Category Archives: ಎಸ್ಕೆ ಶಾಮಸುಂದರ

ಪ್ರತಿಭಾವಂತರಿಗೆ ಬೇಡವಾದ ಗುರುಸ್ಥಾನ- None of them want to become teachers

0507 None Of Them Want To Become Teachers

ಕರ್ನಾಟಕ ಎಸ್ ಎಸ್ ಎಲ್ ಸಿ ಮತ್ತು ಎರಡನೇ ಪದವಿ ಪೂರ್ವ ಪರೀಕ್ಷೆಗಳ ಫಲಿತಾಂಶಗಳು ಇದೀಗ ಲಭ್ಯವಾಗಿವೆ. ನಮ್ಮ ಹುಡುಗರಿಗೆ ಮತ್ತು ಹುಡುಗಿಯರಿಗೆ ಅವರವರ ಪ್ರಯತ್ನ ಮತ್ತು ಶ್ರದ್ಧೆಗೆ ತಕ್ಕಂತೆ ಅಂಕಗಳು ಉದುರಿವೆ. ಪಿಯುಸಿ ಸೇರಬಯಸುವ ವಿದ್ಯಾರ್ಥಿಗಳ ಕಾಲೇಜು ಪ್ರವೇಶ ಧಾವಂತ ಆರಂಭವಾಗಿದೆ.

ಸಿಇಟಿ, ಕಾಮೆಡ್ ಕೆ ಗೇಟುಗಳನ್ನು ದಾಟಿ ಇಂಜಿನಿಯರಿಂಗ್ ಅಥವಾ ಮೆಡಿಕಲ್ ಅಥವಾ ಡೆಂಟಲ್ ಕಾಲೇಜಿನಲ್ಲಿ ಸೀಟು ಗಿಟ್ಟಿಸುವುದು ಎರಡನೇ ಪಿಯುಸಿಯಲ್ಲಿ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳ ಮೊದಲ ಆದ್ಯತೆ. ಮೆರಿಟ್ನಲ್ಲಿ ಪಾಸಾದವರಿಗೆ ಸೀಟು ಮತ್ತು ಅವರು ಬಯಸಿದ ಕಾಲೇಜು ಆಯ್ಕೆ ಸುಸೂತ್ರ. ಮೆರಿಟ್ ಇಲ್ಲದಿದ್ದರೂ ತಾಂತ್ರಿಕ ಕೋರ್ಸುಗಳನ್ನು ತೆಗೆದುಕೊಳ್ಳಲೇಬೇಕೆಂದು ಪಣ ಮತ್ತು ಹಠ ತೊಟ್ಟ ವಿದ್ಯಾರ್ಥಿಗಳು ಹಾಗೂ ಅವರ ತಂದೆ ತಾಯಿಯರಿಗೆ ಮಾತ್ರ ಡೊನೇಷನ್, ಶಿಕ್ಷಣ ಶುಲ್ಕ, ಹಾಸ್ಟೆಲ್ ಶುಲ್ಕ ಮತ್ತು ಐದು ವರ್ಷಗಳ ಅವಧಿಗೆ ಮಕ್ಕಳ ಖರ್ಚುವೆಚ್ಚಕ್ಕೆ ಹಣ ಹೊಂದಿಸುವ ಯೋಚನೆ.

ಫೇಲು ಆದ ಮಕ್ಕಳಿಗೆ ಆದ್ಯತೆಗಳು ಹೆಚ್ಚಿಲ್ಲ. ಇದೇ ಜೂನ್ 28ರಿಂದ ಆರಂಭವಾಗುವ ಸಪ್ಲಿಮೆಂಟರಿ ಪರೀಕ್ಷೆಗೆ ಮೈ ಬಗ್ಗಿಸಿ ಓದುವುದು ಮೊದಲ ಆಯ್ಕೆ. ತಮ್ಮ ಸಾಮರ್ಥ್ಯಕ್ಕೆ ತಕ್ಕ ಅಂಕಗಳು ಬಂದಿಲ್ಲ ಎಂದು ಭಾವಿಸುವವರು ಮರು ಎಣಿಕೆ, ಮರುಮೌಲ್ಯಮಾಪನಕ್ಕೆ ಅರ್ಜಿ ಹಾಕುವುದು ಎರಡನೇ ಆಯ್ಕೆ.

ಅತಿಹೆಚ್ಚು ಅಂಕಗಳಿಸಿ ತಮ್ಮ ಕಾಲೇಜು ಮತ್ತು ಊರಿಗೆ ಕೀರ್ತಿ ಹಾಗೂ ತಂದೆತಾಯಿರ ಶ್ರಮಕ್ಕೆ ಸಾರ್ಥಕತೆ ತಂದುಕೊಟ್ಟ ಪ್ರತಿಭಾವಂತ ವಿದ್ಯಾರ್ಥಿಗಳ ಸಂಭ್ರಮಾಚರಣೆ ಈಗಾಗಲೇ ಮುಗಿದಿದೆ. ಇದೊಂದು ತುಂಬಾ ಚಿಕ್ಕ ಗುಂಪು. ಈ ಗುಂಪಿನ ಸದಸ್ಯರಿಗೆ ಈಗಿಂದಲೇ ಮುಂದಿನ ವ್ಯಾಸಂಗದತ್ತ ಗಮನ. ಅದು ಅವರ ಜಾಯಮಾನವಾಗಿರುತ್ತದೆ.

ಅತಿಹೆಚ್ಚು ಅಂಕಗಳಿಸಿದ ವಿದ್ಯಾರ್ಥಿ, ವಿದ್ಯಾರ್ಥಿನಿಯರ ಸಂದರ್ಶನಗಳು ನಾಡಿನ ಅನೇಕ ಪತ್ರಿಕೆಗಳಲ್ಲಿ ಇಂದು ಪ್ರಕಟಗೊಂಡಿವೆ. ‘ನೀವು ಮುಂದೆ ಏನು ಆಗಬೇಕು ಎಂದುಕೊಂಡಿದ್ದೀರಿ’ ಎಂಬ ವರದಿಗಾರರ ಪ್ರಶ್ನೆಗಳಿಗೆ ಅವರೆಲ್ಲರ ಉತ್ತರಗಳು ಬಹುತೇಕ ಒಂದೇ ದಿಕ್ಕಿನಲ್ಲಿವೆ. nothing less than a doctor ಎಂಬ ಉತ್ತರ ಒಬ್ಬರಿಂದ, ಇಂಜಿನಿಯರಿಂಗ್ ಆಗುತ್ತೀನಿ, ಅಕೌಂಟೆನ್ಸಿ ವ್ಯಾಸಂಗ ಮಾಡಿ ಚಾರ್ಟೆಡ್ ಅಕೌಂಟೆಂಟ್ ಆಗುತ್ತೀನಿ, ಅತ್ಯುತ್ತಮ ಶಿಕ್ಷಣ ನೀಡುವ ಲಾ ಕಾಲೇಜಿಗೆ ಸೇರಿ ಮುಂದೆ ಕಾರ್ಪೋರೇಟ್ ಅಡ್ವೋಕೇಟ್ ಆಗುತ್ತೀನಿ ಎಂಬಿತ್ಯಾದಿ ಉತ್ತರಗಳು ಪ್ರತಿಭಾವಂತರಿಂದ ಬಂದಿವೆ. ಈ ಪ್ರತಿಕ್ರಿಯೆಗಳಲ್ಲಿ ಹೊಸದು ಎನ್ನುವಂಥದ್ದೇನೂ ಕಾಣಿಸುವುದಿಲ್ಲ. ಸಾಧನೆಗೈದ ವಿದ್ಯಾರ್ಥಿ ವೃಂದದಿಂದ ಬರುವ ಉತ್ತರಗಳು ಪ್ರತಿವರ್ಷ ಹೀಗೇ ಇರುತ್ತವೆ.

ನಮ್ಮ ಸಮಾಜ ಗಮನಿಸಬೇಕಾದ ಸಂಗತಿಯೆಂದರೆ ಇಲ್ಲಿ ಯಾವೊಬ್ಬ ವಿದ್ಯಾರ್ಥಿಯೂ ತಾನು ಹೆಚ್ಚು ಓದಿ, ಕಲಿತು, ಮುಂದೊಂದುದಿನ ಉಪಾಧ್ಯಾಯ ವೃತ್ತಿಯನ್ನು ಆರಿಸಿಕೊಳ್ಳುತ್ತೇನೆ ಎಂದು ಹೇಳುವುದಿಲ್ಲ. ‘ನಿಮ್ಮ ಸಾಧನೆಗೆ ಪ್ರೇರಣೆ ಯಾರು’ ಎಂಬ ಪ್ರಶ್ನೆಗೆ ತಾಯಿ ತಂದೆ ಅಥವಾ ಪಾಠಮಾಡಿದ ಗುರುವೃಂದ ಎಂದು ಹೇಳುತ್ತಾರೆಯೇ ವಿನಾ ತಮಗೆ ಆದರ್ಶಪ್ರಾಯವಾದ ಗುರುಗಳು ತುಳಿದ ಹಾದಿಯಲ್ಲಿ ನಡೆಯಲು ಅವರಾರೂ ಸಿದ್ಧರಿಲ್ಲ.

ಹರಿದ ಪಂಚೆ, ತೇಪೆ ಹಾಕಿದ ಜುಬ್ಬ, ತೂತು ಬಿದ್ದಿರುವ ಹಳೆಕೋಟು ಧರಿಸಿದ ಮೇಷ್ಟುಗಳ ಕಾಲ ಈಗೀಗ ಮರೆಯಾಗುತ್ತಿದೆ. ಶಾಲೆ ಕಾಲೇಜುಗಳ ಮೇಷ್ಟು ಮತ್ತು ಉಪನ್ಯಾಸಕರುಗಳಿಗೆ ಈಗ ಕೈತುಂಬ ಸಂಬಳ ಬರುತ್ತದೆ. ಕಳೆದ ವರ್ಷ ಯುಜಿಸಿ ಮಾಡಿರುವ ವೇತನ ವಿಮರ್ಶೆಯಿಂದ ಕಾಲೇಜು ಉಪನ್ಯಾಸಕರ ಸಂಬಳ 13,000 ರೂ.ಗಳಷ್ಟು ಹೆಚ್ಚಾಗಿದೆ. ಜಿಲ್ಲಾಧಿಕಾರಿಗಿಂತ ಹೆಚ್ಚಿಗೆ ಸಂಬಳ ಅವರ ಕೈಸೇರುತ್ತದೆ. ಮೇಷ್ಟ್ರ ನೌಕರಿಗೆ ಸಂಬಳ ಕಡಿಮೆ ಎಂಬ ಕೂಗು ಈಗಿಲ್ಲವಾದರೂ ನಮ್ಮ ಪ್ರತಿಭಾವಂತಗಳಿಗೆ ಈ ನೌಕರಿ, ಈ ವೃತ್ತಿ, ಈ ಬಗೆಯ ಬದುಕು ಇಷ್ಟವಿಲ್ಲ.

ಪಾಠ ಮಾಡುತ್ತೇನೆ, ಒಳ್ಳೆ ವಿದ್ಯಾರ್ಥಿಗಳನ್ನು ತಯ್ಯಾರು ಮಾಡುತ್ತೇನೆ ಎಂಬ ಕನಸನ್ನು ಕಟ್ಟಿಕೊಂಡ ಒಬ್ಬೇಒಬ್ಬ ಪ್ರತಿಭಾವಂತ ವಿದ್ಯಾರ್ಥಿ ನನ್ನ ಕಣ್ಣಿಗೆ ಬಿದ್ದಿಲ್ಲ.

Advertisements

ಅನಿವಾಸಿ ಕನ್ನಡಿಗರ ಪ್ರೀತಿಯ ನಾಗತಿ- Nagathihalli the darling of nri kannadigas

1217 Nagathihalli The Darling Of Nri Kannadigas

ಹಾಂಗ್ ಕಾಂಗ್ ಹಗರಣ ನಡೆದ ಒಂದು ವಾರದ ನಂತರ ಪ್ಯಾರಿಸ್ ಪ್ರಣಯ ಖ್ಯಾತಿಯ ನಿರ್ದೇಶಕ ನಾಗತಿಹಳ್ಳಿ ಬೆಂಗಳೂರಿನಲ್ಲಿ ಡಿಸೆಂಬರ್ 17, ಗುರುವಾರ ಸುದ್ದಿಗೋಷ್ಠಿ ಕರೆದಿದ್ದರು. ಸ್ಥಳ : ಬೆಂಗಳೂರು ರೈಲು ನಿಲ್ದಾಣದ ರಸ್ತೆಯಲ್ಲಿರುವ ತ್ರೀ ಸ್ಟಾರ್ ಹೋಟೆಲ್ ಬೆಲ್. ತೋಂಟದಪ್ಪನ ಛತ್ರದ ಪಕ್ಕ.

ಹಾಂಗ್ ಕಾಂಗಿನಿಂದ ಹಾರಿಬರುತ್ತಿರುವ ವಾಯುಮಾರ್ಗದಲ್ಲೇ ತಮ್ಮ ವಿರುದ್ಧದ ಗುರುತರ ಆರೋಪಗಳ ಗಾರ್ಬೇಜುಗಳನ್ನು ಕ್ಯಾರಿಬ್ಯಾಗಿನಲ್ಲಿ ತುರುಕಿಕೊಂಡೇ ಅವರು ಬೆಂಗಳೂರು ಅಂತರರಾಷ್ಟೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದಿದ್ದರು. ಬಂದ ಕೂಡಲೇ ಅವರ ಪ್ರೀತಿಯ ಆಯ್ದ ಕೆಲವು ಟಿವಿ ಚಾನಲ್ಲುಗಳಿಗೆ ಗಡಿಬಿಡಿ ಸಂದರ್ಶನ ನೀಡಿ ಐಂದ್ರಿತಾ ಅವರ ಆರೋಪಗಳನ್ನು ಅಲ್ಲಗೆಳೆದದ್ದು ಬಿಟ್ಟರೆ ಬೇರಿನ್ನಾವ ಪತ್ರಕರ್ತರನ್ನು ಅವರು ಹತ್ತಿರ ಬಿಟ್ಟುಕೊಂಡಿರಲಿಲ್ಲ.

ನಾಗತಿಯವರನ್ನು ಖುದ್ದಾಗಿ ಕಂಡು, ಅಥವಾ ಫೋನು ಮಾಡಿ ಮುದ್ದಾಂ ವಿವರಗಳನ್ನು ಪಡೆದು ಬರೆಯಬೇಕೆಂದು ಪ್ರಯತ್ನಿಸಿದ ಅನೇಕ ವರದಿಗಾರರ ಬ್ರದರ್ ಗಳಿಗೆ ಅವರು ಗಪ್ ಚುಪ್ ಆಗಿದ್ದರು. ಆದರೆ, ಸುವರ್ಣ ಟಿವಿ ಚಾನಲ್ ಮತ್ತು ಟಿವಿ 9 ಚಾನಲ್ಲಿಗೆ ಮಾತ್ರ ಅವರು ಅದು ಹೇಗೋ ಹೋಗಿ ಐಟಂ ಕೊಟ್ಟಿದ್ದು ಕನ್ನಡದ ಇತರ ಐದಾರು ಚಾನಲ್ಲುಗಳ ಕ್ಯಾಮರಾ ಕಣ್ಣುಗಳನ್ನು ಸೆಪಿಯಾ ಟೋನ್ ಆಗಿಸಿದ್ದವು.

ಟಿವಿ ಮಾಧ್ಯಮದ ಗತಿಯೇ ಹೀಗಿರುವಾಗ ಇನ್ನು ಮುದ್ರಣ ಮಾಧ್ಯಮಗಳ ಪಾಡು ವರ್ಣಿಸಬೇಕಿಲ್ಲ. ನನ್ನ ಅನೇಕ ಸ್ನೇಹಿತರು ಅಂದು ದೂರವಾಣಿ ಕರೆಮಾಡಿ ‘ನಾಗತಿ ಫೋನು ಎತ್ತುತ್ತಿಲ್ಲ ಯಾಕೆ ಶಾಮ್ ‘ ಎಂದು ವಿಚಾರಿಸಿದ್ದುಂಟು. ‘ನನಗೆ ಗೊತ್ತಿಲ್ಲಪ್ಪ, ಆಗಸ್ಟ್ 15ರಂದು ಅವರು ಜೆಎಸ್ ಎಸ್ ಸಭಾಂಗಣದಲ್ಲಿ ಏರ್ಪಡಿಸುವ ಪುಸ್ತಕ ಬಿಡುಗಡೆ ಮತ್ತು ನಾಗತಿಹಳ್ಳಿಯಲ್ಲಿ ಏರ್ಪಡಿಸಿದ್ದ nagatihalli village cultural festival ಆಹ್ವಾನ ಪತ್ರಿಕೆ ಬಿಟ್ಟರೆ ದಟ್ಸ್ ಕನ್ನಡ ಡಾಟ್ ಕಾಂ ತಾಣವನ್ನು ಅವರು ಮೂಸಿಯೂ ನೋಡುವುದಿಲ್ಲ’ ಎಂದು ಹೇಳಿ ಸುಮ್ಮನಾಗಿಸಿದ್ದೆ.

ತಮ್ಮ ಅನೇಕಾನೇಕ ಮುದ್ರಣ ಪತ್ರಕರ್ತ ಮಿತ್ರರನ್ನು ಮಾತನಾಡಿಸಲಾಗಲಿಲ್ಲವಲ್ಲ ಮತ್ತು ಅವರ ಕರೆಗಳನ್ನು ಎತ್ತಲಾಗಿಲ್ಲವಲ್ಲ ಎಂಬ ವ್ಯಥೆ ನಾಗತಿಯವರನ್ನು ಕಾಡುತ್ತಿತ್ತು. ಇದರ ಜತೆಗೆ ಉದಯವಾಣಿ ಪತ್ರಿಕೆಯವರು ಡಿಸೆಂಬರ್ 16ರ ಸಂಚಿಕೆಯಲ್ಲಿ ‘ನಾಗತಿಗೆ ಈ ಗತಿ ಬರಬಾರದಿತ್ತು’ ಎಂಬ ಹೆಂಡ್ಡಿಗ್ ನಲ್ಲಿ ‘ತಮ್ಮ ಚಪ್ಪಡಿ ತಾವೇ ಎಳೆದು ಕೊಂಡರು’ ಎಂಬ ವಿಚಾರವನ್ನು ಸವಿಸ್ತಾರವಾಗಿ ವರ್ಣಿಸಿದ್ದರು. ಇನ್ನು ಲೇಟು ಮಾಡಿದರೆ ಹೆಚ್ಚು ಅಪರಾಧವಾದೀತು ಎಂದು ಎಚ್ಚೆತ್ತುಕೊಂಡ ನಾಗತಿ ಸುದ್ದಿಗೋಷ್ಠಿಗೆ ಮನಸೋತರು.

ನೂರು ಜನ್ಮಕು ಚಿತ್ರಕ್ಕಾಗಿ ಅಲ್ಲದಿದ್ದರೂ ಕೇವಲ ಪತ್ರಿಕಾ ಮಿತ್ರರೊಂದಿಗೆ ಸೌಹಾರ್ದ ಸಂಬಂಧಗಳನ್ನು ಉಳಿಸಿಬೆಳೆಸಬೇಕೆಂಬ ದೃಷ್ಟಿಕೋನದಿಂದ ಇವತ್ತಿನ ಸುದ್ದಿಗೋಷ್ಠಿಗೆ ಎಲ್ಲಾ ಪತ್ರಿಕೆಯ ವರದಿಗಾರರನ್ನು ನಾಗತಿ ಆಹ್ವಾನಿಸಿದ್ದರು. ಅವರ ಪಟ್ಟಿಯಲ್ಲಿ ಅಂತರ್ಜಾಲ ತಾಣಗಳು ಇರಲಿಲ್ಲ. ಆದರೆ, ನಾಗತಿ ಎಂದರೆ ಡೆಟ್ರಾಯಿಟ್, ವಾಷಿಂಗ್ಟನ್, ಸ್ಯಾನ್ ಫ್ರಾನ್ಸಿಸ್ಕೊ, ಲಂಡನ್, ಸಿಂಗಾಪುರ, ದುಬೈ, ಏಶಿಯಾ ಪೆಸಿಫಿಕ್ ಮುಂತಾದ ಅಂತಾರಾಷ್ಟ್ರೀಯಮಟ್ಟದ ನಗರಗಳಲ್ಲಿ ನೆಲೆಸಿರುವ ಕನ್ನಡಿಗರಿಗೆ ತುಂಬಾ ಪ್ರೀತಿ. ಹಾಗಾಗಿ, ಅನಿವಾಸಿ ಕನ್ನಡ ಬಾಂಧವರಿಗೆಲ್ಲ ಸುದ್ದಿ ಮುಟ್ಟಿಸುವ ಕಾಯಕವನ್ನೇ ಅರ್ಧ ಕೈಲಾಸ ಮಾಡಿಕೊಂಡಿರುವ ನಾನು, ಒಬ್ಬ ಆಸಾಮಿಯನ್ನು ತೋಂಟದಪ್ಪ ಛತ್ರಕ್ಕೆ ಛೂ ಬಿಟ್ಟಿದ್ದೆ….

ಅಮೆರಿಕಾದ ಕನ್ನಡಕಿಂಕರ ಕೃಷ್ಣ ಶಾಸ್ತ್ರಿ ಕಣ್ಮರೆ- Tribute to iowa krishna shastry bmsceaaa

1130 Tribute To Iowa Krishna Shastry Bmsceaaa

ಕನ್ನಡವೆನೆ ಕುಣಿದಾಡುವುದೆನ್ನದೆ ಶ್ಲೋಕಕ್ಕೆ ಅನ್ವರ್ಥನಾಮರೆನಿಸಿದ್ದ ಅನಿವಾಸಿ ಕನ್ನಡಿಗ, ಅಯೋವಾ ರಾಜ್ಯದ ಕನ್ನಡ ಕಿಂಕರ ಕೃಷ್ಣಶಾಸ್ತ್ರಿಗಳು ಇನ್ನಿಲ್ಲ.ನನಗೆ ತೀರ ತಡವಾಗಿ ಬಂದ ವರ್ತಮಾನದ ಪ್ರಕಾರ ಅವರು ಕಳೆದ 25ನೇ ತಾರೀಕು ಮಧ್ಯರಾತ್ರಿ 1.30 ಸುಮಾರಿಗೆ ಮಧ್ಯ ಅಮೆರಿಕಾದ ಅಯೋವಾ ರಾಜ್ಯದ ಸಿಡಾರ್ ಫಾಲ್ಸ್ ನಲ್ಲಿರುವ ಸ್ವಂತ ಮನೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಅವರ ನಿರ್ಗಮನದೊಂದಿಗೆ ಅಮೆರಿಕಾಗೆ ವಲಸೆ ಹೋಗಿಯೂ ಕನ್ನಡ ಭಾಷೆ, ಕರ್ನಾಟಕ ಸಂಸ್ಕೃತಿ, ಹಿಂದೂಧರ್ಮ, ಮನೋಧರ್ಮದ ಒಂದಕ್ಷರವನ್ನೂ ಬಿಡದೆ ಪಾಲಿಸಿಕೊಂಡು ಬರುತ್ತಿರುವವರ ಚಿನ್ನದಸರಪಳಿಯಲ್ಲಿ ಒಂದು ಕೊಂಡಿ ಕಳಚಿ ಬಿದ್ದಿದೆ.

ಬಿಎಂಎಸ್ ಕಾಲೇಜಿನ ಮೆಕಾನಿಕಲ್ ಇಂಜಿನಿಯರಿಂಗ್ ಪದವೀಧರರಾಗಿದ್ದ (1963) ಶಾಸ್ತ್ರಿಗಳು ಅಮೆರಿಕಾದಲ್ಲಿ 30 ವರ್ಷ ವಾಸವಾಗಿದ್ದರು. ಪ್ರಖ್ಯಾತ ಟ್ರ್ಯಾಕ್ಟರ್ ಉತ್ಪಾದನಾ ಕಾರ್ಖಾನೆ ಜಾನ್ ಡೀರ್ ಕಂಪನಿಯಲ್ಲಿ ಅವರು ಮೂರು ದಶಕಗಳ ಕಾಲ ಕೆಲಸ ಮಾಡಿದರು. ಚೀನಾದಲ್ಲಿ ಅಮೆರಿಕಾದ ಹೂಡಿಕೆ ಪರ್ವ ಆರಂಭವಾದಂತೆ ಜಾನ್ ಡೀರ್ ಕಂಪನಿ ಚೀನಾದಲ್ಲಿ ತನ್ನ ಟ್ರ್ಯಾಕ್ಟರ್ ಕಾರ್ಖಾನೆ ಆರಂಭಿಸಿತು. ಶಾಸ್ತ್ರಿಗಳು ಚೀನಾ ಘಟಕದ ಮುಖ್ಯಸ್ಥರಾಗಿ 10 ವರ್ಷ ಕೆಲಸ ಮಾಡಿದರು. ವೃದ್ಧತಾಯಿ ಮತ್ತು ಕುಟುಂಬದ ಆರೋಗ್ಯ ಕ್ಷೇಮಸಮಾಚಾರ ಮತ್ತು ಮೇಲ್ವಿಚಾರಣೆಗೆ ಅವರು ಹತ್ತು ವರ್ಷ ಸತತವಾಗಿ ಚೀನಾ ಮತ್ತು ಅಮೆರಿಕಾ ನಡುವೆ ಅಡುಗೆ ಮನೆ ಬಚ್ಚಲಮನೆ ಮನೆ ರೀತಿ ಓಡಾಡಿಕೊಂಡಿದ್ದರು.

ಉದ್ಯೋಗದ ನಿಮಿತ್ತ ಅಮೆರಿಕಾಗೆ ವಲಸೆಹೋದ ಹೊಸದರಲ್ಲೇ ಕೃಷ್ಣಶಾಸ್ತ್ರಿಗಳು ಬೆಂಗಳೂರಿನಿಂದ ತಮ್ಮ ಅಮ್ಮ ಹಾಗೂ ದುಡಿಯಲಾಗದ ಒಬ್ಬ ತಮ್ಮನನ್ನು ಕರೆದುಕೊಂಡು ಹೋಗಿದ್ದರು. ತಾವು ಅಮೆರಿಕಾದ ನಾಗರಿಕತ್ವ ಪಡೆದ ನಂತರ ಅವರಿಬ್ಬರಿಗೂ ಅಮೆರಿಕಾದ ಸಿಟಿಜನ್ ಶಿಪ್ ಕೊಡಿಸಿದರು. ಈಗ್ಯೆ ಮೂರು ವರ್ಷಗಳ ಹಿಂದೆ ಅವರಮ್ಮ ತೀರಿಕೊಂಡರು. ಕಡೆಕ್ಷಣದವರೆಗೂ ತಾಯಿಯನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡಿಕೊಂಡಿದ್ದರು ಶಾಸ್ತ್ರಿಗಳು. ಪತ್ನಿ ಶಾಂತಾ ಶಾಸ್ತ್ರಿ ಕೂಡಾ ಅವರ ಅತ್ತೆ ಮತ್ತು ಮೈದುನನನ್ನು ನೋಡಿಕೊಳ್ಳುವ ರೀತಿಯನ್ನು ನಾನು ಅವರ ಸಿಡಾರ್ ಫಾಲ್ಸ್ ಮನೆಯಲ್ಲಿ ಕಣ್ಣಾರೆ ಕಂಡಿದ್ದೆ.

ಸಮಯಪಾಲನೆ,ದೈವಶ್ರದ್ಧೆ,ನೇಮ ನಿಷ್ಠೆಗಳನ್ನು ಚಾಚೂತಪ್ಪದೆ ಪಾಲಿಸುತ್ತಿದ್ದರು ಶಾಸ್ತ್ರಿಗಳು. ಅಗಲಿದ ಪತಿಯ ಧರ್ಮೋದಕ ಮುಂತಾದ ಕಾರ್ಯಗಳನ್ನು ಮಾಡುವುದಕ್ಕೆ ಶಾಂತಾ ಮತ್ತು ಬೆಳೆದ ಮಕ್ಕಳು ಮಾಲಾ ಮತ್ತು ಪ್ರಿಯಾ ತಮ್ಮ ಎನ್ ಆರ್ ಕಾಲೋನಿಯ 3ನೇ ಮುಖ್ಯರಸ್ತೆ #287ಮನೆಗೆ ಇನ್ನೇನು ಬಂದಿಳಿಯುತ್ತಿದ್ದಾರೆ.

1963ರಲ್ಲಿ ಪದವೀಧರನಾದ ಕೃಷ್ಣಶಾಸ್ತ್ರಿಯನ್ನು ಬಿಎಂಎಸ್ ಕಾಲೇಜು ಬೀಳ್ಕೊಟ್ಟಿತ್ತು. ಆದರೆ ಶಾಸ್ತ್ರಿಗಳು ಕಾಲೇಜನ್ನು ಸಾಯುವವರೆಗೂ ಬೀಳ್ಕೊಡಲಿಲ್ಲ. ಕಾಲೇಜಿನ ಹಳೆ ವಿದ್ಯಾರ್ಥಿಗಳ ಸಂಘ ಅಮೆರಿಕಾ ಘಟಕದ ಕಾರ್ಯದರ್ಶಿಯಾಗಿ ಅವರು ಸತತವಾಗಿ ದುಡಿದರು. ಬಿಎಂಎಸ್ ಕಾಲೇಜಿನಲ್ಲಿ ವಿದ್ಯಾಭಾಸ ಮಾಡುವ ಪ್ರತಿಭಾವಂತ, ಬಡ ಯುವಕ ಯುವತಿಯರಿಗೆ ಅವರಷ್ಟು ಸಹಾಯ ಮಾಡಿದವರು ಬೇರೊಬ್ಬರಿಲ್ಲ ಎಂದು ನಾನು ಬಲ್ಲೆ. ನ್ಯಾಷನಲ್ ಕಾಲೇಜಿನಲ್ಲಿ ಪಾಠಮಾಡುತ್ತಿದ್ದ ಅವರ ಮಾವ,ಎಂ ಎಸ್ ಸೂರ್ಯನಾರಾಯಣ ಶಾಸ್ತ್ರಿ ( MSS, notes!) ಹೆಸರಲ್ಲಿ ಒಂದು ಸ್ಕಾಲರ್ ಶಿಪ್ ಮತ್ತು ಮತ್ತು ತಾವು ವಿದ್ಯಾರ್ಜನೆ ಮಾಡುವಾಗ ನೆರವಾದ ಸ್ನೇಹಿತ, ದಿವಂಗತ ಗೋವಿಂದರಾಜ್ ಹೆಸರಲ್ಲಿ ನಾಲಕ್ಕು ವಿದ್ಯಾರ್ಥಿವೇತನ ಸ್ಥಾಪಿಸಿದ್ದರು.

ಕಂದನಿಗೆ ಅನ್ನಪ್ರಾಶನ, ಅಕ್ಷಾರಾಭ್ಯಾಸ ಪ್ರಾರಂಭ, ಗಣೇಶನ ಪೂಜೆ, ಸತ್ಯನಾರಾಯಣ ವ್ರತ, ಮುಂತಾದ ದೇವರ ಪೂಜೆ,ಕೈಂಕರ್ಯಗಳನ್ನು ವಿಧಿವತ್ತಾಗಿ ನೆರವೇರಿಸುವುದನ್ನು ಕರಗತ ಮಾಡಿಕೊಂಡಿದ್ದರು ಶಾಸ್ತ್ರಿಗಳು. ಬಿಡುವಿದ್ದಾಗ ಅಯೋವಾದಲ್ಲಿನ ಭಾರತೀಯ ಕುಟುಂಬಗಳ ಮನೆಯಲ್ಲಿ ಪೂಜೆ ಮಾಡಿಸಿ ದಕ್ಷಿಣೆ ಇಸ್ಕೊಂಡು ಬಿಎಂಎಸ್ ಅಲ್ಯುಮಿನಿ ಖಾತೆಗೆ ತುಂಬುತ್ತಿದ್ದರು. ಇದರ ಮಧ್ಯೆ ಅವರು ಅವಿಭಜಿತ ಅಕ್ಕ ಸಂಸ್ಥೆಗೂ ಮಣ್ಣು ಹೊತ್ತಿದ್ದುಂಟು. 2002ನೆ ಇಸವಿ ಡೆಟ್ರಾಯಿಟ್ ಅಕ್ಕ ಸಮ್ಮೇಳನಕ್ಕೆ ನಿಸಾರ್ ಅಹಮದ್ ಅವರನ್ನು ಅತಿಥಿಯಾಗಿ ಪ್ರಾಯೋಜಿಸಿದ್ದಲ್ಲದೆ ಕವಿವರೇಣ್ಯರು ಉತ್ತರ ಅಮೆರಿಕಾದ 42 ನಗರಗಳಲ್ಲಿ ಕನ್ನಡ ಡಿಂಡಿಮ ಮೊಳಗಿಸುವುದಕ್ಕೆ ಶಾಸ್ತ್ರಿಗಳು ಸದ್ದು ಮಾಡದೆ ಸೂತ್ರಧಾರಿಯಾಗಿದ್ದರು.

ಶಾಸ್ತ್ರಿಗಳಿಗೆ ಕನ್ನಡದಲ್ಲಿ ಬರೆಯಲು ಚೆನ್ನಾಗಿ ಬರುತ್ತಿತ್ತು. “ನಾನು ಬರೆಯುವುದು ಅಷ್ಟರಲ್ಲೇ ಇದೆ, ಬರೆಯುವ ಉತ್ಸಾಹಿಗಳನ್ನು ಬೆಂಬಲಿಸೋಣ ” ಎನ್ನುತ್ತಲೇ ಸತ್ತುಹೋದರು. ಕನ್ನಡ ಪುಸ್ತಕಗಳನ್ನು ಓದುವುದು, ಕನ್ನಡದ ಓದು ಬರವಣಿಗೆ ಮತ್ತು ಕನ್ನಡ ಸಂಘಟನೆ ಮಾಡುವವರಿಗೆ ತೆರೆಮರೆಯಿಂದ ಪ್ರೋತ್ಸಾಹ ಕೊಡುತ್ತಿದ್ದರು. ಕೇವಲ ಕನ್ನಡ ಸಾಹಿತ್ಯದ ಚಿಂತನ ಮಂಥನಕ್ಕಾಗಿಯೇ ಮೀಸಲಾದ ಅಮೆರಿಕಾದ ಕನ್ನಡ ಸಾಹಿತ್ಯ ರಂಗದ ಸ್ಥಾಪಕ ಸದಸ್ಯರ ಪಟ್ಟಿಯಲ್ಲಿ ಅವರ ಹೆಸರಿದೆ. 2004 ರ ಫಿಲಡಲ್ಫಿಯ ಸಾಹಿತ್ಯೋತ್ಸವದಲ್ಲಿ ಅವರು ಪಾಲ್ಗೊಂಡಿದ್ದರೆಂದು ನನ್ನ ನೆನಪು.

ಕನ್ನಡಿಗರಿಗೆ, ಮುಖ್ಯವಾಗಿ ಪ್ರತಿಭಾವಂತರಿಗೆ, ಬಲುಮುಖ್ಯವಾಗಿ ಅರ್ಹರಿಗೆ ಕೈಲಾದ ಸಹಾಯ ಮಾಡುತ್ತಲೇ ಇರಬೇಕು ಎನ್ನುವುದು ಅವರ ಬಾಳಿನ ಗಾಯಿತ್ರೀ ಮಂತ್ರವಾಗಿತ್ತು. ಆದರೆ ಕಂಡೀಷನ್ಸ್ ಅಪ್ಲೈ. ತಮ್ಮ ಹೆಸರು ಎಲ್ಲೂ ಪ್ರಸ್ತಾಪ ಆಗಕೂಡದು, ಯಾರೂ ತಮ್ಮ ಗುಣಗಾನ ಮಾಡಬಾರದು. ಈ ಆಸೆ ಅವರ ವ್ಯಕ್ತಿತ್ವದಲ್ಲಿ ಗಟ್ಟಿಯಾಗಿ ಬೇರೂರಿತ್ತು. ದಟ್ಸ್ ಕನ್ನಡ ಓದುಗರಿಗೆ ಅವರನ್ನು ಪರಿಚಯಿಸಲು ಒಂದು ಲೇಖನ ಬರೆಯಬೇಕು ಎಂದು ನಾನು ಅನೇಕ ಬಾರಿ ಪ್ರಯತ್ನಿಸಿದ್ದುಂಟು. ಆದರೆ ಅವರು ಸುತರಾಂ ಒಪ್ಪಿಗೆ ಕೊಡಲಿಲ್ಲ. ಇವತ್ತು ಅವರ ಬಗ್ಗೆ ನಾಕಾರು ವಾಕ್ಯಗಳನ್ನು ಧೈರ್ಯವಾಗಿ ಬರೆಯುತ್ತಿದ್ದೇನೆ. ನನ್ನನ್ನು ತಡೆಯುವುದಕ್ಕೆ ಅವರಿಂದ ಸಾಧ್ಯವಿಲ್ಲ.

ಇಂದು ಸಂಜೆಯೇ ಬಿಎಂಎಸ್ ಕಾಲೇಜಿನ ಹಳೆ ವಿದ್ಯಾರ್ಥಿಗಳ ಸಂಘದ ಆಡಳಿತ ಮಂಡಳಿ ಸಭೆ ವ್ಯವಸ್ಥೆಯಾಗಿರುವುದು ಕಾಕತಾಳೀಯ. ಕೃಷ್ಣ ಶಾಸ್ತ್ರಿಗಳನ್ನು ಅಗಲಿದ ನೋವಿನ ಭಾರದಿಂದಲೇ ಸಭೆ ಆರಂಭವಾಗುವುದು ನಿಶ್ಚಿತ. ಇದೇ ಭಾನುವಾರ ಡಿಸೆಂಬರ್ 5ನೆ ತಾರಿಖು ಬುಲ್ ಟೆಂಪಲ್ ರಸ್ತೆ ಬಿಎಂಎಸ್ ಕಾಲೇಜು ಸಭಾಂಗಣದಲ್ಲಿ ಸಂಜೆ 5 ಗಂಟೆಗೆ ಬಿಎಂಎಸ್ ಅಲ್ಯುಮಿನಿ ಡೇ ಮತ್ತು ಸ್ಕಾಲರ್ ಶಿಪ್ ವಿತರಣಾ ಸಮಾರಂಭ ಏರ್ಪಾಟಾಗಿದೆ. ಶಾಸ್ತ್ರಿಗಳು ಬರುವುದಿಲ್ಲ, ನೀವು ಇರುತ್ತೀರಿ.

ನಮ್ಮ ಇಂಜಿನಿಯರುಗಳಿಗೆ ದೊಡ್ಡ ನಮಸ್ಕಾರ- Tribute to brilliant engineers September 15

0915 Tribute To Brilliant Engineers September 15 Aid0037

ಈ ವರ್ಷದ ಇಂಜಿನಿಯರ್ಸ್ ದಿನಾಚರಣೆ ನಿಮಿತ್ತ ಒನ್ ಇಂಡಿಯ ಕನ್ನಡ ವಿಶೇಷ ಏನು ಸಾರ್ ಎಂದು ನಮ್ಮ ಆಫೀಸ್ ಬಾಯ್ ಮಂಜುನಾಥ ರೆಡ್ಡಿ ಬುಧವಾರ ಸಂಜೆ ಮನೆಗೆ ಹೋಗುವಾಗ ಕೇಳಿದ್ದ. ಓ! ಹೌದಲ್ಲ, ನೋಡೋಣ ರೆಡ್ಡಿ ಎಂದು ಹೇಳಿ, ನಾಳೆಯ ಮಹತ್ವವನ್ನು ಇಂದೇ ನೆನಪಿಸಿದ್ದಕ್ಕೆ ಅವನಿಗೆ ಮನಸ್ಸಿನಲ್ಲೇ ಒಂದು ಥ್ಯಾಂಕ್ಸ್ ಹೇಳಿಕೊಂಡು ಆಟೋ ಹತ್ತಿದ್ದೆ.

ಗುರುವಾರ ಬೆಳಗಾಮುಂಚೆ ಎದ್ದು ಇಂಜಿನಿಯರ್ಸ್ ಡೇ ಮಾಹಿತಿಗೆ ಗೂಗಲ್ ತಡಕಾಡಿದೆ. ಐಟಿ ಇಂಜಿನಿಯರುಗಳೇ ಕಂಡುಹಿಡಿದ ಇಂಟರ್ ನೆಟ್ಟಿನಲ್ಲಿ ಅಂಥದೇನೂ ಮಾಹಿತಿ ಸಿಗಲಿಲ್ಲ. ವಿಕಿಪೀಡಿಯದಲ್ಲಿ ಒಂದಿಷ್ಟು ಮಾಹಿತಿ ಶೇಖರವಾಗಿದ್ದು, ಅದರ ಪ್ರಕಾರ ಕೆಲವೇ ದೇಶಗಳಲ್ಲಿ ಈ ದಿನಾಚರಣೆಯನ್ನು ಆಚರಿಸಲಾಗುತ್ತದಂತೆ.

ಅರ್ಜೆಂಟೀನಾ, ಮೆಕ್ಸಿಕೊ, ಕೊಲಂಬಿಯ, ಇರಾನ್ ಮತ್ತು ಭಾರತದಲ್ಲಿ ಮಾತ್ರ ಇಂಜಿನಿಯರ್ಸ್ ಡೇ ಆಚರಿಸಲಾಗುತ್ತದೆ ಎಂಬ ಸಾಲುಗಳನ್ನು ಓದಿ ಅವಾಕ್ಕಾದೆ. ಎಲಾ ಇವನಾ, ವ್ಯಾಲಂಟೈನ್ಸುಗಳಿಗೆ ಇರೋ ಇಂಪಾರ್ಟೆನ್ಸ್ ಇಂಜಿನಿಯರುಗಳಿಗೆ ಇಲ್ಲವಾಯಿತೇ ಎಂದು ದಂಗಾದೆ. ಈ ಬಗ್ಗೆ ಸ್ವತಃ BE, ME, MSಗಳೇ ತಲೆಕೆಡಿಸಿಕೊಳ್ಳದೇ ಇರೋವಾಗ BA ಪರೀಕ್ಷೆ ಬರೆದಿರೋ ನನಗ್ಯಾಕೆ ತಲೆಬಿಸಿ ಅಂತ ಸುಮ್ಮನಾಗಿಬಿಟ್ಟೆ.

ಕರ್ನಾಟಕ ಸರಕಾರಿ ಕನ್ನಡ ನಿಘಂಟಿನ ಪ್ರಕಾರ ಇವತ್ತು ಸೆ. 15 ಗುರುವಾರ ಅಭಿಯಂತರ ದಿನಾಚರಣೆ. ಎಂಥ ಕನ್ನಡಪ್ರೇಮಿಗೂ ಅಭಿಯಂತರ ಪದಬಳಕೆ ವಿಚಿತ್ರವಾಗಿ ಕೇಳಿಸುತ್ತದೆ. 1983ರಲ್ಲಿ ಸುಬೇದಾರ್ ಛತ್ರಂ ರಸ್ತೆಯ ಗಂಗಾರಾಂ ಕಟ್ಟಡ ಬಿದ್ದು ನೂರಾರು ಜನ ಸತ್ತಾಗ ‘ಮುಂಜಾನೆ’ ದಿನಪತ್ರಿಕೆಯಲ್ಲಿ ನನ್ನ ಒಡನಾಡಿಗಳು “ಈ ಕಟ್ಟಡವನ್ನು ಕಟ್ಟಿದ್ದು ಅಭಿಯಂತರ ಅಲ್ಲ, ಅರಿಭಯಂಕರ” ಎಂದು ಗೇಲಿ ಮಾಡುತ್ತಿದ್ದದ್ದು ನೆನಪಾಯಿತು.

ನಮ್ಮ ಒನ್ ಇಂಡಿಯ ಕಾರ್ಪೋರೇಟ್ ಕಚೇರಿಯಲ್ಲಿ 130 ಜನ ಸಿಬ್ಬಂದಿ ಇದ್ದಾರೆ. ಅವರಲ್ಲಿ ಇಂಜಿನಿಯರುಗಳ ಲೆಕ್ಕ 26. ನಾನು ಬರೆದ ಕನ್ನಡ ಅಕ್ಷರಗಳನ್ನು ಅಂತರ್ ಜಾಲದಲ್ಲಿ ನೀವೀಗ ಓದುತ್ತಿದ್ದರೆ ಅದಕ್ಕೆ ಇಂಥ ಇಂಜಿನಿಯರುಗಳೇ ಕಾರಣ. ಸರಿ, ಅವರಿಗೆಲ್ಲ ಒಂದು ಥ್ಯಾಂಕ್ಸ್ ರೂಪದಲ್ಲಿ ಗ್ರೀಟಿಂಗ್ಸ್ ಕಳಿಸೋದಕ್ಕೆ ನಮ್ಮ ಕಚೇರಿಯ ಫೇಸ್ ಬುಕ್ ಯಮ್ಮರ್ ಪೇಜ್ ತೆಗೆದೆ. https://www.yammer.com/

All, 

India is one among very few DEVELOPED countries which enjoys a dedicated a day to salute it`s Engineers.

Each country have their own day to celebrate the day. India Engineer`s day is celebrated on 15th September every year.

The day is the birth day of Sir Mokshagundam Visvesvarayya (1860-1961), (Popularly known as Sir MV). An eminent Indian engineer (‘Mysore Engineer’) from the College of Engineering, Pune and a Statesman born in Muddenahalli in Karnataka. The place is about 50 KM from Bangalore.

Wishing happy Engineers day to all Engineers in Oneindia/NetCore. Have a great day.

 

ಇದನ್ನು ಓದಿ ಲೈಕ್ ಬಟನ್ ಒತ್ತಿದನಂತರ ಒಬ್ಬ ಫ್ರೆಷರ್ ನನ್ನ ಬೇ ತನಕ ಬಂದು ವಿಶ್ವೇಶ್ವರಯ್ಯ ಅವರ ಬಗ್ಗೆ ಹೆಚ್ಚು ಮಾಹಿತಿ ಬೇಕು ಎಲ್ಲಿ ಸಿಕ್ಕತ್ತೆ ಎಂದು ವಿಚಾರಿಸಿದ. ನನಗೆ ತಿಳಿದಿರುವಷ್ಟು ಹೇಳಿ ಹೆಚ್ಚಿನ ಓದಿಗೆ ಇಂಟರ್ನೆಟ್ ನೋಡು, ಕನ್ನಡದಲ್ಲೇ ಬೇಕಿದ್ದರೆ ಇವತ್ತಿನ “ಕನ್ನಡಪ್ರಭ” ಓದು ಎಂದು ಸಂಚಿಕೆ ತೆಗೆದು ಕೈಗಿಟ್ಟೆ.

ನಾವು ನಿತ್ಯ ಬರೆಯುವ ಹಾಳೂಮೂಳೂ ಈಮೇಲು, ಎಸ್ಎಂಎಸ್ಸುಗಳನ್ನು ಅವಳಿಗೆ ತಲುಪಿಸುವುದು, ಅವಳು ಕಳಿಸುವ ಮೆಸೇಜುಗಳನ್ನು ತಪ್ಪದೇ ನಮ್ಮ ಮೊಬೈಲಿಗೆ ಡೆಲಿವರಿ ಮಾಡುವುದಕ್ಕೆ ತಾಂತ್ರಿಕ ಪರಿಕರಗಳನ್ನು ಸೃಷ್ಟಿಸುವವರು ಇಂಥ ಹುಡುಗರೇ. ಸದಾಕಾಲ ಅಪ್ಲಿಕೇಷನ್, ಪ್ರೊಗ್ರಾಮು, ಕೋಡಿಂಗ್, ಎಂಬೆಡ್ಡಿಂಗ್, ಬಗ್ಗು, ಪಿಎಚ್ ಪಿ, ಎಎಸ್ ಪಿ, ಸಿಸಿಎಸ್, ಸಿಎಂಎಸ್, ಸರ್ವರ್, ವೈರಸ್, ಡೌನ್ ಲೋಡ್ ಟೈಂ and ಟೆಸ್ಟಿಂಗ್ ಅಂತ ಕೆಲ್ಸ ಮಾಡ್ತಾನೇ ಇರ್ತಾರೆ, ಮಾಡ್ತಾನೇ ಇರ್ತಾರೆ.

ಈ ಹುಡುಗರ ಐಟಿ ಕಸುಬುದಾರಿಕೆ ಶುರುವಾಗಿ ಒಂದಿಪ್ಪತ್ತು ವರ್ಷವಾಗಿರಬಹುದು. ಲಾಂಗ್ ವೇ ಟು ಗೊ ಅನ್ಸತ್ತೆ. ಐಟಿ ಬಿಟಿ ಇಟೇಸ್ ಹುಡುಗ ಹುಡುಗಿಯರಿಗಿಂತ ತುಂಬಾ ಮುಂಚೆ ಇಟ್ಟಿಗೆ, ಗಾರೆ, ಮರಳು, ಸಿಮೆಂಟು ಇಟ್ಕೊಂಡು ಉರಿ ಬಿಸಿಲು ಮಳೆಯಲ್ಲಿ ನಿಂತು ಮಹೋನ್ನತವಾದ ನಿರ್ಮಾಣಗಳನ್ನು ಮಾಡಿದ ಇಂಜಿನಿಯರುಗಳನ್ನು ನಾವು ಇವತ್ತು ಸ್ಮರಿಸಬೇಕು.

ನಾನು ನೋಡಿ ಬೆರಗಾಗಿರುವ ಕೃಷ್ಣರಾಜಸಾಗರ ಅಣೆಕಟ್ಟು (1924), ಹೂವರ್ ಡ್ಯಾಂ (1935), ಗೋಲ್ಡನ್ ಗೇಟ್ ಬ್ರಿಡ್ಜ್ (1937), ಭಾಕ್ರಾ ನಾಂಗಲ್ ಅಣೆಕಟ್ಟು (1963) ಮುಂತಾದ ಮಹೋನ್ನತ aquatic ಸಾಹಸಕ್ಕೆ ಕೈಹಾಕಿ ಗೆದ್ದ ಸಿವಿಲ್ ಇಂಜಿನಿಯರುಗಳಿಗೆ ಅಭಿನಂದನೆ ಮತ್ತು ಧನ್ಯವಾದಗಳನ್ನು ನಾವೆಲ್ಲ ಕೂಡಿ ಅರ್ಪಿಸೋಣ.

ಧನ್ಯವಾದ ಅರ್ಪಣೆಯ ಈ ತಂಪನೆ ಹೊತ್ತಿನಲ್ಲಿ ಕಡುಬಡವರಿಗೆ ಈಗಲೋ ಆಗಲೋ ಬೀಳತ್ತೆ ಎನಿಸುವ “ಆಸರೆ” ಗೃಹ ಕಟ್ಟಿಕೊಡುವ, ಪುತಪುತನೆ ಉದುರುವ ಹೌಸಿಂಗ್ ಬೋರ್ಡ್ ಮನೆಗಳನ್ನು ಕಟ್ಟುವ, ಇಲ್ಲದ ನದಿಗೆ ಸುಳ್ಳುಸುಳ್ಳೇ ಸೇತುವೆ ಕಟ್ಟುವ ಛೀಫ್ ಎಕ್ಸಿಕ್ಯುಟಿವ್ ಇಂಜಿನಿಯರುಗಳನ್ನು ಮತ್ತು ರಸ್ತೆಗೆ ಟಾರ್ ಹಾಕ್ರೋ ಎಂದರೆ ಅಲ್ಲೇ ಗಣಿಗಾರಿಕೆ ಮಾಡ್ತೀನಿ ಅನ್ನೋ ಮುನ್ಸಿಪಾಲ್ಟಿ ಇಂಜಿನಿಯರ್ ಗಳನ್ನು ನೆನಪಿಸಿಕೊಳ್ಳಬಾರದು.