Category Archives: ಗಂಗಾವತರಣ

ಗಮ ಗಮ ಗಮಾಡ್ಸ್ತವ ಮಲ್ಲಿಗಿ (ಶ್ರಾವಣ, ಘಮ ಘಮ)

ರಚನೆ: ಅಂಬಿಕಾತನಯದತ್ತ
ಮೂಲ ಕವನ ಸಂಕಲನ: ಗಂಗಾವತರಣ

ಆಲ್ಬಂ: ಶ್ರಾವಣ
ಸಂಗೀತ: ಸಿ.ಅಶ್ವಥ್
ಗಾಯನ: ಸಂಗೀತ ಕಟ್ಟಿ

ಆಲ್ಬಂ: ಘಮ ಘಮ (೨೦೦೪)
ಸಂಗೀತ: ವಿಶ್ವೇಶ್ ಭಟ್
ಗಾಯನ: ವಿಶ್ವೇಶ್ ಮತ್ತು ಅಶ್ವಿನಿ

ಗಮ ಗಮ ಗಮಾಡ್‍ಸ್ತಾವ ಮಲ್ಲಿಗಿ

ಗಮ ಗಮ ಗಮಾಡ್‍ಸ್ತಾವ ಮಲ್ಲಿಗಿ|
ನೀ ಹೊರಟಿದ್ದೀಗ ಎಲ್ಲಿಗಿ? ||ಪಲ್ಲವಿ||

ತುಳುಕ್ಯಡತಾವ ತೂಕಡಿಕಿ
ಎವಿ ಅಪ್ಪತಾವ ಕಣ್ಣ ದುಡುಕಿ
ಕನಸು ತೇಲಿ ಬರುತಾವ ಹುಡುಕಿ||
ನೀ ಹೊರಟಿದ್ದೀಗ ಎಲ್ಲಿಗಿ?

ಚಿಕ್ಕಿ ತೋರಿಸ್ತಾವ ಚಾಚಿ ಬೆರಳ
ಚಂದ್ರಮ ಕನ್ನಡೀ ಹರಳ
ಮನಸೋತು ಆಯಿತು ಮರುಳ||
ನೀ ಹೊರಟಿದ್ದೀಗ ಎಲ್ಲಿಗಿ?

ಗಾಳಿ ತಬ್ಬತಾವ ಹೂಗಂಪ
ಚಂದ್ರನ ತೆಕ್ಕಿಗಿದೆ ತಂಪ
ನಿನ ಕಂಡರ ಕವದಾವ ಜೊಂಪ||
ನೀ ಹೊರಟಿದ್ದೀಗ ಎಲ್ಲಿಗಿ?

ನೆರಳಲ್ಲಡತಾವ ಮರದ ಬುಡಕ
ಕೆರಿ ತೆರಿ ನೂಗತಾವ ದಡಕ
ಹೀಂಗ ಬಿಟ್ಟು ಇಲ್ಲಿ ನನ್ನ ನಡಕ||
ನೀ ಹೊರಟಿದ್ದೀಗ ಎಲ್ಲಿಗಿ?

ನನ್ನ ನಿನ್ನ ಒಂದತನದಾಗ
ಹಾಡು ಹುಟ್ಟಿ ಒಂದು ಮನದಾಗ
ಬೆಳದಿಂಗಳಾತು ಬನದಾಗ||
ನೀ ಹೊರಟಿದ್ದೀಗ ಎಲ್ಲಿಗಿ?

ನಾವು ಬಂದೆವಲ್ಲಿದಿಲ್ಲಿಗಿ
ಬಾಯಿಬಿಟ್ಟವಲ್ಲ ಮಲ್ಲಿಗಿ
ನೀರೊಡೆದಿತಲ್ಲ ಕಲ್ಲಿಗಿ||
ನೀ ಹೊರಟಿದ್ದೀಗ ಎಲ್ಲಿಗಿ?

ಬಂತ್ಯಾಕ ನಿನಗ ಇಂದ ಮುನಿಸು
ಬೀಳಲಿಲ್ಲ ನನಗ ಇದರ ಕನಸು
ರಾಯ ತಿಳಿಯಲಿಲ್ಲ ನಿನ್ನ ಮನಸು||
ನೀ ಹೊರಟಿದ್ದೀಗ ಎಲ್ಲಿಗಿ?

-ಅಂಬಿಕಾತನಯದತ್ತ

Advertisements

ಇಳಿದು ಬಾ ತಾಯಿ ಇಳಿದು ಬಾ

ಇಳಿದು ಬಾ ತಾಯಿ ಇಳಿದು ಬಾ

ಹರನ ಜಡೆಯಿಂದ ಹರಿಯ ಅಡಿಯಿಂದ ಋಶಿಯ ತೊಡೆಯಿಂದ ನುಸುಳಿ ಬಾ
ದೇವದೇವರನು ತಣಿಸಿ ಬಾ | ದಿಗ್ದಿಗಂತದಲಿ ಹನಿಸಿ ಬಾ | ಚರಾಚರಗಳಿಗೆ ಉಣಿಸಿ ಬಾ
ಇಳಿದು ಬಾ ತಾಯಿ ಇಳಿದು ಬಾ

ನಿನಗೆ ಪೊಡಮಡುವೆ ನಿನ್ನನುಡುಕೊಡುವೆ ಏಕೆ ಎಡೆತಡೆವೆ ಸುರಿದು ಬಾ
ಸ್ವರ್ಗ ತೊರೆದು ಬಾ | ಬಯಲ ಜರೆದು ಬಾ | ನೆಲದಿ ಹರಿದು ಬಾ

ಬಾರೆ ಬಾ ತಾಯಿ ಇಳಿದು ಬಾ | ಇಳಿದು ಬಾ ತಾಯಿ ಇಳಿದು ಬಾ
ನನ್ನ ತಲೆಯೊಳಗೆ ನನ್ನ ಬೆಂಬಳಿಗೆ ನನ್ನ ಒಳಕೆಳಗೆ ನುಗ್ಗಿ ಬಾ
ಕಣ್ಣ ಕಣ್ತೊಳಿಸಿ ಉಸಿರ ಎಳೆ ಎಳಸಿ ನುಡಿಯ ಸೊಸಿ ಮೊಳೆಸಿ ಹಿಗ್ಗಿ ಬಾ
ಎದೆಯ ನೆಲೆಯಲ್ಲಿ ನಿಲಿಸಿ ಬಾ | ಜೀವ ಜಲದಲ್ಲಿ ಚಲಿಸಿ ಬಾ | ಮೂಲ ಹೊಲದಲ್ಲಿ ನೆಲೆಸಿ ಬಾ
ಕಮ್ಚು ಮಿಂಚಾಗಿ ತೆರಳಿ ಬಾ | ನೀರು ನೀರಾಗಿ ಉರುಳಿ ಬಾ | ಮಾತೆ ಹೊಡಮರಳಿ ಬಾ
ಇಳಿದು ಬಾ ತಾಯಿ ಇಳಿದು ಬಾ

ದಯೆಯಿರದ ದೀನ ಹರೆಯಳಿದ ಹೀನ ನೀರಿರದ ಮೀನ ಕರೆಕರೆವ ಬಾ
ಕರು ಕಂಡ ಕರುಳೆ ಮನ ಉಂಡ ಮರುಳೆ ಉದ್ದಂಡ ಅರುಳೆ ಸುಳಿ ಸುಳಿದು ಬಾ
ಶಿವ ಶುಭ್ರ ಕರುಣೆ ಅತಿ ಕಿಂಚದರುಣೆ ವಾತ್ಸಲ್ಯ ವರಣೆ ಇಳಿ ಇಳಿದು ಬಾ
ಇಳಿದು ಬಾ ತಾಯಿ ಇಳಿದು ಬಾ

ಕೊಳೆಯ ತೊಳೆವವರು ಇಲ್ಲ ಬಾ | ಬೇರೆ ಶಕ್ತಿಗಳು ಹೊಲ್ಲ ಬಾ | ಹೇಗೆ ಮಾಡಿದರು ಅಲ್ಲ ಬಾ
ನಾಡಿ ನಾಡಿಯನು ತುತ್ತ ಬಾ | ನಮ್ಮ ನಾಡನ್ನೆ ಸುತ್ತ ಬಾ | ಸತ್ತ ಜನರನ್ನು ಎತ್ತ ಬಾ
ಇಳಿದು ಬಾ ತಾಯಿ ಇಳಿದು ಬಾ

ಸುರ ಸ್ವಪ್ನವಿದ್ದ ಪ್ರತಿಬಿಂಬ ಬಿದ್ದ ಉದ್ಬುಧ ಶುದ್ದ ನೀರೆ
ಎಚ್ಚೆತ್ತು ಎದ್ದ ಆಕಾಶದುದ್ದ ದರೆಗಿಳಿಯಲಿದ್ದ ದೀರೆ
ಸಿರಿವಾರಿಜಾತ ವರಪಾರಿಜಾತ ತಾರಾ ಕುಸುಮದಿಂದೆ
ವೃಂದಾರ ವಂದ್ಯೆ ಮಂದಾರ ಗಂಧೆ ನೀನೇ ತಾಯಿ ತಂದೆ
ರಸಪೂರಜನ್ಯೆ ನೀನಲ್ಲ ಅನ್ಯೆ ಸಚ್ಚಿದಾನಂದ ಕನ್ಯೆ

ಬಂದಾರೆ ಬಾರೆ ಒಂದಾರೆ ಸಾರೆ ಕಂಡಾರೆ ತಡೆವರೇನೆ
ಅವತಾರವೆಂದೆ ಎಂದಾರೆ ತಾಯೆ ಈ ಅಧಹ್ಪಾತವನ್ನೆ
ಹರಕೆ ಸಂದಂತೆ ಮಮತೆ ಮಿಂದಂತೆ ತುಂಬಿ ಬಂದಂತೆ

ದಮ್ ದಮ್ ಎಂದಂತೆ ದುಡುಕಿ ಬಾ | ನಿನ್ನ ಕಂದನ್ನ ಹುಡುಕಿ ಬಾ | ಹುಡುಕಿ ಬಾ ತಾಯೆ ದುಡುಕಿ ಬಾ
ಹರನ ಹೊಸತಾಗಿ ಹೊಳೆದು ಬಾ | ಬಾಳು ಬೆಳಕಾಗಿ ಬೆಳೆದು ಬಾ | ಕೈ ತೊಳೆದು ಬಾ ಮೈ ತೊಳೆದು ಬಾ

ಇಳಿದು ಬಾ ತಾಯಿ ಇಳಿದು ಬಾ | ಇಳೆಗಿಳಿದು ಬಾ ತಾಯಿ ಇಳಿದು ಬಾ
ಶಂಭು ಶಿವಹರನ ಚಿತ್ತೆ ಬಾ | ದತ್ತ ನರಹರಿಯ ಮುತ್ತೆ ಬಾ | ಅಂಬಿಕಾತನಯನತ್ತೆ ಬಾ
ಇಳಿದು ಬಾ ತಾಯಿ ಇಳಿದು ಬಾ

ಗಮಗಮಾ ಗಮಾಡಿಸತಾವ ಮಲ್ಲಿಗಿ

ಮಗಮಾ ಗಮಾಡಿಸತಾವ ಮಲ್ಲಿಗಿ| ನೀವು ಹೊರಟಿದ್ದೀಗ ಎಲ್ಲಿಗೆ?
ಗಮಗಮಾ……….. || ಪಲ್ಲವಿ||

ತುಳುಕ್ಯಾಡತಾವ ತೂಕಡಿಕಿ
ಎವಿ ಅಪ್ಪತಾವ ಕಣ್ಣ ದುಡುಕಿ
ಕನಸು ತೇಲಿ ಬರತಾವ ಹುಡುಕಿ||
ನೀವು ಹೊರಟಿದ್ದೀಗ ಎಲ್ಲೆಗೆ?

ಚಿಕ್ಕಿ ತೋರಸ್ತಾನ ಚಾಚಿ ಬೆರಳ
ಚಂದ್ರಾಮ ಕನ್ನಡಿ ಹರಳ
ಮನಸೋತು ಆಯಿತು ಮರುಳ||
ನೀವು ಹೊರಟಿದ್ದೀಗ ಎಲ್ಲೆಗೆ?

ಗಾಳಿತಬ್ಬತಾವ ಹೂಗಂಪು
ಚಂದ್ರನ ತೆಕ್ಕಿಗಿದೆ ತಂಪು
ನಿಮ ಕಂಡರ ಕವದಾವ ಜೊಂಪು||
ನೀವು ಹೊರಟಿದ್ದೀಗ ಎಲ್ಲಿಗೆ?

ನೆರಳಲ್ಲಾಡತಾವ ಮರದ ಬುಡಕs
ಕೆರಿ ತೆರಿ ನೂಗತಾವ ದಡsಕ
ಹೀಂಗೆ ಬಿಟ್ಟು ಇಲ್ಲಿ ನನ್ನ ನಡsಕ||
ನೀವು ಹೊರಟಿದ್ದೀಗ ಎಲ್ಲಿಗೆ?

ನಮ್ಮ ನಿಮ್ಮ ಒಂದತನದಾಗ
ಹಾಡು ಹುಟ್ಟಿ ಒಂದು ಮನದಾಗ
ಬೆಳದಿಂಗಳಾತು ಬನದಾಗ|| ನೀವು ಹೊರಟಿದ್ದೀಗ ಎಲ್ಲಿಗೆ?

ನಾವು ಬಂದೆವದಿಲ್ಲಿದಿಲ್ಲಿಗೆ
ಬಾಯಿ ಬಿಟ್ಟವಲ್ಲ ಮಲ್ಲಿಗೆ
ನೀರೊಡೆಡಿತಲ್ಲ ಕಲ್ಲಿಗೆ
ನೀವು ಹೊರಟಿದ್ದೀಗ ಎಲ್ಲಿಗೆ?||

ಬಂತ್ಯಾಕ ನಿಮಗೆ ಇಂದ ಮುನಿಸು
ಬೀಳಲಿಲ್ಲ ನಮಗೆ ಇದರ ಕನಸು
ರಾಯ ತಿಳಿಯಲಿಲ್ಲ ನಿಮ್ಮ ಮನಸು
ನೀವು ಹೊರಟಿದ್ದೀಗ ಎಲ್ಲಿಗೆ?||

ಬಾರೊ ಸಾಧನಕೇರಿಗೆ

ಬಾರೊ ಸಾಧನಕೇರಿಗೆ
ಮರಳಿ ನಿನ್ನೀ ಊರಿಗೆ ||ಪಲ್ಲವಿ ||

ಮಳೆಯು ಎಳೆಯುವ ತೇರಿಗೆ
ಹಸಿರು ಏರಿದೆ ಏರಿಗೆ
ಹಸಿರು ಸೇರಿದೆ ಊರಿಗೆ
ಹಸಿರು ಚಾಚಿದೆ ದಾರಿಗೆ
ನಂದನದ ತುಣುಕೊಂದು ಬಿದ್ದಿದೆ
ನೋಟ ಸೇರದು ಯಾರಿಗೆ? || ಬಾರೊ…….

ಮಲೆಯ ಮೊಗವೇ ಹೊರಳಿದೆ
ಕೋಕಿಲಕೆ ಸವಿ ಕೊರಳಿದೆ
ಬೇಲಿಗೂ ಹೂ ಬೆರಳಿದೆ
ನೆಲಕೆ ಹರೆಯವು ಮರಳಿದೆ
ಭೂಮಿತಾಯ್ ಒಡಮುರಿದು ಎದ್ದಳೊ
ಶ್ರಾವಣದ ಸಿರಿ ಬರಲಿದೆ || ಬಾರೊ……..

ಮೋಡಗಳ ನೆರಳಾಟವು
ಅಡವಿ ಹೂಗಳ ಕೂಟವು
ಕೋಟಿ ಜೆನ್ನೊಣಕೂಟವು
ಯಕ್ಷಿ ಮಾಡಿದ ಮಾಟವು
ನೋಡು ಬಾ ಗುಂಪಾಗಿ ಪಾತರ-
ಗಿತ್ತಿ ಕುಣಿಯುವ ತೋಟವು || ಬಾರೊ…….

ಮರವು ಮುಗಿಲಿಗೆ ನೀಡಿದೆ.
ಗಿಡದ ಹೊದರೊಳು ಹಾಡಿದೆ
ಗಾಳಿ ಎಲ್ಲೂ ಆಡಿದೆ
ದುಗುಡ ಇಲ್ಲಿಂದೋಡಿದೆ
ಹೇಳು ಗೆಳೆಯಾ ಬೇರೆ ಎಲ್ಲೀ
ತರದ ನೋಟವ ನೋಡಿದೆ? || ಬಾರೊ…..

ಹಕ್ಕಿ ಹಾರುತಿದೆ ನೋಡಿದಿರಾ?

ಇರುಳಿರುಳಳಿದು ದಿನ ದಿನ ಬೆಳಗೆ
ಸುತ್ತುಮುತ್ತಲೂ ಮೇಲಕೆ ಕೆಳಗೆ
ಗಾವುದ ಗಾವುದ ಗಾವುದ ಮುಂದೆ
ಎವೆತೆರೆದಿಕ್ಕುವ ಹೊತ್ತಿನ ಒಳಗೆ
ಹಕ್ಕಿ ಹಾರುತಿದೆ ನೋಡಿದಿರಾ?

ಕರಿನರೆ ಬಣ್ಣದ ಪುಚ್ಚಗಳುಂಟು
ಬಿಳಿ-ಹೊಳೆ ಬಣ್ಣದ ಗರಿ -ಗರಿಯುಂಟು
ಕೆನ್ನನ ಹೊನ್ನನ ಬಣ್ಣ-ಬಣ್ಣಗಳ
ರೆಕ್ಕೆಗಳೆರಡೂ ಪಕ್ಕದೊಲುಂಟು
ಹಕ್ಕಿ ಹಾರುತಿದೆ ನೋಡಿದಿರಾ?

ನೀಲಮೇಘಮಂಡಲ-ಸಮ ಬಣ್ಣ
ಮುಗಿಲಿಗೆ ರೆಕ್ಕೆಗಳೊಡೆದವೊ ಅಣ್ಣಾ
ಚಿಕ್ಕಿಯ ಮಾಲೆಯ ಸೆಕ್ಕಿಸಿಕೊಂಡು
ಸೂರ್ಯ-ಚಂದ್ರರನು ಮಾಡಿದೆ ಕಣ್ಣಾ
ಹಕ್ಕಿ ಹಾರುತಿದೆ ನೋಡಿದಿರಾ?

ರಾಜ್ಯದ ಸಾಮ್ರಾಜ್ಯದ ತೆನೆ ಒಕ್ಕಿ
ಮಂಡಲ-ಗಿಂಡಲಗಳ ಗಡ ಮುಕ್ಕಿ
ತೇಲಿಸಿ ಮುಳುಗಿಸಿ ಖಂಡ-ಖಂಡಗಳ
ಸಾರ್ವಭೌಮರಾ ನೆತ್ತಿಯ ಕುಕ್ಕಿ
ಹಕ್ಕಿ ಹಾರುತಿದೆ ನೋಡಿದಿರಾ?

ಯುಗ-ಯುಗಗಳ ಹಣೆ ಬರಹವ ಒರಸಿ
ಮನ್ವಂತರಗಳ ಭಾಗ್ಯವ ತರೆಸಿ
ರೆಕ್ಕೆಯ ಬೀಸುತ ಚೇತನಗೊಳಿಸಿ
ಹೊಸಗಾಲದ ಹಸುಮಕ್ಕಳ ಹರಸಿ
ಹಕ್ಕಿ ಹಾರುತಿದೆ ನೋಡಿದಿರಾ?

ಬೆಳ್ಳಿಯ ಹಳ್ಳಿಯ ಮೇರೆಯ ಮೀರಿ
ತಿಂಗಳೂರಿನ ನೀರನು ಹೀರಿ
ಆಡಲು ಹಾಡಲು ತಾ ಹಾರಾಡಲು
ಮಂಗಳಲೋಕದ ಅಂಗಳಕೇರಿ
ಹಕ್ಕಿ ಹಾರುತಿದೆ ನೋಡಿದಿರಾ?

ಮುಟ್ಟಿದೆ ದಿಗ್ಮಂಡಲ ಅಂಚ
ಆಚಿಗೆ ಚಾಚಿದೆ ತನ್ನಯ ಕುಂಚ
ಬ್ರಹ್ಮಾಂಡಲಗಳ ಒಡೆಯಲು ಎಂದೊ
ಬಲ್ಲರು ಯಾರಾ ಹಾಕಿದ ಹೊಂಚ!
ಹಕ್ಕಿ ಹಾರುತಿದೆ ನೋಡಿದಿರಾ?