ದೀಪ ತೋರಿದೆಡೆಗೆ…

ಅಕ್ಕ ಸಮ್ಮೇಳನದ ಸಣ್ಣಕಥಾ ಸ್ಪರ್ಧೆಯಲ್ಲಿ ಮೊದಲ ಬಹುಮಾನ ಪಡೆದ ನವೀನ್ ಭಟ್ ರಚಿತ ಕಥೆ ‘ದೀಪ ತೋರಿದೆಡೆಗೆ’. ಯುವ ಬರಹಗಾರರನ್ನು ಪ್ರೋತ್ಸಾಹಿಸುವ ಉದ್ದೇಶದಿಂದ 6ನೇ ಅಕ್ಕ ವಿಶ್ವ ಕನ್ನಡ ಸಮ್ಮೇಳನದಲ್ಲಿ ಕಥಾಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ತೀರ್ಪುಗಾರರ ಮೆಚ್ಚುಗೆ ಗಳಿಸಿದ ಶೃಂಗೇರಿಯ ನವೀನ್ ಭಟ್ ಅವರ ನೀಳ್ಗಥೆ.

ಆರತಿ ತಟ್ಟೆಯಲ್ಲಿ ಗಡಿಬಿಡಿಯೇ ಇಲ್ಲದೆ ಉರಿಯುತ್ತಿರುವ ಕರ್ಪೂರದ ಜ್ವಾಲೆಯ ಮೇಲೆ ಆ ಅವನು ಭಕ್ತಿಯಿಂದ ಕೈ ತೋರಿಸುತ್ತಿರುವಾಗ, ಮಿನುಗುವ ಒಟ್ಟೂ ಆರು ಉಂಗುರಗಳು ಕೇದಾರನ ಬದುಕಿನ ಯಾವ ಮಹಾ ವಿಷಾದವನ್ನು ತಮ್ಮೊಳಗೆ ಬಿಂಬಿಸಿ ತೋರಿಸುತ್ತಿವೆಯೋ… ಅದು ಕೇದಾರನಿಗೊಬ್ಬನಿಗೇ ಗೊತ್ತು. ಆ ಅವನು ಆರತಿಗೆ ಅಂಗೈ ತೋರಿಸಿ ಬೆರಳುಗಳನ್ನು ಕಣ್ಣಿಗೊತ್ತಿಕೊಂಡ. ಅವನ ಬೆನ್ನಿಗಂಟಿಕೊಂಡಂತೆ ನಿಂತಿದ್ದ ಆ ಅವಳು ಕೂಡ ತನ್ನ ನೀಳ ಬೆರಳುಗಳನ್ನು ಕಣ್ಣಿಗೊತ್ತಿಕೊಂಡಳು. ಕುತ್ತಿಗೆಯನ್ನು ಕೊಂಚವೇ ಬಾಗಿಸಿ, ಗರ್ಭಗುಡಿಯಲ್ಲಿದ್ದ ದೇವರಿಗೆ ಆಕೆ ಕೈ ಮುಗಿದು, ಕಣ್ಮುಚ್ಚಿ ನಿಂತಾಗ, ನೆತ್ತಿಯಿಂದ ಕಿವಿಗಳ ಮೇಲೆ ನಿರಾಯಾಸ ಬಿದ್ದುಕೊಂಡ ರೇಷ್ಮೆ ಕೂದಲುಗಳ ಮಧ್ಯೆಯಿಂದ ಕಿವಿಗೆ ಧರಿಸಿದ್ದ ಚಿನ್ನದೋಲೆ ಮಿರುಗಿ ಕಿರುನಕ್ಕಂತೆ ಕಂಡಾಗ ಕೇದಾರನಲ್ಲಿ ಯಾಕೋ ಎಂದೂ ಇಲ್ಲದ ಮೃದಂಗನಾದ. ಇಲ್ಲ, ಬಹುಶಃ ಈ ಚಿನ್ನದೋಲೆಗಳಿಗಿಂತ ಅವರಿಬ್ಬರೂ ಒಟ್ಟೊಟ್ಟಿಗೆ ಕೂತು ಬಂದಿಳಿದ ಆ ಬಿಳಿಯ Swift ಕಾರು ಬೆಲೆ ಬಾಳಬಹುದು. ಆ ಕಾರಿನ ನುಣುಪು ಅಂಗಾಂಗಗಳು ತಮ್ಮಲ್ಲಿ ಈ ಹಳ್ಳಿಯ ಕಚ್ಚಾ ಚಿತ್ರಗಳು ಪ್ರತಿಬಿಂಬಿತವಾಗುವುದನ್ನೂ ಸಹಿಸುವುದಿಲ್ಲವೇನೋ ಎಂಬಷ್ಟು ಶುಭ್ರವಾಗಿತ್ತು ಅದು! ಊಹೂಂ, ಈ ಚಿನ್ನದೋಲೆಗಳಾಗಲೀ, ಉಂಗುರಗಳಾಗಲೀ ಬೆಳ್ಳಗೆ ನಿಂತ ಕಾರಾಗಲೀ, ಕೇದಾರನಿಗೊಂದು ವಿಷಯವೇ ಅಲ್ಲ. ಅಷ್ಟಕ್ಕೂ ಅವನ ದೇವಾಲಯದ ಅಂಗಳಕ್ಕೆ ತಿಂಗಳಿಗೆ ಎರಡು ಮೂರು ಬಾರಿಯಾದರೂ ಇಂಥ ಕಾರುಗಳು ಬಂದು ಹೋಗುತ್ತಿರುತ್ತವೆ. ತೀರ ಮುಂಚಿನ ದಿನಗಳಲ್ಲಿ ಅಂಥ ಕಾರುಗಳು ಬಂದು ಮರಳಿ ಹೋದಮೇಲೂ ಒಂದಷ್ಟು ಹೊತ್ತು ಉಳಿದಿರುತ್ತಿದ್ದ ಸುಟ್ಟ ಪೆಟ್ರೋಲಿನ ನವಿರುಘಮವನ್ನು ಆಸ್ವಾದಿಸಲಿಕ್ಕೆ ದೇವಾಲಯದ ಹೆಬ್ಬಾಗಿಲು ದಾಟಿ ಆತ ಹೊರಬರುವುದಿತ್ತು. ಆದರೆ, ಇತ್ತೀಚೆಗೆ… ಯಾಕೋ, ಈ LPG ಉಪಯೋಗಿಸಲು ಶುರುವಾದಾಗಿನಿಂದ ಪೆಟ್ರೋಲಿನ ಘಮ ಉಳಿದಿಲ್ಲ; ಅಥವಾ ಅಷ್ಟರಮಟ್ಟಿಗೆಕೇದಾರನೂ ಬೆಳೆದಿದ್ದಾನೆ ಎಂದರೆ ಸರಿಯಾದೀತು.

2
ಆ ಅವನು ಮತ್ತು ಕೇದಾರ ಇಬ್ಬರೂ ಬೆಳೆದಿದ್ದು ಒಟ್ಟಿಗೇನೇ. ಆದರೆ ಊರಿನ ಜನಗಳೆಲ್ಲ ಹೇಳುವುದು ಗಿರಿ ಹೇಗೆ ಬೆಳೆದ ನೋಡು! ಎಂದೇ ಹೊರತು, ಅವನಿಗಿಂತ ಎರಡು ವರ್ಷಕ್ಕೆ ಹಿರಿಯವನಾದ ಈ ಕೇದಾರ ಬೆಳೆದನೆಂದಲ್ಲ. ಯಾಕೆಂದರೆ ಕೇದಾರ ಎಸ್ಸೆಸ್ಸೆಲ್ಸಿಯ ನಂತರ ಗಿರಿಯಂತೆ ಪಟ್ಟಣದ ಹೈಬ್ರೀಡು ಗಾಳಿಯನ್ನು ಉಸಿರಾಡಲಿಲ್ಲ; ಮಾತ್ರವಲ್ಲ, ನಿಂಬೆಹಣ್ಣು ಕುಯ್ಯಬಹುದಾದಷ್ಟು ಹರಿತದ ಇಸ್ತ್ರಿಯಿರುವ ಬಟ್ಟೆ ಹಾಕಿಕೊಂಡು ಓಡಾಡುವುದು ಇಂದಿಗೂ ಅವನಿಗೆ ಗೊತ್ತಿಲ್ಲ. ಮನೆಯಿಂದ ದೇವಸ್ಥಾನಕ್ಕೆ ಹೋಗುವ ಹಾದಿಯ ಮಧ್ಯೆ ಅವನ ಎಣ್ಣೆಗಪ್ಪು ಮೈಯನ್ನೂ ಎದೆಯ ರೋಮಗಳನ್ನೂ ಅರ್ಧಂಬರ್ಧ ಮುಚ್ಚುತ್ತಿದ್ದುದು ಹಳೆಯದೊಂದು ಶಾಲು ಮಾತ್ರ. ಇವತ್ತಿಗಾದರೂ ಅಷ್ಟೆ, ಕೇದಾರ ತಾನು ಬೆಳೆದೆನೆಂದರೂ ಎಷ್ಟು ಬೆಳೆದ ಮಹಾ? ಗಿರಿ, ನೆರಿಗೆ ಮುರಿಯದ ಪ್ಯಾಂಟಿನೊಳಗೆ ತೂರಿಕೊಳ್ಳಲು ಕಲಿತಾಗ, ಇವ ತೊಡೆ ಕಾಣಿಸುವ ಪಂಚೆ ಉಡಲು ಕಲಿತಿದ್ದ, ಅಷ್ಟೆ. ಅಂಗಿಯ ಚುಂಗಿನಲ್ಲಿ ಮೂಗೊರಿಸಿಕೊಳ್ಳುತ್ತಿದ್ದ ಗಿರಿ ಕರ್ಚೀಫು ಬಳಸಲು ಶುರುಮಾಡಿದಾಗಿನ್ನೂ, ಕೇದಾರ ಎಡಗೈಯನ್ನು ಮೂಗಿನ ತುದಿಯುದ್ದಕ್ಕೂ ಎಳೆದು ಕೊಂಡು ಮೂಗು ಕೆಂಪಾಗಿಸಿಕೊಳ್ಳುತ್ತಿದ್ದ; ಅದಕ್ಕಿಂತ ಮುಂದೆ ಬೆಳೆಯುವದನ್ನು ಮರೆತ ಮರದಂತೆ ಉಳಿದುಬಿಟ್ಟ ಅವನು. ಅಥವಾ ಮುಜರಾಯಿ ಇಲಾಖೆಯ ದೇವಸ್ಥಾನದ ಪೂಜಾರಿ ಕೆಲಸವೇ ಅವನನ್ನು ಆ ಪರಿ ಮರಗಟ್ಟಿಸಿತು.

ಹಾಗೊಂದು ಇಪ್ಪತ್ತೆರಡು ವರ್ಷಗಳಾಗುವ ಹೊತ್ತಿಗೆ ಕೇದಾರನಲ್ಲಿ ಎದ್ದು ತೋರುತ್ತಿದ್ದ ಒಡ್ಡತನವನ್ನು ಕಂಡವರ್‍ಯಾರೋ; ದೇವಸ್ಥಾನದ ಮೆಟ್ಟಿಲಿಳಿದು ಹೋಗುವ ಹೊತ್ತಿಗೆ ಹೇಳಿ ಹೋಗಿದ್ದರು, ಕೇದಾರ, ನೀನಿನ್ನೂ ಬೆಳೆಯಬೇಕು. ಆಗೆಲ್ಲ ಅವನಿಗರ್ಥವಾದದ್ದು ಬೆಳೆಯುವುದೆಂದರೆ ತೊಲೆಯಂಥ ತೋಳುಗಳು ಮತ್ತು ಮರದ ದಿಮ್ಮಿಯಷ್ಟೇ ಬಲಿಷ್ಠ ತೊಡೆಗಳನ್ನು ಪಡೆಯುವುದು ಎಂದು. ಅಂದಿನಿಂದ ಕೇದಾರ ಚಪ್ಪಲಿ ಹಾಕುವುದು ಬಿಟ್ಟು ಬರಿಗಾಲಲ್ಲಿ ತಿರುಗಿದ. ಅಂಗಾಲು ಟಾರುರಸ್ತೆಯಷ್ಟು ಒರಟಾಯಿತು. ದೇವಸ್ಥಾನದಿಂದ ಮನೆಗೆ ಓಡಾಡುವ ಹಾದಿಯ ಮಧ್ಯೆ ಕೇದಾರ ನಡೆದರೆ ಚಿಕ್ಕಪುಟ್ಟ ಕಲ್ಲುಗಳೂ ನಲುಗುತ್ತಿದ್ದವು. ತಗ್ಗಿನ ಬಾವಿಯಿಂದ ನೀರು ಹೊರುವ ತಾಮ್ರದ ಕೊಡ ಕೂತು ಕೂತು, ಹೆಗಲು ಆಮೆಚಿಪ್ಪಿನಷ್ಟೇ ಒರಟಾಯ್ತು. ದೇವಸ್ಥಾನದ ನಂದಾದೀಪದ ಕುಡಿಯ ಕಪ್ಪು ತೆಗೆದು ತೆಗೆದು, ಕರ್ಪೂರದ ಉರಿ ತಾಗಿ ತಾಗಿ, ಕೈ ಬೆರಳುಗಳು ಹೆಗಡೇರ ಮನೆಯ ಗರಗಸ ಚೂಪುಗೊಳಿಸುವ ಅರದಷ್ಟೇ ಒರಟಾದವು. ಮೀಸೆ ಹಸಿರೊಡೆದು, ಕಪ್ಪಾಗಿ, ಅಷ್ಟಷ್ಟೇ ಬ್ಲೇಡು ಬಳಸಲು ಶುರು ಮಾಡಿದಾಗಂತೂ ಕೇದಾರ ಅಂದುಕೊಂಡೇ ಅಂದುಕೊಂಡ ತಾನು ಬೆಳೆದೆ ಎಂದು! ಅದಕ್ಕಿಂತ ಮುಂದೆ ಮತ್ತೆಂದೂ ಕೇದಾರ ಯಾವ ಬಗೆಯಲ್ಲೂ ಬೆಳೆಯಲು ಹೋಗಲಿಲ್ಲ. ಇದ್ದಲ್ಲೇ ಮಡುಗಟ್ಟಿದ; ಮರಗಟ್ಟಿದ. ಗುಡ್ಡದ ತುದಿಯ ದೇವಾಲಯದಿಂದ ದಿಗಂತದೆಡೆಗೆ ಚಾಚಿ ನಿಂತ ಹಸಿರು ಕಾಡನ್ನೂ, ಆ ಶೈಲಗಳನ್ನೂ ಒಮ್ಮೊಮ್ಮೆ ತಿಂಗಳ ಬೆಳಕಿನ ಇರುಳಲ್ಲಿ ಸುರಿದ ಮಂಜನ್ನೂ, ಅಬ್ಬರದ ಬಿಸಿಲನ್ನೂ, ಕವಿದು ಬೀಳೋ ಮಳೆಯನ್ನೂ ತನ್ಮಯತೆಯಿಂದ ದಿನಾ ನೋಡುವ ಇನ್ನೊಂದು ಜೀವ ಇಲ್ಲ, ಕೇದಾರನನ್ನು ಬಿಟ್ಟು. ಕೇದಾರನ ಪಾಲಿಗೆ ಆ ದೃಶ್ಯಗಳೆಂದರೆ ಎಸ್ಸೆಸ್ಸೆಲ್ಸಿಯವರೆಗೆ ಓದಿಕೊಂಡಿದ್ದ, ಅಷ್ಟಷ್ಟು ಕನ್ನಡ ಪದ್ಯಗಳನ್ನೂ, ಕವಿತೆಗಳನ್ನೂ ಮೈ ತುಂಬ ಸಾಕಾರವಾಗಿಸಿಕೊಂಡಿದ್ದ ದೃಶ್ಯಕಾವ್ಯಗಳು. ಒರಟೊರಟಿನ ಅವನ ಒಳಗುಗಳಲ್ಲಿ ಅತಿ ವಿರಳವಾಗಿ ಸೆಲೆಯೊಡೆಯುವ ಮೃದುತನದ ಪರಿಚಯವಿರುವ ಒಂದೇ ಒಂದು ಅಸ್ತಿತ್ವವೆಂದರೆ ಈ ದೇವಾಲಯವೆತ್ತರದ ದೃಶ್ಯವೈಭವ ಮಾತ್ರ. ಅದವನ ಖಾಸಗಿ ಕ್ಷಣದ ಜೀವಂತ ಒಡನಾಡಿ. ಕೇದಾರ ಇನ್ನೊಂಚೂರೇ ಚೂರು classic ಅನ್ನಿಸಿಕೊಂಡಿದ್ದರೂ ಸಾಕಿತ್ತು. ಮೃದುಮೃದುಲ ಕಾವ್ಯ ಅವನೊಂದಿಗಿರುತ್ತಿತ್ತು. ಆದರೆ, ಅವನ ಒರಟುತನಗಳು ಅವನ ಏಕಾಂತ ಕ್ಷಣಗಳಲ್ಲೂ ಬಿಡುವಂತಿರಲಿಲ್ಲ. ಹಾಗಾಗಿ ಹಸಿರು ವನರಾಶಿಯ ಚಿತ್ರದ ಜೀವಂತಿಕೆ. ಅವನ ಎದೆಯ ಕದ ತಟ್ಟಿದಾಗೆಲ್ಲ ತೆರೆದುಕೊಂಡಿದ್ದು ಕಾವ್ಯವಲ್ಲ; ಬದಲಿಗೆ ಒಂಟಿ ಬಂಗಲೆಯ ನಡುರಾತ್ರಿಯಲ್ಲಿ ಹಲ್ಲಿ ಲೊಚಗುಟ್ಟಿದಂಥ ಅಸ್ಪಷ್ಟ ಕನಲು.

* * *
ಕಾರ್ತೀಕದ ತುಳಸಿಹುಣ್ಣಿಮೆ ಮುಗಿಯುವುದಕ್ಕೇ ಕಾಯುತ್ತಿದ್ದರೇನೋ ಎಂಬಂತೆ, ಕಾರ್ತೀಕದ ಹಣತೆ ಆರಿದ ಬೆನ್ನಿಗೇ, ಲಗ್ನಪತ್ರಿಕೆ ಹಿಡಿದುಕೊಂಡು ಮಗನದ್ದೋ ಮಗಳದ್ದೋ ಮದುವೆ ಎಂದು ಕರೆಯಲು ಬರುವ ಜನಗಳ ಮುಖದಲ್ಲಿ ತನ್ನ ಕಣ್ಣಿಗೆ ಕಾಣುತ್ತಿದ್ದ ಕೊಂಚ ಕುಹಕವನ್ನು ಎಷ್ಟೇ ಕಷ್ಟಪಟ್ಟರೂ ಕಾಣದೇ ಇರಲೇ ಆಗುತ್ತಿರಲಿಲ್ಲ ಅವನಿಗೆ. ಜಾನಕಮ್ಮ ಸಂಜೆಯ ಹೊತ್ತಿನಲ್ಲಿ ಮನೆಯಂಗಳದ ಕಟ್ಟೆಬದಿಯ ಮಲ್ಲಿಗೆ ಮೊಗ್ಗು ಕೊಯ್ಯುತ್ತಾ, ಕಟ್ಟೆಯ ಆ ಕಡೆ ನಿಂತಿರುತ್ತಿದ್ದ ಪಕ್ಕದ ಮನೆಯ ವಸುಧಮ್ಮನ ಜೊತೆ ಹರಟುತ್ತಿದ್ದ ಬಹುಪಾಲು ಸುದ್ದಿಯೆಲ್ಲ ಕೇದಾರನ ವಯಸ್ಸು, ಮತ್ತು ಅವನಿಗೊಂದು ಮದುವೆ ಮಾಡಬೇಕೆಂದು ಬಹುಕಾಲದ ಬೇಗುದಿಯ ಸುತ್ತವೇ ಇರುತ್ತಿದ್ದವು. ಹಾಗೆ ಮಗನಿಗೊಂದು ಹೆಣ್ಣು ಸಿಕ್ಕು ಮದುವೆಯಾದರೆ, ಜಾನಕಮ್ಮನಿಗೆ ಬರೀ ಹಣತೆಗಳನ್ನು ಕೊಳ್ಳುವುದಕ್ಕೆ ಸಾವಿರ ರೂಪಾಯಿ ಬೇಕಾಗಬಹುದು ಆ ಪರಿಯ ಹರಕೆ ಹೊತಿದ್ದಾರೆ ಆಕೆ. ಕೇದಾರನ ಇಪ್ಪತ್ತಾರನೇ ವಯಸ್ಸಿನಿಂದ ಮದುವೆಯ ಪ್ರಯತ್ನಗಳು ಶುರುವಾಗಿದ್ದರೂ, ಇಪ್ಪತ್ತೆಂಟಕ್ಕಾದರೂ ಹೆಣ್ಣು ಸಿಗದೇ ಹೋದಾಳಾ ಎಂಬ ಉಡಾಫೆಭರಿತ ವಿಶ್ವಾಸದಲ್ಲಿಯೇ ನೆಮ್ಮದಿಯಾಗಿದ್ದರು ಜಾನಕಮ್ಮ. ಆದರೆ … ಮೂವತ್ತಕ್ಕೂ ಮದುವೆ ಕನಸಾಗಿಯೇ ಉಳಿದಾಗ ನಿಜಕ್ಕೂ ಭಯಪಟ್ಟರು. ನೆನಪಾದ ದೇವರುಗಳಿಗೆಲ್ಲ ಹರಕೆ ಹೊತ್ತರೂ ಈ ಮೂವತ್ತೆರಡನೆಯ ವಯಸ್ಸಿಗೂ ಮಗ ಕೇದಾರನಿಗೆ ಹೆಣ್ಣು ಸಿಗಲಿಲ್ಲ. ಖರೆ ಅಂದರೆ ಜಾನಕಮ್ಮ ಇಷ್ಟು ವಯಸ್ಸಾದವರಂತೆ ಕಾಣುತ್ತಿರುವುದೇ ಈ ನಾಲ್ಕು ವರ್ಷಗಳಿಂದೀಚೆಗೆ. ಹಾಗಾಗಿಯೇ ಯಾವುದರಲ್ಲಿಯೂ ಆಸಕ್ತಿ ಉಳಿದಿಲ್ಲ. ಮನೆಯಲ್ಲಿರುವುದು ಮೂವರೇ ಆದರೂ, ಅಡುಗೆ ಮಾಡಲೂ ಬೇಜಾರು. ಲಗ್ನಪತ್ರಿಕೆ ಹಿಡಕೊಂಡು ಮದುವೆಗೆ ಕರೆಯಲು ಬರುವವರ ಮೇಲೆ ತನಗೇ ಅರ್ಥವಾಗದಂಥ ಸಿಟ್ಟು. ಒಂದು ಕಾಲದಲ್ಲಿ ಆತಿಥ್ಯಕ್ಕೆ ಹೆಸರಾಗಿದ್ದ ಜಾನಕಮ್ಮ ಇವತ್ತು, ಮದುವೆಗೆ ಕರೆಯಲು ಬರುವ ಜನಗಳೆದುರಿಗೆ ಅರೆಮನಸಿ ನಿಂದಲೇ ಕಾಫಿಯನ್ನೋ, ಟೀಯನ್ನೋ ಕೊಡುವಾಗ ಅಯಾಚಿತವಾಗಿ ಲೋಟವನ್ನು ಕುಕ್ಕುತ್ತಾರೆ. ಕೆಲವೊಮ್ಮೆ ಲೋಟದೊಳಗಿನ ಬಿಸಿಯ ಚಹ ತುಳುಕಿ ಬೆರಳಿಗೆ ಬಿಸಿ ತಟ್ಟಿದಾಗಲೇ, ಇಟ್ಟಿದ್ದು ಕುಕ್ಕಿದಂತಾಯ್ತೆಂಬ ಎಚ್ಚರ, ತನ್ನೊಳಗಿನ ಅಸಹನೆ ಇಂಥಾದ್ದು … ಎಂಬ ವಿಷಾದ. ಹೊಸ ಸೀರೆ ಬೇಕೆಂದು ಪತಿಯೆದುರು ಬೇಡಿಕೆಯನ್ನೇ ಇಡದೆ ಎರಡು ವರ್ಷವಾಯಿತು. ಯಾಕೋ ಹೊಸತುಗಳು ಆಕರ್ಷಕವೆನಿಸುತ್ತಿಲ್ಲ.

ತೀರಾ ಹೋಗದೇ ಇರಲಾಗದಷ್ಟು ಹತ್ತಿರದ ಸಂಬಂಧಿಕರ ಮನೆಯ ಮಂಗಲಕಾರ್ಯಗಳಿಗೆ ಹೋದಾಗೆಲ್ಲ, ಅತ್ತಿಂದಿತ್ತ ಹಾಯುವ ಹದಿನೆಂಟರಿಂದಿಪ್ಪತ್ತೆರಡು ವಯಸ್ಸಿನ ತರುಣಿಯರ ಹೆಸರು, ಮನೆ, ಗೋತ್ರ ನಕ್ಷತ್ರಗಳನ್ನೆಲ್ಲ ಹೇಗೆಹೇಗೋ ಸಂಗ್ರಹಿಸುವುದು ಜಾನಕಮ್ಮನಿಗೆ ಅಭ್ಯಾಸವಾಗಿಹೋಗಿತ್ತು. ಊಟಕ್ಕೆ ಕುಳಿತಾಗ ಉಪ್ಪನ್ನೋ, ಉಪ್ಪಿನ ಕಾಯಿಯನ್ನೋ ಬಡಿಸಲು ಬಂದಿರುತ್ತಿದ್ದ ಆ ಹುಡುಗಿಯರಲ್ಲಿಯೇ ಖುದ್ದಾಗಿ ವಿಚಾರಿಸಿದ್ದು ಸಹ ನಡೆದಿತ್ತು. ಒಟ್ಟಾರೆ, ಮಗ ಕೇದಾರನಿಗೆ ಮದುವೆ ಮಾಡುವುದಕ್ಕೆ ಹೆಣ್ಣು ಸಿಗದ ದಾರಿದ್ರ್ಯಕ್ಕೆ ಎಲ್ಲಕ್ಕಿಂತ ಹೆಚ್ಚಾಗಿ ಜಾನಕಮ್ಮನ ಲವಲವಿಕೆಯನ್ನು ತಿಂದುಹಾಕುವ ತಾಕತ್ತಿತ್ತೆಂದು ಕಾಣುತ್ತದೆ. 45ಕ್ಕೆ ಮುಟ್ಟು ನಿಂತ ಬಳಿಕ ಅತ್ತ ಪೂರ್ತಿಯಾಗಿ ಹೆಂಗಸರ ಗುಂಪಿನೊಂದಿಗೆ ಬೆರೆತುಬಿಡುವುದೂ ಒಗ್ಗುತ್ತಿರಲಿಲ್ಲ. ಒಟ್ಟಾರೆಯಾಗಿ ಮಗನಿಗೊಬ್ಬಳು ಮಡದಿ ಬೇಕು, ತನ್ನ ಹೆಣ್ತನಕ್ಕೊಂದು ಹೆಣ್ಮನಸು ಬೇಕೆಂಬುದು ಜಾನಕಮ್ಮನ ಸರ್ವಪ್ರಥಮ ಇಚ್ಛೆಯಾಗಿಹೋಯ್ತು. ಮನೆಯೆದುರಿನ ಸಾಧಾರಣ ಮಣ್ಣುರಸ್ತೆಯಲ್ಲಿ ಸಂಜೆಯ ಹೊತ್ತಿಗೆ ದನಕರುಗಳು ಗುಂಪಾಗಿ ಹಾದುಹೋಗುವ ಕ್ಷಣಗಳಲ್ಲಿ, ಮನೆಯ ಜಗುಲಿಯ ಮೇಲೆ ತಲೆಗೂದಲು ಬಾಚಿಕೊಳ್ಳುತ್ತಿರುವಾಗ, ಬೆಳಿಗ್ಗೆಯ ಹೊತ್ತಿನ ದೋಸೆ ಮಾಡುವಾಗ ಕಾವಲಿಯ ಮೇಲೆ ದೋಸೆ ಬೇಯುವಷ್ಟು ಹೊತ್ತಿನಲ್ಲಿ, ಒಲೆ ಮುಂದೆ ಕುಳಿತಿರುವಾಗ, ಹಿತ್ತಲಿನ ಗಿಡಗಳಿಗೆ ನೀರೆತ್ತಿ ಹಾಕುವಾಗಿನ ವಿಚಾರಗಳಲ್ಲಿ ಅವರ ಕೋರಿಕೆಯೆಲ್ಲ ಒಂದೇ ಕೇದಾರನಿಗೆ ಮದುವೆ ಮಾಡಬೇಕು. ಅದಕ್ಕೆ ಹೆಣ್ಣು ಸಿಗಬೇಕು. ಹೆಣ್ಣು ಸಿಗುತ್ತಿಲ್ಲವೆಂಬ ಖೇದದ ಮಧ್ಯೆ ಯಾರ್‍ಯಾರಿಗೋ, ಎಂಥೆಂಥವರಿಗೋ ಹೆಣ್ಣು ಸಿಕ್ಕು, ಮದುವೆಯಾಗಿ, ಸುಖವಾಗಿದ್ದಾರೆ ಎನ್ನುವಲ್ಲಿ ಸಣ್ಣಗೆ ಹೊಟ್ಟೆಯುರಿಯೂ ಇದ್ದಿರಬಹುದು ಜಾನಕಮ್ಮನಿಗೆ.

ಎಲ್ಲಾ ಬಿಟ್ಟು ಆ ನರಪೇತಲ ಗಿರಿಗೆ, ಕೇದಾರನಿಗಿಂತ ಎರಡು ವರ್ಷಕ್ಕೆ ಸಣ್ಣವನಿಗೆ ಮೊನ್ನೆ ಮದುವೆಯಾಯ್ತಲ್ಲ … ಕೇದಾರನಲ್ಲಿ ಕಡಿಮೆಯಿರುವುದಾದರೂ ಏನು? ಇಂಥ ಪ್ರಶ್ನೆಯೆದ್ದಾಗೆಲ್ಲ ಕೇದಾರ ತನ್ನ ಮಗುವೆಂಬ ಮುದ್ದು, ಅವನೆಡೆಗಿನ ಕರುಣೆಯಾಗಿ ಬದಲಾಗಿ, ಗಿರಿಯ ವಿಷಯದಲ್ಲಿನ ಈರ್ಷ್ಯೆಯೇ ಅವರ ಕಂಗಳಲ್ಲಿ ಅವನನ್ನು ಸಲ್ಲದ ಅಪರಾಧಗೈದ ಅಪರಾಧಿಯ ಸ್ಥಾನದಲ್ಲಿ ನಿಲ್ಲಿಸಿಬಿಡುತ್ತಿರುವುದು ಅರಿವಿಗಿದ್ದೂ ಇಲ್ಲದಂಥ ಸಂಗತಿ. ಈ ತರ್ಕಕ್ಕೆ ತಳಬುಡವಿಲ್ಲ – ಖರೆ. ಆದರೆ ಮನಸೆಂಬುದು ತರ್ಕವನ್ನು ಕೇಳುವುದಿಲ್ಲವಲ್ಲ! ಇಂಥ ಕೆಲವು ಪಕ್ಕಾ ಖಾಸಗಿ ಸಂಗತಿಗಳನ್ನು ಮತ್ತೆಲ್ಲಿಯೂ ಹೇಳಲಾಗದೆ ಜಾನಕಮ್ಮ ಅನುಭವಿಸುವ ವಿಚಿತ್ರ ತಳಮಳಗಳು ಅವರಿಗೆ ಮಾತ್ರ ಗೊತ್ತು.

ಒಮ್ಮೊಮ್ಮೆಯಂತೂ, ತಾನೇ ಪ್ರಾಯದ ಹೆಣ್ಣಿನ ಸ್ಥಾನದಲ್ಲಿ ನಿಂತುಕೊಂಡು, ತಾನು ಮದುವೆಯಾಗುವುದಾದರೆ ಕೇದಾರನಂಥ ಒಬ್ಬ ಗಂಡಸನ್ನು ಮದುವೆಯಾಗಿರುತ್ತಿದ್ದೆನಾ ಇಲ್ಲವಾ ಎಂದೆಲ್ಲ ವಿಚಾರ ಮಾಡಿ, ಪ್ರಾಮಾಣಿಕ, ಅಪ್ರಾಮಾಣಿಕ ಅನಿಸಿಕೆಗಳನ್ನೆಲ್ಲ ಹಾದು ಬಂದು, ಮತ್ತೆ ಕೊನೆಯಲ್ಲಿ ತಾಯ ಸಹಜ ಮಮತೆಯಿಂದಲೋ ಎಂಬಂತೆ ಕೇದಾರನ ವಿಷಯದಲ್ಲಿ ಅಗಾಧ ಮೆಚ್ಚುಗೆಯೇ ಹಿರಿದಾಗಿ ನಿಲ್ಲುತ್ತಿತ್ತು. ಅಂತೂ, ಏನೆಲ್ಲ ಎಂತೆಲ್ಲ ಪರೀಕ್ಷೆಗೆ ಒಡ್ಡಿಕೊಂಡರೂ, ಹೆಣ್ಣುಗಳು ತನ್ನ ಮಗನನ್ನು ಒಪ್ಪದಿರುವ ಯಾವ ಕಾರಣವೂ ಸಿಗದೆ, ಜೊತೆಗೇ ಕೇದಾರನಿಗೆ ಮದುವೆಯಾಗದಿರುವ ವಾಸ್ತವವನ್ನು ಸುಳ್ಳೆನ್ನಲಾಗದೆ, ಜಾನಕಮ್ಮ ಪ್ರಪಂಚದ ಕಂಗಳಿಗೆ ತೋರಿಕೊಳ್ಳಬಾರದು ಎಂಬ ತಮ್ಮದೇ ಸಂಕಲ್ಪದ ಹಿಂದೆ ತಾವೇ ಅಡಗುತ್ತ ಕುಬ್ಜವಾಗುತ್ತಿದ್ದರು. ದಿನದ ಕೊನೆಯಲ್ಲಿ ಮಾತ್ರ, ಹೆಣ್ಣು ಮನಸ್ಸು ಹೇಗೋ, ಎಲ್ಲಿಂದಲೋ ಒಂದಿಷ್ಟು ನೆಮ್ಮದಿಯನ್ನು ತಾನಾಗಿ ಕಂಡುಕೊಳ್ಳುತ್ತಿದ್ದುದಕ್ಕೋ ಏನೋ, ಬದುಕು ಬದುಕಲಾಗದಷ್ಟು ಅಸಹನೀಯವೆನಿಸಲಿಲ್ಲ.

* * *
ಸದಾಶಿವರಾಯರು ತಮ್ಮ ಮದುವೆಯ ವಿಷಯದಲ್ಲಿಯೂ ಇಷ್ಟು ತಲೆ ಕಾಯಿಸಿಕೊಂಡಿರಲಿಲ್ಲ. ಬದುಕಿನಲ್ಲಿ ಅವರದ್ದು ಈವರೆಗೆ ದೊಡ್ಡ ಸಂಗತಿಗಳು ಎರಡು; ಒಂದನೆಯದು ಅವರ ಮದುವೆ ; ಎರಡನೆಯದು ಇದೀಗ ಎದುರಿಗೆ ಪ್ರಶ್ನೆಯಾಗಿ ನಿಂತ ಕೇದಾರನ ಮದುವೆ. ಅವರ ಬದುಕಿನ ಎಲ್ಲ ಸಂಗತಿಗಳ ಹಿಂದೆಯೂ ಅವರೇ ರಚಿಸಿಕೊಂಡ ರೋಚಕ ಕಥೆಗಳಿವೆ. ಮಧ್ಯಾಹ್ನದ ಊಟದ ಬಳಿಕ ಮನೆಯ ಜಗುಲಿಯಂಚಿನ ಪುಟ್ಟ ಮಂಚದ ಮೇಲೆ ಕಾಲು ಮೇಲೆ ಕಾಲು ಹಾಕಿ ಕುಳಿತು ಅಡಕತ್ತರಿಯಲ್ಲಿ ಅಡಕೆ ಕತ್ತರಿಸುವಾಗ, ಕುಳಿತಲ್ಲೇ ತಮ್ಮ ಬದುಕಿನ ಕಥೆಯನ್ನು ರೋಚಕವಾಗಿಸುವ ಬಗೆಯನ್ನೇ ಚಿಂತಿಸುವವರು ರಾಯರು. ಇತ್ತೀಚೆಗೆ ಆ ಎಲ್ಲಾ ಪುರಾಣಗಳ ಕೊನೆಗೆ ಹೊಸ ಭರತವಾಕ್ಯ ಸೇರಿಕೊಂಡಿದೆ : ನಾನಿಷ್ಟೆಲ್ಲ ಮಾಡಿದ್ದು ಯಾರಿಗಾಗಿ? ಮಗನಿಗಾಗಿ ಮತ್ತು ನಾಳೆ ಬರೋ ಸೊಸೆಗಾಗಿ … ರಾಯರ ಈ ಪುರಾಣಕಥೆಗಳನ್ನು ಹೊಸದಾಗಿ ಕೇಳಿಸಿಕೊಳ್ಳುವವರಿಗೆ ಅವರೊಬ್ಬ ಮಹಾನುಭವಿಯಂತೆ ತೋರುತ್ತದೇನೋ; ಆದರೆ ಈ ಊರಿನ ಎಲ್ಲರಿಗೂ ಗೊತ್ತಿದೆ, ಆ ಕಥೆಗಳು ಕೇವಲ ತಾಂಬೂಲ ಮೆಲ್ಲುವಾಗಿನ ಖಾಲಿ ಮನಸಿನ ಉತ್ಪನ್ನಗಳೆಂದು. ರಾಯರ ಇತ್ತೀಚಿನ ಬಹು ಪ್ರಚಾರದ ವಸ್ತುವೆಂದರೆ ಹೊಸದಾಗಿ ತಾವು ಕಟ್ಟಿಸಿರುವ ಮನೆ. ಇಟ್ಟಿಗೆ ಗೋಡೆಗಳ ಜಿಂಕ್‌ಶೀಟಿನ ಮನೆ ಅದು; ಸ್ವಂತದ ಮನೆಯೆಂಬುದಿದ್ದರೆ ಕೇದಾರನಿಗೆ ಹೆಣ್ಣು ಸಿಗದೆ ಎಲ್ಲಿ ಹೋದಾಳು ಎಂಬ ವಿವರಣೆ ಅದಕ್ಕೆ. ಗೊತ್ತಿಲ್ಲ, ಲೆಕ್ಕ ಇಟ್ಟವರ್‍ಯಾರು ! ಕೇದಾರನಿಗೆ ಬಂದಿದ್ದ ಜಾತಕಗಳನ್ನೆಲ್ಲ ಪಂಚಾಂಗದ ಕೋಷ್ಟಕಗಳ ಮಧ್ಯೆ ಇಟ್ಟು, ಜಾಲಾಡಿ, ಒಂದೂ ಸರಿಹೋಗದೆನಿಸಿ ನಿರಾಕರಿಸಿದ್ದೆಷ್ಟೋ!

ಎಲ್ಲಾ ಸರಿಹೋಯ್ತೆಂದು ಹೆಣ್ಣು ನೋಡುವ ತವಕದಲ್ಲಿ ಅತಿ ಮಾತಿನಿಂದಾಗಿ ವ್ಯವಹಾರ ಮುರಿದಿದ್ದೂ ಇದೆ. ಹೆಣ್ಣುಮಗುವೊಂದರ ತಂದೆಯಾಗದ ಹೊರತು ಹಲವಷ್ಟು ಸೂಕ್ಷ್ಮಗಳನ್ನು ಮನುಷ್ಯ ಕಲಿಯೋದಿಲ್ಲ ಎಂಬ ಮಾತು ರಾಯರ ಮಟ್ಟಿಗಂತೂ ಸತ್ಯ. ಕೇದಾರ ಆ ಪರಿ ಒಡ್ಡೊಡ್ಡಾಗಿ ಬೆಳೆಯುವುದಕ್ಕೆ ಮನೆಯಲ್ಲಿ ಅಕ್ಕತಂಗಿಯರೆಂಬ ಹೆಣ್ಣು ಜೀವಗಳು ಇಲ್ಲದಿದ್ದುದೂ ಕಾರಣವಿದ್ದೀತು. ರಾಯರ ಅಸೂಕ್ಷ್ಮತೆಯನ್ನೆಲ್ಲ ಪಡಿಯಚ್ಚಾಗಿ ಉಳಿಸಿಕೊಂಡು ಅವ ಹುಟ್ಟಿದ್ದ. ಮನೆ ನಡೆಸಿದ್ದೇನಿದ್ದರೂ ಜಾನಕಮ್ಮ. ರಾಯರದು ಅಂದಿನಿಂದ ಇಂದಿನವರೆಗೂ ಇದೇ ಕಂತೆಪುರಾಣಗಳ ಹಳೆ ಅಕ್ಕಿ ಮೂಟೆ, ಮಗನಿಗಿನ್ನೂ ಮದುವೆಯಾಗಿಲ್ಲವೆಂಬ ಚಿಂತೆಯ ಬಿಸಿ, ಇಷ್ಟಾದರೂ ಅವರನ್ನು ತಟ್ಟಿದ್ದೇ ದೊಡ್ಡದು. ಆದರೂ ಒಮ್ಮೊಮ್ಮೆ ತಮಗಷ್ಟೇ ಕೇಳುವಂತೆ ಸಮಾಧಾನ ಹೇಳಿಕೊಳ್ಳುತ್ತಿದ್ದರು, ಈ ಕಾಲದಲ್ಲಿ, ಮನೆಯಲ್ಲೇ ಇರುವ ಬ್ರಾಹ್ಮಣ ಹುಡುಗರಿಗೆ ಹೆಣ್ಣು ಸಿಗೋದಿಲ್ಲ ಎಂದು. ತೀರ ಎರಡು-ಮೂರು ತಿಂಗಳ ಈಚೆಗಿನ ಮಾತು ಹೇಳುವುದಾದರೆ ಕೇದಾರನಿಗೆಂದೂ ಮದುವೆಯೇ ಆಗುವುದಿಲ್ಲ ಎಂಬ ನಿರ್ಧಾರಕ್ಕೆ ಬಂದವರಂತೆ ಪದೇಪದೇ ರಾಯರು ಈ ಮಾತನ್ನು ಹೇಳಿಕೊಳ್ಳುತ್ತಿದ್ದರು.

ಕಳೆದ ಮೂರು ವರ್ಷಗಳಿಂದ ಅಪ್ಪ, ಮಗ, ತಾಯಿ ಮನೆಯಲ್ಲಿ ಒಟ್ಟಾಗಿರುತ್ತಿದ್ದುದೇ ರಾತ್ರಿಯೂಟದ ಸಂದರ್ಭದಲ್ಲಿ ಮಾತ್ರ. ಸೌಟಿನಿಂದ ಅಡುಗೆ ಬಡಿಸುವಾಗ ಪಾತ್ರೆ ತಗುಲಿ ಆಗುತ್ತಿದ್ದ ಶಬ್ದ ಬಿಟ್ಟರೆ ಉಳಿದಂತೆ ಊಟವೂ ಮೌನ; ನಿಶ್ಶಬ್ದ. ಎಷ್ಟೋ ಸಲ ಸುಮ್ಮನೇ ಹುಸಿ ಕೆಮ್ಮು. ಕೆಮ್ಮಿ ಜಾನಕಮ್ಮ ಮೌನವೊಡೆಯುವ ವ್ಯರ್ಥಪ್ರಯತ್ನ ಮಾಡುತ್ತಿದ್ದರು. ಆದರೆ ಮೌನದ ಪರದೆ ಅಷ್ಟೇನೂ ತೆಳುವಾದ್ದಾಗಿರಲಿಲ್ಲ. ಮೊದಲೆಲ್ಲ ಅಡುಗೆಯನ್ನು ಆಡಿಕೊಳ್ಳಲೆಂದಾದರೂ, ಅತಿ ಖಾರದ ಸಾರಿನ ಉರಿಯ ತಡೆಯದೆ ಸಿಟ್ಟಿನಿಂದಾದರೂ ರಾಯರು ಹೆಂಡತಿಯನ್ನು ಲಕ್ಷಿಸುವುದಿತ್ತು. ಆದರೆ ಇವತ್ತಿಗೆ ಅದೂ ಉಳಿದಿಲ್ಲ. ಪ್ರತಿದಿನ ಬಡಿಸುವಾಗಲೂ ಜಾನಕಮ್ಮ ಅಂದುಕೊಳ್ಳುತ್ತಾರೆ, ಇಂದಾದರೂ ರಾಯರಿಗೆ ಸಿಟ್ಟು ಬರಲಿ, ಆ ಕಾರಣದಿಂದಾದರೂ ಎರಡು ಮಾತಾಡಲಿ ಎಂದು. ಆದರೆ, ಊಹೂಂ, ಅದೆಂದಿಗೂ ಸಂಭವಿಸಲಿಲ್ಲ. ಮಗರಾಯನದು ಎಂದಿಗಿದ್ದರೂ ಗುಮ್ಮಕ್ಕಿ ಊಟವೇ ತಮ್ಮೊಳಗೇ ತಾವು ಕುಸಿದು ಕುಳಿತಿದ್ದಾರೆ ಜಾನಕಮ್ಮ. ದೂರದ ಬೆಂಗಳೂರಿನಲ್ಲಿ ನೌಕರಿ ಹಿಡಿದಿರುವ ಗಿರೀಶ ಹದಿನೈದೇ ದಿನದ ಹಿಂದೆ ಊರಿಗೆ ಬಂದಿದ್ದು, ಬಂದು ದಣಿವಾರಿಸಿಕೊಳ್ಳುವಷ್ಟರಲ್ಲೇ ಬಂಗಾರದಂಥ ಹುಡುಗಿಯೊಟ್ಟಿಗೆ ಮದುವೆಯಾದದ್ದು, ಇಂದೋ ನಾಳೆಯೋ ಬೆಂಗಳೂರಿಗೆ ಮರಳಿ ಹೊರಟು ನಿಂತಿದ್ದು … ಇದ್ಯಾವುದೂ ಜಾನಕಮ್ಮನಿಗೆ ತಿಳಿಯದ ವಿಷಯವೇನಲ್ಲ. ಕೇದಾರನ ಒಟ್ಟೊಟ್ಟಿಗೇ ಬೆಳೆದ ಗಿರಿಯ ವಿಷಯದಲ್ಲಿ ಮೊನ್ನೆಮೊನ್ನೆಯವರೆಗೂ ಇದ್ದುದು ಪುತ್ರವಾತ್ಸಲ್ಯವೇ. ಈಗಷ್ಟೇ – ಹದಿನೈದು ದಿನದಿಂದೀಚೆ ಮಾತ್ರ – ಭಾವಗಳ ಬಣ್ಣವೇ ಬದಲಾಗಿಹೋಗಿದೆ.

ಆ ಪೆದ್ದು ಮುಂಡೇದಕ್ಕೆ ಮದ್ವೆಯಾಗತ್ತೆ, ನನ್ ಮಗಂಗೆ ಮದ್ವೆ ಹೆಣ್ಣೂಂತ ಇಟ್ಟಿಲ್ವಾ ದೇವ್ರೆ ? – ಎಷ್ಟನೆಯ ಸಲವೋ ತಮ್ಮಲ್ಲೇ ಗೊಣಗಿಕೊಂಡದ್ದು ಇದು. ಯಾಕೋ ಗಿರಿಯ ವಿಚಾರದಲ್ಲಿ ರಾಯರದು ಎದೆ ತುಂಬ ಅಭಿಮಾನ; ಊರಿಗೆ ಬಂದಾಗೆಲ್ಲ ಇವರ ಮನೆಗೂ ಬಂದು ಬಾಯ್ತುಂಬ ನಮಸ್ಕಾರ ರಾಯಪ್ಪಣ್ಣ ಅನ್ನುತ್ತಿದ್ದುದಕ್ಕೋ, ಅಥವಾ ಸೆಂಟು ಆರದಿರುವ ಅವನ ನಿಲುವಿಗೋ ಅಥವಾ ಇನ್ನೇನಕ್ಕೋ ಗೊತ್ತಿಲ್ಲ. ಸುಬ್ಬುವಿನ ಮದುವೆ ಸುದ್ದಿ ಕೇಳಿದಾಗಲಿಂದ ರಾಯರ ಮುಖದಲ್ಲಿ ಎಂಥದೋ ಕಳೆ! ಹಾಗಂತ ಹೇಳಿಕೊಳ್ಳಲಾಗದ ತಮ್ಮದೇ ಮನಸಿನ ಬೇಲಿಗಳು. ರಾಯರು ಖುಷಿಖುಷಿಯಾದದ್ದು. ಜಾನಕಮ್ಮನಿಗೂ ಗೊತ್ತು. ಕೇದಾರನಿಗೆ ಮಾತ್ರ , ಅಪ್ಪನ ಈ ಕುಣಿತಗಳು ಮೈ ಉರಿಯನ್ನು ಹೆಚ್ಚಿಸಿದ್ದವು. ಋಣಾನುಬಂಧರೂಪೇಣ… ಎಂದು ರಾಯರು ವೇದಾಂತ ನುಡಿದಾಗಲಂತೂ ಪೂರ್ತಿ ಉರಿದುಹೋಗಿದ್ದ ಕೇದಾರ. ಒಟ್ಟಿನಲ್ಲಿ ಮದುವೆ ಮುಗಿದಾಗ ರಾಯರಲ್ಲಿದ್ದ ನಿರಾಳತೆ, ಒಳಮನೆಯ ಅಂತರಂಗದ ಪ್ರಶ್ನೆಯಾಗಿ ಉಳಿದುಹೋಗಿತ್ತು.

* * *
ಗಿರಿಯ ಜೊತೆ ಕೇದಾರನಿಗೆಂದೂ ವೈರ ಇರಲಿಲ್ಲ. ಹಾಗಂತ ಆ ಹಳೆಯ ಬಾಲ್ಯದ ದಿನಗಳಲ್ಲಿ ಸಮಾ ಜಗಳವಾದ ದಿನಗಳು ಇಲ್ಲವೆಂದೇನಲ್ಲ. ಆದರೆ ಮರುದಿನ ಬೆಳಿಗ್ಗೆ ಇಂಗ್ಲೀಷು ಟೀಚರಿಗೆ ಒಪ್ಪಿಸಬೇಕಿರುತ್ತಿದ್ದ ಹೋಂವರ್ಕ್ ಮಾಡಿಕೊಳ್ಳಲು ಕೇದಾರನಿಗೆ ಗಿರಿಯನ್ನು ಬಿಟ್ಟರೆ ಅನ್ಯ ಗತಿ ಇದ್ದಿರಲಿಲ್ಲ. ಬೆಳಗಿಂದ ಮಧ್ಯಾಹ್ನದವರೆಗೆ ಜಗಳವಾಡಿ, ಒಟ್ಟಿಗೇ ಕೂರುತ್ತಿದ್ದ ಶಾಲೆಯ ಬೆಂಚಿನಲ್ಲಿ ಪರಸ್ಪರರ ಜಾಗದ ಅತಿಕ್ರಮಣದ ಆರೋಪಗಳು ಮೊಳಗಿ, ಕೊನೆಯಲ್ಲಿ ಕಂಪಾಸ್ ಮೊನೆಯಿಂದ ಬೆಂಚಿನ ಮೇಲೆ ಗಡಿರೇಖೆ ಬರೆದುಕೊಂಡು… ಓಹ್, ಎಷ್ಟೆಲ್ಲ ರಂಪವಾಗುತ್ತಿದ್ದವಲ್ಲ! ಅಷ್ಟೇ ಹೊತ್ತಿನ ವೈರಗಳು ಅವೆಲ್ಲ. ಆಮೇಲೆ ಮತ್ತೆ ಸಂಜೆಯ ಹೊತ್ತಿಗೆ ಮನೆಗೆ ನಡಕೊಂಡು ಮರಳುವಾಗ ಹಾದಿಬದಿಯ ಬೆಟ್ಟದ ನೆಲ್ಲಿಕಾಯಿ ಮರ ಹತ್ತುವುದಕ್ಕೆ ಗಿರೀಶನಿಗೂ ಕೇದಾರನೇ ಬೇಕಿತ್ತು. ಮರ ಹತ್ತುವುದರಲ್ಲಿ ಕೇದಾರ ಆ ವಯಸ್ಸಿಗೇ ಆ ಪರಿಯ ಪರಿಣತಿ ಇಟ್ಟುಕೊಂಡವ. ಬೇಸಿಗೆಯ ದಿನಗಳಲ್ಲಿ ಮನೆಯ ಜನಗಳ ಕಣ್ಣು ತಪ್ಪಿಸಿ ನದಿಯಲ್ಲಿ ಈಜಲು ಹೋಗುವುದಕ್ಕೆ, ಮನೆಯಂಗಳದಲ್ಲಿ ಒಣಹಾಕಿದ್ದ ಹಲಸಿನಕಾಯಿ ಹಪ್ಪಳವನ್ನೋ, ಹುಣಸೆಹಣ್ಣನ್ನೋ ತಿನ್ನುವುದಕ್ಕೆ ಇಬ್ಬರಿಗೆ ಇಬ್ಬರೂ ಬೇಕಾಗಿದ್ದ ದಿನಗಳು ಅವು. ಗದ್ದೆಯಲ್ಲಿ ಮೇಯುತ್ತಿದ್ದ ಎಮ್ಮೆಯ ಬಾಲಕ್ಕೆ ಪಟಾಕಿ ಅಂಟಿಸಿ, ಬೆಂಕಿಯಿಟ್ಟ ರಭಸಕ್ಕೆ ಎಮ್ಮೆ ಕಂಗಾಲುಬಿದ್ದು, ಹೆಗಡೇರ ಮನೆಯ ಬಾಳೆತೋಟಕ್ಕೆ ನುಗ್ಗಿ ಅವಾಂತರ ಎಬ್ಬಿಸಿತ್ತು. ಆಗ ಸಣ್ಣಪ್ಪ ಹೆಗಡೇರ ಹತ್ರ ಹಿಗ್ಗಾಮುಗ್ಗಾ ಬೈಸಿಕೊಳ್ಳುವಾಗ ಇಬ್ಬರೂ ಇದ್ದರು. ಇನ್ನೊಂದಿನ ನಡುರಸ್ತೆಯಲ್ಲಿ ಬಿದ್ದಿದ್ದ ಆಕಳ ಸಗಣಿಯ ಮಧ್ಯೆ ಪಟಾಕಿ ಇಟ್ಟು ಸಿಡಿಸಿದ ರಭಸಕ್ಕೆ, ಸಗಣಿಯೆಲ್ಲಾ ಅಕ್ಕಪಕ್ಕಕ್ಕೆ ಸಿಡಿದು, ಹಾದು ಹೊರಟಿದ್ದ ಅಂಗನವಾಡಿ ಶಿಕ್ಷಕಿ ಶಾಂತಾಬಾಯಿಯ ಹೊಸ ಸೀರೆ ಪೂರ್ತಿ ಸಗಣಿಮಯವಾದಾಗ… ಆಗಲೂ ತಾವಿಬ್ಬರೂ ಒಟ್ಟಿಗೇ ಓಡಿ ಕಣ್ಮರೆಯಾಗಿದ್ದೆ ವಲ್ಲ! ನೆಲ್ಲಿಮರಕ್ಕೆ ಜೋತುಬಿದ್ದಿದ್ದ ಕೋಲ್ಜೇನು ತೆಗೆಯುವ ಸಾಹಸಕ್ಕೆ ಹೋಗಿ, ಜೇನುಹುಳುಗಳು ಕಡಿದು ತಾನು ಕೆಳಗೆ ಬಿದ್ದಿದ್ದಾಗ ಗಿರಿ ಎಷ್ಟೊಂದು ಅರ್ತಿಯಿಂದ ಉಪಚರಿಸಿದ್ದನಲ್ಲವಾ? ಮಳೆಗಾಲದಲ್ಲೊಂದು ದಿನ ಛತ್ರಿಯಿರದೆ ಬಂದಿದ್ದ ಕೇದಾರನೊಟ್ಟಿಗೆ ತನ್ನ ಹೊಸ ಕೊಡೆಯ ಅಡಿಯಲ್ಲಿ ಕರಕೊಂಡು ಹೊರಟಿದ್ದ ಗಿರಿ, ಹೋಗ್ಲಿ ಬಿಡು ಎಂದುಕೊಂಡು ಇದ್ದೊಂದೇ ಕೊಡೆಯನ್ನೂ ಮಡಿಸಿಟ್ಟು ಇಬ್ಬರೂ ಮಳೆಯಲ್ಲಿ ತೊಯ್ದಿದ್ದು… ಎಷ್ಟೆಲ್ಲಾ ನೆನಪುಗಳು ಆ ಒಟ್ಟೊಟ್ಟಿನ ದಿನಗಳದ್ದು!!

ಅರಿವಿಗೇ ಬರದಂತೆ ಸೂರ್ಯ ಎಷ್ಟೋ ಸಲ ಭೂಮಿಗೆ ಬಂದು ಹೋದ. ವರ್ಷಗಳೇ ಉರುಳಿದವು. ಒಟ್ಟೊಟ್ಟಿನ ದಿನಗಳು ಎಸ್ಸೆಸ್ಸೆಲ್ಸಿ ಮುಗಿದಲ್ಲಿಯೇ ಮುಗಿದುಹೋದವು. ಬಹುಶಃ ಆ ಬೇಸಗೆಯ ಒಂದು ರಾತ್ರಿ, ಊರ ಜಾತ್ರೆಯಲಿ ಗಿರಿ ಮತ್ತು ಕೇದಾರ ಒಟ್ಟೊಟ್ಟಿಗೇ ನಿಂತು ಕಡ್ಲೆಹಿಟ್ಟಿನ ಮಿರ್ಚಿ ತಿಂದಿದ್ದೇ ಕೊನೆ. ಆ ಮರುದಿವಸ ಗಿರಿ ಅಧ್ಯಯನದ ಹೆಸರಲ್ಲಿ ಊರು ಬಿಟ್ಟು ಪೇಟೆ ಸೇರಿದ. ಹಾಗೆ ಹೊರಟು ನಿಂತವನನ್ನು ಕಣ್ತುಂಬಿಕೊಂಡಂದು ಯಾಕೋ ಎಂದಿಗೂ ಇಲ್ಲದ ಕಣ್ಣೀರನ್ನು ತಂದುಕೊಂಡಿದ್ದರು ರಾಯರು ಎಂಬುದು ಜಾನಕಮ್ಮನವರ ಬಲವಾದ ಅನುಮಾನ. ಹೋಗಿಬರುತ್ತೇನೆಂದು ಹೇಳಲು ಬಂದಿದ್ದ ಗಿರಿಯನ್ನು ಪೂರ್ಣ ಪೂರ್ಣ ಮನಸ್ಸಿನಿಂದ ತಲೆ ನೇವರಿಸಿ ಆಶೀರ್ವದಿಸಿ ಕಳುಹಿಸಿದ್ದರು ರಾಯರು ಎಂಬುದು ಮಾತ್ರ ಕೇದಾರನಿಗೂ ನೆನಪಿದೆ. ಆದರೆ ಹಾಗ್ಯಾಕಾಯಿತೋ ಗೊತ್ತಿಲ್ಲ. ಕೇದಾರನ ವಿಷಯದಲ್ಲಿ ಮಾತ್ರ ಅಂಥ ಮೃದುತನ ರಾಯರಿಗೆ ಎಂದಿಗೂ ಬಂದೇ ಇಲ್ಲ, ಸ್ವಂತ ಮಗನೇ ಆದರೂ!!

ಊರಿನ ಗಾಳಿಯೊಂದಿಗೆ ಮಾತ್ರವೇ ಮಾತಾಡುತ್ತಾ ಕೇದಾರ ಇಲ್ಲಿಯೇ ಉಳಿದುಬಿಟ್ಟ. ಗಿರೀಶ ಹಾಗೆ ಓದಲು ಹೋದ ಬಳಿಕವೂ ಎರಡೆರಡು ವರ್ಷ ಈತ ಮತ್ತೆ ಊರಂಚಿನ ಆಲದ ಮರದ ಬಿಳಲುಗಳನ್ನು ಜೋತ; ನೆಲ್ಲಿ ಮರದ ಕೊಂಬೆಗಳ ಮೇಲೆ ತಾಸುತಾಸು ಕಳೆದ. ಕಾಲ ಅಷ್ಟಷ್ಟೇ ಉರುಳಿಹೋಯ್ತು. ಊರ ದೇವಸ್ಥಾನದ ಅರ್ಚಕರು ಗದ್ದೆಯಂಚಿನಲ್ಲಿ ಹಾವು ಕಚ್ಚಿ ಸತ್ತುಹೋದ ಬಳಿಕ ಕಾಳಕ್ಷರ ಮಂತ್ರ ಕಲಿತ್ತಿದ್ದ ಕೇದಾರ, ಬರೀ ಉಂಡಾಡಿ ಗುಂಡನಾಗಿರುವುದರ ಬದಲಿಗೆ ಹಾಗೇ ನಿತ್ಯಪೂಜೆ ಮಾಡತೊಡಗಿದ. ಅಂತೂ ಆ ದಿವಸ, ಊರಿನ ಎಷ್ಟೋ ಮಂದಿ ನಿರಾಳ ಉಸಿರಾಡಿದರು, ಕಪಿಯೊಂದಕ್ಕೆ ಕಡಿವಾಣ ಬಿತ್ತೆಂಬ ಭಾವದಲ್ಲಿ – ಅಷ್ಟೆ; ಅದಕ್ಕಿಂತ ಮುಂದೆ ಕೇದಾರನ ಬಗ್ಗೆ ಯಾರೆಂದರೆ ಯಾರೂ ವಿಚಾರ ಮಾಡಲಿಲ್ಲ. ಯಾರೇಕೆ, ಸ್ವತಃ ಅವನೂ ಮಾಡಲಿಲ್ಲ. ಈ ಮಧ್ಯೆ ದೂರಕ್ಕಿದ್ದ ಗಿರೀಶ, ಹಬ್ಬಕೊಮ್ಮೆ ಹುಣ್ಣಿಮೆಗೊಮ್ಮೆ ಊರಿಗೆ ಬರುತ್ತಿದ್ದ. ಪ್ರತಿ ಸಲ ಬಂದಾಗಲೂ, ಕೇದಾರನ ನೆನಪುಗಳ ಕಡತದಲ್ಲಿನ ಗಿರೀಶನಿಗೂ, ಈ ನೀಟಾಗಿ ಇಸ್ತ್ರಿಯಾಗಿರುವ, ಮಿರುಗುವ ಕೈಗಡಿಯಾರದ, ಕಟಕಟವೆನ್ನುವ ಬೂಟುಗಾಲುಗಳ ಗಿರಿಗೂ ತಾಳೆಯಾಗದೆ, ಇಬ್ಬರಿಗೂ ತಿಳಿಯದಂತೆ ಆಳಆಳದ ಭಿನ್ನತೆಯ ನದಿ ಹರಿಯಿತು ಅವರ ಮಧ್ಯೆ.

ಹಳೆಯ ದಿನಗಳಲ್ಲಿ ಇಬ್ಬರೂ ಜೀಕಿ ಬಿಟ್ಟ ಜೋಕಾಲಿ, ಹಾಗೇ ನಿಧಾನಕ್ಕೆ ತೂಗಿತೂಗಿ ನಿತ್ರಾಣವಾಗಿ, ಈಗ ನಿಂತುಬಿಟ್ಟಿತ್ತು. ಒಂದಷ್ಟು ಕಾಲ ಗಿರಿ ಊರಿಗೆ ಬಂದು ದೇವಸ್ಥಾನಕ್ಕೆ ಬಂದಾಗ ದೇವರನ್ನೂ, ಕೇದಾರನನ್ನೂ ಮಾತಾಡಿಸಿಕೊಂಡು ಹೋಗುತ್ತಿದ್ದನಾದರೂ ಬರಬರುತ್ತಾ ಅವೆಲ್ಲ ಮುಗುಳುನಗೆಗೆ ಸೀಮಿತವಾದದ್ದೂ ನಿಜವೇ. ಕಳೆದೊಂದು ವರ್ಷದ ಈಚೆಯಿಂದಂತೂ ಗಿರಿ, ಬಟ್ಟೆಗಳಿಗೆ ಮಾತ್ರವಲ್ಲ, ಮುಖಕ್ಕೂ ಇಸ್ತ್ರಿ ಹಾಕಿಕೊಂಡಿದ್ದನೋ ಎಂಬುವವನಂತೆ ನಗೆಯನ್ನೇ ಅರಳಿಸುತ್ತಿರಲಿಲ್ಲ. ಕೇದಾರನಾದರೂ, ಇನ್ನೇನು… ಆತ ಸೌಜನ್ಯದ ವರ್ತನೆ ತೋರದಿದ್ದರೆ ಅದು ಗಿರಿಯ ಬಳಿ ಮಾತ್ರವೇ. ಅವನು ದೂರವೇ ನಿಂತಂದಿನಿಂದ ಕೇದಾರನಿಗೆ ತುಟಿಯರಳಿಸುವ ಪ್ರಮೇಯವೇ ಬರಲಿಲ್ಲ. ಇವತ್ತಿಗಾದರೂ ವಸ್ತುತಃ ಮದುವೆಯೆಂಬುದು ಕೇದಾರನ ಮನಸಿನ ಬಯಕೆಯೇನೂ ಅಲ್ಲ; ಸುತ್ತಲಿನವರ ಒತ್ತಾಯಕ್ಕೆ, ಹೇರಿಕೆಗೆ ಅವ ಹೊತ್ತುಕೊಂಡಿರುವ ಹೊರೆ ಅದು. ಬಹುಶಃ ಅವನು ತನ್ನ ಗುನುಗುಗಳೊಂದಿಗೆ ಜೆಡ್ಡುಗಟ್ಟಿದ ನಿಶ್ಶಬ್ದದೊಂದಿಗೆ ಏಕಾಂಗಿಯಾಗಿಯೇ ಇದ್ದುಬಿಡಬಲ್ಲ. ಸಂಚಲನೆ ಅವನ ಶೈಲಿಯಲ್ಲ. ಬದುಕೆಂಬುದನ್ನು ಹಂಚಿಕೊಂಡು ಬದುಕೋಣ ಬಾ ಎಂದು ಸಂಗಾತಿಯನ್ನು ಕರೆಯುವುದಕ್ಕೆ ಅವನಲ್ಲಿ ಅಂಥ ಪರಿಯ ಯಾವ ಭಾವನೆಯೂ ಇಲ್ಲ. ಅಪ್ರೌಢ ವಯಸ್ಸಿನಲ್ಲೇ ಆಗಿದ್ದಿದ್ದರೂ ಆತ ಈವರೆಗೆ ಮನಸೆಂಬುದನ್ನು ತೆರೆಯುವ ಪ್ರಯತ್ನ ಮಾಡಿದ್ದಿದ್ದರೆ ಅದು ಗಿರಿಯ ಹತ್ತಿರ ಮಾತ್ರವೇ. ಇವತ್ತಿಗೆ ಗಿರಿಯ ಬದುಕು ಹರಿಯುತ್ತಿರುವ ಮಾರ್ಗವೇ ಬೇರೆ, ಕೇದಾರನದೇ ಬೇರೆ, ಕೇದಾರನೆಂದರೆ ಅಕಸ್ಮಾತ್ ಅರ್ಧಕ್ಕೆ ನಿಂತ ಮಧುರ ಗಾಯನದಂಥವನು; ಅರೆನಿದ್ರೆಯಲ್ಲೇ ಎಚ್ಚರವಾದ ಪುಟ್ಟ ಮಕ್ಕಳ ಅಸಹನೆಯಂಥವನು. ಅವನ ವಿಕ್ಷಿಪ್ತ ಶೃತಿಯನ್ನು ತಿಳಿದು ಮರುನುಡಿಸುವ ಮಾಯಾವಿ ಬರುವವರೆಗೂ ಆತ ಬದಲಾಗಲಾರ.

3
ಅವನಿಗೆಂದೂ ಇಂಥ ಭಾವಗಳು ಎದೆ ತುಂಬ ಹಾದುಹೋದದ್ದಿಲ್ಲ. ಇವತ್ತೇ ಇದೇ ಕ್ಷಣವೇ ಮೊದಲು; ಅಷ್ಟು ನವಿರುತನವೊಂದು ರೇಷ್ಮೆಯ ನುಣುಪಿನಂತೆ ತನ್ನ ಮನಸನ್ನು ಎಷ್ಟು ಅಪ್ತವಾಗಿ ನೇವರಿಸುತ್ತಿದೆ ಎಂದೆನಿಸಿತು. ಕೇದಾರ ಹಿಂದೆಂದೂ ಅರಿಯದಿದ್ದ ವಿಚಿತ್ರ ಮೃದು ಕಂಪನಕ್ಕೆ ಅಚ್ಚರಿಗೊಂಡ. ದೇವಾಲಯದ ಗರ್ಭಗೃಹದ ಬಾಗಿಲ ಮುಂದೆ ನಿಂತು, ಆರತಿಗೆ ಕೈ ನೀಡಿ ಕಣ್ಣಿಗೊತ್ತಿಕೊಂಡು, ದೇವರಿಗೆ ಕೈ ಮುಗಿಯುತ್ತಾ ತುಸುವೇ ಕತ್ತು ಬಾಗಿಸಿದ ಅವಳು. ಅವಿರತವಾಗಿ ನೆತ್ತಿಯಿಂದಿಳಿದುಬಿದ್ದ ಕಪ್ಪು ನೀಳ ಕೇಶರಾಶಿ, ಕೈ ಮುಗಿಯಲೆಂದು ಜೋಡಿಸಿದ ಬೆಣ್ಣೆಯಷ್ಟೇ ಮುದ್ದು ಬೆರಳುಗಳು, ಮೈ ತುಂಬ ಉಟ್ಟ ಸೀರೆ, ಕಾರಣವಿರದೆ ನಾಚಿಕೊಂಡಂತಿದ್ದ ಕಂಗಳು… ಪುಟ್ಟ ಹಣತೆಯೊಂದು ಹುಬ್ಬುಗಳ ಮಧ್ಯೆ ಬೆಳಗುತ್ತಿರುವಂಥ ತಿಲಕ, ಎಳೆಶಿಶುವೊಂದನ್ನು ಈಗಷ್ಟೇ ಮಲಗಿಸಿ ಎದ್ದುಬಂದು ಹೀಗಿಲ್ಲಿ ಕೈ ಮುಗಿಯುತ್ತಿರುವಳೇನೋ ಎಂಬಂಥ ಅವಳ ನಿಲುವು…

ಕೇದಾರನಾಳದಲ್ಲಿ ಕಾವ್ಯವೇನೂ ಹುಟ್ಟಲಿಲ್ಲ. ಆದರೆ ಅವನೆಂದೂ ತೆರೆದು ನೋಡಿರದ ಮನಸಿನ ಅಜ್ಞಾತ ಕದಗಳನ್ನು ಯಾರೋ ತಟ್ಟುತ್ತಿರುವ ಅನುಭವ. ಪ್ರಜ್ಞೆ ಮೂಡಿದಂದಿನಿಂದ ಇಂದಿನವರೆಗೂ ಸುಳಿಯದೊಂದು ಮೃದುಲತೆ ಅವನಲ್ಲಿ ಸುಳಿದುಹೋಯ್ತು. ಬದುಕಿನ ಉಳಿದಾವ ಭಾಗವೂ ಅವನಿಗೆ ಈ ಕ್ಷಣಕ್ಕೆ ವಿಷಯವಾಗಲಿಲ್ಲ. ಇದುವರೆಗೆ ಬದುಕಿಗಿಳಿದಿರದಿದ್ದ ಮೃದುಲತೆಯನ್ನು ಈ ಕ್ಷಣ, ಒಂದು ಹನಿಯನ್ನೂ ಬಿಡದಂತೆ ತನ್ನೊಳಗೆ ಬಿಟ್ಟುಕೊಳ್ಳುವ ಧ್ಯಾನದಂಥ ಮನಸು. ಆಕೆ ತಿರುಗಿ ಹೋಗುವಾಗ ತುಟಿಯಂಚಿನಲ್ಲಿ ಕಿರುನಕ್ಕಳಾ ಕೇದಾರನೆಡೆಗೆ? ನಿಶ್ಚಿತವಿಲ್ಲ. ಆದರೆ ಇದೇ ಇದೇ ಮೊದಲ ಬಾರಿಗೆ ಕೇದಾರನೆದೆಯಲ್ಲಿ ಅರಳಿದೊಂದು ಜೀವಂತ ನಗೆ, ಅವನ ತುಟಿಗಳ ಮೇಲೆ ಸುಳಿದದ್ದು ಮಾತ್ರ, ಸತ್ಯ. ನಿಜವೆಂದರೆ ಸ್ತ್ರೀತ್ವವೆಂಬ ಮಾರ್ದವತೆಯನ್ನು ಅವನೆಂದಿಗೂ ಮನಸಾ ನೋಡಿರಲೇ ಇಲ್ಲ. ಇವತ್ತಿದು ಅವನೊಳಗಿನ ಹೊಸ ಯುಗ, ಹೊಸ ಪರ್ವ! ಒಡ್ಡುತನದ ಜಿಡ್ಡನ್ನೆಲ್ಲ ಒಡೆದು ಒಮ್ಮಿಂದೊಮ್ಮೆಲೇ ಹೂಬನಕ್ಕೆ ಜಿಗಿದಂಥ ಆನಂದ!! ಬಿಳಲುಗಳು ಹೆಣೆದಿದ್ದ ಬದುಕಿನ ಆವರಣಗಳ ಕಳಚಿ, ಮುಕ್ತ ಸ್ವಚ್ಛಂದ ಮಳೆಗೆ ಮೈಯೊಡ್ಡಿದಂಥ ಮನಸು. ನಿಂತನಿಂತಲ್ಲೇ ಕೇದಾರ ಬದುಕೆಲ್ಲ ಹೊಸದೆಂಬಂತೆ ಸಂಭ್ರಮಿಸಿದ.

ಕೈಲಿದ್ದ ಅರತಿ ತಟ್ಟೆಯಲ್ಲಿ ಕರ್ಪೂರದ ಜ್ವಾಲೆ ಉರಿದುರಿದು, ಇದೀಗ ನೀರಿನಿಂದ ಹೊರ ತೆಗೆದ ಮೀನು ಬದುಕಲು ಪ್ರಯತ್ನಿಸುತ್ತಾ ಒದ್ದಾಡುವಂತೆ ಆರಿಹೋಗದೇ ಇರುವ ಪ್ರಯತ್ನಕ್ಕೆ ತೊಡಗಿತ್ತು. ತನ್ನನ್ನು ಪುನೀತಗೊಳಿಸಿದ ಈ ನವವಧುವಿನ ಮುಗ್ಧ ಕಂಗಳಿಂದ ದೂರ ಸರಿಯಲು ಕೇದಾರನಿಗೇನೂ ಮನಸಿರಲಿಲ್ಲ. ಆದರೆ ಹಿಡಿದುಕೊಂಡಿದ್ದ ಅರತಿ ತಟ್ಟೆಯ ಬಿಸಿ ಕೈಬೆರಳುಗಳನ್ನು ಚುರುಗುಟ್ಟಿಸಿತು. ಇವ ಹೀಗೇ ನಿಂತಿದ್ದು ಕಂಡು, ಗಿರಿಗೆ ಏನೆನ್ನಿಸಿತೋ ಪರ್ಸಿನಿಂದ ಹಸಿರು ಗಾಂಧಿ ನೋಟೊಂದನ್ನು ತೆಗೆದು ಆರತಿ ತಟ್ಟೆಗೆ ಹಾಕಿದ. ಕೇದಾರನಿಗೆ ಪಿಚ್ಚೆನಿಸಿತು. ಹೀಗೆ ಏಳು ನಿಮಿಷ ಅರತಿ ತಟ್ಟೆ ಹಿಡಿದು ಎದುರಿಗೆ ನಿಂತಿದ್ದು ನಿನ್ನ ನೋಟಿಗಾಗಿ ಅಲ್ಲ ಎಂದು ಅರಚಬೇಕೆನ್ನಿಸಿತು… ಆದರೆ ಅದೇ ಕ್ಷಣ… ತಾನು ಹಾಗೇ ನಿಂತಿದ್ದರೆ ಬೇರೆ ಅರ್ಥ ಬರುವುದಕ್ಕೂ ಸಾಧ್ಯವಿಲ್ಲವೆನಿಸಿ ಅವನು ಸುಮ್ಮನೇ ಉಳಿದ. ಅಷ್ಟೊತ್ತಿಗಾಗಲೇ ಆ ಅವಳು, ಸಂಗಾತಿಯ ಕೈಯಲ್ಲಿ ಕೈಯಿಟ್ಟು ನಿಧಾನಕ್ಕೆ ಮರಳಿ ಹೊರಟು ನಿಂತಿದ್ದಳು; ಸಂಜೆ ಹೊತ್ತಿಗೆ ಬಂದು ಕತ್ತಲ ಗುಡಿಯಲ್ಲಿ ಮಂಗಳದೀಪ ಬೆಳಗಿ, ಅಷ್ಟೇ ನಿಸ್ವೃಹತೆಯಿಂದ ಮರಳುವ ತಾಪಸ ಕನ್ಯೆಯಂತೆ, ಅವಳ ಕಂಗಳಲ್ಲಿ ಇದ್ದುದು, ಕೇದಾರನೆದೆಯಲ್ಲಿ ಹೊತ್ತಿದ ಮಂಗಳದೀಪ ಆರದೆ ಉರಿಯಲಿ ಎಂಬ ಇಚ್ಛೆ!? ಕೇದಾರ ಕಂಗಳ ತುಂಬ ಹೇಳತೀರದ ಗೌರವಭಾವವನ್ನಿಟ್ಟುಕೊಂಡು, ದೇವಾಲಯದ ಶಿಲಾಸ್ತಂಭದೊಂದಿಗೆ ಇನ್ನೊಂದು ಕಂಭವೇ ಆಗಿ ನಿಂತುಬಿಟ್ಟ. ಮುಚ್ಚಿದ ಕಂಗಳ ಹಿಂದೆ, ಸಂಧ್ಯಾವಂದನೆಯ ಅರ್ಘ್ಯದ ಜೊತೆಗೆಲ್ಲೋ ಈ ದೀಪದ ಹೆಣ್ಣು ಸಜೀವ ಅರಾಧನೆಯ ಮೂರ್ತಿಯಾದಂಥ ಚಿತ್ರ. ಅಮ್ಮನನ್ನು ಅಮ್ಮಾ ಎಂದು ಎದೆ ತುಂಬಿ ಕರೆವ ಭಾವ. ದೀಪದ ಹೆಣ್ಣು ಕೇದಾರನನ್ನು ಯಾವ ಭಾವಕ್ಕೂ ಅಂಟಿಸಿ ನಿಲ್ಲುತ್ತಿಲ್ಲ. ಬದಲಿಗೆ, ಅಂಗೈಯಗಲದ ಆಗಸದಲ್ಲಿ ಬ್ರಹ್ಮಾಂಡ ಕಾಣುವ ಕಲಾವಂತಿಕೆ ಹೇಳಿಕೊಟ್ಟು ಹೊರಟಿದ್ದಾಳೆ. ಹೊರಗೆ, ಅವರಿಬ್ಬರೂ ಕುಳಿತು ಬಂದಿದ್ದ ಸ್ವಿಫ್ಟ್ ಕಾರು ಸಣ್ಣದೊಂದು ಕೆಮ್ಮು ಕೆಮ್ಮಿ ಹೊರಟ ಸದ್ದಾಯಿತು. ಕೇದಾರ ಹೊರಗೋಡಿ ಬಂದ, ಕವಿದು ನಿಂತಿರುವ ಪೆಟ್ರೋಲಿನ ಘಮವನ್ನು ಆಸ್ವಾದಿಸಲಿಕ್ಕೆಂದಲ್ಲ. ಬದಲಿಗೆ, ದೀಪ ಬೆಳಗಿದಾಕೆಯ ಪಾದದ ಗುರುತು ಮಣ್ಣ ಮೇಲೆ ಉಳಿದಿರಬಹುದಾ ಎಂದು ನೋಡಲಿಕ್ಕೆ. ಅವಳನ್ನು ಹೊತ್ತ ಕಾರು ಉದ್ದ ದಾರಿಯಲ್ಲಿ ಸಾಗಿ ಕಣ್ಮರೆಯಾಯಿತು.

 

* ನವೀನ ಭಟ್ ‘ಗಂಗೋತ್ರಿ’, ಶೃಂಗೇರಿ

Advertisements

About sujankumarshetty

kadik helthi akka

Posted on ನವೆಂಬರ್ 5, 2010, in ಕತೆ, ಸಣ್ಣ ಕಥೆ and tagged , . Bookmark the permalink. ನಿಮ್ಮ ಟಿಪ್ಪಣಿ ಬರೆಯಿರಿ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: