ನೀವು ಪೂಜಿಸುವ ದೇವರ ವಿಗ್ರಹ ಚೀನಾದ್ದಾಗಿರಬಹುದು!

China way ahead of India in exports
ಚೀನಾದಿಂದ ವಾಪಸ್ ಬಂದು ಹದಿನೈದು ದಿನಗಳಾದವು. ಇನ್ನೂ ಚೀನಾದ ಗುಂಗಿನಿಂದ ಹೊರಬಂದಿಲ್ಲ’ ಎಂದು ನೀವು ಅಂದುಕೊಳ್ಳಬಹುದು, ಪರವಾಗಿಲ್ಲ. ಏಕೆಂದರೆ ಈ ವಾರವೂ ಚೀನಾದ ಬಗೆಗೇ ಬರೆಯುತ್ತಿದ್ದೇನೆ. ಕೆಲವು ಸಹೋದ್ಯೋಗಿ ಮಿತ್ರರು `ನೀವು ಹಾಗೂ ರವಿ ಬೆಳಗೆರೆ [^] ಯಾವುದಾದರೂ ದೇಶಕ್ಕೆ ಹೋಗಿ ಬಂದರೆ ಅದೇ ದೇಶದ ಬಗ್ಗೆ ಬರೆಯುತ್ತಲೇ ಇರುತ್ತೀರಿ’ ಎಂದರು. `ಹಾಗಾದರೆ ಇದು ಕಂಪ್ಲೇಂಟೋ, ಕಾಂಪ್ಲಿಮೆಂಟೋ?’ ಎಂದು ಕೇಳಿದೆ. ಅದಕ್ಕೆ ಅವರು `ಖಂಡಿತವಾಗಿಯೂ ಕಂಪ್ಲೇಂಟಲ್ಲ, ಕಾಂಪ್ಲಿಮೆಂಟು ಕಾಂಪ್ಲಿಮೆಂಟು. ಖುಷಿ ಸಂಗತಿ ಎಂದರೆ ನೀವು ಅಲ್ಲಿನ ರಸ್ತೆ, ಬಿಲ್ಡಿಂಗುಗಳ ಬಗ್ಗೆ ಬರೆದು ಬೋರು ಹೊಡೆಸುವುದಿಲ್ಲ’ ಎಂದು ಷರಾ ಬೇರೆ ಕೊಟ್ಟರು.

ಯಾವುದಾದರೂ ದೇಶಕ್ಕೆ ಹೋದಾಗ ಆ ದೇಶದ ಬಗ್ಗೆ ಬರೆಯುವುದು ಕಷ್ಟವಲ್ಲ. ಬರೆಯದೆ ಇರುವುದೇ ಕಷ್ಟ. ಯಾಕೆಂದರೆ ನೋಡಿದ್ದೆಲ್ಲ ಹೊಸತೇ. ಪ್ರತಿಯೊಂದೂ ಅಚ್ಚರಿಯೇ. ಕುತೂಹಲದ ಕಣ್ಣು, ಸುದ್ದಿ ವಾಸನೆ ಗ್ರಹಿಸುವ ಮೂಗನ್ನು ತೆರೆದಿಟ್ಟುಕೊಂಡರೆ ಒಬ್ಬ ಪತ್ರಕರ್ತನಿಗೆ ಸಾಕಷ್ಟು ವಿಷಯ ಸಿಗುತ್ತವೆ. ಜತೆಗೊಬ್ಬ ಸ್ಥಳೀಯ ವ್ಯಕ್ತಿ ಇದ್ದರೆ ಅಲ್ಲೇ ಹುಟ್ಟುವ ಪ್ರಶ್ನೆ, ಸಂದೇಹಗಳಿಗೆ ತಾಪ್ಡ್‌ತೋಪ್ಡ್ ಉತ್ತರ, ಪರಿಹಾರ. ಚೀನಾಕ್ಕೆ ಹೋಗುವ ಮುನ್ನ ಹಾಗೂ ಹೋಗಿ ಬಂದ ನಂತರ ಆ ದೇಶಕ್ಕೆ ಸಂಬಂಧಿಸಿದ ಹಲವಾರು ಪುಸ್ತಕಗಳನ್ನು ಓದಿದಾಗ ಅಲ್ಲಿ ಕಂಡ ನೋಟಗಳಿಗೆ ಸ್ಪಷ್ಟ ಅರ್ಥಗಳು ಗೋಚರಿಸುತ್ತಾ ಹೋದವು.

ಈ ಮಧ್ಯೆ ಆತ್ಮೀಯ ಸ್ನೇಹಿತ ಆದರ್ಶ ಶ್ರೀನಿವಾಸ ಒಂದು ಪುಸ್ತಕ ಕಳಿಸಿದ್ದರು. ಅದು ಪತ್ರಕರ್ತೆ ಪಲ್ಲವಿ ಅಯ್ಯರ್ ಬರೆದ Smoke & Mirrors [^] ಪಲ್ಲವಿ ಸುಮಾರು ಐದು ವರ್ಷಗಳ ಕಾಲ `ದಿ ಹಿಂದು’ ಪತ್ರಿಕೆಗೆ ಚೀನಾ ವಿದ್ಯಮಾನಗಳ ಬಗ್ಗೆ ಬರೆದವರು. ಹೀಗಾಗಿ ಚೀನಾದ ಕುರಿತು ಇಷ್ಟೆಲ್ಲ ವಿಷಯಗಳನ್ನು ಹರಡಿಟ್ಟುಕೊಂಡು ಬರೆಯದೇ ಹೇಗಿರಲಿ?

ಭಾರತ ಮತ್ತು ಚೀನಾ ನೆರೆಹೊರೆಯ ದೇಶಗಳು. ಎರಡೂ ಅಂತಾರಾಷ್ಟ್ರೀಯ ಸ್ತರದಲ್ಲಿ ಪ್ರಬಲ ಶಕ್ತಿಗಳು. ಚೀನಾವಂತೂ ಅಮೆರಿಕ [^]ಕ್ಕೆ ಸಡ್ಡುಹೊಡೆಯಲು ಹೊರಟಂತಿದೆ. ಭಾರತವೂ ಕ್ಷಿಪ್ರಗತಿಯಲ್ಲಿ ಬೆಳೆಯುತ್ತಿರುವ ದೇಶ. ಈ ಎರಡೂ ದೇಶಗಳ ನಡುವೆ 3500 ಕಿ.ಮೀ. ಉದ್ದದ ಗಡಿಯಿದೆ. ಸುಮಾರು ಎರಡು ಸಾವಿರ ವರ್ಷಗಳಿಂದ ಸಂಬಂಧವಿದೆ. ಆದರೂ ನಮಗೆ ಚೀನಾದ ಬಗ್ಗೆ ಗೊತ್ತಿರುವುದು ಅತ್ಯಲ್ಪ. ಅಮೆರಿಕ, ಲಂಡನ್ ಬಗ್ಗೆ ಗಂಟೆಗಟ್ಟಲೆ ಮಾತಾಡುವವರು ಚೀನಾದ ವಿಷಯಕ್ಕೆ ಬಂದರೆ ಸುಮ್ಮನಾಗುತ್ತಾರೆ. ಚೀನಾದ ಬಗ್ಗೆ ನಮಗೆ ಗೊತ್ತಿರುವುದು ಚೈನೀಸ್ ರೆಸ್ಟೋರೆಂಟ್‌ಗಳಲ್ಲಿ ಕೆಲವು ಖಾದ್ಯಗಳನ್ನು ಸೇವಿಸುವುದಕ್ಕೆ ಮಾತ್ರ ಸೀಮಿತ ಅಷ್ಟೆ. ನಾನು ಹೇಳಲಿಕ್ಕೆ ಹೊರಟಿರುವುದು ಈ ವಿಷಯಗಳ ಬಗ್ಗೆ ಅಲ್ಲ. ಭಾರತ-ಚೀನಾದಲ್ಲಿ ಬೇರೆ ಬೇರೆ ರಾಜಕೀಯ, ಆಡಳಿತ ವ್ಯವಸ್ಥೆ ಇದ್ದರೂ ಹೆಚ್ಚೂ-ಕಮ್ಮಿ ಒಂದೇ ರೀತಿಯ ಲಕ್ಷಣ, ಸ್ವರೂಪ, ಸಮಸ್ಯೆಗಳನ್ನು ಹೊಂದಿವೆ. ಚೀನಾ ಜನಸಂಖ್ಯೆಯಲ್ಲಿ ನಮಗಿಂತ ಹದಿನೈದು ಕೋಟಿ ಹೆಚ್ಚಿದೆ. ಭೌಗೋಳಿಕವಾಗಿ ನಮಗಿಂತ ಸುಮಾರು ಎರಡೂವರೆ ಪಟ್ಟು ವಿಶಾಲವಾದ ದೇಶ. ಭಾರತದಂತೆ ಅದೂ ಸಹ ಹಳ್ಳಿಗಳಿಂದ ಕೂಡಿದ, ಕೃಷಿ ಪ್ರಧಾನ ದೇಶ. ಭಾರತವನ್ನು ಕಾಡುವ ಸಮಸ್ಯೆಗಳು ಚೀನಾದ್ದೂ ಆಗಿದ್ದವು. ಆದರೂ ಇವೆಲ್ಲವನ್ನೂ ಮೆಟ್ಟಿನಿಂತು ಚೀನಾ ಕೇವಲ ಕಳೆದ ಒಂದೂವರೆ, ಎರಡು ದಶಕಗಳ ಅವಧಿಯಲ್ಲಿ ವಿಶ್ವದ ದೈತ್ಯಶಕ್ತಿಯಾಗಿ ಹೊರಹೊಮ್ಮಿದ್ದು ಮಾತ್ರ ಅದ್ಭುತ. ಇಂಥ ಮಹಾನ್ ಸಾಧನೆ ಸಾಧ್ಯವಾದದ್ದಾದರೂ ಹೇಗೆ? ಭಾರತಕ್ಕೆ ಸಾಧ್ಯವಾಗದ್ದು ಚೀನಾಕ್ಕೆ ಹೇಗೆ ಸಾಧ್ಯವಾಯಿತು?

ಚೀನಾದಲ್ಲಿ ನಾಲ್ಕು ದಿನಗಳ ಕಾಲ ಇದ್ದ ಸಮಯದಲ್ಲಿ ಈ ಪ್ರಶ್ನೆ ನನ್ನಲ್ಲಿ ಹಲವು ಬಾರಿ ಹರಿದುಹೋಗಿದ್ದುಂಟು. ಕಳೆದ ನಾಲ್ಕೈದು ವರ್ಷಗಳಿಂದ ಬೀಜಿಂಗ್‌ನಲ್ಲಿ `ಟೈಮ್ಸ್ ಆಫ್ ಇಂಡಿಯಾ’ದ ಹಿರಿಯ ವರದಿಗಾರರಾಗಿರುವ ಸೈಬಲ್ ದಾಸ್‌ಗುಪ್ತಾ ಅವರ ಮುಂದೆ ಈ ಪ್ರಶ್ನೆಗಳನ್ನಿಟ್ಟಾಗ ಅವರು ಹೇಳಿದ್ದೊಂದೇ- Attitude of the people [^]. ಯಾವುದೇ ರಾಜಕೀಯ, ಆಡಳಿತ ವ್ಯವಸ್ಥೆಯಿರಲಿ, ಜನರ ಮನೋಭಾವ ಸಕಾರಾತ್ಮಕವಾಗಿ ಇಲ್ಲದಿದ್ದರೆ ಏನೂ ಮಾಡಲು ಆಗುವುದಿಲ್ಲ. ಚೀನಾದ ಜನರಲ್ಲಿ ಇಂಥ ಮನೋಭಾವವನ್ನು ರಾಜಕೀಯ ನಾಯಕರು ಮೂಡಿಸಲು ಪ್ರಯತ್ನಿಸಿರಬಹುದು. ಇಡೀ ದೇಶಕ್ಕೆ ದೇಶ ಎದ್ದೇಳಲು ಸಾಧ್ಯವಾಗಿರುವುದು ಜನರ ಧೀಶಕ್ತಿ, ಛಲ ಹಾಗೂ ಹಠ. ಒಂದು ದೇಶವಾಗಿ ಸಂಘಟಿತವಾಗಲು, ಸದೃಢವಾಗಲು ಚೀನಿಯರು ನಿರ್ಧರಿಸಿದರು. ಅವರೊಂದೇ ಬೆಳೆಯಲಿಲ್ಲ. ದೇಶವನ್ನೂ ಮುನ್ನಡೆಸಿದರು. ಭಾರತದಲ್ಲಿ ಹಾಗಲ್ಲ, ಎಲ್ಲರೂ ತಮ್ಮ ತಮ್ಮ ಏಳಿಗೆ ಬಗ್ಗೆ ಮಾತ್ರ ತಲೆಕೆಡಿಸಿಕೊಂಡಿದ್ದಾರೆ. ಸಮಗ್ರ ದೇಶದ ಕಲ್ಪನೆ ನಮ್ಮಲ್ಲಿ ಮೊಳೆಯುತ್ತಿಲ್ಲ. ಅದಕ್ಕಾಗಿ ನಾವು ಇನ್ನೂ ಗಡಿ, ಭಾಷೆ, ನೀರಿನ ಬಗ್ಗೆ ತಕರಾರು ತೆಗೆದುಕೊಂಡು ಕುಳಿತಿದ್ದೇವೆ. ಅಲ್ಲಿ ರೈತರು ತಮಗೆ ಮನಸ್ಸಿಗೆ ಬಂದ ಬೆಳೆಯನ್ನು ಬೆಳೆಯುವಂತಿಲ್ಲ. ಅವರೇನು ಬೆಳೆಯಬೇಕೆಂಬುದನ್ನು ಸರಕಾರವೇ ಹೇಳುತ್ತದೆ. ಜನರ ಅಗತ್ಯ, ಬೇಡಿಕೆ ಹಾಗೂ ಹಂಚಿಕೆ ಪ್ರಮಾಣವನ್ನು ನಿರ್ಧರಿಸಿ ಇಂಥದೇ ಬೆಳೆ ಬೆಳೆಯುವಂತೆ ಸರಕಾರ ರೈತರಿಗೆ ಸೂಚಿಸುತ್ತದೆ. ಇದರಿಂದ ಎಲ್ಲ ಬೆಳೆಗಳನ್ನೂ ಸರಿಯಾಗಿ ನಿಯಂತ್ರಿಸಬಹುದು ಹಾಗೂ ಪೂರೈಕೆ ಮಾಡಬಹುದು. ಯಾವ ರೈತರಿಗೂ ಹಾನಿಯಿಲ್ಲ. ತಾನು ಬೆಳೆದ ಬೆಳೆಗೆ ಯೋಗ್ಯ ದರ ಹಾಗೂ ಬೇಡಿಕೆ ಸಿಗುತ್ತದೆ. ನಮ್ಮಲ್ಲೇನಾಗುತ್ತಿದೆ ನೋಡಿ, ರೈತರು ಮನಸ್ಸಿಗೆ ಬಂದ ಬೆಳೆ ಬೆಳೆಯುತ್ತಾರೆ. ಈ ವರ್ಷ ಯಾವುದಾದರೂ ಒಂದು ಬೆಳೆಗೆ ಒಳ್ಳೆಯ ದರವಿದ್ದರೆ, ಮುಂದಿನ ವರ್ಷ ಎಲ್ಲರೂ ಅದನ್ನೇ ಬೆಳೆಯುತ್ತಾರೆ. ಹೀಗಾದರೆ ಫಸಲು ಜಾಸ್ತಿಯಾಗಿ ದರ ಕುಸಿದು ರೈತರೂ ಸಂಕಷ್ಟಕ್ಕೀಡಾಗುತ್ತಾರೆ. ಟೊಮೇಟೊ, ವೆನಿಲ್ಲಾ ಬೆಳೆದ ಕೃಷಿಕರ ಕರುಣಾಜನಕ ಕತೆ ನಮ್ಮ ಮುಂದೆಯೇ ಇದೆ. ಇದು ಎಲ್ಲ ರೈತರ ಗೋಳೂ ಹೌದು.

ಜಗತ್ತಿನಲ್ಲಿ ಅಮೆರಿಕಕ್ಕಿಂತ ಹೆಚ್ಚಿನ ಸೈನಿಕರನ್ನು ಹೊಂದಿದ ದೇಶವೆಂದರೆ ಚೀನಾ. ಭಾರತಕ್ಕಿಂತ ಎರಡೂವರೆ ಪಟ್ಟು ಹೆಚ್ಚು ಸೈನಿಕರು ಚೀನಾದಲ್ಲಿದ್ದಾರೆ. ಆದರೆ ಚೀನಾದಲ್ಲಿನ ಯಾವ ಸೈನಿಕನೂ ಖಾಲಿ ಉಳಿದಿಲ್ಲ. ಕೆಲಸವಿಲ್ಲದೇ ಸುಮ್ಮನೆ ಕುಳಿತಿಲ್ಲ. ಅಂದರೆ ಅವರು ಸದಾ ಸಮರ ಸಂಬಂಧಿ ಚಟುವಟಿಕೆಯಲ್ಲಿ ನಿರತರಾಗಿದ್ದಾರೆಂದಲ್ಲ. ಯುದ್ಧವಿಲ್ಲದ ಸಂದರ್ಭದಲ್ಲಿ ಚೀನಾದ ಸೈನಿಕರು ಸುಮ್ಮನೆ ಕುಳಿತುಕೊಳ್ಳುವಂತಿಲ್ಲ. ಕಡ್ಡಾಯವಾಗಿ ಯಾವುದಾದರೂ ಚಟುವಟಿಕೆಯಲ್ಲಿ ಪಾಲ್ಗೊಳ್ಳಲೇಬೇಕು. ಹೊಲದಲ್ಲಿ ರೈತರಾಗಿ, ಕಾರ್ಖಾನೆಯಲ್ಲಿ ಕಾರ್ಮಿಕರಾಗಿ, ಶಾಪಿಂಗ್ ಮಾಲ್‌ನಲ್ಲಿ ಸೆಕ್ಯುರಿಟಿಯವರಾಗಿ, ಸೇಲ್ಸ್‌ಮನ್‌ಗಳಾಗಿ, ಡ್ರೈವರ್‌ಗಳಾಗಿ, ಸಹಾಯಕರಾಗಿ ಕೆಲಸ ಮಾಡಲೇಬೇಕು. ಸುಮ್ಮನೆ ಕುಳಿತು ಭೂಮಿಗೆ ಭಾರವಾಗುವಂತಿಲ್ಲ, ಕುಳಿತು ಉಣ್ಣುವಂತಿಲ್ಲ.

ಕಳೆದ ಒಂದೆರಡು ವರ್ಷಗಳಲ್ಲಿ ಭಾರತದ ಕೆಲವು ಪತ್ರಿಕೆಗಳಲ್ಲಿ `ಚೀನಾವನ್ನು ಭಾರತ ಹಿಂದಕ್ಕೆ ಹಾಕುವುದು ಯಾವಾಗ? ಭಾರತ ಚೀನಾಕ್ಕೆ ಪೈಪೋಟಿ ನೀಡುತ್ತಿದೆಯಾ?’ ಎಂಬ ಧಾಟಿಯ ಲೇಖನಗಳು ಪ್ರಕಟವಾಗುತ್ತಿರುವುದನ್ನು ಗಮನಿಸಿರಬಹುದು. ಆದರೆ ಬೀಜಿಂಗ್, ಶಾಂಘೈನಂತಹ ನಗರ ಬೆಳೆದು ನಿಂತಿರುವುದನ್ನು ನೋಡಿದರೆ, ಚೀನಾ ಭಾರತಕ್ಕಿಂತ ಕನಿಷ್ಠ ಇಪ್ಪತ್ತೈದು ವರ್ಷ ಮುಂದೆ ಸಾಗಿದೆ. ಪ್ರಾಯಶಃ ಇದೇ ಗತಿಯಲ್ಲಿ ಹೊರಟರೆ, ಮುಂದಿನ ಐದು ವರ್ಷಗಳಲ್ಲಿ ಅಮೆರಿಕವನ್ನು ಸಹ ಹಿಂದಕ್ಕೆ ಹಾಕಿದರೂ ಅಚ್ಚರಿಪಡಬೇಕಿಲ್ಲ. ರಸ್ತೆ, ಸೇತುವೆ, ಮೇಲ್ಸೇತುವೆ, ರೈಲು, ವಿಮಾನ ನಿಲ್ದಾಣ, ಹೋಟೆಲ್, ವಾಣಿಜ್ಯ ಕೇಂದ್ರ, ಬಹುಮಹಡಿ ಕಟ್ಟಡ, ಜಿಡಿಪಿ, ದೂರಸಂಪರ್ಕ ವ್ಯವಸ್ಥೆ, ಕೃಷಿ ಚಟುವಟಿಕೆ ಇತ್ಯಾದಿಗಳನ್ನು ಗಮನಿಸಿದರೆ, ಚೀನಾ ಅಮೆರಿಕಕ್ಕೆ ಯಾವುದೇ ರೀತಿಯಲ್ಲೂ ಕಮ್ಮಿಯಿಲ್ಲ ಎನ್ನುವುದಕ್ಕಿಂತ ಒಂದು ಕೈ ಹೆಚ್ಚೇ ಇದೆ. ಮುಂದಿನ ಐವತ್ತು ವರ್ಷಗಳ ಬೆಳವಣಿಗೆಯನ್ನು ದೃಷ್ಟಿಯಲ್ಲಿಟ್ಟುಕೊಂಡು, ಚೀನಾ ಈಗಲೇ ತನ್ನನ್ನು ರೂಪಿಸಿಕೊಂಡಿದೆ.

ಇಂದು `ಚೀನಾದ ಪರಿಣಾಮ’ ಇಡೀ ವಿಶ್ವವನ್ನು ಆವರಿಸಿದೆ. ಅಮೆರಿಕ, ಯುರೋಪ್, ಆಫ್ರಿಕಾ ಹಾಗೂ ಆಸ್ಟ್ರೇಲಿಯಾದ ಯಾವುದೇ ದೇಶಗಳಿಗೆ ಹೋಗಿ Made in China ಸಾಮಾನುಗಳದೇ ಕಾರುಬಾರು. ಭಾರತದ ಎಲ್ಲ ಹಳ್ಳಿ, ಮನೆಗಳನ್ನೂ `ಮೇಡ್ ಇನ್ ಚೀನಾ’ ಸಾಮಾನುಗಳು ಮುಟ್ಟಿವೆ. ಮುಂದಿನ ಹತ್ತು ವರ್ಷಗಳಲ್ಲಿ ಗುಂಡುಸೂಜಿ, ಬಟನ್, ಸಾಕ್ಸ್, ಪೆನ್, ಮಗ್, ರೇಜರ್, ಬ್ಲೇಡ್ ಬಕೆಟ್‌ನಿಂದ ಹಿಡಿದು ನಾವು ಉಪಯೋಗಿಸುವ ಶೇ. 65ರಷ್ಟು ವಸ್ತುಗಳು ಚೀನಾದಲ್ಲಿಯೇ ಉತ್ಪಾದನೆಯಾಗಲಿದೆ. ಇಷ್ಟೇ ಆಗಿದ್ದರೆ ಪರವಾಗಿರಲಿಲ್ಲ, ನಾವು ನಿತ್ಯ ಪೂಜಿಸುವ ದೇವರ ವಿಗ್ರಹ, ದೇವರ ಫೋಟೊ, ಕುಂಕುಮ, ಅರಿಶಿನ, ದೇವರ ಫೋಟೊಫ್ರೇಮ್, ಗಂಧದ ಮಾಲೆ, ಪ್ಲಾಸ್ಟಿಕ್ ಹೂವು, ಗಂಧ ತೇಯುವ ಕಲ್ಲೂ ಸೇರಿದಂತೆ ಪೂಜಾ ಸಾಮಗ್ರಿಗಳು ಭಾರತಕ್ಕೆ ಚೀನಾದಿಂದ ಬಹಳ ದೊಡ್ಡ ಪ್ರಮಾಣದಲ್ಲಿ ಬರುತ್ತಿವೆ. ಮೊದಲು ದೇವರ ಫೋಟೊ, ಕ್ಯಾಲೆಂಡರ್‌ಗಳೆಲ್ಲ ಶಿವಕಾಶಿಯಿಂದ ಬರುತ್ತಿದ್ದವು. ಆದರೆ ಇಂದು ಇವೆಲ್ಲ ಚೀನಾದಿಂದ ಬರುತ್ತಿವೆ. ಕಳೆದ ವರ್ಷ ಚೀನಾದ ಯಿವು ಎಂಬ ನಗರದಲ್ಲಿ ತಯಾರಾದ ಎಂಟು ಕೋಟಿ ವಿವಿಧ ಬಗೆಯ ಗಣೇಶನ ವಿಗ್ರಹಗಳು ಭಾರತಕ್ಕೆ ರಫ್ತಾದವು. ಸುಮಾರು ಎರಡು ಕೋಟಿ ಕೃಷ್ಣ, ಹನುಮಂತ, ತಿರುಪತಿ ವೆಂಕಟೇಶ, ಪದ್ಮನಾಭ, ಶಬರಿಮಲೈ ಅಯ್ಯಪ್ಪ ವಿಗ್ರಹಗಳು ಯಿವು ನಗರದಿಂದ ಬಂದವು. ನಾವು ಪೂಜಿಸುವ ಈ ವಿಗ್ರಹಗಳ ಪೈಕಿ ಶೇ. 55ರಷ್ಟು ಚೀನಾದಲ್ಲಿ ತಯಾರಾದವು!

Advertisements

About sujankumarshetty

kadik helthi akka

Posted on ಏಪ್ರಿಲ್ 24, 2010, in "ಇ-ಲೋಕ" ಲೇಖನಗಳ “ಕನ್ನಡಲೋಕ”, ವಿಶ್ವೇಶ್ವರ ಭಟ್ - ನೂರೆಂಟುಮಾತು, Uncategorized and tagged . Bookmark the permalink. ನಿಮ್ಮ ಟಿಪ್ಪಣಿ ಬರೆಯಿರಿ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: