ಕ್ರೀಡೆ ಎಂಬ ಭಾವೋದ್ರೇಕ, ಕ್ರಿಕೆಟ್ ಎಂಬ ಧ್ಯಾನ

Osho on Cricket
ಸೂರ್ಯ ಬೆಂಕಿಯ ಉಂಡೆಗಳನ್ನು ಕಕ್ಕುತ್ತಿದ್ದಾನೆ. ಬೇಸಿಗೆಯ ಝಳ ಹೇಗಿದೆಯೆಂದರೆ ಸ್ವತಃ ಸೂರ್ಯನೇ ಬಂದು ತಲೆ ಮೇಲೆ ಕುಟ್ಟಿದಂತಾಗುತ್ತಿದೆ. ಇನ್ನು ಎರಡು ತಿಂಗಳು ಕಳೆಯುವುದು ಹೇಗೋ? ಈ ಸಲದ ಬೇಸಿಗೆ ಬದುಕನ್ನು ಅಟ್ರಾಕಣಿ ಮಾಡುವ ಎಲ್ಲ ಸೂಚನೆಗಳಂತೂ ಸಿಗಲಾರಂಭಿಸಿವೆ. ಈ ಪಡಪೋಶಿ ಬೇಸಿಗೆಯ ಮಧ್ಯವೇ ಪರೀಕ್ಷೆಯ ಕಾವು ಬೇರೆ. ಬೆಂಗಳೂರಿನಲ್ಲಿದ್ದವರಿಗೆ ಬೃಹತ್ ಮಹಾನಗರ ಪಾಲಿಕೆ ಚುನಾವಣೆಯ ಕಾವು. ಸಾಯಂಕಾಲವಾಗುತ್ತಿದ್ದಂತೆ ಮೊದಲಿನ ಎರಡು ಕಾವುಗಳಿಗೆ ಸಾಥಿಯಾಗುವ ಐಪಿಎಲ್ ಕ್ರಿಕೆಟ್ ಕಾವು ಬೇರೆ. ಈ ಎಲ್ಲ ಕಾವುಗಳ ನಮ್ಮ ಬದುಕಿನ ದೈನಂದಿನ ಆಸೆ, ಆಕಾಂಕ್ಷೆಗಳಿಗೆ ಕಾವು ಕೊಡಬೇಕಾದ ಕೆಲಸವಂತೂ ಇದ್ದೇ ಇದೆ. ಪರೀಕ್ಷೆ ಹಾಗೂ ಚುನಾವಣೆ ಕಾವು ಸಹನೀಯವಲ್ಲದಿರಬಹುದು. ಆದರೆ ಭಾರತದಲ್ಲಿ ಕ್ರಿಕೆಟ್ ಕೊಡುವ ಕಾವಿನ ಮುಂದೆ ಯಾವುದೂ ಇಲ್ಲ. ಕ್ರಿಕೆಟ್‌ಗೆ ಭಾರತದಲ್ಲಿ `ರಿಲಿಜನ್’ ಸ್ಥಾನಮಾನ ಸಿಕ್ಕಿದೆ. ಇನ್ನು ಒಂದು ತಿಂಗಳು ಕುಂತಲ್ಲಿ, ನಿಂತಲ್ಲಿ, ಹೋದಲ್ಲಿ, ಬಂದಲ್ಲಿ ಇದೆ ಸುದ್ದಿ, ಚರ್ಚೆ.

ಇತ್ತೀಚೆಗೆ ಓಶೋ ಅವರ The diamond sword ಎಂಬ ಪುಸ್ತಕ ಓದುತ್ತಿದ್ದೆ. ಎರಡು ದಶಕಗಳ ಹಿಂದೆಯೇ ಓಶೊ ಈ ಬಗ್ಗೆ ಚಿಂತನೆಯ ಲಹರಿ ಹರಿಸಿದ್ದರು. ಇದೇನಪ್ಪಾ, ಕ್ರಿಕೆಟ್ ಹುಚ್ಚು ಅಂತ ಅವರು ನಮ್ಮಂತೆ ಕೇವಲ ಹುಬ್ಬೇರಿಸಿರಲಿಲ್ಲ ಅಥವಾ ಈ ಕ್ರಿಕೆಟ್‌ನ ಕ್ರೇಜ್ ದೇಶವನ್ನೇ ಹಾಳು ಮಾಡ್ತಿದೆ ಅಂತ ಸಿನಿಕರಾಗಿ ಗೊಣಗಿಕೊಳ್ಳಲೂ ಇಲ್ಲ. ಅದನ್ನೊಂದು ಆಟವಾಗಿ ನೋಡುತ್ತ ಅದನ್ನು ವಿಶ್ಲೇಷಿಸುವ ನೆಪದಲ್ಲಿ ಒಟ್ಟಾರೆ ಕ್ರೀಡೆಯ ಹಿಂದಿರುವ ಮನೋವ್ಯಾಪಾರವನ್ನು ತೆರೆದಿಡುವ ಕೆಲಸಕ್ಕೆ ಅವರು ಕೈ ಹಚ್ಚಿದ್ದರು. ಆಟದ ಕಾವಿನ ಬಗ್ಗೆ ತುಂಬ ಕೂಲ್ ಆಗಿ ಚಿಂತನೆ ಹರಿಬಿಡುವುದು ಬಹುಶಃ ಓಶೋ ಅವರಂಥವರಿಗೆ ಮಾತ್ರ ಸಾಧ್ಯವೇನೋ?

ಯಾರೋ ಓಶೊಗೆ ಪ್ರಶ್ನಿಸಿದ್ದರು. `ಓಶೊ ಅವರೇ, ಭಾರತದಲ್ಲಿ ಕ್ರಿಕೆಟ್ ಅನ್ನೋದು ಯಾವ ಪರಿ ಪ್ರಖ್ಯಾತವಾಗುತ್ತಿದೆ, ಜನರು ಅದ್ಯಾವ ಪರಿಯಲ್ಲಿ ಹುಚ್ಚು ಹತ್ತಿಸಿಕೊಂಡು ಈ ಆಟ ನೋಡಲು ಮುಗಿ ಬೀಳುತ್ತಿದ್ದಾರೆ ಎಂಬುದು ನಿಮಗೂ ಗೊತ್ತು. ಈ ವಿದೇಶಿ ಆಟದ ಜನಪ್ರಿಯತೆಯಿಂದಾಗಿ ನಮ್ಮದೇ ದೇಶದ ಅವೆಷ್ಟೋ ಬಗೆಯ ಆಟಗಳಿಗೆ ಬಯಲಲ್ಲಿ ಮಿಂಚುವ ಅವಕಾಶವೇ ಸಿಗದಂತಾಗಿದೆ. ಕ್ರಿಕೆಟ್‌ನ ಖದರು ಅದ್ಯಾವ ಮಟ್ಟ ತಲುಪಿದೆ ಅಂತಂದ್ರೆ, ಅನೇಕ ಟೆಸ್ಟ್ ಆಟಗಾರರನ್ನು ಸ್ಟಾರ್‌ಗಳಂತೆ ನೋಡುತ್ತ ಅವರನ್ನು ಆರಾಧಿಸುವ ಹಂತಕ್ಕೂ ಜನ ತಲುಪಿದ್ದಾರೆ. ಆದರೆ, ಈ ಆಟದ ಕಾರಣದಿಂದ ಸ್ವದೇಶಿ ಆಟಗಳಿಗೆ ನೆಲೆ ಕಂಡುಕೊಳ್ಳುವುದೇ ಕಷ್ಟವಾಗುತ್ತಿದೆ. ನೀವು ಈ ಕ್ರಿಕೆಟ್ ಕ್ರೇಜ್ ಅನ್ನು ಹೇಗೆ ವಿಶ್ಲೇಷಿಸುತ್ತೀರಿ?’

ಓಶೊ ಅಂದು ಹೇಳಿದ್ದರು. `ಈ ಕ್ರೇಜ್ ಅಥವಾ ಕಾವು ಅನ್ನೋದಕ್ಕೆ ಭಾರತದ ಒಳಗೆ-ಹೊರಗೆ ಎನ್ನುವ ಫರಕ್ ಲಾಗೂ ಆಗುವುದಿಲ್ಲ. ಜನರನ್ನು ಹುಚ್ಚೆಬ್ಬಿಸುವ ಅನೇಕ ಆಟಗಳು ಜಗತ್ತಿನಲ್ಲಿವೆ. ಆದರೆ ಅವೆಲ್ಲದರ ಉದ್ದೇಶ ಒಂದೇ. ಕ್ಯಾಲಿಫೋರ್ನಿಯಾದ ವಿಶ್ವವಿದ್ಯಾಲಯವೊಂದು ಒಂದಿಡೀ ವರ್ಷವನ್ನು ಸಮೀಕ್ಷೆಯೊಂದಕ್ಕೆ ಎತ್ತಿಟ್ಟಿತು. ಫುಟ್ಬಾಲ್ ಪಂದ್ಯಗಳಿದ್ದಾಗಲೆಲ್ಲ ಜನರು ಎಷ್ಟರಮಟ್ಟಿಗೆ ಹುಚ್ಚೇಳುತ್ತಾರೆ ಎನ್ನುವ ವಿಷಯದ ನಾನಾ ಆಯಾಮಗಳನ್ನು ತಡಕಾಡುವ ಕೆಲಸ ಆ ಸಮೀಕ್ಷೆಯದಾಗಿತ್ತು. ಪಂದ್ಯಗಳು ಮುಕ್ತಾಯವಾಗಿ ವಾರಗಳುರುಳಿದರೂ ಅಪರಾಧದ ಪ್ರಮಾಣ ಶೇ.14ರಷ್ಟು ಏರಿಕೊಂಡೇ ಇರುತ್ತಿತ್ತು. ಕಂಡಾಪಟ್ಟೆ ಹಿಂಸೆ, ಹೆಚ್ಚೆಚ್ಚು ಆತ್ಮಹತ್ಯೆ ಹಾಗೂ ಅತ್ಯಾಚಾರಗಳು ಸಂಭವಿಸುತ್ತಿದ್ದವು. ಅಷ್ಟಾಗಿಯೂ ಸರಕಾರ ಆಟ ಮುಂದುವರಿಯಲು ಅವಕಾಶ ನೀಡಿತ್ತು.’ `ನನ್ನ ಅಭಿಪ್ರಾಯವೂ ಅದೇ! ಈ ಪಂದ್ಯಗಳನ್ನು ನಿಲ್ಲಿಸಕೂಡದು. ಯಾಕೆ ಗೊತ್ತಾ? ಈ ಪಂದ್ಯಗಳನ್ನು ವೀಕ್ಷಿಸುತ್ತ ಜನರು ಹೊರಹಾಕುವ ಭಾವೋದ್ರೇಕ- ಹುಚ್ಚುತನಗಳೆಲ್ಲ, ಇಂಥದೊಂದು ಅವಕಾಶವೇ ಸಿಗದೇ ಹಾಗೆಯೇ ಎದೆಗೂಡಿನಲ್ಲಿ ಉಳಿದುಬಿಟ್ಟಿದ್ದರೆ ಏನಾಗುತ್ತಿತ್ತು ಹೇಳಿ. ಇನ್ನಷ್ಟು ಅತ್ಯಾಚಾರಗಳಾಗುತ್ತಿದ್ದವು, ಹಿಂಸೆ ಎಲ್ಲೆ ಮೀರುತ್ತಿತ್ತು. ಹೀಗಾಗಿ ಅದು ಕ್ರಿಕೆಟ್ಟೊ, ವಾಲಿವಾಲ್ ಅಥವಾ ಹಾಕಿ ಯಾವುದೇ ಆಟವಾಗಿರಬಹುದು. ಅವೆಲ್ಲವೂ ಹಿಂಸೆಯನ್ನು ಹೊರಹಾಕಲಿಕ್ಕೆ ಇರುವ ಸಂಸ್ಕರಿತ ಸಾಧನಗಳು. ಎಲ್ಲಿಯವರೆಗೆ ಮನುಷ್ಯನಲ್ಲಿ ಸಿಟ್ಟು ಮನೆ ಮಾಡಿಕೊಂಡಿರುತ್ತದೋ, ಹಿಂಸೆ ಹುತ್ತಗಟ್ಟಿರುತ್ತದೋ ಅಲ್ಲಿಯವರೆಗೆ ಆಟಗಳಿಂದ ಯಾವ ಅಪಾಯವೂ ಇಲ್ಲ. ರಾಜಕೀಯ ನೇತಾರರು ಹಾಗೂ ಚಿತ್ರತಾರೆಗಳಂತೆ ಕ್ರಿಕೆಟ್ ಆಟಗಾರರಿಗೂ ಅನುಯಾಯಿಗಳು ಹುಟ್ಟಿಕೊಂಡರೆ ಅದಕ್ಕೂ ನನ್ನಿಂದ ಯಾವ ಆಕ್ಷೇಪಣೆಯೂ ಇಲ್ಲ. ನನಗಿರುವ ಒಂದೇ ಕಾಳಜಿ ಅಂತಂದ್ರೆ, ಈ ರಾಜಕೀಯ ನಾಯಕರನ್ನು ಯಾವತ್ತೂ ಕೆಳಗಿನ ಸ್ಥಾನದಲ್ಲೇ ಇಡಬೇಕು ಅನ್ನೋದು.’

ಎದೆಯಲ್ಲಿ ಬಿಗಿದಿಟ್ಟುಕೊಂಡ ಪ್ರೀತಿಯನ್ನು, ಹತ್ತೆಂಟು ಭಾವನೆಗಳನ್ನು ಹೊರಹಾಕಲು ಚಿತ್ರತಾರೆಗಳು ನೆರವಾಗುತ್ತಾರೆ. ಅದಕ್ಕಾಗಿ ಅವರಿಗೆ ಗೌರವ ಸಲ್ಲುವುದರಲ್ಲಿ ತಪ್ಪಿಲ್ಲ. ದುರಂತ ಅಂದ್ರೆ, ಇತ್ತೀಚೆಗೆ ಬಹಳಷ್ಟು ಚಿತ್ರತಾರೆಯರಿಗೆ ರಾಜಕೀಯ ಪ್ರವೇಶಿಸುವ ತೆವಲು ಹತ್ತಿಬಿಟ್ಟಿದೆ. ಇದು ಒಳ್ಳೆಯ ಬೆಳವಣಿಗೆ ಅಲ್ಲ. ಅವರು ಚಿತ್ರತಾರೆಯರಾಗಿದ್ದಾಗ ಕಲಾವಿದರಾಗಿದ್ದರು. ರಾಜಕೀಯಕ್ಕೆ ಪ್ರವೇಶಿಸಿದವರ ಬದುಕಿನಲ್ಲಿ ಕಲೆಗೆ ಜಾಗವಿರುವುದಿಲ್ಲ. ರಾಜಕೀಯದಲ್ಲಿರುವವರು ಎಂಥ ಜನ ಅಂದ್ರೆ, ಮತ್ತೇನೂ ಮಾಡಲಿಕ್ಕೆ ಸಾಮರ್ಥ್ಯ ಇಲ್ಲ ಅಂತ ಅಲ್ಲಿಗೆ ಜಮೆಯಾದವರು. ಹೀಗಾಗಿ ಚಿತ್ರತಾರೆಯರು ಮತ್ತೆ ಕಲಾವಿದರ ಸ್ಥಾನಕ್ಕೆ ಹಿಂತಿರುಗುವ ಅವಕಾಶವೇ ಇರುವುದಿಲ್ಲ. ಅವರು ರಾಜಕೀಯವನ್ನು ಮೈಗೂಡಿಸಿಕೊಂಡುಬಿಡುತ್ತಾರೆ.

ಆಟದ ವಿಷಯದಲ್ಲೂ ಅಷ್ಟೆ. ಕ್ರಿಕೆಟ್, ಫುಟ್‌ಬಾಲ್ ಇಲ್ಲವೇ ಇತರ ಕ್ರೀಡೆಗಳ ಆಟಗಾರರು ನಮ್ಮೊಳಗಿನ ಭಾವಗಳನ್ನು ಹೊರಹೊಮ್ಮಿಸಲು ಸಹಾಯಕ್ಕೆ ಬರುತ್ತಾರೆ. ಅವರ ಆಟವನ್ನು ನೋಡುತ್ತ, ನೋಡುತ್ತ ನಿಮ್ಮೊಳಗಿನ ಎಂಥದೋ ಉದ್ವೇಗಗಳನ್ನೆಲ್ಲ ನೀವು ಹೊರಹಾಕಿರುತ್ತೀರಿ. ಈಗ ಭಾರತೀಯ ಆಟಗಳ ವಿಷಯಕ್ಕೆ ಬರೋಣ. ಕ್ರಿಕೆಟ್, ಫುಟ್‌ಬಾಲ್ ಇಲ್ಲವೇ ಹಾಕಿಯ ಸಮಾನವಾಗಿ ನಿಲ್ಲುವ ಒಂದೇ ಆಟವೂ ನಮ್ಮಲಿಲ್ಲ. ಅದು ಯಾರ ತಪ್ಪೂ ಅಲ್ಲ ಬಿಡಿ. ವಾಸ್ತವದ ನೆಲೆಯಲ್ಲಿ ನಿಂತು ಯೋಚನೆ ಮಾಡಿ. ಕಬಡ್ಡಿ.. ಕಬಡ್ಡಿ.. ಅಂತ ನೀವೆಷ್ಟೇ ಒದರಿಕೊಂಡರೂ ಅದು ಒಂದು ಉತ್ಕರ್ಷವನ್ನು ಹುಟ್ಟುಹಾಕೀತಾ? ಅಲ್ಲ ಸ್ವಾಮೀ, ಜನರು ದಿನನಿತ್ಯ ಆಡಿಕೊಂಡಿರುವ ಆಟವೇ ಅದಲ್ವೇ? ಮನೆಯಲ್ಲಿ ಎಲ್ಲರೂ ಮತ್ತೊಬ್ಬರ ಜತೆ ಕಬಡ್ಡಿ ಆಡಿಕೊಂಡಿರುವವರೇ. ಇಡೀ ದೇಶವೇ ಕಬಡ್ಡಿ ಆಟದ ಮೈದಾನವಾಗಿಬಿಟ್ಟಿದೆ. ಹೀಗಿರುವಾಗ ಮತ್ತಷ್ಟು ಕಬಡ್ಡಿ ಯಾರಿಗೆ ಬೇಕು ಹೇಳಿ? ಅದರಲ್ಲಿ ಯಾರಿಗಾದರೂ ಉಮೇದು ಉಳಿದುಕೊಂಡಿರುವುದು ಸಾಧ್ಯವಾ? ದಿನವೂ ನಡೆಯುವುದನ್ನು ಬಯಲಿಗೆ ಹೋಗಿ ನೋಡುವವರ್‍ಯಾರು?

Advertisements

About sujankumarshetty

kadik helthi akka

Posted on ಏಪ್ರಿಲ್ 24, 2010, in "ಇ-ಲೋಕ" ಲೇಖನಗಳ “ಕನ್ನಡಲೋಕ”, ವಿಶ್ವೇಶ್ವರ ಭಟ್ - ನೂರೆಂಟುಮಾತು, Uncategorized and tagged . Bookmark the permalink. ನಿಮ್ಮ ಟಿಪ್ಪಣಿ ಬರೆಯಿರಿ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: