ಇವತ್ತೇ ಕೊನೆ ದಿನ ಎಂದುಕೊಂಡು ಬದುಕಿದರೆ ಹೇಗೆ?

Richar Branson
ವರ್ಜಿನ್ ಕಂಪನಿ [^] ಮಾಲೀಕ ರಿಚರ್ಡ್ ಬ್ರಾನ್‌ಸನ್‌ನ ಬಗ್ಗೆ ಹಿಂದಿನವಾರ ಬರೆದಿದ್ದೆ. ನಿಜಕ್ಕೂ ಅದ್ಭುತ ಸಾಧನೆಗೈದ ಭೂಪ. ಅವನ ಜೀವನ, ಸಿದ್ಧಾಂತ, ಬದುಕಿನ ಪರಿ ಕಂಡು ಹೆಮ್ಮೆಪಟ್ಟ ಅವೆಷ್ಟೋ ಓದುಗರು ಸಂತಸದಿಂದ ಪ್ರತಿಕ್ರಿಯಿಸಿದ್ದಾರೆ. ಇವೆಲ್ಲ ಗಮನಿಸಿದ ಬಳಿಕ ನಾನು ಬ್ರಾನ್‌ಸನ್ ಬಗ್ಗೆ ಏನೂ ಹೇಳೇ ಇಲ್ಲ. ಆದರೂ ಅವನನ್ನು ಇಷ್ಟೊಂದು ಮಂದಿ ಮೆಚ್ಚಿದ್ದಾರಲ್ಲ ಎನಿಸಿತು. ಅವನ ಬಗ್ಗೆ ಇನ್ನಷ್ಟು ಹೇಳಲೇಬೇಕು ಎಂದು ತೀರ್ಮಾನಿಸಿ, ಬ್ರಾನ್‌ಸನ್ ಬರೆದ Live the moment ಎಂಬ ಪುಟ್ಟ ಬರಹವನ್ನು ನಿಮಗಾಗಿ ಕೊಡುತ್ತಿದ್ದೇನೆ. ನೀವು ಅವಶ್ಯ ಓದಲೇಬೇಕು. ಇಲ್ಲಿ ಅವನು ಹೇಳಿದ್ದನ್ನು ನೀವು ಪಾಲಿಸಿದ್ದೇ ಆದಲ್ಲಿ, ನೀವು totally different ವ್ಯಕ್ತಿ ಆಗಿರುತ್ತೀರಿ. ಈ ವಿಷಯದಲ್ಲಿ ನಾನು ನೂರಕ್ಕೆ ನೂರು ಬ್ರಾನ್ ಸನ್ ಪರ. ನೀವೂ ಅವನಂತೆ ಆಗಬೇಕಾ? ಹಾಗಾದರೆ ಆತ ಹೇಳೋದನ್ನು ಕೇಳಿ.

***
ಇದು 1997ರ ಮಾತು. ಬಿಸಿಗಾಳಿ ತುಂಬಿದ ಬಲೂನ್ ಹಾರಾಟದ ಸ್ಪರ್ಧೆ ಕಣ್ಣೆದುರಿಗಿತ್ತು. ನಾನೇನೋ ಉತ್ಸಾಹದಿಂದಲೇ ಹೊರಟು ನಿಂತಿದ್ದೆ. ಈ ಸ್ಪರ್ಧೆಯಲ್ಲಿ ವಿಪರೀತ ಎಂಬಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿರುತ್ತಾರೆ ಎಂಬುದು ನನಗೆ ಚೆನ್ನಾಗಿ ಗೊತ್ತಿತ್ತು. ಆದರೂ ಮನದ ಒಂದು ಮೂಲೆಯಲ್ಲಿ ಏನೋ ಅಳುಕು. ಬೈ ಛಾನ್ಸ್ ಏನಾದರೂ ಆಗಬಾರದ್ದು ಆಗಿಬಿಟ್ಟರೆ? ನಾನು ಜೀವಂತವಾಗಿ ಹಿಂತಿರುಗದೇ ಹೋದರೆ? ನಮ್ಮ ಕುಟುಂಬ ವರ್ಗದವರಿಗೆ ನನ್ನ ದರ್ಶನವೇ ಆಗದೇ ಹೋದರೆ…?

ಇಂಥದೊಂದು ಯೋಚನೆ ಬಂದಾಕ್ಷಣ ನಿಂತಲ್ಲೇ ಒಮ್ಮೆ ಮೈ ನಡುಗಿತು. ತಕ್ಷಣವೇ ಸಾವರಿಸಿಕೊಂಡು ನನ್ನ ಮಕ್ಕಳಿಗೆ ಒಂದು ಪತ್ರ ಬರೆದಿಟ್ಟೆ. ಅದರ ಸಾರಾಂಶ ಹೀಗಿತ್ತು: `ಪ್ರೀತಿಯ ಹೋಲಿ ಆಂಡ್ ಸ್ಯಾಮ್, ತುಂಬ ಸಂದರ್ಭದಲ್ಲಿ ಬದುಕೆಂಬುದು, ನಾವು ಕಲ್ಪಿಸಿಕೊಂಡಿರುತ್ತೇವಲ್ಲ? ಅದಕ್ಕಿಂತ ಭಿನ್ನವಾಗಿರುತ್ತದೆ. ಕೃತಕವಾಗಿರುತ್ತದೆ. ಒಂದೊಂದು ಸಂದರ್ಭದಲ್ಲಿ ಬದುಕೆಂಬುದು ಕೇವಲ ಸಂಭ್ರಮಗಳಿಂದ ಸೃಷ್ಟಿಯಾಗಿದೆ. ಸಂಭ್ರಮಗಳೆಲ್ಲ ಒಂದಾದ ಸಂದರ್ಭವೇ ಬದುಕಾಗಿದೆ ಎನಿಸುತ್ತದೆ ನಿಜ. ಆದರೆ, ನಂತರದ ಒಂದೆರಡು ದಿನಗಳಲ್ಲಿ ಬದುಕೆಂಬುದು ಏನೇನೂ ಇಲ್ಲದ ಮರುಭೂಮಿ ಎಂದೂ ಅನಿಸಿಬಿಡುತ್ತದೆ. ಡಿಯರ್ ಕಿಡ್ಸ್, ನಿಮಗೇ ಗೊತ್ತಿರುವಂತೆ, ಒಂದೊಂದು ಕ್ಷಣವನ್ನೂ ತೀವ್ರವಾಗಿ ಅನುಭವಿಸಬೇಕು ಎಂದು ಆಸೆಪಡುವವನು ನಾನು. ಹಾಗಾಗಿ, ಒಂದು ಸಾಹಸವನ್ನು, ಸಂತೋಷವನ್ನು, ಅನುಭವವನ್ನು ನನ್ನದಾಗಿಸಿಕೊಳ್ಳಬೇಕು ಎಂಬ ಆಸೆಯಿಂದಲೇ ಬಿಸಿಗಾಳಿ ಬಲೂನ್ ಹಾರಾಟದ ಸ್ಪರ್ಧೆಗೆ ಹೊರಟಿದ್ದೇನೆ…’

ಬಲೂನ್ ಹಾರಾಟದ ಸ್ಪರ್ಧೆಯ ಸಂದರ್ಭದಲ್ಲಿ ನನಗೆ ಏನಾದರೂ ಆಗಿಬಿಡಬಹುದು. ಜೀವಂತವಾಗಿ ಹಿಂದಿರುಗದೇ ಹೋಗಬಹುದು ಎಂಬ ಭಾವವೊಂದು ಕ್ಷಣಕ್ಷಣವೂ ಹೆದರಿಸಿದ ಸಂದರ್ಭದಲ್ಲಿಯೇ ನಾನು ಇಂಥದೊಂದು ಪತ್ರ ಬರೆದಿಟ್ಟು ಬಂದಿದ್ದೆ. ನಮ್ಮ ಅದೃಷ್ಟ ದೊಡ್ಡದಿತ್ತು. ಸಣ್ಣದೊಂದು ಅವಘಡವೂ ನಡೆಯಲಿಲ್ಲ. ಮೊರಕ್ಕೋದ ಮರಕೇಶ್‌ನಿಂದ ನಾವು ಖುಷಿ, ಉತ್ಸಾಹದಿಂದಲೇ ಬೆಳ್ಳಂಬೆಳಗ್ಗೆಯೇ ಬಲೂನ್ ಹಾರಾಟ ಆರಂಭಿಸಿದ್ದೆವು. ಮುಂದಿನ ಹನ್ನೆರಡು ತಾಸುಗಳಲ್ಲಿ ನಾವು ಅಟ್ಲಾಸ್ ಪರ್ವತಗಳಿಗೆ ಡಿಕ್ಕಿ ಹೊಡೆದು ಉರಿದುಹೋಗುತ್ತೇವೇನೋ ಎಂಬ ಆತಂಕ ನನ್ನಲ್ಲಿ ಮನೆಮಾಡಿತ್ತು. ಭಯದ ಸಂದರ್ಭದಲ್ಲಿ, ಬದುಕಿನ ಕಡೆಗಾಲದಲ್ಲಿ ಮನುಷ್ಯ ಹಳೆಯ ನೆನಪುಗಳನ್ನು ಮೆಲುಕು ಹಾಕ್ತಾನೆ ಎಂದು ಅವರಿವರು ಹೇಳುವುದನ್ನು ಕೇಳಿದ್ದೇನೆ. ಆದರೆ, ಹಾಗೆಲ್ಲ ನೆನಪುಗಳೊಂದಿಗೆ ಉಳಿಯುವ ಸಂಭ್ರಮ ನನಗಿರಲಿಲ್ಲ. ಕಾರಣ, ಬಲೂನು ದಿಢೀರನೆ ನೆಲಕ್ಕಿಳಿಯದಂತೆ, ರಾತ್ರಿಯಿಡೀ ಆಗಸದಲ್ಲಿಯೇ ಇರುವಂತೆ ನೋಡಿಕೊಳ್ಳುವುದೇ ನನಗೆ ದೊಡ್ಡ ಕಸರತ್ತಾಗಿತ್ತು. ಅದು ಹೇಗೆ ಹಾರಾಡುತ್ತಲೇ ರಾತ್ರಿ ಕಳೆದೆನೋ, ಅದನ್ನು ವಿವರಿಸಲೂ ನನ್ನಿಂದ ಸಾಧ್ಯವಿಲ್ಲ. ಕ್ರಮೇಣ ಬೆಳಕಾದಂತೆ ಕಾಣತೊಡಗಿತು. ಸ್ವಲ್ಪ ಹೊತ್ತಿನ ನಂತರ ಬೆಳಗು ನಿಚ್ಚಳವಾಯಿತು. ನಾನು ಬೆರಗಿನಿಂದಲೇ ಕೆಳಗೆ ನೋಡಿದೆ. ಅಲ್ಲಿ ಮರುಭೂಮಿಯೊಂದು ಕಾಣುತ್ತಿತ್ತು. ಆ ಜಾಗದಲ್ಲಿ ನಾವು ಬಲೂನನ್ನು ಸುರಕ್ಷಿತವಾಗಿ ಇಳಿಸಬಹುದಿತ್ತು.

ಬಲೂನ್ ಹಿಡಿದು ಹೊಸದೊಂದು ಸಾಹಸಕ್ಕೆ ಅಣಿಯಾದೆನಲ್ಲ? ಆ ನಂತರದ ಕೆಲವೇ ಕ್ಷಣಗಳಲ್ಲಿ ನನ್ನ ಪಾಲಿಗೆ ಇನ್ನೊಂದು ಬೆಳಗೇ ಇಲ್ಲ ಎಂಬ ಭಾವ ನನ್ನನ್ನು ಪದೇ ಪದೆ ಆವರಿಸಿಕೊಂಡಿತ್ತು. ಕಂಗಾಲು ಮಾಡಿತ್ತು. ಹೆದರಿಸಿತ್ತು. ನಡುಗಿಸಿತ್ತು. ಈ ಎಲ್ಲ ಕಾರಣಗಳಿಂದ ಬೆಳಗ್ಗೆಯನ್ನು ಕಂಡಾಕ್ಷಣ ಪುನರ್ಜನ್ಮ ಪಡೆದಂಥ ಸಂಭ್ರಮ ನನ್ನದಾಯಿತು. ಹಾರುತ್ತಿದ್ದ ಬಲೂನ್‌ನಲ್ಲಿ ಕುಳಿತೇ ಮರುಭೂಮಿಯಲ್ಲಿ ಉದಯಿಸುತ್ತಿದ್ದ ಸೂರ್ಯನ ಚೆಲುವನ್ನು ಕಣ್ತುಂಬಿಕೊಂಡೆ. ಚುಮುಚುಮು ಬಿಸಿಲು ತುಂಬಾ ಹಿತವೆನಿಸಿತು. ಈ ಸಂದರ್ಭದಲ್ಲೇ ಅಂದಿನ ರಾತ್ರಿ ಅನುಭವಿಸಿದ ಫಜೀತಿ ನೆನಪಿಗೆ ಬಂತು. ಉಹುಂ, ಇನ್ನೆಂದೂ ಈ ಬಲೂನ್ ಹಿಡಿದುಕೊಂಡು ಹಾರಲೇಬಾರದೆಂದು ಪ್ರತಿಜ್ಞೆ ಮಾಡಿದೆ.

ಪ್ರತಿಯೊಂದು ಕ್ಷಣವನ್ನೂ ಆನಂದದಿಂದ ಅನುಭವಿಸುವುದು ಹೇಗೆ?

ಇಷ್ಟಾದರೂ, ನನಗೆ ಹಾರುವ ಬಲೂನ್‌ಗಳೆಂದರೆ ಪಂಚಪ್ರಾಣ. ಈ ಬಲೂನ್ ಮೇಲಿನ ಹುಚ್ಚು ಎಷ್ಟಿದೆಯೆಂದರೆ- ಬಿಸಿಗಾಳಿ ತುಂಬಿದ ಬಲೂನ್ ಒಂದನ್ನು ನಾನು ಖರೀದಿಸಿ ಇಟ್ಟುಕೊಂಡಿದ್ದೇನೆ. ನನ್ನಲ್ಲಿರೋದು ಪುಟ್ಟ ಬುಟ್ಟಿಯನ್ನು ಹೊಂದಿರುವ ಹಾರುವ ಬಲೂನ್. ‘Around the world in 80 days’ ಎಂಬ ಚಿತ್ರದಲ್ಲಿದೆಯಲ್ಲ? ಅಂಥದೇ ಪುಟ್ಟದಾದ ಬಲೂನ್ ಅದು. ನಮ್ಮ ಮನೆಮಂದಿ, ಸ್ನೇಹಿತರು ಹಾಗೂ ಬಂಧುಗಳೊಂದಿಗೆ ಆಗೊಮ್ಮೆ-ಈಗೊಮ್ಮೆ ಬಾನೆತ್ತರದಲ್ಲಿ ಹಾರಾಟ ನಡೆಸುವುದು ನನ್ನ ಅತ್ಯಂತ ಪ್ರೀತಿಯ ಹವ್ಯಾಸ. ಹೀಗೆ ಹಾರಾಡುವಾಗ ಪ್ರಕೃತಿಯೊಂದಿಗೆ ಲೀನವಾಗುತ್ತಿದ್ದೇನೆ ಎಂಬ ಸಾರ್ಥಕ ಭಾವ ನನ್ನದು. ಅರ್ಧಗಂಟೆಯ ಹಿಂದಷ್ಟೇ ಭೂಮಿಯ ಮೇಲಿದ್ದು ನಂತರದ ಕೆಲವೇ ಕ್ಷಣಗಳಲ್ಲಿ ಜತೆಗಾರರಿಂದ ಬೇರ್ಪಟ್ಟು ಅವರಿಗೆ ಟಾಟಾ ಎನ್ನುತ್ತ ಅಗಸಕ್ಕೇರುವ ಖುಷಿಯಿದೆಯಲ್ಲ? ಅದು ವರ್ಣನೆಗೆ ನಿಲುಕದ್ದು. ಹೀಗೆ ಬಲೂನ್‌ನಲ್ಲಿ ಕುಳಿತು ಹಕ್ಕಿಯಂತೆ ಹಾರುವಾಗ ನಮ್ಮನ್ನು ಮೊಬೈಲ್ ಕಾಡುವುದಿಲ್ಲ. ಮಿಸ್ ಕಾಲ್‌ನ ರಗಳೆಯಿಲ್ಲ. ಸಾಲಗಾರರ ಕಾಟವಿಲ್ಲ. ಹೆಂಡತಿಯ ಹೆದರಿಕೆಯೂ ಇರುವುದಿಲ್ಲ. ನೀಲಾಗಸದಲ್ಲಿ ನಾವು ಪರಿಪೂರ್ಣ ಸ್ವತಂತ್ರರಾಗಿರುತ್ತೇವೆ. ಈ ಖುಷಿಯಲ್ಲೇ ಒಮ್ಮೆ ಕೆಳಗೆ ನೋಡಿದರೆ ಬೆಟ್ಟಗುಡ್ಡ, ಹೊಲ-ಗದ್ದೆಗಳು, ಹತ್ತಿರವೇ ಇರುವ ಪುಟ್ಟ ಕೆರೆ, ಜಾನುವಾರುಗಳು, ತಂತಮ್ಮ ಕೆಲಸದಲ್ಲಿ ತೊಡಗಿರುವ ಜನರು ಕಾಣಿಸುತ್ತಾರೆ. ಇದನ್ನು ಮೀರಿದ ಖುಷಿಯೆಂದರೆ- ಪಕ್ಷಿಗಳು ಬಲೂನ್‌ಗೆ ತಾಗಿದಂತೆಯೇ ಹಾರಿಹೋಗುತ್ತವೆ.

ಬಿಡಿ, ಆ ಕ್ಷಣದ ವಿವರಣೆ ವರ್ಣನೆಗೆ ನಿಲುಕದ್ದು… ಪ್ರತಿಯೊಂದು ಕ್ಷಣವನ್ನೂ ಆನಂದದಿಂದ ಅನುಭವಿಸುವುದು ಹೇಗೆ? ಸಂತೃಪ್ತಿಯಿಂದ ಬದುಕುವುದು ಹೇಗೆ ಎಂಬ ಪ್ರಶ್ನೆ ಮೊದಲಿಂದಲೂ ನನ್ನನ್ನು ಕಾಡುತ್ತಲೇ ಇತ್ತು. ಈ ಪ್ರಶ್ನೆಗೆ ಮೀನುಗಾರನೊಬ್ಬನ ಬದುಕಿನ ಚಿತ್ರವೇ ನನಗೆ ಉತ್ತರ ಒದಗಿಸಿತು.

ಈ ಪ್ರಸಂಗ ನಡೆದದ್ದು ಜಪಾನ್‌ನಲ್ಲಿ. ನಾನು ಅದೊಮ್ಮೆ ಕ್ರಿಸ್ ಮಸ್ ರಜೆಯ ಸಂದರ್ಭದಲ್ಲಿ ಜಪಾನ್‌ಗೆ ತೆರಳಿದ್ದೆ. ಅಲ್ಲಿ ದಿನವೂ ಮೀನುಗಾರರನ್ನು, ಅವರ ಬದುಕು-ಬವಣೆಯನ್ನು ನಾನು ಗಮನಿಸುತ್ತಿದ್ದೆ. ಸಮುದ್ರದ ಆಳ-ಅಗಲ, ಮೀನು ಮಾರಾಟದಿಂದ ಇರುವ ಲಾಭ-ನಷ್ಟ, ವ್ಯಾಪಾರದ ಒಳಗುಟ್ಟುಗಳೆಲ್ಲ ಆ ಮೀನುಗಾರರಿಗೆ ಕರತಲಾಮಲಕವಾಗಿದ್ದವು. ಆದರೂ ಅವರು ಮೀನು ಮಾರಾಟದ `ಡಾನ್’ಗಳಾಗಲು ಪ್ರಯತ್ನಿಸುತ್ತಿರಲಿಲ್ಲ. ಅವತ್ತಿಗೆ ಎಷ್ಟು ಬೇಕೋ ಅಷ್ಟನ್ನು ಮಾತ್ರ ಹಿಡಿಯುತ್ತಿದ್ದರು. ನಿಜ ಹೇಳಬೇಕೆಂದರೆ ಆ ಜನರಿಗೆ ಆಸೆಯಾಗಲಿ, ದುರಾಸೆಯಾಗಲಿ, ವಿಪರೀತದ ಮಹತ್ವಾಕಾಂಕ್ಷೆಯಾಗಲಿ, ದಿಢೀರನೆ ಎವರೆಸ್ಟ್ ಹತ್ತಿ ಸುದ್ದಿ ಮಾಡಬೇಕೆಂಬ ಹಪಾಹಪಿಯಾಗಲಿ ಇರಲಿಲ್ಲ. ಇವತ್ತು ಖುಷಿಯಿಂದ ಬದುಕೋಣ. ನಾಳೆಯನ್ನು ನಾಳೆಯೇ ನೋಡಿಕೊಳ್ಳೋಣ ಎಂದು ಅವರು ಮೊದಲೇ ನಿರ್ಧರಿಸಿರುತ್ತಿದ್ದರು. ಈ ಕಾರಣದಿಂದಲೇ ಅವರು ಖುಷಿಯಿಂದ, ಉಲ್ಲಾಸದಿಂದ ಬದುಕುತ್ತಿದ್ದರು.

ಸಂಕೋಚ, ನಾಚಿಕೆ ಮತ್ತು ಹಿಂಜರಿಕೆಯನ್ನು ಬದಿಗಿಟ್ಟು ಜೀವಿಸಲು ಶುರುಮಾಡಬೇಕು. ಆಗ ಕೂಡ ಒಂದೊಂದು ಕ್ಷಣವನ್ನೂ ಸಂಭ್ರಮದಿಂದ ಬದುಕಲು ಸಾಧ್ಯ. ಈ ಮಾತಿಗೆ ಉದಾಹರಣೆಯಾಗಿ ನಮ್ಮ ಅಜ್ಜಿಯ ಕಥೆ ಹೇಳಬೇಕು. ಈ ಅಜ್ಜಿಗೆ ಅದೊಮ್ಮೆ ಇದ್ದಕ್ಕಿದ್ದಂತೆ ಬಾತ್‌ರೂಂ ಡ್ಯಾನ್ಸ್ ಕಲಿವ ಉಮ್ಮೇದಿ ಬಂತು. ಆಗ ಅವಳ ವಯಸ್ಸು 88 ವರ್ಷ! ಆ ವಯಸ್ಸಿನಲ್ಲಿ ಡ್ಯಾನ್ಸ್ ಕಲಿಯಲು ಹೋದರೆ ಜನ ಆಡಿಕೊಳ್ಳುವುದಿಲ್ಲವೆ? ಅದೂ ಅಲ್ಲದೆ, ಸರಿಯಾಗಿ ನಡೆದಾಡಲೂ ಸಾಧ್ಯವಾಗದಂಥ ವಯಸ್ಸು ಅದು. ಡ್ಯಾನ್ಸ್ ಮಾಡುವಾಗ ಆಕಸ್ಮಿಕವಾಗಿ ಆಯತಪ್ಪಿ ಬಿದ್ದರೆ ಕಾಲಿನ ಮೂಳೆಯೇ `ಲಟಕ್’ ಎಂದುಬಿಡುತ್ತದೆ. ಇದೆಲ್ಲ ಗೊತ್ತಿದ್ದೂ ಅಜ್ಜಿ ಹಟ ಬಿಡಲಿಲ್ಲ. ಡ್ಯಾನ್ಸ್ ಕೋರ್ಸ್‌ಗೆ ಸೇರಿಕೊಂಡೇಬಿಟ್ಟಳು. ಮುಂದಿನ ವರ್ಷ ಡ್ಯಾನ್ಸ್ ಪರೀಕ್ಷೆ ತೆಗೆದುಕೊಂಡು ಪಾಸು ಮಾಡಿದಳು ಕೂಡ’. 90ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡ ಮರುದಿನವೇ `ಗಾಲ್ಫ್’ ಆಡಬೇಕಲ್ಲ ಎಂದು ಪಿಸುಗುಟ್ಟಿದಳು. ಅಷ್ಟೇ ಅಲ್ಲ, ಆ ಆಟವನ್ನು ಕಲಿತೂಬಿಟ್ಟಳು. ಮುಂದೆ 95ನೇ ವಯಸ್ಸಿಗೆ ಬಂದಾಗ- ಅದ್ಯಾರೋ ಪರಿಚಯದವರು- ಸ್ಟೀಫನ್ ಹಾಕಿನ್ಸ್‌ನ ಪುಸ್ತಕ A brief history of time [^] ತುಂಬಾ ಚೆನ್ನಾಗಿದೆ ಗೊತ್ತಾ ಎಂದರು. ಈ ಅಜ್ಜಿ ಒಂದೆರಡೇ ದಿನಗಳಲ್ಲಿ ಆ ಪುಸ್ತಕ ತರಿಸಿ ಕನ್ನಡಕ ಏರಿಸಿ ಓದಲು ಕೂತೇಬಿಟ್ಟಳು. ಅಷ್ಟೇ ಅಲ್ಲ, 99ನೇ ವಯಸ್ಸಿನಲ್ಲಿ ಸಾಯುವ ಮುನ್ನ ಈಕೆ ಪ್ರಪಂಚ ಪರ್ಯಟನೆಯನ್ನೂ ಮುಗಿಸಿದ್ದಳು. ಪ್ರತಿಯೊಂದು ಕ್ಷಣವನ್ನೂ ಉತ್ಕಟವಾಗಿ ಬದುಕಬೇಕು ಎಂಬುದೇ ಅವಳ ಆಸೆಯಾಗಿತ್ತು. ಈ ಆಸೆಯೇ ಅವಳನ್ನು 99 ವರ್ಷ ಬದುಕಿಸಿತು.

ಇದೇ ಮಾತನ್ನು ನನ್ನ ಹೆತ್ತವರ ಕುರಿತೂ ಹೇಳುತ್ತೇನೆ. ನನ್ನ ಹೆತ್ತವರಿಗೆ ಈಗಾಗಲೇ 80 ವರ್ಷ ತುಂಬಿದೆ. ಈ ಇಳಿವಯಸ್ಸಿನಲ್ಲೂ ಅವರು ವಿಮಾನ ಪ್ರಯಾಣಕ್ಕೆ ತುದಿಗಾಲಲ್ಲಿ ನಿಂತಿರುತ್ತಾರೆ. ಇಂತಿಂಥ ತಿಂಗಳು ಇಂತಿಂಥ ದೇಶಗಳಿಗೆ ಹೋಗಿ ಬರಬೇಕು ಎಂದೆಲ್ಲ ಪ್ಲಾನ್ ಹಾಕಿರುತ್ತಾರೆ. ನನ್ನ ವ್ಯವಹಾರ [^], ವಹಿವಾಟು, ನನ್ನ ಒಂದೊಂದೇ ಹುಚ್ಚು ಸಾಹಸಗಳನು ಗಮನಿಸುತಾರೆ. `ಚಿಯರ್’ ಎಂದು ಹೇಳಿ ಪ್ರೋತ್ಸಾಹಿಸುತ್ತಾರೆ. ಅದೊಮ್ಮೆ ಇಂಥದೇ ಹುಚ್ಚು ಅಲೆದಾಟದಲ್ಲಿ ಕಾಡಿನ ಮಧ್ಯೆ ನಾನು ಕಣ್ಮರೆಯಾಗಿದ್ದಾಗ ಈ 80ರ `ಹರೆಯ(?)’ದ ಅಪ್ಪ-ಅಮ್ಮ ನನ್ನನ್ನು ಹುಡುಕಿಕೊಂಡು ಬರಲು ಕಾಡಿಗೆ ಹೊರಟುನಿಂತಿದ್ದರು. ಅವರ ಉಲ್ಲಾಸದ ಜೀವನ ನೆನಪಾದರೆ ಸಾಕು, ನನ್ನ ಸಂಭ್ರಮ ನೂರುಪಟ್ಟು ಹೆಚ್ಚುತ್ತದೆ.

ಮನೆಯವರೊಂದಿಗೆ ನಾವು ಹೆಚ್ಚು ಸಮಯ ಕಳೆಯುವುದಿಲ್ಲ. ನಿಮಗೆ ಮನೆಮಂದಿಗಿಂತ ನಿಮ್ಮ ಕಂಪನಿಯೇ ಹೆಚ್ಚಾಗಿ ಹೋಗಿದೆ. ವರ್ಷದಲ್ಲಿ ಒಂದೆರಡು ತಿಂಗಳಾದರೂ ಈ ವ್ಯಾಪಾರ, ವ್ಯವಹಾರ, ಲಾಭ-ನಷ್ಟದ ಮಾತು ಬಿಟ್ಟು ಹಾಯಾಗಿ ಹರಟೆ ಹೊಡೆಯುತ್ತ ಬದುಕಲು ಸಾಧ್ಯವಿಲ್ಲವೆ? ಇದು ನನ್ನ ಹೆಂಡತಿಯ ಅನುದಿನದ ಪ್ರಶ್ನೆ. ಈ ಪ್ರಶ್ನೆಯನ್ನು ಅವಳು ಮೇಲಿಂದಮೇಲೆ ಕೇಳತೊಡಗಿದಾಗ ಅವಳ ವಾದದಲ್ಲೂ ಹುರುಳಿದೆ ಅನ್ನಿಸಿತು. ಪರಿಣಾಮವಾಗಿ, ದಕ್ಷಿಣ ಆಫ್ರಿಕಾದಲ್ಲಿ ಒಂದು ಮನೆ ಕಟ್ಟಿಸಿದೆ. ಕುಟುಂಬದವರೊಂದಿಗೆ ಅಲ್ಲಿದ್ದೆ. ಈ ಸಂದರ್ಭದಲ್ಲಿ ಮೊಬೈಲ್ ಅಥವಾ ಇ-ಮೇಲ್‌ಗೆ ಗಂಟುಬಿದ್ದರೆ- ಕಚೇರಿಯಲ್ಲಿ ಇದ್ದಂತೆಯೇ ಭಾಸವಾಗುತ್ತದೆ ಅನ್ನಿಸಿತು. ತಕ್ಷಣವೇ ಸ್ಯಾಟಲೈಟ್ ಫೋನ್‌ನ ಸಂಪರ್ಕ ಪಡೆದು, ಪ್ರತಿದಿನವೂ ಹದಿನೈದು ನಿಮಿಷದ ಅವಧಿಯನ್ನು ಆಫೀಸ್ ಕೆಲಸಕ್ಕೆ ಎಂದು ಮೀಸಲಿಟ್ಟೆ.

ಸಾವಿರಾರು ಕೋಟಿ ರೂಪಾಯಿ ವಹಿವಾಟಿನ ಕಂಪನಿ ನನ್ನದು. ಈ ವ್ಯವಹಾರವನ್ನೆಲ್ಲ ಗಮನಿಸಲು ಕೇವಲ ಹದಿನೈದು ನಿಮಿಷ ಸಾಕಾ ಎಂಬುದು ಹಲವರ ಪ್ರಶ್ನೆ. ಅದಕ್ಕೆ ನಾನು ಹೀಗೆ ಉತ್ತರಿಸುತ್ತೇನೆ. ಹದಿನೈದು ನಿಮಿಷ ಅಂದ್ರೆ ಸುಮ್ನೆ ಅಲ್ಲ ಸ್ವಾಮಿ, 900 ಸೆಕೆಂಡು! ಒಂದು ವಿಭಾಗದ ಮುಖ್ಯಸ್ಥನೊಂದಿಗೆ ಐದು ಸೆಕೆಂಡ್ ಮಾತು ಎಂದುಕೊಂಡರೂ ಹದಿನೈದು ನಿಮಿಷದಲ್ಲಿ 180 ಜನರೊಂದಿಗೆ ಮಾತಾಡಬಹುದು. ಇಷ್ಟು ಟೈಂ ಸಾಕಾಗಲ್ಲ ಅಂದ್ರೆ ಹೇಗೆ?

ನಿಮ್ಮ ಯಶಸ್ಸಿನ ಗುಟ್ಟೇನು ಎಂಬ ಪ್ರಶ್ನೆಯನ್ನು ಈಗಲೂ ನನಗೆ ಹಲವರು ಕೇಳುತ್ತಾರೆ. ನನ್ನ ಉತ್ತರ ಇಷ್ಟೆ- ಯಾವ ಸಂದರ್ಭದಲ್ಲೂ ನಾನು ಯೋಚಿಸುವುದನ್ನು, ಅದೂ ಪಾಸಿಟಿವ್ ಆಗಿ ಯೋಚಿಸುವುದನ್ನು ನಿಲ್ಲಿಸುವುದಿಲ್ಲ. ನಾನು ಕಾಫಿ ಹೀರುವಾಗ, ಸ್ನಾನ ಮಾಡುವಾಗ, ಊಟ ಮಾಡುವಾಗ, ಕಚೇರಿಗೆ ಹೋಗುವಾಗ ಕೂಡ ನನ್ನ ಮಿದುಳು ಏನನ್ನೋ ಯೋಚಿಸುತ್ತಿರುತ್ತದೆ. ದೀರ್ಘಾವಧಿ ಕಾಲ ನಿದ್ರೆ ಮಾಡುತ್ತ ಕಳೆದರೆ, ಸೋಮಾರಿಯಾಗಿಬಿಡುವ ಭಯ ನನ್ನದು. ಜತೆಗೆ ಗಾಢ ನಿದ್ರೆಯ ಸಂದರ್ಭದಲ್ಲಿ ನನ್ನ ಮಿದುಳು ಯೋಚಿಸುವುದನ್ನೇ ಮರೆತುಬಿಡುತ್ತದೆ ಎಂಬ ಆತಂಕ ಕೂಡ ನನ್ನದು. ಹಾಗಾಗಿ ಒಂದೆರಡು ಗಂಟೆಗಳಲ್ಲೇ ನಿದ್ರೆ ಮುಗಿಸುವುದನ್ನು ಅಭ್ಯಾಸ [^] ಮಾಡಿಕೊಂಡಿದ್ದೇನೆ. ಅರ್ಧಗಂಟೆಯ ಕಾಲ ಕೂತಲ್ಲಿಯೇ ನಿದ್ದೆ ಹೊಡೆಯುವ ಕಲೆಗಾರಿಕೆ ಕೂಡ ಸಿದ್ಧಿಸಿದೆ. ಹೀಗೆ ಹತ್ತಿಪ್ಪತ್ತು ನಿಮಿಷ ಕೂತಲ್ಲೇ ನಿದ್ದೆ ಹೊಡೆಯುವ ಕಲೆ ಇಂಗ್ಲೆಂಡಿನ ಮಾರ್ಗರೇಟ್ ಥ್ಯಾಚರ್ ಹಾಗೂ ವಿನ್‌ಸ್ಟನ್ ಚರ್ಚಿಲ್‌ಗೂ ಇತ್ತಂತೆ!

ನನ್ನ ಮಾತಿನ ಒಟ್ಟು ಅರ್ಥ ಇಷ್ಟೆ: ‘ಪ್ರತಿಯೊಂದು ದಿನವನ್ನೂ `ಇವತ್ತೇ ಕಡೆಯ ದಿನ’ ಎಂಬಂತೆ ಬದುಕಿಬಿಡಬೇಕು. ಆದರೆ, ಆ ಬದುಕಲ್ಲಿ ಅವಸರವಿರಬಾರದು. ಒಂದು ಗುರಿ ಸಾಧನೆಯ ಹಿಂದೆ ಸೇಡಿರಬಾರದು. ದ್ವೇಷ ಇರಬಾರದು. ಯಾರನ್ನೇ ಹಣಿಯುವ ದುರುದ್ದೇಶ ಇರಬಾರದು. ಒಂದು ಕಷ್ಟ ಎದುರಾದಾಗ ಎದೆಗುಂದುವ ಮನಸ್ಸಿರಬಾರದು. ಬದಲಿಗೆ, ಪ್ರತಿಯೊಂದು ಸಮಸ್ಯೆಗೆ ಪರಿಹಾರವಿದ್ದೇ ಇದೆ. ಅದು ನಮ್ಮ ಕಣ್ಮುಂದೆಯೇ ಇದೆ ಎಂಬ ಭಾವ ನಮ್ಮ ಉಸಿರಾಗಿ, ನೆರಳಾಗಿ ಇರಬೇಕು’.

ಸ್ಪೇನ್‌ನ ಹೆಸರಾಂತ ಚಿತ್ರಕಾರ ಸಾಲ್ವಡಾರ್ ಡಾಲಿಯ ಹೆಸರನ್ನು ನೀವು ಕೇಳಿರಬಹುದು. ಸಂಕಟವಾದಾಗ, ಬೇಸರವಾದಾಗ, ಯಾವುದೋ ಒಂದು ಕೆಲಸದಲ್ಲಿ ವಿಫಲವಾದಾಗ ಈ ಡಾಲಿ ಸೀದಾ ತನ್ನ ತೋಟಕ್ಕೆ ಬರುತ್ತಿದ್ದ. ಅಲ್ಲಿ ಸಮಾಧಾನದಿಂದ ಅಡ್ಡಾಡುತ್ತಿದ್ದ. ಸೂರ್ಯನ ಕಿರಣಗಳಿಗೆ ಮೈಯೊಡ್ಡಿ ನಿಲ್ಲುತ್ತಿದ್ದ. ತೋಟದಲ್ಲಿ ಆಗಷ್ಟೇ ಚಿಗುರುತ್ತಿದ್ದ ಹಣ್ಣನ್ನು ಕಿತ್ತು ರುಚಿ ನೋಡುತ್ತಿದ್ದ. ಈವರೆಗೂ ಕಳೆದುಹೋದ ಕ್ಷಣಗಳು ಎಂದೆಂದೂ ಮರಳಿ ಬರುವುದಿಲ್ಲ. ಹಾಗಂತ ಕಳೆದುಹೋದ ಕ್ಷಣಗಳಿಗಾಗಿ, ಆಗಿಹೋದ ತಪ್ಪುಗಳಿಗಾಗಿ ಚಿಂತಿಸುವುದರಲ್ಲಿ ಅರ್ಥವಿಲ್ಲ. ನನ್ನ ಹೊಸ ಕೆಲಸ, ಹೊಸ ಸಾಹಸ ಈ ಕ್ಷಣದಿಂದಲೇ ಶುರುವಾಗುತ್ತದೆ. ಅದು ಮುಗಿಯಲು ಆರು ತಿಂಗಳಾಗಬಹುದು, ವರ್ಷವೂ ಆಗಬಹುದು. ಆದರೆ ಅಷ್ಟೂ ಸಮಯವನ್ನು ನಾನು ಎಂಜಾಯ್ ಮಾಡುತ್ತೇನೆ ಎನ್ನುತ್ತಿದ್ದ. ಸಾಲ್ವಡಾರ್ ಡಾಲಿ ಹೇಳಿದನಲ್ಲ? ಆ ಮಾತನ್ನೇ ನಾನೂ ಹೇಳುತ್ತೇನೆ. ನನ್ನ ಪಾಲಿಗೆ ಬದುಕೆಂಬುದು ಸಾವಿರ ವಿಸ್ಮಯಗಳ, ಸಾವಿರ ತಿರುವುಗಳ ಸಂತೆ. ನಾನು ಪ್ರತಿಯೊಂದು ತಿರುವನ್ನೂ ಬೆರಗಿನಿಂದಲೇ ನೋಡಲು ಆಸೆಪಡುತ್ತೇನೆ. ಹಾಗೆಯೇ ಬದುಕುತ್ತಿದ್ದೇನೆ.

ನನ್ನ ಸುತ್ತಮುತ್ತಲೇ ಇರುವ ಕೆಲವರು ಹೀಗೆ ಯೋಚಿಸುವುದೇ ಇಲ್ಲ. ಅವರೆಲ್ಲ ಲಾಟರೀಲಿ ಹಣ ಗೆದ್ದಂತೆ ರಾತ್ರೋ ರಾತ್ರಿ ಶ್ರೀಮಂತನಾಗಬೇಕು ಅನ್ನುತ್ತಾರೆ. ಜಾದೂಗಾರನ ಥರಾ ಮತ್ತೇನನ್ನೋ ಸೃಷ್ಟಿಸಬೇಕು ಅನ್ನುತ್ತಾರೆ. ಅಂಥವರಿಗೆ ನಾನು ಹೇಳುವುದಿಷ್ಟೆ: ದಿಢೀರನೆ ಬಂದ ಹಣ ಹಾಗೂ ಪರಿಶ್ರಮವಿಲ್ಲದೆ ಸೃಷ್ಟಿಸಿದ ಕಂಪನಿ ಹೆಚ್ಚು ದಿನ ಉಳಿಯುವುದಿಲ್ಲ. ಹಾಗಾಗಿ, ಅಂಥವುಗಳ ಬಗ್ಗೆ ಮಾತಾಡುವುದಿರಲಿ, ಯೋಚಿಸುವುದಕ್ಕೂ ನನಗೆ ಇಷ್ಟವಿಲ್ಲ. ಸಮಯವೂ ಇಲ್ಲ. ನನ್ನಲ್ಲಿ ಮಾತ್ರ ನನಗೆ ನಂಬಿಕೆ.

Advertisements

About sujankumarshetty

kadik helthi akka

Posted on ಅಕ್ಟೋಬರ್ 17, 2010, in "ಇ-ಲೋಕ" ಲೇಖನಗಳ “ಕನ್ನಡಲೋಕ”, ವಿಶ್ವೇಶ್ವರ ಭಟ್ - ನೂರೆಂಟುಮಾತು and tagged . Bookmark the permalink. ನಿಮ್ಮ ಟಿಪ್ಪಣಿ ಬರೆಯಿರಿ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: