ಅದಮ್ಯ ಜೀವನೋತ್ಸಾಹಿ ಕೌಲಗಿ ಶೇಷಾಚಾರ್ಯರ ನೆನಪು – remembering centurian kaulagi sheshachar

0604 Remembering Centurian Kaulagi Sheshachar Aid0038
ಮೈಸೂರು ಎಂದೊಡನೆ ನನಗೆ ನೆಪಾಗುವ ಮೊದಲನೆಯ ಹೆಸರು ಕೆ.ಆರ್. ಮೋಹನ್ ಅವರದು. ಅವರಂತಹ ಸಾಹಿತ್ಯ ಹಾಗೂ ಸಂಗೀತ ಪ್ರೇಮಿ ಅಪರೂಪಕ್ಕೆ ದೊರೆಯುತ್ತಾರೆ. ಇವರು ಕೌಲಗಿ ಶೇಷಾಚಾರ್ಯರ ವರಪುತ್ರ. ಮೈಸೂರಲ್ಲೇ ಜನಿಸಿದರು, ಉಡುಪಿಯಲ್ಲಿ ಬಿ.ಕಾಮ್. ಓದಿದರು. ಅಲ್ಲೇ ಲಾ ಕಾಲೇಜು ಸೇರಿ ಕಾಯದೆಯ ಪದವಿ ಗಳಿಸಿದರು. ಧಾರವಾಡದಿಂದ 1965ರಲ್ಲಿ ಎಂ.ಕಾಂ. ಮಾಡಿ ಅದೇ ವರ್ಷ ಸಿಂಡಿಕೇಟ್ ಬ್ಯಾಂಕ್ ಸೇರಿದರು. 35 ವರ್ಷ್ ಕೆಲಸ ಮಾಡಿ ನಿವೃತ್ತರಾದರು. ನಿವೃತ್ತಿ ಪೂರ್ವದಲ್ಲಿ ಅವರು ಅಸಿಸ್ಟಂಟ್ ಜನರಲ್ ಮೆನೆಜರರಾಗಿದ್ದರು. ಇಡಿ ಭಾರತ ಸುತ್ತಾಡಿದ್ದಾರೆ. ಆದರೂ ಕನ್ನಡ ಸಾಹಿತ್ಯದ ಪ್ರೀತಿಯನ್ನು ಜೀವನದುದ್ದಕ್ಕೂ ಉಳಿಸಿಕೊಂಡು ಬೆಳೆಸಿಕೊಂಡು ಬಂದಿದ್ದಾರೆ. ಆಗಾಗ ಲೇಖನಗಳನ್ನೂ ಬರೆಯುತ್ತಾರೆ. ಇಂಗ್ಲಿಷಿನಲ್ಲೂ ಬರೆಯುತ್ತಾರೆ. ಮೈಸೂರಿನಿಂದ ಪ್ರಕಟವಾಗುವ Star of Mysore ಎಂಬ ಆಂಗ್ಲ ಪತ್ರಿಕೆಗೆ ನಿಯಮಿತವಾಗಿ ಬರೆಯುತ್ತಾರೆ. ಸಾಹಿತಿಗಳ ಒಡನಾಟ ಅವರ ಹವ್ಯಾಸ.

ಮೋಹನ್ ಅವರ ಪರಿಚಯ ನನಗೆ ಆದದ್ದು 2002ರಲ್ಲಿ. ನನ್ನ ಪ್ರವಾಸ ಕಥನ- ಜೀವಿ ಕಂಡ ಅಮೇರಿಕಾ, ಪ್ರಕಟಗೊಂಡಿತ್ತು. ನನ್ನ ಸಹಪಾಠಿ ಡಾ| ಬಿ.ಬಿ.ರಾಜಪುರೋಹಿತರ ಮನೆಯಲ್ಲಿ ಅವರ ಭೆಟ್ಟಿಯಾಯ್ತು. ತಮ್ಮ ಮನೆಗೆ ಕರೆದುಕೊಂಡು ಹೋಗಿ ಆದರಾತಿಥ್ಯ ತೋರಿದರು. ನನ್ನ ಪುಸ್ತಕ ಮೆಚ್ಚಿದರು. ನಂತರ ನನ್ನ ಎಲ್ಲ ಪುಸ್ತಕಗಳನ್ನು ತರಿಸಿಕೊಂಡು ಓದಿದರು, ಮೈಸೂರಿನ ಎಲ್ಲ ಮಹತ್ವದ ಸಾಹಿತಿಗಳಿಗೆ ನನ್ನ ಪರಿಚಯ ಮಾಡಿಕೊಟ್ಟರು. ವೇದವಿದ್ವಾನ್ ಕುಮಾರ ಶ್ರೀಕಂಠಸ್ವಾಮಿಸ್ವಾಮಿಗಳ ಪರಿಚಯ ಮಾಡಿಕೊಟ್ಟರು. ಸಂಗೀತ ವಿದುಷಿ ಸಂಸ್ಕೃತ ಪ್ರಾಧ್ಯಾಪಕಿ ಡಾ| ಜಯಶ್ರೀಯವರ ಪರಿಚಯ ಮಾಡಿಕೊಟ್ಟರು (ಅವರು ಮುಂದೆ ನಾರಾಯಣಾಮೃತ ಫೌಂಡೇಷನ್‌ದವರು ಪ್ರಾಯೋಜಿಸಿದ ನಾನು ಅನುವಾದಮಾಡಿದ ನೃಸಿಂಹಸ್ತುತಿಯ ಧ್ವನಿಸುರುಳಿಗೆ ಕಂಠದಾನ ಮಾಡಿದ್ದಾರೆ.) ಸಾಹಿತ್ಯ ಸಂಗೀತ ಕಾರ್ಯಕ್ರಮಗಳನ್ನು ಏರ್ಪಡಿಸುವಲ್ಲಿ ಅಗ್ರಮಾನ್ಯರಾದ ತುಳಸಿ-ರಾಮಚಂದ್ರರಿಗೆ ಪರಿಚಯ ಮಾಡಿಕೊಟ್ಟರು. (ಅವರು ತಮ್ಮ ಸಂಸ್ಥೆಯಾದ ಕಾವ್ಯರಂಜಿನಿ ಸಭಾದ ಆಶ್ರಯದಲ್ಲಿ ಬೇಂದ್ರೆ, ಗೋಕಾಕ, ಮಧುರಚೆನ್ನರ ಬಗ್ಗೆ ನನ್ನಿಂದ ವ್ಯಾಖ್ಯಾನಗಳನ್ನು ಏರ್ಪಡಿಸಿದರು.). ಸರ್ವೋದಯದ ಕಾರ್ಯಕರ್ತರಾದ ಸುರೇಂದ್ರ ಕೌಲಗಿಯವರ ಪರಿಚಯ ಮಾಡಿಕೊಟ್ಟರು. (ಅವರು ಮೇಲುಕೋಟೆಯಲ್ಲಿ ತಾವು ನಡೆಸುವ ಮಾದರಿ ಶಾಲೆಯಲ್ಲಿ ನನ್ನ ಉಪನ್ಯಾಸ ಆಯೋಜಿಸಿದರು).

ಮೋಹನ್ ಅವರ ವೈಶಿಷ್ಯವೆಂದರೆ ಅಸಂಖ್ಯ ಸಾಹಿತಿಗಳೊಡನೆ, ಸಂಗೀತಜ್ಞರೊಡನೆ ಆತ್ಮೀಯ ಒಡನಾಟ. ಪಾ.ವೆಂ.ಆಚಾರ್ಯ, ವಸಂತ ದಿವಾಣಜಿ ಮೊದಲಾದವರ ನಿಕಟ ಬಾಂಧವ್ಯ ಇವರಿಗಿದೆ. ಪ್ರಸಿದ್ಧ ಕನ್ನಡ ಲೇಖಕ ಹಾಗೂ ಚಿಂತಕ ಸತ್ಯಕಾಮರು ತಿಂಗಳುಗಟ್ಟಲೇ ಮೋಹನ್ ಅವರ ಮನೆಯಲ್ಲಿ ವಾಸ್ತವ್ಯ ಹೂಡುತ್ತಿದ್ದರು. ಉತ್ತರ ಹಿಂದೂಸ್ತಾನದಲ್ಲೆಲ್ಲ ಮೋಹನರು ಸತ್ಯಕಾಮರೊಡನೆ ಪ್ರವಾಸ ಮಾಡಿದ್ದಾರೆ. ಸಂಗೀತಜ್ಞರಾದ ಪಂ.ಕುಮಾರ ಗಂಧರ್ವ, ಪಂ.ಭೀಮಸೇನ ಜೋಶಿ, ಪಂ. ದತ್ತಾತ್ರೇಯ ಗರುಡ ಮುಂತಾದವರೊಡನೆ ಅವರ ಒಡನಾಟ. ಮೋಹನ ಅನುಭವಗಳನ್ನು ಕೇಳುತ್ತ ಕುಳಿತರೆ ಸಾಹಿತ್ಯಪ್ರೇಮಿಗಳಿಗೆ ಅದೊಂದು ಹಬ್ಬದೂಟ.

ಸಾಧನಾ ಎಂಬ ಮಹಾಮನೆ : ಮೈಸೂರಿಗೆ ಹೋದಾಗ ನನ್ನನ್ನು ಆಕರ್ಷಿಸುವ ಇನ್ನೊಂದು ಸ್ಥಳವೆಂದರೆ ಎನ್ನಾರ್‌ರಾವ್ ಅವರ ನಾರಾಯಣಾಮೃತ ಫೌಂಡೇಷನ್ನಿನ ಕೇಂದ್ರ ಸಾಧನಾ ಎಂಬ ಮಹಾಮನೆ. ಅದು ದೂರವಿದೆ ಎಂದು ನಾನು ಹೆಚ್ಚಾಗಿ ಮೊಹನ ಅವರ ಮನೆಯಲ್ಲೇ ವಾಸ ಮಾಡುತ್ತೇನೆ. ಅವರ ಅರ್ಧಾಂಗಿ ಚಾರುಲತಾ ಬಹುಭಾಷಾ ವಿಶಾರದೆ, ಒಳ್ಳೆಯ ಸಂಯೋಜಕಿ ಕೂಡ. ಅವರ ಮನೆಯಲ್ಲಿ ಇನ್ನೊಬ್ಬ ಅಪರೂಪದ ವ್ಯಕ್ತಿಯೊಡನೆ ಕಾವ್ಯಶಾಸ್ತ್ರವಿನೋದದಲ್ಲಿ ಕಾಲಕಳೆಯುವುದು ನನ್ನ ಅಭ್ಯಾಸ. ಅವರೇ ಮೋಹನ್ ಅವರ ತಂದೆ, ಜ್ಞಾನವೃದ್ಧ-ವಯೋವೃದ್ಧರಾದ ಪಂ. ಕೌಲಗಿ ಶೇಷಾಚಾರ್ಯರು.

ಕೌಲಗಿ ಶೇಷಾಚಾರ್ಯರು ಶತಾಯುಷಿ. ಅವರ ಮೂಲ ಮನೆತನ ತಂಜಾವೂರಲ್ಲಿ(ಕುಂಭಕೋಣಂದಲ್ಲಿ) ನೆಲೆಸಿದ ವೇದಪಾರಂಗತರ, ಪ್ರಕಾಂಡ ಪಂಡಿತರ ಮನೆತನ. ಶೇಷಾಚಾರ್ಯರ ತಂದೆ ವಾಸುದೇವಾಚಾರ್ಯರು ಮೈಸೂರ ಒಡೆಯರ ಆಸ್ಥಾನದಲ್ಲಿ ವಿದ್ವಾಂಸರಾಗಿ ಮೆರೆದರು. ಅರಸರು ಇವರಿಗೆ ಭೂಮಿ ಹಾಗೂ ಮನೆ ಕೊಟ್ಟರು. ಈ ಮನೆತನದ ಪೂರ್ವಜರು ಕುಂಭಕೋಣಂ ಶೇಷಾಚಾರ್ಯರು. ಕಾಶಿಯಲ್ಲಿ ವ್ಯಾಕರಣ ಪಂಡಿತರಾಗಿದ್ದರು. ಕೆಲಕಾಲ ಬರೋಡಾದಲ್ಲಿದ್ದರು. 1850ರಲ್ಲಿ ಮೈಸೂರಿಗೆ ಆಮಂತ್ರಿತರಾಗಿ ಬಂದರು. ಅವರು ಮೈಸೂರು ಅರಮನೆಯಲ್ಲಿ ಧರ್ಮಾಧಿಕಾರಿಯಾಗಿದ್ದರು.

ಅದಮ್ಯ ಜೀವನೋತ್ಸಾಹಿ : ಕೌಲಗಿ ಶೇಷಾಚಾರ್ಯರು ಮೈಸೂರಲ್ಲೇ ಜನಿಸಿದರು (6-11-1911). ಮೈಸೂರು ಮಹಾರಾಜ ಕಾಲೇಜಿನಲ್ಲಿ ಸಂಸ್ಕೃತ ಹಾಗೂ ಭಾರತೀಯ ತತ್ವಜ್ಞಾನ ಅಭ್ಯಾಸ ಮಾಡಿದರು. ಮುಂದೆ ಸ್ನಾತಕೋತ್ತರ ಪದವಿಯನ್ನೂ ಗಳಿಸಿದರು. ಕೆಲಕಾಲ ಆಂಗ್ಲಪತ್ರಿಕೆ ಹಿಂದೂದಲ್ಲಿ ನಂತರ ವಿಶ್ವ ಕರ್ನಾಟಕ ಎಂಬ ಕನ್ನಡ ಪತ್ರಿಕೆಯಲ್ಲಿ ಪ್ರತಿನಿಧಿಯಾಗಿ ಕೆಲಸ ಮಾಡಿದರು. ಮೈಸೂರು ಆಕಾಶವಾಣಿಯಲ್ಲಿಯೂ ಕೆಲಸ ಮಾಡಿದರು. ಮುಂದೆ ಮೈಸೂರಿನ ಯುವರಾಜಾ ಕಾಲೇಜಿನಲ್ಲಿ ಸಂಸ್ಕೃತ ಪ್ರಾಧ್ಯಾಪಕರಾದರು. 1950ರಿಂದ 1967ರ ವರೆಗೆ ಉಡುಪಿಯ ಶ್ರೀಮನ್ಮಧ್ವ ಸಿದ್ಧಾಂತ ಪ್ರಬೋಧಿನೀ ಸಂಸ್ಕೃತ ಮಹಾಪಾಠಶಾಲೆಯಲ್ಲಿ ಪ್ರಾಂಶುಪಾಲರಾಗಿ ಕೆಲಸ ಮಾಡಿದರು. ಇವರು ಹಲವಾರು ಗ್ರಂಥಗಳನ್ನು ರಚಿಸಿದ್ದಾರೆ. ಅದರಲ್ಲಿ ಮಹತ್ವದ್ದೆಂದರೆ ಅಲಂಕಾರಶಾಸ್ತ್ರ ಪರಿಚಯ ಎಂಬುದು. ಅಖಿಲ ಮಾಧ್ವಮಹಾ ಮಂಡಲದ ಸಂಸ್ಥಾಪನೆಯಾದಾಗ ಇವರು ಕಾರ್ಯದರ್ಶಿಗಳಾಗಿ ಕೆಲಸ ಮಾಡಿದರು. ಪೇಜಾವರ ಮಠಾಧೀಶರ ಮೊದಲ ಎರಡು ಪರ್ಯಾಯ ಕಾಲದಲ್ಲಿ ಕೌಲಗಿ ಶೇಷಾಚಾರ್ಯರು ಕಾರ್ಯದರ್ಶಿಯಾಗಿ ಕೆಲಸ ಮಾಡಿ ಶ್ರೀಗಳ ಮೆಚ್ಚುಗೆಗೆ ಪಾತ್ರರಾಗಿದ್ದರು.

1960ರಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಲನ ಮಣಿಪಾಲದಲ್ಲಿ ನಡೆದಾಗ ಆದರ ಕಾರ್ಯದರ್ಶಿಯಾಗಿ ಇವರು ದುಡಿದರು. ಅನಕೃ ಸಮ್ಮೇಲನಾಧ್ಯಕ್ಷರಾಗಿದ್ದರು. ಆಗ ಅನಕೃ, ಪಂ.ಶಿವಮೂರ್ತಿಶಾಸ್ತ್ರಿ ಮೊದಲಾದವರೊಡನೆ ಇವರ ಫೋಟೋ ಇದ್ದದ್ದು ಇವರ ಅಲ್ಬಂನಲ್ಲಿ ನೋಡಿ ನನಗೆ ಸಂತಸವಾಯಿತು. ನಾನು ಇವರನ್ನು ಕಂಡಾಗ ಇವರಿಗೆ ತೊಂಭತ್ತರ ಮೇಲೆ ವಯಸ್ಸಾಗಿತ್ತು. ಕಣ್ಣು, ಕಿವಿ, ಚುರುಕಾಗಿದ್ದವು. ನನ್ನ ಎಲ್ಲ ಪುಸ್ತಕ ಓದಿ ನಮ್ಮ ಅಭಿಪ್ರಾಯ ಹೇಳುತ್ತಿದ್ದರು. ನಾನು ಗೋಕಾಕರ ಬಗ್ಗೆ ಬರೆದ ಒಂದು ಸಾಲು ಅವರು ಗೆರೆ ಎಳೆದು ನನಗೆ ಕೇಳಿದರು. ಗೋಕಕರನ್ನು ಆಂಗ್ಲ ಹಾಗೂ ಕನ್ನಡ ಭಾಷೆಯಲ್ಲಿ ಬೆರೆವ ಸವ್ಯಸಾಚಿ ಎಂದು ಕರೆದಿದ್ದೀರಿ. ನಿಮಗೆ ಸವ್ಯಸಾಚಿ ಇದರ ಅರ್ಥ ಗೊತ್ತಿದೆಯೇ? ಎಂದು. ನಾನೆಂದೆ ಅರ್ಜುನ ಸವ್ಯಸಾಚಿ ಎಂದು ಕೇಳಿದ್ದೇವೆ. ಅವನು ಏಕಕಾಲಕ್ಕೆ ಎರಡು ಬಾಣಗಳ ಪ್ರಯೋಗಿಸುತ್ತಿದ್ದ, ಅಲ್ಲವೇ. ಆಗ ಅವರು ಅದು ಸರಿಯಲ್ಲ ಎಂದಿದ್ದರು. ಸವ್ಯಸಾಚಿ ಎಂದರೆ ಎಡಗೈ ಮತ್ತು ಬಲಗೈಯಿಂದ ಬಾಣ ಪ್ರಯೋಗ ಮಾಡುವವ ಎಂದರ್ಥ ಎಂದಿದ್ದರು. ಇಳಿ ವಯಸ್ಸಿನಲ್ಲಿಯೂ ಅವರು ಲೇಖನ ಬರೆಯುತ್ತಿದ್ದರು. ಕನ್ನಡದ ಪ್ರಸಿದ್ಧ ವಿಮರ್ಶಕರಾದ ಡಾ| ಜಿ.ಎಸ್. ಆಮೂರರೊಡನೆ ಪತ್ರವ್ಯವಹಾರ ಮಾಡಿದ್ದರು. ಕೆಲವು ಸಂಶಯಗಳಿಗೆ ಅವರಿಂದ ಪರಿಹಾರ ಪಡೆಯಲು ಯತ್ನಿಸಿದ್ದರು. ಅವರ ಪತ್ರವ್ಯವಹಾರ ಕಂಡು ನಾನು ನಿಬ್ಬೆರಗಾದೆ. ಅವರ ಜೀವನೋತ್ಸಾಹ ಅದಮ್ಯವಾಗಿತ್ತು.

ಕೌಲಗಿ ಶೇಷಾಚಾರ್ಯರು ನಿತ್ಯ ವಾಕಿಂಗ್‌ಗೆ ಹೋಗುತ್ತಿದ್ದರು. ನನಗೆ ಸಮೀಪದ ಶ್ರೀರಾಘವೇಂದ್ರಸ್ವಾಮಿಗಳ ಮಠಕ್ಕೆ ಹೋಗುವುದಿತ್ತು. ಯಾವ ಕಡೆಗಿದೆ? ಎಂದು ಕೇಳಿದರೆ, ತಾವೇ ತೋರಿಸಲು ಬಂದರು. 95-96 ವರ್ಷದ ವೃದ್ಧರಲ್ಲಿರುವ ಜೀವನೋತ್ಸಾಹ ನಮಗೆ ಅಚ್ಚರಿಯನ್ನುಂಟುಮಾಡುತ್ತಿತ್ತು. ಅವರ ನೂರ ಒಂದನೆಯ ವರ್ಷದ ಸಮಾರಂಭಕ್ಕೆ ನಾನು ಬರುವುದಾಗಿ ಮೊಹನರಿಗೆ ಹೇಳಿದ್ದೆ. ಆದರೆ ವಿಧಿಯ ಆಟ ತಿಳಿದವರಿಲ್ಲ. ಎಂಟು ತಿಂಗಳು ಮೊದಲೇ, ಯಾವುದೇ ಕಾಯಿಲೆ ಇಲ್ಲದೆ, ಶೇಷಾಚಾರ್ಯರು ಕ್ರಿಕೆಟ್ ಪಟು ರನ್‌ಔಟ್ ಆದಂತೆ ಪರಲೋಕಕ್ಕೆ ತೆರಳಿಬಿಟ್ಟರು(24-3-2011). ವಿನಾ ದೈನ್ಯೇನ ಜೀವನಂ, ಅನಾಯಾಸೇನ ಮರಣಂ ಎಂಬ ಮಾತನ್ನು ನಡೆಸಿ ತೋರಿಸಿದರು. ಮೊನ್ನೆ ಮೈಸೂರಿಗೆ ಹೋದಾಗ ನಾನು ಶೇಷಾಚಾರ್ಯರನ್ನು ಬಹಳ ಮಿಸ್ ಮಾಡಿದೆ. ನನ್ನ ಇತ್ತೀಚಿನ ಗ್ರಂಥಗಳಾದ, ಬೇಂದ್ರೆ ಸಮಗ್ರ ಕಾವ್ಯ ದರ್ಶನ, ಬೇಂದ್ರೆ ಒಳನೋಟ, ಕಂಡು ಪ್ರಸನ್ನರಾಗಿದ್ದರು. ಅವರ ಸಮಗ್ರ ಲೇಖನಗಳು ಟಿ.ವಿ.ವೆಂಕಟಾಚಲಶಾಸ್ತ್ರಿಗಳ ಸಂಪಾದಕತ್ವದಲ್ಲಿ ಒಂದು ಪುಸ್ತಕರೂಪದಲ್ಲಿ ಪ್ರಕಟವಾಗಲಿವೆ. ಅವರ ದಿವ್ಯಚೇತನಕ್ಕೆ ಚಿರಶಾಂತಿಯನ್ನು ಬಯಸುವೆ.

Advertisements

About sujankumarshetty

kadik helthi akka

Posted on ಸೆಪ್ಟೆಂಬರ್ 1, 2012, in "ಇ-ಲೋಕ" ಲೇಖನಗಳ “ಕನ್ನಡಲೋಕ”, ಡಾ।‘ಜೀವಿ’ ಕುಲಕರ್ಣಿ - ಜೀವನ ಮತ್ತು ಸಾಹಿತ್ಯ and tagged , , , , , , . Bookmark the permalink. ನಿಮ್ಮ ಟಿಪ್ಪಣಿ ಬರೆಯಿರಿ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: