Category Archives: ಗರಿ

ಬೆಳಗು

ಮೂಡಲ ಮನೆಯಾ ಮುತ್ತಿನ ನೀರಿನ
ಎರಕsವ ಹೊಯ್ದಾ
ನುಣ್ಣ್-ನ್ನೆರಕsವ ಹೊಯ್ದಾ
ಬಾಗಿಲ ತೆರೆದೂ ಬೆಳಕು ಹರಿದೂ
ಜಗವೆಲ್ಲಾ ತೊಯ್ದಾ
ಹೋಯ್ತೋ-ಜಗವೆಲ್ಲಾತೊಯ್ದಾ

ರತ್ನದರಸದಾ ಕಾರಂಜೀಯೂ
ಪುಟಪುಟನೇ ಪುಟಿದು
ತಾನೇ-ಪುಟಪುಟನೇ ಪುಟಿದು
ಮಘಮಘಿಸುವಾ ಮುಗಿದ ಮೊಗ್ಗೀ
ಪಟಪಟನೇ ಒಡೆದು
ತಾನೇ-ಪಟಪಟನೇ ಒಡೆದು

ಎಲೆಗಳ ಮೇಲೇ ಹೂಗಳ ಒಳಗೇ
ಅಮೃತsದ ಬಿಂದು
ಕಂದವು-ಅಮೃತsದ ಬಿಂದು
ಯಾರಿರಿಸಿದವರು ಮುಗಿಲsಮೇಲಿಂ-
ದಿಲ್ಲಿಗೇ ತಂದು
ಈಗ -ಇಲ್ಲಿಗೇ ತಂದು

ತಂಗಾಳೀಯ ಕೈಯೊಳಗಿರಿಸೀ
ಎಸಳೀನಾ ಚವರೀ
ಹೂವಿನ-ಎಸಳೀನಾ ಚವರಿ
ಹಾರಿಸಿ ಬಿಟ್ಟರು ತುಂಬಿಯ ದಂಡು
ಮೈಯೆಲ್ಲಾ ಸವರಿ
ಗಂಧಾ-ಮೈಯೆಲ್ಲಾ ಸವರಿ

ಗಿಡಗಂಟೆಯಾ ಕೊರಳೊಳಗಿಂದ
ಹಕ್ಕಿಗಲಾ ಹಾಡು
ಹೊರಟಿತು-ಹಕ್ಕಿಗಳಾ ಹಾಡು
ಗಂಧರ್ವರಾ ಸೀಮೆಯಾಯಿತು
ಕಾಡಿನಾ ನಾಡು
ಕ್ಷಣದೊಳು-ಕಾಡಿನಾ ನಾಡು.

ಕಂಡಿತು ಕಣ್ಣು ಸವಿದಿತು ನಾಲಗೆ
ಪಡೆದೀತೀ ದೇಹ
ಸ್ಪರ್ಶಾ-ಪಡೆದೀತೀ ದೇಹ
ಕೇಳಿತು ಕಿವಿಯು ಮೂಸಿತು ಮೂಗು
ತನ್ಮಯವೀ ಗೇಹಾ
ದೇವರ-ದೀ ಮನಸಿನ ಗೇಹಾ

ಅರಿಯದು ಅಳವು ತಿಳಿಯದು ಮನವು
ಕಾಣsದೋ ಬಣ್ಣ
ಕಣ್ಣಿದೆ-ಕಾಣsದೋ ಬಣ್ಣ
ಶಾಂತಿರಸವೇ ಪ್ರೀತಿಯಿಂದಾ
ಮೈದೋರಿತಣ್ಣ
ಇದು ಬರಿ-ಬೆಳಗಲ್ಲೋ ಅಣ್ಣಾ

Advertisements

ರಾಗರತಿ

ಮುಗಿಲ ಮಾರಿಗೆs ರಾಗರತಿಯ ನಂಜ ಏರಿತ್ತs
-ಆಗ- ಸಂಜೆಯಾಗಿತ್ತ;
ನೆಲದ ಅಂಚಿಗೆ ಮಂಜಿನ ಮುಸುಕು ಹ್ಯಾಂಗೋ ಬಿದ್ದಿತ್ತs
ಹಾಳಿಗೆ ಮೇಲಕೆದ್ದಿತ್ತs

ಬಿದಿಗಿ ಚಂದ್ರನಾ ಚೊಗಚೀ-ನಗಿ-ಹೂ ಮೆಲ್ಲಗೆ ಮೂಡಿತ್ತs
ಮ್ಯಾಲಕ ಬೆಳ್ಳಿನ ಕೂಡಿತ್ತ;
ಇರುಳ ಹೆರಳಿನಾ ಅರಳು ಮಲ್ಲಿಗೀ ಜಾಳಿಗೆ ಹಾಂಗೆತ್ತ
ಸೂಸ್ಯಾವ ಚಿಕ್ಕಿ ಅತ್ತಿತ್ತ.

ಬೊಗಸಿ ಕಣ್ಣಿನಾ ಬಯಸೆಯ ಹೆಣ್ಣು ನೀರಿಗೆ ಹೋಗಿತ್ತs
ತಿರುಗಿ ಮನೀಗೆ ಸಾಗಿತ್ತ;
ಕಾಮಿ ಬೆಕಿನ್ಹಾಂಗ ಭಾಂವಿ ಹಾದಿ ಕಾಲಾಗ ಸುಳಿತಿತ್ತs
ಎರಗಿ ಹಿಂದಕ್ಕುಳಿತಿತ್ತ.

ಮಳ್ಳುಗಾಳಿ-ಸುಳಿ ಕಳ್ಳ ಕೈಲೆ ಸೆರಗನು ಹಿಡಿದಿತ್ತs
ಮತಮತ ಬೆಡಗಿಲೆ ಬಿಡತಿತ್ತ;
ಒಂದ ಮನದ ಗಿಣಿ ಹಿಂದ ನೆಳ್ಳಿಗೆ ಬೆನ್ನಿಲೆ ಬರತಿತ್ತs
ತನ್ನ ಮೈಮರ ಮರತಿತ್ತ.

ಯುಗಾದಿ

ಯುಗಯುಗಾದಿ ಕಳೆದರೂ
ಯುಗಾದಿ ಮರಳಿ ಬರುತಿದೆ
ಹೊಸ ವರುಷಕೆ ಹೊಸ ಹರುಷವ
ಹೊಸತು ಹೊಸತು ತರುತಿದೆ

ಹೊಂಗೆಹೂವ ತೊಂಗಲಲ್ಲಿ
ಭೃಂಗದ ಸಂಗೀತಕೇಲಿ
ಮತ್ತೆ ಕೇಳಿ ಬರುತಿದೆ.
ಬೇವಿನ ಕಹಿ ಬಾಳಿನಲ್ಲಿ
ಹೂವಿನ ನಸುಗಂಪು ಸೂಸು
ಜೀವ ಕಳೆಯ ತರುತಿದೆ.

ಕಮ್ಮನೆ ಬಾಣಕ್ಕೆ ಸೋತು
ಜುಮ್ಮನೆ ಮಾಮರವು ಹೂತು
ಕಾಮಗಾಗಿ ಕಾದಿದೆ.
ಸುಗ್ಗಿ ಸುಗ್ಗಿ ಸುಗ್ಗಿ ಎಂದು
ಹಿಗ್ಗಿ ಗಿಳಿಯ ಸಾಲು ಸಾಲು
ತೋರಣದೊಳು ಕೋದಿದೆ.

ವರುಷಕೊಂದು ಹೊಸತು ಜನ್ಮ
ಹರುಷಕೊಂದು ಹೊಸತು ನೆಲೆಯು
ಅಖಿಲ ಜೀವ ಜಾತಕೆ!
ಒಂದೆ ಒಂದು ಜನ್ಮದಲ್ಲಿ
ಒಂದೆ ಬಾಲ್ಯ ಒಂದೆ ಹರೆಯ
ನಮಗದಷ್ಟೆ ಏತಕೆ?

ನಿದ್ದೆಗೊಮ್ಮೆ ನಿತ್ಯ ಮರಣ
ಎದ್ದ ಸಲ ನವೀನ ಜನನ
ನಮಗೆ ಏಕೆ ಬಾರದೋ?
ಎಲೆ ಸನತ್ಕುಮಾರದೇವ!
ಸಲೆ ಸಾಹಸಿ ಚಿರಂಜೀವ!
ನಿನಗೆ ಲೀಲೆ ಸೇರದೋ?

ಯುಗಯುಗಾದಿ ಕಳೆದರೂ
ಯುಗಾದಿ ಮರಳಿ ಬರುತಿದೆ
ಹೊಸ ವರುಷಕೆ ಹೊಸ ಹರುಷವ
ಹೊಸತು ಹೊಸತು ತರುತಿದೆ
ನಮ್ಮನಷ್ಟೆ ಮರೆತಿದೆ!

ಕನಸಿನೊಳಗೊಂದು ಕಣಸು

ಕನಸಿನೊಳಗೊಂದು ಕಣಸು
(ತಾಯಿ-ಮಕ್ಕಳ ಸಂವಾದ)
(ಗರಿ – ಕವನ ಸಂಗ್ರಹ)

“ಯಾರು ನಿಂದವರಲ್ಲಿ ತಾಯಿ” ಎಂದೆ
“”ಯಾರು ಕೇಳುವರೆನಗೆ, ಯಾಕೆ ತಂದೆ?”

“ಬೇಸರದ ದನಿಯೇಕೆ ಹೆಸರ ಹೇಳಲ್ಲ”
“ಹೆಸರಾಗಿಯೂ ಕೂಡ ಹೇಳ ಹೆಸರಿಲ್ಲ”

“ನೀನಾರ ಮನೆಯಳೊ ಮುತ್ತೈದೆ ಹೇಳು”
“ನಾನಾರ ಮನೆಯವಳೊ ಬಯಲನ್ನೆ ಕೇಳು”

ಆಪ್ತರಿಲ್ಲವೆ ನಿನಗೆ ಇಷ್ಟರಲ್ಲೇ?”
ಗುಪ್ತರಾದರೊ ಏನೊ ಇಷ್ಟರಲ್ಲೇ”

“ಇರುವರೇ ಇದ್ದರೇ ಮಕ್ಕಳೆಂಬವರು?”
“ಇರುವರೆಂದರು ಕೂಡ ಯಾರು ನಂಬುವರು?”

“ಮನೆಯಿಲ್ಲವೇ ಇರಲು ಪರದೇಶಿಯೇನು?”
“ಮನೆಯೆ ಮುನಿದೆದ್ದಿರಲು ಯಾ ದೇಶವೇನು?”

“ನಿನ್ನ ಮಾತಿನಲಿಹುದು ಒಡಪಿನಂದ”
“ನನ್ನ ಹತ್ತಿರದೊಂದೆ ಉಳಿದಿಹುದು ಕಂದ”

“ರಾಜಮುಖಿ ನಿನ್ನಲ್ಲಿ ರಾಜಕಳೆಯಿಹುದು!”
“ಸಾಜವಾದರು ಪಕ್ಷವಿದಿ ವ್ದ್ಯವಹುದು!”

“ಯಾವುದಾದರು ನಾಡದೇವಿಯೇ ನೀನು?”
“ಭಾವುಕರ ಕಂಗಳಿಗೆ ದೇವಿಯೇ ನಾನು”

“ಈಗ ಬಂದಿಹುದೇಕೆ ಏನು ಬೆಸನ?”
“ಯೋಗವಿಲ್ಲದೆ ತಿಳಿಯದೆನ್ನ ವ್ಯಸನ”

“ಹಾದಿ ಯಾವುದು ಹೇಳು, ಯಾವ ಯೋಗ?”
“ಆದಿ ಅಂತವು ಇಲ್ಲದಂಥ ತ್ಯಾಗ”

“ಬೇಡ ಬಂದಿಹೆಯೇನು ಏನಾದರೊಂದು?”
“ಬೇಡಿದರೆ ಬೇಡಿದುದ ಕೊಡುವೆಯಾ ಇಂದು?”

“ಅಹುದು ಕೊಡುವೆನು ಎಂದು ನಾನೆನ್ನಬಹುದೇ?”
ಬಹುದು-ಗಿಹುದಿನ ಶಂಕಿ ವೀರನಹುದೇ?”

“ಹಿಂಜರಿವ ಅಂಜಿಕೆಯು ಹಿಡಿದಿಹುದು ಕೈಯ”
“ಮುಂಜರಿವ ಹುರುಪಿನೊಡ ಮುಂದೆ ಬಾರಯ್ಯ!”

“ಇಲ್ಲೆನ್ನಲಾರೆ ನಾನಹುದೆನ್ನಲಮ್ಮೆ”
ಬಲ್ಲವರು ದೈವವನು ಪರಿಕಿಸುವರೊಮ್ಮೆ!”

“ಚಂಡಿ ಚಾಮುಂಡಿ ಕೇಳ್ ಬೇಕಾದುದೇನು?”
“ಗಂಡುಸಾದರೆ ನಿನ್ನ ಬಲಿ ಕೊಡೂವೆಯೇನು?”

ಮನವು ನಡುಗಿತು ತನುವು ನವಿರಿಗೊಳಗಾಯ್ತು
ನೆನವು ನುಗ್ಗಿತು — ಹೊರಗೆ ಕಂಡೆ — ಬೆಳಗಾಯ್ತು