ಕೆರೆಯಂಗಳದ ನವಾಬ

ನವಾಬನ ಖತ್ನಾದ ಸುದ್ದಿ ಕೇಳಿ ಇಡೀ ಕೆರೆಯಂಗಳವೇ ಮುಸುಮುಸು ನಗತೊಡಗಿತ್ತು. ಬುರ್ಖಾದೊಳಗಿನ ಹಲ್ಲುಗಳು ಮೊದಲ ಬಾರಿಗೆ ಮಿಂಚಿದಂತೆ, ಕೆರೆಯಂಗಳದ ತುಂಬೆಲ್ಲ ಗುಸುಗುಸು ಮಾತುಗಳು ಕೇಳತೊಡಗಿದ್ದವು. ಗಧೇಕಿ ಉಮ್ಮರ್ ಆದರೂ ಖತ್ನಾ ಆಗಿರಲಿಲ್ಲವೆಂದು ಮೊದಲ ಬಾರಿಗೆ ತಿಳಿದ, ಆಗಷ್ಟೇ ಛಾತಿ ಬೆಳೆದ ಹುಡುಗಿಯರಲ್ಲಿ ವಯೋಸಹಜ ತುಂಟಾಟ ಶುರುಗೊಂಡಿತ್ತು. ಬೆಳೆದ ದೇಹಕ್ಕೆ ಖತ್ನಾ ಮಾಡಿಸುವುದಾದ್ರೂ ಹೇಗೆ? ಎಂಬ ಸವಾಲಿನೊಂದಿಗೆ ಶುರುಗೊಳ್ಳುತ್ತಿದ್ದ ಅವರ ತುಂಟ ಮಾತಿನ ಕುತೂಹಲ, ಖತ್ನಾ ಮಾಡಿಸಿಕೊಂಡ ನವಾಬ ಹೇಗೆ ಕಂಡಾನು, ಎಂಬ ಕುತೂಹಲದೊಂದಿಗೇ ಅಖೈರು ಕಾಣುತ್ತಿತ್ತು.

ನವಾಬನ ಅಮ್ಮಿ ನಯೀಮಾ ತನ್ನ ಮಗನಿಗೆ ಖತ್ನಾ ಮಾಡಿಸುವ ಹಟ ತೊಟ್ಟಿದ್ದೇ ಕರೆಯಂಗಳದ ತುಂಬೆಲ್ಲ ಸುದ್ದಿ ಹರಡತೊಡಗಿತು. ಅವಳ ಹಟಕ್ಕೂ ಒಂದು ಕಾರಣವಿತ್ತು. ನವಾಬನಿಗೀಗಾಗಲೇ ಶಾದಿಯ ವಯಸ್ಸು. ಆದರೂ ಅವನ ಖತ್ನಾ ಆಗಿರಲಿಲ್ಲ. ಯಾಕೋ ನವಾಬನಿಗೆ ಆ ಅದೃಷ್ಟವೇ ಕೂಡಿಬಂದಿರಲಿಲ್ಲ. ಪ್ರತಿಸಾಲಿನ ಬೇಸಿಗೆಯಲ್ಲಿಯೂ ನವಾಬನ ಖತ್ನಾದ ಕನಸು ಕಾಣುತ್ತಿದ್ದ ನಯೀಮಾ ಅಂತಹ ಕನಸು ಕಾಣುವುದರಲ್ಲಿಯೇ ಇಪ್ಪನ್ನಾಲ್ಕು ಸಾಲುಗಳನ್ನು ಕಳೆದುಬಿಟ್ಟಿದ್ದಳು. ಈಗ ನವಾಬನಿಗೆ ಇಪ್ಪತ್ತೈದು ಸಾಲು. ಈಗಲೂ ಖತ್ನಾ ಮಾಡಿಸದಿದ್ದರೆ ಛೀಮಾರಿ ಹಾಕುತ್ತಿರುವ ಜನ ಮುಂದೆ ನಡುಬೀದಿಯಲ್ಲಿ ಉಗಿಯಲೂ ಆರಂಭಿಸಿದರೆ ಆಶ್ಚರ್ಯವಲ್ಲ. ಯಾವ ಗಂಡುಮಕ್ಕಳ ಅಮ್ಮಿಗಳೂ ಇಷ್ಟೊಂದು ತಡವಾಗಿ ಖತ್ನಾ ಮಾಡಿಸಿದ ಉದಾಹರಣೆ ಆ ಕೆರೆಯಂಗಳದ ಕೇರಿಯಲ್ಲಿಯೇ ಸಿಗುತ್ತಿರಲಿಲ್ಲ. ಪ್ರತಿ ವರ್ಷವೂ ನವಾಬನಿಗೆ ಖತ್ನಾ ಮಾಡಿಸಬೇಕೆಂದು ಪ್ರಯತ್ನಿಸಿದಾಗಲೆಲ್ಲಾ ಒಂದಲ್ಲ ಒಂದು ತಾಪತ್ರಯಗಳು ಎದುರಾಗಿಬಿಡುತ್ತಿದ್ದವು. ನಯೀಮಾ ಕಂಗಾಲಾಗಿ ಮುಂದಿನ ಬೇಸಿಗೆಗೆ ಮಾಡಿಸಿಯೇಬಿಡಬೇಕು ಎಂದು ಕೊಳ್ಳುತ್ತಿದ್ದಳು. ಅದ್ಯಾವುದೂ ಸಾಧ್ಯವಾಗದೇ ಆಸ್ಮಾನನ್ನು ನೋಡುತ್ತಾ ಎದುರಾದ ಬೇಸಿಗೆಯನ್ನು ದೂಡಿ ಮತ್ತೊಂದು ಬೇಸಿಗೆಯ ಕನಸಿಗೆ ಸಿದ್ಧಗೊಳ್ಳುತ್ತಿದ್ದಳು.

ತನ್ನಮ್ಮಿ ಯಾವಾಗಲೂ ಹೀಗೇ ಎಂದು ಕೆಲವೊಮ್ಮೆ ಮೌನ ವಹಿಸಿಬಿಡುತ್ತಿದ್ದ ನವಾಬನಿಗೆ ನಿಜವಾಗಲೂ ಚಿಂತೆ ಶುರುವಾಗಿದ್ದು ಗೆಳೆಯರ ಜೊತೆ ಬೆರೆತು ಜಗತ್ತಿನ ಹುಡುಗಿಯರ ಬಗ್ಗೆ ಕತೆ ಕಟ್ಟತೊಡಗುತ್ತಿದ್ದ ಹದಿನೆಂಟರ ವಯಸ್ಸಿನಲ್ಲಿ ರಮ್ಜಾನಿನ ರೋಜೆಗಳನ್ನು (ಉಪವಾಸ) ದಿನಕ್ಕೆ ಐದು ನಮಾಜುಗಳನ್ನು ಆಚರಣೆಗೆ ತರುತ್ತಲೇ ಬೆಳೆಯ ತೊಡಗಿದ್ದ ನವಾಬ ಹೋಗುತ್ತಿದ್ದುದು ಕನ್ನಡ ಶಾಲೆಯೊಂದಕ್ಕೆ, ಆದರೂ ಖುರಾನಿನ ಪ್ರತಿಶಬ್ದವೂ ಇವನ ಬಾಯಿಯಲ್ಲಿ ಉಚ್ಛಾರಣೆ ಗಾಗಿ ಸಾಲುಗಟ್ಟಿ ನಿಂತಂತೆ ಭಾಸವಾಗುತ್ತಿತ್ತು. ಕನ್ನಡ ಶಾಲೆಯಲ್ಲಿ ಕೇಳಿಬಂದರೂ ಆತನ ಜೊತೆಯ ಹುಡುಗರೇ ಅದನ್ನು ನಿರಾಕರಿಸ ತೊಡಗುತ್ತಿದ್ದರು. ‘ನವಾಬನಿಗೆ ರಾಮಾಯಣಾನೂ ಗೊತ್ತು, ಮಹಾಭಾರತಾನೂ ಗೊತ್ತು’ ಎಂದು ನವಾಬನ ಪರವಾಗಿಯೇ ಹಿಂದೂ ಹುಡುಗರು ಹಣೆಗೆ ಉದ್ದದ ನಾಮ ಎಳೆದು ತನಿಖೆಗೆ ಬಂದವರಿಗೆ ಹೇಳಿಕಳಿಸುತ್ತಿದ್ದರು.

ಕನ್ನಡ ಶಾಲೆಗೆ ನವಾಬನೆಂದರೆ ಒಂದು ರೀತಿಯಲ್ಲಿ ಅವನು ನವಾಬನೇ ಆಗಿಬಿಟ್ಟಿದ್ದ. ಅರಬ್ಬಿ, ಉರ್ದುವಿನಂತೆ ನವಾಬ ಕನ್ನಡವನ್ನು ಸ್ಪಷ್ಪವಾಗಿ ಉಚ್ಛರಿಸುತ್ತಿದ್ದ, ಬರೆಯುತ್ತಿದ್ದ, ಹಿಂದೂ ಗೆಳೆಯರು ಎಷ್ಟೋ ನೋಟ್ಸುಗಳನ್ನು ನವಾಬನಿಂದಲೇ ಬರೆಸಿಕೊಳ್ಳುತ್ತಿದ್ದುದರಿಂದ ಎಷ್ಟೋ ಹಬ್ಬಗಳಲ್ಲಿ ನವಾಬನೇ ಮುಖ್ಯ ಅತಿಥಿಯಾಗಿರುತ್ತಿದ್ದ, ಹೀಗೇ ಕೆಲವೊಮ್ಮೆ ಗೆಳೆಯರೆಲ್ಲ ಸೇರಿಕೊಂಡಾಗ ಗೆಳೆಯರು ಕುತೂಹಲದಿಂದ ಕೇಳುತ್ತಿದ್ದ ಒಂದೇ ಒಂದು ಪ್ರಶ್ನೆಗೆ ಮಾತ್ರ ನವಾಬ ತಲೆತಗ್ಗಿಸಿ ನಿಂತು ಬಿಡುತ್ತಿದ್ದ. “ಖತ್ನಾ ಮಾಡೋವಾಗ ನೋವಾಗ್ತದೆನೋ? ನಿಂದು ಖತ್ನಾ ಮಾಡೋವಾಗನೂ ನೋವಾಗಿತ್ತೇನೋ?” ಭಯಮಿಶ್ರಿತ ಕುತೂಹಲದ ಪ್ರಶ್ನೆ ಯಾವಾಗಲೂ ನವಾಬನನ್ನು ಚುಚ್ಚಿ ಹಾಕುತ್ತಿತ್ತು. “ನಂಗೆ ನೆನ್ಪಿಲ್ರೋ” ಎಂದಷ್ಟೇ ಹೇಳಿ ನವಾಬ ಆ ಗುಂಪಿನಿಂದ ದೂರವಾಗುತ್ತಿದ್ದ.

ಗೆಳೆಯರಿಂದ ದೂರವಾಗಿ ಸೀದಾ ಕೆರೆಯಂಗಳದ ಕೇರಿಗೆ ಊದಿಸಿಕೊಂಡ ಮುಖದೊಂದಿಗೆ ಬರುತ್ತಿದ್ದ ನವಾಬ ಝೋಪಡಿಗೆ ನುಗ್ಗಿ ತನ್ನಮ್ಮಿಯ ಸೆರಗು ಹಿಡಿದು ಕಣ್ಣೀರು ಹಾಕುತ್ತಿದ್ದ. ತಮ್ಮ ಭೈಯ್ಯಾ ಅಳುತ್ತಿರುವುದು ನೋಡಿ ನವಾಬನ ಸುತ್ತುವರಿದ ತಂಗಿಯರು ಮೌನ ವಾಗಿಯೇ ತಮ್ಮ ಭೈಯ್ಯಾನ ಮುಖ ನೋಡಿ, ಏನಾಯ್ತೆಂದು ಕಣ್ಣ ಲ್ಲಿಯೇ ಪ್ರಶ್ನಿಸಿದಾಗ ನವಾಬ ಮತ್ತಷ್ಟು ಕಂಗಾಲಾಗಿ ಅಮ್ಮಿಯ ಸೆರಗಿ ನಿಂದಲೇ ಕಣ್ಣು ತಿಕ್ಕಿ ಅಂಗಳಕ್ಕೆ ಹೋಗಿ ನಿಂತುಬಿಡುತ್ತಿದ್ದ. ಒಂದೊಂದು ಸಾಲಿನ ವ್ಯತ್ಯಾಸದೊಳಗೆಯೇ ಹುಟ್ಟಿದ ರೇಷ್ಮಾ ಮತ್ತು ನೂರಿಯರಿಬ್ಬರಿಗೂ ಗೊತ್ತು. ತಮ್ಮ ಭೈಯ್ಯಾ ಯಾಕೆ ಅಳುತ್ತಿದ್ದಾನೆ ಎಂಬುದು. ಆದರೂ ಕಣ್ಣಲ್ಲಿಯೇ ಇವರು ಪ್ರಶ್ನಿಸುವುದು, ನವಾಬ ಅಂಗಳಕ್ಕೆ ಹೋಗಿ ನಿಲ್ಲುವುದು ಮಾಮೂಲಿನಂತೆ ಆಗಿತ್ತು. ನವಾಬ ಹಾಗೆ ಅತ್ತಾಗಲೆಲ್ಲಾ ಆ ಝೋಪಡಿಯ ತುಂಬೆಲ್ಲ ಮೌನ ಆವರಿಸುತ್ತಿತ್ತು. ಆ ಮೌನ ದಲ್ಲಿ ‘ನವಾಬನ ಖತ್ನಾ ಆಗಲಿಲ್ಲ’ವೆಂಬ ಮಾತು ಝೋಪಡಿಯಲ್ಲಿದ್ದ ಎಲ್ಲರಿಗೂ ಸ್ಪಷ್ಟವಾಗಿಯೇ ಕೇಳಿಸುತ್ತಿತ್ತು. ಅಂಥದೊಂದು ಕೀರಲು ಸದ್ದು ಎಷ್ಟೋ ವರ್ಷ ಹಾಗೆಯೇ ಅಲ್ಲಿ ಬೆಳೆಯುತೊಡಗಿತ್ತು.

ಈ ನಡುವೆ ನವಾಬ ಚಿಗುರು ಮೀಸೆಯ ಹುಡುಗನಾಗಿ ರಂಗು ರಂಗಾಗಿ ದುಷ್ಟಪುಷ್ಟವಾಗಿ ಬೆಳೆಯತೊಡಗಿದ್ದ. ಕನ್ನಡ ಶಾಲೆಯಿಂದ ಕಾಲೇಜು ಮೆಟ್ಟಿಲು ಹತ್ತಬೇಕಿದ್ದವನಿಗೆ ‘ತನ್ನ ಖತ್ನಾ ಆಗಲಿಲ್ಲ’ವೆಂಬ ಕೊರಗೇ ದಾರಿ ಮಧ್ಯದಲ್ಲಿ ಎಡವಿ ಬೀಳಿಸಿದಂತಾಗಿತ್ತು. ನವಾಬ ಬರೆದುಕೊಟ್ಟ ನೋಟ್ಸುಗಳಿಂದ ಗೆಳೆಯರು ಪಾಸಾಗಿದ್ದರು. ನವಾಬ ಮಾತ್ರ ಫೇಲಾಗಿಬಿಟ್ಟಿದ್ದ. ರೇಷ್ಮಾಳ ಶಾದಿಯ ಸಂದರ್ಭವೂ ಆಗ ಎದು ರಾಗಿದ್ದರಿಂದ ನವಾಬ ಫೇಲಾದ. ವಿಷಯ ಝೋಪಡಿಯಲ್ಲಿ ದೊಡ್ಡ ಬಿರುಗಾಳಿಯಾಗಲಿಲ್ಲ, ರೇಷ್ಮಾ ನೂರಿಯರ ಮುದ್ದು ಮುಖ ನೋಡಿ ದಾಗಲೆಲ್ಲಾ ನವಾಬನಿಗೆ ತಾನು ಚೋಕರಿಯಾಗಿ ಹುಟ್ಟಬೇಕಿತ್ತು ಎನಿಸು ತ್ತಿತ್ತು. ಚೋಕರಿಯಾಗಿದ್ದರೆ ಖತ್ನಾ ಮಾಡಿಸುವ ಸಮಸ್ಯೆ ಇರುತ್ತಿರಲಿಲ್ಲ ಎಂದುಕೊಳ್ಳುತ್ತಿದ್ದ. ಹಾಗೆಯೇ ಕನಸು ಕಂಡು ಮುಗುಳ್ನಕ್ಕು ಸುಮ್ಮನಾಗುತ್ತಿದ್ದ.

ರೇಷ್ಮಾಳ ಶಾದಿಯಾಗಿ ನೂರಿಯ ನಿಕಾಹ್ ಮಾಡಲು ಗಂಡು ಹುಡುಕುವ ಕೆಲಸದಲ್ಲಿ ಈಗ ನಯೀಮಾ ಬಹಳ ಹೊತ್ತು ಕಳೆಯತೊಡಗಿದಾಗ ಕನ್ನಡ ಶಾಲೆಯಲ್ಲಿ ಫೇಲಾಗಿ ಕಾಲೇಜು ಮೆಟ್ಟಿಲು ಹತ್ತದೇ ಉಳಿದ ನವಾಬ, ಮಿಳ್ಳಘಟ್ಟದ ಕೆರೆಯ ಸಖ್ಯ ಬೆಳೆಸಿಕೊಂಡಿದ್ದ. ಗಾಳಕ್ಕೆ ಅಂಗಳದಲ್ಲಿಯೇ ಕೊಚ್ಚೆ ಮಣ್ಣು ಸರಿಸಿ ಹುಳು ಹೇಕ್ಕಿ ಸಿಗಿಸಿದವನೇ ಮಿಳ್ಳಘಟ್ಟದ ಕೆರೆಯತ್ತ ದೌಡಾಯಿಸತೊಡಗಿದ. ಕೆರೆಯ ಏರಿ ಮೇಲಿನ ಮಣ್ಣು, ಹಾದಿ ಬಹುದೂರದವರೆಗೆ ಸಾಗಿ ಆ ಹಾದಿ ಯಲ್ಲಿ ನೂರಾರು ಝೋಪಡಿಗಳು ಟೊಂಗೆಯೊಂದರ ಮೇಲೆ ಕಟ್ಟಿದ ಹಕ್ಕಿ ಗೂಡುಗಳಂತೆ ನವಾಬನಿಗೆ ಕಾಣತೊಡಗಿ, ಮನಸ್ಸಿನೊಳಗೆ ಪುಳಕದ ಅಲೆಗಳು ಏಳುತ್ತಿದ್ದವು. ಮರುಕ್ಷಣದಲ್ಲಿಯೇ ಆ ಹಕ್ಕಿ ಗೂಡು ಗಳಲ್ಲಿ ತನ್ನಂತೆಯೇ ಯೌವನದ ಹಕ್ಕಿಗಳಿರಬಹುದು ಮತ್ತು ಯಾವ ಹಕ್ಕಿಗೂ ಖತ್ನಾ ಆಗದೆ ಉಳಿದಿರಬಹುದು ಎಂದು ಬಿರುಗಾಳಿಗೆ ಉತ್ತರವೆಂಬಂತೆ ನಗತೊಡಗುತ್ತಿದ್ದ. ಮೀನು ಹಿಡಿಯಲು ಕೂತ ಕೂಗಳತೆ ದೂರದಲ್ಲಿಯೇ ಪಕ್ಕದ ಝೋಪಡಿಯ ಮಲ್ಲಿ, ಯೌವನ ವನ್ನೆಲ್ಲ ತನ್ನೆದೆ ಮತ್ತು ತೊಡೆಗಳಲ್ಲಿಯೇ ಅದುಮಿಟ್ಟು ಕೊಂಡಂತಿದ್ದ ರಾಜಿ, ಜೋತು ಮೊಲೆಯ ವಡ್ಡರ ಅಜ್ಜಯೊಂದಿಗೆ ಬಟ್ಟೆ ಒಗೆದೊಗೆದು ಸೊಂಟ ಮುರಿಯುವಾಗೆಲ್ಲ ನವಾಬನ ಮೈಯೊಳಗೆ ಬೆಂಕಿ ಬೀಳುತ್ತಿತ್ತು. ಆಕಾಶದತ್ತ ಮುಚ್ಚಿದ ಕಣ್ಣು ತೂರಿ ನೆಲದಾಳಕ್ಕೆ ಮಣ್ಣ ನಗೆ ಅಗೆದು ಗುಡ್ಡೆ ಹಾಕುತ್ತಿದ್ದಾಗಲೇ ಸೊಂಟ ಮುರಿಯುವ ನೆಪದಲ್ಲಿ ನವಾಬನ ಕಡೆ ಮುಖ ಮಾಡಿದ ರಾಜಿ ಕಿಸಕ್ಕನೆ ನಕ್ಕಿದ್ದು ನೋಡಿ ಕೇಳಿದ ನವಾಬ, ತನ್ನ ಹಗಲು ಗನಸಿನಿಂದಲೇ ಬೆಚ್ಚಿಬೀಳುವ ಕಾರಣವಾದಂತಾಯಿತು.

ರಾಜಿ ನಕ್ಕಿದ್ದು, ತನಗೆ ಖತ್ನಾ ಆಗಲಿಲ್ಲವೆಂದೇ ಇರಬಹುದೆಂದು ಭಾವಿಸಿದ. ‘ಕೇರಿ ರಂಡಿಗೆ ಪೂರ ಗೊತ್ತಾಗ್ತೈತೆ’ ಎನ್ನುತ್ತಲೇ ಗಾಳ ವನ್ನೇಲ್ಲ ಕೆರೆ ನೀರಿಗೆಸೆದು ರಾಜಿಗೆ ಬೆನ್ನು ನೀಡಿ ಝೋಪಡಿ ಗಳತ್ತ ಮುಖ ಮಾಡಿ ಕುಳಿತ. ಏನೋ ಮೋಹ ಮತ್ತೆ ಆವರಿಸಿ ಖತ್ನಾದ ವಿಷಯ ಮರೆವಿಗೆ ಸರಿದು ರಾಜಿಯ ಬಲಿತ ಸೊಂಟದ ಭಾಗವನ್ನು ಎಡೆಬಿ ಡದೆ ನೋಡಿ, ಮುಳುಗುವ ಸೂರ್ಯನ ಕೆಂಪು ಬೆಳಕಲ್ಲಿ ಬಂಗಾರದಂತೆ ಹೊಳೆಯುತ್ತಿರುವ ಮಂಡಿಯವರೆಗಿನ ಕಾಲುಗಳ ಮೇಲೆ ದೃಷ್ಟಿ ಹಾಯಿಸಿ ಅದೇಷ್ಟೋ ಹೊತ್ತು ಕಾಲ ತಳ್ಳಿದ. ರಾಜಿಯೂ ತನ್ನ ಕಡೆಯೇ ಕಳ್ಳ ನೋಟ ಹರಿಸುತ್ತಿದ್ದಾಳೆಂದು ಭ್ರಮಿಸಿಕೊಂಡ. ತನಗೆ ಖತ್ನಾ ಆಗಿಲ್ಲವೆಂಬ ವಿಷಯ ಅವಳಿಗೆ ಗೊತ್ತಿರಲಿಕ್ಕಿಲ್ಲ ಎಂದು ಸಮಾಧಾನ ತಂದುಕೊಂಡು ರಾಜಿಗೆ ಬೈದದಕ್ಕೆ ದಯಾಳುವಾದ ಅಲ್ಲಾಹನೆ ತನ್ನನ್ನು ಕ್ಷಮಿಸಿ ಎಂದು ಪ್ರಾರ್ಥಿಸುವಷ್ಟು ಭಾವುಕನಾಗತೊಡಗಿದ. ನವಾಬನ ಪ್ರಾರ್ಥನೆ ಮುಗಿಯುವಷ್ಟರಲ್ಲಿ ಕತ್ತಲಾಗಿ ರಾಜಿಯ ಮುಖವು ಅಸ್ಪಷ್ಟವಾ ಗತೊಡಗಿತು. ನೆರಳಿನಂತಹ ಆಕೃತಿಗಳು ದೊಡ್ಡ ಬಿದಿರು ಬುಟ್ಟಿಗಳನ್ನು ತಲೆ ಮೇಲೆ ಹೊತ್ತು ಕೆರೆಯಂಗಳದ ಏರಿಯಾ ದಾರಿ ಹಿಡಿದಿದ್ದು, ಅಂತಿಮವಾಗಿ ಗೋಚರಿ ಸಿದಾಗ, ನವಾಬನು ಅಂಡಿಗೆ ಅಂಟಿದ ಕೆಸರು ಮಣ್ಣು ಹೊರಿಸಿ ಕೊಂಡವನು ಆಕೃತಿಗಳನ್ನು ಹಿಂಬಾಲಿಸುವಂತೆ ಹೊರಟು ನಿಂತ.

ತನ್ನ ಝೋಪಡಿಯಲ್ಲಿ ನಿಂತು ರಾಜಿಯ ಝೋಪಡಿಯತ್ತ ಸೂಕ್ಷ್ಮ ದೃಷ್ಟಿ ಹಾಯಿಸಿದಾಗ ಉರಿಯುತ್ತಿರುವ ದೀಪವೊಂದರ ಪುಟ್ಟ ಬೆಳಕು ನವಾಬನಿಗೆ ಕೈಬೀಸಿ ಕರೆದಂತಾಯಿತು. ಅತ್ತ ಹೋಗಿ ರಾಜಿಯನ್ನೊಮ್ಮೆ ಕಣ್ತುಂಬ ನೋಡಿ ಅವಳನ್ನು ಮುಟ್ಟಿ ಬರಬೇಕೆಂದು ನವಾಬ ನಿರ್ಧರಿ ಸುವ ಹೊತ್ತಿಗೆ ರಾಜಿಯ ಗಂಡ ಭೀಮ ತನ್ನ ಮುಂದೆ ರಸ್ತೆ ಅಳೆಯುತ್ತ ಎದ್ದು ಬಿದ್ದು ಹೋಗುತ್ತಿದ್ದುದು ಕಂಡು ನವಾಬ ಇಡೀ ಕೆರೆಯಂಗಳದ ಕೇರಿಯನ್ನೊಮ್ಮೆ ಮೊದಲಬಾರಿಗೆ ಎಂಬಂತೆ ನೋಡತೊಡಗಿದ. ಸಖತ್ತು ಬೀಸಿಲಿನ ದಿನಗಳಾಗಿದ್ದರಿಂದ ನೆಮ್ಮದಿ ನಿದ್ದೆಗಾಗಿ ಗಂಡಸರು ಹೆಂಗಸರೆನ್ನದೇ ಹೊಸದಾಗಿ ಡಾಂಬರು ಹಾಕಿದ್ದ ಕೇರಿಯ ಮೇಲೆ ಚಾಪೆ ಹಾಸಿ ಮೈಚೆಲ್ಲಿ ಮಲಗಿದ್ದ ದೃಶ್ಯ ನವಾಬನಲ್ಲಿ ಏನೋ ಆಸೆ ಹುಟ್ಟಿಸತೊಡಗಿತು. ಇಬ್ಬರು ಮಲಗಿದರೇನೇ ತುಂಬಿ ಇಕ್ಕಟ್ಟುಕೊಳ್ಳುವ ಝೋಪಡಿಯಲ್ಲಿ ಸೆಖೆಯಲ್ಲಿ ಅಂಟಿ ಮಲಗುವುದು ರಾಜಿಗೂ ಸಾಧ್ಯ ವಾಗಲಿಕ್ಕಿಲ್ಲ ಎಂದು ಯೋಚಿಸಿದವನ ತೊಡೆ ಮತ್ತೆ ಕಂಪನಕ್ಕೊಳಗಾಗಿ ತನ್ನ ಝೋಪಡಿಯ ಒಳಗೆ ತೂರಿಕೊಂಡ. ಹಾಸಿದ್ದ ಚಾಪೆಯ ಮೇಲೆ ಮಲಗಿಕೊಂಡವನು ಕೆಲವಾರು ಕ್ಷಣಗಳಲ್ಲಿಯೇ “ಹಾಳು ಸೆಖೆ, ಇಕ್ಕಟ್ಟಿ ನೊಳಗೆ ಮಲಗೋದು ಹೇಗೆ? ಹೊರಕ್ಕೆ ಹಾಸಿಕೊಳ್ಳುತ್ತೇನಮ್ಮಿ” ಎಂದ ವನು ನಯೀಮಾಳ ಪ್ರತಿಮಾತಿಗೂ ಕಾಯದೆ ಕೆರೆಯಂಗಳದ ಕೆರೆಗೆ ಚಂಗನೆ ಜಿಗಿದು ಹಾಸಿಕೊಂಡ ಹಾಸಿಗೆ ಮೇಲೆ ಮೈ ಚೆಲ್ಲಿ ನಯೀಮಾ ಝೋಪಡಿಯ ತಟ್ಟಿ ಎಳೆದುಕೊಳ್ಳುವವರೆಗೆ ಸತ್ತವನಂತೆ ನಿದ್ದೆ ಹೋದ. ತಟ್ಟಿ ಎಳೆದುಕೊಳ್ಳುವ ಸದ್ದಾಗುತ್ತಿದ್ದಂತೆಯೇ ಕಣ್ಣು ಬಿಟ್ಟು ರಾಜಿಯ ಝೋಪಡಿಯ ಅಂಗಳದಂತಿದ್ದ ಡಾಂಬರು ರಸ್ತೆಗೆ ಕಣ್ಣು ಹಾಕಿದ. ಕತ್ತಲೊಳಗೆ ಮುಳುಗಿ ಸ್ಮಶಾನದಂತಾಗಿದ್ದ ಕೆರೆಯಂಗಳದ ಕೇರಿಯಲ್ಲಿ ರಾಜಿಯ ಝೋಪಡಿಯ ಪುಟ್ಟ ಬೆಳಕು ಮಾತ್ರ ಕತ್ತಲನ್ನು ಎತ್ತಿಹಿಡಿದ ಲೈಟು ಕಂಬದಂತೆ ಕಾಣುತ್ತಿರುವುದು ಗಮನಿಸುವಾಗಲೇ ಅಲ್ಲಿಯೂ ಕತ್ತಲಾಗಿ ತಟ್ಟಿಯನ್ನು ಬಿಗಿದ ಸದ್ದಾಗಿ ನವಾಬನ ಬೆಂಕಿಗೆ ನೀರು ಬಿತ್ತು.

ದೂರದ ಕಳ್ಳಿ ಗಿಡದಲ್ಲಿ ಮಿಂಚಿ ಮಿಂಚಿ ಮರೆಯಾಗುವ ಕ್ಷಣಿಕ ಬೆಳಕು ನವಾಬನಲ್ಲಿ ಜೋಸೆಫನ ಚಿತ್ರ ಮೂಡಿಸಿ, ಅವನು ಹೇಳಿದ ಪುಟ್ಟ ಕಥೆಯೊಂದು ದೆವ್ವಗಳು ಓಡಾಡುವ ಹೊತ್ತೆಂದು ಕೆರೆಯಂಗಳದ ಜನ ಭಾವಿಸುವ ಅಮಾವಾಸ್ಯೆಯ ರಾತ್ರಿಯಲ್ಲಿ ನೆನಪಾಗಿ ಕಾಡಿತು. ದೇವರು ಮಾನವರನ್ನೆಲ್ಲ ಸೃಷ್ಟಿಸಿ ಭೂಮಿಗೆ ಕಳಿಸಿದ. ಹಾಗೆ ಕಳಿಸುವಾಗ ಒಂದು ನಿಯಮವನ್ನು ಕಿವಿಯಲ್ಲಿ ಊದಿದನಂತೆ. ಇಲ್ಲಿಂದ ಹೇಗೆ ಹೊರಡುತ್ತೀರೋ ಹಾಗೆಯೇ ಜೀವನ ಮುಗಿಸಿ ವಾಪಸ್ ಬಂದರೆ ಮಾತ್ರ ನಿಮಗೆ ಸ್ವರ್ಗ. ಮಾನವರೆಲ್ಲ ಸರಿ ಹಾಗೇಯೇ ಆಗಲಿ ಎಂದು ಭೂಮಿಗೆ ಹೊರಟು ಬಂದರಂತೆ. ಮಜವಾಗಿ ಭೂಮಿಯ ಮೇಲೆ ಕಾಲ ಕಳೆದವರು ಯಾವುದಾವುದೋ ಧರ್ಮಗಳ ಜಂಜಡಕ್ಕೆ ಬಿದ್ದು ಅಸಲಿ ಮನುಷ್ಯ ಧರ್ಮವನ್ನೇ ಮರೆತುಬಿಟ್ಟರಂತೆ. ಅವರವರ ಜೀವನಾವಧಿ ಮುಗಿಸಿಕೊಂಡು ಸ್ವರ್ಗಕ್ಕೆ ಹೋದವರಿಗೆ ಕಟ್ಟುನಿಟ್ಟಿನ ಯಂತ್ರದೊಳಕ್ಕೆ ಹಾಕಿ ಯಾವ ಯಾವ ಅಂಗಗಳು ಊನವಾಗಿವೆ ಎಂಬ ವಿವರ ಪಡೆದುಕೊಂಡ ದೇವರು, ಧರ್ಮಧರ್ಮಗಳ ಜಗಳದಲ್ಲಿ ತಲೆ, ಕೈಕಾಲು ಕತ್ತರಿಸಿಕೊಂಡವರನ್ನೆಲ್ಲ ನಡುರಾತ್ರಿ ಎನ್ನದೇ ನಿಮ್ಮ ನಿಮ್ಮ ಕತ್ತರಿಸಲ್ಪಟ್ಟ ಅಂಗಗಳನ್ನೆಲ್ಲ ಹುಡುಕಿ ತನ್ನಿ ಎಂದು ಭೂಮಿಗೆ ಮಾನವರ ಗುಡ್ಡೆಯೊಂದನ್ನು ಹೊತ್ತುಹಾಕಿದನಂತೆ. ನಡುರಾತ್ರಿಯಲ್ಲಿ ಕಳೆದುಕೊಂಡ ಅಂಗಗಳನ್ನು ಹುಡುಕಲು ಬೆಳಕು ಬೇಕಲ್ಲವೇ? ಮಿಂಚು ಹುಳುಗಳನ್ನು ಸೃಷ್ಟಿಸಿ ಈ ಮಾನವರ ಜೊತೆಗಿದ್ದು ಸಹಕರಿಸಿ ಎಂದು ಆಜ್ಞೆ ಮಾಡಿದನಂತೆ. ಮಾನವರಿಗೆ ಕಳೆದುಕೊಂಡ ತಮ್ಮ ತಮ್ಮ ಅಂಗಗಳು ಕತ್ತಲಲ್ಲಿ ಸಿಕ್ಕವೋ ಇಲ್ಲವೋ, ಆದರೆ ಮಿಂಚು ಹುಳುಗಳು ಕತ್ತಲಾದ ಕೂಡಲೇ ಮಿಂಚತೊಡಗುತ್ತಿವೆ.

ಈ ಕಥೆಯನ್ನು ಸ್ಪಷ್ಟವಾಗಿ ನೆನಪಿಸಿಕೊಂಡ ನವಾಬ ತಾನಂತೂ ಜನ್ನತ್ತಿಗೇ ಹೋಗುವುದು ತನ್ನ ಯಾವುದೇ ಅಂಗ ಕತ್ತರಿಸಲ್ಪಟ್ಟಿಲ್ಲ ಎಂಬ ಜಂಬಕ್ಕೆ ಒಂದು ಕ್ಷಣ ಒಳಗಾಗಿ ಮತ್ತೊಂದು ಕ್ಷಣ ಏನೋ ನೆನಪಿಸಿಕೊಂಡವನಂತೆ ಧಕ್ಕನೆ ಎದ್ದು ಕುಳಿತ. ಹಾಗೆ ಎದ್ದು ಕುಳಿತ ನವಾಬನಲ್ಲಿ ಆತನ ಅರಿವಿಗೆ ಬರದಂತೆಯೇ “ನನ್ನ ಖತ್ನಾ ಆಗಿಬಿಟ್ಟರೆ, ಜನ್ನತ್ತಿಗೆ ಹೋಗಲಾದರೂ ಸಾಧ್ಯವೇ?’ ಎಂಬ ಪ್ರಶ್ನೆ ಸುತ್ತಿನವರಿಗೂ ಕೇಳಿಸುವಂತೆ ಸದ್ದು ಮಾಡಿತು.

ನಾಲ್ಕು ಜನ ಒಟ್ಟಾಗಿ ತಿರುಗಾಡಿದರೆ ಚಿಕ್ಕದೆನಿಸತೊಡಗುವ ಕೆರೆಯಂಗಳದ ಬೀದಿಯಲ್ಲಿ ಲಾರಿಗಳು ಒಮ್ಮೆಲೇ ನುಗ್ಗಿ ರಣಕಹಳೆಯ ಸದ್ದು ಮಾಡಿದಾಗ ಇಡೀ ಕೇರಿಗೆ ಎಚ್ಚರವಾದಂತಾಯಿತು. ಈ ಕೇರಿಗೆ ಲಾರಿಗಳು ನುಗ್ಗಿ ಬಂದದ್ದನ್ನು ಕೆರೆಯಂಗಳದ ಜನ ಈವರೆಗೆ ನೋಡಿಯೇ ಇರಲಿಲ್ಲವಾದ್ದರಿಂದ ತಮ್ಮ ತಮ್ಮ ಝೋಪಡಿಗಳಿಂದ ಏನೋ ಆಗಬಾರದ್ದು ಆಗಿಹೋಯಿತೇನೋ ಎಂಬಂತೆ ಬಿಟ್ಟ ಕಣ್ಣು ಬಿಟ್ಟು ಹೊರಕ್ಕೆ ದೌಡಾಯಿಸಿ ಗುಂಪು ಗುಂಪಾಗಿ ನಿಲ್ಲತೊಡಗಿದರು. ತಡರಾತ್ರಿಯಲ್ಲಿ ಮೈಮರೆತು ನಿದ್ದೆಹೋಗಿದ್ದ ನವಾಬನಿಗೆ ಅದೇಕೋ ಎಚ್ಚರವಾಗದಿದ್ದಾಗ ನಯೀಮಾ ತಂದು ಸುರಿದ ಚೊಂಬು ತಣ್ಣೀರು ಅವನ ನಿದ್ದೆ ಓಡಿಸಲು ಸಾಕಾದಂತಿತ್ತು. ಎದ್ದು ಕುಳಿತ ನವಾಬನಿಗೂ ಕೆರೆಯಂಗಳದ ಕೇರಿಯ ಜನಕ್ಕೆಲ್ಲ ಆದ ಆಘಾತವೇ ಆಯಿತು ಎಂದು ಹೇಳಬೇಕಾಗಿಲ್ಲ ತಾನೇ? ಮುಖ, ಮೈಮೇಲೆ ಬಿದ್ದ ನೀರನ್ನು ಕೊಡವಿಕೊಂಡ ನವಾಬನಿಗೆ ಲಾರಿಗಳೂ ಧೂಳೆಬ್ಬಿಸಿ ನುಗ್ಗಿ ಬರುತ್ತಿರುವ ದೃಶ್ಯ ಯಾಕೆಂದು ಅರ್ಥವಾಗಿ ಇನ್ನು ರಾಜಿಯನ್ನು ಕೆರೆಯ ಬಂಡೆಕಲ್ಲುಗಳ ಮೇಲೆ ನೋಡಲು ಸಾಧ್ಯವೇ ಇಲ್ಲವೇನೋ ಎಂದು ತನ್ನಷ್ಟಕ್ಕೇ ವಿಷಾದಕ್ಕೆ ಜಾರಿಬಿದ್ದ.

ಕಳೆಹೀನಗೊಂಡ ನವಾಬನ ಮುಖದಲ್ಲಿ ಮತ್ತೂ ಒಂದು ಸಮಸ್ಯೆ ಎದ್ದುಕಾಣುತ್ತಿತ್ತು. ‘ನನ್ನ ಖತ್ನಾ ಆಗುವವರೆಗೆ ಈ ಝೋಪಡಿಗಳಿಗೇನೂ ಆಗದಿರಲಿ.’ ಅವನು ಪ್ರಾರ್ಥನೆ ಸಲ್ಲಿಸಲು ಶಿಸ್ತಾಗಿ ನಿಂತುಕೊಂಡಂತೆ ಕಾಣಬರುತ್ತಿರುವಾಗಲೇ ನಾಲ್ಕಾರು ಲಾರಿಗಳ ಸಾಲು ಅವನ ಬಳಿಗೆ ಬಂದು ನಿಂತುಕೊಂಡಿತು. ಮುಂದಿನ ಲಾರಿಯ ಡ್ರೈವರೇನೋ ಜೋಸೆಫ ಆಗಾಗ ಭಯಂಕರವಾಗಿ ಹೇಳುತ್ತಿದ್ದ ನರಕದ ಅಧಿಪತಿ ‘ಲೂಸೀಫೆರ’ನಂತೆ ಕಂಡು ಕಂಪಿಸತೊಡಗಿದ. ‘ಹಡ್ಸೀ ಮಗನ, ಅತ್ಲಾಗ ಸರಿಯೋ’ ಎಂದು ಆ ಲೂಸೀಫೆರ ಬೆದರಿಸಿದಾಗಲಂತೂ ನವಾಬ ಕಕ್ಕಾಬಿಕ್ಕಿಯಾಗಿ ಝೋಪಡಿಯೊಳಗೆ ಹೊಕ್ಕು ತಟ್ಟಿಯನ್ನು ಆಧಾರಕ್ಕೆ ಹಿಡಿದು ಲಾರಿಗಳು ಮುಂದೆ ಹೋಗುವುದನ್ನು ಇನ್ನಿತರರಂತೆ ಭಯದ ದೃಷ್ಟಿಯಲ್ಲಿಯೇ ನೋಡತೊಡಗಿದ.ಲಾರಿಗಳು ಕೆರೆಯ ಏರಿಯತ್ತ ಒಂದೇ ಓಟದಲ್ಲಿ ದೌಡಾಯಿಸಿ ರಣಕಹಳೆಯ ಸದ್ದನ್ನು ಕೆರೆ ನೀರಿನಲ್ಲಿ ಅಂತಿಮವಾಗಿ ಮುಳುಗಿಸಿದಾಗ ‘ಅಬ್ಬಾ ಬದುಕಿದೆವು’ ಎಂದುಕೊಳ್ಳುತ್ತಲೇ ಕೆರೆಯಂಗಳದ ಕೇರಿಯ ಜನ ಮುನ್ಸಿಪಾಲ್ಟಿಯ ಏಕಮಾತ್ರ ನಲ್ಲಿಗೆ ಹಂಡೆ ಕೊಡಪಾನಗಳೊಂದಿಗೆ ಮುತ್ತಿಗೆ ಹಾಕಿ ಅವರಿವರನ್ನು ಬೈಯುತ್ತಲೇ ತಮ್ಮ ದಿನನಿತ್ಯದ ಕೆಲಸಗಳಿಗೆ ಕೈಕಾಲು ಸೊಂಟಗಳನ್ನು ಬಳಸಿಕೊಂಡರು.

ತನ್ನ ಕೇರಿಯ ಜನರ ಈ ಬಗೆಯ ವರ್ತನೆಯನ್ನು ತಟ್ಟಿ ಹಿಡಿದೇ ನೋಡುತ್ತಿದ್ದ ನವಾಬ ‘ಹಾಳಾದ ಜನ ಗೂಟ ಕೀಳೋ ಹೊತ್ತು ಬಂದು ಜಗಳಕ್ಕಿಳಿಯೋದನ್ನ ಬಿಡೋದಿಲ್ಲ ಇವರದು ದಿನನಿತ್ಯದ್ದು ಇದೇ ಬದುಕಾಗಿ ಹೋಯ್ತು. ಇವ್ರ ಉದ್ಧಾರನಾದ್ರೂ ಹೇಗೆ?’ ಒಳಗೊಳಗೇ ಅಸಮಾಧಾನ ಪಟ್ಟುಕೊಂಡು ಝೋಪಡಿಯೊಳಗೆ ನಿಲ್ಲಲಾರದೆ ಕೆರೆಯತ್ತ ಚೊಂಬು ಹಿಡಿದು ಸಂಡಾಸಿಗೆ ಹೊರಟು ನಿಂತ. ಹಾಗೆ ಹೊರಡುವ ಮುನ್ನ ಅಮ್ಮಿ ನಡುಬಗ್ಗಿಸಿ ಕಟ್ಟಿಟ್ಟಿದ್ದ ಒಂದೆರಡು ಒಣ ಬೀಡಿಗಳನ್ನು ಕೇರುವ ಮರದಿಂದ ಕಣ್ಣುತಪ್ಪಿಸಿ ಹೆಕ್ಕಿ ಜೇಬೊಳಗೆ ಇಳಿಸಿ, ಅಲ್ಲಿಯೇ ಬಿದ್ದಿದ್ದ ಬೆಂಕಿ ಪೊಟ್ಟಣದೊಡನೆ ಕೆರೆಯತ್ತ ಹೆಜ್ಜೆ ಹಾಕಿದ. ಹಾಗೆ ಹೋಗುವಾಗಲೇ ಕೇರಿಯ ಪ್ರತಿಯೊಂದು ಝೋಪಡಿಯನ್ನೂ ನೋಡುತ್ತಾ ಇದೆಲ್ಲವೂ ನೆಲಸಮವಾಗುವ, ಝೋಪಡಿಗಳ ಮುರಿದುಬಿದ್ದ ದೇಹದ ಮೇಲೆಲ್ಲ ಬಸ್ಸುಗಳು ಓಡಾಡುವ ಸಂಗತಿ ಕಲ್ಪಿಸಿಕೊಂಡು ಬೆಂಕಿಯಿಟ್ಟ ಬೀಡಿಯಿಂದ ಹೊಗೆ ಬಿಡಲು ಶುರುಹಚ್ಚಿಕೊಂಡ. ಇದ್ದಕ್ಕಿದ್ದ ಹಾಗೆ ಬಂದೊದಗಿದ ಸಮಸ್ಯೆಯಿಂದಾಗಿ ನವಾಬನಿಗೆ ಏನು ಮಾಡುವುದೆಂದು ಅರ್ಥವಾಗದೇ ತೊಳಲಾಡಿ ಕೊನೆಗೆ ತಾನು ಹೊರಟಿದ್ದು ಸಂಡಾಸಿಗೆಂದು ನೆನಪಿಸಿಕೊಂಡು ಕೆರೆಯತ್ತ ಹೋಗಿ ತನ್ನ ಮಾಮೂಲಿನ ದಟ್ಟ ಕಳ್ಳಿಗಳಲ್ಲಿ ತೂರಿಕೊಂಡು ಕುಳಿತ. ಮತ್ತೊಂದು ಬೀಡಿ ಹಚ್ಚಿಕೊಂಡವನು ಕಳ್ಳಿಗಳ ಮರೆಯಲ್ಲಿಯೇ ನಿಂತ ಲಾರಿಗಳ ಕಡೆ ನೋಡಿದ. ಕೆರೆ ಮುಚ್ಚಿ ಹಾಕುವ ಅವರ ಹುನ್ನಾರಗಳು ಅಲ್ಲಲ್ಲಿ ಕೈ ಸನ್ನೆ ಮಾಡುತ್ತಾ ನಿಂತ ಮಂದಿಯಿಂದ ಸ್ಪಷ್ಟವಾಗತೊಡಗಿತ್ತು. ನವಾಬನಿಗೆ ತನ್ನ ಜನರ ಬದುಕು ಈ ಹೇಲಿಗಿಂತ ಕಡೆಯಾಗುತ್ತಿರುವ ಕುರಿತು ಅವನ ಮೈ ಉರಿಯತೊಡಗಿತ್ತು. ತಾನೂ ಆ ಜನರ ನಡುವೆ ಇರುವುದು ನೆನಪಾಗಿ ತನ್ನ ಮೇಲೆಯೂ ಕನಿಕರ ಹುಟ್ಟತೊಡಗಿತು.

ದಿನಗಳು ಮುಂದೆ ನಡೆದಂತೆಲ್ಲಾ ಕೆರೆಯಂಗಳದ ಬೀದಿಯಲ್ಲಿ ಸ್ಮಶಾನ ಮೌನದ ಛಾಪು ಹೆಚ್ಚಾಗಿ ಕೆರೆಯಂಗಳದ ಏರಿಯಲ್ಲಿ ಕೊಳಕು ಜನರ ಬದಲು ಸೂಟು ಬೂಟಿನ ಅಧಿಕಾರಿಗಳು ಬಂದು ಹೋಗುವುದು ಹೆಚ್ಚಾಯಿತು. ಎಲೆಕ್ಷನ್ನಿನ ವೇಳೆಯಲ್ಲಿ ಬ್ಯಾನರು ಕಟ್ಟಿದ, ಮತ ಕೊಡಿ ಎಂದು ಕೈ ಮುಗಿದು ನಿಂತ ಚಿತ್ರಗಳಿದ್ದ ಹಾಳೆಗಳನ್ನು ಹಂಚಿ ವಿವಿಧ ಪಾರ್ಟಿಗಳ ಪರ ಝೋಪಡಿಗಳ ತಟ್ಟಿ ತಟ್ಟಿದ್ದ. ಅಕ್ಕಪಕ್ಕದ ಕೊನೆಗೆ ಇದೇ ಕೇರಿಯ ಹುಡುಗರ ದಂಡು “ಯಾರೋ ಮಿನಿಸ್ಟ್ರು ಬರ್‍ತಾರಂತಪ್ಪೋ ಎಂದು ಕೂಗೂತ್ತಾ ಕೆರೆ ಏರಿಗೆ ನುಗ್ಗಿ ಬಂದು ಮಿನಿಸ್ಟ್ರು ಬರೋದನ್ನೇ ಕಾಯುತ್ತಾ ಸಂದಿಗೆ ಹೋಗಿ ಬೀಡಿ ಸೇದಿ ಬಾರಿಬಾರಿಗೆ ಬರುತ್ತಾ ನೋಡುತ್ತಾ ಮಾಡುತ್ತಿದ್ದರು. “ಮಿನಿಸ್ಟ್ರು ಬರ್ತಾವ್ರೆ, ಬರೋದಿಲ್ವೇನೇ ಬೂವಮ್ಮಾ? ಗೌರಕ್ಕ ಕೂಗಿ ಕರೆದಾಗ ನಯೀಮಾ ಪ್ರತಿಕ್ರಿಯಿಸದೆ ಇರಲಿಲ್ಲ. “ಬಂದೇನವ್ವೆ ಗೌರಿ, ಹೋಗದಿರು, ತಾಳು ಎಂದು ಹೇಳಿದ್ದನ್ನು ಗೌರಕ್ಕ ಕೇಳದೇ ಇರಲಿಲ್ಲ. ನಯೀಮಾಳ ಜೊತೆ ನವಾಬನೂ ಹೊರಡಲು ಅನುವಾದ, ತಟ್ಟಿಯನ್ನು ತಂತಿಯಲ್ಲಿ ಬಿಗಿದು. ಕೇರಿಗೆ ಕೇರಿಯೇ ಏರಿಗೆ ಹೋಗಿ ನೂಕುನುಗ್ಗಲು ಆರಂಭವಾಯಿತು. ಪೊಲೀಸ್ನೋರ ದೊಣ್ಣೆಗಳು ಜನರನ್ನು ಸಂಭಾಳಿಸುವಲ್ಲಿ ಸುಸ್ತಾಗತೊಡಗಿದ್ದವು.

ಏರಿಯ ಮೇಲೆ ಮಿನಿಸ್ಟ್ರು ಯಾಕೆ ಬರುತ್ತಿದ್ದಾರೆ? ಲಾರಿಗಳು ಯಾಕೆ ನುಗ್ಗಿ ಬಂದವು? ಸೂಟುಬೂಟಿನ ಅಧಿಕಾರಿಗಳಿಗೆ ಏರಿಯ ಮೇಲೆ ಕೆಲಸವೇನು? ಯಾವ ಯಾವುದೂ ನಿಂತು ನೂಕುನುಗ್ಗಲು ಆರಂಭಿಸಿದ್ದ ಜನಕ್ಕೆ ಗೊತ್ತಿರಲಿಲ್ಲವೋ? ಗೊತ್ತಾಗಿದ್ದರೂ ಮಾಡುವುದೇನು? ಎಂದು ಸುಮ್ಮನಾಗಿ ಬಂದೋರ ಹೋಗೋರ ನೋಡಿಕೊಂಡರಾತು ಎಂಬಂತಿದ್ದರು ಆ ಜನ. ನವಾಬನೂ ಹಿಂದಿನಿಂದ ಮುಂದಕ್ಕೆ ಮುಂದಿನಿಂದ ಹಿಂದಕ್ಕೆ ನೂಕಲ್ಪಟ್ಟು ಜನ ಜಾತ್ರೆಯ ನೂಕುನುಗ್ಗಲಲ್ಲಿ ಜೋಲಿ ಆಡುತ್ತಲೇ ಆಗಬಹುದಾದ ಅನಾಹುತವನ್ನು ಯೋಚಿಸುತ್ತಿದ್ದ. ತನ್ನ ಪಕ್ಕಕ್ಕೇ ಬಂದು ನಿಂತು ಜೋಲಿ ಆಡುತ್ತಿದ್ದ ರಾಜಿಯನ್ನು ನೋಡಿದ ಕೂಡಲೇ ಅವನ ಯೋಚನೆಯ ದಿಕ್ಕು ಬದಲಾಗಿ ಅವಳ ಇನ್ನಷ್ಟು ಪಕ್ಕಕ್ಕೇ ಮೈ ಉಜ್ಜುವಷ್ಟು ಅಂಟಿ ಪುಳಕಿತಗೊಂಡು ಮೈಮೇಲೆ ಹಿಡಿತವೇ ಇಲ್ಲದಷ್ಟು ಮೈಮರೆತು ರಾಜಿಯೊಂದಿಗೆ ಜೋಲಿ ಆಡತೊಡಗಿದ. ರಾಜಿಗೂ ತನ್ನ ಪಕ್ಕ ನವಾಬ ನಿಂತಿರುವುದು ಹಿತವೆನಿಸಿ, ಎಂದಿನ ಧಾಟಿಯಲ್ಲಿಯೇ ಅತೀ ಸಲಿಗೆಯಿಂದ ಎಂಬಂತೆ ಮಾತಿಗಾರಂಭಿಸಿದಾಗ ಮೈಮರೆತಿದ್ದ ನವಾಬ ತನ್ನನ್ನು ಸಂಭಾಳಿಸಿಕೊಂಡು ತನ್ನ ಮೇಲೆ ರಾಜಿ ಅನುಮಾನಪಟ್ಟಾಳೆಂದು ಹೆದರಿ, “ಹಾಳು ಜನ, ನೂಕೋದು ನಿಲ್ಲಿಸ್ರಪ್ಪ ಎಂದು ಉಸುರಿದ್ದ ರಾಜಿಗಷ್ಟೇ ಕೇಳುವಂತೆ ಹೇಳಿ ಅವಳ ಮುಖ ನೋಡಿದ. ಆ ಮಾತಿಗವಳು ಪ್ರತಿಕ್ರಿಯೆ ವ್ಯಕ್ತಪಡಿಸದಿದ್ದಾಗ ಹಿಂದಕ್ಕೊಮ್ಮೆ ಒತ್ತಿ ನೂಕಿನಿಂತ ನವಾಬನ ಸಾಹಸ ರಾಜಿಯ ಮುಖದಲ್ಲಿ ಮುಗುಳ್ನಗು ಅರಳುವಂತೆ ಮಾಡಿತು.

“ನವಾಬ್ ಸಾಬಿ… ಎಂದು ಮಾತಿಗೆ ತೊಡಗಿದ ರಾಜಿಯ ಈ ರೀತಿಯ ಸಲಿಗೆ ಕ್ಷಣಮಟ್ಟಿಗೆ ಕೋಪ ತರಿಸಿದರೂ, ಹಲ್ಕಿರಿಯುತ್ತಲೇ ‘ಆಂ ಎಂದು ಕಿವಿ ಚುರುಕು ಮಾಡಿಕೊಂಡು ನವಾಬ ರೋಮಾಂಚನಕ್ಕೊಳಗಾಗಿ ನಿಂತಾಗ “ಮಿನಿಸ್ಟ್ರಂದ್ರೆ ಯಾವ್ ಮಿನಿಸ್ಟ್ರಪ್ಪ? ಎಂದು ಪ್ರಶ್ನಿಸಿಬಿಡುವುದೇ ರಾಜಿ? ನವಾಬ ರಾಜಿಯ ಪ್ರಶ್ನೆಗೆ ಉತ್ತರಿಸುವುದೇನು ಎಂದು ಗೊತ್ತಾಗದೇ ಗೊಂದಲಕ್ಕೆ ಬಿದ್ದು “ಏ ಸುವ್ವರ್‌ಗಳಾ ಹಿಂದಕ್ಕೆ ಸರೀರೋ ಎಂದು ಕೂಗಿ ತನ್ನ ಕುಂಡಿಯನ್ನು ಮತ್ತೊಮ್ಮೆ ಹಿಂದಕ್ಕೆ ನೂಕಿ ನೆಟ್ಟಗೆ ನಿಂತು ಗೊತ್ತಿಲ್ಲವೆಂಬಂತೆ ತುಟಿಗಳನ್ನು ವಿಚಿತ್ರಗೊಳಿಸಿ ರಾಜಿಯ ಮುಖ ನೋಡಿದ. “ಕೆರೆಗೆ ಬರ್‍ತಾವ್ರಂದ್ರೆ ಕೆರೆಮಿನಿಸ್ಟ್ರೇ ಇರ್‍ಬೇಕಲ್ವೆನೋ ಸಾಬಿ ಎಂದಾಗ, ರಾಜಿ ಎಷ್ಟು ದಡ್ಡಿ ಇದ್ದಾಳೆ ಎಂದರಿತು ಮೌನವಾಗಿಯೇ ಮುಗುಳ್ನಕ್ಕು “ಹೂಂ, ಇರ್‍ಬೋದು” ಎಂದ. ಯಾವ ಮಿನಿಸ್ಟ್ರು ಬರುತ್ತಿದ್ದಾನೆಂದು ಅವನಿಗೂ ಗೊತ್ತಿರಲಿಲ್ಲದ್ದರಿಂದ ಹಾಗನ್ನುವುದು ಅನಿವಾರ್ಯವಾಗಿತ್ತು ಅವನಿಗೆ. ನವಾಬ ಹೂಂಗುಟ್ಟಿದ್ದು ತನ್ನ ಬುದ್ಧಿವಂತಿಕೆಗೆ ಸಾಕ್ಷಿ ಎಂದು ಭಾವಿಸಿದ ರಾಜಿ ಅವನ ಮತ್ತಷ್ಟು ಪಕ್ಕಕ್ಕೆ ನಿಂತುಕೊಂಡಳು. ತಾನು ಸುಳ್ಳೇ ಹೂಂಗುಟ್ಟಿದ್ದು ರಾಜಿಯ ಎದೆ ಉಜ್ಜಲು ಕಾರಣವಾಯಿತೆಂದರಿತ ನವಾಬ ತಾನೂ ಮತ್ತಷ್ಟು ಪಕ್ಕಕ್ಕೆ ಸರಿದು ಸಂಪೂರ್ಣ ಅಂಟಿ ನಿಂತು ಮೈ ಸ್ಪರ್ಶದ ಸುಖಕ್ಕೆ ಜಾರಿಕೊಂಡ. ಇಂಥ ಎಷ್ಟೋ ಸ್ಪರ್ಶಗಳಿಗೆ ಒಳಗಾಗಿ ಅಂತ ಸುಖಗಳನ್ನು ಕ್ಷೀಣವೆಂದು ಭಾವಿಸುವ ಮಟ್ಟಕ್ಕೆ ಬಂದಿದ್ದ ರಾಜಿ ನವಾಬನ ಆಂತರ್ಯ ಅರ್ಥ ಮಾಡಿಕೊಂಡವಳಂತೆ ಅವನು ತನ್ನನ್ನು ಸ್ಪರ್ಶಿಸಿ ಪಡುತ್ತಿರುವ ಸುಖಕ್ಕೆ ಈ ಸಾರ್ವಜನಿಕ ಸ್ಥಳದಲ್ಲಿ ತಡೆಯೊಡ್ಡಬೇಕೆಂದು ಎಣಿಸಿದ ರಾಜಿ “ನಿನ್ನಮ್ಮಿ ಖತ್ನಾ ಮಾಡ್ಸೋದ್ಯಾವಾಗಂತೋ?” ಎಂದು ಹಲ್ಕಿರಿಯುತ್ತಲೇ ಪೋಲಿ ಹೆಂಗಸಂತೆ ನಾಚಿಕೆ ಬಿಟ್ಟು ನೇರವಾಗಿ ಕೇಳಿಬಿಟ್ಟಾಗ ನವಾಬನ ಸ್ಪರ್ಶ ಸುಖದ ಮೂಡೆಲ್ಲ ಹಾಳಾಯ್ತು. ಅವನ ಮುಖ ಸುಣ್ಣದ ಕಲರಿನಿಂದ ರಕ್ತದ ಕೆಂಪಿಗೆ ಬದಲಾಗಿಯೋಯ್ತು. ಅಲ್ಲಿ ನಿಲ್ಲಲಾಗದೆ ನಾಚಿಕೆ ಅವಮಾನದಿಂದ ನವಾಬ ನೂಕುನುಗ್ಗಲಿನ ನಡುವಿನಿಂದ ಮಾಯವಾದ.

ಮಿನಿಸ್ಟ್ರು ಬಂದು ಹೋದ ಮೇಲೆ ಕೆರೆಯಂಗಳದ ಜನಕ್ಕೆ ನಿಜವಾಗಲೂ ಬಾಯಿ ಹುಣ್ಣಿನ ರೋಗ ಬಂದಾಯ್ತು ಎನ್ನುವ ರೀತಿಯಲ್ಲಿ ವಾತಾವರಣವೇ ಬದಲಾಯ್ತು. ಯಾರ ಮುಖದಲ್ಲೂ ಅವರಿವರ ಬಗ್ಗೆ ಆಡಿಕೊಳ್ಳುವ ಹುಮ್ಮಸ್ಸು ಇರಲಿಲ್ಲ. ಮುನ್ಸಿಪಾಲ್ಟಿಯ ಏಕಮಾತ್ರ ನಲ್ಲಿಯ ಬಳಿಯೂ ಎಳ್ಳಷ್ಟು ಮಾತು ಕೇಳಿಬರದಂತಾಯಿತು. ಆ ಜನರ ಬದುಕು ಮೊದಲ ಬಾರಿಗೆ ಭಾರವೆನಿಸತೊಡಗಿತು. ಊರಿಗೆ ಊರೇ ತನ್ನ ಕೊಳಕನ್ನು ತೊಳಕೊಳ್ಳುವ, ದುಡ್ಡಿಲ್ಲದಿದ್ದಾಗ ಮೀನಿಗೆ ಗಾಳ ಎಸೆಯುವ ಈ ಜನರ ಕೆರೆಯನ್ನು ಒಡೆದು ಬಸ್‌ಸ್ಟ್ಯಾಂಡ್ ನಿರ್ಮಿಸುವ ಕೆಲಸಕ್ಕೆ ದೊಡ್ಡ ದೊಡ್ಡ ಯಂತ್ರದ ಕೈಗಳು ಕೈ ಹಾಕಿದ್ದವು. ಕೆರೆ ಏರಿಯ ಒಂದು ಕಡೆ ದಾರಿಯಲ್ಲಿ ತುಂಡರಿಸಿಹಾಕಿದ್ದ ಯಂತ್ರಗಳು ಮತ್ತೊಂದು ಕಡೆ ಲಾರಿಗಟ್ಟಲೆ ಮಣ್ಣನ್ನು ಅದಾಗಲೇ ಖಾಲಿಗೊಂಡಿದ್ದ ಕೆರೆಯ ಚಕ್ಕಳದ ಮೇಲೆ ಮುಚ್ಚುತ್ತಿದ್ದವು. ಅಲ್ಲಿನ ಮುದುಕಿಯರಿಗಿಂತ ಹಳೆಯದಾಗಿ ಕಾಣುತ್ತಿದ್ದ ಹೇಗೋ ಬೆಳೆದು ಬಾಗಿ ಇನ್ನೂ ಜೀವ ಉಳಿಸಿಕೊಂಡಿದ್ದ ಈಚಲು ಮರಗಳ ಅಸಂಖ್ಯ ತುಂಡುಗಳು ಕೆರೆಯಂಗಳದ ಸರ್ವನಾಶವನ್ನು ಪ್ರತಿಬಿಂಬಿಸುತ್ತಿದ್ದವು. ‘ಶಿವಮೊಗ್ಗೆಗೆ ಬರ ಬಂದರೂ ಈ ಕೆರೆಗೇನೂ ಆಗುವುದಿಲ್ಲ. ಇಲ್ಲಿನ ನೀರು ಇಂಗುವುದೇ ಇಲ್ಲ’ ಎಂದು ಹೇಳುತ್ತಿದ್ದ ಕೆರೆಯಂಗಳದ ಜನ, ಜೀವಂತ ಕೆರೆಯೊಂದು ಮಣ್ಣು ಹಾಸಿದ ಹೊಸ ರಸ್ತೆಯತೆ ಕಾಣುತ್ತಿರುವುದನ್ನು ಕಂಡು ಕಣ್ಣೀರು ಹಾಕಿದರು. ಎಲ್ಲದಕ್ಕೂ ಕೆರೆಯೊಂದಿಗೆ ನೆಂಟಸ್ತನ ಬೆಳೆಸಿಕೊಂಡಿದ್ದ ಕೆರೆಯಂಗಳದ ಜನರಲ್ಲಿ ಏನೋ ಕಳೆದುಕೊಂಡ ನೋವು ಮಾತ್ರ ದಿನದಿಂದ ದಿನಕ್ಕೆ ಬೆಳೆಯುತ್ತಾ ಹೋಗಿತ್ತು. ಏರಿಗೆ ಸಮನಾಗಿ ಕೆರೆಯನ್ನು ಮುಚ್ಚಿದ ಸೂಟುಬೂಟಿನ ಜನ ಝೋಪಡಿಗಳ ಮುಂದೆ ನಿಂತು ಕಣ್ಣಳತೆ ಮಾಡಿ, ಗೆರೆ ಕೊರೆದು ಹೋದಾಗಲಂತೂ ಈ ಜನರ ಕಣ್ಣೀರು ತಡೆಯುವ ಏರಿಯೂ ಅಲ್ಲಿ ಇರದಹಾಗಾಯಿತು. ಕೆರೆಯಂಗಳದ ಝೋಪಡಿಗಳು ಅವರವರಿಗೆ ತಮ್ಮ ಮಕ್ಕಳಂತೆ ಕಂಡು ಮಕ್ಕಳ ಮೇಲೆ ಸಾವಿನ ನೆರಳು ಬಿದ್ದು ಅವಚುತ್ತಿರುವುದನ್ನು ನೋಡಿಯೂ ಮೌನ ವಹಿಸಬೇಕಾದ ಅನಿವಾರ್ಯತೆಗೆ ಒಳಗಾದಂತಾಗಿದ್ದರು.

ನವಾಬನ ಖತ್ನಾ ಮಾಡಿಸಲೇಬೇಕೆಂದು ಹಟತೊಟ್ಟಿದ್ದ ನಯೀಮಾ ಮತ್ತೀಗ ಗೊಂದಲದಲ್ಲಿ ಬೀಳುವಂತಾಯ್ತು. ಮೂರು ಬೀದಿಗಳಲ್ಲಿ ಘೋಡಾ ಸವಾರಿ ಮಾಡಿಸಿ, ಕೆರೆಯಂಗಳದ ಜನರೆಲ್ಲ ನಿಂತು ಆಶ್ಚರ್ಯಪಡುವಂತೆ ನವಾಬನ ಖತ್ನಾ ಮಾಡಿಸುತ್ತೇನೆ. ಮೂರು ಕೇರಿಗೂ ತಪ್ಪದೇ ಕುರಿ ಊಟ ಹಾಕಿಸ್ತೇನೆ ಎಂದು ಜಂಬ ಕೊಚ್ಚಿಕೊಂಡಿದ್ದ ನವಾಬನ ಅಮ್ಮಿ ನಯೀಮಾಳ ಝೋಪಡಿಗೂ ಸೂಟುಬೂಟಿನ ಅಧಿಕಾರಿಗಳು ಗೆರೆ ಎಳೆದು ಹೋಗಿದ್ದರು. ನವಾಬನ ಖತ್ನಾಕ್ಕೆಂದು ಜೋಡಿಸಿ ಕೊಂಡಿದ್ದ ತಾಂಬೆಯ ಕೊಡ, ಕೆಂಪು ಕಲರಿನ ಪಂಚೆಯಾಕಾರಕ್ಕೆ ಕತ್ತರಿಸಿದ ಬಟ್ಟೆ, ಆ ಬಟ್ಟೆಯ ನಾಲ್ಕು ತುದಿಗೂ ಹೊಲಿದ ಮಿರಿ ಮಿರಿ ಮಿಂಚುವ ರೇಶಿಮೆಯ ಪಟ್ಟಿ, ತುಪ್ಪದೊಳಗೆ ಅದ್ದಲು ತಯಾರು ಮಾಡಿಕೊಂಡ ಖರ್ಜೂರ, ಒಣಗಿದ ದ್ರಾಕ್ಷಿ… ಎಲ್ಲ ಎಲ್ಲವನ್ನೂ ಮೂಟೆಕಟ್ಟಿ ಝೋಪಡಿಯನ್ನು ಖಾಲಿ ಮಾಡಲು ಸಿದ್ಧವಾಗಿ ನಿಂತಳು.

ಕೆರೆಯಂಗಳದ ಕೇರಿಯ ಛಾತಿ ಬೆಳೆದ ಹುಡುಗಿಯರು, ತಾವೂ ಸರದಿಯಂತೆ ಖಾಲಿಯಾಗುತ್ತೇವೆ ಎಂಬ ಭಾವನೆಯೊಂದಿಗೆ ನಯೀಮಾಳಿಗೆ ಮೌನದಲ್ಲಿಯೇ ಸಹಕರಿಸತೊಡಗಿದರು. ‘ಖತ್ನಾ ಮಾಡಿಸಿಕೊಂಡು ನಮ್ಮ ಕುತೂಹಲ ತಣಿಸಲೇ ಇಲ್ಲವಲ್ಲೋ’ ಎಂಬಂತೆ ಮೂಲೆಯಲ್ಲಿ ನಿಂತಿದ್ದ ನವಾಬನತ್ತ ಈ ಹುಡುಗಿಯರು ದೃಷ್ಟಿ ಹಾಯಿಸಿ ‘ಜಟ್‌ಪಟ್ ನಗರದೊಳ್ಗೆ, ಜಾಗವಿದ್ರೆ ನಮ್ಮ ಅಬ್ಬ ಅಮ್ಮಿಗೂ ತಿಳಿಸು. ಝೋಪಡಿ ಕಿತ್ತು ಬರ್‍ತೇವೆ’ ಎಂದು ಉಸುರಿದಂತಾಯಿತು.

ರಾಜಿಯೂ ಅಲ್ಲಿಗೆ ಬಂದು, ನವಾಬನ ಪಕ್ಕಕ್ಕೆ ನಿಂತವಳೇ ಹೆಗಲಿಗೆ ಕೈಹಾಕಿ “ಬೂವಕ್ಕಾ, ನವಾಬನ ಖತ್ನಾಕ್ಕೆ ನಮ್ಗೂ ಕರಿಯೇ ಮರೀಬ್ಯಾಡ” ಎಂದು ಕೋಳಿಯಂತೆ ಕೂಗು ಹಾಕಿ, ಅವನ ತಲೆಯನ್ನು ಪ್ರೀತಿಯಿಂದ ತಟ್ಟಿದಾಗ, ನವಾಬನಲ್ಲಿ ಮುಂದಿನ ಬೇಸಿಗೆಯು ಜನ್ನತ್ತಿನ ಸಂತೋಷವನ್ನು ಕನಸಿನ ಮೂಲಕ ತಂದೊಡ್ಡಿತು.

 

ಶಿ.ಜು.ಪಾಶ, ಶಿವಮೊಗ್ಗ

Advertisements

About sujankumarshetty

kadik helthi akka

Posted on ನವೆಂಬರ್ 5, 2010, in ಕತೆ, ಸಣ್ಣ ಕಥೆ and tagged . Bookmark the permalink. ನಿಮ್ಮ ಟಿಪ್ಪಣಿ ಬರೆಯಿರಿ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: