ಪ್ರತಿ ಗೆಲುವಿನ ಹಿಂದೆಯೂ ನೂರಾರು ಕಥೆಗಳಿವೆ

Richar Bransonರಿಚರ್ಡ್ ಬ್ರಾನ್‌ಸನ್ ಬಗ್ಗೆ ಈ ಅಂಕಣದಲ್ಲಿ ಎರಡು-ಮೂರು ಬಾರಿ ಬರೆದಿದ್ದೆ. ಪ್ರತಿಸಲ ಬರೆದಾಗಲೂ ಓದುಗರು ಅವನ ಬಗ್ಗೆ ಇನ್ನೂ ಬರೆಯಿರಿ, ಮತ್ತಷ್ಟು ಹೇಳಿ ಎಂದು ವರಾತ ಮಾಡಿದ್ದುಂಟು. ಅವನ ಜೀವನ, ಸಿದ್ಧಾಂತವೇ ಹಾಗಿದೆ. ಒಮ್ಮೆ ಓದಿದರೆ ಆತ ಸುಮ್ಮನೆ ಕುಳಿತುಕೊಳ್ಳಲು ಬಿಡೊಲ್ಲ. ಚಿಂತಿಸಲು ಹಚ್ಚುವುದಕ್ಕಿಂತ ನಮ್ಮನ್ನು ಹೆಚ್ಚು ಕ್ರಿಯಾಶೀಲರನ್ನಾಗಿ ಮಾಡುತ್ತಾನೆ. ಅದೇ ಅವನ ವೈಶಿಷ್ಟ್ಯ. ಈ ಬಾರಿ ನಿಮಗಾಗಿ ಮತ್ತೊಮ್ಮೆ ಬ್ರಾನ್‌ಸನ್ ನನ್ನು ಕೊಡುತ್ತಿದ್ದೇನೆ. Challenge Yourself ಎಂಬ ಅವನ ಬರಹದಲ್ಲಿನ ಸೊಗಸನ್ನು ನೀವು ಓದಿಯೇ ಅನುಭವಿಸಬೇಕು.

* * *
ಹತ್ತು ಮಂದಿ ಮೆಚ್ಚುವಂಥ ಒಂದು ಕೆಲಸ ಮಾಡಬೇಕು! ಇಂಥದೊಂದು ಆಸೆ ಎಲ್ಲರಿಗೂ ಇರುತ್ತದೆ. ಈ ಥರದ ಆಸೆಯನ್ನು ಕೆಲವರು `ಅತಿಯಾಸೆ’ ಅನ್ನುತ್ತಾರೆ. ಕೆಲವರು `ಮಹತ್ವಾಕಾಂಕ್ಷೆ’ ಎನ್ನುತ್ತಾರೆ. ಒಂದಷ್ಟು ಜನ `ಗುರಿ’ ಅನ್ನುತ್ತಾರೆ. ಕೆಲವರಂತೂ ಹಿಂದೆ ಮುಂದೆ ಯೋಚಿಸದೆ- ಹತ್ತು ಜನರನ್ನು ಮೆಚ್ಚಿಸಬೇಕು ಅಂತ ನಕ್ಷತ್ರ ಹಿಡಿಯೋಕೆ ಹೋಗ್ತಿದಾನಲ್ಲ? ಹುಚ್ಚ ಕಣ್ರೀ ಅವ್ನು ಎಂದು ನಗೆಯಾಡುತ್ತಾರೆ.

ಅವರಿವರ ಮಾತುಗಳನ್ನು ಅಲ್ಲಿಯೇ ಬಿಡಿ. ನನ್ನ ಆನುಭವದ ಪ್ರಕಾರ ಹೇಳುವುದಾದರೆ- ಮೊದಲು, ಸವಾಲುಗಳಿಗೆ ಎದೆಯೊಡ್ಡಿ ನಿಲ್ಲುವ ಛಾತಿ, ಆ ಧಾಡಸೀತನ ನಮ್ಮದಾಗಬೇಕು. ಆಗ ಮಾತ್ರ ಗುರಿಸಾಧನೆಯ ರಹದಾರಿ ನಮ್ಮೆದುರು ತೆರೆದುಕೊಳ್ಳುತ್ತದೆ. ಹೀಗೆ, ಏನೋ ಸಾಧಿಸಲು ಹೊರಟಾಗ ನಾವು ಸದಾ ಆಶಾವಾದಿಯಾಗಿಯೇ ಇರಬೇಕು. ಗೆದ್ದೇ ಗೆಲ್ಲುವೆ ದಿನಾ ದಿನಾ ಎಂಬುದು ನಮ್ಮ ಘೋಷವಾಕ್ಯವಾಗಬೇಕು. ಒಂದು ಸರಳ ಸಂಗತಿ ನೆನಪಿರಲಿ. ಗೆಲುವಿನ ಹಾದಿ ಯಾವತ್ತೂ ಹೂವಿನ ಹಾಸಿಗೆಯಲ್ಲ. ಅಲ್ಲಿ ಹೆಜ್ಜೆಗೊಂದು ಸೋಲು ಎದುರಾಗುತ್ತದೆ. ಕಷ್ಟಗಳ ಸಂಕೋಲೆಯೇ ಮೈ ಸುತ್ತಿಕೊಳ್ಳುತ್ತದೆ. ಇಂಥ ಸಂದರ್ಭದಲ್ಲಿ- `ಓಹ್, ಈ ಕೆಲಸ ನನ್ನಿಂದ ಸಾಧ್ಯವಿಲ್ಲ’ ಎಂದು ಹೆಜ್ಜೆ ಹಿಂದಿಟ್ಟರೆ ಅವರನ್ನು ಪಲಾಯನವಾದಿ ಎಂದೇ ಹೇಳಬೇಕಾಗುತ್ತದೆ. ಏಕೆಂದರೆ- ಗೆಲ್ಲಲು ನಿರ್ಧರಿಸಿದವನು ಯಾವತ್ತೂ ಹಿಂದೆ ತಿರುಗಿ ಓಡಲು ಯೋಚಿಸಲೇಬಾರದು. ಜೇನು ತಿನ್ನಲು ಹೊರಟವನು ಜೇನು ಹುಳುಗಳಿಂದ ಕಚ್ಚಿಸಿಕೊಳ್ಳಲೂ ಸಿದ್ಧನಿರುತ್ತಾನೆ. ಅಂಥದೇ ಮನಸ್ಸಿನ ಸವಾಲಿಗೆ ಎದೆಯೊಡ್ಡಿದವನದೂ ಆಗಿರಬೇಕು.

ಒಮ್ಮೆ ಗೆಲುವೆಂಬುದು ನಿಮ್ಮದಾಯ್ತು ಅಂದುಕೊಳ್ಳಿ; ಆ ನಂತರದಿಂದಲೇ ಸಮಾಜದಲ್ಲಿ ನಿಮ್ಮ ಅಂತಸ್ತು ಬದಲಾಗುತ್ತದೆ. ಗೆಲುವಿನ ಹಿಂದೆಯೇ ಖ್ಯಾತಿ ಬರುತ್ತದೆ. ದುಡ್ಡು ಬರುತ್ತದೆ. ಅಭಿಮಾನಿಗಳ ಹಿಂಡು ಹುಟ್ಟಿಕೊಳ್ಳುತ್ತದೆ. ನಿಮ್ಮನ್ನು ಆರಾಧನಾ ಭಾವದಿಂದ ನೋಡುವವರ ಸಂಖ್ಯೆ ಹೆಚ್ಚಾಗುತ್ತದೆ. ನಿಮಗೆ ನಾನು ಮೊದಲ ಬಾರಿ ಗೆಲುವಿನ ರುಚಿ ನೋಡಿದ ಅರ್ಥಾತ್ ಬೆಟ್ ಗೆದ್ದ ಸಂಗತಿಯನ್ನು ಹೇಳಬೇಕು: ನನಗೆ ಆಗ ನಾಲ್ಕು ಅಥವಾ ಐದು ವರ್ಷವಾಗಿತ್ತು. ಬೇಸಿಗೆ ಆರಂಭವಾದ ತಕ್ಷಣ ಒಂದು ಬೀಚ್ ಇದ್ದ ಪ್ರದೇಶಕ್ಕೆ ಹದಿನೈದು ದಿನಗಳ ಪಿಕ್ನಿಕ್ ಹಾಕಿದರು ಡ್ಯಾಡಿ. ನಮ್ಮ ಜತೆಯಲ್ಲಿ ಅಮ್ಮ, ಚಿಕ್ಕಪ್ಪ ಮತ್ತು ಸೋದರ ಸಂಬಂಧಿಗಳಿದ್ದರು. ಬೀಚ್ ತಲುಪಿದ ಮರುಕ್ಷಣವೇ ನಾನು ಎಲ್ಲರನ್ನೂ ಬಿಟ್ಟು ಸೀದಾ ನೀರಿನ ಕಡೆಗೆ ಓಡಿದೆ. ನಂತರ ಹಾಗೇ ಒಮ್ಮೆ ದಿಟ್ಟಿಸಿ ನೋಡಿದೆ. ನನ್ನ ಕಣ್ಣ ಅಳತೆಗೇ ನಿಲುಕದಂತಿದ್ದ ವಿಶಾಲ ಸಾಗರವನ್ನು ಕಂಡು ಮಾತೇ ಹೊರಡದಾಯಿತು. ನಾನು ಹೀಗೆ ಮಾತೇ ಹೊರಡದವನಂತೆ ನಿಂತಿದ್ದಾಗಲೇ ಅಲ್ಲಿಗೆ ಬಂದ ನಮ್ಮ ಆಂಟಿ ಹೀಗೆಂದರು: `ರಿಕೀ, ಇನ್ನು ಹತ್ತು ದಿನದಲ್ಲಿ ನೀನು ಈಜು ಕಲಿತರೆ ನಿನಗೆ ಹತ್ತು ಶಿಲ್ಲಾಂಗ್‌ಗಳನ್ನು ಬಹುಮಾನವಾಗಿ ಕೊಡ್ತೇನೆ. ಬೆಟ್ ಗೆಲ್ಲು ನೋಡೋಣ…’

ಸಮುದ್ರದ ಜತೆಗೇ ಬೆಳೆಯುವವರ ಮಾತು ಬೇರೆ. ರಜೆಯ ದಿನಗಳಲ್ಲಿ ಸಮುದ್ರದಿಂದ ತುಸು ದೂರದಲ್ಲಿ ಉಳಿದಿದ್ದು, ಹತ್ತಾರು ದಿನಗಳ ನಂತರ ವಾಪಸ್ ಹೋಗುವವರ ಮಾತೇ ಬೇರೆ. ನಾನು ಎರಡನೇ ಗುಂಪಿಗೆ ಸೇರಿದ್ದೆ. ಆದರೆ ಈ ಅಪರಿಚಿತ ಸಮುದ್ರತಾಣದಲ್ಲಿ ರಭಸದ ಅಲೆಗಳ ಮಧ್ಯೆ ಈಜು ಕಲಿಯುವುದು ತುಂಬಾ ಕಷ್ಟವಿತ್ತು ನಿಜ. ಆದರೆ ಹಾಗಂತ ಬೆಟ್ ಸೋಲಲು ನನಗೆ ಮನಸ್ಸಿರಲಿಲ್ಲ. ತಕ್ಷಣವೇ `ಓ ಯೆಸ್. ನಾನು ಬೆಟ್ ಗೆಲ್ತೇನೆ’ ಎಂದು ಘೋಷಿಸಿಬಿಟ್ಟೆ. ಅಷ್ಟೇ ಅಲ್ಲ, ಎಂಟೇ ದಿನದಲ್ಲಿ ಎಲ್ಲರೂ ಬೆರಗಾಗುವ ಹಾಗೆ ಈಜು ಕಲಿತೂಬಿಟ್ಟೆ.

ಆದರೆ, ಈ ಸಾಧನೆ ಮಾಡುವ ವೇಳೆಗೆ ಸಮುದ್ರ ನನಗೆ ಸಾಕಷ್ಟು ನೀರು ಕುಡಿಸಿತ್ತು. ಸತತ ಎಂಟು ದಿನಗಳ ಕಾಲ ಎಷ್ಟು ನೀರಿನಲ್ಲಿ ಆಟವಾಡಿದೆ ನೋಡಿ; ಅದೇ ಕಾರಣದಿಂದ ಗಂಟಲು ಕಟ್ಟಿಕೊಂಡಿತು. ಆಂಟಿಯ ಮುಂದೆ ಈಜು ಹೊಡೆದು ಬೆಟ್ ಗೆಲ್ಲಬೇಕಿದ್ದ ದಿನ ನನಗೆ ಕೆಂಡಾಮಂಡಲ ಜ್ವರ. ಆಗ ಆಂಟಿಯೂ ಸಮಾಧಾನಿಸಿದರು, `ಮುಂದಿನ ವರ್ಷ ಇದೇ ವೇಳೆಗೆ ಮತ್ತೆ ಇಲ್ಲಿಗೆ ಬರೋಣ. ಆಗ ನೀನು ಈಜು ಹೊಡೆ.’ ಹಾಂ ಹೂಂ ಅನ್ನುವುದರೊಳಗೆ ಒಂದು ವರ್ಷ ಕಳೆದು ಹೋಯಿತು. ಆ ಬೇಸಿಗೆ ರಜೆಯಲ್ಲಿ ನಮ್ಮ ಬಂಧುಗಳ ತಂಡ ಬೇರೊಂದು ಜಾಗಕ್ಕೆ ಪ್ರವಾಸ ಹೋಗಲು ನಿರ್ಧರಿಸಿತು. ಅಂದರೆ, ನಮ್ಮ ಆಂಟಿಯೂ ಸೇರಿದಂತೆ ಎಲ್ಲರೂ ಬೆಟ್ ವಿಷಯವನ್ನೇ ಮರೆತಿದ್ದರು.

ಆದರೆ, ನಾನು ಮರೆತಿರಲಿಲ್ಲ. ಈಜು ಹೊಡೆದು ಆಗಲೇ ವರ್ಷವಾಗಿತ್ತು ನಿಜ. ಆದರೂ, ಈಜಬಲ್ಲೆ ಎಂದು ನನಗೆ ವಿಶ್ವಾಸವಿತ್ತು. ಈ ಬಾರಿ ನಾವು ಪಯಣ ಹೊರಟ ಹಾದಿಯಲ್ಲಿ ನದಿ ಕಾಣಿಸಿದ್ದೇ ತಡ; ನನಗೆ ಬೆಟ್ ನೆನಪಾಯಿತು. `ಡ್ಯಾಡೀ, ಸ್ವಲ್ಪ ಕಾರ್ ನಿಲ್ಸಿ’ ಎಂದು ಜೋರಾಗೇ ಹೇಳಿದೆ. ಕಾರು ನಿಂತ ತಕ್ಷಣವೇ ಬಾಗಿಲು ತೆಗೆದು ಸೀದಾ ನದಿಯ ಬಳಿಗೆ ಓಡಿದೆ. ಹೀಗೆ ಓಡಿಬಂದವನು ನೀರಿಗಿಳಿದೆ ನೋಡಿ; ಆಗಲೇ ಮೈಪೂರಾ ಎಂಥದೋ ಛಳುಕು. ಈಜುವುದೋ ಬೇಡವೋ ಎಂದುಕೊಂಡು ಅಮ್ಮನತ್ತ ನೊಡಿದೆ. ಹೆಜ್ಜೆ ಹಿಂದಿಡಬೇಡ. ಮುಂದುವರಿ ಎಂದು ಕಣ್ಣಲ್ಲೇ ಸೂಚಿಸಿದಳು ಅಮ್ಮ. ನಂತರ ನಾನು ಬೇರೇನನ್ನೂ ಯೋಚಿಸದೆ ಐದಾರು ನಿಮಿಷ ಈಜಿದೆ. ನಂತರ ಗೆದ್ದ ಹಮ್ಮಿನಲ್ಲಿ ಎದ್ದು ಬಂದೆ. ಅಮ್ಮ ನನ್ನನ್ನು ಹೆಮ್ಮೆಯಿಂದ ನೋಡುತ್ತ- `ನೀನು ಇಂಥ ಸಾಧನೆ ಮಾಡ್ತೀಯ’ ಎಂದರು. ಆಂಟಿ ಮೊದಲ ಒಪ್ಪಂದದಂತೆ ಹತ್ತು ಶಿಲ್ಲಾಂಗ್‌ಗಳನ್ನು ಉಡುಗೊರೆಯಾಗಿ ಕೊಟ್ಟು- keep it up ಅಂದರು

About sujankumarshetty

kadik helthi akka

Posted on ಅಕ್ಟೋಬರ್ 17, 2010, in "ಇ-ಲೋಕ" ಲೇಖನಗಳ “ಕನ್ನಡಲೋಕ”, ವಿಶ್ವೇಶ್ವರ ಭಟ್ - ನೂರೆಂಟುಮಾತು and tagged . Bookmark the permalink. ನಿಮ್ಮ ಟಿಪ್ಪಣಿ ಬರೆಯಿರಿ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: