ಅಮೆರಿಕಾದ ಕನ್ನಡಕಿಂಕರ ಕೃಷ್ಣ ಶಾಸ್ತ್ರಿ ಕಣ್ಮರೆ- Tribute to iowa krishna shastry bmsceaaa

1130 Tribute To Iowa Krishna Shastry Bmsceaaa

ಕನ್ನಡವೆನೆ ಕುಣಿದಾಡುವುದೆನ್ನದೆ ಶ್ಲೋಕಕ್ಕೆ ಅನ್ವರ್ಥನಾಮರೆನಿಸಿದ್ದ ಅನಿವಾಸಿ ಕನ್ನಡಿಗ, ಅಯೋವಾ ರಾಜ್ಯದ ಕನ್ನಡ ಕಿಂಕರ ಕೃಷ್ಣಶಾಸ್ತ್ರಿಗಳು ಇನ್ನಿಲ್ಲ.ನನಗೆ ತೀರ ತಡವಾಗಿ ಬಂದ ವರ್ತಮಾನದ ಪ್ರಕಾರ ಅವರು ಕಳೆದ 25ನೇ ತಾರೀಕು ಮಧ್ಯರಾತ್ರಿ 1.30 ಸುಮಾರಿಗೆ ಮಧ್ಯ ಅಮೆರಿಕಾದ ಅಯೋವಾ ರಾಜ್ಯದ ಸಿಡಾರ್ ಫಾಲ್ಸ್ ನಲ್ಲಿರುವ ಸ್ವಂತ ಮನೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಅವರ ನಿರ್ಗಮನದೊಂದಿಗೆ ಅಮೆರಿಕಾಗೆ ವಲಸೆ ಹೋಗಿಯೂ ಕನ್ನಡ ಭಾಷೆ, ಕರ್ನಾಟಕ ಸಂಸ್ಕೃತಿ, ಹಿಂದೂಧರ್ಮ, ಮನೋಧರ್ಮದ ಒಂದಕ್ಷರವನ್ನೂ ಬಿಡದೆ ಪಾಲಿಸಿಕೊಂಡು ಬರುತ್ತಿರುವವರ ಚಿನ್ನದಸರಪಳಿಯಲ್ಲಿ ಒಂದು ಕೊಂಡಿ ಕಳಚಿ ಬಿದ್ದಿದೆ.

ಬಿಎಂಎಸ್ ಕಾಲೇಜಿನ ಮೆಕಾನಿಕಲ್ ಇಂಜಿನಿಯರಿಂಗ್ ಪದವೀಧರರಾಗಿದ್ದ (1963) ಶಾಸ್ತ್ರಿಗಳು ಅಮೆರಿಕಾದಲ್ಲಿ 30 ವರ್ಷ ವಾಸವಾಗಿದ್ದರು. ಪ್ರಖ್ಯಾತ ಟ್ರ್ಯಾಕ್ಟರ್ ಉತ್ಪಾದನಾ ಕಾರ್ಖಾನೆ ಜಾನ್ ಡೀರ್ ಕಂಪನಿಯಲ್ಲಿ ಅವರು ಮೂರು ದಶಕಗಳ ಕಾಲ ಕೆಲಸ ಮಾಡಿದರು. ಚೀನಾದಲ್ಲಿ ಅಮೆರಿಕಾದ ಹೂಡಿಕೆ ಪರ್ವ ಆರಂಭವಾದಂತೆ ಜಾನ್ ಡೀರ್ ಕಂಪನಿ ಚೀನಾದಲ್ಲಿ ತನ್ನ ಟ್ರ್ಯಾಕ್ಟರ್ ಕಾರ್ಖಾನೆ ಆರಂಭಿಸಿತು. ಶಾಸ್ತ್ರಿಗಳು ಚೀನಾ ಘಟಕದ ಮುಖ್ಯಸ್ಥರಾಗಿ 10 ವರ್ಷ ಕೆಲಸ ಮಾಡಿದರು. ವೃದ್ಧತಾಯಿ ಮತ್ತು ಕುಟುಂಬದ ಆರೋಗ್ಯ ಕ್ಷೇಮಸಮಾಚಾರ ಮತ್ತು ಮೇಲ್ವಿಚಾರಣೆಗೆ ಅವರು ಹತ್ತು ವರ್ಷ ಸತತವಾಗಿ ಚೀನಾ ಮತ್ತು ಅಮೆರಿಕಾ ನಡುವೆ ಅಡುಗೆ ಮನೆ ಬಚ್ಚಲಮನೆ ಮನೆ ರೀತಿ ಓಡಾಡಿಕೊಂಡಿದ್ದರು.

ಉದ್ಯೋಗದ ನಿಮಿತ್ತ ಅಮೆರಿಕಾಗೆ ವಲಸೆಹೋದ ಹೊಸದರಲ್ಲೇ ಕೃಷ್ಣಶಾಸ್ತ್ರಿಗಳು ಬೆಂಗಳೂರಿನಿಂದ ತಮ್ಮ ಅಮ್ಮ ಹಾಗೂ ದುಡಿಯಲಾಗದ ಒಬ್ಬ ತಮ್ಮನನ್ನು ಕರೆದುಕೊಂಡು ಹೋಗಿದ್ದರು. ತಾವು ಅಮೆರಿಕಾದ ನಾಗರಿಕತ್ವ ಪಡೆದ ನಂತರ ಅವರಿಬ್ಬರಿಗೂ ಅಮೆರಿಕಾದ ಸಿಟಿಜನ್ ಶಿಪ್ ಕೊಡಿಸಿದರು. ಈಗ್ಯೆ ಮೂರು ವರ್ಷಗಳ ಹಿಂದೆ ಅವರಮ್ಮ ತೀರಿಕೊಂಡರು. ಕಡೆಕ್ಷಣದವರೆಗೂ ತಾಯಿಯನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡಿಕೊಂಡಿದ್ದರು ಶಾಸ್ತ್ರಿಗಳು. ಪತ್ನಿ ಶಾಂತಾ ಶಾಸ್ತ್ರಿ ಕೂಡಾ ಅವರ ಅತ್ತೆ ಮತ್ತು ಮೈದುನನನ್ನು ನೋಡಿಕೊಳ್ಳುವ ರೀತಿಯನ್ನು ನಾನು ಅವರ ಸಿಡಾರ್ ಫಾಲ್ಸ್ ಮನೆಯಲ್ಲಿ ಕಣ್ಣಾರೆ ಕಂಡಿದ್ದೆ.

ಸಮಯಪಾಲನೆ,ದೈವಶ್ರದ್ಧೆ,ನೇಮ ನಿಷ್ಠೆಗಳನ್ನು ಚಾಚೂತಪ್ಪದೆ ಪಾಲಿಸುತ್ತಿದ್ದರು ಶಾಸ್ತ್ರಿಗಳು. ಅಗಲಿದ ಪತಿಯ ಧರ್ಮೋದಕ ಮುಂತಾದ ಕಾರ್ಯಗಳನ್ನು ಮಾಡುವುದಕ್ಕೆ ಶಾಂತಾ ಮತ್ತು ಬೆಳೆದ ಮಕ್ಕಳು ಮಾಲಾ ಮತ್ತು ಪ್ರಿಯಾ ತಮ್ಮ ಎನ್ ಆರ್ ಕಾಲೋನಿಯ 3ನೇ ಮುಖ್ಯರಸ್ತೆ #287ಮನೆಗೆ ಇನ್ನೇನು ಬಂದಿಳಿಯುತ್ತಿದ್ದಾರೆ.

1963ರಲ್ಲಿ ಪದವೀಧರನಾದ ಕೃಷ್ಣಶಾಸ್ತ್ರಿಯನ್ನು ಬಿಎಂಎಸ್ ಕಾಲೇಜು ಬೀಳ್ಕೊಟ್ಟಿತ್ತು. ಆದರೆ ಶಾಸ್ತ್ರಿಗಳು ಕಾಲೇಜನ್ನು ಸಾಯುವವರೆಗೂ ಬೀಳ್ಕೊಡಲಿಲ್ಲ. ಕಾಲೇಜಿನ ಹಳೆ ವಿದ್ಯಾರ್ಥಿಗಳ ಸಂಘ ಅಮೆರಿಕಾ ಘಟಕದ ಕಾರ್ಯದರ್ಶಿಯಾಗಿ ಅವರು ಸತತವಾಗಿ ದುಡಿದರು. ಬಿಎಂಎಸ್ ಕಾಲೇಜಿನಲ್ಲಿ ವಿದ್ಯಾಭಾಸ ಮಾಡುವ ಪ್ರತಿಭಾವಂತ, ಬಡ ಯುವಕ ಯುವತಿಯರಿಗೆ ಅವರಷ್ಟು ಸಹಾಯ ಮಾಡಿದವರು ಬೇರೊಬ್ಬರಿಲ್ಲ ಎಂದು ನಾನು ಬಲ್ಲೆ. ನ್ಯಾಷನಲ್ ಕಾಲೇಜಿನಲ್ಲಿ ಪಾಠಮಾಡುತ್ತಿದ್ದ ಅವರ ಮಾವ,ಎಂ ಎಸ್ ಸೂರ್ಯನಾರಾಯಣ ಶಾಸ್ತ್ರಿ ( MSS, notes!) ಹೆಸರಲ್ಲಿ ಒಂದು ಸ್ಕಾಲರ್ ಶಿಪ್ ಮತ್ತು ಮತ್ತು ತಾವು ವಿದ್ಯಾರ್ಜನೆ ಮಾಡುವಾಗ ನೆರವಾದ ಸ್ನೇಹಿತ, ದಿವಂಗತ ಗೋವಿಂದರಾಜ್ ಹೆಸರಲ್ಲಿ ನಾಲಕ್ಕು ವಿದ್ಯಾರ್ಥಿವೇತನ ಸ್ಥಾಪಿಸಿದ್ದರು.

ಕಂದನಿಗೆ ಅನ್ನಪ್ರಾಶನ, ಅಕ್ಷಾರಾಭ್ಯಾಸ ಪ್ರಾರಂಭ, ಗಣೇಶನ ಪೂಜೆ, ಸತ್ಯನಾರಾಯಣ ವ್ರತ, ಮುಂತಾದ ದೇವರ ಪೂಜೆ,ಕೈಂಕರ್ಯಗಳನ್ನು ವಿಧಿವತ್ತಾಗಿ ನೆರವೇರಿಸುವುದನ್ನು ಕರಗತ ಮಾಡಿಕೊಂಡಿದ್ದರು ಶಾಸ್ತ್ರಿಗಳು. ಬಿಡುವಿದ್ದಾಗ ಅಯೋವಾದಲ್ಲಿನ ಭಾರತೀಯ ಕುಟುಂಬಗಳ ಮನೆಯಲ್ಲಿ ಪೂಜೆ ಮಾಡಿಸಿ ದಕ್ಷಿಣೆ ಇಸ್ಕೊಂಡು ಬಿಎಂಎಸ್ ಅಲ್ಯುಮಿನಿ ಖಾತೆಗೆ ತುಂಬುತ್ತಿದ್ದರು. ಇದರ ಮಧ್ಯೆ ಅವರು ಅವಿಭಜಿತ ಅಕ್ಕ ಸಂಸ್ಥೆಗೂ ಮಣ್ಣು ಹೊತ್ತಿದ್ದುಂಟು. 2002ನೆ ಇಸವಿ ಡೆಟ್ರಾಯಿಟ್ ಅಕ್ಕ ಸಮ್ಮೇಳನಕ್ಕೆ ನಿಸಾರ್ ಅಹಮದ್ ಅವರನ್ನು ಅತಿಥಿಯಾಗಿ ಪ್ರಾಯೋಜಿಸಿದ್ದಲ್ಲದೆ ಕವಿವರೇಣ್ಯರು ಉತ್ತರ ಅಮೆರಿಕಾದ 42 ನಗರಗಳಲ್ಲಿ ಕನ್ನಡ ಡಿಂಡಿಮ ಮೊಳಗಿಸುವುದಕ್ಕೆ ಶಾಸ್ತ್ರಿಗಳು ಸದ್ದು ಮಾಡದೆ ಸೂತ್ರಧಾರಿಯಾಗಿದ್ದರು.

ಶಾಸ್ತ್ರಿಗಳಿಗೆ ಕನ್ನಡದಲ್ಲಿ ಬರೆಯಲು ಚೆನ್ನಾಗಿ ಬರುತ್ತಿತ್ತು. “ನಾನು ಬರೆಯುವುದು ಅಷ್ಟರಲ್ಲೇ ಇದೆ, ಬರೆಯುವ ಉತ್ಸಾಹಿಗಳನ್ನು ಬೆಂಬಲಿಸೋಣ ” ಎನ್ನುತ್ತಲೇ ಸತ್ತುಹೋದರು. ಕನ್ನಡ ಪುಸ್ತಕಗಳನ್ನು ಓದುವುದು, ಕನ್ನಡದ ಓದು ಬರವಣಿಗೆ ಮತ್ತು ಕನ್ನಡ ಸಂಘಟನೆ ಮಾಡುವವರಿಗೆ ತೆರೆಮರೆಯಿಂದ ಪ್ರೋತ್ಸಾಹ ಕೊಡುತ್ತಿದ್ದರು. ಕೇವಲ ಕನ್ನಡ ಸಾಹಿತ್ಯದ ಚಿಂತನ ಮಂಥನಕ್ಕಾಗಿಯೇ ಮೀಸಲಾದ ಅಮೆರಿಕಾದ ಕನ್ನಡ ಸಾಹಿತ್ಯ ರಂಗದ ಸ್ಥಾಪಕ ಸದಸ್ಯರ ಪಟ್ಟಿಯಲ್ಲಿ ಅವರ ಹೆಸರಿದೆ. 2004 ರ ಫಿಲಡಲ್ಫಿಯ ಸಾಹಿತ್ಯೋತ್ಸವದಲ್ಲಿ ಅವರು ಪಾಲ್ಗೊಂಡಿದ್ದರೆಂದು ನನ್ನ ನೆನಪು.

ಕನ್ನಡಿಗರಿಗೆ, ಮುಖ್ಯವಾಗಿ ಪ್ರತಿಭಾವಂತರಿಗೆ, ಬಲುಮುಖ್ಯವಾಗಿ ಅರ್ಹರಿಗೆ ಕೈಲಾದ ಸಹಾಯ ಮಾಡುತ್ತಲೇ ಇರಬೇಕು ಎನ್ನುವುದು ಅವರ ಬಾಳಿನ ಗಾಯಿತ್ರೀ ಮಂತ್ರವಾಗಿತ್ತು. ಆದರೆ ಕಂಡೀಷನ್ಸ್ ಅಪ್ಲೈ. ತಮ್ಮ ಹೆಸರು ಎಲ್ಲೂ ಪ್ರಸ್ತಾಪ ಆಗಕೂಡದು, ಯಾರೂ ತಮ್ಮ ಗುಣಗಾನ ಮಾಡಬಾರದು. ಈ ಆಸೆ ಅವರ ವ್ಯಕ್ತಿತ್ವದಲ್ಲಿ ಗಟ್ಟಿಯಾಗಿ ಬೇರೂರಿತ್ತು. ದಟ್ಸ್ ಕನ್ನಡ ಓದುಗರಿಗೆ ಅವರನ್ನು ಪರಿಚಯಿಸಲು ಒಂದು ಲೇಖನ ಬರೆಯಬೇಕು ಎಂದು ನಾನು ಅನೇಕ ಬಾರಿ ಪ್ರಯತ್ನಿಸಿದ್ದುಂಟು. ಆದರೆ ಅವರು ಸುತರಾಂ ಒಪ್ಪಿಗೆ ಕೊಡಲಿಲ್ಲ. ಇವತ್ತು ಅವರ ಬಗ್ಗೆ ನಾಕಾರು ವಾಕ್ಯಗಳನ್ನು ಧೈರ್ಯವಾಗಿ ಬರೆಯುತ್ತಿದ್ದೇನೆ. ನನ್ನನ್ನು ತಡೆಯುವುದಕ್ಕೆ ಅವರಿಂದ ಸಾಧ್ಯವಿಲ್ಲ.

ಇಂದು ಸಂಜೆಯೇ ಬಿಎಂಎಸ್ ಕಾಲೇಜಿನ ಹಳೆ ವಿದ್ಯಾರ್ಥಿಗಳ ಸಂಘದ ಆಡಳಿತ ಮಂಡಳಿ ಸಭೆ ವ್ಯವಸ್ಥೆಯಾಗಿರುವುದು ಕಾಕತಾಳೀಯ. ಕೃಷ್ಣ ಶಾಸ್ತ್ರಿಗಳನ್ನು ಅಗಲಿದ ನೋವಿನ ಭಾರದಿಂದಲೇ ಸಭೆ ಆರಂಭವಾಗುವುದು ನಿಶ್ಚಿತ. ಇದೇ ಭಾನುವಾರ ಡಿಸೆಂಬರ್ 5ನೆ ತಾರಿಖು ಬುಲ್ ಟೆಂಪಲ್ ರಸ್ತೆ ಬಿಎಂಎಸ್ ಕಾಲೇಜು ಸಭಾಂಗಣದಲ್ಲಿ ಸಂಜೆ 5 ಗಂಟೆಗೆ ಬಿಎಂಎಸ್ ಅಲ್ಯುಮಿನಿ ಡೇ ಮತ್ತು ಸ್ಕಾಲರ್ ಶಿಪ್ ವಿತರಣಾ ಸಮಾರಂಭ ಏರ್ಪಾಟಾಗಿದೆ. ಶಾಸ್ತ್ರಿಗಳು ಬರುವುದಿಲ್ಲ, ನೀವು ಇರುತ್ತೀರಿ.

Advertisements

About sujankumarshetty

kadik helthi akka

Posted on ಸೆಪ್ಟೆಂಬರ್ 1, 2012, in "ಇ-ಲೋಕ" ಲೇಖನಗಳ “ಕನ್ನಡಲೋಕ”, ಎಸ್ಕೆ ಶಾಮಸುಂದರ and tagged , , , , , , , , , , , , , , . Bookmark the permalink. ನಿಮ್ಮ ಟಿಪ್ಪಣಿ ಬರೆಯಿರಿ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: