Category Archives: ಟಿ.ಪಿ.ಕೈಲಾಸಂ

ಸೀನಿ ಸನ್ಯಾಸಿಯಾದುದು – ಜಿ. ಪಿ. ರಾಜರತ್ನಂ ಅವರ ಕತೆ

ಆಕಾಶವು ಇದ್ದಕ್ಕಿದ್ದಂತೆ ಬರಸಿಡಿಲನ್ನು ಕಕ್ಕಿತು ! ಸೀನಿ ಸನ್ಯಾಸಿಯಾದ ! ಸುಖ ಸಂತೋಷಗಳ ಸಾಗರದಲ್ಲಿ ಹುಟ್ಟಿ ಬೆಳೆದ ಸೀನಿ ಸನ್ಯಾಸಿಯಾದ! ಲೋಕ ಬೆರಗಾಯ್ತು !

ಫೆಬ್ರುವರಿ ೪ ನೇ ತಾರೀಖು ಬೆಳಗ್ಗೆ ಹತ್ತು ಘಂಟೆಗೆ ಸೀನಿ ಅಸ್ವಸ್ಥನಾದ ತನ್ನ ಮಿತ್ರನನ್ನು ಆಸ್ಪತ್ರೆಗೆ ಕರೆದುಕೊಂದು ಹೋದ .
” ಡಾಕ್ಟರ್, ಇವರನ್ನು ಇನ್ ಪೇಷಂಟಾಗಿ ಸೇರಿಸಿಕೊಳ್ಳಬೇಕು . ”
” ಯಾರು , ಇವರು ನಮ್ಮ ನಾರಾಯಣಪ್ಪ ಅಲ್ಲವೆ!”
“ಹೌದು , ಅವರೇ … ಬಂದೆ , ಗಾಡಿ ಬಾಡಿಗೆ ಕೊಟ್ಟು ಬಂದೆ ” ಎಂದು ಸೀನಿ ಹೊರಗೆ ಹೋದ.
ಸೀನಿ ಐದು ನಿಮಿಷ ಕಳೆದು ಬಂದು , ತನ್ನ ಸ್ನೇಹಿತ ಅಲ್ಲಿಲ್ಲದಿರುವದನ್ನು ಕಂದು ” ಡಾಕ್ಟರ್, ನಾರಾಯಣಪ್ಪ ಎಲ್ಲಿ ? ” ಎಂದ. ಡಾಕ್ಟರ್ ” ವಾರ್ಡ್ ಬಾಯ್ ಇವರನ್ನು ಪೇಷಂಟ್ ಅರವತ್ಮೂರರ ಹತ್ರ ಕರೆದುಕೊಂದು ಹೋಗು . ” ಎಂದರು .
ಪೇಷಂಟ್ ಅರವತ್ಮೂರು!! ಬದುಕಿನ ಬಣ್ಣ ಬಿಟ್ಟಿತು!!
ಸೀನಿ ಹಿಂದೆ ನಾರಾಯಣಪ್ಪನಾಗಿದ್ದ ಪೇಷಂಟ್ ಅರವತ್ಮೂರರ ಬಳಿಗೆ ಹೋದ .
‘ಪೇಷಂಟ್ ಅರವತ್ಮೂರು “ಸೀನಿ, ಒಂದು ಕಿತ್ತಿಲೆ ಹಣ್ಣು ತಂದು ಕೊಡೋ ” ಎಂದಿತು. ಸೀನಿ ಕಿತ್ತಿಲೆ ಹಣ್ಣು ತರಲು ಹೊರತ .
ಒಂದು ಹತ್ತು ನಿಮಿಷದಲ್ಲಿ ಕಿತ್ತಿಲೆ ಹಣ್ಣು ತಂದ . ‘ಪೇಷಂಟ್’ ಅರವತ್ಮೂರು ಇದ್ದಕಡೆ ಇರಲಿಲ್ಲ .
“ಡಾಕ್ಟರ್ ! ನಾರಾ – ಅಲ್ಲ ‘ಪೇಷಂಟ್ ಅರವತ್ಮೂರು’ ಎಲ್ಲಿ ? ”
“ವಾರ್ಡ್ ಬಾಯ್ ! ಆ ‘ಬಾಡಿ’ ಕೊಟ್ಟುಬಿಡು ಇವರಿಗೆ !”
ಆ ‘ಬಾಡಿ!!’
ಬಾಳಿನ ಹುರುಳಿಲ್ಲದ ಅಗಾಧವು ಸೀನಿಯ ಕಣ್ಣಿಗೆ ಎದುರಾಯಿತು .
ಸೀನಿ ಸನ್ಯಾಸಿಯಾದ!.
– ಜಿ. ಪಿ. ರಾಜರತ್ನಂ ಅವರ ಕಥೆ

Advertisements

ಕಾಶೀಗ್ ಹೋದ ನಂಬಾವ

ಭಾವಗೀತೆ

ಸಾಹಿತ್ಯ : ಟಿ.ಪಿ.ಕೈಲಾಸಂ
ವರ್ಷ: ೧೯೩೦
ಸಂಕಲನ: ಕೈಲಾಸಂ ಗೀತೆಗಳು

ಕಾಶೀಗ್ ಹೋದ ನಂ ಬಾವ
ಕಬ್ಣದ್ ದೋಣೀಲಿ
ರಾಶೀ ರಾಶೀ ಗಂಗೆ ತರೋಕ್
ಸೊಳ್ಳೇ ಪರದೇಲಿ

ತಂಗಿ ಯಮುನಾದೇವಿಯ
ಸಂಗವಾಯ್ತೆಂದುಬ್ಬಿ ಉಬ್ಬಿ
ಗಂಗಾದೇವಿ ಉಕ್ಕಿ ಉಕ್ಕಿ
ಬೀಸಿ ಬೀಸಿ ದೋಣಿ ಕುಕ್ಕಿ

ಬಾವ ಅತ್ತು ಬಿಕ್ಕಿ ಬಿಕ್ಕಿ

ಕಾಶೀಗ್ ಹೋದ ನಂ ಬಾವ
ಕಬ್ಣದ್ ದೋಣೀಲಿ
ರಾಶೀ ರಾಶೀ ಗಂಗೆ ತರೋಕ್
ಸೊಳ್ಳೇ ಪರದೇಲಿ

ಬಂಡೆ ತಾಕಿ ದೋಣಿ ಒಡ್ದು
ಸೋಳ್ಳೆಪರದೆ ಬವನ್ ಬಡ್ದು
ಮಂಡೆ ದವಡೆ ಪಟ್ಟಾಗೊಡ್ದು
ಕಾಶೂ ಆಸೆ ನಾಶವಾಗಿ
ಮೀಸೇ ಉಳಿದದ್ ಎಷ್ಟೋ ವಾಸೀಂತ
ಕಾಶೀಂದ್ ಬಂದ ನಂ ಬಾವ

ಕಾಶೀಗ್ ಹೋದ ನಂ ಬಾವ
ಕಬ್ಣದ್ ದೋಣೀಲಿ
ರಾಶೀ ರಾಶೀ ಗಂಗೆ ತರೋಕ್
ಸೊಳ್ಳೇ ಪರದೇಲಿ

ಗುಟ್ಟು

ಗುಟ್ಟು
ನಾ ಕುಡದಾಡೋ ಪದಗೊಳ್ನೆಲ್ಲ
ಬೀದೀಯೋರ ಜನಗೋಳು
ಈಟೊಂದು ಒಗಳಾಕ್ ಏನ್ ಕಾರಣಾಂದ್ರೆ-
ಯೋಳ್ತೀನ್ ಚೊಂದಾಗ್ ಕ್ಯೋಳು .೧

ಯಿದ್ದೇಗೆಲ್ಲ ದೇವ್ರಾಗೌಳೆ-
ಔಳ್ ಆ ಸರಸೋತಮ್ಮ;
ಯೀಣೆ ಯಿಡದಿ ಔಳ್ ಆಡಿದ್ರೆ
ನಾ ಕುಡದ್ ಆಡ್ತೀನಮ್ಮ !೨

ಸರಸೋತಮ್ಮನ್ ಎಡದೋಳ್ ನೋಡು !
ನನ್ ಎಡಗೈನೂ ನೋಡು !
ಔಳ್ತಾವ್ ಇದ್ರೆ ಯೀಣೆ ಬುಂಡೆ –
ನನಗೈತ್ ಯೆಂಡದ ಬುಂಡೆ !೩

ಬುಂಡೆ ಮಾತ್ವ ನೋಡಿದೇನಣ್ಣ!
ಎಂಗೈತ್ ಅದರದ್ ತಳಕು !
ಅದಕೆ ಅಮ್ಮನ್ ಯೀಣೇ ಅಂಗೇ
ನನ್ದು ಮಾತಿನ್ ಪಲಕು!೪