Category Archives: ನಾಕುತಂತಿ

ಆವು ಈವಿನ ನಾವು ನೀವಿಗೆ

ಆವು ಈವಿನ ನಾವು ನೀವಿಗೆ
ಆನು ತಾನಾದ ತನನನ
ನಾವು ನೀನಿನ ಈನೀನಾನಿಗೆ
ಬೇನೆ ಏನೋ? ಜಾಣೆ ನಾ
ಚಾರು ತಂತ್ರಿಯ ಚರಣ ಚರಣದ
ಘನಘನಿತ ಚತುರಸ್ವನಾ
ಹತವೊ ಹಿತವೊ ಆ ಅನಾಹತಾ
ಮಿತಿ ಮಿತಿಗೆ ಇತಿ ನನನನಾ
ಬೆನ್ನಿನಾನಿಕೆ ಜನನ ಜಾನಿಕೆ
ಮನನವೇ ಸಹಿತಸ್ತನಾ.

ಗೋವಿನ ಕೊಡುಗೆಯ ಹಡಗದ ಹುಡುಗಿ
ಬೆಡಗಿಲೆ ಬಂದಳು ನಡುನಡುಗಿ;
ಸಲಿಗೆಯ ಸುಲಿಗೆಯು ಬಯಕೆಯ ಒಲುಮೆ
ಬಯಲಿನ ನೆಯ್ಗೆಯ ಸಿರಿಯುಡುಗಿ;
ನಾಡಿಯ ನಡಿಗೆಯ ನಲುವಿನ ನಾಲಿಗೆ
ನೆನೆದಿರೆ ಸೋಲುವ ಸೊಲ್ಲಿನಲಿ;
ಮುಟ್ಟದ ಮಾಟದ ಹುಟ್ಟದ ಹುಟ್ಟಿಗೆ
ಜೇನಿನ ಥಳಿಮಳಿ ಸನಿಹ ಹನಿ;
ಬೆಚ್ಚಿದ ವೆಚ್ಚವು ಬಸುರಿನ ಮೊಳಕೆ
ಬಚ್ಚಿದ್ದಾವುದೊ ನಾ ತಿಳಿಯೆ
ಭೂತದ ಭಾವ ಉದ್ಬವ ಜಾವ
ಮೊಲೆ ಊಡಿಸುವಳು ಪ್ರತಿಭೆ ನವ.

ಚಿತ್ತೀಮಳಿ, ತತ್ತಿ ಹಾಕತ್ತಿತ್ತು ಸ್ವಾತಿಮುತ್ತೀನೊಳಗ
ಸತ್ತಿಯೋ ಮಗನ ಅಂತ ಕೂಗಿದರು
ಸಾವೀ ಮಗಳು, ಭಾವಿ ಮಗಳು ಕೂಡಿ
ಈ ಜಗ ಅಪ್ಪಾ ಅಮ್ಮನ ಮಗ
ಅಮ್ಮನೊಳಗ ಅಪ್ಪನ ಮೊಗ
ಅಪ್ಪನ ಕತ್ತಿಗೆ ಅಮ್ಮನ ನೊಗ
ನಾ ಅವರ ಕಂದ ಶ್ರೀ ಗುರುದತ್ತ ಅಂದ

‘ನಾನು’ ‘ನೀನು’ ‘ಆನು’ ‘ತಾನು’
ನಾಕು ನಾಕೇ ತಂತಿ.
ಸೊಲ್ಲಿಸಿದರು ನಿಲ್ಲಿಸಿದರು
ಓಂ ದಂತಿ!
ಗಣನಾಯಕ ಮೈ ಮಾಯಕ
ಸೈ ಸಾಯಕ ಮಾಡಿ
ಗುರಿಯ ತುಂಬಿ ಕುರಿಯ ಕಣ್ಣು
ಧಾತು ಮಾತು ಕೂಡಿ.

Advertisements

ಅಂತರಂಗದ ಮೃದಂಗ

ಭಾವಗೀತೆ

ಸಂಗೀತ, ಗಾಯನ: ಮೈಸೂರು ಅನಂತಸ್ವಾಮಿ

ಅಂತರಂಗದ ಮೃದಂಗ ಅಂತು ತೋಮ್-ತನಾನ
ಚಿತ್ತ ತಾಳ ಬಾರಿಸುತಲಿತ್ತು ಝಣ್-ಝಣಣಣಾಣ
ನೆನಹು ತಂತಿ ಮೀಟುತಿತ್ತು ತಮ್-ತನನತಾನ

ಹಲವು ಜನುಮದಿಂದ ಬಂದ ಯಾವುದೋನೋ ಧ್ಯಾನ
ಏಕ ನಾದದಂದನೊಂದು ತಾನದ ವಿತಾನ
ತನಗೆ ತಾನೇ ಸೋಲುತಿಹುದು ನೂಲುತಿಹುದು ಗಾನ

ಕಲ್ಪದಾದಿಯಲ್ಲೇ ನನ್ನ ನಿನ್ನ ವಿರಹವಾಗಿ
ಎಲ್ಲೋ ಏನೋ ನಿನ್ನ ಹುಡುಕಿ ಕಾಂಬ ಕಣ್ಣೇ ಹೋಗಿ
ಮರೆವೆಗೊಂಡು ಬಿದ್ದೆ ನಾನು ನೆಲದ ಮಣ್ಣು ತಾಗಿ

ಕತ್ತಲಲ್ಲೇ ಬೆಳಕು ಮಿಂಚಿ ಪಡೆದಿತೇಳು ಬಣ್ಣ
ಮೂಕ ಮೌನ ತೂಕ ಮೀರಿ ದನಿಯು ಹುಟ್ಟಿತಣ್ಣ
ಕಣ್ಣ ಮಣ್ಣ ಕೂಡಲಲ್ಲಿ ಹಾಡು ಕಟ್ಟಿತಣ್ಣ

ಊಹೆ

ಊಹೆ ….ಕವನ ಸಂಕಲನ – ನಾಕು ತಂತಿ.
—————————————
ಕಣ್ಣು ಹಾಹೆಯ ಛಿದ್ರದಾಚೆ ಬೆಳಕಿನ ಗವಿಯು!
ಬೆಳ್ಳಿ ಪರದೆಯ ಮೇಲೆ ರೂಪದ ವಿರಾಟ್ ಭೂಮ!
ನೆನಹು, ಕನಸಿನ ಕಣಿವೆಯಲ್ಲಿಯ ಜನಸ್ತೋಮ?
ತೇಜಸ್ಸಿನುದರದಲಿ: ಇದ ಕಂಡನಾ ಕವಿಯು.

ಹಾಲಿಲ್ಲ, ಬಟ್ಟಲಿಲ್ಲದ ಗುಟುಕೆ ಸವಿಸವಿಯು
ನಿರ್ವಿಷಯ ಸೃಷ್ಟಿಯಲಿ ಭೋಗ ಆತ್ಮಕ್ರ್‍ಈಡೆ
ವಾಸನಾ ಸಂಜನಿತ ಸಂಸ್ಕಾರ ಅವಲೀಡೆ
ಭಾಗೀರಥೀಯು ಆಗಿ ಇಳಿದಂಥ ಜಾಹ್ನವಿಯು.

ಇದು ವಿಚಾರದ ಹಳ್ಳವನ್ನು ಒಳಹೊಕ್ಕಿಲ್ಲ;
ಅಂತರಿಕ್ಷದ ಪಕ್ಷಿ ಈಕ್ಷಿಸುತ್ತಿದೆ ಕ್ಷಿತಿಜ
ಬರಿಯ ನೆರಳಾಟ ಮುರುಳಾಟ ಗಾಳಿಗೆ ಸಹಜ;
ಭಾವಭಾವದ ಜಾಲ ಬಲೆಯಲ್ಲಿ ಸಿಕ್ಕಿಲ್ಲ.

ಜೀವನದ ರಂಗದಲೆ ಭರತನಾಟಯುಗವು
ಓಹೋ! ಆಹ! ಊಹೆ! ನವ್ಯ ಈಹಾ ಮೃಗವು.

-ವರಕವಿ ಡಾ|| ದ ರಾ ಬೇಂದ್ರೆ.
ಭಾವ: ಕವನ ಸೃಷ್ಟಿಕ್ರಿಯೆಯ ವರ್ಣನೆ, ಇದು ಭಗೀರಥನ ತಪಸ್ಸಿನಿಂದ ಭಾಗೀರಥಿಯಾಗಿ ಭೊಲೋಕಕ್ಕೆ ಅವತರಿಸಿದ ಜಾಹ್ನವಿ-ಗಂಗೆಯಂತೆ ಮತ್ತು ಬಲೆಯಲ್ಲಿ ಸಿಗದಿರುವ ಪಕ್ಷಿಯಂತೆ ಇರುತ್ತದೆ. ಕವಿಯ ಕಲ್ಪಕತೆಯ ಅದ್ಭುತ ಕ್ರ್‍ಇಯೆ ನಡೆಯುತ್ತದೆ.

ಶಬ್ದಾರ್ಥ: ಭರತ ನಾಟಕ ಯುಗ=ಮುದ್ರಾಭಿನಯನ ಸಂಕೇತಕ್ರ್‍ಇಯೆ. ಈಹಾಮೃಗ=ತೋಳ ಬಂತು ತೋಳ ಬಂತು ಎಂಬ ಕಥೆಯಂತೆ ಕಲ್ಪಕತೆ ಕವಿಯನ್ನು ಓಡಾಡಿಸುತ್ತದೆ.

ನಾನು ಬಡವಿ

ಭಾವಗೀತೆ

ನಾನು ಬಡವಿ, ಆತ ಬಡವ
ಒಲವೆ ನಮ್ಮ ಬದುಕು
ಬಳಸಿಕೊಂಡೆವದನೆ ನಾವು
ಅದಕು ಇದಕು ಎದಕು ||ಪ ||

ಹತ್ತಿರಿರಲಿ ದೂರವಿರಲಿ
ಅವನೆ ರಂಗಸಾಲೆ
ಕಣ್ಣು ಕಟ್ಟುವಂತ ಮೂರ್ತಿ
ಕಿವಿಗೆ ಮೆಚ್ಚಿನೋಲೆ

ಚಳಿಗೆ ಬಿಸಿಲಿಗೊಂದೆ ಹದನ
ಅವನ ಮೈಯ ಮುತ್ತೆ
ಅದೇ ಗಳಿಗೆ ಮೈಯ ತುಂಬ
ನನಗೆ ನವಿರು ಬತ್ತೆ

ಆತ ಕೊಟ್ಟ ವಸ್ತು ಒಡವೆ
ನನಗೆ ಅವಗೆ ಗೊತ್ತು
ತೋಳುಗಳಿಗೆ ತೋಳ ಬಂಧಿ
ಕೆನ್ನೆ ತುಂಬ ಮುತ್ತು

ಕುಂದು ಕೊರತೆ ತೋರಲಿಲ್ಲ
ಬೇಕು ಹೆಚ್ಚಿಗೇನು?
ಹೊಟ್ಟೆಗಿತ್ತ ಜೀವಫಲವ
ತುಟಿಗೆ ಹಾಲು ಜೇನು