ವಂದೇ ಮಾತರಂ

 

“ಬೋಲೊ ಮಾತಾ ಕೀ… ಜೈ
ಮಹಾತ್ಮಾ ಗಾಂಧಿ ಕೀ… ಜೈ
ಜವಾಹರಲಾಲ ನೆಹರೂ ಕೀ… ಜೈ
ಸುಭಾಸಚಂದ್ರ… ಮಾತರಂ. ಒಂದೇ… ಮಾತರಂ”

ಜಿಟಿ ಜಿಟಿ ಸುರಿವ ಮಘಾ ಮಳೆಯಲ್ಲಿ ನೆನೆಯುತ್ತ ಕೋಲೂರಿಕೊಂಡೇ ತುಂಗಜ್ಜಿ ಅಂಗಳದಲ್ಲಿ ಪ್ರಭಾತ ಫೇರಿ ನಡೆಸಿದ್ದಳು. ಅಂಗಳದ ಆ ತುದಿಯಿಂದ ಈ ತುದಿಗೆ ಟಕ ಟಕ ನಡೆಯುತ್ತ, ಭಾರೀ ಉತ್ಸಾಹದಿಂದ ಜೈ ಜೈ ಕೂಗುತ್ತ ಕೈ ಎತ್ತಿ ಮುಷ್ಠಿ ಕಟ್ಟಿ ಗಾಳಿಗೆ ಗುದ್ದುತ್ತ ತನ್ನೊಳಗೇ ಮುಳುಗಿ ಹೋಗಿದ್ದಳು. ಅದೇ ಹೊತ್ತಿಗೆ ಯಾಕೊ ಹೊರಗೆ ಬಂದ ಸೊಸೆ ಸಾವಿತ್ರಿ “ಅಯ್ಯೊ ಅಯ್ಯೊ! ಮಳೆಯಲ್ಲಿ ತೋಯ್ತಾ ಇದ್ದೀರಲ್ಲ ಮಕ್ಕಳ ಹಾಂಗೆ! ನಿಮ್ಮ ತಲೆ ಏನು ಪುರಾಯ ಹನ್ನೆರಡಾಣೆ ಆಗ್ಹೋಯ್ತಾ ಹೆಂಗೆ? ನಾಳೆ ಜ್ವರ ಬಂದು ಮಲಗಿದ್ರೆ ಓದ್ದಾಡುವವ್ಳು ನಾನು… ಬನ್ನಿ ಸುಮ್ನೆ ಮೇಲೆ…” ಅನ್ನುತ್ತ ಅಜ್ಜಿಯ ಕೈ ಹಿಡಿದೆಳೆದು ಮನೆಯೊಳಗೆ ಕರೆತರುತ್ತಿದ್ದಾಗ ಆಗಷ್ಟೇ ಎಚ್ಚರಾದಂತೆ ಪಿಳಿ ಪಿಳಿ ಸೊಸೆಯನ್ನೇ ನೋಡಿ, ಏನೊ ತಪ್ಪು ಮಾಡಿ ಸಿಕ್ಕಿಬಿದ್ದ ಹುಡುಗಿಯಂತೆ ನಾಚಿ, ತಲೆ ಕೆಳಗೆ ಹಾಕಿದ್ದು ಕಂಡು ಯಾಕೊ ಸಾವಿತ್ರಿಯ ಕರುಳು ಗಂಟಲಿಗೇ ಬಂತು. ಅಜ್ಜಿಯ ಮಳ್ಳಿಗೆ ನಗೆಯೂ ಉಕ್ಕಿತು.

ಅಖಂಡ ಎಂಬತ್ತೆಂಟು ಮಳೆಗಾಲ ಕಂಡು ನುಗ್ಗು ನುರಿಯಾದ ಜೀವ! ಎಲುಬು ಚರ್ಮ ಮಾತ್ರವಾಗಿರುವ ಗೂಡನ್ನು ತೊರೆಯಲಾರದ ವ್ಯಾಮೋಹದಿಂದ ಆತ್ಮ ಪಕ್ಷಿ ಅದಕ್ಕಂಟಿಕೊಂಡಿರಬೇಕು. ಬೆಳ್ಳಿ ಸರಿಗೆಯಾದ ನೂರೊಂದು ತಲೆಗೂದಲನ್ನು ಬಾಚಿ ಹಿಂದೆ ಕಟ್ಟದ ಬೆಳ್ಳುಳ್ಳಿ ಗಂಟು. ಬೆಳ್ಳಕ್ಕಿಯಷ್ಟು ಬೆಳ್ಳಗಿನ ಸೀರೆ ಪಲಕ. ಹಸಿರು ಹಣೆ-ಖಾಲಿ ಕೊರಳು-ನರ ನರ ಮೇಲೆದ್ದ ಬರಿಗೈ. ಆದರೆ ಕಣ್ಣೊ?… ಕರೆಂಟಿಲ್ಲದ ಜಗುಲಿಗೆ ಹಚ್ಚಿಟ್ಟ ಹಣತೆ ದೀಪ. ಆ ಕಣ್ಣಲ್ಲಿ ಇಡೀ ಜಗತ್ತನ್ನೇ ಒಂದೇ ಉಸಿರಿಗೆ ಊದಿ ಹಾರಿಸಿಬಿಡುವ ಭಾವ. ಮುಖದ ನೂರು ನಿರಿಗೆಗಳಲ್ಲಿ ನೂರಾರು ಸುಖದುಃಖಗಳನ್ನು-ಸಾವಿರ ಸೋಲು ಗೆಲವುಗಳನ್ನು ನುಂಗಿ ನೀರು ಕುಡಿದು ಬಚ್ಚಲಲ್ಲಿ ಬಿಟ್ಟ ಧೈರ್ಯ. ದೇಹಕ್ಕೆ ಬಂದ ಮುಪ್ಪನ್ನೂ-ಮನಸಿಗೆ ಆಗೀಗ ಅಡರಿಕೊಳ್ಳುವ ಮರೆವನ್ನೂ ಗುಡಿಸಿ ಒಲೆಗೆ ಹಾಕುವ ಆತ್ಮವಿಶ್ವಾಸ.

…ಸಾವಿತ್ರಿ ಮತ್ತೊಮ್ಮೆ ಅತ್ತೆಯ ಮುಖವನ್ನೇ ದಿಟ್ಟಿಸಿದಳು… ಹೇಳಿಕೇಳಿ ಅತ್ತೆ ಸೊಸೆ ಸಂಬಂಧ. ಒಬ್ರು ಒಂದು ಮಾತು ಹೇಳಿದ್ರೆ ಸಾಕಾಗ, ಎರಡು ಹೇಳಿದ್ರೆ ಹೆಚ್ಚು. ಅವರೆಂದಾದ್ರೂ ತಾಯಿ ಮಗಳಾಗಲು ಸಾಧ್ಯವಾ? ಅದೇನೊ ಒಂದು ನಮೂನಿ ವಾರೆ ವಾರೆ ಮಾತು. ದುರು ದುರು ಬೆಂಕಿ ನೋಟ. ಎಲ್ಲೊ ಒಮ್ಮೊಮ್ಮೆ ಪರಸ್ಪರ ಪ್ರೀತಿ ಉಕ್ಕಿ ಹರಿಯುವದೂ ಉಂಟು. ಸಾವಿತ್ರಿ ಈ ಮನೆಗೆ ಬಂದ ಮೂವತ್ತೈದು ವರ್ಷಗಳಲ್ಲಿ ಅತ್ತೆ ಸೊಸೆ ನಡುವೆ ಅದೆಷ್ಟು ಸಾವಿರ ಜಗಳಗಳಾಗಿವೆಯೊ ಅವರಿಬ್ಬರಿಗೂ ಲೆಕ್ಕವಿಲ್ಲ. ಆದರೆ ಆ ಜಗಳಗಳಲ್ಲಿ ಅವರಿಬ್ಬರ ಬಾಯಿಂದ ಇಬ್ಮರ ಕುಲಗೋತ್ರಗಳೂ ಉದ್ಧಾರವಾಗಿವೆಯೆಂಬುದಷ್ಟು ಸತ್ಯ. ರಟ್ಟೆಗಿಳಿಯಲಾರದೆ ಹೊಟ್ಟೆಯಲ್ಲೇ ಉಳಿದ ಯಾವ್ಯಾವುದೊ ಸಿಟ್ಟುಗಳು-ಯಾವ್ಯಾವುದೊ ನಿರಾಶೆ ಅವಮಾನಗಳು-ಇನ್ಯಾವುದೊ ಭೀತಿ ಅಸಹನೆಗಳು ಕಿಡಿನುಡಿಗಳಾಗಿ ಛಟ ಛಟಿಲ್ಲನೆ ಸಿಡಿದಿದ್ದಷ್ಟು ಸತ್ಯ. ಆ ಝಳದಲ್ಲಿ ಮನೆ ಮಗನೂ-ಮೊಮ್ಮಕ್ಕಳೂ ಬೆಂದು ಬಸವಳಿದದ್ದೂ ನಿಜ.

ಆದರೆ ಮತ್ತೊಂದು ತಾಸಿಗೆ ಏನೂ ಆಗಿಯೇ ಇಲ್ಲವೆಂಬಂತೆ `ಅತ್ತೆ, ನಿಮಗೆ ಫಳಾರಕ್ಕೇನು ಮಾಡ್ಲಿ?’ ಸೊಸೆ ಕೇಳಬೇಕು. `ಒಂದು ತುತ್ತು ಅವಲಕ್ಕಿ ಮಜ್ಜಿಗೆ ತಿಂತೇನೆ ಅಂತ ಗೊತ್ತಿದ್ರೂ ದಿನಾ ಕೇಳ್ತೀಯಲ್ಲೆ ಮಾರಾಯ್ತಿ, ನಾ ನಿಂಗೇನ ಹೇಳ್ಲಿ?’ ಅತ್ತೆ ಅಲವತ್ತುಕೊಳ್ಳಬೇಕು. `ಅಲ್ವೆ ಸಾವಿತ್ರಿ, ಸೌಂತೆ ಬಳ್ಳಿಯಲ್ಲಿ ಹೂ ಮಿಡಿ ಕಚ್ಚಿರ್‍ಬೇಕಲ್ಲ. ಸುಟ್ಟ ಮಂಗ ಗಿಂಗ ಬಂದಾವು. ಒಂದು ಬೆಚ್ಚನ್ನಾದ್ರೂ ಮಾಡಿ ನಿಲ್ಲಿಸ್ಲಿಕ್ಹೇಳು ಕನ್ನನಿಗೆ.’ ಮೇಲೊಂದು ಸಲಹೆಯನ್ನೂ ಕೊಡಬೇಕು. ಅಜ್ಜಿಗೊಮ್ಮೆ ಶೀಕು ಪಾಕು ಆದರಂತೂ ಮತ್ಯಾರು ಬರುತ್ತಾರೆ? ಮೀಸಲಿಕ್ಕೂ ಒಗೆಯಲಿಕ್ಕೂ ಬಡಿಸಲಿಕ್ಕೂ ಸೊಸಿ ಮುದ್ದೇ ಗತಿ. ಆ ಸೊಸೆಯ ಮುಖಾರವಿಂದವೊ? ಕೆಲವೊಮ್ಮೆ ದುಮು ದುಮು ಉಮಿಯೊಳಗಿನ ಬೆಂಕಿ. ಕೆಲವೊಮ್ಮೆ ಕರಿ ಕಲ್ಲರೆ. ಇನ್ನೂ ಕೆಲವು ಬಾರಿ ಕಲ್ಲು ಕರಗಿದ ಕರುಣಾರಸ ಧಾರೆ ಧಾರೆ ಅತ್ತೆಯ ಮೇಲೆ. ಅಂತೂ ಒಂದು ನಮೂನಿ ಸಂಭಾಳಿಸಿಕೊಂಡು ಹೋಗುವದು ಯಾಕೇಂದ್ರೆ ನಾಳೆ ಅವಳ ಸೊಸೆಯೂ ಇಷ್ಟರ ಮಟ್ಟಿಗಾದರೂ ನೋಡಿಕೊಳ್ಳಬೇಕಲ್ಲ. ಕೈಕಾಲು ನಡುಗೊ ಕಾಲಕ್ಕೆ ಯಾರ ಕತೆ ಹ್ಯಾಂಗೊ?…

ಹಾಗೆ ಅಜ್ಚಿಯೂ ತನ್ನ ಪ್ರಾಯ ಕಾಲದಲ್ಲಿ ಸೊಸೆಯದೆರಡು ಬಾಣಂತನ ಮಾಡಿ ಮದ್ದು ಕಾಸಿಕೊಟ್ಟಿದ್ದಾಳೆ. ಇಲ್ಲವೆಂದಲ್ಲ. ಮೊನ್ನೆ ಮೊನ್ನೆ ಅಂದರೆ ತನ್ನ ಎಂಬತ್ತನೇ ವಯಸ್ಸಿನವರೆಗೂ ಒಪ್ಪತ್ತು ಗಟ್ಲೆ ಅಡಿಕೆ ಚಾಲಿ ಸುಲಿದಿದ್ದಾಳೆ. ಇವತ್ತಿಗೂ ಉಂಡ ಎಂಜಲು ಪಾತ್ರೆ ತೊಳೆಯದೆ ಹೊರಗೆ ಹೋಗಿದ್ದೇ ಇಲ್ಲ. ಯಾರಾದ್ರೂ ಕೇಳಿದರೆ ಮಾತ್ರ ತನ್ನ ಕಾಲದ ಕತೆಯ ಸಂಚಿ ಬಿಚ್ಚುವ-ಇಲ್ಲೆಂದರೆ ತನ್ನ ಪಾಡಿಗೆ ತಾನು ಪೇಪರು ಓದುತ್ತ ಇಲ್ಲಾ ರಾಮನಾಮ ಬರೆಯುತ್ತ ಹೆಬ್ಬಾಗಿಲ ಕಟ್ಟೆಯಲ್ಲಿ ಸ್ಥಾಪಿತಳಾಗುವ ತುಂಗಜ್ಜಿಗೆ ಕಳೆದ ನಾಲ್ಕಾರು ವರ್ಷಗಳಿಂದ ಆಗಸ್ಟ್ ಹದಿನೈದರಂದು ಮಾತ್ರ ಏನೋ ಆಗಿಬಿಡುತ್ತದೆ.

ಬೆಳಿಗ್ಗೆ ಕಾಗೆ ಕಾಗುಟ್ಟಲು ಪುರಸೊತ್ತಿಲ್ಲದೆ ಎದ್ದು ಗಡಬಡಿಸಿ ಮಿಂದು ಟ್ರಂಕಿನಿಂದ ಖಾದಿಯ ಬಿಳಿಸೀರೆ ತೆಗೆದುಟ್ಟುಕೊಂಡು ಬೋಲೊ ಭಾರತ ಮಾತಾಕೀ ಶುರು ಹಚ್ಚಿ ಬಿಡುತ್ತಾಳೆ. ಆದರೆ ಅವಳ ಜೈಕಾರ ನೆಹರೂಗಿಂತ ಮುಂದೆ ಬರುವದೇ ಇಲ್ಲ. ಮುಂದಿನ ಲಾಲ ಬಹಾದುರ ಶಾಸ್ತ್ರಿ, ಇಂದಿರಾಗಾಂಧಿ, ರಾಜೀವಗಾಂಧಿ ಮುಂತಾದವರಿಗೆ ಅಲ್ಲಿ ಜಾಗವೇ ಇಲ್ಲ. ಆದರೆ ಮಳೆಯಿರಲಿ-ಬಿಸಿಲಿರಲಿ ಯಾರೂ ಕರೆಯದಿದ್ದರೆ ತಾಸುಗಟ್ಲೆ ಬೇಕಾದರೂ ತನ್ನ ಫೇರಿಯನ್ನು ಮುಂದವರಿಸುತ್ತಲೇ ಇರುತ್ತಾಳೆ.

….ಸೊಸೆ ಬಡಿಸಿದ ಉಪ್ಪಿಟ್ಟು ತಿಂದು ಎಂಜಲು ಪಾತ್ರೆಯನ್ನಷ್ಟು ತಿಕ್ಕಿ ತೊಳೆದಿಟ್ಟು ಹೊರಗೆ ಬಂದು ಕುಂತ ತುಂಗಜ್ಜಿಯ ಮುಖದಲ್ಲಿ ನಾಚಿಕೆ ಇನ್ನೂ ಹನಿಯುತ್ತಿದೆ. ಛೆಛೆ! ಎಂಥಾ ಕೆಲ್ಸ ಆಗಿಹೋಯ್ತಲ್ಲ ಎಂಬ ಹಳಹಳಿಕೆ ಜೀವ ಹಿಂಡುತ್ತಿದೆ. ದಿನಪತ್ರಿಕೆಯಲ್ಲೂ ಕಣ್ಣು ಕೂರುತ್ತಿಲ್ಲ. ರಾಮನಾಮ ಪುಸ್ತಕದಲ್ಲೂ ಕೈ ಓಡುತ್ತಿಲ್ಲ. ಅಂಗಳದಲ್ಲಿ ರಪರಪ ಬಾರಿಸುತ್ತಿರುವ ಮಳೆ ಹನಿಗಳಾಚೆ- ಮಬ್ಬು ಮೋಡದ ಆಕಾಶದಾಚೆ-ಪಾಗಾರದಾಚೆ- ರಸ್ತೆಯಾಚೆ- ತೋಟದಾಚೆಗಿರುವ ಕತ್ತಲೆ ಕಾಗಿನಾಚೆಗಿರುವ ಏನನ್ನೊ ಆಕೆ ಹುಡುಕುತ್ತಿದ್ದಾಳೆ. ಆ ಕಾಲಾತೀತದ ಹಾದಿಯ ರಸ ರೂಪ ಗಂಧ ಸ್ಪರ್ಶಗಳನ್ನು ಮತ್ತೆ ಅನುಭವಿಸುತ್ತಿದ್ದಾಳೆ.

…ಅಜ್ಜ-ಅಜ್ಜಿ-ಮಕ್ಕಳು-ಸೊಸೆಯಂದಿರು-ಮೊಮ್ಮಕ್ಕಳು-ಮರಿಮಕ್ಕಳು-ಚಿಕ್ಕಪ್ಪ-ದೊಡ್ಡಪ್ಪಗಳಿಂದೊಡಗೂಡಿದ ಮೂವತ್ತು ಜನರ ತುಂಬು ಕುಟುಂಬದಲ್ಲಿ ಆರನೆ ಸೊಸೆಯಾಗಿ ಕಾಲಿಟ್ಟ ತುಂಗಾ ಎಂಬ ಹದಿನೈದರ ಬಾಲೆ, ದೊಡ್ಡವರು ನಿಲ್ಲು ಅಂದರೆ ನಿಲ್ಲುತ್ತ-ಕೂಡ್ರು ಅಂದಾಗ ಕೂಡ್ರುತ್ತ- ಹಿರಿ ಹೆಂಗಸರ ಗುಸು ಗುಸು ಪಿಸಿ ಪಿಸಿಗೆ ಸುಮ್ಮನೆ ಕಿವಿಯಾಗುತ್ತ- ಹಗೂರಾಗಿ ಓಡಾಡಿಕೊಂಡಿದ್ದ ಕಾಲ. ಮನೆಯ ಗಂಡಸರು ಗಾಂಧೀಜಿಯವರ ಕರೆಗೆ ಓಗೊಟ್ಟು ಸವಿನಯ ಕಾಯಿದೆ ಭಂಗ-ಅರಣ್ಯ ಸತ್ಯಾಗ್ರಹ-ಕರಬಂದಿ ಚಳುವಳಿ ಮುಂತಾಗಿ ತೊಡಗಿಕೊಂಡಿದ್ದ ಕಾಲ. ಊರ ಜನರೆಲ್ಲ ಸೇರಿ ಬಾವುಟ ಹಿಡಿದು ವಂದೇ ಮಾತರಂ ಕೂಗುತ್ತ ಹಳೆಸಾಲೆ ಮನೆಯಿಂದ ಅಳ್ಳಿಕಟ್ಟೆವರೆಗೆ ದಿನಾ ಮುಂಜಾನೆ ಮೆರವಣಿಗೆ ನಡೆಸುತ್ತಿದ್ದ ಕಾಲ. ಅವಳ ಸಣ್ಣ ಮಾವನಂತೂ ಅಂಕೋಲೆವರೆಗೆ ನಡೆದುಕೊಂಡೇ ಹೋಗಿ, ಸಮುದ್ರ ದಂಡೆಯಲ್ಲಿ ಉಪ್ಪು ನೀರು ಕಾಯಿಸಿ, ಪುಡಿಕೆ ಉಪ್ಪು ತಯಾರಿಸಿ ಜೈಲಿಗೆ ಹೋಗಿದ್ದ.

ರಾತ್ರಿ ಯಾವುದೊ ಹೊತ್ತಿನಲ್ಲಿ ಕರಪತ್ರದ ಗಂಟು ಹಿಡಿದು ಯಾರೊ ಬಂದು ಬಾಗಿಲು ತಟ್ಟಿದರೆ ಹೆಂಗಸರೂ ಮೇಲೆದ್ದು ಇದ್ದರೆ ಅನ್ನ, ಇಲ್ಲಂದರೆ ಅವಲಕ್ಕಿ ಮಜ್ಜಿಗೆ ಬಡಿಸಬೇಕು, ಲಾಠಿ ಏಟು ತಿಂದು ಗಾಯಗೊಂಡವರನ್ನು ಯಾರೊ ರಾತ್ರೊರಾತ್ರಿ ಹೊತ್ತು ತಂದರೆ ಅವಳ ದೊಡ್ಡ ಮಾವ ಸೂಡಿ ಬೆಳಕಲ್ಲೇ ಶಿವಣೆ ಸೊಪ್ಪು ತಂದು ಅರೆದು ಕುಡಿಸಿ ಬೋಳು ಕಾಳಿನ ಪೋಟೀಸು ಕಟ್ಟಿ ಬೆಚ್ಚಗೆ ಹೊದೆಸಿ ಮಲಗಿಸಬೇಕು. ಹೊತ್ತು ಹೊತ್ತಿನ ಅನ್ನಕ್ಕೆ ಅಕ್ಕಿ ಅಳೆಯುವ ಹೆಂಗಸರು ಸಿದ್ಧಗೊಂದು ಮುಷ್ಠಿಯಂತೆ ಸತ್ಯಾಗ್ರಹಿಗಳ ಮುಷ್ಠಿ ಅಕ್ಕಿ ಫಂಡಿಗೆ ತೆಗೆದಿಡಬೇಕು. ಪ್ರತಿಯೊಬ್ಬರಲ್ಲೂ ಅದೇನೊ ಉತ್ಸಾಹ. ಅದೇನೊ ಕಾತರ. ಬೆಳ್ಚಾ ಮಂಗನ ಮುಖದ ಬ್ರಿಟಿಷರನ್ನು ಭಾರತದಿಂದ ಒದ್ದೋಡಿಸಲೇಬೇಕೆಂಬ ಆಗ್ರಹ. ಕರಪತ್ರಗಳ ಮೂಲಕ ಮತ್ತು ಹರಿಜನ ಪತ್ರಿಕೆಯ ಮೂಲಕ ಮನೆ ಮನೆ ತಲುಪುತ್ತಿದ್ದ ಗಾಂಧೀಜಿಯವರ ಸತ್ಯ ನಿಷ್ಠೆಯ ಸಂದೇಶ. ಪ್ರಾಮಾಣಿಕ ಧೈರ್ಯದ ಸಂದೇಶ, ಅನ್ಯಾಯಕ್ಕೆ ಹೆದರದೆ ಗುಂಡಿಗೆ ಗುಂಡಿಗೆಯೊಡ್ಡಿ ನಿಲ್ಲುವಂಥ ಅಚಲ ಆತ್ಮವಿಶ್ವಾಸ! ಗಾಂಧೀಜಿ ಅಂದರೆ ದೇವರಿಗಿಂತ ಹೆಚ್ಚು. ಬಾಪು ಅಂದರೆ ಭಾರತ ಭಾಗ್ಯವಿಧಾತ. ಆತ ಹೂಂ ಅಂದಕೂಡಲೇ ಹಾಂ ಅನ್ನುತ್ತ ಎದ್ದು ನಿಲ್ಲುವ ಮೂವತ್ತು ಮೂರು ಕೋಟಿ ಜನರು…

ಅರೆ ಅರೆ ಅರೆ!! ಇವೆಲ್ಲ ಗಂಡಸರ ಪ್ರಪಂಚದ ಮಾತಾಯಿತೊ. ಅಸಲಿಗೆ ಹಿತ್ತಿಲು-ಅಂಗಳ-ತೋಟ ಬಿಟ್ಟರೆ ಇಪ್ತತ್ನಾಲ್ಕು ತಾಸೂ ಮನೆಯೊಳಗೇ ಜೀವ ತೆಮೆಯುವ ಹೆಂಗಸರು ಕೆಂಪು ಮೋತಿ ಬ್ರಿಟಿಷರನ್ನು ಹಾಗಿರಲಿ, ರಾಷ್ಟ್ರಪತಿ ಗಾಂಧಿಯವರನ್ನಾದರೂ ಎಲ್ಲಿ ಕಂಡಿದ್ದಾರೆ? ಕಾಳಕ್ಷರ ಬರೆಯಲಾರದೆ ಓದಲಾರದ ಅವರಿಗೆ ಮಹಾತ್ಮನ ಮಾತುಗಳು ಅರ್ಥವಾದೀತಾದರೂ ಹೇಗೆ? ಅಂದರೆ ಮನೆಯ ಗಂಡಸರು ಊಟ ಆಸರಿಗೆ ಕುಂತಾಗ ತಮ್ಮ ತಮ್ಮಲ್ಲಿ ಮಾತಾಡಿಕೊಳ್ಳುತ್ತಿದ್ದುದನ್ನು ಕೇಳಿ ಅಷ್ಟಿಷ್ಟು ತಿಳಿದುಕೊಂಡರು. ಅದನ್ನು ತನಗೆ ತಿಳಿದಂತೆ ಇನ್ನೊಬ್ಬಳಿಗೆ ಹೇಳಿ ಅವಳು ಮಗುದೊಬ್ಬಳಿಗೆ ಹೇಳಿ ಆಯಾ ಮನೆಯ ಗಂಡಸರ ಮಾತುಕತೆಗಳು ಊರೆಲ್ಲ ಮರು ಪ್ರಸಾರಗೊಂಡು ಪ್ರತಿಯೊಬ್ಬನಲ್ಲೂ ಸತ್ಯಾಗ್ರಹದ ಹುರುಪು ತುಂಬಿದ್ದು ಸುಳ್ಳಲ್ಲ.

…ದೇಶದ ತುಂಬಾ ಚಲೇಜಾವ್ ಚಳುವಳಿಯಂತೆ. ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ಎಂದು ಗಾಂಧೀಜಿ ಹಟ ಹಿಡಿದು ಕುಂತಿದ್ದಾರಂತೆ, ಹಳ್ಳಿ ಹಳ್ಳಿಯ ಮನೆ ಮನೆಯ ಹೆಂಗಸರು ಗಂಡಸರು ಅಲ್ಲಲ್ಲೇ ಅಲ್ಲಲ್ಲೇ ಸತ್ಯಾಗ್ರಹ-ಪಿಕೇಟಿಂಗ್ ಮಾಡಬೇಕಂತೆ… ಎರಡು ವರ್ಷದ ಮಗನನ್ನು ಎದೆಗವಚಿಕೊಂಡು ಅಕ್ಕಿ ಗೇರುತ್ತಿದ್ದ ತುಂಗೆಯ ಎದುರು ಕರಪತ್ರ ಓದಿದ ಅವಳ ಸಣ್ಣ ಮಾವ. ಕೇಳಿದ ಅವಳಿಗೇನಾಯಿತೊ, ಮಗನನ್ನೆತ್ತಿಕೊಂಡೇ ಧಡಕ್ಕನೆ ಎದ್ದು ನಿಂತಳು. ನಿಂತವಳು ಮತ್ತಲ್ಲೇ ಕುಸಿದು ಕುಂತಳು.

ವರ್ಷದ ಹಿಂದಷ್ಟೇ ತುಂಗೆಯ ಗಂಡ ಸೊಪ್ಪಿನ ಮರದಿಂದ ಬಿದ್ದು ಕುಡ್ತೆ ನೀರಿಗೆ ಬಾಯಿ ತೆಗೆಯದೆ ಸತ್ತು ಹೋಗಿದ್ದ. ಕೇವಲ ಇಪ್ಪತ್ತು ವರ್ಷದ ಬಾಲೆಯ ತಲೆಯ ಸಿರಿ ಕತ್ತರಿಸಿ ಬಿದ್ದಲ್ಲಿ ಕೆಂಪು ಸೆರಗು ಮುಚ್ಚಿಕೊಂಡಿತ್ತು. ಆ ಅಸಹನೀಯ ದುಃಖ ಹೊತ್ತುಕೊಂಡು ಗಂಡನಿಲ್ಲದ ಗಂಡನ ಮನೆಯಲ್ಲಿ ಅವಳು ಹೇಗೆ ಬದುಕುತ್ತಿದ್ದಾಳೆಂದು ಅವಳಿಗೇ ಗೊತ್ತಿರಲಿಲ್ಲ.

ಮರುದಿನದ ಪ್ರಭಾತಫೇರಿಯಲ್ಲಿ ಎಲ್ಲರಿಗಿಂತ ಮುಂದೆ ನಿಂತು ಬಾವುಟ ಹಿಡಿದುಕೊಂಡಾಗ “ಅಯ್ಯೊ ಅಪಶಕುನ! ನಿನ್ನಾಂಥವ್ಳು ಹಿಡಿಯೋದಲ್ಲ ಅದು. ಇಲ್ಕೊಡು ಅದನ್ನ” ಮಾವ ಕಸಿದುಕೊಳ್ಳುವ ಅಬ್ಮರದಲ್ಲಿ ಅವಳನ್ನು ದೂಡಿಬಿಟ್ಟ. ಮುಖ ಮುಚ್ಚಿ ಅಳುತ್ತ ಕೂತ ಅವಳು ಮತ್ತೈದೇ ನಿಮಿಷಕ್ಕೆ ಮೇಲೆದ್ದು ಸೀರೆಗಂಟಿದ ಧೂಳು ಕೊಡವಿಕೊಳ್ಳುತ್ತ ಫೇರಿಯ ಹಿಂದೆ ಹಿಂದೇ ಹೋಗಿ ತಾನೂ ಧ್ವಜಕ್ಕೆ ವಂದಿಸಿ ಜೈಕಾರ ಹಾಕಿದಳು.
“ವಿಜಯೀ ವಿಶ್ವತಿರಂಗಾ ಪ್ಯಾರಾ
ಝಂಡಾ ಊಂಚಾ ರಹೇ ಹಮಾರಾ
ಸದಾ ಶಕ್ತಿ ಸರಸಾನೇ ವಾಲಾ
ಪ್ರೇಮಸುಧಾ ಬರಸಾನೇ ವಾಲಾ
ವೀರೋಂ ಕೊ ಹರಷಾನೇ ವಾಲಾ
ಮಾತೃಭೂಮಿ ಕಾ ತನಮನ ಸಾರಾ”…

“ಕಸ್ತೂರಾ ಬಾಯಿಯರೆ
ಕಮಲಾ ದೇವಿಯರೆ
ಚಳುವಳಿ ಮಾಡುವರೆ ನಾವ್
ಚಳುವಳಿ ಮಾಡುವರೆ”…

-ಮುಂತಾದ ಸತ್ಯಾಗ್ರಹದ ಹಾಡುಗಳಿಗೆ ತಾನೂ ದನಿಗೂಡಿಸಿದಳು. ಗಂಡಸರು ತಿರು ತಿರುಗಿ ನೋಡುತ್ತ ಮೂಗು ಮುರಿದರೂ-ನಾಲ್ಕಾರು ಸಂಖ್ಯೆಯಲ್ಲಿದ್ದ ಹೆಂಗಸರು ಬಾಯಿ ವಾರೆ ಮಾಡಿದರೂ ಅವೆಲ್ಲ ತನಗಲ್ಲವೇ ಅಲ್ಲ, ಅದೇ ಆ ಮರಕ್ಕೆ, ಎಂಬಂತೆ ಹೋಗುವದೊಂದೇ ಮಾಡಿದಳು. “ಮಾನಗೇಡಿ, ಎಲ್ಲಾರೆದ್ರಿಗೆ ನಮ್ಮ ಮಂತಾನದ ಮರ್‍ಯಾದೆ ತೆಗೆದೆ, ಗಂಡ ಸತ್ತ ಹೆಣ್ಣಿಗ್ಯಾಕೆ ಚಳುವಳಿ ಗಿಳುವಳಿ ಎಲ್ಲ? ನಡಿಯೇ ಒಳಗೆ… ಕತ್ತೆ ಹ್ವೊತಂದು…” ಮಾವ ಬೈದ. “ಯನ್ನ ಬಂಗಾರದಂಥಾ ಮಗನನ್ನಂತೂ ತಿಂದು ಹಾಕಿದೆ. ಈಗೀ ನಮನಿ ಉರೆ ಹೊಯ್ತಾ ಇದ್ದೀಯೆ. ಸುಮ್ನೆ ಮನೇಲಿದ್ರೇನಾಗತ್ತೆ ನಿಂಗೆ?” ಅತ್ತೆ ಅಲವತ್ತುಕೊಂಡು ಅತ್ತಳು. ತುಂಗೆ ಯಾರಿಗೂ ಕಂ ಕಿಂ ಉತ್ತರಿಸಲೂ ಇಲ್ಲ, ದಿನಾ ಮಗನೊಂದಿಗೆ ಚಳುವಳಿಗೆ ಹೋಗುವದನ್ನು ನಿಲ್ಲಿಸಲೂ ಇಲ್ಲ… ಅವಳಲ್ಲಿ ಆಗ ನಿಜಕ್ಕೂ ಅಂಥ ಉತ್ಕಟ ದೇಶಾಭಿಮಾನವಿತ್ತೆ? ಮಹಾತ್ಮನ ಮಾತುಗಳಲ್ಲಿ ಅಂಥಾ ಅಚಲ ಶ್ರದ್ಧೆಯಿತ್ತೆ? ಅಥವಾ ಸತ್ಯಾಗ್ರಹ ಎಂಬುದು ವೈಧ್ಯವ್ಯದ ನರಕದಿಂದ ಪಾರಾಗಲು ಇರುವ ಒಂದೇ ಒಂದು ಕಿರುದಾರಿಯಾಗಿತ್ತೆ?… ಇಲ್ಲ, ಇಂದಿಗೂ ಹೇಳಲಾರಳು.

…ಮರುದಿನವೇ ಗಾಂಧೀಜಿಯವರನ್ನು ಹಿಡಿದು ಹಾಕಿದರಂತೆ. ಯಾರೂ ಸತ್ಯಾಗ್ರಹ ನಿಲ್ಲಿಸಬೇಡಿರೆಂದು ಅವರು ಜೈಲಿನಿಂದಲೇ ಕರೆಕೊಟ್ಟರಂತೆ. ಇಡೀ ದೇಶದ ಹೆಂಗಸರು-ಗಂಡಸರು-ಮಕ್ಕಳು-ಮುದುಕರು ಇಂಗ್ಲಿಷರ ವಿರುದ್ಧ ಘೋಷಣೆ ಕೂಗಿ, ಕಾನೂನು ಮುರಿದು ಜೈಲು ಸೇರುತ್ತಿದ್ದಾರಂತೆ… ಮತ್ಯಾರೊ ಪೋಸ್ಟ್ ಆಫೀಸು ಸುಟ್ಟರಂತೆ… ಇನ್ನೆಲ್ಲೊ ಸೇತುವೆಗೆ ಬಾಂಬು ಹಾಕಿ ಉರುಳಿಸಿಬಿಟ್ಟರಂತೆ… ಯಾವುದೊ ಹೆಂಗಸು ಪೊಲೀಸರಿಗೇ ಬಡಿಗೆಯಿಂದ ಹೊಡೆದಳಂತೆ… ಇನ್ನೆಲ್ಲೊ ಮಾಮತೀದಾರರ ಟಾಂಗಾ ಅಡ್ಡಗಟ್ಟಿ ಅವರಿಗೇ ಚೆನ್ನಾಗಿ ಬಡಿದರಂತೆ… ಕರಿಗತ್ತಲ ರಾತ್ರಿಗಳಲ್ಲಿ ಕಂಬಳಿ ಹೊದ್ದು-ಸೂಡಿ ಹಿಡಿದು ಕೊಳ್ಳಿದೆವ್ವಗಳಂತೆ ಸಂಚರಿಸುವ ಬಾತ್ಲಿದಾರರು ತರುತ್ತಿದ್ದ ಕರಪತ್ರಗಳಿಂದ ಹಾಹಾ ಹಾಹಾ ಹರಡುವ ಸುದ್ದಿಗಳು! ಮೂಲೆ ಮೂಲೆಯ ಒಂಟಿಮನೆಗಳಲ್ಲೂ ಕೋಲಾಹಲ!… ಇಂದು ಮೇಲಿನ ಕೇರಿಗೆ ಪೋಲೀಸ್ರು ಬಂದು ಗಂಡಸರನ್ನೆಲ್ಲ ಹಿಡಿದುಕೊಂಡು ಹೋದರಂತೆ…. ಕಾನುಬೈಲಲ್ಲಿ ಗಂಡಸ್ರು ಹೆಂಗಸ್ರು ಹೇಳಿಲ್ದೆ ಪ್ರಾಯದವರನ್ನೆಲ್ಲ ಎಳ್ಕೊಂಡ್ಹೋದ್ರಂತೆ… ಎಲ್ರಿಗೂ ಬಡಿದು ಬಡಿದು ಮೋಟಾರು ತುಂಬಿದರಂತೆ… ಅಯ್ಯೊ! ಅಕ್ಕಯ್ಯ, ಈಗೆಂತಾ ಮಾಡಕಾತೆ?… ಅಣ್ಣಯ್ಯ, ಈ ಬ್ರಿಟಿಷರು ಏನೇನ್ಮಾಡ್ತಾರೊ ಮಾಡ್ಲಿ ನೋಡುವಾ ಹಂ, ಗುಂಡು ಹಾರ್‍ಸಿ ದೇಶದ ಅಷ್ಟೂ ಜನರನ್ನು ಸುಟ್ಟು ಹಾಕ್ತಾರಾ? ಹಾಕ್ಲಿ ಹಂ… ನಾವೇನು ಸುಮ್ನೆ ಬಿಡೋದಿಲ್ಲ. ಅವ್ರೀ ದೇಶ ಬಿಟ್ಟು ಓಡಿ ಹೋಗ್ಬೇಕೆ ನಾವು ಚಳವಳಿ ನಿಲ್ಲಿಸ್ಬೇಕೆ…. ಹಂ, ಏನಂತ ತಿಳ್ದೀದಾರೆ ನಮ್ಮ?…

…ಊರೆಲ್ಲ ಗದ್ದಲವೊ ಗದ್ದಲ. ಪ್ರತಿಯೊಂದು ಹಳ್ಳಿಯೂ ಧಗ ಧಗಿಸುವ ಅಗ್ನಿಗುಂಡ. ದಿನಕ್ಕೊಂದು ಸುದ್ಧಿ-ತಲಿಗೊಂದು ಮಾತು.

…ಐದನೇ ದಿನ ಪೋಲೀಸರು ಸಂಕದಳ್ಳಿಗೂ ಬಂದೇ ಬಂದರು. ಬಂದವರು ಲಾಠಿಯಿಂದ ಬಡಿ ಬಡಿದು ಸತ್ಯಾಗ್ರಹಿಗಳನ್ನು ಮೂರು ಜೀಪಿಗೆ ತುಂಬಿಕೊಂಡು ನೆಲದ ಪುಣ್ಯವನ್ನೇ ಬಳಿದುಕೊಂಡು ಹೊಂಟಂತೆ ತುಂಗೆ ಮತ್ತು ಅವಳ ಮಗನೂ ಸೇರಿದಂತೆ ಮೂವತ್ತು ಮಂದಿಯನ್ನು ಹೊತ್ತೊಯ್ದರು. ಹಾಗೆ ಡುರ್ರಬುರ್ರನೆ ಅಲ್ಲಿಂದ ಹೊರಟ ಗಾಡಿಗಳು ಮಹಾರಾಷ್ಟ್ರದ ಯರವಡಾ ಜೈಲಿನೆದುರು ಹೋಗಿ ನಿಂತವು. ಅಲ್ಲಿ ಸಂಕದಳ್ಳಿಯ ಜನರನ್ನೆಲ್ಲ ಬೇರೆ ಬೇರೆಯಾಗಿ ವಿಂಗಡಿಸಿ ಎಲ್ಲೆಲ್ಲಿಗೊ ಕಳಿಸಿದರು. ಅಲ್ಲಿಗೆ ತುಂಗೆ ಮತ್ತು ಅವಳ ಮಾಣಿ ಅಕ್ಷರಶಃ ಪರದೇಸಿಗಳಾದರು.

…ಜೈಲಿನಲ್ಲಿರುವ ಕಳ್ಳ ಕಳ್ಳಿಯರು-ಸುಳ್ಳ ಸುಳ್ಳಿಯರು-ಮುಖ ನೋಡಿದರೆ ಎಚ್ಚರ ತಪ್ಪಬೇಕಾದಂಥ ಭಯಂಕರ ಆಕಾರದ ಕೊಲೆಗಾರರು-ಬಡಿದೇ ಮಾತಾಡುವ ಜೈಲು ಅಧಿಕಾರಿಗಳು. ಇಂಥವರ ನಡುವೆ, ಒಬ್ಬರ ಮಾತು ಒಂದಕ್ಷರವೂ ಅರ್ಥವಾಗದ ಜಾಗದಲ್ಲಿ, ರಾಗಿ ಬೀಸುತ್ತ-ರೊಟ್ಟಿ ಸುಡುತ್ತ-ಜಲ್ಲಿ ಒಡೆಯುತ್ತ ಎರಡೂವರೆ ವರ್ಷದ ಮಗನನ್ನು ಬೆನ್ನಿಗೆ ಕಟ್ಟಿಕೊಂಡು ಎಂಟು ತಿಂಗಳುಗಳ ಕಾಲವನ್ನು ಹೇಗೆ ಕಳೆದಳೆಂಬುದು ಅವಳೊಬ್ಬಳಿಗೇ ಗೊತ್ತು. ವಾರಕ್ಕೊಮ್ಮೆ ಮೀಯುತ್ತ-ತಿಂಗಳಿಗೊಮ್ಮೆ ಮುಟ್ಟಿನ ಅಲವರಿಕೆ ಸಹಿಸುತ್ತ-ಅಲ್ಲೇ ಮತ್ತೆ ಗಂಡಸರ ಒಂಥರಾ ನೋಟಕ್ಕೆ ತಲೆ ತಗ್ಗಿಸುತ್ತ-ಹೇಗೆ ಬದುಕಿದಳೆಂಬುದು ಆ ಪರಮಾತ್ಮನಿಗೇ ಗೊತ್ತು.

ಆದರೂ ಒಂದು ದೃಢ ನಿರ್ಧಾರ, ದೇಶದ ಸ್ವಾತಂತ್ರ್ಯಕ್ಕಾಗಿ ಏನನ್ನೂ ಸಹಿಸಬಲ್ಲೆನೆಂಬ ಧೈರ್ಯ. ದೇಶಕ್ಕಾಗಿ ನಾವು-ನಮಗಾಗಿ ದೇಶವಲ್ಲ. ದೇಶವಿದ್ದರೆ ನಾನು-ನಾನಿದ್ದರೆ ದೇಶವಲ್ಲ. ಇಡೀ ದೇಶದ ದೇಶ ಬಾಂಧವರ ಸಂಕಷ್ಟದೆದುರು ತನ್ನೊಬ್ಬಳ ಕಷ್ಟಗಳು ಏನೇನೂ ಅಲ್ಲ ಎಂಬ ಅಸ್ಪಷ್ಟ ತಿಳುವಳಿಕೆ… ದಿನಕ್ಕೊಮ್ಮೆಯಾದರೂ ಮನೆಯ ನೆನಪು. ಮನೆ ತುಂಬ ಓಡಾಡುವ ಜನರ ನೆನಪು. ಕರುಣೆಯ ಶಕಾರ ಶಬ್ದವಿಲ್ಲದ ಆ ಮನೆಯೆಂಬ ಜೈಲಿಗೂ ಇಲಿಲ್ನ ಈ ಖರೆ ಕಾರಾಗೃಹಕ್ಕೂ ವ್ಯತ್ಯಾಸ ಯಾವುದೆಂದು ಸ್ಪಷ್ಟವಾಗುತ್ತಿಲ್ಲ. ಇಲ್ಲಿನ ಕ್ರೂರ ಜೈಲರು-ದರ್ಪಿಷ್ಟ ವಾರ್ಡನ್ ಗಳಿಗಿಂತ ಅತ್ತೆ-ಮಾವ-ಮೈದುನ-ನಾದಿನಿಯರು ಹೇಗೆ ಒಳ್ಳೆಯವರು ಎಂಬುದೂ ಅರ್ಥವಾಗುತ್ತಿಲ್ಲ. ಆ ಮನೆಗಿಂತ ಈ ಸೆರೆವಾಸವೇ ಲೇಸಾಗಿರಬಹುದೆ? ಗೊತ್ತಾಗುತ್ತಿಲ್ಲ. ತಂದೆ-ತಾಯಿ ಹುಟ್ಟಿದ ಮನೆಯನ್ನಂತೂ ಯಾವತ್ತೊ ತೊರೆದು ಬಂದಾಗಿದೆ. ಈಗ ತಾನಿದ್ರೂ ಸೈ-ಸತ್ರೂ ಸೈ. ಯಾರಿಗೇನು ನಷ್ಟವಿಲ್ಲ. ಆದರೆ ಸುಳ್ಳು ಮುಳ್ಳೂ ಒಂದೂ ಅರಿಯದ ಈ ಹಸುಕಂದನನ್ನು ತಬ್ಬಲಿಯಾಗಿಸುವ ಹಕ್ಕು ತನಗಿಲ್ಲ. ಅವನಿಗಾಗಿಯಾದರೂ ಬದುಕಲೇಬೇಕು. ಅದಕ್ಕಿಂತಲೂ ಮುಖ್ಯವಾಗಿ ದೇಶದ ಸ್ವಾತಂತ್ರ್ಯ ಹೋರಾಟದ ಮಹಾಯಜ್ಞದಲ್ಲಿ ತನ್ನದೊಂದು ಮರಳ ಕಣವನ್ನಾದರೂ ಅರ್ಪಿಸಲೇಬೇಕೆಂಬ ತುಡಿತ.

ಸ್ಪಷ್ಟವಾಗಿ ಇವೇ ಮಾತುಗಳು ಎಂದಲ್ಲ. ಇಂಥ ಧೋರಣೆಯ ಹತ್ತೆಂಟು ತುಂಡು ತುಂಡು ವಿಚಾರಗಳು ಅವಳೊಳಗೆ ದಿಗಣ ಹಾಕುತ್ತಿದ್ದುದಂತೂ ಸತ್ಯವಾಗಿತ್ತು. ಜೊತೆಗೆ ಜೈಲಿನಂಗಳದಲ್ಲಿದ್ದ ಮರಳ ರಾಶಿಯಲ್ಲಿ ಚಳುವಳಿಗಾರ್‍ತಿಯರಿಂದ ಅಕ್ಷರ ಬರೆಸಿಕೊಂಡು ತಿದ್ದಿ ತಿದ್ದಿ ಕನ್ನಡ ಮತ್ತು ಮರಾಠಿ ಬರೆಯಲು ಕಲಿತಳಲ್ಲದೆ ಅಕ್ಷರಕ್ಷರ ಕೂಡಿಸಿ ಓದಲಿಕ್ಕೂ ಕಲಿತು ಗಾಂಧೀಜಿಯವರ ಸತ್ಯ-ಅಹಿಂಸೆ-ಪ್ರಾಮಾಣಿಕತೆ-ಗ್ರಾಮ ಸ್ವರಾಜ್ಯ-ಹರಿಜನೋದ್ಧಾರ-ಹಿಂದಿ ಪ್ರಚಾರ-ಖಾದಿ ಪ್ರಸಾರ ಮುಂತಾದ ವಿಚಾರಗಳನ್ನು ಅಷ್ಟಿಷ್ಟು ಅರ್‍ಥಮಾಡಿಕೊಳ್ಳುತ್ತಿದ್ದಂತೆ ಅವಳ ಮನ ಉಬ್ಬುಬ್ಬಿ ಬರುತ್ತಿತ್ತು. ತಾನ್ಯಾವುದೊ ಮಹತ್ಕಾರ್ಯದಲ್ಲಿ ತೊಡಗಿಕೊಂಡಿದ್ದೇನೆಂಬ ಭಾವ ಮೈಯ್ಯಿಡೀ ತುಂಬಿ ನಿಂತಿರುತ್ತಿತ್ತು.

ಎಂಟು ತಿಂಗಳ ನಂತರ ಎಲ್ಲ ಸತ್ಯಾಗ್ರಹಿಗಳೊಂದಿಗೆ ಅವಳನ್ನು ಬಿಡುಗಡೆಗೊಳಿಸಿದ್ದು ಹೌದಾದರೂ ಅವಳು ಹೋಗಿ ಸೇರಿದ್ದು ಮಾತ್ರ ಸಾಬರಮತಿ ಆಶ್ರಮಕ್ಕೆ. ತಾನಿಂಥಲ್ಲಿಗೆ ಹೋಗುತ್ತಿದ್ದೇನೆಂದು ಮಾವನ ವಿಳಾಸಕ್ಕೊಂದು ಕಾರ್ಡು ಬರೆದು ಹಾಕಿ, ಜೈಲಿನಲ್ಲಿ ಹೆಂಗಸರಿಗೆ ಕ್ಷೌರ ಮಾಡುವವರಿಲ್ಲದೆ ಉದ್ದ ಬೆಳೆದ ಕೂದಲು ಬಾಚಿಕಟ್ಟಿ, ಬಿಳಿಯ ಖಾದಿ ಸೀರೆ ಉಟ್ಟು, ಸಹವಾಸಿನಿ ಗೋದೂತಾಯಿಯೊಂದಿಗೆ ಮಗನ ಕೈಹಿಡಿದುಕೊಂಡೇ ಆಶ್ರಮದಲ್ಲಿ ಕಾಲಿಟ್ಟಳು. ಅಲ್ಲಿ ಗಾಂಧೀಜಿ ಎಂಬ ಬೊಚ್ಚು ಬಾಯಿಯ ಕಡ್ಡಿ ದೇಹದ- ತುಂಡು ಪಂಚೆಯ ಅಜ್ಜನಲ್ಲಿ ಅಡಗಿರುವ ಮಹಾನ್ ಶಕ್ತಿಯೆದುರು ಬೆರಗಾಗಿ ಬಾಯಿ ಬಿಟ್ಟುಕೊಂಡು ನಿಂತಳು. ಅಲ್ಲಿ ಎಲ್ಲರೊಂದಿಗೆ ಇಡೀ ದಿನ ದುಡಿಯುತ್ತ ಭಜನೆ ಮಾಡುತ್ತ ಪ್ರವಚನ ಕೇಳುತ್ತ-ನೂಲು ತೆಗೆಯುತ್ತ-ಬಂದು ಹೋಗುವ ನೂರಾರು ಜನರನ್ನು ಬಿಟ್ಟ ಕಣ್ಣಿಂದ ನೋಡುತ್ತ ಅವಳು ಬೆಳೆದಳೆ? ಅವಳ ಮಗ ಬೆಳೆದನೆ? ಅಥವಾ ಬೆಳವಣಿಗೆಯ ಹಾದಿಯಲ್ಲಿ ಸೇವಾದೀಕ್ಷೆ ತೊಟ್ಟಳೆ?… ಅವಳಿಗೇ ಗೊತ್ತಿಲ್ಲ.

ಆಶ್ರಮವಾಸಿಕ ಪರ್ವದ ಎರಡು ವರ್ಷ ಕಳೆಯುತ್ತಿದ್ದಂತೆ ಸತ್ಯಾಗ್ರಹಿಗಳೆಲ್ಲ ರಚನಾತ್ಮಕ ಕಾರ್ಯಗಳಲ್ಲಿ ತೊಡಗಿಕೊಳ್ಳಿರೆಂಬ ಬಾಪೂಜಿಯವರ ಕರೆಯಂತೆ, ಗೋದೂತಾಯಿಯೊಂದಿಗೇ ಸೊಲ್ಲಾಪುರಕ್ಕೆ ಬಂದು ಆಸ್ಪತ್ರೆಯೊಂದರಲ್ಲಿ ದಾಯಿಯಾಗಿ ಸೇರಿಕೊಂಡು, ಮಗನನ್ನು ಶಾಲೆಗೆ ಸೇರಿಸಿ ರೋಗಿಗಳ ಸೇವೆಯಲ್ಲಿ ತನ್ನನ್ನು ತಾನು ಮರೆತರೂ ಹುಟ್ಟೂರ ನೆನಪು ಮರೆಯಲಾಗಲಿಲ್ಲ.

ತುಂಗೆಯ ಬದುಕು ಒಂದು ನಮೂನಿ ದಿಡ ಹತ್ತಿತು ಅನ್ನುವಾಗಲೇ ದೇಶಕ್ಕೆ ಸ್ವಾತಂತ್ರ ಸಿಕ್ಕಿತು. ದೇಶ ವಿಭಜನೆಯಾಯಿತು. ಮನುಷ್ಯರೊಳಗಿನ ರಾಕ್ಷಸ ಹೊರಬಿದ್ದು ಹುಚ್ಚೆದ್ದು ಕುಣಿದು ಲಕ್ಷಾಂತರ ಜನರ ಹತ್ಯೆಯಾಯಿತು. ಗಲ್ಲಿ ಗಲ್ಲಿಗಳಲ್ಲಿ ನೆತ್ತರು ಕೋಡಿ ಹರಿಯಿತು. ತಾಯಿಯ ಎದೆ ಸೀಳಿದ ಗಾಯ ಮಾಯುವ ಮೊದಲೇ ಗಾಂಧೀಜಿಯವರ ಹತ್ಯೆಯಾಯಿತು. ಆ ಆಘಾತದಲ್ಲಿ ಇಡೀ ದೇಶವೇ ಅಲ್ಲೋಲ ಕಲ್ಲೋಲಗೊಂಡಿತು. ಆ ಹೊತ್ತಿನಲ್ಲಿ ತುಂಗಾ ಎಂಬ ಬಡಪಾಯಿ ಹೆಂಗಸು ಹೆದರಿ ಕಂಗಾಲಾಗಿ ಇನ್ನು ಇಲ್ಲಿರಲಾರನೆಂದು ಮರಳಿ ಊರ ದಾರಿ ಹಿಡಿದಳು ಎಂಬಲ್ಲಿಗೆ ಅವಳ ಬದುಕಿನ ಬಹುದೊಡ್ಡ ಅಧ್ಯಾಯವೊಂದು ಮುಗಿಯಿತು…

“ಸುಜಲಾಂ ಸುಫಲಾಂ ಮಲಯಜ ಶೀತಲಾಂ
ಸಸ್ಯ ಶ್ಯಾಮಲಾಂ-ಮಾತರಂ. ವಂದೇ ಮಾತರಂ”

…ಮರಿಮಗ ದೀಪು ಕೂಗುತ್ತ ಓಡಿಬಂದಾಗ ತುಂಗಜ್ಜಿ ಬೆಚ್ಚಿ ಕಣ್ಣು ತಿಕ್ಕಿ ತಿಕ್ಕಿ ನೋಡಿದಳು. ಇಲ್ಲ, ಗಾಂಧಿಯೂ ಇಲ್ಲ ಆಶ್ರಮವೂ ಇಲ್ಲ-ತನ್ನೆದುರು ರಾಷ್ಟ್ರಧ್ವಜವೂ ಇಲ್ಲ. ದೀಪು ಮಾಣೆ ತನ್ನ ಶಾಲೆಯ ಧ್ವಜ ವಂದನೆಯ ಪ್ರಸಂಗವನ್ನೇ ಕೂಗುತ್ತ ಬರುತ್ತಿದ್ದಾನಷ್ಟೆ. ಬಂದವನೇ “ಅಜ್ಜಿ ತಗಾ ಪೆಪ್ಪರಮೆಂಟು” ಅಂದ. ಅಜ್ಜಿ ಒಂದನ್ನು ತೆಗೆದು ಬಾಯಿಗೆ ಹಾಕಿಕೊಂಡಳು. ಪೆಪ್ಪರಮೆಂಟು ಹುಳಿ ಶೀಂ ಹುಳಿ ಶೀಂಯಾಗಿ ತುಂಬಾ ರುಚಿಯಾಗಿತ್ತು ಅವತ್ತಿನಂತೆಯೆ. ನಿಂಬೆರಸದ ಪರಿಮಳವಿತ್ತು ಆವತ್ತಿನಂತೆಯೆ. ಮಗನ ಶಾಲಾದಿನಗಳಲ್ಲಿ ಆತ ತಂದುಕೊಡುತ್ತಿದ್ದ ಪೆಪ್ಪರಮೆಂಟಿನಂತೆಯೇ ಇದೂ ತಿಳಿ ಗುಲಾಬಿ ಬಣ್ಣ ಹೊಂದಿತ್ತು.

“ಏ ಪುಟ್ಟು ಇವತ್ತು ಧ್ವಜ ಹಾರಿಸ್ಲಿಕ್ಕೆ ಯಾರು ಬಂದಿದ್ರೊ?” ಅಜ್ಜಿಯ ಕುತೂಹಲ.
“ಮತ್ಯಾರು? ಅವ್ನೇ ಇದ್ದಾನಲ್ಲೆ ಪ್ರತಿವರ್ಷ ಬರೋನು, ದೊಡ್ಡ ಮನೆ ಸತ್ನಾರಣ ಮಾಮ. ಅವ್ನೇ ಧ್ವಜ ಹಾರಿಸಿ ಭಾಷಣ ಮಾಡಿದ.”
“ಏನಂದನೊ ಭಾಷಣದಲ್ಲಿ?”
“ಏನೇನೊ ಹೇಳಿದ್ನಪಾ. ನಂಗೊಂದೂ ಗೊತ್ತಾಗ್ಲಿಲ್ಲ… ಅಮಾ ಹಶವೂ…” ಕೂಗುತ್ತ ಮಾಣಿ ಒಳಗೋಡಿಯೇ ಬಿಟ್ಟ.
ಅಜ್ಜಿ ತಾನೂ ಒಳಗೇಳಲು ಹೊರಟವಳು ಯಾಕೊ ಮತ್ತಲ್ಲೇ ಕುಳಿತಳು.

ಸತ್ಯ ನಾರಾಯಣನಂತೆ ಸತ್ಯನಾರಾಯಣ! ಆವ ಪುಣ್ಯಾತ್ಗಿತ್ತಿ ಅವಂಗೀಹೆಸರಿಟ್ಲೊ… ಅವ್ನ ಹೊಟ್ಯಲ್ಲಿ ತುಂಬಿಕೊಂಡಿದ್ದಷ್ಟೂ ಬರೀ ಸುಳ್ಳೇಯ. ಅಲ್ಲಿ ಎಳ್ಳು ಕಾಲು ಮುಳ್ಳು ಮೊನೆಯಷ್ಟಾದ್ರೂ ಖರೆ ಅನ್ನೋದಿದ್ರೆ ಕೇಳು… ಊರೆಲ್ಲಾ ಉದ್ಧಾರ ಮಾಡ್ತಾನಂತೆ. ಜನರ ಸೇವೆ ಮಾಡ್ಲಿಕ್ಕೆಂದೇ ತಾನು ಬದುಕಿರೋದಂತೆ. ತನ್ನನ್ನು ಆರಿಸಿತಂದ್ರೆ ಜನರ ಕೈಗೆ ಸ್ವರ್ಗಾನೇ ತಂದುಕೊಡ್ತಾನಂತೆ… ಯಾವಾಗ ಆಯ್ಕೆಗೊಂಡು ಛೇರ್‍ಮನ್ ಖುರ್ಚಿ ಏರಿದ್ನೊ ತಗ. ಉದ್ಧಾರಾಗಿದ್ದು ತಾನೊಬ್ಬ ಮಾತ್ರ. ಅಲ್ಲಲ್ಲ, ತನ್ನ ಮಕ್ಕಳು ಮೊಮ್ಮಕ್ಕಳು ನೆಂಟರಿಷ್ಟರೂ ಕೂಡ… ಅಲ್ಲಿ ರಸ್ತೆ ರಿಪೇರಿ ಅಂದಪ. ಇಲ್ಲಿ ಕಾಲು ಸಂಕ ಅಂದ. ಅಲ್ಲಿ ಕೆರೆ ಏರಿ ಅಂದ. ಇಲ್ಲಿ ಕಿರು ನೀರಾವರಿ ಅಂದ, ಅಲ್ಲೊಂದು ಬಾವಿ-ಇಲ್ಲೊಂದು ಟ್ಯಾಂಕು. ಆ ಶಾಲೆಗಿಷ್ಟು ಈ ಆಸ್ಪತ್ರೆಗಷ್ಟು… ಸರ್ಕಾರದಿಂದ ಬಂದ ದುಡ್ಡನ್ನೆಲ್ಲ ಅಧ್ಯಕ್ಷ ಕಾರ್ಯದರ್ಶಿ ಸೇರಿ ತೆಕ್ಕರ್ಧ-ಮಕ್ಕರ್ಧ ಹಂಚಿಕೊಂಡು ಜನರ ಕಣ್ಣೊರೆಸಲು ಅಷ್ಟಿಷ್ಟು ತೊಜರಾಣಿ ಕೆಲ್ಸ ಮಾಡಿ, ಕಟ್ಟಿ ನಾಲ್ಕೇ ತಿಂಗಳಿಗೆ ಶಾಲೆಯ ಗೋಡೆ ಕುಸಿದು ಬಿದ್ದು ಯಾರೊ ತಳ್ಳಿ ಅರ್ಜಿ ಹಾಕಿದಾಗ, ಸೆಕ್ರೆಟರಿ ಛೇರ್‍ಮನನನ್ನೂ-ಛೇರ್‍ಮನ್ನ ಸೆಕೆಟ್ರರಿಯನ್ನೂ ತೋರಿಸುತ್ತ ಯಾರ್‍ಯಾರಿಗೆಷ್ಟೆಷ್ಟು ತಿನ್ನಿಸಿದರೊ-ಅಂತೂ ಪಾರಾಗಿ ಬಂದಿದ್ದು ಹಳೆ ಕತೆ.

ಇನ್ನು ಚುನಾವಣೆ ಗೆದ್ದ ಸಡಗರವಂತೂ ಯಾವ ಪಾಪಿಗೂ ಬ್ಯಾಡ.

ಆಗಿನ್ನೂ ಸ್ವಾತಂತ್ರ್ಯ ಸಿಕ್ಕ ಹೊಸದು. ಹಳ್ಳಿ ಹಳ್ಳಿಗಳಲ್ಲೂ ಗ್ರಾಮ ಪಂಚಾಯ್ತಿಗಳ ಹೊಸ ಹುರುಪು. ಅವಳಿಗಾಗ ಮೂವತ್ತೈದರ ಹುಮ್ಮಸು. ತನ್ನ ಮಗನ ಪಾಲಿಗೆ ಬಂದ ಒಂದೆಕರೆ ಅಡಿಕೆ ತೋಟದಲ್ಲಿ ಬೆವರು ಬಸಿದು ಬಂಗಾರ ಬೆಳೆವ ಕನಸು. ಕಲಿಯಲು ಹುಶಾರಿ ಇದ್ದ ಮಗನನ್ನು ಸಮೀಪದ ಪೇಟೆಯ ಹಾಸ್ಟೆಲ್ಲಿನಲ್ಲಿಟ್ಟು ಕಾಲೇಜು ಕಲಿಸಿ ಮುಂದೊಂದು ದಿನ ಆತ ಮಾಮಲೇದಾರನಾಗಿ ಬರಲೆಂಬ ಆಸೆ.

“ಹಿರಿಬ್ಬೆ, ಈ ಚುನಾವಣೆಗೆ ನೀ ನಿಲ್ಲಲೇಬೇಕು. ಈ ಸಲ ಪಂಚಾಯ್ತಕ್ಕೆ ಮಹಿಳಾ ಸೀಟು ನೀನೇಯ. ಸುತ್ತಾ ಹತ್ತೂರಲ್ಲಿ ಮತ್ಯಾವ ಹೆಂಗ್ಸಿಗೆ ನಿನ್ನ ಯೋಗ್ತೆಯಿದೆ? ಏನ್ಕತೆ?… ನೀ ಏನು ಹೆದರಬೇಡ. ನಿಂಜೊತೆ ನಾವೆಲ್ಲ ಇದ್ದೇ ಇರ್‍ತೇವಲ್ಲ” ಎಂದೆಲ್ಲಾ ಉಬ್ಬಿಸಿ ಉಬ್ಬಿಸಿ ತುಂಗೆ ಬ್ಯಾಡ ಬ್ಯಾಡಂದ್ರೂ ಬಿಡದೆ ನಾಮಪತ್ರ ತುಂಬಿ ಕೊಟ್ಟವನು ಅವನೇಯ. ಅವಳು ಅರೆ ಮನಸ್ಸಿನಿಂದಲೇ ಒಪ್ಪಿಕೊಂಡಿದಕ್ಕೂ ಕೆಲವು ಕಾರಣಗಳಿದ್ದವು. ತನ್ನೂರಿನ ಶಾಲಾ ಮಕ್ಕಳು ದಿನಂಪ್ರತಿ ಓಡಾಡುವ ಹಾದಿಯ ಹಳ್ಳಕ್ಕೊಂದು ಕಾಲು ಸಂಕಬೇಕು. ಊರಲ್ಲಿ ಯಾರಿಗೆ ಆರಾಮಿಲ್ದಿದ್ರೂ ಗೋವಿಂದ ಗೌಡನ ನೋಟವೇ ಗತಿ. ಮಕ್ಕಳು-ಮುದುಕ್ರು-ಬಸರಿ-ಬಾಣಂತೇರ ಗತಿಯಂತೂ ದೇವ್ರಿಗೇ ಪ್ರೀತಿ. ಹೀಂಗಾಗಿ ತಮ್ಮೂರಿಗೊಂದು ಆಸ್ಪತ್ರೆ ಬೇಕೇಬೇಕು. ವಕ್ಕಲ ಕೇರಿ ಹೆಂಗಸ್ರು ಫರ್‍ಲಾಂಗ್ ದೂರದ ಹಳ್ಳದಿಂದ ನೀರು ಹೊತ್ತು ತರಬೇಕು. ಆ ಕೇರಿ ಮಧ್ಯದಲ್ಲೊಂದು ಬಾವಿ ಬೇಕು. ಎಲ್ಲಕ್ಕಿಂತ ಮೊದಲು ತಮ್ಮೂರಿನ ಹೊಂಡ ಗುಂಡಿಯ ಕಚ್ಚಾ ರಸ್ತೆಯನ್ನು ಪಕ್ಕಾ ಮಾಡಿಸ್ಬೇಕು. ಪಂಚಾಯ್ತ ಮೆಂಬರಿಕೆಯ ಅಧಿಕಾರ ಸಿಕ್ಕರೆ ಇವೆಲ್ಲವುಗಳ ಪ್ರಯತ್ನವನ್ನಾದರೂ ಮಾಡಲು ಸಾಧ್ಯವಾಗಬಹುದೆಂಬ ಆಸೆಯಿಂದ ಆಕೆ ಹೂಂಗುಟ್ಟಿದ್ದಳು.

ಆದರೆ ಈ ಸುಳ್ಳು ನಾರಾಯಣನೊ? ಹಿರಿಬ್ಬೆಯಿಂದ ನಾಮಪತ್ರ ಕೊಡಿಸಿದವನು ಸೀದಾ ತನ್ನಕ್ಕ ನೆಲ್ಲಿಬೀಡಿನ ಶಾರದೆಯ ಮನೆಗ್ಹೋಗಿ ಅವಳಿಗೂ ಬುಲ್ತಾಫು ಮಾಡಿ ಇವಳ ವಿರುದ್ಧ ಅವಳನ್ನು ನಿಲ್ಲಿಸಿದ್ದ. ಹಗಲು ರಾತ್ರಿ ಅವಳ ಪರವಾಗಿ ಪ್ರಚಾರ ಮಾಡಿದ್ದಷ್ಟೇ ಅಲ್ಲ. ವಕ್ಕಲೀರ ಕೇರಿಗೆಲ್ಲಾ ತಲಾ ಒಂದೊಂದು ಕೊಟ್ಟೆ ಹಂಚಿ. ಮೇಲಿಂದ ಇಪ್ಪತ್ತರ ಒಂದೊಂದು ನೋಟನ್ನೂ ಹಿಡಿಸಿ ಶಾರದೆಯೇ ಗೆದ್ದು ಬರುವಂತೆ ಮಾಡಿದ್ದ. “ಹ್ಯಂಗಾತೊ ಭಾವ? ತಾನು ಅಂದ್ರೆ ದೊಡ್ಡ ಗಾಂಧಿ ತುಂಡು ಅಂದ್ಕೊಂಬಿಟ್ಟಿದೆ ಆ ಹೆಂಗ್ಸು. ಈಗ ಸಮಾ ಮಂಗಳಾರ್‍ತಿ ಆಯ್ತೊ ಇಲ್ವೊ?” ಮನೆ ಮನೆ ಹೊಕ್ಕು ಆತ ಸಾರಿದ ಸುದ್ದಿ ತುಂಗೆಯ ಕಿವಿಗೂ ಬಂದು ಮುಟ್ಟಿದಾಗ ಅವಳ ಇಡೀ ಮೈ ಒಂದಾಗಿ ಧಗ ಧಗಿಸಿತ್ತು. ಅವನೊಮ್ಮೆ ಎದುರು ಸಿಕ್ಕರೆ ಕಣ್ಣಿಂದಲೇ ಅವನ ಸುಟ್ಟು ಬೂದಿ ಹಾರಿಸುವಷ್ಟು ಸಿಟ್ಟು ಬಂದಿತ್ತು. ಆದರೆ ಮತ್ತೊಂದು ತಾಸಿಗೆ ತಲೆ ತಂಪಾದಾಗ ಹಯ್ಯ! ಇಷ್ಟೇನಾ? ಇದ್ರಿಂದ ನನ್ನದೇನು ಹೋಯ್ತು ಮಹಾ ಬೋಳಮಟೆಕಾಯಿ? ತಾನು ಆರಿಸಿ ಬಂದಿದ್ದಿದ್ರೇ ಮುಂದೆ ತುಬಾ ಕಷ್ಟವಿತ್ತು. ಮನೆ ಕೆಲ್ಸ-ತೋಟದ ಕೆಲಸದ ಸಂಗ್ತಿಗೆ ಸಾರ್ವಜನಿಕ ಕೆಲಸವೂ ಸೇರಿ ಕುಂಡೇ ತುರಿಸಲು ತೆರಪಿಲ್ದಿದ್ಹಾಂಗೆ ಆಗ್ತಿತ್ತು. ಇರ್‍ಲಿ, ಸೋತಿದ್ದೇ ಒಳ್ಳೇದಾತು ತಗ, ಇನ್ನೆಂದೆಂದೂ ಆ ಕೊಳಕು ರಾಜಕೀಯದ ಉಸಾಬರಿಗೇ ಹೋಗದಂತೆ ಒಂದು ಪಾಠ ಕಲಿತ್ಹಾಂಗಾತು ಎಂಬ ಸಮಾಧಾನದಲ್ಲಿ ತಾನಾಯ್ತು. ತನ್ನ ಕೆಲಸವಾಯ್ತು. ಕೆಂದೆ ದನದ ವಾಗಾತಿಯಾಯ್ತು. ವಾರಕ್ಕೊಮ್ಮೆ ಬರುವ ಮಗನೊಂದಿಗೆ ಮಾತುಕತೆಯಾಯ್ತು. ಅಕ್ಕಪಕ್ಕದ ಹೆಂಗಸರು ಕಂಡರೆ ನಿಂತು ನಾಲ್ಕಾರು ಸುಖದುಃಖ ಕೇಳುವದಾಯ್ತು… ಇನ್ನೇನು ಬೇಕಾಗಿದೆ ಬದುಕಿಗೆ?

ಅಂದರೂ ಅವಳೊಳಗಿನ ನಾಕು ಜನರಿಗೆ ಒಳ್ಳೇದಾಗಲಿ ಅನ್ನೋ ಮನೋಭಾವವೇನೂ ತೊಲಗುತ್ತಿಲ್ಲ. ಆದರೆ ಇದು ಗಾಂಧಿಯುಗವಲ್ಲ, ನೆಹರೂ ಯುಗ. ಗಾಂಧೀಜಿಯವರ ಸತ್ಯದೊಂದಿಗಿನ ಪ್ರಯೋಗಗಳೆಲ್ಲ ಅವರೊಂದಿಗೇ ಹೋಗಿ ಬಿಟ್ಟವು. ಅವರ ಪ್ರಾಮಾಣಿಕತೆ-ಸತ್ಯ ನಿಷ್ಠೆ-ಅಹಿಂಸೆಗಳೆಲ್ಲ ಅವರೊಂದಿಗೇ ಹಳ್ಳ ಹಿಡಿದವು. ಅವರ ಪ್ರಮುಖ ಧ್ಯೇಯಗಳಲ್ಲೊಂದಾದ ಪಾನನಿಷೇಧ ಕೋಟಿಗಳ ಆಸೆಗೆ ಮಾಯವಾಗಿ ಊರೂರಲ್ಲಿ ಹೆಂಗದಂಗಡಿಗಳು ತಲೆಯೆತ್ತಿದ್ದವು. ಅವರ ಗ್ರಾಮಸ್ವರಾಜ್ಯ-ಸ್ವದೇಶಿ ಮಂತ್ರಗಳು ಬುಡಮೇಲಾಗಿ ನೆಹರೂ ಅವರ ವಿದೇಶಿ ಸಹಾಯ ಬೃಹತ್ ಕೈಗಾರಿಕೆಗಳ ನೀತಿ ಚಾಲನೆಯಲ್ಲಿತ್ತು. ಸ್ವಾತಂತ್ರ್ಯಕ್ಕಾಗಿ ಅಷ್ಟೆಲ್ಲ ಶ್ರಮಪಟ್ಟ ಕಾಂಗ್ರೆಸ್ಸಿನ ಗಾಂಧಿಟೋಪಿಗಳು ತಮ್ಮನ್ನಾರಿಸಿ ಗದ್ದುಗೆ ಗೇರಿಸಿದ ಜನ ಸಾಮಾನ್ಯರಿಗೆ ಚೆಂದಾಗಿ ಜರಿ ಟೋಪಿ ಹಾಕತೊಡಗಿದ್ದವು. “ಗಾಂಧಿ ತತ್ವ” “ಗಾಂಧಿ ಕ್ಲಾಸ್” “ಗಾಂಧಿ ಮೊಮ್ಮಗ” ಎಂಬಲ್ಲ ಕುಹಕಗಳು ಜನರ ಬಾಯಲ್ಲಿ ನಲಿದಾಡತೊಡಗಿದ್ದವು. ಅಸೆಂಬ್ಲಿ-ಪಾರ್ಲಿಮೆಂಟ್ ಚುನಾವಣೆಗಳಲ್ಲೂ ನಡೆವ ಭ್ರಷ್ಟಾಚಾರಗಳನ್ನು ದಿನನಿತ್ಯದ ಜನಜೀವನದಲ್ಲಿ ಹಾಸುಹೊಕ್ಕಾಗುತ್ತಿರುವ ಲಂಚಾವತಾರಗಳನ್ನು ಊರಿಗೆ ಅವಳೊಬ್ಬಳೇ ತರಿಸಿಕೊಳ್ಳುತ್ತಿದ್ದ ದಿನಪತ್ರಿಕೆ ಓದಿ ತುಂಗೆ ಅರ್ಥಮಾಡಿಕೊಳ್ಳುತ್ತಿದ್ದಳು. ಒಟ್ಟಿನಲ್ಲಿ ಅವಳದೇ ಭಾಷೆಯಲ್ಲಿ ಹೇಳುವದಾದರೆ “ಹೆಂಚು ಕಾಣದ ಮೂಳಿ ಕಂಚು ಕಂಡ್ಹಾಂಗಾಗಿತ್ತು” ರಾಜಕಾರಣಿಗಳ ಕತೆ. ಅಂಥ ಹೊಲಸಿನಲ್ಲಿ ತಾನು ಕಾಲು ಹಾಕದಿದ್ದುದೇ ಒಳ್ಳೆದಾತು ಬಿಡು ಎಂದು ತನ್ನ ತೋಟ ಮನೆ ಕೆಲಸದಲ್ಲಿ ಮುಳುಗಿ ಹೋದಳು…

“ಅಬೇ ಅಲ್ನೋಡು, ಜೀಪು ಬಂದೇ ಬಿಡ್ತು” ಅಂದ ರಾಘು ಅಂದರೆ ತುಂಗಜ್ಜಿಯ ಮಗ.

“ಹೌದು. ಕರ್ನಾಟಕ ಸರ್ಕಾರ ಅನ್ನೋ ಬೋಡಿದೆ. ಅಜ್ಜೀ ನೀನೀಗ ಫೋಟೋಕ್ಕೆ ಛಲೊ ಫೋಜು ಕೊಡ್ಬೇಕು. ನಿನ್ನ ಹಿಂದೆ ನಾನು ನನ್ನ ಹೆಂಡ್ತಿ-ಮಗ. ನಿನ್ನ ಅಕ್ಕಪಕ್ಕದಲ್ಲಿ ಅಪ್ಪ ಅಮ್ಮ… ಹಾಂ…” ಮೊಮ್ಮಗ ದಿನಕರ ತಮಾಷೆ ಮಾಡುತ್ತಿದ್ದಂತೆಯೇ ಜೀಪು ಅಂಗಳಕ್ಕೆ ಬಂದು ನಿಂತಿತು. ಅದರಿಂದಿಳಿದವರು ತಹಶೀಲ್ದಾರರು-ಒಂದಿಬ್ಬರು ಸಹಾಯಕರು-ಒಬ್ಬ ಪೋಲೀಸು-ಜೊತೆಗೆ ಊರ ಫುಡಾರಿ ಸತ್ಯ ನಾರಾಯಣನೂ. ಅವರೆಲ್ಲ ಧಡ ಧಡ ಮೆಟ್ಟಿಲೇರಿ ಬರುತ್ತಿದ್ದಂತೆ ಗಾಬರಿ ಬಿದ್ದ ರಾಘು “ಏ ತಮ್ಮಾ, ಇನ್ನೆರಡು ಖುರ್ಚಿ ತಗಂಬಾ… ಬನ್ನಿ ಸರ್, ಬನ್ನಿ ಕೂತ್ಗೊಳ್ಳಿ” ಉಪಚರಿಸುತ್ತ ಕೈ ಕಟ್ಟಿ ನಿಂತ.

“ನಮ್ಮ ಲೆಟರು ಬಂದಿರ್‍ಬೇಕಲ್ಲ. ನಮ್ಮೆಲ್ಲರ ಹೆಮ್ಮೆಯ ಸ್ವಾತಂತ್ರ್ಯ ಹೋರಾಟಗಾರ್‍ತಿ ತುಂಗಜ್ಜಿಯವರಿಗೆ ಸರ್ಕಾರದ ಪರವಾಗಿ ಸನ್ಮಾನ ಮಾಡೋಣಂತ…” ತಹಶೀಲ್ದಾರರು ಅರ್ಧಕ್ಕೆ ಮಾತು ನಿಲ್ಲಿಸಿ ತುಂಗಜ್ಜಿ ಕಡೆ ನೋಡಿದರೆ ಅವಳು ತುಳಸಿ ಮಣಿಯೊಂದಿಗೆ ರಾಮ ಜಪ ಮಾಡುತ್ತಿದ್ದಳು. ನಾಲ್ಕು ದಿನದ ಹಿಂದೆ ತುಂಗಜ್ಜಿಗೆ ಸ್ವಾತಂತ್ರ್ಯೋತ್ಸವ ಸನ್ಮಾನ ಮಾಡ್ತೇವೆಂದು ತಾಲ್ಲೂಕಾಫೀಸಿನಿಂದ ಪತ್ರ ಬಂದಾಗ ಇವಳೆಲ್ಲಿ ಮಾಸಾಶನ ತಿರಸ್ಕರಿಸಿದಂತೆ ಸನ್ಮಾನವನ್ನೂ ತಿರಸ್ಕರಿಸಿಬಿಡುತ್ತಾಳೊ? ಎಂಬ ಭಯದಿಂದಲೇ ಮಗ ತಾಯಿಗೆ ಪತ್ರ ಕೊಟ್ಟಾಗ ಓದಿ ಒಂದೂ ಮಾತಾಡದೆ ಸುಮ್ಮನಿದ್ದವಳು ಈಗ…

ಸಾಹೇಬರ ಮಾತಿಗೆ ಅತ್ತ ತಿರುಗಿದವಳೇ ಯಾಕೊ ಧಡಕ್ಕನೆ ಎದ್ದು ನಿಂತಳು.

“ಬ್ಯಾಡ. ನನಗ್ಯಾವ ಸನ್ಮಾನವೂ ಬ್ಯಾಡ-ಬಹುಮಾನವೂ ಬ್ಯಾಡ. ಈ ಸುಟ್ಟ ಜನ್ಮಕ್ಕೆ ವಿನಾಕಾರಣ ಆದ ಅವಮಾನವೊಂದೇ ಸಾಕು… ನನ್ನ ಸಂಗ್ತಿಗೇ ಸತ್ಯಾಗ್ರಹ ಮಾಡಿ ಜೈಲಿಗೆ ಹೋಗಿ ಬಂದ ಗಂಡಸ್ರಿಗೆಲ್ಲ ಮಾಲೆ ಹಾಕಿ ಮೆರವಣಿಗೆ ಮಾಡಿದ್ರಂತೆ. ನಾ ಹೆಂಗ್ಸಾದ ಕಾರಣಕ್ಕೆ ಮನೆ ಒಳಗೇ ಸೇರಿಸಿಕೊಳ್ಳದೆ ಹೊರ ಜಗುಲಿಯಲ್ಲೇ ಕುಂಡ್ರಿಸಿ ಅನ್ನ ಹಾಕಿದ್ರು… ಇವ್ಳು ಎಲ್ಲೆಲ್ಲಿ ತಿರುಗಿ ಏನೇನು ಮಾಡ್ಕೊಂಡ್ ಬಂದಿದ್ದಾಳೊ. ಇವ್ಳನ್ನ ಒಳಗೆ ಬಿಟ್ರೆ ವಾಸ್ತು ಕೆಟ್ಹೋಗತ್ತೆ ಅಂತ ಇದೇ ಈ ಠೊಣಪನ ಅಪ್ಪನೇ ಹೇಳಿದ್ದ. ಹೇಳಲಿ. ಹೇಳಿಕೊಂಡು ಹಾಳಾಗಿ ಹೋಗ್ಲಿ… ನನ್ನ ಎದೆ ಒಳಗನ ಸತ್ಯ ನನಗೆ ಗೊತ್ತು. ನನ್ನ ಖರೆತನ ನನ್ನ ಹುಟ್ಟಿಸಿದ ದೇವ್ರಿಗೆ ಗೊತ್ತು… ಇದು, ಈ ಮಾಣಿ ಎರಡು ವರ್ಷದ ಶಿಶುವಾಗಿತ್ತು ಆವಾಗ. ಅದನ್ನು ಬೆನ್ನಿಗೆ ಕಟ್ಟಿಕೊಂಡೇ ಓಡ್ಯಾಡಿದೆ. ಇದಕೆ ಬೇರೆ ಹಾಲಿಲ್ದೆ ಐದು ವರ್ಷದ ತನಕ ಮೊಲೆ ಉಣ್ಸಿದೆ… ಅದನ್ನೆಲ್ಲಾ ಯಾರಿಗ್ಹೇಳ್ಲಿ?… ಆದ್ರೆ ಯಾರೆಷ್ಟೇ ಕುತಂತ್ರ ಮಾಡಿದ್ರೂ ನನ್ನ ಮಗನ ಪಾಲಿನ ತೋಟ ತಗೊಳ್ಳದೇ ಬಿಡ್ಲಿಲ್ಲ ಅನ್ನೋದು ಬೇರೆ ವಿಷ್ಯ… ಇರ್‍ಲಿ. ನನಗಿನ್ನೇನೇನೂ ಬ್ಯಾಡ. ಹೊಂಟ್ಹೋಗಿ ನೀವೆಲ್ಲ…” ಅಜ್ಜಿ ನಡುಗುತ್ತ ಕೋಲೂರಿಕೊಂಡು ಒಳಗೆ ತಿರುಗಿದಾಗ ಮೊಮ್ಮಗ ಅವಳನ್ನು ಹಿಡಿದು ನಿಲ್ಲಿಸಿದ.

“ಸ್ಸಾರಿ ಸರ್, ವ್ಹೆರಿ ವ್ಹೆರಿ ಸಾರಿ. ನಮ್ಮಜ್ಜಿಗೆ ವಯಸ್ಸಾಯ್ತಲ್ಲ, ಏನೇನೊ ಮಾತಾಡ್ತಿದ್ದಾಳೆ. ಅವ್ಳ ಪರವಾಗಿ ನಾವು ಕ್ಷೆಮೆ ಕೇಳ್ತಿದ್ದೇವೆ. ದಯವಿಟ್ಟು ಕ್ಷಮ್ಸಿ ಸರ್… ಅಜ್ಜಿ ನಿನ್ನ ತಲೆ ಏನು ಪೂರ್ತಿ ಕೆಟ್ಟೇಹೋಯ್ತಾ?…ಊರಿಗೇ ದೊಡ್ಡವರು ತಹಶೀಲ್ದಾರ್ರು. ಅವ್ರು ನಮ್ಮನೆವರ್‍ಗೂ ಬಂದಿದ್ದೇ ದೊಡ್ಡ ಮಾತು. ಅಂಥಾದ್ರಲ್ಲಿ ನೀ ಹೀಂಗೆಲ್ಲ ಹೇಳಬಹುದಾ? ಯಾವತ್ತೊ ನಿಂಗಾದ ಅವಮಾನವನ್ನು ನೀನಿವತ್ತು ಇವ್ರ ಮೇಲೆ ತೀರಿಸಿಕೊಳ್ಳೋದ ಸರಿಯಾ?…

ಅಜ್ಜಿ ತಲೆ ತಗ್ಗಿಸಿದಳು.

“ಇಲ್ಲ ಇಲ್ಲ. ಸರಿಯಲ್ಲ. ತಪ್ಪಾಯ್ತು ಮಾಸ್ವಾಮಿ ತಪ್ಪಾಯ್ತು. ಮಳ್ಳು ಮುದುಕಿ ಏನೇನೊ ಹಲುಬಿಬಿಟ್ಟೆ. ದಯವಿಟ್ಟು ನಿಮ್ಮ ಹೊಟ್ಯಲ್ಲಿಟ್ಟುಕೊಳ್ಳಿ… ಆದ್ರೆ ಸನ್ಮಾನ ಪಡೀವಂಥದ್ದೇನನ್ನೂ ಮಹಾನಾ ಮಾಡ್ಲಿಲ್ಲ. ಆ ಚಳುವಳಿಯಲ್ಲಿ ನನ್ನಂಥವ್ರೇ ನೂರಾರು ಜನ ಮನೆ ಮಾರು ಕಳಕೊಂಡ್ರು. ನೂರಾರು ಜನ ಗಂಡ-ಹೆಂಡತಿ-ಮಕ್ಕಳು-ತಂದೆ ತಾಯಿ ಕಳಕೊಂಡ್ರು. ನೂರಾರು ಜನ ಜೀವ ಕಳಕೊಂಡ್ರು. ಹಾಗೆ ಏನೆಲ್ಲ ಕಳಕೊಂಡಿದ್ದು ಮಾಸಾಶನದ ಆಸೆಗಾಗಿಯಲ್ಲ, ಸನ್ಮಾನದ ಆಸೆಗಾಗಿಯೂ ಅಲ್ಲ, ಹೆಸರಿನಾಸೆಗಾಗಿಯೂ ಅಲ್ಲ. ಆ ಚಳುವಳಿ-ಸತ್ಯಾಗ್ರಹ-ಆ ಬವಣೆ ಏನಿದ್ರೂ ನಾವು ಹುಟ್ಟಿದ ನೆಲದ ಋಣಕ್ಕಾಗಿ-ನಾವುಂಬೊ ಅನ್ನದ ಋಣಕ್ಕಾಗಿ-ನಾವು ಕುಡಿಯೊ ನೀರಿನ ಋಣಕ್ಕಾಗಿ-ಉಸಿರಾಡೊ ಗಾಳಿಯ ಋಣಕ್ಕಾಗಿ-ನಮ್ಮೆಲ್ಲರ ಒಳಗಿರೊ ಪರಮಾತ್ಮನ ಋಣಕ್ಕಾಗಿ ನಡೆದಿದ್ದಾಗಿತ್ತು. ಇರ್‍ಲಿ. ಅವ್ರೆಲ್ರ ನೆನಪಿಗೆ ಈ ಸನ್ಮಾನ ತಗೋತೇನೆ. ಕೊಡಿ, ಅದೇನು ಕೊಡ್ತೀರೊ ಕೊಡಿ…”

ಮಗ ಮೊಮ್ಮಗ ಕೂಡಿ ಅವಳನ್ನು ಹಿಡಿದು ಖುರ್ಚಿಯಲ್ಲಿ ಕುಂಡ್ರಿಸಿ ಸಾಹೇಬರು ಫಲತಾಂಬೂಲದ ಹರಿವಾಣ ಕೊಟ್ಟು ಶಾಲು ಹೊದೆಸಿ ಅವಳ ಕಾಲಿಗೆ ಬಿದ್ದು ಮೇಲೇಳುವಾಗ ಅವರ ಕಣ್ಣಿಂದುದುರಿದ ಎರಡು ಹನಿ ಠಪ್ಪನೆ ಅಜ್ಜಿಯ ಕಾಲಿಗೆ ಬಿತ್ತು. ಅವಳೂ ತನ್ನ ಕಣ್ಣೊರೆಸಿಕೊಳ್ಳುತ್ತ “ಎಲ್ಲಿದ್ರೂ ನೂರ್ಕಾಲ ಚೆಂದಾಗಿರು ಕಂದಾ” ಎಂದು ಅವರ ತಲೆ ಮುಟ್ಟಿ ಆಶೀರ್ವದಿಸಿದಾಗ ಅಲ್ಲಿದ್ದವರೆಲ್ಲ ಹನಿಗಣ್ಣಾದರು.

 

 

 

 

 

 

ಭಾಗೀರಥಿ ಹೆಗಡೆ

Advertisements

About sujankumarshetty

kadik helthi akka

Posted on ನವೆಂಬರ್ 5, 2010, in ಕತೆ, ಸಣ್ಣ ಕಥೆ and tagged . Bookmark the permalink. ನಿಮ್ಮ ಟಿಪ್ಪಣಿ ಬರೆಯಿರಿ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: