ಜನಸೇವೆಗೆ ರಾಜಕೀಯವೇ ಬೇಕಾಗಿಲ್ಲ, ಹೀಗೂ ಮಾಡಬಹುದು!

Anand Kumar, Mathematics teacher

ಬಿಹಾರ, ಪಾಟ್ನಾ! ಹೀಗೆಂದ ತಕ್ಷಣ ನಮ್ಮ ಕಣ್ಮುಂದೆ ಲಾಲೂ ಪ್ರಸಾದ್ ಯಾದವ್, ರಾಬ್ಡಿದೇವಿಯ ಚಿತ್ರಗಳು ಬಂದು ನಿಲ್ಲುತ್ತವೆ. ಅದರ ಹಿಂದೆಯೇ, ಬಿಹಾರದ ರಾಜಕೀಯದಲ್ಲಿ ದೊಡ್ಡ ಹೆಸರು ಮಾಡಿರುವ ಕಳ್ಳರು, ಸುಳ್ಳರು, ಕೊಲೆಗಡುಕರು, ಕ್ರಿಮಿನಲ್‌ಗಳ ಮುಖಗಳೂ ಮೆರವಣಿಗೆ ಹೊರಡುತ್ತವೆ. ಇದೇ ಕಾರಣಕ್ಕೆ ಬಿಹಾರವನ್ನು `ಗೂಂಡಾರಾಜ್ಯ’ ಎಂದು ಕರೆಯುವ ಪರಿಪಾಠವೂ ಇದೆ. ಬಿಹಾರ ಅಂದ್ರೆ ಎಲ್ಲ ಅಕ್ರಮ, ಅವ್ಯವಹಾರಗಳಿಗೆ ಪರ್ಯಾಯ ಪದವೆನ್ನುವಂತಾಗಿದೆ. ಆದರೆ, ಈಗ ಅದೇ ಪಾಟ್ನಾದಿಂದ ದೇವರಂಥ ವ್ಯಕ್ತಿಯೊಬ್ಬ ಎದ್ದು ಬಂದಿದ್ದಾನೆ. ಅವನ ಹೆಸರು ಆನಂದಕುಮಾರ್.

ಇವತ್ತು ಪಾಟ್ನಾದ ಬಸ್‌ನಿಲ್ದಾಣ ಅಥವಾ ರೈಲು ನಿಲ್ದಾಣದಲ್ಲಿ ನಿಂತು- ನಾಲ್ಕು ಮಂದಿಯ ಮುಂದೆ ಆನಂದಕುಮಾರ್ ಅಂದು ನೋಡಿ; ಜನ ಕಣ್ಣರಳಿಸುತ್ತಾರೆ. ನಿಂತಲ್ಲೇ ಕೈಮುಗಿಯುತ್ತಾರೆ. `ಓಹ್, ನಿಮ್ಗೆ ಮೇಷ್ಟ್ರು ಬೇಕಿತ್ತಾ’ ಎನ್ನುತ್ತಾರೆ. ಮರುಕ್ಷಣದಲ್ಲೇ ಈ ಆನಂದಕುಮಾರ್ ಅವರ ವಿಳಾಸವನ್ನು ಹೇಳುತ್ತಾರೆ. ಆನಂತರವೂ ಒಂದೆರಡು ನಿಮಿಷ ಅಲ್ಲಿಯೇ ನಿಂತರೆ- ಆನಂದಕುಮಾರ್ ಅವರನ್ನು ಹೊಗಳುತ್ತ ಹೊಗಳುತ್ತಾ ಮೈಮರೆಯುತ್ತಾರೆ. ಸ್ವಾರಸ್ಯವೇನೆಂದರೆ- ಹೀಗೆ ಎಲ್ಲರಿಂದಲೂ ಹೊಗಳಿಸಿಕೊಳ್ಳುವ ಆನಂದಕುಮಾರ್ ರಾಜಕಾರಣಿಯಲ್ಲ. ಹಣವಂತನಲ್ಲ. ಯೋಗ ಗುರುವಲ್ಲ. ಚಿತ್ರನಟನಲ್ಲ. ರಾಬ್ಡಿದೇವಿಯ ಮಾವನಲ್ಲ. ಲಾಲೂ ಪ್ರಸಾದನಿಗೂ ಅವನಿಗೂ ಸಂಬಂಧವಿಲ್ಲ. ನಿತೀಶ್‌ಕುಮಾರನ ನೆಂಟನೂ ಅಲ್ಲ. ಅಸಲಿಗೆ, ರಾಜಕೀಯದ ನೆರಳನ್ನು ಆತ ತನ್ನೆಡೆಗೆ ಬಿಟ್ಟುಕೊಂಡವನಲ್ಲ. ಆತ ಪೊಲೀಸ್ ಅಧಿಕಾರಿಯಲ್ಲ, ಕರಾಟೆ ಮಾಸ್ಟರ್ ಕೂಡ ಅಲ್ಲ. ಜ್ಯೋತಿಷಿಯೂ ಅಲ್ಲ. ಬದಲಿಗೆ, ಒಬ್ಬ ಟ್ಯೂಶನ್ ಮಾಸ್ಟರ್!

ನಂಬಿ ಮಹಾರಾಯರೆ, ಈ ಟ್ಯೂಶನ್ ಮಾಸ್ಟರ್, ಇವತ್ತು ಬಿಹಾರದಲ್ಲಿ ದೊಡ್ಡದೊಂದು ಕ್ರಾಂತಿ ಉಂಟುಮಾಡಿದ್ದಾನೆ. ವಿದ್ಯಾರ್ಥಿಗಳ ಪಾಲಿಗೆ ರೋಲ್‌ಮಾಡೆಲ್ ಆಗಿದ್ದಾನೆ. ತೀರಾ ಕಡಿಮೆ ಹಣ ಪಡೆದು ಎಲ್ಲರಿಗೂ ಟ್ಯೂಶನ್ ಮಾಡುತ್ತ ಶೈಕ್ಷಣಿಕ ಕ್ರಾಂತಿಯ ಹರಿಕಾರ ಎನಿಸಿಕೊಂಡಿದ್ದಾನೆ. ಅಷ್ಟೇ ಅಲ್ಲ, ಸೂಪರ್-30 ಎಂಬ ಖಾಸಗಿ ಟ್ಯೂಶನ್ ಕೇಂದ್ರವನ್ನೂ ಆರಂಭಿಸಿದ್ದಾನೆ. ಆ ಕೇಂದ್ರದ ಮುಂದೆ ಆನೆಗಾತ್ರದ ಅಕ್ಷರದಲ್ಲಿ- ‘ಇಲ್ಲಿ ಬಡವರ ಮಕ್ಕಳಿಗೆ ಉಚಿತವಾಗಿ ಪಾಠ ಹೇಳಲಾಗುವುದು’ ಎಂದು ಬೋರ್ಡ್ ಹಾಕಿದ್ದಾನೆ. ಅಷ್ಟೇ ಅಲ್ಲ, ನುಡಿದಂತೆಯೇ ನಡೆದುಕೊಂಡಿದ್ದಾನೆ. ಈತನ ಬಳಿ ಟ್ಯೂಶನ್ ಹೇಳಿಸಿಕೊಂಡ ಹುಡುಗರು- ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯವರು ನಡೆಸುವ ಐಐಟಿ-ಜೆಇಇ ಪರೀಕ್ಷೆಗಳಲ್ಲಿ ಅತ್ಯುತ್ತಮ ಅಂಕ ಪಡೆದಿದ್ದಾರೆ. ಕೆಲವರು ಐಎಎಸ್ ನಲ್ಲೂ ಪಾಸಾಗಿದ್ದಾರೆ. ಒಂದಷ್ಟು ಮಂದಿ ಬ್ಯಾಂಕ್ ಪರೀಕ್ಷೆ ಬರೆದು ಮ್ಯಾನೇಜರ್‌ಗಳಾಗಿದ್ದಾರೆ. ಹೀಗೆ, ದೊಡ್ಡ ದೊಡ್ಡ ಸ್ಥಾನ ತಲುಪಿಕೊಂಡವರೆಲ್ಲ ಕ್ಷಣಕ್ಷಣಕ್ಕೂ ತಮ್ಮ ಗುರು ಆನಂದಕುಮಾರ್ ಅವರನ್ನು ಸ್ಮರಿಸಿಕೊಂಡಿದ್ದಾರೆ. ಗುರುಗಳಿಗೆ ಜೈ ಹೋ ಎಂದು ಸಂತೋಷದಿಂದ ಹೇಳಿದ್ದಾರೆ.

ಅಲ್ಲ, ಮೊನ್ನೆಮೊನ್ನೆಯವರೆಗೂ ರಕ್ತಸಿಕ್ತ ರಾಜಕಾರಣವನ್ನೇ ಉಸಿರಾಡುತ್ತಿದ್ದ ನಾಡು ಬಿಹಾರ. ಅಂಥ ಊರಿನಲ್ಲಿ ಆನಂದಕುಮಾರ್ ಥರದ ಜನ ಎದ್ದುನಿಲ್ಲಲು ಕಾರಣವಾದದ್ದು ಏನು? ಇಷ್ಟಕ್ಕೂ ಈ ಹುಡುಗ ಯಾರು? ಅವನ ಹಿನ್ನೆಲೆ ಏನು? ಅವನು ಟ್ಯೂಶನ್ ತರಗತಿ ಆರಂಭಿಸಲು ಕಾರಣವಾದರೂ ಏನು? ತೀರಾ ಬಡವರ ಮಕ್ಕಳಿಗೇ ಪಾಠ ಹೇಳುತ್ತೇನೆ ಎಂಬ ಆದರ್ಶದ ಹಂಬಲವಾದರೂ ಆ ಹುಡುಗನ ತಲೆಗೇರಿದ್ದೇಕೆ?

ಸ್ವಾರಸ್ಯಕರ ಕಥೆ : ಇಂಥ ಎಲ್ಲ ಕುತೂಹಲಗಳಿಗೂ ಇಲ್ಲಿ ಸ್ವಾರಸ್ಯಕರ ಉತ್ತರವಿದೆ. ಈ ಆನಂದಕುಮಾರ್, ಬಿಹಾರದ ಒಂದು ಸಾಮಾನ್ಯ ಕುಟುಂಬದಿಂದ ಬಂದವನು. ಅವನ ತಂದೆ ಅಂಚೆ ಕಚೇರಿಯಲ್ಲಿ ಸೆಕೆಂಡ್ ಡಿವಿಜನ್ ಕ್ಲರ್ಕ್ ಆಗಿದ್ದ. ಬರುತ್ತಿದ್ದ ಸಂಬಳ ಹೊಟ್ಟೆ- ಬಟ್ಟೆಗೇ ಆಗಿಹೋಗುತ್ತಿತ್ತು. ಹಾಗಾಗಿ ಮಕ್ಕಳನ್ನು ಟ್ಯೂಶನ್‌ಗೆ ಕಳುಹಿಸುವ ಯೋಚನೆಯನ್ನೇ ಆನಂದ್‌ಕುಮಾರನ ತಂದೆ ಮಾಡಲಿಲ್ಲ. ಈ ಹುಡುಗ ಆನಂದ್, ಹಿಂದಿ ಮಾಧ್ಯಮದಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿದ. ಮನೆಯಲ್ಲಿ ಕಡುಬಡತನವಿತ್ತು ನಿಜ. ಆದರೆ, ಅದು ಈ ಹುಡುಗನ ಜ್ಞಾನದಾಹಕ್ಕೆ ಅಡ್ಡಿಯಾಗಲಿಲ್ಲ. ಚಿಕ್ಕಂದಿನಲ್ಲಿಯೇ ಗಣಿತದತ್ತ ಆಕರ್ಷಿತನಾದ ಆನಂದಕುಮಾರ್, ಹೈಸ್ಕೂಲಿಗೆ ಬರುವ ವೇಳೆಗೆ ಕಾಲೇಜು ತರಗತಿಗಳ ಸಮಸ್ಯೆಗಳನ್ನೆಲ್ಲ ಬಿಡಿಸುವಷ್ಟು ಪ್ರಾವೀಣ್ಯ ಪಡೆದ. ಅಷ್ಟಕ್ಕೆ ಸುಮ್ಮನಾಗದೆ, ಗಣಿತ ಲೋಕದ ಪ್ರೊಫೆಸರ್‌ಗಳಿಗೇ ಸವಾಲು ಹಾಕುವಂತಿದ್ದ ಅವೆಷ್ಟೋ ಸಮಸ್ಯೆಗಳಿಗೆ ಉತ್ತರ ಕಂಡುಹಿಡಿದ. ಅವುಗಳನ್ನು ಇಂಗ್ಲೆಂಡಿನ ಮ್ಯಾಥಮೆಟಿಕಲ್ ಸ್ಪೆಕ್ಟ್ರಂ ಮತ್ತು ದಿ ಮ್ಯಾಥಮೆಟಿಕಲ್ ಗೆಜೆಟ್ ಪತ್ರಿಕೆಗಳಿಗೆ ಕಳಿಸಿಕೊಟ್ಟ.

ದಶಕಗಳ ಕಾಲದಿಂದಲೂ ಗಣಿತದ ಪ್ರೊಫೆಸರ್‌ಗಳಿಗೆ ಅರ್ಥವೇ ಆಗದಿದ್ದ ಸಮಸ್ಯೆಗಳನ್ನು, ಇನ್ನೂ ಮೀಸೆ ಚಿಗುರದ ಭಾರತದ ಹೈದನೊಬ್ಬ ಪರಿಹಾರ ಹುಡುಕಿದ್ದು ಕಂಡು ಅಮೆರಿಕ, ಇಂಗ್ಲೆಂಡಿನ ಪಂಡಿತರೆಲ್ಲ ಖುಷಿಯಾದರು. ಕೇಂಬ್ರಿಡ್ಜ್ ವಿಶ್ವವಿದ್ಯಾಲಯ ಈ ಹುಡುಗನಿಗೆ ಪ್ರವೇಶ ನೀಡಲೂ ಮುಂದಾಯಿತು. ಇನ್ನು ಕೆಲವೇ ವರ್ಷಗಳಲ್ಲಿ ನಾನೂ ಒಬ್ಬ ಗಣಿತದ ಪ್ರೊಫೆಸರ್ ಆಗುತ್ತೇನೆ ಎಂಬ ಖುಷಿಯಲ್ಲಿ ಈ ಆನಂದಕುಮಾರ್ ಪಾಸ್‌ಪೋರ್ಟ್, ವೀಸಾ ಮಾಡಿಸಿಕೊಳ್ಳಲು ಓಡಾಡತೊಡಗಿದ. ಅಷ್ಟರಲ್ಲಿ ಆಗಬಾರದ ಅನಾಹುತವೊಂದು ಆಗಿಹೋಯಿತು. ಅದೊಂದು ದಿನ, ಕಚೇರಿಯಿಂದ ಮನೆಗೆ ಬಂದ ಆನಂದ್‌ಕುಮಾರನ ತಂದೆ, ಯಾಕೋ ಎದೆನೋವು ಎಂದು ಕುಸಿದು ಕೂತವರು ಮತ್ತೆ ಮೇಲೇಳಲಿಲ್ಲ!

ಅದುವರೆಗೂ ಕುಟುಂಬ ನಿರ್ವಹಣೆಗೆ ಆಧಾರವಾಗಿದ್ದುದೇ ತಂದೆಯ ಸಂಬಳ. ಅದೇ ಇಲ್ಲವೆಂದಮೇಲೆ, ಬದುಕಲು ಏನಾದರೂ ಮಾಡಲೇಬೇಕಿತ್ತು. ಈ ಸಂದರ್ಭದಲ್ಲಿ ಆನಂದಕುಮಾರ್, ಅನಿವಾರ್ಯವಾಗಿ ತನ್ನ ಉನ್ನತ ವ್ಯಾಸಂಗದ ಕನಸನ್ನು ಕೈಬಿಟ್ಟ. ಆನಂದ್‌ನ ತಾಯಿ, ಜೀವನ ನಿರ್ವಹಣೆಗೆಂದು ಹಪ್ಪಳ ತಯಾರಿಕೆಗೆ ನಿಂತಳು. ಬೆಳಗಿನಿಂದಲೂ ಮನೆಯಲ್ಲಿದ್ದುಕೊಂಡೇ ಗಣಿತದ ಸಮಸ್ಯೆಗಳನ್ನು ಬಿಡಿಸುತ್ತ, ಹೊಸ ಹೊಸ ಥಿಯರಿಗಳನ್ನು ಸೃಷ್ಟಿಸುತ್ತ ಕಾಲ ಕಳೆಯುತ್ತಿದ್ದ. ಸಂಜೆಯಾಗುತ್ತಿದ್ದಂತೆಯೇ ಮನೆಮನೆಯ ಬಾಗಿಲು ತಟ್ಟಿ ಹಪ್ಪಳ ಮಾರುತ್ತಿದ್ದ. ಹೀಗಿದ್ದಾಗಲೇ, ಹೀಗೆ ಮನೆಮನೆಗೂ ಹೋಗಿ ಹಪ್ಪಳ ಮಾರುವ ಬದಲು ಖಾಸಗಿಯಾಗಿ ಯಾಕೆ ಟ್ಯೂಶನ್ ಹೇಳಬಾರದು? ಹೇಗಿದ್ರೂ ನಿಂಗೆ ಗಣಿತ ಚೆನ್ನಾಗಿ ಗೊತ್ತಿದೆಯಲ್ಲ? ಅದೇ ವಿಷಯವನ್ನು ಯಾಕೆ ಹೇಳಿಕೊಡಬಾರದು ಎಂದು ಹಿತೈಷಿಯೊಬ್ಬರು ಸಲಹೆ ಮಾಡಿದರು. ಆಗ ಈ ಆನಂದಕುಮಾರ್‌ನ ವಯಸ್ಸೆಷ್ಟು ಗೊತ್ತೆ? ಬರೀ 22 ವರ್ಷ. ಅಂದಹಾಗೆ, ಇದು 1995ರ ಮಾತು!

ಒಂದೆರಡು ದಿನ ಬಿಟ್ಟು ಯೋಚಿಸಿದಾಗ- ಹೌದಲ್ವಾ? ನಾನು ಹಾಗೇಕೆ ಮಾಡಬಾರದು ಎಂದು ಆನಂದ್‌ಕುಮಾರನಿಗೂ ಅನಿಸಿತು. ತಕ್ಷಣವೇ 500 ರೂ. ಬಾಡಿಗೆಗೆ ಒಂದು ಪುಟ್ಟ ರೂಮ್ ಪಡೆದು ಅಲ್ಲಿ ಟ್ಯೂಶನ್ ಆರಂಭಿಸಿಯೇ ಬಿಟ್ಟ. ಗಣಿತದ ಮೇಲಿನ ಪ್ರೀತಿಯಿಂದ ತನ್ನ ಟ್ಯೂಶನ್ ಕೇಂದ್ರಕ್ಕೆ ಪ್ರಸಿದ್ಧ ಗಣಿತಜ್ಞ ಶ್ರೀನಿವಾಸ ರಾಮಾನುಜನ್ ಹೆಸರಿನಲ್ಲಿ- `ರಾಮಾನುಜನ್ ಸ್ಕೂಲ್ ಆಫ್ ಮ್ಯಾಥಮೆಟಿಕ್ಸ್’ ಎಂದು ಹೆಸರಿಟ್ಟ. ಮೊದಲ ವರ್ಷ ಟ್ಯೂಶನ್‌ಗೆಂದು ಬಂದವರು ಇಬ್ಬರೇ ಇಬ್ಬರು. ಆ ವರ್ಷ ಅವರಿಬ್ಬರೂ ಗಣಿತದಲ್ಲಿ ನೂರಕ್ಕೆ ನೂರು ಅಂಕ ಪಡೆದರು. ಮರುವರ್ಷ, ಟ್ಯೂಶನ್‌ಗೆ ಬಂದವರ ಸಂಖ್ಯೆ 25 ದಾಟಿತು. ಹಾಗೆ ಪಾಠ ಹೇಳಿಸಿಕೊಂಡವರೆಲ್ಲ ನೂರಕ್ಕೆ ತೊಂಬತ್ತಕ್ಕೂ ಹೆಚ್ಚು ಅಂಕ ಪಡೆದರು. ಪರಿಣಾಮ, ಮೂರು ವರ್ಷ ತುಂಬುವುದರೊಳಗೆ, ಆನಂದಕುಮಾರ್ ಬಳಿ ಟ್ಯೂಶನ್‌ಗೆ ಬಂದವರ ಸಂಖ್ಯೆ 500ನ್ನು ದಾಟಿತು. ಒಂದು ವರ್ಷ ಟ್ಯೂಶನ್ ಹೇಳಿಸಿಕೊಳ್ಳಲು 1500 ರೂ. ಶುಲ್ಕ ಎಂದು ಈ ವೇಳೆಗೆ ಆನಂದಕುಮಾರ್ ಪ್ರಕಟಿಸಿದ್ದ. ಅಷ್ಟು ದುಡ್ಡು ಕೊಡಲು ವಿದ್ಯಾರ್ಥಿಗಳೂ ಸಿದ್ಧರಾಗಿದ್ದರು. ಹೀಗಿದ್ದಾಗಲೇ, ಅದೊಂದು ದಿನ ಆನಂದ್ ಬಳಿಗೆ ಬಂದ ಒಬ್ಬ ಹುಡುಗ- `ಸಾರ್, ನಾನು ತುಂಬಾ ಬಡವರ ಮನೆಯ ಹುಡುಗ. ನನಗೆ ಓದುವ ಆಸೆಯಿದೆ. ದೊಡ್ಡ ಅಧಿಕಾರಿ ಆಗಬೇಕೆಂಬ ಹಂಬಲವಿದೆ. ಗಣಿತದಲ್ಲಿ ತುಂಬಾ ಆಸಕ್ತಿಯಿದೆ. ಆದರೆ, ಟ್ಯೂಶನ್‌ಗೆ ಕೊಡುವಷ್ಟು ಹಣವಿಲ್ಲ’ ಎಂದನಂತೆ.

`ಆ ಹುಡುಗನ ಮಾತು ಕೇಳಿ ತುಂಬಾ ಬೇಸರವಾಯಿತು. ನನ್ನ ತಂದೆ ಆಕಸ್ಮಿಕವಾಗಿ ಸತ್ತುಹೋದಾಗ ನಾನು ಎದುರಿಸಿದ ಪರಿಸ್ಥಿತಿ ನೆನಪಾಯಿತು. ತುಂಬಾ ಬಡಕುಟುಂಬದಿಂದ ಬಂದ ಮೂವತ್ತು ಮಂದಿಗೆ ಉಚಿತವಾಗಿ ಊಟ, ವಸತಿ, ಟ್ಯೂಶನ್ ಹೇಳುವ ನಿರ್ಧಾರಕ್ಕೆ ನಾನು ಬಂದದ್ದೇ ಆಗ. ಈ ವಿಷಯವನ್ನು ಅಮ್ಮನಿಗೆ ಹೇಳಿದಾಗ- `ನಾನು ಆ ಮಕ್ಕಳಿಗೆ ಅಡುಗೆ ಮಾಡಿಕೊಡ್ತೇನೆ ಕಂದಾ’ ಎಂದಳು ಅಮ್ಮ. ಆ ವಿದ್ಯಾರ್ಥಿಗಳ ವಸತಿ ವ್ಯವಸ್ಥೆಯನ್ನು ನನಗೆ ಬಿಡು, ಆ ಜವಾಬ್ದಾರಿಯನ್ನು ನಾನು ತಗೋತೇನೆ ಎಂದು ವೃತ್ತಿಯಿಂದ ಸಂಗೀತಗಾರನಾಗಿರುವ ನಮ್ಮ ಅಣ್ಣ ಪ್ರಣವ್‌ಕುಮಾರ್ ಹೇಳಿದ. ಈ ಇಬ್ಬರ ಬೆಂಬಲದಿಂದ ನನ್ನ ಕೆಲಸ ಹಗುರಾಯಿತು. ಹೀಗೆ ಶುರುವಾದ ತರಗತಿಗೆ ಸೂಪರ್-30 ಎಂಬ ಹೆಸರು ಕೊಟ್ಟೆ ಎನ್ನುತ್ತಾನೆ ಆನಂದಕುಮಾರ್.

ಬೆದರಿಕೆ ಮೆಟ್ಟಿನಿಂತ ಧೀರ : ನೀವು ಪಾಠ ಹೇಳುವುದರಲ್ಲಿ ಅಂಥದೇನಿದೆ ವಿಶೇಷ? ನಿಮ್ಮಲ್ಲಿ ಕಲಿತವರೆಲ್ಲ ಗಣಿತದಲ್ಲಿ ಪಂಡಿತರೇ ಆಗಿಬಿಡ್ತಾರಲ್ಲ? ಈ ಪವಾಡ ಹೇಗೆ ನಡೆಯುತ್ತೆ ಎಂದು ಪ್ರಶ್ನಿಸಿದರೆ ಆನಂದಕುಮಾರ್ ಹೇಳುವುದಿಷ್ಟು- `ಗಣಿತ ಎಂದರೆ, ಹೆಚ್ಚುಕಮ್ಮಿ ಎಲ್ಲ ವಿದ್ಯಾರ್ಥಿಗಳಿಗೂ ಭಯ. ಆ ಭಯವನ್ನು ನಾವು ಮೊದಲ ದಿನವೇ ಹೋಗಲಾಡಿಸುತ್ತೇವೆ. ಕೂಡುವುದು, ಕಳೆಯುವುದು, ಗುಣಿಸುವುದು ಮತ್ತು ಭಾಗಿಸುವುದು ಇದಿಷ್ಟೇ ಗಣಿತ ಎಂದು ಒತ್ತಿ ಹೇಳುತ್ತೇವೆ. ಮುಖ್ಯವಾಗಿ, ಮೊದಲು ತುಂಬ ಸುಲಭವಾಗಿ ಅರ್ಥವಾಗುವ ಐವತ್ತರವತ್ತು ಸಮಸ್ಯೆಗಳನ್ನು ಬಿಡಿಸಿ, ನಂತರವಷ್ಟೇ ಕಷ್ಟದ ಸಮಸ್ಯೆಗಳಿಗೆ ಕೈಹಾಕುತ್ತೇವೆ. ಸಾಧ್ಯವಾದಷ್ಟೂ ವಿದ್ಯಾರ್ಥಿಗಳಿಗೆ ಹೋಂವರ್ಕ್ ನೀಡುವುದಿಲ್ಲ. ಎಲ್ಲ ಸಮಸ್ಯೆಗಳನ್ನೂ ತರಗತಿಯಲ್ಲೇ ಬಿಡಿಸುತ್ತೇವೆ. ಇದಿಷ್ಟೇ ನಮ್ಮ ಯಶಸ್ಸಿನ ಸೂತ್ರ…’

ಇವತ್ತು ಒಂದು ವಿಷಯಕ್ಕೆ ಭರ್ತಿ ಹತ್ತು ಸಾವಿರ ರೂ. ತಗೊಂಡು ಪಾಠ ಹೇಳುವ ಶಿಕ್ಷಕರಿದ್ದಾರೆ. ಟ್ಯೂಶನ್ ಮಾಫಿಯಾ ಕೂಡ ಎಲ್ಲ ನಗರಗಳಲ್ಲೂ ಇದೆ. ಹೀಗಿರುವಾಗ ಕಡಿಮೆ ಶುಲ್ಕ ಪಡೆಯುವುದರಿಂದ ನಿಮಗೆ ನಷ್ಟ ಆಗಿಲ್ಲವಾ? ಟ್ಯೂಶನ್ ಮಾಫಿಯಾದಿಂದ ಬೆದರಿಕೆ ಬಂದಿಲ್ಲವಾ ಎಂಬ ಪ್ರಶ್ನೆಗೆ ಆನಂದಕುಮಾರ್ ಹೇಳುತ್ತಾನೆ- ಇವತ್ತು ಬಿಹಾರದಲ್ಲಿ ಟ್ಯೂಶನ್ ಕೇಂದ್ರಗಳನ್ನು ಹೆಸರಾಂತ ಕ್ರಿಮಿನಲ್‌ಗಳು ನಡೆಸುತ್ತಿದ್ದಾರೆ, ನಿಯಂತ್ರಿಸುತ್ತಿದ್ದಾರೆ. ನಾನು ತುಂಬಾ ಕಡಿಮೆ ಹಣಕ್ಕೆ ಟ್ಯೂಶನ್ ಮಾಡುತ್ತಿರುವುದರಿಂದ ಅವರ ವ್ಯಾಪಾರಕ್ಕೆ ಕೊಡಲಿಪೆಟ್ಟು ಬಿದ್ದಿದೆ. ಈ ಕಾರಣದಿಂದಲೇ ನನ್ನ ಮೇಲೆ ಹಲವರಿಗೆ ಸಿಟ್ಟಿದೆ. ಈಗಲೂ ನನಗೆ ದಿನಕ್ಕೆ ಎರಡಾದರೂ ಜೀವಬೆದರಿಕೆಯ ಕರೆಗಳು ಬರುತ್ತವೆ. ನನ್ನ ಮೇಲೆ ಒಂದೆರಡು ಬಾರಿ ಹಲ್ಲೆಯಾಗಿದೆ. ಒಮ್ಮೆ ಬಾಂಬ್ ದಾಳಿ ಕೂಡ ನಡೆದಿದೆ. ನನ್ನ ಬಳಿ ಪಾಠ ಹೇಳಿಸಿಕೊಂಡ ವಿದ್ಯಾರ್ಥಿಯೊಬ್ಬನಿಗೆ ಚೂರಿಯಿಂದ ಇರಿಯಲಾಗಿದೆ. ಇವೆಲ್ಲ ನನ್ನನ್ನು ಹೆದರಿಸುವ ತಂತ್ರಗಳೇ. ದೈವಕೃಪೆಯಿಂದ, ಎಲ್ಲ ಸಂದರ್ಭಗಳಲ್ಲೂ ನಾನು ಪ್ರಾಣಾಪಾಯದಿಂದ ಪಾರಾಗಿದ್ದೇನೆ. ಈಗ ಗನ್‌ಲೈಸೆನ್ಸ್ ಪಡೆದಿದ್ದೇನೆ. ಬೆಂಗಾವಲಿಗೆ ಅಂಗರಕ್ಷಕರನ್ನು ಇಟ್ಟುಕೊಂಡೇ ಓಡಾಡುತ್ತಿದ್ದೇನೆ. ಒಂದಂತೂ ನಿಜ, ದುಡ್ಡು ನನಗೆ ಮುಖ್ಯವಲ್ಲ. ಬಡವರ ಮಕ್ಕಳಿಗೆ ಉಚಿತವಾಗಿ ಪಾಠ ಹೇಳಬೇಕು ಎಂಬುದು ನನ್ನ ಕನಸಾಗಿತ್ತು. ಅದನ್ನು ನನಸು ಮಾಡಿಕೊಂಡಿದ್ದೇನೆ. ಮೊನ್ನೆ ಮೊನ್ನೆಯವರೆಗೂ ಕ್ರೈಂ ಸಿಟಿ ಎಂದು ಕರೆಸಿಕೊಂಡಿದ್ದ ಪಾಟ್ನಾವನ್ನು ಈಗ `ಎಜುಕೇಷನ್ ಸಿಟಿ’ಎಂದು ಕರೆಯುವಂತೆ ಮಾಡಿದ್ದೇನೆ. ಇಂಥದೊಂದು ಅಪರೂಪದ ಬದಲಾವಣೆ ತಂದ ಹೆಮ್ಮೆ ನನಗಿದೆ…

ಈಗ ಏನಾಗಿದೆ ಗೊತ್ತೆ? : ಪಾಟ್ನಾದ ಆ ಹಳ್ಳಿಹೈದನ ಯಶೋಗಾಥೆ ದೇಶದ ಗಡಿದಾಟಿ ಅಮೆರಿಕ ತಲುಪಿ ಅಲ್ಲೂ ಸುದ್ದಿಯಾಗಿದೆ. ಜಗತ್ತಿನ ಅತ್ಯುತ್ತಮ ಕೋಚಿಂಗ್ ತರಗತಿಗಳ ಪೈಕಿ ಆನಂದಕುಮಾರ್‌ನ ಸೂಪರ್-30 ಶಾಲೆಯೂ ಸ್ಥಾನ ಪಡೆದುಕೊಂಡಿದೆ. ಅದನ್ನು ಭಾರತದ ಅತ್ಯುತ್ತಮ ಕೋಚಿಂಗ್ ಕ್ಲಾಸ್ ಎಂದೇ ಬಣ್ಣಿಸಲಾಗಿದೆ. ಈ ಅಪರೂಪದ ಸಾಧನೆಗೆ ಅಮೆರಿಕ ಸರಕಾರ ಒಂದು ವಿಶೇಷ ಪ್ರಶಸ್ತಿಯನ್ನೂ ನೀಡಿದೆ. ಒಬಾಮಾ ಅವರ ವಿಶೇಷ ಕಾರ್ಯದರ್ಶಿ ರಶೀದ್ ಹುಸೇನ್, ಈ ಪ್ರಶಸ್ತಿಯನ್ನು ಆನಂದಕುಮಾರ್‌ಗೆ ತಲುಪಿಸಿ ಬೆನ್ನುತಟ್ಟಿದ್ದಾರೆ. ಕೈ ಮುಗಿದಿದ್ದಾರೆ. ಆ ಮಹಾರಾಯ ಒಬಾಮಾ ಅಷ್ಟಕ್ಕೇ ಸುಮ್ಮನಾಗಿಲ್ಲ. ಅಮೆರಿಕಕ್ಕೆ ಬರುವಂತೆ ಆಹ್ವಾನ ನೀಡಿದ್ದಾರೆ. ಇದೇ ಸಂದರ್ಭದಲ್ಲಿ ಗಣಿತದ ಹಲವು ಸಮಸ್ಯೆಗಳ ಬಗ್ಗೆ ವಿಶೇಷ ಉಪನ್ಯಾಸ ನೀಡುವಂತೆ ಅಮೆರಿಕದ ವಿಶ್ವವಿದ್ಯಾಲಯಗಳೂ ಆನಂದಕುಮಾರ್ ಅವರಿಗೆ ಆಹ್ವಾನ ನೀಡಿವೆ. ಅಮೆರಿಕದಲ್ಲಿ ಗಣಿತದ ಅಭ್ಯಾಸ ಮಾಡಬೇಕು ಎಂದುಕೊಂಡಿದ್ದ ಹುಡುಗ, ಇವತ್ತು ಅಲ್ಲಿನ ಅಧ್ಯಾಪಕರುಗಳಿಗೇ ಉಪನ್ಯಾಸ ನೀಡುವ ಮಟ್ಟ ತಲುಪಿಕೊಂಡಿದ್ದಾನೆ, ಕೇವಲ ಸ್ವಸಾಮರ್ಥ್ಯದಿಂದ!

ಇಂದು ಆನಂದನಿಂದಾಗಿ ಬಡಮಕ್ಕಳು ಉನ್ನತ ಹುದ್ದೆಗೇರುವಂತಾಗಿದೆ. ಗಣಿತ ಸುಲಿದ ಬಾಳೆಹಣ್ಣಿನಂತಾಗಿದೆ. ಜನಸೇವೆ ಮಾಡಲು ರಾಜಕೀಯವೇ ಬೇಕಾಗಿಲ್ಲ. ದುರ್ದೈವವೆಂದರೆ ಜನ ಸೇವೆಯ ಹೆಸರಿನಲ್ಲಿ ರಾಜಕೀಯಕ್ಕೆ ಬರುವವರು ಟ್ಯೂಶನ್ ಹೇಳಿಸಿ ಕೊಂಡೂ ಎಲ್ಲಾ ವಿಷಯಗಳಲ್ಲೂ ಫೇಲಾದವರೇ. ಇರಲಿ ಬಿಡಿ. ಆನಂದನಂಥವರು ಸ್ಫೂರ್ತಿಯ ಚಿಲುಮೆಯಾಗುತ್ತಾರೆ

Advertisements

About sujankumarshetty

kadik helthi akka

Posted on ಅಕ್ಟೋಬರ್ 17, 2010, in "ಇ-ಲೋಕ" ಲೇಖನಗಳ “ಕನ್ನಡಲೋಕ”, ವಿಶ್ವೇಶ್ವರ ಭಟ್ - ನೂರೆಂಟುಮಾತು and tagged . Bookmark the permalink. ನಿಮ್ಮ ಟಿಪ್ಪಣಿ ಬರೆಯಿರಿ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: