ತಂದೆಯಂಥ ಗೆಳೆಯನನ್ನು ಕಳೆದುಕೊಂಡೆ

Manohar Malgaonkar, Indian writer in english

ಮನೋಹರ ಮಳಗಾಂವ್‌ಕರ್ ತೀರಿಕೊಂಡಿರುವುದು ತಂದೆಯನ್ನು ಕಳೆದುಕೊಂಡಷ್ಟೇ ದುಃಖವಾಗಿದೆ. ಶಾಮರಾಯರು ನನ್ನ ಪತ್ರಿಕೋದ್ಯಮದ ಗುರು. ಸಾಹಿತ್ಯದ ವಿಷಯಕ್ಕೆ ಬಂದರೆ ಒಂದು ಕಾದಂಬರಿಯನ್ನು ಹೇಗೆ ಪಕ್ವವಾಗಿ ಬರೆಯಬೇಕು ಎಂಬುದನ್ನು ನನಗೆ ಕಲಿಸಿಕೊಟ್ಟದ್ದೇ ಮಳಗಾಂವಕರ್ ಬರಹಗಳು. ಒಟ್ಟಿನಲ್ಲಿ ಅವರು ನನಗೆ ಗುರು ಮಾತ್ರವಲ್ಲ, ಗೆಳೆಯರೂ ಆಗಿದ್ದರು.

ನಿಮಗೆ ಗೊತ್ತಿಲ್ಲದ ಮಳಗಾಂವ್‌ಕರ್ : ಮಳಗಾಂವ್‌ಕರ್ ಅವರಿಗೆ 97 ವರ್ಷವಾಗಿತ್ತು. ಜೊಯಿಡಾ ಸಮೀಪದ ಬುರ್ಬುಸಾ ಎಂಬಲ್ಲಿ ಕಾಡಿನ ಮಧ್ಯೆ ಒಂಟಿ ಬಂಗಲೆಯಲ್ಲಿ ವಾಸವಿದ್ದರು. ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ಕರ್ನಲ್‌ ಆಗಿ ಸ್ವಯಂ ನಿವೃತ್ತಿ ಪಡೆದಿದ್ದ ಅವರು, ಇದಕ್ಕೂ ಮುನ್ನ ರೈಲ್ವೆ ಹಳಿಗಳನ್ನು ಹಾಕುವ ಕಂಟ್ರಾಕ್ಟರ್ ಆಗಿದ್ದರು! ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಬಿ.ಎ ವ್ಯಾಸಂಗ ಮಾಡಿದ್ದರು. ತುಂಬ ಜನಕ್ಕೆ ಗೊತ್ತಿಲ್ಲ, ಅವರು ಹುಟ್ಟಿದ್ದು ದಾಂಡೇಲಿ ಸಮೀಪದ ಜಗಲ್ ಪೇಟೆ ಎಂಬ ಪುಟ್ಟ ಹಳ್ಳಿಯಲ್ಲಿ.

50ರ ದಶಕದಲ್ಲಿ ಗೋವಾದಿಂದ ಎರಡು ಬಾರಿ ಅವರು ಲೋಕಸಭೆಗೆ ಸ್ಫರ್ಧಿಸಿ ಪರಾಭವಗೊಂಡಿದ್ದರು. ರಾಜಕೀಯ ಅವರ ಮೆಚ್ಚಿನ ಕ್ಷೇತ್ರ ಆಗಿತ್ತೇ ಹೊರತು ರಾಜಕಾರಣಿಗಳನ್ನು ಅವರು ಹತ್ತಿರಕ್ಕೂ ಬಿಟ್ಟುಕೊಳ್ಳುತ್ತಿರಲಿಲ್ಲ.

`ಶಾಲಿಮಾರ್’ ಹೆಸರಿನಲ್ಲಿ ಮೂಡಿಬಂದ ಇವರ ಕಾದಂಬರಿ ಇದೇ ಹೆಸರಿನಲ್ಲಿ ಹಿಂದಿ ಚಿತ್ರವಾಗಿ ಮೂಡಿಬಂತು. ಧರ್ಮೇಂದ್ರ ಈ ಚಿತ್ರದ ನಾಯಕ ಪಾತ್ರ ವಹಿಸಿದ್ದ. ಅಮೆರಿಕ, ಇಂಗ್ಲೆಂಡ್, ಫ್ರಾನ್ಸ್ ದೇಶಗಳ ವಿಶ್ವವಿದ್ಯಾಲಯಗಳಲ್ಲಿ ಅತಿಥಿ ಉಪನ್ಯಾಸಕರಾಗಿಯೂ ಇವರು ಕೆಲಸ ಮಾಡಿದ್ದರು. ಧರ್ಮದ ಬಗ್ಗೆ ಸಾಕಷ್ಟು ಓದಿಕೊಂಡಿದ್ದ ಇವರು ಭಗವದ್ಗೀತೆಯಲ್ಲಿ ಪಾಂಡಿತ್ಯವನ್ನೇ ಪಡೆದಿದ್ದರು. ಸಂಸ್ಕೃತವನ್ನು ಆಳವಾಗಿ ವ್ಯಾಸಂಗ ಮಾಡಿದ್ದರು. ತಮಾಷೆ ಎಂದರೆ, ಇವರು ದೇವರನ್ನು ನಂಬುತ್ತಿರಲಿಲ್ಲ! ಒಂದು ಕಾಲದಲ್ಲಿ ವೃತ್ತಿಪರ ಹುಲಿ ಬೇಟೆಗಾರರಾಗಿದ್ದ ಮಳಗಾಂವ್‌ಕರ್, ನಂತರ ಅರಣ್ಯ ಮತ್ತು ಪ್ರಾಣಿ ಸಂರಕ್ಷಣೆಯಲ್ಲಿ ಗಂಭೀರವಾಗಿ ತೊಡಗಿಕೊಂಡಿದ್ದರು.

ಸಾಹಿತಿಯಾಗಿ… : ಭಾರತದ ಮೊದಲ ಸಾಲಿನ ಆಂಗ್ಲ ಲೇಖಕರಲ್ಲಿ ಒಬ್ಬರಾದ ಮಳಗಾಂವ್‌ಕರ್ ಅವರ ಸಾಹಿತ್ಯ ಕೃತಿಗಳು ಫ್ರಾನ್ಸ್ ಮತ್ತು ಈಜಿಪ್ಟ್‌ಗಳಲ್ಲಿ ಹೆಚ್ಚು ಜನಪ್ರಿಯಗೊಂಡಿದ್ದವು. ಮುಖ್ಯವಾಗಿ, ಭಾರತದ ಎಲ್ಲ ರಾಜ ಮನೆತನಗಳೊಂದಿಗೆ ಅವರ ಗೆಳತನವಿತ್ತು. ರಾಜರ ಲೋಲುಪತೆ, ಆಳ್ವಿಕೆ, ಕಾರ್ಯ ವೈಖರಿ ಇತ್ಯಾದಿಗಳನ್ನು ಬರಹಕ್ಕೆ ಇಳಿಸುವುದು ಅವರ ಮೆಚ್ಚಿನ ಕೆಲಸವಾಗಿತ್ತು. ಈ ದಿಸೆಯಲ್ಲಿ ಮೂಡಿಬಂದ `ಪ್ರಿನ್ಸೆಸ್’ ಅವರ ಉತ್ಕೃಷ್ಟ ಕಾದಂಬರಿ. `ಮಹಾನ್ ಮರಾಠ’ ಮರೆಯಲಾರದ ಕೃತಿ. ಉಳಿದಂತೆ `ಡೆವಿಲ್ಸ್ ವಿಂಡ್’ ಎಂಬ ಅವರ ಕಾದಂಬರಿಯನ್ನು `ದಂಗೆಯ ದಿನಗಳು’ ಹೆಸರಿನಲ್ಲಿ ನಾನೇ ಕನ್ನಡಕ್ಕೆ ತಂದಿದ್ದೇನೆ. ನಾಥೂರಾಮ್ ಗೋಡ್ಸೆಯನ್ನು ಜಗತ್ತೇ ವಿಲನ್ ಥರ ನೋಡುತ್ತದೆ. ಆದರೆ, ಇವರು ಮಾತ್ರ ಆತನನ್ನು ದಾರಿತಪ್ಪಿದ ಪ್ರಾಮಾಣಿಕ ದೇಶಭಕ್ತ ಎಂಬುದನ್ನು `ಮೆನ್ ಹು ಕಿಲ್ಡ್ ಗಾಂಧಿ’ ಎಂಬ ಕೃತಿಯಲ್ಲಿ ಅದ್ಭುತವಾಗಿ ಕಟ್ಟಿಕೊಟ್ಟಿದ್ದಾರೆ. ಇದನ್ನೂ ನಾನು ಅನುವಾದ ಮಾಡಿದ್ದೇನೆ (ಅವನೊಬ್ಬನಿದ್ದ ಗೋಡ್ಸೆ). ಇನ್ನು ಇವರ `ಇನ್‌ಸೈಡ್ ಗೋವಾ’ ಪುಸ್ತಕವನ್ನು ಓದಿಯೇ ಆನಂದಿಸಬೇಕು.

ಉಳಿದಂತೆ, ಮಳಗಾಂವ್‌ಕರ್ ಅವರ ಸಾಹಿತ್ಯದ ಬಗ್ಗೆ ನಮ್ಮ ಖ್ಯಾತ ವಿಮರ್ಶಕ ಜಿ.ಎಸ್.ಆಮೂರ ಅದ್ಭುತ ಪುಸ್ತಕ ಬರೆದಿದ್ದಾರೆ. ಇತಿಹಾಸಕಾರ ಷ.ಶೆಟ್ಟರ್ ಆಂಗ್ಲದಲ್ಲಿ ಮತ್ತು ಕನ್ನಡದಲ್ಲಿ ನಾನು- ಅವರ ಮುರಾರ್ ರಾವ್ ಘೋರ್ಪಡೆ ಕುರಿತ ಪುಸ್ತಕವನ್ನು ಅನುವಾದ ಮಾಡುತ್ತಿದ್ದೇವೆ. ಚರ್ಚಿಲ್‌ನಿಂದ ಕೊಲ್ಲಾಪುರದ ರಾಜರ ತನಕ ಅವರ ಬಳಿ ಸಾಕಷ್ಟು ವೈವಿಧ್ಯಮಯ ಪುಸ್ತಕಗಳ ಭಂಡಾರವೇ ಇದೆ.

ಎರಡು ದೊಡ್ಡ ಹೊಡೆತ: ಮಳಗಾಂವ್ ಕರ್ ಅವರೊಂದಿಗೆ ಅರ್ಧ ಶತಮಾನ ಬದುಕು ಹಂಚಿಕೊಂಡ ಅವರ ಪತ್ನಿ ತಮ್ಮ 83ನೇ ವಯಸ್ಸಿನಲ್ಲಿ ತೀರಿಕೊಂಡರು. ಇದಾದ ಐದೇ ವರ್ಷಕ್ಕೆ ಅವರ ಒಬ್ಬಳೇ ಮಗಳೂ ಕಣ್ಮುಚ್ಚಿದಳು. ಇಬ್ಬರೂ ಕ್ಯಾನ್ಸರಿಗೆ ಬಲಿಯಾಗಿದ್ದು ದುರಂತ. ಇದು ಅವರ ಬದುಕಿನಲ್ಲಿ ನಡೆದ ಎರಡು ದೊಡ್ಡ ದುರಂತ. ಇವರ ಅಳಿಯ ಅಂಜ್ರೇ ಕಪೂರ್ ಮುಂಬೈನಲ್ಲಿದ್ದರೆ, ಕಿರಿಯ ಸೋದರರೊಬ್ಬರು ಬೆಂಗಳೂರಿನಲ್ಲಿ ವಾಸವಿದ್ದಾರೆ. ಅಂದಹಾಗೆ, ಅವರು ಮಾತ್ರ ಒಂದು ದಿನವೂ ಮಾತ್ರೆ ನುಂಗಲಿಲ್ಲ. ಚುಚ್ಚುಮದ್ದು ತೆಗೆದುಕೊಳ್ಳಲಿಲ್ಲ.

ಅಷ್ಟು ಶಿಸ್ತಿನ ಬದುಕು ಅವರದು. ತೀರಾ ವಯಸ್ಸಾಗಿದ್ದ ಕಾರಣ ಅವರ ಅನ್ನನಾಳ ಚಿಕ್ಕದಾಗಿ, ಗಂಟಲಲ್ಲಿ ಆಹಾರ ಇಳಿಸುವುದು ತ್ರಾಸದಾಯಕವಾಗಿತ್ತು ಎನ್ನುವುದನ್ನು ಬಿಟ್ಟರೆ, ಅವರು ಆರೋಗ್ಯವಂತರಾಗಿದ್ದರು. ಉಳಿದಂತೆ ನೆನಪಾಗುವ ವಿಷಯ ಅಂದರೆ, `ಸರ್… ನೀವು ಮದುವೆಯಾದ ದಿನಾಂಕ ನೆನಪಿದೆಯೇ?’ ಎಂದು ಒಮ್ಮೆ ಕೇಳಿದ್ದೆ. ಅದಕ್ಕೆ ಅವರು, `ಮರೆಯಲು ಸಾಧ್ಯವೇ? ಭಾರತ- ಪಾಕ್ ಯುದ್ಧ ಶುರುವಾದ ಮೊದಲ ದಿನವೇ ನಮ್ಮ ದಾಂಪತ್ಯದ ಮೊದಲ ದಿನವಾಗಿತ್ತು’ ಎಂದು ನಕ್ಕಿದ್ದರು!

ಕಡೆಯಲ್ಲಿ… ನನ್ನ ಬಗ್ಗೆ ಅವರಿಗೆ ಎಷ್ಟು ಪ್ರೀತಿ ಎಂದರೆ ಅವರ ಕೃತಿಗಳನ್ನು ಅನುವಾದಿಸುವ ಹಕ್ಕನ್ನು ನನಗೆ ಮಳಗಾಂವ್ ಕರ್ ನೀಡಿದ್ದರು. ನಾನು ಜೋಯಿಡಾ ಕಾಡಿಗೆ ಹೋದಾಗಲೆಲ್ಲ ಅವರ ಇಷ್ಟದ ಪುಸ್ತಕ, ರಮ್ಮು ಮತ್ತು ಸಂಗೀತದ ಸಿ.ಡಿಗಳನ್ನು ಕೊಟ್ಟುಬರುತ್ತಿದ್ದೆ. ಕಡೆಗಾಲದಲ್ಲಿ ಮನೋಹರ ಮಳಗಾಂವ್‌ಕರ್ ಅವರ ಸೇವೆ ಮಾಡಿದ ಪುಣ್ಯ ನನ್ನದು ಎಂಬುದೇ ನನ್ನ ಭಾಗ್ಯ! ತಂದೆಯಂಥ ಗುರುವಿಗೆ ಅಂತಿಮ ನಮಸ್ಕಾರ…

Advertisements

About sujankumarshetty

kadik helthi akka

Posted on ಅಕ್ಟೋಬರ್ 17, 2010, in "ಇ-ಲೋಕ" ಲೇಖನಗಳ “ಕನ್ನಡಲೋಕ”, ರವಿ ಬೆಳಗೆರೆ - ಸೂರ್ಯ ಶಿಕಾರಿ and tagged . Bookmark the permalink. ನಿಮ್ಮ ಟಿಪ್ಪಣಿ ಬರೆಯಿರಿ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: