ಶೌಚಾಲಯ ಶಿಕ್ಷೆ ಮುಂದೆ ಜೈಲು ಶಿಕ್ಷೆಯೇ ವಾಸಿ!

Spending time in jail is more pleasurable than in indian toiletsಪ್ರಸ್ತುತ ರಾಜ್ಯ ರಾಜಕಾರಣ ಹಾಗೂ ವಿದ್ಯಮಾನಗಳ ಬಗ್ಗೆ ಬರೆಯುವುದಕ್ಕಿಂತ ಶೌಚಾಲಯಗಳ ಬಗ್ಗೆ ಬರೆಯುವುದೇ ವಾಸಿ ಎಂದೆನಿಸಿದ್ದರಿಂದ ಅವುಗಳ ಕುರಿತು ಬರೆಯುತ್ತಿದ್ದೇನೆ. ಯಾಕೆಂದರೆ ಶೌಚಾಲಯಗಳು ರಾಜಕಾರಣಕ್ಕಿಂತ ಹೆಚ್ಚು ಸ್ವಚ್ಛವಾಗಿರಬಹುದು.

ಅದಿರಲಿ, ಕೆಲವರಿಗೆ ಅಮೆರಿಕ, ಯುರೋಪ್, ಸಿಂಗಪುರ್, ಆಸ್ಟ್ರೇಲಿಯಾ ಬೇರೆ ಬೇರೆ ಕಾರಣಗಳಿಗೆ ಇಷ್ಟವಾಗಬಹುದು. ಪ್ರತಿ ದೇಶ ಒಬ್ಬೊಬ್ಬರಿಗೆ ಒಂದೊಂದು ಕಾರಣಕ್ಕೆ ಆಪ್ತವಾಗುತ್ತದೆ. ನೀವು ಬೇಕಾದರೆ ಕ್ರೇಜಿ ಅನ್ನಿ, ನನಗೆ ಅಮೆರಿಕ, ಲಂಡನ್, ಸ್ವಿಜರ್‌ಲ್ಯಾಂಡ್ ಅಥವಾ ಸಿಂಗಪುರ್ ತೀರಾ ಆಪ್ತವಾಗುವುದು ಅಲ್ಲಿನ ಆಧುನಿಕತೆ ಅಥವಾ ಶ್ರೀಮಂತಿಕೆಯಿಂದಂತೂ ಅಲ್ಲವೇ ಅಲ್ಲ. ಶೌಚಾಲಯಗಳಿಂದ.

ಅದರಲ್ಲೂ ವಿಶೇಷವಾಗಿ ಅಮೆರಿಕ, ಸಿಂಗಪುರ್‌ಗಳ ಶೌಚಾಲಯಗಳಿವೆಯಲ್ಲ, ಅವು ಎಲ್ಲ ರೀತಿಯಿಂದಲೂ ಅದ್ಭುತ ತಾಣಗಳು. ಅಲ್ಲಿನ ಸಾರ್ವಜನಿಕ ಮೂತ್ರಿ ಅಥವಾ ಮೂತ್ರಾಲಯ ಅಥವಾ ಶೌಚಾಲಯಗಳು ನಮ್ಮ-ನಿಮ್ಮ ಮನೆಗಳಿಗಿಂತ ಹೆಚ್ಚು ಕ್ಲೀನ್ ಆಗಿವೆ, ಸುಂದರವಾಗಿವೆ ಹಾಗೂ ಆಪ್ತವಾಗಿವೆ. ಪ್ರತಿ ಸಲ ಅಲ್ಲಿಗೆ ಹೋಗುವಾಗ ಖುಷಿಯಾಗುತ್ತದೆ. `ಕೆಲಸ ಮುಗಿಸಿ’ ವಾಪಸ್ ಬರುವಾಗ ಮೈಮನಗಳಲ್ಲಿ ಹಿತವಾದ ಆನಂದ. ಮನಸ್ಸು ಮುಂದಿನ ಶೌಚಾಲಯದ ದಾರಿ ಕಾಯುತ್ತದೆ.

ಖುಷಿಯಾಗುವುದು ಇದೇ ಕಾರಣಕ್ಕೆ. ಅಮೆರಿಕದಲ್ಲಾಗಲಿ, ಲಂಡನ್, ಸಿಂಗಪುರ್‌ಗಳಲ್ಲಾಗಲಿ ಶೌಚಾಲಯಗಳನ್ನು ಯಾರೂ ಸಂಡಾಸು, ಲ್ಯಾಟ್ರಿನ್, ಟಾಯ್ಲೆಟ್, ಬಾತ್‌ರೂಮ್, ಮೂತ್ರಾಲಯಗಳು ಎಂದೆಲ್ಲ ಕರೆಯುವುದಿಲ್ಲ. ನಮ್ಮ ಸಂಡಾಸು, ಟಾಯ್ಲೆಟ್ ಅಂದ್ರೆ ಕಣ್ಣಮುಂದೆ ಬರುವ ದೃಶ್ಯವೇ ಬೇರೆ. ಅದೇ ಗಬ್ಬುನಾತ ಬೀರುವ, ನಿಮಗಿಂತ ಮೊದಲಿನವರು ಮಾಡಿಟ್ಟು ಹಾಗೇ ಬಿಟ್ಟುಹೋದ ಪಳೆಯುಳಿಕೆ, ನೀರಿಲ್ಲದ, ಮೂಗು ಮುಚ್ಚಿಕೊಂಡೇ ಕೆಲಸ ಮುಗಿಸಬೇಕಾದ ಅಸಹ್ಯ, ವಾಕರಿಕೆ ತರಿಸುವ ನರಕಸದೃಶ ವಾತಾವರಣ. ಸಾರ್ವಜನಿಕ ಟಾಯ್ಲೆಟ್‌ಗಳಿಗೆ ಹೋಗುವುದೆಂದರೆ ದೊಡ್ಡ ಶಿಕ್ಷೆ. ಆದರೇನು ಮಾಡುವುದು nature’s call is greater than national call. ಆ ಎರಡು ನಿಮಿಷ ಅಂದ್ರೆ ಮುಳ್ಳ ಮೇಲೋ, ಕೆಂಡದಮೇಲೋ ನಿಂತ ಅನುಭವ. ಸುಡುಗಾಡಿಗಾದರೂ ಹೋಗಬಹುದು, ಆದರೆ ಸಾರ್ವಜನಿಕ ಶೌಚಾಲಯಗಳಿಗಂತೂ ಹೋಗಲು ಸಾಧ್ಯವೇ ಇಲ್ಲ. ಹೀಗಾಗಿ ಎಲ್ಲರೂ ಅಲ್ಲಿಗೆ ಹೋಗುವುದೇ ಇಲ್ಲ. ಕಂಡಕಂಡಲ್ಲಿ ಉಚ್ಚೆ ಹಾರಿಸುತ್ತಾರೆ, ಹೊಲಸು ಮಾಡುತ್ತಾರೆ. ನಾವಂತೂ ಇಡೀ ಊರನ್ನೇ ಶೌಚಾಲಯವನ್ನಾಗಿ ಮಾಡಿಬಿಟ್ಟಿದ್ದೇವೆ. ಅಮೆರಿಕದವರು ತಮ್ಮ ಶೌಚಾಲಯಗಳನ್ನು ದೇಶದಂತೆ ಇಟ್ಟುಕೊಂಡಿದ್ದಾರೆ. ಆದರೆ ನಾವಿದ್ದೀವಲ್ಲ, ಇಡೀ ದೇಶವನ್ನು ಶೌಚಾಲಯವನ್ನಾಗಿಸಿಬಿಟ್ಟಿದ್ದೇವೆ.

ಸಿಂಗಪುರಕ್ಕೆ ಹೋದಾಗಲೂ ಇದೇ ಅನುಭವ. ಅಲ್ಲಿನ ಶೌಚಾಲಯಗಳಿಗೆ ಹೋಗುವುದೇ ಒಂದು ಆನಂದ. ನೆಲಕ್ಕೆ ಹಾಸಿದ ಕಲ್ಲು, ಗೋಡೆಯ ನುಣುಪು, ಕನ್ನಡಿಯ ಝಗಮಗ, ಸುವಾಸನೆ ಚೆಲ್ಲುವ ಪರಿಮಳ, ಸ್ವಚ್ಛವಾದ ಕಮೋಡ್, ದೇಹದ ಬೇರೆ ಬೇರೆ ಭಾಗಗಳನ್ನು ಒರೆಸಿಕೊಳ್ಳಲು ಬೇರೆ ಬೇರೆ ಪೇಪರ್‌ಗಳು, ಕೈ ತೊಳೆದುಕೊಳ್ಳಲು ಶಾಂಪು, ಮುಖಕ್ಕೆ ಬೇರೆ ಸೋಪು, ಆನಂತರ ಪೌಡರ್…! ಪ್ರತಿ ಶೌಚಾಲಯದಲ್ಲೂ ಹಸುರಿನ ತೋರಣ. ಅಲ್ಲಲ್ಲಿ ಟಿಸಿಲೊಡೆದ ಮರದ ಕೊಂಬೆಗಳು, ಗೋಡೆಗೆ ಚಿತ್ತಾಕರ್ಷಕ ಪೇಂಟಿಂಗ್, ಫೋಟೊ… ಸಿಂಗಪುರದಲ್ಲಿ ಶೌಚಾಲಯಕ್ಕೆ ಹೋಗುವುದೇ ಮಜಾ. ಆ ಪುಟ್ಟ ದೇಶದಲ್ಲಿ ಶೌಚಾಲಯ ಕ್ರಾಂತಿಯಾಗಿದೆ. ಅವರು ತಮ್ಮ ಮನೆಯಂತೆ ಶೌಚಾಲಯವನ್ನೂ ಕಾಪಾಡಿಕೊಂಡಿದ್ದಾರೆ. ಸ್ವಂತದ್ದಕ್ಕೂ ಸಾರ್ವಜನಿಕ ಶೌಚಾಲಯಕ್ಕೂ ಸ್ವಲ್ಪವೂ ಫರಕ್ಕು ಇಲ್ಲ. ಸಾಧ್ಯವಾದಲ್ಲೆಲ್ಲ ಹಸಿರು ಹೊದಿಸಲು ಪ್ರತಿ ಶೌಚಾಲಯದಲ್ಲೂ ಒಂದು ಮರವನ್ನು ನೆಟ್ಟಿದ್ದಾರೆ. ಆದರೆ ನಾವೋ, ಏನಂತೀರಿ? ಪ್ರತಿ ಮರವನ್ನೂ ಶೌಚಾಲಯವನ್ನಾಗಿ ಮಾಡಿಬಿಟ್ಟಿದ್ದೇವೆ! ಪ್ರತಿ ಮರದ ತೆರೆಮರೆಯೇ ಒಂದು ಸಂಡಾಸು.

ಇದೆಂಥ ಅಸಹ್ಯ? ದೇಶ ಕಟ್ಟುವ ರೀತೀನಾ ಇದು? ನಮಗಿನ್ನೂ ಮೂಲಭೂತ ಅಗತ್ಯಗಳಲ್ಲೊಂದಾದ ಶೌಚವನ್ನೇ ಕಟ್ಟಲಾಗಿಲ್ಲ? ಇಂದಿಗೂ ಅವೆಷ್ಟೋ ಕೋಟಿ ಮಂದಿಗೆ ಶೌಚಾಲಯಗಳೇ ಇಲ್ಲ. ಬಯಲೇ ಬಹಿರ್ದೆಸೆಯ ತಾಣ. ಬಯಲೇ ಬಚ್ಚಲುಮನೆ. ಹೆಂಗಸರ ಪಾಡಂತೂ ಕೇಳುವುದೇ ಬೇಡ. ಇಂದಿಗೂ ಉತ್ತರ ಕರ್ನಾಟಕದ ಸಾವಿರಾರು ಹಳ್ಳಿಗಳಲ್ಲಿ ಹೆಂಗಸರು ಬಹಿರ್ದೆಸೆಗೆ ಊರ ಹೊರಗಿನ ಬಯಲಲ್ಲಿ ಹೋಗಿ ಕುಳಿತುಕೊಳ್ಳುವುದು ರಾತ್ರಿ ಏಳರ ನಂತರವೇ. ಹಗಲಲ್ಲಿ ಹೋಗಬೇಕಾಗಿ ಬಂದರೆ ಅವರ ಪಾಡು ಅಸಹನೀಯ. ಹೀಗಾಗಿ ಸಾಯಂಕಾಲವಾಗುತ್ತಿದ್ದಂತೆ ಗುಂಪು ಗುಂಪಾಗಿ ಹೆಂಗಸರು ಊರ ಹೊರಗಡೆ ಹೋಗುವ ದೃಶ್ಯ ಸಾಮಾನ್ಯ. ಮಳೆಗಾಲ, ಚಳಿಗಾಲದಲ್ಲಿನ ಸಮಸ್ಯೆಗಳದು ದೊಡ್ಡ ಕತೆ. ಬಸುರಿ ಹೆಂಗಸರದು ಇನ್ನೊಂದು ವ್ಯಥೆ. ಕರ್ನಾಟಕದಲ್ಲಿ ಪ್ರತಿ ವರ್ಷ ಹೀಗೆ ಬಹಿರ್ದೆಸೆಗೆ ಹೋದ ಕನಿಷ್ಠ ಐವತ್ತು ಹೆಂಗಸರು ಹಾವು ಕಡಿದು ಸಾಯುತ್ತಾರೆ. ಪೊಲೀಸ್ ಠಾಣೆಗಳಲ್ಲಿ ಇವು ಅಸ್ವಾಭಾವಿಕ ಸಾವು ಎಂದು ದಾಖಲಾಗುತ್ತವೆ. ಇವನ್ನೆಲ್ಲ ಗಮನಿಸಿದರೆ ನಾವು ನಾಗರಿಕ ಸಮಾಜದಲ್ಲಿ ಜೀವಿಸುತ್ತಿದ್ದೇವಾ ಎಂಬ ಗುಮಾನಿ ಕಾಡದೇ ಇರುವುದಿಲ್ಲ.

ಬಿಂದೇಶ್ವರ ಪಾಠಕ್ ಎಂಬ ಪುಣ್ಯಾತ್ಮ ಸುಲಭ್ ಇಂಟರ್ ನ್ಯಾಶನಲ್ ಎಂಬ ಸ್ವಯಂಸೇವಾ ಸಂಸ್ಥೆ ಕಟ್ಟಿ ಸುಲಭ್ ಶೌಚಾಲಯಗಳನ್ನು ನಿರ್ಮಿಸುವ ತನಕ ನಮಗೆ ಸಾರ್ವಜನಿಕ ಶೌಚಾಲಯಗಳ ಸ್ವಚ್ಛತೆ ಬಗ್ಗೆ ಕಿಂಚಿತ್ತೂ ಕಲ್ಪನೆಯಾಗಲಿ, ಕಾಳಜಿಯಾಗಲಿ ಇದ್ದಿರಲಿಲ್ಲ. ಹಾಗಂತ ಈಗ ಇದೆ ಅಂತಲ್ಲ. ನಮ್ಮ ಪ್ರತಿ ಶೌಚಾಲಯವೂ ಅಸಹ್ಯ, ಹೇಸಿಗೆ, ದುರ್ನಾತ ಬೀರುವ ಕೊಂಪೆಗಳೇ. ಪಂಚತಾರಾ ಹೋಟೆಲ್‌ಗಳಲ್ಲಿನ ಟಾಯ್ಲೆಟ್‌ಗಳನ್ನು ಹೊರತುಪಡಿಸಿದರೆ ಉಳಿದೆಲ್ಲವೂ ಕೊಳಕು ಕುಳುಂಪೆಗಳೇ. ವರ್ಲ್ಡ್ ಟಾಯ್ಲೆಟ್ ಆರ್ಗನೈಸೇಶನ್ ಸಮೀಕ್ಷೆ (2007) ಪ್ರಕಾರ, ಭಾರತದಲ್ಲಿನ ಪ್ರತಿ ನೂರು ಶೌಚಾಲಯಗಳ ಪೈಕಿ ಅಂತಾರಾಷ್ಟ್ರೀಯ ಗುಣಮಟ್ಟದಂತೆ ಇರುವವು ಕೇವಲ ಒಂದು! ಸಾಮಾನ್ಯ ಬಳಕೆಗೆ ಯೋಗ್ಯವಾಗಿರುವವು ಕೇವಲ ನಾಲ್ಕು! ಉಳಿದ ಸಾರ್ವಜನಿಕ ಶೌಚಾಲಯಗಳು ರೋಗಪೀಡಿತ ಕೇಂದ್ರಗಳು, ಹೊಲಸುವಾಸನೆ ಬೀರುವ ಬೀಡುಗಳು.

ಈ ವರ್ಲ್ಡ್ ಟಾಯ್ಲೆಟ್ ಆರ್ಗನೈಸೇಷನ್ ಅನ್ನು ಸ್ಥಾಪಿಸಿದ್ದಾನಲ್ಲ, ಅವನ ಹೆಸರು ಜಾಕ್ ಸಿಮ್ ಅಂತ. ಅವನ ಪ್ರಕಾರ ಭಾರತೀಯರಿಗೆ ಶೌಚಾಲಯದ ಮಹತ್ವವೇ ಗೊತ್ತಿಲ್ಲ. ಗೊತ್ತಿದ್ದರೆ ಪರಿಸ್ಥಿತಿ ಇಷ್ಟೊಂದು ಹದಗೆಟ್ಟಿರುತ್ತಿರಲಿಲ್ಲ. ನಿಮ್ಮ ಮನೆಯ ದೇವರ ಮನೆ, ಅಡುಗೆಮನೆಯಷ್ಟೇ ಸ್ವಚ್ಛವಾಗಿ ಬಚ್ಚಲುಮನೆಯೂ ಇರಬೇಕು. ಸಾರ್ವಜನಿಕ ಶೌಚಾಲಯ ಅಂದ್ರೆ ಎಲ್ಲರೂ ಬಳಸುವ ತಾಣವಾಗಿರುವುದರಿಂದ ಅದು ಇನ್ನೂ ಹೆಚ್ಚು ಸ್ವಚ್ಛವಾಗಿರಬೇಕು. ದುರ್ದೈವವೆಂದರೆ ಭಾರತೀಯರು ಎಲ್ಲಕ್ಕಿಂತ ಹೆಚ್ಚಾಗಿ ಶೌಚಾಲಯಗಳನ್ನೇ ಹೊಲಸುಗೆಡಿಸಿಬಿಟ್ಟಿದ್ದಾರೆ. ಭಾರತದಲ್ಲಿ ಜೈಲುಶಿಕ್ಷೆ ಅನುಭವಿಸುವುದು ಏನೇನೂ ಕಷ್ಟ ಅಲ್ಲ. ಆದರೆ ಶೌಚಾಲಯ ಶಿಕ್ಷೆ (ಅದು ಐದೇ ನಿಮಿಷದ್ದಿರಬಹುದು) ಇದೆಯಲ್ಲ ಅದು ಅತ್ಯಂತ ಘನಘೋರ ಶಿಕ್ಷೆ, ಜೀವಾವಧಿ ಶಿಕ್ಷೆ! ಯಾಕೆಂದರೆ ಜೀವನದ ಕೊನೆಯ ತನಕವೂ ಶೌಚಾಲಯ ಶಿಕ್ಷೆ ಅನುಭವಿಸಲೇಬೇಕು.

ನಮಗಿನ್ನೂ ಸಾರ್ವಜನಿಕ ಮೂತ್ರಿಗಳೆಂದರೇನೆಂಬುದೇ ಗೊತ್ತಿಲ್ಲ. ಒಂದು ವೇಳೆ ಗೊತ್ತಿದ್ದರೆ ನಾವು ಅರ್ಥ ಮಾಡಿಕೊಂಡಿರುವುದೇ ತಪ್ಪು. ಹಾಗಾದರೆ ಈಗಿನ ಮೂತ್ರಿಗಳನ್ನೇ ಮಾದರಿ ಎಂದು ತೀರ್ಮಾನಿಸಿಬಿಟ್ಟಿದ್ದೇವಾ? ಇಲ್ಲದಿದ್ದರೆ ಅವುಗಳನ್ನು ಅಷ್ಟೊಂದು ಕೆಟ್ಟದಾಗಿ, ಹೊಲಸಾಗಿ ಇಟ್ಟುಕೊಳ್ಳುತ್ತಿರಲಿಲ್ಲ. ಸಾರ್ವಜನಿಕ ಮೂತ್ರಿಗಳೆಂದರೆ ಒಂದು ಸಲ ಹೋಗಿ ನಂಟು ಕಳೆದುಕೊಳ್ಳುವ ತಾಣ ಅಲ್ಲ. ಪದೇ ಪದೆ ಹೋಗಬೇಕಾದ ಸ್ಥಳವದು. ಅದನ್ನು ಸ್ವಚ್ಛವಾಗಿರಿಸಿಕೊಳ್ಳದಿದ್ದರೆ ಹೇಗೆ? ಇಂಥದ್ದೊಂದು ಭಾವನೆ ನಮ್ಮ ಜನರಲ್ಲಿ ಮೂಡದಿರುವುದು ಅಚ್ಚರಿ ಹಾಗೂ ಗಾಬರಿ ಹುಟ್ಟಿಸುವ ಸಂಗತಿಯೇ ಸರಿ. ಶೌಚಾಲಯಗಳೆಂದರೆ ಹೊಲಸು ಮಾಡಿ ಹೋಗುವ ಜಾಗ ಎಂದೇ ಎಲ್ಲರೂ ಭಾವಿಸಿದಂತಿದೆ. ಇಲ್ಲಿ ಸ್ವಚ್ಛ ಮಾಡುವವರು ಯಾರು? ಹೀಗಾಗಿ ಎಲ್ಲರೂ ಹೊಲಸು ಮಾಡಿ ಹೋಗುತ್ತಾರೆಯೇ ವಿನಃ ಸ್ವಚ್ಛಗೊಳಿಸುವವರು ಯಾರೂ ಇಲ್ಲ. ಅಲ್ಲಿಗೆ ಬರುವವರೆಲ್ಲರ ಮೆಂಟಾಲಿಟಿ ಅದೇ ಆದರೆ, ಅದು ಕ್ಲೀನಾಗಿ ಇರುವುದಾದರೂ ಹೇಗೆ? ಪ್ರತಿಯೊಬ್ಬರದೂ `ನನ್ನ ನಂತರ ಬರುವವರು ಕ್ಲೀನಾಗಿಡಲಿ’ ಎಂಬ ಧೋರಣೆಯಾಗಿರುವುದರಿಂದ, ಶೌಚಾಲಯ ಸ್ವಚ್ಛ ಸ್ಥಿತಿಯಲ್ಲಿರಲು ಸಾಧ್ಯವೇ ಇಲ್ಲ ಎಂಬಂತಾಗಿ ಹೋಗಿದೆ.

Advertisements

About sujankumarshetty

kadik helthi akka

Posted on ಅಕ್ಟೋಬರ್ 17, 2010, in "ಇ-ಲೋಕ" ಲೇಖನಗಳ “ಕನ್ನಡಲೋಕ”, ವಿಶ್ವೇಶ್ವರ ಭಟ್ - ನೂರೆಂಟುಮಾತು and tagged . Bookmark the permalink. ನಿಮ್ಮ ಟಿಪ್ಪಣಿ ಬರೆಯಿರಿ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: