ಗಾಂಧಿಕಟ್ಟೆ

ಚಿತ್ರಗಳು: ವಿಷ್ಣು

ಸುತ್ತಲಿನ ಹತ್ತಾರು ಊರುಗಳಲ್ಲೆ ಗಾಂಧಿಕಟ್ಟೆಗೆ ವಿಶೇಷ ಹೆಗ್ಗಳಿಕೆ. ಊರಿನ ಹಿರಿತಲೆಮಾರಿನ ಜನರಿಗೆ ಬಿಟ್ಟರೆ ಗಾಂದಿಕಟ್ಟೆಗೆ ಮುಂಚೆ ಮಲ್ಲಾಪುರ ಎಂಬ ಹೆಸರಿತ್ತೆಂಬುದು ಬಹುತೇಕರಿಗೆ ಗೊತ್ತಿಲ್ಲ. ಗಾಂಧಿಕಟ್ಟೆ ಎಂಬ ಹೆಸರು ಬಂದಿದ್ದಕ್ಕೆ ಜನ ಎರಡು ರೀತಿಯಲ್ಲಿ ಹಿನ್ನೆಲೆ ಹೇಳುತ್ತಾರೆ. ಮಹಾತ್ಮಗಾಂಧಿಯವರು ಬೆಳಗಾವಿಯ ಕಾಂಗ್ರೆಸ್ ಅಧಿವೇಶನಕ್ಕೆ ಬಂದಾಗ ಜಿಲ್ಲಾ ಪಂಚಾಯಿತಿ ಹಾಲಿ ಅಧ್ಯಕ್ಷ ಶರಣೇಗೌಡನ ತಾತ ಶಿವನಗೌಡ ಮಲ್ಲಾಪುರದಿಂದ ಹೋಗಿ ಗಾಂಧಿಯನ್ನು ನೋಡಿಬಂದಿದ್ದನಂತೆ. ಗಾಂಧಿಯನ್ನು ತೀರಾ ಹತ್ತಿರದಿಂದ ನೋಡುವ ಅವಕಾಶ ಸಿಕ್ಕಿದ್ದಲ್ಲದೆ ಗಾಂಧಿ ಕಾಲುಗಳಿಗೆ ಹೊಸ ಚಪ್ಪಲಿಗಳನ್ನು ತಮ್ಮ ಕೈಗಳಿಂದ ತೊಡಿಸಿ, ಆ ಚಪ್ಪಲಿಗಳನ್ನು ತನಗೆ ಆಶೀರ್ವಾದ ರೂಪದಲ್ಲಿ ಕೊಡಬೇಕೆಂದು ಬೇಡಿ ಪಡೆದು ತಂದಿದ್ದನಂತೆ. ಗ್ರಾಮದಲ್ಲಿರೊ ಹಿರಿಯ ತಲೆಯೆನಿಸಿರುವ ನೂರರ ಆಸುಪಾಸಿನ ಶಿವಯ್ಯತಾತ ಕಿವಿ ಸರೀಗಿ ಕೇಳದಿದ್ದರೂ, ಕಣ್ಣು ಮಸುಕು-ಮಸುಕು ಕಂಡರೂ ಯಾರಾದ್ರೂ ಕಿವಿ ಸಮೀಪ ಬಾಯಿಯಿಟ್ಟು, ‘ಗಾಂಧಿ… ಗಾಂಧಿ ಕಟ್ಟೆ’ ಅಂತ ಇಡೀ ಊರಿಗೆ ಕೇಳುವಂತೆ ಕೂಗಿದರೆ ಸಾಕು. ಅಂದಿನ ಕಥೆಯನ್ನು ಬೊಚ್ಚುಬಾಯಿಯಿಂದ ನುಡುಗುವ ದನಿಯಲ್ಲಿ ಹೇಳುವುದು ರೂಢಿ.

‘ಶಿವನಗೌಡಗ ನನಗ ವಯಸ್ಸಿನ್ಯಾಗ ಹದಿನೈದಿಪ್ಪತ್ತು ವರ್ಷ ಫರಕು. ದೊಡ್ಡ ಪುಣ್ಯಾತ್ಮ. ಆತನ ಪುಣ್ಯಾನೇ ನಮ್ಮೂರನ್ನ, ನಮ್ಮನ್ನ ಕಾಪಾಡಾಕ ಹತ್ತೈತಿ. ಈಗೆಲ್ಲಾ ಬರೀ ಕರ್ಮಗೇಡಿಗಳೇ ಊರಾಗ ತುಂಬ್ಯಾರ. ನಮ್ ಗೌಡ ಸಾಕ್ಷಾತ್ ದೇವರು ಇದ್ದಂಗ ಇದ್ದ. ತಂದಿ-ತಾಯಿ ಕುಡ ಹೊಲಕ್ಕ ಹೋಗುತ್ತಿದ್ದ ಮಕ್ಕಳಿಗೆ ಸಮೇತ ನೆರಳಿಗೆ ಕುಂದ್ರಿಸಿ, ಉಣಿಸಿ, ಅರ್ಧದಷ್ಟು ಕೂಲಿಕೊಡ್ತಿದ್ದ. ಬಾಣಂತಿಯರು ಕೆಲಸಕ್ಕೆ ಹೋದ್ರ ಅವರಿಗೆ ಹೊಟ್ಯಾಗಿನ ಕೂಸಿಗೆ ಸೇರಿ ದುಪ್ಪಟ್ಟು ಕೂಲಿಕೊಡ್ತಿದ್ದ….’ ಶಿವಯ್ಯತಾತನ ಕಿವಿ ಸಮೀಪ, ‘ಗಾಂಧಿ…. ಗಾಂಧಿ ತಾತ’ ಅಂತ ಮತ್ತೊಮ್ಮೆ ಕೂಗಿದಾಗಲೇ ವಿಷಯಕ್ಕೆ ಬರುವುದು ವಾಡಿಕೆಯಾಗಿತ್ತು. ‘ಅವಸರ ಮಾಡಬ್ಯಾಡ್ರಿ… ಅಲ್ಲಿಗೇ ಬರಾಕ ಹತ್ತೀನಿ…’ ಅಂತ ಹೇಳಿ ಕೇಳುಗರು ಹಾಗೆ ಕುತೂಹಲದಿಂದ ಕೇಳುವಂತೆ ಮಾಡುತ್ತಿದ್ದ. ‘ಶಿವನಗೌಡ ಬೆಳಗಾವಿಯಿಂದ ಗಾಂಧಿ ಮಹಾತ್ಮ ಹಾಕಿಕೊಂಡ ಚಪ್ಪಲಿಗಳನ್ನು ತಂದು ಪೂಜೆಮಾಡ್ತಿದ್ರು. ಊರ ನಡುವಿದ್ದ ಬೇವಿನ ಮರದ ಸುತ್ತ ಕಟ್ಟೆ ಕಟ್ಟಿ ಗಿಡದ ಬುಡಕ್ಕೆ ಸಣ್ಣದು ಗುಣೇವು ಮಾಡಿ ಅದರಾಗ ಗಾಂಧಿ ಮಹಾತ್ಮನ ಚಪ್ಪಲಿಗಳನ್ನು ಇಟ್ಟಿದ್ರು. ಗೌಡ ಇರತನಕ ದಿನ ಮುಂಜೇನಿ ಸಂಜೀಕಿ ಹೋಗಿ ಚಪ್ಪಲಿಗಳಿಗೆ ಹಣಿಹಚ್ಚಿ ನಮಸ್ಕಾರ ಮಾಡಿ ಬರುತ್ತಿದ್ದ. ಒಂದು ದಿನ ಯಾರೊ ಆ ಚಪ್ಪಲಿಗಳನ್ನು ಕದ್ದು ಹೊಯ್ದುಬುಟ್ರು. ಉಟ್ಗಂಡ ಬಟ್ಟೆ ಸಮೇತ ಜ್ವಾಪಾನ ಇಟ್ಟುಕೊಳ್ಳೊ ಕಾಲ ಬಂದೈತಿ. ಮರೆಪಟ್ಲೆ ಇದ್ವಿ ಅಂದ್ರ ಬಟ್ಟೀನು ಬಿಚ್ಚಿಕೊಂಡು ಹೋಗೊ ಕಳ್ಳರು ಹೆಚ್ಚಾಗ್ಯಾರ. ಆವತ್ನಿಂದ ಶಿವನಗೌಡ ಸರೀಗಿ ಉಣಲಿಲ್ಲ. ನಿದ್ದೀನೂ ಮಾಡಲಿಲ್ಲ. ಕಟ್ಟೆಗೆ ಬಂದು ರಾತ್ರಿಯೆಲ್ಲಾ ಎರಡ್ಮೂರು ದಿನ ಹಂಗೆ ಜಾಗರಣೆ ಮಾಡಿದ. ಆಮ್ಯಾಲ ಮನೆಯವರೆ ಆತನ್ನ ಎತ್ತಿಕೊಂಡು ಮನಿಗೆ ಕರ್ಕಂಡು ಬಂದ್ರು. ನಾಲ್ಕಾರು ದಿವಸ ಹಾಸಿಗೆ ಹಿಡಿದ ಗೌಡ ಮೇಲೇಳಲಿಲ್ಲ…’ ಶಿವಯ್ಯತಾತ ಇಷ್ಟು ನೆನಪಿಸಿಕೊಳ್ಳುತ್ತಿದ್ದಂತೆ ಕಣ್ಣುಗಳು ನೆನೆದು ಮುಖದ ನೆರಿಗೆಗಳಲ್ಲಿ ಕಣ್ಣೀರು ಝರಿಯಾಗಿ ಹರಿಯುತ್ತಿತ್ತು.

‘ಕಳ್ಳರಿಗೆ ಮಹಾತ್ಮರ ಚಪ್ಪಲಿಗಳಾದ್ರೇನು… ಸಾಮಾನ್ಯರ ಚಪ್ಪಲಿಗಳಾದ್ರೇನು? ಬೆಲಿನ ಗೊತ್ತಿಲ್ದ ಮಂದಿ. 25-30 ವರ್ಷ ಆದ್ವು ಕಟ್ಟೆ ಮ್ಯಾಲಿನ ಗುಣೇವು ಖಾಲೀನ ಐತಿ. ಶಿವನಗೌಡ ಹಣಿಹಚ್ಚಿ ನಮಸ್ಕಾರ ಮಾಡುತ್ತಿದ್ದ ಜಾಗದಾಗ ಈಗ ಕಾಸಬಾಳದ ಉದ್ರಿ ಪುರಾಣ ಹೇಳೊಮಂದಿ, ಚೌಕಬಾರ, ಹುಲಿಮನಿ ಆಡೊ ಖಾಲಿ ಪುರಾಟಮಂದಿ ಗುಣೇದಾಗ ತಮ್ಮ ಕೆರವು ಬಿಟ್ಟು ಕುಂದ್ರುತಾರ. ಹಿಂದಿನದು ನೆನೆಸ್ಗೆಂಡ್ರ ಹೊಟ್ಯಾಗ ಕೆಂಡ ಕಲಿಸಿದಂಗ ಆಗುತ್ತ…’ ತಾತಗ ಕೆಮ್ಮು ಬಂದೆಂತೆನಿಸಿ ಸಮೀಪ ಇಟ್ಟಿದ್ದ ಹಿತ್ತಾಳಿ ಗಂಗಾಳದ ಬೂದಿಯಲ್ಲಿ ಕ್ಯಾಕರಿಸಿ ಲೊಟ್ಟೆ ಉಗುಳಿದ. ‘ಗಾಂಧಿಕಟ್ಟೆ ಬಗ್ಗೆ ಕೇಳಬ್ಯಾಡ್ರಿ… ನನಗ ಹೇಳಾಕ ಮನಸ್ಸಿಲ್ಲ. ತಗಂಡಾದ್ರೂ ಏನ್ ಮಾಡ್ತೀರಿ. ಮಹಾತ್ಮರ ಮಾತುಗಳನ್ನ ಪಾಲಿಸಂಗಿದ್ರ ಆ ಕಟ್ಟೆಗೆ ಬೆಲಿ ಬರುತ್ತ. ನಡ್ರಿ ನಡ್ರಿ ನನ್ನ ಮುಂದ ನಿಂದ್ರಬ್ಯಾಡ್ರಿ…’ ಅಂತ ಹೊಟ್ಟೆಯೊಳಗಿನ ಕರಳು ಕಿತ್ತಿಹೊರಬರುವಂತೆ ಮತ್ತೆ ಮತ್ತೆ ಜೋರಾಗಿ ಕೆಮ್ಮಲು ಶುರುಮಾಡಿದರೆ ಕೇಳಲು ಬಂದವರು ಜಾಗ ಖಾಲಿಮಾಡಬೇಕು ಎಂದೇ ಅರ್ಥ.

ಶಿವನಗೌಡನ ಕುಟುಂಬದ ಕುಡಿಯಾದ ಶರಣೇಗೌಡ ಹೇಳೋದೆ ಬೇರೆ. ‘ಶಿವಯ್ಯತಾತಗ ಬುದ್ಧಿ ಕೆಟ್ಟೈತಿ. ಅರವತ್ತಕ್ಕ ಅರಳು ಮರಳು ಅಂತಾರ. ನೂರು ವರ್ಷ ಆಗಾಕ ಬಂದಾವಲ್ಲ ಅದಕ್ಕ ಆತಗ ಹುಚ್ಚು ಹಿಡದೈತಿ. ಇದ್ದುದ್ದು ಇಲ್ಲದ್ದು ಮಾತಾಡುತ್ತ ಕೋಡಿ ಅಯ್ನೇರ. ನಮ್ಮಪ್ಪ ನೀಲನಗೌಡಗ ಸಮೇತ ನಮ್ಮ ತಾತ ಗಾಂಧಿಮಹಾತ್ಮನ ಚಪ್ಪಲಿಗಳನ್ನು ತಂದಿದ್ದು ಹೇಳಲಾರ್ದ ಈ ಅಯ್ನೇರಗ ಹೇಳಿ ಸತ್ತಿರಬೇಕು. ಹನ್ನೊಂದು ಮನಿ ಉಂಡು ಇನ್ನೊಂದು ಮನಿ ಅಂಬ ಜಂಗಮಗ ಏನು ತಿಳಿತೈತಿ ಅಂತ ಬಾಯಿಗೆ ಬಂದಂತೆ ಮಾತನಾಡುತ್ತಿದ್ದ. ತಮ್ಮ ದೊಡ್ಡಪ್ಪ ಬಸನಗೌಡ ಚಿನ್ನೂರು ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ್ದಾಗ, ಇಂದಿರಾಗಾಂಧಿಯವರು ಈ ಕಡೆ ಪ್ರಚಾರಕ್ಕೆಂದು ಬಂದಿದ್ದರು. ಕಾರಿನ ಮೂಲಕ ಪಕ್ಕದ ಪಟ್ಟಣದಲ್ಲಿರೊ ಹೆಲಿಪ್ಯಾಡಿಗೆ ತೆರಳುವ ಮಾರ್ಗದಲ್ಲಿರೊ ನಮ್ಮೂರಿಗೆ ಬಂದು ಒಂದ್ಹತ್ತು ನಿಮಿಷ ಕಟ್ಟೆ ಮೇಲೆ ಕುಳಿತಿದ್ರು. ಸಮೀಪದ ಪಂಪನಗೌಡರ ಮನೆಯಿಂದ ತಂಬಿಗೆ ನೀರು ತರಿಸಿಕೊಂಡು ಕುಡಿದು ಹೋಗಿದ್ರು. ಆವತ್ತಿನಿಂದ ಆ ಕಟ್ಟೆಗೆ ಗಾಂಧಿ ಕಟ್ಟೆ ಅಂತ ಕರೆಯಲಾಗುತ್ತಿದೆ. ಅದು ಇಂದಿರಮ್ಮನ ಕಟ್ಟೆ ಹೊರ್ತಾಗಿ ಗಾಂಧಿಮಹಾತ್ಮನ ಕಟ್ಟೆ ಅಲ್ಲ ಎಂದೇ ಶರಣೇಗೌಡ ವಾದಿಸುತ್ತಿದ್ದ. ಮೂರು ವರ್ಷಗಳ ಹಿಂದೆ ಊರಿನ ಕೆಲವರು ಶಿವಯ್ಯತಾತನಿಂದ ಪೂಜೆ ಮಾಡಿಸಿ, ಗಾಂಧಿತಾತನ ಹೆಸರು ಹೇಳಿ ಇಟ್ಟಿದ್ದ ಕಟ್ಟಿಗೆಯ ಹೊಸ ಆವುಗೆಗಳನ್ನು ಶರಣೇಗೌಡನ ಪಕ್ಷದ ಕೆಲವರು ಬೆಂಕಿಹಚ್ಚಿ ಸುಟ್ಟುಬಿಟ್ಟಿದ್ದರು. ಇದರ ಸಲುವಾಗಿ ಆವತ್ತಿನಿಂದ ಊರಾಗ ಎರಡು ಬಣ ಆದ್ವು. ಶರಣೇಗೌಡ ಮತ್ತು ಶಿವಯ್ಯತಾತನ ಮೊಮ್ಮಗ ಮಲ್ಲಿನಾಥ ಈ ಕಟ್ಟೆಯ ಸಲುವಾಗಿ ವರ್ಷದಾಗ ನಾಲ್ಕಾರು ಸಲ ಜಗಳಾಡುವುದು ಸಾಮಾನ್ಯವಾಗಿತ್ತು. ಹೋದ ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಶರಣೇಗೌಡನ ವಿರುದ್ಧ ರೈತಪಕ್ಷದಿಂದ ಸ್ಪರ್ಧಿಸಿದ್ದ ಮಲ್ಲಿನಾಥ ಭಾರಿ ಅಂತರದಿಂದ ಸೋತಿದ್ದ. ಸೋತ ದಿನದಿಂದ ಶರಣೇಗೌಡನ ತಂಟೆಗೆ ಹೋಗುವುದನ್ನೂ ಸ್ವಲ್ಪ ಕಡಿಮೆಮಾಡಿದ್ದ.

ರಾಜ್ಯದಲ್ಲಿ ತಮ್ಮ ಪಕ್ಷ ಅಧಿಕಾರದಲ್ಲಿರದಿದ್ದರೂ ಕೇಂದ್ರ ಸರ್ಕಾರದ ಅನುದಾನ ಪಡೆದಾದರೂ ಗಾಂಧಿಕಟ್ಟೆ ಉದ್ಧಾರಮಾಡಬೇಕು ಅಂತ ಶರಣೇಗೌಡ ಪಣತೊಟ್ಟಿದ್ದ. ಕಟ್ಟೆ ಮೇಲೆ ಇಂದಿರಾಗಾಂಧಿ ಮೂರ್ತಿಯನ್ನು ನಿಲ್ಲಿಸಬೇಕು. ಸುತ್ತ ಪಾರ್ಕ್ ಮಾಡಬೇಕು. ನಾಲ್ಕು ದಿಕ್ಕುಗಳಿಗೂ ದೊಡ್ಡ ದೊಡ್ಡ ನಿಯಾನ್ ಲೈಟ್ ಗಳನ್ನು ಹಾಕಿಸಬೇಕೆಂದು ತಮ್ಮ ಸಂಬಂಧಿಕನಾದ ಕೇಂದ್ರ ಸಚಿವ ಶಿವರಾಜಪ್ಪನ ಪ್ರಭಾವದಿಂದ 50 ಲಕ್ಷ ರೂ. ಬಿಡುಗಡೆ ಮಾಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದ. ಅದೇ ವರ್ಷ ಶರಣೇಗೌಡ ಚಿನ್ನೂರಲ್ಲಿ ಒಂದ್ ಪೆಟ್ರೊಲ್ ಬಂಕ್ ಖರೀದಿಸಿದ್ದ. ಊರಾಗ ಮಲ್ಲಿನಾಥನ ಬಳಗದಿಂದ ವಾರಗಟ್ಟಲೆ ಸ್ಟ್ರೈಕ್, ಧರಣಿ ನಡೆದರೂ ಅಂಜಿಕೊಳ್ಳದೇ ಊರ ಹೊರಗಿದ್ದ ಗುಡ್ಡದ ಸಮೀಪ, ಸರ್ಕಾರಿ ಪದವಿಪೂರ್ಷ ಕಾಲೇಜಿನ ಹಿಂಭಾಗದ ತಮ್ಮ ಜಮೀನಿನಲ್ಲಿ ತಮ್ಮ ತಾತನ ಹೆಸರಿನಲ್ಲಿ ಶಿವು ಬಾರ್ ಅಂಡ್ ರೆಸ್ಟೊರೆಂಟ್ ಚಾಲೂಮಾಡಿದ್ದ. ‘ಇದೆಲ್ಲಾ ಒಳ್ಳೆಯದಲ್ಲ. ಗಾಂಧಿತಾತನ ಆದರ್ಶಗಳ ಪ್ರಭಾವಕ್ಕೆ ಒಳಗಾಗಿ ಅವರು ಮೆಟ್ಟಿದ್ದ ಚಪ್ಪಲಿಗಳನ್ನು ಭಯ-ಭಕ್ತಿಯಿಂದ ಪೂಜಿಸುತ್ತಿದ್ದ ಶಿವನಗೌಡನ ರಕ್ತನೇ ನಿನ್ನ ಮೈಯಾಗ ಹರಿಯೋದು. ನಿಮ್ಮ ತಾತ ಇರೋತನಕ ಸುತ್ತ ನಾಲ್ಕು ಊರುಗಳಲ್ಲಿ ಮದ್ಯಂದಗಡಿಗಳು ತೆರೆಯದಂತೆ ನೋಡಿಕೊಂಡಿದ್ದ. ಕುಡಿಯುವ ಚಟ ಇದ್ದೋರು ಇದುವರೆಗೆ ಕದ್ದುಮುಚ್ಚಿ ಮಸ್ಕಿಗೆ ಹೋಗಿ ಕುಡುದುಬಂದು ಗಪ್ ಚುಪ್ ಮನ್ಯಾಗ ಒದರಲಾರ್ದಂಗ ಮಲಗುತಿದ್ರು…. ಇದು ಒಳ್ಳೇಯದಲ್ಲ. ನಿಮ್ಮಪ್ಪ ನೀಲನಗೌಡನೂ ಶಿವನಗೌಡನ ಮಾತು ಕೇಳಲಾರದೆ ಮಾಡಬಾರದ ಚಟ ಮಾಡಿ, ದೊಡ್ಡ ರೋಗ ಹಚ್ಚಿಕೊಂಡು ಇನ್ನಾ ನೀನು ಮೂರು ವರ್ಷದವ ಇದ್ದಾಗನ ಸತ್ತುಹೋಗಿಬುಟ್ಟ. ನಾವು ಊರಿನ ಹೀರೇರು ಹೇಳೋದಕ್ಕೆ ಬೆಲೆ ಕೊಡು…’ ಅಂತ ಶಿವಯ್ಯತಾತ ತನ್ನ ವಯಸ್ಸಿನ ಹಮ್ಮುಬಿಮ್ಮು ಮೀರಿ ದಯನೀಯವಾಗಿ ಬೇಡಿಕೊಂಡಿದ್ದ. ‘ಹೋಗೋ ಅಯ್ನೇರ. ನಿನಗೇನು ಬದುಕೋದು ಗೊತ್ತೈತಿ. ಮೊದ್ಲು ನಿನ್ನ ಮಕ್ಕಳು, ಮೊಮ್ಮಕ್ಕಳಿಗೆ ದುಡಿಯೋದು ಕಲಿಸಿಕೊಡು. ಅವ್ರು ಚೆಲೊತ್ನ್ಯಾಗಿ ಬದುಕೋದು ಕಲೀಲಿ. ಮನಿಗೆದ್ದು ಮಾರು ಗೆಲ್ಲಬೇಕು….’ ಅಂತ ಶಿವಯ್ಯತಾತನಿಗೆ ಮರಳಿ ಬುದ್ಧಿ ಹೇಳಿದ್ದ. ಇದನ್ನು ಸಹಿಸದ ಮಲ್ಲಿನಾಥ ‘ಸಿಗಬೇಕು ಈ ಗೌಡ’ ಅಂತ ಕಾಯುತ್ತಿದ್ದಾಗಲೇ ಜಿಲ್ಲಾ ಪಂಚಾಯತಿ ಚುನಾವಣೆ ಬಂದಿತ್ತು. ಹಣ ಬಲ ಇಲ್ಲದಿದ್ದರೂ ಶರಣೇಗೌಡನ ವಿರುದ್ಧ ಮಲ್ಲಿನಾಥ ಸ್ಪರ್ಧಿಸಿದ್ದ.

ಗಾಂಧಿಕಟ್ಟೆ ತನಗೇ ಸೇರಿದ್ದು ಎಂಬಂತೆ ಶರಣೇಗೌಡ ಕಟ್ಟೆಯನ್ನು ಚುನಾವಣೆ ಸಂದರ್ಭದಲ್ಲಿ ತನ್ನ ಸುಪರ್ದಿಗೆ ತೆಗೆದುಕೊಂಡಿದ್ದ. ಮತದಾನಕ್ಕೆ ಇನ್ನೂ ಹದಿನೈದು ದಿನ ಇರುವಾಗಲೇ ಇಂದಿರಾಗಾಂಧಿ ಸೇರಿದಂತೆ ರಾಜ್ಯ ಮತ್ತು ರಾಷ್ಟ್ರ ಮಟ್ಟದ ತಮ್ಮ ಪಕ್ಷದ ಹಿರಿ-ಕಿರಿ ಮುಖಂಡರು ಹಾಗೆ ಇನ್ನೂ ಹುಟ್ಟಲಿರುವ ಕೂಸು ಕುನ್ನಿಗಳ ಫೋಟೊಗಳನ್ನು ಡಿಜಿಟಲ್ ಬ್ಯಾನರ್ ನಲ್ಲಿ ಬರೆಯಿಸಿ ಕಟ್ಟೆಮೇಲೆ ಗುಣೇವು ಕಾಣಲಾರದಂಗ ಕಟ್ಟಲಾಗಿತ್ತು. ಊರಿಗೆ ಕೇಳುವಂತೆ ದೊಡ್ಡ ಮೈಕ್ ಗಳನ್ನು ಹಚ್ಚಿ ಪಕ್ಷ ಮತ್ತು ತನ್ನ ಪರ ಭರ್ಜರಿ ಪ್ರಚಾರ ನಡೆಸಿದ್ದ್ದ. ಕಟ್ಟೆಯ ಬಲಭಾಗದಲ್ಲಿ ಪ್ಲ್ಯಾಸ್ಟಿಕ್ ಕವರ್ ನಿಂದ ಶೆಡ್ ಮಾಡಲಾಗಿತ್ತು. ಟೆಂಟಿನಲ್ಲಿ ದಿನಕ್ಕೆ ಮೂರ್ನಾಲ್ಕು ಒಪ್ಪತ್ತು ತಯಾರಿಸುತ್ತಿದ್ದ ಒಗ್ಗಣಿ, ಉಪ್ಪಿಟ್ಟು, ಮಿರ್ಜಿಗಳ ಘಮಲು ಇಡೀ ಊರಿಗೆ ಹರಡುತ್ತಿತ್ತು. ಮತದಾನದ ದಿನವಂತೂ ಕಟ್ಟೆ ಎಂಬುದು ಸುಡುಗಾಡಾಗಿತ್ತು. ಅದರ ಮೇಲೆ ಕುಳಿತು ಕುಡಿದವರು ಯಾರೊ? ತಿಂದವರು ಯಾರೊ? ಎಲ್ಲಿಬೇಕಲ್ಲಿ ವಾಂತಿಮಾಡಿಕೊಂಡು ಕಟ್ಟಿ ಸಮೀಪ ಮೂಗು, ಬಾಯಿ, ಕಣ್ಣು ಮುಚ್ಚಿಕೊಂಡೇ ಹೋಗುವಂತಾಗಿತ್ತು. ‘ಪ್ರಜಾಪ್ರಭುತ್ವ ಎಂಬ ಅರ್ಥವೇ ಕೆಟ್ಟುಹೋಗೈತಿ’ ಊರಿನ ಕೆಲವು ಬುದ್ಧಿವಂತ ಜನ ಮಾತಿಗೊಮ್ಮೆ ಹೇಳುತ್ತಿದ್ದರು. ‘ರಾಜಕಾರಣಿಗಳು ಕೆಟ್ಟಿದ್ರ ಅವರಿಗೆ ಹೆಂಗಾದ್ರೂ ಬುದ್ಧಿ ಕಲಿಸಬೋದಾಗಿತ್ತು. ಅವರ ಎಂಜಲಿನ ಆಸೆಗೆ ಚುನಾವಣೆ ಸಂದರ್ಭದಲ್ಲಿ ಅವರು ಕೊಡೊ ಹಣಕ್ಕ, ಹಂಚೊ ಹೆಂಡ, ಬಟ್ಟೆ, ಬರೆಗೆ ಜನರೂ ಮಳ್ಳು ಆಗ್ಯಾರ. ಈಗ ಏನಿದ್ರೂ ರೊಕ್ಕ ಇದ್ದವರದೇ ಕಾಲ. ರೊಕ್ಕ ಕೊಟ್ಟು ಓಟು ಖರೀದಿಸಿ, ಮತ್ತೆ ಖರ್ಚುಮಾಡಿದ ರೊಕ್ಕಕ್ಕ ಸಾವಿರಾರು ಪಟ್ಟು ಹೊಡಕೊಳ್ಳೊ ದಂಧೆ ಆಗೈತಿ ರಾಜಕೀಯ ಅಂಬದು…’ ಶಿವಯ್ಯ ತಾತ ತನ್ನ ಮೊಮ್ಮಗ ಮಲ್ಲಿನಾಥನಿಗೆ ಓಟು ಹಾಕಿರಿ ಅಂತ ಪರೋಕ್ಷವಾಗಿ ಹೀಗೆ ಪ್ರಚಾರ ನಡೆಸಿದ್ದ. ಶಿವಯ್ಯತಾತ ಅಂದ್ರ ಸಾಮಾನ್ಯ ಅಲ್ಲ. ಊರಿಗೆ ಇನ್ನೂ ಸರ್ಕಾರಿ ಸಾಲಿ ಅಂಬದು ಬರೋ ಮುಂಚೆ ಊರಿನ ನೂರಾರು ಮಕ್ಕಳಿಗೆ ಈಶ್ವರ ಗುಡಿಯಲ್ಲಿ ಅಕ್ಷರ ಕಲಿಸಿದ ವಿದ್ಯಾಗುರು. ಆತನಿಂದ ವಿದ್ಯೆ ಕಲಿತ ಮಂದಿಯೂ ಆತನ ಮಾತುಗಳನ್ನು ಕಿವಿಗೆ ಹಾಕಿಕೊಳ್ಳಲಿಲ್ಲ. ಶಿವಯ್ಯತಾತ ತನ್ನ ಮೊಮ್ಮಗ ಮಲ್ಲಿನಾಥನಿಗೆ ಚುನಾವಣೆಗೆ ನಿಲ್ಲುವ ಮೊದಲು ‘ಬ್ಯಾಡ ಮಲ್ಲಿನಾಥ, ನಮ್ಮಂತಾ ಕಾಯಕದ ಮಂದಿಗೆ ಈ ರಾಜಕೀಯ ಸಹವಾಸನ ಬ್ಯಾಡ. ನಮಗ ಬೇಕಾತಿ ಒಬ್ಬರಿಗೆ ಓಟು ಹಾಕಿ ಮನ್ಯಾಗ ಕುಂದ್ರೋದು ಬೇಸು. ನಾವ ಹೋಗಿ ಹೇಸಿಗ್ಯಾಗ ಬಿದ್ದು ಒಳ್ಯಾಡದು ಬ್ಯಾಡ…’ ಅಂತ ಗಿಣಿಗೆ ಹೇಳಿದಂತೆ ಹೇಳಿದ್ದರೂ ಮಲ್ಲಿನಾಥ ಜಿದ್ದು ಸಾಧಿಸಲೆಂಬಂತೆ, ಒಳ್ಳೆಯದಕ್ಕೆ, ಒಳ್ಳೆಯ ವ್ಯಕ್ತಿಗೆ ಜನರು ಬೆಲೆ ಕೊಡುತ್ತಾರೆ ಎಂದೇ ಭಾವಿಸಿ ಚುನಾವಣೆಗೆ ನಿಂತಿದ್ದ. ಆದರೆ ಆದದ್ದೆ ಬೇರೆ.

ನಾಳೆ ಅಂತ ಮತದಾನ ಇದ್ದಾಗ, ಶರಣೇಗೌಡ ಊರಾಗಿನ ಕೆಲವು ಪುಂಡರನ್ನು ಕಳಿಸಿ ಮಲ್ಲಿನಾಥನನ್ನು ತಮ್ಮ ಜೀಪಿನ್ಯಾಗ ಒತ್ತಾಯದಿಂದ ಕೂಡಿಸಿಕೊಂಡು ದೂರದ ಧರ್ಮಸ್ಥಳಕ್ಕೆ ಕರೆದುಕೊಂಡುಹೋಗಿದ್ದರು. ಮತದಾನದ ಸಮಯ ಮುಗಿದ ಮೇಲೆಯೇ ಮಲ್ಲಿನಾಥನನ್ನು ಊರಿಗೆ ಮರುದಿನ ಕರೆದುಕೊಂಡು ಬರಲಾಗಿತ್ತು. ಶರಣೇಗೌಡ ತಮ್ಮ ಆಳುಗಳನ್ನು ತನ್ನ ಕಡೆಗೆ ಸೆಳೆದುಕೊಂಡು ಮಲ್ಲಿನಾಥನೇ ಅವರನ್ನು ಕರೆದುಕೊಂಡು ತನ್ನ ಮೇಲೆ ಹಲ್ಲೆಮಾಡಿಸಲು ಸಂಚು ನಡೆಸಲೆಂದೆ ಊರುಬಿಟ್ಟು ಹೋಗಿದ್ದ ಎಂದು ಚಿನ್ನೂರು ಗ್ರಾಮೀಣ ಪೊಲೀಸ್ ಠಾಣೆಗೆ ಕಂಪ್ಲೇಂಟ್ ಕೊಟ್ಟಿದ್ದ. ಶಿವಯ್ಯತಾತ ತನಗೆ ಬೇಕಾದ ಒಂದಿಬ್ಬರನ್ನು ಠಾಣೆಗೆ ಕರೆದುಕೊಂಡು ಕ್ಯಾಂಡೇಟ್ ಆಗಿದ್ದ ಮಲ್ಲಿನಾಥನನ್ನು ಶರಣೇಗೌಡನ ಕಡೆಯವರು ಅಪಹರಿಸಿದ್ದಾರೆಂದು ಕೊಟ್ಟ ಕಂಪ್ಲೇಂಟ್ ಅನ್ನು ಪಿಎಸ್ಐ ಕಾಂತನಗೌಡ ತೆಗೆದುಕೊಳ್ಳಲಿಲ್ಲ. ಸರಿಯಾದ ಕಾರಣ ತೋರಿಸಿಲ್ಲ. ಸುಳ್ಳು ಕಂಪ್ಲೇಂಟ್ ಕೊಡಲು ಬಂದಿದ್ದೀರಿ. ನೀವೇ ಬಚ್ಚಿಟ್ಟು ನಾಟಕಮಾಡಲು ಬಂದಿದ್ದೀರಿ ಎಂದು ಹೋದವರನ್ನೇ ಗದರಿಸಿ, ಠಾಣೆಯಲ್ಲೆ ಮರುದಿನದವರೆಗೆ ಕೂಡಿಹಾಕಿ ಮರುದಿನ ಕಂಪ್ಲೇಂಟ್ ಅನ್ನೂ ತೆಗೆದುಕೊಳ್ಳದೇ, ಕಾಯುವಂತೆ ಹೇಳಿ ಮಲ್ಲಿನಾಥನನ್ನು ಊರಿಗೆ ಕರೆದುಕೊಂಡು ಬಂದ ಸುದ್ದಿ ತಿಳಿದ ಮೇಲೆಯೇ ಅವರನ್ನೂ ಊರಿಗೆ ಎಚ್ಚರಿಸಿ ಕಳಿಸಿದ್ದ. ಶಿವಯ್ಯ ತಾತ ಊರಿಗೆ ಬರುವವರೆಗೆ ಒಂದೇ ಸವನೇ ಮಂದಿಯನ್ನು ಮತ್ತು ತನ್ನನ್ನು ಬೈಯ್ಯುತ್ತಲೆ ಬಂದಿದ್ದ. ‘ಋಣಗೇಡಿಗಳು, ಶರಣೇಗೌಡನ ಅಪ್ಪಗ ಅಕ್ಷರ ಕಲಿಸಿದಾತನೇ ನಾನು. ನಮ್ಮ ಶಿವನೌಡನ ಮಗ ಅಂತೇಳಿ ಅದೆಷ್ಟು ಕಾಳಜಿಮಾಡಿ ಓದಿಸಿದ್ದು, ಬರೆಯಿಸಿದ್ದು. ಅಪ್ಪನ ಗುರು ಅಂಬದು ಮರೆತು, ಮುದುಕರಿಗೆ ಇಂಥಾ ಕಷ್ಟ ಕೊಡಾಕ ಮನಸ್ಸಾದ್ರೂ ಹೆಂಗ ಬರುತ್ತೊ ಏನೋ ಮೂರೂ ಬಿಟ್ಟ ಈ ಮಂದಿಗೆ… ಊರ ಜನರ ವಿಶ್ವಾಸ ಗಳಿಸಿ ಶರಣೇಗೌಡಗ ಸರಿಯಾಗಿ ಬುದ್ಧಿ ಕಲಿಸ್ಬೇಕು…’ ಅಂತ ಯೋಚನೆ ಮಾಡುತ್ತಾ ಊರಿಗೆ ಮರಳಿದ್ದ.

ಊರಾಗಿನ ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಬಂದ ಕಾರಣ, ಶರಣೇಗೌಡ ತನ್ನ ಕೈ, ಬಾಯಿ ಮಾತು ಕೇಳುತ್ತಿದ್ದ ಮಾದರ ಹನುಮನ ಹೆಂಡತಿ ಹನುಮಂತಿಯನ್ನೇ ಅಧ್ಯಕ್ಷ ಸ್ಥಾನಕ್ಕೆ ಕೂಡಿಸಿದ್ದ. ತನ್ನ ಹೆಂಡತಿಯ ತಮ್ಮ ತಿಮ್ಮನಗೌಡನನ್ನೇ ಉಪಾಧ್ಯಕ್ಷ ಸ್ಥಾನಕ್ಕೆ ಕೂಡಿಸಿ ಇಡೀ ಗ್ರಾಮ ಪಂಚಾಯಿತಿ ಆಡಳಿತವನ್ನೂ ತನ್ನ ಕಂಟ್ರೋಲ್ ನಲ್ಲಿ ಇಟ್ಟುಕೊಂಡಿದ್ದ. ಗ್ರಾಮ ಪಂಚಾಯಿತಿ ಸೆಕ್ರೆಟರಿ, ಉಳಿದ ನೌಕರರು ವಾರಗಟ್ಟಲೆ, ತಿಂಗಳುಗಟ್ಟಲೆ ಪಂಚಾಯಿತಿಗೆ ಹೋಗದಿದ್ದರೂ ನಡೆಯುತ್ತಿತ್ತು. ಆದರೆ ಶರಣೇಗೌಡನ ಮನೆಗೆ ಪ್ರತಿದಿನ ಸೂಟಿಯಿದ್ದಾಗಲೂ ಬಂದು ಭೇಟಿಕೊಡಬೇಕಾಗಿತ್ತು. ಆತ ಹೇಳಿದ ಮಾತುಗಳನ್ನು ಕೇಳುವುದು, ಆತ ಕೊಟ್ಟದ್ದನ್ನು ತಿನ್ನೋದು, ಕೇಳಿದಲ್ಲಿ ಸಹಿಮಾಡೋದು, ಚೆಕ್ ಬರೆದುಕೊಡೋದೇ ತಮ್ಮ ಕೆಲಸವೆಂದು ಭಾವಿಸಿದ್ದರು. ಶರಣೇಗೌಡ ಗ್ರಾಮ ಪಂಚಾಯಿತಿಗೆ ಬಿಡುಗಡೆಯಾಗಿದ್ದ ಅನುದಾನದಲ್ಲೆ ಬಸ್ ಸ್ಟ್ಯಾಂಡಿನಿಂದ ತಮ್ಮ ಮನೆಗೆ ಹೋಗುವ ರಸ್ತೆಯನ್ನು ಸಿಮೆಂಟ್ ರೋಡ್ ಆಗಿ ಪರಿವರ್ತಿಸಿದ್ದ, ತನ್ನ ಮನೆಯ ಸುತ್ತ ಸುಸಜ್ಜಿತ ಚರಂಡಿ ವ್ಯವಸ್ಥೆಯನ್ನೂ ಕಲ್ಪಿಸಿಕೊಂಡಿದ್ದ. ನೂರಾರು ಮನೆಗಳಿಗೆ ಬಿಡುಗಡೆಯಾಗಿದ್ದ ಶೌಚಾಲಯ ನಿರ್ಮಾಣದ ಅನುದಾನದಲ್ಲಿ ತನ್ನ ಭವ್ಯ ಬಂಗಲೆಯಲ್ಲಿ ಫಾರಿನ್ ಸಿಸ್ಟಮ್ ಮತ್ತು ಇಂಡಿಯನ್ ಸಿಸ್ಟಮ್ ಪಾಯಿಖಾನೆ ಕಟ್ಟಿಸಿದ್ದ. ಪಾಯಿಖಾನೆ ಹೊರಗೆ ಒಳಗೂ ನುಣುಪಾದ ಕಲ್ಲುಗಳನ್ನೇ ಜೋಡಿಸಿದ್ದ. ಊರ ಮಂದಿ ಮಾತ್ರ ಹೆದ್ದಾರಿಯ ಇಕ್ಕೆಲಗಳಲ್ಲಿ, ಜಾಲಿಪೊದೆಗಳ ಮರೆಗೆ ತಮ್ಮ ತುರ್ತು ಕೆಲಸಗಳನ್ನು ಪೂರೈಸಿಕೊಳ್ಳಬೇಕಾಗಿತ್ತು. ಒಂದಿಬ್ಬರು ಹುಡುಗರು ಎರಡು ವರ್ಷಗಳ ಹಿಂದೆ ಹೆದ್ದಾರಿ ಪಕ್ಕದಲ್ಲಿ ರಾತ್ರಿ ಎರಡಕ್ಕೆಂದು ಕುಳಿತಾಗ ಲಾರಿಯೊಂದು ಮೇಲೆ ಹಾಯ್ದು ಕೇರಿಯ ಹುಡಗರಿಬ್ಬರು ನೆಲಕ್ಕೆ ಅಪ್ಪಚ್ಚಿಯಾಗಿದ್ದರು. ಊರಿನ ಹೆಣ್ಣುಮಕ್ಕಳಿಗೆ ಸಂಡಾಸಿಗೆ ಹೋಗುವುದೆಂದರೆ ಕುತ್ತಿಗೆಗೇ ಬರುತ್ತಿತ್ತು. ಊರಿನ ಹೊರಗಿದ್ದ ಹೊಲದ ರಸ್ತೆಯ ಪಕ್ಕದಲ್ಲಿದ್ದ ನಾಲು, ಅಲ್ಲಿ ಬೆಳೆದ ಗಿಡ-ಗಂಟೆಗಳೆ ಅವರನ್ನು ಮರೆಮಾಡಬೇಕು. ಹೊಲಕ್ಕೆಂದು ಹೋಗುವ ಮಂದಿ ಇದೇ ದಾರಿಗೆ ಬಂದರೆ, ಅದೆಷ್ಟೇ ತುರ್ತಿದ್ದರೂ ಹಾಗೆ ಸಹಿಸಿಕೊಂಡು ದಡಗ್ಗನೆ ಎದ್ದುನಿಲ್ಲಬೇಕು. ಹಲವು ಬಾರಿ ಹೆಣ್ಣುಮಕ್ಕಳು ಎದ್ದೇಳುವಾಗ ಜೋಲಿ ಸಾಲದೆ ಹಿಂದಕ್ಕೆ ಬಿದ್ದವರೆಷ್ಟು, ಮೈ ಕೈಗೆ, ಬಟ್ಟೆಗೆ ಸಂಡಾಸು ಮೆತ್ತಿಕೊಂಡು ಊರಿನ ಪರಿಸ್ಥಿತಿಗೆ ಹಿಡಿಶಾಪ ಹಾಕಿದ್ದುಂಟು. ಇತ್ತೀಚೆಗೆ ಜನ ಸುಧಾರಿಸಿದ್ದರಿಂದ ತಮ್ಮ ಮಗಳನ್ನು ಗಾಂಧಿಕಟ್ಟೆಗೆ ಕೊಡಲು ಹಿಂದೆಮುಂದೆ ನೋಡುತ್ತಾರೆ.

* * * * *

ಹೆಸರಷ್ಟೆ ಗಾಂಧಿಕಟ್ಟೆ, ಗಾಂಧಿಮಹಾತ್ಮನ ಆದರ್ಶಗಳಿಗೆ ಎಳ್ಳಷ್ಟೂ ಬೆಲೆ ಇರಲಿಲ್ಲ. ನಡುವಿನ ಶ್ರಾವಣ ಸೋಮವಾರ ಊರಿನ ಅದರಲ್ಲೂ ಶರಣೇಗೌಡರ ಮನೆ ದೇವರಾದ ಕೆರಿಬಸವಣ್ಣ ದೇವರ ಜಾತ್ರಿ. ಒಂದು ಸಲ ಜಾತ್ರೆ ಸಂದರ್ಭದಲ್ಲಿ ಚಿನ್ನೂರು, ಮಸ್ಕಿಯಲ್ಲಿ ಡಿಎಸ್ಎಸ್ ಹೋರಾಟಗಳಲ್ಲಿ ಪಾಲ್ಗೊಂಡು, ಚೂರು ಪಾರು ತಮ್ಮ ಹಕ್ಕು, ಕರ್ತವ್ಯಗಳ ಬಗ್ಗೆ ತಿಳಿದುಕೊಂಡಿದ್ದ ಊರಿನ ಕೆಲ ದಲಿತ ಯುವಕರು ಮುದಕಪ್ಪನ ನೇತೃತ್ವದಲ್ಲಿ ಕೆರಿಬಸವಣ್ಣನ ಗುಡಿ ಪ್ರವೇಶಲು ಮುಂದಾದರು. ಶರಣೇಗೌಡ ಆ ಸುದ್ದಿ ಕೇಳಿ ಕೆಂಡಾಮಂಡಲವಾಗಿದ್ದ. ‘ಲೇ… ಕುಂಡಿ ತುಂಬೈತನಲೇ. ಇದುವರೆಗೆ ನಿಮ್ಮ ಅಪ್ಪ, ಅವ್ವ ಹೆಂಗ ತಗ್ಗಿ ಬಗ್ಗಿ ನಡೆದುಕೊಂಡು ಬಂದಾರೊ ಹಂಗೆ ನೀವು ನಮಗೆ ಅಂಜಿಕೊಂಡು ಬದುಕ್ಬಕು. ಊರಿನ ನೀತಿ, ನಿಯಮಗಳಿಗೆ ಬೆಲೆ ಕೊಡೋದು ಕಷ್ಟ ಅನ್ನಿಸ್ತು ಅಂದ್ರ ಊರುಬಿಟ್ಟು ಎಲ್ಲಿಗನ ಹಾಳಾಗಿ ಹೋಗ್ರಿ…’ ಅಂತ ಗದರಿದ್ದ. ಸ್ವಲ್ಪ ಕುಡಿದಿದ್ದ ಮುದುಕಪ್ಪ ಕೈಯಲ್ಲಿ ಕಾಲ್ಮರಿ ಹಿಡಕಂಡು, ‘ಲೇ ಗೌಡ. ಎಂಥಾ ಮಹಾತ್ಮನ ಹೊಟ್ಟೆಯಲ್ಲಿ ಎಂಥಾತ ಹುಟ್ಟೀದಿ. ದೊಡ್ಡ ಪುಣ್ಯಾತ್ಮ ನೀನು. ನಿನ್ನಂಥವನ್ನ ಝಡ್ಪಿ ಪ್ರೆಸಿಡೆಂಟ್ ಮಾಡಿಕೂಡಿಸ್ಯರಲ್ಲಾ ಅವ್ರಿಗೆ ಮೊದ್ಲು ಕಾಲ್ಮರಿ ತಗಂಡು ಬಡಿಬೇಕು. ಮಾತಿಗೊಮ್ಮೆ ಇಂದಿರಮ್ಮ ಅಂತ ಹೊಯ್ಕೊಳ್ತೀರಿ. ನಮ್ದು ಬಡವರು, ದೀನ್ರು, ದಲಿತರ ಪಕ್ಷ. ದೇಶಕ್ಕೆ ಸ್ವಾತಂತ್ರ್ಯ ಗಳಿಸಿಕೊಟ್ಟ ಪಕ್ಷ ಅಂತ ಬಾಯಿ ಬಾಯಿ ಬಡಕೊಂತೀರಿ. ಕಾಲೇಜಿನ ಗ್ರೌಂಡಿನ್ಯಾಗ ಮುಂಜೇನಿ ಬಡಿಗೆ ತಿರುಗಿಸುವ, ಮೊಣಕಾಲು ಕಾಣಂಗ ಚೆಡ್ಡಿ ತೊಟಗಂಡು ಉಟಾಬೈಸ್ ತೆಗೆದು, ಬೆದಿಬಂದ ನಾಯಿ ಒದರಿದಂಗ ಒದರ್ತಾರಲ್ಲ, ಆ ಮಂದಿಗೂ, ಅವರ ಪಕ್ಷಕ್ಕೂ ನಿಮಗೂ, ನಿಮ್ಮ ಪಕ್ಷಕ್ಕೂ ವ್ಯತ್ಯಾಸನ ಇಲ್ಲ. ಯಾವ ಪಕ್ಷಾನೂ ದಲಿತರ ಪರ ಇಲ್ಲ. ಈ ಊರಾಗಿನ ದಲಿತರಿಗ್ಯಾಕ ಇನ್ನೂ ಸ್ವಾತಂತ್ರ್ಯ ಕೊಟ್ಟಿಲ್ಲ. ದೇಶಕ್ಕನ ಸ್ವಾತಂತ್ರ್ಯ ಬಂದು ಅರವತ್ತು ವರ್ಷ ಆದ್ರೂ ನಮಗ ಮಾತ್ರ ಸ್ವಾತಂತ್ರ್ಯ ಬಂದಿಲ್ಲ. ಇದಕ್ಕೆಲ್ಲಾ ನಿಮ್ಮಂತಾ ಬದ್ಮಾಷರೇ ಕಾರಣ…’ ಮುದುಕಪ್ಪ ಹಲ್ಲುಕಡಿಯುತ್ತಾ, ಅಷ್ಟು ದೂರ ನಿಂತಿದ್ದ ಶರಣೇಗೌಡನ ಸಮೀಪ ಓಡಿಹೋಗಿ ಮುಖಕ್ಕ ಚಪ್ಲಿ ಎಸೆದು ಬಂದಿದ್ದ. ‘ನಿಮ್ಮ ತಾತನಿಗೆ ಗಾಂಧಿ ಮಹಾತ್ಮ ಮೆಟ್ಟಿದ್ದ ಚಪ್ಲಿಗಳು ಬೇಕಾಗಿದ್ದವು. ನಿನ್ನಂಥಾ ನೀಚನಿಗೆ ನನ್ನಂತಾ ನರಪಿಳ್ಳೆಯ ಚಪ್ಲಿನ ಸಾಕು…’ ಅಂತ ಕೂಗಾಡುತ್ತಿದ್ದವನನ್ನು ಶರಣೇಗೌಡನ ಆಳು ಮಾದರ ದೇವ ಗಟ್ಟಿಯಾಗಿ ಹಿಡಕ್ಕಂಡು ನೆಲಕ್ಕೆ ಕೆಡವಿ ಸಿಕ್ಕ ಸಿಕ್ಕಲ್ಲಿ ಒದೆಯತೊಡಗಿದ. ಮುದುಕಪ್ಪನ ಹಿಂದೆ ಬಂದಿದ್ದ ನಾಲ್ಕಾರು ಯುವಕರು ಬಿಡಿಸಿಕೊಳ್ಳಲು ಪ್ರಯತ್ನಪಟ್ಟರೂ ಸಾಧ್ಯವಾಗಲಿಲ್ಲ. ‘ಲೇ ನಮ್ಮ ಗೌಡ್ಗ ಬೈಯ್ತಿಯೇನಲೆ. ನಿನ್ನ ನಾಲಿಗೀನ ಕಿತ್ತಿ ಹೊರಗ ಒಗಿತೀನಿ. ನಿನ್ನಂತವನ್ನ ಹಂಗೆ ಬುಟ್ರ ಬುದ್ಧಿ ಬರಲ್ಲ. ಗಾಂಧಿಕಟ್ಟೆ ಮ್ಯಾಲಿನ ಬೇನೆಗಿಡಕ್ಕ ಕಟ್ಟಿಹಾಕಿ, ಒದ್ದರ, ಆವಾಗ ಹೆಂಗ ಇರಬಕು ಅಂಬದು ಗೊತ್ತಾಗುತ್ತ…’ ಅಂತ ಮುದುಕಪ್ಪನನ್ನು ದರ-ದರ ಎಳೆದುಕೊಂಡು ಗಾಂಧಿಕಟ್ಟೆಯತ್ತ ಹೊರಟ. ‘ಲೇ ದೇವ, ಗೌಡ್ರಂತ ದೊಡ್ಡ ಮಂದಿ ನಾಟಕ ನಿನಗ ಅರ್ಥ ಆಗಲ್ಲ. ಅವರ ಎಂಜಲು ಕೂಳು ತಿನ್ನೊ ನಿನ್ನ ಕಣ್ಣಿಗೆ ಮಬ್ಬು ಮುಚ್ಚೈತಿ. ನಾವಿಬ್ರೂ ಅಣ್ಣ-ತಮ್ರು ಇದ್ದಂಗ. ನಿನ್ನ ಮ್ಯಾಲ ನನಗ ಸಿಟ್ಟಿಲ್ಲ. ನನ್ನ ಬುಟ್ಟುಬಡು…’ ಅಂತ ಬೇಡಿಕೊಂಡ. ಮುದುಕಪ್ಪನ ಮಾತನ್ನು ದೇವ ಕಿವಿಗೆ ಹಾಕಿಕೊಳ್ಳದೆ ನಡೆದ. ಶರಣೇಗೌಡನ ಬಲಗೈಯ ಬೆರಳುಗಳ ಮಧ್ಯೆ ಸಿಗರೇಟು ನಿಗಿನಿಗಿ ಕೆಂಡದಂತೆ ಉರಿಯುತ್ತಿತ್ತು.

ಊರಲ್ಲಿ ಇಷ್ಟೆಲ್ಲಾ ನಡೆಯುತ್ತಿದ್ದರೂ ಚಿನ್ನೂರಿನಿಂದ ಬಂದಿದ್ದ ಪೇದೆಗಳಿಬ್ಬರು ಶರಣೇಗೌಡನ ಬಾರಿನಲ್ಲಿ ಕಂಠದ ಮಟ ಕುಡಿದು ಅಲ್ಲೆ ಬಾರಿನ ಹೊರಗೆ ನೆಲದ ಮೇಲೆ ಈ ಲೋಕದ ಪರಿವೆ ಇಲ್ಲದಂತೆ ಮಲಗಿದ್ದರು. ಬಾರಿನ ಸುತ್ತ ಗಸ್ತು ತಿರುಗುವ ಗೌಡರ ಗಂಡು ನಾಯಿ ರಾಜಾ ಪೊಲೀಸರನ್ನು ಏನೆಂದು ತಿಳಿಯಿತೊ ಅವರ ಬೆನ್ನಿಗೆ ಒಂದು ಕಾಲೂರಿ ಮತ್ತೊಂದು ಕಾಲನ್ನು ಆಕಾಶದತ್ತ ತೋರಿಸಿ, ತನ್ನ ತುರ್ತು ಕೆಲಸವನ್ನು ಮುಗಿಸಿತು. ಹೋಗುವ ಮುಂಚೆ ಅವರಿಬ್ಬರ ಬಾಯಿ ಸಮೀಪ ತನ್ನ ಮೂತಿ ಒಯ್ದು. ‘ಥೂ… ಕೆಟ್ ನಾರ್ತಾರ… ಹೊಟ್ಟೀಗಿ ನಮ್ಮಂತಾ ನಾಯಿಗಳು, ಹಂದಿಗಳು ತಿನ್ನೋದು ತಿಂದಾರೋ, ಇಲ್ಲಾ ಅದಕ್ಕಿಂತ ಕೆಟ್ಟದ್ದು ಏನನ ತಿಂದು, ಕುಡುದಾರೊ’ ಎಂಬಂತೆ ಭಾವಿಸಿದಂತೆ ಕೆಟ್ಟ ಮುಖಮಾಡಿದ ನಾಯಿ ಬಾರಿನ ಸುತ್ತ ಬಿದ್ದ ಮಬ್ಬು ಬೆಳಕಿನಲ್ಲಿ ಹಾಯಾಗಿ ತಿರುಗಾಡತೊಡಗಿತು.

ಅತ್ತ ಜಾತ್ರೆ ನಡೆಸಲು ಸಿದ್ಧತೆ ನಡೆದಿರುವಾಗಲೆ ಇತ್ತ ಗಾಂಧಿಕಟ್ಟೆ ಮೇಲಿದ್ದ ಬೇವಿನಗಿಡಕ್ಕೆ ಮುದುಕಪ್ಪನನ್ನು ದೇವ ದೊಡ್ಡ ಹಗ್ಗದಿಂದ ಕಟ್ಟಿಹಾಕಿದ. ಅವನ ಮುಖಕ್ಕೆ ಕ್ಯಾಕರಿಸಿ ಉಗುಳುತ್ತಾ, ಮತ್ತೊಂದು ಹಗ್ಗವನ್ನು ನಾಲ್ಕು ಮಡಿಪು ಮಡಿಸಿ ಹಿಡಿದುಕೊಂಡು ಮೈಮೇಲೆ ಎಲ್ಲಿ ಬೇಕಲ್ಲಿ ಬಡಿಯತೊಡಗಿದ. ಜಾತ್ರೆ ನೋಡಲು ಎಷ್ಟು ಮಂದಿ ಸೇರಿದ್ದರೊ ಅಷ್ಟೇ ಮಂದಿ ಗಾಂಧಿಕಟ್ಟೆ ಸಮೀಪ ಸೇರಿದ್ದರು. ‘ಹಾಕಲೇ ದೇವ. ಇವನಿಗೆ ಬೇಸು ಬಡ್ದು ಬುದ್ಧಿ ಕಲಸು. ಎಷ್ಟು ಎಗರ್ಯಾಡ್ತಾನ. ಇಮಾಮ್ ಸಾಬ್, ಮೆಕ್ಕೆಸಾಬ್ ನ ಜೊತೆಗೂಡಿ ನಮ್ ಧರ್ಮಕ್ಕ ಕಳಂಕ ಬರಂಗ ಮಾತಾಡ್ತಾನ. ಈಶ್ವರ ಗುಡಿಗೆ ಹತ್ತಿಕೊಂಡಿರೊ ಮಸೀದೀನ ಬೇರೆ ಕಡೆ ಸ್ಥಳಾಂತರಿಸಬೇಕು. ನಮ್ ಮಂದಿ ಪೂಜೆ, ಪುನಸ್ಕಾರ ಮಾಡಲು ಮಸೀದಿ ಮುಂದ್ಲಾಸಿ ಹೋಗಲು ಮುಜಗರ ಆಗುತ್ತ ಅಂತ ಹೇಳಿದ್ರ ಅವರ ಪರವಹಿಸಿ ಮಾತಾಡ್ತಾನ…’ ಆಗಲೂ ಮೊಣಕಾಲು ಕಾಣಂಗ ಚೆಡ್ಡಿಯನ್ನು ತೊಟ್ಟು, ಕೈಯಲ್ಲಿ ತನಗಿಂತಲೂ ಉದ್ದವಿದ್ದ ಬಿದಿರಿನ ಕೋಲು ಹಿಡಿದು, ಕಣ್ಣು ಹುಬ್ಬು ಕೂಡುವ ಜಾಗದಿಂದ ಕೂದಲಿನವರೆಗೆ ಉದ್ದೂಕ ಕುಂಕುಮ ಹಚ್ಚಿಕೊಂಡಿದ್ದ ಕೃಷ್ಣ, ದೇವನ ಸಿಟ್ಟಿನ ಬೆಂಕಿಗೆ ತುಪ್ಪ ಸುರಿಯುತ್ತಿದ್ದ. ಅಲ್ಲಿಗೆ ಬಂದ ಮಲ್ಲಿನಾಥ, ಕೃಷ್ಣನ ಮಾತುಗಳನ್ನು ಕೇಳಿಸಿಕೊಂಡು, ‘ಲೇ ಸನಾತನ ನಾಯಿ, ಬಾಯಿಮುಚ್ಚಿಕೆಂಡು ಸುಮ್ನಿರು. ನಿಮ್ಮಂತೋರಿಗೆ ಊರಿನ ಸಮಸ್ಯೆಗಳು ಕಾಣಂಗಿಲ್ಲ. ಜಾತಿ, ಧರ್ಮದ ವಿಷಯಗಳೇ ದೊಡ್ಡದಾಗಿ ಕಾಣ್ತಾವ. ಊರ ಮಂದಿ ಮರ್ಯಾದಿಯಿಂದ ಹೇಲಾಕಂತ ಸರ್ಕಾರ ಕೊಟ್ಟ ಹಣಾನ ಸಮೇತ ನೆಕ್ಕಿಬಿಟ್ಟ ಶರಣೇಗೌಡ. ಅದನ್ನ ಕೇಳಾಕ ನಿಮ್ತಲ್ಲಿ ದಮ್ಮು ಇಲ್ಲ. ಇಂಥಾ ಬಡಪಾಯಿಗಳ ಮ್ಯಾಲನ ನಿಮ್ಮ ಸಿಟ್ಟು. ಊರ ಮಂದಿ ಹೆಣ್ಮಕ್ಳೆಲ್ಲಾ ಸೇರಿ ನಿಮ್ಮಂತೋರಿಗೆ ಹಂಗೆ ಆ ಗೌಡಗ ನಾಲಾಗಿನ ಎಲ್ಲಾ ಹೇಲು ಬಳಕಂಡು ಬಾಯಾಗ ತುಂಬಿದ ಮ್ಯಾಲನ ನಿಮ್ಮಂತೋರಿಗೆ ಬುದ್ಧಿ ಬರೋದು. ಹೇಲ್ತಿಂಬ ಮಂದಿಗೆ, ಯಪ್ಪಾ, ಯಣ್ಣಾ ಅಂದ್ರ ಬುದ್ಧಿ ಬರಲ್ಲ… ನಡಿಯಲೇ ನಾಯಿ… ಅಲ್ಲಿ ಜಾತ್ರಿ ನಡಿತೈತಿ ಹೋಗಿ ಗಂಟೆ ಬಾರಿಸ್ಗೆಂತ ನಿಂದ್ರು…’ ಅಂತ ಕೃಷ್ಣನಿಗೆ ಬಾಯಿಗೆ ಬಂದಂತೆ ಉಗುಳಿದ. ಮಲ್ಲಿನಾಥನ ಸಹವಾಸಕ್ಕ ಒಂಟಿ ಇದ್ದಾಗ ಹೋಗಬಾರದು. ಹೇಳಾಕ ಬರಲ್ಲ ಈ ಅಸಾಮಿ ಎಂದು ಮನಸ್ಸಿನಲ್ಲಿ ಅಂದು ಕೊಳ್ಳುತ್ತಾ ಕೆರಿಬಸವಣ್ಣನ ಗುಡಿ ಕಡೆ ನಡೆದ. ‘ಲೇ ದೇವ ಬಡಿಯೋದು ನಿಲ್ಸಿ. ಮೊದ್ಲು ಮುದಕಪ್ಪಗ ಕಟ್ಟಿದ ಹಗ್ಗ ಬಿಚ್ಚಿ ಕಳಿಸು. ಲೇ… ಹನುಮ, ಲಚುಮ, ಶಂಕ್ರ, ಇಮಾಮ್ ಏನ್ ನೋಡಾಕ ಹತ್ತೀರಿ ಕಟ್ಟೆ ಏರಿ ಮುದುಕಪ್ಪನ ಬಿಡಿಸಿಕೊಳ್ರಿ…’ ಮಲ್ಲಿನಾಥ ಇಷ್ಟು ಹುರಿದುಂಬಿಸುವುದನ್ನೇ ಕಾಯುತ್ತಿದ್ದರು ಎಂಬಂತಿದ್ದ ಹತ್ತಾರು ಮಂದಿ ಕಟ್ಟೆ ಏರಿ ದೇವನ ಕೈಯಲ್ಲಿದ್ದ ಹಗ್ಗವನ್ನು ಕಸಿದು ದೂರ ಎಸೆದರು. ಒಂದಿಬ್ಬರು ಮುದುಕಪ್ಪನ ಸುತ್ತ ಕಟ್ಟಿದ್ದ ಹಗ್ಗ ಬಿಚ್ಚಿದರು. ಮುದುಕಪ್ಪ ಹಗ್ಗ ಬಿಚ್ಚುತ್ತಲೆ ಕಟ್ಟೆಯ ಮೇಲೆ ಕುಸಿದುಬಿದ್ದ.

ತೇಲುಗಣ್ಣು ಮೇಲಗಣ್ಣು ಮಾಡಿದ್ದ ಮುದುಕಪ್ಪ ಇನ್ನೇನು ಸತ್ತುಬುಡ್ತಾನ ಅಂತ ತಿಳಿದ ಕೇರಿಯ ನಾಲ್ಕಾರು ಹಡುಗರು, ಮಲ್ಲಿನಾಥನ ಸಲಹೆಯಂತೆ ಮಸ್ಕಿ ದವಾಖಾನೆಗೆ ಕರೆದುಕೊಂಡು ಹೋದರು. ಕಟ್ಟೆ ಮೇಲೆ ನಿಂತು ಬಿಸಿಯುಸಿರು ಬಿಡುತ್ತಿದ್ದ ದೇವನನ್ನು ಒಂದಿಬ್ಬರು ಕೆಳಗೆ ದಬ್ಬಿದರು. ದೇವ ಬಿದ್ದಕೂಡಲೇ ಸುತ್ತ ನಿಂತ ಮಂದಿ, ದೇವನಿಗೆ ಎಲ್ಲಿಬೇಕಲ್ಲಿ ಬಡಿದರು, ಒದ್ದರು. ಒಂದಿಬ್ಬರು ಅವನ ಮುಖಕ್ಕೆ ಕ್ಯಾಕರಿಸಿ, ‘ಲೇ ನೀವು ಒಂದಾ ಮಂದಿ ಆಗಿ ಬಡದಾಡಿದ್ರ ಹೆಂಗ. ಅವನು ಮುದುಕಪ್ಪ ನಿಮ್ಮಂತೋರು ಸಲುವಾಗಿನ ಈ ಶಿಕ್ಷೆ ಅನುಭವಿಸಿಬೇಕಾಗಿ ಬಂತು. ನಿನ್ನಂತೋರಿಗೆ ಯಾವಾಗ ಬುದ್ಧಿ ಬರುತ್ತೋ ಏನ್ ಕಥಿಯೋ?’ ಅಂತ ದೇವನಿಗೆ ಬಾಯಿಗೆ ಬಂದಂತೆ ಬೈಯ್ಯತೊಡಗಿದರು. ದೇವ ನೆಲದ ಮೇಲೆ ಬಿದ್ದು ಉರುಳಾಡುತ್ತಿದ್ದ. ‘ಲೇ ಎಷ್ಟು ಬೈಯ್ತೀರಿ ಬೈಯ್ರಿ. ನಮ್ ಗೌಡ ಬರ್ಲಿ. ನಿಮ್ಮ ಮ್ಯಾಲ ಕೇಸು ಹಾಕಸ್ತೀನಿ. ನಿಮ್ಮನ್ನ ಜೈಲಿಗೆ ಕಳಿಸ್ತೀನಿ…’ ಎದ್ದು ಕುಂತು ನೆಲಕ್ಕ ಗುದ್ದಿ ಗುದ್ದಿ ಮಾತನಾಡುತ್ತಿದ್ದ. ನಿಧಾನವಾಗಿ ಕತ್ತಲಾಗುತ್ತಿದ್ದಂತೆ ಜನ ಗಾಂಧಿಕಟ್ಟೆಯಿಂದ ಕೆರಿಬಸವಣ್ಣನ ಉಚ್ಛ್ರಾಯವನ್ನು ನೋಡಬೇಕೆಂದು ಗುಡಿಯತ್ತ ಹೊರಟರು.

ಕೆರಿಬಸವಣ್ಣನ ಉಚ್ಛ್ರಾಯ ಆಗಲೇ ಎದುರು ಬಸವಣ್ಣನ ತಲುಪಿ ಮತ್ತೆ ಗುಡಿಯತ್ತ ಹಿಂದಿರುಗುತ್ತಿತ್ತು. ಮಹಿಳೆಯರು, ಮಕ್ಕಳು ಉಚ್ಛ್ರಾಯ ಬರುವ ದಾರಿಯ ಇಕ್ಕೆಲಗಳಲ್ಲಿ ಸಾಲಾಗಿ ನಿಂತು ಕೆರಿಬಸವಣ್ಣನಲ್ಲಿ ಬೇಡಿಕೊಳ್ಳುತ್ತಿದ್ದರು. ಉಚ್ಛ್ರಾಯದ ಮುಂದೆ ನಡ್ಲಮನಿ ಸಿದ್ದಣ್ಣನವರ ಗುಂಪು ರಾಗಬದ್ಧವಾಗಿ ಹಾಡುತ್ತಿದ್ದ ಶಿಶುನಾಳ ಶರೀಫರ, ‘ಸೋರುತಿಹುದು ಮನೆಯ ಮಾಳಿಗೆ. ಅಜ್ಞಾನದಿಂದ…. ಸೋರುತಿಹುದು ಮನೆಯ ಮಾಳಿಗೆ’ ಹಾಡಿಗೆ ತಕ್ಕಂತೆ ಶರಣೇಗೌಡ ಮತ್ತವರ ಗುಂಪು ಹೆಜ್ಜೆಹಾಕುತ್ತಿತ್ತು. ಒಂದಿಬ್ಬರು ಶರಣೇಗೌಡನ ಕಿವಿಯಲ್ಲಿ ಏನೋ ಹೇಳಿದರು. ‘ಗಾಂಧಿಕಟ್ಟೆ ಕಡೆ ನಡೀರಿ…’ ಎಂದು ಪಕ್ಕದಲ್ಲಿದ್ದ ಬಸವರಾಜ, ಶೇಖರ್, ಮಹ್ಮದ್ ನ ಜೊತೆಗೆ ಅವಸರದಿಂದ ಶರಣೇಗೌಡ ನಡೆದ.

ಶರಣೇಗೌಡ ಮತ್ತು ಹತ್ತಾರು ಜನ ಕಟ್ಟೆಯತ್ತ ಬರುವುದನ್ನು ಕಂಡ ದೇವ, ಕುಳಿತವನು ನೆಲಕ್ಕ ದೊಪ್ಪನೆ ಬಿದ್ದು ಉರುಳಾಡುತ್ತಾ, ‘ಯಪ್ಪಾ, ಯವ್ವಾ…’ ಅಂತ ಒದರತೊಡಗಿದ. ‘ಹೇ ಮಹ್ಮದ್ ಕಾರು ತಗಂಡ್ಬಾ. ಚಿನ್ನೂರಿಗೆ ಹೋಗಿ ಕಂಪ್ಲೇಂಟ್ ಕೊಟ್ಟುಬರ್ತೀವಿ. ಹಂಗೆ ಬಾಯಿಲಿ ಹೇಳಿದ್ರ ಇವರಿಗೆ ಬುದ್ಧಿ ಬರಲ್ಲ….’ ಕರ ಕರ ಹಲ್ಲು ಕಡಿಯುತ್ತಾ ಗಾಂಧಿಕಟ್ಟೆಗೆ ಕಾಲುಚಾಚಿ ನಿಂತ. ಮಹ್ಮದ್ ಕಾರು ತರುತ್ತಿದ್ದಂತೆ, ‘ಲೇ ದೇವ ನೀನು ಇಲ್ಲೆ ಊರಾಗಿನ ಹುಸೇನ್ ಸಾಬ್ ಡಾಕ್ಟ್ರತಲ್ಲಿ ತೋರ್ಸಿಗಂಡು ಬುಡು. ಠಾಣೆಯಲ್ಲಿ ಕಂಪ್ಲೇಂಟ್ ಕೊಟ್ಟು, ಪಿಎಸ್ಐ ಕಾಂತನಗೌಡನ್ನ ಕರ್ಕಂಡು ಬರ್ತೀನಿ…’ ಎನ್ನುತ್ತಾ ಕಾರುಹತ್ತಿ ಹೊರಟರು. ಕಾರು ಚಿನ್ನೂರಿನತ್ತ ಭರ್ರಂತ ಸಾಗಿತು.

ಒಂದು ಗಂಟೆಯೊಳಗೆ ಬಂದ ಪೊಲೀಸ್ ಜೀಪ್ ಸೀದಾ ಬಂದು ಶಿವಯ್ಯತಾತನ ಮನೆ ಮುಂದೆ ನಿಂತಿತು. ಮನೆಯಲ್ಲಿ ಮಲ್ಲಿನಾಥ ಊಟ ಮಾಡುತ್ತಿದ್ದ. ‘ಲೇ ಹೊರಗ ಬಾರಲೇ…’ ಎಂದು ಪಿಎಸ್ಐ ಹೊರಗೆ ನಿಂತು ಕೂಗಿದ. ಮಲ್ಲಿನಾಥ ಉಣ್ಣುವ ಕೈಯನ್ನು ಹಿಂದೆಹಿಡಿದು ಹೊರಗೆ ಬಂದ. ಶಿವಯ್ಯತಾತ ಬಂಕದಲ್ಲಿ ಹಾಗೆ ಕಣ್ಣುತೆರೆದುಕೊಂಡು ಮಲಗಿದಾತ ಎದ್ದುಕುಳಿತ. ಮಲ್ಲಿನಾಥ ಹೊರಗೆ ಬರುತ್ತಿದ್ದಂತೆ ಪಿಎಸ್ಐ ಅವನ ಕೈಹಿಡಿದು ಜೋರಾಗಿ ಎಳೆದು, ‘ಏನಲೇ ಎಸ್ಸಿ ಮಂದಿಗಿ ಬಡಿಯಾಕ ಕುಂಡಿ ಕಡಿತೈತಿ ಏನ್ ನಿಂದು. ಅವರವರಿಗೆ ಜಗಳ ಹಚ್ಚಿ ಬಡಿದಾಡಿ ಸಾಯಂಗ ಮಾಡಿಯೇನು. ಆ ಮುದುಕಪ್ಪ ಮತ್ತೆ ದೇವ ಏನಾದ್ರೂ ಸತ್ರ, ನಿನ್ನ ಮೇಲೆ ಕೊಲೆ ಕೇಸು ಮಾಡಿ, ಸಾಯತನಕ  ಜೈಲಿನ್ಯಾಗ ಕೊಳೆಯಂಗ ಮಾಡ್ತೀನಿ…. ಜೀಪ್ ಹತ್ತಲೆ’ ಅಂತ ಒಂದೆರಡು ಏಟು ಒದ್ದರು. ಮುಂದಕ್ಕೆ ಬಿದ್ದು ಎದ್ದ ಮಲ್ಲಿನಾಥ, ‘ಸಾಹೇಬರೆ, ನಿಮಗೆ ಯಾರೊ ಸುಳ್ಳು ಹೇಳ್ಯಾರ. ಝಡ್ಪಿ ಪ್ರೆಸಿಡೆಂಟ್ ಶರಣೇಗೌಡನೇ ಮುದಕಪ್ಪಗ ಸಾಯಂಗ ಬಡಿಸಿದ್ದು. ದಲಿತ ಜನಾಂಗದ ನಾಲ್ಕಾರು ಯುವಕರು ಗುಡಿಯೊಳಗ ಹೋಗಿದ್ದನ್ನೇ ನೆವಮಾಡಿ ತನ್ನ ಆಳು ದೇವನಿಂದ ಬಡಿಸಿದ್ದು… ಈ ಘಟನೆಗೆ ನನಗೂ ಸಂಬಂಧ ಇಲ್ಲ. ನಾನು ಬುದ್ಧಿಹೇಳಾಕ ಹೋಗಿದ್ದು ಖರೆ ಹೊರ್ತಾಗಿ… ಯಾರಿಗೂ ಬಡಿದಾಡಾಕ ಹಚ್ಚಿಲ್ಲ…’ ಒಂದೆ ಸವನೆ ಗೋಗರೆದರೂ ಪಿಎಸ್ಐ ಅವನನ್ನು ಜೀಪಿನತ್ತ ದಬ್ಬತೊಡಗಿದ.

ಏನು ನಡೆಯುತ್ತಿದೆ ಎಂಬುದನ್ನು ಅರ್ಥಮಾಡಿಕೊಳ್ಳುವಲ್ಲಿ ವಿಫಲನಾದ ಶಿವಯ್ಯತಾತ, ‘ಮಲ್ಲಿ, ಮಲ್ಲಿನಾಥ ಏನ್ ನಡೆಯಾಕ ಹತ್ತೈತಿ…. ಯಾರೊ ಬಾಯಿಗೆ ಬಂದಂಗ ನಿನಗ ಬೈಯಾಕ ಹತ್ಯಾರಲ್ಲ. ನಿನ್ನ ಎಲ್ಲಿಗೆ ಕರ್ಕಂಡು ಹೋಗಾಕ ಹತ್ಯಾರಲ್ಲ…’ ಶಿವಯ್ಯ ತಾತ ಕಣ್ಣು ಸರಿಯಾಗಿ ಕಾಣಿಸದಿದ್ದರೂ, ಮೊಮ್ಮಗಳ ಸಹಾಯದಿಂದ ಒರಸಿನಿಂದ ಇಳಿದು, ನಿಧಾನವಾಗಿ ಹೆಜ್ಜೆಯಿಡುತ್ತಾ ಅಂಗಳದಲ್ಲಿ ಬಂದು ನಿಂತ. ಜೀಪಿನ ಸಮೀಪ ನಿಂತಿದ್ದ ಪೇದೆಗೆ, ಮಲ್ಲಿನಾಥನನ್ನು ಎಳೆದುಕೊಂಡು ಹೋಗಿ ಜೀಪಿನಲ್ಲಿ ಕೂಡಿಸುವಂತೆ ಸನ್ನೆಮಾಡಿದ ಪಿಎಸ್ಐ ಕಾಂತನಗೌಡ, ಸ್ವಲ್ಪ ದೂರದಲ್ಲಿ ನಿಂತಿದ್ದ ಶರಣೇಗೌಡನಿಂದ ಸಿಗರೇಟ್ ತೆಗೆದುಕೊಂಡು ಗಾಂಧಿಕಟ್ಟೆಯ ಬೇವಿನಗಿಡದ ತುದಿ ಮುಟ್ಟುವಂತೆ ಹೊಗೆ ಬಿಡುತ್ತಾ ಸೇದತೊಡಗಿದ. ‘ಆಯ್ತೇಳ್ರಿ ಗೌಡ್ರೆ ನೀವೇನೂ ಚಿಂತಿ ಮಾಡಬ್ಯಾಡ್ರಿ. ಇವನಿಗೆ ಬೇಸು ಮೈಮೆತ್ತಗ ಆಗಂಗ ಒದಿತೀವಿ’ ಆಕಾಶಕ್ಕೆ ಮುಖಮಾಡಿ ಹೇಳಿದ. ಜೀಪಿನ ಸಮೀಪ ಬಂದಾಗ ಶಿವಯ್ಯತಾತಗ ಸ್ವಲ್ಪ ಮಸುಕು-ಮಸುಕು ಕಂಡು, ಕೂಗಾಡಿದ. ‘ಲೇ ಏನ್ ವಾರಂಟ್ ಐತಿ ನಿಮ್ತಲ್ಲಿ. ಈ ಗೌಡನ ಮಾತು ಕೇಳಿ ಹೀಂಗ ಅಮಾಯಕರನ್ನ ಬಡ್ದು, ಹೊಡ್ದು ಸ್ಟೇಷನ್ನಿಗೆ ಕರೆದುಕೊಂಡು ಹೋಗೊ ಅಧಿಕಾರ ನಿಮಗ ಯಾರು ಕೊಟ್ಟಾರ. ಇದೇನು ಗುಂಡಾರಾಜ್ಯ ಅಂತ ತಿಳಿದಿರೇನು? ಉಣಕಂತ ಕುಂತ ಮೊಮ್ಮಗನ್ನ ಎಬ್ಬಿಸಿಕೊಂಡು ಬಂದೀರಿ. ಅರುವು ಎಲ್ಲಿ ಐತಿ. ನಿಮ್ಮಂತಾ ಎಂಜಲು ನೆಕ್ಕೊ ಪೊಲೀಸರ ಜೊತೆ ನನ್ನ ಮೊಮ್ಮಗನ್ನ ಕಳಿಸಲ್ಲ. ನಾಳೆ ಚಿನ್ನೂರಿನಿಂದ ನಮ್ ಬಸಣ್ಣ ವಕೀಲರನ್ನ ಕರೆಯಿಸಿ ಅವರ ಜೊತೆ ಕಳ್ಸಿತೀನಿ. ಆವಾಗ ಏನ್ ಮಾಡಿಕೆಂತೀರಿ. ಮಾಡಿಕ್ಯರ್ರಿ….’ ಪಿಎಸ್ಐ ನಿಂತ ಜಾಗಕ್ಕೆ ಹೋಗಲು ಇನ್ನೇನು ಸಿದ್ಧವಾಗಿದ್ದ ಜೀಪಿಗೆ ಅಡ್ಡನಿಂತ ಶಿವಯ್ಯತಾತ ಊರು ಒಂದಾಗುವಂತೆ ಕೂಗಿದ. ಪಿಎಸ್ಐ ದನಿ ಕೇಳಿಯೇ ಸುತ್ತಲಿನ ಹತ್ತಾರು ಮನಿ ಮಂದಿ ಬಂದು ನಾಟಗ ನೋಡುವಂತೆ ಬಾಯಿಗೆ ಬೀಗ ಹಾಕಿಕೊಂಡು ನಿಂತಿದ್ದರು. ‘ಯಾರ್ ಹೇಳೋರು ಅದ್ಯಾರ ಈ ಗೌಡ್ಗ. ಸೊಕ್ಕು ನೆತ್ತಿಗಿ ಏರೈತಿ. ದೀಪ, ಆರುವ ಹೊತ್ತಿನಲ್ಲಿ ಜೋರಾಗಿ ಉರಿತೈತಿ. ಉರುದೋರಿಗೆ ಅರ್ಧಹೋಳಿಗಿ ಅಂತಾರ… ಇವನಿಗೆ ಒಳ್ಳೆ ಸಾವು ಬರಲ್ಲ… ಮಲ್ಲಿನಾಥನಂತ ಒಳ್ಳೇತನ ಮೇಲೆ ಕೇಸು ಮಾಡಿಸಿದ್ದು ತಪ್ಪು….’ ಅಂತ ಮನಸ್ಸಿನಲ್ಲೆ, ಪರಸ್ಪರ ಕಿವಿಗಳಲ್ಲಿ ಪಿಸುಗುಟ್ಟಿದರು.

ಊರಹೊರಗಿದ್ದ ಕೇರಿಯ ಮಂದಿ ಶಿವಯ್ಯ ತಾತನ ದನಿ ಕೇಳಿ ಓಡೋಡಿ ಬಂದರು. ಮೊದ ಮೊದಲು ಧೈರ್ಯ ಸಾಲದಂತೆ ಹಾಗೆ ನೋಡುತ್ತಾ ನಿಂತಿದ್ದರು. ಇನ್ನೇನು ಜೀಪ್ ಹೊರಳಿಸಿದಾಗ, ಕೇರಿಯ ನಾಲ್ಕಾರು ಹುಡುಗರು, ‘ಈ ಮಲ್ಲಿನಾಥಂದು ಏನೂ ತಪ್ಪಿಲ್ಲ ಸಾಹೇಬ್ರೆ. ಎಲ್ಲಾ ಇವನೇ ಈ ಗೌಡನೇ ಮಾಡಿಸಿದ್ದು. ನೀವಾ ಹೇಳ್ರಿ. ನಾವು ಗುಡಿಯಾಕ ಹೋಗೋದು ತಪ್ಪೇನು? ಪೂಜೆ ಮಾಡೋದು ತಪ್ಪೇನು? ನೀವೇ ಬರ್ರಿ ಈಗ ನಿಮ್ ಜೊತಿಗಿ ಗುಡಿಗಿ ಬರ್ತೀವಿ… ಗೌಡ ಸುಮ್ನಿದ್ರ ನಾವೇನೂ ನಿಮ್ಮ ಕುಡ ಜಗಳಕ್ಕ ಬರಲ್ಲ. ಇಲ್ಲಂದ್ರ ಮಲ್ಲಿನಾಥನ್ನ ಕರ್ಕಂಡು ಹೋದ್ರ ತಿಪ್ಲ ಆಗುತ್ತ ನೋಡ್ರಿ… ಬೇಕಾದ್ರ ನಮ್ಮನ್ನು ಕರ್ಕಂಡು ಹೋಗ್ರಿ ನಾವೂ ಬರ್ತೀವಿ. ನಾವೂ ಒಂದ್ ಕಂಪ್ಲೇಂಟ್ ಕೊಡ್ತೀವಿ… ಈ ಗೌಡನ ದೌರ್ಜನ್ಯ ಮಿತಿಮೀರೈತಿ…’ ಹೊಟ್ಟೆಯೊಳಗಿನ ಸಿಟ್ಟೆನ್ನೆಲ್ಲಾ ಒಂದೇ ಸವನೆ ಕಾರಿದರು. ‘ಇದು ಸೂಕ್ಷ್ಮ ವಿಚಾರ ಐತಿ. ನೀವು ತಲಿ ಹಾಕಬ್ಯಾಡ್ರಿ. ನಿಮಗ ತಿಳಿಯಂಗಿಲ್ಲ. ನಾಳೆ ಸ್ಟೇಷನ್ನಿಗೆ ಬಂದು ನನ್ನ ಕಾಣ್ರಿ… ಮಾತಾಡಿ ಬಗೆಹರಿಸಬೋದು…’ ‘ಅಲ್ಲೇನು ಬಗೆಹರಿಸುತ್ತಿ. ಇಲ್ಲಿಗೆ ಬಂದಿದಿ ಇಲ್ಲೇ ಬಗೆಹರಿಸು. ಶಿವಯ್ಯತಾತನ ಕುಟುಂಬಕ್ಕ ಮತ್ತು ನಮ್ಮ ಕುಟುಂಬಗಳಿಗೆ ಸೂಕ್ತ ರಕ್ಷಣೆ ಕೊಡಬೇಕು. ಇಲ್ಲಾ ಅಂದ್ರ ನೋಡ್ರಿ…. ನಮ್ ಮ್ಯಾಲ ಹೊಡಕಂಡು ಹೋಗಂಗ ಇದ್ರ… ಹೊಡಕಂಡು ಹೋಗ್ರಿ…’ ಕೇರಿಯ ಹನುಮ, ಬಸವಂತ, ಲಚುಮ, ಅಮರಪ್ಪ ಜೀಪಿಗೆ ಅಡ್ಡ ನಿಂತರು. ಶಿವಯ್ಯ ತಾತನೂ, ‘ನನ್ನ ಮ್ಯಾಲ ಹೊಡಕಂಡು ಹೋಗ್ತೀರೇನು? ನನ್ನ ಹೊಡ್ಕಂಡು ಹೋಗಿಬುಡ್ರಿ. ಏನೂ ತಪ್ಪ ಮಾಡಲಾರ್ದ ಮೊಮ್ಮಗನ್ನ ಕರ್ಕಂಡು ಹೋಗಬ್ಯಾಡ್ರಿ. ಇಲ್ಲಾ ಊರು ಜನ ತಿರುಗಿ ಬಿದ್ರ ನಿಮ್ ಕಥಿ ಮುಗಿಸಿಬುಡ್ತೀವಿ….’ ಎಂದು ಜೀಪಿಗೆ ಅಡ್ಡ ಬರುತ್ತಿದ್ದ ತಾತನಿಂದ ದೂರ ಸರಿಯಲೆಂಬಂತೆ ಡ್ರೈವರ್ ಜೀಪನ್ನು ಹಿಂದಕ್ಕೆ ಸರಿಸಿದ. ಪಿಎಸ್ಐ ಚಂಗನೇ ಜಿಗಿದು ಜೀಪಿನಲ್ಲಿ ಕೂಡುವ ಕ್ಷಣಾರ್ಧದಲ್ಲೆ ಜೀಪು ಬಸ್ ಸ್ಟ್ಯಾಂಡಿನತ್ತ ವೇಗವಾಗಿ ಸಾಗಿತು.

ಶರಣೇಗೌಡ ಗಾಂಧಿಕಟ್ಟೆಯ ಮುಂಭಾಗದಲ್ಲಿ ನಿಂತು ಸೇದುತ್ತಿದ್ದ ಸಿಗರೇಟಿನ ತುದಿಯಲ್ಲಿದ್ದ ಕೆಂಡದ ಕಿಡಿಗಳು ಗಾಳಿಗೆ ಹಾರಿದಂತೆ ಕಂಡವು. ಶಿವಯ್ಯ ತಾತ ಜೀಪ್ ಹೋದ ದಿಕ್ಕಿನತ್ತ ನಾಲ್ಕಾರು ಹೆಜ್ಜೆ ನಡೆದು ನೆಲದ ಮೇಲೆ ಕುಳಿತುಕೊಂಡ. ಮನೆಯ ಸುತ್ತಲಿನ ಒಂದಿಬ್ಬರು ಶಿವಯ್ಯತಾತನನ್ನು ಎದ್ದುನಿಲ್ಲಿಸಿ, ‘ಮನೆಗೆ ಹೋಗಾಮು ನಡಿ ತಾತ… ನಾಳಿ ಚಿನ್ನೂರಿಗೆ ಹೋಗಿ ತಹಸೀಲ್ ಕಚೇರಿ ಮುಂದೆ ಸ್ಟ್ರೈಕ್ ಮಾಡೋಣ. ಮಲ್ಲಿನಾಥನ್ನ ಬುಡಿಸಿಕೊಂಡೇ ಬರೋಣ…’ ಅಂತ ಹೇಳಿದರು. ‘ನನ್ನ ಗಾಂಧಿಕಟ್ಟೆ ಕಡೆ ಕರೆದುಕೊಂಡು ಹೋಗ್ರಿ… ಜಿಲ್ಲಾಧಿಕಾರೀನೇ ಊರಿಗೆ ಬರಬೇಕು. ಜಿಲ್ಲಾ ಉಸ್ತುವಾರಿ ಸಚಿವ ಮತ್ತು ಎಮ್ಮೆಲ್ಲೆ ಬಂದು ಪರಿಸ್ಥಿತೀನ ಖುದ್ದಾಗಿ ಅರ್ಥಮಾಡಿಕೊಂಡು, ಮಲ್ಲಿನಾಥನ್ನ ವಾಪಾಸ್ ಕಳಿಸೋದಲ್ದ ರಾಜಕೀಯ ಹೆಸರಲ್ಲಿ ಎಲ್ಲಾ ಹೊಲಸು ಕೆಲಸ ಮಾಡೋ ಶರಣೇಗೌಡನ್ನ ಜೈಲಿಗೆ ಹಾಕ್ಬಕು… ಅಲ್ಲಿ ತನಕ ನಾ ಒಂದು ಹನಿ ನೀರು ಕುಡಿಯಲ್ಲ…. ಒಂದು ತುತ್ತು ಅನ್ನ ತಿನ್ನಲ್ಲ… ಹಂಗೆ ಗಾಂಧಿ ಮಹಾತ್ಮನ ಚಪ್ಲಿಗಳನ್ನು ಇಟ್ಟ ಜಾಗದಲ್ಲಿ ಕುಂತು ಸತ್ಯಾಗ್ರಹ ಮಾಡ್ತೀನಿ…’ ದುಃಖಮಿಶ್ರಿತ ಸಿಟ್ಟಿನೊಂದಿಗೇ ಮಾತನಾಡುತ್ತಾ ಗಾಂಧಿಕಟ್ಟೆಯತ್ತ ಹೆಜ್ಜೆಹಾಕಿದ. ನೆರೆಮನೆಯ ನಾಲ್ಕಾರು ಮಂದಿ, ಕೇರಿಯ ಹತ್ತೆನ್ನರಡು ಮಂದಿ, ‘ನಾವೂ ನಿನ್ನ ಜೊತೆಗೆ ಉಪವಾಸ ಕುಂದ್ರುತೀವಿ… ನೋಡಾಮು ನಾವೆಲ್ಲ ಸತ್ತ ಮ್ಯಾಲಾದ್ರೂ ಬರ್ತಾರೊ ಇಲ್ಲೊ? ನಮ್ಮ ಗೋರಿಗಳನ್ನು ಇಲ್ಲೇ ಕಟ್ಟಿದ್ರ ಚಿಂತಿಲ್ಲ. ಸತ್ಯ, ನ್ಯಾಯಕ್ಕೆ ನಾವು ಒಗ್ಗಟ್ಟಿನಿಂದ ಹೋರಾಟ ಮಾಡೋಣ…’ ಎಂದು ಶಿವಯ್ಯ ತಾತನ ಜೊತೆಗೆ ಕಟ್ಟೆಯ ಮೇಲೆ ಕುಳಿತುಕೊಂಡರು.

* * * * * * * *

ಎರಡು ದಿನ ಉಪವಾಸ ಕುಳಿತ ಶಿವಯ್ಯ ತಾತ ಮತ್ತು ಊರಿನ ಇಪ್ಪತ್ತು ಜನರ ಸುದ್ದಿ ಕೆಲವೇ ಸ್ಥಳೀಯ ಪತ್ರಿಕೆಗಳಲ್ಲಿ ತುಣುಕು ಸುದ್ದಿಯಾಗಿ ಪ್ರಕಟವಾಯಿತು. ಮರುದಿನ ಬಂದ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ, ಎಮ್ಮೆಲ್ಲೆ ಮಲ್ಲಿಕಾರ್ಜುನ, ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೇರಿಯ ಜನರನ್ನು ಗಾಂಧಿಕಟ್ಟೆಗೆ ಕರೆಯಿಸಿ ಸಾಂತ್ವನ ಹೇಳಿದರು. ನಾಳೆಯೇ ಮಲ್ಲಿನಾಥನನ್ನು ಬಿಡುಗಡೆಮಾಡಿ ಊರಿಗೆ ಕಳಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠರಿಗೆ ತಿಳಿಸಿದ್ದೇವೆ. ಮಲ್ಲಿನಾಥನನ್ನು ಸುರಕ್ಷಿತವಾಗಿ ಕರೆದುಕೊಂಡು ಬರುವುದು ನಮ್ಮ ಜವಾಬ್ದಾರಿ ಅಂತ ಭರವಸೆ ನೀಡಿದಾಗ ಕೇರಿಯ ಮಂದಿ ಧರಣಿಯನ್ನು ವಾಪಾಸು ತೆಗೆದುಕೊಂಡರು. ಆದರೆ ಶಿವಯ್ಯ ತಾತ, ‘ಮೊಮ್ಮಗನ ಮುಖನೋಡದೆ ಮನೆಗೆ ಮರಳುವುದಿಲ್ಲ’ ಎಂದು ಹಟವಿಡಿದ. ‘ಮೊಮ್ಮಗನ ಜೊತೆಗೇ ಮನೆಗೆ ಹೋಗುವುದು. ಅಲ್ಲಿಯತನಕ ಗಾಂಧಿಮಹಾತ್ಮನ ಕಟ್ಟೆ ಮೇಲೆ ಕೂಡುತ್ತೇನೆ’ ಎಂದ. ಅಂತೂ ಇಂತು ಬೀಸೋ ದೊಣ್ಣಿಯನ್ನು ತಪ್ಪಿಸಿಕೊಂಡೆವು ಎಂಬ ಖುಷಿಯಲ್ಲಿ ಸಚಿವರು, ಎಮ್ಮೆಲ್ಲೆ, ಜಿಲ್ಲಾಧಿಕಾರಿ ಅವರ ಹಿಂದೆ ಬಂದಿದ್ದ ಹದಿನೈದಿಪ್ಪತ್ತು ಮಂದಿಗೆ  ಊರ ಹೊರಗಿದ್ದ ಶರಣೇಗೌಡರ ಬಾರ್ ಅಂಡ್ ರೆಸ್ಟೋರೆಂಟ್ ನಲ್ಲಿ ಆ ರಾತ್ರಿ ಭರ್ಜರಿ ಖಂಡ, ತುಂಡು, ಗುಂಡಿನ ಪಾರ್ಟಿ ಏರ್ಪಡಿಸಲಾಗಿತ್ತು. ಶರಣೇಗೌಡ ಕುಡಿದ ಮಬ್ಬಿನಲ್ಲಿ ಎಸ್ಪಿ ಸಾಹೇಬರ ಎರಡೂ ಮುಂಗೈಹಿಡಿದು, ‘ಎಷ್ಟು ಲಕ್ಷ ಕೇಳ್ತೀರಿ ಕೇಳ್ರಿ ಸಾಹೇಬ್ರೆ…. ಮಲ್ಲಿನಾಥನ ಮ್ಯಾಲಿನ ಕೇಸ್ ಸ್ಟ್ಯಾಂಡ್ ಮಾಡ್ರಿ. ಅವನು ಮತ್ತೆಂದೂ ಊರಿಗೆ ಮುಖ ತೋರಿಸಾಕ ಬರ್ಲಾರ್ದಂಗ ಮಾಡ್ರಿ…’ ಎಂದು ತೊದಲುತ್ತಾ ಹೇಳಿದ. ಎಸ್ಪಿ ಸಾಹೇಬರು, ಉಳಿದವರತ್ತ ನೋಡುತ್ತಾ, ‘ಇವರೆಲ್ಲಾ ನನ್ನ ಬೆನ್ನಿಗೆ ಇದ್ದ ಮ್ಯಾಲ ನಂದೇನು ಐತ್ರಿ ಗೌಡ್ರೆ… ನೀವೇನೂ ಚಿಂತಿಮಾಡಬ್ಯಾಡ್ರಿ… ಇನ್ನಾ ಏನಾದ್ರೂ ಇದ್ರ ಫೋನ್ ಮಾಡ್ರಿ… ಮೂರು ರಿಜರ್ವ್ ವ್ಯಾನ್ ಕಳಿಸ್ತೀನಿ. ಊರಾಗ ಯಾವುನ್ಯಾವನು ಧಿಮಾಕು ಮಾಡ್ತಾನೊ ಅವರನ್ನೆಲ್ಲಾ ಒದ್ದು ಎಳಕೊಂಡು ಹೋಗ್ತೀವಿ….’ ಅವರೆಲ್ಲರೂ ಎಷ್ಟೊತ್ತಿಗೆ ಅಲ್ಲಿಂದ ಹೋದರೊ ಗೊತ್ತಿಲ್ಲ.

ಬೆಳಕು ಹರಿಯುವುದನ್ನೆ ಕಾಯುತ್ತಾ ಕುಳಿತ ಶಿವಯ್ಯತಾತ ಬೆಳಿಗ್ಗೆ ಸೂರ್ಯೋದಯವಾಗುತ್ತಿದ್ದಂತೆಯೇ ಬೇವಿನಗಿಡದ ಬೊಡ್ಡೆ ಹಿಡಿದುಕೊಂಡು ನಿಧಾನವಾಗಿ ಎದ್ದುನಿಂತು ಬಸ್ ಸ್ಟ್ಯಾಂಡಿನತ್ತ ನೋಡಿದ. ಥೇಟ್ ಗಾಂಧಿತಾತನನ್ನೇ ಹೋಲುತ್ತಿದ್ದ ಶಿವಯ್ಯತಾತ ತನ್ನ ಕೋಲಿಗಾಗಿ ಸುತ್ತ ಹುಡುಕಾಡಿದ. ಕೋಲು ಕಣ್ಣಿಗೆ ಕಾಣಲಿಲ್ಲ. ಕೈಮುಂದೆಮಾಡಿ, ಹುಟ್ಟುತ್ತಿರುವ ಸೂರ್ಯನನ್ನೇ ದಿಟ್ಟಿಸಿದ. ಎಂದಿಗಿಂತಲೂ ಇಂದು ಸೂರ್ಯ ಇಷ್ಟೊತ್ತಿಗೇ ಕೆಂಡದಂತೆ ನಿಗಿ ನಿಗಿ ಉರಿಯುತ್ತಿದ್ದಂತೆ ಕಂಡ. ಕಣ್ಣಿನ ಮುಂದೆ ಸಿಡಿಲಿನ ಬೆಳಕು ಝಳಪಿಸಿದಂತೆ ಅನ್ನಿಸಿ ಬೊಡ್ಡೆಗೆ ಹಿಡಿದ ಕೈ ಜಾರುತ್ತಿದ್ದಂತೆ ಶಿವಯ್ಯ, ‘ಯವ್ವೊ…’ ಅಂತ ಕೆಟ್ಟ ದನೀಲಿ ಚೀರಿದ. ಗಾಂಧಿಮಹಾತ್ಮನ ಚಪ್ಪಲಿಗಳನ್ನು ಇಟ್ಟ ಗುಣೇವಿಗೆ ಹಣಿಹಚ್ಚಿ ಉದ್ದೂಕ ಮಲಗಿದ….

 

ಕಲಿಗಣನಾಥ ಗುಡದೂರು

Advertisements

About sujankumarshetty

kadik helthi akka

Posted on ನವೆಂಬರ್ 5, 2010, in ಕತೆ, ಸಣ್ಣ ಕಥೆ and tagged . Bookmark the permalink. ನಿಮ್ಮ ಟಿಪ್ಪಣಿ ಬರೆಯಿರಿ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: