ಸೈಟು ಮನೆ ಕಾರಿನಾಚೆ ಸಿಗುವ ನೆಮ್ಮದಿ! Life beyond city life | Bird watching | Hornbill | Animal world | Wildlife | Karnataka forest

ಅವರೆಲ್ಲ ನಲ್ಮೆಯಿಂದ ಬರೆದಿದ್ದರು. `ನಾನು ನಿಮ್ಮ ಎಲ್ಲ ಅಂಕಣ ಬರಹ [^]ಗಳನ್ನು ತಪ್ಪದೇ ಓದುತ್ತೇನೆ. ಆದರೆ ನನಗೆ ಬಹಳ ಇಷ್ಟವಾದದ್ದು ನೀವು ಇತ್ತೀಚೆಗೆ ಬರೆದ ಹಾರ್ನ್‌ಬಿಲ್(ಮಂಗಟ್ಟಿ)ಗಳ ಕುರಿತ ಲೇಖನ. ಲೇಖನದಂತೆ ಅದಕ್ಕೆ ಆಯ್ಕೆ ಮಾಡಿಕೊಂಡ ವಿಷಯ ನನಗೆ ಅನನ್ಯ, ಅಪರೂಪವೆನಿಸಿತು. ಸಾಮಾನ್ಯವಾಗಿ ಪತ್ರಿಕಾ ಸಂಪಾದಕರು ಪ್ರಾಣಿ, ಪಕ್ಷಿಗಳ ಕುರಿತು ಬರೆಯುವುದಿಲ್ಲ. ಯಾಕೆಂದರೆ ಅಧಿಕಾರದಲ್ಲಿರುವ ರಾಜಕಾರಣಿಗಳು, ಮಂತ್ರಿಗಳು, ಮುಖ್ಯಮಂತ್ರಿಗಳೇ ಪತ್ರಿಕಾ ಸಂಪಾದಕರುಗಳಿಗೆ ಪ್ರಾಣಿ, ಪಕ್ಷಿಗಳಾಗಿರುತ್ತಾರೆ. ಅದರಾಚೆಗೂ ಅದ್ಭುತ ಜಗತ್ತಿದೆ ಎಂಬುದು ನಿಮಗೆ ಗೊತ್ತಾಗುತ್ತಿರುವುದಿಲ್ಲ’ ಎಂದು ಬರೆದಿದ್ದರು.

ಚಿಕ್ಕಮಗಳೂರಿನಿಂದ ವನ್ಯಜೀವಿ ಸಂರಕ್ಷಕ ಕೃಷಿಕ ಜಯಂತ ಸಹ ಇದೇ ಧಾಟಿಯಲ್ಲಿ ಬರೆದಿದ್ದರು-`ಪತ್ರಕರ್ತರಿಗೆ ಬರೀ ರಾಜಕಾರಣಿಗಳೇ ಮೈಮನಗಳಲ್ಲಿ ತುಂಬಿರುತ್ತಾರೆ. ಯಡಿಯೂರಪ್ಪ, ಈಶ್ವರಪ್ಪ, ಸಿದ್ದರಾಮಯ್ಯ, ದೇವೇಗೌಡ ಅವರಾಚೆಗೂ ಬದುಕು ಇದೆ ಎಂಬುದು ನಿಮಗೆ ಅರ್ಥವಾಗುವುದಿಲ್ಲ. ಇವರ ಬಗ್ಗೆ ಬರೆದರೆ ಜನರೆಲ್ಲ ಓದುತ್ತಾರೆಂದು ನೀವು ಭಾವಿಸಿದ್ದರೆ, ಇಂದೇ ನಿಮ್ಮ ನಿಲುವನ್ನು ಬದಲಿಸಿಕೊಳ್ಳಿ. ಬಹುಪಾಲು ಓದುಗರಿಗೆ ರಾಜಕೀಯ ಅಂದ್ರೆ ವಾಕರಿಕೆ. ಇವೆಲ್ಲವುಗಳ ಮಧ್ಯೆ ನೀವು ಹಾರ್ನ್‌ಬಿಲ್‌ಗಳ ಕುರಿತು ಬರೆದಿದ್ದು welcome change. ಅದರ ಜತೆ ಹಾರ್ನ್‌ಬಿಲ್ ಬಗ್ಗೆ ನೀವು ಮುಖ್ಯಮಂತ್ರಿಯವರ ಗಮನ ಸೆಳೆಯುವ ಕೆಲಸ ಮಾಡಿದ್ದು ಶ್ಲಾಘನೀಯ. ಪ್ರಾಣಿ, ಪಕ್ಷಿ, ಜೀವಜಂತು, ಕಾಡು, ಪರಿಸರಗಳು ನಿಮ್ಮ ಪತ್ರಿಕೆಯ ಮುಖಪುಟ ಆವರಿಸುವ ದಿನಗಳು ಬರಲಿ ಎಂದು ಆಶಿಸುವೆ.

`ಎಷ್ಟು ದಿನ ಅಂತ ಆ ರೆಡ್ಡಿಗಳ ಬಗ್ಗೆ ಬರೀತೀರೋ, ಏನು ಚೆಂದ ಅಂತ ಬರೀತೀರೋ, ಯಾರಿಗೆ ಇಷ್ಟ ಅಂತ ಬರೀತೀರೋ ನಾಕಾಣೆ. ನಿಮ್ಮ ಪಾಲಿಗೆ ರಾಜಕೀಯ, ಕ್ರಿಕೆಟ್, ಸಿನಿಮಾ, ಸೆನ್ಸೆಕ್ಸ್, ಕ್ರೈಮ್ ಆಚೆ ಸುಂದರವಾದ, ರೋಚಕವಾದ ಪ್ರಪಂಚವಿದೆಯೆಂಬುದು ನಿಮಗೇಕೆ ಗೊತ್ತಾಗುವುದಿಲ್ಲ? ನಮ್ಮ ಪ್ರಾಣಿ, ಪಕ್ಷಿ ಸಂಕುಲ, ಮರಗಳ ಬಗ್ಗೆ ಕನಿಷ್ಠ ವಾರಕ್ಕೊಂದು ಪುಟ ಮೀಸಲಿಡಿ ಸಾಕು. ಜನ ಓದುತ್ತಾರೆ. ದಿನಾದಿನ ಆ ರಾಜಕಾರಣಿಗಳ ಬಗ್ಗೆ ಬರೆದು ಹಾಳುಮಾಡುತ್ತೀರಲ್ಲ, ನಮ್ಮ ಮೇಲೂ ಅದನ್ನೇ ವಾಂತಿ ಮಾಡುತ್ತೀರಲ್ಲ? ಈ ಮಧ್ಯೆ ಹಾರ್ನ್‌ಬಿಲ್ ಬಗ್ಗೆ ಬರೆದಿದ್ದು ನನಗೆ ಅತ್ಯಂತ ಖುಷಿಯಾಯಿತು. ಪಕ್ಷಿಗಳೂ ನಮ್ಮ ಮನಸ್ಸಿನ ಆಯಕಟ್ಟಿನ ಸೂಕ್ಷ್ಮ ಜಾಗವನ್ನು ಆಕ್ರಮಿಸುವಂತಾಗಬೇಕು. ಆಗ ಜೀವನ ಹೆಚ್ಚು ಸ್ವಚ್ಛಂದವಾಗಬಹುದು’ ಎಂದು ಮೈಸೂರಿನ ವನ್ಯಜೀವಿ ಪ್ರೇಮಿ ರತ್ನಾಕರ ಶೆಣೈ ಬರೆದಿದ್ದರು.

ಹಾರ್ನ್‌ಬಿಲ್ ಕುರಿತು ಬರೆದ ಮರುದಿನವೇ ಕಲ್ಲಿಕೋಟೆಯಲ್ಲಿ ರುವ ಕನ್ನಡಿಗ ದಿನೇಶ್ ಕೆ.ಪಿ. ಎಂಬುವವರು ಇ-ಮೇಲ್‌ನಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಅದೇ ಮೊದಲ ಬಾರಿಗೆ ಅವರು ನನಗೆ ಬರೆದಿದ್ದು. ಅದಾಗಿ ಒಂದು ವಾರದ ಬಳಿಕ ಗಾಂಧಿಧಾಮ ಎಕ್ಸ್‌ಪ್ರೆಸ್‌ನಲ್ಲಿ ಬೆಂಗಳೂರಿನಿಂದ ಹುಬ್ಬಳ್ಳಿಗೆ ಹೋಗುವಾಗ ರೈಲಿನಲ್ಲಿ ಒಂದೇ ಬೋಗಿಯಲ್ಲಿ ಆಕಸ್ಮಿಕವಾಗಿ ಎದುರಾಬದುರಾ ಆದೆವು. ಪರಿಚಯವಾಯಿತು. ಅವರು ಪುಣೆಗೆ ಹೊರಟಿದ್ದರು. ಹಾರ್ನ್‌ಬಿಲ್ ನಮ್ಮಿಬ್ಬರನ್ನೂ ಒಂದುಗೂಡಿಸಿತ್ತು. ಅವರು ಚಿಕ್ಕಮಗಳೂರಿಗೆ ಸಮೀಪದ ಆಲ್ದೂರಿನವರು. ದಿನೇಶ್ ಜತೆ ಮಾತು ಮಾತು ಮಥಿಸಿ ಪಯಣ ಸಾಗಿದ್ದೇ ಗೊತ್ತಾಗಲಿಲ್ಲ. ನನಗೆ ಅವರ ಆಸಕ್ತಿ ಕಂಡು ಬಹಳ ವಿಸ್ಮಯವಾಯಿತು.

ದಿನೇಶ್ ಕಳೆದ ನಾಲ್ಕೈದು ವರ್ಷಗಳಿಂದ ಕಲ್ಲಿಕೋಟೆಯ ಸಂಶೋಧನಾ ಕೇಂದ್ರವೊಂದರಲ್ಲಿ ಕಪ್ಪೆಗಳ ಬಗ್ಗೆ ಅಧ್ಯಯನ ಮಾಡುತ್ತಿದ್ದಾರೆ. ಅವರ ಮನಸ್ಸಿನ ತುಂಬೆಲ್ಲ ಕಪ್ಪೆಗಳೇ. ಸಾಂಸಾರಿಕ ಜೀವನದ ಆಸಕ್ತಿಗಳೆಲ್ಲವನ್ನೂ ಕಳೆದುಕೊಂಡ ಬಳಿಕ ಅವರು ಈ ಅಧ್ಯಯನಕ್ಕೆ ಮುಂದಾಗಿದ್ದೇನಲ್ಲ. ದಿನೇಶ್ 27-28ರ ಯುವಕ. ಮುಂದಿನವಾರ ಅವರ ಮದುವೆಯಂತೆ. ಆದರೆ ಕಪ್ಪೆಗಳ ಬಗ್ಗೆ ಅವರು ಅಮೂಲ್ಯ ಎನ್ನಬಹುದಾದಂಥ ಮಾಹಿತಿ ಸಂಗ್ರಹಿಸಿದ್ದಾರೆ. ಇಲ್ಲಿಯತನಕ ಸುಮಾರು 1800 ವಿವಿಧ ಬಗೆಯ ಕಪ್ಪೆಗಳನ್ನು ಪತ್ತೆಹಚ್ಚಲಾಗಿದೆಯಂತೆ.

ಆ ಪೈಕಿ ದಿನೇಶ್ 10-12 ಕಪ್ಪೆಗಳನ್ನು ಕಂಡುಹಿಡಿದಿದ್ದಾರೆ. ಕಪ್ಪೆಗಳನ್ನು ಸಂಗ್ರಹಿಸುವ ವಿಧಾನ, ಅವುಗಳ ಮೇಲೆ ನಡೆಸುವ ಪ್ರಯೋಗ, ಅವುಗಳನ್ನು ಅಧ್ಯಯನಕ್ಕೆ ಬಳಸಿಕೊಳ್ಳುವ ರೀತಿ, ಕಪ್ಪೆಗಳ ಅಧ್ಯಯನಕ್ಕೆ ಕಂಪ್ಯೂಟರ್ ಬಳಕೆ ಇತ್ಯಾದಿ ವಿಷಯಗಳ ಬಗ್ಗೆ ತಿಳಿಸಿದರು. ಕಪ್ಪೆಗಳು ಅವರ ಆಲೋಚನೆ, ಚಿಂತನೆಗಳೆಲ್ಲವನ್ನೂ ಸುತ್ತುವರಿದಿರಬಹುದೆಂಬ ಸಂದೇಹ ನನ್ನಲ್ಲಿ ಸುಳಿಯದೇ ಹೋಗಲಿಲ್ಲ. ಆ ಪರಿ ಅವರು ಆ ವಿಷಯದಲ್ಲಿ ಮಗ್ನರಾಗಿದ್ದಾರೆ. ಒಂದು ಕಪ್ಪೆ ಅವರ ಸಂವೇದನೆಗಳಿಗೆ ಸ್ಪಂದಿಸಿದ ರೀತಿ ನಿಜಕ್ಕೂ ಅಚ್ಚರಿ ಮೂಡಿಸುವಂಥದ್ದು. ನಮ್ಮ ಮಾತು ಕತೆಯೇನಾದರೂ ಮುಂದುವರಿದಿದ್ದರೆ ಪ್ರಾಯಶಃ ಪುಣೆ ತಲುಪುವ ತನಕವೂ ನಮ್ಮಿಬ್ಬರ ಮಧ್ಯೆ ಕಪ್ಪೆಯೇ ಇರುತ್ತಿತ್ತೇನೋ? ಅಷ್ಟರಲ್ಲಿ ಹುಬ್ಬಳ್ಳಿ ಬಂತು. ದಿನೇಶ್ ಮಾತುಗಳಿಗೆ ಇನ್ನೂ ಕಿವಿಯಾಗಬೇಕಿತ್ತು ಎಂದು ಅನಿಸುತ್ತಲೇ ಇತ್ತು. ಅಷ್ಟೊಂದು ಸಂಗ್ರಹ ಅವರ `ಮಂಡೂಕ ಪುರಾಣ’ದಲ್ಲಿತ್ತು.

ಹಾರ್ನ್‌ಬಿಲ್ ಕುರಿತು ಲೇಖನ ಬರೆದಾಗ ಮರುದಿನವೇ ನನ್ನನ್ನು ಹುಡುಕಿಕೊಂಡು ಬಂದವರು ವಿಪ್ರೋ, ಇನ್ಫೋಸಿಸ್, ಸನ್‌ಮೈಕ್ರೋಸಿಸ್ಟಮ್ಸ್‌ನಲ್ಲಿ ಸುಮಾರು ಹದಿನಾರು ವರ್ಷ ಕೆಲಸ ಮಾಡಿ, ಕೆಲ ವರ್ಷ ಅಮೆರಿಕದಲ್ಲೂ ನೆಲೆಸಿ ಬಂದಿರುವ ಕಿರಣ್ ರಮೇಶ್ ಎಂಬ ಅಪ್ಪಟ ಪಕ್ಷಿಪ್ರೇಮಿ. ಹಾರ್ನ್‌ಬಿಲ್ ಬಗ್ಗೆ ಆತ ಸಂಗ್ರಹಿಸಿದ ಮಾಹಿತಿ, ಕ್ಲಿಕ್ಕಿಸಿದ ಫೋಟೊ ಕಂಡು ಅವಾಕ್ಕಾದೆ. ಈಗಂತೂ ಕಿರಣ್ ತನ್ನ ನೌಕರಿಯನ್ನೇ ಬಿಟ್ಟಿದ್ದಾನೆ. ಫುಲ್‌ಟೈಮ್ ಪಕ್ಷಿ ಛಾಯಾಗ್ರಾಹಕ. ದುಡಿದಿದ್ದೆಲ್ಲವನ್ನೂ ಕೆಮರಾ ಮೇಲೆ ಹಾಕಿದ್ದಾನೆ. ಪಕ್ಷಿ ಪುಕ್ಕ ಕಂಡರೆ ಸಾಕು ಊರೂರು ಅಲೆಯುತ್ತಾನೆ. ಎಲ್ಲ ಪಕ್ಷಿಗಳ ಬಗ್ಗೆ ಸಮಗ್ರ ಮಾಹಿತಿ ಸಂಗ್ರಹಿಸುತ್ತಾನೆ. ಒಂದು ಪಕ್ಷಿಯನ್ನು ಕುರಿತು ಹೇಳಲಾರಂಭಿಸಿದರೆ ತಾಸುಗಟ್ಟಲೆ ಮಾತಾಡುತ್ತಾನೆ. ಸ್ವಲ್ಪ ಆಸಕ್ತಿ ತೋರಿದರೆ ಮುಗೀತು, ಅರ್ಧದಿನ ಹೋಗಿದ್ದೇ ಗೊತ್ತಾಗುವುದಿಲ್ಲ.

ಪಕ್ಷಿಯನ್ನು ಬೆನ್ನಟ್ಟಿಕೊಂಡು ಆತ ಹಿಮಾಲಯದ ಗುಡ್ಡ, ಕಣಿವೆಗಳನ್ನೂ ಬಿಟ್ಟಿಲ್ಲ. ಪಕ್ಕದಲ್ಲಿ ಪ್ರಾಣಿಗಳು ಹೋದರೆ ಆತ ದರಕರಿಸಲಾರ. ಹುಲಿ ಹೋದರೂ ಆತನ ಕೆಮರಾಕಣ್ಣುಗಳು ರೆಪ್ಪೆ ಅಗಲಿಸಿಕೊಳ್ಳಲಿಕ್ಕಿಲ್ಲ. ಹಕ್ಕಿ ಹಾರುವ ದೃಶ್ಯ ಕಂಡರೆ ಕಿರಣ್‌ಗೆ ಮೈತುಂಬಾ ರೆಕ್ಕೆ. ಹಕ್ಕಿಯ ನೆಪದಲ್ಲಿ ಈ ಪುಣ್ಯಾತ್ಮ ಕಳೆದ ವರ್ಷ ಅಸ್ಸಾಂನ ಕಾಡುಗಳಲ್ಲಿ ಎರಡೂವರೆ ತಿಂಗಳು ಓಡಾಡಿದ್ದ. ಕೆಮರಾ ಬ್ಯಾಟರಿ ರೀಚಾರ್ಜ್ ಮಾಡಿಸಿಕೊಳ್ಳಲು ಮಾತ್ರ ಪಟ್ಟಣಕ್ಕೆ ಬರುತ್ತಿದ್ದ. ಒಮ್ಮೆ ಕಾಡೊಳಗೆ ನುಗ್ಗಿದ ಅಂದ್ರೆ ಅವನು ಬೇರೆ ಗ್ರಹಕ್ಕೆ ಹೋದಂತೆ. ಅವನಿಗೆ ಫೋಟೊ ತೆಗೆದು ಹಣ ಮಾಡಬೇಕು ಎಂದಿಲ್ಲ. ಫೋಟೊ ಪ್ರದರ್ಶನ ಮಾಡಿ ಜನಪ್ರಿಯತೆಯನ್ನೋ, ಪ್ರಶಸ್ತಿಯನ್ನೋ ಪಡೆಯಬೇಕೆಂದಿಲ್ಲ. ಪ್ರೆಸ್‌ಮೀಟ್ ಕರೆದು ತನ್ನ ಪುರಾಣವನ್ನು ಜಾಹೀರು ಪಡಿಸಬೇಕೆಂಬ ತೆವಲಿಲ್ಲ. ಪಕ್ಷಿಗಳ ಬಗ್ಗೆ ಕೇಳುವ ಮನಸ್ಸಿದ್ದರೆ ಆತ ಬಾಯ್ತುಂಬಾ ಕತೆ ಹೇಳುತ್ತಾನೆ. ಆತನ ಫೋಟೊ ನೋಡುವ ಆಸಕ್ತಿಯಿದ್ದರೆ ತನ್ನ ಆಲ್ಬಮ್‌ಗಳನ್ನು ಮೊಗೆದು ತೋರಿಸುತ್ತಾನೆ.

ಪ್ರಾಯಶಃ ಒಂದು ವಿಶ್ವವಿದ್ಯಾಲಯ ಮಾಡಬಹುದಾದಷ್ಟು ಕೆಲಸವನ್ನು ಕಿರಣ್ ಮಾಡಿದ್ದಾನೆ. ಪಕ್ಷಿಗಳ ಕುರಿತು ಯಾವುದೇ ಪುಸ್ತಕದ ಬಗ್ಗೆ ಕೇಳಿ, ಕಿರಣ್ ನೂರಾರು ಹೆಸರುಗಳನ್ನು ಪಟಪಟನೆ ಹೇಳುತ್ತಾನೆ. `ನಮ್ಮ ಪತ್ರಿಕೆಗೇಕೆ ನೀನು ಒಂದು ಸಂದರ್ಶನ ಕೊಡಬಾರದಾ ಕಿರಣ್?’ ಎಂದು ಕೇಳಿದೆ. ಏನಂದ ಗೊತ್ತಾ? `ನಿಮ್ಮ ಪತ್ರಿಕೆಯನ್ನು ಹಕ್ಕಿಗಳು ಓದುವುದಿಲ್ಲವಾದ್ದರಿಂದ, ನಾನು ಸಂದರ್ಶನ ಕೊಡುವುದಿಲ್ಲ. ನನಗೆ ಅದರ ಅಗತ್ಯ ಇಲ್ಲ. ನಾನು ನನ್ನ ಆನಂದ, ತೃಪ್ತಿಗಾಗಿ ಹಾಗೂ ಹೇಳಲಾಗದ ಒಂದು ಗುರಿಗಾಗಿ ಇವೆಲ್ಲವನ್ನೂ ಮಾಡುತ್ತಿದ್ದೇನೆ. ಇಷ್ಟಕ್ಕೂ ನನ್ನದು ಹೇಳಿಕೊಳ್ಳುವಂಥ ಕೆಲಸವೇನಲ್ಲ. ನಾನು ಪಕ್ಷಿಗಳನ್ನೇನೂ ಸೃಷ್ಟಿಸುತ್ತಿಲ್ಲವಲ್ಲ, ಇರುವುದನ್ನು ನನ್ನ ಸಂತಸಕ್ಕಾಗಿ ಕ್ಯಾಮೆರಾದಲ್ಲಿ ಸೆರೆಹಿಡಿಯುತ್ತಿದ್ದೇನೆ.’

ಅಚ್ಚರಿಯೆನಿಸಬಹುದು ಈ ಕಿರಣ್ ಥರದವರು ಅವೆಷ್ಟೋ ಮಂದಿಯಿದ್ದಾರೆ. ನನಗೆ ಇತ್ತೀಚೆಗೆ ಪರಿಚಯವಾದ ಗಣೇಶ್ ಎಚ್. ಶಂಕರ್ ಕೂಡ ಕಿರಣ್ ಥರದವರೇ. ಇದನ್ನು ಬರೆಯುವಾಗ ಕುತೂಹಲದಿಂದ ಕಿರಣ್ ಎಲ್ಲಿರಬಹುದೆಂದು ಫೋನ್ ಮಾಡಿದರೆ, ತುಸು ಅಸಡ್ಡೆಯಿಂದ ಚಂಬಲ್‌ನಲ್ಲಿ ಅಂದ. ಪ್ರಾಯಶಃ ಫೋಟೊ ಕ್ಲಿಕ್ಕಿಸುತ್ತಿದ್ದಿರಬಹುದು. ಅವನ ಕೆಲಸಪ್ರೀತಿಗೆ ಮನಸ್ಸು ತಲೆ ದೂಗಿತು.

ಅಲಸೂರಿನಲ್ಲಿ ನನ್ನ ಸ್ನೇಹಿತರೊಬ್ಬರಿದ್ದಾರೆ. ಅವರ ಹೆಸರು ಮಾಣಿಕ್ಯಮ್ ಅಂತ. ಈ ಮನುಷ್ಯನ ಹವ್ಯಾಸ ಅವರನ್ನು ಕನಿಷ್ಠ 20 ದೇಶಗಳಿಗೆ ಕರೆದುಕೊಂಡು ಹೋಗಿದೆ. ಇವರೂ ಪ್ರಚಾರದಿಂದ ದೂರ. ತುಸು ಗಂಭೀರ ಸ್ವಭಾವದವರು. ನೀವು ಕರೆದರೆ ನಿಮ್ಮ ಮನೆಗೆ ಬಂದಾರು. ಆದರೆ ಒಂದು ಷರತ್ತು. ಅದೇನೆಂದರೆ ನಿಮ್ಮ ಮನೆಯಲ್ಲಿ ಗೆದ್ದಲುಗಳು(termites) ಇರಬೇಕು. ಅಂದ ಹಾಗೆ ಇವರು ಗೆದ್ದಲು ಪರಿಣತ. ಇವರ ಪಿಎಚ್.ಡಿ. ವಿಷಯವೂ ಗೆದ್ದಲುಗಳೇ. ಪದವಿ ಪಡೆದು ಅವರು ಗೆದ್ದಲುಗಳ ಬಗ್ಗೆ ಅಧ್ಯಯನ ನಿಲ್ಲಿಸಲಿಲ್ಲ. ಆನಂತರವೇ ಜಾಸ್ತಿ ಮಾಡಿದರು. ನೂರಾರು ವಿಧಗಳ ಗೆದ್ದಲುಗಳನ್ನು ಪತ್ತೆಮಾಡಿರುವ ಅವರಿಗೆ ಗೆದ್ದಲುಗಳೆಂದರೆ ಮಾಣಿಕ್ಯವೇ. ಗೆದ್ದಲು ಕಂಡರೆ ತಕ್ಷಣ ತಮ್ಮ ಜೇಬಿನಲ್ಲಿರುವ ಶೀತವಾದ ಬಾಟಲಿ ತೆಗೆದು ಅದರೊಳಗೆ ಮೆಲ್ಲನೆ ತುಂಬಿಕೊಳ್ಳುತ್ತಾರೆ. ಅದನ್ನು ಹಿಡಿದ ಜಾಗದ ವಿವರಗಳನ್ನೆಲ್ಲ ಬರೆದುಕೊಳ್ಳುತ್ತಾರೆ.

ಅಲ್ಲಿಂದ ಶುರುವಾಯಿತು ಅವರ ಸಂಶೋಧನೆ. ಮುಂದಿನ ನಾಲ್ಕೈದು ದಿನ ಮಾಣಿಕ್ಯಮ್ ಅವರ ಮಾತುಕತೆಯೆಲ್ಲ ಬಂದ್. ಒಮ್ಮೊಮ್ಮೆ ಗೆದ್ದಲು ಹಿಡಿದ ಜಾಗಕ್ಕೆ ಎರಡನೇ ಸಲ, ಮೂರನೇ ಸಲ ಭೇಟಿ ಕೊಟ್ಟು ಆ ಜಾಗದ ಲಕ್ಷಣವನ್ನು ಪರೀಕ್ಷಿಸುತ್ತಾರೆ. ಅಲ್ಲಿ ಕುಳಿತು ನೋಟ್ಸ್ ಮಾಡಿಕೊಳ್ಳುತ್ತಾರೆ, ಅಲ್ಲಿ ಕಂಡ ದೃಶ್ಯಗಳನ್ನೆಲ್ಲ ಬರೆದುಕೊಳ್ಳುತ್ತಾರೆ, ಫೋಟೊ ಹೊಡೆದುಕೊಳ್ಳುತ್ತಾರೆ. ಆ ವಿವರಗಳನ್ನೆಲ್ಲ ಇಟ್ಟುಕೊಂಡು ಇನ್ನೆಲ್ಲೋ ಸಂಗ್ರಹಿಸಿದ ಗೆದ್ದಲು ಹಾಗೂ ಅದು ಸಿಕ್ಕ ಜಾಗವನ್ನು ಹೋಲಿಸುತ್ತಾರೆ, ತಾಳೆ ಹಾಕುತ್ತಾರೆ. ಮನಸ್ಸಿನಲ್ಲಿ ಹೊಳೆದ ಸಂಗತಿಗಳನ್ನೆಲ್ಲ ದಾಖಲಿಸುತ್ತಾರೆ. ತಲೆಕೆಟ್ಟು ಒಂದು ದಿನ ಮಾಣಿಕ್ಯಮ್ ಅವರ ಬಳಿ ಗೆದ್ದಲ ಕತೆಯನ್ನೂ ಕೆದಕಿದೆ.

ಆ ದಿನ ಬಾಯ್ಬಿಟ್ಟರು-`ಜನರಿಗೆ ಬುದ್ಧಿ ಇಲ್ಲ. ಗೆದ್ದಲು ಹಿಡಿದು ಹಾಳಾಯಿತು ಅಂತಾರೆ. ಗೆದ್ದಲು ತಿಂದೋಯ್ತು ಅಂತಾರೆ. ಗೆದ್ದಲು ಕಂಡರೆ ಸೀಮೆಎಣ್ಣೆ ಸುರಿದು ಸಾಯಿಸುತ್ತಾರೆ. ಕಾಲಲ್ಲಿ ಜಜ್ಜಿ ಸಾಯಿಸುತ್ತಾರೆ. ಎಂಥ ಬುದ್ಧಿಗೇಡಿ ಜನ? ಗೆದ್ದಲು ಅದ್ಭುತ ಸೃಷ್ಟಿ. ಯಾವ ಜಾಗದಲ್ಲಿ ಗೆದ್ದಲುಗಳಿವೆಯೋ ಅಲ್ಲಿ ನೀರಿದೆ ಅಂತ ಅರ್ಥ. ಅಲ್ಲಿನ ಮಣ್ಣು ಫಲವತ್ತಾಗಿದೆ ಅಂತ ಅರ್ಥ. ಅಂತರ್ಜಲಮಟ್ಟ ಮೇಲಿದೆ ಅಂತ ಅರ್ಥ. ಆ ಪ್ರದೇಶ ಕೃಷಿಗೆ ಯೋಗ್ಯ. ಮರುಭೂಮಿಯಲ್ಲೂ ಗೆದ್ದಲುಗಳು ನೀರಿನ ಸೆಲೆ ಹುಡುಕಿಕೊಂಡು ಹೋಗುತ್ತವೆ. ಗೆದ್ದಲುಗಳಿರುವ ಭೂಮಿಯಲ್ಲಿ ಸಣ್ಣ ಸಣ್ಣ ತೂತುಗಳುಂಟಾಗಿ ನೀರು ಒಳಕ್ಕೆ ಹರಿದುಹೋಗಲು ಸಹಾಯಕವಾಗುತ್ತದೆ. ಇದರಿಂದ ಭೂಸವಕಳಿ ತಪ್ಪುತ್ತದೆ. ಗೆದ್ದಲು ರೈತನ ಮಿತ್ರ…’

ಮಾಣಿಕ್ಯಮ್ ಒಂದೇಸಮನೆ ಗೆದ್ದಲುಗಳ ರೋಮಾಂಚಕ ಪ್ರಪಂಚದ ಬಗ್ಗೆ ಹೇಳುತ್ತಿದ್ದರೆ ಆಸಕ್ತರಿಗೆ ಕುತೂಹಲದ ಗೆದ್ದಲು ಹತ್ತಿದರೆ ಆಶ್ಚರ್ಯವಿಲ್ಲ. ಅವರ ಬಳಿ ಅಷ್ಟೊಂದು ಮಾಹಿತಿಯಿದೆ. ಗೆದ್ದಲೇ ಅವರ ವಿಶ್ವ. ತ್ರಿಕಾಲವೂ ಅವರಿಗೆ ಗೆದ್ದಲು ಹುಳುಗಳದ್ದೇ ಚಿಂತೆ. ಸದಾ ತಲೆಯಲ್ಲಿ ಗೆದ್ದಲ ಗದ್ದಲ. ಆಫ್ರಿಕಾದ ಕಾಡನ್ನು ಸಹ ಅವರು ಬಿಟ್ಟಿಲ್ಲ. ಈಜಿಪ್ತ್‌ನ ಪಿರಮಿಡ್ಡುಗಳನ್ನು ನೋಡಿ ಬನ್ನಿ ಅಂದ್ರೆ ಅದರೊಳಗೆ ಗೆದ್ದಲುಗಳು ಇದ್ದಿರಬಹುದಾ ಎಂದು ಮಾಣಿಕ್ಯಮ್ ಹುಡುಕಲಾರಂಭಿಸುತ್ತಾರೆ. ಅವರಿಗೆ ಗೆದ್ದಲಿನಷ್ಟು ಸಂತೃಪ್ತಿಯನ್ನು ಮತ್ತೇನೂ ಕೊಡುವುದಿಲ್ಲ. ಇದನ್ನೆಲ್ಲ ಬೇರೆಯವರ ಮುಂದೆ ಹೇಳಿಕೊಳ್ಳಬೇಕು, ಅದನ್ನು ಕಂಡು ಅವರು ತನ್ನನ್ನು ಪ್ರಶಂಸಿಸಬೇಕು ಎಂಬ ಯಾವ ಪೂರ್ವಭಾವಿ ಹೊಂಚುಗಳೂ ಅವರಿಗಿಲ್ಲ. ಬೇರೆಯವರು ಅವರ ಕೆಲಸ ಕಂಡು ಜರೆಯಲಿ, ಹೀಗಳೆಯಲಿ ಮಾಣಿಕ್ಯಮ್ ಗೆದ್ದಲಿನಂತೆ ನಿರ್ಲಿಪ್ತ. ಅವರು ಆ ಸಮಯದಲ್ಲಿ ತಮ್ಮ ಅಧ್ಯಯನ ಮುಂದುವರಿಸಿರುತ್ತಾರೆ.

ದಿನೇಶ್, ಕಿರಣ್, ಗಣೇಶ್, ಮಾಣಿಕ್ಯಮ್ ಮುಂತಾದವರ ಮುಂದೆ ಯಡಿಯೂರಪ್ಪ, ಜನಾರ್ದನ ರೆಡ್ಡಿ ರಾಜಕೀಯ, ದೇವೇಗೌಡ-ಖೇಣಿಯ ನೈಸ್ ಜಟಾಪಟಿ, ಗೋಹತ್ಯೆ ನಿಷೇಧ ಬೇಕೋ, ಬೇಡವೋ ಮುಂತಾದ ವಿಷಯಗಳ ಬಗ್ಗೆ ಕೇಳಿನೋಡಿ. ಅವರಿಗೆ ಅದರಲ್ಲಿ ಸ್ವಲ್ಪವೂ ಆಸಕ್ತಿಯಿಲ್ಲ. ಅದರಲ್ಲೂ ಕಿರಣ್‌ನಂಥವರಿಗೆ ಯಡಿಯೂರಪ್ಪ, ರೆಡ್ಡಿ ಮುಂತಾದವರು ಯಾವುದೋ `ಹಕ್ಕಿ’ಯಾಗಿದ್ದರೆ ಆಸಕ್ತಿ ಬರಬಹುದು. ಇಲ್ಲದಿದ್ದರೆ ಇಲ್ಲವೇ ಇಲ್ಲ.

ಅವರು ಮುಖ್ಯಮಂತ್ರಿಯಾಗಿರಲಿ, ರಾಜ್ಯಪಾಲ ರಾಗಿರಲಿ, ಉಹುಂ ಸ್ವಲ್ಪವೂ ಕುತೂಹಲವಿಲ್ಲ. ಅವರನ್ನು ಯಾವ ಪದವಿ, ಸ್ಥಾನಮಾನ, ಪ್ರಶಸ್ತಿ, ಗೌರವ ಡಾಕ್ಟರೇಟ್ ಕೂಡ ಕದಲಿಸುವುದಿಲ್ಲ, ಸಣ್ಣ ರೋಮಾಂಚನವನ್ನೂ ಉಂಟುಮಾಡು ವುದಿಲ್ಲ. ಅವರಿಗೆ ನೌಕರಿ, ಬಡ್ತಿ, ವಿದೇಶ ಪ್ರಯಾಣ, ಬೆಂಗಳೂರಿನಲ್ಲೊಂದು ಫಾರ್ಟಿ ಸಿಕ್ಸ್‌ಟಿ ಸೈಟು, ಟು ಬೆಡ್‌ರೂಮ್ ಅಪಾರ್ಟ್‌ಮೆಂಟ್, ಬ್ಯಾಂಕ್‌ಬ್ಯಾಲೆನ್ಸ್, ಕಾರು, ಮಗಳ ಮದುವೆಗೆಂದು ಡಿಪಾಜಿಟ್ಟು, ವಿದೇಶದಲ್ಲಿ ಮಗನ ವಿದ್ಯಾಭ್ಯಾಸಕ್ಕೆ ಹಣ ಹೊಂದಿಸುವುದು… ಇವ್ಯಾವುದರ ಗೊಡವೆಯೂ ಇಲ್ಲ. ಇವೆಲ್ಲ ಇದ್ದರೆ ಎಷ್ಟು ಸಂತಸ, ತೃಪ್ತಿ ಸಿಗುತ್ತಿತ್ತೋ ಅದಕ್ಕಿಂತ ಹೆಚ್ಚಿನ ಆನಂದವನ್ನು ಅವರು ತಮ್ಮ ಕಾಯಕದಲ್ಲಿ ಕಾಣುತ್ತಾರೆ. ಅವರು ಮಾಡುವುದು ತಮ್ಮ ಆತ್ಮ ಸಂತಸಕ್ಕಾಗಿ, ಅದನ್ನು ಮೀರಿದ ಕಾಳಜಿಗಾಗಿ. ಅದರಲ್ಲಿ ಸಿಗುವ ನೆಮ್ಮದಿ ಮತ್ತ್ಯಾವುದರಲ್ಲೂ ಅವರಿಗೆ ಸಿಗಲು ಸಾಧ್ಯವೇ ಇಲ್ಲ.

ಜೀವನ ಅಂದ್ರೆ ಕೇವಲ ಸೈಟು, ಕಾರು, ಮನೆ, ಮೋಜು, ಬ್ಯಾಂಕ್‌ಬ್ಯಾಲೆನ್ಸ್ ಅಷ್ಟೇ ಅಲ್ಲ. ಇದರ ಹಿಂದೆ ಬಿದ್ದು ಹೋದವರು ಸಮಾಧಾನದಿಂದ ಇರಲು ಸಾಧ್ಯವೂ ಇಲ್ಲ. ಜೀವನ ಅಂದ್ರೆ ಬರೀ ರಾಜಕೀಯ, ಕ್ರಿಕೆಟ್, ಸಿನಿಮಾ ಅಷ್ಟೇ ಅಲ್ಲ. ಇವನ್ನು ದಾಟಿಯೂ ಚಿಕ್ಕಚಿಕ್ಕ ಸಂಗತಿಗಳಲ್ಲಿ ಸಂತಸ ಕಾಣುವುದು ಸಾಧ್ಯ. ತಮ್ಮ ಪಾಡಿಗೆ ತಾವು ಕೆಲಸದಲ್ಲಿ ನಿರತರಾಗಿ ನಮ್ಮ ಸುತ್ತಲಿನ ಪರಿಸರವನ್ನು ಸುಂದರಗೊಳಿಸುವ, ತಮ್ಮ ಕಾಯಕದಿಂದ ಅದರ ಫಲವನ್ನು ಮಾತ್ರ ಸಮಾಜಕ್ಕೆ ನೀಡಿ ಅಜ್ಞಾತರಾಗಿಯೇ ಉಳಿಯುವ ಅವೆಷ್ಟೋ ಕೋಟ್ಯಂತರ ಮಂದಿಯ ಕೆಲಸದ ಮಹತ್ವ ನಮಗೆ ಗೊತ್ತೇ ಆಗುವುದಿಲ್ಲ. ಸರಕಾರ, ಮುಖ್ಯಮಂತ್ರಿ, ನಮ್ಮ ಶಾಸಕರ ಕೆಲಸಗಳು ಮಾತ್ರ ನಮಗೆ ಕಾಣುತ್ತವೆ. ತಮಗಾಗಿ ಬದುಕದವರು, ಬೇರೆಯವರ ಬದುಕನ್ನು ಬೆಳಗಬಲ್ಲರು ಎಂಬುದು ನಮಗೆ ಅರ್ಥವಾದರೆ ಸಾಕು.

Advertisements

About sujankumarshetty

kadik helthi akka

Posted on ಏಪ್ರಿಲ್ 24, 2010, in "ಇ-ಲೋಕ" ಲೇಖನಗಳ “ಕನ್ನಡಲೋಕ”, ವಿಶ್ವೇಶ್ವರ ಭಟ್ - ನೂರೆಂಟುಮಾತು, Uncategorized and tagged . Bookmark the permalink. ನಿಮ್ಮ ಟಿಪ್ಪಣಿ ಬರೆಯಿರಿ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: