ಕೆಲಸದಲ್ಲಿ ಮಜ ಕಂಡುಕೊಳ್ಳುವುದು ತಿಳಿದರೆ…

Virgin airways of Richard Bransonನೀವು ರಜಾದಿನವಾಗಿ ಕಳೆಯುತ್ತಿರುವ ಒಂದು ಶುಭ್ರ ಮುಂಜಾನೆಯೇ ನಿಮಗೆ ಏನನ್ನೋ ಹುಡುಕಿಕೊಟ್ಟು ಬಿಡಬಹುದು. ಇದನ್ನು ಯಾಕೆ ಹೇಳುತ್ತಿದ್ದೀನಿ ಅಂದರೆ, ನನ್ನ ಪಾಲಿಗೆ ಸ್ವಂತ ಏರ್ ಲೈನ್ ಹಾಗೂ ದ್ವೀಪ ಒಲಿದಿದ್ದು ರಜಾದಿನದ ಉಲ್ಲಾಸದ ಸಮಯದಲ್ಲೇ. 1976ರ ಅವಧಿಯಲ್ಲಿ ನಾನು `ವರ್ಜಿನ್ ಮ್ಯೂಸಿಕ್’ ಕಟ್ಟುವುದರಲ್ಲಿ ವ್ಯಸ್ತನಾಗಿದ್ದೆ. 1973ರಲ್ಲಿ ಬೇರೊಂದು ಕಂಪನಿ ಜತೆ ಸೇರಿಕೊಂಡು ಪಡೆದ ಯಶಸ್ಸು ಬೆನ್ನಿಗಿದ್ದದ್ದು ವಿಶ್ವಾಸ ನೀಡಿತ್ತು. ಆದರೂ ಕೆಲವೇ ಜನ ಸೇರಿಕೊಂಡು ರೂಪಿಸಿದ್ದ ಇದನ್ನು ಅಗ್ರಸ್ಥಾನಕ್ಕೆ ಏರಿಸುವುದು ಸುಲಭದ ಮಾತೇನೂ ಆಗಿರಲಿಲ್ಲ. ಟಿವಿ ಶೋ ಒಂದನ್ನು ನಡೆಸುತ್ತಿದ್ದ ಜಾನ್ ಪೀಲ್‌ಗೆ ನಮ್ಮ ಆಲ್ಬಂ ಅನ್ನು ಬಳಸಿಕೊಳ್ಳಲು ವಿನಂತಿಸಿದೆವು. ಅದು ಪ್ರಸಾರವಾಗುತ್ತಿದ್ದಂತೆ ಮಾರುಕಟ್ಟೆಯಲ್ಲಿ ಬೇಡಿಕೆ ಕುದುರಿತು. ಆಲ್ಬಂನ ವಿಡಿಯೋ ಪ್ರತಿಯನ್ನು ಪ್ರಸಾರ ಮಾಡುತ್ತಿದ್ದಂತೆ ಮಾರಾಟ ಮುಗಿಲು ಮುಟ್ಟಿತು. ಹೊಸ ಪ್ರತಿಭೆಗಳನ್ನು ಬಳಸಿಕೊಳ್ಳುತ್ತ ನಾವು ಮುನ್ನುಗ್ಗಿದೆವು.

ಅಷ್ಟಾಗಿ, 1977ರ ವೇಳೆಗೆ ನನಗೊಂದು ವಿರಾಮ ಬೇಕಾಯಿತು. ಗೆಳತಿ ಜೋನ್ ಜತೆ ನನ್ನ ಸಂಬಂಧ ಹದಗೆಡುತ್ತಿತ್ತು. ಸಂಗೀತ, ಸೂರ್ಯನ ಹೂ ಬಿಸಿಲು ಹಾಗೂ ಸಮುದ್ರ ತೀರ ನನಗೆ ಸಾಂತ್ವನ ನೀಡುವ ಅಂಶಗಳಾಗಿದ್ದವು. ಲಂಡನ್‌ನಿಂದ ಹೊರಗೆ ಹೋಗುವುದು ನನಗೆ ಹೊಸ ಹೊಸ ಐಡಿಯಾಗಳ ಗರ್ಭ ಧರಿಸುವ ಅವಕಾಶ ಮಾಡಿಕೊಡುತ್ತದೆ. ರಜಾಕ್ಕಾಗಿ ನಾನು ಹೋಗಿ ಇಳಿದಿದ್ದು ಜಮೈಕಾದ ಕಡಲ ತೀರದಲ್ಲಿ. ಬೀಚ್‌ನಲ್ಲಿ ಮೈಚೆಲ್ಲಿ ಕುಳಿತಿದ್ದ ನನಗೆ ಹೊಸ ಬಗೆಯ ಸಂಗೀತವೊಂದು ಕಿವಿಗೆ ಬಡಿಯಿತು. ಸ್ಥಳೀಯ ಡಿಜೆಗಳು ಹಾಗೂ ರೆಡಿಯೋ ಜಾಕಿಗಳು ರೂಪಿಸಿದ್ದ ಸಂಗೀತವಾಗಿತ್ತದು. ಕೂಡಲೇ ಆ ಸಂಗೀತಗಳನ್ನು ನಾನು ಅವರಿಗೆ ಹಣ ಸುರಿದು ಬಾಚಿಕೊಂಡೆ. ಆ ರೆಕಾರ್ಡ್‌ಗಳನ್ನು ನಾವು ಭರ್ಜರಿಯಾಗಿ ಮಾರಿದೆವು. ಮಜವಾಗಿ, ಮುದವಾಗಿರಿ- ಹಣ ಹುಡುಕಿಕೊಂಡು ಬರುತ್ತದೆ ಎಂಬ ನನ್ನ ನಂಬಿಕೆಗೆ ಉತ್ತಮ ಉದಾಹರಣೆ ಇದು.

ಜಮೈಕಾದಲ್ಲಿದ್ದಾಗಲೇ ನನಗೊಂದು ಕರೆ ಬಂತು. ಅತ್ತಲಿಂದ ಮಾತಾಡುತ್ತಿದ್ದವಳು ಗೆಳತಿ ಜೋನ್. `ನ್ಯೂಯಾರ್ಕ್‌ನಲ್ಲಿ ಭೇಟಿ ಯಾಗ್ತೀಯಾ?’ ಆಕೆ ಕೇಳಿದಳು. ನ್ಯೂಯಾರ್ಕ್‌ನಲ್ಲಿ ನಾವಿಬ್ಬರೂ ಮಜವಾಗಿ ಕಾಲ ಕಳೆಯುತ್ತಿದ್ದೆವಾದರೂ ಫೋನ್ ಕರೆಗಳಿಂದ ತಪ್ಪಿಸಿಕೊಳ್ಳಲು ಅಲ್ಲಿಂದ ಹೊರಬೀಳಲೇಬೇಕಿತ್ತು. ನಾವು ಮುಖ ಮಾಡಿದ್ದು ಬ್ರಿಟಿಷ್ ವರ್ಜಿನ್ ಐಲ್ಯಾಂಡ್‌ಗಳ ಕಡೆ. ಬಹಳ ಮಂದಿ ನನ್ನನ್ನು ಕೇಳಿದ್ದಾರೆ- ವರ್ಜಿನ್ ಐಲ್ಯಾಂಡ್‌ಗಳನ್ನು ಗಮನದಲ್ಲಿಟ್ಟುಕೊಂಡೇ ನೀವು ಮ್ಯೂಸಿಕ್ ಬ್ರಾಂಡ್‌ಗೆ ವರ್ಜಿನ್ ಅಂತ ಹೆಸರಿಟ್ಟಿದ್ದೀರಾ ಅಂತ. ಉಹುಂ, ನಾವು ಎಲ್ಲ ವಿಧದ ಉದ್ಯಮಗಳಲ್ಲೂ ವರ್ಜಿನ್ ಆಗಿಯೇ ಇರುತ್ತೇವಾದ್ದರಿಂದ ಆ ಹೆಸರು ಅಂತ ನಾನು ಸಮಜಾಯಿಷಿ ನೀಡಿದ್ದೇನೆ.

ನಾನಿದನ್ನು ಮಾಡಬಲ್ಲೆ ಎಂಬ ದೃಢ ವಿಶ್ವಾಸ ಹಾಗೂ ಕಠಿಣ ಪರಿಶ್ರಮಗಳೇ ನನ್ನನ್ನು ಕೈ ಹಿಡಿದು ನಡೆಸಿವೆ.

ಜಮೈಕಾದ ಸಂಗೀತಗಾರರಿಗೆ ನೀಡುವುದಕ್ಕೆ ನಾನು ಎಲ್ಲ ಹಣವನ್ನು ವ್ಯಯಿಸಿಬಿಟ್ಟಿದ್ದೆ. ಆದರೆ ಈ ಬ್ರಿಟಿಷ್ ಐಲ್ಯಾಂಡ್‌ನ ಮಜಾ ಏನಪ್ಪಾ ಅಂದ್ರೆ, ನೀವು ಅಲ್ಲೊಂದು ಮನೆ ಖರೀದಿಸಲು ಹೊರಟರೆ ನಿಮ್ಮನ್ನು ಎಸ್ಟೇಟ್ ಏಜೆಂಟ್‌ಗಳು ಉಚಿತವಾಗಿ ದ್ವೀಪ ಸುತ್ತಿಸುತ್ತಾರೆ. ಇದರ ಉಪಯೋಗ ಪಡೆದುಕೊಳ್ಳುವಲ್ಲಿ ನಾನು ಹಿಂದೆ ಬೀಳಲಿಲ್ಲ. ರೆಕಾರ್ಡಿಂಗ್ ಕಂಪನಿಯ ಮುಖ್ಯಸ್ಥನಾಗಿ ನನ್ನನ್ನು ಪರಿಚಯಿಸಿಕೊಂಡು, ದ್ವೀಪದಲ್ಲಿ ಸ್ಟುಡಿಯೋ ಒಂದನ್ನು ನಿರ್ಮಿಸಲು ಜಾಗ ಹುಡುಕುತ್ತಿರುವುದಾಗಿ ಹೇಳಿದೆ. ನಮ್ಮನ್ನು ಅತಿಥಿಯಂತೆ ಕಂಡ ಏಜೆಂಟ್ ವಿಲ್ಲಾ ಒಂದರಲ್ಲಿ ವಾಸ್ತವ್ಯದ ವ್ಯವಸ್ಥೆ ಮಾಡಿ ಮರುದಿನದಿಂದ ಹೆಲಿಕಾಪ್ಟರ್‌ನಲ್ಲಿ ದ್ವೀಪಗಳ ಪ್ರದಕ್ಷಿಣೆ ಆರಂಭವಾಯಿತು. ಒಂದಕ್ಕಿಂತ ಒಂದು ಚೆಂದದ ದ್ವೀಪಗಳನ್ನೆಲ್ಲ ನೋಡುತ್ತ ಬಲು ಹಿತವಾಗಿ ರಜಾ ಮಜಾ ಅನುಭವಿಸಿದೆವು. ಇದು ಹೀಗೆಯೇ ಮುಂದುವರಿದುಕೊಂಡಿರಲಿ ಎಂಬುದು ನಮ್ಮ ಆಸೆಯಾಗಿತ್ತಾದರೂ ದ್ವೀಪಗಳನ್ನೆಲ್ಲ ನೋಡಿ ಮುಗಿಯುತ್ತ ಬಂತು. ನಾವು ನೋಡದೇ ಇರುವಂಥದ್ದು ಯಾವುದಾದರೂ ಇದೆಯೇ ಎಂದು ಏಜೆಂಟ್‌ನನ್ನು ವಿಚಾರಿಸಿದಾಗ ಆತ ಹೇಳಿದ ಹೆಸರು `ನೆಕರ್’. ತುಂಬ ದೂರದಲ್ಲಿರುವ ಆ ದ್ವೀಪ ನಿಜಕ್ಕೂ ಒಂದು ಹೊಳೆಯುವ ಆಭರಣವಿದ್ದಂತೆ. ಅಲ್ಲಿಗೆ ಭೇಟಿಯನ್ನೇ ನೀಡದ ಇಂಗ್ಲಿಷ್ ಯಜಮಾನನೊಬ್ಬನ ಒಡೆತನದಲ್ಲಿ ಆ ದ್ವೀಪವಿದೆ. ಉಪಯೋಗಿಸದ ಜಾಗವಾದ್ದರಿಂದ ಬಹಳ ಸಹಜ ಸ್ಥಿತಿಯಲ್ಲಿದೆ ಎಂದು ಆತ ಮಾಹಿತಿ ನೀಡಿದ.

ಒಳ್ಳೆ ನಿಸರ್ಗ ಸೌಂದರ್‍ಯವನ್ನು ಸವಿಯಬಹುದು ಅಲ್ಲದೇ ಅದು ಇನ್ನೂ ಉಪಯೋಗಿಸದ ದ್ವೀಪವಾದ್ದರಿಂದ ಖರೀದಿಗೆ ಕಡಿಮೆ ಬೆಲೆಗೆ ಎಟಕಬಹುದು ಎಂದು ಅತ್ತ ಪ್ರಯಾಣ ಬೆಳೆಸಿದೆವು. ಪ್ರಾರಂಭದಲ್ಲಿ ಅದೊಂದು ಆಟವಾಗಿತ್ತು. ದ್ವೀಪವನ್ನು ಖರೀದಿಸುವ ಗಂಭೀರ ಯೋಚನೆಯೇನೂ ಇರಲಿಲ್ಲ. ಆದರೆ, ಅದಾಗಲೇ ಆ ಸ್ವರ್ಗವನ್ನು ನನ್ನದಾಗಿಸಿಕೊಳ್ಳುವ ಉಮೇದು ಹುಟ್ಟಿಯಾಗಿತ್ತು. ಅರ್ಥಾತ್, ನನ್ನ ಮುಂದೆ ಮತ್ತೊಂದು ಗುರಿ ಪ್ರತ್ಯಕ್ಷವಾಗಿತ್ತು! ನೆಕರ್ ಎಂಬ ಅದ್ಭುತ ದ್ವೀಪಕ್ಕೆ ನಾನು ಹುಚ್ಚನಂತೆ ಮನಸೋತಿದ್ದೆ. ಆ ದ್ವೀಪವನ್ನು ನಾವು ಕೊಂಡುಕೊಂಡಿದ್ದೇ ಆದರೆ ಸಮುದ್ರದಿಂದಲೇ ಸಿಹಿನೀರು ಪರಿವರ್ತನೆ ಮಾಡಿಕೊಳ್ಳಬೇಕು ಎಂದು ಏಜೆಂಟ್ ಹೇಳಿದ್ದರಿಂದ ದ್ವೀಪದ ಬೆಲೆ ಅಷ್ಟೇನೂ ಇರಲಿಕ್ಕಿಲ್ಲ ಎಂದು ನಾನೆಣಿಸಿದ್ದೆ. ಆದರೆ, ಬೆಲೆ ವಿಚಾರಿಸಿದಾಗ ಆತ ಮೂವತ್ತು ಲಕ್ಷ ಪೌಂಡ್ ಎಂದ! ಅದು ನನ್ನ ನಿಲುಕಿನಿಂದ ತುಂಬ ದೂರದಲ್ಲಿತ್ತು. 1 ಲಕ್ಷ 50 ಸಾವಿರ ಪೌಂಡ್ ಕೊಡಬಹುದಪ್ಪ ಎಂದೆ. ಆತ ಹೇಳಿದ್ದ ಶೇ.5ರಷ್ಟು ಬೆಲೆಗೆ ನಾನು ಕೇಳುತ್ತಿದ್ದೆ. ಗಂಭೀರವಾಗಿ ಹೇಳಿದ್ದನ್ನು ಕಿವಿಗೆ ಹಾಕಿಕೊಳ್ಳದ ಏಜೆಂಟ್ ಮೂವತ್ತು ಲಕ್ಷ ಪೌಂಡ್ ಎಂದು ಮತ್ತೆ ಮೌಲ್ಯ ಹೇಳಿದ. ಕೊನೆಯದಾಗಿ 2 ಲಕ್ಷ ಪೌಂಡ್ ಕೊಡಬಹುದು ಎಂದು ನಾನೆಂದೆ. ನಾವು ಹೆಲಿಕಾಪ್ಟರ್ ಏರಿ ವಿಲ್ಲಾಕ್ಕೆ ಬರುವ ವೇಳೆಗೇ ನಮ್ಮ ಲಗೇಜುಗಳನ್ನು ಹೊರಗಿರಿಸಲಾಗಿತ್ತು. ಹಳ್ಳಿಯೊಂದ ರಲ್ಲಿ ನಾವು ರಾತ್ರಿ ಕಳೆದು ಮರಳಿದೆವು.

ಜೋನ್ ಜತೆ ಲಂಡನ್‌ಗೆ ಮರಳಿದರೂ ನೆಕರ್ ದ್ವೀಪವನ್ನು ಖರೀದಿಸುವ ಕನಸು ನನ್ನ ಕಣ್ಣುಗಳಿಂದ ಚದುರಿರಲಿಲ್ಲ. ಆ ಬಗ್ಗೆ ಅಧ್ಯಯನಕ್ಕಿಳಿದೆ. ನೆಕರ್‌ನ ಯಜಮಾನ ತುಂಬ ಶ್ರೀಮಂತನೇನೂ ಅಲ್ಲ. ಹಾಗಾಗಿಯೇ ಅವನಿಗೆ ದ್ವೀಪವನ್ನು ಅಭಿವೃದ್ಧಿಗೊಳಿಸುವುದು ಸಾಧ್ಯವಾಗಿಲ್ಲ ಎಂಬಂಶ ನನ್ನ ಗಮನಕ್ಕೆ ಬಂತು. ಅಲ್ಲದೇ ಸದ್ಯಕ್ಕೆ ಅದನ್ನು ಮಾರಾಟ ಮಾಡುವ ತುರ್ತು ಅವನಿಗಿದೆ. ಏಕೆಂದರೆ ಲಂಡನ್‌ನಲ್ಲಿ ಮನೆ ಕಟ್ಟಿಕೊಳ್ಳಲು ಆತನಿಗೆ 2 ಲಕ್ಷ ಪೌಂಡ್ ಬೇಕಾಗಿದೆ ಎಂಬುದು ನನ್ನ ಗಮನಕ್ಕೆ ಬಂತು. ಆಗ ನನಗನಿಸಿತು, ನಾನು ಆ ಏಜೆಂಟ್‌ಗೆ ನೀಡಿದ್ದ ಆಫರ್ ಸರಿಯಾಗಿಯೇ ಇತ್ತು ಅಂತ. ಸಮಸ್ಯೆ ಏನಪ್ಪಾ ಅಂದರೆ ಆಗಲೂ ಅಷ್ಟು ಹಣವೂ ನನ್ನಲ್ಲಿರಲಿಲ್ಲ. 1 ಲಕ್ಷ 75 ಸಾವಿರ ಪೌಂಡ್ ನೀಡುವುದಾಗಿ ಹೇಳಿದೆ. ಖರೆ ಅಂದರೆ ಅಷ್ಟೂ ನನ್ನಲ್ಲಿರಲಿಲ್ಲ. ವ್ಯವಹಾರ ಕುದುರಲಿಲ್ಲವಾದ್ದರಿಂದ ನಾನು ಕೆಲಸದಲ್ಲಿ ಮೈಮರೆತೆ. ಮೂರು ತಿಂಗಳ ನಂತರ ನನಗೆ ಕರೆ ಬಂತು. 1 ಲಕ್ಷ 80 ಸಾವಿರ ಪೌಂಡ್‌ಗೆ ಒಪ್ಪಂದಕ್ಕೆ ಸಿದ್ಧ ಎಂಬ ಸಂದೇಶ ಅದಾಗಿತ್ತು.

ನಾನು ಅಲ್ಲಿ ಮನೆ ಕಟ್ಟಿ, ಉಪ್ಪು ನೀರಿನ ತೀವ್ರತೆ ಕಡಿಮೆ ಮಾಡುವ ಮರಗಳನ್ನು ನೆಡಬೇಕಿತ್ತು. ಇದಕ್ಕೆಲ್ಲ ತುಂಬ ಹಣ ವೆಚ್ಚವಾಗುತ್ತಿತ್ತು. ನಾನು ಹಿಂತೆಗೆಯಲಿಲ್ಲ. ಬ್ಯಾಂಕು, ಪರಿಚಿತರು ಹಾಗೂ ಸ್ನೇಹಿತರ ಬಳಿ ಹಣ ಒಟ್ಟುಗೂಡಿಸಿ `ನೆಕೆರ್’ ದ್ವೀಪವನ್ನು ಖರೀದಿಸಿಯೇ ಬಿಟ್ಟೆ. ಇವತ್ತು ನನ್ನ ಸ್ನೇಹಿತರು ಹಾಗೂ ಕುಟುಂಬವೆಲ್ಲ ವಿರಾಮಕ್ಕೆ ತುಂಬ ಇಷ್ಟಪಡುವ ಜಾಗವಾಗಿ ಬೆಳೆದಿದೆ ಅದು. ನನ್ನ ಟಿವಿ ಧಾರಾವಾಹಿಯ ಕೊನೆ ಭಾಗ `ದ ರೆಬೆಲ್ ಬಿಲೇನಿಯರ್’ ಅನ್ನು ಅಲ್ಲೇ ಚಿತ್ರೀಕರಿಸಲಾಯಿತು. ವರ್ಷಗಳ ಹಿಂದೆ ನಾನು ಮತ್ತು ಜೋನ್ ಟೆರೇಸ್ ಮೇಲೆ ನಿಂತು ಬೀಚ್‌ನ ಯಾವ ಸುಂದರ ದೃಶ್ಯಕ್ಕೆ ಸಾಕ್ಷಿಯಾಗಿದ್ದೆವೋ ಅದೇ ಆಯಾಮವನ್ನೇ ಆ ಧಾರಾವಾಹಿ ತುಣುಕಲ್ಲಿ ಸೆರೆಹಿಡಿಯಲಾಯಿತು.

ನನಗೆ `ವರ್ಜಿನ್ ಏರ್‌ವೇಸ್’ನ ಕನಸು ಟಿಸಿಲೊಡೆದಿದ್ದೂ ಜೋನ್ ಜತೆಗಿನ ಮತ್ತೊಂದು ರಜಾದಿನದ ವಿಹಾರದಲ್ಲಿ. ನಾವು ಪ್ಯೂರ್‍ಟೊ ರಿಕೋಕ್ಕೆ ಹೋಗುವವರಿದ್ದೆವು. ಆದರೆ ನಿಲ್ದಾಣ ತಲುಪುತ್ತಲೇ ವಿಮಾನ ರದ್ದಾಗಿದ್ದು ತಿಳಿಯಿತು. ಜನರು ಹತಾಶರಾಗಿ ಅತ್ತಿತ್ತ ತಿರುಗಾಡಿದ್ದು ಬಿಟ್ಟರೆ ಮತ್ತೇನೂ ಮಾಡುತ್ತಿರಲಿಲ್ಲ. ಎರಡು ಸಾವಿರ ಡಾಲರ್‌ಗೆ ಚಿಕ್ಕ ವಿಮಾನವೊಂದನ್ನು ಖರೀದಿಸಿದರೆ ಅಲ್ಲಿರುವಷ್ಟು ತಲೆಗಳಿಗೆ ಆ ಮೊತ್ತವನ್ನು ಒಡೆದು ನೋಡಿದರೆ ಪ್ರತಿಯೊಬ್ಬರಿಗೆ ಎಷ್ಟು ತಗಲುತ್ತದೆ ಎಂದು ಲೆಕ್ಕ ಹಾಕಿದೆ. 39 ಡಾಲರ್ ಎಂಬ ಉತ್ತರ ಬಂತು. ಆ ಕ್ಷಣವೇ ಒಂದು ಕಪ್ಪು ಬೋರ್ಡ್ ಅನ್ನು ಕೇಳಿ ಪಡೆದುಕೊಂಡು ಅದರಲ್ಲಿ ನನ್ನ ಕನಸು ಬಿತ್ತಿಯೇ ಬಿಟ್ಟೆ: ವರ್ಜಿನ್ ಏರವೇಸ್, ಸಿಂಗಲ್ ಫೈಟ್ ಟು ಪೋರ್‍ಟೊರಿಕೊ, ಡಾಲರ್ 39. ಅದಾಗಿ ಕೆಲ ವರ್ಷಗಳ ನಂತರ ಆ ಕನಸು ಸಾಕಾರವಾಗಿದ್ದು ನಿಜವಾದರೂ ಆಸೆ ಅವತರಿಸಿದ್ದು ಮಾತ್ರ ರಜಾ ವಿಹಾರದಲ್ಲಿ. ಇವತ್ತು ವರ್ಜಿನ್ ವಿಮಾನಗಳು ಜಗತ್ತಿನ 30 ಜಾಗಗಳಿಗೆ ಹಾರಾಡುತ್ತಿದೆ! ಇದೀಗ ವರ್ಜಿನ್ ಗ್ಲಾಗ್ಟಿಕ್ ಎಂಬ ವಿಮಾನ ಬಾಹ್ಯಾಕಾಶ ಯಾನಕ್ಕೂ ಲಭ್ಯವಾಗುತ್ತಿದೆ.

ಜಮೈಕಾದಲ್ಲಿ ಸಂಗೀತದ ಬ್ಯಾಂಡ್‌ಗಳನ್ನು ಕೊಂಡುಕೊಳ್ಳುವುದರಿಂದ ಆರಂಭವಾದ ವಿಹಾರ ದ್ವೀಪ ಹಾಗೂ ಏರ್‌ಲೈನ್ ಕೊಂಡುಕೊಳ್ಳುವವರೆಗೆ ಮುಂದುವರೆಯಿತು. ಇವೆಲ್ಲ ಸಸಾರಕ್ಕೆ ಆಗಿದ್ದು ಎಂದು ಹೇಳುತ್ತಿಲ್ಲ. ಆದರೆ ಬದುಕಿನ ಬಗ್ಗೆ ಒಂದು ಸಕಾರಾತ್ಮಕ ನೋಟವಿದ್ದರೆ, ಕಣ್ಮುಂದೆ ಗುರಿಯಿದ್ದರೆ, ಪರಿಶ್ರಮ ನಿಮ್ಮದಾದರೆ, ಕೆಲಸದಲ್ಲಿ ಮಜ ಕಂಡುಕೊಳ್ಳುವುದು ತಿಳಿದರೆ… ಅಷ್ಟೇ ಜೀವನ ಅಂತಂದ್ರೆ.

Advertisements

About sujankumarshetty

kadik helthi akka

Posted on ಅಕ್ಟೋಬರ್ 17, 2010, in "ಇ-ಲೋಕ" ಲೇಖನಗಳ “ಕನ್ನಡಲೋಕ”, ವಿಶ್ವೇಶ್ವರ ಭಟ್ - ನೂರೆಂಟುಮಾತು and tagged . Bookmark the permalink. ನಿಮ್ಮ ಟಿಪ್ಪಣಿ ಬರೆಯಿರಿ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: