ತೋಂಟದಾರ್ಯ ಸ್ವಾಮಿ ಹೇಳಿದ್ದರಲ್ಲಿ ತಪ್ಪೇನಿದೆ?

Thontadarya Siddalinga Swamiji, Gadag
ಒಂದು ಕಡೆ ಸಿದ್ದಗಂಗೆಯ ಸ್ವಾಮೀಜಿಯವರಿಗೆ ನೂರ ಮೂರನೆಯ ಹುಟ್ಟುಹಬ್ಬ ನಡೆದಿದೆ. ಇನ್ನೊಂದು ಕಡೆ ಗದುಗಿನ ತೋಂಟದ ಸ್ವಾಮಿಯವರ ಮೇಲೆ ಹಲ್ಲೆಯ ಯತ್ನ ನಡೆದಿದೆ. ನಿಮಗೆ ಗೊತ್ತು. ನಾನು ಸ್ವಾಮಿಗಳನ್ನು ಗೌರವಿ [^]ಸುವವನಲ್ಲ. ಆದರೆ ಮೇಲೆ ಹೇಳಿದ ಇಬ್ಬರೂ ನನ್ನ ಪ್ರೀತ್ಯಾದರ, ಶ್ರದ್ಧೆ, ಗೌರವಗಳನ್ನು ಸೂರೆಗೊಂಡವರು. ನಾನು ಸಿದ್ದಗಂಗಾ ಹೈಸ್ಕೂಲಿನ ವಿದ್ಯಾರ್ಥಿ. ಜಾತಿಮತದ ನಿರ್ಬಂಧವಿಲ್ಲದೆ ಸಾವಿರಾರು ಮಕ್ಕಳಿಗೆ ಪ್ರತಿನಿತ್ಯ ಅನ್ನ ಹಾಕುವ, ವಿದ್ಯೆ ಹೇಳಿಕೊಡುವ, ಯಾವುದೇ ತರಹದ ಮನೋ-ದೈಹಿಕ ಶ್ವಪಚನಗಳಿಗೆ ಬೀಳದ ಸಿದ್ದಗಂಗೆಯ ಸ್ವಾಮಿಗಳು ಪ್ರಾತಃಸ್ಮರಣೀಯರೆನ್ನಿಸಿಕೊಳ್ಳಲಿಕ್ಕೆ ಮತ್ಯಾವ ಕಾರಣವೂ ಬೇಕಿಲ್ಲ.

ಇನ್ನು ಗದುಗಿನ ತೋಂಟದಾರ್ಯ ಮಠದ ಸ್ವಾಮಿಗಳ ವಿಷಯಕ್ಕೆ ಬಂದರೆ, ಅವರನ್ನು ನಾನು ಹಿರಿಯ ಮಿತ್ರನಂತೆ, ನನ್ನ ಅಣ್ಣನಂತೆ, ಮನೆಯ ಹಿರಿಯರಂತೆ ಕಾಣುತ್ತ ಬಂದಿದ್ದೇನೆ, ಗೌರವಿಸಿದ್ದೇನೆ. ಅಷ್ಟೆಲ್ಲ ಆದರೂ ಇವತ್ತಿನ ತನಕ ನಾನು ಗದುಗಿನ ಮಠಕ್ಕೆ ಹೋಗಿಲ್ಲ. ಸಾರ್ವಜನಿಕ ಸಮಾರಂಭಗಳಲ್ಲಿ ಅವರ ಮಾತು ಕೇಳಿದ್ದೇನೆ. ಅವರ ಚಟುವಟಿಕೆಗಳನ್ನು ಗಮನಿಸಿದ್ದೇನೆ. ಅವರ ಬಗ್ಗೆ ಗೌರವ ಹುಟ್ಟಲಿಕ್ಕೆ ಅಷ್ಟು ಸಾಕ್ಷ್ಯ ಸಾಕು. ಅವರಷ್ಟೇ ಗೌರವದಿಂದ ನಾನು ನೋಡುವುದು ಸಿದ್ದೇಶ್ವರ ಸ್ವಾಮಿಗಳನ್ನ. ಈ ಮೂರೂ ಜನ ಲಿಂಗಾಯತ ಪೀಠಾಧಿಪತಿಗಳಾಗಿರುವುದ ಶುದ್ಧ ಕಾಕತಾಳೀಯ. ಕೇವಲ ಲಿಂಗಾಯತ ಧರ್ಮಕ್ಕೆ ಸೇರಿದವರು ತಾವು ಅಂತ ಅಂದುಕೊಳ್ಳದೆ ಇರುವುದರಿಂದಲೇ ಈ ಮೂವರೂ ನನಗೆ ಪ್ರೀತಿ ಪಾತ್ರರು. ಹೀಗಿರುವಾಗ ಗದುಗಿನ ತೋಂಟದಾರ್ಯ ಸ್ವಾಮಿಗಳ ಮೇಲೆ ಹಲ್ಲೆಯ ಯತ್ನ ನಡೆಯಿತು ಅಂತ ಪತ್ರಿಕೆಗಳಲ್ಲಿ ಓದಿ ಕಳವಳಗೊಂಡಿದ್ದೇನೆ.

ಇತ್ತೀಚಿನ ಬಾದಾಮಿ ತಾಲೂಕಿನ ಅಖಿಲ ಭಾರತ ಮಹಾಸಭಾ ಮತ್ತು ವೀರಶೈವ ಶಿವಯೋಗ ಮಂದಿರ ಎಂಬೆರಡು ಪುರಾತನ ಸಂಸ್ಥೆಗಳು ತಮ್ಮ ಶತಮಾನೋತ್ಸವ ಆಚರಿಸಿಕೊಂಡವು. ಅರವಾಳ ರುದ್ರಗೌಡರು ಮತ್ತು ಹಾನಗಲ್ಲಿನ ಕುಮಾರ ಶಿವಯೋಗಿಗಳು 1900ನೇ ಇಸವಿಯ ಆಸುಪಾಸಿನಲ್ಲಿ ಆರಂಭಿಸಿದ ಸಂಸ್ಥೆಗಳಿವು. ಈ ಪೈಕಿ ಶಿವಯೋಗ ಮಂದಿರದಲ್ಲಿ ಹೊಸತಾಗಿ ದೀಕ್ಷೆ ಪಡೆದ ಲಿಂಗಾಯತ ಸ್ವಾಮಿಗಳಿಗೆ ತರಬೇತಿ ನೀಡಲಾಗುತ್ತದೆ. ಅದು ಶುದ್ಧಾನು ಶುದ್ಧ ಜಂಗಮಠ (ಲಿಂಗಾಯತರಲ್ಲೇ ಪುರೋಹಿತ ಪಂಗಡ) ಸಂಘಟನೆ. ಉಳಿದಂತೆ ವೀರಶೈವ ಮಹಾಸಭಾಕ್ಕೆ ಸುಮಾರು ಹನ್ನೊಂದು ವರ್ಷದಿಂದ ಗಂಟು ಬಿದ್ದಿರುವವರು ಅಪ್ಪಟ ರಾಜಕಾರಣಿಯಾದ ಭೀಮಣ್ಣ ಖಂಡ್ರೆ. ಇಲ್ಲಿ ಪ್ರಭಾಕರ ಕೋರೆ, ಶಾಮನೂರು ಶಿವಶಂಕರಪ್ಪ, ಅರವಿಂದ ಜತ್ತಿ, ವೀರಣ್ಣ ಚರಂತಿಮಠ, ಎನ್ ವಿ ನಾಗೇಂದ್ರಪ್ಪ, ಲಿಂಗನಗೌಡ ಕಾರಡ್ಡಿ ಮುಂತಾದ ಪ್ರಬಲ ಉದ್ಯಮಿಗಳೂ, ಕ್ಯಾಪಿಟೇಷನ್ ಕುಳಗಳೂ ಇದ್ದಾರೆ. ಇವರಿಗೆ ನಾನಾ ಕಾರಣಗಳಿಂದಾಗಿ ವೀರಶೈವ ಮಹಾಸಭಾ ಬೇಕು. ಇನ್ನು ಶಿವಯೋಗ ಮಂದಿರ ಈಗಾಗಲೆ ಹೇಳಿದಂತೆ ಅಪ್ಪಟ ಜಂಗಮರ ಸಂಸ್ಥೆಯಾಗಿ ಹೋಗಿದೆ. ಅದಕ್ಕೆ ಕೊಟ್ಟೂರು ಸ್ವಾಮಿ ಮಠದ ಸಂಗನ ಬಸವ ಸ್ವಾಮಿಗಳು ಅಧ್ಯಕ್ಷರು. ರಾಜ್ಯದಲ್ಲಿ ಜಂಗಮ ತತ್ವ ಪಾಲಿಸುವ ಎಲ್ಲ ಮಠಗಳೂ ಅವರನ್ನು ಬೆಂಬಲಿಸುತ್ತವೆ. ವೀರಣ್ಣ ಚರಂತಿಮಠನಂತಹ ಉಪದ್ವ್ಯಾಪಿ ರಾಜಕಾರಣಿ, ಅವರ ಪಾಲಿನ ಊರುಗೋಲು.

ಇವೆರಡೂ ಸಂಸ್ಥೆಗಳ ಶತಮಾನೋತ್ಸವ ತುಂಬ ಅದ್ಧೂರಿಯಾಗಿ ನಡೆಯಬೇಕಿತ್ತು. ಅದಕ್ಕಾಗಿ ಒಂದು ವರ್ಷದಿಂದಲೂ ಎತ್ತುವಳಿಗಳಾಗುತ್ತಿದ್ದವು. ಆದರೆ ಅದ್ಧೂರಿಯ ಶತಮಾನೋತ್ಸವಕ್ಕೆ ಜನರೇ ನಿರೀಕ್ಷಿಸಿದ ಸಂಖ್ಯೆಯಲ್ಲಿ ಸೇರಲಿಲ್ಲ. ಲಕ್ಷಗಟ್ಟಲೆ ಖರ್ಚು ಮಾಡಿ ಪೆಂಡಾಲು ಹಾಕಿದರೂ, ಸಾವಿರಗಟ್ಟಲೆ ಕುರ್ಚಿಗಳು ಖಾಲಿ ಬಿದ್ದಿದ್ದವು. ಯಥಾಪ್ರಕಾರ ಯಡಿಯೂರಪ್ಪ [^] ಬಂದು ಹದಿನೈದು ಕೋಟಿ ಕೊಡುವುದಾಗಿ ವದರಿ ಎದ್ದು ಹೋದರು. ಮುಂದೆ ಏಪ್ರಿಲ್ 10ರಂದು ಶನಿವಾರ ಸಾಹಿತ್ಯ ಸಮಾವೇಶ ನಡೆಯಿತು. ಚನ್ನವೀರ ಕಣವಿಯಂತಹ ಹಿರಿಯ ಸಾಹಿತಿಗಳು ಮಾತನಾಡಲು ಎದ್ದು ನಿಂತರೆ, ಇಡೀ ಸಬಾಂಗಣ ಖಾಲಿ. ಆದರೂ ಕಣವಿ, ಡಾ. ಮುರಿಗೆಪ್ಪ, ಡಾ. ಗುರುಲಿಂಗ ಕಾಪಸೆ, ಪ್ರೊ. ಜಿಎಸ್ ಸಿದ್ದಲಿಂಗಯ್ಯ ಮುಂತಾದವರೆಲ್ಲ ಮಾತನಾಡಿದ್ದಾರೆ. ಕೊನೆಯಲ್ಲಿ ಮಾತನಾಡಲು ಎದ್ದು ನಿಂತವರು ಗದುಗಿನ ತೋಂಟದಾರ್ಯ ಮಠದ ಸ್ವಾಮಿಗಳು.

ಅವರು ಮಾತನಾಡಿದ್ದಾದರೂ ಏನು? “ಭೀಮಣ್ಣ ಖಂಡ್ರೆಯವರಿಗೆ ತುಂಬ ವಯಸ್ಸಾಗಿದೆ. ಅವರಿನ್ನು ವೀರಶೈವ ಮಹಾಸಭಾಕ್ಕೆ ರಾಜೀನಾಮೆ ಕೊಟ್ಟು ಯುವಕರಿಗೆ ನಾಯಕತ್ವ ವಹಿಸಲಿ. ಆದೇ ರೀತಿ ಸಂಗನ ಬಸವ ಸ್ವಾಮಿಗಳು ಶಿವಯೋಗ ಮಂದಿರದ ಯಜಮಾನಿಕೆ ಬೀಡಲಿ. ಅವರ ಜಾಗಕ್ಕೆ ಮತ್ತೆ ಜಂಗಮ ಮೂಲದವರೇ ಬರಬೇಕೆಂದು ಹಟ ಹಿಡಿಯದೆ, ಲಿಂಗಾಯತರ ಇತರೆ ಒಳಪಂಗಡಗಳಿಂದ ಒಬ್ಬರನ್ನು ಆಯ್ದು ತಂದು ಕೂರಿಸಲಿ. ಬರುವ ಹೊಸಬರಿಗೆ ಕನ್ನಡದ ಜೊತೆಗೆ ಹಿಂದಿ, ಇಂಗ್ಲಿಷು ಗೊತ್ತಿರಲಿ ಇವತ್ತಿನ ವಿದ್ಯಮಾನಕ್ಕೆ ಅದು ಅವಶ್ಯಕ. ರಾಮಕೃಷ್ಣ ಪರಮಹಂಸರ ಹೆಸರು ಜಗತ್ತಿಗೆ ತಿಳಿದುದಕ್ಕೆ ಕಾರಣ, ಇಂಗ್ಲಿಷು ಬಲ್ಲ ವಿವೇಕಾನಂದರು. ಆದರೆ, ಬಸವಣ್ಣನವರ ಹೆಸರು ಕರ್ನಾಟಕದಾಚೆಗೆ ದಾಟಿ ಹೋಗಲಿಲ್ಲ. ಇವತ್ತು ನಮ್ಮ ಧರ್ಮಗಳು ನವೀಕರಣಗೊಳ್ಳಬೇಕಿವೆ. ಜಾಗತೀಕರಣಕ್ಕೆ ತೆರೆದುಕೊಳ್ಳಬೇಕಿದೆ. ಈ ಬಗ್ಗೆ ಸರ್ವರೂ ಯೋಚಿಸಲಿ” ಅಂದರು.

ಇದರಲ್ಲಿ ತಪ್ಪಾದರೂ ಏನಿದೆ? ಗದುಗಿನ ಸ್ವಾಮಿಗಳು ಲಿಂಗಾಯತ ಧರ್ಮದಂತಹ ಪ್ರಗತಿಪರ ಧರ್ಮದ revivalನ್ನು ದೃಷ್ಟಿಯಲ್ಲಿಟ್ಟುಕೊಂಡು ಕಾಲಕ್ಕೆ ರಿವೈವ್ ಆಗಬೇಕು, ರಿನ್ಯೂ ಆಗಬೇಕು. ಆ ಕಾರಣಕ್ಕಾಗಿಯೇ ಕೆಥೋಲಿಕ್ ಕ್ರೈಸ್ತರ ಮಧ್ಯೆ ಒಬ್ಬ ಪ್ರೊಟೆಸ್ಟೆಂಟನಾದ ಮಾರ್ಟಿನ್ ಲೂಥರ್ ಕಿಂಗ್ ಹುಟ್ಟಿಕೊಂಡ. ಆದರೆ ಪುನರುಜ್ಜೀವನದ ಗೊಡವೆಗೇ ಹೋಗದ ಬೌದ್ಧ ಧರ್ಮ ಹೆಚ್ಚು ಕಡಿಮೆ ವಿನಾಶದ ಅಂಚಿನಲ್ಲಿದೆ. ನೀವು ವೀರಶೈವ ಧರ್ಮವನ್ನೇ ತೆಗೆದುಕೊಳ್ಳಿ, ಅದು ಬ್ರಾಹ್ಮಣರ ಕರ್ಮಠ ವೈದಿಕ ಧರ್ಮದ ವಿರುದ್ಧ ಸಿಡಿದು ನಿಂತಿದ್ದರಿಂದ ರೂಪುಗೊಂಡ ಧರ್ಮ. ಅಂತಹ ಧರ್ಮವೇ ನವೀಕರಣಗೊಳ್ಳದಿದ್ದರೆ ಹೇಗೆ? ಗದುಗಿನ ಸ್ವಾಮಿಗಳು ಆಡಿದ ಮಾತು ಅರ್ಥಪೂರ್ಣವಾಗಿತ್ತು.

ಆದರೆ ಸಂಘಟಕರಿಗೆ ಅದು ಬಿಸಿ ತುಪ್ಪವಾಗಿ ಹೋಯಿತು. ಖುದ್ದು ಸಂಗನ ಬಸವ ಸ್ವಾಮಿಗಳು ಎದ್ದು ನಿಂತು ‘ಹೀಗೆ ಮಾತನಾಡುವ ನೈತಿಕ ಹಕ್ಕು ನಿಮಗಿಲ್ಲ’ ಎಂದು ಗುಡುಗಿಬಿಟ್ಟರು. ಅದಕ್ಕಿಂತ ಅಸಹ್ಯವೆಂದರೆ ವೀರಣ್ಣ ಚರಂತಿಮಠ ಎದ್ದು ನಿಂತು ‘ಬ್ಯಾಡ ಅಂದ್ರೂ ಈ ಗದುಗಿನ ಸ್ವಾಮೀನ ಯಾಕೆ ಕರೆಸಿದಿರಿ?’ ಎಂದು ಏಕವಚನದಲ್ಲಿ ಕೂಗಾಡತೊಡಗಿದರು. ಆತನ ಹಿಂಬಾಲಕರು ಗದುಗಿನ ಸ್ವಾಮಿಗಳ ಕಾರಿನ ಗಾಜು ಒಡೆದರು. ಮತ್ಯಾರೋ ಬಂದು ಕಾರಿನ ಚಕ್ರಕ್ಕೆ ಅಡ್ಡ ಮಲಗಿದರು.

ಇಷ್ಟೆಲ್ಲ ಆಗಬೇಕಿತ್ತೆ? ಒಂದು ವಿಮರ್ಶೆಯನ್ನ, ಸಲಹೆಯನ್ನ, ಸ್ವಾಕರಿಸಿದಷ್ಟು ಸಂಕುಚಿತಗೊಂಡರೆ ಅಂಥ ಮನಸುಗಳನ್ನು ಸರಿಪಡಿಸುವುದು ಹೇಗೆ? ಒಂದು ಸಮಾಧಾನದ ಸಂಗತಿಯೆಂದರೆ, ಅನೇಕ ಪೀಠಾಧಿಪತಿಗಳು ಗದುಗಿನ ಸ್ವಾಮಿಗಳ ಪರವಾಗಿ ನಿಂತಿದ್ದಾರೆ. ಅವರು ಮಾತನಾಡಿದುದರಲ್ಲಿ ತಪ್ಪೇನಿದೆ ಅಂದಿದ್ದಾರೆ. ಇಲ್ಲಿ ಗಮನಿಸಬೇಕಾದ ಸಂಗತಿಯೆಂದರೆ, ಗದುಗಿನ ಸ್ವಾಮಿಗಳು ತುಂಬ ದೊಡ್ಡಮಟ್ಟದಲ್ಲಿ ತಮ್ಮದೇ ಮಠ ಹಾಗೂ ನಿಲುವುಗಳನ್ನು ನವೀಕರಿಸಿಕೊಂಡಿದ್ದಾರೆ. ಅವರು ಗದುಗಿನಲ್ಲಿ ನಡೆಯುವ ಜಾತ್ರೆ ಕಮಿಟಿಯಲ್ಲಿ ಮುಸಲ್ಮಾನರಾದ ಸರ್ಫರಾಜ್ ಉಮಚಗಿ, ಸಿರಾಜ್ ಬಳ್ಳಾರಿ [^], ಜೈನರಾದ ಬಾಫನಾ, ದಲಿತರಾದ ಅಶೋಕ್ ಹಂಜಗಿ, ಪಟ್ಟೇಗಾರರಾದ ಈಶ್ವರ ಸಾ ಮೆಹರವಾಡೆ ಮುಂತಾದವರನ್ನು ಸದಸ್ಯರನ್ನಾಗಿ ಹಾಕಿಕೊಂಡಿದ್ದಾರೆ. ಉತ್ತರ ಕರ್ನಾಟಕದ ಅನೇಕ ಮಠಗಳಲ್ಲಿ ವಿವಾದಗಳಾದಾಗ ಅವರೇ ಕುಳಿತು ಬಗೆಹರಿಸಿದ್ದಾರೆ. ನಾಡಿನ ಸಾಹಿತಿಗಳಾದ ಡಾ. ಆರ್ ಸಿ ಹಿರೇಮಠ, ಸಿದ್ದಲಿಂಗ ಪಟ್ಟಣಶೆಟ್ಟಿ, ಡಾ.ಎಂಎಂ ಕಲಬುರ್ಗಿ, ಚಂದ್ರಶೇಖರ ವಸ್ತ್ರದ, ಗುರುಲಿಂಗ ಕಾಪಸೆ, ಡಾ. ಪಿವಿ ನಾರಾಯಣ, ಡಾ. ಚನ್ನಕ್ಕ ಪಾವಟೆ, ಎಂಆರ್ ರಮಾದೇವಿ ಮುಂತಾದವರು ಬರೆಯಿಸಿದ ಸುಮಾರು 400 ಗ್ರಂಥಗಳನ್ನು ಪ್ರಕಟಿಸಿದ್ದಾರೆ. “ಒಂದು ಹೋರಾಟದಲ್ಲಿ ಇವೆಲ್ಲವೂ ಸಾಮಾನ್ಯ. ನನ್ನ ತತ್ವದಲ್ಲಿ ನಾನು ನಂಬಿಕೆಯುಳ್ಳವನಾಗಿದ್ದರಿಂದ ಅದನ್ನು ಬಿಡುವುದಿಲ್ಲ. ನನ್ನ ವ್ಯಕ್ತಿತ್ವದಲ್ಲಿ ನಂಬಿಕೆಯಿಟ್ಟವರು ನನ್ನ ಜೊತೆಗಿದ್ದಾರೆ” ಎಂಬುದಾಗಿ ಗದುಗಿನ ತೋಂಟದಾರ್ಯ ಮಠದ ಸ್ವಾಮಿಗಳು ಪ್ರತಿಕ್ರಿಯಿಸಿದ್ದಾರೆ.

ಅವರನ್ನು ಬೆಂಬಲಿಸಬೇಕಾದದ್ದು ನಮ್ಮಂಥವರ ಕರ್ತವ್ಯವೆಂದು ಭಾವಿಸಿದ್ದರಿಂದ ಈ ಎಲ್ಲ ಮಾತುಗಳನ್ನು ಬರೆದಿದ್ದೇನೆ.

About sujankumarshetty

kadik helthi akka

Posted on ಏಪ್ರಿಲ್ 24, 2010, in "ಇ-ಲೋಕ" ಲೇಖನಗಳ “ಕನ್ನಡಲೋಕ”, ರವಿ ಬೆಳಗೆರೆ - ಸೂರ್ಯ ಶಿಕಾರಿ, Uncategorized and tagged . Bookmark the permalink. ನಿಮ್ಮ ಟಿಪ್ಪಣಿ ಬರೆಯಿರಿ.

ನಿಮ್ಮ ಟಿಪ್ಪಣಿ ಬರೆಯಿರಿ