ಅಷ್ಟು ಅಮೂಲ್ಯವಾದ ಕಣ್ಣೊಳಕ್ಕೆ ಕಸ ಬೀಳಬಾರದು!

Srinagar Kitty and Ravi Belagere

“ಅದು ಎಷ್ಟು?” ಕೇಳಿದೆ. ಆತ ಕೇವಲ ಬೆಲೆ ಹೇಳಲಿಲ್ಲ. ಆ ವಸ್ತುವಿನ ನಾನಾ ಮಾಡೆಲ್ ಗಳನ್ನು ತೋರಿಸಿ, ಪ್ರತಿಯೊಂದರದೂ ಬೆಲೆ ಹೇಳಿ, ಆ ಪೈಕಿ ಸರ್ವೋತ್ಕೃಷ್ಟವಾದ ಹೈ ಎಂಡ್ ಮಾಡೆಲ್ ನ ಬಗ್ಗೆ ವಿವರಣೆ ನೀಡಿ, ಇದರ ಬೆಲೆ ಇಷ್ಟು ಅಂದ. ನಾನು ಕೊಳ್ಳುವುದೇ ಆದರೆ ಸರ್ವೋತ್ಕೃಷ್ಟವಾದುದನ್ನೇ ಕೊಳ್ಳುತ್ತೇನೆ ಎಂದು ತೀರ್ಮಾನಿಸಿದ್ದೇನೆಂಬುದು ಅವನಿಗೆ ಗೊತ್ತಿತ್ತಾ? ಅದನ್ನೇ ಕೊಳ್ಳುವಂತೆ ಗಂಟುಬಿದ್ದ.

ಲೇಕಿನ್, ನಾನು ಬ್ರಾಂಡ್ ವ್ಯಸನಿಯಲ್ಲ. ನನ್ನ ಅನೇಕ ಗೆಳೆಯರು ಭಯಂಕರ ಬ್ರಾಂಡ್ ವ್ಯಸನಿಗಳು. ಬೂಟಿನೊಳಗಿನ ಸಾಕ್ಸ್ ನಿಂದ ಹಿಡಿದು, ಕೊರಳ ಸುತ್ತಲಿನ ಟೈ ತನಕ ಅವರಿಗೆ ಎಲ್ಲವೂ ಅತ್ಯಾಧುನಿಕ ಕಂಪನಿಗಳ ಬ್ರಾಂಡ್ ಗಳೇ ಆಗಬೇಕು. ದುಬಾರಿಯವೇ ಆಗಬೇಕು. ಅಂಗಿ ಪ್ಯಾಂಟಿಗಿಂತ ಹೆಚ್ಚಾಗಿ ಒಳ ಉಡುಪುಗಳ ಬ್ರಾಂಡ್ ಗಳ ಬಗ್ಗೆ ತಲೆ ಕೆಡಿಸಿಕೊಳ್ಳುವ ಮಿತ್ರರೂ ನನಗಿದ್ದಾರೆ. ಕೇವಲ ಐದು ನೂರು ರುಪಾಯಿಯಲ್ಲಿ ಆರು ಬನೀನು ಮತ್ತು ಅದರ ‘ಪ್ರತಿಸ್ಪರ್ಧಿ’ ಉಡುಪನ್ನು ಸಲೀಸಾಗಿ ಜಯನಗರದ ಫುಟ್ ಪಾತ್ ನಿಂದ ತಂದು ‘ಈ ವರ್ಷದ ಷಾಪಿಂಗ್ ಮುಗಿಯಿತು’ ಎಂದು ಘೋಷಿಸುವ ಸಾಧ್ವೀ ಶಿರೋಮಣಿಯ ಏಕೈಕ ಗಂಡನಾದ ನಾನು ಇಂಥ ಖಯಾಲಿಗಳಿಂದ ದೂರ. ಕೇವಲ ಉಡುಪು, ವಾಚು, ಪೆನ್ನು ಇತ್ಯಾದಿಗಳ ಬಗ್ಗೆ ಅಲ್ಲ, ಕಾರು-ಬಂಗಲೆಗಳ ಬಗ್ಗೆಯೂ ನಾನು ಪರ್ಟಿಕ್ಯುಲರ್ ಅಲ್ಲ. ಆದರೆ ನನಗೆ ಒಬ್ಬ ಬೆಳೆದ ಮಗ ಮತ್ತು ಇಬ್ಬರು ಕ್ರೇಜಿ ಖಯಾಲುಗಳ ಅಳಿಯಂದಿರಿದ್ದಾರೆ. ಎಲ್ಲರೂ ಹೆಚ್ಚು ಕಡಿಮೆ ಒಂದು ವಯಸ್ಸಿನವರು. ಅವರಿಗೆ ಬ್ರಾಂಡ್ ಗಳ ಬಗ್ಗೆ ಹುಚ್ಚು ಸಹಜ. ಚಿಕ್ಕ ಅಳಿಯ ಚಿತ್ರ ನಟ.

“ಅಂಕಲ್, ಆಡಿ ಅಂತ ಹೊಸ ಕಾರು ಬಂದಿದೆ. ಅದರ ಲೇಟೆಸ್ಟ್ ಮಾಡೆಲ್ ಬಿಡುಗಡೆಯಾಗಿದೆ. ಹೆಚ್ಚೆಂದರೆ ಐವತ್ತು ಲಕ್ಷ. ನೀವು ತಗೋಬೇಕು ಅಂಕಲ್…” ಅಂತ ಮಾತಿಗಾರಂಭಿಸುತ್ತಾನೆ.

“ನೋಡು ಮಿತ್ರಾ, ನೀನು ನಟ. ಆಡಿ ಕಾರ್ ನಲ್ಲಿ ಹೋಗಿ ಇಳಿದರೆ ನಿನ್ನ ಚಿತ್ರದ ನಿರ್ಮಾಪಕ ನಿನ್ನ ರೇಟು ಹೆಚ್ಚಿಸುತ್ತಾನೆ. ನಿನ್ನ ಕೋ-ಬ್ರದರ್ ವೃತ್ತಿಯಿಂದ ಬಿಲ್ಡರ್. ಅವನು ಆಡಿ ಕಾರ್ ನಲ್ಲಿ ಹೋಗಿ ಇಳಿದರೆ ವ್ಯಾಪಾರ ಕುದುರಬಹುದು. ಆದರೆ ನಾನು ಆಡಿ ಕಾರಿನಲ್ಲಿ ಹೋದರೂ, ಲಗೇಜ್ ಗಾಡಿಯಲ್ಲಿ ಹೋದರೂ ಜನ ಗುರುತಿಸುವುದು ರವಿ ಬೆಳಗೆರೆ ಅಂತಲೇ. ಕೊಡೋದು, ಒಂದು ಸಂಚಿಕೆಗೆ ಹದಿನಾಲ್ಕೇ ರುಪಾಯಿ. ನಂಗ್ಯಾಕಪ್ಪಾ ಆಡಿ ಕಾರು?” ಎಂದು ನಗೆಯಾಡಿದ್ದೆ.

ಠೀಕ್ ಹೈ, ಬದುಕಿಗೊಂದು ಸ್ಟೈಲ್ ಇರಬೇಕು. ಆ ಮನುಷ್ಯ ಅಭಿರುಚಿಯುಳ್ಳವನು ಅಂತ ಜನ ಅಂದುಕೊಳ್ಳುವ ಹಾಗಿರಬೇಕು. ನಾವು ಆಕರ್ಷಕವಾಗಿ ಕಾಣಬೇಕು. ಅದೆಲ್ಲ ಒಪ್ಪುತ್ತೇನೆ. ಆದರೆ ನಾವು ಧರಿಸುವ ವಸ್ತುಗಳು, ಓಡಾಡುವ ಕಾರು, ವಾಸಿಸುವ ಬಂಗಲೆ – ಅಭಿರುಚಿಯೆಂದರೆ ಇಷ್ಟೇ ಅಲ್ಲವಲ್ಲ? ಅರ್ಧಕ್ಕೂ ಹೆಚ್ಚಿನ ಬದುಕನ್ನು ನಾನು ಕೊಳಗೇರಿಗಳಲ್ಲಿ, ಪುಟ್ಟಮನೆಗಳಲ್ಲಿ, ಬಸ್ ಸ್ಟ್ಯಾಂಡುಗಳಲ್ಲಿ ಕಳೆದಿದ್ದೇನೆ. ನನ್ನ ಆಫೀಸು ಇವತ್ತಿಗೂ ಇಟ್ಟಿಗೆ ಬಟ್ಟಿಯಂತೆ ಕಾಣುತ್ತದೆ. ನನ್ನ ಪುಸ್ತಕ, ಪತ್ರಿಕೆಗಳು ತುಂಬ ಸಾಧಾರಣ ಹಾಳೆಯಲ್ಲಿ – ಬಣ್ಣಗಳೇ ಇಲ್ಲದೆ ಪ್ರಿಂಟಾಗುತ್ತವೆ. ಸಭೆಗಳಿಗೆ ಹೊರಡುವಾಗ ಕೊಂಚ ಫಾರ್ಮಲ್ ಆಗಿ ಉಡುಪು ಧರಿಸುತ್ತೇನೆಯೇ ಹೊರತು, ಉಳಿದಂತೆ ನನ್ನ ದಿರಿಸು- ಒಂದು ಕಾಟನ್ ಷರಟು ಮತ್ತು ಟ್ರ್ಯಾಕ್ ಪ್ಯಾಂಟು. ಆದರೆ ಈ ಅಸಡ್ಡೆ, ಕಾಂಪ್ರೊಮೈಸುಗಳನ್ನು ನಾನು ಎರಡು ವಿಷಯಗಳಲ್ಲಿ ಮಾಡಿಕೊಳ್ಳಲು ಇಷ್ಟಪಡುವುದಿಲ್ಲ. ಮೊದಲನೆಯದು, ಓದು-ಬರಹ. ಎರಡನೆಯದು, ಆರೋಗ್ಯ.

ನಾನು ಅಪ್ಪಿತಪ್ಪಿ ಕೂಡ ನನಗೆ ಪರಿಚಯವಿಲ್ಲದ, ಆತನ ಬುದ್ಧಿವಂತಿಕೆ ಮನವರಿಕೆಯಾಗದ ಮಾಮೂಲಿ ವೈದ್ಯರಿಂದ ನನ್ನ ಆರೋಗ್ಯವನ್ನು ಒಪ್ಪಿಸುವುದಿಲ್ಲ. ಯಾರೋ ಔಷಧಿ ಅಂಗಡಿಯವನು ಕೊಡುವ ಸಲಹೆ ಮತ್ತು ಮಾತ್ರೆ ತೆಗೆದುಕೊಳ್ಳುವುದಿಲ್ಲ. ಡಾಕ್ಟರು ಎಂಥವರು ಮತ್ತು ಅವರು ಕೊಡುವ ಚಿಕಿತ್ಸೆ ಎಂಥದು ಎಂಬುದನ್ನು ಇಂಟರ್ನೆಟ್ ನಲ್ಲಿ ಚೆಕ್ ಮಾಡಿಕೊಳ್ಳುತ್ತೇನೆ. ಯಾರೋ ಹೇಳಿದರು ಅಂತ ಮನೆ ಮದ್ದು, ನಾಟಿ ವೈದ್ಯ ಮುಂತಾದವುಗಳನ್ನು ಮಾಡಿಕೊಳ್ಳುವುದಿಲ್ಲ. ಅವೆಲ್ಲ ಪರಿಣಾಮಕಾರಿಯೇ ಇರಬಹುದು. ಆದರೆ ನಾನು ಅಲೋಪತಿಯ ಹೊರತು ಮತ್ಯಾವುದೇ ಔಷಧೀಯ ಪದ್ಧತಿಯನ್ನು ನಂಬುವುದಿಲ್ಲ. ನೋ ರಿಸ್ಕ್.

ಬರಹದ ವಿಷಯಕ್ಕೆ ಬಂದರೆ, ನಾನು ತುಂಬ ಶ್ರೇಷ್ಠವಾದುದನ್ನು ಬರೆದಿದ್ದೇನೆ ಅಂತ ಭಾವಿಸುವುದಿಲ್ಲ. ಆದರೆ ಓದುಗರಿಗೆ ಅವಶ್ಯಕವಾದುದನ್ನು, ಅರ್ಥವಾಗುವುದನ್ನು ಮಾತ್ರ ಬರೆದಿದ್ದೇನೆ. ಬರೆಯುವುದು ನನ್ನ ವೃತ್ತಿಯಾದ್ದರಿಂದ, ಹಣ ಬಾರದ ಹೊರತು ನಾನು ಏನನ್ನೂ ಬರೆಯುವುದಿಲ್ಲ. ಹಾಗಂತ, ಹಣ ಬರುವುದೆಂಬ ಕಾರಣಕ್ಕೆ ಏನನ್ನಾದರೂ ಸರಿ, ಬರುಯುತ್ತೇನೆ ಎಂದು ಹೊರಡುವುದಿಲ್ಲ. ನನ್ನ ಆತ್ಮ ಸಮಾಧಾನ ಹಣಕ್ಕಿಂತ ಅಥವಾ ಅಟ್ಲೀಸ್ಟ್, ಹಣದಷ್ಟೇ ಮುಖ್ಯ.

ಇನ್ನು ಓದು, ಜೀವನ ಸಂಗಾತಿಯನ್ನು ಆಯ್ಕೆ ಮಾಡಿಕೊಂಡಷ್ಟೇ ಎಚ್ಚರಿಕೆಯಿಂದ ನಾವು ನಮ್ಮ ಓದನ್ನು ಆಯ್ಕೆ ಮಾಡಿಕೊಳ್ಳಬೇಕು. ಬಿ ಚೂಸಿ. ಯಾರೋ ಹೆಸರಾಂತ(?) ಲೇಖಕರು ಬರೆದರು ಎಂಬ ಕಾರಣಕ್ಕೆ ಅವರು ಬರೆದುದನ್ನೆಲ್ಲ ಓದಲು ಕೂರಬೇಡಿ. ಕೆಲವರ ಶೈಲಿ ಇಷ್ಟವಾಗಬಹುದು. ಕೆಲವರ ವಾದ ಸರಿಯೆನ್ನಿಸಬಹುದು. ಆದರೆ ಅವರು ಕೊಡುವ ‘ಕಸ’ವನ್ನೆಲ್ಲ ತಲೆಗೆ ತುಂಬಿಸಿಕೊಳ್ಳಬೇಡಿ. ನಿಮಗೆ ಸಿಟ್ಟು ಬರಬಹುದು. ನಾನು ಕನ್ನಡದಲ್ಲಿ ಕಥೆ, ಕಾದಂಬರಿ ಓದುವುದನ್ನು ನಿಲ್ಲಿಸಿ ವರ್ಷಗಳೇ ಆದವು. ಆವರಣ ಕಾದಂಬರಿಯನ್ನು ಹಟಕ್ಕೆ ಬಿದ್ದು ಓದಿದೆನಾದರೂ, ಭೈರಪ್ಪನವರ ಕೊನೆಯ ಕಾದಂಬರಿ ಅಂತ ನಾನು ಓದಿದ್ದು ಸಾಕ್ಷಿ. ಲೇಖಕನಾದವನು ಒಂದು ಹಂತದಲ್ಲಿ ಬೆಳೆಯುವುದನ್ನು ನಿಲ್ಲಿಸಿ ಬಿಡುತ್ತಾನೆ. ಬರೆದದ್ದನ್ನೇ ತಿರುವಿ-ತಿರುವಿ ಬರೆಯುತ್ತಾನೆ. ಅಥವಾ ಓದುಗ, ಲೇಖಕನ ಮಟ್ಟವನ್ನು ಮೀರಿ ಬೆಳೆಯತೊಡಗುತ್ತಾನೆ. ಬಾಲ್ಯದಲ್ಲಿ ಕಣ್ಣರಳಿಸಿ ಓದುತ್ತಿದ್ದ ಚಂದಮಾಮ, ಬಾಲಮಿತ್ರ ಇವತ್ತು ನೆನಪು ಮಾಡಿಕೊಳ್ಳಲು ಚೆಂದವೇ ಹೊರತು, ನಮ್ಮ ಓದು ಅಲ್ಲಿಗೇ ನಿಂತುಬಿಡಬಾರದು. ಲೇಖಕ ಎಷ್ಟೇ ದೊಡ್ಡವನಾದರೂ, ಏನೇ ಶ್ರೇಷ್ಠನೆನ್ನಿಸಿಕೊಂಡರೂ ಅವನನ್ನೂ ದಾಟಿ ಮುಂದಕ್ಕೆ ಹೋಗಲೇಬೇಕು. ಓದುಗ ಬೆಳೆಯುವುದೇ ಹಾಗೆ. ನೀವು ಹತ್ತು ವರ್ಷ ಕಳೆದರೂ ಅದದೇ ಸಾಹಿತ್ಯ, ಅವೇ ಲೇಖಕರು, ಅಂಥವೇ ಕಥಾವಸ್ತುಗಳನ್ನು ಓದುತ್ತಿದ್ದೀರಾ? ದಯವಿಟ್ಟು ಮುಂದಿನ ಮೆಟ್ಟಿಲು ಹತ್ತುವ ಬಗ್ಗೆ ಯೋಚಿಸಿ.

ಇಷ್ಟಾಗಿ, ಏನನ್ನು ಮತ್ತು ಯಾರನ್ನು ಓದಬೇಕು ಎಂಬ ಆಯ್ಕೆ, ನಿಮ್ಮ ಬುದ್ಧಿಶಕ್ತಿಯ ಮೇಲೆ ಅವಲಂಬಿತವಾಗಿರುತ್ತದೆ. ನಾನು ಇಂಟರ್ನೆಟ್ ಹೊಕ್ಕೆನೆಂದರೆ ಒಂದು ಕಡೆಯಿಂದ ನೂರಾರು ಪುಸ್ತಕಗಳ ಕ್ಷಿಪ್ರ ಪರಿಚಯಗಳು, ಓದುಗರ ವಿಮರ್ಶೆಗಳು, ಲೇಖಕರ ವಿವರಗಳು – ಇವನ್ನು ಓದಿಕೊಳ್ಳುತ್ತೇನೆ. ಅಷ್ಟು ತಿಳಿದುಕೊಂಡರೆ ಸಾಕು. ಆ ಪುಸ್ತಕವನ್ನು ಓದಬೇಕೋ, ಓದಬಾರದೋ ಗೊತ್ತಾಗಿ ಬಿಡುತ್ತದೆ. ಕೆಲವು ಇಂಗ್ಲಿಷ್ ಪತ್ರಿಕೆಗಳನ್ನು ಅವುಗಳಲ್ಲಿ ಪ್ರಕಟವಾಗುವ ಪುಸ್ತಕ ವಿಮರ್ಶೆಗಳಿಗಾಗಿಯೇ ತರಿಸುತ್ತೇನೆ. ಅಲ್ಲಿ ಹೊಸ ಪುಸ್ತಗಳ ಬಗ್ಗೆ ಮಾಹಿತಿ ತರಿಸಿಕೊಳ್ಳುತ್ತೇನೆ. ಕೆಲ ಬಾರಿ ಪುಸ್ತಕ ಕೈಗೆತ್ತಿಕೊಳ್ಳುತ್ತೇನಾದರೂ, ಪೂರ್ತಿ ಓದುವುದಿಲ್ಲ. ಆಯ್ದ ಅಧ್ಯಾಯಗಳನ್ನು ಓದಿ ಮುಚ್ಚಿಡುತ್ತೇನೆ. ಅದೊಂಥರಾ ವಿಸ್ತೃತವಾಗಿ ಬಿಡಿಸಿದ ಎಲೆಯಲ್ಲಿ ನಮಗೆ ಬೇಕಾದುದನ್ನಷ್ಟೇ ತಿಂದ ಹಾಗೆ. ವಿರಾಮದಲ್ಲಿ ಕುಳಿತು ಛಾನಲ್ ಬದಲಿಸಿದ ಹಾಗೆ.

ಓದಿನ ಬಗ್ಗೆ ಯಾಕಿಷ್ಟು ಚೂಸಿ ಆಗಿರಬೇಕು ಅಂದರೆ, ನಮ್ಮ ಸಮಯ ಅತ್ಯಂತ ಮುಖ್ಯವಾದುದು. ಎಷ್ಟು ವರ್ಷ ಬದುಕಿರುತ್ತೇವೆ? ವರ್ಷಕ್ಕೆ ಎಷ್ಟು ಪುಸ್ತಕ? ಎಷ್ಟು ವರ್ಷ ನಮ್ಮ ಕಣ್ಣು ಕೆಲಸ ಮಾಡುತ್ತವೆ? ಮನುಷ್ಯರ ಅಂಗಗಳ ಪೈಕಿ ಕಣ್ಣು ಅತ್ಯಂತ ಅಮೂಲ್ಯವಾದುದು. ಅಂಥ ಕಣ್ಣಿನೊಳಕ್ಕೆ ಕಸ ಬೀಳದಂತೆ ನೋಡಿಕೊಳ್ಳಬೇಕಲ್ಲವೆ?

Advertisements

About sujankumarshetty

kadik helthi akka

Posted on ಜೂನ್ 1, 2011, in "ಇ-ಲೋಕ" ಲೇಖನಗಳ “ಕನ್ನಡಲೋಕ”, ರವಿ ಬೆಳಗೆರೆ - ಸೂರ್ಯ ಶಿಕಾರಿ and tagged . Bookmark the permalink. ನಿಮ್ಮ ಟಿಪ್ಪಣಿ ಬರೆಯಿರಿ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: