ಬೆಳೆದ ಮಗಳನ್ನಿಟ್ಟುಕೊಂಡ ಎಲ್ಲ ತಾಯಂದಿರ ಸಮಸ್ಯೆ!

How much freedom is good for an  adolescent girl?
ಕೆಲವು ದಿನಗಳ ಹಿಂದೆ ಕನ್ನಡದ ಯುವ ಕವಯಿತ್ರಿಯೊಬ್ಬಳು ನಮ್ಮ ಪತ್ರಿಕಾಲಯಕ್ಕೆ ಬಂದಿದ್ದಳು. ಸುಮಾರು ಮೂರು ವರ್ಷಗಳ ನಂತರ ಭೇಟಿಯಾಗಿದ್ದಳು. ಎಂದಿನ ಲವಲವಿಕೆ ಇರಲಿಲ್ಲ. ಮುಖದಲ್ಲಿ ನಿಸ್ತೇಜ ಭಾವ, ಚಿಂತೆಯ ಗೆರೆಗಳು. ಆಕೆ ಅಷ್ಟೊಂದು ಸಪ್ಪೆಯಾಗಿದ್ದುದನ್ನು ನೋಡಿದ್ದೇ ಇಲ್ಲ. ಚಟಾಕಿಯ ಮಾತುಗಳಿಗೂ ಚಕಾರವಿಲ್ಲ. ಏನೋ ವಿಚಿತ್ರ ಸಂಕಟ, ನೋವಿನಿಂದ ನರಳುತ್ತಿದ್ದಾಳೆಂದು ಅನಿಸಿತು. ನನ್ನ ತಮಾಷೆಯ ಮಾತುಗಳು ಸರ್ರನೆ ಗಂಟಲ ಹುತ್ತದೊಳಗೆ ಇಳಿದು ಹೋದವು.

ಎರಡು ನಿಮಿಷಗಳ ಮೌನದ ಬಳಿಕ ಆಕೆಯೇ ಹೇಳಿದಳು- `ಮಗಳು ಪಿಯುಸಿ ಮೊದಲ ವರ್ಷದಲ್ಲಿ ಓದುತ್ತಿದ್ದಾಳೆ. ನನಗೆ ಅವಳದೇ ಚಿಂತೆ. ಅವಳಿಗೆ ಈಗ ಹದಿನಾರು. ನೋಡಲು ಇಪ್ಪತ್ತೈದರ ಹುಡುಗಿಯಂತೆ ಕಾಣುತ್ತಾಳೆ. ಸುಂದರಿಯಾದ ಹೆಣ್ಣುಮಕ್ಕಳು ಮನೆಯಲ್ಲಿದ್ದರೆ, ಬಂಗಾರಕ್ಕಿಂತ ಜೋಪಾನವಾಗಿ ಕಾಪಾಡಬೇಕು. ಬಂಗಾರವನ್ನಾದರೆ ಲಾಕರ್‌ನಲ್ಲಿ ಇಡಬಹುದು. ಹೆಣ್ಣುಮಕ್ಕಳನ್ನು ಹಾಗಿಡಲಾಗುತ್ತಾ? ಮನೆಯಲ್ಲೂ ಇರಿಸಿಕೊಳ್ಳಲಾಗುವುದಿಲ್ಲ. ಬೆಳಗಾದರೆ ಸಾಕು ಸ್ನೇಹಿತೆಯರ ಜತೆ ಕಾಲೇಜಿಗೆ ಹೋಗುತ್ತೇನೆ ಅಂತ ಹೊರಟವಳು ರಾತ್ರಿ ಏಳಕ್ಕೇ ಮನೆ ಸೇರೋದು. ಕಾಲೇಜಿಗೇ ಹೋಗ್ತಾರೋ, ಎಲ್ಲಿಗೆ ಹೋಗ್ತಾರೋ ಗೊತ್ತಾಗೊಲ್ಲ. ನನ್ನ ಯಜಮಾನರಿಗೆ ಮಕ್ಕಳಿಗೆ ಟೈಮ್ ಕೊಡಲು ಸಹ ಆಗದಷ್ಟು ಕೆಲಸ. ಇತ್ತೀಚೆಗೆ ಅವಳ ವರ್ತನೆ, ಹಾವಭಾವ ಬದಲಾಗಿಬಿಟ್ಟಿದೆ. ನನಗಂತೂ ತಲೆತುಂಬಾ ಸಹಸ್ರ ಚೇಳುಗಳು ಹರಿದಂತಾಗುತ್ತದೆ. ಎಷ್ಟೋ ದಿನ ಡೈನಿಂಗ್ ಟೇಬಲ್ ಮೇಲೆ ಊಟ ಮಾಡದೇ ಹಾಗೇ ಕುಳಿತುಬಿಡುತ್ತೇನೆ. ಇತ್ತೀಚೆಗೆ ನಿದ್ದೆಯೂ ಬರುತ್ತಿಲ್ಲ. ಜೀವನದಲ್ಲಿ ಆಸಕ್ತಿಯೇ ಇಲ್ಲ. ಇತ್ತಿತ್ತಲಾಗಿ ವಿಚಿತ್ರ ದುಃಸ್ವಪ್ನ. ರಾತ್ರಿ ಕಿಟಾರನೆ ಕಿರುಚುತ್ತೇನಂತೆ. ಯಜಮಾನರು ಗಾಬರಿಬಿದ್ದು ಮನಶ್ಶಾಸ್ತ್ರಜ್ಞರ ಹತ್ತಿರ ಕರೆದುಕೊಂಡು ಹೋದರು. ಅವರು ಪರೀಕ್ಷಿಸಿ, `ಮನೆಯಲ್ಲಿ ಬೆಳೆದ ಮಗಳಿದ್ದಾಳಾ’ ಅಂತ ಕೇಳಿದರು. `ಹೌದು’ ಎಂದು ತಲೆಯಾಡಿಸಿದೆ. `ಪ್ರತಿದಿನ ನಿಮ್ಮಂಥ ಮೂರ್ನಾಲ್ಕು ಹೆಂಗಸರು ಬರುತ್ತಾರೆ. ಎಲ್ಲರದೂ ಒಂದೇ ಸಮಸ್ಯೆ. ಬೆಂಗಳೂರಿನಂಥ ನಗರದಲ್ಲಿ ಮನೆಯಲ್ಲಿ ಮಗಳು ಬೆಳೆದು ದೊಡ್ಡವಳಾದರೆ ತಾಯಿ ಹುಚ್ಚಿ ಥರ ಆಡ್ತಾಳೆ’ ಎಂದರು ಡಾಕ್ಟರು. ಹದಿನೈದು ದಿನ ಕೌನ್ಸೆಲಿಂಗ್ ಮಾಡಿದರು. ಈಗ ಸ್ವಲ್ಪ ಪರವಾಗಿಲ್ಲ. ಆದರೂ ಒಮ್ಮೊಮ್ಮೆ ಮಗಳ ಚಿಂತೆ ತಲೆಯೊಳಗೆ ಇಳಿದರೆ, ಥೇಟು ಹುಚ್ಚಿಯೇ ಆಗಿಬಿಡ್ತೇನೆ. ಏನು ಮಾಡಬೇಕೋ ಗೊತ್ತಾಗುತ್ತಿಲ್ಲ.’

ಐದು ನಿಮಿಷದಲ್ಲಿ ತನ್ನೆಲ್ಲ ಸಂಕಷ್ಟಗಳನ್ನು ಆಕೆ ನನಗೆ ವರ್ಗಾಯಿಸಿಬಿಟ್ಟಿದ್ದಳು. ಅವಳ ಸ್ಥಿತಿ ನೆನೆದು ಕೆಲಕಾಲ ಯೋಚಿಸಿದರೆ ಯಾರಾದರೂ ತುಸು ಕಲ್ಲವಿಲಗೊಳ್ಳುವುದು ಸಹಜ. ಇದು ಅವಳದ್ದೊಂದೇ ಸಂಕಟ, ಸಮಸ್ಯೆ ಅಲ್ಲ. ಮನೆಯಲ್ಲಿ ಬೆಳೆದ ಹೆಣ್ಣುಮಕ್ಕಳನ್ನು ಇಟ್ಟುಕೊಂಡ ಎಲ್ಲ ಅಪ್ಪ-ಅಮ್ಮಂದಿರ ಸಮಸ್ಯೆಯೂ ಹೌದು. ಕೆಲವರು ಇದನ್ನು ಹೇಳಿಕೊಳ್ಳಬಹುದು, ಇನ್ನು ಕೆಲವರು ಹೇಳಿಕೊಳ್ಳಲಿಕ್ಕಿಲ್ಲ. ಹೇಳಿಕೊಳ್ಳದವರಿಗೆ ಸಮಸ್ಯೆಯೇ ಇಲ್ಲ ಅಂತ ಅರ್ಥ ಅಲ್ಲ. ಒಂದೋ ಅವರು ಮಾನಸಿಕವಾಗಿ ತಮ್ಮನ್ನು ಸಂತೈಸಿಕೊಂಡಿರುತ್ತಾರೆ, ಇಲ್ಲವೇ ಹೇಳಿಕೊಳ್ಳಲೂ ಆಗದೇ ತೊಳಲಾಡುತ್ತಿರುತ್ತಾರೆ. ಆದರೆ `ಬೆಳೆದ ಹೆಣ್ಣುಮಗಳು’ ಒಂದಿಲ್ಲೊಂದು ರೀತಿಯಲ್ಲಿ ಅಪ್ಪ-ಅಮ್ಮಂದಿರನ್ನು ಚಿಂತೆಯ ತುದಿಗಾಲ ಮೇಲೆ ನಿಲ್ಲಿಸಿರುತ್ತಾಳೆ. ಪ್ರೀತಿಯಿಂದ ಹೊತ್ತು ಹೆತ್ತು ಬೆಳೆಸಿದ ಮಗಳು ಬೆಳೆದು ದೊಡ್ಡವಳಾಗುತ್ತಿದ್ದಂತೆ, ಸಮಸ್ಯೆಯ ಪ್ರತಿರೂಪವಾಗಿ ಕಂಗೊಳಿಸುತ್ತಾಳೆ. ಕ್ರಮೇಣ ಅವಳೇ ಶತ್ರುವಿನ ಥರಾ ಗೋಚರಿಸುತ್ತಾಳೆ. ಹೇಗಾದರೂ ಮಾಡಿ ಇವಳನ್ನು ಯಾವನಿಗಾದರೂ ಕಟ್ಟಿದರೆ ಸಾಕಪ್ಪಾ ಅಲ್ಲಿಗೆ ಜವಾಬ್ದಾರಿ ಮುಗೀತು ಎಂಬ ಲೆಕ್ಕಾಚಾರದಲ್ಲಿ ಮುಳುಗಿರುತ್ತಾಳೆ.

ಎಲ್ಲ ಬೆಳೆದ ಹೆಣ್ಣುಮಕ್ಕಳು ಹೀಗೇ ಅಂತಲ್ಲ, ಎಲ್ಲ ಅಪ್ಪ-ಅಮ್ಮಂದಿರೂ ಸಹ ಹೀಗೇ ಅಂತಲ್ಲ. ಆದರೆ ಇದು ಬಹುತೇಕ ಘರ್ ಘರ್ ಕಿ ಕಹಾನಿಯೇ. ತಾನು ಮಗಳ ವಯಸ್ಸಿನವಳಿದ್ದಾಗ ಹೀಗಿದ್ದೆ, ಹೀಗೇ ವರ್ತಿಸುತ್ತಿದ್ದೆ, ತನ್ನ ಮನಸ್ಸಿನಲ್ಲಿ ಹರಿದಾಡುತ್ತಿದ್ದ ಕಾಮನೆಗಳು ಹೇಗಿದ್ದವು ಎಂಬುದನ್ನು ಯಾವ ತಾಯಿಯೂ ಈಗ ಯೋಚಿಸುವುದಿಲ್ಲ. ಮಗಳ ಬೇಕು-ಬೇಡ-ಬೇಡಿಕೆಗಳ ಬಗ್ಗೆ ಸ್ವಲ್ಪವೂ ಯೋಚಿಸುವುದಿಲ್ಲ. ಮಗಳು ದೊಡ್ಡವಳಾಗುತ್ತಿದ್ದಂತೆ ಅವಳನ್ನು ನೋಡುವ, ನಡೆಸಿಕೊಳ್ಳುವ ರೀತಿ-ನೀತಿಗಳೇ ತಕ್ಷಣ ಬದಲಾಗಿಬಿಡುತ್ತದೆ. ಸಮಸ್ಯೆ ಆರಂಭವಾಗುವುದೇ ಇಲ್ಲಿ, ಈಗ. ಇಂಥ ಮನಸ್ಥಿತಿಯಲ್ಲಿ ಮಗಳು ಏನೇ ಮಾಡಲಿ, ಮಟ್ಟಲಿ, ತಾಯಿಯ ತಕರಾರು. ಮುಟ್ಟಿದ್ದೆಲ್ಲವೂ ಸೊಟ್ಟಗೇ ಕಾಣುತ್ತದೆ. ಮಗಳೂ ಹಾಗೇ. ತಾಯಿಯ ಚಡಪಡಿಕೆ, ಆತಂಕ, ತಲ್ಲಣಗಳನ್ನು ಅರ್ಥವೇ ಮಾಡಿಕೊಳ್ಳುವುದಿಲ್ಲ. ತಾಯಿ ಬೇಕೆಂದೇ ತನ್ನನ್ನು ಸಂಶಯದಿಂದ ನೋಡುತ್ತಾಳೆ. ತನ್ನ ಮೇಲೆ ಗೂಬೆಕೂರಿಸುತ್ತಾಳೆ, ತನ್ನನ್ನು ನಂಬುವುದಿಲ್ಲ ಎಂಬ ತೀರ್ಮಾನಕ್ಕೆ ಬಂದಿರುತ್ತಾಳೆ. ಪರಿಣಾಮ ಇಬ್ಬರ ನಡುವೆ ಮುಸುಕಿನ ಗುದ್ದಾಟ, ಶೀತಲಸಮರ ಸದಾ ಜಾರಿಯಲ್ಲಿರುತ್ತದೆ. ಮನೆಯಲ್ಲಿ ಯಾವತ್ತೂ ಕುದಿಮೌನ!

ತನ್ನ ಉಸಿರಾಗಿದ್ದ, ರಕ್ತವೇ ಆಗಿದ್ದ, ಜೀವದ ಭಾಗವೇ ಆಗಿದ್ದ ಮಗಳು, ನೋಡನೋಡುತ್ತಿದ್ದಂತೆ ಪರಮವೈರಿಯಂತೆ, ಜನ್ಮದ ದ್ವೇಷಿಯಂತಾಗಿಬಿಡುತ್ತಾಳೆ. ಹೀಗಾದಾಗ ಆ ಮನೆಯಲ್ಲಿ ಶಾಂತಿ, ಸಮಾಧಾನ ಗಾಳುಮೇಳು. ಈ ಘಟನಾವಳಿಗಳಿಂದ ಮನೆಯಲ್ಲಿ ಗಂಡ-ಹೆಂಡತಿ, ಅಕ್ಕ-ತಮ್ಮ, ಅಣ್ಣ-ತಂಗಿ ಹೀಗೆ ಎಲ್ಲರ ಸಂಬಂಧಗಳಲ್ಲೂ ಬಿರುಕು. ಎಲ್ಲರ ಮುಖವೂ ಹ್ಯಾಪು. ಮನೆಯಲ್ಲಿ ಅಘೋಷಿತ ಕರ್ಫ್ಯೂ!

ಇಷ್ಟಕ್ಕೆಲ್ಲ ಕಾರಣಗಳೇನು? ಅದೊಂದೇ ಸಮಸ್ಯೆ. ಕಣ್ಣೆದುರಿಗೆ ನಿಂತ ಬೆಳೆದ ಮಗಳು! ಹಾಗೆ ನೋಡಿದರೆ ಮಗಳು ಮೈನೆರೆದು ದೊಡ್ಡವಳಾಗುತ್ತಿದ್ದಂತೆ ಬದಲಾಗುವವಳು ತಾಯಿ. ಮಗಳ ಎಲ್ಲ ಚಲನವಲನಗಳ ಮೇಲೂ ಕಣ್ಗಾವಲು. ಕಾಲೇಜಿಗೆ ಹೋಗುವಾಗ ಎಲ್ಲರೂ ತನ್ನ ಮಗಳನ್ನೇ ನೋಡುತ್ತಿರಬಹುದಾ? ನೋಡುವ ಎಲ್ಲ ಕಣ್ಣುಗಳೂ ಕೆಟ್ಟದ್ದೇ ಇರಬಹುದಲ್ವಾ? ಕಾಲೇಜಿಗೆ ಕಲಿಯಲು ಹೋಗುವ ಹುಡುಗಿ ಇಷ್ಟೊಂದು ಶೃಂಗಾರ ಮಾಡಿಕೊಳ್ಳುವ ಅಗತ್ಯವಿತ್ತಾ? ಓದುವ ಮಕ್ಕಳು ಮರ್‍ಯಾದೆಯಿಂದ ಡ್ರೆಸ್ ಹಾಕಿಕೊಳ್ಳುವ ಪರಿಯಾ ಇದು? ಹೀಗೆ ತಾಯಿಯ ವಟವಟ ಆರಂಭವಾಗುತ್ತದೆ. ಕೆಲವು ದಿನಗಳ ಸ್ವಗತ ಕ್ರಮೇಣ ಮಗಳಿಗೆ ಕೇಳಿಸಲಾರಂಭಿಸುತ್ತದೆ. ಆಗ ಮಗಳಿಂದ ಮೊದಲ ಪ್ರತಿಭಟನೆ!

ಇಂಥ ಯಾವ ಜಟಾಪಟಿಯೂ ಅಲ್ಲಿಗೆ ಮುಗಿಯುವುದಿಲ್ಲ. ಅದು (ಘೋರ) ಕದನದ ಆರಂಭ. ಮನೆಗೆ ಹೊತ್ತಲ್ಲದ ಹೊತ್ತಲ್ಲಿ ಫೋನ್ ಬರಲಾರಂಭಿಸುತ್ತದೆ. ಮೊದಲಾಗಿದ್ದರೆ ಲ್ಯಾಂಡ್‌ಲೈನ್ ಇತ್ತು. ಟೆಲಿಫೋನ್ ಕರೆಗಳ ಮೇಲೆ ನಿಗಾ ಇಡಬಹುದಿತ್ತು. ಮಗಳಿಗೆ ಬರುವ ಕರೆಗಳನ್ನು ತಾಯಿಯೋ, ತಂದೆಯೋ ಎತ್ತಿಕೊಳ್ಳಬಹುದಿತ್ತು. ಅತ್ತ ಕಡೆಯಿಂದ ಲೈನ್ ಡಿಸ್‌ಕನೆಕ್ಟ್ ಆದರೆ, ಇದು ಪದೇ ಪದೆ ಆಗಲಾರಂಭಿಸಿದರೆ, ಅನುಮಾನವೇ ಬೇಡ ಅದು ನಿಷೇಧಿತ ಕರೆಯೇ. ಅದು ಮಗಳಿಗೆ ಬಂದ ಕರೆಯೇ. ತಂದೆ-ತಾಯಿಗಳ ಮಟ್ಟಿಗೆ ಕರಕರೆಯೇ. ಮಗಳು ರಿಸೀವರ್ ಅನ್ನು ಎತ್ತಿಕೊಂಡರೆ ಮಾತ್ರ ಅತ್ತ ಕಡೆಯ ಧ್ವನಿ ಮಾತಾಡುತ್ತದೆ. ಮಗಳು ಫೋನ್‌ಗೆ ಬಂದಳು ಅಂತಿಟ್ಟುಕೊಳ್ಳಿ, ಅಡುಗೆ ಮನೆಯಲ್ಲಿದ್ದರೂ ತಾಯಿಯ ಮೈಗೆ ಸಾವಿರ ಕಿವಿಗಳು! ಮುಂದೆ ಶುರು `ಸಿಬಿಐ’ ವಿಚಾರಣೆ.

ಈಗಂತೂ ಮಗಳ ಕೈಗೆ ಮೊಬೈಲು ಬಂದುಬಿಟ್ಟಿದೆ. ಅವಳು ಯಾರಿಗೆ ಫೋನ್ ಮಾಡುತ್ತಾಳೆ, ಯಾರಿಂದ ಫೋನ್ ಬರುತ್ತದೆ ಒಂದೂ ಗೊತ್ತಾಗುವುದಿಲ್ಲ. ರಾತ್ರಿಯೆಲ್ಲ ಮಗಳ ಮೊಬೈಲು ಕಿವಿಗೇ ಅಂಟಿಕೊಂಡಿರುತ್ತದೆ. ಬೆರಳುಗಳಿಗಂತೂ ವಿಶ್ರಾಂತಿಯೇ ಇಲ್ಲ. ಮೆಸೇಜುಗಳ ಮುಸಲಧಾರೆ. ಅತ್ತಲಿಂದ ಒಂದು ಮೆಸೇಜು `ಖಣ್’ ಅಂದರೂ ಸಾಕು, ತಾಯಿಯ ಕಿವಿಯಲ್ಲಿ ಕಾದ ಸೀಸದ ಒಂದು ಹನಿ ಹುಯ್ದಂತಾಗುತ್ತದೆ. ಆ ಕರೆ ಅಥವಾ ಮೆಸೇಜು ಗೆಳತಿಯದೇ ಇರಬಹುದು, ಆದರೆ ಅದನ್ನು ನಂಬಲು ತಂದೆ-ತಾಯಿ ಕಿವಿ ಮೇಲೆ ಹೂವನ್ನಿಟ್ಟುಕೊಂಡಿಲ್ಲ. ರಾತ್ರಿ ಮಗಳು ರೂಮು ಸೇರಿಕೊಂಡರೂ, ಬಾಗಿಲಿಗೊಂದು ಕಿವಿ ಅಂಟಿಸಿಕೊಂಡು ಒಳಗಿನ ಪಿಸುಮಾತು ಕೇಳದಿದ್ದರೆ ನಿದ್ದೆ ಬರದು. ಆ ಸರಹೊತ್ತಿನಲ್ಲಿ ಫೋನೋ, ಮೆಸೇಜೋ ಬಂದರೆ ತಾಯಿಗೆ ಪುನಃ ಚೇಳು ಹರಿದಾಡಿದ ಅನುಭವ. ಪುನಃ `ಸಿಬಿಐ’ ವಿಚಾರಣೆ.

ಮೊದಲಾಗಿದ್ದರೆ ಮಗಳ ಮೇಲೆ ನಿಗಾ ಇಡುವುದು ಸುಲಭವಾಗಿತ್ತು. ಕಾಲೇಜಿಗೆ ಹೋಗುವ ಮಗಳು ಪ್ರೇಮಪಾಶಕ್ಕೆ ಬಿದ್ದರೆ ಪತ್ತೆಹಚ್ಚುವುದು ಕಷ್ಟವೇನೂ ಆಗುತ್ತಿರಲಿಲ್ಲ. ಎಲ್ಲ ಲವ್ವೂ ಲವ್ ಲೆಟರ್‌ನಲ್ಲಿಯೇ ಆರಂಭವಾಗುತ್ತಿದ್ದುದರಿಂದ, ಮಗಳು ಕಾಲೇಜಿಗೆ ಹೋದಾಗಲೇ ಪೋಸ್ಟ್‌ಮನ್ ಮನೆಗೆ ತಲುಪಿಸಿಹೋಗುತ್ತಿದ್ದ. ಅಕ್ಷರಗಳ ವಾಸನೆಯಿಂದಲೇ ತಾಯಿಗೆ ಗೊತ್ತಾಗಿಬಿಡುತ್ತಿತ್ತು. ಎಷ್ಟೇ ಕಸರತ್ತು ಮಾಡಿದರೂ ತಂದೆ-ತಾಯಿಗೆ ಸಿಕ್ಕಿಬೀಳದೇ ಲವ್ ಮಾಡುವುದು ಸಾಧ್ಯವೇ ಇರಲಿಲ್ಲ. ಆದರೆ ಈಗ ಹಾಗಲ್ಲ. ಮಗಳು ಕೈಗೇ ಸಿಗೊಲ್ಲ. ಅವಳ ಹೆಜ್ಜೆ, ಮೀನಿನಂತೆ ನಿಗೂಢ. ಲವ್ ಲೆಟರ್ ಬರೆದು ಸಿಕ್ಕಿಹಾಕಿಕೊಳ್ಳುವಷ್ಟು ದಡ್ಡಿ ಅಲ್ಲ ಅವಳು. ಅವಳು ಯಾವ `ಕ್ರೈಮ್’ ಎಸಗಿದರೂ ಸಾಕ್ಷ್ಯ ಪುರಾವೆಗಳನ್ನು ಬಿಡುವುದಿಲ್ಲ. ತಂದೆ- ತಾಯಿಗಳ ಚಿಂತೆ, ಟೆನ್ಶನ್ ಜಾಸ್ತಿಯಾಗುವುದಕ್ಕೆ ಇದೇ ಕಾರಣ.

ಇಲ್ಲಿ ಕವಯಿತ್ರಿ ಹೇಳಿದ ಮಾತು ನೆನಪಾಗುತ್ತಿದೆ- `ಮೊಬೈಲು ಕಂಪನಿಗಳು ಪ್ರತಿನಿತ್ಯ ನೂರು ಮೆಸೇಜ್‌ಗಳನ್ನು ಉಚಿತ ಮಾಡಿಬಿಟ್ಟಿವೆ. ನನ್ನ ಮಗಳ ಬೆರಳುಗಳಿಗೆ ಪುರಸತ್ತೇ ಇಲ್ಲ. ಒಂದಾದ ಮೇಲೊಂದರಂತೆ ಮೆಸೇಜ್ ಕಳಿಸುತ್ತಲೇ ಇರುತ್ತಾಳೆ. ಪ್ರಶ್ನಿಸಿದರೆ ಉರಿದುಬೀಳುತ್ತಾಳೆ. ಮತ್ತಷ್ಟು ಪ್ರಶ್ನೆ ಹಾಕಿದರೆ `ಹೌದು, ನಾನು ನನ್ನ ಬಾಯ್‌ಫ್ರೆಂಡ್ ಜತೆಗೆ ಚಾಟ್ ಮಾಡ್ತೀನಿ, ಏನಾಯ್ತು?’ ಎಂದು ಜಗಳಕ್ಕೆ ಬರುತ್ತಾಳೆ. ರಾತ್ರಿಯೆಲ್ಲ ಮೆಸೇಜುಗಳ ಖಣಖಣ. ಆಕೆಗೆ ಮೊಬೈಲ್ ಜತೆ ಇದ್ರೆ ಊಟ, ತಿಂಡಿ ಏನೂ ಬೇಡ. ನಾನು ಹುಚ್ಚಿ ಆಗೋದೊಂದು ಬಾಕಿ.’

ಇದೊಂದೇ ಆಗಿದ್ದಿದ್ದರೆ ಪರವಾಗಿರಲಿಲ್ಲ. ಮನೆಯಲ್ಲಿ ಬೆಳೆದ ಹೆಣ್ಣುಮಗಳಿದ್ದರೆ ಎಲ್ಲ ಕಾಕದೃಷ್ಟಿಯಿಂದ ಅವಳನ್ನು ಜೋಪಾನವಾಗಿ ಟ್ಟುಕೊಳ್ಳುವುದೇ ತಾಯಿಗೆ ನಿತ್ಯ ಹೋರಾಟ. ಮಗಳು ಕಣ್ಣ ಮುಂದಿದ್ದರೆ ಹೇಗೋ ನಿಗಾ ಇಡಬಹುದು. ಅದೇ ಅವಳನ್ನು ಓದಿಗಾಗಿ ಬೇರೆ ಊರಿಗೆ, ಹಾಸ್ಟೆಲ್‌ಗೆ ಕಳಿಸಬೇಕಾಗಿ ಬಂದರೆ ತಾಪತ್ರಯ ಒಂದೆರಡಲ್ಲ. ತಾಯಿ ಮನಸ್ಸಿನ ಚಡಪಡಿಕೆ ಅಷ್ಟಕ್ಕೇ ಸುಮ್ಮನಾಗುವುದಿಲ್ಲ. ಮಗಳು ತನ್ನ ಪಾಡಿಗೆ ಟಿವಿ ನೋಡಿದರೂ ಒಂದು ರೀತಿಯ ತಪನೆ. ಇನ್ನು ಕಂಪ್ಯೂಟರ್ ಮುಂದೆ ಕುಳಿತರಂತೂ ಇನ್ನೂ ಭಯ. ಈಗಿನ ಕಾಲದ ಹುಡುಗಿಯರನ್ನು ಪಟಾಯಿಸಲು ಕಂಪ್ಯೂಟರ್‌ನಂಥ ಸುಲಭ ಸಂಗಾತಿ ಮತ್ತೊಂದಿಲ್ಲ. ಹುಡುಗಿ ತನ್ನ ಬಾಯ್‌ಫ್ರೆಂಡ್ ಜತೆಗೆ ನಿತ್ಯ ಸಂಪರ್ಕದಲ್ಲಿ ಇರಬಹುದು, ಆತನ ಜತೆ ಸದಾ connect ಆಗಿರಬಹುದು, ತಂದೆ-ತಾಯಿಗೆ ಸ್ವಲ್ಪವೂ ಗುಟ್ಟು ಬಿಟ್ಟುಕೊಡದೇ ಬಾಯ್‌ಫ್ರೆಂಡ್ ಜತೆ ನೆಟ್‌ನಲ್ಲಿ ವಿಹರಿಸಬಹುದು.

ಫೇಸ್‌ಬುಕ್ ಹಾಗೂ ಆರ್ಕುಟ್‌ನಂಥ ಸೋಷಿಯಲ್ ನೆಟ್ ವರ್ಕ್‌ನಲ್ಲಿ ಹುಡುಗಿಯರನ್ನು ಪರಿಚಯಿಸಿಕೊಳ್ಳುವುದು, ಪರಿಚಯವನ್ನು ಸ್ನೇಹಕ್ಕೆ ಪರಿವರ್ತಿಸುವುದು, ಅಷ್ಟಕ್ಕೇ ಬಾಯ್ ಫ್ರೆಂಡ್, ಗರ್ಲ್‌ಫ್ರೆಂಡ್ ಆಗುವುದು ಬಹಳ ಸುಲಭ. ನೆಟ್‌ನಲ್ಲಿಯೇ ವ್ಯಕ್ತಿ ವಿವರ, ಹವ್ಯಾಸ, ಫೋಟೊಗಳನ್ನು ವಿನಿಮಯ ಮಾಡಿಕೊಳ್ಳುವುದೂ ಸಲೀಸು. ಇಷ್ಟಾದ ನಂತರ ವಿಡಿಯೋ ಚಾಟಿಂಗ್ ಮಾಡದೇ ಇರಲಾಗುತ್ತದೆಯೇ? ಇವಿಷ್ಟನ್ನು ಎರಡು ದಿನಗಳೊಳಗೆ ಮಾಡಬಹುದು. ಇಷ್ಟೇ ಪರಿಚಯ, ಮುನ್ನುಡಿಯೊಂದಿಗೆ ಮನೆಯಿಂದ ಹೋದ, ಓಡಿಹೋದ ಹುಡುಗಿಯರೆಷ್ಟೋ? ನಗರಗಳಲ್ಲಿ ಬ್ಲೌಸಿಂಗ್ ಸೆಂಟರ್‌ಗಿಂತ ಹೆಚ್ಚಾಗಿ ಬ್ರೌಸಿಂಗ್ ಸೆಂಟರ್‌ನಲ್ಲಿ ಕಾಲೇಜಿಗೆ ಹೋಗುವ ಹುಡುಗ-ಹುಡುಗಿಯರು ಕಿಕ್ಕಿರಿದು ನೆರೆದಿರುವುದು ಇದೇ ಕಾರಣಕ್ಕೆ.

ಮೊದಲಾಗಿದ್ದರೆ ಬೆಳೆದ ಮಗಳು ಸಿನಿಮಾಕ್ಕೆ ಹೋದರೆ ಕಾಲ ಕೆಟ್ಟುಹೋಯ್ತು ಎಂದು ತಾಯಿ ಬೊಬ್ಬೆ ಹಾಕುತ್ತಿದ್ದಳು. ಕನ್ನಡಿ ಮುಂದೆ ಹತ್ತು ನಿಮಿಷ ಜಾಸ್ತಿ ತಲೆ ಬಾಚಿಕೊಂಡರೆ ಗದರುತ್ತಿದ್ದಳು. ಸಾಯಂಕಾಲ ಏಳರ ನಂತರ ಕನ್ನಡಿ ಮುಂದೆ ನಿಂತುಕೊಳ್ಳುವುದೇ ನಿಷಿದ್ಧ ಎಂಬ ಕಾಲವಿತ್ತು. ಆದರೆ ಕಾಲ ಬದಲಾಗಿದೆ. ಅದಕ್ಕೆ ತಕ್ಕಂತೆ ಹೆತ್ತ ಕರುಳು ಸಹ ತನಗೆ ಅನೇಕ ಕಾರಣಗಳನ್ನು ಕೊಟ್ಟು ಸಮಾಧಾನ ಮಾಡಿಕೊಂಡಿದೆ. ಆದರೆ ತನ್ನ ಮಗಳಿಗೆ ಏನಾದರೂ ಹೆಚ್ಚು-ಕಮ್ಮಿ ಆದರೆ ಗತಿಯೇನು ಎಂಬ ಪ್ರಶ್ನೆ ಆಕೆಯನ್ನು ಸದಾ ಕಿತ್ತು ತಿನ್ನುತ್ತಲೇ ಇರುತ್ತದೆ.

ಈ ಮಧ್ಯೆ ಸುಪ್ರೀಂಕೋರ್ಟ್‌ನ ತೀರ್ಪು ಬೇರೆ. ವಿವಾಹಪೂರ್ವ ಸೆಕ್ಸ್ ತಪ್ಪಲ್ಲ ಎಂದು ದೇಶದ ಸರ್ವೋಚ್ಚ ನ್ಯಾಯಾಲಯವೇ ತೀರ್ಪು ಕೊಟ್ಟರೆ ಹೆಣ್ಣುಮಕ್ಕಳಿರುವ ಮನೆಯಲ್ಲಿ ಎಂಥ ತಳಮಳ ಹೆಡೆಯೆತ್ತಬಹುದು ಎಂಬುದನ್ನು ಯೋಚಿಸಲೂ ಆಗುವುದಿಲ್ಲ. ದಿಲ್ಲಿ, ಕೋಲ್ಕತಾ, ಮುಂಬಯಿಯಂಥ ನಗರಗಳಲ್ಲಿ ಕಾಲೇಜು ಹುಡುಗಿಯರು ಹಣಕ್ಕಾಗಿ ಅಂಡಾಣುಗಳನ್ನು ಮಾರುವ ದಂಧೆಗೆ ಇಳಿದಿದ್ದಾರೆ. ಇವನ್ನೆಲ್ಲ ನೋಡಿ ಹೆತ್ತ ಕರುಳು ಚುರ್ರೆಂದು ಸುಡದಿರುತ್ತದೆಯೇ? ಹದಿಹರೆಯದ ಹುಡುಗಿಯರು ಇದನ್ನು ಅರ್ಥ ಮಾಡಿಕೊಂಡರೆ ಸಾಕು.

Advertisements

About sujankumarshetty

kadik helthi akka

Posted on ಏಪ್ರಿಲ್ 24, 2010, in "ಇ-ಲೋಕ" ಲೇಖನಗಳ “ಕನ್ನಡಲೋಕ”, ವಿಶ್ವೇಶ್ವರ ಭಟ್ - ನೂರೆಂಟುಮಾತು, Uncategorized and tagged . Bookmark the permalink. ನಿಮ್ಮ ಟಿಪ್ಪಣಿ ಬರೆಯಿರಿ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: