Category Archives: ಶಿಶುನಾಳ ಶರೀಫ
ಹುಟ್ಟಿದ ಹೊಲಿಮನಿ..
ಹುಟ್ಟಿದ ಹೊಲಿಮನಿ….
———————
ಹುಟ್ಟಿದ ಹೊಲಿಮನಿ
ಬಿಟ್ಟರೆ ಖಾಲಿಮನಿ
ಎಷ್ಟಿದ್ದರೇನಿದು ಗಳಿಗಿ ಮನಿ.
ವಸ್ತಿ ಇರುವ ಮನಿ
ಗಸ್ತಿ ತಿರುಗೋ ಮನಿ
ಶಿಸ್ತಿಲೆ ಕಾಣುವ ಶಿವನ ಮನಿ.
ಚಿಂತೆ ಕಾಂತೆಯ ಮನಿ
ಸಂತಿ ಸವತಿಯ ಮನಿ
ಅಂತು ಬಲ್ಲವರಿಗೆ ಆಡೂ ಮನಿ.
ಒಂಬತ್ತು ದ್ವಾರ ದಾಟಿ
ಗಂಟಿಕ್ಕಿ ಹೋಗುವಾಗ
ಗಂಟೆ ಬಾರಿಸಿದಂತೆ ಗಾಳಿಮನಿ.
ವಸುಧೆಯೊಳಗೆ ನಮ್ಮ
ಶಿಶುನಾಳಧೀಶನ
ಹಸನಾದ ಪದಗಳ ಹಾಡೂ ಮನಿ.
ಬಿದ್ದಿಯಬ್ಬೇ ಮುದುಕಿ….
ಬಿದ್ದಿಯಬ್ಬೇ ಮುದುಕಿ….
———————-
ಬಿದ್ದಿಯಬ್ಬೇ ಮುದುಕಿ
ಬಿದ್ದೀಯಬ್ಬೇ.
ನೀ ದಿನ ಹೋದಾಕಿ
ಇರು ಭಾಳ ಜೋಕಿ
ಬಿದ್ದೀಯಬೇ ಮುದುಕಿ ಬಿದ್ದೀಯಬೇ.
ಸದ್ಯಕಿದು ಹುಲುಗೂರ ಸಂತಿ
ಗದ್ದಲದೊಳಗ್ಯಾಕ ನಿಂತಿ?
ಬಿದ್ದು ಇಲ್ಲಿ ಒದ್ದಾಡಿದರ
ಎದ್ದು ಹ್ಯಾಂಗ ಹಿಂದಕ ಬರತಿ?
ಬುದ್ದಿಗೇಡಿ ಮುದುಕಿ ನೀನು ಬಿದ್ದೀಯಬೇ.
ಬುಟ್ಟಿಯಲ್ಲಿ ಪತ್ತಲ ಇಟ್ಟಿ
ಅದನು ಉಟ್ಟ ಹೊತ್ತೊಳು ಜೋಕಿ;
ಕೆಟ್ಟಗಂಟಿ ಚೌಡೇರು ಬಂದು
ಉಟ್ಟುದನ್ನೆ ಕದ್ದಾರ ಜೋಕಿ!
ಬುದ್ಧಿಗೇಡಿ ಮುದುಕಿ ನೀನು ಬಿದ್ದೀಯಬೇ.
ಶಿಶುನಾಳಾಧೀಶನ ಮುಂದೆ
ಕೊಸರಿ ಕೊಸರಿ ಹೋಗಬ್ಯಾಡ,
ಹಸನವಿಲ್ಲ ಹರಯ ಸಂದ
ಪಿಸುರು ಪಿಚ್ಚುಗಣ್ಣಿನ ಮುದುಕಿ
ಬುದ್ದಿಗೇಡಿ ಮುದುಕಿ ನೀನು ಬಿದ್ದೀಯಬೇ.
ಅಳಬೇಡ ತಂಗಿ
ಸಾಹಿತ್ಯ: ಶಿಶುನಾಳ ಶರೀಫ
ಸಂಗೀತ: ಸಿ.ಆಶ್ವಥ್
ಗಾಯನ: ಶಿವಮೊಗ್ಗ ಸುಬ್ಬಣ್ಣ
ಅಳಬೇಡ ತಂಗಿ ಅಳಬೇಡ
ನಿನ್ನ ಕಳುಹಬಂದವರಿಲ್ಲಿ ಉಳುಹಿಕೊಂಬುವರಿಲ್ಲ
ದಡಿಕೀಲೆ ಉಡಿಯಕ್ಕಿ ಹಾಕಿದರವ್ವ
ಒಳ್ಳೆ ದುಡುಕೀಲೇ ಮುಂದಕ್ಕೆ ನೂಕಿದರವ್ವ
ಮಿಡಿಕ್ಯಾಡಿ ಮದಿವ್ಯಾದೆ ಮೋಜು ಕಾಣವ್ವ
ನೀ ಹುಡುಕ್ಯಾಡಿ ಮಾಯದ ಮರವೇರಿದ್ಯವ್ವ
ರಂಗೀಲೀ ಉಟ್ಟೀದಿ ರೇಶ್ಮೀ ದಡಿ ಸೀರಿ
ಮತ್ತ ಹಂಗ ನೂಲಿನ ಪರಿವಿ ಮರಿತ್ಯವ್ವ ನಾರಿ
ಮಂಗಳ ಮೂರುತಿ ಶಿಶುನಾಳಧೀಶನ
ಅಂಗಳಕ ನೀ ಹೊರತು ಆದ್ಯವ್ವ ಗೌರಿ
ಗುಡು ಗುಡಿಯಾ
ಗುಡು ಗುಡಿಯಾ ಸೇದಿ ನೋಡಾ
ಒಡಲೊಳಗಿನ ರೋಗ ತೊರೆದು ಇನ್ಯಾರೋ
ಮನಸೆಂಬ ಸಂಚಿಯ ಬಿಚ್ಚಿ
ದಿನ ದಿನವೂ ಮೋಹ ಅಂಬೋ ಬಂಗಿಯ ಕೊಚ್ಚಿ
ನೆರವೆಂಬ ಚಿಲುಮೆಯ ಹಚ್ಚಿ
ಬುದ್ಧಿ ಅನುವಂಥ ಕೆನ್ಡವ ಮೇಲಲಿ ಮುಚ್ಚಿ
ಗುಡು ಗುಡಿಯಾ ಸೇದಿ ನೋಡಾ
ಶುದ್ಧ ಜ್ಞಾನ ಮೇಲೇರಿ ದಾರಿದ್ರ್ಯ ದೇಹ ಸುಟ್ಟು
ಹೊಗೆಯೂ ಹಾರುವುದು ಬುದ್ಧಿವಂತ ರಾಯನದು
ವರಸಿದ್ಧ ಶಿಶುನಾಳಧೀಶನ ತೋರುವುದು