ನಮ್ಮ ನಡುವಿನಿಂದಲೇ ಚೀನಾ ಆಕ್ರಮಣ!

China, a big threat to India
ಚೀನಾ ನಿಜಕ್ಕೂ ಭಾರತದ ಮೇಲೆ ಆಕ್ರಮಣಕ್ಕೆ ಸಜ್ಜಾಗಿದೆಯಾ? ಭಾರತದ ಗಡಿಯನ್ನು ನುಂಗುತ್ತಾ ಒಳಗೆ ಹೆಜ್ಜೆ ಹಾಕುತ್ತಿದೆಯಾ? ಇಂಥದೊಂದು ಪ್ರಶ್ನೆ ಕಳೆದ ಕೆಲವು ವರ್ಷಗಳಿಂದ ಭಾರತವನ್ನು ಬಾಧಿಸುತ್ತಿದೆ. ಕಾಲಕಾಲಕ್ಕೆ ಚೀನಾದ ನಡೆ-ನುಡಿ ಭಾರತದಲ್ಲಿ ಒಂದಷ್ಟು ಕಂಪನ, ಅಪನಂಬಿಕೆಯನ್ನು ಹುಟ್ಟುಹಾಕುತ್ತಿರುವುದಂತೂ ಸತ್ಯ. ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಎನ್‌ಡಿಎ ಸರಕಾರದಲ್ಲಿ ರಕ್ಷಣಾ ಸಚಿವರಾಗಿದ್ದ ಜಾರ್ಜ್ ಫರ್ನಾಂಡಿಸ್, `ನಿಸ್ಸಂದೇಹವಾಗಿ ಚೀನಾ ಭಾರತದ potential threat’ ಎಂದು ಹೇಳಿದ್ದರು.

ನರಸಿಂಹರಾವ್ ಸಂಪುಟದಲ್ಲಿ ರಕ್ಷಣಾ ಸಚಿವರಾಗಿದ್ದ ಶರದ್ ಪವಾರ್ ಚೀನಾಕ್ಕೆ ಹೋಗಿದ್ದರು. ಅಲ್ಲಿಂದ ವಾಪಸಾದ ಬಳಿಕ ಅನೌಪಚಾರಿಕವಾಗಿ ಪತ್ರಕರ್ತರ ಜತೆ ಮಾತಾಡುತ್ತಾ ಹೇಳಿದ್ದರಂತೆ- `ಇನ್ನು ಹತ್ತು ವರ್ಷ ಚೀನಾದವರು ದೇಶ ಕಟ್ಟುವ ಕೆಲಸದಲ್ಲಿ ನಿರತರಾಗಿರುತ್ತಾರೆ. ಆನಂತರ ಅವರು ಭಾರತದ ಮೇಲೆ ತಮ್ಮ ಗಮನ ಹರಿಸುತ್ತಾರೆ.’ ಪವಾರ್ ಈ ಮಾತನ್ನು ಹೇಳಿ ಸುಮಾರು ಹನ್ನೆರಡು ವರ್ಷಗಳಾದವು. ದೇಶ ಕಟ್ಟುವ ಅವರ ಹತ್ತು ವರ್ಷದ ಅವಧಿ ಮುಗಿದಿದೆ. ಈ ಹತ್ತು ವರ್ಷಗಳಲ್ಲಿ ಚೀನಾ ಜಗತ್ತೇ ನಿಬ್ಬೆರಗಾಗುವಂತೆ ಎದ್ದುನಿಂತಿದೆ. ಎಲ್ಲ ರಂಗಗಳಲ್ಲೂ ಅಸಾಧಾರಣ ಪ್ರಗತಿ ಸಾಧಿಸಿದೆ.

ಭಾರತ-ಚೀನಾ ಸಮಸಮನಾಗಿದ್ದವು. ಆದರೆ ಕಳೆದ ಹತ್ತು ವರ್ಷಗಳಲ್ಲಿ ಚೀನಾದ ನಾಗಾಲೋಟದ ಮುಂದೆ ಭಾರತ ಕಾಲುಮುರಿದ ಕುದುರೆ! ಈ ಓಟದಲ್ಲಿ ಚೀನಾ ಅದೆಷ್ಟು ಮುಂದೆ ಸಾಗಿದೆಯೆಂದರೆ, ಚೀನಾ ಇನ್ನು ಇಪ್ಪತ್ತೈದು ವರ್ಷ ಏನೂ ಮಾಡದಿದ್ದರೂ ಭಾರತಕ್ಕೆ ಅದನ್ನು ಹಿಂದಕ್ಕೆ ಹಾಕಲು ಸಾಧ್ಯವಿಲ್ಲ. ಆ ಪರಿ ಚೀನಾ ಅಭಿವೃದ್ಧಿ ಸಾಧಿಸಿದೆ. ರಸ್ತೆ [^], ಸೇತುವೆ, ಬಹುಮಹಡಿ ಕಟ್ಟಡ, ಮೇಲ್‌ಸೇತುವೆ, ರೈಲು, ವಿಮಾನ ನಿಲ್ದಾಣ, ಮೆಟ್ರೋ, ಇಂಧನ, ಕೃಷಿ, ಕೈಗಾರಿಕೆ ಹೀಗೆ ಯಾವುದೇ ರಂಗವನ್ನು ತೆಗೆದುಕೊಳ್ಳಿ, ಚೀನಾ `ವರ್ಲ್ಡ್‌ಕ್ಲಾಸ್’ ಎನ್ನುವಂಥ ಪ್ರಗತಿ ಸಾಧಿಸಿದೆ. ಇಷ್ಟು ಕಡಿಮೆ ಅವಧಿಯಲ್ಲಿ ಪ್ರಾಯಶಃ ಯಾವುದೇ ದೇಶವೂ ಅಂತಾರಾಷ್ಟ್ರೀಯ ಸ್ತರದಲ್ಲಿ ದೈತ್ಯಶಕ್ತಿಯಾಗಿ ಹೊರಹೊಮ್ಮಿಲ್ಲ. ಇಂದು ಚೀನಾ ಅಮೆರಿಕದಂಥ ದೇಶಕ್ಕೆ ಸಡ್ಡು ಹೊಡೆದು ನಿಲ್ಲುವಂಥ ದಾರ್ಷ್ಟ್ಯ ಬೆಳೆಸಿಕೊಂಡಿದೆ. ಅವರು ಈಗಾಗಲೇ ದೇಶವನ್ನು ಅಭಿವೃದ್ಧಿಯ ಹಳಿಯ ಮೇಲೆ ತಂದು ನಿಲ್ಲಿಸಿಬಿಟ್ಟಿದ್ದಾರೆ. ಇನ್ನೇನಿದ್ದರೂ ಅದು ಆ ದಿಸೆಯಲ್ಲಿ ವೇಗವಾಗಿ ಸಾಗುತ್ತಿರುತ್ತದೆ. ಶರದ್ ಪವಾರ್ ಹೇಳಿದಂತೆ ಅಭಿವೃದ್ಧಿ ವಿಷಯದಲ್ಲಿ ಚೀನಾ ತಾನು ಅಂದುಕೊಂಡಂತೆ ಸಾಧಿಸಿ ತೋರಿಸಿದೆ. ಇನ್ನೇನಿದ್ದರೂ ಅದರ ಮಾರಿ ಕಣ್ಣು ಹೋರಿ ಮೇಲೆ!

ಚೀನಾವು ಪದೇ ಪದೆ ಅರುಣಾಚಲ ಪ್ರದೇಶ ತನ್ನದೆಂದು ಹೇಳಿಕೊಳ್ಳುತ್ತಲೇ ಇದೆ. ಹೇಳಿ ಸುಮ್ಮನೆ ಕುಳಿತುಕೊಳ್ಳುವುದು ಅದರ ಜಾಯಮಾನ ಅಲ್ಲವೇ ಅಲ್ಲ. ಈಗಾಗಲೇ ಸುಮಾರು ತೊಂಬತ್ತು ಸಾವಿರ ಚದರ ಕಿ.ಮೀ.ನಷ್ಟು ಭೂಪ್ರದೇಶವನ್ನು ಆಕ್ರಮಿಸಿಕೊಂಡಿದೆ. ಆ ಪ್ರದೇಶದಲ್ಲಿ ಸಲೀಸಾಗಿ ಲಿಬರೇಷನ್ ಪೀಪಲ್ಸ್ ಆರ್ಮಿಯ ಸೈನಿಕರು ಗಸ್ತು ತಿರುಗುತ್ತಿದ್ದಾರೆ. ಅರುಣಾಚಲ ಪ್ರದೇಶದಲ್ಲಿ ತಾನು ಆಕ್ರಮಿಸಿಕೊಂಡಿರುವ ಪ್ರದೇಶಗಳಲ್ಲಿ ಚೀನಾ ಶಾಲೆ, ಹೈಸ್ಕೂಲು, ಆಸ್ಪತ್ರೆ [^], ಸಮುದಾಯ ಭವನಗಳನ್ನು ನಿರ್ಮಿಸಿದೆ. ಅಲ್ಲಿನ ಭಾರತೀಯ ಪ್ರಜೆಗಳಿಗೆ ಚೀನಾ ಸರಕಾರದಿಂದ ಹಣ, ಆಹಾರ, ಔಷಧದ ನೆರವು ನಿರಂತರವಾಗಿ ಹರಿದು ಬರುತ್ತಿದೆ. ಈ ಆಮಿಷ ಯಾವ ಪ್ರಮಾಣದಲ್ಲಿ ಕೆಲಸ ಮಾಡಿದೆಯೆಂದರೆ ಅರುಣಾಚಲದ ಭಾರತೀಯರು ತಮ್ಮನ್ನು ಚೀನಾದವರೆಂದು ನಂಬಿಸಿಕೊಳ್ಳುತ್ತಿದ್ದಾರೆ.

ಅರುಣಾಚಲ ಪ್ರದೇಶಕ್ಕೆ ಭಾರತ ಸರಕಾರದ ಅಧಿಕಾರಿ ಅಥವಾ ಸಚಿವರು ಭೇಟಿ ಕೊಟ್ಟರೆ, ವಿಮಾನ ನಿಲ್ದಾಣದಲ್ಲಿಯೇ ಪ್ರತಿಭಟನೆಗಳಾಗುತ್ತವೆ. ಕಳೆದ ವರ್ಷ ಭಾರತದ ಪ್ರಧಾನಿ [^] ಡಾ. ಮನಮೋಹನ್ ಸಿಂಗ್ ಅರುಣಾಚಲಕ್ಕೆ ಭೇಟಿ ನೀಡಿದಾಗ ಚೀನಾ ಬಹಿರಂಗವಾಗಿ ತನ್ನ ಅಸಮಾಧಾನವನ್ನು ವ್ಯಕ್ತಪಡಿಸಿತು. ದಲೈಲಾಮಾ ಹೋದಾಗಲಂತೂ ಚೀನಾ ರಂಪಾರುಡಿ ಮಾಡಿತು. ದಲೈಲಾಮಾಗೆ ಎಲ್ಲೆಡೆ ಕಪ್ಪು ಬಾವುಟ ತೋರಿಸಿತು. ಪ್ರಧಾನಿಗೆ ಮುಖಭಂಗವುಂಟು ಮಾಡಲು ಚೀನಾವು ಅರುಣಾಚಲ ಪ್ರದೇಶದಲ್ಲಿ ಶಾಲೆ, ಕಾಲೇಜಿಗೆ ರಜೆ ಘೋಷಿಸಿಬಿಟ್ಟಿತು. ಪ್ರಧಾನಿ ಕಾರ್ಯಕ್ರಮದ ವಿವರಗಳನ್ನು ವರದಿ ಮಾಡದಂತೆ ಸ್ಥಳೀಯ ಪತ್ರಿಕೆಗಳಿಗೆ ತಾಕೀತು ಮಾಡಿತು. ಪ್ರಧಾನಿ ಕಾರ್ಯಕ್ರಮವನ್ನು ಪ್ರಸಾರ ಮಾಡದಂತೆ ಕೇಬಲ್ ಆಪರೇಟರ್‌ಗಳಿಗೆ ಹೇಳಿ blackout ಮಾಡಿತು. ದೂರದರ್ಶನದ ಹೊರತಾಗಿ ಬೇರೆ ಯಾರೂ ಆ ಕಾರ್ಯಕ್ರಮವನ್ನು ಪ್ರಸಾರ ಮಾಡಲಿಲ್ಲ. ಪ್ರಧಾನಿ ಅಲ್ಲಿಗೆ ಹೋಗಿ ಬಂದಿದ್ದೇ ಅರುಣಾಚಲದ ಮಂದಿಗೆ ಗೊತ್ತಾಗಲಿಲ್ಲ. ಭಾರತದಲ್ಲಿಯೇ ಭಾರತದ ಪ್ರಧಾನಿ ಅಬ್ಬೇಪಾರಿ ಆಗುವಂಥ ಸನ್ನಿವೇಶ ಸಂಭವಿಸಿತು! ತನ್ನ ಕೇಳಿ ಅರುಣಾಚಲಕ್ಕೆ ಹೋಗಬೇಕಿತ್ತು ಎಂಬ ಚೀನಾದ ಷರಾ ಬೇರೆ.

ಚೀನಾವು ಅರುಣಾಚಲ ಪ್ರದೇಶದ ಗಡಿಯನ್ನು ಸೀಳಿಕೊಂಡು ರೈಲು ಮಾರ್ಗ, ರೈಲು ನಿಲ್ದಾಣ, ಸೇತುವೆ, ಹೆದ್ದಾರಿಯನ್ನು ನಿರ್ಮಿಸಿದೆ. ಸುರಂಗ ಕೊರೆದು ರಸ್ತೆಯನ್ನು ಮಾಡಿದೆ. ಎರಡು ದೇಶಗಳ ನಡುವಿನ ಗಡಿಯನ್ನು ಕಿತ್ತು ಬಿಸಾಕಿದೆ. ಗಡಿಭಾಗದಲ್ಲಿರುವ ಭಾರತೀಯರಿಗೆ ಚೀನಾ ಯಾವ ರೀತಿಯ brain wash ಮಾಡಿದೆಯೆಂದರೆ ಅವರಿಗೆ ಚೀನಾದ ಜತೆಗೆ ಗುರುತಿಸಿಕೊಳ್ಳುವುದರಲ್ಲಿಯೇ ಹೆಚ್ಚು ಲಾಭವಿದೆಯೆಂಬ ಭಾವನೆಯನ್ನು ಮೂಡಿಸಿದೆ. ಹಣ, ಆಹಾರ ಹಾಗೂ ಇನ್ನಿತರ ಪ್ರಲೋಭನೆಗಳಿಂದಾಗಿ ಅವರೆಲ್ಲ ಚೀನಾಕ್ಕೆ ನಿಷ್ಠರಾಗಿ ಪರಿವರ್ತಿತರಾಗಿರುವುದು ವಸ್ತುಸ್ಥಿತಿಗೆ ಹಿಡಿದ ಕೈಗನ್ನಡಿ. ಭಾರತದ ಗಡಿಯೊಳಗೆ ಹಾದು ಬಂದ ರಸ್ತೆ ದಿನದಿಂದ ದಿನಕ್ಕೆ ಬೆಳೆಯುತ್ತಿದೆ. ಅರುಣಾಚಲದಲ್ಲಿ ಭಾರತದ ಶಾಸನಕ್ಕೆ ಕವಡೆಕಿಮ್ಮತ್ತಿಲ್ಲ. ಅರುಣಾಚಲದ ಪ್ರಜೆಗಳಿಗೆ ಚೀನಾಕ್ಕೆ ಹೋಗಲು ವೀಸಾ ಬೇಕಾಗಿಲ್ಲ ಎಂದು ಚೀನಾ ಹೇಳಿತ್ತು. ಭಾರತ ಇದಕ್ಕೆ ಪ್ರತಿಭಟಿಸಿದಾಗ ಸುಮ್ಮನಾಯಿತು. ಪಾಕ್ ಆಕ್ರಮಿತ ಕಾಶ್ಮೀರಿ ಪ್ರಜೆಗಳಿಗೆ ಪಾಸ್‌ಪೋರ್ಟ್‌ಗೆ ಒಂದು ಕಾಗದದ ಮೇಲೆ ಪಿನ್ ಮಾಡಿ ಅಂಟಿಸಿದ ವೀಸಾ ಕೊಡಲು ಆರಂಭಿಸಿತು. ಅಂದರೆ ಕಾಶ್ಮೀರಿ ಪ್ರಜೆಗಳನ್ನು ಭಾರತದ ಅನ್ಯ ನಾಗರಿಕರಿಂದ ಬೇರ್ಪಡಿಸಿ ಪ್ರತ್ಯೇಕವಾಗಿ ಗುರುತಿಸುವುದು ಚೀನಾದ ಹುನ್ನಾರವಾಗಿತ್ತು. ಇದನ್ನೂ ಭಾರತ ಖಂಡಿಸಿದೆ. ಸದ್ಯ ಈ ವಿಷಯ ತಣ್ಣಗಾದರೂ ಚೀನಾ ಸುಮ್ಮನಿರುವ ಗಿರಾಕಿಯಂತೂ ಅಲ್ಲವೇ ಅಲ್ಲ.

ಈ ಮಧ್ಯೆ ಚೀನಾ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ತನ್ನ ಕಿತಾಪತಿ ಮುಂದುವರಿಸಿದೆ. ಇದಕ್ಕೆ ಪಾಕಿಸ್ತಾನದ ಚಿತಾವಣೆ ಬೇರೆ. ಹೇಗಾದರೂ ಮಾಡಿ ಭಾರತವನ್ನು ಅಸ್ಥಿರಗೊಳಿಸುವುದು ಚೀನಾದ ಗುರಿ. ಪಾಕ್ ಆಕ್ರಮಿತ ಕಾಶ್ಮೀರದ ಅಸ್ಟೋರ್ ಜಿಲ್ಲೆಯ ಸಿಂಧು ನದಿ ಪಾತ್ರದ ಬುಂಜಿ ಪ್ರದೇಶದಲ್ಲಿ ಸುಮಾರು ಏಳು ಸಾವಿರ ಮೆಗಾವ್ಯಾಟ್ ಸಾಮರ್ಥ್ಯದ ಜಲವಿದ್ಯುತ್ ಸ್ಥಾವರವನ್ನು ಸ್ಥಾಪಿಸಲು ಹೊರಟಿರುವ ಪಾಕಿಸ್ತಾನಕ್ಕೆ ಚೀನಾದ್ದೇ ಕುಮ್ಮಕ್ಕು. ಈ ಪ್ರದೇಶ ತನ್ನದೆಂದು ಭಾರತ ಈಗಾಗಲೇ ಹಲವು ಸಲ ಪಾಕ್-ಚೀನಾಕ್ಕೆ ಮನವರಿಕೆ ಮಾಡಿಕೊಟ್ಟಿದ್ದರೂ, ಅವರ ದುಸ್ಸಾಹಸ ನಿಂತಿಲ್ಲ. ಪಾಕ್ ಆಕ್ರಮಿತ ಕಾಶ್ಮೀರ ಪ್ರದೇಶದಲ್ಲಿ ಚೀನಾದ ಸುಮಾರು 80 ಪ್ರಮುಖ ಕಂಪನಿಗಳು ಮೂಲಸೌಕರ್ಯ [^] ಸಂಬಂಧಿ ಯೋಜನೆಗಳಲ್ಲಿ ಸಕ್ರಿಯವಾಗಿವೆ. ಪ್ರಾಯಶಃ ಯಾವ ದೇಶದ ಗಡಿಗುಂಟ ಈ ಪ್ರಮಾಣದ ಚಟುವಟಿಕೆಗಳನ್ನು ಕಾಣಲು ಸಾಧ್ಯವಿಲ್ಲ. ಚೀನಾ ಭಾರತದ ಮನವಿ, ಆಕ್ಷೇಪ ಅಥವಾ ಪ್ರತಿರೋಧಕ್ಕೆ ಸ್ವಲ್ಪವೂ ತಲೆಕೆಡಿಸಿಕೊಳ್ಳದೇ ಹಾಡಹಗಲೇ ತನ್ನ ಕೆಲಸವನ್ನು ಮುಂದುವರಿಸಿದೆ.

ಜಮ್ಮು-ಕಾಶ್ಮೀರ ಪ್ರದೇಶದಲ್ಲಿ ಚೀನಾ ಭಾರತದ ಸುಮಾರು 38 ಸಾವಿರ ಚದರ ಕಿ.ಮೀ. ಭೂಭಾಗ ಆಕ್ರಮಿಸಿಕೊಂಡಿದೆ. ಭಾರತದ ಗಡಿಗುಂಟ ಮೂಲಸೌಕರ್ಯ, ಟೆಲಿಕಾಮ್ ಇತ್ಯಾದಿ ಯಾವುದೇ ಯೋಜನೆಗಳಲ್ಲಿ ತೊಡಗಿಸಿಕೊಳ್ಳುವ ಕಂಪನಿಗಳಿಗೆ ಚೀನಾ ಸರಕಾರವು ವಿಶೇಷ ಪ್ರೋತ್ಸಾಹ, ನೆರವು ನೀಡುತ್ತಿರುವುದು ಈಗ ಗುಟ್ಟಾಗಿ ಉಳಿದಿಲ್ಲ.

ಸಾಮಾನ್ಯವಾಗಿ ಎರಡು ದೇಶಗಳ ಗಡಿಭಾಗದಲ್ಲಿ ಯಾವುದೇ ಚಟುವಟಿಕೆ ನಡೆಯುವುದಿಲ್ಲ. ಆದರೆ ಇಲ್ಲಿ ಸರಿ ವಿರುದ್ಧ. ದುರ್ದೈವದ ಸಂಗತಿಯೆಂದರೆ ಭಾರತ ಸರಕಾರ ಅಸಹಾಯಕವಾಗಿ ನೋಡುತ್ತಿದೆ. ರಾಜತಾಂತ್ರಿಕ ಮಾತುಕತೆ ಮೂಲಕ ಈ ವಿವಾದವನ್ನು ಇತ್ಯರ್ಥಪಡಿಸಿಕೊಳ್ಳಲು ಹೊರಟಿದೆ. ಆದರೆ ಈ ಮಾತುಕತೆ ವರ್ಷಗಳಿಂದ ನಡೆಯುತ್ತಿದ್ದರೂ, ಚೀನಾದ ಚಟುವಟಿಕೆ ನಿಂತಿಲ್ಲ. ದಿನದಿಂದ ದಿನಕ್ಕೆ ಭರದಿಂದಲೇ ಸಾಗುತ್ತಿದೆ. ಅರುಣಾಚಲ ಪ್ರದೇಶದಲ್ಲಿ ಚೀನಾ ಇಷ್ಟೊಂದು ಆಸ್ಥೆವಹಿಸಿ ವ್ಯವಸ್ಥಿತವಾಗಿ ಭಾರತ ವಿರೋಧಿ ಕೃತ್ಯಗಳನ್ನು ಎಸಗುತ್ತಿದ್ದರೂ ಅದನ್ನು ತಡೆಯಲು, ಅಲ್ಲಿನ ವಾಸಿಗಳಲ್ಲಿ ಆತ್ಮವಿಶ್ವಾಸ ತುಂಬಲು ಭಾರತ ಸರಕಾರ ಅಂಥ ಹೇಳಿಕೊಳ್ಳುವಂಥ ಕ್ರಮ ಕೈಗೊಂಡಿಲ್ಲ. ಈ ಬಗ್ಗೆ ನೀವು ಭಾರತದ ಯಾವುದೇ ಮಂತ್ರಿ, ಪ್ರಧಾನಮಂತ್ರಿಯನ್ನು ಕೇಳಿದರೆ, ಅವರು ಸುಮ್ಮನೆ ತವುಡು ಕುಟ್ಟುತ್ತಾರೆ. `ದ್ವಿಪಕ್ಷೀಯ ಮಾತುಕತೆ ನಡೆಯುತ್ತಿದೆ, ಮಾತುಕತೆ ಮೂಲಕ ವಿವಾದ ಬಗೆಹರಿಸಿಕೊಳ್ಳುತ್ತೇವೆ’ ಎಂದು ಸಾಗಹಾಕುವ ಉತ್ತರ ಕೊಟ್ಟು ನುಣುಚಿಕೊಳ್ಳುತ್ತಾರೆ.

ಚೀನಾವು ಭಾರತದ ಮೇಲೆ ಆಕ್ರಮಣ ಮಾಡಲು ಬೇಕಾದ ಎಲ್ಲ ಸಿದ್ಧತೆಗಳನ್ನು ಎಂದೋ ಆರಂಭಿಸಿದೆ. ಇದು ಗಡಿಗುಂಟ ನಡೆಯುತ್ತಿರುವ ಚಟುವಟಿಕೆಯಿರಬಹುದು. ಆದರೆ ಗಡಿಯೊಳಗೆ, ನಮ್ಮ ಮಧ್ಯವೇ ಚೀನಾದ ಆಕ್ರಮಣ ಆರಂಭವಾಗಿ ಬಹಳ ವರ್ಷಗಳೇ ಸಂದಿವೆ. ಅದರ ಬಗ್ಗೆ ಯಾರೂ ತಲೆಕೆಡಿಸಿಕೊಳ್ಳುತ್ತಿಲ್ಲ. ಇಂದು ಭಾರತದ ಯಾವುದೇ ಊರಿಗೆ ಹೋಗಿ ಚೀನಾದ ವಸ್ತುಗಳು ಸಿಗುತ್ತವೆ. Maid in China ಮುದ್ರೆಯೊತ್ತಿದ ಎಲ್ಲ ವಸ್ತುಗಳೂ ಎಲ್ಲೆಡೆ ಲಭ್ಯ. ಆಟಿಕೆ, ಗೃಹಬಳಕೆ ವಸ್ತುಗಳಿಂದ ಹಿಡಿದು ಎಲೆಕ್ಟ್ರಾನಿಕ್ ಉಪಕರಣಗಳವರೆಗೆ ಪ್ರತಿಯೊಂದು ವಸ್ತುವೂ ಮೇಡ್ ಇನ್ ಚೀನಾ! ಅಮೆರಿಕದಲ್ಲಿ ವಾಲ್‌ಮಾರ್ಟ್‌ನಂಥ ಸಂಸ್ಥೆ ಚೀನಾದ ವಸ್ತುಗಳ ಮೇಲೆ ನಿರ್ಬಂಧ ಹೇರಲು ಯೋಚಿಸಿದಾಗ, ವಾಲ್ ಮಾರ್ಟ್‌ಗಿಂತ ದೊಡ್ಡ ಅಂಗಡಿಗಳನ್ನು ತೆರೆಯುವುದಾಗಿ ಚೀನಾ ಬೆದರಿಕೆ ಹಾಕಿತ್ತು. ಏರ್‌ಬಸ್ ವಿಮಾನ ಸಂಸ್ಥೆಗೆ ತನ್ನ ದೇಶಕ್ಕೆ ಬರುವಂತೆ ಚೀನಾ ಆಹ್ವಾನ ನೀಡಿದಾಗ ಮೊದಲು ಅದನ್ನು ಏರ್ ಬಸ್ ಗಂಭೀರವಾಗಿ ಪರಿಗಣಿಸಲಿಲ್ಲ. ತನ್ನ ದೇಶದಲ್ಲಿ ವಿಮಾನ ತಯಾರಿಕೆಗೆ ಮುಂದೆ ಬರದಿದ್ದರೆ, ತಾನೇ ವಿಮಾನ ತಯಾರಿಕೆ ಘಟಕ ಸ್ಥಾಪಿಸುವುದಾಗಿ ಚೀನಾ ಯಾವಾಗ ಏರ್‌ಬಸ್‌ಗೆ ತಿರುಗೇಟು ನೀಡಿತೋ, ಮೂಗು ಹಿಡಿದರೆ ಬಾಯಿ ತೆರೆಯುತ್ತಾರಲ್ಲ, ಹಾಗೆ ಏರ್‌ಬಸ್ ಕಮಕ್‌ಕಿಮಕ್ ಎನ್ನದೇ ಬಂದಿತು. ಮೊನ್ನೆಮೊನ್ನೆ ಮೊದಲ ಏರ್‌ಬಸ್ ವಿಮಾನ ಹಾರಾಟಕ್ಕೆ ತಯಾರಾಗಿ ಬಂತು. ಅದು ಚೀನಾದ ತಾಕತ್ತು.

ಇಂದು ಚೀನಾ ವಿಜ್ಞಾನ-ತಂತ್ರಜ್ಞಾನದಲ್ಲಿ ಅಮೆರಿಕದಂಥ ದೈತ್ಯ ರಾಷ್ಟ್ರಕ್ಕೂ ಸಡ್ಡುಹೊಡೆದು ನಿಂತಿದೆ. ಹೀಗಿರುವಾಗ ಭಾರತದಂಥ ದೇಶ ಅದಕ್ಕೇನು ಮಹಾ? ಇತ್ತೀಚೆಗೆ ಅಮೆರಿಕದ ಆಪಲ್ ಕಂಪನಿ ಬಹುದಿನಗಳಿಂದ ನಿರೀಕ್ಷಿಸಿದ ಐ-ಪ್ಯಾಡನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿತಷ್ಟೆ. ಮೊದಲ ದಿನವೇ ಅಮೆರಿಕದಲ್ಲಿ ಸುಮಾರು ಮೂರು ಲಕ್ಷ ಐ-ಪ್ಯಾಡ್‌ಗಳು ಮಾರಾಟವಾದವು. ಈ ಉಪಕರಣ ಅಮೆರಿಕದಲ್ಲಿ ಬಿಡುಗಡೆಯಾದ ಎಂಟನೆ ದಿನ ನಾನು ಚೀನಾ ರಾಜಧಾನಿ ಬೀಜಿಂಗ್‌ನಲ್ಲಿದ್ದೆ. ಆಗಲೇ ಚೀನಾದ ಮಾರುಕಟ್ಟೆಯಲ್ಲಿ ಐ-ಪ್ಯಾಡ್‌ಗಳು ರಾಶಿರಾಶಿ ಬಿದ್ದಿದ್ದವು. ಸೌತೆಕಾಯಿ, ಕಲ್ಲಂಗಡಿ ಹಣ್ಣುಗಳನ್ನು ರಸ್ತೆಯಂಚಿನಲ್ಲಿ ರಾಶಿ ಹೊಡೆದು ಮಾರಾಟ ಮಾಡುವಂತೆ ಮಾರುತ್ತಿದ್ದರು. ಅಮೆರಿಕದಲ್ಲಿ ಈ ಐ-ಪ್ಯಾಡನ್ನು ಐನೂರು ಡಾಲರ್‌ಗೆ ಮಾರುತ್ತಿದ್ದರೆ, ಬೀಜಿಂಗ್‌ನಲ್ಲಿ ನೂರು ಡಾಲರ್‌ಗೆ ಸಿಗುತ್ತಿತ್ತು. ಚೀನಿ ಭಾಷೆಯಲ್ಲಿ ಬಾರ್ಗೇನ್ ಮಾಡಿದರೆ ಮತ್ತೆ 25 ಡಾಲರ್ ಕಡಿತ! ಅಮೆರಿಕದಲ್ಲಿ ಬಿಡುಗಡೆಯಾಗಿ ಇನ್ನೂ ಒಂದು ವಾರವಾಗಿಲ್ಲ, ಆಗಲೇ ಅದು ಚೀನಾದಲ್ಲಿ ಡುಪ್ಲಿಕೇಟ್ ಆಗಿ ಬಿಕರಿಯಾಗಿತ್ತು. ಹೀಗಾದರೆ ಆಪಲ್ ಐಪ್ಯಾಡನ್ನು ಐನೂರು ಡಾಲರ್ ಕೊಟ್ಟು ಯಾರು ಖರೀದಿಸಬಹುದು? ಒರಿಜಿನಲ್‌ಗೂ ಡುಪ್ಲಿಕೇಟ್‌ಗೂ ವ್ಯತ್ಯಾಸವೇ ಇಲ್ಲ. ಕಳೆದ ಒಂದು ವರ್ಷದಿಂದ ಚೀನಾ ನಡೆಸುತ್ತಿರುವ ಈ ಅವ್ಯಾಹತ ಆಕ್ರಮಣವನ್ನು ತಡೆಯುವುದು ಹೇಗೆ? ಇಲ್ಲಿ ತನಕ ಅದನ್ನು ನಿಯಂತ್ರಿಸಲು ಯಾರಿಂದಲೂ ಸಾಧ್ಯವಾಗಿಲ್ಲ.

ಜಗತ್ತಿನ ಯಾವುದೇ ಪ್ರಮುಖ ಬ್ರ್ಯಾಂಡನ್ನೇ ತೆಗೆದುಕೊಳ್ಳಿ, ಚೀನಾದಲ್ಲಿ ಅವೆಲ್ಲವುಗಳ ಡುಪ್ಲಿಕೇಟ್ ಲಭ್ಯ. ಶತ್ರುಗಳ ತೋಟಕ್ಕೆ ಮಿಡತೆಯನ್ನು ಬಿಟ್ಟ ಹಾಗೆ, ಚೀನಾ ತಾನು ಉತ್ಪಾದಿಸುವ ವಸ್ತುಗಳನ್ನು ಅತಿ ಅಗ್ಗದ ಬೆಲೆಗೆ ದಂಡಿಯಾಗಿ ಬೇರೆ ದೇಶಗಳಿಗೆ ರಫ್ತು ಮಾಡುತ್ತಾ ಅಲ್ಲಿನ ಮಾರುಕಟ್ಟೆಗಳ ಮೇಲೆ ಅಕ್ಷರಶಃ ದಾಳಿ ಮಾಡುತ್ತಿದೆ. ಇನ್ನೊಂದೆಡೆ ಬೇರೆ ಯಾರಿಗೂ ಪೈಪೋಟಿಯೊಡ್ಡಲು ಸಹ ಸಾಧ್ಯವಾಗದಂಥ ಅಗಾಧತೆಯನ್ನೂ ಬೆಳೆಸಿಕೊಂಡಿದೆ. ಉದಾಹರಣೆಗೆ, ಬ್ರೆಜಿಲ್‌ನಂಥ ದೇಶಕ್ಕೆ ಐದುಲಕ್ಷ ಕಂಪ್ಯೂಟರ್‌ಗಳು ಒಂದು ತಿಂಗಳ ಅವಧಿಯಲ್ಲಿ ಬೇಕಾಗಿದೆಯೆನ್ನಿ. ಭಾರತದ ಕಂಪನಿ ಒಂದು ತಿಂಗಳಲ್ಲಿ ಐದು ಲಕ್ಷ ಕಂಪ್ಯೂಟರ್‌ಗಳನ್ನು ತಯಾರಿಸಬಹುದು. ಆದರೆ ನಿಗದಿತ ಅವಧಿಯಲ್ಲಿ ಡೆಲಿವರಿ ಕೊಡಲು ಅದಕ್ಕೆ ಸಾಧ್ಯವಾಗಲಿಕ್ಕಿಲ್ಲ. ಆದರೆ ಅದೇ ಚೀನಾದ ಕಂಪನಿ ಅದಕ್ಕಿಂತ ಕಡಿಮೆ ಅವಧಿಯಲ್ಲಿ ಕಂಪ್ಯೂಟರ್ ತಯಾರಿಸಿ ಬ್ರೆಜಿಲ್ ಸರಕಾರ ಹೇಳುವ ತನ್ನೆಲ್ಲ ಶಾಲೆಗಳಿಗೆ ಡೆಲಿವರಿ ಕೊಡುತ್ತದೆ. ತನ್ನ ದೇಶದಿಂದ ಹೊರಟ ಹಡಗಿನಲ್ಲಿಯೇ ಕಂಪ್ಯೂಟರ್ ತಯಾರಿಕೆ ಘಟಕ ಸ್ಥಾಪಿಸಿ, ಹದಿನೈದು ದಿನಗಳ ಪ್ರಯಾಣದ ಅವಧಿಯಲ್ಲಿ ಕಂಪ್ಯೂಟರ್ ಸಿದ್ಧಪಡಿಸಿ, ಬ್ರೆಜಿಲ್ ಹತ್ತಿರ ಹತ್ತಿರ ಬರುತ್ತಿರುವಂತೆ ಪ್ಯಾಕ್ ಮಾಡಿ ಕೊಟ್ಟುಬಿಡುತ್ತದೆ. ಈ ರೀತಿಯಲ್ಲಿ ಚೀನಾ ಎಲ್ಲ ವರ್ಕ್ ಆರ್ಡರ್ ಗಳನ್ನು ತಾನೇ ಕಬಳಿಸಿಬಿಡುತ್ತಿದೆ. ಇದು ಒಂದು ರೀತಿಯಲ್ಲಿ ಆಕ್ರಮಣವೇ.

ಭಾರತ-ಚೀನಾ ನಡುವೆ ಈ ವರ್ಷ 60 ಶತಕೋಟಿ ಡಾಲರ್ ವಹಿವಾಟು ಆಗಲಿದೆಯೆಂದು ಅಂದಾಜು ಹಾಕಲಾಗಿದೆ ಅಂದ್ರೆ ನಮಗೆ ಖುಷಿಯಾಗದೇ ಇರದು. ಆದರೆ ಸ್ವಲ್ಪ ನಿಲ್ಲಿ, ಇದರಲ್ಲಿ ಚೀನಾದ ಪಾಲು ಏನಿಲ್ಲವೆಂದರೂ 50 ಶತಕೋಟಿ ಡಾಲರ್ ಅಂದ್ರೆ ದಿಗ್ಭ್ರಮೆಯಾಗಬಹುದು. ಗಡಿಯ ಸಮೀಪ ನಡೆಯುತ್ತಿರುವ ಆ ಆಕ್ರಮಣಕ್ಕಿಂತ ನಮ್ಮ ಮಧ್ಯವೇ ಚೀನಾ ನಡೆಸುತ್ತಿರುವ ಈ ಆಕ್ರಮಣ ಇನ್ನೂ ಭಯಂಕರ, ಭೀಕರ! ಎಚ್ಚರ ತಪ್ಪಿದರೆ ಭಾರಿ ಬೆಲೆ ತೆರಬೇಕಾದೀತು.

Advertisements

About sujankumarshetty

kadik helthi akka

Posted on ಏಪ್ರಿಲ್ 24, 2010, in "ಇ-ಲೋಕ" ಲೇಖನಗಳ “ಕನ್ನಡಲೋಕ”, ವಿಶ್ವೇಶ್ವರ ಭಟ್ - ನೂರೆಂಟುಮಾತು, Uncategorized. Bookmark the permalink. ನಿಮ್ಮ ಟಿಪ್ಪಣಿ ಬರೆಯಿರಿ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: