Category Archives: ಆನಂದ್ ಜಿ ಬನವಾಸಿ ಬಳಗ

ಮೆಟ್ರೋಲಿ ಕನ್ನಡ ಬೇಕು ಹಿಂದೀ ಬೇಡ, ಯಾಕಂದ್ರೆ…- Namma metro kannada ok hindi not ok

1025 Namma Metro Kannada Ok Hindi Not Ok Aid0038

ಬೆಂಗಳೂರಿನ ಮಾಯಾಲೋಕಕ್ಕೆ ಮೊನ್ನೆ ಹೊಸದಾಗಿ ಸೇರ್ಪಡೆಯಾದ ಮೆಟ್ರೋ ರೈಲು “ನಮ್ಮ ಮೆಟ್ರೋ”, ಕನ್ನಡಿಗರೆಲ್ಲಾ ಹೆಮ್ಮೆ ಪಟ್ಟುಕೊಳ್ಳಲು ಕಾರಣವಾಗಿದೆ. ಮೊನ್ನೆ ಈ ರೈಲಿನಲ್ಲಿ ಪಯಣಿಸಿದವರ ಅನುಭವ ಕಂಡು ಕೇಳಿದಾಗ, ಮೆಟ್ರೋ ಆರಂಭ ಒಂದೆಡೆ ಸಂತಸಕ್ಕೆ ಕಾರಣವಾದರೂ ಮತ್ತೊಂದೆಡೆ ಅತಿ ಆತಂಕಕ್ಕೆ ಕಾರಣವಾಗಿದೆ ಎನ್ನಿಸಿತು. ಏನೀ ಆತಂಕ? ಯಾಕೀ ಆತಂಕ? ಬನ್ನಿ… ನೋಡ್ಮಾ…

ನಮ್ಮ ಆತಂಕಕ್ಕೆ ಕಾರಣವಾಗಿರೋದು ಬೆಂಗಳೂರಿನ ಮೆಟ್ರೋದಲ್ಲಿ ಪ್ರತಿಯೊಂದೂ ಮೂರು ಭಾಷೆಯಲ್ಲಿದೆ ಅನ್ನೋದು. ಇಲ್ಲಿನ ಸ್ಟೇಶನ್ ಹೆಸರುಗಳಿಂದ ಹಿಡಿದು ಮುಂದೆ ಬರುವ ನಿಲ್ದಾಣದ ಬಗ್ಗೆ ರೈಲಿನಲ್ಲಿ ಘೋಷಿಸುತ್ತಿರುವ ಘೋಷಣೆಯವರೆಗೆ ಎಲ್ಲವೂ ಕನ್ನಡ, ಹಿಂದೀ ಮತ್ತು ಇಂಗ್ಲಿಷ್ ಭಾಷೆಗಳಲ್ಲಿವೆ. ಕನ್ನಡದಲ್ಲಿಲ್ಲಾ ಅಂದ್ರೆ ಆತಂಕ ಆಗೋದು ಸರಿ, ಈಗ್ಯಾಕೆ ಆತಂಕ ಅಂತೀರಾ? ಆತಂಕ ಇದು ಹಿಂದೀಯಲ್ಲೂ ಇದೆ ಅನ್ನೋದಕ್ಕೆ ಗುರೂ!

ಕನ್ನಡ ಇಲ್ವಾ? ಇದ್ರೂ ಯಾಕೆ ಆಕ್ಷೇಪ? : ಹೌದಲ್ವಾ? ಇಂಥಾ ಪ್ರಶ್ನೆ ಸಾಮಾನ್ಯವಾಗಿ ಈ ಆತಂಕಕ್ಕೆ ಒಳಗಾದವರನ್ನು ಎದುರಾಗ್ತಾನೆ ಇರುತ್ತೆ. ಇಲ್ಲಿ ಆತಂಕ ಇರೋದು ಕನ್ನಡದವರಿಗೆ ಅನುಕೂಲ ಆಗ್ತಾ ಇದೆಯೋ ಇಲ್ಲವೋ ಅನ್ನೋಕಿಂತ, ಕನ್ನಡನಾಡಿನ ಒಂದೂರಿನ ಬಡಾವಣೆಗಳನ್ನು ಬೆಸೆಯಲು ಇರುವ ಸ್ಥಳೀಯ ಸಾರಿಗೆಯಲ್ಲಿ ಕನ್ನಡವಲ್ಲದ ಇನ್ನೊಂದು ಭಾಷೆ ಇದೆ ಅನ್ನೋದು.

ಅರೆರೆ, ಇಲ್ಲಿ ಕನ್ನಡಿಗರು ಮಾತ್ರಾ ಬರ್ತಾರಾ? 
ನಾವು ಸಂಕುಚಿತ ಮನಸ್ಸಿನವರಾಗಬಾರದು. ಹೊರಗಿಂದ ಬಂದವರಿಗೆ ಕೂಡಾ ಅನುಕೂಲವಾಗಬೇಕು ಅನ್ನೋ ಮಾತು ಕೇಳಿ ಬರುತ್ತೆ. ಸಹಜವೇ ಬಿಡಿ. ಹಾಗಾದಾಗ ನಾವು ಇಡೀ ಪ್ರಪಂಚದಲ್ಲಿ ಹೆಚ್ಚಿನ ಜನರು ಇವತ್ತು ಓದಲು ಕಲಿತಿರುವ ರೋಮನ್ ಲಿಪಿಯನ್ನು ಬಳಸಿದರಾಯ್ತು. ಇಂಗ್ಲಿಷ್ ಭಾಷೆ ಕನ್ನಡದ ಜೊತೆಯಲ್ಲಿ ಇರೋದನ್ನು ಹೇಗೋ ಒಪ್ಪಬಹುದು. ಆದರೆ ಹಿಂದೀಯನ್ನು? ಊಹೂಂ… ಒಪ್ಪಕ್ಕಾಗಲ್ಲಾ ಗುರೂ! ಒಪ್ಪಿದರೆ ನಾಳೆ ಕನ್ನಡಿಗರಿಗೆ ಅಪಾಯ ಕಟ್ಟಿಟ್ಟ ಬುತ್ತಿ. ಅದೆಂಗೆ?

Advertisements

ನಾಳೆ ಕನ್ನಡಿಗರಿಗೆ ಅಪಾಯ ಕಟ್ಟಿಟ್ಟ ಬುತ್ತಿ!- Nnamma metro warning bell for kannadigas

1025 Namma Metro Warning Bell For Kannadigas Aid0038

ಮೆಟ್ರೋಲಿ ಹಿಂದೀಲಿ ಹಾಕಬೇಕು ಅಂತನ್ನೋದು ಮೆಟ್ರೋ ಆಡಳಿತದವರ ನಿರ್ಧಾರವೇ ಆಗಿರಬಹುದು.. ಆದರೆ ಇದರ ಪರಿಣಾಮವೇನಾಗುತ್ತದೆ ಎಂಬುದು ಅವರ ಅರಿವಿನಲ್ಲಿ ಇಲ್ಲದಿದ್ದರೂ ನಮ್ಮ ಅರಿವಿಗೆ ತಂದುಕೊಳ್ಳುವುದು ಒಳಿತು. ದೆಹಲಿಯ ಮೆಟ್ರೋದಲ್ಲಿ ಇದ್ದಿಕ್ಕಿದ್ದಂತೆ ಎಲ್ಲಾ ಫಲಕಗಳೂ, ಸೇವೆಗಳೂ ಕನ್ನಡದಲ್ಲೂ ದೊರೆತರೆ…. ಅಲ್ಲಿನ ಎಫ್.ಎಂ ವಾಹಿನಿಗಳಲ್ಲಿ ಕನ್ನಡ ಹಾಡುಗಳು ಕೇಳಿಬರಲು ಶುರುವಾದರೆ ಏನಾಗುತ್ತದೆ ಎಂದು ಯೋಚಿಸಿ ನೋಡಿ.

ಇಲ್ಲಿಂದ ಅಲ್ಲಿಗೆ ಹೋದ ಕನ್ನಡಿಗ “ದೆಹಲೀಲಿ ಕನ್ನಡ ನಡ್ಯುತ್ತೆ, ಬಾಳಕ್ಕೆ ಏನೇನೂ ತೊಡಕಿಲ್ಲಾ ಬನ್ರಪ್ಪಾ” ಅಂತಾ ತನ್ನ ಬಂಧು, ಬಳಗ, ನೆಂಟರು ಪಂಟರು, ಬೆಕ್ಕು, ನಾಯಿ, ಅಂಗಿ, ಚಡ್ಡಿ ಎಲ್ಲಾನು ಹೊತ್ಕೊಂಡು ದೆಹಲಿಗೆ ವಲಸೆ ಹೋಗಲ್ವಾ? ಇದೇ ಗುರೂ, ಇಲ್ಲಿ ಹಿಂದೀಲಿ ವ್ಯವಸ್ಥೆಗಳು ಬಂದರೂ ಆಗೋದು… ಅಲ್ವಾ ಗುರೂ! ಮೊದಲೇ ಜನಸಂಖ್ಯಾ ಸ್ಫೋಟದಿಂದ ನರುಳ್ತಾ ಇರೋ ಹಿಂದೀ ಭಾಷಿಕ ಪ್ರದೇಶಗಳ ಜನರು ಕಡಿಮೆ ಜನದಟ್ಟಣೆಯ ಕರ್ನಾಟಕದಂತಹ ಚಿನ್ನದ ನಾಡಿಗೆ ಸುನಾಮಿ ಹಾಗೆ ನುಗ್ಗೋದು ಖಂಡಿತಾ! ಇದರಿಂದಾಗಿ ನಮ್ಮೂರಲ್ಲೇ ನಾಳೆ, ಹಿಂದೀಯಿಲ್ಲದೆ ನಮ್ಮ ಮಕ್ಕಳು ಮರಿ ಬದುಕಲಿಕ್ಕಾಗದ ಪರಿಸ್ಥಿತಿ ಹುಟ್ಟುವುದಿಲ್ಲವೇ? ಈ ಕಾರಣಕ್ಕಾಗಿ ಬೆಂಗಳೂರಿನ ಮೆಟ್ರೋಲಿ ಹಿಂದೀ ಬೇಡ.

ಇದು ಬರೀ ವಲಸೆ ಪ್ರಶ್ನೆಯಲ್ಲ! : 
ಅಷ್ಟಕ್ಕೂ ಇದು ಬರೀ ವಲಸೆಯ ಪ್ರಶ್ನೆಯೂ ಅಲ್ಲ. ಭಾರತ ಒಂದು ಒಕ್ಕೂಟ, ಇಲ್ಲಿ ಪ್ರತಿಯೊಂದು ಭಾಷೆಯೂ, ಜನಾಂಗವೂ ಸಮಾನ. ಪ್ರತಿಯೊಬ್ಬ ನಾಗರೀಕನಿಗೂ ಸಮಾನ ಹಕ್ಕುಗಳಿವೆ ಎನ್ನುವ ಕೇಂದ್ರ ಸರ್ಕಾರ ಬೆಂಗಳೂರಿನ ಮೆಟ್ರೋಲಿ ಪಾಲು ಹೊಂದಿದೆ ಎನ್ನುವ ಕಾರಣಕ್ಕೆ ಹಿಂದೀಲಿ ಸೇವೆ ಕೊಡಬೇಕು ಅನ್ನೋದು ಯಾವ ಸೀಮೆಯ ಸಮಾನತೆ? ಕನ್ನಡಿಗರಿಗೆ (ಉಳಿದೆಲ್ಲಾ ಭಾಷಿಕರಿಗೂ) ಇಂಥದೇ ಸೇವೆಯನ್ನು ದೇಶದ ಎಲ್ಲಾ ಮೂಲೆಯಲ್ಲೂ ಒದಗಿಸಿಕೊಡುತ್ತದೆಯೇ? ಇಲ್ಲದಿದ್ದರೆ ಹಿಂದೀ ಭಾಷೆಯವರಿಗೆ ಮಾತ್ರಾ ವಿಶೇಷ ಸವಲತ್ತು ಒದಗಿಸಿಕೊಡುವ ಇಂತಹ ನೀತಿ ಏನನ್ನು ಸಾರುತ್ತದೆ? ವೈವಿಧ್ಯತೆಯಲ್ಲಿ ಏಕತೆಯನ್ನೆ? ಹಿಂದೀ ಸಾಮ್ರಾಜ್ಯಶಾಹಿಯನ್ನೇ? ಸರಿಯಾದ ವ್ಯವಸ್ಥೆಯನ್ನು ಕಟ್ಟುವ ಯೋಗ್ಯತೆ ಸರ್ಕಾರಕ್ಕಿಲ್ಲದಿದ್ದಲ್ಲಿ ಬೇರೆ ಬೇರೆ ದೇಶಗಳಲ್ಲಿನ ವ್ಯವಸ್ಥೆ ನೋಡಿ ಕಲಿಯಲಿ… ಅಲ್ವಾ ಗುರೂ!

ಕೊನೆಹನಿ: ಗುಲಾಮಗಿರಿಯ ಸಂಕೇತವಾದ ಇಂಗ್ಲಿಶ್ ಒಪ್ಪುವ ನೀವು ನಮ್ಮದೇ ನಾಡಿನ ಹಿಂದೀ ಒಪ್ಪಲಾರಿರಾ? ಎನ್ನುವ ಪ್ರಶ್ನೆ ಕೇಳುವವರಿದ್ದಾರೆ. ಅವರು ತಿಳಿಯಬೇಕಾದ್ದು ಒಂದಿದೆ, ಇವತ್ತು ಇಂಗ್ಲಿಷ್ ಒಪ್ಪಿದರೆ, ಇಂಗ್ಲಿಷರು ಇಲ್ಲಿ ಬಂದು ಸಾಮ್ರಾಜ್ಯ ಕಟ್ಟಿ ಕನ್ನಡಿಗರನ್ನು ಎರಡನೇ ದರ್ಜೆಯ ಪ್ರಜೆಗಳನ್ನಾಗಿಸಲಾರರು. ಆದರೆ ಹಿಂದೀ ಒಪ್ಪಿದರೆ ಆಗುವುದು ಅದೇ… ಅನಿಯಂತ್ರಿತ ವಲಸೆಗೆ ವೇಗವಾಹಿಯಾಗಿ ಕೆಲಸಮಾಡುವ ಇದು ಕೆಲವೇ ವರ್ಷಗಳಲ್ಲಿ ಕನ್ನಡಿಗರನ್ನು ಭಾರತದಿಂದೇಕೆ, ಇಡೀ ಭೂಪಟದಿಂದಲೇ ಹೊಸಕಿ ಹಾಕುತ್ತದೆ.

‘ಒತ್ತಡ ಹೇರಿದರೆ ಹಿಂದಿ ಭಾಷೆ ಕಲಿಯಲಾರೆ’- September 14 hindi day black spot democracy

0914 September 14 Hindi Day Black Spot Democracy Aid0038

ಸೆಪ್ಟೆಂಬರ್ 14ನ್ನು ಭಾರತದ ಎಲ್ಲಾ ಕೇಂದ್ರ ಸರ್ಕಾರಿ ಕಛೇರಿಗಳಲ್ಲಿ ಹಿಂದೀ ದಿವಸ್ ಎಂದು ಆಚರಿಸಲಾಗುತ್ತದೆ. ಇತ್ತೀಚಿಗೆ ಇದು ಹಿಂದೀ ಸಪ್ತಾಹ್, ಹಿಂದೀ ಪಕ್ಷ ಎನ್ನುವ ಆಚರಣೆಗಳಾಗಿ ಜಾರಿಯಲ್ಲಿದೆ. 1949ರ ಇದೇ ದಿನದಂದು ಹಿಂದೀಯನ್ನು ಭಾರತ ದೇಶದ ಆಡಳಿತ ಭಾಷೆಯನ್ನಾಗಿ ಸಂವಿಧಾನ ಸಮಿತಿ ಒಪ್ಪಿಕೊಂಡ ನೆನಪಿಗಾಗಿ ಹಿಂದೀ ದಿವಸನ್ನು ಆಚರಿಸಲಾಗುತ್ತಿದೆ.

ಭಾರತಕ್ಕೆ ಸ್ವಾತಂತ್ರ್ಯ ಬಂದ ಸಂದರ್ಭದಲ್ಲಿ ಅತಿಯಾಗಿ ಚರ್ಚೆಗೊಳಗಾದ ವಿಷಯಗಳಲ್ಲೊಂದು “ಭಾರತದ ಭಾಷಾನೀತಿ”. ಸಂವಿಧಾನ ರಚಿಸುವಾಗ ಯಾವ ಭಾಷೆಯಲ್ಲಿ ಬರೆಯಬೇಕು ಎನ್ನುವುದರಿಂದ ಆರಂಭವಾದ ಈ ಚರ್ಚೆ ಭಾರತಕ್ಕೆ ಯಾವುದು ರಾಷ್ಟ್ರಭಾಷೆಯಾಗಬೇಕು ಎನ್ನುವವರೆಗೂ ಮುಂದುವರೆಯಿತು. ಭಾರತದ ಸಂವಿಧಾನವನ್ನು ರಚಿಸಿ, ಜಾರಿಗೆ ತರಲು ಸಂವಿಧಾನ ಸಮಿತಿಯನ್ನು (Constituent assembly) ರೂಪಿಸಲಾಯಿತು. ಇದರ ಅಧ್ಯಕ್ಷರಾಗಿ ಡಾ. ಬಾಬು ರಾಜೇಂದ್ರಪ್ರಸಾದ್ ನೇಮಕವಾದರು. ಡಾ. ಬಿ ಆರ್ ಅಂಬೇಡ್ಕರ್ ಅವರು ಕರಡು ಸಮಿತಿಯ ಅಧ್ಯಕ್ಷರಾದರು. ಡಿಸೆಂಬರ್ 11, 1946ರಂದು ಮೊದಲು ಸಭೆ ಸೇರಿದ ಸಮಿತಿಯು 1950ರ ಜನವರಿ, 26ರಂದು ಭಾರತದ ಸಂವಿಧಾನವು ಜಾರಿಯಾಗಿ, ನಂತರ ಮೊದಲ ಸಾರ್ವಜನಿಕ ಚುನಾವಣೆಗಳು ನಡೆದು ಹೊಸ ಸರ್ಕಾರ ರೂಪುಗೊಳ್ಳುವವರೆಗೂ ಅಸ್ತಿತ್ವದಲ್ಲಿತ್ತು. ಈ ಸಮಿತಿಯು ಹಿಂದೀಯನ್ನು ಭಾರತದ ರಾಷ್ಟ್ರಭಾಷೆಯಾಗಿಸಲು ಉತ್ಸುಕವಾಗಿತ್ತು. ಭಾರತಕ್ಕೆ ಹಿಂದೀಯನ್ನು ರಾಷ್ಟ್ರಭಾಷೆ ಮಾಡಬೇಕೆನ್ನುವ ಪ್ರಯತ್ನಗಳು ಆ ದಿನಗಳಲ್ಲಿ ನಡೆದರೂ ಹಿಂದೀಯೇತರ ಪ್ರದೇಶಗಳ ತೀವ್ರ ವಿರೋಧದ ಕಾರಣದಿಂದಾಗಿ ಸಾಧ್ಯವಾಗಲಿಲ್ಲ. ಸಂವಿಧಾನ ಸಮಿತಿಯಲ್ಲಿ/ ಅದಕ್ಕೆ ಮುನ್ನ ನಡೆದ ಚರ್ಚೆಗಳಲ್ಲಿ ಗಮನ ಸೆಳೆವ ಎರಡು ಹೇಳಿಕೆಗಳನ್ನು ನೋಡಿದರೆ ಹಿಂದೀ ಪರರ ಮತ್ತು ವಿರೋಧಿಗಳ ಮನಸ್ಥಿತಿ ಅರ್ಥವಾಗುತ್ತದೆ.

ಪ್ರಖರ ಹಿಂದೀವಾದಿ, ಆರ್.ವಿ. ಧುಲೇಕರ್ ಅವರು 10ನೇ ಡಿಸೆಂಬರ್ 1946ರಲ್ಲಿ ‘ಹಿಂದಿಯನ್ನು ತಿಳಿಯದ ಯಾವೊಬ್ಬನಿಗೂ ಭಾರತದಲ್ಲಿ ಬದುಕುವ ಹಕ್ಕಿಲ್ಲ. ಭಾರತದ ಸಂಸತ್ತಿನಲ್ಲಿ ಭಾಗವಹಿಸುವ ಹಕ್ಕಿಲ್ಲ. ಅಂಥವರು ಭಾರತ ಬಿಟ್ಟು ತೊಲಗಲಿ” ಎನ್ನುವ ಹೇಳಿಕೆಯನ್ನು ನೀಡಿದರು. ಇದೊಂದು ಹೇಳಿಕೆ ಹಿಂದೀ ಪರವಾದವರ ಮನಸ್ಥಿತಿಯನ್ನು, ಹಿಂದೀಯೇತರರ ಬಗೆಗಿನ ಅಸಹನೆಯನ್ನೂ ತೋರುತ್ತದೆ. ಇದಕ್ಕುತ್ತರವಾಗಿ ಟಿ. ಟಿ ಕೃಷ್ಣಮಾಚಾರಿಯವರು “ಹಿಂದಿಯನ್ನು ನಾನು ಕಲಿಯಲಾರೆ. ಏಕೆಂದರೆ ಹಾಗೆ ಕಲಿಯಿರಿ ಎನ್ನುವ ಮೂಲಕ ನನ್ನ ಮೇಲೆ ನಾನಾ ಕಟ್ಟುಪಾಡುಗಳನ್ನು ಹೇರಲಾಗುತ್ತದೆ. ದೇಶ ಒಡೆಯಬೇಕೆನ್ನುವ ಕೂಗಿಗೆ ನಾವೂ ದನಿಗೂಡಿಸುವಂತೆ ನಿಮ್ಮ ಒತ್ತಾಯದ ನಡವಳಿಕೆ ಇರದಿರಲಿ. ನನ್ನ ಪ್ರೀತಿಯ ಉತ್ತರಪ್ರದೇಶದ ಮಿತ್ರರೇ, ನಿಮಗೆ ಒಗ್ಗೂಡಿದ ಭಾರತ ಬೇಕೋ? ಅಥವಾ ಹಿಂದೀಭಾರತ ಬೇಕೋ ತೀರ್ಮಾನಿಸಿ”ಎಂಬ ಹೇಳಿಕೆ ನೀಡಿದರು.

ಕೊನೆಗೆ ಎರಡೂ ಪಂಗಡಗಳ ನಡುವೆ 1949ರಲ್ಲಿ “ಅಯ್ಯಂಗಾರ್ – ಮುನ್ಶಿ ರಾಜಿ ಒಪ್ಪಂದ”ವುಂಟಾಗಿ ಹಿಂದೀಯನ್ನು ರಾಷ್ಟ್ರಭಾಷೆಯನ್ನಾಗಿಸದೆ ಆಡಳಿತ ಭಾಷೆಯನ್ನಾಗಿಸುವ ಪ್ರಯತ್ನಗಳಾದವು. ಭಾರತದ ಸಂವಿಧಾನದಲ್ಲಿ ಆಡಳಿತ ಭಾಷೆಯಾಗಿ ಹಿಂದೀ ಸ್ಥಾಪಿತವಾದ ದಿನ ಸೆಪ್ಟೆಂಬರ್ 14, 1949ರಂದು. ಹಾಗಾಗಿ ಪ್ರತಿವರ್ಷ ಸೆಪ್ಟೆಂಬರ್ 14ನ್ನು ಭಾರತದ ಎಲ್ಲಾ ಕೇಂದ್ರಸರ್ಕಾರಿ ಕಛೇರಿಗಳಲ್ಲಿ ಹಿಂದೀ ದಿವಸ್ ಎಂದು ಆಚರಿಸುವ ಪರಿಪಾಠ ಆರಂಭವಾಯಿತು.

ಹಿಂದೀಯೇತರರಿಗೆ ವಾಕರಿಕೆ ತಂದ ಹಿಂದೀ ಹೇರಿಕೆ-Hindi should not be thrust on anyone

ಇದೀಗ ಅರವತ್ತು ವರ್ಷಗಳ ನಂತರ, ಭಾರತದ ಭಾಷಾನೀತಿಯಿಂದಾಗಿ ಇಂದು ಹಿಂದೀಯೇತರ ನಾಡುಗಳ ಜನರ ಬದುಕಿನ ಮೇಲಾಗಿರುವ ಪರಿಣಾಮಗಳನ್ನು ಪರಾಮರ್ಶಿಸಿದಾಗ, ಹಿಂದೀಯನ್ನು ಭಾರತದ ಆಡಳಿತ ಭಾಷೆಯನ್ನಾಗಿಸಲು ಹೇಳಲಾದ ಯಾವ ಉದ್ದೇಶವನ್ನೂ ಈಡೆರಿಸಿಕೊಳ್ಳಲು ಆಗಿಲ್ಲದಿರುವುದು ಕಾಣುತ್ತದೆ. ತನ್ನದೇ ಏಕಸ್ವಾಮ್ಯ ಇದ್ದ ಕಾರಣದಿಂದಾಗಿ ದೂರದರ್ಶನ ಮತ್ತು ಆಕಾಶವಾಣಿಗಳನ್ನು ಹಿಂದೀ ಪ್ರಚಾರಕ್ಕೆ ಕೇಂದ್ರ ಸರ್ಕಾರವು ಬಳಸಿ ಹಿಂದೀಯೇತರರಿಗೆ ತಮ್ಮ ತಾಯ್ನುಡಿಯಲ್ಲಿಯೇ ಮನರಂಜನೆ ಸಿಗದಂತೆ ಮಾಡಿ ಹಿಂದೀ ಚಿತ್ರಗಳಿಗೆ ಮಾರುಕಟ್ಟೆ ಕಟ್ಟಿಕೊಟ್ಟಿತು. ಇದರ ಪರಿಣಾಮವಾಗಿ ಒಂದೊಮ್ಮೆ ಸಮೃದ್ಧವಾಗಿದ್ದ ಮರಾಠಿ, ಪಂಜಾಬಿ, ಗುಜರಾತಿ ಮೊದಲಾದ ಚಿತ್ರರಂಗಗಳು ತತ್ತರಿಸುವಂತಾಯಿತು.

ಇನ್ನು ಕೇಂದ್ರ ಸರ್ಕಾರಿ ನೌಕರಿಯ ಅವಕಾಶಗಳಿಗೆ ಬಂದಲ್ಲಿ ಭಾರತೀಯ ರೈಲ್ವೇಯೂ ಸೇರಿದಂತೆ ಎಲ್ಲಾ ಕೇಂದ್ರ ಸರ್ಕಾರಿ ಸಂಸ್ಥೆಗಳೂ ಹಿಂದೀಯೇತರರಿಗೆ ಹಿಂದೀ ಹೇರುವ ಸಾಧನಗಳಾದವು. ಬ್ಯಾಂಕುಗಳಲ್ಲಿ ಕೆಲಸ ಬೇಕೆಂದರೆ ಎಸೆಸ್ಸೆಲ್ಸಿ ಅಂಕಪಟ್ಟಿಯಲ್ಲಿ ಹಿಂದೀ ಎಂದು ಬರೆದಿರಬೇಕು ಅನ್ನಲಾಯಿತು. ರೈಲ್ವೇಯ ಡಿ ದರ್ಜೆ ಹುದ್ದೆಗೆ ಅರ್ಜಿ ಸಲ್ಲಿಸಲು ಹಿಂದೀಯಲ್ಲೇ ಬರೆಯಬೇಕು ಎನ್ನಲಾಯಿತು. ಭೂಸೇನಾ ನೇಮಕಾತಿಗೆ ಬರುವ ಅಭ್ಯರ್ಥಿಗಳ ಜನನ ಪ್ರಮಾಣಪತ್ರಗಳು ಕನ್ನಡದಲ್ಲಿವೆ, ಹಿಂದೀ/ ಇಂಗ್ಲಿಷುಗಳಲ್ಲಿಲ್ಲ ಎಂದು ವಾಪಸ್ಸು ಕಳಿಸಿದ ಘಟನೆಗಳೂ ನಡೆದವು. ತ್ರಿಭಾಷಾಸೂತ್ರದ ಮೂಲಕ ಕನ್ನಡದ ಮಕ್ಕಳ ಕಲಿಕೆಯಲ್ಲೂ ಹಿಂದೀಯನ್ನು ಕಡ್ಡಾಯ ಮಾಡಲಾಯಿತು. ನಮ್ಮ ಜನಪ್ರತಿನಿಧಿಗಳು ಸಂಸತ್ತಿನಲ್ಲಿ ಕನ್ನಡದಲ್ಲಿ ಮಾತಾಡಬೇಕಾದರೆ ಸಭಾಧ್ಯಕ್ಷರ ಅನುಮತಿ ಪಡೆಯಬೇಕೆನ್ನಲಾಯಿತು. ನಮ್ಮ ರಾಜ್ಯದ ಹೈಕೋರ್ಟಿನ ಭಾಷೆ ಹಿಂದೀ/ ಇಂಗ್ಲೀಷ್ ಎನ್ನಲಾಯಿತು. ಇಂದು ಕರ್ನಾಟಕದಲ್ಲೇ ಕನ್ನಡದಲ್ಲಿ ತೀರ್ಪು ಕೊಡುವ ನ್ಯಾಯಾಧೀಶರುಗಳನ್ನು ಸನ್ಮಾನಿಸಬೇಕಾದ ದುಸ್ಥಿತಿಗೆ ಈ ಭಾಷಾನೀತಿಯೇ ಪರೋಕ್ಷವಾಗಿ ಕಾರಣವಾಗಿದೆ ಎಂದರೆ ತಪ್ಪಾಗಲಾರದು.

ಇದರ ಪರಿಣಾಮವಾಗಿ ವೈವಿಧ್ಯತೆಯಲ್ಲಿ ಏಕತೆ ಎನ್ನುವುದು ಬರೀ ಬಾಯಿಮಾತಿಗೆ ಮಾತ್ರಾ ಎನ್ನುವುದು ಗೋಚರವಾಗುತ್ತಿದೆ. ಏಕೆಂದರೆ ಭಾರತದ ಭಾಷಾನೀತಿಯು ನೀಡುತ್ತಿರುವ ಸಂದೇಶವೇನೆಂದರೆ ನಿಮ್ಮ ನಿಮ್ಮ ಭಾಷೆಗಳನ್ನು ನಿಮ್ಮ ಮನೆಯಲ್ಲಿಟ್ಟುಕೊಳ್ಳಿ, ಬೀದಿಗೆ ಬಂದರೆ ಹಿಂದೀಯಲ್ಲಿ ವ್ಯವಹರಿಸಿ ಎನ್ನುವುದಾಗಿದೆ. ಹಿಂದೀ ಭಾಷೆಗೆ ಭಾರತದ ಕೇಂದ್ರಸರ್ಕಾರದ ಆಡಳಿತ ಭಾಷೆ ಎಂದು ನೀಡಿರುವ ಪಟ್ಟವು ಇಡೀ ಭಾರತದ ಭೌಗೋಳಿಕ ಅಸಮಾನತೆಗೆ, ಹಿಂದೀಯೇತರರನ್ನು ಎರಡನೇ ದರ್ಜೆಯ ಪ್ರಜೆಗಳನ್ನಾಗಿಸುವುದಕ್ಕೆ ಕಾರಣವಾಗಿದೆ ಎನ್ನುವುದನ್ನು ಕಣ್ತೆರೆದು ನೋಡಿ ಅರಿಯಬೇಕಾಗಿದೆ. ಇದಿಷ್ಟೇ ಅಲ್ಲದೆ ಈ ಎಲ್ಲಾ ನಡೆಯುತ್ತಿರುವುದು ಜನಸಂಖ್ಯಾ ಸ್ಫೋಟದಿಂದ ನರಳುತ್ತಿರುವ ಹಿಂದೀ ಪ್ರದೇಶದ ಜನರನ್ನು (ಬಿಹಾರ್ 1102, ಉತ್ತರಪ್ರದೇಶ 828 ಜನ/ ಚ.ಕಿ) ಕರ್ನಾಟಕದಂತಹ ಜನಸಂಖ್ಯೆ ಕಡಿಮೆಯಿರುವ ನಾಡುಗಳಿಗೆ (319 ಜನ/ಚ.ಕೀ) ವಲಸೆ ಮಾಡಿಸಲು ಭಾರತದ ಭಾಷಾನೀತಿ ನೀರೆರೆಯುತ್ತಿರುವುದು ಕಾಣುತ್ತಿದೆ. ಆ ಮೂಲಕ ಅನೇಕ ಹಿಂದೀಯೇತರ ಪ್ರದೇಶಗಳ ಜನಲಕ್ಷಣವನ್ನು ಬದಲಾಯಿಸುವ, ಅನೇಕ ಸಂಸ್ಕೃತಿಗಳನ್ನು ಮಣ್ಣುಗೂಡಿಸುವ ಪ್ರಯತ್ನಗಳು ನಡೆಯುತ್ತಿರುವುದನ್ನು ಕಾಣಬಹುದಾಗಿದೆ.

ಒಂದೆಡೆ ಭಾರತದೇಶದಲ್ಲಿ ಪ್ರತಿಯೊಬ್ಬ ನಾಗರೀಕನೂ ಸಮಾನ. ದೊರೆ ಆಳು ಎನ್ನುವ ಬೇಧವಿಲ್ಲದೆ ಎಲ್ಲರಿಗೂ ಸಮಾನ ಹಕ್ಕುಗಳಿವೆ ಅನ್ನುವ ಭಾರತವು ಮತ್ತೊಂದೆಡೆ ಹಿಂದೀಭಾಷೆಯ ಜನರಿಗೆ ದೇಶದ ಯಾವಮೂಲೆಗೆ ಹೋದರೂ ತೊಂದರೆಯಾಗದಂತಹ ವ್ಯವಸ್ಥೆಯನ್ನು ಕಟ್ಟಿಕೊಡಲು ಪಣತೊಟ್ಟಿರುವುದು ವೈರುಧ್ಯವೆನ್ನಿಸುತ್ತದೆ. ಕನ್ನಡನಾಡಿಗೆ ವಲಸೆ ಬಂದ ಹಿಂದೀಯವನಿಗೆ ಇಲ್ಲಿನ ಮೆಟ್ರೋ ರೈಲಿನಲ್ಲಿ, ರೈಲು, ಬಸ್ಸುಗಳಲ್ಲಿ, ವಿಮಾನ ನಿಲ್ದಾಣದಲ್ಲಿ, ಪೋಸ್ಟ್‌ಆಫೀಸ್, ಪಾಸ್‌ಪೋರ್ಟ್ ಕಛೇರಿಯೇ ಮೊದಲಾದ ಕಡೆಗಳಲ್ಲಿ ಹಿಂದೀಯಲ್ಲಿಯೇ ಎಲ್ಲಾ ಸೇವೆಯ ಸೌಕರ್ಯಗಳನ್ನೂ ಕಾಯ್ದೆ ಕಾನೂನುಗಳ ಮೂಲಕ ಒದಗಿಸಿಕೊಡುತ್ತದೆ. ಭಾರತೀಯರೆಲ್ಲಾ ಒಂದೇ ಎನ್ನುವ, ಸಮಾನತೆಯೇ ಜೀವಾಳ ಎನ್ನುವ, ವೈವಿಧ್ಯತೆಯಲ್ಲಿ ಏಕತೆ ಎನ್ನುವ ಭಾರತಸರ್ಕಾರವು ಕನ್ನಡದವರಿಗೆ ನವದೆಹಲಿಯ ಮೆಟ್ರೋ ರೈಲಿನಲ್ಲಿ, ಕೊಲ್ಕೊತ್ತಾದ ಪೋಸ್ಟ್‌ಆಫೀಸಿನಲ್ಲಿ, ಮುಂಬೈಯ ಪಾಸ್‌ಪೋರ್ಟ್ ಕಛೇರಿಯಲ್ಲಿ ಕನ್ನಡದಲ್ಲಿ ಸೇವೆ ಒದಗಿಸುತ್ತದೇನು?

ಭಾರತದ ಒಗ್ಗಟ್ಟಿಗೆ ಒಂದೇ ಭಾಷೆ ಇರಬೇಕೆ?- Do we need one language for unity

ಸಂವಿಧಾನದ 343ನೇ ವಿಧಿಯಿಂದ 351ನೇ ವಿಧಿಯವರೆಗೆ ಹಿಂದೀಯನ್ನು ಆಡಳಿತ ಭಾಷೆಯಾಗಿಸಿದ ಬೆನ್ನಲ್ಲೇ ಆಡಳಿತ ಭಾಷಾ ಇಲಾಖೆ, ಆಡಳಿತ ಭಾಷಾ ನಿಯಮ, ಆಡಳಿತ ಭಾಷಾ ಕಾಯ್ದೆಗಳು ಜನ್ಮತಳೆದವು. ಇದರ ಅಂಗವಾಗಿ ಹಿಂದೀಯನ್ನು ಭಾರತದ ಎಲ್ಲೆಡೆ ಹರಡಲು ಒತ್ತಾಯ, ಆಮಿಷ ಮತ್ತು ವಿಶ್ವಾಸಗಳನ್ನು ಬಳಸುವುದು ಭಾರತ ಸರ್ಕಾರದ ನೀತಿಯೆಂದು ಘೋಷಿಸಲಾಯಿತು. ದೇಶದ ಉದ್ದಗಲಕ್ಕೆ ಹಿಂದೀ ಪ್ರಚಾರಕ್ಕೆ ಕೇಂದ್ರಸರ್ಕಾರ ಮುಂದಾಯಿತು.

ಹಿಂದೀಯನ್ನು ಒಪ್ಪಿಸಲು ಹಿಂದೀ ಭಾರತದ ಸಂಪರ್ಕ ಭಾಷೆ ಎನ್ನಲಾಯಿತು. ಬಹುಮುಖ್ಯವಾಗಿ ಹಿಂದೀಯನ್ನು ಆಡಳಿತ ಭಾಷೆಯಾಗಿಸಲು ಕೊಡಲಾದ ಕಾರಣ ಅದು ಭಾರತೀಯ ಭಾಷೆಯೆನ್ನುವುದು ಮತ್ತು ಭಾರತದಲ್ಲಿ ಹೆಚ್ಚು ಜನರಿಗೆ ಅರ್ಥವಾಗುತ್ತದೆ ಎನ್ನುವುದು. ಹಿಂದೀಯನ್ನು ಒಪ್ಪಿಸಲು ಬಳಸಿದ ಕಾರಣಗಳು ಮುಂದಾಲೋಚನೆ, ಪರಿಣಾಮಗಳ ಬಗ್ಗೆ ಆಲೋಚನೆ ಮತ್ತು ವಾಸ್ತವಗಳ ಅರಿವಿಗಿಂತಾ ಹೆಚ್ಚಾಗಿ ಭಾವುಕತೆಯನ್ನು ಆಧರಿಸಿತ್ತು ಎಂದರೆ ತಪ್ಪಾಗಲಾರದು.

ಭಾರತ ಪರಾಧೀನವಾಗಲು ಒಗ್ಗಟ್ಟಿಲ್ಲದ್ದು ಕಾರಣ. ಒಗ್ಗಟ್ಟಿಗೆ ಒಂದೇ ಭಾಷೆ ಇರುವುದು ಅತ್ಯಗತ್ಯ, ರಾಜ್ಯರಾಜ್ಯಗಳ ನಡುವಿನ ಸಂಪರ್ಕಕ್ಕೆ, ಕೇಂದ್ರ-ರಾಜ್ಯಗಳ ಸಂಪರ್ಕಕ್ಕೆ ಒಂದು ಭಾರತೀಯ ಭಾಷೆಯೇ ಇರಬೇಕು, ಇದಕ್ಕೆ ಸೂಕ್ತವಾದ ಭಾಷೆ ಹಿಂದೀ, ಸ್ವಾತಂತ್ರ ಹೋರಾಟದಲ್ಲಿ ಜನರ ಭಾಷೆ ಹಿಂದೀಯಾಗಿತ್ತು, ಹಾಗಾಗಿ ಹಿಂದೀಯೆಂದರೆ ದೇಶಪ್ರೇಮದ ಸಂಕೇತ, ಹಿಂದೀಯೆಂದರೆ ಭಾರತದ ಒಗ್ಗಟ್ಟಿನ ಸಾಧನ, ಪ್ರಪಂಚಕ್ಕೆ ತೋರಿಸಿಕೊಳ್ಳಲು ದೇಶಕ್ಕೆ ಒಂದು ಭಾಷೆ ಇರಬೇಕು ಎಂಬ ಅನಿಸಿಕೆಗಳು ಇಂತಹ ನಿಲುವಿಗೆ ಕಾರಣವಾಯಿತು.

ಈ ಅನಿಸಿಕೆಗಳು ಕಾಂಗ್ರೆಸ್ಸಿನ ಮಹಾತ್ಮಾಗಾಂಧಿಯವರಂತಹ ರಾಷ್ಟ್ರೀಯ ನಾಯಕರುಗಳಿಗೇ ಇದ್ದುದ್ದರಿಂದ ಅವರ ಅನುಯಾಯಿಗಳೆಲ್ಲಾ ಕಣ್ಣುಮುಚ್ಚಿ ತಮ್ಮ ತಮ್ಮ ರಾಜ್ಯಗಳಲ್ಲಿ ಹಿಂದೀ ಜಾರಿಗೆ ಪಣತೊಟ್ಟರು. ಇಂದಿಗೂ ಭಾರತದ ರಾಷ್ಟ್ರೀಯ ಪಕ್ಷಗಳ ಆಶಯವು ‘ಒಂದು ದೇಶ, ಒಂದು ಭಾಷೆ ಎನ್ನುವಂತೆಯೇ ಇದೆಯೆಂದರೆ ಅಚ್ಚರಿಯಾಗುತ್ತದೆ.