ಡೇಟಿಂಗ್ ಹೋದರೂ ಕಷ್ಟ ಹೋಗದಿದ್ದರೂ ಕಷ್ಟ!

To date or not to dateಅಮೆರಿಕದಲ್ಲಿ ಹೈಸ್ಕೂಲು ಮುಗಿಯುತ್ತಿದ್ದಂತೆ ಗ್ರಾಜುಯೇಟ್ ಆದಂತೆ. ಇಷ್ಟೊತ್ತಿಗೆ ಆಕೆ ಡೇಟಿಂಗ್ ಮಾಡಿ ತನ್ನ ಸಖನನ್ನೋ, ಸಹಪಾಠಿಯನ್ನೋ, ಸಹಪಥಿಕನನ್ನೋ ಆರಿಸಿಕೊಂಡಿರುತ್ತಾಳೆ. ಕಾಲೇಜು ಶಿಕ್ಷಣ ಮುಗಿಸುವ ಹೊತ್ತಿಗೆ ಅವರ ಸಂಬಂಧ ಗಟ್ಟಿಗೊಂಡರೆ, ಅದು ಮದುವೆಯಲ್ಲಿ ಕೊನೆಗೊಳ್ಳುತ್ತದೆ, ಕೊನೆಗೊಳ್ಳಬೇಕು. (ಕೆಲವು ಸಂಬಂಧಗಳು `ಹರೆಯದಲ್ಲೇ ಗರ್ಭಪಾತ’ವಾಗಿ ಮುರಿದುಬೀಳುವುದೂ ಉಂಟು) ಅಂದರೆ ಕಾಲೇಜು ಮುಗಿಸುವುದರೊಳಗೆ ಎಲ್ಲ ಹುಡುಗಿಯರೂ ತಮ್ಮ ಭವಿಷ್ಯವನ್ನು ಕಂಡುಕೊಳ್ಳುವಂತೆ, ಭವಿಷ್ಯದ ಜತೆಗಾರನನ್ನೂ ಕಂಡುಕೊಳ್ಳಲೇಬೇಕು. ಆಗಲೇ ಅವಳು ನಿಜವಾದ ಬುದ್ಧಿವಂತೆ. ಒಂದು ವೇಳೆ ಕಾಲೇಜು ಮುಗಿಸಿದರೂ ಅವಳು ಇನ್ನೂ ತನ್ನ ಬಾಯ್‌ಫ್ರೆಂಡ್‌ನನ್ನು ಆರಿಸಿಕೊಂಡಿಲ್ಲವೆನ್ನಿ, ಆಗ ಶುರುವಾಗುತ್ತದೆ ಹೊಸ ತಲೆನೋವು.

ಅಮೆರಿಕದಲ್ಲಿ ಗಂಡು ಸಿಗುವುದೇ ಇಲ್ಲ. `ನಮ್ಮ ಮಗಳಿಗೊಂದು ಗಂಡನನ್ನು ಹುಡುಕಿಕೊಡಿ’ ಎಂದು ಗೋಗರೆಯಬೇಕಾಗುತ್ತದೆ, ರೇವತಿಯ ಅಪ್ಪ-ಅಮ್ಮನಂತೆ. ಆ ಸಂದರ್ಭದಲ್ಲಿ ಹುಡುಗರೇ ಸಿಗುವುದಿಲ್ಲ. ಅಮೆರಿಕದಲ್ಲಿ ನೆಲೆಸಿದ ಕನ್ನಡಿಗರ ಗಂಡು ಮಕ್ಕಳು ಸಹ ಕಾಲೇಜು ಮುಗಿಸುವ ಹೊತ್ತಿಗೆ ಯಾವಳೋ ಬಿಳಿಹೆಂಡ್ತಿಯನ್ನು ಕಟ್ಟಿಕೊಂಡಿರುತ್ತಾರೆ. ಅಮೆರಿಕದಲ್ಲಿದ್ದೂ ಕರ್ನಾಟಕಕ್ಕೆ ಬಂದು ಮದ್ವೆಯಾಗಿ ಹೋಗುವವರು ಯಾರೆಂದ್ರೆ, ಅದೇ ಹೆಗ್ಗರಣೆ, ಭೈರುಂಬೆ, ಗೋಳಿಯಲ್ಲಿ ಓದಿಯೋ, ಸಿದ್ದಾಪುರದಲ್ಲಿ ಪಿಯುಸಿ ಮುಗಿಸಿಯೋ, ಕಂಪ್ಯೂಟರ್ ಸೈನ್ಸ್ ಎಂಜಿನಿಯರಿಂಗ್ ಮಾಡಿಯೋ ಅಮೆರಿಕಕ್ಕೆ ಉದ್ಯೋಗಕ್ಕಾಗಿ ಹೋಗಿ, ಅಲ್ಲೇ ನೆಲೆಸಿದ (ಅರ್ಧಂಬರ್ಧ) ಕನ್ನಡಿಗರು ಅಥವಾ ಅಮೆರಿಕನ್ನಡಿಗರು. ಆದರೆ ಅಲ್ಲಿಯೇ ಹುಟ್ಟಿದ ಇವರ ಮಕ್ಕಳು ಗಾಂಧಿಬಜಾರು, ರಥಬೀದಿಯ ಸಂಬಂಧ ಬೆಳೆಸಬೇಕೆಂದು ಹಠಹಿಡಿದರೆ ಹೇಗೆ?

ವಯಸ್ಸಿಗೆ ಬಂದ ಮಗಳು ಎಲ್ಲಿಯೇ ಇರಲಿ, ಅವಳಿಗೊಂದು ಯೋಗ್ಯ ವರ ಸಿಕ್ಕು, `ಶುಭಸ್ಯ ಶೀಘ್ರಂ’ ಎಂಬಂತೆ ಮದುವೆಯಾಗಿ ಬಿಡಬೇಕು. ಅದರಲ್ಲೂ ಅಮೆರಿಕದಲ್ಲಿರುವ ಮಗಳಿಗೆ ಇಪ್ಪತ್ತೋ, ಇಪ್ಪತ್ತೈದೋ ಮುಗಿಯುವುದರೊಳಗೆ ನಿಕ್ಕಿಯಾಗಿಬಿಡಬೇಕು, ಇಲ್ಲವೇ ಮದುವೆಯಾಗಬೇಕು. ಇಪ್ಪತ್ತೈದಾದರೂ ಆಕೆ ಯಾರನ್ನೂ ಹುಡುಕಿಕೊಂಡಿಲ್ಲವೆಂದ್ರೆ ಅಮೆರಿಕದಲ್ಲಿ ಗಂಡು ಸಿಗುವುದಿಲ್ಲ.

ಹಾಗಾದರೆ ಅವಳಿಗೆ ಕರ್ನಾಟಕದಲ್ಲಾದರೂ ಗಂಡು ಸಿಕ್ತಾನಾ? ಉಹುಂ.. ಇಲ್ಲವೇ ಇಲ್ಲ. ಅಮೆರಿಕದಲ್ಲಿರುವ ಗಂಡಿಗೆ ಹೆಣ್ಣನ್ನು ಕೊಡ್ತಾರೆ. ಆದರೆ ಅಮೆರಿಕದ ಹೆಣ್ಣಿಗೆ ಗಂಡು ಸಿಗೊಲ್ಲ. ಅದಕ್ಕಿಂತ ಹೆಚ್ಚಾಗಿ ಅಮೆರಿಕದಲ್ಲಿ ಹುಟ್ಟಿದವಳು ಇಲ್ಲಿನ `ಗುಗ್ಗು’ವನ್ನು ಮೊದಲೇ ಇಷ್ಟಪಡುವುದಿಲ್ಲ. ಇನ್ನು ಮದುವೆಯಾಗುವ ಮಾತಂತೂ ದೂರವೇ ಉಳಿಯಿತು. ಆಕೆ ಇಲ್ಲಿ ಬಂದು ಸಂಸಾರ ಮಾಡುವುದುಂಟಾ? ವರ್ಷಕ್ಕೋ ಎರಡು ವರ್ಷಕ್ಕೋ ಒಂದು ಸಲ ಬಂದಾಗ ಹದಿನೈದು ದಿನ ಕಳೆಯುವುದರೊಳಗೆ ಹೈರಾಣಾಗಿ ಹೋಗುವವಳು ಯಾವಜ್ಜೀವ ಇಲ್ಲಿಯೇ ತಂಬು ಹೊಡೆದು ಬದುಕಲಂತೂ ಒಪ್ಪುವುದೇ ಇಲ್ಲ. ಅದಕ್ಕಿಂತ ಹೆಚ್ಚಾಗಿ ಇಲ್ಲಿರುವ ಹುಡುಗರಿಗೆ ಅಮೆರಿಕದಲ್ಲಿರುವ ಕನ್ನಡದ ಮನೆಗಳಲ್ಲಿ ಬೆಳೆದಿರುವ ಹುಡುಗಿಯ ಜತೆ ಮದುವೆ ಸಂಬಂಧ ಬೆಳೆಸಲು ಒಂಥರ ಕೀಳರಿಮೆ. ಏನೇ ಆದರೂ ತಾನು ಅವಳ ಲೆವಲ್ಲಿಗೆ ಬರುವುದಿಲ್ಲ ಎಂದು ತೀರ್ಮಾನಿಸಿರುತ್ತಾನೆ. ಆದರೆ ಹೊರಗೆ ಆತ ಹೇಳುವುದೇ ಬೇರೆ. `ಕನ್ನಡದ ಮನೆಯಲ್ಲಿಯೇ ಬೆಳೆದಿರಬಹುದು ಗುರು, ಆದರೆ ಅಮೆರಿಕದ ಹುಡುಗಿಯರೆಂದರೆ ಹಾಗಂತೆ, ಹೀಗಂತೆ ಕಣೋ. ಅವರು ಭಲೇ ಫಾಸ್ಟ್. ಅವರ ಜತೆ ಜೀವನ ಮಾಡಲು ಸಾಧ್ಯವೇ ಇಲ್ಲ.’ ಎಂಬ ಪ್ಲೇಟ್ ಹಾಕಿರುತ್ತಾನೆ.

ಈಗ ಹೇಳಿ, ಅಮೆರಿಕದಲ್ಲಿರುವ ಕನ್ನಡದ ಮನೆಗಳಲ್ಲಿ ಹುಟ್ಟಿ ಬೆಳೆದ ಹೆಣ್ಣುಮಕ್ಕಳು ಏನು ಮಾಡಬೇಕು? ತಂದೆ-ತಾಯಿಗಳ ಕಂಪನ, ಒಳಗೆ ಮಡುಗಟ್ಟಿದ ಕುದಿಮೌನವನ್ನು ಯಾರ ಮುಂದೆ ಹೇಳಿಕೊಳ್ಳಬೇಕು? ಸುಶೀಲೆ ಸುಶೀಲೆಯೇ ಆಗಿರಬೇಕೆಂದು ತಂದೆ-ತಾಯಿ ಬಯಸಿದರೆ ಅವಳಿಗೊಬ್ಬ ಬಾಯ್‌ಫ್ರೆಂಡ್ ಸಿಗದಿದ್ದರೆ ಏನು ಮಾಡಬೇಕು? ಅವಳಿಗೊಂದು ಮದುವೆಯೇ ಆಗದಿದ್ದರೆ ಹೇಗೆ? ಅಪ್ಪ-ಅಮ್ಮ ಹುಡುಕಿದ ಗಾಂಧಿಬಜಾರಿನ ಹುಡುಗನ ಜತೆ ಜೀವಿಸುವುದಾದರೂ ಹೇಗೆ? ಇನ್ನು ಸುಶೀಲೆ ಸೂಸನ್ ಆಗುವುದನ್ನು ಹೇಗೆ ಕಣ್ಣಾರೆ ನೋಡೋದು? ಜೇಮ್ಸ್, ವಿಲಿಯಮ್ಸ್‌ನನ್ನು ಹೇಗೆ `ಅಳಿಯಂದಿರೇ’ ಎಂದು ಕರೆಯೋದು? ತಂದೆ-ತಾಯಿ ತಾಕಲಾಟ ಆ ಕಲ್ಲವಿಲತೆಯನ್ನು ಅನುಭವಿಸಿದವನೇ ಬಲ್ಲ.

ಅಮೆರಿಕದಲ್ಲಿ ನೆಲೆಸಿರುವ ಕನ್ನಡಿಗರು ಆಪಸ್ನಾತಿಯಲ್ಲಿ ಮಾತಾಡಿಕೊಳ್ಳುವುದುಂಟು. ಆ ಸಂದರ್ಭದಲ್ಲಿ ಬಳಕೆಯಾಗುವ ಒಂದು ಪದವೆಂದರೆ BMW. ಅಲ್ಲಿನ ಕನ್ನಡಿಗರು BMW ಕಾರನ್ನು ಇಷ್ಟಪಡಬಹುದು. ಆದರೆ ತಮ್ಮ ಮಗಳು black (ಕಪ್ಪು ವರ್ಣೀಯರು), muslim (ಮುಸ್ಲಿಮರು) ಹಾಗೂ white (ಅಮೆರಿಕನ್) ಜತೆ ಸಂಬಂಧ ಬೆಳೆಸುವುದನ್ನು ಇಷ್ಟಪಡುವುದಿಲ್ಲ. ಇವರನ್ನು ಬಿಟ್ಟು ಬೇರೆ ಯಾರನ್ನು ಬೇಕಾದರೂ ಮದುವೆಯಾಗಲಿ, ತಕರಾರಿಲ್ಲ ಎಂದು ಭಾವಿಸುತ್ತಾರೆ. ಅಂದರೆ ಕನ್ನಡಿಗರಲ್ಲದಿದ್ದರೂ ಪರವಾಗಿಲ್ಲ, ಭಾವಿ ಅಳಿಯ ತೆಲುಗನೋ, ತಮಿಳನೋ, ಕಾಶ್ಮೀರಿಯೋ, ಪಂಜಾಬಿಯೋ ಆಗಿರಲಿ, ಆದರೆ ‘BMW’ ಮಾತ್ರ ಬೇಡವೇ ಬೇಡ ಅಂದುಕೊಳ್ಳುತ್ತಾರೆ. ಆದರೆ ಪ್ರೀತಿಗೆ ಬಣ್ಣ, ಧರ್ಮ, ದೇಶ, ಭಾಷೆ ಯಾವುದರ ಸಂಬಂಧ ಗೊತ್ತಿದೆ?

ಕೊನೆಗೆ ಕನ್ನಡದ ತಂದೆ-ತಾಯಿಗಳು, `ಹರನೋ, ಶಿವನೋ, ನಮ್ಮ ಮಗ ಮಾದಕ ಪದಾರ್ಥ ವ್ಯಸನಿ ಆಗದಿರಲಪ್ಪಾ, ಮಗಳು ಹದಿಹರೆಯದಲ್ಲೇ ಬಸುರಿ (teenage pregnancy) ಆಗದಿರಲಪ್ಪಾ’ ಎಂದು ಊರಲ್ಲಿದ್ದ ದೇವರಿಗೆಲ್ಲ ಪ್ರಾರ್ಥನೆಯನ್ನೋ, ಹರಕೆಯನ್ನೋ ಹೊರುತ್ತಾ ಈ ಕೊರಗಿನಲ್ಲೇ ಬದುಕನ್ನು ತಳ್ಳುತ್ತಿರುತ್ತಾರೆ. ಕೊನೆಗೂ ಹೆತ್ತ ಮಗಳು ಸೂಸನ್ ಆಗುವುದು, ವಿಲಿಯಮ್ಸ್ ಅಳಿಯನಾಗುವುದು ಬದುಕಿನ ಭಯವಾಗಿಯೇ ಸುಪ್ತಪ್ರಜ್ಞೆಯಲ್ಲಿ ಕಾಡುತ್ತದೆ. ಅಮೆರಿಕದ ಎಲ್ಲ ಆಧುನಿಕತೆಯನ್ನು ಆರಾಧಿಸುತ್ತಾ ಇಷ್ಟಪಡುವ ನಮ್ಮವರಿಗೆ ಈ ಕಠೋರ ಸತ್ಯ ಮಾತ್ರ ಅರ್ಥವಾಗುವುದಿಲ್ಲ. ಅರ್ಥವಾದರೂ ಅದನ್ನು ಅರಗಿಸಿಕೊಂಡು ಒಪ್ಪಿಕೊಳ್ಳಲು ಮನಸ್ಸು ಒಪ್ಪುವುದಿಲ್ಲ.

ಮಗಳು ಡೇಟಿಂಗ್ ಹೋದರೂ ಕಷ್ಟ. ಹೋಗದಿದ್ದರೂ ಕಷ್ಟ. ಬಾಯ್‌ಫ್ರೆಂಡ್‌ನನ್ನು ಕಟ್ಟಿಕೊಂಡರೂ ಕಷ್ಟ. ಕಟ್ಟಿಕೊಳ್ಳದಿದ್ದರೂ ಕಷ್ಟ. ಎಂಥ ಫಜೀತಿ! ಎಂಥ ವಿಚಿತ್ರ ಸಂದಿಗ್ಧ? ಹೇಳಲೂ ಆಗೊಲ್ಲ, ಅನುಭವಿಸಲೂ ಆಗೊಲ್ಲ. ಈ ಹಿನ್ನೆಲೆಯಲ್ಲಿ ನಾವಿಕ ಸಂಘಟಿಸಿದ `ಸಿಂಗಲ್ಸ್ ಮೀಟ್’ ವಿಶೇಷವಾಗಿ ಕಂಡಿತು. ಮುಂದಿನ ತಿಂಗಳು ನಡೆಯುವ ಅಕ್ಕ ಸಮಾವೇಶದಲ್ಲಿ ಈ ಸಂಗತಿ ಗಂಭೀರವಾಗಿ ಚರ್ಚೆಯಾದರೆ ಒಳ್ಳೆಯದು. ಅಷ್ಟಕ್ಕೂ ಅವರು ಬೇರೆ ಯಾರೋ ಅಲ್ಲ ನೋಡಿ, ನಮ್ಮ ಚಿಕ್ಕಪ್ಪನೋ, ಅಣ್ಣನೋ, ಅಕ್ಕನೋ, ತಂಗಿಯ ಮಕ್ಕಳು. ನಮ್ಮ ಹೆಣ್ಣುಮಕ್ಕಳು. ಬದುಕು ನಮ್ಮ ಹೆಣ್ಣುಮಕ್ಕಳ ಜೀವನದ ಹಾದಿತಪ್ಪಿಸದಿರಲಿ.

Advertisements

About sujankumarshetty

kadik helthi akka

Posted on ಅಕ್ಟೋಬರ್ 17, 2010, in "ಇ-ಲೋಕ" ಲೇಖನಗಳ “ಕನ್ನಡಲೋಕ”, ವಿಶ್ವೇಶ್ವರ ಭಟ್ - ನೂರೆಂಟುಮಾತು and tagged . Bookmark the permalink. ನಿಮ್ಮ ಟಿಪ್ಪಣಿ ಬರೆಯಿರಿ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: