Category Archives: ನಾದಲೀಲೆ

ಕುರುಡು ಕಾಂಚಾಣ

ಕುರುಡು ಕಾಂಚಾಣ
(ನಾದಲೀಲೆ – ಕವನ ಸಂಗ್ರಹ)

ಕುರುಡು ಕಾಂಚಾಣ ಕುಣಿಯುತಲಿತ್ತು
ಕಾಲಿಗೆ ಬಿದ್ದವರ ತುಳಿಯುತಲಿತ್ತೊs
ಕುರುಡು ಕಾಂಚಾಣ || ಪಲ್ಲವಿ ||

ಬಾಣಂತಿಯೆಂಬಾ ಸಾ-
ಬಾಣದ ಬಿಳುಪಿನಾ
ಕಾಣದ ಕಿರುಗೆಜ್ಜೆ ಕಾಲಾಗೆ ಇತ್ತೋ
ಸಣ್ಣ ಕಂದಮ್ಮಗಳ
ಕಣ್ಣೀನ ಕವಡಿಯ
ತಣ್ಣನ್ನ ಜೋಮಾಲೆ ಕೊರಳೊಳಗಿತ್ತೋ;

ಬಡವರ ಒಲವಿನ
ಬಡಬಾsನಲದಲ್ಲಿ
ಸುಡು ಸುಡು ಪಂಜವು ಕೈಯೊಳಗಿತ್ತೊ;
ಕಂಬನಿ ಕುಡಿಯುವ
ಹುಂಬ ಬಾಯಿಲೆ ಮೈ-
ದುಂಬಿದಂತಧೊ ಉಧೊ ಎನ್ನುತ್ತಲಿತ್ತೊ;

ಕೂಲಿ ಕಂಬಳಿಯವರ
ಪಾಲಿನ ಮೈದೊಗಲ
ಧೂಳಿಯ ಭಂಡಾರ ಹಣೆಯೊಳಗಿತ್ತೊ;
ಗುಡಿಯೊಳಗೆ ಗಣಣ ಮಾ-
ಹಡಿಯೊಳಗೆ ತನನ ಅಂ-
ಗಡಿಯೊಳಗ ಝಣಣ ನುಡಿಗೊಡುತ್ತಿತ್ತೋ;

ಹ್ಯಾಂಗಾರೆ ಕುಣಿಕುಣಿದು
ಮಂಗಾಟ ನಡೆದಾಗ
ಅಂಗಾತ ಬಿತ್ತೋ, ಹೆಗಲಿ ಎತ್ತೋ.

Advertisements

ಬೆಳುದಿಂಗಳ ನೋಡ

ಬೆಳುದಿಂಗಳ ನೋಡs
(ನಾದಲೀಲೆ – ಕವನ ಸಂಗ್ರಹ)

ಬೆಳುದಿಂಗಳ ನೋಡs
ಬೆಳುಗಿಂಗಳ ನೋಡು || ಪಲ್ಲವಿ ||

ದನಕರದ ಕಾಲಿನ ಧೂಳಿ
ಸಂಜೆಯ ಹೂಳಿ
ಮುಗಿಲ ಮುಟ್ಟsದ
ಮುಗಿಲ ಮುತ್ಯದ
ಗೋಧೂಳಿ ಲಗ್ನಕ ಇತ್ತ
ಕೈಯ ಹಿಡಿದಿತ್ತ
ಕೈಯ ಹಿಡಿದಿತ್ತs
ಚಂದ್ರಿಕೀ ಚಂದ್ರಮರ ಜೋsಡs
ಬೆಳುದಿಂಗಳ ನೋಡs

ಕಲಿ ಕಪ್ಪು ಎಲ್ಲಿನೂ ಇಲ್ಲ
ಒಂದೆ ಸಮನೆಲ್ಲ
ಎಲ್ಲನೂ ನುಣುಪs
ಎಲ್ಲನೂ ನುಣುಪು
ಇದು ಹಾಲುಗಡಲಿನs ಸೀಮಿ
ಚಂದ್ರಮನೆ ಸ್ವಾಮಿ
ಚಂದ್ರಮನೆ ಸ್ವಾsಮಿs
ಏನೆಂಥ ಹಂತರದ ಈsಡs
ಬೆಳುದಿಂಗಳ ನೋಡs

ರೋಹಿಣಿಯು ಎದೆಯ ಕೆಂಪೆಳ್ಳು
ಗೆಳತಿ ಅವನವಳು
ನಲಿತಾಳ ಮುಂದs
ನಲಿತಾಳ ಮುಂದ
ಹಾಕ್ಯಾರ ಚಿಕ್ಕಿಗೆಳತ್ಯಾರ
ಕ್ರ್‍ತ್ತಿಕೀ ಹಾರ
ಕೃತ್ತಿಕೀ ಹಾsರs
ಕಳಿಲಾಕ ಇದ್ದ ಬಿದ್ದ ಕೇsಡs
ಬೆಳುದಿಂಗಳ ನೋಡs

ನೆರೆದವರು ಹರುಹಿದರು ಊದಿ
ಮಂತ್ರಿಸಿದ ಬೂದಿ
ಮೆಚ್ಚು ಮಾಟಕ್ಕs
ಮೆಚ್ಚು ಮಾಟಕ್ಕ
ನೆಲದವರು ನಿದ್ದಿಯs ಪಾಲು
ಮೂರು ಮುಕ್ಕಾಲು
ಮೂರು ಮುಕ್ಕಾsಲುs
ಅರಹುಚ್ಚು ಎಚ್ಚತ್ತರು ಕೂsಡs
ಬೆಳುದಿಂಗಳ ನೋಡs

ಮದುಮಗಳ ಕಣ್ಣಿನs ಬಗೀ
ಚಂದಿರನ ನಗಿ
ಸುತ್ತ ಹರಿದsದs
ಸುತ್ತ ಹರಿದsದ
ಕಂಡವರ ಬಾಳು ಮರಿಸ್ಯsದ
ತಣ್ಣಕಿರಿಸ್ಯsದ
ತಣ್ಣಕಿರಿಸ್ಯsದs
ಇದು ಮಾಯಕಾರರ ಬೀsಡs
ಬೆಳುದಿಂಗಳ ನೋಡs

ಸೂಸಿರುವ ನಗಿಯ ಬಗಿಹೀರಿ
ಮದಾ ತಲಿಗೇರಿ-
ಧಾಂಗ ತಿಂಹಕ್ಕಿs
ಹಾಂಗ ಟಿಂಹಕ್ಕಿ
ಚೀರ್‍ತsದ ದಿಡ ಬಿಟ್ಟೋಡಿ
ಗಿಡಕ ಸುತ್ತಾಡಿ
ಗಿಡಕ ಸುತ್ತಾsಡಿs
ಬೆಪ್ಪಾಗೆದ ಕಾಡೂಮೇsಡs
ಬೆಳುದಿಂಗಳ ನೋಡs

ಮರಮರದ ಗೊನೀಗೆ ಕೂತು
ಹಾರಿ ಮೈ ಸೋತು
ತೆಪ್ಪಗs ಗಾsಳಿs
ತೆಪ್ಪಗs ಗಾಳಿ
ತೂಕಡಸತsದ ತಾನೀಗ
ಜಂಪು ಬಂಧಾಂಗ
ಜಂಪು ಬಂಧಾsಂಗs
ಇದು ಅದರ ತುಪ್ಪಳದ ಗೂsಡs
ಬೆಳುದಿಂಗಳ ನೋಡs

ಹೂತsದ ಸೊಗಂಧೀ ಜಾಲಿ
ಗಮ ಗಮಾ ಬೇಲಿ
ತುಳುಕತದ ಗಂಧs
ತುಳುಕತದ ಗಂಧ
ಶ್ಯಾವಂತಿ ಹೂವಿನ ಕಂಪು
ಇಡಿಗಿಸಿತು ತಂಪು
ಇಡಿಗಿಸಿತು ತಂಪುs
ಇದು ಸಾಕು ಬೇರೆ ಏನು ಬ್ಯಾsಡs
ಬೆಳುದಿಂಗಳ ನೋಡs

ದಣಿಸಿದಾ ಹಗಲು ಹಿಂಗ್ಯsದ
ಕತ್ತಲಿಂಗ್ಯsದ
ಬೇರೆ ಈ ಕಾsಲs
ಬೇರೆ ಈ ಕಾಲ
ನಡು ನಿದ್ದಿಯೊಳಗ ಇದ್ದಾಂಗ
ಕನಸು ಬಿದ್ದಾಂಗ
ಕನಸು ಬಿದ್ದಾಂಗs
ತೆರೆದದ ತಣವಿಕೀ ನಾsಡ
ಬೆಳುದಿಂಗಳ ನೋಡs

ಜಗ ಧವಳ ಗಂಗ್ಯಾಗ ಮುಳುಗಿ
ಮೈ ಮನಾ ಬೆಳಗಿ
ಸಮಾಧಿಯು ಹತ್ತಿs
ಸಮಾಧಿಯು ಹತ್ತಿ
ಮೋಡನೂ ಬೆಳ್ಳಗಾಗ್ಯಾವ
ತೆನೀ ಮಾಗ್ಯಾವ
ತೆನೀ ಮಾಗ್ಯಾsವs
ಹಾಲುಣಿಸು ಎಲ್ಲಕೂ ಪಾsಡs
ಬೆಳುದಿಂಗಳ ನೋಡs

ಅರೆ ಮರವು ಮಾಡುವೀ ಬಂಧ
ಯಾವುದೀ ಛಂಧ
ಯಾವುದೀ ಧಾsಟಿs
ಯಾವುದೀ ಧಾಟಿ?
ಸವಿರಾಗ ಬೆರೆಸಿದs ಉಸಿರು.
ಇದಕ ಯಾ ಹೆಸರು
ಇದಕ ಯಾ ಹೆಸsರುs?
ಅಂಬಿಕಾತನಯನ ಹಾsಡs
ಬೆಳುದಿಂಗಳ ನೋಡs

ಕುರುಡು ಕಾಂಚಾಣ

ಕುರುಡು ಕಾಂಚಾಣ ಕುಣಿಯುತಲಿತ್ತು
ಕಾಲಿಗೆ ಬಿದ್ದವರ ತುಳಿಯುತಲಿತ್ತೊs
ಕುರುಡು ಕಾಂಚಾಣ || ಪಲ್ಲವಿ ||

ಬಾಣಂತಿಯೆಂಬಾ ಸಾ-
ಬಾಣದ ಬಿಳುಪಿನಾ
ಕಾಣದ ಕಿರುಗೆಜ್ಜೆ ಕಾಲಾಗೆ ಇತ್ತೋ
ಸಣ್ಣ ಕಂದಮ್ಮಗಳ
ಕಣ್ಣೀನ ಕವಡಿಯ
ತಣ್ಣನ್ನ ಜೋಮಾಲೆ ಕೊರಳೊಳಗಿತ್ತೋ;

ಬಡವರ ಒಲವಿನ
ಬಡಬಾsನಲದಲ್ಲಿ
ಸುಡು ಸುಡು ಪಂಜವು ಕೈಯೊಳಗಿತ್ತೊ;
ಕಂಬನಿ ಕುಡಿಯುವ
ಹುಂಬ ಬಾಯಿಲೆ ಮೈ-
ದುಂಬಿದಂತಧೊ ಉಧೊ ಎನ್ನುತ್ತಲಿತ್ತೊ;

ಕೂಲಿ ಕಂಬಳಿಯವರ
ಪಾಲಿನ ಮೈದೊಗಲ
ಧೂಳಿಯ ಭಂಡಾರ ಹಣೆಯೊಳಗಿತ್ತೊ;
ಗುಡಿಯೊಳಗೆ ಗಣಣ ಮಾ-
ಹಡಿಯೊಳಗೆ ತನನ ಅಂ-
ಗಡಿಯೊಳಗ ಝಣಣ ನುಡಿಗೊಡುತ್ತಿತ್ತೋ;

ಹ್ಯಾಂಗಾರೆ ಕುಣಿಕುಣಿದು
ಮಂಗಾಟ ನಡೆದಾಗ
ಅಂಗಾತ ಬಿತ್ತೋ, ಹೆಗಲಿ ಎತ್ತೋ.

ದೀಪ

ಬಂತಿದೊ ಸೃಂಗಾರ ಮಾಸ
ಕಂತು ನಕ್ಕ ಚಂದ್ರಹಾಸ
ಎಂತು ತುಂಬಿತಾsಕಾಶ
ಕಂಡವರನು ಹರಸಲು.

ಕಿರಿಬೆರಳಲಿ ಬೆಳ್ಳಿ ಹರಳು
ಕರಿ ಕುರುಳೊಳೊ ಚಿಕ್ಕೆ ಅರಳು
ತೆರದಳಿದೊ ತರಳೆ ಇವಳು
ತನ್ನರಸನನರುಸಲು.

ಹಂಗೆ ಯಮುನೆ ಕೂಡಿ ಹರಿದು
ಸಂಗಮ ಜಲ ಬಿಳಿದು ಕರಿದು
ತಿಂಗಳ ನಗೆ ಮೇರೆವರಿದು
ಬೇರೆ ಮಿರುಗು ನೀರಿಗು.

ಪಂಥದಿಂದ ಮನೆಯ ತೊರೆದು
ಪಾಂಥ ನೆನೆದನತ್ತು ಕರೆದು;
ಇಂಥ ಸಮಯ ಬೇರೆ ಬರದು
ದಂಪತಿಗಳಿಗಾರಿಗು!

ನಾನು ನೀನು ಜೊತೆಗೆ ಬಂದು
ಈ ನದಿಗಳ ತಡಿಗೆ ನಿಂದು
ಸಾನುರಾಗದಿಂದ ಇಂದು
ದೀಪ ತೇಲಿ ಬಿಟ್ಟೆವೇ?
ದೀಪ ತೇಲಿ ಬಿಟ್ಟೆವು.

ನೀ ಹೀಂಗ ನೋಡಬ್ಯಾಡ ನನ್ನ

ನೀ ಹೀಂಗ ನೋಡಬ್ಯಾಡ ನನ್ನ
ನೀ ಹೀಂಗ ನೋಡಿದರ ನನ್ನ ತಿರುಗಿ ನಾ ಹ್ಯಾಂಗ ನೋಡಲೇ ನಿನ್ನ || ಪಲ್ಲವಿ||

ಸಂಸಾರ ಸಾಗರದಾಗ ಲೆಕ್ಕವಿಲ್ಲದಷ್ಟು ದುಃಖದ ಬಂಡಿ
ನಾ ಬಲ್ಲೆ ನನಗೆ ಗೊತ್ತಿಲ್ಲದಿದ್ದರೂ ಎಲ್ಲಿ ಆಚೆಯಾ ದಂಡಿ
ಮಲಗಿರುವ ಕೂಸು ಮಲಗಿರಲಿ ಅಲ್ಲಿ, ಮುಂದಿನದು ದೇವರ ಚಿತ್ತ
ನಾ ತಡೀಲಾರೆ ಅದು, ಯಾಕ ನೋಡತೀ ಮತ್ತ ಮತ್ತ ಇತ್ತ?

ತಂಬಲs ಹಾಕದ ತುಂಬ ಕೆಂಪು ಗಿಡಗಡಕನಕಣ್ಣಿನ ಹಾಂಗ
ಇದ್ದಂಥ ತುಟಿಯ ಬಣ್ಣೆತ್ತ ಹಾರಿತು? ಯಾವ ಗಾಳಿಗೆ, ಹೀಂಗ
ಈ ಗದ್ದ, ಗಲ್ಲ, ಹಣಿ, ಕಣ್ಣುಕಂಡು ಮಾರೀಗೆ ಮಾರಿಯ ರೀತಿ
ಸಾವನs ತನ್ನ ಕೈ ಸವರಿತಲ್ಲಿ, ಬಂತೆನಗ ಇಲ್ಲದ ಭೀತಿ,

ಧಾರ್‍ಈಲೆ ನೆನೆದ ಕೈ ಹಿಡಿದೆ ನೀನು, ತಣ್ಣsಗ ಅಂತ ತಿಳಿದು
ಬಿಡವೊಲ್ಲಿ ಇನ್ನುನೂ, ಬೂದಿಮುಚ್ಚಿದ ಕೆಂಡ ಇದಂತ ಹೊಳೆದು
ಮುಗಿಲsನ ಕಪ್ಪರಿಸಿ ನೆಲಕ ಬಿದ್ದರ ನೆಲಕ ನೆಲಿ ಎಲ್ಲಿನ್ನs
ಆ ಗಾದಿ ಮಾತು ನಂಬಿ, ನಾನು ದೇವರಂತ ತಿಳಿದಿಯೇನ ನೀ ನನ್ನ.

ಇಬ್ಬನ್ನಿ ತೊಳೆದರೂ ಹಾಲು ಮೆತ್ತಿದಾ ಕವಳಿಕಂಟಿಯಾ ಹಣ್ಣು
ಹೊಳೆ ಹೊಳೆವ ಹಾಂಗಿರುವ ಕಣ್ಣಿರುವ, ಹೆಣ್ಣ, ಹೇಳು ನಿನ್ನವೇನ ಈ ಕಣ್ಣು?
ದಿಗಿಲಾಗಿ ಅನ್ನತದ ಜೀವ ನಿನ್ನ ಕಣ್ಣಾರೆ ಕಂಡು ಒಮ್ಮಿಗಿಲs
ಹುಣ್ಣವೀ ಚಂದಿರನ ಹೆಣ ಬಂತೊ ಮುಗಿಲಾಗ ತೇಲತ ಹಗಲ!

ನಿನ ಕಣ್ಣಿನ್ಯಾಗ ಕಾಲೂರಿ ಮಳೆಯು, ನಡ ನಡಕ ಹುಚ್ಚನಗಿ ಯಾಕ?
ಹನಿ ಒಡೆಯಲಿಕ್ಕೆ ಬಂದಂಥ ಮೋಡ ತಡಧಾಂಗ ಗಾಳಿಯ ನೆವಕ
ಅತ್ತಾರ ಅತ್ತುಬಿಡು, ಹೊನಲು ಬರಲಿ, ನಕ್ಯಾಕ ಮರಸತೀ ದುಕ್ಕ?
ಎವೆಬಡಿಸಿ ಕೆಡವು, ಬಿರಿಗಣ್ಣು ಬ್ಯಾಡ, ತುಟಿಕಚ್ಚಿ ಹಿಡಿಯದಿರು ಬಿಕ್ಕ

ಅನಂತ ಪ್ರಣಯ

ಉತ್ತರದ್ರುವದಿಂ ದಕ್ಷಿಣದ್ರುವಕೂ
ಚುಂಬಕ ಗಾಳಿಯು ಬೀಸುತಿದೆ
ಸೂರ್ಯನ ಬಿಂಬಕೆ ಚಂದ್ರನ ಬಿಂಬವು
ರಂಜಿಸಿ ನಗೆಯಲಿ ಮೀಸುತಿದೆ.

ಭೂರಂಗಕೆ ಅಭಿಸಾರಕೆ ಕರೆಯುತ
ತಿಂಗಳು ತಿಂಗಳು ನವೆಯುತಿದೆ
ತುಂಬುತ ತುಳುಕುತ ತೀರುತ ತನ್ನೊಳು
ತಾನೇ ಸವಿಯನು ಸವಿಯುತಿದೆ.

ಭುವನ ಕುಸುಮಿಸಿ ಪುಲಕಿಸಿ ಮರಳಿಸಿ
ಕೋಟಿ ಕೋಟಿ ಸಲ ಹೊಸೆಯಿಸಿತು
ಮಿತ್ರನ ಮೈತ್ರಿಯ ಒಸಗೆ ಮಸಗದಿದೆ
ಮರುಕದ ದ್ಃಅರೆಯ ಮಸೆಯಿಸಿತು.

ಅಕ್ಷಿನಮೀಲನ ಮಾಡದೆ ನಕ್ಷ-
ತ್ರದ ಗಣ ಗಗನದಿ ಹಾರದಿದೆ
ಬಿದಿಗೆಯ ಬಿಂಬಾಧರದಲಿ ಇಂದಿಗು
ಮಿಲನದ ಚಿಹ್ನವು ತೋರದಿದೆ.