ಯಾರನ್ನು ನಂಬೋದು? ಎಲ್ಲರೂ ಮೂರನ್ನೂ ಬಿಟ್ಟವರು!

Haratal Halappa
// <![CDATA[//

// <![CDATA[// ಹಾಲಪ್ಪ ಪ್ರಕರಣದ ಬಗ್ಗೆ ಬರೆಯಲು ಏಕೋ ಮನಸ್ಸಾಗುತ್ತಿಲ್ಲ. ರಾಜಕಾರಣ ಹೊಲಸಾಗುತ್ತಿದೆಯೋ, ಹೊಲಸಿದ್ದಲ್ಲಿ ರಾಜಕಾರಣ ಹುಲುಸಾಗುತ್ತಿದೆಯೋ ಅರ್ಥವಾಗುತ್ತಿಲ್ಲ. ನಮ್ಮ ರಾಜಕಾರಣಿಗಳನ್ನು ಯಾವ ದಿಕ್ಕಿನಿಂದ ನೋಡಿದರೂ ಜನರ ಪರವಾಗಿ, ಸಮಾಜದ ಒಳಿತಿಗಾಗಿ ಕೆಲಸ ಮಾಡುತ್ತಿದ್ದಾರೆಂದು ಅನಿಸುವುದಿಲ್ಲ. ಈ ಮಾತನ್ನು ಯಾರ ಮೇಲೆ ಆಣೆ ಮಾಡಿ ಬೇಕಾದರೂ ಹೇಳಬಹುದು. ಪ್ರತಿಸಲವೂ ಹೀಗೆಯೇ ಅನಿಸುತ್ತದೆ, ಹಿಂದಿನ ಸರಕಾರವೇ ಎಷ್ಟೋ ಚೆನ್ನಾಗಿತ್ತೆಂದು. ಸಾರ್ವಜನಿಕ ಜೀವನದಲ್ಲಿದ್ದವರು ಎಲ್ಲವನ್ನೂ ರಾಜಕಾರಣದ ಮಸೂರದಿಂದಲೇ ನೋಡಿದರೆ ಇಂಥ ಯಡವಟ್ಟುಗಳಾಗುತ್ತವೆ. ತಮಗೇನು ಲಾಭ [^], ತಮ್ಮ ಪಕ್ಷಕ್ಕೇನು ಲಾಭ ಎಂದೇ ಅವರ ಯೋಚನೆ.

ಬಿಜೆಪಿಯ ಹಿರಿಯ ನಾಯಕರಾದ ಧನಂಜಯ ಕುಮಾರ್ ಅಂದು ಹಾಲಪ್ಪ [^] ರಾಜೀನಾಮೆ ಕೊಟ್ಟಾಗ ಹೇಳಿದ ಮಾತುಗಳನ್ನು ಕೇಳಬೇಕಿತ್ತು. `ಹಾಲಪ್ಪ ರಾಜೀನಾಮೆ ನೀಡಿ ಪ್ರಜಾಪ್ರಭುತ್ವದ ಉನ್ನತ ಸಂಪ್ರದಾಯ, ಮೌಲ್ಯವನ್ನು ಎತ್ತಿ ಹಿಡಿದಿದ್ದಾರೆ. ಅವರು ರಾಜೀನಾಮೆ ನೀಡಿರುವುದರಿಂದ ಬಿಜೆಪಿಗೆ ಲಾಭವಾಗಲಿದೆ. ಎಲ್ಲರೂ ಅವರ ಕ್ರಮವನ್ನು ಪ್ರಶಂಸಿಸುತ್ತಾರೆ. ನಾನು ಅವರನ್ನು ಅಭಿನಂದಿಸುತ್ತೇನೆ’ ಎಂದು ಧನಂಜಯ ಕುಮಾರ್ ಖಾಸಗಿ ಟಿವಿ ಸ್ಟುಡಿಯೋದಲ್ಲಿ ಕುಳಿತು ಶುದ್ಧ ಅವಿವೇಕಿಯಂತೆ, ಲಜ್ಜೆಗೇಡಿಯಂತೆ ಮಾತಾಡುತ್ತಿದ್ದರು. ಹಾಲಪ್ಪ ಎತ್ತಿ ಹಿಡಿದಿದ್ದು ಪ್ರಜಾಪ್ರಭುತ್ವದ ಉನ್ನತ ಸಂಪ್ರದಾಯ ಅಥವಾ ಮೌಲ್ಯಗಳನ್ನಲ್ಲ, ಎತ್ತಿದ್ದು ಪರಸ್ತ್ರೀ ಸೀರೆ ಎಂಬುದು ಇಡೀ ದೇಶಕ್ಕೇ ಗೊತ್ತಿದ್ದರೂ ಅವರು ನಾಚಿಕೆ ಬಿಟ್ಟು ಬಡಬಡಿಸುತ್ತಿದ್ದರು. ಸಾರ್ವಜನಿಕ ಜೀವನದಲ್ಲಿ ಸಂವೇದನೆ, ಸೂಕ್ಷ್ಮತೆ ಹಾಗೂ ಸ್ಪಂದನೆ ಕಳೆದುಕೊಂಡು ದಪ್ಪಚರ್ಮ ಬೆಳೆಸಿಕೊಂಡವರು ಮಾತ್ರ ಹೀಗೆಲ್ಲ ಮಾತಾಡಲು ಸಾಧ್ಯ.

ಕಾಮಕಾಂಡದಂಥ ಹಗರಣದಲ್ಲಿ ಮಂತ್ರಿಯೊಬ್ಬ ಭಾಗಿಯಾಗಿದ್ದಾನೆಂಬ ಸಂಗತಿ ಬಹಿರಂಗವಾಗಿ ರಾಜೀನಾಮೆ ಕೊಟ್ಟಾಗಲೂ ಅದು ಪಕ್ಷಕ್ಕೆ ಲಾಭ ಹೇಗಾಗುತ್ತದೆ? ಅದರಲ್ಲೂ ಲಾಭವನ್ನೇಕೆ ಕಾಣಬೇಕು? ಎಂಥ ಕೊಳಕು ಮನಸ್ಸಿರಬಹುದು? ಇನ್ನು ನಮ್ಮ ಮುಖ್ಯಮಂತ್ರಿಯವರು ಎಳೆದ ಷರಾ ಎಂಥವನಿಗಾದರೂ ಹೇಸಿಗೆ ಹುಟ್ಟಿಸದೇ ಹೋಗದು. `ಹಾಲಪ್ಪ ಸಾತ್ವಿಕ ಮನುಷ್ಯ’ ಎಂದುಬಿಟ್ಟರು. ಅವರಿಗೆ ಸಾತ್ವಿಕ ಪದದ ಅರ್ಥ ಗೊತ್ತಿರಲಿಕ್ಕಿಲ್ಲ ಎಂದು ಸುಮ್ಮನಾಗೋಣವಾ ಅಥವಾ ಪರಸ್ತ್ರೀ ಮೇಲೆ ಅತ್ಯಾಚಾರ ಮಾಡಿದವನನ್ನೂ ಮುಖ್ಯಮಂತ್ರಿಯಂಥ ಮುಖ್ಯಮಂತ್ರಿಯೇ ಸಾತ್ವಿಕ ಮನುಷ್ಯ ಎಂದು `ಶಹಬ್ಬಾಷ್’ ಕೊಡುತ್ತಾರಲ್ಲ ಅದಕ್ಕೆ ಹಣೆಹಣೆ ಚಚ್ಚಿಕೊಳ್ಳೋಣವಾ, ಪಕ್ಷದ ರಾಜ್ಯಾಧ್ಯಕ್ಷರಾದವರು ವಿಷಯ ಗೊತ್ತಿದ್ದರೂ ಮುಗುಮ್ಮಾಗಿ ಕುಳಿತು ಅಂಥವರನ್ನು ಮಂತ್ರಿಯಾಗಿ ಮುಂದುವರಿಯಲು ಅವಕಾಶ ನೀಡಿದ್ದಕ್ಕೆ ಏನೆನ್ನೋಣ? ಗೊತ್ತಾಗುತ್ತಿಲ್ಲ. ಈಶ್ವರಪ್ಪ ಹೇಳಿದ ಇನ್ನೊಂದು ಮಾತನ್ನು ಕೇಳಿಸಿಕೊಳ್ಳಬೇಕು- `ಹಾಲಪ್ಪ ತನ್ನ ಹೆಂಡತಿ ಮೇಲೆ ರೇಪ್ ಮಾಡಿದ್ದಾನೆ ಅಂದ್ರೆ, ಅವಳ ಪತಿ ವೆಂಕಟೇಶಮೂರ್ತಿ ಮಂತ್ರಿಯನ್ನು ಕೊಲೆ ಮಾಡುವುದನ್ನು ಬಿಟ್ಟು ವಿಡಿಯೋ [^] ಶೂಟಿಂಗ್ ಮಾಡಿದನಲ್ಲ ಅದರ ಉದ್ದೇಶವೇನು?’ ಒಬ್ಬ ಹಿರಿಯ ಮುತ್ಸದ್ದಿ, ರಾಷ್ಟ್ರೀಯ ಪಕ್ಷದ ರಾಜ್ಯಾಧ್ಯಕ್ಷರು ಆಡುವ ಮಾತುಗಳಾ ಇವು? ಈಶ್ವರಪ್ಪನವರ ಪ್ರಕಾರ ವೆಂಕಟೇಶಮೂರ್ತಿ ಮಂತ್ರಿ ಹಾಲಪ್ಪನ ಮರ್ಡರ್ ಮಾಡಬೇಕಿತ್ತು! ನಾಯಕರೆನಿಸಿಕೊಂಡವರು ಹೀಗೆಲ್ಲ ಮಾತಾಡುವುದನ್ನು ಕೇಳಿದರೆ ಭಯ, ಹೇಸಿಗೆ ಹಾಗೂ ಜುಗುಪ್ಸೆಗಳಾಗುತ್ತವೆ. ಸೋಜಿಗವೆಂದರೆ ಅವರಿಗೇನೂ ಅನಿಸುವುದೇ ಇಲ್ಲ. ವಿಷಾದವೂ ಆಗುವುದಿಲ್ಲ. ಧನಂಜಯ ಕುಮಾರ್ ಹೇಳಿದಂತೆ ಅದರಿಂದ ಎಷ್ಟು ಲಾಭ ಹಿರಿಯಬಹುದು ಎಂದು ಯೋಚಿಸುತ್ತಿರುತ್ತಾರೆ. Disgusting!

ತಮ್ಮ ಸಹೋದ್ಯೋಗಿಯೊಬ್ಬ ಇಂಥ ನೀಚ ಕೆಲಸಕ್ಕೆ ಮುಂದಾಗಿದ್ದರ ಬಗ್ಗೆ ಯಾವ ನಾಯಕನೂ ಪಶ್ಚಾತ್ತಾಪ, ಬೇಸರ, ಖಂಡನೆಯನ್ನು ಸಹ ವ್ಯಕ್ತಪಡಿಸುವುದಿಲ್ಲ. ರಾಜಕಾರಣವೆಂದರೆ ಇದೇನಾ? ಇಂಥ ರಾಜಕಾರಣವನ್ನೇಕೆ ಮಾಡಬೇಕು? ಅಂಥ ಅನಿವಾರ್ಯತೆಯೇನು ಬಂದಿದೆ? ಜನ ತಮ್ಮ ಬಗ್ಗೆ ಏನು ಯೋಚಿಸಬಹುದು ಎಂಬುದನ್ನು ಸಹ ತಿಳಿಯದಿದ್ದರೆ ಹೇಗೆ? ಇದಕ್ಕಾಗಿಯೇ ಹೇಳಿದ್ದು ಹಾಲಪ್ಪ ಪ್ರಕರಣದ ಬಗ್ಗೆ ಬರೆಯಲು ಏಕೋ ಮನಸ್ಸಾಗುತ್ತಿಲ್ಲ ಎಂದು. ಪುಟಗಟ್ಟಲೆ ಬರೆದು ಜರೆದರೆ, ಧನಂಜಯ ಕುಮಾರರಂಥ ಪಡಪೋಶಿ ರಾಜಕಾರಣಿಗಳು, `ವಿಜಯ ಕರ್ನಾಟಕದಲ್ಲಿ ನನ್ನ ಬಗ್ಗೆ ಹಾಗೂ ನಮ್ಮ ಪಕ್ಷದ ಬಗ್ಗೆ ಪುಟಗಟ್ಟಲೆ ಬರೆದಿದ್ದಾರೆ. ಇಷ್ಟೊಂದು ಪ್ರಚಾರ ಪಡೆದುಕೊಳ್ಳುವುದು ಸಾಮಾನ್ಯವಾ? ಇದರಿಂದ ಪಕ್ಷಕ್ಕೆ ಭಾರೀ ಲಾಭವಾಗಿದೆ’ ಎಂದರೆ ಗತಿಯೇನು? ಧನಂಜಯ ಕುಮಾರ್‌ಗೆ ಹಾಲಪ್ಪ ಮಾಡಿದನೆನ್ನಲಾದ ಮಾನಭಂಗಕ್ಕಿಂತ, ರಾಜೀನಾಮೆ ಕೊಟ್ಟಿದ್ದೇ ದೊಡ್ಡ `ಮಹತ್ಕಾರ್ಯ’ವಾಗಿ ಕಾಣುತ್ತದೆ. ಹೀಗಾಗಿ ಬೇಡ ಬಿಡಿ, ಇಷ್ಟೇ ಸಾಕು.

ಇನ್ನೂ ಬೇಸರವಾಗುವುದು ಯಾವುದಕ್ಕೆ ಗೊತ್ತಾ? ಪ್ರತಿಸಲ ರಾಜಕಾರಣಿಗಳು ಹೀಗೆ ನಡೆದುಕೊಂಡಾಗ ಹೆಚ್ಚು ಬೇಸರವಾಗುವುದು ಅವರ ಮೇಲಲ್ಲ, ನಮ್ಮ ಮೇಲೆಯೇ. ಏಕೆಂದರೆ ಪ್ರತಿಸಲವೂ ನಾವು ಅವರ ಮೇಲಿಟ್ಟ `ವಿಶ್ವಾಸಸೌಧ’ವನ್ನು ಅವರು ಹೊಡೆದುರುಳಿಸುತ್ತಾರೆ. ನಮ್ಮ ನಂಬಿಕೆಯನ್ನು ಹಾಳುಗೆಡವುತ್ತಾರೆ. ನಮ್ಮ ಪ್ರೀತಿಗೆ ಪ್ರತಿಸಲವೂ ವಂಚನೆಯಾಗುತ್ತದೆ. ನಂಬಿಕೆದ್ರೋಹದ ಹುಳಿ ಸದಾ ಹಳಹಳಿಸುತ್ತಲೇ ಇರುತ್ತದೆ. ಇವೆಲ್ಲವನ್ನೂ ಹೊಟ್ಟೆಗೆ ಹಾಕಿಕೊಂಡು ವಿಶ್ವಾಸಸೌಧವನ್ನು ಕಟ್ಟಿಕೊಂಡರೆ ಪುನಃ ಅದು ನೆಲಕ್ಕೊರಗುತ್ತದೆ. ರಾಜಕಾರಣಿಗಳಿಗೆ ಜನರ ಭಾವನೆಯೇ ಅರ್ಥವಾಗದಿದ್ದರೆ ಹೇಗೆ?

ನಮ್ಮ ಜನರೂ ಹಾಗೇ, ಥೇಟ್ ಭೋಳೆಶಂಕರ್‍ಸ್. ಪ್ರತಿಸಲವೂ ಟೋಪಿ ಹಾಕಿಸಿಕೊಳ್ಳುತ್ತಲೇ ಇರುತ್ತಾರೆ. ಮೋಸ ಹೋಗಿ ಕ್ಷಣ ಹೊತ್ತಾಗಿರುವುದಿಲ್ಲ ಪುನಃ ಟೋಪಿಗೆ ತಲೆ ಕೊಡಲು ರೆಡಿ. ಇನ್ನು ನಮ್ಮ ಕಾಳಜಿ, ಪ್ರತಿಭಟನೆಗಳೋ, ಅದರ ಬಗ್ಗೆ ಮಾತಾಡದಿರುವುದೇ ವಾಸಿ. ಭ್ರಷ್ಟಾಚಾರದ ಬಗ್ಗೆ ಬಸ್‌ಸ್ಟ್ಯಾಂಡಿನಲ್ಲಿ ತಮ್ಮೂರ ಬಸ್ಸು ಬರುವವರೆಗೆ ಏರಿದ ದನಿಯಲ್ಲಿ ಭಾಷಣ ಮಾಡಿ ಚಪ್ಪಾಳೆ ಗಿಟ್ಟಿಸಿಕೊಂಡು ಬಸ್ಸು ಬರುತ್ತಿದ್ದಂತೆ ಅದನ್ನೇರಿ ಟಿಕೆಟ್ ಇಲ್ಲದೆ ಪ್ರಯಾಣಿಸುವವರಿಗೇನೂ ಕೊರತೆಯಿಲ್ಲ. ನಮ್ಮ ಕಾಳಜಿಯೂ ಇಷ್ಟೇ ಆದರೆ, ರಾಜಕಾರಣಿಗಳು ನಮ್ಮನ್ನು ಬಳಸಿಕೊಳ್ಳದೇ ಬಿಡುತ್ತಾರಾ? ಹೀಗಾಗಿ ತುಸು ದಿನಗಳಾದ ಬಳಿಕ ರಾಜಕಾರಣಿಗಳು ಹಾಗೂ ನಾವು ಎಲ್ಲ ಮರೆತು, ಎಲ್ಲವೂ ಸರಿಹೋಯಿತೆಂದು ನಮ್ಮನ್ನು ನಂಬಿಸಿಕೊಂಡು ಸುಮ್ಮನಾಗುತ್ತೇವೆ. ಇಂಥ ಮತ್ತೊಂದು ಘಟನೆ ನಡೆದಾಗಲೇ ನಮ್ಮ ಜಠರದಲ್ಲಿ ಬೆಂಕಿ ಬೀಳೋದು. ಅಲ್ಲಿತನಕ ಎಲ್ಲವೂ ಕೂಲ್.

Advertisements

About sujankumarshetty

kadik helthi akka

Posted on ಅಕ್ಟೋಬರ್ 17, 2010, in "ಇ-ಲೋಕ" ಲೇಖನಗಳ “ಕನ್ನಡಲೋಕ”, ವಿಶ್ವೇಶ್ವರ ಭಟ್ - ನೂರೆಂಟುಮಾತು and tagged . Bookmark the permalink. ನಿಮ್ಮ ಟಿಪ್ಪಣಿ ಬರೆಯಿರಿ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: