸಹೋದ್ಯೊಗಿಯೊಂದಿಗೆ ಅಂಗಡಿಯಲ್ಲಿದ್ದ ಸುಂದರ ಕೆತ್ತನೆಯಿದ್ದ ಪುರಾತನ ಖಡ್ಗವೊಂದನ್ನು ತಿರುವುತ್ತ `ಅಣಕು ಯುದ್ಧ’ ಮಾಡಿ ಮನರಂಜನೆ ನೀಡಿದ್ದ. ಮುಂದೆ ಕೆಲದಿನಗಳ ನಂತರ ಅವರ ಮಾಲೀಕನ ಕೊಲೆಯಾಗಿತ್ತು. ಅದಕ್ಕೆ ಅದೇ ಖಡ್ಗವನ್ನು ಬಳಸಲಾಗಿತ್ತು. ಪೋಲೀಸರು ಖಡ್ಗವನ್ನು ಪರೀಕ್ಷಿಸಿದಾಗ ಅದರ ಮೇಲೆ ರಾಬರ್ಟ್ ಲೀಯ ಬೆರಳುಗಳ ಮುದ್ರೆ ಇದ್ದುದರಿಂದ ಅವನನ್ನು ಸೆರೆಹಿಡಿಯಲಾಯಿತು. ಇದು ದೊಡ್ಡ ಷಡ್ಯಂತ್ರವಾಗಿತು. ಅವನನ್ನು ನಿರಪರಾಧಿಯೆಂದು ಸಿದ್ಧ ಮಾಡಲು ಹಿರಿಯ ವಕೀಲರ ಅವಶ್ಯಕತೆ ಇತ್ತು. ಅಂಥವರ ಫೀ ಕೊಡಲು ಅಶಕ್ತಳಾದ, ಆರ್ತಳಾದ, ದುಃಖಿಯಾದ ಪತ್ನಿಗೆ ಚಿಕ್ಕ ಜಾಹೀರಾತು ಕೊಡುವ ವಿಚಾರ ಹೊಳೆಯಿತು. ಅದರಿಂದಾಗಿ ಘಟಾನುಘಟಿ ವಕೀಲರ ಸಂಪರ್ಕ ಪಡೆದಳು. ವಕೀಲರು ಚೆನ್ನಾಗಿ ಈ ಕೇಸನ್ನು ಅಭ್ಯಸಿಸಿ ಸಾಕ್ಷಿ ಆಧಾರಗಳನ್ನು ಹುಡುಕಿ, ವಾದ ಮಾಡಿ, ನಿರಪರಾಧಿಯನ್ನು ಬಂಧನದಿಂದ ಮುಕ್ತಗೊಳಿಸಿದರು.

ಮರುದಿನ ಇನ್ನೊಂದು ನಾಟಕೀಯ ಪ್ರಸಂಗ ಕಾದಿತ್ತು. ರಾಬರ್ಟ್ ಲೀ ಕಿಡ್ ನಿರಪರಾಧಿಯೆಂದು ಸಾಬೀತಾದ ಮೇಲೆ, ಮರುದಿನ ಮುಂಜಾನೆ ಅವನ ಹೆಂಡತಿ ಗ್ಲ್ಯಾಡಿ ಕಿಡ್ ವಕೀಲರ ಮನೆಗೆ ಬಂದಳು. “ಸರ್, ನಾನು ಎಂದಿನಿಂದ ಕೆಲಸಕ್ಕೆ ರಿಪೋರ್ಟ್ ಮಾಡಲಿ?” ಎಂದು ವಿನ್ಸೆಂಟ್ ಅವರನ್ನು ಕೇಳಿದಳು. ಅವರಿಗೆ ಅರ್ಥವಾಗಲಿಲ್ಲ. “ಯಾವ ಕೆಲಸ?” ಎಂದು ಕೇಳಿದರು. “ಸರ್, ನಿಮಗೆ ನನ್ನ ಜಾಹೀರಾತಿನ ವಿಷಯ ನೆನಪಿಲ್ಲವೇ? ನನ್ನ ಗಂಡನ ಕೇಸನ್ನು ವಾದ ಮಾಡಿ ಅವನ ಜೀವ ಉಳಿಸಿಕೊಟ್ಟ ವಕೀಲರ ಮನೆಯ ಸೇವಕಿಯಾಗಿ ಹತ್ತು ವರ್ಷ ಸಂಬಳವಿಲ್ಲದೆ ದುಡಿದು ಋಣಮುಕ್ತಳಾಗುವೆ ಎಂದು ಬರೆದಿದ್ದೆನಲ್ಲ.” ಎಂದಳು. ಆಗ ವಕೀಲರು ಮುಗುಳುನಗೆ ಬೀರಿ ನುಡಿದರು, “ಅದರ ಅವಶ್ಯಕತೆ ಇಲ್ಲ. ನಾನು ಅಸಂಖ್ಯ ಕೇಸು ಗೆದ್ದಿರುವೆ, ಬಹಳ ಹಣ ಗಳಿಸಿರುವೆ. ಈ ಕೇಸಿನಿಂದ ನನಗೆ ಹಣ ಬಂದಿರಲಿಕ್ಕಿಲ್ಲ. ಆದರೆ ಇದು ನೀಡಿದ ಸಂತೃಪ್ತಿಯನ್ನು ಬೇರೆ ಯಾವ ಕೇಸೂ ನೀಡಿಲ್ಲ!” ಎಂದು.

ಈ ಚಿಕ್ಕ ಜಾಹೀರಾತಿನ ಹಿಂದೆ ಎಂತಹ ರೋಮಾಂಚಕಾರೀ ಕಥೆ ಇದೆಯಲ್ಲವೇ? ಎಂದು ನಾನು ನುಡಿದಾಗ 45 ನಿಮಿಷದ ಗಂಟೆ ಬಾರಿಸಿತ್ತು. ಒಬ್ಬ ವಿದ್ಯಾರ್ಥಿ ನನ್ನೆಡೆ ಧಾವಿಸಿ ಬದು, “ಸರ್, ನನಗೆ ಆ ಪುಸ್ತಕ ಕಡ ಕೊಡುವಿರಾ?” ಎಂದ. “ಕಡಕೊಟ್ಟ ಹಣ, ಕಡಕೊಟ್ಟ ಉತ್ತಮ ಪುಸ್ತಕ, ಮರಳಿ ಬರುವುದಿಲ್ಲ. ನಿಮಗೆ ಬೇಕಾದ ಪುಟಗಳನ್ನು ಜೆರಾಕ್ಸ್ ಮಾಡಿಸಿ ಕೊಡುವೆ” ಎಂದೆ.

Advertisements

About sujankumarshetty

kadik helthi akka

Posted on ಡಿಸೆಂಬರ್ 16, 2009, in "ಇ-ಲೋಕ" ಲೇಖನಗಳ “ಕನ್ನಡಲೋಕ”, ಡಾ।‘ಜೀವಿ’ ಕುಲಕರ್ಣಿ - ಜೀವನ ಮತ್ತು ಸಾಹಿತ್ಯ and tagged . Bookmark the permalink. ನಿಮ್ಮ ಟಿಪ್ಪಣಿ ಬರೆಯಿರಿ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: