ನಾನು ನಾನು ನಾನು ನಾನು ನಾನು ನಾನು- Kannada people who suffer from i trouble

ಪ್ರತಿಯೊಬ್ಬರಿಗೂ ಒಂದಲ್ಲ ಒಂದು ಕಾಯಿಲೆ ಇದ್ದೇ ಇರುತ್ತದೆ. ಸದ್ಯಕ್ಕೆ ಇಲ್ಲದಿದ್ದರೆ ಆಮೇಲೆ ಯಾವಾಗಲಾದರೂ ಬಂದೇ ಬರುತ್ತದೆ. ಮಾನವನಾಗಿ ಜನ್ಮವೆತ್ತಿದರೆ ಕಾಯಿಲೆಯಿಂದ ತಪ್ಪಿಸಿಕೊಳ್ಳುವುದಕ್ಕೆ ಆ ಬ್ರಹ್ಮನಿಂದಲೂ ಸಾಧ್ಯವಾಗುವುದಿಲ್ಲ. ಏನಿಲ್ಲವೆಂದರೂ ಕನಿಷ್ಠ ಶೀತ ಕೆಮ್ಮು ನೆಗಡಿಗೆ ತುತ್ತಾಗದ ಮನುಷ್ಯ ಪ್ರಾಣಿ ಭೂಮಿ ಮೇಲೆ ಕಾಣಸಿಗುವುದಿಲ್ಲ.

ಕಾಯಿಲೆಗಳಿಲ್ಲದ ಮನುಷ್ಯ ಬಹುಶಃ ದೇವರೇ ಇರಬೇಕು ಎನ್ನುವುದು ನನ್ನ ಅನುಮಾನ ಮತ್ತು ಅಸಮಾಧಾನ. ದೇವಾಧಿದೇವತೆಗಳಿಗೂ ಕಾಯಿಲೆ ಕಸಾಲೆ ಬರುತ್ತಿದ್ದವೇ? ಅವರೂ ಕ್ರೋಸಿನ್ ಗುಳಿಗೆ ನುಂಗಿ ಬೆನಡ್ರಿಲ್ ಸಿರಪ್ಪು ಕುಡಿಯುತ್ತಿದ್ದರೇ? ಅಮೃತಪ್ರಾಶನ ಮಾಡಿದವರ ಬಳಿ ಕಾಯಿಲೆಗಳು ಸುಳಿಯುವುದೇ ಇಲ್ಲವೇ? ವೇದ ಉಪನಿಷತ್ತು ಪುರಾಣ ಪುಣ್ಯ ಕಥೆಗಳನ್ನು ಓದಿಕೊಂಡವರೇ ಈ ಪ್ರಶ್ನೆಗಳಿಗೆ ಉತ್ತರ ಹೇಳಬೇಕು. ಬಹುಶಃ ಬನ್ನಂಜೆ ಗೋವಿಂದಾಚಾರ್ಯರೋ ಅಥವಾ ಪ್ರಭಂಜನಾಚಾರ್ಯರೋ ಅಥವಾ ಸುಬ್ಬರಾಯಶರ್ಮರೋ ಇದಕ್ಕೆ ಉತ್ತರಿಸಬೇಕು.

ಸೂರ್ಯ ನಮಸ್ಕಾರ ಮಾಡುವುದು, ನಿತ್ಯ ಸೈಕಲ್ ಹೊಡೆಯುವುದು, ಜಿಮ್ಮಿಗೆ ಹೋಗುವುದು, ಇವ್ಯಾವೂ ಆಗದಿದ್ದರೆ ಮಿನಿಮಮ್ ವಾಕಿಂಗ್ ಮಾಡಿ ಒಳ್ಳೆ ಆರೋಗ್ಯ ಕಾಪಾಡಿಕೊಂಡು ಬರುವಂಥವರನ್ನು ಕೂಡ ಕನಿಷ್ಠ ದಂತಕ್ಷಯವಾದರೂ ಕಾಡೇಕಾಡುತ್ತದೆ. ಕೀಲು ನೋವು, ತಲೆನೋವು, ಹೊಟ್ಟೆನೋವು, ಸೊಂಟ ನೋವು ಮುಂತಾದ ಚಿಲ್ಲರೆಪಲ್ಲರೆ ಕಾಯಿಲೆಗಳನ್ನು ಬಿಡಿ. ಇಡೀ ಮನುಷ್ಯ ಪ್ರಬೇಧವನ್ನೇ ಹೊಸಕಿಹಾಕುವಂಥ ಭಯಾನಕ ಕಾಯಿಲೆಗಳು ನಾಗರೀಕತೆಯ ಪ್ರಯಾಣದಲ್ಲಿ ಬಂದು ಹೋಗಿವೆ.

ವೈದ್ಯಕೀಯ ಕ್ಷೇತ್ರಗಳಲ್ಲಿ ಅವ್ಯಾಹತವಾಗಿ ನಡೆಯುವ ಸಂಶೋಧನೆಗಳ ಫಲದಿಂದಾಗಿ ಪ್ಲೇಗು, ಮಲೇರಿಯಾ ಮುಂತಾದ ಸಮುದಾಯ ಕಾಯಿಲೆಗಳು ಅದೃಷ್ಟವಶಾತ್ ಕಡಿಮೆ ಆಗಿವೆ. ಸದ್ಯ ಮಾನವನು ಎಚ್ಐವಿ, ಎಚ್ 1ಎನ್ 1, ಕ್ಯಾನ್ಸರ್, ಸ್ತನಪರ್ವತ ಮುಂತಾದ ರೋಗರುಜಿನಗಳಿಗೆ ಔಷಧಿ ಕಂಡುಹಿಡಿಯುತ್ತಿದ್ದಾನೆ.

ವೈದ್ಯಕೀಯ ತಜ್ಞರು ಭಯಂಕರವಾದ ಯಾವುದೇ ಕಾಯಿಲೆಗೆ ಔಷಧಿ ಕಂಡುಹಿಡಿಯಬಹುದು. ಆದರೆ ಒಂದು ಕಾಯಿಲೆಗೆ ಮಾತ್ರ ಔಷಧಿಯೇ ಇಲ್ಲ ಎನ್ನುವುದು ನನ್ನ ಪ್ರಬಲ ನಂಬಿಕೆಯಾಗಿದೆ. ಈ ಕಾಯಿಲೆಯ ಹೆಸರು ನಾನು ನಾನು ನಾನು ನಾನು. ನಮ್ಮಲ್ಲಿ ಅನೇಕರು ಈ ಕಾಯಿಲೆಯಿಂದ ಬಳಲುತ್ತಿದ್ದಾರೆ. ನಾವೂ ನೀವು ಏನು ಮಾಡುವುದಕ್ಕೆ ಆಗುತ್ತದೆ? ನಿಮಗಂತೂ ಈ ಕಾಯಿಲೆ ಬಂದಿಲ್ಲ ಮತ್ತು ಬರುವುದೂ ಇಲ್ಲ ಎಂಬ ಆತ್ಮವಿಶ್ವಾಸವನ್ನು ನಾನು ಇಟ್ಟುಕೊಂಡಿದ್ದೇನೆ. ಇದೇ ವೇಳೆ ‘ನಾನು’ ಕಾಯಿಲೆಯಿಂದ ಬಳಲುತ್ತಿರುವ ಒಬ್ಬ ಕನ್ನಡಿಗನ ಬಗ್ಗೆ ನಿಮಗೆ ಹೇಳುವುದು ಬಾಕಿಯಿದೆ.

ಈ ವ್ಯಕ್ತಿ ಸಾಮಾನ್ಯವಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಮುಖ ತೋರಿಸುತ್ತಾನೆ. ಏನೋ ಒಂದು ದಾಕ್ಷಿಣ್ಯಕ್ಕಾಗಿ ಆಮಂತ್ರಣ ಪತ್ರಿಕೆ ಕಳಿಸಿದರೆ ಜುಬ್ಬ ಹಾಕಿಕೊಂಡು ತಪ್ಪದೆ ಬಂದುಬಿಡುತ್ತಾನೆ. ಸುಮ್ಮನೆ ಬಂದು ಹೋಗಬಾರದೇ? ಇಲ್ಲ. ದೇವರಾಣೆ ಅವನಿಂದ ಸಾಧ್ಯವಾಗುವುದಿಲ್ಲ. ಕಾರ್ಯಕ್ರಮ ವ್ಯವಸ್ಥೆಯಲ್ಲಿ ತನ್ನ ಮೂಗು ತೂರಿಸದೇ ಇರುವುದಿಲ್ಲ. ಅಷ್ಟೇ ಅಲ್ಲ. ಕಾರ್ಯಕ್ರಮ ಮುಗಿದ ನಂತರ ತಾನು ಆ ಕಾರ್ಯಕ್ರಮಕ್ಕೆ ಹೋಗಿದುದ್ದಾಗಿಯೂ, ಎಲ್ಲಾ ಅರೇಂಜುಮೆಂಟುಗಳನ್ನು ತಾನೇ ಮಾಡಿದುದಾಗಿಯೂ ಮತ್ತು ಅದರಿಂದಲೇ ಕಾರ್ಯಕ್ರಮ ಸಾಂಗವಾಗಿ ನಡೆಯಿತೆಂದೂ ಡಂಗುರ ಸಾರುತ್ತಾನೆ.

ಮೊದಮೊದಲು ಜನ ಅವನ ‘ನಾನು’ ನ್ಯಾನೋ ಕತೆಗಳನ್ನು ನಂಬುತ್ತಿದ್ದರು. ಆದರೆ ಇವತ್ತು ಪರಿಸ್ಥಿತಿ ಏನಾಗಿದೆಯೆಂದರೆ ಸ್ವತಃ ಅವರ ಖಾಸಾ ಖಾಸಾ ಬಳಗವೇ ಅವನನ್ನು ನಂಬುವುದಿಲ್ಲ. ಈ ಕಡೆ ಇದ್ದ ಕುರ್ಚಿಯನ್ನು ಆ ಕಡೆ ಎಳೆದಿಟ್ಟು ಅದರ ಮೇಲೆ ತಾನೇ ಕುಕ್ಕರಿಸಿಕೊಳ್ಳುವುದು ಬಿಟ್ಟರೆ ಬೇರಾವ ಕೆಲಸಗಳನ್ನು ಅವನು ಮಾಡಲಾರನು. ಆದರೂ ನಾನು ಮಾಡಿದೆ, ನನ್ನಿಂದಲೇ ಆಯಿತು, ನಾನು ಇದ್ದೆ, ನಾನು ನೋಡಿದೆ, ನಾನು ತಂದೆ, ನಾನು ಕಂಡೆ, ನಾನು ನಾನು ನಾನು ನಾನು. ಸ್ವಾಗತಕ್ಕೂ ನಾನು, ವಂದನಾರ್ಪಣೆಗೂ ನಾನು.

‘ನಾನು’ ಕಾಯಿಲೆ ಈಗ ಕೈಮೀರಿ ಹೋಗಿರುವುದರಿಂದ ಜನರು ಅವನನ್ನು ತುಂಬ ಕರುಣೆ ತುಂಬಿದ ಕಣ್ಣುಗಳಿಂದ ನೋಡುತ್ತಾರೆ. ಹಳೆಯ ಸ್ನೇಹಿತನಲ್ಲವೇ ಪಾಪ! ಎಂಬ ಗೌರವದಿಂದ ಖಾಸಗಿಯದ್ದಾಗಲೀ ಅಥವಾ ಸಂಘ ಸಂಸ್ಥೆಗಳ ಕಾರ್ಯಕ್ರಮಗಳೇ ಆಗಿರಲಿ ಅವನಿಗೊಂದು ಆಮಂತ್ರಣ ಪತ್ರಿಕೆಯನ್ನು ಮರೆಯದೆ ಎಸೆಯುತ್ತಾರೆ, ನಾಮಕರಣ ಕಾರ್ಯಕ್ರಮವೊಂದನ್ನು ಬಿಟ್ಟು.

Advertisements

About sujankumarshetty

kadik helthi akka

Posted on ಸೆಪ್ಟೆಂಬರ್ 1, 2012, in "ಇ-ಲೋಕ" ಲೇಖನಗಳ “ಕನ್ನಡಲೋಕ”, ಶಾಮ್ and tagged , , , , , , , , , , , , , , , . Bookmark the permalink. ನಿಮ್ಮ ಟಿಪ್ಪಣಿ ಬರೆಯಿರಿ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: