ದಯಾಮರಣ : Euthanasia : Mercy killing

Dayamarana, short story by Triveni
ಡಾ. ಸುದರ್ಶನ್‌ರ ರೌಂಡ್ಸ್‌ ಅದೇ ತಾನೇ ಪ್ರಾರಂಭವಾಗಿತ್ತು. ಪ್ರತಿ ರೋಗಿಯನ್ನೂ ಮೆಲುವಾದ ದನಿಯಲ್ಲಿ ಆತ್ಮೀಯವಾಗಿ ವಿಚಾರಿಸುತ್ತಾ, ಅವರ ದೇಹಸ್ಥಿತಿಯ ಏರುಪೇರುಗಳನ್ನು ಗಮನಿಸುತ್ತಾ ಬರುತ್ತಿದ್ದರು. ಆ ನರ್ಸಿಂಗ್‌ ಹೋಂನ ರೋಗಿಗಳ ಪಾಲಿಗೆ ಸುದರ್ಶನ್‌ ಎಂದರೆ ಸಾಕ್ಷಾತ್‌ ಧನ್ವಂತರಿ. ಅವರ ಕೈಗುಣದ ಮೇಲೆ ಅಷ್ಟು ವಿಶ್ವಾಸ ಅವರಿಗೆ.

ಸುದರ್ಶನರ ವ್ಯಕ್ತಿತ್ವವೂ ಹಾಗೆಯೇ ಇತ್ತು. ತುಂಬಾ ಸಮಾಧಾನಿ. ಕರುಣೆ, ಸಾಂತ್ವನವನ್ನು ಹೊರಚೆಲ್ಲುವ ಶಾಂತ ಮುಖಭಾವ. ತಮ್ಮ ಸ್ನೇಹಮಯ ವ್ಯಕ್ತಿತ್ವದಿಂದ ಎಂತಹ ಅಪರಿಚಿತರನ್ನೂ ತಮ್ಮತ್ತ ಆಯಸ್ಕಾಂತದಂತೆ ಸೆಳೆದುಕೊಂಡುಬಿಡುತ್ತಿದ್ದರು. ಎಷ್ಟೇ ಕೆಲಸದ ಒತ್ತಡವಿದ್ದರೂ ತಮ್ಮ ಮನಸ್ಸಿನ ನೆಮ್ಮದಿಯನ್ನು ಕಳೆದುಕೊಳ್ಳುತ್ತಿರಲಿಲ್ಲ.

ತಾವೇ ಆ ನರ್ಸಿಂಗ್‌ಹೋಮಿನ ಮಾಲೀಕರಾಗಿದ್ದರೂ ಇತರ ಸಹೋದ್ಯೋಗಿಗಳ ಮೇಲೆ ದರ್ಪ ದಬ್ಬಾಳಿಕೆಯನ್ನು ತೋರಿಸದೆ ಅವರ ಸಲಹೆಗಳನ್ನೂ ಮನ್ನಿಸುತ್ತಿದ್ದರು. ಸರಕಾರಿ ವೈದ್ಯರಾಗಿ ಅನೇಕ ಸ್ಥಳಗಳಲ್ಲಿ ಸೇವೆ ಸಲ್ಲಿಸಿ, ಅಪಾರ ಅನುಭವ ಪಡೆದು ನಿವೃತ್ತಿಯ ವಯಸ್ಸು ಸಮೀಪಿಸಿದಂತೆ ಆ ಕೆಲಸಕ್ಕೆ ರಾಜಿನಾಮೆ ಸಲ್ಲಿಸಿ ತಮ್ಮದೇ ಸ್ವಂತ ‘ಅಶ್ವಿನಿ ನರ್ಸಿಂಗ್‌ ಹೋಂ’ ತೆರೆದಿದ್ದರು. ಅವರು ಈ ನರ್ಸಿಂಗ್‌ ಹೋಂ ಪ್ರಾರಂಭಿಸಿದ್ದು ಜನಸೇವೆಯ ಉದ್ದೇಶದಿಂದಲೇ ಹೊರತು ಹಣ ಮಾಡಲಲ್ಲ. ಸುದರ್ಶನ್‌ ನಿಜಕ್ಕೂ ಒಬ್ಬ ಬಲು ಅಪರೂಪದ ವೈದ್ಯರು.

ಕೆಲವು ವೃದ್ಧ ರೋಗಿಗಳು ಹೇಳಿದ್ದನ್ನೇ ಮತ್ತೆ ಮತ್ತೆ ಹೇಳುತ್ತಾ ತಮ್ಮ ಅಮೂಲ್ಯ ಸಮಯವನ್ನು ವ್ಯರ್ಥ ಮಾಡುತ್ತಿದ್ದರೂ, ಆ ಭಾವನೆಯ ಛಾಯೆಯನ್ನೂ ಕೂಡ ಮೊಗದಲ್ಲಿ ಹಾಯಬಿಡದೆ, ಅವರ ದೂರುಗಳನ್ನು ಅತಿ ಆಸಕ್ತಿಯಿಂದ ಅಲಿಸುತ್ತಾ ಸೂಕ್ತ ಸಮಾಧಾನ ಹೇಳುತ್ತಿದ್ದರು. ಇದರಿಂದ ಆ ರೋಗಿಗಳಿಗೆ ಡಾಕ್ಟರಿಗೆ ತಾವು ತುಂಬಾ ಆಪ್ತರೆಂಬುವ ಧನ್ಯತಾಭಾವ ಮೂಡುತ್ತಿತ್ತು.

ಆ ವಾರ್ಡಿನ ಕೊನೆಯ ಮಂಚದಲ್ಲಿದ್ದ ಮಂಜುನಾಥಯ್ಯನವರು ಡಾಕ್ಟರು ತಮ್ಮ ಬಳಿ ಬರುವುದನ್ನೇ ನಿರೀಕ್ಷಿಸುತ್ತಾ ಮಲಗಿದ್ದರು. ‘ಹೇಗಿದ್ದೀರಾ? ಮಂಜುನಾಥಯ್ಯನವರೇ, ನಿಮ್ಮ ಕೊನೆಯ ಮಗ ಅಮೆರಿಕಾದಿಂದ ಇಲ್ಲಿಗೆ ಬಂದ ಮೇಲೆ ನಿಮ್ಮ ಕಾಯಿಲೆ ಅರ್ಧ ವಾಸಿ ಆದ ಹಾಗಿದೆ’ ಎಂದು ಅವರನ್ನು ಹಾಸ್ಯ ಮಾಡಿದರು ಡಾಕ್ಟರ್‌.

ಶರಮಂಚದ ಮೇಲಿನ ಭೀಷ್ಮನಂತೆ ನೋವುಣ್ಣುತ್ತಾ ಮಲಗಿದ್ದ ಮಂಜುನಾಥಯ್ಯನವರ ತುಟಿಯ ಮೇಲೆ ಶುಷ್ಕ ನಗೆಯಾಂದು ಹಾದು ಹೋಯಿತು.

‘ಡಾಕ್ಟರೇ, ನಿಮಗೂ ನನ್ನ ಸ್ಥಿತಿ ತಮಾಷೆ ಅಗಿದೆಯೇ? ನಾನೊಂದು ಮಾತು ಕೇಳ್ತೀನಿ, ದಯವಿಟ್ಟು ನಡೆಸಿಕೊಡಿ. ಜನ್ಮಾಂತರದಲ್ಲೂ ನಾನು ನಿಮಗೆ ಋಣಿಯಾಗಿರ್ತೀನಿ’ ಎಂದರು ದೈನ್ಯದಿಂದ ಮಂಜುನಾಥಯ್ಯ.

ಡಾಕ್ಟರಿಗೆ ಈ ರೋಗಿ ತಮ್ಮಿಂದ ಬೇಡುತ್ತಾ ಇರುವ ಉಪಕಾರವೇನೆಂಬುದು ಗೊತ್ತಿತ್ತು. ಅದು ಆಗದ ಹೋಗದ ಮಾತೆಂಬುದೂ ಗೊತ್ತು. ಆದ್ದರಿಂದಲೇ ಹೆಚ್ಚು ಮಾತು ಬೆಳೆಸದೆ, ‘ಹೆಚ್ಚು ಯೋಚನೆ ಮಾಡಿ ಆಯಾಸ ಮಾಡಿಕೊಳ್ಳಬೇಡಿ, ಮಾತ್ರೆಗಳನ್ನೆಲ್ಲಾ ತೆಗೆದುಕೊಂಡಿರಿ ತಾನೇ?’ ಎಂದು ಔಪಚಾರಿಕವಾಗಿ ಕೇಳುತ್ತಾ ಆ ವಾರ್ಡಿನಿಂದ ಹೊರಬಿದ್ದರು.

***

ಮಂಜುನಾಥಯ್ಯನವರನ್ನು ಡಾ.ಸುದರ್ಶನ್‌ ಸುಲಭದಲ್ಲಿ ಮರೆಯಲಾರರು. ಏಕೆಂದರೆ ಅವರ ರೋಗದ ಚರಿತ್ರೆಯೇ ಹಾಗಿದೆ. ಎರಡು ವರ್ಷಗಳ ಹಿಂದೆ ಅವರು ಮೊದಲ ಬಾರಿಗೆ ಅಶ್ವಿನಿ ನರ್ಸಿಂಗ್‌ ಹೋಮಿನಲ್ಲಿ ದಾಖಲಾಗಿದ್ದರು.

ತಮ್ಮದೇ ಆದ ಸ್ವಂತ ಉದ್ಯಮ ಹೊಂದಿದ್ದು, ಸಾಕಷ್ಟು ಸ್ಥಿತಿವಂತರಾಗಿದ್ದರು ಮಂಜುನಾಥಯ್ಯನವರು. ಆರೋಗ್ಯವಂತರಾಗಿದ್ದು ಚಟುವಟಿಕೆಯಿಂದಿದ್ದ ಅವರಿಗೆ ಇದ್ದಕ್ಕಿದ್ದಂತೆ ಒಂದು ದಿನ ಕೈಕಾಲುಗಳಲ್ಲಿ ಸ್ವಲ್ಪ ನೋವು ಪ್ರಾರಂಭವಾಯಿತು. ವಾಯುನೋವಿರಬೇಕು ಎಂದು ಅವರು ಉದಾಸೀನದಿಂದಲೇ ಇದ್ದರು. ಆದರೆ ಆ ನೋವು ತೋಳು, ತೊಡೆ, ಸೊಂಟ, ಕುತ್ತಿಗೆ ಎಂದು ಇಡೀ ದೇಹವನ್ನೇ ವ್ಯಾಪಿಸಿಕೊಂಡಿತು.

ಹೆಜ್ಜೆಗಳನ್ನೂ ಎತ್ತಿಡಲೂ ಅಗದಂತಹ ಯಮನೋವು ಅದು. ಹೀಗಾದ ಮೇಲೆ ಮಂಜುನಾಥಯ್ಯ ತೀರಾ ಪರಾವಲಂಬಿ ಆಗಿಬಿಟ್ಟರು. ಮಲಮೂತ್ರ ವಿಸರ್ಜನೆಯೆಲ್ಲಾ ಮಲಗಿದ ಕಡೆಯೇ ಆಗಬೇಕಾಗಿತ್ತು. ಇಷ್ಟು ಸಾಲದೆಂಬಂತೆ ಮೈಮೇಲೆಲ್ಲಾ ಸಣ್ಣ ಸಣ್ಣ ಹುಣ್ಣುಗಳಾಗಿ ಕೀವು ತುಂಬತೊಡಗಿತು. ಅವರೇ ಸಹಿಸಲಾಗದಂತಹ ದುರ್ನಾತ.

ಇಂತಹ ಸ್ಥಿತಿಯಲ್ಲಿ ಸುದರ್ಶನರ ಬಳಿಗೆ ಬಂದಿದ್ದರು ಮಂಜುನಾಥಯ್ಯ. ಅವರನ್ನು ಸುದರ್ಶನ್‌ ಎಲ್ಲಾ ತರಹದ ತಪಾಸಣೆಗಳಿಗೆ ಒಳಪಡಿಸಿದ್ದರು. ಆದರೆ ಯಾವುದರಿಂದಲೂ ಅವರಿಗೆ ಬಂದಿರುವ ರೋಗವೇನೆಂಬುದು ಮಾತ್ರ ಪತ್ತೆಯಾಗಲಿಲ್ಲ. ಸುದರ್ಶನ್‌ ತಮ್ಮ ಅಷ್ಟೂ ವರ್ಷಗಳ ವೈದ್ಯಕೀಯ ಸೇವೆಯ ಅವಧಿಯಲ್ಲಿ ಇಂತಹ ರೋಗಿಯನ್ನು ನೋಡುತ್ತಿರುವುದು ಇದೇ ಮೊದಲು. ಅವರ ಜಾಣ್ಮೆ, ಕೌಶಲ್ಯ, ಅನುಭವಗಳಿಗೇ ಮಂಜುನಾಥಯ್ಯನವರ ಕಾಯಿಲೆ ಸವಾಲಾಗಿ ಹೋಗಿತ್ತು. ತಮಗೆ ತಿಳಿದ ಬೇರೆ ಕೆಲವು ನುರಿತ ತಜ್ಞರನ್ನು ಕರೆಸಿಕೊಂಡು ಮಂಜುನಾಥಯ್ಯನವರನ್ನು ಅವರಲ್ಲಿಯೂ ಪರೀಕ್ಷೆಗೊಡ್ಡಿದ್ದರು. ಆದರೆ ಯಾವುದರಿಂದಲೂ ಪ್ರಯೋಜನ ದೊರೆತಿರಲಿಲ್ಲ.

ಕೊನೆಗೆ ಕೆಲವು ತಾತ್ಕಾಲಿಕ ನೋವು ನಿವಾರಕಗಳನ್ನು, ಶಕ್ತಿದಾಯಕ ಟಾನಿಕ್‌ಗಳನ್ನು ಮಾತ್ರ ಬರೆದುಕೊಟ್ಟು ಮಂಜುನಾಥಯ್ಯನವರನ್ನು ಮನೆಗೆ ಕಳಿಸಿಬಿಟ್ಟಿದ್ದರು. ಕಳಿಸುವ ಮುನ್ನ ಮಂಜುನಾಥಯ್ಯನವರ ಪತ್ನಿ ಚಂದ್ರಮತಿಯಲ್ಲಿ ಅವರ ಪತಿಯ ಕಾಯಿಲೆಯನ್ನು ಗುಣಪಡಿಸುವಲ್ಲಿ ತಮ್ಮ ವೈಫಲ್ಯವನ್ನು ಪ್ರಾಮಾಣಿಕವಾಗಿ ಒಪ್ಪಿಕೊಂಡು, ಅವರನ್ನು ಬೇರೆ ಕಡೆ ಚಿಕಿತ್ಸೆಗೆ ಕರೆದುಕೊಂಡು ಹೋಗುವುದಾದಲ್ಲಿ ತಮ್ಮ ಅಭ್ಯಂತರ ಏನಿಲ್ಲವೆಂದು ಹೇಳಿದ್ದರು.

ಚಂದ್ರಮತಿ ಕಾಲೇಜೊಂದರಲ್ಲಿ ಉಪನ್ಯಾಸಕಿ. ಸೂಕ್ಷ್ಮಮತಿಯ ಹೆಂಗಸು. ಅವರ ಜೀವನದಲ್ಲಿ ಸುಖ ಸಮೃದ್ಧಿಗಳಿಗೇನೂ ಕೊರತೆ ಇರಲಿಲ್ಲ. ಮಂಜುನಾಥಯ್ಯನವರು ತಮ್ಮ ಬುದ್ಧಿಬಲ, ಪರಿಶ್ರಮಗಳಿಂದ ಅಪಾರ ಸಂಪತ್ತನ್ನು ಕೂಡಿಸಿದ್ದರು. ಉನ್ನತ ಪದವಿಗಳಲ್ಲಿರುವ ಮೂರುಜನ ಗಂಡುಮಕ್ಕಳು ಅವರಿಗೆ. ಸೊಸೆಯರು, ಮೊಮ್ಮಕ್ಕಳಿಂದ ತುಂಬಿದ ಸುಂದರ ಸಂಸಾರ ಅವರದಾಗಿತ್ತು. ಬದುಕಿನ ಸಮಸ್ತ ಸುಖಗಳನ್ನೂ ಹನಿಹನಿಯಾಗಿ ಸವಿಯುತ್ತಿದ್ದಾಗಲೇ ಮಂಜುನಾಥಯ್ಯನವರ ಅನಾರೋಗ್ಯ ಅವರ ಮೇಲೆ ಸಿಡಿಲಿನಂತೆ ಬಂದೆರಗಿತ್ತು.

ತಮ್ಮ ಪ್ರೀತಿಯ ಸಂಗಾತಿಯನ್ನು ಮತ್ತೆ ಮೊದಲಿನಂತೆ ಆರೋಗ್ಯವಂತರನ್ನಾಗಿ ನೋಡಬೇಕೆಂದು ಬೇಕಾದಷ್ಟು ಶ್ರಮಿಸಿದ್ದರು. ಡಾ. ಸುದರ್ಶನ್‌ ಶಿಫಾರಸು ಮಾಡಿದ್ದ ಮತ್ತೆ ಕೆಲವು ವೈದ್ಯರುಗಳಲ್ಲಿ ಪತಿಯನ್ನು ಕರೆದೊಯ್ದಿದ್ದರು. ಹಗಲು ರಾತ್ರಿಗಳೆನ್ನದೆ, ನಿದ್ರೆ ಆಹಾರವಿಲ್ಲದೆ ಊರೂರು ಸುತ್ತಾಡಿದ್ದರು. ಆದರೆ ಎಲ್ಲಾ ಕಡೆಯೂ ಅವರಿಗೆ ನಿರಾಸೆಯೇ ಕಟ್ಟಿಟ್ಟ ಬುತ್ತಿಯಾಗಿತ್ತು. ಎಲ್ಲಾ ಪ್ರಯತ್ನಗಳೂ ಮುಗಿದ ನಂತರ – ‘ಇನ್ನು ಯಾವ ಆಸ್ಪತ್ರೆಯೂ ಬೇಡ. ಚಿಕಿತ್ಸೆಯೂ ಬೇಡ. ಬದುಕಿರುವವರೆಗೂ ನನ್ನ ಯಜಮಾನರು ನನ್ನ ಬಳಿಯಲ್ಲಿಯೇ ಇರಲಿ’ ಎಂದು ಮಂಜುನಾಥಯ್ಯನವರನ್ನು ಮನೆಯಲ್ಲೇ ಇರಿಸಿಕೊಂಡು ತಮ್ಮ ಕಣ್ಣಿನಂತೆ ಕಾಪಾಡಿಕೊಂಡು ಬಂದಿದ್ದರು.

ಎರಡು ಮೂರು ತಿಂಗಳಿಗೊಮ್ಮೆ ನಗರದ ಹೊರವಲಯದಲ್ಲಿದ್ದ ತಮ್ಮ ಬೃಹತ್‌ ಬಂಗಲೆಗೆ ಸುದರ್ಶನ್‌ ಅವರನ್ನು ವಿನಂತಿಸಿ, ಕರೆಸಿಕೊಳ್ಳುತ್ತಿದ್ದರು. ಸುದರ್ಶನ್‌ ರೋಗಿಯನ್ನು ಪರೀಕ್ಷಿಸಿ ಇಂಜೆಕ್ಷನ್‌, ಮಾತ್ರೆಗಳನ್ನು ಕೊಟ್ಟು ರೋಗಿಯ ನೋವು ಹತೋಟಿಯಲ್ಲಿರುವಂತೆ, ಸಹನೀಯವಾಗಿರುವಂತೆ ನೋಡಿಕೊಳ್ಳುತ್ತಿದ್ದರು. ಇದಕ್ಕಿಂತ ಹೆಚ್ಚಿನದು ಅವರಿಂದ ಸಾಧ್ಯವಾಗಿರಲಿಲ್ಲ.

ಪ್ರತಿಬಾರಿ ಅವರ ಮನೆಗೆ ಹೋದಾಗಲೂ ಸುದರ್ಶನರಿಗೆ ನರಕದರ್ಶನವಾದಂತಾಗುತ್ತಿತ್ತು. ಮಂಜುನಾಥಯ್ಯನವರ ಕೋಣೆಯನ್ನೆಲ್ಲಾ ವ್ಯಾಪಿಸಿದ ದುರ್ಗಂಧವನ್ನು ನಿವಾರಿಸಲು ಅಲ್ಲಿ ಉರಿಸಿರುತ್ತಿದ್ದ ಸುಗಂಧ ಬತ್ತಿಗಳಿಂದಲೂ ಸಾಧ್ಯವಾಗುತ್ತಿರಲಿಲ್ಲ. ಮೈಯ ಅಂಗುಲ ಅಂಗುಲದಲ್ಲೂ ಸೂಜಿಯಿಂದ ಚುಚ್ಚಿದಂತೆ ನೋವು ಅನುಭವಿಸುತ್ತಿದ್ದ ಅವರು ವಿಕಾರವಾಗಿ ಕಿರುಚಾಡುತ್ತಿದ್ದರು. ಇದನ್ನೆಲ್ಲಾ ಪ್ರತಿದಿನವೂ ಅನಿವಾರ್ಯವಾಗಿ ಅನುಭವಿಸುತ್ತಿದ್ದ ಅವರ ಕುಟುಂಬದ ಯಾರೊಬ್ಬರ ಮುಖದಲ್ಲೂ ಜೀವಕಳೆಯೇ ಇದ್ದಂತೆ ಅನಿಸುತ್ತಿರಲಿಲ್ಲ ಸುದರ್ಶನರಿಗೆ.

ಇದೇ ರೀತಿ ಎರಡು ವರ್ಷಗಳು ಮಂಜುನಾಥಯ್ಯನವರನ್ನು ಮನೆಯಲ್ಲೇ ಇರಿಸಿ ಚಿಕಿತ್ಸೆ ನೀಡುತ್ತಿದ್ದರು. ಈಗ ಎರಡು ವಾರಗಳ ಹಿಂದೆ ಅವರ ಗಂಟಲಿನಲ್ಲಿ ಏನೋ ತೊಂದರೆಯಾಗಿ ನೀರು, ಆಹಾರ ಏನೂ ಇಳಿಯದಂತಾದಾಗ ಪುನಃ ಅವರನ್ನು ಸುದರ್ಶನರ ನರ್ಸಿಂಗ್‌ ಹೋಂಗೆ ತಂದು ಸೇರಿಸಿದ್ದರು. ಅವರ ಅನ್ನನಾಳದಲ್ಲಿದ್ದ ಅಡೆತಡೆಯನ್ನು ಶಸ್ತ್ರಚಿಕಿತ್ಸೆಯ ಮೂಲಕ ನಿವಾರಿಸಿದ ಮೇಲೆ ಈಗೆರಡು ದಿನದಿಂದ ದ್ರವಾಹಾರವನ್ನು ನಳಿಕೆಯ ಸಹಾಯ ಇಲ್ಲದೆ ನೀಡಲು ಸಾಧ್ಯವಾಗಿತ್ತು. ಇನ್ನು ನಾಲ್ಕುದಿನಗಳ ನಂತರ ಮೊದಲಿನಂತೆ ಗಟ್ಟಿ ಆಹಾರವನ್ನು ಸೇವಿಸಬಹುದೆಂದೂ, ಅಮೇಲೆ ಮನೆಗೆ ಕಳಿಸುವುದಾಗಿಯೂ ಸುದರ್ಶನ್‌ ಹೇಳಿದ ಮೇಲೆಯೇ ಪ್ರಾರಂಭವಾದದ್ದು ಮಂಜುನಾಥಯ್ಯನವರ ವಿಚಿತ್ರ ಕೋರಿಕೆ.

ಎರಡು ವರ್ಷಗಳಿಂದ ಸತತವಾಗಿ ನೋವನುಭವಿಸುತ್ತಿದ್ದರೂ ಮಂಜುನಾಥಯ್ಯನವರ ವಿಚಾರಶಕ್ತಿ , ಬುದ್ಧಿಶಕ್ತಿಗಳೇನೂ ಕುಂಠಿತವಾಗಿರಲಿಲ್ಲ. ಆ ನೋವಿನಿಂದ ಮೈಮೇಲಿನ ಪ್ರಜ್ಞೆ ತಪ್ಪಿದ್ದರಾದರೂ ಅವರು ಎಷ್ಟೋ ಸುಖಿಯಾಗಿರುತ್ತಿದ್ದರೇನೋ. ಬೆಂಬಿಡದ ಘೋರ ನೋವಿನಿಂದಾಗಿ ಅವರಿಗೆ ನಿದ್ರೆ ಕೂಡಾ ಬರುತ್ತಿರಲಿಲ್ಲ. ಎಷ್ಟೇ ನಿದ್ರಾಕಾರಕಗಳನ್ನು ಕೊಟ್ಟರೂ ಅದರಿಂದ ಫಲವಿರಲಿಲ್ಲ.

ಡಾಕ್ಟರು ನಾಲ್ಕು ದಿನಗಳ ನಂತರ ಡಿಸ್‌ಚಾರ್ಜ್‌ ಮಾಡುತ್ತೇನೆಂದು ಹೇಳಿದಾಗಿನಿಂದ ಅವರ ಚಿಂತೆ ಹೆಚ್ಚಾಗಿತ್ತು. ಮನೆಗೆ ಹೋಗಿ ನಾನು ಏನು ಮಾಡುವುದಿದೆ? ಈ ನೋವಿನ ಬೆಟ್ಟವನ್ನು ಹೊತ್ತು ನಾನು ಅಲ್ಲಿ ಏಕಾಂಗಿಯಾಗಿ ಇರುವುದಾದರೂ ಹೇಗೆ? ಅದರಿಂದ ಲಾಭವಾದರೂ ಏನು? ಎಂದು ಅವರ ಮನಸ್ಸು ರೋದಿಸುತ್ತಿತ್ತು.

ಮನೆಯಲ್ಲಿ ಮಂಜುನಾಥಯ್ಯನವರ ಮೇಲೆ ಯಾರಿಗೂ ತಾತ್ಸಾರ ಮನೋಭಾವವಿರದಿದ್ದರೂ, ಎಲ್ಲರಿಗೂ ಇವರಲ್ಲಿ ಪ್ರೀತಿ, ಕನಿಕರಗಳಿದ್ದರೂ ಎಷ್ಟೆಂದು ಅವರು ಇವರ ಮುಂದೆಯೇ ಕುಳಿತಿರಲು ಸಾಧ್ಯ? ಇವರ ನೋವನ್ನು ಇವರ ಹೊರತಾಗಿ ಮತ್ತೊಬ್ಬರು ಹಂಚಿಕೊಳ್ಳಲಾರರಲ್ಲ! ಚಂದ್ರಮತಿಯೂ ಬಹುಕಾಲದ ರಜೆಯ ನಂತರ ಮತ್ತೆ ತಮ್ಮ ಉದ್ಯೋಗವನ್ನು ಮುಂದುವರೆಸಿದ್ದರು. ಅವರಿಗೇನೂ ಅದರಿಂದ ಬರುವ ಹಣದ ಅಗತ್ಯ ಇರದಿದ್ದರೂ ಮನಸ್ಸಿನ ಕೊರಗನ್ನು ಮರೆಯಲು, ಮನೆಯಿಂದ ಸ್ವಲ್ಪ ಕಾಲವಾದರೂ ಹೊರಗಿರಲು ಅವರಿಗೆ ಆ ಉದ್ಯೋಗ ಒಂದು ಆಸರೆಯಾಗಿತ್ತು.

ಎಲ್ಲರೂ ಅವರವರ ಕೆಲಸ ಕಾರ್ಯಗಳಲ್ಲಿ ನಿರತರಾಗಿದ್ದಾಗ ಮಂಜುನಾಥಯ್ಯ ತಮ್ಮ ವಿಶಾಲವಾದ ಕೋಣೆಯಲ್ಲಿ ಜೀವ ಹಿಂಡುವ ಈ ನೋವಿನ ಸಂಗಾತಿಯಾಡನೆ ನವೆದು ಹೋಗುತ್ತಿದ್ದರು. ಮತ್ತೆ ಮನೆಗೆ ಹೋಗಿ ಆ ಕೋಣೆಯಲ್ಲಿ ಕೊಳೆಯಬೇಕಾದ ಕಲ್ಪನೆಯೇ ಅವರಿಗೆ ನಡುಕ ತರಿಸುತ್ತಿತ್ತು.

ಸುದರ್ಶನ್‌ ಆದಿನ ಬಂದಿದ್ದಾಗ ಆರ್ತರಾಗಿ ಹೇಳಿದ್ದರು ಮಂಜುನಾಥಯ್ಯ-

‘ಡಾಕ್ಟರೇ, ನನ್ನ ಸ್ಥಿತಿ ನೀವೇ ನೋಡ್ತಾ ಇದೀರಾ. ನಾನು ಈ ರೀತಿ ಬದುಕಿರೋದನ್ನು ಬದುಕು ಅಂತೀರಾ? ನಾನು ಈ ಭಯಂಕರ ಯಾತನೆಯನ್ನು ಸಹಿಸಿಕೊಳ್ಳುತ್ತಲೇ ನೂರುವರ್ಷ ಇದ್ದೇಬಿಡ್ತೀನೇನೋ ಅಂತ ನನಗೆ ಭಯವಾಗ್ತಿದೆ. ನನ್ನನ್ನು ಹೇಗಾದರೂ ಮಾಡಿ ಸಾಯಿಸಿಬಿಡಿ ಡಾಕ್ಟರ್‌. ಅದಕ್ಕೆ ಸಂಬಂಧಿಸಿದ ಕಾಗದಪತ್ರಗಳಲ್ಲಿ ನಾನೇ ಸಹಿ ಹಾಕಿ ಕೊಟ್ಟು, ನಿಮಗೆ ಯಾವ ತೊಂದರೆಯೂ ಆಗದ ಹಾಗೆ ವ್ಯವಸ್ಥೆ ಮಾಡ್ತೀನಿ.’ ತಮ್ಮ ಎರಡು ಕೈಗಳನ್ನೂ ಹಿಡಿದು ದೀನರಾಗಿ ಯಾಚಿಸುತ್ತಿರುವ ಮಂಜುನಾಥಯ್ಯನವರನ್ನು ಕಂಡು ಸುದರ್ಶನರ ಕಣ್ಣೂ ಹನಿಗೂಡಿತ್ತು.

ಮಂಜುನಾಥಯ್ಯನವರು ಹೇಳಿದ್ದು ಸರಿಯಾಗಿಯೇ ಇತ್ತು. ಅವರು ಇಷ್ಟು ದಾರುಣವಾದ ಬಾಧೆ ಅನುಭವಿಸುತ್ತಿದ್ದರೂ ಅವರ ಜೀವಕ್ಕೆ ಯಾವುದೇ ರೀತಿಯಲ್ಲಿಯೂ ಧಕ್ಕೆಯಾದಗಿರಲಿಲ್ಲ. ಅವರ ಹೃದಯ, ಶ್ವಾಸಕೋಶಗಳು, ಮೂತ್ರಪಿಂಡಗಳು, ಜೀರ್ಣಾಂಗ ವ್ಯವಸ್ಥೆ ಯಾವುದೇ ಆರೋಗ್ಯವಂತ ವ್ಯಕ್ತಿಯಲ್ಲಿರುವಂತೆಯೇ ಅತ್ಯಂತ ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿದ್ದವು. ಸದ್ಯಕ್ಕೇನೂ ಅವರು ಸಾಯುವಂತಿರಲಿಲ್ಲ. ಮಂಜುನಾಥಯ್ಯನವರು ಭಯಪಟ್ಟಂತೆ ಅವರು ಹಾಸಿಗೆಯ ಮೇಲೆ ಹೀಗೆಯೇ ನವೆಯುತ್ತಾ ಹತ್ತಾರು ವರ್ಷ ಬದುಕುವ ಸಾಧ್ಯತೆಯೇ ಹೆಚ್ಚಾಗಿತ್ತು.

ಆದರೆ ವೈದ್ಯರಾಗಿ ಇದನ್ನೆಲ್ಲಾ ಸುಮ್ಮನೆ ಅಸಹಾಯಕರಾಗಿ ನೋಡುವ ಬದಲು ತಾವಾದರೂ ಏನು ಮಾಡುವ ಹಾಗಿದೆ? ‘ಮರ್ಸಿ ಕಿಲ್ಲಿಂಗ್‌’ಗೆ ವಿದೇಶಗಳಲ್ಲಿ ಅನುಮತಿ ಇರುವ ಹಾಗೆ ನಮ್ಮಲ್ಲೂ ಇರಬಾರದಿತ್ತೇ? ಎಂದು ಮರುಗುವುದರ ಹೊರತಾಗಿ.

ಔಟ್‌ ಪೇಷಂಟ್‌ ವಿಭಾಗದಲ್ಲಿದ್ದ ರೋಗಿಗಳನ್ನೆಲ್ಲ ಪರೀಕ್ಷಿಸಿ ಕಳಿಸಿದ ಮೇಲೆ ವಿಶ್ರಾಂತಿಗೆಂಬಂತೆ ಕಣ್ಣುಗಳನ್ನು ಮುಚ್ಚಿಕೊಂಡು ಮೇಜಿನ ಮೇಲೆ ತಲೆಯೂರಿದ್ದರು ಸುದರ್ಶನ್‌. ಅಷ್ಟರಲ್ಲಿ ಅಲ್ಲಿಗೆ ಬಂದ ಸಿಸ್ಟರ್‌ ಭಾರತಿ-

‘ಡಾಕ್ಟರ್‌, ಎಂಟನೆ ನಂಬರ್‌ ವಾರ್ಡಿನಲ್ಲಿರುವ ಮಂಜುನಾಥಯ್ಯನವರ ಪತ್ನಿ ಚಂದ್ರಮತಿ ನಿಮ್ಮೊಡನೆ ಮಾತನಾಡಬೇಕಂತೆ. ನೀವು ರಿಲ್ಯಾಕ್ಸ್‌ ಮಾಡುವುದಾದರೆ ಅವರಿಗೆ ಆಮೇಲೆ ನೋಡಲು ಹೇಳುತ್ತೇನೆ’ ಎಂದಳು.

‘ಬೇಡ ಈಗಲೇ ಬರಲು ಹೇಳು’ ಎಂದು ಮುಖವನ್ನು ಕರವಸ್ತ್ರದಿಂದ ಒತ್ತಿಕೊಂಡು ಸರಿಯಾಗಿ ಕುಳಿತರು

ಚಂದ್ರಮತಿ ಒಳಬಂದರು. ಈಚೆಗೆ ಗಂಡನ ಅನಾರೋಗ್ಯದಿಂದ ಕಂಗೆಟ್ಟಿದ್ದರೂ ಆಕೆ ಸುಂದರಿಯೆಂದು ಧಾರಾಳವಾಗಿ ಹೇಳಬಹುದಿತ್ತು. ಹೊಂಬಣ್ಣದ ಮೈಕಾಂತಿ, ಎತ್ತರದ ನಿಲುವು, ಮುಖದಲ್ಲಿ ತುಂಬಿತುಳುಕುತ್ತಿದ್ದ ಪ್ರೌಢತೆಯಿಂದ ಅವರು ನೋಡುಗರಲ್ಲಿ ಗೌರವದ ಭಾವ ಮೂಡಿಸುತ್ತಿದ್ದರು. ಚಂದ್ರಮತಿ ಡಾಕ್ಟರರ ಮುಂದಿದ್ದ ಕುರ್ಚಿಯಲ್ಲಿ ಅವರ ಅಪ್ಪಣೆ ಪಡೆದು ಕುಳಿತುಕೊಂಡರು.

‘ಡಾಕ್ಟರೇ, ನನ್ನ ಯಜಮಾನರನ್ನು ಈ ಗುರುವಾರ ಮನೆಗೆ ಕಳಿಸುವುದಾಗಿ ಹೇಳಿದಿರಂತೆ, ಹೌದೇ?’ ಎಂದು ಮಾತಿಗೆ ಪೀಠಿಕೆ ಹಾಕಿದರು ಚಂದ್ರಮತಿ.

‘ಹೌದು, ಅವರು ಈಗ ಮೊದಲಿನಂತೆ ಯಾವುದೇ ಆಹಾರವನ್ನು ಸೇವಿಸಬಹುದು. ಆದರೆ ಅವರ ನೋವು ಮಾತ್ರ ಕಡಿಮೆಯಾಗುವಂತಹದಲ್ಲ. ಅದಕ್ಕೂ ಸಾಕಷ್ಟು ಉಪಶಮನದ ಬೇರೆ ಬೇರೆ ಮಾತ್ರೆಗಳನ್ನು ಬರೆದುಕೊಡುತ್ತೀನಿ. ತೆಗೆದುಕೊಳ್ಳಿ. ನನ್ನನ್ನು ಕ್ಷಮಿಸಿ, ಈ ವಿಷಯದಲ್ಲಿ ಅವರಿಗೆ ನಾನು ಹೆಚ್ಚೇನೂ ಮಾಡಲಾರೆ’ ಎಂದರು ಸುದರ್ಶನ್‌ ತಮ್ಮ ಕನ್ನಡಕವನ್ನು ಸರಿಪಡಿಸಿಕೊಳ್ಳುತ್ತಾ.

‘ಅದೆಲ್ಲ ಸರಿ ಡಾಕ್ಟರ್‌. ಆದರೆ ಅವರು ಈ ವೇದನೆಯಿಂದ ಕ್ಷಣಕ್ಷಣವೂ ಸಾಯುವುದನ್ನು ನನ್ನಿಂದ ನೋಡಲಾಗುವುದಿಲ್ಲ. ನೀವು ಮನಸ್ಸು ಮಾಡಿದರೆ ಅವರನ್ನು ಈ ಯಾತನೆಯಿಂದ ಮುಕ್ತಗೊಳಿಸಬಹುದು’ ಎಂದರು ಕೊಂಚ ತಡವರಿಸುತ್ತಲೇ ಚಂದ್ರಮತಿ.

‘ನಿಮ್ಮ ಮಾತಿನ ಅರ್ಥ?’ ಅರ್ಥವಾದಂತೆಯೇ ಪ್ರಶ್ನಿಸಿದರು ಡಾಕ್ಟರ್‌.

‘ನಿಮಗೆ ತಿಳಿಯದುದು ಇದರಲ್ಲಿ ಏನಿದೆ ಡಾಕ್ಟರೇ? ಅವರನ್ನು ಯಾವುದಾದರೂ ಇಂಜೆಕ್ಷನ್‌ ಕೊಟ್ಟು ಮುಗಿಸಿಬಿಡಿ. ಬದುಕಿನಲ್ಲಂತೂ ಸುಖ ಕಾಣದ ಆ ಜೀವಕ್ಕೆ ಸಾವಿನಿಂದಾದರೂ ನೆಮ್ಮದಿ ದೊರೆಯಲಿ.’

ಚಂದ್ರಮತಿಯ ಮಾತಿನ ಅರ್ಥ ನಿಧಾನವಾಗಿ ಮೆದುಳಿಗೆ ಹೊಳೆದಂತೆ ತಟಕ್ಕನೆ ತಲೆ ಎತ್ತಿ ನೋಡಿದರು ಸುದರ್ಶನ್‌. ಆ ನೋಟದ ಬಿರುಸಿಗೆ ತತ್ತರಿಸಿಹೋದರು ಚಂದ್ರಮತಿ. ಆದರೂ ಭಂಡಧೈರ್ಯದಿಂದ- ‘ನಿಮ್ಮ ಮೇಲೆ ಯಾರಿಗೂ ಅನುಮಾನ ಬರದ ಹಾಗೆ ನಾನು ನೋಡಿಕೊಳ್ತೀನಿ’ ಎಂದರು.

ಸುದರ್ಶನ್‌ ತಮ್ಮ ಕುರ್ಚಿಯಿಂದ ರಭಸವಾಗಿ ಮೇಲೆದ್ದು, ‘ನೀವು ಹೇಳುತ್ತಿರುವುದೇನು ಮಿಸೆಸ್‌ ಮಂಜುನಾಥಯ್ಯನವರೇ ? ಒಂದು ವೇಳೆ ನಾನೇನಾದರೂ ನೀವು ಹೇಳಿದಂತೆ ಮಾಡಿದರೆ ಅದರ ಪರಿಣಾಮವೇನಾಗುತ್ತದೆ ಗೊತ್ತೇ? ಕೊಲೆಯ ಆರೋಪ ಹೊತ್ತು ನಾನು ಜೈಲಿಗೆ ಹೋಗಬೇಕಾಗುತ್ತದೆ. ಇಷ್ಟು ವರ್ಷ ನಾನು ಈ ವೃತ್ತಿಯಲ್ಲಿ ಗಳಿಸಿದ ಘನತೆ, ಗೌರವಗಳೆಲ್ಲಾ ಮಣ್ಣುಪಾಲಾಗಿ ಹೋಗುವುದಷ್ಟೇ ಅಲ್ಲ, ಇದಕ್ಕೆ ಸಂಬಂಧಿಸಿದ ಕಾನೂನು ನನ್ನನ್ನು ಈ ವೃತ್ತಿಯನ್ನೇ ಮುಂದುವರಿಸದಂತೆ ಪ್ರತಿಬಂಧಕ ತರಬಹುದು.’

ಎಂದೂ ಯಾರಿಗೂ ಒರಟಾಗಿ ಮಾತನಾಡದ ಸುದರ್ಶನ್‌ ಚಂದ್ರಮತಿಯ ಮೇಲೆ ಬೆಂಕಿಯ ಮಳೆಯನ್ನೇ ಕರೆದರು. ಒಂದು ನಿಮಿಷ ಸುಮ್ಮನಿದ್ದು-

‘ನನಗೆ ಹೇಳುವ ನೀವೇ ಏಕೆ ಈ ಕೆಲಸ ಮಾಡಬಾರದಿತ್ತು? ಹೇಗೂ ಊರಾಚೆಯ ನಿರ್ಜನ ಪ್ರದೇಶದಲ್ಲಿರುವ ಬಂಗಲೆಯಲ್ಲಿ ನಿಮ್ಮ ಅಧೀನದಲ್ಲೇ ಇರುವ ಮಂಜುನಾಥಯ್ಯನವರಿಗೆ ಕೊಡುವ ಹಾಲಿನಲ್ಲೋ, ನೀರಿನಲ್ಲೋ ವಿಷ ಬೆರೆಸಿ ಕುಡಿಸಿದ್ದರೆ ಅವರ ಕಥೆ ಮುಗಿದೇ ಹೋಗಿರುತ್ತಿತ್ತಲ್ಲಾ?’ ಎಂದರು ವ್ಯಂಗ್ಯವಾಗಿ ವೈದ್ಯರು.

ಕ್ಷಣಕಾಲ ಇಬ್ಬರೂ ಏನೂ ಮಾತನಾಡಲಿಲ್ಲ . ಸುದರ್ಶನರಿಗೆ ತಮ್ಮ ಮಾತು ಅಗತ್ಯಕ್ಕಿಂತ ಹೆಚ್ಚು ಬಿರುಸಾಯಿತು ಅನ್ನಿಸಿತು. ಚಂದ್ರಮತಿಯ ಕಣ್ಣಾಲಿಗಳು ಕಂಬನಿಯ ಕೊಳಗಳಾಗುತ್ತಿರುವುದನ್ನು ಗಮನಿಸಿ ತಮ್ಮನ್ನು ತಾವು ಸಾವರಿಸಿಕೊಂಡು ಸಂತೈಸುವ ದನಿಯಲ್ಲಿ-

‘ಐಯಾಮ್‌ ವೆರಿ ಸ್ಸಾರಿ, ನಿಮ್ಮ ಫೀಲಿಂಗ್ಸ್‌ ನನಗೆ ಅರ್ಥ ಆಗುತ್ತದೆ. ಇಷ್ಟು ವರ್ಷ ಪ್ರೇಮದಿಂದ ಒಡನಾಡಿದ ಪತಿಯನ್ನು ಕೊಲ್ಲುವಂತೆ ಕೇಳಿಕೊಳ್ಳುತ್ತಿರುವ ನಿಮ್ಮ ಮನಸ್ಸು ಅದೆಷ್ಟು ಘಾಸಿಗೊಂಡಿದೆ ಎಂದು ನಾನು ಊಹಿಸಬಲ್ಲೆ’

‘………..’

‘ಆದರೆ ಪ್ರತಿಯಾಂದು ಕೆಲಸಕ್ಕೂ ಒಂದು ನೀತಿ ನಿಯಮವಿರುತ್ತದೆ. ಈ ಕೆಲಸ ನಿಮ್ಮಿಂದ ಹೇಗೆ ಸಾಧ್ಯವಿಲ್ಲವೋ ನನ್ನಿಂದಲೂ ಅದು ಸಾಧ್ಯವಿಲ್ಲ. ನೀವು ವಿಧಿಯನ್ನು ನಂಬುವವರು ಅಲ್ಲವೇ? ಮಂಜುನಾಥಯ್ಯನವರನ್ನು ಅವರ ಹಣೆಯಬರಹಕ್ಕೆ ಬಿಟ್ಟು ಬಿಡಿ. ಅವರ ಮೃತ್ಯು ವಿಧಿ ಬರೆದಂತೆಯೇ ಬರಲಿ. ಅದು ನಮ್ಮಿಂದ ಸಂಭವಿಸುವುದು ಬೇಡ. ನಿಮಗೆ ಈ ಘೋರವನ್ನು ನೋಡಲು ಕಷ್ಟವಾಗಬಹುದು. ಆದರೆ ಇಂತಹ ಕಷ್ಟಗಳು ಬಂದಾಗ ಕಲ್ಲಾಗಿರುವುದೇ ಈ ಜೀವನದ ಮರ್ಮ’ ಎಂದು ನಿಧಾನವಾಗಿ ವೇದಾಂತಿಯಂತೆ ನುಡಿದರು.

ಚಂದ್ರಮತಿ ಸೆರಗಿನಿಂದ ಕಂಬನಿ ಒರೆಸಿಕೊಂಡು- ‘ಬರ್ತೀನಿ ಡಾಕ್ಟರ್‌, ನನ್ನಿಂದ ನಿಮಗೆ ತುಂಬಾ ತೊಂದರೆಯಾಯಿತು, ಮತ್ತೆ ಭೇಟಿಯಾಗೋಣ’ ಎಂದು ಅಲ್ಲಿಂದ ಎದ್ದು ಸರಸರ ನಡೆದು ಕಣ್ಮರೆಯಾದರು.

ರಾತ್ರಿ ಹನ್ನೊಂದು ಹೊಡೆದಿದ್ದರೂ ಭಗವದ್ಗೀತೆಯನ್ನು ಕೈಯಲ್ಲಿ ಹಿಡಿದು ಕೂತಿದ್ದರು ಸುದರ್ಶನ್‌. ಈಚೆಗೆ ಅವರಿಗೆ ಇದೊಂದು ಪ್ರೀತಿಯ ಹವ್ಯಾಸವಾಗಿ ಹೋಗಿತ್ತು. ದಿನದಿನವೂ ತಮ್ಮ ವೃತ್ತಿಕ್ಷೇತ್ರದಲ್ಲಿ ಸಾವುನೋವುಗಳನ್ನು ಧಾರಾಳವಾಗಿ ಕಂಡು ಅಶಾಂತಿಯ ಕುಂಡವಾಗಿ ಹೋಗುತ್ತಿದ್ದ ಅವರ ಹೃದಯಕ್ಕೆ ಗೀತೆ ಅಮೃತಸಿಂಚನ ಮಾಡುತ್ತಿತ್ತು. ಹಾಲಿನ ಲೋಟವನ್ನು ಅವರ ಮುಂದಿನ ಟೀಪಾಯಿಯ ಮೇಲಿಟ್ಟ ಸುದರ್ಶರನ ಪತ್ನಿ ವೈಜಯಂತಿ ಗಂಡನ ಚಿಂತಾಕ್ರಾಂತ ಮುಖವನ್ನು ಕಂಡು ಏನೊಂದೂ ಮಾತಾಡದೆ ಅಲ್ಲಿಂದ ಮೆಲ್ಲನೆ ಸರಿದುಹೋದರು. ಪತಿಯ ಈ ಪರಿ ಆಕೆಗೆ ಹೊಸದೇನಲ್ಲವಲ್ಲ?

ಸುದರ್ಶನರ ಕೈಯಲ್ಲಿ ಪುಸ್ತಕವಿದ್ದರೂ ಅವರ ಮನಸ್ಸು ಮಾತ್ರ ಅದರಲ್ಲಿ ತೊಡಗಿರಲಿಲ್ಲ. ಸುಖದುಃಖಗಳನ್ನು ಸಮಾನವಾಗಿ ಸ್ವೀಕರಿಸಿ ಸ್ಥಿತಪ್ರಜ್ಞನಾಗಿರುವುದು ನನ್ನಂತಹ ಹುಲುಮಾನವನಿಗೆ ಸಾಧ್ಯವಿಲ್ಲವೋ ಪರಮಾತ್ಮ! ಎಂದುಕೊಳ್ಳುತ್ತಾ ಪುಸ್ತಕ ತೆಗೆದಿಟ್ಟರು. ಕಟುವಾದ ನುಡಿಗಳಿಂದ ಚಂದ್ರಮತಿಯ ಕೋರಿಕೆಯನ್ನು ನಿರಾಕರಿಸಿದ್ದರೂ ಅವರ ಮನಸ್ಸು ಅದನ್ನೇ ಮತ್ತೆ ಮತ್ತೆ ಮೆಲುಕು ಹಾಕುತ್ತಿತ್ತು. ಅಲ್ಲ, ಅವರು ಕೇಳಿಕೊಂಡಿದ್ದರಲ್ಲಿ ತಪ್ಪಾದರೂ ಏನಿದೆ? ಒಬ್ಬ ವೈದ್ಯನಾಗಿ ರೋಗಿಯನ್ನು ಸಾವಿನ ದವಡೆಯಿಂದ ಪಾರುಮಾಡುವಂತೆ ಅವನ ನೋವು ದೂರ ಮಾಡುವುದು ಕೂಡ ತನ್ನ ಕರ್ತವ್ಯ [^] ವಾಗಬೇಡವೇ?

ಮಂಜುನಾಥಯ್ಯನವರ ಕಾಯಿಲೆ ವಾಸಿಯಾಗುವಂತಹದಲ್ಲ. ಹಾಗೆಂದು ಮರಣ ಕೂಡ ತನಗೆ ತಿಳಿದಂತೆ ಅವರ ಸನಿಹದಲ್ಲೆಲ್ಲೂ ಸುಳಿದಾಡುತ್ತಿಲ್ಲ. ಹೀಗಿರುವಾಗ ಅವರು ಕೀವು, ಹುಣ್ಣುಗಳ ದುರ್ನಾತದಲ್ಲಿ ಜುಗುಪ್ಸೆ ಅನುಭವಿಸುತ್ತಾ, ದಿನವಿಡೀ ಕಾಡುವ ನೋವಿನೊಡನೆ ಸೆಣೆಸುತ್ತಾ, ತನ್ನನ್ನು ಪ್ರೀತಿಸುವ ಜೀವಗಳೆಲ್ಲವನ್ನೂ ಪ್ರತಿಕ್ಷಣವೂ ವಿಷಾದದಲ್ಲಿ ಮುಳುಗಿಸುತ್ತಾ ಜೀವನವನ್ನು ಹೆಣಭಾರವಾಗಿ ಹೊತ್ತು ತೆವಳುವುದಕ್ಕಿಂತಾ ಮಿಗಿಲಾದ ಹಿಂಸೆ ಬೇರೇನಿದೆ? ಬದುಕಿನ ಕ್ರೌರ್ಯ ಮಡುಗಟ್ಟಿರುವುದೇ ಇಲ್ಲಿ. ನನ್ನ ಒಂದೇ ಒಂದು ಚಿಕ್ಕ ಕ್ರಿಯೆಯಿಂದ ಈ ಎಲ್ಲಾ ನೋವು, ದುಃಖಗಳು ಮಂತ್ರದಂಡ ಸೋಕಿದಂತೆ ಫಕ್ಕನೆ ಮಾಯವಾಗಿ ಹೋಗುವುದೆಂದರೆ? ಅದಕ್ಕಿಂತ ಸಾಧನೆ ಬೇರೇನಿದೆ?

ಚಂದ್ರಮತಿ ತನ್ನ ಶ್ರೀಮಂತಿಕೆಯ ಪ್ರಭಾವದಿಂದ ನನಗೆ ಯಾವ ತೊಂದರೆಯಾಗದಂತೆ ನೋಡಿಕೊಳ್ಳಬಹುದು. ಅಲ್ಲದೆ ಎಷ್ಟೋ ದಿನಗಳಿಂದ ಹಾಸಿಗೆ ಹಿಡಿದು ಮಲಗಿರುವ ಮಂಜುನಾಥಯ್ಯನ ಸಾವು ಯಾರಿಗೂ ಅನುಮಾನ ಕೂಡ ಉಂಟುಮಾಡಲಾರದು. ಒಂದು ವೇಳೆ ಈ ವಿಷಯ ಬಹಿರಂಗವಾದರೆ ತಾನೇ ಏನು?

ನನ್ನನ್ನು ಈ ವೃತ್ತಿಯಿಂದಲೇ ಉಚ್ಚಾಟಿಸಬಹುದು, ಕೆಲವಾರು ವರ್ಷಗಳ ಕಾಲ ಸೆರೆವಾಸ ವಿಧಿಸಲೂಬಹುದು. ಆಗಲಿ, ಒಂದು ನೋಯುತ್ತಿರುವ ಜೀವಕ್ಕೆ ನಿರಂತರವಾದ ನೆಮ್ಮದಿ ನೀಡಿದ ಆತ್ಮಸಂತೋಷದ ಮುಂದೆ ಯಾವುದೇ ಕಷ್ಟ ಕೋಟಲೆಗಳು ಒದಗಿದರೂ ಅವೆಲ್ಲವೂ ಕ್ಷಣಿಕ, ಗೌಣ! ಬಹಳ ಹೊತ್ತು ಚಿಂತಿಸುತ್ತಿದ್ದ ಸುದರ್ಶನರ ಮನಸ್ಸು ಸರಿ ತಪ್ಪುಗಳ ನಡುವೆ ಹೊಯ್ದಾಡುತ್ತಿತ್ತು. ಕೊನೆಗೆ ಅವರ ಚಿತ್ತದಲ್ಲಿ ಯಾವುದೊ ಒಂದು ನಿರ್ಧಾರ ಗಟ್ಟಿಯಾಗಿ ರೂಪಗೊಂಡಿತು. ದೀಪವಾರಿಸಿ ಮಲಗಿಕೊಂಡ ಅವರಿಗೆ ಮರುಕ್ಷಣದಲ್ಲಿಯೇ ನಿದ್ರೆ ಆವರಿಸಿಕೊಂಡಿತು.

***

ಬೆಳಗಿನ ಜಾವ ಐದರ ಸಮಯ. ಸುದರ್ಶನರ ಮಂಚದ ಸಮೀಪವಿದ್ದ ದೂರವಾಣಿ ಎಚ್ಚರಗೊಂಡಿತು. ಸುದರ್ಶನ್‌ ಫೋನ್‌ ಕೈಗೆತ್ತಿಕೊಂಡರು. ರಾತ್ರಿ ತುಂಬಾ ತಡವಾಗಿ ಮಲಗಿದ್ದರಿಂದ ನಿದ್ರೆಯ ಮಂಪರು ಇನ್ನೂ ಅವರ ಕಣ್ಣಿನಲ್ಲಿ ತುಳುಕಾಡುತ್ತಿತ್ತು.

‘ಹಲೋ, ಡಾ. ಸುದರ್ಶನ್‌ ಹಿಯರ್‌, ಏನಾಗಬೇಕಿತ್ತು?’

‘ಡಾಕ್ಟರ್‌, ನಾನು ಹೆಡ್‌ನರ್ಸ್‌ ಪಂಕಜ. ಎಂಟನೆ ನಂಬರ್‌ ವಾರ್ಡಿನಲ್ಲಿದ್ದ ಮಂಜುನಾಥಯ್ಯನವರು ತೀರಿಕೊಂಡಿದ್ದಾರೆ.’

ಸುದರ್ಶನ್‌ ಕಣ್ಣಿನಲ್ಲಿದ್ದ ನಿದ್ರೆಯ ತೆರೆ ಸರಿದುಬಿದ್ದಿತ್ತು.

‘ಪಂಕಜಾ, ಇದು ಹೇಗಾಯಿತು? ಅವರನ್ನು ನಾನು ನಿನ್ನೆ ಸಂಜೆ ನೋಡಿದಾಗ ಸಾಯುವ ಲಕ್ಷಣವೇ ಅವರಲ್ಲಿ ಇರಲಿಲ್ಲವಲ್ಲಾ? ಚೆನ್ನಾಗಿಯೇ ಮಾತನಾಡಿದರು’

‘ಹೌದು ಡಾಕ್ಟರ್‌, ನಾನು ನಿನ್ನೆ ರಾತ್ರಿ ಅವರಿಗೆ ಇಂಜೆಕ್ಷನ್‌, ಮಾತ್ರೆಗಳನ್ನು ಕೊಡಲು ಹೋದಾಗಲೂ ಅಷ್ಟೆ. ನೋವು ಮಾತ್ರ ತುಂಬಾ ಹೆಚ್ಚಾಗಿದ್ದು ನರಳಾಡುತ್ತಿದ್ದರು. ಅವರ ಪತ್ನಿ ಕುಡಿಸಿದ ರವೆಗಂಜಿಯನ್ನು ದಿನಕ್ಕಿಂತ ಸ್ವಲ್ಪ ಹೆಚ್ಚಾಗಿಯೇ ಕುಡಿದರು. ಬೆಳಗ್ಗೆ ನನಗೆ ಅನುಮಾನವಾಗಿ ಡ್ಯೂಟಿ ಡಾಕ್ಟರನ್ನು ಕರೆದುಕೊಂಡು ಬಂದಾಗ ಅವರ ಜೀವ ಹೋಗಿ ಬಹಳ ಕಾಲವಾಗಿತ್ತು.’

ಪಂಕಜ ಒಂದೇ ಉಸಿರಿನಲ್ಲಿ ವಿವರಗಳನ್ನು ನೀಡುತ್ತಿದ್ದರೆ ಸುದರ್ಶನರ ಮನೋವಾರಿಧಿಯಲ್ಲಿ ಅಲ್ಲೋಲ ಕಲ್ಲೋಲ. ಪಂಕಜಳಿಗೆ ಏನು ಹೇಳುವುದೋ ತಿಳಿಯದೆ ಸುಮ್ಮನೆ ಗರಬಡಿದವರಂತೆ ನಿಂತುಬಿಟ್ಟರು.

ಪಂಕಜ ಇತ್ತ ಕಡೆಯಿಂದ ಏನೂ ಪ್ರತಿಕ್ರಿಯೆ ಬಾರದಿರಲು- ‘ಹಲೋ, ಹಲೋ ಡಾಕ್ಟರ್‌, ಲೈನಿನಲ್ಲಿ ಇದೀರಾ ತಾನೇ?’ ಎಂದಳು. ಇವರು ‘ಎಸ್‌ ಹೇಳು’ ಎಂದ ಮೇಲೆ ಮುಂದುವರೆಸಿದಳು.

‘ಡಾಕ್ಟರ್‌, ನನಗೇನೋ ಅನುಮಾನ…..ಈ ಸಾವು…..’ ಎಂದೇನೋ ಹೇಳಹೊರಟವಳ ಮಾತನ್ನು ಅರ್ಧದಲ್ಲಿಯೇ ತುಂಡರಿಸಿ-

‘ಇದರಲ್ಲಿ ಅನುಮಾನ ಪಡೋದೇನಿಲ್ಲ. ಇಂತಹ ಕೇಸ್‌ನಲ್ಲಿ ಸಾವು ಹೇಗೆ ಬೇಕಾದರೂ ಬರಬಹುದು. ನೀನು ಸುಮ್ಮನೆ ಇಲ್ಲದ ಹಗರಣಗಳಿಗೆ ಕಾರಣಳಾಗಬೇಡ…. ನನಗಾಗಿ ಕಾಯದೆ ಮನೆಯವರಿಗೆ ಡೆಡ್‌ಬಾಡೀನ ಒಪ್ಪಿಸಿಬಿಡಿ. ನಾನು ಇವತ್ತು ನರ್ಸಿಂಗ್‌ಹೋಮಿಗೆ ಬರಲು ಸಾಧ್ಯವಾಗುತ್ತದೆಯೋ ಇಲ್ಲವೊ. ಈ ವಿಷಯವನ್ನು ಡಾ. ಸುವ್ರತ್‌ ರಾವ್‌ಗೂ ತಿಳಿಸಿಬಿಡು’ ಎಂದು ಫೋನ್‌ ಕೆಳಗಿಟ್ಟುಬಿಟ್ಟರು. ಅವರ ಮನದ ಗೊಂದಲಗಳನ್ನು, ತಲ್ಲಣಗಳನ್ನು ಅರಿತವನಂತೆ ಗೋಡೆಯ ಮೇಲಿದ್ದ ಚಿತ್ರಪಟದಲ್ಲಿ ಅರ್ಜುನನಿಗೆ ಗೀತೋಪದೇಶ ಮಾಡುತ್ತಿದ್ದ ಯೋಗೀಶ್ವರ ಕೃಷ್ಣ ಮಂದಹಾಸ ಬೀರುತ್ತಿದ್ದ !

* ತ್ರಿವೇಣಿ
Advertisements

About sujankumarshetty

kadik helthi akka

Posted on ನವೆಂಬರ್ 5, 2010, in ಕತೆ, ಸಣ್ಣ ಕಥೆ and tagged . Bookmark the permalink. ನಿಮ್ಮ ಟಿಪ್ಪಣಿ ಬರೆಯಿರಿ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: