ಗೆಲುವು ಬದುಕಿನ ನಕಾಶೆಯನ್ನೇ ಬದಲಿಸಬಲ್ಲದು

Richar Bransonಒಂದು ತಮಾಷೆ ಕೇಳಿ: ನಾನು ಸ್ಕೂಲಲ್ಲಿ ಅಂಥ ಜಾಣ ವಿದ್ಯಾರ್ಥಿಯಾಗಿರಲಿಲ್ಲ. ಹಾಗಾಗಿ ಪ್ರತಿ ವರ್ಷವೂ ಜಸ್ಟ್ ಪಾಸ್ ವಿದ್ಯಾರ್ಥಿಯಾಗಿಯೇ ಮುಂದಿನ ತರಗತಿಗೆ ಪ್ರವೇಶ ಪಡೆದೆ. ನಾನು ಪೆದ್ದ, ದಡ್ಡ ಎಂದು ಉಳಿದವರಿಗಿಂತ ನನಗೇ ಚೆನ್ನಾಗಿ ಅರ್ಥವಾಗಿಹೋಗಿತ್ತು. ಆದರೂ ಶಾಲೆಯಲ್ಲಿ ಅದೊಮ್ಮೆ ಪ್ರಬಂಧ ರಚನೆ ಸ್ಪರ್ಧೆ ಶುರುವಾದಾಗ ನಾನೂ ಭಾಗವಹಿಸಿದೆ. ಬಹುಮಾನದ ಆಸೆ ಖಂಡಿತ ನನಗಿರಲಿಲ್ಲ. ಹಾಗಾಗಿಯೇ ಮನಸ್ಸಿಗೆ ಬಂದುದನ್ನು ಮುಕ್ತವಾಗಿ ಬರೆದೆ. ಮುಂದೆ ಫಲಿತಾಂಶ ಪ್ರಕಟವಾದಾಗ ನನ್ನ ಅಧ್ಯಾಪಕರು ಹಾಗೂ ಸಹಪಾಠಿಗಳಿಗೆ ಅಚ್ಚರಿಯೋ ಅಚ್ಚರಿ. ಏಕೆಂದರೆ, ಎಲ್ಲರಿಂದಲೂ ದಡ್ಡ, ಪೆದ್ದ, `ಡಿ’ ಗ್ರೇಡ್ ಸ್ಟೂಡೆಂಟ್ ಎಂದು ಕರೆಸಿಕೊಂಡಿದ್ದ ನನಗೆ ಮೊದಲ ಬಹುಮಾನ ಬಂದಿತ್ತು. ಈ ಸಂಗತಿಯನ್ನು ಅಮ್ಮನಿಗೆ ಸಂಕೋಚದಿಂದಲೇ ಹೇಳಿದಾಗ ಅವಳೆಂದಳು: ಮಗೂ, ನೀನು ಗೆದ್ದೇ ಗೆಲ್ತೀಯ ಅಂತ ನನಗೆ ಮೊದಲೇ ಗೊತ್ತಿತ್ತು…’

ಈ ಒಂದು ಗೆಲುವು ನನ್ನ ಬದುಕಿನ ನಕಾಶೆಯನ್ನೇ ಬದಲಿಸಿತು. ಪ್ರಬಂಧ ರಚನೆಯಲ್ಲಿ ಬಹುಮಾನ ಪಡೆಯಬಹುದಾದರೆ, ಓದುವುದರಲ್ಲಿ ಅದೇ ಸಾಧನೆ ಯಾಕೆ ಸಾಧ್ಯವಿಲ್ಲ ಎಂದು ನನಗೆ ನಾನೇ ಕೇಳಿಕೊಂಡೆ. ಮರುದಿನದಿಂದಲೇ ಶ್ರದ್ಧೆಯಿಂದ ಓದಲು ಆರಂಭಿಸಿದೆ. ಅನುಮಾನ ಬಂದಾಗ ಶಿಕ್ಷಕರನ್ನು ಮತ್ತೆ ಮತ್ತೆ ಪ್ರಶ್ನೆ ಮಾಡಿದೆ. ನಂತರದ ದಿನಗಳಲ್ಲಿ ತುಂಬ ಬೇಗನೆ `ಡಿ’ ಗ್ರೇಡ್‌ನಿಂದ `ಬಿ’ ಗ್ರೇಡ್‌ಗೆ, ಅಲ್ಲಿಂದ `ಎ’ ಗ್ರೇಡ್‌ಗೆ ತಲುಪಿಕೊಂಡೆ. ನಂತರ ವಿದ್ಯಾರ್ಥಿಗಳಿಗೆಂದೇ ಮ್ಯಾಗಜಿನ್ ಆರಂಭಿಸಿದೆ. ಈ ಹೊಸ ಪ್ರಯೋಗದಲ್ಲೂ ಗೆದ್ದೆ.

ಮುಂದೆ ಸವಾಲುಗಳ ಬೆನ್ನೇರಿ ಹೋಗುವುದು ನನಗೆ ಹವ್ಯಾಸವೇ ಆಗಿಹೋಯಿತು. ಸಂತೋಷವೆಂದರೆ, ಪ್ರತಿ ಬಾರಿಯೂ ನಾನು ಗೆದ್ದೆ. ಹೀಗಿದ್ದಾಗಲೇ ಬಿಸಿಗಾಳಿ ತುಂಬಿದ ಬಲೂನ್‌ನಲ್ಲಿ ಪೆಸಿಫಿಕ್ ಮಹಾಸಾಗರವನ್ನು ದಾಟುವ ಸಾಹಸಕ್ಕೆ ಮುಂದಾದೆ. ಅದು 8000 ಮೈಲು ದೂರದ ಮಹಾ ಯಾತ್ರೆ. ಬಿಸಿಗಾಳಿಯ ಬಲೂನ್‌ನಲ್ಲಿ ತಿಂಗಳಾನುಗಟ್ಟಲೆ ಆಕಾಶದಲ್ಲೇ ಹಾರಾಡುತ್ತಾ ಇರಬೇಕಾದ ದುರ್ಭರ ಪ್ರವಾಸದ ಸಂದರ್ಭ ಅದು. ಈ ಯಾತ್ರೆ ಬಹುದೊಡ್ಡ ಸವಾಲಿನದಾಗಿತ್ತು. ಕೆಲ ದಿನಗಳ ಹಿಂದಷ್ಟೇ ನನ್ನಂತೆಯೇ ಬಿಸಿಗಾಳಿಯ ಬಲೂನ್‌ನಲ್ಲಿ ಸಾಹಸಯಾತ್ರೆ ಕೈಗೊಂಡಿದ್ದ ಜಾನ್ ಎಂಬಾತನ ಬಲೂನು, ಎಲ್ಲರ ನಿರೀಕ್ಷೆಯನ್ನೂ ಉಲ್ಟಾ ಮಾಡಿ ಒಡೆದು ಹೋಗಿತ್ತು. ಬಲೂನ್ ಹಾರಿಸ್ತಿದ್ದ ಜಾನ್ ಸಮುದ್ರಕ್ಕೆ ಬಿದ್ದಿದ್ದ. ಅಲೆಗಳ ಭಾರೀ ಹೊಡೆತಕ್ಕೆ ಸಿಲುಕಿಕೊಂಡ. ಆತ ಸಮುದ್ರಕ್ಕೆ ಬಿದ್ದದ್ದು ಅಪರಾತ್ರಿಯಲ್ಲಿ. ಹಾಗಾಗಿ ಅವನ ನೆರವಿಗೆ ಯಾರೂ ಧಾವಿಸಲಿಲ್ಲ. ಪರಿಣಾಮ, ಜಾನ್ ಸತ್ತೇ ಹೋದ.

ಈ ಕೆಟ್ಟ, ಎದೆನಡುಗಿಸುವ ಘಟನೆ ಕಣ್ಣೆದುರಿಗಿತ್ತು. ಹಾಗಾಗಿ ನಾನು ಬಿಸಿಗಾಳಿಯ ಬಲೂನ್‌ನಲ್ಲಿ ಮಹಾಯಾತ್ರೆ ಕೈಗೊಳ್ಳುವೆ ಎಂದಾಗ ಎಲ್ಲರೂ ತಡೆದರು. ಆದರೆ, ನಾನು ಹಿಂಜರಿಯಲಿಲ್ಲ. ಈ ಯಾತ್ರೆಯಲ್ಲಿ ನನ್ನ ಜತೆಗಾರನಾಗಿದ್ದ ಫರ್ ಕೂಡ -`ಹೆಜ್ಜೆ ಹಿಂದಿಡುವುದು ಬೇಡ. ಪಯಣ ಆರಂಭಿಸೋಣ’ ಎಂದ. ಕೆಲವೇ ದಿನಗಳಲ್ಲಿ ಶುರುವಾಯಿತು ಮಹಾಯಾತ್ರೆ! ನಮ್ಮ ಯಾತ್ರೆಗೆ ಸಿದ್ಧವಾಗಿತ್ತಲ್ಲ, ಆ ಬಲೂನ್ 300 ಅಡಿ ಎತ್ತರವಿತ್ತು. ಯಾತ್ರೆ ಆರಂಭಿಸುವ ಉದ್ದೇಶದಿಂದ ನಮಗಿದ್ದ ಪುಟ್ಟ ಗೂಡಿನೊಳಗೆ ಪ್ಯಾರಾಚೂಟ್‌ಗಳನ್ನು ಇಟ್ಟು ನಮ್ಮನ್ನು ನಾವು ಕಟ್ಟಿಕೊಂಡೆವು. ಆಗಸಕ್ಕೇರಿದ ನಂತರ ಏನಾದರೂ ಅಪಾಯ ಎದುರಾದರೆ? ಎಂಬ ಕಾರಣದಿಂದ ಈ ರಕ್ಷಣೋಪಾಯ. ನಂತರ, ಬಲೂನ್ ಗಾಳಿಯಲ್ಲಿ ಮೇಲೇರುವಂತೆ ಮಾಡಲು ಬರ್ನರ್‌ಗಳನ್ನು ಹಚ್ಚಲಾಯಿತು. ಆದರೆ, ಬಲೂನ್ 300 ಅಡಿ ಎತ್ತರವಿತ್ತಲ್ಲ, ಅದೇ ಕಾರಣದಿಂದ ಅದು ಸರಾಗವಾಗಿ ಮೇಲೇರಲಿಲ್ಲ. ಆಗ ಮತ್ತಷ್ಟು ಇಂಧನ ಉರಿಸಿದೆವು. ಕಡೆಗೂ ನಮ್ಮ ಬಲೂನ್ ಮುಗಿಲ ಹಾದಿಗೆ ಬಂತು. ಗಾಳಿಯ ರಭಸ ಹೆಚ್ಚಿದ್ದ ಕಾರಣದಿಂದ ಬಲೂನ್‌ನ ವೇಗ ಗಂಟೆಗೆ 115 ಮೈಲಿಯಿತ್ತು. ಇನ್ನೊಂದು ಕಡೆಯಲ್ಲಿ ನಾವಿದ್ದ ಬುಟ್ಟಿ ಗಂಟೆಗೆ ಕೇವಲ 25 ಮೈಲು ವೇಗದಲ್ಲಿ ಸಾಗುತ್ತಿತ್ತು!

ಈ ಸಂದರ್ಭದಲ್ಲಿ ಸಾವಿರ ಕುದುರೆಗಳು ನಾವಿದ್ದ ಬುಟ್ಟಿಯನ್ನು ಯಾವುದೋ ದಿಕ್ಕಿನಿಂದ ಎಳೆದಂತೆ ಭಾಸವಾಗುತ್ತಿತ್ತು. ಯಾತ್ರೆಯ ಉದ್ದಕ್ಕೂ ಇದೇ ಪರಿಸ್ಥಿತಿ ಜತೆಯಾದರೆ ಬಲೂನ್ ಒಡೆದುಹೋಗುವ ಅಥವಾ ಹರಿದು ಹೋಗುವ ಸಾಧ್ಯತೆ ಹೆಚ್ಚಾಗಿತ್ತು. ಹಾಗೇನಾದರೂ ಆದರೆ ನಾನು ಜತೆಗಾರ ಫರ್‌ನೊಂದಿಗೆ ಸಾವಿರಾರು ಅಡಿ ಮೇಲಿಂದ ಸೀದಾ ಸಾಗರದೊಳಕ್ಕೆ ಬೀಳುತ್ತಿದ್ದೆ! ಇಂಥದೊಂದು ಸಂದರ್ಭವನ್ನು ನೆನೆದಾಗ ಆಗಸದ ಅಂಗಳದಲ್ಲಿ ನನ್ನ ಮೈ ನಡುಗಿತು. ಆದರೆ, ಭಂಡ ಮನಸ್ಸು ತಕ್ಷಣವೇ ಸೋಲೊಪ್ಪಲು ಸಿದ್ಧವಾಗಲಿಲ್ಲ. ಹೊರಟಿದ್ದೇನೋ ಆಗಿದೆ. ಒಂದು ರೌಂಡ್ ಹೋಗೇಬಿಡೋಣ. ಬಂದರೆ ಗೆಲುವು, ಇಲ್ಲದಿದ್ದರೆ ಸಾವು ಎಂದು ನನಗೆ ನಾನೇ ಧೈರ್ಯ ಹೇಳಿಕೊಂಡೆ. ಒಂದೊಂದೇ ದಿನ ಕಳೆದಂತೆಲ್ಲ ನನಗೆ ಬದುಕುವ ಆಸೆಯೂ ಕಮರಿಹೋಯಿತು.

ಏಕೆಂದರೆ ಈಮಧ್ಯೆ ನಾವು ರಕ್ಷಣಾತಂಡದೊಂದಿಗಿನ ಸಂಪರ್ಕವನ್ನು ಕಡಿದುಕೊಂಡಿದ್ದೆವು. ನಾವಿದ್ದ ಬಲೂನ್ ಹುಚ್ಚು ಕುದುರೆಯ ಥರಾ ಗೊತ್ತು ಗುರಿಯಿಲ್ಲದೆ ಸಾಗುತ್ತಿದ್ದುದನ್ನು ನೋಡಿಯೇ ಜತೆಗಾರ ಫರ್ ಆಘಾತಗೊಂಡ. ಈ ಶಾಕ್‌ನಲ್ಲಿ ಆತ ಆರು ಗಂಟೆಗಳ ಸುದೀರ್ಘ ಕಾಲ ಪ್ರಜ್ಞೆ ತಪ್ಪಿ ಮಲಗಿಬಿಟ್ಟಿದ್ದ. ಈ ಸಂದರ್ಭದಲ್ಲಿ ನಾನು ಹೀಗೆ ಯೋಚಿಸಿದೆ. ಬಹುಶಃ ಇದು ನನ್ನ ಕಡೆಯ ಯಾತ್ರೆ. ಸಾಯೋದು ಗ್ಯಾರಂಟಿಯಾಗಿದೆ. ಆದರೆ, ನೀರಲ್ಲಿ ಮುಳುಗಿ ಸಾಯೋದಂತೂ ಬೇಡ. ಹೇಗಾದರೂ ಮಾಡಿ ಭೂಪ್ರದೇಶದ ಕಡೆ ಹೋಗಲು ಪ್ರಯತ್ನ ಮಾಡಬೇಕು. ಹೇಗಿದ್ದರೂ ಪ್ಯಾರಾಚೂಟ್ ಗಳಿವೆ. ಅವುಗಳನ್ನು ಕಟ್ಟಿಕೊಂಡು ಇಳಿದುಬಿಟ್ಟರಾಯಿತು. ಅದು ಯಾವ ದೇಶದ ನೆಲವಾದರೂ ಸರಿ. ಪರಿಚಯ ಹೇಳಿಕೊಂಡು ಊರು ತಲುಪಿದರಾಯಿತು ಎಂದುಕೊಂಡೆ. ನಂತರ ನನಗೆ ಸರಿ ಅನಿಸಿದ ದಿಕ್ಕಿನಲ್ಲಿ, ನನ್ನ ಮನಸ್ಸು `ತೋರಿಸಿದ’ ಹಾದಿಯಲ್ಲಿ ಪ್ರಯಾಣ ಮುಂದುವರಿಸಿದೆ.

ಈ ಸಂದರ್ಭದಲ್ಲಿ ಆಕಸ್ಮಿಕವಾಗಿ ನನಗೆ ರಕ್ಷಣಾ ಕೇಂದ್ರದ ಸಂಪರ್ಕ ಸಿಕ್ಕಿತು. ಅವರು ಹೇಳಿದರು: ಈಗ ಗಲ್ಫ್ ಯುದ್ಧ ಶುರುವಾಗಿದೆ. ಬಾಗ್ದಾದ್ ಮೇಲೆ ಬಾಂಬುಗಳ ಸುರಿಮಳೆಯಾಗಿದೆ. ಈ ಗಡಿಬಿಡಿಯಲ್ಲಿ ನಿನ್ನ ಸಂಪರ್ಕವೂ ತಪ್ಪಿಹೋಗಿತ್ತು. ಅಂದಹಾಗೆ ನೀನೀಗ ಕೆನಡಾ ಭೂಭಾಗದಲ್ಲಿ ಇದೀಯ ಅಂದರು! ಇಷ್ಟೆಲ್ಲ ಆಗುವ ವೇಳೆಗೆ ಫರ್ ಕೂಡ ಮೊದಲಿನಂತಾಗಿದ್ದ. ಕಡೆಗೂ ನಾನು ನೂರಾರು ಅಡೆತಡೆಗಳನ್ನು ದಾಟಿ ಹೊಸದೊಂದು ಸಾಹಸದಲ್ಲಿ ಗೆದ್ದಿದ್ದೆ. ಈ ಮಹಾಯಾತ್ರೆಯನ್ನು ಮೀರಿಸುವಂಥ ಇನ್ನೊಂದು ಯಾನ ಕೈಗೊಳ್ಳಲು ಆ ಕ್ಷಣದಲ್ಲೇ ನಿರ್ಧರಿಸಿದೆ. ಪಕ್ಕದಲ್ಲಿದ್ದ ಫರ್, ಹೊಸ ಸಾಹಸದಲ್ಲಿ ನಾನೂ ಪಾರ್ಟ್‌ನರ್ ಆಗ್ತೇನೆ ಅಂದ!

* * *
ಹೀಗೆ ಬರೆಯುತ್ತಾನೆ ಬ್ರಾನ್‌ಸನ್. ಹೌದು, ಅವನ ಒಂದೊಂದು ಗೆಲುವಿನ ಹಿಂದೆಯೂ ನೂರಾರು ಎದೆನಡುಗಿಸುವ ಪ್ರಸಂಗಗಳಿವೆ. ಥರಾವರಿ ಕಥೆಗಳಿವೆ. ಹೇಳಿ, ಅವನನ್ನು ಮೆಚ್ಚದಿರುವುದು ಹೇಗೆ?

Advertisements

About sujankumarshetty

kadik helthi akka

Posted on ಅಕ್ಟೋಬರ್ 17, 2010, in "ಇ-ಲೋಕ" ಲೇಖನಗಳ “ಕನ್ನಡಲೋಕ”, ವಿಶ್ವೇಶ್ವರ ಭಟ್ - ನೂರೆಂಟುಮಾತು and tagged . Bookmark the permalink. ನಿಮ್ಮ ಟಿಪ್ಪಣಿ ಬರೆಯಿರಿ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: