ಕುದಿಯುವ ಬಯಕೆ ಎಂಬುದಿಲ್ಲದಿದ್ದರೆ ಬೆಟ್ಟ ಹತ್ತಲಾಗದು

Should sexual act be planned in advance?
“ಬಯಕೆ, ಬರುವುದರ ಕಣ್ಸನ್ನೆ ಕಾಣೋ…” ಅಂತ ಬರೆದವರು ಕನ್ನಡದ ಶ್ರೇಷ್ಠ ಕವಿಗಳಲ್ಲಿ ಒಬ್ಬರಾದ ಮಧುರ ಚೆನ್ನ. ಅನೇಕರಿಗೆ ಗೊತ್ತಿರಲಿಕ್ಕಿಲ್ಲ, ಮಧುರ ಚೆನ್ನರ ಎಂಟನೇ ಮಗಳು ಡಾ. ಸೂರ್ಯಮುಖಿ ಅವರು ಬೆಂಗಳೂರಿನ ಪೊಲೀಸ್ ಕಮಿಷನರ್ ಶಂಕರ ಬಿದರಿ ಅವರ ಪತ್ನಿ. ಮಧುರ ಚೆನ್ನರನ್ನು ನಾನು ಪ್ರತೀಸಲ defeat ಆದಾಗ, ವಿಷಣ್ಣನಾದಾಗ ಒಬ್ಬನೇ ಕುಳಿತು ಓದುತ್ತೇನೆ. ‘ನನ್ನ ನಲ್ಲ’ ಅತ್ಯುತ್ತಮ ಕೃತಿ. ಅದರಲ್ಲಿನ ದೇವರು, ಧರ್ಮ ಶ್ರದ್ಧೆ ಬೇರೆಯವೇ ಸಂಗತಿಗಳು. ನಾನು ಮಧುರ ಚೆನ್ನರಲ್ಲಿ ಇಷ್ಟಪಡುವುದು ಅವರಿಗೆ ದಕ್ಕಿದ ಅನುಭಾವ.

ಇದು ಮೊನ್ನೆ ನೆನಪಾದದ್ದು ಅಮೆರಿಕದ ಹನಿ ಮಿಲೆತ್ ಸ್ಕಿ ಎಂಬಾಕೆಯ ನೂತನ ಸಿದ್ಧಾಂತದ ಬಗ್ಗೆ ಇಂಟರ್ನೆಟ್ ನಲ್ಲಿ ಓದತೊಡಗಿದಾಗ. ಆಕೆ ಅಲ್ಲಿ ಸೆಕ್ಸ್ ಥೆರಪಿಸ್ಟ್. ಗಂಡ-ಹೆಂಡಿರು ತಮ್ಮ ಮಿಲನ ಮಹೋತ್ಸವವನ್ನು ಮೊದಲೇ ಪ್ಲಾನ್ ಮಾಡಿಕೊಂಡಿರುವುದು ಅತ್ಯಗತ್ಯ ಎಂಬ ನೂತನ ಸಿದ್ಧಾಂತ ಆಕೆಯದು. ಇದೆಲ್ಲಿಯ ಮಾತು? ಗಂಡು-ಹೆಣ್ಣಿನ ಸಮಾಗಮವೆಂಬುದು ಟೈಮ್ ಟೈಬಲ್ ನ ಪ್ರಕಾರ ನಡೆಯಲು ಸಾಧ್ಯವೆ? ಕೆಲವರ ಪಾಲಿಗೆ ಅದು ದೈವ ನಿರ್ಣಯ. “ಹುಟ್ಟಿಸಿದ ದೇವರು…” ಅಂತ ಅನ್ನುವುದರಲ್ಲೇ ಅವರು ಮಿಲನ ಮಹೋತ್ಸವವನ್ನು ದೈವಿಕವೆಂಬುದು ನಂಬಿರುವುದನ್ನು ತೋರಿಸುತ್ತಾರೆ. ಇನ್ನುಳಿದವರ ಪಾಲಿಗೆ, ಸಮಾಗಮವೆಂಬುದು ‘ಆ ಕ್ಷಣದ ಸತ್ಯ’. ಕಲ್ಲು ಕರಗುವ ಸಮಯ ಯಾವುದು ಎಂಬುದನ್ನು ಮೊದಲೇ ಹೇಳುವುದಾದರೂ ಹೇಗೆ? ಹಂಬಲ ಬಲವಾದಾಗ, ಏಕಾಂತ ದೊರಕಿದಾಕ, ಮಗು ಮಲಗಿದಾಗ, ಜಗಳ ಬಗೆಹರಿದಾಗ – ಹೀಗೆ ಹಲವಾರು ಮುಹೂರ್ತಗಳು ಬದುಕಿನ ಆ ದಿವ್ಯ ಸಂತೋಷವನ್ನು ಕರುಣಿಸುತ್ತದೆ. ಆದರೆ ಅದನ್ನು ಮೊದಲೇ ಪ್ಲಾನ್ ಮಾಡಿಕೊಳ್ಳುವುದು ಹೇಗೆ? ಅದೇನು ವೈದ್ಯರೊಂದಿಗಿನ ಅಪಾಯಿಂಟ್ ಮೆಂಟಾ? ಬೋರ್ಡ್ ಮೀಟಿಂಗಾ? ಅಂತ ಅನೇಕರು ತಳ್ಳಿ ಹಾಕಿಬಿಡಬಹುದು. ಆದರೆ ಸೆಕ್ಸ್ ಥೆರಪಿಸ್ಟ್ ಹನಿ, ಹೇಳುವುದೇ ಬೇರೆ.

ಸಿದ್ದನಿಗೆ ಎದ್ದದ್ದೇ ಹೊತ್ತು ಎಂಬಂತೆ sporadic ಆಗಿ ಮಿಲನ ಮಹೋತ್ಸವಕ್ಕೆ ಮುಗಿ ಬೀಳಬೇಡಿ. ಅದರಲ್ಲಿ ಸಿಕ್ಕುವ ಆನಂದ ಕಳಪೆಯಾದದ್ದು. ಅದರ ಬದಲಿಗೆ ಪ್ಲಾನ್ ಮಾಡಿಕೊಳ್ಳಿ. ಲೈಂಗಿಕ ಜೀವನವನ್ನು ಇನ್ನಷ್ಟು ವ್ಯವಸ್ಥಿತ ರೀತಿಯಲ್ಲಿ ಆನಂದಿಸಿ. ಏಕೆಂದರೆ, ನಮ್ಮ ಬದುಕಿನಲ್ಲಿ ಉಳಿದದ್ದೆಲ್ಲವೂ ಬದಲಾಗಿದೆ. ಇಬ್ಬರೂ ದುಡಿಯಬೇಕು. ಇಬ್ಬರಿಗೂ ಮನೆಯ ಹೊರಗೆ ಟಿನ್ಷನ್ನು, ಗೊಂದಲ, ಜವಾಬ್ದಾರಿ. ಮಕ್ಕಳನ್ನು ನೋಡಿಕೊಳ್ಳಲಿಕ್ಕೆ ಮೊದಲಿನಂತೆ ಮನೆಯಲ್ಲಿ ಅಜ್ಜ-ಅಜ್ಜಿಯರಿರುವುದಿಲ್ಲ. ಈ ತೆರನಾದ ಬದುಕು ಎಷ್ಟು ಹೈರಾಣ ಮಾಡುತ್ತದೆಯೆಂದರೆ, ದಂಪತಿಗಳಿಗೆ ಏಕಾಂತವೇ ಸಿಗುವುದಿಲ್ಲ. ಸಿಕ್ಕರೂ ಅದನ್ನು ಸವಿಯುವ ಮನಸ್ಥಿತಿ ಇರುವುದಿಲ್ಲ. ಹೀಗಾಗಿ, ನಿಮ್ಮ quality time ಅಥವಾ ಅತ್ಯುತ್ತಮ ಘಳಿಗೆಗಳೇನಿವೆ ಅವುಗಳ್ನು ನಿಮ್ಮ ಸಂಗಾತಿಯೊಂದಿಗೆ ಕಳೆಯಲು ನಿರ್ಧರಿಸಿ. ಅಂಥ ಟೈಮು ಯಾವಾಗ ಸಿಗುತ್ತದೆಯೆಂಬುದನ್ನು ನೋಡಿಕೊಂಡು, ಕ್ಯಾಂಲೆಂಡರಿನಲ್ಲಿ ಚಿಕ್ಕದಾಗಿ ಗುರುತು ಹಾಕಿಕೊಳ್ಳಿ. ಇಂಥ ಅಮೃತ ಘಳಿಗೆಗಳಲ್ಲಿ ಕೇವಲ ದೈಹಿಕ ಅನುಸಂಧಾನವೇ ಆಗಬೇಕು ಅಂತಲ್ಲ. ಆಪ್ತ ಮಾತು, ಒಂದು long walk ಕೂಡ ಆಗಬಹುದು. ಹಿತವಾದ ಸಮಯವನ್ನು ಒಟ್ಟಿಗೆ ಕಳೆಯಬೇಕು.

ಹಾಗಂತ ಸಲಹೆ ನೀಡುವ ಹನಿ, ಮತ್ತೊಂದು ಹೊಸ ಸಂಗತಿ ಹೇಳುತ್ತಾಳೆ. ನೀವು ಯಾವ ದಿವಸ, ಯಾವ ತಾರೀಕಿನಂದು ಒಟ್ಟಿಗಿರಲು ನಿರ್ಧರಿಸುತ್ತೀರೋ, ಅವತ್ತು ಏನನ್ನು ಅನುಭವಿಸಬೇಕೆಂದಿದ್ದೀರಿ ಎಂಬುದನ್ನು ಟಿಪ್ಪಣಿ ಮಾಡಿಕೊಳ್ಳಿ ಅನ್ನುತ್ತಾಳೆ. ಹಾಗೆ ಇಬ್ಬರೂ ಯೋಚಿಸುವ, ಟಿಪ್ಪಣಿ ಮಾಡಿಕೊಳ್ಳುವ ಮತ್ತು ಪರಸ್ಪರ ಚರ್ಚಿಸುವ ಮೂಲಕ ಇಬ್ಬರೂ ಆ ಬಗ್ಗೆ ಕುತೂಹಲಿಗಳಾಗುತ್ತೀರಿ. ನಿಮ್ಮಲ್ಲಿ ಹೊಸ ಆಸಕ್ತಿ ಮೂಡುತ್ತದೆ ಅನ್ನುತ್ತಾಳೆ.

ಮುಕ್ತ ಮಿಲನ ಮಹೋತ್ಸವದ ಬಗ್ಗೆ ಸುಮ್ಮನೆ ಯೋಚಿಸುವುದೇ ವ್ಯಕ್ತಿಗಳಲ್ಲಿ ಸಂತೋಷವನ್ನುಂಟು ಮಾಡುತ್ತದೆ. ಇದು ಕೇವಲ ಮನಸ್ಸಿನ ಸಂಗತಿಗಳಲ್ಲ. ದೇಹದಲ್ಲೂ ರಾಸಾಯನಿಕ ಬದಲಾವಣೆಗಳಾಗುತ್ತವೆ. ಉತ್ಸಾಹದ ಕೆಮಿಕಲ್ ಗಳು ರಕ್ತಕ್ಕೆ ಸೇರಿಕೊಡು ಆರೋಗ್ಯಕರ ರಕ್ತ ಸಂಚಾರವಾಗುತ್ತದೆ ಅನ್ನುತ್ತಾಳೆ.

ಆಗಲೇ ಮಧುರ ಚೆನ್ನರ ಕವಿತೆ ಸಾಲು ನೆನಪಾದದ್ದು. ಬಯಕೆ ಎಂಬುದು ಕೇವಲ ನಮ್ಮ ಹುಸಿ ಕಲ್ಪನೆಯಲ್ಲ. ಅದು ಬರುವುದರ ಕಣ್ಸನ್ನೆ ಅನ್ನುತ್ತಾರೆ ಮಧುರ ಚೆನ್ನ. ಅಂಥದೊಂದು ಭಾಗ್ಯ, ತಾನು ಬರುವುದಕ್ಕೆ ಮುಂಚೆಯೇ ನಮ್ಮಲ್ಲೊಂದು ಬಯಕೆ ಉಂಟುಮಾಡುತ್ತದೆ ಎಂಬುದು ಅವರ ಆಶಯ. May be, ಅವರು ಅನುಭಾವಿಗಳಾದ್ದರಿಂದ ಈ ವಿಷಯವನ್ನು ಆಧ್ಯಾತ್ಮಿಕ ನೆಲೆಯ್ಲಿ ಪ್ರಸ್ತಾಪಿಸಿರಬಹುದು. ಸೆಕ್ಸ್ ಥೆರಪಿಸ್ಟ್ ಆದ ಹನಿ ಮಿಲೆತ್ ಸ್ಕಿ ಈ ಮಾತನ್ನು ಮಿಲನ ಮಹೋತ್ಸವಕ್ಕೆ ಸಂಬಂಧಿಸಿದಂತೆ ಅಂದಿರಬಹುದು. ಆದರೆ ಮಧುರ ಚೆನ್ನರ ಮಾತನ್ನು ನಾನು ಬದುಕಿನ ಪ್ರತಿ ಸಾಧನೆಗೂ ಅನ್ವಯಿಸಿಕೊಂಡು ನೋಡುತ್ತೇನೆ.

ನನ್ನ ಪಾಲಿಗೆ ಯಶಸ್ಸು ಸುಮ್ಮನೆ ಬಂದದ್ದಲ್ಲ. ಹುಟ್ಟು, ಮನೆತನ, ಜಾತಿ, ಇನ್ ಫ್ಲುಯೆನ್ಸು, ಕನೆಕ್ಷನ್ನು ಇವ್ಯಾವವೂ ಅದಕ್ಕೆ ಕಾರಣವಾಗಲಿಲ್ಲ. ಯಾವ ಜ್ಯೋತಿಷಿಯೂ ನನಗೆ ಇದರ ಸುಳಿವು ಕೊಡಲಿಲ್ಲ. ಮೂವತ್ತಾರು ವರ್ಷ ನನ್ನನ್ನು ಗರತಿಪ್ಪಾಳೆ ಆಡಿಸಿ, ಊರೂರು, ಬೀದಿಬೀದಿ ಅಲೆಸಿ, ಯಾವುದೂ ಪುಗಸಟ್ಟೆ ಸಿಗಲ್ಲ ಕಣಯ್ಯಾ ಅತ ಖಡಾ ಖಂಡಿತವಾಗಿ ಹೇಳಿ ಕಡೆಗೆ ಒಲಿದ ಮಹಾ ಸುಂದರಿ, ಯಶಸ್ಸು. ‘ಇವರಿಗೆ ಸರಸ್ವತಿ ಒಲಿದಿದ್ದಾಳೆ’ ಅಂತ ಯಾರೋ ನನ್ನನ್ನು ಪರಿಚಯಿಸುತ್ತಾ ವೇದಿಕೆಯಲ್ಲಿ ಹೇಳಿದಾಗ, ‘ಯಾರದು ಸರಸ್ವತಿ?’ ಅಂತ ತಕರಾರು ತೆಗೆದಿದ್ದೆ. ಆದರೆ ನೂರಾರು ವೈಫಲ್ಯಗಳ, ಸೋಲುಗಳ, ನಿರಾಸೆ ಅವಮಾನಗಳ ನಂತರ ನನ್ನಲ್ಲೊಂದು burning desire ಶುರುವಾಯಿತಲ್ಲ? ಅದು ಮಹಾ ಬಯಕೆ. ಮಧುರ ಚೆನ್ನರ ಮಾತು ನಿಜವಾದದ್ದೇ ಅಲ್ಲಿ. ಅದು ಬರುವುದರ ಕಣ್ಸನ್ನೆಯಾಗಿತ್ತು.

ಅಂಥದೊಂದು desire ನಿಮ್ಮಲ್ಲಿ ಕುದಿಯದೆ ಹೋದರೆ ನೀವು ಏನನ್ನೂ ಸಾಧಿಸಲಾರಿರಿ. ಇದ್ದಕ್ಕಿದ್ದಂತೆ ಕೋಟ್ಯಧೀಶರಾದವರ ಮಾತು ಬಿಟ್ಟುಬಿಡಿ. ಅದು ಯೋರೋ ಕೆಲವರ ವಿಷಯದಲ್ಲಿ ಸತ್ಯವಾಗಿರಬಹುದು. ಅಂಥವರು ದೇವರು-ಅದೃಷ್ಟ ಮುಂತಾದವುಗಳನ್ನು ನಂಬಿದರೆ ನಂಬಿಕೊಳ್ಳಲಿ. ಆದರೆ ಈ ಜಗತ್ತಿನಲ್ಲಿ ಯಶಸ್ಸಿನ ಬೆಟ್ಟ ಹತ್ತಿ ನಿಂತವರೆಲ್ಲರನ್ನೂ ಒಮ್ಮೆ ನೋಡಿ. ಅವರನ್ನೇ ಕೇಳೆ. ಅವರು ಅಂಥದೊಂದು burning desire ಇಟ್ಟುಕೊಂಡೇ ಆ ಬೆಟ್ಟದ ಪ್ರತಿ ಮೆಟ್ಟಿಲೂ ಹತ್ತಿದ್ದಾರೆ. ಅವರಿಗೆ ಅದೇ ಇಂಧನ. ಅದೇ ಊರುಗೋಲು. ಯಶಸ್ಸು ಅವರನ್ನು ಸುಮ್ಮನೇ ಕರೆಯಲಿಲ್ಲ. ಬಯಕೆಯ ಕಿಚ್ಚು ಹೊತ್ತಿಸಿ, ಅದಕ್ಕಾಗಿ ಚಡಪಡಿಸುವಂತೆ ಮಾಡಿ, ಕೆಲಸಕ್ಕೆ ಹಚ್ಚಿಸಿದ ನಂತರವೇ ಬೆಟ್ಟದ ತುದಿಗೆ ಒಯ್ದು ತಲುಪಿಸಿದ್ದು. ಬಯಕೆ ಎಂಬುದು ಎಂಥವನನ್ನೂ ಧೀರನನ್ನಾಗಿ, ಶೂರನನ್ನಾಗಿ, ಶಕ್ತಿವಂತನನ್ನಾಗಿ ಮಾಡಿಬಿಡುತ್ತದೆ. ನೆಗೆಟಿವ್ ಆದ ಬಯಕೆಗಳು ಅನೇಕರನ್ನು ಹುಂಬರನ್ನಾಗಿ, ವ್ಯರ್ಥ ಸಾಹಸಿಗಳನ್ನಾಗಿ ಮಾಡಿರುವುದು ನಿಜ. ಹತ್ತೇ ಹತ್ತು ಓಟು ತಂದುಕೊಳ್ಳಲಾಗದವರು ಪಾರ್ಲಿಮೆಂಟ್ ಚುನಾವಣೆಗೆ ನಿಂತದ್ದನ್ನು ನೋಡಿದ್ದೇನೆ. ಪಕ್ಷ ಕಟ್ಟಿದ್ದನ್ನು ನೋಡಿದ್ದೇನೆ. ಅವು ವ್ಯರ್ಥ ಬಯಕೆಗಳು.

ಆದರೆ ಪಾಸಿಟಿವ್ ಅದೊಂದು ಬಯಕೆ ಇಟ್ಟುಕೊಂಡು ಹೊರಟು ನೋಡಿ. ಗೆಲುವು ಕೈಚಾಚಿ ಕರೆದುಕೊಳ್ಳುತ್ತದೆ. ಯಾವ ಬೆಟ್ಟವೂ ಹತ್ತಲಾಗದಷ್ಟು ಅಗಾಧವಲ್ಲ. ಆದರೆ ಪ್ರತಿ ಮೆಟ್ಟಿಲೂ ನೀವೇ ಹತ್ತಬೇಕು. ಅಂಥದೊಂದು ಬಯಕೆ ನಿಮ್ಮಲ್ಲಿ ಕುದಿಯಬೇಕು.

Advertisements

About sujankumarshetty

kadik helthi akka

Posted on ಅಕ್ಟೋಬರ್ 17, 2010, in "ಇ-ಲೋಕ" ಲೇಖನಗಳ “ಕನ್ನಡಲೋಕ”, ರವಿ ಬೆಳಗೆರೆ - ಸೂರ್ಯ ಶಿಕಾರಿ and tagged . Bookmark the permalink. ನಿಮ್ಮ ಟಿಪ್ಪಣಿ ಬರೆಯಿರಿ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: