Category Archives: ಎ.ಆರ್. ಮಣಿಕಾಂತ್ – ಉಭಯ ಕುಶಲೋಪರಿ ಸಾಂಪ್ರತ

ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಆಯತನಹಳ್ಳಿ ಎಂಬ ಪುಟ್ಟ ಊರಿಂದ ಬಂದವರು ಅಂಕಣಕಾರ ಎ.ಆರ್. ಮಣಿಕಾಂತ್. ಮಂಡ್ಯದ ಪಿ.ಇ.ಎಸ್. ಎಂಜಿನಿಯರಿಂಗ್ ಕಾಲೇಜಿನಲ್ಲಿ ಆಟೊಮೊಬೈಲ್ ಎಂಜಿನಿಯರಿಂಗ್ ಪದವಿ ಮುಗಿಸಿದ ನಂತರ ಬೆಂಗಳೂರಿನ ಐದಾರು ಫ್ಯಾಕ್ಟರಿಗಳಲ್ಲಿ ದುಡಿದದ್ದು ಈಗ ಹಳೆಯ ಕಥೆ.

ಓದಿದ್ದು ಎಂಜಿನಿಯರಿಂಗ್ ನಿಜ. ಆದರೆ ಒಲಿದದ್ದು ಪತ್ರಿಕೋದ್ಯಮ. ಮೊದಲು ‘ಹಾಯ್ ಬೆಂಗಳೂರ್”, ನಂತರ ‘ಸಂಯುಕ್ತ ಕರ್ನಾಟಕ”ದಲ್ಲಿ ಕೆಲಸ. ಕಳೆದ ಎಂಟು ವರ್ಷಗಳಿಂದ ‘ವಿಜಯ ಕರ್ನಾಟಕ”ದಲ್ಲಿದ್ದಾರೆ. ‘ಈ ಗುಲಾಬಿಯು ನಿನಗಾಗಿ”, ‘ಮರೆಯಲಿ ಹ್ಯಾಂಗ”, ‘ಉಭಯ ಕುಶಲೋಪರಿ ಸಾಂಪ್ರತ” ಹಾಗೂ ‘ಹಾಡು ಹುಟ್ಟಿದ ಸಮಯ” ಇವು ಮಣಿಕಾಂತ್ ಬರೆಯುತ್ತಿರುವ ಜನಪ್ರಿಯ ಅಂಕಣಗಳು. ಒಂದು ಮ್ಯಾಗಜಿನ್‌ನಲ್ಲಿ ಹೇಳಬಹುದಾದ ಸಂಗತಿಗಳನ್ನು ‘ವಿಜಯ ಕರ್ನಾಟಕ”ದ ಬೆಂಗಳೂರು ಆವೃತ್ತಿಯೊಂದಿಗೆ ಬರುವ ‘ಸಿಂಪ್ಲಿಸಿಟಿ ಪೇಜ್”ನಲ್ಲಿ ಹೇಳುತ್ತಾರೆಂಬುದು; ಕಳೆದ ಆರು ವರ್ಷಗಳಿಂದ ಚೂರೂ ರುಚಿ ಕೆಡದಂತೆ ಆ ಪೇಜ್‌ನ ನಿರ್ವಹಣೆ ಮಾಡಿಕೊಂಡು ಬರುತ್ತಿದ್ದಾರೆಂಬುದು ಸಂತೋಷದ ವಿಚಾರ.

ಮಣಿಕಾಂತ್ ಯಶಸ್ಸಿನ ಹಿಂದೆ ಅವರ ಬರಹಗಳಲ್ಲಿರುವ ಮಾನವೀಯತೆಯ ಸೆಲೆ ಹಾಗೂ ಸಂಪಾದಕರಾದ ವಿಶ್ವೇಶ್ವರ ಭಟ್ ಅವರ ಹಾರೈಕೆಯ ನೆರಳಿದೆ ಎಂಬುದು ಹೇಳಲೇಬೇಕಾದ ಮಾತು. ಈ ವಾರದಿಂದ ‘ಉಭಯ ಕುಶಲೋಪರಿ ಸಾಂಪ್ರತ…” ನಿಮ್ಮೆದುರಿಗೆ.

ಮಣಿಕಾಂತ್ ಬರೆದ ಲೇಖನಗಳ ಕುರಿತು ನಿಮ್ಮ ಅನಿಸಿಕೆಗಳನ್ನು armanikanth@yahoo.co.in ವಿಳಾಸಕ್ಕೆ ಕಳಿಸಿರಿ

ಅವಳಿಗೆ ಮುಖ ಇಲ್ಲದವನೂ ಮುದ್ದಾಗಿ ಕಂಡ!

A love story of true lovers
ಇದು, ಅಮರ ಪ್ರೇಮದ ಕಥೆ. ಮಧುರ ಪ್ರೇಮದ ಕಥೆ. ಮರೆಯಲಾಗದ ಕಥೆ ಮತ್ತು ಮರೆಯಬಾರದಂಥ ಕಥೆ. `ಪ್ರೀತಿ’ ಎಂಬ ಎರಡಕ್ಷರಕ್ಕೆ ಇರುವ ತಾಕತ್ತು ಎಂಥದೆಂಬುದಕ್ಕೆ ಸಾಕ್ಷಿಯಾಗುವಂಥ ಕಥೆ. ನಮ್ಮ ಕಥಾನಾಯಕಿ, ಒಂದಿಡೀ ತಲೆಮಾರಿಗೇ ಆದರ್ಶವಾಗುವಂಥವಳು. ಅವಳ ಹೆಸರು ರೀನೀ ಕ್ಲೈನ್. ಥೇಟ್ ಅಪ್ಸರೆಯಂತಿರುವ ಆಕೆ, ತನ್ನ ಬಹುಕಾಲದ ಗೆಳೆಯ ಟೈ ಜೀಗೆಲ್‌ನನ್ನು ಮದುವೆಯಾಗಿದ್ದಾಳೆ. ಅರೆ, ಪ್ರಿಯತಮನನ್ನು ಮದುವೆಯಾದರೆ, ಅದರಲ್ಲಿ ವಿಶೇಷವೇನು ಬಂತು ಎಂದಿರಾ? ಕೇಳಿ, ವಿಶೇಷ ಇರುವುದೇ ಅಲ್ಲಿ. ಏನೆಂದರೆ, ಟೈ ಜೀಗೆಲ್‌ಗೆ ಒಂದು ಕಣ್ಣಿಲ್ಲ. ಒಂದು ಕೈ ಇಲ್ಲ. ಎರಡೂ ಕಿವಿಗಳಿಲ್ಲ. ಮೂಗು, ಇರಬೇಕಾದ ಸ್ಥಿತಿಯಲ್ಲಿಲ್ಲ. ಹಲ್ಲುಗಳಿಗೆ ಒಂದು ಆಕಾರವಿಲ್ಲ. ತಲೆಯಲ್ಲಿ ಕೂದಲೂ ಇಲ್ಲ. ಹತ್ತು ವರ್ಷಗಳ ನಂತರ ಜೇಗೆಲ್ ಬದುಕಿರುತ್ತಾನಾ ಎಂಬ ವಿಷಯವಾಗಿ ಯಾವ ಡಾಕ್ಟರೂ ಗ್ಯಾರಂಟಿ ಕೊಡುತ್ತಿಲ್ಲ. ಇದೆಲ್ಲ ಗೊತ್ತಿದ್ದರೂ, ನಂಗೇ ಅವನೇ ಬೇಕು ಎಂದು ರೀನೀ ಕ್ಲೈನ್ ಪಟ್ಟು ಹಿಡಿದಿದ್ದಾಳೆ. ಅವನನ್ನು ದಕ್ಕಿಸಿಕೊಂಡಿದ್ದಾಳೆ ಮತ್ತು ನೂರಾರು ಜನರ ಸಮ್ಮುಖದಲ್ಲಿ ಅವನನ್ನು ಮದುವೆಯಾಗಿದ್ದಾಳೆ.

ನಿಜ ಹೇಳಬೇಕೆಂದರೆ, ಒಂದು ಕಾಲದಲ್ಲಿ ರೀನೀ ಕ್ಲೈನ್‌ಗಿಂತ ನಾಲ್ಕು ಪಟ್ಟು ಚೆಂದಕ್ಕಿದ್ದವನು ಟೈ ಜೀಗೆಲ್. ಅವನ ಕಟ್ಟುಮಸ್ತಾಗಿದ್ದ `ಬಾಡಿ’ ನೋಡಿಯೇ ನಾನು ಮೊದಲ ನೋಟದಲ್ಲೇ ಕ್ಲೀನ್‌ಬೋಲ್ಡ್ ಆಗಿಬಿಟ್ಟೆ ಎಂದವಳು ರೀನಿ. ಹಾಗೆ, ಸುರಸುಂದರಾಂಗನಂತಿದ್ದ ಟೈ ಜೀಗೆಲ್, ಕೈ ಇಲ್ಲದ, ಕಿವಿಯಿಲ್ಲದ, ಕೆನ್ನೆಯ ನೈಸ್‌ನೈಸ್ ಎಂಬಂಥ ಭಾಗವೂ ಇಲ್ಲದ, ಮೂಗೇ ಇಲ್ಲದ ಕುರೂಪಿಯಾದದ್ದು ಏಕೆ ಮತ್ತು ಹೇಗೆ? ಇಂಥ ಕುರೂಪಿಯನ್ನೂ ಮದುವೆಯಾಗಲು ರೀನೀ ಕ್ಲೈನ್‌ಗಿದ್ದ ಕಾರಣವಾದರೂ ಏನು? ಇಂಥ ಕುತೂಹಲದ ಪ್ರಶ್ನೆಗೆ ಉತ್ತರವಾಗಿ ಬಿಚ್ಚಿ ಕೊಳ್ಳುವುದೇ ಜೀಗೆಲ್-ರೀನೀಯ ಅಮರ ಪ್ರೇಮದ ಕಥೆ.

***
ಅಮೆರಿಕದ ನೌಕಾಪಡೆಯಲ್ಲಿ ಸಾರ್ಜೆಂಟ್ ಆಗಿದ್ದವನು ಟೈ ಜೀಗೆಲ್. ಹೇಳಿ ಕೇಳಿ ಮಿಲಿಟರಿ ಅಸಾಮಿಯಲ್ಲವೆ? ಹುಡುಗ ಕಟ್ಟುಮಸ್ತಾಗಿದ್ದ. 21ನೇ ವಯಸ್ಸಿಗೇ ಸಾರ್ಜೆಂಟ್ ಪದವಿಗೇರಿದ್ದರೂ ಅಹಮಿಕೆಯಿಂದ ದೂರವೇ ಉಳಿದಿದ್ದ. ಟೂ ಸಿಂಪಲ್ ಎಂಬಂತೆ ಬದುಕುತ್ತಿದ್ದ. ಈ ಸರಳತೆಯೇ ರೇನೀ ಕ್ಲೈನ್‌ಳನ್ನು ಅವನ ಹತ್ತಿರ ತಂದಿತು. ಅವಳಾದರೂ ದೂರದವಳಲ್ಲ. ಅವನದೇ ಸ್ಕೂಲಿನಲ್ಲಿ ಓದಿದವಳು. ಅವನಿಗಿಂತ ಮೂರು ವರ್ಷ ಚಿಕ್ಕವಳು. ಒಂದು ಸಂತೋಷವೆಂದರೆ, ಈ ಜೋಡಿಯ ಪ್ರೀತಿಗೆ ಮನೆಯವರಿಂದ ವಿರೋಧ ವ್ಯಕ್ತವಾಗಲಿಲ್ಲ. ಅಂತಸ್ತುಗಳ ಅಂತರ ಅಡ್ಡಬರಲಿಲ್ಲ. ಖಳನಾಯಕರ ಕಾಟವೂ ಇರಲಿಲ್ಲ.

ಈ ಕಾರಣದಿಂದಲೇ ನಾವುಂಟು, ಮೂರು ಲೋಕವುಂಟು ಎಂದು ಮೆರೆದಾಡಿದರು ಜೀಗೆಲ್-ರೀನೀ. ಹೀಗಿದ್ದಾಗಲೇ ರೀನೀಯ ತಂದೆ ಅಪಘಾತವೊಂದರಲ್ಲಿ ಸತ್ತುಹೋದ. ಆ ನಂತರದಲ್ಲಿ ಗೆಳತಿಯ ಬಗ್ಗೆ ಜೀಗೆಲ್ ಅದೆಷ್ಟು ಕಾಳಜಿ ತಗೊಂಡನೆಂದರೆ -ಏಕಕಾಲಕ್ಕೆ ಅವಳಿಗೆ ಫ್ರೆಂಡ್, ಲವರ್, ಫಿಲಾಸಫರ್, ಫಾದರ್, ಗೈಡ್…. ಹೀಗೆ ಎಲ್ಲವೂ ಆಗಿಬಿಟ್ಟ. ತಂದೆಯ ನೆನಪಲ್ಲಿ ಅವಳು ಡಿಪ್ರೆಷನ್‌ಗೆ ಈಡಾಗಲಿಕ್ಕೆ, ಅಪ್ಪನನ್ನು ನೆನಪು ಮಾಡಿಕೊಂಡು ಕಂಬನಿ ಸುರಿಸುವುದಕ್ಕೆ ಈತ ಅವಕಾಶವನ್ನೇ ಕೊಡಲಿಲ್ಲ. ಅಷ್ಟೊಂದು ಮುತುವರ್ಜಿಯಿಂದ ನೋಡಿಕೊಂಡ. ಹೀಗಿದ್ದಾಗಲೇ ಅಮೆರಿಕಾ-ಇರಾಕ್ ಮಧ್ಯೆ ಯುದ್ಧ ಶುರುವಾಯಿತು. ಈತ ನಿಂತ ನಿಲುವಲ್ಲಿಯೆ ಯುದ್ಧಕ್ಕೆ ಹೊರಟು ನಿಂತ. ಹೋಗೋನು ಹೋಗ್ತಾ ಇದೀಯ. ಅದಕ್ಕಿಂತ ಮುಂಚೆ ನನ್ನನ್ನು ಮದುವೆಯಾಗಿಬಿಡು. ನಾಲ್ಕು ಜನ ಆ ಸಂಭ್ರಮಕ್ಕೆ ಸಾಕ್ಷಿಯಾಗಲಿ. ಅವರೆಲ್ಲರ ಮುಂದೆ ಇವಳೇ ನನ್ನ ಹೆಂಡ್ತಿ ಎಂದು ಹೇಳಿ ಹೋಗಿಬಿಡು ಎಂದು ರೀನೀ ದುಂಬಾಲು ಬಿದ್ದಳು. ಹೀಗೆಂದಾಗ ಅವಳಿಗೆ 19 ವರ್ಷವಾಗಿತ್ತು. ಜೀಗೆಲ್‌ಗೆ 21.

ಆದರೆ, ರೀನಿಯ ಆಹ್ವಾನವನ್ನು ನಯವಾಗಿ ತಳ್ಳಿಹಾಕಿದ ಜೀಗೆಲ್ ಹೇಳಿದನಂತೆ; `ಅಂಥ ಅವಸರ ಏನಿದೆ? ಯುದ್ಧ ಬೇಗ ಮುಗಿಯುತ್ತೆ, ರಜೆಗೆ ಬರ್‍ತೀನಲ್ಲ? ಆಗ ಮದುವೆಯಾಗೋಣ. ಸಾವಿರಾರು ಮಂದಿಯ ಸಮ್ಮುಖದಲ್ಲಿ ದಂಪತಿಯರಾಗೋಣ. ಆಮೇಲೆ ನಮ್ಮಿಷ್ಟದ ತಾಣಕ್ಕೆ ಹನಿಮೂನ್‌ಗೆ ಹೋಗೋಣ…’ ಇಷ್ಟು ಹೇಳಿದವನೇ ಕಡಗದಂತಿದ್ದ ಒಂದು ದೊಡ್ಡ ರಿಂಗ್ ತಂದು ರೀನಿಯ ಮೊಣಕಾಲಿಗೆ ಹಾಕಿ ಹೇಳಿದನಂತೆ: `ನಿಂಗೇ ಗೊತ್ತಲ್ಲ? ನಮ್ದು ಸ್ಪೆಷಲ್ ಲವ್, ಅದೇ ಕಾರಣಕ್ಕೆ ನಿನ್ನ ಕಾಲಿಗೆ ರಿಂಗ್ ಹಾಕಿದೀನಿ. ಇವತ್ತು ನಮ್ಮ ಎಂಗೇಜ್‌ಮೆಂಟ್ ಆಗಿಹೋಯ್ತು ಅಂತ ತಿಳ್ಕೊ. ಮುಂದಿನ ವರ್ಷ ಮದುವೆಯಾಗೋಣ. ಈಗ ನಾನು ಹೋಗಿಬರ್‍ತೀನಿ. ಒಂದು ಬೆಸ್ಟ್ ಆಫ್ ಲಕ್ ಹೇಳಿ ಕಳಿಸು…’ ಇಷ್ಟು ಹೇಳಿ, ಜೀಗೆಲ್ ಯುದ್ಧಭೂಮಿಗೆ ಹೊರಟೇಹೋದ. ಅವತ್ತು ಆಗಸ್ಟ್ 13, 2003. ಅದು, ರೀನೀಯ ಹುಟ್ಟುಹಬ್ಬದ ದಿನ.

ಆನಂತರದಲ್ಲಿ ಇರಾಕ್‌ನ ಯುದ್ಧಭೂಮಿಯಿಂದ ಅಮೆರಿಕದಲ್ಲಿದ್ದ ಅಮ್ಮನ ಮನೆಗೆ ವಾರಕ್ಕೊಮ್ಮೆ ಫೋನ್ ಮಾಡುತ್ತಿದ್ದ ಜೀಗೆಲ್. ಆಗೆಲ್ಲ ಈ ಬೆಡಗಿ ರೀನೀ ತಾನೂ ಅವನ ಮನೆಗೆ ಹೋಗಿಬಿಡುತ್ತಿದ್ದಳು. ತಾನೂ ಒಂದಷ್ಟು ಮಾತಾಡುತ್ತಿದ್ದಳು. ಜೋಕು ಹೊಡೆದು ಗೆಳೆಯನನ್ನು ನಗಿಸುತ್ತಿದ್ದಳು. ಏನೋ ಸುಳ್ಳು ಹೇಳಿ ಹೆದರಿಸುತ್ತಿದ್ದಳು. ಅಲ್ಲಿಂದ ಯಾವಾಗ ಬರ್‍ತೀಯ? ನಂಗೆ ಏನು ತರ್‍ತೀಯ ಎಂದೆಲ್ಲ ವಿಚಾರಿಸಿಕೊಂಡು, ಭಾವಿ ಅತ್ತೆಯೊಂದಿಗೆ ಒಂದಿಷ್ಟು ಹರಟಿ ಎದ್ದು ಬರುತ್ತಿದ್ದಳು. ಈ ವೇಳೆಗೆ, ಜೀಗೆಲ್ ಅಮೆರಿಕಕ್ಕೆ ಬರುವ ದಿನ ಯಾವುದೆಂದು ಅವಳಿಗೆ ತಿಳಿದುಹೋಗಿತ್ತು. ಆತ ತಾಯ್ನಾಡಿಗೆ ಬಂದ ಹದಿನೈದನೇ ದಿನವೇ ಮದುವೆಯಾಗುವುದೆಂದು ಆಕೆ ನಿಶ್ಚಯಿಸಿದ್ದಳು. ಇದಕ್ಕಾಗಿ ಸಕಲ ಸಿದ್ಧತೆಯಲ್ಲಿ ತೊಡಗಿದ್ದಳು. ಹೀಗಿದ್ದಾಗಲೇ,ಜೀಗೆಲ್‌ನ ಆಗಮನಕ್ಕೆ ಇನ್ನೂ ಎರಡು ತಿಂಗಳು ಬಾಕಿಯಿದ್ದಾಗಲೇ, ಅದೊಂದು ಬೆಳಗ್ಗೆ ಜೀಗೆಲ್‌ನ ಮನೆಯಿಂದ ಫೋನ್ ಬಂತು: `ತಕ್ಷಣವೇ ಮನೆಗೆ ಬಂದು ಹೋಗು’ ಎಂಬುದು ಫೋನ್ ಕರೆಯ ಸಾರಾಂಶ.

ಓಹ್, ಯುದ್ಧ ಬೇಗ ಮುಗಿದಿರಬೇಕು. ಗೆದ್ದ ಖುಷಿ ದೊಡ್ಡದಿದೆ. ಹಾಗಾಗಿ ಜೀಗೆಲ್ ಬೇಗ ಬಂದಿದಾನೆ ಅನ್ಸುತ್ತೆ. ನನಗೆ ಸರ್‌ಫ್ರೈಜ್ ಕೊಡಲಿಕ್ಕೆಂದೇ ಬೇರೆಯವರಿಂದ ಫೋನ್ ಮಾಡಿಸಿದ್ದಾನೆ ಕಳ್ಳ… ಎಂದುಕೊಂಡು ದೊಡ್ಡ ಸಂಭ್ರಮದಿಂದಲೇ ಭಾವೀ ಗಂಡನ ಮನೆಗೆ ಹೋದಳು ರೀನಿ. ಅಲ್ಲಿ ಸ್ಮಶಾನ ಮೌನವಿತ್ತು. ಏನಾಯ್ತೆಂದು ಈಕೆ ಕೇಳುವುದರೊಳಗೇ, ಇವಳನ್ನು ಕಂಡದ್ದೇ ಜೀಗೆಲ್‌ನ ಮನೆಮಂದಿ ಜೋರಾಗಿ ಅತ್ತರು. ಈ ಮಧ್ಯೆಯೇ ಒಬ್ಬರು ಸುದ್ದಿ ಹೇಳಿದರು. ಇರಾಕ್‌ನ ಆತ್ಮಹತ್ಯಾ ದಳದ ಉಗ್ರರು ಜೀಗೆಲ್‌ನ ತಂಡದವರ ಮೇಲೆ ಬಾಂಬ್ ಎಸೆದಿದ್ದಾರೆ. ಈ ದುರಂತದಲ್ಲಿ ಜೀಗೆಲ್‌ಗೆ ತುಂಬಾ ಪೆಟ್ಟು ಬಿದ್ದಿದೆಯಂತೆ. ಬದುಕೋದು ಕಷ್ಟ ಎಂದು ಡಾಕ್ಟರೇ ಹೇಳಿದ್ದಾರಂತೆ. ಅವನೀಗ ಸ್ಯಾನ್ ಆಂಟೋನಿಯೋದ ಮಿಲಿಟರಿ ಆಸ್ಪತ್ರೇಲಿ ಇದಾನಂತೆ… ಮುಂದಿನದೇನನ್ನೂ ಕೇಳಿಸಿಕೊಳ್ಳುವ ತಾಳ್ಮೆ ರೀನೀಗೆ ಇರಲಿಲ್ಲ. ಕಣ್ಣೀರು ಹಾಕಲಿಕ್ಕೆ ಇದು ಸಮಯವಲ್ಲ ಎಂದು ನಿರ್ಧರಿಸಿದವಳೇ ಚಿಕ್ಕದೊಂದು ಲಗೇಜು ಜತೆ ಮಾಡಿಕೊಂಡು ಸ್ಯಾನ್ ಆಂಟೋನಿಯಾದ ಮಿಲಿಟರಿ ಆಸ್ಪತ್ರೆಗೆ ಬಂದೇಬಿಟ್ಟಳು.

ಅವಳು ನೀಡಿದ ವಿವರ ಗಮನಿಸಿದ ವೈದ್ಯರು- `ಈ ಪೇಷಂಟ್ ಐಸಿಯುನಲ್ಲಿ ಇದ್ದಾನೆ’ ಎಂದರು. ಉಸಿರು ಬಿಗಿಹಿಡಿದು ವೈದ್ಯರೊಂದಿಗೆ ಹೆಜ್ಜೆಹಾಕಿದ ರೀನೀಗೆ ಎದುರಾದದ್ದು -ಮೈ ಪೂರಾ ಬ್ಯಾಂಡೇಜು ಮೆತ್ತಿಕೊಂಡಿದ್ದ ಒಂದು ದೇಹ. ಅದನ್ನು ಕಂಡು ರೀನೀ ಬೆರಗಿನಿಂದ ಹೇಳಿದಳಂತೆ; ಡಾಕ್ಟರ್, ನಾನು ಕೇಳಿದ್ದು ಸಾರ್ಜೆಂಟ್ ಟೈ ಜೀಗೆಲ್ ಅವರನ್ನು. ನೀವು ಇದ್ಯಾರೋ ಬೇರೆ ಆಸಾಮಿಯನ್ನು ತೋರಿಸ್ತಾ ಇದೀರ. ಅವನು ಹೀಗಿರಲಿಲ್ಲ. ಟಾಲ್, ಸ್ವೀಟ್ ಅಂಡ್ ಹ್ಯಾಂಡ್‌ಸಮ್. ಹಾಗಿದ್ದ ನನ್ನ ಹುಡುಗ. ಅವನನ್ನು ತೋರಿಸಿ ಪ್ಲೀಸ್…’ ಡಾಕ್ಟರು ಮಾತಾಡದೆ ಸುಮ್ಮನೆ ನಿಂತರು.

ಅಷ್ಟೆ. ಪರಮ ವಿಕಾರವಾಗಿದ್ದ ಆ ದೇಹದ ಒಡೆಯನೇ ಜೀಗೆಲ್ ಎಂದು ರೀನೀಗೆ ಅರ್ಥವಾಗಿಹೋಯಿತು. ಆತನಿಗೆ ಆಗಿರುವ ಗಾಯದ ಪೆಟ್ಟಿನ ತೀವ್ರತೆ ಎಂಥದೆಂದು ವೈದ್ಯರು ನಿಧಾನವಾಗಿ ವಿವರಿಸಿದರು. ನಂತರ ನಿರ್ಧಾರದ ಧ್ವನಿಯಲ್ಲಿ ಹೇಳಿದರು. `ಬಾಂಬ್ ಸೋಟದ ತೀವ್ರತೆಗೆ ಜೀಗೆಲ್‌ನ ಎಡಭುಜದ ನರ-ಮೂಳೆಗಳೆಲ್ಲ ನುಜ್ಜುಗುಜ್ಜಾಗಿವೆ. ಹೀಗಾಗಿ ಅವನ ಎಡಗೈನ ಭಾಗವನ್ನು ಪೂರ್ತಿಯಾಗಿ ತೆಗೆದು ಹಾಕಿದೀವಿ. ಬಲಗೈನಿಂದ ಮೂರು ಬೆರಳುಗಳೇ ಹಾರಿಹೋಗಿವೆ. ತಲೆಯ ಎಡಭಾಗಕ್ಕೂ ದೊಡ್ಡ ಪೆಟ್ಟು ಬಿದ್ದಿದೆ. ಎರಡೂ ಕಿವಿಗಳು ತುಂಡಾಗಿ ಬಿದ್ದೇ ಹೋಗಿವೆ. ಒಂದು ಕಣ್ಣೂ ಹೋಗಿದೆ. ದವಡೆಯ ಹಲ್ಲುಗಳು ಉದುರಿವೆ. ಕೆನ್ನೆಯ ಮಾಂಸಖಂಡಗಳೂ ನುಜ್ಜುಗುಜ್ಜಾಗಿವೆ. ಇಷ್ಟೆಲ್ಲ ಪೆಟ್ಟಾಗಿದ್ರೂ ಜೀಗೆಲ್ ಬದುಕಿದ್ದಾನೆ. ಈಗ ಅವನಿಗೆ ಮಿದುಳಿನ ಆಪರೇಷನ್ ಮಾಡ್ತೇವೆ. ಒಂದರ್ಥದಲ್ಲಿ ಅವನಿಗೆ ಮುಖವೇ ಇಲ್ಲ ನಿಜ. ಆದರೆ, ತೊಡೆಸಂದಿನ ಮಾಂಸವನ್ನು ಕತ್ತರಿಸಿ ಅವನ್ನು ತುಟಿಗಳ ಜಾಗಕ್ಕೆ ಸೇರಿಸಿ, ಒಂದು ಶೇಪ್ ಕೊಡ್ತೇವೆ. ಅಷ್ಟು ಮಾತ್ರ ನಮ್ಮಿಂದ ಸಾಧ್ಯ. ನಮ್ಮ ಪ್ರಯತ್ನವನ್ನು ನಾವು ಮಾಡ್ತೇವೆ. ಉಳಿದದ್ದು ಜೀಸಸ್‌ಗೆ ಬಿಟ್ಟದ್ದು…’

ಇಷ್ಟು ಹೇಳಿ ವೈದ್ಯರು ಚಿಕಿತ್ಸೆ ಆರಂಭಿಸಿದಾಗ, ಹೊಸದೊಂದು ಪ್ರಶ್ನೆ ರೀನೀಗೆ ಎದುರಾಯಿತು. ಮಿದುಳು ಆಪರೇಷನ್ ಮಾಡಿದ ನಂತರ ಬೈಛಾನ್ಸ್ ಜೀಗೆಲ್‌ಗೆ ನೆನಪಿನ ಶಕ್ತಿಯೂ ಕಳೆದುಹೋದರೆ ಗತಿ ಏನು? ಅಥವಾ ತನ್ನ ಈಗಿನ ಸ್ಥಿತಿ ಕಂಡು ಆತನಿಗೆ ಹುಚ್ಚು ಹಿಡಿದರೆ ಮಾಡುವುದೇನು? ಆಸ್ಪತ್ರೆಯ ವಾರ್ಡ್‌ನಲ್ಲಿ ಕೂತು, ಹೀಗೆ ಯೋಚಿಸಿ ಯೋಚಿಸಿ ಹಣ್ಣಾದಳು ರೀನೀ. ಪುಣ್ಯಕ್ಕೆ ಹಾಗೇನೂ ಆಗಲಿಲ್ಲ. ಜೀಗೆಲ್ ಎಲ್ಲ ಚಿಕಿತ್ಸೆಗೆ ಸಕಾರಾತ್ಮಕವಾಗಿ ಸ್ಪಂದಿಸಿದ. ಒಂದೂವರೆ ವರ್ಷದ ಚಿಕಿತ್ಸೆಯ ನಂತರ ಆಸ್ಪತ್ರೆಯಿಂದ ಡಿಸ್‌ಛಾರ್ಜ್ ಕೂಡ ಆದ. ಆದರೆ, ಮನೆಗೆ ಹೊರಟವನಿಗೆ ಒಂದು ಕೈ ಇರಲಿಲ್ಲ. ಕಿವಿಗಳೂ ಇರಲಿಲ್ಲ. ಬಲಗೈನ ಮೂರು ಬೆರಳಿರಲಿಲ್ಲ. ಒಂದು ಕಣ್ಣಿರಲಿಲ್ಲ. ತಲೆಯಲ್ಲಿ ಕೂದಲಿರಲಿಲ್ಲ. ನಿಲ್ಲಲು ತ್ರಾಣವೂ ಇರಲಿಲ್ಲ. ಇಂಥ ಸಂದರ್ಭದಲ್ಲಿ ಅವನನ್ನು ಪುಟ್ಟ ಮಗುವಿನಂತೆ ನೋಡಿಕೊಂಡಳು ರೀನೀ. ಆದರೂ, ತನ್ನ ಗಾಯದ ಕಲೆ ನೋಡಿಕೊಂಡಾಗ ಜೇಗೆಲ್ ಬಿಕ್ಕಳಿಸಿ ಅಳುತ್ತಿದ್ದ. ಅಂತರ್ಮುಖಿಯಂತೆ ಕೂತುಬಿಡುತ್ತಿದ್ದ. ಅಂಥ ಸಂದರ್ಭದಲ್ಲೆಲ್ಲ ರೀನೀ ಅವನಿಗೆ ಅಮ್ಮನಾಗುತ್ತಿದ್ದಳು. ತಂದೆಯಂತೆ ಸಮಾಧಾನ ಹೇಳುತ್ತಿದ್ದಳು. ದಿನದ ಹೆಚ್ಚು ಸಮಯವನ್ನು ಮನೆಯೊಳಗೇ ಕಳೆದರೆ ಅವನಿಗೂ ಡಿಪ್ರೆಶನ್ ಕಾಡಬಹುದು ಅನ್ನಿಸಿದಾಗ ವಾಕಿಂಗ್ ಕರೆದೊಯ್ಯಲು ನಿರ್ಧರಿಸಿದಳು ರೀನೀ. ಆಗ ಜೀಗೆಲ್ ಹೊಸದೊಂದು ಬೇಡಿಕೆ ಇಟ್ಟ. `ನಾನು ಸನ್‌ಗ್ಲಾಸ್ ಹಾಕ್ಕೊಂಡು ಹೊರಗೆ ಬರ್‍ತೇನೆ..’

`ನಿಜವಾದ ಸಂಕಟ ಎದುರಾದದ್ದೇ ಆಗ. ಏಕೆಂದರೆ ಸನ್‌ಗ್ಲಾಸ್ ಹಾಕಿಕೊಳ್ಳಲು ಅಗತ್ಯವಿದ್ದ ಕಿವಿಗಳೇ ಜೀಗೆಲ್‌ಗೆ ಇರಲಿಲ್ಲ. ಹಾಗೆಂದು ಹೇಳಿದರೆ ಅವನಿಗೆ ನೋವಾಗುತ್ತದೆ ಎಂದು ಕಾರಣಕ್ಕೆ, ಅವನಿಗೆ ಏನೂ ಹೇಳಲಿಲ್ಲ ರೀನೀ. ಬದಲಿಗೆ, ಅವನ ತಲೆಯ ಸುತ್ತ ಎಲಾಸ್ಟಿಕ್ ಹಾಕಿ ಸನ್‌ಗ್ಲಾಸ್ ತೊಡಿಸಿಯೇ ಬಿಟ್ಟಳು. ಮುಂದೆ ನಿಧಾನವಾಗಿ ತನ್ನ ಪರಿಸ್ಥಿತಿ ಹೇಗಿದೆ ದೇಹದ ಯಾವ್ಯಾವ ಭಾಗ ಅಸ್ತಿತ್ವ ಕಳೆದುಕೊಂಡಿದೆ ಎಂದು ಜೀಗೆಲ್‌ಗೆ ಅರ್ಥವಾಯಿತು. ಆತ ಅದೊಂದು ದಿನ ರೀನೀ ಹಾಗೂ ತನ್ನ ಬಂಧುಗಳನ್ನು ಜತೆಯಲ್ಲಿ ಕೂರಿಸಿಕೊಂಡು ಹೇಳಿಬಿಟ್ಟ `ಮುಂದೆ, ನನ್ನ ಹಣೇಲಿ ಬರೆದಂತಾಗಲಿ. ನಾನು ಇರುವಷ್ಟು ದಿನ ಒಂಟಿಯಾಗಿ ಬದುಕ್ತೇನೆ. ರೀನೀ ಬೇರೆ ಯಾರನ್ನಾದ್ರೂ ಮದುವೆಯಾಗಲಿ. ನಾವೇ ಮುಂದೆ ನಿಂತು ಅವಳ ಮದುವೆ ಮಾಡೋಣ… ಅವಳ ಭವಿಷ್ಯ ಹಾಳಾಗೋದು ಬೇಡ. ನನ್ನಂಥ ಕುರೂಪಿ ಅವಳ ಜತೆಯಾಗೋದು ಬೇಡ…’

ಜೀಗೆಲ್‌ನ ಮಾತಿಗೆ ಎಲ್ಲರೂ ಒಪ್ಪಿದರು. ಆದರೆ ರೀನೀ ಒಪ್ಪಲಿಲ್ಲ. ಆಕೆ ಜೀಗೆಲ್‌ನ ಎದುರು ನಿಂತು ಹೀಗೆಂದಳು: `ಹುಚ್ಚಾ, ನಾನು ಪ್ರೀತಿಸಿದ್ದು ನಿನ್ನ ದೇಹವನ್ನಲ್ಲ ಕಣೋ. ನಿನ್ನ ಮನಸ್ಸನ್ನು ಪ್ರೀತಿಸ್ದೆ ನಾನು. ಈಗ ಇದೀಯ ನೋಡು, ಅದಕ್ಕಿಂತಲೂ ಕುರೂಪಿಯಾಗಿದ್ದೆ ಆಸ್ಪತ್ರೇಲಿ. ಆಗ ನಿನ್ನ ದೇಹ ಕೊಳೆತು ವಾಸನೆ ಹೊಡೀತಿತ್ತು. ಅದನ್ನು ನಗುತ್ತಲೇ ಸಹಿಸಿಕೊಂಡೆ. ಅಂಥ ನನಗೆ ನಿನ್ನನ್ನು ಈಗ ನಿನ್ನನ್ನು ಒಪ್ಪಿಕೊಳ್ಳೋಕೆ ಕಷ್ಟವಾಗ್ತಿಲ್ಲ. ಬದುಕು ಅನ್ನೋದಿದ್ರೆ ಅದು ನಿನ್ನ ಜತೆ ಮಾತ್ರ. ಮೊದಲು ಪ್ರೀತಿಸ್ತಿದ್ದೆ ನೋಡು, ಅದಕ್ಕಿಂತ ಎರಡು ಪಟ್ಟು ಹೆಚ್ಚಾಗಿ ಈಗ ನಿನ್ನನ್ನು ಪ್ರೀತಿಸ್ತಿದೀನಿ ಕಣೋ…’ ರೀನೀಯ ನಿಷ್ಕಪಟ ಮಾತು ಕೇಳಿ ಜೇಗೆಲ್ ಮಾತೇ ಹೊರಡದೆ ನಿಂತುಬಿಟ್ಟ. ಅವನ ತಾಯಿ ಧಾವಿಸಿ ಬಂದು ರೀನಿಯನ್ನು ತಬ್ಬಿಕೊಂಡು ಅಳತೊಡಗಿದಳು. ಜೀಗೆಲ್‌ನ ತಂದೆ ಈ ಹುಡುಗಿಗೆ ನಿಂತಲ್ಲೇ, ಕೈಮುಗಿದು ಕಣ್ಣೊರಸಿಕೊಂಡ.

***
ಮುಂದೆ 2005ರ ಅಕ್ಟೋಬರ್ 7ರಂದು ತುಂಬಾ ಅದ್ಧೂರಿಯಾಗಿ ಜೀಗೆಲ್- ರೀನೀಯ ಮದುವೆ ನಡೆಯಿತು. ಶುದ್ಧ ಪ್ರೀತಿಗೆ ಎಂದಿಗೂ ಸಾವಿಲ್ಲ, ಮಧುರ ಪ್ರೀತಿ ಎಂದಿಗೂ ಸೋಲಲ್ಲ ಎಂಬ ಮಾತಿಗೆ ಸಾಕ್ಷಿಯೂ ಆಯಿತು. ಅಂದಹಾಗೆ, ಇದು ಇಂಟರ್‌ನೆಟ್‌ನಲ್ಲಿ ಸಿಕ್ಕ ಮಾಹಿತಿ. ಮುಖವಿಲ್ಲದವನನ್ನೂ ಮುದ್ದಿನ ಗಂಡ ಎಂದು ಒಪ್ಪಿಕೊಂಡ ರೀನೀಗೆ ಜೈ ಹೋ.

Advertisements

ನೀವ್ ಮಾಡ್ತಿರೋದು ಸರೀನಾ ಸಾರ್!

BS Yeddyurappa
ಸರ್, ಸುತ್ತು ಬಳಸಿನ ಮಾತು ಬೇಡ. ನೇರವಾಗಿ ವಿಷಯಕ್ಕೆ ಬರ್‍ತೇನೆ. ವಾರದ ಹಿಂದಷ್ಟೇ ನಡೆದ ಸಂಪುಟ ಸಭೆಯಲ್ಲಿ ರಾಜ್ಯದ ಆರು ರಕ್ಷಿತಾರಣ್ಯಗಳಲ್ಲಿ ಗಣಿಗಾರಿಕೆಗೆ ಅನುಮತಿ ನೀಡಿದ್ದೀರಿ. ಇದರಿಂದ ಎಂತೆಂಥ ಅಡ್ಡ ಪರಿಣಾಮಗಳಾಗ್ತವೆ ಎಂದು ನೀವು ಅಂದಾಜು ಮಾಡಿಕೊಂಡಿಲ್ಲ ಅನಿಸುತ್ತೆ. ಅಥವಾ ಯಾರು ಹಾಳಾದ್ರೆ ನನಗೇನು? ನನ್ನ ಕುರ್ಚಿ ಉಳಿದ್ರೆ ಸಾಕು. ಸರಕಾರದಲ್ಲಿರೋ ಹಣವಂತ ಮಂತ್ರಿಗಳು ಭಿನ್ನಮತಕ್ಕೆ ಮುಂದಾಗದಂತೆ ನೋಡಿಕೊಂಡ್ರೆ ಸಾಕು ಎಂಬ ಆಲೋಚನೆಯಿಂದಲೂ ಗಣಿಗಾರಿಕೆಗೆ ನೀವು ಅನುಮತಿ ಕೊಟ್ಟಿರಲಿಕ್ಕೂ ಸಾಕು. ಆದ್ರೆ ಸಾರ್, ನಿಜ ಹೇಳಬೇಕು ಅಂದ್ರೆ ನಿಮ್ಮದು ಅವಿವೇಕದ ನಡೆ. ದುಡುಕಿನ ನಡೆ. ಏಕಪಕ್ಷೀಯ ನಿರ್ಧಾರ. ತಿಳಿವಳಿಕೆ ಇಲ್ಲದವರು ಮಾತ್ರ ಕೈಗೊಳ್ಳಬಹುದಾದ ನಿರ್ಧಾರ. ಒಂದು ವೇಳೆ ಆರು ರಕ್ಷಿತಾರಣ್ಯಗಳಲ್ಲಿ ಗಣಿಗಾರಿಕೆ ಶುರುವಾದರೆ, ಆಗಬಹುದಾದ ಅನಾಹುತದ ಬಗ್ಗೆ ಆಮೇಲೆ ಹೇಳ್ತೇನೆ. ಅದಕ್ಕೂ ಮೊದಲು, ಯಡಿಯೂರಪ್ಪ [^] ಅಂದ್ರೆ ನಮ್ಮ ಜನಕ್ಕೆ ಈ ಹಿಂದೆ ಎಂಥ ಭಾವನೆಯಿತ್ತು ಅಂತ ಹೇಳಿ ಬಿಡ್ತೀನಿ ಕೇಳಿ…

***
ಹೌದಲ್ವ ಸಾರ್? ನೀವು ದಶಕಗಳಿಂದಲೂ ವಿರೋಧ ಪಕ್ಷದಲ್ಲೇ ಇದ್ದವರು. ಅದೇನು ಕರ್ಮವೋ ಕಾಣೆ, ಕರ್ನಾಟಕದಲ್ಲಿ ಬಿಜೆಪಿಗೆ ಅಕಾರ ಸಿಕ್ತಾನೇ ಇರಲಿಲ್ಲ. ಆದರೆ ಪ್ರತಿ ಚುನಾವಣೆಯಲ್ಲೂ ಅದೇ ಬಿಜೆಪಿಯಿಂದ ರ್ಸ್ಪಸಿ ನೀವು ಎಮ್ಮೆಲ್ಲೆ ಆಗ್ತಾ ಇದ್ರಿ. ನಂತರ ವಿರೋಧ ಪಕ್ಷದ ಕುರ್ಚಿಲಿ ಕೂತು ಅವಾಗವಾಗ ಅಬ್ಬರಿಸ್ತಾ ಇದ್ರಿ. ರೈತ [^]ರ ಪರವಾಗಿ ದನಿ ಎತ್ತುತಿದ್ರಿ. `ಎಲ್ಲಿಯವರೆಗೆ ಹೋರಾಟ?’ `ಸಾಯುವವರೆಗೆ ಹೋರಾಟ’ `ಹೋರಾಟ ಹೋರಾಟ, ನ್ಯಾಯಕ್ಕಾಗಿ ಹೋರಾಟ’ ಎಂಬ ಅರ್ಥದಲ್ಲೇ ಮಾತಾಡ್ತಾ ಇದ್ರಿ. ಅದನ್ನೆಲ್ಲ ಕಂಡ ಜನ- `ಇದ್ರೆ ಯಡಿಯೂರಪ್ಪನಂಗೆ ಇರಬೇಕು ನೋಡ್ರಿ. ಅವ್ನು ರೈತರ ಪರವಾಗಿ, ನ್ಯಾಯದ ಪರವಾಗಿ ಯಾವಾಗ್ಲೂ ದನಿ ಎತ್ತುತ್ತಾ ಇರ್‍ತಾನೆ. ಆದ್ರೆ ಹಾಳಾದ್ದು ಅದೃಷ್ಟ ಪ್ರತಿಬಾರಿಯೂ ಕೈಕೊಡ್ತಾ ಇದೆ. ಈ ಬಿಜೆಪಿ ಅಕಾರಕ್ಕೆ ಬಂದ್ರೆ ಅವನಿಂದ ಬಹಳ ಒಳ್ಳೆಯ ಕೆಲಸಗಳನ್ನು ನಿರೀಕ್ಷಿಸಬಹುದು’ ಎಂದೆಲ್ಲ ಮಾತಾಡಿ ಕೊಂಡಿದ್ದರು.

ಪ್ರಿಯ ಯಡಿಯೂರಪ್ಪನವರೇ, ಮುಂದಿನ ಕತೆಯನ್ನು ಎರಡೇ ಮಾತಲ್ಲಿ ಹೇಳಿ ಮುಖ್ಯ ವಿಷಯಕ್ಕೆ ಬರ್‍ತೇನೆ. ಮುಂದೆ, ರಾಜಕೀಯದ ದಿಕ್ಕು. ದೆಸೆ ಬದಲಾಯ್ತು. ಮೊದಲು ಜೆಡಿಎಸ್, ಬಿಜೆಪಿ ಸರಕಾರವಿತ್ತು. ನಂತರ ಬಿಜೆಪಿಗೆ ಮುಖ್ಯಮಂತ್ರಿ ಪಟ್ಟ ಕೊಡಲು ಜೆಡಿಎಸ್‌ನವರು ಒಪ್ಪದೇ ಹೋಗಿದ್ದರಿಂದ ಚುನಾವಣೆ ನಡೀತು. ಜನ, ಅಯ್ಯೋ ಪಾಪ ಅಂದ್ಕೊಂಡೇ ಬಿಜೆಪಿಗೆ ವೋಟು ಹಾಕಿದ್ರು. ಪರಿಣಾಮ, ನೀವು ಮುಖ್ಯಮಂತ್ರಿ ಆದಿರಿ. ರೈತರ ಹೆಸರಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ರಿ. ಹಿಂದೆ ನೀವು ವಿರೋಧ ಪಕ್ಷದ ನಾಯಕನಾಗಿ ಮೆರೆದದ್ದು. ಗುಡುಗಾಡಿದ್ದು ನೋಡಿದ್ದೆದಲ್ಲ? ಅದನ್ನೇ ನೆನಪು ಮಾಡಿಕೊಂಡು, ಈಯಪ್ಪನ ಆಡಳಿತದಲ್ಲಿ ಜನ ನೆಮ್ಮದಿಯಿಂದ ಇರಬಹುದೇನೋ ಅಂದುಕೊಂಡಿದ್ವಿ.

ಆದರೆ, ಇಲ್ಲ ಯಡಿಯೂರಪ್ನೋರೇ, ನಮ್ಮ ನಂಬಿಕೆ ನಿಜವಾಗಲಿಲ್ಲ. ನೀವು ಸಿಎಂ ಆದ ಎರಡೇ ತಿಂಗಳಲ್ಲಿ ಹಾವೇರೀಲಿ ರೈತರ ಮೇಲೆ ಗೋಲಿಬಾರ್ ಆಯ್ತು. ಗೊಬ್ಬರ ಬೇಕು ಎಂದು ಪ್ರತಿಭಟಿಸಿದ ರೈತರ ಹೆಣ ಬಿತ್ತು. ಆ ನಂತರದಲ್ಲಿ ಬಿಡಿ, ನಿಮ್ಮ ಕಣ್ಮುಂದೆಯೇ ಒಂದೊಂದೇ ಅನಾಹುತ ನಡೀತಾ ಹೋದ್ವು. ಆಗೆಲ್ಲ ನೀವು ಹರಾ ಅನ್ನಲಿಲ್ಲ ಶಿವಾ ಅನ್ನಲಿಲ್ಲ. ಆದರೆ ನಿಮ್ಮ ಖುರ್ಚಿಗೆ ಸಂಚಕಾರ ಬರ್ತಿದೆ ಅಂತ ಗೊತ್ತಾದರೆ ಸಾಕು, ಧಡಕ್ಕನೆ ಮೇಲೆದ್ದು ರಾಜ್ಯದ ಅಷ್ಟೂ ದೇವಸ್ಥಾನದ ಮೆಟ್ಟಿಲು ಹತ್ತಿ- `ದುಷ್ಟರ ವಿರುದ್ಧ ಹೋರಾಡಲು ಶಕ್ತಿ ಕೊಡು ತಂದೇ…’ ಎಂದು ಪ್ರಾರ್ಥಿಸ್ತಾ ಇದ್ರಿ. ನಾನು ಅಸಹಾಯಕ ಅನ್ನೋ ಥರಾ ಪೋಸ್ ಕೊಟ್ರಿ. ಸಿಂಪಥಿ ಗಿಟ್ಟಿಸಿಕೊಂಡ್ರಿ.

ವ್ಯಂಗ್ಯ ಏನು ಗೊತ್ತಾ ಸಾರ್? ನೀವು ಯಾರನ್ನು ದುಷ್ಟರು ಅಂತ ಕರೀತಿದ್ರೋ ಅವರು ಒಮ್ಮೆ ಮುನಿಸಿಕೊಂಡು, ಮತ್ತೊಮ್ಮೆ ರಾಜಿ ಮಾಡಿಕೊಂಡು, ಒಮ್ಮೆ ಕೈಮುಗಿದುಕೊಂಡು, ಇನ್ನೊಮ್ಮೆ ಕೈ ಕೈ ಮಸೆದು ಕೊಂಡು, ಒಂದೊಂದ್ಸಲ ಥೇಟ್ ದುರ್ಯೋಧನನ ಥರಾ ಫಡಫಡಾ ಎಂದು ಅಬ್ಬರಿಸಿಕೊಂಡು ನಿಮ್ಮ ಹಿಂದೆ ಮುಂದೆಯೇ ತಿರುಗಾಡುತ್ತಿದ್ದರು. ಅವರಿಲ್ಲದಿದ್ದರೆ, ಅವರ ಹಣದ ಬಲವಿಲ್ಲದಿದ್ದರೆ ಬಿಜೆಪಿ ಸರಕಾರವೇ ಇರುವುದಿಲ್ಲ ಎಂದೆಲ್ಲ ಜನ ಮಾತಾಡಿಕೊಂಡರು. ಎಂಥ ದುರಂತ ನೋಡಿ ಯಡಿಯೂರಪ್ಪನವರೆ, ಆಗಲೂ ನೀವು ಮಾತೇ ಆಡಲಿಲ್ಲ! ಇಷ್ಟೆಲ್ಲ ಆದರೂ ಮುಖ್ಯಮಂತ್ರಿಯಾಗಿ ನೀವು ರೈತಾಪಿ ಜನರ ಪಾಲಿಗೆ ಒಂದು ಬಹುದೊಡ್ಡ ಉಪಕಾರ ಮಾಡಿದ್ರಿ. ಏನೆಂದರೆ ಬಿಟಿ ಬದನೆಗೆ ನಾನು ಅವಕಾಶ ಕೊಡೋದಿಲ್ಲ ಎಂದು ಹೇಳಿ ನಿಜಕ್ಕೂ ದೊಡ್ಡವರಾದಿರಿ.

ಆದರೆ, ವಾರದ ಹಿಂದೆ ನೀವು ಮಾಡಿದ್ದೇನು ಹೇಳಿ? ಸಂಪುಟ ಸಭೆ ಕರೆದು, ತುಂಬ ಅವಸರದಲ್ಲಿ ರಾಜ್ಯದ ಆರು ರಕ್ಷಿತಾರಣ್ಯದಲ್ಲಿ ಗಣಿಗಾರಿಕೆಗೆ ಅವಕಾಶ ಮಾಡಿಕೊಟ್ಟಿದ್ದೀರಿ! ಇದೆಲ್ಲ ಹಳೆಯ ನಿರ್ಧಾರಗಳು. ಅದಕ್ಕೆ ಈಗ ಅನುಮತಿ ಕೊಟ್ಟಿದ್ದೀವಿ ಅಷ್ಟೇ ಎಂದು ಷರಾ ಬರೆದಿದ್ದೀರಿ.

ಸ್ವಾಮಿ, ಈ ಗಣಿಗಾರಿಕೆ ರಾಜ್ಯಕ್ಕೆ ಎಂಥ ಹಾನಿ ಮಾಡ್ತಾ ಇದೆ ಅಂತ ಈಗಲೂ ನಿಮಗೆ ಅರ್ಥ ಆಗಿಲ್ವ? ಕೇಳಿ : ಗಣಿಗಾರಿಕೆಯ ಕಾರಣದಿಂದ ಈಗಾಗಲೇ ರಾಮನಗರ-ಚನ್ನಪಟ್ಟಣದ ಬೆಟ್ಟಗಳು ಕರಗ್ತಾ ಇವೆ. ನಂದಿಹಿಲ್ಸ್ ಪ್ರದೇಶ ನಡುಗ್ತಾ ಇದೆ. ಬಳ್ಳಾರಿಯಂತೂ ಬೋಳು ಬೋಳಾಗಿ ಹೋಗಿದೆ. ಮರಗಳು ಮಾಯವಾಗ್ತಾ ಇವೆ. ಭೂಮಿ, ಪಾತಾಳಕ್ಕೇ ಬಾಯ್ದೆರೆದುಕೊಂಡು ಹೋಗ್ತಾ ಇದೆ. ಒಂದೆರಡಲ್ಲ, ಸಾವಿರ ಸಾವಿರ ಲಾರಿಗಳ ಓಡಾಟದ ಕಾರಣದಿಂದ ರಸ್ತೆಗಳು ಬಿರುಕು ಬಿಡ್ತಾ ಇವೆ. ಹೀಗಿರೋವಾಗ ಇರೋ ಗಣಿಗಾರಿಕೇನ ನಿಲ್ಸಿ ಸಾರ್ ಅಂತ ಕೂಗೆದ್ದಿದೆ. ಆದ್ರೆ ನೀವು ಹೊಸ ಗಣಿಗಾರಿಕೆಗೆ ಅವಕಾಶ ಕೊಟ್ಟಿದೀರ! ಜತೆಗೆ, ಇದು ಕಲ್ಲು ಗಣಿಗಾರಿಕೆ ಅಲ್ಲ. ಹಾಗಾಗಿ ಪರಿಸರಕ್ಕೆ ಅಂಥ ತೊಂದ್ರೆ ಖಂಡಿತ ಇಲ್ಲ ಅಂತ ಸುಳ್ಳು ಬೇರೆ ಹೇಳ್ತಾ ಇದೀರ!

ಒಂದು ಮಾತು ಹೇಳಲಾ ಸಾರ್? ಈ ಹೊಸ ಗಣಿಗಾರಿಕೆಯಿಂದ ಲಾಭ ಆಗೋದು ಯಾರಿಗೆ ಹೇಳಿ? ನಿಮ್ಮ ಸಂಪುಟದಲ್ಲೇ, ಪಕ್ಷದಲ್ಲೇ ಇರುವ ಕೆಲವರಿಗೆ. ಈ ಹೊಸ ಯೋಜನೆ ಏನಾದ್ರೂ ಜಾರಿಗೆ ಬಂದ್ರೆ ನಿಮ್ಮ ಹಿಂದೆ ಮುಂದೆ ಓಡಾಡೋ ಜನರೇ ಗಣಿಗಾರಿಕೆಯ ಗುತ್ತಿಗೆ ಹಿಡೀತಾರೆ. ಹಣವಂತರು ಮತ್ತಷ್ಟು ಶ್ರೀಮಂತರಾಗ್ತಾರೆ. ಅಷ್ಟು ಬಿಟ್ರೆ ಬೇರೆ ಯಾರಿಗಾದ್ರೂ ನಯಾಪೈಸೆಯ ಅನುಕೂಲ ಆಗುತ್ತೆ ಅನ್ಕೊಂಡಿದೀರಾ ಸಾರ್?

ಕೇಳಿ : ರಕ್ಷಿತಾರಣ್ಯ ಪ್ರದೇಶದಲ್ಲಿ ಗಣಿಗಾರಿಕೆ ಆರಂಭವಾದ್ರೆ ಅಪರೂಪದ ಪ್ರಕೃತಿ ಸಂಪತ್ತು ನಾಶವಾಗುತ್ತೆ. ಗಣಿಯಲ್ಲಿ ಕೂಲಿ ಮಾಡಿದ್ರೆ ಜಾಸ್ತಿ ದುಡ್ಡು ಸಿಗುತ್ತೆ ಅನ್ನೋ ಕಾರಣದಿಂದ ಜನ ಕೃಷಿಯನ್ನೇ ಮರೆತುಬಿಡ್ತಾರೆ. ಬೆಳಗಿಂದ ದುಡಿದ ಆಯಾಸವೆಲ್ಲ ಪರಿಹಾರವಾಗ್ಲಿ ಅಂತ ಕುಡಿತ ಕಲೀತಾರೆ. ಗಣಿಗಾರಿಕೆಯ ಕೆಲಸ ಮತ್ತು ಆದಾಯ ಶಾಶ್ವತವಲ್ಲ ಎಂದು ಅವರಿಗೆ ಗೊತ್ತಾಗೋದೇ ಇಲ್ಲ. ಅಥವಾ ಎಲ್ಲ ಗೊತ್ತಾಗುವ ವೇಳೆಗೆ ತುಂಬ ತಡವಾಗಿರುತ್ತೆ. ತುಂಬ ಮುಖ್ಯವಾಗಿ ಭೂಮಿಯನ್ನು ಅಗೆ (ಬಗೆ)ಯುವ ಕೆಲಸ ಶುರುವಾಗುತ್ತೆ ನೋಡಿ; ಹಾಗೆ ಆಳಕ್ಕೆ ಹೋದಂತೆಲ್ಲ ಭೂಮಿಯ ತೇವಾಂಶ ಕಡಿಮೆಯಾಗುತ್ತೆ. ಪರಿಣಾಮ, ಅಂತ ರ್ಜಲದ ಮಟ್ಟ ಕುಸಿಯುತ್ತೆ. ಅಷ್ಟೋ ಇಷ್ಟೋ ಸಿಗುತ್ತೆ ನೋಡಿ, ಆ ನೀರಿನ ಗುಣಮಟ್ಟ ಕೂಡ ಹಾಳಾಗಿರುತ್ತೆ. ದಿನಾಲೂ ನೂರರ ಲೆಕ್ಕದಲ್ಲಿ ಲಾರಿಗಳು ಓಡಾಡ್ತವೆ ನೋಡಿ; ಆ ಕಾರಣದಿಂದ ರಸ್ತೆಗಳು ಬರ್ಬಾದ್ ಆಗಿ ಹೋಗ್ತವೆ. ಒಂದು ಕಡೆಯಲ್ಲಿ ಧೂಳು, ಇನ್ನೊಂದು ಕಡೆಯಲ್ಲಿ ಲಾರಿಗಳ ಹೊಗೆಯ ಕಾರಣದಿಂದ ಗಾಳಿ ಕೂಡ ಕಲುಷಿತವಾಗುತ್ತೆ. ಓದ್ತಾ ಇದೀರ ಸಾರ್?

ಈಗ ಹೊಸದಾಗಿ ಗಣಿಗಾರಿಕೆ ಆರಂಭಿಸೋಕೆ ಅನುಮತಿ ಕೊಟ್ಟಿದೀರಲ್ಲ? ಅದು ಸೂಕ್ಷ್ಮ ಜೀವ ವೈವಿಧ್ಯದ ತಾಣ. ಗಣಿಗಾರಿಕೆಯ ಕಾರಣದಿಂದ ಅದಷ್ಟೂ ನಾಶವಾಗುತ್ತೆ. ಜನ ಹಿಂಡು ಹಿಂಡಾಗಿ ಕಾಡಿಗೆ ಬರೋದು ಕಂಡು ಅಲ್ಲಿರೋ ಅಪರೂಪದ ಜೀವಿಗಳು ಜಾಗ ಖಾಲಿ ಮಾಡ್ತವೆ. ಒಂದು ವೇಳೆ ಗಣಿಗಾರಿಕೆ ಶುರುವಾದ ಜಾಗದಲ್ಲಿ ಚಿರತೆಯೋ, ತೋಳವೋ ಇತ್ತು ಅಂದ್ಕೊಳ್ಳಿ. ಅದು ಉಳಿಯಲು ಜಾಗವಿಲ್ಲ ಅಂದ್ಕೊಂಡು ಸೀದಾ ಹಳ್ಳಿಗಳ ಕಡೆಗೇ ನುಗ್ಗಿ ಬರುತ್ತೆ. ಒಂದು ವೇಳೆ ಹೀಗೇನಾದ್ರೂ ಆಗಿಬಿಟ್ರೆ ಎಷ್ಟೆಲ್ಲ ತೊಂದರೆ ಆಗುತ್ತೆ ಅಂತ ಲೆಕ್ಕ ಹಾಕಿದೀರಾ ಸಾರ್?

ನೇರವಾಗಿ ಹೇಳ್ತೀನಿ ಕೇಳಿ : ಜನ ಈಗ ತುಂಬ ಬೇಸರಗೊಂಡಿದ್ದಾರೆ. ಈ ರಾಜಕಾರಣಿಗಳೆಲ್ಲ ಒಳ ಒಪ್ಪಂದ ಮಾಡ್ಕೊಂಡೇ ಗಣಿಗಾರಿಕೆಗೆ ಮುಂದಾಗಿದ್ದಾರೆ. ಎಲ್ಲರದ್ದೂ ಪರ್ಸೆಂಟೇಜ್ ಲೆಕ್ಕಾಚಾರ ಆಗಿ ಹೋಗಿದೆ. ಎಲ್ಲ ಗೊತ್ತಿದ್ರೂ ಯಡಿಯೂರಪ್ಪ ತೆಪ್ಪಗಿದ್ದಾರೆ. ಇವತ್ತು ಕಲ್ಲು ಗಣಿಗಾರಿಕೆ ಮಾಡೊಲ್ಲ ಅನ್ನೋ ಜನಾನೇ ನಾಳೆ ಹತ್ತು ಹಲವು ಕಡೆಯಿಂದ ಒತ್ತಡ ತಂದು ಆ ಕೆಲಸ ಮಾಡ್ತಾರೆ. ಆಗ ಕೂಡ ಯಡಿಯೂರಪ್ಪನೋರು ಮೌನವಾಗಿ ಒಪ್ಪಿಗೆ ಕೊಟ್ಟು ಸುಮ್ಮನಾಗ್ತಾರೆ ಎಂದೆಲ್ಲ ಜನ ಮಾತಾಡಿಕೊಳ್ತಾ ಇದ್ದಾರೆ.

ದಯವಿಟ್ಟು ಅರ್ಥ ಮಾಡಿಕೊಳ್ಳಿ. ಈ ಗಣಿಗಾರಿಕೆಯಿಂದ ನಮ್ಮ ರೈತರ ಬದುಕು ಹಾಳಾಗುತ್ತೆ. ಅವರ ಜಮೀನು ಒತ್ತುವರಿಗೆ ಈಡಾಗುತ್ತೆ. ಅವರಿಗೆ ಒಂದಷ್ಟು ಭಿಕ್ಷೆ ಸಿಗುತ್ತೆ. ಈಗೇನೋ ಗಣಿಗಾರಿಕೆಗೆ ಅನುಮತಿ ಕೊಟ್ರಿ ನಾವು ಫ್ಯಾಕ್ಟರಿ ಆರಂಭಿಸ್ತೀವಿ. ಸ್ಥಳೀಯರಿಗೆ ನೌಕರಿ ಕೊಡ್ತೇವೆ ಎಂದೆಲ್ಲ ಹಣವಂರು ಬೊಂಬಡಾ ಹೊಡೀತಿದಾರೆ ನಿಜ. ಆದರೆ, ಅಲ್ಲಿ ತಳವೂರಿದ ಮೇಲೆ ಎಲ್ಲರಿಗೂ ಸರಿಯಾಗಿ ತಿರುಪತಿ ನಾಮ ಹಾಕಿಬಿಡ್ತಾರೆ. ಗಣಿಗಾರಿಕೆ ಶುರುವಾದ್ರೆ ನಮ್ಮ ಪರಿಸರಕ್ಕೆ ಒಂದು ಸಹಜತೆ ಇದೆ ನೋಡಿ, ಅದೇ ಮಾಯವಾಗಿಬಿಡುತ್ತೆ. ನಿಜ ಹೇಳಬೇಕೆಂದರೆ, ನಿಮ್ಮ ನಂತರ, ನಿಮ್ಮ ಮರಿಮಕ್ಕಳ ನಂತರದ ತಲೆಮಾರಿಗೂ ಕೂಡ ಈ ಪ್ರಾಕೃತಿಕ ಸಂಪತ್ತಿನ ಲಾಭ ದಕ್ಕಬೇಕು. ಹಾಗಿರುವಾಗ ಅದನ್ನು ಈಗಲೇ ಖಾಲಿ ಮಾಡೋದರಲ್ಲಿ ಏನಾದ್ರೂ ಅರ್ಥವಿದೆಯಾ ಸಾರ್? ಒಂದು ಗಿಡವನ್ನು ಬೆಳೆಸೋ ಶಕ್ತಿನೇ ನಿಮಗಿಲ್ಲ ಅಂದಮೇಲೆ ನೂರು ಮರಗಳನ್ನು ಕಡಿಸುವ ಹಕ್ಕು ನಿಮಗೆಲ್ಲಿದೆ ಹೇಳಿ?

ಪ್ಲೀಸ್, ಯಾರದೋ ಒತ್ತಡಕ್ಕೆ ಮಣಿದು ಗಣಿಗಾರಿಕೆ ನಡೀಲಿ ಬಿಡ್ರಿ ಅಂದುಬಿಡಬೇಡಿ. ಈಗ ಕೊಟ್ಟಿರೋ ಆದೇಶವನ್ನು ಹಿಂದಕ್ಕೆ ತಗೊಳ್ಳಿ. ಆ ಮೂಲಕ ಜನಸಾಮಾನ್ಯರ ದನಿಗೆ ದಿಕ್ಕಾಗಿ. ಪರಿಸರ ಉಳಿಯಲಿಕ್ಕೆ ಕಾರಣರಾಗಿ. ನಮಸ್ಕಾರ.

ನಾನು ಧನ್ಯ ಎಂದು ಪತ್ರಿಸಿದ್ದರು ವಿಷ್ಣುವರ್ಧನ್!

Vishnu never neglected his fans

ಒಂದು ನೆನಪಾಗಿ, ಒಂದು ನಗುವಾಗಿ, ಒಂದು ಪತ್ರವಾಗಿ, ಅಳಿಸಲಾರದಂಥ ಚಿತ್ರವಾಗಿ, ಮರೆಯಲಾಗದಂಥ ಮಾತಾಗಿ, ಸದಾ ಕಾಡುವ ಹಾಡಾಗಿ ಕ್ಷಣಕ್ಷಣವೂ ಕೈ ಜಗ್ಗುತ್ತಿರುವವರು ನಟ ವಿಷ್ಣುವರ್ಧನ್. ಅವರು ನಮ್ಮನ್ನು ಅಗಲಿ ಇಂದಿಗೆ ನಲವತ್ತು ದಿನಗಳೇ ಕಳೆದುಹೋಗಿವೆ ನಿಜ. ಆದರೆ ವಿಷ್ಣುವರ್ಧನ್ ನಮ್ಮೊಂದಿಗಿಲ್ಲ ಎನ್ನಲು ಯಾಕೋ ಮನಸ್ಸೇ ಬರುವುದಿಲ್ಲ. ಬದಲಿಗೆ, ವಿಷ್ಣು ಈಗಲೂ ನಮ್ಮೊಂದಿಗೇ ಇದ್ದಾರೆ. ಯಾವುದೋ ಸಿನಿಮಾದ ಶೂಟಿಂಗ್‌ಗೆಂದು ಬೇರೊಂದು ನಾಡಿಗೆ ಹೋಗಿದ್ದಾರೆ. ಇಷ್ಟರಲ್ಲೇ ಬಂದುಬಿಡ್ತಾರೆ ಎಂಬ ಭಾವ ಆಗೊಮ್ಮೆ ಈಗೊಮ್ಮೆ ಸುಳಿದುಹೋಗುತ್ತದೆ.

ಆದರೆ `ವಾಸ್ತವ’ ಎಂಬುದಿದೆಯಲ್ಲ? ಅದು ನಾವ್ಯಾರೂ ಒಪ್ಪಲಾರದಂಥ ಕಹಿ ಸತ್ಯವನ್ನೇ ಕಣ್ಮುಂದೆ ತಂದು ನಿಲ್ಲಿಸುತ್ತದೆ. `ನಿಮ್ಮ ಅಭಿಮಾನವೋ, ಅಕ್ಕರೆಯೋ, ದೇವರೋ, ಆರಾಧನೆಯೋ, ಸೂರ್ತಿಯೋ, ಶಕ್ತಿಯೋ ಆಗಿದ್ದ ಅವರು ನಮ್ಮೊಂದಿಗಿಲ್ಲ. ಇದೇ ಸತ್ಯ. ಒಪ್ಪಿಕೊಳ್ಳಿ’ ಅನ್ನುತ್ತದೆ.

ಇಂಥ ಸಂದರ್ಭದಲ್ಲಿ `ವಿಷ್ಣು ಅವರು ನಮ್ಮೊಂದಿಗಿಲ್ಲ’ ಎಂಬ ಕಹಿ ಸತ್ಯವನ್ನು ತುಂಬ ಸಂಕಟದಿಂದಲೇ ಒಪ್ಪಬೇಕಾಗುತ್ತದೆ. ಹಿಂದೆಯೇ ಅವರು ಹೇಗಿದ್ದರು? ಗೆಳೆಯರೊಂದಿಗೆ, ಬಂಧುಗಳೊಂದಿಗೆ, ಪತ್ರಕರ್ತರೊಂದಿಗೆ, ಪರಮಾಪ್ತರೊಂದಿಗೆ ಹೇಗೆ ಮಾತಾಡುತ್ತಿದ್ದರು ಎಂಬ ಪ್ರಶ್ನೆ ನೂರಾ ಒಂದನೇ ಬಾರಿಗೆ ಕೇಳಿ ಬರುತ್ತದೆ. ಇದಕ್ಕೆ ಹೆಚ್ಚಿನವರು ಪ್ರತಿಕ್ರಿಯಿಸುವುದು ಹೀಗೆ : ಹೆಚ್ಚಿನ ಸಂದರ್ಭಗಳಲ್ಲಿ ವಿಷ್ಣುವರ್ಧನ್ ಅನ್ಯಮನಸ್ಕರಾಗಿರ್‍ತಿದ್ದರು. ಅವರು ಹೆಚ್ಚಾಗಿ ಮಾತಾಡುತ್ತಿರಲಿಲ್ಲ. ಒಂದು ವೇಳೆ ಮಾತಾಡಿದರೂ ಅದು ಅಧ್ಯಾತ್ಮದ ಕುರಿತೇ ಇರುತ್ತಿತ್ತು. ಬದುಕಿನ ನಶ್ವರತೆಯ ಬಗ್ಗೆ ಅವರು ಹೆಚ್ಚಾಗಿ ಮಾತನಾಡುತ್ತಿದ್ದರು…’ ಇತ್ಯಾದಿ, ಇತ್ಯಾದಿ… ಆದರೆ ಅದಷ್ಟೇ ನಿಜವಲ್ಲ. ವಿಷ್ಣುವರ್ಧನ್ ಅವರೊಳಗೆ ಒಬ್ಬ ಅಕ್ಕರೆಯ ತಮ್ಮನಿದ್ದ. ಪ್ರೀತಿಸುವ ಗೆಳೆಯನಿದ್ದ. ಬುದ್ಧಿ ಹೇಳುವ ಅಣ್ಣನಿದ್ದ. ಆತ ಅಭಿಮಾನಿಗಳೊಂದಿಗೆ ಆಪ್ತವಾಗಿ ಬೆರೆಯುತ್ತಿದ್ದ. ಅವರ ಸುಖ-ದುಃಖ ವಿಚಾರಿಸುತ್ತಿದ್ದ. ಅವರ ಸಲಹೆಗಳಿಗೆ ಕಿವಿಯಾಗುತ್ತಿದ್ದ. ಅಷ್ಟೇ ಅಲ್ಲ, ಬಿಡುವು ಮಾಡಿಕೊಂಡು ಪತ್ರ ಬರೆಯುತ್ತಿದ್ದರು ಎಂಬುದಕ್ಕೆ ಸಾಕ್ಷಿಯಾಗಿ ಈ ಬರಹ. ಇಲ್ಲಿ ವಿಷ್ಣುವರ್ಧನ್ ಅವರ ಅಭಿಮಾನದ ಪತ್ರವಿದೆ. ಅವರಿಂದ ಪತ್ರ ಬರೆಸಿಕೊಂಡ ಅಭಿಮಾನಿಯ ನೆನಪಿನ ಬುತ್ತಿಯಿದೆ- ಓದಿಕೊಳ್ಳಿ.

***
ಇವರ ಹೆಸರು ಸತ್ಯಪ್ರಕಾಶ್. ಇವರೀಗ ಬೆಂಗಳೂರಿನ ಅವಲಹಳ್ಳಿ ಬಸ್‌ನಿಲ್ದಾಣದ ಬಳಿ ಅನಂತ ಸತ್ಯ ಎಸೆನ್ಶಿಯಲ್ ಕಾರ್ನರ್ ಎಂಬ ಅಂಗಡಿ ಇಟ್ಟುಕೊಂಡಿದ್ದಾರೆ. ವಿಷ್ಣುವರ್ಧನ್ ಅಭಿನಯದ `ನಾಗರಹಾವು’ ಚಿತ್ರ ತೆರೆಕಂಡಾಗ ಈ ಸತ್ಯಪ್ರಕಾಶ್‌ಗೆ ಹದಿನೇಳರ ಹರೆಯ. ಅವರು ಹೇಳುತ್ತಾರೆ : `ಆ ಸಿನಿಮಾ ನೋಡಿದ ದಿನವೇ ವಿಷ್ಣುವರ್ಧನ್ ಅವರ ಅಭಿಮಾನಿ ಆಗಿಬಿಟ್ಟೆ ಸಾರ್. ಆ ನಂತರದಲ್ಲಿ ಬಿಡುಗಡೆಯಾದ ದಿನವೇ ಅವರ ಸಿನಿಮಾ ನೋಡುವುದು, ಅವರ ಮಾತು, ಹಾವಭಾವ, ನಡೆದಾಡುವ ಭಂಗಿಯನ್ನು ಅನುಕರಿಸುವುದು… ಇದೆಲ್ಲಾ ನನ್ನ ಬದುಕಿನ ಒಂದು ಭಾಗವೇ ಆಗಿಹೋಯ್ತು. ಒಂದೇ ಒಂದು ಸಾರಿ ಅವರನ್ನು ಪ್ರತ್ಯಕ್ಷವಾಗಿ ನೋಡಬೇಕು ಅಂತ ಪದೇಪದೆ ಅಂದುಕೊಳ್ತಿದ್ದೆ. ಆದರೆ ಸಾಧ್ಯವಾಗಿರಲಿಲ್ಲ…’

ಹೀಗೆನ್ನುವ ಸತ್ಯಪ್ರಕಾಶ್ ಅವರಿಗೆ ವಿಷ್ಣುವರ್ಧನ್‌ರನ್ನು ಭೇಟಿಯಾಗುವ ಅವಕಾಶ ಸಿಕ್ಕಿದ್ದು ಕೂಡ ಆಕಸ್ಮಿಕವಾಗಿ. ಅದು ಹೀಗೆ : 1985ರಲ್ಲಿ ನಟ ವಿಜಯಕಾಂತ್ ಅವರೊಂದಿಗೆ ವಿಷ್ಣುವರ್ಧನ್ ಈಟಿ ಎಂಬ ತಮಿಳು ಚಿತ್ರದಲ್ಲಿ ಅಭಿನಯಿಸಿದ್ದರು. ವಿಷ್ಣು ನಟಿಸಿದ ಮೊದಲ ತಮಿಳು ಸಿನಿಮಾ ಅದು. ವಾಣಿಜ್ಯ ಮಂಡಳಿಯ ಅಂದಿನ ನಿಯಮಾವಳಿಯಂತೆ ತಮಿಳು ಚಿತ್ರವೊಂದು ಏಕಕಾಲಕ್ಕೆ ಚೆನ್ನೈ ಹಾಗೂ ಬೆಂಗಳೂರಿನಲ್ಲಿ ಬಿಡುಗಡೆ ಆಗುವಂತಿರಲಿಲ್ಲ.

ಚಿತ್ರ ಬಿಡುಗಡೆಯ ದಿನ ಹತ್ತಿರಾದಂತೆಲ್ಲ ಅಭಿಮಾನಿಗಳಿಗೆ ಕುತೂಹಲ. ತಮಿಳಿನಲ್ಲಿ ವಿಷ್ಣುವರ್ಧನ್ ಹೇಗೆ ಅಭಿನಯಿಸಿರಬಹುದು? ಹೇಗೆ ಡೈಲಾಗ್ ಹೇಳಿರಬಹುದು? ಹೇಗೆಲ್ಲ ಫೈಟ್ ಮಾಡಿರಬಹುದು ಎಂದು ತಿಳಿಯುವ ತಹತಹ. ಇಂಥ ಅಭಿಮಾನಿಗಳ ಹಿಂಡಿನಲ್ಲಿ ಸತ್ಯಪ್ರಕಾಶ್ ಕೂಡ ಇದ್ದರು ಎಂದು ಬಿಡಿಸಿಹೇಳಬೇಕಿಲ್ಲ ತಾನೆ? ಅಭಿಮಾನದ ಮುಂದೆ ಚೆನ್ನೈ ಅದ್ಯಾವ ಮಹಾ ದೂರ? ಈಟಿ ಸಿನಿಮಾವನ್ನು ಬಿಡುಗಡೆಯಾದ ದಿನವೇ ನೋಡಬೇಕೆಂಬ ಏಕೈಕ ಉದ್ದೇಶದಿಂದ ಇಬ್ಬರು ಗೆಳೆಯರೊಂದಿಗೆ ಚೆನ್ನೈಗೆ ಹೋಗಿಯೇಬಿಟ್ಟರು ಸತ್ಯಪ್ರಕಾಶ್. ಅಲ್ಲಿ ಸಿನಿಮಾ ನೋಡಿದ್ದೂ ಆಯಿತು. ಹೀಗಿದ್ದಾಗಲೇ ಆಕಸ್ಮಿಕವಾಗಿ, ವಿಜಯಕಾಂತ್ ಅವರನ್ನು ಭೇಟಿಯಾಗುವ ಅದೃಷ್ಟ ಸತ್ಯಪ್ರಕಾಶ್ ಮತ್ತು ಗೆಳೆಯರದ್ದಾಯಿತು. ತಾವೆಲ್ಲ ವಿಷ್ಣುವರ್ಧನ್ ಅವರ ಅಭಿಮಾನಿಗಳೆಂದೂ, ಈಟಿ ಸಿನಿಮಾ ನೋಡುವ ಉದ್ದೇಶದಿಂದಲೇ ಬೆಂಗಳೂರಿನಿಂದ ಬಂದೆವೆಂದೂ ಇವರು ಹೇಳಿಕೊಂಡರು. ಈ ಮಾತಿಂದ ತುಂಬ ಖುಷಿಯಾದ ವಿಜಯಕಾಂತ್- `ನಿಮ್ಮ ಪ್ರೀತಿಯ ವಿಷ್ಣುವರ್ಧನ್ ಅವರು ಹತ್ತಿರದ ಶಾರದಾ ಸ್ಟುಡಿಯೋದಲ್ಲಿ ಶೂಟಿಂಗ್‌ನಲ್ಲಿ ಇದ್ದಾರೆ. ಈಗ ಅಲ್ಲಿಗೆ ಡ್ರಾಪ್ ಕೊಡಿಸ್ತೀನಿ. ಅವರನ್ನು ಭೇಟಿ ಮಾಡಿ’ ಎಂದರು. ಹಿಂದೆಯೇ ಶಾರದಾ ಸ್ಟುಡಿಯೋಗೆ ಫೋನ್ ಮಾಡಿ ವಿಷ್ಣುವರ್ಧನ್ ಅವರಿಗೆ ಎಲ್ಲ ವಿಷಯ ತಿಳಿಸಿದರು. ಅಷ್ಟೇ ಅಲ್ಲ, ಈ ಅಭಿಮಾನಿಗಳನ್ನು ತಮ್ಮ ಕಾರ್‌ನಲ್ಲಿಯೇ ಶಾರದಾ ಸ್ಟುಡಿಯೋಗೆ ಕಳಿಸಿಕೊಟ್ಟರು.

ಅಲ್ಲಿ `ನೀ ತಂದ ಕಾಣಿಕೆ’ ಚಿತ್ರದ ಶೂಟಿಂಗ್ ನಡೆಯುತ್ತಿತ್ತು. ಸತ್ಯಪ್ರಕಾಶ್ ಮತ್ತು ಗೆಳೆಯರು ಹೂವಿನ ಹಾರಗಳೊಂದಿಗೆ ಅಲ್ಲಿಗೆ ಹೋದರು. ಇವರನ್ನು ಪ್ರೀತಿಯಿಂದ ಸ್ವಾಗತಿಸಿದ ವಿಷ್ಣು ಹೇಳಿದರಂತೆ : ಈ ಹಾರವೆಲ್ಲಾ ಯಾಕೆ? ನಾವೂ ನಿಮ್ಮ ಹಾಗೆ ಸಾಮಾನ್ಯ ಮನುಷ್ಯರೇ. ಸಿನಿಮಾ ನಟ ಅಂದಾಕ್ಷಣ ನೀವು ಏನೇನೋ ಕಲ್ಪಿಸಿಕೊಳ್ಳಬೇಡಿ. ಈ ಹಾರವನ್ನು ನಾವು ಐದು ನಿಮಿಷ ಹಾಕ್ಕೊಂಡಿದ್ದು ಆಮೇಲೆ ಬಿಸಾಕ್ತೀವಿ. ವಿಷಯ ಹೀಗಿರುವಾಗ ಹೂವಿನ ಹಾರಕ್ಕೆ ಯಾಕೆ ದುಡ್ಡು ಖರ್ಚು ಮಾಡ್ತೀರಿ? ಅದೇ ಹಣವನ್ನು ಯಾವುದಾದರೂ ಸತ್ಕಾರ್ಯಕ್ಕೆ ಬಳಸಿ. ಯಾರಾದರೂ ಬಡವರಿಗೆ, ಅಸಹಾಯಕರಿಗೆ ಸಹಾಯ ಮಾಡಿ. ನೀವು ತುಂಬ ಅಭಿಮಾನ ಇಟ್ಕೊಂಡು ಬರ್‍ತೀರಲ್ಲ, ಅದೇ ನನಗೆ ದೊಡ್ಡ ಉಡುಗೊರೆ. ಅದಕ್ಕೆ ಸಮನಾದದ್ದು ಬೇರೆ ಏನೂ ಇಲ್ಲ…’

ಮೆಚ್ಚಿನ ನಟ ಮೊದಲ ಭೇಟಿಯಲ್ಲೇ ಹೀಗೆ ಆಪ್ತವಾಗಿ ಮಾತಾಡಿದ್ದು ಕಂಡು ಸತ್ಯಪ್ರಕಾಶ್ ಮತ್ತು ಗೆಳೆಯರಿಗೆ ಸ್ವರ್ಗ ಮೂರೇಗೇಣು. ಆನಂತರದಲ್ಲಿ ಪ್ರತಿವರ್ಷವೂ ವಿಷ್ಣು ಅವರ ಹುಟ್ಟುಹಬ್ಬದಂದು ಮುಖತಃ ಭೇಟಿಯಾಗಿ ಅಭಿನಂದಿಸುವುದು ಸತ್ಯಪ್ರಕಾಶ್ ಮತ್ತು ಗೆಳೆಯರ ಕರ್ತವ್ಯವೇ ಆಗಿಹೋಯಿತು. ಆ ದಿನಗಳಲ್ಲಿ ಚೆನ್ನೈನಲ್ಲಿ ವಾಸವಿದ್ದ ವಿಷ್ಣುವರ್ಧನ್, ಬೆಂಗಳೂರಿಗೆ ಬಂದರೆ ಅಶೋಕ ಹೋಟೆಲಿನ ರೂಂ. ನಂ. 408ರಲ್ಲಿ ಅಥವಾ ಎಂ.ಜಿ. ರಸ್ತೆಯ ಅಪಾರ್ಟ್‌ಮೆಂಟ್‌ನಲ್ಲಿ ಉಳಿಯುತ್ತಿದ್ದರು. ಹುಟ್ಟುಹಬ್ಬ ಕೂಡ ಅಲ್ಲಿಯೇ ನಡೆಯುತ್ತಿತ್ತು. (ಈ ಸಂದರ್ಭದಲ್ಲಿ ಗದ್ದಲವಾದರೆ ಅಕ್ಕಪಕ್ಕದ ರೂಂ/ಮನೆಗಳಲ್ಲಿ ಇರುವವರಿಗೆ ತೊಂದರೆ ಆಗುತ್ತೆ ಎಂದು ಯೋಚಿಸಿ, ದಯವಿಟ್ಟು ಶಾಂತವಾಗಿ ವರ್ತಿಸಿ ಎಂದು ಎಲ್ಲರಿಗೂ ಮನವಿ ಮಾಡುತ್ತಿದ್ದರಂತೆ ವಿಷ್ಣು). ಯಥಾಪ್ರಕಾರದಂತೆ ಕೇಕ್ ಕತ್ತರಿಸುವುದು, ಗೆಳೆಯರು ಬಂಧುಗಳೊಂದಿಗೆ ಊಟ ಮಾಡುವುದು, ಶುಭಾಶಯ ಹಂಚಿಕೊಳ್ಳುವುದು… ಹೀಗಿರುತ್ತಿತ್ತು ಹುಟ್ಟುಹಬ್ಬದ ಪಾರ್ಟಿ.

ಅದೊಮ್ಮೆ ಇಂಥ ಪಾರ್ಟಿಯನ್ನು ನೋಡಿದ ಸತ್ಯಪ್ರಕಾಶ್‌ಗೆ ತನ್ನ ಅಭಿಮಾನದ ನಟನ ಹಟ್ಟುಹಬ್ಬ ಬೇರೆ ಥರದಲ್ಲಿ ನಡೆದರೆ ಚೆಂದ ಅನ್ನಿಸಿದಂತೆ. ಅವತ್ತೇ ಕೂತು ಭರ್ತಿ ಎಂಟು ಪುಟಗಳ ಪತ್ರ ಬರೆದವರೇ ಮರುದಿನವೇ ಎಂ.ಜಿ. ರಸ್ತೆಯ ಅಪಾರ್ಟ್‌ಮೆಂಟ್‌ಗೆ ಹೋಗಿ, ವಿಷ್ಣುವರ್ಧನ್ ಅವರಿಗೇ ಪತ್ರ ತಲುಪಿಸಿ ಬಂದುಬಿಟ್ಟರು. ಅದರಲ್ಲಿ ಬರ್ತ್‌ಡೇನ ಹೇಗೆ ಆಚರಿಸಿದರೆ ಚೆಂದ ಎಂಬ ವಿವರಣೆಯಿತ್ತು. ಹಿರಿಯ ಕಲಾವಿದರನ್ನು ಸನ್ಮಾನಿಸುವ ಮೂಲಕ, ಸಮಾಜ ಸೇವೆಯಂಥ ಕಾರ್ಯದ ಮೂಲಕ ಬರ್ತ್‌ಡೇ ಆಚರಿಸಿಕೊಳ್ಳಿ ಎಂಬ ಸಲಹೆಯೂ ಇತ್ತು.

ಹದಿನೈದು ದಿನಗಳ ನಂತರ ಸತ್ಯಪ್ರಕಾಶ್ ಅವರ ವಿಳಾಸಕ್ಕೆ ಒಂದು ಪತ್ರ ಬಂತು. ಅದರಲ್ಲಿ ವಿಷ್ಣುವರ್ಧನ್ ಹೀಗೆ ಬರೆದಿದ್ದರು : ನಿಮ್ಮ ಪತ್ರವನ್ನು ಓದಿ ಬಹಳ ಸಂತೋಷವಾಯಿತು. ತಾವು ಈ ಪತ್ರ ತಲುಪಿದೊಡನೆ ಕಂಠೀರವ ಸ್ಟುಡಿಯೋದಲ್ಲಿ ನನ್ನನ್ನು ಭೇಟಿಯಾಗುವುದು. ಅಲ್ಲಿ ನಾವು ಕೂಲಂಕಶವಾಗಿ ಮಾತನಾಡಬಹುದು. ನಿಮ್ಮ ಪತ್ರದಲ್ಲಿ ನೀವು ಕೊಟ್ಟಿರುವ ಸಲಹೆಗಳನ್ನು ನಾನು ನಿಮ್ಮ ಬಳಿ ಚರ್ಚಿಸುತ್ತೇನೆ. ನಿಮ್ಮಂಥ ಅಭಿಮಾನಿಯನ್ನು ಪಡೆದ ನಾನು ಧನ್ಯ. ನಿಮಗೆ ಬಿಡುವಾದಾಗ, ಅಂದರೆ ಇನ್ನೊಂದು, ಎರಡು ದಿನಗಳಲ್ಲಿ ಸ್ಟುಡಿಯೋದಲ್ಲಿ ಭೇಟಿಯಾಗಿ… ನಿಮ್ಮ, ವಿಷ್ಣುವರ್ಧನ್.

***
ವಿಪರಾಸ್ಯಗಳು ಹೇಗಿರುತ್ತವೆಯೋ ನೋಡಿ. ವಿಷ್ಣುವರ್ಧನ್ ಅವರನ್ನು ಭೇಟಿಯಾಗಲು ನಿರ್ಧರಿಸಿದ್ದ ದಿನವೇ ಆಪ್ತಮಿತ್ರನ ಮದುವೆ ಇತ್ತು. ಹಾಗಾಗಿ ಸತ್ಯಪ್ರಕಾಶ್ ಅವರಿಗೆ ತಮ್ಮ ಆರಾಧ್ಯ ದೈವವನ್ನು ಭೇಟಿಯಾಗಲು ಸಾಧ್ಯವಾಗಲಿಲ್ಲ. ಇವರು ನೀಡಿದ್ದ ಸಲಹೆಗಳ ಬಗ್ಗೆ ವಿಷ್ಣು ಅದೆಷ್ಟು ಕಾಳಜಿ ತೋರಿದರೆಂದರೆ, ಮುಂದಿನ ವರ್ಷ ಈ ಅಭಿಮಾನಿಯ ಸಲಹೆ-ಸೂಚನೆಯಂತೆಯೇ ನಟ ಬಾಲಕೃಷ್ಣ ಅವರನ್ನು ಸನ್ಮಾನಿಸುವ ಮೂಲಕ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡರಂತೆ…

ಈಗ, ಅವಲಹಳ್ಳಿಯಲ್ಲಿರುವ ತಮ್ಮ ಅಂಗಡಿಯಲ್ಲಿ ನಿಂತು ಹಳೆಯ ನೆನಪುಗಳನ್ನೆಲ್ಲ ಹೇಳುತ್ತ ಹೇಳುತ್ತಲೇ ಕಣ್ತುಂಬಿಕೊಳ್ಳುತ್ತಾರೆ ಸತ್ಯಪ್ರಕಾಶ್ (ಮೊಬೈಲ್ : 98808 11197). ಅವರ ಮಾತನ್ನೆಲ್ಲ ಕೇಳಿದ ನಂತರ- `ವಿಷ್ಣು ಜೀ, ವಿ ಮಿಸ್ ಯೂ…’ ಎಂದು ಸಂಕಟದಿಂದ ಹೇಳಬೇಕು ಅನಿಸುತ್ತದೆ. ಆದರೆ, ವಿಷ್ಣೂಜೀ ಅನ್ನುತ್ತಿದ್ದಂತೆಯೇ ಕಣ್ಣು ಮಂಜುಮಂಜಾಗಿ ಗಂಟಲು ಗದ್ಗದವಾಗುತ್ತದೆ… ಯಾಕೋ…

//
//

Letter by Vishnuvardhan to fan Satyaprakash

View Kannada Actor Dr. Vishnuvardhan Pictures.

Dr. Vishnuvardhan Wallpapers…
Crazy about Dr. Vishnuvardhan? Join fan Club

Date: 02/11/2010
Full size: 680×1075
Letter by Vishnuvardhan to fan Satyaprakash

ಇಲ್ಲಿಂದಲೇ ಕೈ ಮುಗಿದರೆ ಅಲ್ಲಿಂದಲೇ ಹರಸಿದರು!

Venkamma and KS Narasimha Swamy
ನಮ್ಮಲ್ಲಿ ಹೆಚ್ಚಿನವರು ಅಂಥದೊಂದು ಕೆಲಸ ಮಾಡುತ್ತಾರೆ. ಏನೆಂದರೆ -ಮನಮೆಚ್ಚಿದ ಹುಡುಗ/ ಹುಡುಗಿಯನ್ನು ವರ್ಣಿಸಿ ಪದ್ಯ ಬರೆಯುತ್ತಾರೆ. ಒಂದು ವೇಳೆ ಹೀಗೆ ಬರೆಸಿಕೊಂಡವರು ನಂತರ ಕೈತಪ್ಪಿ ಹೋದರೆ, ಅದೇ ನೆನಪಿನಲ್ಲಿ ಮತ್ತಷ್ಟು ಪದ್ಯ ಬರೆಯುತ್ತಾರೆ. ಆ ಪದ್ಯಗಳಲ್ಲಿ ಅವಳ(ನ)ನ್ನು ಯಾವುದೋ ಒಂದು ಗುಪ್ತ ಹೆಸರಿಂದ ಕರೆಯುತ್ತಾರೆ. ಅದನ್ನು ಪರಮಾಪ್ತರ ಮುಂದೆ ಹೇಳಿಕೊಂಡು ಎದೆಯನ್ನು ಹಗುರ ಮಾಡಿಕೊಳ್ಳುತ್ತಾರೆ. ಹಿಂದೆಯೇ `ಇದು ಗುಟ್ಟಿನ ವಿಚಾರ. ಯಾರಿಗೂ ಹೇಳಬಾರ್‍ದು ಪ್ಲೀಸ್’ ಎಂಬ ಎಚ್ಚರಿಕೆಯನ್ನೂ ನೀಡುತ್ತಾರೆ. ಇಂಥ ವಿಷಯಗಳಲ್ಲಿ ಹುಡುಗಿಯರಿಗಿಂತ ಹುಡುಗರೇ ಮುಂದಿರುತ್ತಾರೆ. ಸ್ವಾರಸ್ಯವೆಂದರೆ, ಕೈ ತಪ್ಪಿ ಹೋದ (ಒಂದೊಂದು ಸಂದರ್ಭದಲ್ಲಿ ಮೋಸ ಮಾಡಿ ಹೋದ) ಹುಡುಗಿಯನ್ನೂ ಮಲ್ಲಿಗೆ, ಸಂಪಿಗೆ, ಅಪ್ಸರೆ, ಕರುಣಾಮಯಿ ಎಂದೆಲ್ಲಾ ವರ್ಣಿಸಿರುತ್ತಾರೆ- ಪದ್ಯಗಳಲ್ಲಿ.

ಬದುಕಿದ್ದ ಅಷ್ಟೂ ದಿನ ಪ್ರೀತಿಯನ್ನೇ ಉಸಿರಾಡಿದವರು, ಪ್ರೀತಿಯನ್ನೇ ಧ್ಯಾನಿಸಿದವರು, ಪ್ರೀತಿಯ ಬಗ್ಗೆಯೇ ಬರೆದವರು ಕೆ.ಎಸ್. ನರಸಿಂಹಸ್ವಾಮಿ. ಒಂದೆರಡಲ್ಲ, ಒಟ್ಟು ಹದಿನೇಳು ಕವನ ಸಂಕಲನಗಳನ್ನೂ ಪ್ರಕಟಿಸಿದ್ದು ಅವರ ಹೆಚ್ಚುಗಾರಿಕೆ. ಸ್ವಾರಸ್ಯವೆಂದರೆ, ಎಲ್ಲ ಪದ್ಯಗಳಲ್ಲೂ `ಪ್ರೀತಿ’ಯ ವಿಷಯವನ್ನೇ ಜತೆಗಿಟ್ಟುಕೊಂಡು ಕಾವ್ಯದ ಮಾಲೆ ಕಟ್ಟಿದವರು ಕೆ.ಎಸ್.ನ. ಉಳಿದೆಲ್ಲ ಕವಿಗಳೂ ಆರಂಭದ ದಿನಗಳಲ್ಲಿ ವಯೋಸಹಜ ಎಂಬಂತೆ ಪ್ರೇಮಗೀತೆ ಬರೆದು ನಂತರದಲ್ಲಿ ಕಾವ್ಯದ ಬೇರೆ ಬೇರೆ ಪ್ರಾಕಾರಕ್ಕೆ ಹೊರಳಿಕೊಂಡರು ನಿಜ. ಆದರೆ, 85 ತುಂಬಿದ ನಂತರವೂ ಕೆ.ಎಸ್.ನ ಪ್ರೀತಿ- ಪ್ರೇಮದ ಪಲ್ಲಕ್ಕಿಯಲ್ಲಿ ಕುಳಿತೇ ಮಲ್ಲಿಗೆ, ಸಂಪಿಗೆ, ಜಾಜಿ, ಮುರುಗದಂಥ ಮಧುರಾತಿ ಮಧುರ ಹಾಡು ಕಟ್ಟಿದರು. ಅವರ ಪದ್ಯಗಳೆಲ್ಲ ಆಗಷ್ಟೇ ಅರಳಿದ ಪಾರಿಜಾತದ ಘಮದಂತೆ `ಫ್ರೆಶ್’ ಆಗಿದ್ದವು. ತಾಜಾ ಆಗಿದ್ದವು.

ಮುತ್ತನಿಡುವೆನು ಅರಳು ಪ್ರೇಮದ ಗುಲಾಬಿಯೇ
ಮುತ್ತನಿಡುವೆನು, ನಕ್ಕು, ಮುತ್ತ ಸುರಿಸು
ಸುತ್ತಸಾವಿರ ಹೂವು ಕತ್ತೆತ್ತಿ ನೋಡಿದರೆ
ಅತ್ತ ಹೋಗದಿದು, ನಿನ್ನ ಹಿಡಿದ ಮನಸು.
***
ನಿನ್ನ ಪ್ರೇಮದ ಪರಿಯ ನಾನರಿಯೆ ಕನಕಾಂಗಿ
ನಿನ್ನೊಳಿದೆ ನನ್ನ ಮನಸು
ಹುಣ್ಣಿಮೆಯ ರಾತ್ರಿಯಲಿ ಉಕ್ಕುವುದು ಕಡಲಾಗಿ
ನಿನ್ನೊಲುಮೆ ನನ್ನ ಕಂಡು
***
ತಾರೆಯಿಂದ ತಾರೆಗವಳು ಅಡಿಯಿಡುವುದ ಕಂಡೆನು
ಹೂವನಸೆದು ನಡೆದಳವಳು ಒಂದೆರಡನು ತಂದೆನು
ಇವಳು ಯಾರು ಬಲ್ಲಿರೇನೂ….
***
ನಡು ಬೆಟ್ಟದಲ್ಲಿ ನಿನ್ನೂರು
ಅಲ್ಲಿಹವು ನವಿಲು ಮುನ್ನೂರು
ಮುನ್ನೂರು ನವಿಲು ಬಂದಂತೆ
ನೀ ಬಂದರೆನಗೆ; ಸಿರಿವಂತೆ
ಅಂತಿಂಥ ಹೆಣ್ಣು ನೀನಲ್ಲ…

ಹೀಗೆಲ್ಲ ಬರೆದವರು ಕೆ.ಎಸ್.ನ. ಪದ್ಯಗಳಲ್ಲಿ ಮೀನಾಕ್ಷಿ, ಕಾಮಾಕ್ಷಿ, ರತ್ನ, ಪದುಮ, ಗೌರಿ, ಶಾರದೆ ಎಂದೆಲ್ಲ ಕರೆಸಿಕೊಂಡ ಅವರ ಕಥಾನಾಯಕಿಗೆ ಯಾವಾಗಲೂ 25ರ ಏರು ಹರೆಯ! ಆಕೆ ಸುಂದರಿ, ಸುಶೀಲೆ, ಸೊಗಸುಗಾತಿ ಮತ್ತು ಕರುಣಾಮಯಿ. ಕೆ.ಎಸ್.ನ. ಅವರ ಪದ್ಯಗಳನ್ನು ಖುಷಿ ಹಾಗೂ ಬೆರಗಿನಿಂದ ಓದುತ್ತಿದ್ದ ಹಲವರು ತಮ್ಮ ತಮ್ಮೊಳಗೇ ಹೀಗೆ ಪಿಸುಗುಡುತ್ತಿದ್ದುದುಂಟು: `ಬಹುಶಃ ಕೆ.ಎಸ್.ನ. ಕೂಡ ಯಾರನ್ನೋ ಪ್ರೀತಿಸಿದ್ರು ಅಂತ ಕಾಣುತ್ತೆ. ಮುಂದೆ, ಆಕೆ ಕೈತಪ್ಪಿ ಹೋಗಿರಬೇಕು. ಅದೇ ನೆನಪಲ್ಲಿ ಅವರು ಒಂದೊಂದೇ ಪದ್ಯ ಬರೆದಿದ್ದಾರೆ ಅನಿಸುತ್ತೆ. ತಮ್ಮ ಮನಸ್ಸು ಗೆದ್ದವಳ ಗುರುತು ಯಾರಿಗೂ ಸಿಗದಿರಲಿ ಎಂಬ ಕಾರಣದಿಂದಲೇ ಅವರು ಕಥಾ ನಾಯಕಿಗೆ ಬಗೆಬಗೆಯ ಹೆಸರು ಕೊಟ್ಟಿರಬೇಕು. ಇದೇ ಸತ್ಯವಿರಬೇಕು. ಪ್ರೇಯಸಿಯ ಬಗ್ಗೆ ಬರೆಯಲು ಹೊರಟರೆ ಪದ್ಯ ತಾನಾಗೇ ಸೃಷ್ಟಿಯಾಗುತ್ತೆ. ಅಂದುಕೊಂಡಿದ್ದಕ್ಕಿಂತ ಚೆನ್ನಾಗಿಯೂ ಇರುತ್ತೆ. ಅದು ಬಿಟ್ಟು ಯಾರಾದ್ರೂ ಹೆಂಡತಿಯ ಮೇಲೆ ಇಷ್ಟೊಂದು ಚೆಂದ ಚೆಂದದ ಪದ್ಯಗಳನ್ನು ಬರೀತಾರಾ? ಹೆಂಡತೀನ ಉದಾಹರಣೆ ಇಟ್ಕೊಂಡು ಒಳ್ಳೇ ಪದ್ಯ ಬರೆಯೋಕಾಗುತ್ತಾ? ಛೆ, ಇರಲಿಕ್ಕಿಲ್ಲ ಬಿಡ್ರಿ…

ಮುಂದೊಂದು ದಿನ ಇಂಥ ಪಿಸುಮಾತುಗಳೆಲ್ಲ ಕೆ.ಎಸ್.ನ. ಅವರ ಪತ್ನಿ ಶ್ರೀಮತಿ ವೆಂಕಮ್ಮನವರ ಕಿವಿಗೂ ಬಿದ್ದವು. ಅದೊಂದು ದಿನ ಕೆ.ಎಸ್.ನ ಅವರ ಮಗ್ಗುಲಲ್ಲಿ ಕೂತೇ ವೆಂಕಮ್ಮನವರು ತುಂಬ ಸ್ಪಷ್ಟವಾಗಿ ಹೇಳಿದ್ದರು: ನಮ್ಮ ಯಜಮಾನರು ಶ್ರೀ ರಾಮಚಂದ್ರ ಇದ್ದ ಹಾಗೆ, ಬೇರೊಂದು ಹೆಣ್ಣನ್ನು ಅವರು ಕಣ್ಣೆತ್ತಿ ಕೂಡ ನೋಡಿದವರಲ್ಲ. ಅವರ ಪದ್ಯಗಳಲ್ಲಿ ಬರುವ ಕಾಮಾಕ್ಷಿ, ಪದುಮ, ಗೌರಿ, ರತ್ನ, ಮೀನಾಕ್ಷಿ ಎಲ್ಲವೂ ನಾನೇ. `ವೆಂಕಮ್ಮ’ ಅನ್ನೋ ಹೆಸರು ಪದ್ಯದಲ್ಲಿ ಚೆನ್ನಾಗಿ ಕಾಣಿಸೋದಿಲ್ಲ ನೋಡಿ; ಹಾಗಾಗಿ ಸ್ವಲ್ಪ ಫ್ಯಾಷನ್ನಾಗಿ ಕಾಣುವಂಥ ಹೆಸರುಗಳನ್ನು ಯಜಮಾನರು ಬಳಸಿದ್ದಾರೆ, ಅಷ್ಟೆ…

ಆ ನಂತರದ ದಿನಗಳಲ್ಲಿ `ಮೈಸೂರ ಮಲ್ಲಿಗೆ’ಯ ಹಾಡುಗಳನ್ನು ಕೇಳಿದಾಗೆಲ್ಲ- ಇಷ್ಟೊಂದು ಕವನಗಳಿಗೆ ನಾಯಕಿಯಾದ ವೆಂಕಮ್ಮನವರು ಪುಣ್ಯವಂತೆ ಅನ್ನಿಸುತ್ತಿತ್ತು. ಕೆ.ಎಸ್.ನ.ರೊಂದಿಗೆ ಅವರ ಮಧುರ ಪ್ರೇಮದ ನೆನಪಾಗಿ ಹೆಮ್ಮೆಯಾಗುತ್ತಿತ್ತು. ಜತೆಗೇ ಒಂದಿಷ್ಟು ಅಸೂಯೆಯೂ…

***
ಕೆ.ಎಸ್.ನ ಹುಟ್ಟಿದ್ದು ಜನವರಿ 26ರಂದು. ಅದೇ ನೆಪದಿಂದ ಮನೆಯಲ್ಲಿ ಹಬ್ಬದಡುಗೆ ಮಾಡಿದರೆ, ಹೆಂಡತಿ- ಮಕ್ಕಳನ್ನೆಲ್ಲ ಕರೆದು ಕೆ.ಎಸ್.ನ ಹೇಳುತ್ತಿದ್ದರಂತೆ: `ನೋಡಿ, ನನ್ನ ಬರ್ತ್‌ಡೇನ ದೇಶಕ್ಕೆ ದೇಶವೇ ಹೆಮ್ಮೆಯಿಂದ ಆಚರಿಸ್ತಾ ಇದೆ!’ ದಾಂಪತ್ಯ ಜೀವನದ ಉದ್ದಕ್ಕೂ ವರ್ಷ ವರ್ಷವೂ ಯಜಮಾನರಿಂದ ಇಂಥ ತಮಾಷೆಯ ಮಾತುಗಳನ್ನು ಕೇಳುತ್ತಲೇ ಬಂದವರು ವೆಂಕಮ್ಮ. ಈ ಮಾತುಗಳನ್ನೆಲ್ಲ ಅವರು ತಮ್ಮ ಬಂಧುಗಳು ಹಾಗೂ ಆಪ್ತರ ಬಳಿ ಹೇಳಿಕೊಂಡು ಖುಷಿಪಡುತ್ತಿದ್ದರು. ಹೀಗಿದ್ದಾಗಲೇ ತುಂಬ ಅವಸರದಲ್ಲೇ ಒಂದಷ್ಟು ಬದಲಾವಣೆಯಾಯಿತು. ಕವಿ ಕೆ.ಎಸ್.ನ ಎಂದೂ ಬಾರದ ಲೋಕಕ್ಕೆ ಹೋಗಿಬಿಟ್ಟರು.

ಓಡುವ ಕಾಲಕ್ಕೆ ಯಾವ ತಡೆ? ಕೆ.ಎಸ್.ನ ಅವರಿಲ್ಲದಿದ್ದರೂ ಮತ್ತೊಮ್ಮೆ ಜನವರಿ 26ರ ದಿನ ಬಂದೇ ಬಂತು. `ನನ್ನ ಬರ್ತ್‌ಡೇನ ಇಡೀ ದೇಶವೇ ಆಚರಿಸುತ್ತದೆ’ ಎಂದು ಕೆ.ಎಸ್.ನ ಹೇಳುತ್ತಿದ್ದ ಮಾತು ನೆನಪಿಗೆ ಬಂತು. ಮನೇಲಿ ಅಪ್ಪ ಇಲ್ಲ. ಅಮ್ಮ ಒಬ್ಬರೇ ಅನ್ನಿಸಿದಾಗ ಕೆ.ಎಸ್.ನ ಪುತ್ರಿ ತುಂಗಭದ್ರಾ ಒಂದು ನಿರ್ಧಾರಕ್ಕೆ ಬಂದರು. ತಮ್ಮ ಮನೆಯಂಗಳದಲ್ಲಿ ಅಪ್ಪನ ಹಾಡುಗಳನ್ನು ಎಲ್ಲರಿಗೂ ಕೇಳಿಸುವ ತೀರ್ಮಾನಕ್ಕೆ ಬಂದರು.

ಇಂಥ ಸಂದರ್ಭದಲ್ಲಿ ಕೆ.ಎಸ್.ನ ಕುಟುಂಬಕ್ಕೆ ಸಾಥ್ ನೀಡಿದ್ದು ಉಪಾಸನಾ ಮೋಹನ್ ಮತ್ತು ಇತರೆ ಗಾಯಕ, ಗಾಯಕಿಯರು. ಪ್ರತಿ ವರ್ಷ ಜನವರಿ 26 ಬಂದರೆ ಸಾಕು, ಬೆಂಗಳೂರಿನ ಸೀತಾ ಸರ್ಕಲ್‌ನಲ್ಲಿರುವ ಕೆ.ಎಸ್.ನ. ಪುತ್ರಿ ತುಂಗಭದ್ರಾ ಅವರ ಮನೆಯ ಮುಂದೆ ಜನಜಾತ್ರೆ ಸೇರುತ್ತಿತ್ತು. ಅಲ್ಲಿ ಕೆ.ಎಸ್.ನ ಅವರ ಬಂಧುಗಳು, ಮಿತ್ರರು, ಅಭಿಮಾನಿಗಳಿರುತ್ತಿದ್ದರು. ಎಲ್ಲರಿಗಿಂತ ಮುಂದೆ ಒಂದು ಬೆತ್ತದ ಕುರ್ಚಿಯಲ್ಲಿ ವೆಂಕಮ್ಮನವರು ಕೂತಿರುತ್ತಿದ್ದರು. ಕಾರ್ಯಕ್ರಮ ಶುರುವಾದ ನಂತರದಲ್ಲಿ `ನವಿಲೂರಿನೊಳಗೆಲ್ಲ ನೀನೆ ಬಲು ಚೆಲುವೆ,’ `ಬಾರೆ ನನ್ನ ಶಾರದೆ’, `ಒಂದಿರುಳು ಕನಸಿನಲಿ ನನ್ನವಳ ಕೇಳಿದೆನು,’ `ಅತ್ತಿತ್ತ ನೋಡದಿರು ಅತ್ತು ಹೊರಳಾಡದಿರು…’ ಗೀತೆಗಳು ಒಂದರ ಹಿಂದೊಂದು ಕೇಳಿ ಬರುತ್ತಿದ್ದವು. ಕೇಳುತ್ತ ಕೂತವರಿಗೆ, ಜತೆಗೆ ಕವಿಗಳಿಲ್ಲವಲ್ಲ ಎಂಬ ದುಃಖ ಒಂದು ಕಡೆ ಹಿಂದೆಯೇ ಎಲ್ಲ ಪದ್ಯಗಳ ಕಥಾನಾಯಕಿ ವೆಂಕಮ್ಮನವರು ಜತೆಗಿದ್ದಾರೆ ಎಂಬ ಸಂತಸ ಮತ್ತೊಂದು ಕಡೆ!

ಅಂದ ಹಾಗೆ, ದಾಂಪತ್ಯದುದ್ದಕ್ಕೂ ಸುಮದ ಪರಿಮಳವನ್ನೇ ಚಿಮ್ಮಿಸಿದ ಹಾಡುಗಳನ್ನು ಪತಿಯ ಗೈರು ಹಾಜರಿಯಲ್ಲಿ ಕೇಳುತ್ತಿದ್ದಂತೆ ವೆಂಕಮ್ಮನವರಿಗೆ ಖುಷಿಯಾಗುತ್ತಿತ್ತಾ? ಗೊತ್ತಾಗುತ್ತಿರಲಿಲ್ಲ. ಒಂದು ಹಾಡು ಮುಗಿಯುತ್ತಿದ್ದಂತೆಯೇ, ಪತಿಯ ನೆನಪಾಗಿ ಕಣ್ತುಂಬಿ ಬರುತ್ತಿತ್ತಾ? ವೆಂಕಮ್ಮನವರ ಕನ್ನಡಕ ಗುಟ್ಟು ಬಿಟ್ಟುಕೊಡುತ್ತಿರಲಿಲ್ಲ!

***
ಮೊನ್ನೆ ಜನವರಿ 26ರಂದು ಮತ್ತೆ ಕೆ.ಎಸ್.ನ ಜನ್ಮದಿನ ನಡೆಯಿತು. ತುಂಗಭದ್ರ ಅವರ ಮನೆಯಂಗಳದಲ್ಲಿ ಅದೇ ಕಾವ್ಯ ರಸಿಕರು, ಬಂಧುಗಳು, ಅಭಿಮಾನಿಗಳು, ಗಾಯಕರು. ಅಂದು ನಡೆದದ್ದು ಹಾಡಿನ ಉಪಾಸನೆ. ಪ್ರೀತಿಯ ಉಪಾಸನೆ. ಆದರೆ, ಅವತ್ತು ವೆಂಕಮ್ಮನವರು ಜತೆಗಿರಲಿಲ್ಲ. ಅವರೂ ಕಾಲನ ಕರೆಗೆ ಓಗೊಟ್ಟು ಹೋಗಿಬಿಟ್ಟಿದ್ದರು; ಕೆ.ಎಸ್.ನ ಅವರಿದ್ದ ಊರಿಗೆ, ಎಂದೂ ಬಾರದ ನಾಡಿಗೆ!

ಅವತ್ತು ಹಾಡು ಕೇಳಿದವರೆಲ್ಲ ಕಡೆಯಲ್ಲಿ ಗಂಧರ್ವರಂತೆಯೇ ಬಾಳಿ ಬದುಕಿದ ಕೆ.ಎಸ್.ನ-ವೆಂಕಮ್ಮರನ್ನು ಮತ್ತೆ ಮತ್ತೆ ನೆನೆದು ಇಲ್ಲಿಂದಲೇ ಕೈ ಮುಗಿದರು. ಅವರು -ಅಲ್ಲಿಂದಲೇ ಹರಸಿದರು!

ಹೇಳದೇ ಉಳಿದ ಮಾತುಗಳು…

Vishnuvardhan and C Ashwath
ಐದಾರು ವರ್ಷಗಳ ಹಿಂದಿನ ಮಾತು. ಬೆಂಗಳೂರಿನ ಟೌನ್‌ಹಾಲ್‌ನಲ್ಲಿ ಪುಟ್ಟಣ್ಣ ಕಣಗಾಲ್ ಸ್ಮರಣೆಗೆ ಗೀತನಮನ ಕಾರ್ಯಕ್ರಮವೊಂದು ನಡೆಯಿತು. ಅದರ ಹಿಂದಿದ್ದವರು ರಮ್ಯ ಕಲ್ಚರಲ್ ಅಕಾಡೆಮಿಯ ಬಾಲಿ. ಅವತ್ತು, ಪುಟ್ಟಣ್ಣ ಕಣಗಾಲ್ ಅವರ ಚಿತ್ರಗಳಿಂದ ಆಯ್ದ ಮಧುರ ಗೀತೆಗಳನ್ನು ನಾಡಿನ ಹೆಸರಾಂತ ಗಾಯಕ-ಗಾಯಕಿಯರು ಹಾಡಿದರು. ಪ್ರೇಕ್ಷಕರ ಸಾಲಿನಲ್ಲಿ ಹಿರಿಯ ಪತ್ರಕರ್ತ ವಿ.ಎನ್. ಸುಬ್ಬರಾವ್, ನಟ ಶಿವರಾಂ, ಶ್ರೀಮತಿ ನಾಗಲಕ್ಷ್ಮಿ ಪುಟ್ಟಣ್ಣ ಕಣಗಾಲ್, ಆರ್.ಎನ್. ಜಯಗೋಪಾಲ್ ಮುಂತಾದವರಿದ್ದರು. ಶುಭಮಂಗಳ ಚಿತ್ರದ `ಸೂರ್ಯಂಗು ಚಂದ್ರಂಗೂ ಬಂದಾರೆ ಮುನಿಸು…’ ಗೀತೆಯನ್ನು ಗಾಯಕ ಎಲ್.ಎನ್. ಶಾಸ್ತ್ರಿ ಹಾಡಲು ನಿಂತಾಗ, ತುಂಬ ಭಾವುಕರಾದ ನಟ ಶಿವರಾಂ, ವೇದಿಕೆಯೇರಿ, ಶಾಸ್ತ್ರಿ ಅವರೊಂದಿಗೆ ತಾವೂ ಒಂದು ಚರಣ ಹಾಡಿ ಪುಟ್ಟಣ್ಣನ ನೆನಪಾಗಿ ಕಣ್ತುಂಬಿಕೊಂಡರು.

ಹೀಗೆ, ಹಾಡುಗಳ ನೆಪದಲ್ಲಿ ಪುಟ್ಟಣ್ಣ ಕಣಗಾಲ್ ಅವರನ್ನೂ , ಪುಟ್ಟಣ್ಣನ ನೆಪದಲ್ಲಿ ಹಾಡುಗಳನ್ನೂ ಕೇಳುತ್ತಿದ್ದ ಸಂದರ್ಭದಲ್ಲೇ ಕಾರ್ಯಕ್ರಮ ಮುಕ್ತಾಯದ ವೇಳೆ ಹತ್ತಿರವಾಗತೊಡಗಿತು. ಅದೇ ವೇಳೆಗೆ, ಮೂರು ಹಾಡುಗಳ ನಂತರ ಕಾರ್ಯಕ್ರಮ ಮುಗಿಯಲಿದೆ ಎಂದು ಸಂಘಟಕರೂ ಘೋಷಿಸಿಬಿಟ್ಟರು. ಪರಿಣಾಮ, ಮುಂದಿನ ಹದಿನೈದಿಪ್ಪತ್ತು ನಿಮಿಷಗಳ ನಂತರ ಮನೆಗೆ ಹೋಗಲು ಎಲ್ಲರೂ ಮಾನಸಿಕವಾಗಿ ತಯಾರಾಗುತ್ತಿದ್ದರು. ಆಗಲೇ ಪ್ರವೇಶ ದ್ವಾರದಲ್ಲಿ ಏನೋ ಸದ್ದಾಯಿತು. ಅಲ್ಲಿದ್ದ ಜನರೆಲ್ಲ ಒಟ್ಟಾಗಿ `ಓ… ಬಂದ್ರು ಬಂದ್ರು…’ ಎಂದರು. ಈಗ ಬಂದವರು ಯಾರಿರಬಹುದು ಎಂದು ನೋಡಿದರೆ ನಟ ವಿಷ್ಣುವರ್ಧನ್ [^]! ತಮ್ಮ ಐದಾರು ಮಂದಿ ಆಪ್ತರೊಂದಿಗೆ ಕಾರ್ಯಕ್ರಮಕ್ಕೆ ಬಂದಿದ್ದರು ವಿಷ್ಣು. ಹಾಗೆ ಬಂದವರು, ಸಮಾರಂಭದಲ್ಲಿದ್ದ ಎಲ್ಲರ ಕುಶಲ ವಿಚಾರಿಸಿದರು. ನಂತರ ವೇದಿಕೆ ಏರಿ, ತಮ್ಮ ಗುರುಗಳಾದ ಪುಟ್ಟಣ್ಣ ಕಣಗಾಲರ ಬಗ್ಗೆ ನಾಲ್ಕು ಒಳ್ಳೆಯ ಮಾತುಗಳಾಡಿದರು. ಹಿಂದೆಯೇ ತುಂಬ ಸಂಭ್ರಮದಿಂದ `ಬಾರೇ ಬಾರೇ ಚಂದದ ಚೆಲುವಿನ ತಾರೆ…’ ಗೀತೆಗೆ ದನಿಯಾದರು. ಆ ಹಾಡು ಕೇಳಿದ ನಂತರ ಕಾರ್ಯಕ್ರಮಕ್ಕೆ ಬಂದಿದ್ದವರ ಸಂಭ್ರಮಕ್ಕೆ ಎಣೆಯೇ ಇರಲಿಲ್ಲ.

ಬೆಂಗಳೂರಿನ ಅವಲಹಳ್ಳಿ ಬಸ್ ನಿಲ್ದಾಣದ ಎದುರಿಗೆ ಮ್ಯಾಜಿಕ್ ಸ್ಪೇಸ್ ಎಂಬ ಮ್ಯಾಜಿಕ್ ಉತ್ಪನ್ನಗಳ ಮಾರಾಟದ ಮಳಿಗೆಯೊಂದಿದೆ. ಯಾರದೋ ಸಂಕಟಕ್ಕೆ ಕಣ್ಣೀರಾಗುವ, ಕಷ್ಟಕ್ಕೆ ಹೆಗಲಾಗುವ ಜತೆಗಿರುವ ಎಲ್ಲರಿಗೂ ಸದಾ ಒಳಿತನ್ನೇ ಬಯಸುವ ಗಿರಿಧರ್ ಕಾಮತ್, ಈ ಮಳಿಗೆಯ ಒಡೆಯ. ಪ್ರವೀಣ್ ಗೋಡ್ಖಿಂಡಿಯವರ ಪಾಲಿಗೆ ಡಿಯರೆಸ್ಟ್ ಅಂಡ್ ನಿಯರೆಸ್ಟ್ ಫ್ರೆಂಡ್ ಆಗಿರುವ ಇವರು, ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರಿಂದ ವೆಂಗ್ ಸರ್ಕಾರ್ ಎಂದು ಕರೆಸಿಕೊಂಡವರು! ಈ ಗಿರಿಧರ್ ಕಾಮತ್ ಅವರದು ಯಾವತ್ತೂ ಒನ್‌ಲೈನ್ ಡೈಲಾಗ್. `ಮುಂದಿನ ಜನ್ಮ ಅನ್ನೋದು ಬಹುಶಃ ಇಲ್ಲವೇ ಇಲ್ಲ. ಹಾಗಾಗಿ, ಇರುವಷ್ಟು ದಿನ ಬಿಂದಾಸ್ ಆಗೇ ಬದುಕೋಣ. ನಮ್ಮಿಂದ ಇದು ಅಸಾಧ್ಯ ಎಂದು ಯಾವ ಸಂದರ್ಭದಲ್ಲೂ ಯೋಚಿಸುವುದು ಬೇಡ. ನಮ್ಮಿಂದ ಎಲ್ಲವೂ ಸಾಧ್ಯ ಎಂದುಕೊಂಡೇ ಮುನ್ನುಗ್ಗೋಣ. ಯಾವುದೇ ಕೆಲಸ ಮಾಡಿದರೂ ಡಿಫರೆಂಟ್ ಆಗಿ ಮಾಡೋಣ…’

ಈ think different ಎಂಬ ಮಾತಿನ ಹಿಂದೆ ಮುಂದೆಯೇ ಸುತ್ತುತ್ತಿದ್ದ ಸಂದರ್ಭದಲ್ಲಿಯೇ `ಹಾಡು ಹುಟ್ಟಿದ ಸಮಯ’ ಪುಸ್ತಕ ಬಿಡುಗಡೆಯ ಕೆಲಸ ಶುರುವಾಯಿತು. ಪುಸ್ತಕ ಬಿಡುಗಡೆಯನ್ನು ಹಳೆಯ ಸಿದ್ಧ ಸೂತ್ರದಂತೆ ಮಾಡುವ ಬದಲು ಸ್ವಲ್ಪ ಭಿನ್ನವಾಗಿ, ಒಂದಷ್ಟು ಹೊಸತನದೊಂದಿಗೆ ಮಾಡೋಣ ಎಂದುಕೊಂಡಿದ್ದಾಯಿತು. ಮುಖ್ಯ ಅತಿಥಿಗಳಾಗಿ ಒಂದು ಕಾಲದ ಜನಪ್ರಿಯ ಜೋಡಿ ಅಂಬರೀಷ್ -ಲಕ್ಷ್ಮಿಯನ್ನು ಒಪ್ಪಿಸಲು ಯೋಚಿಸಿದ್ದೂ ಆಯಿತು. ಆದರೆ, ಈ ಕಡೆ ಅಂಬರೀಷ್, ಆ ಕಡೆ ಲಕ್ಷ್ಮಿ ಇಬ್ಬರೂ ಸಿಗಲಿಲ್ಲವಾದ ಕಾರಣದಿಂದ ಐಡಿಯಾ ಫ್ಲಾಪ್ ಆಯಿತು. `ಮುಂದ?’ ಎಂದುಕೊಂಡು ಪೆಚ್ಚಾಗಿ ಕೂತಾಗಲೇ think different ಎಂಬ ಮಾತಿಗೆ ಖಡಕ್ಕಾಗಿ ಹೊಂದುವಂಥ ಹೊಸ ಯೋಜನೆಯೊಂದು ಕಣ್ಮುಂದೆ ಬಂತು.

ಏನೆಂದರೆ ಪುಸ್ತಕ ಬಿಡುಗಡೆಗೆ, ವಿಷ್ಣುವರ್ಧನ್-ಭಾರತಿ ಹಾಗೂ ರಮೇಶ್‌ರನ್ನು ಕರೆಸುವುದು. ಹೇಗಿದ್ದರೂ ಆ ಪುಸ್ತಕದಲ್ಲಿ 60 ವರ್ಷದ ಇತಿಹಾಸಕ್ಕೆ ಸಾಕ್ಷಿಯಾಗಬಲ್ಲ ಹಾಡುಗಳಿದ್ದವು. ಹಳೆಯ ಹಾಡುಗಳ ಪ್ರತಿನಿಧಿಗಳಾಗಿ ವಿಷ್ಣು-ಭಾರತಿ, ಹೊಸ ಹಾಡುಗಳನ್ನು ಪ್ರತಿನಿಧಿಸಲು ರಮೇಶ್ ಬಂದರೆ ಕಾರ್ಯಕ್ರಮಕ್ಕೆ ವಿಶೇಷ ಆಕರ್ಷಣೆ ಬರುತ್ತೆ ಎನ್ನಿಸಿತು. ಈ ಸಂಗತಿಯನ್ನು ಗೆಳೆಯರಾದ ಉಪಾಸನಾ ಮೋಹನ್ ಹಾಗೂ ಫಲ್ಗುಣ ಅವರಲ್ಲಿ ಹೇಳಿಕೊಂಡಾಗ ಅವರು ಇನ್ನೊಂದು ರೆಕ್ಕೆಪುಕ್ಕ ಸೇರಿಸಿದರು : `ಹಾಗೇ ಮಾಡಿ. ಜತೆಗೆ, ಎಲ್ಲ ಗೀತೆರಚನೆಕಾರರನ್ನು, ಅವರ ಕುಟುಂಬದವರನ್ನು ಕರೆಸಿ. ಜತೆಗೆ ಸಿ. ಅಶ್ವತ್ಥ್ ಹಾಗೂ ಶಿವಮೊಗ್ಗ ಸುಬ್ಬಣ್ಣ ಅವರನ್ನೂ ಕರೆಸಿ `ತಪ್ಪು ಮಾಡದವ್ರು ಯಾರವ್ರೆ?’ ಗೀತೆಯನ್ನು ಅಶ್ವತ್ಥ್ ಅವರಿಂದಲೂ `ಕಾಡು ಕುದುರೆ ಓಡಿಬಂದಿತ್ತಾ…’ ಗೀತೆಯನ್ನು ಸುಬ್ಬಣ್ಣ ಅವರಿಂದಲೂ ಹಾಡಿಸಿ. ಉಳಿದ ಹಾಡುಗಳಿಗೆ ಯುವ ಗಾಯಕ-ಗಾಯಕಿಯರು ದನಿಯಾಗಲಿ. ಆಗ ಹಳೇ ಬೇರು ಹೊಸ ಚಿಗುರು ಎರಡನ್ನೂ ಒಂದೇ ವೇದಿಕೆಯಲ್ಲಿ ತಂದಂತಾಗುತ್ತದೆ. think different ಎನ್ನುವ ನಿಮ್ಮ ಮಾತು ನಿಜವಾಗುತ್ತದೆ…’

ಮುಂದೆ ಈ ಯೋಜನೆಯನ್ನೇ ಸ್ವಲ್ಪ update ಮಾಡಿದ್ದಾಯಿತು. ಅದು ಹೀಗೆ : ರಾಜ್ಯೋತ್ಸವ ಗೀತೆಯೊಂದಿಗೆ ಕಾರ್ಯಕ್ರಮ ಆರಂಭಿಸುವುದು. ನಂತರದಲ್ಲಿ ಮೂರು ಹಾಡುಗಳು. ಐದನೇ ಗೀತೆಯಾಗಿ ವಿಷ್ಣುವರ್ಧನ್ ಅವರಿಂದ ಅದೇ `ಬಾರೇ ಬಾರೇ ಚೆಂದದ ಚೆಲುವಿನ ತಾರೆ…’ ಹಾಡು ಹೇಳಿಸುವುದು. ಹಾಡಿನ ಎರಡನೇ ಚರಣ ಆರಂಭವಾದ ತಕ್ಷಣ ಭಾರತಿಯವರನ್ನು ವೇದಿಕೆಗೆ ಕರೆದೊಯ್ಯುವುದು. ಹಾಡು ಮುಗಿಯುತ್ತಿದ್ದಂತೆಯೇ ನಟ ರಮೇಶ್ ಅವರಿಂದ ಮ್ಯಾಜಿಕ್ ಮಾಡಿಸುವ ಮೂಲಕ ಪುಸ್ತಕ ಬಿಡುಗಡೆ ಮಾಡಿಸುವುದು. ಮೊದಲ ಪ್ರತಿಯನ್ನು ವಿಷ್ಣು ಅವರಿಂದ ಭಾರತಿ ಅವರಿಗೆ ಕೊಡಿಸುವುದು, ವಿಷ್ಣು-ಭಾರತಿ ದಂಪತಿಯನ್ನು ಸನ್ಮಾನಿಸುವುದು… ಪುಸ್ತಕ ಬಿಡುಗಡೆಯ ನಂತರ ಅಶ್ವತ್ಥ್ ಅವರಿಂದ `ತಪ್ಪೇ ಮಾಡದವ್ರು ಯಾರವ್ರೆ…’ ಗೀತೆ ಹಾಡಿಸುವುದು. ಹತ್ತು ನಿಮಿಷದ ನಂತರ ಶಿವಮೊಗ್ಗ ಸುಬ್ಬಣ್ಣ ಅವರಿಂದಲೂ…

ಈ ಎಲ್ಲ ಸಂಗತಿಯನ್ನು ಸಂಗೀತ ನಿರ್ದೇಶಕ ಕೆ. ಕಲ್ಯಾಣ್ ಅವರಲ್ಲಿ ಹೇಳಿಕೊಂಡಾಗ ಅವರೆಂದರು. ಇದು ನಿಜಕ್ಕೂ think different ಅನ್ನೋ ಯೋಚನೆ-ಯೋಜನೆ. ಒಂದು ವೇದಿಕೆಯಲ್ಲಿ ಅಷ್ಟೊಂದು ಜನರನ್ನು ನೋಡುವುದೇ ಒಂದು ಖುಷಿ. ನಿಮ್ಮ ಈ ಸಾಹಸದಲ್ಲಿ ನಾನೂ ಒಂದಿಷ್ಟು ಕೆಲಸ ಮಾಡ್ತೇನೆ. ವಿಷ್ಣು ಸರ್ ಹಾಗೂ ಭಾರತಿ ಮೇಡಂ ಅವರನ್ನು ಒಪ್ಪಿಸಲು ನಿಮ್ಮೊಂದಿಗೆ ನಾನೂ ಬರ್‍ತೇನೆ. ನಿಮ್ಮ ಪರವಾಗಿ ನಾನೇ ಮಾತಾಡ್ತೇನೆ. ಅಶ್ವತ್ಥ್ ಹಾಡಿಗೆ ವಿಷ್ಣು ಸರ್ ತಾಳ ಹಾಕುತ್ತಾ ಕೂರುವುದನ್ನು; ಸುಬ್ಬಣ್ಣ ಅವರ ಗಾಯನಕ್ಕೆ ಎಲ್ಲರೂ ಮೈಮರೆಯುವ ಸಂದರ್ಭವನ್ನು; ವಿಷ್ಣು-ಭಾರತಿ ಪರಸ್ಪರ ಅಭಿನಂದಿಸುವುದನ್ನು ಕಂಡು ಎಲ್ಲರೂ ಚಪ್ಪಾಳೆ ಹೊಡೆಯುವುದನ್ನು; ರಮೇಶ್ ಅವರ ಚಿನಕುರುಳಿ ಮಾತಿಗೆ ರವೀಂದ್ರ ಕಲಾಕ್ಷೇತ್ರವೇ ಮರುಳಾಗುವುದನ್ನು ಎಲ್ಲರೂ ಕಣ್ತುಂಬಿಕೊಳ್ಳೋಣ. ಮುಂದಿನ ಮಂಗಳವಾರ ವಿಷ್ಣುವರ್ಧನ್ ಅವರ ಮನೆಗೆ ಹೋಗೋಣ… ನೀವು ಬಾಕಿ ಕೆಲಸ ಮಾಡಿ ಮುಗಿಸಿ…

ದುರಂತವೆಂದರೆ ಅಂಥದೊಂದು ಮಧುರ ಸಂದರ್ಭ ಬರಲೇ ಇಲ್ಲ. ಈ ಮಾತುಕತೆ ಮುಗಿದ ಎರಡೇ ದಿನಕ್ಕೆ, ವಿಷ್ಣುವರ್ಧನ್ ಅವರಿಗೆ ಆರೋಗ್ಯ ಚೆನ್ನಾಗಿಲ್ಲವಂತೆ. ಚಿಕಿತ್ಸೆಗೊಂದು ಅವರು ಮೈಸೂರಿಗೆ ಹೋಗಿದ್ದಾರಂತೆ. ಇನ್ನೂ ಒಂದು ತಿಂಗಳು ಚಿಕಿತ್ಸೆಯಂತೆ ಎಂಬ ಸುದ್ದಿ ಬಂತು. ಈ ಅನಿರೀಕ್ಷಿತ ಸುದ್ದಿಯನ್ನು ನಂಬಲಾಗಿದೆ ನಂಬಿದ್ದಾಗಲೇ, ಲಹರಿ ವೇಲು ಹೀಗೊಂದು ಎಸ್ಸೆಮ್ಮೆಸ್ ಕಳಿಸಿದ್ದರು. `ಸಾಹೇಬ್ರೆ, ಸಿ. ಅಶ್ವತ್ಥ್ ಅವರಿಗೆ ಹುಷಾರಿಲ್ವಂತೆ. ಕಿಡ್ನಿ ಫೇಲ್. ಯಶವಂತಪುರದ ಆಸ್ಪತ್ರೆಗೆ ಸೇರಿಸಿದ್ದಾರಂತೆ. ಒಮ್ಮೆ ಹೋಗಿ ಬರೋಣವಾ…?’

ನಂತರದ ದಿನಗಳಲ್ಲಿ ಎಲ್ಲವೂ `ಅವಸರದಲ್ಲಿ’ ಎಂಬಂತೆ ನಡೆದುಹೋಯಿತು. ಮೊದಲಿಗೆ, ಚಿಕ್ಕದೊಂದು ಕಾರಣವನ್ನೂ ಹೇಳದೆ ಅಶ್ವತ್ಥ್ ಹೋಗಿಬಿಟ್ಟರು. ಈ ಸಂಕಟದಿಂದ ಚೇತರಿಸಿಕೊಳ್ಳುವ ಮೊದಲೇ ವಿಷ್ಣು ಅವರೂ… ಈಗ ಅವರಿಲ್ಲ ನಿಜ. ಆದರೆ, ಅವರ ಬಗ್ಗೆ ನಾವು ಕಂಡ ಕನಸುಗಳಿವೆ. ಆಡಿಕೊಂಡ ಮಾತುಗಳಿವೆ. ಬಣ್ಣದ ಲೋಕದ ಮಹನೀಯರಿಬ್ಬರು ಹಾಡದೇ ಹೋಗಿಬಿಟ್ಟ ಹಾಡುಗಳು ಹಾಗೇ ಉಳಿದುಹೋಗಿವೆ. ಇದನ್ನೆಲ್ಲ ಮತ್ತೆ ಮತ್ತೆ ನೆನಪು ಮಾಡಿಕೊಂಡಾಗ `ಬದುಕು ಒಂದು ಬಸ್ಸಿನಂತೆ ನಿಲ್ಲದಂತೆ ಸಾಗಿದೆ/ವಿಧಿಯೇ ಅದರ ಡ್ರೈವರ್ ಆಗಿ ಕಾಣದಂತೆ ಕೂತಿದೆ’ ಎಂಬ ಇನ್ನೊಂದು ಚಿತ್ರಗೀತೆ ನೆನಪಾಗುತ್ತಿದೆ…

ಅಮ್ಮನಂಥ ಉಮಾಶ್ರೀಗೆ… Umashree | Best actress | National award | Gulabi Talkies | Putnanja

Best actress national award winning Umashree

ರಾಷ್ಟ್ರಪ್ರಶಸ್ತಿ ವಿಜೇತೆ ಉಮಾಶ್ರೀ ಅವರಿಗೆ- ಹಾರ್ದಿಕ ಅಭಿನಂದನೆಗಳು.

ಮೇಡಂ, ಹೌದಲ್ವಾ? ನಿಮಗೆ ಈಗ ಬಿಡುವು ಅನ್ನೋದೇ ಇಲ್ಲ. ನಾಡಿನ ಮೂಲೆ ಮೂಲೆಯಿಂದ ಅಭಿನಂದನೆಗಳ ಮಹಾಪೂರ. `ನಮ್ಮೂರಿಗೆ ಬನ್ನಿ, ನಮ್ಮೂರಿಗೆ ಬನ್ನಿ’ ಎಂಬ ಆಹ್ವಾನಗಳು ಒಂದರ ಹಿಂದೊಂದು ಬರ್‍ತಿವೆ. ಯಾವುದೇ ಊರಿಗೆ ಹೋದರೂ ಅಭಿಮಾನಿಗಳು, ಗಣ್ಯರು, ಸಂಘ ಸಂಸ್ಥೆಗಳ ಮುಖಂಡರು ಓಡೋಡಿ ಬರ್‍ತಿದಾರೆ. `ನಿಮಗೆ ರಾಷ್ಟ್ರ ಪ್ರಶಸ್ತಿ ಬಂತಲ್ಲ ಮೇಡಂ, ಅದಕ್ಕೆ ಅಭಿನಂದನೆ’ ಎಂದು ಪ್ರೀತಿಯಿಂದ ಹೇಳುತ್ತಿದ್ದಾರೆ. ತುಂಬ ಅಭಿಮಾನದಿಂದ ಬೊಕೆ ಕೊಡುತ್ತಿದ್ದಾರೆ. ಶಾಲು ಹೊದಿಸುತ್ತಿದ್ದಾರೆ. ತುಂಬ ಗೌರವದಿಂದ ಒಂದೊಳ್ಳೆಯ ಭಾಷಣ ಮಾಡುತ್ತಿದ್ದಾರೆ. ಸಮಾರಂಭಕ್ಕೆ ಬಂದ ಹೆಂಗಸರಂತೂ, ಜತೆಗಿರುವವರನ್ನು ತಿವಿದು- `ಅಲ್ನೋಡ್ರಿ ಉಮಾಶ್ರೀ. ದೊಡ್ಡ ನಟಿ ಆಗಿದ್ರೂ, ಈಗ ಒಂದು ರಾಷ್ಟ್ರಪ್ರಶಸ್ತಿ ತಗೊಂಡ್ರೂ ಎಷ್ಟು ಸಿಂಪಲ್ಲಾಗಿ ಬಂದಿದ್ದಾರೆ ನೋಡಿ. ನೀವು ಏನೇ ಹೇಳಿ, ನಮ್ಮ ಕನ್ನಡ [^] ಚಿತ್ರರಂಗ ಉಮಾಶ್ರೀ ಪ್ರತಿಭೆಗೆ ಸರಿಹೊಂದುವಂಥ, ಆಕೆಯ ಪ್ರತಿಭೆಗೆ ಸವಾಲಾಗುವಂಥ ಪಾತ್ರಗಳನ್ನು ಕೊಡಲೇ ಇಲ್ಲ’ ಎಂಬ ಮೆಚ್ಚುಗೆಯ ಮಾತುಗಳಾಡುತ್ತಿದ್ದಾರೆ.

ಹೀಗೆ, ಅವರಿವರ ಪಿಸುಮಾತುಗಳೆಲ್ಲ ಮುಗಿದ ನಂತರ ಒಂದೆರಡು ಮಾತಾಡೋಣ ಎಂದುಕೊಂಡು ನೀವು ಮೈಕು ಕೈಗೆತ್ತಿಕೊಳ್ಳುತ್ತೀರಿ ನಿಜ. ಆದರೆ ಎರಡು ಮಾತಾಡುವ ವೇಳೆಗೇ, ಯಾಕೋ ಕಣ್ತುಂಬಿ ಬರುತ್ತದೆ. ಅದು ಆನಂದ ಬಾಷ್ಪ. ಹೇಗೋ ಕಷ್ಟಪಟ್ಟು ಕಂಬನಿ ಬೀಳದಂತೆ ತಡೆದು- `ತುಂಬ ಭಾವುಕಳಾಗಿದೀನಿ. ಹೇಗೆ ಮಾತಾಡಬೇಕೋ ಅರ್ಥವಾಗ್ತಾ ಇಲ್ಲ ಎನ್ನುವ ವೇಳೆಗೆ ನಿಮ್ಮ ದನಿ ಭಾರವಾಗಿರುತ್ತದೆ. ಗಂಟಲು ಗದ್ಗದ. ಇದನ್ನು ಕಂಡ ಜನರು ಅಭಿಮಾನಿಗಳು. ಪಾಪ ಕಣ್ರೀ. ಉಮಾಶ್ರೀ ತುಂಬಾನೇ ಅತ್ಕೊಂಡು ಮಾತಾಡ್ತಾ ಇದಾರೆ’ ಎಂದು ತಾವೂ ಕಣ್ತುಂಬಿಕೊಳ್ಳುತ್ತಾರೆ.

ಕೇಳಿ ಮೇಡಂ, ಇದು ಈ ಕ್ಷಣದ ಸತ್ಯ. ಹತ್ತು ದಿನದಿಂದ ಈಚೆಗೆ ಕಾಣುತ್ತಿರುವ ದೃಶ್ಯ. ಈಚೀಚೆಗಷ್ಟೇ ಕೇಳಿಬರುತ್ತಿರುವ ಮೆಚ್ಚುಮಾತು. ಈಗ ಎಲ್ಲರೂ ಹಠಕ್ಕೆ ಬಿದ್ದವರಂತೆ ನಿಮ್ಮನ್ನೂ, ನಿಮ್ಮ ಅಭಿನಯವನ್ನೂ ಹೊಗಳ್ತಾ ಇರೋದು ನೋಡಿ ನಿಮಗೆ ಏಕಕಾಲಕ್ಕೆ ಸಂತೋಷ, ಬೆರಗು ಮತ್ತು ಅನುಮಾನ ಜತೆಯಾಗಿರಬಹುದು. ಹಾಗಾಗಿ ಮೇಡಂ, ಈ ಸಂಭ್ರಮವನ್ನು ಒಂದರ್ಧ ಗಂಟೆ ಮರೆತು ನಡೆದು ಬಂದ ದಾರಿಯತ್ತ ಒಮ್ಮೆ ತಿರುಗಿ ನೋಡೋಣವಾ?

***
ಕೇಳಿ: ನಮ್ಮ ಜನಾನೇ ಹಾಗೆ. ಅವರು ಹೀರೋಯಿನ್‌ಗಳನ್ನು ಆರಾಧಿಸ್ತಾರೆ. ಪೂಜಿಸುತ್ತಾರೆ. ಒಳಗೊಳಗೇ ಪ್ರೀತಿಸುತ್ತಾರೆ! ಸ್ವಲ್ಪ ಹುಚ್ಚು ಹಿಡಿದ್ರೆ ಅಭಿಮಾನಿ ಸಂಘ ಕಟ್ಟಿಕೊಳ್ತಾರೆ. ಹಾಗೆಯೇ ನಾಯಕ-ನಾಯಕಿಯ ತಾಯಂದಿರ ಪಾತ್ರಗಳಲ್ಲಿ ನಟಿಸ್ತಾರಲ್ಲ? ಅವರನ್ನು `ಅಯ್ಯೋ ಪಾಪ’ ಅನ್ನೋ ದೃಷ್ಟಿಯಿಂದಲೇ ನೋಡ್ತಾರೆ. ಅದು ಬಿಟ್ಟರೆ, ಒಂದು ತಮಾಷೆಗೆ ವಸ್ತುವಾಗುವ, ಕಥೆಯೊಳಗೆ ಒಂದು ಪಾತ್ರವಾಗಿ `ಬಂದು ಹೋಗುವ’ ನಟಿಯರನ್ನು ಕಂಡರೆ ನಮ್ಮ ಜನರಿಗೆ ಏನೋ ತಾತ್ಸಾರ. ಇವರೆಲ್ಲ ಜಾಸ್ತಿ ದಿನ ಫೀಲ್ಡ್‌ನಲ್ಲಿ ಇರೋದಿಲ್ಲ. ಇವತ್ತಿದ್ದು ಇನ್ನೆರಡು ವರ್ಷದಲ್ಲಿ ಮಾಜಿ ಆಗಿಬಿಡ್ತಾರೆ ಎಂಬ ಕಾರಣಕ್ಕೆ ಜನ ಹಾಗೆ ವರ್ತಿಸ್ತಾರಾ? ಗೊತ್ತಿಲ್ಲ. ಮೂರು ದಶಕದ ಹಿಂದೆ ನೀವು ಪೋಷಕ ನಟಿಯಾಗಿ ಬೆಳ್ಳಿತೆರೆಗೆ ಪರಿಚಯವಾದಿರಲ್ಲ? ಅವತ್ತು ಇಂಡಸ್ಟ್ರಿಯ ಜನ ನಿಮ್ಮ ಅಭಿನಯವನ್ನು ಸೀರಿಯಸ್ಸಾಗಿ ತಗೊಳ್ಳಲೇ ಇಲ್ಲ. ಮೊದಲ ಐವತ್ತರವತ್ತು ಸಿನಿಮಾಗಳಲ್ಲಿ ಕಾಂಜಿಪೀಂಜಿ ಅನ್ನುವಂಥ ಪಾತ್ರಗಳನ್ನೇ ಕೊಟ್ಟರು. ಹಳೇದು ನೆನಪಿಸ್ತಾ ಇರೋದಕ್ಕೆ ಬೇಸರ ಮಾಡ್ಕೋಬೇಡಿ ಮೇಡಂ. ಆ ಪಾತ್ರಗಳು ಒಂಚೂರೂ ಚನ್ನಾಗಿರಲಿಲ್ಲ. ಅವುಗಳಲ್ಲಿ `ಜೀವ’ ಇರಲಿಲ್ಲ. ಆ ಪಾತ್ರಗಳಿಗೆ ಒಂದು ತೂಕ ಇರಲಿಲ್ಲ. ಸತ್ವ ಅಂತೀವಿ ನೋಡಿ, ಅದೂ ಇರಲಿಲ್ಲ. ಎಷ್ಟೋ ಸಿನಿಮಾಗಳಲ್ಲಿ ಆ ಚಿತ್ರದ ಕಥೆಗೂ ನಿಮ್ಮ ಪಾತ್ರಕ್ಕೂ ಸಂಬಂಧವೇ ಇರ್‍ತಿರಲಿಲ್ಲ. ಸಿನಿಮಾ ಆರಂಭವಾದ ಇಪ್ಪತ್ತೈದು ನಿಮಿಷಕ್ಕೋ, ಇಂಟರ್‌ವಲ್‌ಗೆ ಹದಿನೆಂಟು ನಿಮಿಷವಿದೆ ಅನ್ನುವಾಗಲೋ ಅಥವಾ ಮಧ್ಯಂತರದ ನಂತರವೋ ನಿಮ್ಮ ಪಾತ್ರ ಧುತ್ತನೆ ತೆರೆಯ ಮೇಲೆ ಬರ್‍ತಿತ್ತು. ಕೆಲವೊಂದು ಸಿನಿಮಾಗಳಲ್ಲಿ ನೀವು ಡಿಂಕಣಕ ಡಿಂಕಣಕ ಎಂದು ಕುಣಿದಾಡಿಕೊಂಡು ಬಂದು ಬಿಡ್ತಿದ್ರಿ. ಜತೆಯಲ್ಲಿ ಎನ್.ಎಸ್. ರಾವ್ ಅಥವಾ ಮುಖ್ಯಮಂತ್ರಿ [^] ಚಂದ್ರು ಅವರ ಪಾತ್ರವೂ ಇರ್‍ತಿತ್ತು. ನೀವು ಸಖತ್ ತಮಾಷೆಯಾಗಿ ಒಂದೆರಡು ಡೈಲಾಗ್ ಹೊಡೆದು, ಒಮ್ಮೆ ಕಣ್ಣು ಮೆಡ್ಡರಿಸಿ, ಒಂದು ಆವಾಜ್ ಬಿಸಾಕಿ, ಸೀರೆಯ ನೆರಿಗೆಯನ್ನು ಸೊಂಟಕ್ಕೆ ಸಿಕ್ಕಿಸಿ, ಕುಸ್ತಿ ಮಾಡೇ ಬಿಡುವವರಂತೆ ನಿಂತು- `ಹೇಯ್, ಬ್ಯಾಡ ನೋಡು, ನನ್ನನ್ನ ಕೆಣಕಬ್ಯಾಡ ಕಣೋ, ಸಿಟ್ಟು ಬಂದ್ರೆ ನಿನ್ನನ್ನ ಚಟ್ ಪಕಾರ್ ಅನ್ನಿಸಿಬಿಡ್ತೀನಿ ನೋಡು ಎಂದು ಡೈಲಾಗ್ ಹೇಳಿಬಿಡ್ತಿದ್ರಿ. ಕೆಲವೊಂದು ಸಂದರ್ಭದಲ್ಲಿ ಪಡ್ಡೆ ಹುಡುಗರೇ ಪೆಚ್ಚಾಗೋ ಥರಾ ವಿಷಲ್ ಹೊಡೆದು ಮತ್ತೆ ಡಿಂಕಣಕ ಡಿಂಕಣಕ ಅಂತ ಡ್ಯಾನ್ಸು ಮಾಡ್ಕೊಂಡು ಹೋಗಿಬಿಡ್ತಿದ್ರಿ. ಆಗೆಲ್ಲ ಜನ ಬೆರಗಾಗಿ- `ಇಂಥ ಗಂಡುಬೀರಿ ಪಾತ್ರಗಳಿಗೆ ಈ ಉಮಾಶ್ರೀನ ಬಿಟ್ರೆ ಬೇರೆ ಯಾರೂ ಸಿಗಲ್ಲ ನೋಡ್ರಿ’ ಅಂದು ತೀರ್ಪು ಕೊಡ್ತಿದ್ರು.

ಆದರೆ ನಿಮ್ಮನ್ನು ತುಂಬ ಹತ್ತಿರದಿಂದ ಕಂಡಿದ್ದವರು- `ಪಾಪ ಕಣ್ರೀ ಉಮಾಶ್ರೀ. ಆಕೆ ವೈಯಕ್ತಿಕ ಬದುಕಿನಲ್ಲಿ ತುಂಬ ನೊಂದಿದ್ದಾಳೆ. ಹೆಜ್ಜೆ ಹೆಜ್ಜೆಗೂ ಅವಮಾನ ಅನುಭವಿಸಿದಾಳೆ. ಒಂದೊಂದು ಕಷ್ಟ ಎದುರಾದಾಗಲೂ ಒಂದಿಡೀ ರಾತ್ರಿ ಕಣ್ಣೀರು ಹಾಕಿದ್ದಾಳೆ. ಎಲ್ಲ ನೋವುಗಳ ವಿರುದ್ಧ;, ಬದುಕಲ್ಲಿ ಬಂದು ಹೋದ ಅಷ್ಟೂ ಸಂಕಟಗಳ ವಿರುದ್ಧ; ಅವಮಾನಗಳ ವಿರುದ್ಧ ಸೇಡು ತೀರಿಸ್ಕೋಬೇಕು ಅಂತ ಬದುಕ್ತಾ ಇದ್ದಾಳೆ. ಬೆಳ್ಳಿತೆರೆಯ ಮೇಲೇನೋ ಹಾಸ್ಯ [^] ಪಾತ್ರಗಳಲ್ಲಿ ಮಿಂಚ್ತಾ ಇದಾಳೆ ನಿಜ. ಆದರೆ ಆಕೆಯ ಅಂತರಂಗದಲ್ಲಿ ಯಾರೂ ಅರ್ಥ ಮಾಡಿಕೊಳ್ಳದಂಥ ನೋವಿದೆ. ಹಾಗಾಗಿ ಉಮಾಶ್ರೀಯನ್ನು; ಆಕೆ ನಿರ್ವಹಿಸುವ ಪಾತ್ರಗಳನ್ನು ಕಂಡು ಟೀಕಿಸುವ ಮುನ್ನ ಹತ್ತು ಬಾರಿ ಯೋಚಿಸಬೇಕು’ ಎಂದಿದ್ದರು.

ಹೌದಲ್ವ ಮೇಡಂ? ಹಲವರು ಇಂಥ ಅನುಕಂಪದ ಮಾತು ಹೇಳಿದ ನಂತರವೂ ಕೆಲವರು ಸುಮ್ಮನಾಗಲಿಲ್ಲ. ಯಾರನ್ನಾದರೂ ಕೆಣಕದಿದ್ರೆ ತಿಂದ ಅನ್ನ ಅರಗೋದಿಲ್ಲ ಎಂಬಂಥ ಮನಸ್ಸು ಅವರದು. ಅಂಥವರೆಲ್ಲ ಸೇರಿಕೊಂಡು `ಛೆ ಛೆ, ಉಮಾಶ್ರೀ ಮಾಡ್ತಿದಾರಲ್ಲ ಪಾತ್ರ? ಅವುಗಳಿಗೆ ಏನಾದ್ರೂ ಅರ್ಥವಿದೆಯೇನ್ರೀ? ಮುಜುಗರ ತರುವಂಥ ಪಾತ್ರಗಳನ್ನು ಅವರು ಹೇಗೆ ಒಪ್ಕೋತಾರೋ? ಎಂದು ಕುಟುಕಿದ್ದರು. ಆಶ್ಚರ್ಯ. ನೀವು ಅವತ್ತೂ ತಾಳ್ಮೆ ಕಳೆದುಕೊಳ್ಳಲಿಲ್ಲ. ಬದಲಾಗಿ, ನಾನು ಕಲಾವಿದೆ. ಪೋಷಕ ನಟಿ. ಇಂಥದೇ ಪಾತ್ರ ಬೇಕೆಂದು ಹಟ ಹಿಡಿದು ಕೂರಲು ನಾನು ಹೀರೋಯಿನ್ ಅಲ್ಲ. ನನಗೆ ದೊರಕಿದ ಪಾತ್ರಗಳಲ್ಲಿ ನಟಿಸಬೇಕಾದದ್ದು ನನ್ನ ಧರ್ಮ. ನನ್ನ ಮಟ್ಟಿಗೆ, ಪಾಲಿಗೆ ಬಂದದ್ದೇ ಪಂಚಾಮೃತ. ಕೆಲವೊಂದು ಪಾತ್ರಗಳಲ್ಲಿ ನಟಿಸುವಾಗ ನನಗೂ ಹಿಂಸೆಯಾಗುತ್ತೆ. ಬೇಸರವಾಗುತ್ತೆ. ದುಃಖವಾಗುತ್ತೆ. ಮುಜುಗರ ಆಗುತ್ತೆ. ಹಾಗಂತ ನಟಿಸದೇ ಹೋದರೆ ಹೊಟ್ಟೆ ಪಾಡಿನ ಗತಿಯೇನು? ನನ್ನ ಕಣ್ಮುಂದೆ ಮಕ್ಕಳಿದ್ದಾರೆ. ಅವರ ಭವಿಷ್ಯವಿದೆ. ಮಕ್ಕಳನ್ನು ತುಂಬಾ ಚೆನ್ನಾಗಿ ಓದಿಸಬೇಕು ಅನ್ನೋ ಆಸೆಯಿದೆ. ಈ ಕನಸು ನನಸಾಗಬೇಕಾದರೆ ದುಡ್ಡು ಬೇಕಲ್ಲ? ಹಾಗಾಗಿ ನಟಿಸ್ತಾ ಇದೀನಿ. ನನ್ನನ್ನು ಹೀಗೇ ನಟಿಸು, ಹೀಗೆ ನಟಿಸಬೇಡ. ಇಂಥ ಪಾತ್ರಗಳನ್ನು ಮಾತ್ರ ಒಪ್ಪಿಕೋ, ಇಂಥದನ್ನು ಒಪ್ಕೋಬೇಡ ಎಂದು ಹೇಳುವ ಜನಕ್ಕೆ ಒಂದು ಪುಟ್ಟ ಮಾತು ಹೇಳೋಕೆ ಇಷ್ಟಪಡ್ತೀನಿ; ನಮ್ಮ ಕುಟುಂಬಕ್ಕೆ ಒಂದು ತಿಂಗಳಿಗೆ ಇಂತಿಷ್ಟು ಖರ್ಚು ಬರುತ್ತೆ. ಅದನ್ನು ಕೊಡಲು ಯಾರಾದ್ರೂ ಮುಂದೆ ಬರೋದಾದ್ರೆ ಮಾತ್ರ ನಂಗೆ ಬುದ್ಧಿ ಹೇಳುವ ಕೆಲಸ ಮಾಡಲಿ…’

ಮುಟ್ಟಿ ನೋಡಿಕೊಳ್ಳುವಂಥಿದ್ದ ಈ ಮಾತು ಕೇಳಿದ ಮೇಲೆ ಟೀಕಿಸುವ ಜನ ತಣ್ಣಗಾದರು: ಉಮಾಶ್ರೀ ತಂಟೆಗೆ ಹೋಗೋದು ಬ್ಯಾಡ ಮಾರಾಯಾ ಎಂದುಕೊಂಡು ತೆಪ್ಪಗಾದರು. ಮುಂದೆ, ರಂಗಭೂಮಿ ಹಾಗೂ ಚಿತ್ರರಂಗದಲ್ಲಿ ನಿಮ್ಮ `ನಟನೆ’ ಮುಂದುವರಿಯಿತು. ಬೆಳ್ಳಿತೆರೆಯ ಮೇಲೆ ನಿಮ್ಮ ಪಾತ್ರವನ್ನು ಕಂಡು ಘೊಳ್ಳನೆ ನಗುತ್ತಿದ್ದ ಜನ, `ಒಡಲಾಳ’ ನಾಟಕದಲ್ಲಿ ನಿಮ್ಮ ಸಾಕವ್ವನ ಪಾತ್ರ ನೋಡಿ ಕೂತಲ್ಲೇ ಕೈಮುಗೀತಿದ್ರು. ಒಂದೊಂದು ಡೈಲಾಗ್‌ಗೂ ಚಪ್ಪಾಳೆ ಹೊಡೀತಿದ್ರು. ಅದೇ ಮೊದಲ ಬಾರಿ ನಾಟಕ ನೋಡಿದವರಂತೂ-ಅರರೆ, ಏನ್ರೀ ಇದು ಸೋಜಿಗ? ಬೆಳ್ಳಿತೆರೆಯ ಮೇಲೆ ಫೇರ್ ಅಂಡ್ ಲವ್ಲಿ ಲೇಡಿಯ ಥರಾ ಮಿಂಚುವ ಕಲರ್ ಕಲರ್ ಉಮಾಶ್ರೀ, ರಂಗಭೂಮಿಯ ಮೇಲೆ ಗೂನು ಬೆನ್ನಿನ, ಹರಕು ಸೀರೆಯ, ಸುಕ್ಕುಗಟ್ಟಿದ ದೇಹದ, ಊರುಗೋಲಿನ ಆಸರೆಯಿಂದಷ್ಟೇ ನಡೆಯುವ ಅಜ್ಜಿಯಾಗಿ ಮೆರೀತಾ ಇದಾಳಲ್ಲ? ಇಷ್ಟು ಚಿಕ್ಕ ವಯಸ್ಸಿನಲ್ಲೇ ಅಷ್ಟೊಂದು ಮುದುಕಿಯ ಥರಾ ಕಾಣಿಸೋಕೆ ಹೇಗೆ ಸಾಧ್ಯ? ಕೊಳ್ಳೇಗಾಲ ಚಾಮರಾಜನಗರ ಸೀಮೆಯ ಆಡುಭಾಷೆಯನ್ನು ಉಮಾಶ್ರೀ ಇಷ್ಟೊಂದು ಚೆನ್ನಾಗಿ ಕಲಿತದ್ದಾದ್ರೂ ಯಾವಾಗ? ಎಂದು ಪ್ರಶ್ನೆಗಳ ಮೇಲೆ ಪ್ರಶ್ನೆ ಹಾಕುತ್ತಿದ್ದರು.

`ಇಂಥ ಮಾತುಗಳನ್ನೇ ಹತ್ತು ಮಂದಿಯಿಂದ ಕೇಳಿದ ರವಿಚಂದ್ರನ್, ತಮ್ಮ `ಪುಟ್ನಂಜ’ ಸಿನಿಮಾದಲ್ಲಿ 90 ವರ್ಷ ದಾಟಿದ ಹಣ್ಣಣ್ಣು ಮುದುಕಿಯ ಪಾತ್ರದಲ್ಲಿ ನಿಮ್ಮನ್ನು ತೋರಿಸಿದ್ರು ನೋಡಿ, ಅವತ್ತು ಇಡೀ ಕರ್ನಾಟಕ ಬೆರಗಾಗಿತ್ತು. ಥಿಯೇಟರಿಗೆ ಬಂದ ಜನ ಮುದುಕಿ ಪಾತ್ರದಲ್ಲಿರೋದು ನಿಜವಾಗ್ಲೂ ಉಮಾಶ್ರೀನಾ? ಎಂದು ಪದೇ ಪದೆ ಕಣ್ಣುಜ್ಜಿಕೊಂಡು ನೋಡಿದ್ರು. ನಿಮ್ಮ ಅಭಿನಯ ಕಂಡು ದಂಗಾಗಿ ಹೋಗಿದ್ರು. ಆ ಪಾತ್ರ ನಿರ್ವಹಿಸಿದ್ದಕ್ಕೆ ಚಿತ್ರರಂಗದ ಸಮಸ್ತರೂ ಮೆಚ್ಚುಗೆ ವ್ಯಕ್ತಪಡಿಸಿದಾಗ ಕೂಡ ನೀವು ಬೀಗಲಿಲ್ಲ. ಬದಲಿಗೆ ವಿನೀತರಾಗಿ ಹೇಳಿದ್ರಿ: `ಪುಟ್ನಂಜಿಯ ಪಾತ್ರವನ್ನು ನನಗೆ ಕೊಟ್ಟವರು ರವಿಚಂದ್ರನ್. ಇವತ್ತು ಆ ಪಾತ್ರವೇನಾದ್ರೂ ಗೆದ್ದಿದ್ರೆ ಅದರ ಕ್ರೆಡಿಟ್ಟು ರವಿಚಂದ್ರನ್‌ಗೇ ಸಲ್ಲಬೇಕು. ನಾನು ಕೇವಲ ಕಲಾವಿದೆ. ನಿರ್ದೇಶಕರು ಹೇಳಿದಂತೆ ನಟಿಸಿದೀನಿ, ಅಷ್ಟೆ…’ ಈ ವಿನಯದ ಮಾತುಗಳನ್ನು ಕೇಳಿದ ದಿನ ಎಷ್ಟು ಖುಷಿಯಾಯ್ತು ಗೊತ್ತ ಮೇಡಂ? `ಅಮ್ಮಾ, ನಿನ್ನ ವಿನಯಕ್ಕೆ ನಮಸ್ಕಾರ’ ಎಂದು ಚೀರಿ ಹೇಳುವ ಆಸೆಯಾಗಿಬಿಡ್ತು.

ದುರಂತ ನೊಡಿ: `ಪುಟ್ನಂಜಿ’ಯ ಪಾತ್ರದಲ್ಲಿ ನಿಮ್ಮನ್ನು ನೋಡಿದ ನಂತರ ಕೂಡ ಗಾಂಧಿನಗರದ ಬೃಹಸ್ಪತಿಗಳು ನಿಮ್ಮ ಪ್ರತಿಭೆಯನ್ನು ಅರಿಯಲಿಲ್ಲ. ಸವಾಲು ಅನಿಸುವಂಥ ಪಾತ್ರ ಕೊಡಲಿಲ್ಲ. ಬದಲಿಗೆ, ಹಾಗೆ ಬಂದು ಹೀಗೆ ಹೋಗಿಬಿಡುವ ಪಾತ್ರ ಕೊಟ್ಟು ಕೈ ತೊಳೆದುಕೊಂಡ್ರು. ಅಂಥ ಸಂದರ್ಭದಲ್ಲೆಲ್ಲ ನಿಮಗೆ ದುಃಖವಾಯ್ತಾ? ಛೆ, ನನ್ನ ಹಣಬರಹೇ ಇಷ್ಟು ಅನ್ನಿಸಿ ಬೇಜಾರಾಯ್ತಾ? ಒಂದು ಸಿದ್ಧ ಸೂತ್ರದ ಹಿಂದೆಯೇ ಗಿರಗಿಟ್ಲೆ ತಿರುಗುವ ಗಾಂಧಿನಗರದ ಬಗ್ಗೆ ಅಯ್ಯೋಪಾಪ ಅನ್ನಿಸ್ತಾ? ಮೂವತ್ತು ವರ್ಷ ಚಿತ್ರರಂಗದಲ್ಲಿ ಮಣ್ಣು ಹೊತ್ತರೂ ಒಂದು ದೊಡ್ಡ ಪ್ರಶಸ್ತಿ ಬರಲಿಲ್ಲ ಅನ್ನಿಸಿದಾಗ; ಜನ ನೆನಪಿಡುವಂಥ ಸಾಧನೆಯನ್ನು ನಾನು ಮಾಡಲಿಲ್ಲ ಅನ್ನಿಸಿದಾಗ- ಛಕ್ಕನೆ ಕಣ್ತುಂಬಿ ಬಂತಾ? ಉಹುಂ, ಇಷ್ಟು ವರ್ಷದ ಅವಯಲ್ಲಿ ನಾವ್ಯಾರೂ ಈ ಪ್ರಶ್ನೆ ಕೇಳಲಿಲ್ಲ. ನೀವೂ ಯಾವ ಸಂಕಟವನ್ನೂ ಹೇಳಿಕೊಳ್ಳಲಿಲ್ಲ. ಬದಲಿಗೆ ಎಲ್ಲ ನೋವನ್ನೂ ಎದೆಯೊಳಗೆ ಅದುಮಿಟ್ಟುಕೊಂಡು ನಗುನಗುತ್ತಾ ಉಳಿದುಬಿಟ್ರಿ- ಥೇಟ್ ಅಮ್ಮನಂತೆ!

***
ಈಗ ಏನಾಗಿದೆ ನೋಡಿ: ರಾಷ್ಟ್ರ ಪ್ರಶಸ್ತಿಯ ಕಿರೀಟ ನಿಮ್ಮನ್ನು ಹುಡುಕಿಕೊಂಡು ಬಂದಿದೆ. ಅದೇ ಕಾರಣದಿಂದ ನೀವು ಭಾರತದಲ್ಲಿ `ವರ್ಲ್ಡ್ ಫೇಮಸ್’ ಆಗಿಬಿಟ್ಟಿದೀರಿ. `ಗುಲಾಬಿ ಟಾಕೀಸ್’ ಚಿತ್ರವನ್ನೂ, ಅದರ ಪೋಸ್ಟರನ್ನೂ ಜನ ಬೆರಗಿನಿಂದ ನೋಡುತ್ತಿದ್ದಾರೆ. ಈ ಸಿನಿಮಾಕ್ಕೆ ಉಮಾಶ್ರೀ ಮೇಕಪ್ ಹಾಕ್ಕೊಳ್ದೇ ನಟಿಸಿದ್ದಾರಂತೆ ಕಣ್ರೀ ಎಂದು ಕಾಮೆಂಟು ಮಾಡುತ್ತಿದ್ದಾರೆ. ಹೆಂಗಸರಂತೂ ನ್ಯಾಷನಲ್ ಅವಾರ್ಡ್ ಬಂದರೆ, ಆ ನೆಪದಲ್ಲಿ ಉಮಾಶ್ರೀಗೆ ಚಿನ್ನದ ಪದಕ ಸಿಗುತ್ತಾ? ಸೈಟು ಸಿಗುತ್ತಾ? ಸರ್ಕಾರದಿಂದ ಮನೆ ಸಿಗುತ್ತಾ? ಬಹುಮಾನ ಅಂತ ಬಂದ್ರೆ ಅದೆಷ್ಟು ಲಕ್ಷ ಸಿಗಬಹುದು ಎಂಬ ಲೆಕ್ಕಾಚಾರಕ್ಕೆ ನಿಂತುಬಿಟ್ಟಿದ್ದಾರೆ. ಅದೇ ಸಂದರ್ಭದಲ್ಲಿ `ಪಾಪ, ಬದುಕಿನಲ್ಲಿ ತುಂಬಾ ಕಷ್ಟಪಟ್ಟಿರೋ ಆಕೆ ನೆಮ್ಮದಿಯಿಂದಿರಲಿ’ ಎಂದೂ ಹಾರೈಸುತ್ತಿದ್ದಾರೆ.

ಹೌದು ಮೇಡಂ, ನಿಮ್ಮನ್ನು ಎಲ್ಲ ವರ್ಗದ ಜನ ಪ್ರೀತಿಸ್ತಾರೆ. ಗೌರವಿಸ್ತಾರೆ. ಹಾಗಿರುವಾಗ ಒಂದೊಂದ್ಸಲ ನೀವು ಒಂದು ಜಾತಿಗಷ್ಟೇ ಮೀಸಲಾದವರಂತೆ ನಡಕೊಳ್ತೀರಿ. ರಾಜಕೀಯ ಅನ್ನೋದು ಕೊಚ್ಚೆ-ಗುಂಡಿ ಅಂತ ಗೊತ್ತಿದ್ರೂ ಅಲ್ಲಿಗೆ ಹೋಗಿ ಬಿಟ್ಟಿದೀರಿ. ಈ ಎರಡು ವಿಷಯವಾಗಿ ಹಲವರಿಗೆ ಬೇಸರವಿದೆ. ಅದು ಬಿಟ್ಟರೆ- ಯಾರು ಏನೇ ಹೇಳಿದ್ರೂ ನಿಮ್ಮನ್ನು ಟೀಕಿಸಲು ಮನಸ್ಸು ಬರಲ್ಲ. ನಿಮಗೆ ಪ್ರಶಸ್ತಿ ಬಂದ ಸುದ್ದಿ ಕೇಳಿ ಒಂಥರಾ ಖುಷಿಯಾಗಿದೆ. ಮುಂದೆ ಇಂಥವೇ ಐದಾರು ಪ್ರಶಸ್ತಿಗಳು ಉಮಾಶ್ರೀ ಎಂಬ ಅಮ್ಮನಿಗೆ ಒಲಿದು ಬರಲಿ ಎಂದು ಪ್ರಾರ್ಥಿಸುವ ಮನಸ್ಸಾಗಿದೆ. ನಮ್ಮ ಪ್ರಾರ್ಥನೆ ನಿಜವಾಗಲಿ ಮತ್ತು ಆ ಮೂಲಕ ನಿಮ್ಮ ಖುಷಿ ಹೆಚ್ಚಾಗಲಿ. ನಮಸ್ಕಾರ.

ಸಾವು, ಕರೆಯದೇ ಬರುವ ಅತಿಥಿ – Death | Non-existence | Birth | Die | Rajkumar | YSR | Yama

Death, the only guest comes without notice!

ಅದೊಂದು ಶನಿ, ಅದಕ್ಕೊಂದು ಶಿಸ್ತಿಲ್ಲ. ನಿಯತ್ತಿಲ್ಲ. ಕರುಣೆಯಿಲ್ಲ. ದಯೆ-ದಾಕ್ಷಿಣ್ಯವಿಲ್ಲ. ಬಡವ-ಬಲ್ಲಿದರೆಂಬ ಬೇಧವಿಲ್ಲ. ಖದೀಮರನ್ನು ಕಂಡರೆ ಹೆದರಿಕೆಯಿಲ್ಲ. ಮಕ್ಕಳನ್ನು ಕಂಡರೆ ವಿಶೇಷ ಪ್ರೀತಿಯೂ ಇಲ್ಲ. ರೋಗಿಗಳ ಮೇಲೆ ಅದಕ್ಕೆ ಅನುಕಂಪವಿಲ್ಲ. ನಿರ್ಗತಿಕರ ಬಗ್ಗೆ ವಿಶೇಷ ಒಲವೂ ಇಲ್ಲ. ಶ್ರೀಮಂತರೊಂದಿಗೆ ಅದು ಚೌಕಾಸಿಗೆ ನಿಲ್ಲುವುದಿಲ್ಲ. ಪಾಪ, ಬಡವ ಎಂದು ಬಿಟ್ಟು ಹೋಗುವುದೂ ಇಲ್ಲ. ಮನುಷ್ಯರ ಕಥೆ ಹಾಗಿರಲಿ, ಮೂಕ ಪ್ರಾಣಿಗಳ ವಿಷಯದಲ್ಲಾದರೂ ಈ ಶನಿ ಮುಂಡೇದು ರಿಯಾಯಿತಿ ತೋರುವುದಿಲ್ಲ. ಬದಲಿಗೆ, ಯಾವುದೋ ಕಳ್ಳ ಹೊತ್ತಿನಲ್ಲಿ ಬಂದು ತನಗೆ ಬೇಕಾದವರನ್ನು ಕರೆದುಕೊಂಡು ಹೋಗಿಯೇಬಿಡುತ್ತದೆ. ಹೀಗೆ, ಹೇಳದೇ ಕೇಳದೆ ಬಂದು ಹೋಗುವ ಅನಿರೀಕ್ಷಿತ ಅತಿಥಿಯ ಹೆಸರೇ-ಸಾವು!

ಸ್ವಾರಸ್ಯವೆಂದರೆ, ಸಾವಿರ ಸಂಕಟಗಳ ನಡುವೆ ಉಳಿದವರು ಕೂಡ ಸಾಯಲು ಇಚ್ಛಿಸುವುದಿಲ್ಲ. ತುಂಬ ದುಃಖವಾದಾಗ, ಬೇಸರವಾದಾಗ, ಸಾಲ ಜತೆಯಾದಾಗ, ನೌಕರಿ ಹೋದಾಗ, ಮೇಲಿಂದ ಮೇಲೆ ಅವಮಾನಗಳಾದಾಗ, ಮೈ ಎಂಬುದು ರೋಗಗಳ ಗೂಡಾದಾಗ- `ಹೀಗೆ ಒದ್ದಾಡುವ ಬದಲು ಛಕ್ಕಂತ ಸತ್ತು ಹೋದ್ರೆ ಸಾಕಪ್ಪಾ ಅನ್ನಿಸ್ತಿದೆ’ ಎಂದಿರುತ್ತಾರೆ ನಿಜ. ಆದರೆ, ಅದು ಎದೆಯಾಳದ ಮಾತಾಗಿರುವುದಿಲ್ಲ. ಸಂಕಟದಿಂದ ಸಾವನ್ನು ಧ್ಯಾನಿಸುವ ಮಂದಿ ಕೂಡ, ಈಗಲೋ ಇನ್ನೊಂದು ಕ್ಷಣದಲ್ಲೋ ನನಗೆ ಒಳ್ಳೆಯದಾಗಿಬಿಡುತ್ತೆ ಎಂದು ಕೊಳ್ಳುತ್ತಾರೆ. ಇಲ್ಲಿಯವರೆಗೆ ನಾನು ಯಾರಿಗೂ ಕೆಟ್ಟದು ಮಾಡಿಲ್ಲವಲ್ಲ? ದೇವರಿಗೆ ಪೂಜೆ ಮಾಡುವುದನ್ನು ಮರೆತಿಲ್ಲವಲ್ಲ? ಐದಾರು ಜನಕ್ಕೆ ಸಹಾಯ ಮಾಡಿದ್ದೀನಲ್ಲ? ಈ ಒಳ್ಳೆಯತನವೇ (?!) ನನ್ನನ್ನು ಕಾಪಾಡುತ್ತದೆ ಎಂದು ಬಲವಾಗಿ ನಂಬಿರುತ್ತಾರೆ.

ಹಾಗಾಗಿ, ಯಾರೆಂದರೆ ಯಾರೂ ಸಾವು ಬಯಸುವುದಿಲ್ಲ. ಅದನ್ನು ಆಹ್ವಾನಿಸುವುದಿಲ್ಲ. ಅಕಸ್ಮಾತ್ ಕನಸುಬಿದ್ದರೆ, ಸರಹೊತ್ತಿನಲ್ಲೇ ದಡಬಡಿಸಿ ಎದ್ದು ಡಗ್ಗಡಗ್ಗ ಹೊಡೆದುಕೊಳ್ಳುವ ಹೃದಯಬಡಿತ ಕೇಳಿಸಿಕೊಂಡು, ಕಣ್ಣುಜ್ಜಿಕೊಳ್ಳುತ್ತಾರೆ. ಅಂಥ ಯಾವ ಅನಾಹುತವೂ ನಡೆದಿಲ್ಲ ಎಂದು ಎರಡೆರಡು ಬಾರಿ ಖಚಿತಪಡಿಸಿಕೊಳ್ಳುತ್ತಾರೆ. ನಂತರ ಆ ಅಪರಾತ್ರಿಯಲ್ಲೇ ದೇವರ ಮುಂದೆ ನಿಂತು ಕೆನ್ನೆ ಕೆನ್ನೆ ಬಡಿದುಕೊಂಡು- `ಏನೂ ತೊಂದರೆ ಯಾಗದಿರಲಿ ಭಗವಂತಾ’ ಎಂದು ಪ್ರಾರ್ಥಿಸುತ್ತಾರೆ. ಅಕಸ್ಮಾತ್ ಬೆಳಗಿನ ಜಾವದಲ್ಲೇ ಯಾರೋ ಸತ್ತು ಹೋದಂತೆ ಕನಸು ಬಿದ್ದರಂತೂ ಮುಗಿದೇ ಹೋಯಿತು. ತಕ್ಷಣವೇ ಪುರೋಹಿತರ ಬಳಿ ಹೋಗಿ, ಮನೆಯ ಪುರಾಣವನ್ನೂ, ಕೆಟ್ಟ ಕನಸು ಬಿದ್ದ ಸಂಗತಿಯನ್ನೂ ಸಾದ್ಯಂತವಾಗಿ ವಿವರಿಸುತ್ತಾರೆ. ಕವಡೆ ಬಿಡುತ್ತಾರೆ. ಅಂಗೈ ತೋರಿಸಿ ಶಾಸ್ತ್ರ ಕೇಳುತ್ತಾರೆ. ಗಡಿಬಿಡಿಯಿಂದಲೇ ದೇವಸ್ಥಾನಕ್ಕೆ ನುಗ್ಗುತ್ತಾರೆ. ಅರ್ಚನೆ ಮಾಡಿಸುತ್ತಾರೆ. ಹರಕೆ ಕಟ್ಟಿಕೊಳ್ಳುತ್ತಾರೆ. ನಂತರ- `ಆ ಶನಿ ಮುಂಡೇದು ಬರದೇ ಇದ್ದರೆ ಸಾಕಪ್ಪಾ’ ಎಂದುಕೊಂಡೇ ಬಾಕಿ ಉಳಿದ ಕೆಲಸಗಳತ್ತ ತಿರುಗಿ ನೋಡುತ್ತಾರೆ.

ಸ್ವಾರಸ್ಯವೆಂದರೆ, ಯಾರೂ ಕರೆಯದಿದ್ದರೂ ಈ ಸಾವೆಂಬ ಅತಿಥಿ ಬಂದೇ ಬರುತ್ತದೆ. ಸಣ್ಣದೊಂದು ಮುನ್ಸೂಚನೆಯನ್ನೂ ಕೊಡದೆ ಬರುತ್ತದೆ. ಅದು ಕಾಲಾತೀತ, ಪಕ್ಷಾತೀತ ಮತ್ತು ಜಾತ್ಯಾತೀತ. ಸಾವಿನ, ಅರ್ಥಾತ್ ಕಾಲರಾಯನ ಕಾಕದೃಷ್ಟಿ ಬಿದ್ದವನನ್ನು ಭಗವಂತನೂ ಕಾಪಾಡಲಾರ!

ಸಾವಿರ ಮಂದಿಯ ಪ್ರಾರ್ಥನೆ, ನೂರು ದೇವರುಗಳ ಆಶೀರ್ವಾದ, ಕೋಟ್ಯಂತರ ಮಂದಿಯ ಪ್ರೀತಿ, ಒಳ್ಳೆಯದನ್ನು ಮಾತ್ರ ಬಯಸುವ ಮನಸ್ಸು, ಹೊಂದಿರುವ ಮನುಷ್ಯ ಸಾವನ್ನೂ ಜಯಿಸಬಲ್ಲ ಎಂದು ಅವರಿವರು ಹೇಳುವುದುಂಟು. ಅದೇ ನಿಜವಾಗಿದ್ದರೆ, ಆಂಧ್ರಪ್ರದೇಶದ ಮುಖ್ಯಮಂತ್ರಿ [^] ವೈ.ಎಸ್.ಆರ್. ರೆಡ್ಡಿ ಅಂಥ ದುರ್ಮಣರಣಕ್ಕೆ ಈಡಾಗುತ್ತಿರಲಿಲ್ಲ. ಕನ್ನಡಿಗರ ಕಣ್ಮಣಿ ಡಾ. ರಾಜ್‌ಕುಮಾರ್‌ಗೆ ದಿಢೀರ್ ಹೃದಯಾಘಾತವಾಗುತ್ತಿರಲಿಲ್ಲ. ಎಲ್‌ಟಿಟಿಇ ನಾಯಕ ಪ್ರಭಾಕರನ್, ಅಬ್ಬೇಪಾರಿಯಂತೆ ಸಾಯುತ್ತಿರಲಿಲ್ಲ. ಸದ್ದಾಂ ಹುಸೇನ್ ಎಂಬ ಸರ್ವಾಧಿಕಾರಿಯ ಕೊರಳಿಗೆ ಹಗ್ಗ ಬೀಳುತ್ತಿರಲಿಲ್ಲ. ಸ್ವಾಮಿ ವಿವೇಕಾನಂದರಂಥ ಮಹಾಪುರುಷರು ಚಿಕ್ಕ ವಯಸ್ಸಿಗೇ ಕಣ್ಮರೆಯಾಗುತ್ತಿರಲಿಲ್ಲ. ನೇತಾಜಿಯಂಥ ಅಪ್ರತಿಮ ನಾಯಕ ವಿಮಾನದೊಂದಿಗೆ ಮಾಯವಾಗುತ್ತಿರಲಿಲ್ಲ ಮತ್ತು ಶಂಕರ್‌ನಾಗ್ ಎಂಬ `ಎಂದೂ ಮಾಸದ ನಗೆಗೆ’ ಅಪಘಾತವಾಗುತ್ತಲೂ ಇರಲಿಲ್ಲ.

ಆದರೆ, ಸಾವೆಂಬುದು ನಿರ್ದಯಿ. ಒಳ್ಳೆಯವರು ಒಂದಷ್ಟು ಜಾಸ್ತಿ ದಿನ ಬದುಕಿರಲಿ. ಕೇಡಿಗರು ಮಾತ್ರ ಬೇಗನೇ ಬರಲಿ ಎಂದು ಅದು ಎಂದೂ ಯೋಚಿಸುವುದಿಲ್ಲ. ಒಂದು ಮಗುವಿನ ಜೀವ ಹೊತ್ತೊಯ್ದರೆ, ತಾಯಿ ಅನ್ನಿಸಿಕೊಂಡವಳಿಗೆ ಎಷ್ಟು ಸಂಕಟವಾಗಬಹುದು? ಮೂರು ತಿಂಗಳ ಹಿಂದಷ್ಟೇ ಮದುವೆಯಾದ ಹುಡುಗನ ಉಸಿರು ನಿಲ್ಲಿಸಿದರೆ ಅವನ ಹೆಂಡತಿಯ ಬದುಕು ಏನಾಗಬಹುದು? ಪ್ರಾಯಕ್ಕೆ ಬಂದ ಮಕ್ಕಳು ಕಣ್ಮುಂದೆಯೇ ಸತ್ತುಹೋದಾಗ ತಂದೆಯಾದವನ ಮನಸ್ಸಿಗೆ ಅದೆಷ್ಟು ಘಾಸಿಯಾಗಬಹುದು? ಬದುಕಿಡೀ ಒಂದು ಇರುವೆಯನ್ನೂ ಕೊಲ್ಲದಂಥ ಸಜ್ಜನನೊಬ್ಬ ಲಾರಿಯ ಚಕ್ರಕ್ಕೆ ಸಿಕ್ಕಿಕೊಂಡು ಅಪ್ಪಚ್ಚಿಯಾದಾಗ ಅವನ ಬಂಧುಗಳು ಹೇಗೆ ರೋಧಿಸಬಹುದು? ತನ್ನ ಯಶಸ್ಸು ಕಂಡು ಖುಷಿಯಾದ ತಂದೆಗೆ ಮರುಕ್ಷಣವೇ ಹೃದಯಾಘಾತವಾದ ಮಗನ ಗೋಳು, ನಂತರದ ಬಾಳು ಹೇಗಿರ ಬಹುದು? ಒಂದೇ ಕುಟುಂಬದ ಹತ್ತು ಮಂದಿ ದೇವಸ್ಥಾನದಿಂದ ಹಿಂದಿರುಗುವಾಗ ಅಪಘಾತದಲ್ಲಿ ಸತ್ತರೆ ಬದುಕಿಗೆ ಯಾವ ಅರ್ಥವಿದೆ? ಉಹುಂ, ಇಂಥ ಯಾವ ಪ್ರಶ್ನೆಗಳನ್ನೂ ಸಾವೆಂಬ ಸಾವು ಕೇಳಿಸಿಕೊಳ್ಳುವುದಿಲ್ಲ. ಜನರೋ, ಜನುವಾರುಗಳೋ ತಾವಾಗಿಯೇ ನನ್ನನ್ನು ಕರೆಯಲಿ ಎಂದು ಬಯಸುವುದಿಲ್ಲ. ಕರೆಯದೇ ಹೋದರೆ ಕೆರದಲ್ಲಿ ಹೊಡೆದಾರು ಎಂದು ಹೆದರುವುದೂ ಇಲ್ಲ! ಯಾರೋ ಒಂದಿಬ್ಬರು ಒಳ್ಳೆಯ ಕೆಲಸಕ್ಕೆ ನಿಂತಿದ್ದರೆ ಅದು ಮುಗಿಯಲಿ ಎಂದು ಕಾಯುವುದಿಲ್ಲ. ಇಂಥ ಒಳ್ಳೆಯ ಕೆಲಸಗಳಿಗೆಂದೇ ಇವರು ಬದುಕಲಿ ಎಂದು ಗ್ರೇಸ್ ಕೊಡುವುದೂ ಇಲ್ಲ. ಹೋಗಲಿ; ಕೆಲವೇ ಕೆಲವು ಮಂದಿಗೆ-ವಿಐಪಿಗಳು ಅನ್ನಿಸಿಕೊಂಡವರಿಗಾದರೂ `ಇಂಥ ದಿನ, ಇಷ್ಟು ಗಂಟೆಗೆ ಸರಿಯಾಗಿ ಬರ್‍ತೇನೆ. ರೆಡಿಯಾಗಿರಿ’ ಎಂದು ಮುನ್ಸೂಚನೆಯನ್ನೂ ಕೊಡುವುದಿಲ್ಲ. ಬದಲಿಗೆ, ತನಗೆ ಇಷ್ಟ ಬಂದ ಹೊತ್ತಿನಲ್ಲಿ ಬರುತ್ತದೆ. ತನಗೆ ಬೇಕೆನ್ನಿಸಿದ ರೂಪದಲ್ಲಿ ಬರುತ್ತದೆ!

ಹೌದಲ್ಲವಾ? ಸಾವೆಂಬುದು ಸೈಕಲ್, ಸ್ಕೂಟರ್, ಕಾರು, ಬಸ್, ರೈಲು, ವಿಮಾನ ಅಪಘಾತದ ರೂಪದಲ್ಲಿ ಬರಬಹುದು. ಜ್ವರದ ನೆಪದಲ್ಲಿ ಬರಬಹುದು. ಹೃದಯಾಘಾತದ ಕಾರಣ ಹೇಳಬಹುದು.ಅದು ಮನಸ್ಸು ಮಾಡಿದರೆ ಕಳ್ಳರ ವೇಷದಲ್ಲೇ ಬರಬಹುದು. ಕುದುರೆಯ ಕಾರಣದಿಂದಲೂ ಬರಬಹುದು. ಅಷ್ಟೇ ಅಲ್ಲ, ಸಾವೆಂಬುದು ವೈದ್ಯರ ರೂಪದಲ್ಲೇ ಬಂದು, ಹಲೋ ಹೇಳಿ ಉಸಿರು ನಿಲ್ಲಿಸಬಹುದು!

* * *
ಎಲ್ಲರನ್ನೂ ಹೆದರಿಸುವ, ದೇವರನ್ನೇ ಅಣಕಿಸುವ, ನಂಬಿಕೆಗಳನ್ನೇ ಬುಡಮೇಲು ಮಾಡುವ ಈ ಸಾವೆಂಬೋ ಸಾವು ಒಂದು ವೇಳೆ ಮೊದಲೇ ಮುನ್ಸೂಚನೆ ನೀಡಿ ಬಂದಿದ್ದರೆ ಬದುಕು ಹೇಗಿರುತ್ತಿತ್ತು? ನಾನು ಇಂಥ ದಿನವೇ ಇದೇ ರೀತಿಯಲ್ಲಿ ಸಾಯುತ್ತೇನೆ ಎಂದು ಗೊತ್ತಿದ್ದಿದ್ದರೆ ಜನ ಹೇಗೆ ರಿಯಾಕ್ಟ್ ಮಾಡುತ್ತಿದ್ದರು? ಈ ಕುತೂಹಲದ ಪ್ರಶ್ನೆಗಳಿಗೆ ಹೀಗೆ ಉತ್ತರಿಸಬಹುದೇನೋ: ಸಾವು ಹೀಗೇ ಬರುತ್ತೆ ಎಂದು ಗೊತ್ತಿದ್ದಿದ್ದರೆ- ವೈ.ಎಸ್. ರಾಜಶೇಖರ ರೆಡ್ಡಿ ಮೊನ್ನೆ ಹೆಲಿಕ್ಯಾಪ್ಟರ್ ಹತ್ತುತ್ತಿರಲಿಲ್ಲ. ಎಲ್‌ಟಿಟಿಇ ನಾಯಕ ಪ್ರಭಾಕರನ್, ಸೇನೆಯೊಂದಿಗೆ ಸೆಣಸುವ ರಿಸ್ಕು ತಗೊಳ್ತಿರಲಿಲ್ಲ. ಮೈಕಲ್ ಜಾಕ್ಸನ್- ಮಾದಕ ದ್ರವ್ಯದ ಹಿಂದೆ ಬೀಳುತ್ತಿರಲಿಲ್ಲ. ಸುಂದರಿ ಡಯಾನ ಕಾರು ಹತ್ತುತ್ತಿರಲಿಲ್ಲ. ವೀರಪ್ಪನ್, ಕಾಡು ಬಿಟ್ಟು ಹೊರಗೇ ಬರುತ್ತಿರಲಿಲ್ಲ. ಇಂದಿರಾಗಾಂಧಿಯ ಬೆನ್ನಿಗೆ ಅಂಗರಕ್ಷಕರಿರುತ್ತಿರಲಿಲ್ಲ. ಅಮಾಯಕಿಯೊಬ್ಬಳ ಹೂಮಾಲೆಗೆ ರಾಜೀವ್‌ಗಾಂಧಿ ಕೊರಳೊಡ್ಡುತ್ತಿರಲಿಲ್ಲ. ಸಂಜಯಗಾಂಧಿ ವಿಮಾನ ಹತ್ತುತ್ತಿರಲಿಲ್ಲ. ಅಷ್ಟೇ ಅಲ್ಲ, ಮಗಳು ಕಾಂಚನಾ ಕೊಳವೆ ಬಾವಿಗೆ ಬೀಳುತ್ತಾಳೆ ಎಂದು ಮೊದಲೇ ಗೊತ್ತಿದ್ದಿದ್ದರೆ ಬಿಜಾಪುರದ ಆ ತಂದೆ, ತಾಯಿ, ಅವಳನ್ನು ರಸ್ತೆಗೆ ಬಿಡುತ್ತಲೂ ಇರಲಿಲ್ಲ. ಸಾವೆಂಬುದು ಇಂಥ ದಿನವೇ ಬರಲಿದೆ ಎಂದು ಗೊತ್ತಿದ್ದರೆ ಬಹುಶಃ ನಮ್ಮ ಅಣ್ಣಾವ್ರು `ಇದೇ ಕಡೆ’ ಎಂದುಕೊಂಡು ಒಂದು ಅಪರೂಪದ ಸಿನಿಮಾ ಕೊಟ್ಟಿರ್‍ತಾ ಇರ್‍ತಿದ್ರು. ಹಾಗೆಯೇ, ನನ್ನ ನಂತರ ನೆನಪಿಗಿರಲಿ ಎಂಬ ಸದಾಶಯದಿಂದ ಹತ್ತಿಪ್ಪತ್ತು ಚಿತ್ರಕಥೆಗಳನ್ನು ಬರೆದಿಟ್ಟ ನಂತರವೇ ಶಂಕರ್‌ನಾಗ್ ಕಾರು ಹತ್ತಿರುತ್ತಿದ್ದರು. ಆದರೆ ಒಬ್ಬ ಗಾಂಧೀಜಿ ಮಾತ್ರ ಸಾವೆಂಬುದು ನಾಥೂರಾಂ ಗೋಡ್ಸೆಯ ರೂಪದಲ್ಲೇ ಬರುತ್ತದೆ ಎಂದು ತಿಳಿದ ನಂತರವೂ ಏನೆಂದರೆ ಏನೂ ಬದಲಾಗುತ್ತಿರಲಿಲ್ಲ! ಬದಲಿಗೆ ನಾಳೆ ಬರುವುದು ನನಗಿಂದೇ ಬರಲಿ ಎಂದುಕೊಂಡು ತಾವಾಗಿಯೇ ಗೋಡ್ಸೆಯ ಮನೆ ಹುಡುಕಿಕೊಂಡು ಹೋಗಿಬಿಡುತ್ತಿದ್ದರು!

ಇದೆಲ್ಲ, ಈಗ ನಮ್ಮೊಂದಿಗೆ ಇಲ್ಲದವರನ್ನು, ಕಥೆ [^]ಯಾಗಿ ಹೋದವರನ್ನು ಕುರಿತ ಮಾತಾಯಿತು. ಒಂದು ವೇಳೆ, ನಾವು ಇಂಥ ದಿನವೇ ಸಾಯುತ್ತೇವೆ ಎಂದು ನಮಗೆಲ್ಲ ಮೊದಲೇ ಗೊತ್ತಾಗಿ ಹೋಗಿದ್ದರೆ ಬದುಕು ಹೇಗಿರುತ್ತಿತ್ತು? ಈ ಪ್ರಶ್ನೆಗೆ ಒಂದು ಅಂದಾಜಿನ ಉತ್ತರಗಳನ್ನು ಪಟ್ಟಿ ಮಾಡಿದರೆ, ಮೊದಲಿಗೆ ಖುಷಿಯಾಗುತ್ತದೆ ನಿಜ. ಮರುಕ್ಷಣವೇ ಭಯವಾಗುತ್ತದೆ. ಏಕೆಂದರೆ, ತಾನು ಇಂಥ ದಿನವೇ, ಹೀಗೇ ಸಾಯುತ್ತೇನೆ ಎಂದು ಮನುಷ್ಯನಿಗೆ ಗೊತ್ತಾಗಿ ಹೋಗಿದ್ದರೆ- ಅವನಿಗೆ ಸಾವಿನ ಭಯವೇ ಇರುತ್ತಿರಲಿಲ್ಲ. ದೇವರಿಗಾಗಲಿ, ಜ್ಯೋತಿಷಿಗಳಿಗಾಗಲಿ, ವೈದ್ಯರಿಗಾಗಲಿ ಡಿಮ್ಯಾಂಡೇ ಇರುತ್ತಿರಲಿಲ್ಲ. ಬದುಕಿನಲ್ಲಿ ಥ್ರಿಲ್ ಇರುತ್ತಿರಲಿಲ್ಲ. ಕನಸುಗಳಿಗೆ ಅರ್ಥವಿರುತ್ತಿರಲಿಲ್ಲ. ಎಲ್ಲರೂ ಒಳ್ಳೆಯ ಸಾವನ್ನೇ ಬಯಸುತ್ತಿದ್ದರು. ಸಾವಿಗೆ ಬೇಕಾದ ಸಿದ್ಧತೆ ಮಾಡಿಕೊಳ್ಳುತ್ತಿದ್ದರು. ಕೆಟ್ಟ ಬುದ್ಧಿಯ ಜನ, ಹೇಗಿದ್ರೂ ನಾಳೆ ಸಾಯೋದು ಗ್ಯಾರಂಟಿ, ಹಾಗಾಗಿ ಇನ್ನೊಂದಷ್ಟು ಕ್ರೈಮು ಮಾಡಿಯೇ ಸಾಯೋಣ ಎಂದು ನಿಂತುಬಿಡ್ತಿದ್ರು. ಕಾರ್ ಅಪಘಾತದಲ್ಲಿ ಸಾಯ್ತೀನಿ ಅಂತೇನಾದ್ರೂ ಗೊತ್ತಿದ್ದಿದ್ರೆ ಆತ ಬಸ್ಸಿನಲ್ಲೇ ಪ್ರಯಾಣಿಸುತ್ತಿದ್ದ. ನೀರಿಂದ ಸಾವು ಅನ್ನೋದು ಗೊತ್ತಿದ್ದವ ಮಳೆ ಹನಿಗೆ ಕೂಡ ಮುಖ ಒಡ್ಡುತ್ತಿರಲಿಲ್ಲ. ಎಲ್ಲರೂ ಕಡೆಯ ದಿನಗಳನ್ನು ತಮ್ಮ ಇಷ್ಟದಂತೆ ಬದುಕಲು ಪ್ಲಾನ್ ಮಾಡ್ತಾ ಇರ್‍ತಿದ್ರು. ಆಸೆಬುರುಕರು ಮಾತ್ರ ಬ್ಯಾಂಕುಗಳಿಗೆ, ಎಲ್ಲೈಸಿ ಕಂಪನಿಗಳಿಗೆ, ಗೆಳೆಯರಿಗೆ, ಬಂಧುಗಳಿಗೆ ಸುಳ್ಳು ಸುಳ್ಳೇ ನಂಬಿಸಿ ಅಪಾರ ಮೊತ್ತದ ಸಾಲ ಪಡೆದು, ಭಾರೀ ಮೊತ್ತಕ್ಕೆ ವಿಮೆ ಮಾಡಿಸಿ ಎಲ್ಲರಿಗೂ ತಿರುಪತಿ ನಾಮ ಹಾಕಿ ಹೋಗಿಬಿಡ್ತಿದ್ರು.

ಅಷ್ಟೇ ಅಲ್ಲ, ನಾನು ಇಂಥ ದಿನವೇ ಸಾಯ್ತೀನಿ ಎಂದು ಮೊದಲೇ ಗೊತ್ತಿದ್ದಿದ್ದರೆ- `ನಾಳೆ ಬಾ’ ಎಂಬ ಬರಹ [^] ಎಲ್ಲ ಮನೆಯ ಬಾಗಿಲ ಮೇಲೂ ಕಡ್ಡಾಯವಾಗಿರುತ್ತಿತ್ತು. ಸಾಯುವ ದಿನ ಇನ್ನೂ ಎರಡು ವರ್ಷ ಬಾಕಿಯಿರುವಾಗಲೇ ಎಂಥವರಿಗೂ ಚಿಂತೆ ಶುರುವಾಗಿಬಿಡ್ತಿತ್ತು. ಸಾಹಿತಿ-ಕಲಾವಿದರುಗಳಂತೂ ತಮಗೆ ಸೂಕ್ತ ಸ್ಥಾನಮಾನ, ಪ್ರಶಸ್ತಿ ಬರಲಿಲ್ಲ ಎಂಬುದನ್ನೇ ಮುಂದಿಟ್ಟುಕೊಂಡು ಲಾಬಿಗೆ ಮುಂದಾಗುತ್ತಿದ್ದರು. ಪರಮಾಪ್ತರ ಮುಂದೆ ನಿಂತು- `ನಿಮ್ಮಲ್ಲಿ ಸುದ್ದಿ ಮುಚ್ಚಿಟ್ಟು ಲಾಭವೇನಿದೆ? ನಾನು ಇಂಥ ದಿನವೇ ಸಾಯ್ತೀನಿ. ಅಷ್ಟರೊಳಗೆ ಒಂದು ಪ್ರಶಸ್ತಿ ಕೊಡಿಸ್ರೀ. ನೆಮ್ಮದಿ ಯಾಗಿ ಸಾಯೋಕೆ ಅವಕಾಶ ಮಾಡಿಕೊಡ್ರೀ’ ಎಂದು ಅಂಗಲಾಚುತ್ತಿದ್ದರು. ರಾಜಕಾರಣಿಗಳಂತೂ ಸಾಯೋದ್ರೊಳಗೆ ನಾನು ಮಂತ್ರಿಯಾಗಬೇಕೂ… ಎಂದು ರಚ್ಚೆ ಹಿಡಿದು ಕೂತುಬಿಡುತ್ತಿದ್ದರು. ತಮಾಷೆ ಕೇಳಿ: ಆ ಸಂದರ್ಭದಲ್ಲಿ ಕೂಡ ಪರ-ವಿರೋಧವಾಗಿ ಗಲಾಟೆಗಳು, ಚರ್ಚೆಗಳು ನಡೆಯುತ್ತಿದ್ದವು. ಕೆಲವರು, ಸಾಯೋಕಿಂತ ಮೊದಲೇ `ಅವರ’ ಆಸೆಗಳನ್ನು ಈಡೇರಿಸಿ ಎಂದು ಪಟ್ಟು ಹಿಡಿದಿರ್‍ತಿದ್ರು. ಮತ್ತೆ ಕೆಲವರು- ಪ್ರಶಸ್ತಿಯನ್ನೋ, ಮಂತ್ರಿ ಪದವಿಯನ್ನೋ ಪಡೆದು ಹೆಸರು ಕೆಡಿಸಿಕೊಳ್ಳುವ ಬದಲು, ನೆಮ್ಮದಿಯಾಗಿ ಸಾಯೋಕಾಗಲ್ವ ನಿಮ್ಗೆ ಎಂದು ಸ್ವಾಟಿ ತಿವಿಯುತ್ತಿದ್ದರು. ಈ ಮಧ್ಯೆಯೇ ಕೆಲವರು, ಸಾವನ್ನು ತಡೆಯುವಂಥ ಸಂಶೋಧನೆ ಮಾಡ್ರೀ ಎಂದು ವಿಜ್ಞಾನಿಗಳನ್ನು ಒತ್ತಾಯಿಸುತ್ತಿದ್ದರು. ಮಾಟ-ಮಂತ್ರ ನಂಬುವ ಜನರಂತೂ ಸಾವೆಂಬುದು ತಮ್ಮನ್ನು ಮುಟ್ಟದಂತೆ ತಮ್ಮ ಸುತ್ತಲೂ ಅಷ್ಟದಿಗ್ಬಂಧನ ಮಾಡಿಸಿಕೊಳ್ಳಲು ಮುಂದಾಗುತ್ತಿದ್ದರು. ಮುಖ್ಯವಾಗಿ, ಸಾವಿನ ಬಗ್ಗೆ ಮೊದಲೇ ತಿಳಿದಿದ್ದರೆ ಮನೆಮನೆಯೂ ಹುಚ್ಚಾಸ್ಪತ್ರೆಯಂತಾಗುತ್ತಿತ್ತು. ಪ್ರೀತಿಯೆಂಬುದು ತೋರಿಕೆಯಾಗುತ್ತಿತ್ತು. ನಂಬಿಕೆಯ ಹೆಸರಲ್ಲೇ ವಂಚನೆ ನಡೆಯುತ್ತಿತ್ತು. ಗಂಡನಾದವನು ತೀರಾ ಗುಟ್ಟು ಎಂಬಂತೆ ತನ್ನ ಸಂಕಟ ಹೇಳಿಕೊಂಡಿರುತ್ತಿದ್ದ. ಆದರೆ ಹೆಂಡತಿಯಾದವಳು ಅದನ್ನು ಹತ್ತು ಮಂದಿಗೆ ಹೇಳಿಬಿಟ್ಟಿರುತ್ತಿದ್ದಳು. ಪರಿಣಾಮ, ಯಾರೋ ಒಬ್ಬ ಇಂಥ ದಿನವೇ ಸಾಯ್ತಾನಂತೆ ಎಂಬ ಸುದ್ದಿ ಕೇಳಿ- ಸಾವಿಗೂ ಮೊದಲೇ ಸಂತಾಪ ಕೋರಲು ನೂರಾರು ಜನ ಬಂದಿರುತ್ತಿದ್ದರು. ಅವರನ್ನು ನೋಡಿದಾಕ್ಷಣವೇ- ಮನುಷ್ಯನಿಗೆ ಹುಚ್ಚು ಹಿಡಿದಿರುತ್ತಿತ್ತು!

* * *
ಇದನ್ನೆಲ್ಲ ಅಂದಾಜು ಮಾಡಿಕೊಂಡು ಯೋಚಿಸಿದರೆ- ಸಾವೆಂಬುದು ನಿರ್ದಯಿಯಾಗಿರುವುದೇ ಸರಿ ಅನಿಸುತ್ತದೆ. ಅದರ ಹೆದರಿಕೆಯಲ್ಲೇ ನಾವು ಚನ್ನಾಗಿದೀವಿ ಅನಿಸುತ್ತದೆ. ಸಾವೆಂಬ ಸರ್ವಾಧಿಕಾರಿಗೆ ಸಲಾಮು ಹೊಡೆಯುವ ಮನಸಾಗುತ್ತದೆ. ಈ ಜಗತ್ತಿನ ಅಷ್ಟೂ ಜೀವಿಗಳ ಬೆನ್ನ ಹಿಂದೆಯೇ ಇದೀಯಲ್ಲ- ಎಂಥ ಕಿಲಾಡಿ ಅಲ್ವಾ ನೀನು ಎಂದು ಛೇಡಿಸುವ ಆಸೆಯಾಗುತ್ತದೆ. ಒಂದು ವೇಳೆ `ಸಾವು’ ಇಂಥ ದಿನವೇ ಬರುತ್ತೆ ಎಂದು ಮೊದಲೇ ಗೊತ್ತಿದ್ದಿದ್ದರೆ `ಸೂತಕ’ ಎಂಬ ಪದಕ್ಕೆ ಅರ್ಥವೂ ಇರುತ್ತಿರಲಿಲ್ಲ. ಹೇಗೆ ಬದುಕಬೇಕು ಮತ್ತು ಹೇಗೆಲ್ಲ ಬದುಕಬಾರದು ಎಂಬ ಎಚ್ಚರಿಕೆಯ ಪಾಠ ಕೂಡ ಆಗುತ್ತಿರಲಿಲ್ಲ ಎನ್ನಿಸಿದಾಗ ವಿಸ್ಮಯವಾಗುತ್ತದೆ. ಮತ್ತು ಹೀಗೆಲ್ಲ ಯೋಚಿಸಿದ ನಂತರವೂ- ನಮಗೆ ಒಂದಷ್ಟು ಜಾಸ್ತಿ ಬದುಕುವ ಅವಕಾಶ ಕೊಡು ಎಂದು ಸಾವೆಂಬ ಸಾವನ್ನೇ ಬೊಗಸೆಯೊಡ್ಡಿ ಬೇಡುವ ದುರಾಸೆಯೂ ಜತೆಯಾಗುತ್ತದೆ, ಅಲ್ಲವೇ?

Alfredo Quinones Hinojosa | Neurologist | Dirty Mexican | Brain surgeon | ಮೆದುಳು ಶಸ್ತ್ರಚಿಕಿತ್ಸಾ ತಜ್ಞ ಆಲ್‌ಫ್ರೆಡೋ ಕ್ವಿನಾನ್ಸ್

ಒಂದು ಕಾಲದಲ್ಲಿ `ಅವನನ್ನು’ ಅಮೆರಿಕದ ಜನ ತಲೆಯೊಳಗೆ ಸಗಣಿ ತುಂಬಿಕೊಂಡ ಪೆಕರಾ ಅಂದಿದ್ದರು. ಅಂಥ ಅಮೆರಿಕನ್ನರ ಮುಂದೆಯೇ `ಆತ’ ನಂಬರ್ ಒನ್ ಮೆದುಳು ಶಸ್ತ್ರಚಿಕಿತ್ಸಾ ತಜ್ಞನಾಗಿ ಬೆಳೆದು ನಿಂತ! ಆತನೇ ನಮ್ಮ ಕಥಾನಾಯಕ ಆಲ್‌ಫ್ರೆಡೋ ಕ್ವಿನಾನ್ಸ್ ಹಿನಾಜೋಸಾ. ಅಮೆರಿಕದಲ್ಲಿ ಈಗ ನಂ.1 ಮೆದುಳು ಶಸ್ತ್ರಚಿಕಿತ್ಸಾ ತಜ್ಞ.

ವೈದ್ಯರೊಬ್ಬರ ಮಗ ವೈದ್ಯನಾಗುವುದು, ತಹಸೀಲ್ದಾರರ ಮಗ ಡಿ.ಸಿ. ಆಗುವುದು, ಇನ್‌ಸ್ಪೆಕ್ಟರ್ ಮಗ ಡಿವೈಎಸ್ಪಿ ಆಗುವುದು, ಶಾಸಕನ ಮಗ ಶಾಸಕನೇ ಆಗುವುದು, ಶಿಕ್ಷಕರ ಮಗ ಲೆಕ್ಚರರ್ ಆಗುವುದು… ಉಹುಂ, ಇದ್ಯಾವುದೂ ಸುದ್ದಿಯಲ್ಲ. ಆದರೆ, ಕಳ್ಳನೊಬ್ಬನ ಮಗ ಐಎಎಸ್ ಮಾಡಿಬಿಟ್ಟರೆ-ಅದು ಸುದ್ದಿ. ತಿರುಪೆ ಎತ್ತುತ್ತಿದ್ದವನು ಚಿತ್ರ ನಟನಾದರೆ- ಅದು ಸುದ್ದಿ. ಕೊಳೆಗೇರಿಯ ಹುಡುಗನೊಬ್ಬ ಕೋಟ್ಯಾಪತಿಯಾದರೆ, ಅದೂ ಸುದ್ದಿ. ಅನಾಥಾಶ್ರಮದಲ್ಲಿ ಬೆಳೆದ ಹುಡುಗಿಯೊಬ್ಬಳು ವಿಶ್ವಸುಂದರಿಯಾಗಿಬಿಟ್ಟರೆ- ಅದಪ್ಪಾ ಸುದ್ದಿ.

ಇಂಥದೊಂದು `ಪವಾಡ’ ನಡೆಯಬೇಕಾದರೆ – ಗೆಲ್ಲಬೇಕೆಂಬ ಹಠವಿರಬೇಕು. ಗೆದ್ದೇ ತೀರುತ್ತೇನೆ ಎಂಬ ಛಲವಿರಬೇಕು. ಕಣ್ಮುಂದೆ ಗುರಿಯಿರಬೇಕು. ಸಮಸ್ಯೆಗಳನ್ನು ಎದುರಿಸುವ ಧೈರ್ಯವಿರಬೇಕು. ಒಂದು ಎತ್ತರ ತಲುಪಿಕೊಂಡ ನಂತರವೂ ಹೊಸದನ್ನು ಕಲಿಯುವ ಆಸೆಯಿರಬೇಕು, ಆಸಕ್ತಿಯಿರಬೇಕು. ಶ್ರದ್ಧೆ ಇರಬೇಕು. ಆಗ ಮಾತ್ರ `ಅಸಾಧ್ಯ’ ಎಂಬುದೆಲ್ಲಾ `ಸಾಧ್ಯ’ವಾಗಿಬಿಡುತ್ತದೆ. ಗೌರಿ ಶಂಕರದ ಎತ್ತರ ಕೂಡ ಬರೀ ಇನ್ನೂರು ಮೆಟ್ಟಿಲಿನ ಬೆಟ್ಟದಂತೆ ಕಾಣುತ್ತದೆ.

ಒಂದು ಕಾಲದಲ್ಲಿ ಅಮೆರಿಕದಲ್ಲಿ ಕೂಲಿ ಮಾಡುತ್ತಿದ್ದ; ಡರ್ಟಿ ಮೆಕ್ಸಿಕನ್ ಎಂದು ಅಮೆರಿಕನ್ನರಿಂದ ಉಗಿಸಿಕೊಂಡ; ಬೀದಿಯಲ್ಲಿ ಭಿಕ್ಷುಕನಂತೆ ಬಾಲ್ಯ ಕಳೆದ ಹುಡುಗನೊಬ್ಬ ಅದೇ ಅಮೆರಿಕದಲ್ಲಿ ಈಗ ನಂ.1 ಮೆದುಳು ಶಸ್ತ್ರಚಿಕಿತ್ಸಾ ತಜ್ಞ ಎಂದು ಹೆಸರಾಗಿದ್ದಾನೆ. ಅವನ ಯಶೋಗಾಥೆಯನ್ನು ವಿವರಿಸುವ ನೆಪದಲ್ಲಿ, ಮೇಲಿನ ಮಾತುಗಳನ್ನು ಹೇಳಬೇಕಾಯಿತು.

***
ನಮ್ಮ ಕಥಾನಾಯಕನ ಹೆಸರು ಆಲ್‌ಫ್ರೆಡೋ ಕ್ವಿನಾನ್ಸ್ ಹಿನಾಜೋಸಾ. ಈತ ಮೆಕ್ಸಿಕೋ ದೇಶದವನು. ಇವನ ತಂದೆ ಪೆಟ್ರೋಲ್ ಬಂಕ್ ಒಂದರಲ್ಲಿ ಸಣ್ಣ ನೌಕರಿಯಲ್ಲಿದ್ದ. ಮನೆಯಲ್ಲಿ ಅವನ ದುಡಿಮೆಯನ್ನೇ ನಂಬಿಕೊಂಡು ಹೆಂಡತಿ ಹಾಗೂ ಐವರು ಮಕ್ಕಳಿದ್ದರು. ಬರುತ್ತಿರುವ ಸಂಪಾದನೆ ಕುಟುಂಬ ನಿರ್ವಹಣೆಗೆ ಸಾಕಾಗುತ್ತಿಲ್ಲ ಅನ್ನಿಸಿದಾಗ, ಅನಿವಾರ್ಯವಾಗಿ ಮಕ್ಕಳನ್ನೂ ಕೂಲಿ ಕೆಲಸಕ್ಕೆ ಕಳುಹಿಸಲಾಯಿತು. ಆದರೆ, ಮಕ್ಕಳೆಲ್ಲ ಚಿಕ್ಕವರಿದ್ದರಲ್ಲ? ಆ ಕಾರಣಕ್ಕೆ ಅವರಿಗೆ ಯಾವೊಂದು ಕೆಲಸವೂ ಸಿಗಲಿಲ್ಲ. ಪರಿಣಾಮ, ಮನೆಯಲ್ಲಿ ಮಧ್ಯಾಹ್ನದ ಬಡತನ. ಈ ಸಂದರ್ಭದಲ್ಲಿಯೇ ಮೆಕ್ಸಿಕೋದಲ್ಲಿ ಆಂತರಿಕ ಗಲಭೆ ಶುರುವಾಯಿತು. ಅದೊಂದು ದಿನ ಆಲ್‌ಫ್ರೆಡೋ ಕ್ವಿನಾನ್ಸ್‌ನ ಮನೆಗೇ ನುಗ್ಗಿದ ಪುಂಡರು, ಮನೆಯಲ್ಲಿದ್ದ ಅಷ್ಟೂ ವಸ್ತುಗಳನ್ನು ಹೊತ್ತೊಯ್ದರು. ಆ ನಂತರದಲ್ಲಿಯೂ ಗಲಭೆಕೋರರ ಕಾಟ ಮುಂದುವರಿದಾಗ, ಕ್ವಿನಾನ್ಸ್‌ನ ತಂದೆ ಊರು ಬಿಡುವ ನಿರ್ಧಾರಕ್ಕೆ ಬಂದ.

ಊರನ್ನೇನೋ ಬಿಟ್ಟಿದ್ದಾಯಿತು. ಮುಂದಿನ ಬದುಕು ಹೇಗೆ? ಎಂದು ಕ್ವಿನಾನ್ಸ್‌ನ ಕುಟುಂಬದವರು ದಿಕ್ಕುಗಾಣದೆ ನಿಂತಿದ್ದಾಗ, ಅವನ ಬಂಧುಗಳು ನೆರವಿಗೆ ಬಂದರು. `ಅಮೆರಿಕಾದ ತೋಟಗಳಲ್ಲಿ ಕೂಲಿ ಕೆಲಸ ಸಿಗುತ್ತದೆ. ಬಂದುಬಿಡು’ ಎಂದರು. ಕ್ವಿನಾನ್ಸ್‌ನ ತಂದೆ ಹಿಂದೆ ಮುಂದೆ ಯೋಚಿಸದೆ ಸಂಸಾರ ಸಮೇತ ಬಂದೇ ಬಿಟ್ಟ. ಅಮೆರಿಕದ ಶ್ರೀಮಂತರ ತೋಟದಲ್ಲಿ ಮಾಲಿಯಾಗಿ, ಕೂಲಿಯವನಾಗಿ ಕೆಲಸಕ್ಕೆ ಸೇರಿಕೊಂಡ. ತನ್ನ ಸಂಪಾದನೆ ಯಾವ ಮೂಲೆಗೂ ಸಾಲುವುದಿಲ್ಲ ಎನ್ನಿಸಿದಾಗ ಮಕ್ಕಳನ್ನೂ ಕೂಲಿ ಕೆಲಸಕ್ಕೆ ಸೇರಿಸಿದ.

ಕ್ವಿನಾನ್ಸ್ ಮತ್ತು ಅವನ ತಂದೆ ಕೆಲಸ ಮಾಡುತ್ತಿದ್ದುದು ಹತ್ತು ಎಕರೆ ವಿಶಾಲದ ಜಮೀನಿನಲ್ಲಿ. ಅಲ್ಲಿ ಟೊಮೆಟೋ, ಕೋಸು, ಬೀನ್ಸ್, ಆಲೂಗಡ್ಡೆ ಸೇರಿದಂತೆ ತರಹೇವಾರಿಯ ತರಕಾರಿ ಬೆಳೆಯುತ್ತಿದ್ದರು. ತೋಟದ ಒಂದು ಮೂಲೆಯಲ್ಲಿ ಸಣ್ಣದೊಂದು ರೂಮನ್ನು ಕ್ವಿನಾನ್ಸ್‌ನ ಕುಟುಂಬಕ್ಕೆ ಬಿಟ್ಟುಕೊಡಲಾಗಿತ್ತು. ಕ್ವಿನಾನ್ಸ್‌ನ ಅಪ್ಪ ಬೆಳಗಿನಿಂದ ಸಂಜೆಯವರೆಗೂ ಬಿರುಬಿಸಿಲಿನಲ್ಲಿ ತೋಟದ ಈ ಬದಿಯಿಂದ ಆ ಬದಿಯವರೆಗೂ ಪಹರೆ ತಿರುಗುತ್ತಿದ್ದ. ಮಧ್ಯಾಹ್ನ ಊಟಕ್ಕೆಂದು ಬಂದವನು, ಆಕಸ್ಮಿಕವಾಗಿ ಮಾಲೀಕರು ಬಂದರೆ, ಅರ್ಧಕ್ಕೇ ಊಟಬಿಟ್ಟು ಓಡಿಹೋಗಿ ಅವರ ಮುಂದೆ ನಡುಬಾಗಿಸಿ ನಿಲ್ಲುತ್ತಿದ್ದ. ಅವನನ್ನು ಕಂಡ ಮಾಲೀಕರು-ಡರ್ಟಿ ಮೆಕ್ಸಿಕನ್ ಎಂದೇ ಮಾತು ಶುರು ಮಾಡುತ್ತಿದ್ದರು. ಚಿಕ್ಕದೊಂದು ತಪ್ಪಿಗೂ ಡರ್ಟಿ ಬಾಸ್ಟರ್ಡ್ ಎಂದು ಬಯ್ಯುತ್ತಿದ್ದರು. ಸಿಟ್ಟು ಬಂದರೆ ಒದ್ದೇ ಬಿಡುತ್ತಿದ್ದರು. ಇಂಥ ಸಂದರ್ಭಗಳಲ್ಲಿ ತಿರುಗಿ ಮಾತಾಡುವ, ಉತ್ತರ ಹೇಳುವ ಅವಕಾಶ ಕ್ವಿನಾನ್ಸ್‌ನ ತಂದೆಗೆ ಇರಲೇ ಇಲ್ಲ. ಹಾಗೇನಾದರೂ ಮಾಡಿದರೆ ಕೆಲಸ ಕಳೆದುಕೊಳ್ಳಬೇಕಿತ್ತು. ಅಮೆರಿಕನ್ನರನ್ನು ಅವರ ದೇಶದಲ್ಲಿಯೇ ನಿಂದಿಸಿದ ಕಾರಣಕ್ಕೆ ಜೈಲು ಶಿಕ್ಷೆಗೆ ಗುರಿಯಾಗಬೇಕಿತ್ತು. ಹಾಗಾಗಿ ಕ್ವಿನಾನ್ಸ್‌ನ ತಂದೆ ಎಲ್ಲ ಅವಮಾನವನ್ನೂ ಹಲ್ಲುಕಚ್ಚಿ ಸಹಿಸಿಕೊಂಡ.

ಅಪ್ಪ ಕೂಲಿ ಮಾಡುತ್ತಿದ್ದನಲ್ಲ? ಅದೇ ತೋಟದಲ್ಲಿ ಕ್ವಿನಾನ್ಸ್ ಕೂಡ ಕೆಲಸಕ್ಕಿದ್ದ-ತೋಟದಲ್ಲಿ ಬೆಳೆದ ತರಕಾರಿ [^]ಗಳನ್ನು ಆಯ್ದು ತಂದು ಟ್ರಕ್‌ಗೆ ತುಂಬುವುದು, ಅವಾಗವಾಗ ತೋಟದಲ್ಲಿ ಕಳೆ ಕೀಳುವುದು ಅವನ ಕೆಲಸವಾಗಿತ್ತು. ಹೀಗೆ ತರಕಾರಿ ತುಂಬುತ್ತಿದ್ದ ಹುಡುಗನನ್ನು ಶ್ರೀಮಂತ ಅಮೆರಿಕನ್ನರು ಅಣಕಿಸುತ್ತಿದ್ದರು. ಗೇಲಿ ಮಾಡುತ್ತಿದ್ದರು. ನಿನಗೆ ಇಂಗ್ಲಿಷೇ ಬರಲ್ವಲ್ಲೋ ಮೆಕ್ಸಿಕನ್ ಎಂದು ಅಪಹಾಸ್ಯ ಮಾಡುತ್ತಿದ್ದರು. `ನಿಮ್ಮ ತಲೆಯೊಳಗೆ ಬರೀ ಸಗಣಿ ತುಂಬಿದೆ ಕಣ್ರೋ. ನಿಮ್ಮಂಥೋರು ಏನಿದ್ರೂ ಜೀತ ಮಾಡೋಕೇ ಸೈ. ನಿಮಗೆ ಯಾವತ್ತೂ ತಲೆ ಓಡಲ್ಲ ಕಣ್ರೋ’ ಎಂದೆಲ್ಲ ಚುಚ್ಚಿ ಚುಚ್ಚಿ ಮಾತಾಡುತ್ತಿದ್ದರು. ಮುಂದೊಂದು ದಿನ ಇದನ್ನೆಲ್ಲ ನೆನಪು ಮಾಡಿಕೊಂಡು ಕ್ವಿನಾನ್ಸ್ ಹೀಗೆ ಹೇಳಿದ್ದ:

ಅಮೆರಿಕಾದ ಜನ ಹೀಗೆಲ್ಲ ಮಾತಾಡಿದಾಗ ಸಂಕಟವಾಗುತ್ತಿತ್ತು. ಸಿಟ್ಟು ಬರುತ್ತಿತ್ತು. ಅವರಿಗೆ ತಿರುಗಿ ಉತ್ತರ ಕೊಡುವ ಆಸೆಯಾಗುತ್ತಿತ್ತು. ಆದರೆ, ನನಗೆ ಚಂದದ ಇಂಗ್ಲಿಷು ಗೊತ್ತಿರಲಿಲ್ಲ. ಅವರಿಗಿಂತ ಚೆನ್ನಾಗಿ ಬದುಕಬೇಕೆಂಬ ಆಸೆಯಿತ್ತು. ಆದರೆ ಹಣವಿರಲಿಲ್ಲ. ಊಟಕ್ಕೂ ಗತಿಯಿರಲಿಲ್ಲ. ಅಷ್ಟೇ ಅಲ್ಲ, ಹಾಕಿಕೊಳ್ಳಲು ಚೆಂದದ ಬಟ್ಟೆಗಳೂ ಇರಲಿಲ್ಲ. ಇಡೀ ವರ್ಷ ಒಂದು ಜೀನ್ಸ್ ಪ್ಯಾಂಟ್‌ನಲ್ಲಿಯೇ ಬದುಕಿದೆ. ಕೊಳೆಯಾದಾಗೆಲ್ಲ ರಾತ್ರಿ ಒಗೆದು, ಬೆಳಗ್ಗೆ ಮತ್ತೆ ಅದನ್ನೇ ಧರಿಸುತ್ತಿದ್ದೆ. ಈ ಸಂಕಟದ ಮಧ್ಯೆಯೇ ನನಗೊಂದು ಹಟ ಬಂದುಬಿಟ್ಟಿತ್ತು. ಡರ್ಟಿ ಮೆಕ್ಸಿಕನ್, ನಿಂಗೆ ಇಂಗ್ಲಿಷು ಬರಲ್ಲ ಕಣೋ ಎಂದಿದ್ದರಲ್ಲ? ಅದೇ ಅಮೆರಿಕನ್ನರ ಮುಂದೆ ತಲೆ ಎತ್ತಿ ತಿರುಗಬೇಕು. ನಿಮ್ಮ ತಲೆಯೊಳಗೆ ಏನೂ ಇಲ್ಲ ಅಂದರಲ್ಲ? ನಿಮ್ಮ ಮೆದುಳು ಪೂರ್ತಾ ಖಾಲಿ ಎಂದು ಹಂಗಿಸಿದ್ದರಲ್ಲ? ಅದೇ ಅಮೆರಿಕನ್ನರು ನನ್ನೆದುರು ತಲೆಬಾಗಿ ನಿಲ್ಲುವಂತೆ ಮಾಡಬೇಕು ಎಂಬ ಹಟ ಜತೆಯಾಗಿಬಿಟ್ಟಿತ್ತು…

ಇಂಥದೊಂದು ನಿರ್ಧಾರವನ್ನು ಅಂಗೈಲಿ ಹಿಡಿದುಕೊಂಡೇ ಕ್ವಿನಾನ್ಸ್ ಮನೆಗೆ ಬಂದಾಗ, ಮೂಲೆಯಲ್ಲಿ ನಡುಗುತ್ತಾ ಕೂತಿದ್ದ ಅವನ ತಂದೆ, ಮಗನ ಕೈಹಿಡಿದು ಬಿಕ್ಕಳಿಸುತ್ತಾ ಹೇಳಿದನಂತೆ: `ಮಗಾ, ನನ್ನ ಥರಾನೇ ಕಣ್ಣೀರಿನಲ್ಲೇ ಕೈ ತೊಳೆಯಬೇಕು ಅನ್ನೋದಾದ್ರೆ ಈ ಕೆಲಸವನ್ನೇ ಮುಂದುವರಿಸು. ದೊಡ್ಡ ಮನುಷ್ಯ ಆಗಬೇಕು ಅನ್ನೋ ಆಸೆ ಇದ್ರೆ ನಾಳೆಯಿಂದಲೇ ಸ್ಕೂಲಿಗೆ ಹೋಗು…’

ಅವನ ಶ್ರದ್ಧೆಯ ಮುಂದೆ ವಿಜ್ಞಾನವೂ ಸೋತಿತು

Alfredo Quinones Hinojosa

ಮರುದಿನವೇ ಮೆಕ್ಸಿಕೋಗೆ ಮರಳಿದ ಕ್ವಿನಾನ್ಸ್ ಶಾಲೆಗೆ ಸೇರಿಕೊಂಡ. ಹಾಗೂ ಹೀಗೂ ಪ್ರಾಥಮಿಕ ಶಿಕ್ಷಣ ಮುಗಿಸಿದ. ಪ್ರೌಢಶಾಲಾ ಶಿಕ್ಷಣ ಮುಗಿಸಲು ಹಣದ ತೊಂದರೆ ಎದುರಾಯಿತು. ಆಗ ಒಂದು ವರ್ಷ ಸ್ಕೂಲು ಬಿಡಲು ಕ್ವಿನಾನ್ಸ್ ನಿರ್ಧರಿಸಿದ. ಹಾಗೆ ಶಾಲೆ ಬಿಟ್ಟವನು ಸೀದಾ ಅಮೆರಿಕಾದ ಫಾರ್ಮ್ ಹೌಸ್‌ಗೆ ಬಂದ. ತೋಟದ ಮಾಲಿ ಕೆಲಸಕ್ಕೆ ಸೇರಿಕೊಂಡ. ಊಟ ಮಾಡಿದರೆ ದುಡ್ಡು ಖರ್ಚಾಗಿ ಹೋಗುತ್ತದೆ ಎಂದುಕೊಂಡು ಒಂದಿಡೀ ವರ್ಷ (ತೋಟದ ಮಾಲೀಕರಿಗೆ ಗೊತ್ತಾಗದಂತೆ) ಟೊಮೆಟೋ, ಮೂಲಂಗಿ, ಕೋಸು, ಬೀನ್ಸ್ ತಿಂದುಕೊಂಡೇ ಬದುಕಿಬಿಟ್ಟ.

ಹೀಗೆ, ಒಂದು ವರ್ಷ ದುಡಿದ ಹಣವನ್ನು ಜತೆಗಿಟ್ಟುಕೊಂಡು ಮೆಕ್ಸಿಕೋಗೆ ಮರಳಿ, ಹೈಸ್ಕೂಲು ಶಿಕ್ಷಣಕ್ಕೆ ಸೇರಿಕೊಂಡನಲ್ಲ ಆಗ ಕ್ವಿನಾನ್ಸ್‌ನ ದಾರಿ ಸುಗಮವಿರಲಿಲ್ಲ. ಆತ ವಾಸವಿದ್ದ ಊರಿನಿಂದ ಶಾಲೆ ತುಂಬಾ ದೂರವಿತ್ತು. ಪರಿಣಾಮವಾಗಿ, ಬೆಳಗ್ಗೆ ನಾಲ್ಕು ಗಂಟೆಗೇ ಆತ ಏಳಬೇಕಿತ್ತು. ಅವಸರದಿಂದಲೇ ಬಸ್ಸು ಹಿಡಿಯಬೇಕಿತ್ತು. ಮಧ್ಯಾಹ್ನ ಮನೆಗೆ ವಾಪಸಾಗಲು ಬಸ್ ಇರಲಿಲ್ಲ. ಹಾಗಾಗಿ ಭರ್ತಿ ಎಂಟು ಮೈಲಿ ದೂರವನ್ನು ಆತ ನಡೆದೇ ಬರಬೇಕಿತ್ತು. ವರ್ಷವಿಡೀ ಬಿರುಬಿಸಿಲು ಅಥವಾ ಜಡಿ ಮಳೆ ಯಾವುದಾದರೊಂದು ಸದಾ ಕ್ವಿನಾನ್ಸ್‌ಗೆ ಕಾಟ ಕೊಡುತ್ತಲೇ ಇತ್ತು.

ಈ ಸಂಕಟದ ಮಧ್ಯೆಯೂ ಕ್ವಿನಾನ್ಸ್ ಡಿಸ್ಟಿಂಕ್ಷನ್‌ನಲ್ಲಿ ಪಾಸಾದ. ಈ ಸಂದರ್ಭದಲ್ಲಿಯೇ-ಮೆಕ್ಸಿಕೋದಲ್ಲಿಯೇ ಉಳಿದರೆ, ಯಾವುದಾದರೂ ಕಂಪನಿಯಲ್ಲಿ ಗುಮಾಸ್ತನಾಗಬಹುದೇ ಹೊರತು ಅದಕ್ಕಿಂತ ದೊಡ್ಡ ಹುದ್ದೆಗೆ ಹೋಗುವುದು ಸಾಧ್ಯವಿಲ್ಲ ಎಂದು ಕ್ವಿನಾನ್ಸ್‌ಗೆ ಅರ್ಥವಾಗಿ ಹೋಯಿತು. ಆತ ತಕ್ಷಣವೇ ಅಮೆರಿಕದ ಹಾದಿ ಹಿಡಿದ. ಅಮೆರಿಕದಲ್ಲಿ ಬದುಕಬೇಕೆಂದರೆ ಅಲ್ಲಿನ ಇಂಗ್ಲಿಷ್ ಕಲೀಬೇಕು ಅನ್ನಿಸಿದಾಗ ಒಂದಿಷ್ಟು ಡಿಕ್ಷನರಿ ಜತೆಗಿಟ್ಟುಕೊಂಡು ಕೆಲವೇ ದಿನಗಳಲ್ಲಿ ಅಮೆರಿಕನ್ ಇಂಗ್ಲಿಷು ಕಲಿತೇಬಿಟ್ಟ. ನಂತರ ರೈಲ್ವೆ ಇಲಾಖೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸಕ್ಕೆ ಸೇರಿಕೊಂಡ. ಈ ಸಂದರ್ಭದಲ್ಲಿ ಕ್ವಿನಾನ್ಸ್ ಮಾಡಿದ ಜಾಣತನದ ಕೆಲಸವೆಂದರೆ, ಸಂಜೆ ಕಾಲೇಜಿಗೆ ಸೇರಿಕೊಂಡದ್ದು.

ವಿಜ್ಞಾನದ ವಿಷಯ ಆಯ್ದುಕೊಂಡ ಕ್ವಿನಾನ್ಸ್, ಕಾಲೇಜು [^] ಮುಗಿದ ತಕ್ಷಣ ಲೈಬ್ರರಿ ಸೇರಿಕೊಳ್ಳುತ್ತಿದ್ದ. ಆತನ ಕಣ್ಮುಂದಿನ ಗುರಿ ನಿಚ್ಚಳವಿತ್ತು. ಇವತ್ತಲ್ಲ ನಾಳೆ, ಇಡೀ ಅಮೆರಿಕದ ಜನ ತನ್ನತ್ತ ಬೆರಗಿನಿಂದ ನೋಡುವಂಥ ಸಾಧನೆ ಮಾಡಬೇಕೆಂಬ ಮಹದಾಸೆ ಅವನೊಳಗಿತ್ತು. ಈ ಹಠದಿಂದಲೇ ಓದಲು ಕೂರುತ್ತಿದ್ದ. ಕಡೆಗೊಂದು ದಿನ, ಅವನ ಶ್ರದ್ಧೆಯ ಮುಂದೆ ವಿಜ್ಞಾನವೂ ಸೋತಿತು. ಪರಿಣಾಮ, ಉನ್ನತ ದರ್ಜೆಯಲ್ಲಿ ಆತ ಡಿಗ್ರಿ ಪಡೆದ. ನಂತರ ಶಿಕ್ಷಕನಾಗಿ ಕೆಲಸಕ್ಕೆ ಸೇರಿಕೊಂಡ. ಈ ಕೆಲಸದಿಂದ ಸಿಗುವ ಸಂಬಳದಲ್ಲಿ ಉನ್ನತ ಶಿಕ್ಷಣ ಪಡೆಯಲು ಸಾಧ್ಯವಿಲ್ಲ ಅನ್ನಿಸಿದಾಗ, ಬಟ್ಟೆ ಅಂಗಡಿಯೊಂದರಲ್ಲಿ ಕೆಲಸಕ್ಕೆ ಸೇರಿಕೊಂಡ. ಖಾಸಗಿಯಾಗಿ ಟ್ಯೂಶನ್ ಹೇಳುವುದಕ್ಕೂ ಮುಂದಾದ.

ಹೀಗೆ, ಪೈಸೆಗೆ ಪೈಸೆ ಸೇರಿಸಿಕೊಂಡು ಕನಸಿನ ಹಿಂದೆ ಬಿದ್ದಿದ್ದಾಗಲೇ ಅಮೆರಿಕದ ಸಾವಿರಾರು ವಿದ್ಯಾರ್ಥಿಗಳು ಡ್ರಗ್ಸ್‌ನ ದಾಸರಾಗಿರುವ ಸುದ್ದಿ ಪತ್ರಿಕೆಗಳಲ್ಲಿ ಪ್ರಕಟವಾಯಿತು. ತಕ್ಷಣವೇ, ಡ್ರಗ್ಸ್ ಸೇವನೆಯಿಂದ ಮೆದುಳಿನ ಮೇಲಾಗುವ ದುಷ್ಪರಿಣಾಮಗಳು ಎಂಬ ವಿಷಯವಾಗಿ ಕ್ವಿನಾನ್ಸ್ ಒಂದು ಪ್ರಬಂಧ ಬರೆದು ಪ್ರಕಟಿಸಿದ. ಈ ಸಂಶೋಧನೆಗೆ ಪ್ರೊ. ಹೋಗೋ ಮೋರಾ ಎಂಬಾತ ಗೈಡ್ ಆಗಿದ್ದರು. ಕ್ವಿನಾನ್ಸ್‌ನ ಪ್ರಬಂಧವನ್ನು ಕಂಡ ಅವರು, ಇದಕ್ಕಿಂತ ಚೆನ್ನಾಗಿ ಬರೆಯಲು ನನ್ನಿಂದ ಕೂಡ ಸಾಧ್ಯವಿಲ್ಲ. ಮಾನವ ದೇಹದ ಅತಿ ಸೂಕ್ಷ್ಮ ಅಂಗವೆಂದರೆ ಮೆದುಳು. ಅದರ ಬಗ್ಗೆ, ಅದರ ಕಾರ್ಯ ಚಟುವಟಿಕೆ, ಅದಕ್ಕೆ ಬರುವ ಕಾಯಿಲೆ, ಅದಕ್ಕೆ ಪರಿಹಾರ… ಮುಂತಾದ ವಿಷಯದ ಬಗ್ಗೆ ಅಕಾರಯುತವಾಗಿ ಮಾತಾಡಲು ತುಂಬ ತಿಳಿವಳಿಕೆ ಇರಬೇಕು. ಅಂಥ ಬುದ್ಧಿ ನಿನಗಿದೆ. ನೀನು ಯಾಕೆ ಡಾಕ್ಟರಾಗಬಾರದು? ನೀನೇಕೆ ಮೆದುಳು ಶಸ್ತ್ರಚಿಕಿತ್ಸಾ ತಜ್ಞ ಆಗಬಾರದು? ಎಂದರು. ಅಷ್ಟಕ್ಕೇ ಸುಮ್ಮನಾಗದೆ ಹಾರ್ವರ್ಡ್‌ನ ಮೆಡಿಕಲ್ ಕಾಲೇಜಿಗೆ ಶಿಷ್ಯನ ಪ್ರಬಂಧವನ್ನು ಕಳಿಸಿಕೊಟ್ಟರು. ಅವನಿಗೆ ವೈದ್ಯ ಶಿಕ್ಷಣಕ್ಕೆ ಸೀಟು ಕೊಡುವಂತೆಯೂ ಆಗ್ರಹಿಸಿದರು. ಕ್ವಿನಾನ್ಸ್‌ನ ಪ್ರಬಂಧ ಕಂಡದ್ದೇ ಹಾರ್ವರ್ಡ್ ವಿವಿಯ ಎಲ್ಲರೂ ಬೆರಗಾದರು. ಆತನಿಗೆ ರತ್ನಗಂಬಳಿಯ ಸ್ವಾಗತ ಕೊಟ್ಟರು. ಕೆಲವೇ ವರ್ಷಗಳ ಹಿಂದೆ ಕ್ವಿನಾನ್ಸ್‌ನಿಂದ ಜೀತ ಮಾಡಿಸಿಕೊಂಡಿದ್ದ ಅಮೆರಿಕ ಸರಕಾರ, ತಾನೇ ಮುಂದಾಗಿ ಅವನಿಗೆ ಅಮೆರಿಕನ್ ಪೌರತ್ವ ನೀಡಿತು. ಸ್ಕಾಲರ್‌ಶಿಪ್ ನೀಡಿತು. ವಾಸಕ್ಕೆ ಮನೆ ಕೊಟ್ಟಿತು. ಷರತ್ತಿಲ್ಲದೆ ಸಾವಿರಾರು ಡಾಲರ್ ಸಾಲ ನೀಡಿತು.

ಹಳೆಯ ಗಾಯ, ಹಳೆಯ ಅವಮಾನ- ಈ ಎರಡನ್ನೂ ನೆನಪಿಟ್ಟುಕೊಂಡೇ ಕ್ವಿನಾನ್ಸ್ ಓದು ಮುಂದುವರಿಸಿದ. ಈ ಅಮೆರಿಕನ್ನರಿಂದ ಗೌರವ ಪಡೆಯಲೇಬೇಕು ಎಂಬ ಹಠದಿಂದಲೇ ಅಧ್ಯಯನಕ್ಕೆ ತೊಡಗಿಸಿಕೊಂಡ. ಕಡೆಗೂ ಅವನ ಛಲವೇ ಗೆದ್ದಿತು. ನರರೋಗ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆದ ಕ್ವಿನಾನ್ಸ್ ನಂತರದ ಎರಡೇ ವರ್ಷದಲ್ಲಿ `ಅಮೆರಿಕದ ಅತ್ಯುತ್ತಮ ಮೆದುಳು ಶಸ್ತ್ರ ಚಿಕಿತ್ಸಾ ತಜ್ಞ’ ಎಂದು ಹೆಸರು ಮಾಡಿದ.

***
ಈಗ, ಅಮೆರಿಕದ ಬಾಲ್ಟಿಮೋರ್‌ನಲ್ಲಿರುವ ಜಾನ್ಸ್‌ಹಾಫ್‌ಕಿನ್ಸ್ ಆಸ್ಪತ್ರೆಯಲ್ಲಿ ಸೇವೆಯಲ್ಲಿದ್ದಾನೆ ಕ್ವಿನಾನ್ಸ್. ಮೆದುಳು ಕ್ಯಾನ್ಸರ್‌ಗೆ ತುತ್ತಾದವರನ್ನು ಬದುಕಿಸುವ ಮಹಾವೈದ್ಯ ಎಂದೇ ಅವನಿಗೆ ಹೆಸರಿದೆ. ಬದುಕುವುದೇ ಇಲ್ಲ ಎಂಬ ಹಂತಕ್ಕೆ ಹೋಗಿದ್ದ ರೋಗಿಗಳೆಲ್ಲ ಕ್ವಿನಾನ್ಸ್‌ನ ಕೈ ಚಳಕದಿಂದ ಹೊಸ ಬದುಕು ಕಂಡಿದ್ದಾರೆ. ಅಮೆರಿಕ ಸರಕಾರ, ಅವನಿಗೆ ಎಲ್ಲ ಅತ್ಯುನ್ನತ ಪ್ರಶಸ್ತಿಗಳನ್ನೂ ನೀಡಿ ಗೌರವಿಸಿದೆ. ಆ ಮೂಲಕ ತನ್ನ ಖ್ಯಾತಿಯನ್ನೂ ಹೆಚ್ಚಿಸಿಕೊಂಡಿದೆ.

ಇವತ್ತು, ಖ್ಯಾತಿಯ ಗೌರಿಶಂಕರದಲ್ಲಿ ಕುಳಿತಿದ್ದರೂ 40ರ ಹರೆಯದ ಕ್ವಿನಾನ್ಸ್ ಬದಲಾಗಿಲ್ಲ. ಮೈಮರೆತಿಲ್ಲ. ಅಹಮಿಕೆಗೆ ಬಲಿಯಾಗಿಲ್ಲ. ಆತ ಹೇಳುತ್ತಾನೆ: ಒಂದು ಕಾಲದಲ್ಲಿ ಇದೇ ಅಮೆರಿಕದಲ್ಲಿ ಭಿಕ್ಷುಕನಂತೆ ಬದುಕಿದೆ. ಈ ಊರಲ್ಲಿ ತಲೆಎತ್ತಿಕೊಂಡು, ಅಮೆರಿಕನ್ನರಿಗೆ ಸರಿಸಮನಾಗಿ ಬದುಕಬೇಕೆಂಬ ಆಸೆಯಿತ್ತು. ಅದೀಗ ನನಸಾಗಿದೆ. ಅಮೆರಿಕದ ಹುಡುಗಿಯನ್ನೇ ಮದುವೆಯಾಗಿದ್ದೇನೆ. ನನಗೆ ಭವಿಷ್ಯದಲ್ಲಿ ನಂಬಿಕೆಯಿಲ್ಲ. ಇವತ್ತೇ ಕಡೆಯ ದಿನ ಅಂದುಕೊಂಡೇ ಕೆಲಸ ಶುರುಮಾಡ್ತೀನಿ. ಮೆದುಳಿನ ಶಸ್ತ್ರಚಿಕಿತ್ಸೆ ಅಂದರೆ ಸಾವಿನೊಂದಿಗೆ ಸರಸ ಇದ್ದಂತೆ. ಅದು ದೇವರ ಜತೆಗಿನ ಹೋರಾಟ. ನನ್ನ ಕೈ ಚಳಕದ ಸತ್ವ ಪರೀಕ್ಷೆ. ಅದರಲ್ಲಿ ಗೆಲ್ಲಲೇಬೇಕು ಅಂದುಕೊಂಡೇ ಕೆಲಸ ಶುರು ಮಾಡ್ತೀನಿ. ಜೀಸಸ್, ನಿನ್ನ ವಿರುದ್ಧವೇ ಹೋರಾಡ್ತಾ ಇದೀನಿ. ನನಗೆ ಗೆಲುವಾಗುವಂತೆ ಆಶೀರ್ವದಿಸು ಎಂದು ಪ್ರಾರ್ಥಿಸಿದ ನಂತರವೇ ಆಪರೇಷನ್ ಥಿಯೇಟರಿಗೆ ನಡೆದುಹೋಗ್ತೀನಿ. ಮುದ್ದೆ ಮುದ್ದೆಯಂಥ, ಅಮೀಬಾದ ಚಿತ್ರದಂಥ ಮೆದುಳನ್ನು ಕಂಡಾಗ, ಅದರಲ್ಲಿ ಅತಿ ಸೂಕ್ಷ್ಮ ಭಾಗವೊಂದನ್ನು ಕತ್ತರಿಸಿ ತೆಗೆಯಬೇಕಾಗಿ ಬಂದಾಗ ನನಗೂ ಜೀವ ಝಲ್ ಅನ್ನುತ್ತೆ ನಿಜ. ಆದರೆ, ಆಗೆಲ್ಲ ನನಗೆ ನಾನೇ ಧೈರ್ಯ ಹೇಳಿಕೊಂಡು ಕೆಲಸ ಮಾಡ್ತೀನಿ. ಅದೃಷ್ಟ, ಸ್ವಪ್ರಯತ್ನ, ರೋಗಿಯ ಮನೋಸ್ಥೈರ್ಯ ಹಾಗೂ ಜೀಸಸ್‌ನ ಕರುಣೆಯಿಂದ ಪ್ರತಿ ಸಂದರ್ಭದಲ್ಲೂ ನಾನು ಗೆದ್ದಿದೀನಿ ಎನ್ನುತ್ತಾನೆ ಕ್ವಿನಾನ್ಸ್.

****
ಒಂದು ಕಾಲದಲ್ಲಿ ನಿನ್ನ ಮೆದುಳೇ ಖಾಲಿ ಕಣೋ ಎಂದು ಅಣಕಿಸಿದ್ದ ಅಮೆರಿಕ [^]ದ ಜನರಿಂದಲೇ ಶ್ರೇಷ್ಠ ಮೆದುಳು ಶಸ್ತ್ರಚಿಕಿತ್ಸಾ ತಜ್ಞ ಎಂದು ಕರೆಸಿಕೊಂಡನಲ್ಲ ಕ್ವಿನಾನ್ಸ್? ಅವನಿಗೆ ಲಾಲ್‌ಸಲಾಮ್ ಎನ್ನುವ ಆಸೆಯಾಗುತ್ತದೆ. ಹಿಂದೆಯೇ ಸಾಧನೆಗೆ ಅಸಾಧ್ಯವಾದುದು ಯಾವುದೂ ಇಲ್ಲ ಎಂದು ಚೀರಿ ಹೇಳಬೇಕೆನಿಸುತ್ತದೆ. ಅಲ್ಲವೇ?

ಬರವಣಿಗೆ ಮೂಲಕ ಭವಿಷ್ಯ ತಿಳಿಯಿರಿ! Handwriting | Letter writing | Kannada letter | Personality –

Write letters to know your personality

ನಮ್ಮ ಕೈಬರಹ, ಪತ್ರ ಬರೆಯುವ ಧಾಟಿ, ಅದರಲ್ಲಿ ಕಂಡು ಬರುವ ಶಿಸ್ತು, ಅಶಿಸ್ತು, ಅವಸರ, ಶ್ರದ್ಧೆ, ಅಕ್ಷರ ಬಳಕೆಯ ರೀತಿಯಿಂದಲೂ ಭವಿಷ್ಯ ಹೇಳಬಹುದು ಅಂದರೆ ನಂಬುತ್ತೀರಾ? ನಂಬುವವರ ಪಾಲಿಗಷ್ಟೇ ಇದು ನಿಜ. ಯಾವ ರೀತಿ ಬರೆಯುವವರ ವ್ಯಕ್ತಿತ್ವ ಹೇಗಿರುತ್ತದೆ ಎಂಬುದಕ್ಕೆ ಇಲ್ಲಿ ವಿವರಣೆಯಿದೆ. ಪತ್ರ ಬರೆಯುವ ಕಲೆ ನಶಿಸಿಹೋಗುತ್ತಿದೆ ಎಂಬುದನ್ನು ನಂಬಬಹುದಾದರೂ ನಮ್ಮ ವ್ಯಕ್ತಿತ್ವ ತಿಳಿದುಕೊಳ್ಳಲು ಪತ್ರ ಬರೆಯುವುದನ್ನು ಇನ್ನಾದರೂ ಪ್ರಾರಂಭಿಸಬಹುದಲ್ಲ? ಆದರೆ, ಕೈಗೆ ಪೆನ್ನು ಮತ್ತು ಪೇಪರು ಎತ್ತಿಕೊಳ್ಳುವ ಮುನ್ನ ಈ ಲೇಖನವನ್ನೋದಿಬಿಡಿ.

ಒಂದು ಕಾಲವಿತ್ತು. ಆಗೆಲ್ಲ, ಭವಿಷ್ಯ ತಿಳಿಯಬೇಕು ಅನ್ನುವವರು, ಸೀದಾ ಜ್ಯೋತಿಷಿಗಳ ಬಳಿಗೆ ಹೋಗುತ್ತಿದ್ದರು. ಆಂಗೈ ತೋರಿಸುತ್ತಿದ್ದರು. ಕವಡೆ ಬಿಡುತ್ತಿದ್ದರು. ನಂತರ, ಅವರು ಹೇಳಿದ್ದಕ್ಕೆಲ್ಲ `ಸರಿ ಸ್ವಾಮಿ, ನಿಜ ಸ್ವಾಮಿ, ಹೌದು ಸ್ವಾಮಿ’ ಎಂದು ಹೂಂಗುಟ್ಟಿ ಎದ್ದು ಬರುತ್ತಿದ್ದರು. ಜ್ಯೋತಿಷಿಗಳ ಬಳಿಗೆ ಹೋಗಲು ಒಪ್ಪದವರು-ತಮ್ಮ ಹೆಸರಿನ ಮೊದಲಕ್ಷರ ಯಾವ ರಾಶಿಯದು ಎಂದು ತಿಳಿದು, ಕುತೂಹಲದಿಂದಲೇ ಪಂಚಾಂಗದ ಕಡೇ ಪುಟಗಳಲ್ಲಿದ್ದ ಭವಿಷ್ಯ ಓದುತ್ತಿದ್ದರು. ಮುಂದೆ, ಹುಟ್ಟಿದ ದಿನಾಂಕ ಹಾಗೂ ತಿಂಗಳಿನ ಆಧಾರದ ಮೇಲೆ ಭವಿಷ್ಯ ಹೇಳುವ/ನೋಡುವ ಸ್ಕೀಮು ಜಾರಿಗೆ ಬಂತು. ಭವಿಷ್ಯವನ್ನು ನಂಬದವರು ಕೂಡ ಒಂದು ಕುತೂಹಲದಿಂದ ಅದನ್ನು ಓದಿ, ಕೇಳಿ, ತಿಳಿದು ಖುಷಿಪಟ್ಟರು. ಸ್ವಾರಸ್ಯವೆಂದರೆ, ಈ ಎರಡೂ ವೆರೈಟಿಯ ಭವಿಷ್ಯಗಳಲ್ಲಿ ಹೆಚ್ಚು-ಕಡಿಮೆ ಆಗುವ ಸಾಧ್ಯತೆಗಳು ತುಂಬಾ ಇದ್ದವು. ಹೇಗೆಂದರೆ, ಜ್ಯೋತಿಷ್ಯ ಹೇಳುವವರು ಪರಿಚಿತರೇ ಆಗಿದ್ದರೆ; ನಮ್ಮಿಂದ ಉಪಕಾರಕ್ಕೆ ಒಳಗಾಗಿದ್ದರೆ-ಕಂಡದ್ದನ್ನು (?!) ಕಂಡಹಾಗೆ ಹೇಳುವ ಸಾಧ್ಯತೆ ತೀರಾ ಕಮ್ಮಿಯಿತ್ತು. ಹಾಗೆಯೇ, ಜನ್ಮದಿನಾಂಕ ತಪ್ಪಾಗಿ ನಮೂದಾಗಿದ್ದರೆ, ಆಗ ಕೂಡ ಭವಿಷ್ಯದ ಸಾಲುಗಳಲ್ಲಿ ಹೆಚ್ಚು ಕಡಿಮೆ ಆಗುವ ಸಂಭವವಿತ್ತು.

ಹೀಗಿರುವಾಗ, ನಮ್ಮ ಕೈಬರಹ, ಪತ್ರ ಬರೆಯುವ ಧಾಟಿ, ಅದರಲ್ಲಿ ಕಂಡು ಬರುವ ಶಿಸ್ತು, ಅಶಿಸ್ತು, ಅವಸರ, ಶ್ರದ್ಧೆ, ಅಕ್ಷರ ಬಳಕೆಯ ರೀತಿಯಿಂದಲೂ ಭವಿಷ್ಯ ಹೇಳಬಹುದು ಅಂದರೆ ನಂಬುತ್ತೀರಾ? ನಂಬುವವರ ಪಾಲಿಗಷ್ಟೇ ಇದು ನಿಜ. ಯಾವ ರೀತಿ ಬರೆಯುವವರ ವ್ಯಕ್ತಿತ್ವ ಹೇಗಿರುತ್ತದೆ ಎಂಬುದಕ್ಕೆ ಇಲ್ಲಿ ವಿವರಣೆಯಿದೆ.

ಕೆಲವರಿರುತ್ತಾರೆ. ಅವರ ಪತ್ರಗಳು ಮಾರುದ್ದ ಇರುತ್ತವೆ ನಿಜ. ಆದರೆ ಆ ಪತ್ರಗಳಲ್ಲಿ ಒಂದೇ ವಿಷಯವನ್ನೂ ಮತ್ತೆ ಮತ್ತೆ ರಿಪೀಟ್ ಮಾಡಿರುತ್ತಾರೆ. ಅದನ್ನು ಓದಿದವರು- `ಹುಚ್ಚು, ಮುಂಡೇದು, ಒಂದೇ ವಿಷಯವನ್ನು ಹತ್ತು ಬಾರಿ ಬರ್‍ದಿದೆ. ಮಾಡೋಕೆ ಕೆಲ್ಸ ಇಲ್ಲ ಅನ್ಸುತ್ತೆ’ ಎಂದು ಗೊಣಗುತ್ತಾರೆ. ಹೀಗೆ, ಬರೆದದ್ದನ್ನೇ ಮತ್ತೆ ಮತ್ತೆ ಬರೆದಿರುತ್ತಾರಲ್ಲ? ಅಂಥವರಿಗೆ ಆತ್ಮವಿಶ್ವಾಸದ ಕೊರತೆ ಇರುತ್ತದೆ. ರಿಸ್ಕ್‌ಗೆ ಕೈ ಹಾಕಲು ಹೆದರಿಕೆ ಇರುತ್ತದೆ. ಬೇರೆಯವರು ನಮ್ಮ ಮಾತನ್ನು ಲಕ್ಷ್ಯಗೊಟ್ಟು, ಕೇಳಲಾರರು ಎಂಬ ಶಂಕೆಯಿರುತ್ತದೆ. ಗೆಳೆಯ/ಗೆಳತಿ ನನ್ನ ಪತ್ರದ ಪ್ರತಿ ಸಾಲುಗಳನ್ನೂ ಓದುತ್ತಾನೋ(ಳೋ) ಇಲ್ಲವೋ ಎಂಬ ಅನುಮಾನವಿರುತ್ತದೆ. ಹೀಗೆ ಓದಿ ಹಾಗೆ ಮರೆತುಬಿಟ್ಟರೆ… ಎಂಬ ಸಂಕಟವಿರುತ್ತದೆ. ಈ ಕಾರಣದಿಂದಲೇ ಅವರು ಬರೆದದ್ದನ್ನೇ ಮತ್ತೆ ಮತ್ತೆ ಬರೆದಿರುತ್ತಾರೆ. ತೀರಾ ಸಾಮಾನ್ಯ ಎಂಬಂಥ ವಿಷಯ ಬರೆಯುವ ಮೊದಲೇ, ಇದು ಬಹಳ ಗುಟ್ಟಿನ ವಿಷಯ. ನೀನು ಒಬ್ಬನೇ(ಳೇ) ಇದ್ದಾಗ ಓದು ಪ್ಲೀಸ್… ಎಂದೂ ಸೇರಿಸಿರುತ್ತಾರೆ! ಪತ್ರವನ್ನು ಪೋಸ್ಟ್/ಕೊರಿಯರ್ ಮಾಡಿದ ಮರುದಿನವೇ ಫೋನ್ ಮಾಡಿ- `ಕಾಗದ ಬಂತಾ? ಲೆಟರ್ ಸಿಕ್ತಾ?’ ಎಂದು ಮೇಲಿಂದ ಮೇಲೆ ಕೇಳಿ ಪ್ರಾಣ ತಿನ್ನುತ್ತಾರೆ.

ಕೆಲವರು, ತಮ್ಮ ಪತ್ರವನ್ನು ದೊಡ್ಡ ಅಕ್ಷರಗಳಿಂದ ಆರಂಭಿಸುತ್ತಾರೆ. ಆದರೆ ಪತ್ರದ ಕೊನೆ ತಲುಪುವ ವೇಳೆಗೆ ಅವರು ಹೇಳಬೇಕಿರುವ ವಿಷಯದಲ್ಲಿ ಮುಕ್ಕಾಲು ಭಾಗವನ್ನಷ್ಟೇ ಹೇಳಿರುತ್ತಾರೆ. ಉಳಿದದ್ದನ್ನೂ ಹೇಳಲೇ ಬೇಕಲ್ಲ? ಕಾರಣಕ್ಕೆ ಮಾರ್ಜಿನ್‌ನಲ್ಲಿರುವ ಜಾಗದಲ್ಲಿ ಅಕ್ಷರ ಇನ್ನಿಲ್ಲದ ಸರ್ಕಸ್ ಮಾಡಿ ಜೋಡಿಸುತ್ತಾರೆ! ಇಂಥ ಅಕ್ಷರಗಳ ಒಡೆಯರಿಗೆ, ಜೀವನದಲ್ಲಿ ಒಂದು ಯೋಜನೆ, ಶಿಸ್ತು ಇರುವುದಿಲ್ಲ. ತಿಂಗಳ ಮೊದಲಿನಲ್ಲಿ ಬಿಂದಾಸ್ ಆಗಿ ಖರ್ಚು ಮಾಡಿಕೊಂಡು ಓಡಾಡುವ ಈ ಜನ, ತಿಂಗಳ ಕಡೆಗೆ-ಥತ್ ಜೇಬು ಖಾಲಿ ಎಂದು ಹೇಳಿಕೊಂಡೇ ಅಡ್ಡಾಡುತ್ತಿರುತ್ತಾರೆ.

ಪತ್ರ ಬರೆದು ಮುಗಿಸಿದ ನಂತರ, `ಮರೆತ ಮಾತು’ ಎಂದು ಬರೆದು ಅದರ ಕೆಳಗೆ ಒಂದು ದಪ್ಪ ಗೆರೆ ಎಳೆದು, ಅದುವರೆಗೂ ಹೇಳದಿದ್ದ ಒಂದು ವಿಚಾರವನ್ನು ಹೇಳುವ ಅಭ್ಯಾಸ ಹಲವರಿಗಿರುತ್ತದೆ. ಅಂಥವರು ಯಾವುದೇ ಚೌಕಟ್ಟಿಗೂ ಸಿಕ್ಕಿಕೊಳ್ಳದೇ ಬದುಕುತ್ತಿರುತ್ತಾರೆ. ಸ್ವಾರಸ್ಯವೆಂದರೆ, ಇದು ಅವರ ಪ್ಲಸ್ ಪಾಯಿಂಟ್ ಮಾತ್ರವಲ್ಲ, ಮೈನಸ್ ಪಾಯಿಂಟೂ ಆಗಿರುತ್ತದೆ. ಏಕೆಂದರೆ, ಬದುಕಿನ ಬಗ್ಗೆ ಒಂದು ಪ್ಲಾನ್ ಇರುವುದಿಲ್ಲವಲ್ಲ? ಅದೇ ಕಾರಣಕ್ಕೆ ಅವರು ಸ್ವಲ್ಪ ಸೋಮಾರಿಯ ಬದುಕು ಸಾಗಿಸಲು ಶುರುಮಾಡುತ್ತಾರೆ. ಈ ಕಾರಣದಿಂದಲೇ ಜತೆಗಿದ್ದವರ ಟೀಕೆಗೆ, ತಾತ್ಸಾರಕ್ಕೆ ಗುರಿಯಾಗುತ್ತಾರೆ.

ಎರಡು ಸಾಲುಗಳ ಮಧ್ಯೆ ಸ್ವಲ್ಪ ಜಾಸ್ತಿ ಎನ್ನುವಷ್ಟು ಅಂತರಬಿಟ್ಟು ಬರೀತಾರಲ್ಲ? ಅವರಿಗೆ ನಾನುಂಟು ಮೂರು ಲೋಕವುಂಟು ಎಂಬ ಭ್ರಮೆಯಿರುತ್ತದೆ. ನನಗೆ ಗೊತ್ತಿಲ್ಲದ ವಿಷಯವೇ ಇಲ್ಲ ಎಂಬ ಅಹಮಿಕೆಯಿರುತ್ತದೆ. ಬಡಾಯಿ ಕೊಚ್ಚಿಕೊಳ್ಳುವ ಹವ್ಯಾಸವಿರುತ್ತದೆ. ಹತ್ತು ಮಂದಿಯನ್ನು `ಇಂಪ್ರೆಸ್’ ಮಾಡುವ `ಕಲೆ’ ಸಿದ್ಧಿಸಿರುತ್ತದೆ. ಈ ಕಾರಣದಿಂದಲೇ ಅವರನ್ನು ಹಲವರು ಟೀಕಿಸುತ್ತಾರೆ. ಬಯ್ಯುತ್ತಾರೆ. ರೇಗಿಸುತ್ತಾರೆ. ಗೇಲಿ ಮಾಡುತ್ತಾರೆ. ಆದರೆ ಅದ್ಯಾವುದಕ್ಕೂ ಈ ಜನ ಕೇರ್ ಮಾಡುವುದಿಲ್ಲ. ತಲೆಕೆಡಿಸಿಕೊಳ್ಳುವುದೂ ಇಲ್ಲ. ಬದಲಿಗೆ, ಹತ್ತು ಮಂದಿಯ ಮುಂದೆ `ಪುಂಗಿ ಊದಲು’ ಹೊರಟೇ ಬಿಡುತ್ತಾರೆ.

`ನಾನೇ ಬೇರೆ, ನನ್ನ ಸ್ಟೈಲೇ ಬೇರೆ’ ಎಂಬಂಥ ಕೆಟಗರಿಯ ಜನ-ತಮ್ಮ ಪತ್ರಗಳಲ್ಲಿ ಆದಷ್ಟೂ ಹೊಸ ಪದಗಳನ್ನು ಬಳಸುತ್ತಾರೆ. ಆ ಮೂಲಕ ಓದುವವರನ್ನು ಕನ್‌ಫ್ಯೂಸ್‌ಗೆ ಕೆಡವುತ್ತಾರೆ. ಹತ್ತು ಜನರ ಮುಂದೆ ಪಾಂಡಿತ್ಯ ಪ್ರದರ್ಶಿಸಬೇಕು, ಬೇರೆಯವರಿಗಿಂತ ವಿಶೇಷ ಅನ್ನಿಸುವ ಪದಗಳು, ವಿಷಯಗಳು ನನಗೆ ಗೊತ್ತಿದೆ ಎಂದು ತೋರಿಸಿಕೊಳ್ಳಬೇಕು ಎಂಬ ಹಪಹಪಿಯಿಂದಲೇ ಅವರು ಹೀಗೆ ಮಾಡಿರುತ್ತಾರೆ. ಸ್ವಾರಸ್ಯವೆಂದರೆ, ಹಾಗೆ ಬಳಸಿದ ಪದ ಅಥವಾ ವಿಷಯದ ಬಗ್ಗೆ ಅವರಿಗೇ ಸಮಗ್ರವಾಗಿ ಗೊತ್ತಿರುವುದಿಲ್ಲ. ಯಾರಾದರೂ ಪಟ್ಟು ಹಿಡಿದು ಪ್ರಶ್ನೆ ಹಾಕಿದರೆ, ಏನಾದರೂ ಹಾರಿಕೆಯ ಉತ್ತರ ಕೊಟ್ಟು ಕಾಗೆ ಹಾರಿಸುತ್ತಾರೆ.

Handwriting is index of your personality

ಒಂದು ಸಾಲು ಬರೆಯುವುದು, ನಂತರ ಅದನ್ನು ಹೊಡೆದು ಹಾಕುವುದು; ಒಂದು ಪದ ಬರೆಯುವುದು, ನಂತರ ಅದನ್ನೂ ಹೊಡೆದು ಹಾಕಿ ಬೇರೊಂದು ಪದ ಬರೆಯುವುದು-ಹೀಗೆ ಮಾಡುತ್ತಾರಲ್ಲ? ಆ ಜನ `ಅಯ್ಯೋಪಾಪ’ ಎಂಬ ವರ್ಗಕ್ಕೆ ಸೇರಿದವರು. ಹೇಗೆ ಬರೆದರೆ ಏನಾಗಿಬಿಡುತ್ತೋ ಎಂಬ ಭಯ ಅವರನ್ನು ಕಾಡುತ್ತಿರುತ್ತದೆ. ಹಾಗಾಗಿ ಅವರು, ಮಾಡಿದ ತಪ್ಪನ್ನು ತುಂಬ ಬೇಗ ಒಪ್ಪಿಕೊಂಡು ಬಿಡುತ್ತಾರೆ. ಅಷ್ಟೇ ಅಲ್ಲ, ಯಾವುದೇ ಅಭಿಪ್ರಾಯವಿರಲಿ, ಅದನ್ನು ಹತ್ತು ಮಂದಿ ಒಪ್ಪಿಕೊಂಡರೆ ಹಿಂದೆ ಮುಂದೆ ಯೋಚಿಸದೆ ಹನ್ನೊಂದನೆಯವರಾಗಿ ತಾವೂ ಒಪ್ಪಿಬಿಡುತ್ತಾರೆ.

ಕೆಲವರಿರುತ್ತಾರೆ. ಅವರ ಅಕ್ಷರಗಳು ಮಣಿ ಪೋಣಿಸಿದಷ್ಟು ಮುದ್ದು ಮುದ್ದಾಗಿರುತ್ತವೆ. ಅವರ ಬರಹದಲ್ಲಿ ತಪ್ಪುಗಳಿರುವುದಿಲ್ಲ. ಉತ್ಪ್ರೇಕ್ಷೆ ಇರುವುದಿಲ್ಲ. ಇಂಥವರ ವ್ಯಕ್ತಿತ್ವದಲ್ಲಿ ಕೆಲವರಲ್ಲಿ ವಿಪರೀತ ಧಾರಾಳತನ; ರೇಜಿಗೆ ಹುಟ್ಟಿಸುವಂಥ ಜಿಪುಣತನ-ಎರಡೂ ಇರುತ್ತದೆ. ಸ್ವಾರಸ್ಯವೆಂದರೆ, ಈ ಮುದ್ದು ಅಕ್ಷರಗಳ ಮಂದಿಗೆ ಬೊಂಬಾಟ್ ಎಂಬಂಥ `ಗೆಳೆಯರ ಬಳಗ’ ಇರುತ್ತದೆ. ಅಭಿಮಾನಿಗಳ ವೃಂದವಿರುತ್ತದೆ. ಇವರು ಮಾಡಿದ ತಪ್ಪನ್ನು ಒಪ್ಪಿಕೊಳ್ಳುವುದೇ ಇಲ್ಲ. ಹಾಗಿದ್ದರೂ, ಅದೇನು ಕಾರಣವೋ ಏನೋ; ಶತ್ರುಗಳು ಅನಿಸಿಕೊಂಡ ಜನ ಕೂಡ ಅವರನ್ನು ಇಷ್ಟಪಡುತ್ತಾರೆ. ಮುದ್ದಾದ ಅಕ್ಷರಗಳ ಮಂದಿಗೆ ಹತ್ತು ಮಂದಿಯ ಸಂಕಟ ಕೇಳುವುದರಲ್ಲಿ, ಅದಕ್ಕೊಂದು ಪರಿಹಾರ ಹೇಳುವುದರಲ್ಲಿ ಏನೋ ಸಂತಸ! ಆದರೆ, ತಮ್ಮ ನೋವನ್ನು ಹೆಚ್ಚಿನ ಸಂದರ್ಭದಲ್ಲಿ ಹೇಳಿಕೊಳ್ಳುವುದೇ ಇಲ್ಲ. ಈ ಕಾರಣದಿಂದಲೇ ಹಲವರು- `ಅವನಿಗೇನ್ರಿ ಕಷ್ಟ,! ಮಹಾರಾಜ, ಮಹಾರಾಜನ ಥರಾ ಇದಾನೆ…’ ಎಂದು ಮಾತಾಡಿಕೊಳ್ಳುತ್ತಾರೆ. ಎಷ್ಟೊಂದು ಖುಷಿಯಾಗಿ ದ್ದಾನಲ್ಲ ಎಂದುಕೊಂಡು ಹೊಟ್ಟೆ ಉರಿದುಕೊಳ್ಳುತ್ತಾರೆ ಕೂಡಾ…

ಕೆಲವರ ಗುಣ ಹೀಗೆ: ಅವರು ಪತ್ರ ಬರೆಯುವುದು ಫುಲ್‌ಸ್ಕೇಪ್ ಹಾಳೆಯಲ್ಲೇ. ಅದರ ಎರಡೂ ಬದಿಯಲ್ಲಿ ಜಾಗವಿದೆ ಎಂದು ಅವರಿಗೂ ಗೊತ್ತಿರುತ್ತದೆ. ಹಾಗಿದ್ದರೂ, ಒಂದಕ್ಕೊಂದು ಸಾಲು ಅಂಟಿಕೊಳ್ಳುವಂತೆ ಪತ್ರ ಬರೆದಿರುತ್ತಾರೆ. ಅಕ್ಷರಗಳು ಸಣ್ಣದಿರುತ್ತವೆ. ಪುಟ ತಿರುಗಿಸಿ ಬರೆದರೆ ಏನೋ ಕಳೆದುಹೋಗುತ್ತೆ ಎಂದು ಕೊಂಡವರಂತೆ ಹಾಳೆಯ ಕೊನೆಗೇ ಇರುವೆ ಗಾತ್ರದ ಅಕ್ಷರಗಳಲ್ಲಿ ಮಾತು ಮುಗಿಸಿರುತ್ತಾರೆ. ಅನುಮಾನವೇ ಬೇಡ. ಇಂಥ ಕೈ ಬರಹದ ಜನ ಜಿಪುಣರು. ಅವರ ಜಿಪುಣತನದ ಬಗ್ಗೆ ತಮಾಷೆಗಳಿರುತ್ತವೆ, ಕಥೆಗಳಿರುತ್ತವೆ. ಆದರೂ ಈ ಜನ ಜಿಪುಣತನದಿಂದ ಆಚೆಗೆ ಬರುವುದಿಲ್ಲ. ಹೋಗಲಿ, ಫುಲ್‌ಸ್ಕೇಪ್ ಹಾಳೆಯ ಇನ್ನೊಂದು ಬದಿಯಲ್ಲಿ ಬರೆಯುವ ಉದಾರತೆಯನ್ನೂ ತೋರುವುದಿಲ್ಲ.

ಪದಗಳ ಮಧ್ಯೆ ಹೆಚ್ಚು ಗ್ಯಾಪ್ ಬಿಟ್ಟು ಬರೆಯುತ್ತಾರಲ್ಲ? ಅಂಥ ಹೆಣ್ಣು ಮಕ್ಕಳಿಗೆ ಹತ್ತು ಮಂದಿ ಮೆಚ್ಚುವಂಥ ಸೌಂದರ್ಯವಿರುತ್ತದೆ. ಫ್ಯಾಷನಬಲ್ ಆಗಿ ಮಾತಾಡುವ `ಕಲೆ’ ಅವರಿಗೆ ಒಲಿದಿರುತ್ತದೆ. ಒಂದು ದೊಡ್ಡ ಸಾಧನೆ ಮಾಡುವಂಥ ಕೆಪ್ಯಾಸಿಟಿ ಅವರಿಗಿರುತ್ತದೆ ನಿಜ. ಆದರೆ, `ಸಾಧನೆ’ಗೆ ಶ್ರಮಿಸುವ ಉತ್ಸಾಹವೇ ಇವರಿಗಿರುವುದಿಲ್ಲ. ಅಂಥ ದೊಡ್ಡ ಶ್ರದ್ಧೆಯೂ ಇರುವುದಿಲ್ಲ. ಹಾಗಾಗಿ, ದೊಡ್ಡ `ಎತ್ತರ’ ತಲುಪಿಕೊಳ್ಳಬಲ್ಲ ಸಾಮರ್ಥ್ಯವಿದ್ದರೂ ಇವರು ಹತ್ತರಲ್ಲಿ ಹನ್ನೊಂದನೆಯವರಾಗಿಯೇ ಉಳಿಯುತ್ತಾರೆ.

ಅಕ್ಷರಗಳನ್ನು ಒತ್ತಿ ಒತ್ತಿ ಬರೆಯುತ್ತಾರಲ್ಲ? ಅವರು ದೂರ್ವಾಸನ ವಂಶದವರು. ತಕ್ಷಣವೇ ಸಿಟ್ಟಾಗುತ್ತಾರೆ. ಯಕ್ಕಾಮಕ್ಕಾ ಬಯ್ಯುತ್ತಾರೆ. ಗೆಟ್‌ಔಟ್ ಅಂದೂಬಿಡುತ್ತಾರೆ. ಅಂದಹಾಗೆ, ಇವರೊಳಗೆ `ಸ್ವಾರ್ಥ’ ಹೆಚ್ಚಿರುತ್ತದೆ. ಪ್ರತಿಯೊಂದು ಕೆಲಸವನ್ನೂ ಅವರು ಲೆಕ್ಕಾಚಾರದಿಂದಲೇ ಮಾಡುತ್ತಾರೆ. ಎದುರು ನಿಂತವರಿಗೆ ಒಂದು ನಮಸ್ಕಾರ ಹೊಡೆಯಬೇಕಾಗಿ ಬಂದರೆ, ಅದರಿಂದ ಏನಾದರೂ ಉಪಯೋಗವಿದೆಯಾ ಎಂದೇ ಯೋಚಿಸುತ್ತಾರೆ.

ಚಿತ್ತುಗಳಿಲ್ಲದೆ ಅಕ್ಷರಗಳಿಂದ ಪತ್ರ ಆರಂಭಿಸಿ ಗಡಿಬಿಡಿಯಲ್ಲಿ ಮುಗಿಸುವ ಜನರಿದ್ದಾರಲ್ಲ? ಅಂಥವರಿಗೆ ತಾಳ್ಮೆ ಕಡಿಮೆ. ಯಾವುದೇ ಕೆಲಸ ಕೈಗೆತ್ತಿಕೊಂಡರೂ ಅವರು ಮೊದಲು ತೋರಿದ ಉತ್ಸಾಹವನ್ನು ಕಡೆಗೆ ತೋರುವುದಿಲ್ಲ. ಈ ಕಾರಣದಿಂದಲೇ ಅವರು `ಯಡವಟ್ರಾಯ’ ಎಂದು ಕರೆಸಿಕೊಳ್ಳುತ್ತಾರೆ. ಒಂದು ಕೆಲಸದಲ್ಲಿ ಯಶಸ್ಸು ಪಡೆಯುವ ಮೊದಲೇ ಇನ್ನೊಂದಕ್ಕೂ ಕೈ ಹಾಕಿ ಫಜೀತಿಗೆ ಸಿಕ್ಕಿಕೊಳ್ಳುತ್ತಾರೆ. ಕೆಲವರು ಫುಲ್‌ಸ್ಕೇಪ್ ಹಾಳೆಯಲ್ಲಿಯೇ ಬರೆದಿರುತ್ತಾರೆ. ಹಾಳೆಯ ತುಂಬಾ ಬರೆದಿರುತ್ತಾರೆ. ಆದರೆ ಅಲ್ಲಿ ಫುಲ್‌ಸ್ಟಾಪ್, ಕಮಾ, ಅಲ್ಪವಿರಾಮ, ಪ್ರಶ್ನಾರ್ಥಕ ಚಿಹ್ನೆ… ಯಾವುದೂ ಇರುವುದಿಲ್ಲ. ಒಂದು ವಾಕ್ಯ ಮುಗಿದದ್ದು ಎಲ್ಲಿ? ಹೊಸ ವಾಕ್ಯ ಶುರುವಾಗಿದ್ದೆಲ್ಲಿ ಎಂಬುದೇ ಓದುವವರಿಗೆ ಅರ್ಥವಾಗುವುದಿಲ್ಲ. ಹೀಗೆ ಬರೀತಾರಲ್ಲ- ಅವರಿಗೆ ತಮ್ಮ ಮನಸ್ಸಿನ ಮೇಲೇ ನಿಯಂತ್ರಣವಿರುವುದಿಲ್ಲ. ಅವರ ಕೈ ಮತ್ತು ಬುದ್ಧಿ ಒಟ್ಟೊಟ್ಟಾಗಿ ಓಡುವುದಿಲ್ಲ.

ಪತ್ರಗಳ ಮಧ್ಯೆ, ತಮ್ಮದೇ ಬರವಣಿಗೆಯ ಮಧ್ಯೆ ಏಕಾಏಕಿ ಬೇರೊಂದು ಭಾಷೆಯ ಪದ ಬಳಸುವ ಅಭ್ಯಾಸ ಕೆಲವರಿಗಿರುತ್ತದೆ. ಇಂಥವರನ್ನು ಅರ್ಥಮಾಡಿಕೊಳ್ಳುವುದೇ ಕಷ್ಟ. ಒಂದು ನೌಕರಿಯಲ್ಲಿ, ಒಂದು ಕೆಲಸದಲ್ಲಿ, ಒಂದು ಸಂಸ್ಥೆಯಲ್ಲಿ, ಒಂದೇ ಮನೆಯಲ್ಲಿ ಈ ಜನ ಹೆಚ್ಚು ದಿನ ಇರುವುದಿಲ್ಲ. ಸಣ್ಣ ಬೇಸರವಾದರೂ ಸಾಕು, ತಕ್ಷಣ ಮನಸ್ಸು ಬದಲಿಸಿ ಎದ್ದುಹೋಗಿಬಿಡುತ್ತಾರೆ. ಇಂಥವರು, ವಹಿಸಿ ಕೊಂಡ ಕೆಲಸವನ್ನು ಹತ್ತುಮಂದಿ ಒಪ್ಪುವಂತೆ ಮಾಡುತ್ತಾರೆ ನಿಜ. ಆದರೆ, ಅವರು ಒಂದೇ ವಿಷಯಕ್ಕೆ ಅಂಟಿಕೊಳ್ಳುವುದಿಲ್ಲ, ಹತ್ತು ಮಂದಿಯೊಂದಿಗೆ ಹೊಂದಾಣಿಕೆ ಮಾಡಿಕೊಂಡು ಬದುಕುವುದೂ ಇಲ್ಲ.

ಒಂದು ಪತ್ರದಲ್ಲಿ ಸ್ವಲ್ಪ ಜಾಸ್ತಿಯೇ ಮಾರ್ಜಿನ್ ಬಿಟ್ಟು ಬರೆಯುತ್ತಾರಲ್ಲ? ಅಂಥವರು ಹಣಕಾಸಿನ ವಿಷಯದಲ್ಲಿ ತುಂಬ ಎಚ್ಚರ ವಹಿಸುತ್ತಾರೆ. ಹೆಚ್ಚಿನ ಸಂದರ್ಭದಲ್ಲಿ -ತಮಗೆ ಲಾಸ್ ಆಗದಂತೆ ನೋಡಿಕೊಳ್ಳುತ್ತಾರೆ. ಅದೇ ಸಂದರ್ಭದಲ್ಲಿ ಗೆಳೆಯರ ಮುಂದೆ, ನಾನು ಧಾರಾಳಿ ಎಂದು ತೋರಿಸಿಕೊಳ್ಳಲೂ ಪ್ರಯತ್ನಿಸುತ್ತಾರೆ!

ಕೆಲವರಿಗೆ, ಅತೀ ಎಂಬಂಥ ಆತ್ಮವಿಶ್ವಾಸವಿರುತ್ತದೆ. ನಾನು ಯಾವತ್ತೂ ತಪ್ಪು ಮಾಡೋದೇ ಇಲ್ಲ ಎಂಬ `ಅಹಂ’ ಇರುತ್ತದೆ. ಇಂಥ ವರು ಪ್ರತಿಯೊಂದನ್ನೂ ಸಂಕ್ಷಿಪ್ತವಾಗಿ ಬರೆಯುತ್ತಾರೆ ನಿಜ. ಆದರೆ, ಅದನ್ನು ಸಂಬಂಧಪಟ್ಟವರಿಗೆ ತಲುಪಿಸುವುದನ್ನೇ ಮರೆತುಬಿಟ್ಟಿರುತ್ತಾರೆ. Once again ನಾನು, ಅಂದ್ರೆ ಸುಮ್ನೇನಾ ಎಂಬ ಅಹಮಿಕೆಯೇ ಅವರ ಕೆಲಸ ಕೆಡಿಸಿರುತ್ತದೆ. ಅದು ಪತ್ರವಿರಬಹುದು, ನೋಟ್ಸ್ ಇರಬಹುದು, ಅರ್ಜಿ ಇರಬಹುದು… ಅದರಲ್ಲೂ ಕೆಲವೇ ಶಬ್ದಗಳಲ್ಲಿ ಮಾತು ಮುಗಿಸಿ ಕಡೆಗೆ ಸಹಿ ಮಾಡುವುದನ್ನೇ ಮರೆಯುವ ಭೂಪತಿಗಳೂ ಇರುತ್ತಾರೆ. ಅನು ಮಾನವೇ ಬೇಡ; ಅವರೆಲ್ಲ ಸೋಮಾರಿ ಸುಬ್ಬಣ್ಣರೇ ಆಗಿರುತ್ತಾರೆ!

* * * *
ಒಂದು ಸರಳ ಸತ್ಯ ಏನೆಂದರೆ, ಕೈ ಇಲ್ಲದವರಿಗೂ ಭವಿಷ್ಯವಿರುತ್ತದೆ. ಹಾಗಾಗಿ, ಬರೆಯಲು ಬಾರದವರಿಗೆ ಭವಿಷ್ಯ ಇಲ್ಲವೆ ಎಂಬ ಕೊಂಕು ಪ್ರಶ್ನೆ ಬೇಡ. ಪರಿಚಿತರ, ಗೆಳೆಯ/ಗೆಳತಿಯರ, ಬಂಧುಗಳ ಹಳೆಯ ಪತ್ರವೋ, ಬರಹದ ಸ್ಯಾಂಪಲ್ಲೋ ಜತೆಗಿದ್ದರೆ ಅದನ್ನು ಅಂಗೈಲಿ ಹಿಡಿದುಕೊಂಡೇ ಲೇಖನ ಓದಿ. ಆಗ, `ಎದುರಿಗಿಲ್ಲದವರ ನಡವಳಿಕೆಯ’ ದಿವ್ಯ ದರ್ಶನವಾಗಿ- `ಅರೆ ಹೌದಲ್ವಾ?’ ಅನಿಸಬಹುದು, ಏನೂ ಅನ್ನಿಸದೆಯೂ ಇರಬಹುದು!

Mould Rajanna | Mould artist | Kannada movies | Black and White | ಮೌಲ್ಡ್ ರಾಜಣ್ಣ | ಅಭಿನವ ಬ್ರಹ್ಮ | ಕನ್ನಡ ಚಿತ್ರರಂಗ – ಮೌಲ್ಡ್ ರಾಜಣ್ಣನ ಕಥೆ ಕೇಳಿ…

Abhinava Brahma Mould Rajanna

`ನಮ್ಮ ಕಥಾನಾಯಕನ ಹೆಸರು ಮೌಲ್ಡ್ ರಾಜಣ್ಣ. 89 ವರ್ಷ ವಯಸ್ಸಿನ ರಾಜಣ್ಣ, ಕನ್ನಡ ಚಿತ್ರರಂಗದ ಎಲ್ಲ ಮಗ್ಗುಲುಗಳನ್ನೂ ಪ್ರತ್ಯಕ್ಷ ಕಂಡವರು. ತೆಲುಗಿನ ಎನ್‌ಟಿಆರ್, ತಮಿಳಿನ ಎಂಜಿಆರ್ ಹಾಗೂ ವರನಟ ಡಾ. ರಾಜ್‌ಕುಮಾರ್ ಅವರಿಂದಲೇ `ಅಭಿನವ ಬ್ರಹ್ಮ’ ಎಂದು ಕರೆಸಿಕೊಂಡದ್ದು ರಾಜಣ್ಣನ ಹೆಚ್ಚುಗಾರಿಕೆ. ಒಂದೇ ಒಂದು ವ್ಯತ್ಯಾಸವೆಂದರೆ, ಬ್ರಹ್ಮನದು ಸಜೀವ ಸೃಷ್ಟಿ; ಈ ರಾಜಣ್ಣನದು ನಿರ್ಜೀವ ಸೃಷ್ಟಿ. ಬ್ರಹ್ಮನ ಸೃಷ್ಟಿ ಅದೆಷ್ಟೋ ಕೋಟಿಯಿದ್ದರೆ, ಈ ರಾಜಣ್ಣನ ಸೃಷ್ಟಿ ಸಾವಿರಗಳ ಆಚೆಗಂತೂ ಖಂಡಿತ ಇದೆ. ರಾಜಣ್ಣನ ಕೈಚಳಕದಿಂದ `ಅರಳಿದವರು’ ಯಾರ್‍ಯಾರು ಗೊತ್ತೆ? ಬ್ರಹ್ಮ, ವಿಷ್ಣು, ಮಹೇಶ್ವರ, ಯಕ್ಷ, ಅಶ್ವಿನಿ ದೇವತೆಗಳು, ನವಗ್ರಹಗಳು, ಸಪ್ತ ಮಾತೃಕೆಯರು, ಶಕ್ತಿ ದೇವತೆಗಳು, ಅಷ್ಟಲಕ್ಷ್ಮಿಯರು, ದೇವೇಂದ್ರನ ಆಸ್ಥಾನದಲ್ಲಿರುವ ರಂಬೆ, ಊರ್ವಶಿ, ಮೇನಕೆ, ಗಣಪತಿ, ಶಬರಿಮಲೆ ಸ್ವಾಮಿ ಅಯ್ಯಪ್ಪ; ದೇವರನ್ನು ಕಾಣಲು ಹೊರಟ ತುಕಾರಾಂ, ಕನಕದಾಸ, ಪುರಂದರದಾಸ, ಕಬೀರ, ಬುದ್ಧ, ಬಸವ, ಅಕ್ಕಮಹಾದೇವಿ, ಭಕ್ತೆ ಮಿರಾ… ಹೀಗೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಸ್ವಾರಸ್ಯವೆಂದರೆ, ಈ ಪೈಕಿ ಯಾರೊಬ್ಬರನ್ನೂ ಪ್ರತ್ಯಕ್ಷ ಕಾಣದಿದ್ದರೂ, ಇವರು `ಅವರೇ’ ಎಂದು ಕಣ್ಮುಚ್ಚಿಕೊಂಡು ಹೇಳಿಬಿಡುವಷ್ಟು ನೈಜವಾಗಿ ಎಲ್ಲ ಮೂರ್ತಿಗಳನ್ನೂ `ತಯಾರಿಸಿದ’ ಹೆಗ್ಗಳಿಕೆ ಮೌಲ್ಡ್ ರಾಜಣ್ಣನದು.

ಯಾರಿವರು ಈ ಮೌಲ್ಡ್ ರಾಜಣ್ಣ? ಆತ ಚಿತ್ರಿಸಿರುವ ಸಾವಿರಾರು ಕಲಾಕೃತಿಗಳೆಲ್ಲ ಈಗ ಎಲ್ಲಿವೆ? ಹೇಗಿವೆ? ರಾಜಣ್ಣ ಎಂಬ ಮುಪ್ಪಾನು ಮುದುಕನನ್ನು ಈಗ ಪರಿಚಯಿಸುವ ಉದ್ದೇಶವಾದರೂ ಏನು? ಎಂಬ ಕುತೂಹಲಕರ ಪ್ರಶ್ನೆಗಳಿಗೆ ಒಂದು ಚಿಕ್ಕ ಉತ್ತರ: ತೆಲುಗು, ತಮಿಳು, ಹಿಂದಿ, ಕನ್ನಡ ಭಾಷೆಯಲ್ಲಿ ಬಂದಿರುವ ಪೌರಾಣಿಕ, ಜಾನಪದ ಹಿನ್ನೆಲೆಯ ಬ್ಲ್ಯಾಕ್ ಅಂಡ್ ವೈಟ್ ಸಿನಿಮಾಗಳಿವೆಯಲ್ಲ? ಆ ಚಿತ್ರಗಳಲ್ಲಿ ರಾಕ್ಷಸರ ಗುಹೆ; ಅಲ್ಲಿ `ಆಆಆಆ…’ ಎಂದು ಬಾಯ್ದೆರೆದು ನಿಂತಿರುವ ಕ್ರೂರ ಮೃಗಗಳು, ಋಷಿಗಳ ಆಶ್ರಮ, ದೇವೇಂದ್ರನ ಆಸ್ಥಾನ, ಅಲ್ಲಿ ಶಿಲಾಬಾಲಿಕೆಯ ಗೆಟಪ್ಪಿನಲ್ಲಿ ನಿಂತ ಅಪ್ಸರೆ… ಇಂಥವೇ ಕಲಾಕೃತಿಗಳನ್ನು ರೂಪಿಸಿದ್ದು ಇದೇ ರಾಜಣ್ಣ. ಕಪ್ಪು-ಬಿಳುಪು ಚಿತ್ರಗಳ ಟೈಟಲ್ ಕಾರ್ಡನ್ನು ಹುಷಾರಾಗಿ ಗಮನಿಸಿದರೆ `ಕಲಾನಿರ್ದೇಶನ;ಮೌಲ್ಡ್ ರಾಜು’ ಎಂಬ ಹೆಸರನ್ನೂ ತಪ್ಪದೆ ಕಾಣಬಹುದು.

ಇಂತಿಪ್ಪ ಹಿನ್ನೆಲೆಯ ರಾಜಣ್ಣ, ಬೆಂಗಳೂರಿನ ಹಲಸೂರಿನಲ್ಲಿ ಜನಿಸಿದವರು. ಓದಿದ್ದು ಜಸ್ಟ್ ಒಂದನೇ ಕ್ಲಾಸು. ನಂತರ ಹೆಸರಾಂತ `ಪಲ್ಪ್’ ಕಲಾವಿದ ಎಂಬಾರಯ್ಯ ಅವರ ಕಣ್ಣಿಗೆ ಬಿದ್ದ ರಾಜಣ್ಣ, ಮುಂದೆ ಅವರೊಂದಿಗೇ ಉಳಿದರು. ತಮಗೆ ಚೆನ್ನಾಗಿ ತಿಳಿದಿದ್ದ ಪೇಪರ್ ಪಲ್ಪ್ ಕಲೆಯನ್ನು ರಾಜಣ್ಣನಿಗೆ ಧಾರೆಯೆರೆದರು ಎಂಬಾರಯ್ಯ. ಪರಿಣಾಮ, ತಮ್ಮ ಹನ್ನೆರಡನೇ ವಯಸ್ಸಿಗೇ ಮೌಲ್ಡಿಂಗ್ ಆರ್ಟಿಸ್ಟ್ ಎಂದು ಚಿತ್ರರಂಗದ ಸಂಪರ್ಕಕ್ಕೆ ಬಂದರು ರಾಜಣ್ಣ. ಅವು ನಲವತ್ತರ ದಶಕದ ದಿನಗಳು. ಆಗ ತಯಾರಾಗುತ್ತಿದ್ದವುಗಳೆಲ್ಲ ಪೌರಾಣಿಕ, ಜಾನಪದ ಹಿನ್ನೆಲೆಯ ಸಿನಿಮಾಗಳೇ. ಎಲ್ಲ ಸಿನಿಮಾಗಳಿಗೂ ಮದ್ರಾಸೇ ತವರುಮನೆ. ಅದೇ ರಂಗಶಾಲೆ. ಪೌರಾಣಿಕ/ಜಾನಪದ ಹಿನ್ನೆಲೆಯ ಸಿನಿಮಾ ಅಂದಮೇಲೆ ರಾಕ್ಷಸರು ವಾಸಿಸುವ ಗುಹೆಗಳ, ಅವರೊಂದಿಗೇ ಕಾಣಿಸಿಕೊಳ್ಳುವ ಕ್ರೂರ ಮೃಗಗಳ ಪ್ರತಿಕೃತಿಗಳು ಬೇಕಲ್ಲ? ಅವುಗಳನ್ನು ತಯಾರಿಸುವ ಕೆಲಸ ಮೌಲ್ಡ್ ರಾಜಣ್ಣ ಅವರದಾಗಿತ್ತು. ಹಾಗೆಯೇ ದೇವಾನುದೇವತೆಗಳ ಆಸ್ಥಾನದಲ್ಲಿ ಶಿಲಾಬಾಲಿಕೆಯರು, ರತ್ನ ಖಚಿತ ಸಿಂಹಾಸನ; ಋಷಿಗಳ ಆಶ್ರಮಕ್ಕೆ ಹಿನ್ನೆಲೆಯಾಗಿ ಕಾಣಿಸಿಕೊಳ್ಳುವ ಝರಿ ಹರಿಯುವ ಸನ್ನಿವೇಶ; ಕೈಲಾಸ-ವೈಕುಂಠಗಳ ಸೆಟ್… ಇಂಥ ಕೆಲಸವೆಲ್ಲ ರಾಜಣ್ಣನ ಹೆಗಲಿಗೇ ಬಿದ್ದಿತ್ತು.

ಈ ಎಲ್ಲವನ್ನೂ ಪೇಪರ್ ಪಲ್ಪ್ ಹಾಗೂ ಪೇಪರ್ ಮೌಲ್ಡ್ ಬಳಸಿ ತಯಾರಿಸುತ್ತಿದ್ದರು ರಾಜಣ್ಣ. ಹೀಗೆ ತಯಾರಾದ ಆಕೃತಿಗಳ ವೈಶಿಷ್ಟ್ಯವೇನೆಂದರೆ- ಅವು ತೀರಾ ತೀರಾ ಹಗುರವಾಗಿರುತ್ತಿದ್ದವು. (ಮೌಲ್ಡ್ ಮಾಡಿ ತಯಾರಿಸುವ ಕಲಾಕೃತಿಗಳೆಲ್ಲ ಈಗಲೂ ತುಂಬಾ ಹಗುರವಾಗಿರುತ್ತವೆ.) ಪರಿಣಾಮವಾಗಿ, ರಾಕ್ಷಸನ, ದೇವತೆಗಳ ಹಾಗೂ ಕ್ರೂರ ಮೃಗಗಳ ಆಕೃತಿಗಳನ್ನು ಸೆಟ್‌ನಲ್ಲಿ ಅಲ್ಲಿಂದಿಲ್ಲಿಗೆ, ಇಲ್ಲಿಂದಲ್ಲಿಗೆ ಸುಲಭವಾಗಿ ಸಾಗಿಸಬಹುದಿತ್ತು. ಎಲ್ಲಕ್ಕಿಂತ ಮುಖ್ಯವಾಗಿ ಹೀಗೆ ತಯಾರಾದ ಮೌಲ್ಡಿಂಗ್ ಕಲಾಕೃತಿಗಳು ಎಷ್ಟೇ ಮೇಲಿನಿಂದ ಕೆಳಕ್ಕೆ ಬಿದ್ದರೂ ಒಡೆದು ಹೋಗುತ್ತಿರಲಿಲ್ಲ. ಈ ಕಾರಣದಿಂದ ಚಿತ್ರ ನಿರ್ಮಾಪಕರೆಲ್ಲ ಸಹಜವಾಗಿಯೇ ರಾಜಣ್ಣನ ಹಿಂದೆ ಬಿದ್ದರು. ಪರಿಣಾಮ, `ಕಲಾ ನಿರ್ದೇಶಕ’ ಎಂಬ ಬಿರುದು ಹಾಗೂ ಬಿಡಿಗಾಸಿನನೌಕರಿ ಎರಡೂ ರಾಜಣ್ಣನಿಗೆ ಲಭ್ಯವಾದವು.

ಈ ಸಂದರ್ಭದಲ್ಲಿಯೇ ಸ್ವಾರಸ್ಯವೊಂದು ನಡೆಯಿತು. ಆ ಕಾಲದ ಸಿನಿಮಾಗಳಲ್ಲಿ ದೇವತೆಗಳ, ರಾಕ್ಷಸರ ಅಥವಾ ರಾಜ ಮಹಾರಾಜರುಗಳ ಹೆಂಡತಿಯರ ಪಾತ್ರ ನಿರ್ವಹಿಸುತ್ತಿದ್ದರಲ್ಲ? ಅವರಿಗೆಲ್ಲ ಸೊಂಟಕ್ಕೆ ಡಾಬು, ಜತೆಯಲ್ಲೇ ಫಳಫಳ ಹೊಳೆಯುವ ಆಭರಣಗಳ ಚೈನು, ಕೊರಳಿಗೆ ಸರ, ಹಣೆಯ ಮೇಲೆ ಬಾಸಿಂಗದಂಥದೊಂದು… ಹೀಗೆ ಆಭರಣಗಳನ್ನು ಹೊಂದಿಸಬೇಕಾಗುತ್ತಿತ್ತು. ರೋಲ್ಡ್ ಗೋಲ್ಡ್ ಆಭರಣಗಳನ್ನು ಬಾಡಿಗೆಗೆ ತಂದರೆ, ಅವುಗಳ ತೂಕ ಜಾಸ್ತಿ. ಈ ಕಾರಣದಿಂದಲೇ ಅವುಗಳನ್ನು ಕಟ್ಟಿಕೊಂಡು ಸರಭರನೆ ಓಡಾಡಲು, ಡ್ಯಾನ್ಸ್ ಮಾಡಲು ಆಗುವುದಿಲ್ಲ ಎಂದು ನಟಿಯರೆಲ್ಲ ವರಾತ ತೆಗೆದರು. ಆ ಸಂದರ್ಭದಲ್ಲಿ ಮತ್ತೆ ರಾಜಣ್ಣನ ಮೊರೆ ಹೊಕ್ಕ ನಿರ್ಮಾಪಕರು- `ಈ ಸಮಸ್ಯೆಗೂ ಒಂದು ಪರಿಹಾರ ಹುಡುಕು ಮಾರಾಯ’ ಅಂದರಂತೆ. ತಕ್ಷಣವೇ ಅದೇ ಪೇಪರ್ ಪಲ್ಪ್‌ಗಳಿಂದ ರಾಕ್ಷಸರು ಕುತ್ತಿಗೆಗೆ ಹಾಕಿಕೊಳ್ಳುವ ತಲೆಬುರುಡೆ, ರಾಜರುಗಳ ಕಿರೀಟ, ರಾಣಿಯರ ಅಲಂಕಾರ ಸಾಮಗ್ರಿಗಳನ್ನೂ ತಯಾರಿಸಿದರು ರಾಜಣ್ಣ. ಈಗ ನಾವೆಲ್ಲ ಕಪ್ಪು-ಬಿಳುಪು ಸಿನಿಮಾಗಳಲ್ಲಿ ನೋಡುತ್ತೇವಲ್ಲ? ಆ ವಜ್ರ ವೈಢೂರ್‍ಯದ ಲಕಲಕಲಕ ಆಭರಣಗಳೆಲ್ಲ ಮೌಲ್ಡ್ ರಾಜಣ್ಣನ ಕೈ ಚಳಕದಿಂದ ತಯಾರಾಗಿರುವ `ನಕಲಿ’ ಒಡವೆಗಳೇ.

ರಾಜಣ್ಣ ಸೃಷ್ಟಿಸಿದ ಮೂರ್ತಿಗಳಿಗೆ ಎಂಥ ಶಾರ್ಪ್‌ನೆಸ್ ಇರುತ್ತಿತ್ತು ಎಂಬುದಕ್ಕೆ ಒಂದು ಪುಟ್ಟ ಉದಾಹರಣೆ: ಅದೊಮ್ಮೆ ನಿರ್ಮಾಪಕನೊಬ್ಬ ಕಾಳಿಕಾದೇವಿಯ ಭವ್ಯ ವಿಗ್ರಹವೊಂದನ್ನು ತನ್ನ ಹೊಸ ಸಿನಿಮಾಕ್ಕಾಗಿ ತಯಾರಿಸುವಂತೆ ಹೇಳಿ ಮುಂಗಡ ಹಣ ಕೊಟ್ಟು ಹೋದ. ತ್ರಿಶೂಲ ಹಿಡಿದು, ನಾಲಿಗೆ ಹೊರಚಾಚಿ, ಕಂಗಳನ್ನು ಅಗಲಿಸಿಕೊಂಡು ಬಲಿಗಾಗಿ ಕಾದು ನಿಂತ ಕಾಳಿಕಾಂಬೆಯ ವಿಗ್ರಹವನ್ನು ರಾಜಣ್ಣ ತುಂಬ ಶ್ರದ್ಧೆಯಿಂದ ರೂಪಿಸಿದರು. ಎಲ್ಲ ಕೆಲಸ ಮುಗಿದ ಮೇಲೆ, ಆ ವಿಗ್ರಹವನ್ನು ಬಟ್ಟೆಯಿಂದ ಮುಚ್ಚಿ, ನಿರ್ಮಾಪಕರ ಬಳಿ ಹೋಗಿ ಹೇಳಿದರು; `ನನ್ನ ಕೆಲಸ ಮುಗಿದಿದೆ. ಆದ್ರೆ ಒಂದು ವಿಷಯ: `ಕಾಳಿಕಾದೇವಿಯ ಮೂರ್ತಿ ಭವ್ಯವಾಗಿದೆ. ಹೆದರಿಕೆ ಹುಟ್ಟಿಸುವಂತಿದೆ. ಹಾಗಾಗಿ ನೀವು ಒಬ್ಬರೇ ಹೋಗಿ ನೋಡುವ ಸಾಹಸ ಮಾಡಬೇಡಿ. ಚಿತ್ರತಂಡದ ಎಲ್ಲರ ಜತೆಗೇ ಹೋಗಿ ನೋಡಿ…’

ಈ ಎಚ್ಚರಿಕೆಯ ಮಾತು ಕೇಳಿದ ಮೇಲೆ ನಿರ್ಮಾಪಕನಿಗೆ ಸಹಜವಾಗಿಯೇ ಕುತೂಹಲ ಶುರುವಾಯಿತು. ಆತ ಅದೊಂದು ದಿನ ಬೆಳಗ್ಗೆ ಬೆಳಗ್ಗೆಯೇ ಒಬ್ಬನೇ ಹೋಗಿ ಕಾಳಿಕಾದೇವಿಯ ವಿಗ್ರಹದ ಬಟ್ಟೆ ತೆಗೆದ. ಅಷ್ಟೆ: ಆ ರುದ್ರ, ಉಗ್ರ ಹಾಗೂ ವ್ಯಗ್ರ ಮುಖಭಾವದ ದೇವಿಯ ಮೂರ್ತಿಯನ್ನು ನೋಡಿ ನಿರ್ಮಾಪಕನಿಗೆ ಹೃದಯಾಘಾತ ಆಗಿಹೋಯಿತು! ಇದನ್ನು ನೆನಪು ಮಾಡಿಕೊಂಡೇ ಡಾ. ರಾಜ್ ಕುಮಾರ್ ಸೇರಿದಂತೆ ಚಿತ್ರರಂಗದ ಹಿರಿಯ ನಟರೆಲ್ಲ ಹೇಳುತ್ತಿದ್ದರಂತೆ: `ಬೈ ಛಾನ್ಸ್ ಯಾರಾದ್ರೂ ಕಳ್ಳರು ರಾತ್ರಿ ವೇಳೆ ರಾಜಣ್ಣನವರ ಮನೆಗೆ ನುಗ್ಗಿದ್ರು ಅಂತ ಇಟ್ಕೊಳ್ಳಿ. ಆ ಸಂದರ್ಭದಲ್ಲಿ ಮನೆಯೊಳಗಿರುವ ಹುಲಿ, ಸಿಂಹ ಅಥವಾ ಚಿರತೆಯ ಮೂರ್ತಿಯನ್ನು ಕಂಡಾಗ- ಇದು ಜೀವಂತ ಪ್ರಾಣಿಯೇ ಅನ್ನಿಸಿ ಕಳ್ಳರು ಸತ್ತೆನೋ ಕೆಟ್ಟೆನೋ ಅಂದುಕೊಂಡು ಪರಾರಿಯಾಗೋದು ಗ್ಯಾರಂಟಿ…’

ಹೀಗೆ ಮೌಲ್ಡಿಂಗ್ ಕಲಾವಿದನಾಗಿ ಏಕಮೇವಾದ್ವಿತೀಯ ಎನ್ನುವಂಥ ಸಾಧನೆ ಮಾಡಿದ ರಾಜಣ್ಣ, ಕೃಷ್ಣಲೀಲಾ, ನಾಗಕನ್ನಿಕಾ, ಭಕ್ತ ರಾಮದಾಸ, ಜಗನ್ಮೋಹಿನಿ, ಶ್ರೀನಿವಾಸ ಕಲ್ಯಾಣ, ಕಾಡಿನ ರಹಸ್ಯ, ಗಂಧದ ಗುಡಿ, ಹಣ್ಣೆಲೆ ಚಿಗುರಿದಾಗ, ಶಿವಶರಣೆ ನಂಬಿಯಕ್ಕ ಸೇರಿದಂತೆ ನೂರಾರು ಚಿತ್ರಗಳಿಗೆ ಕಲಾ ನಿರ್ದೇಶಕರಾಗಿ ದುಡಿದರು. ಸಂಗೀತ ನಿರ್ದೇಶಕ ಜಿ.ಕೆ. ವೆಂಕಟೇಶ್ ಹಾಗೂ ವರನಟ ಡಾ. ರಾಜ್‌ಕುಮಾರ್ ಇಬ್ಬರೂ ಆಗಷ್ಟೇ ಜನಪ್ರಿಯತೆಯ ಹತ್ತನೇ ಮೆಟ್ಟಿಲಲ್ಲಿ ಇದ್ದಾಗ, ರಾಜಣ್ಣನವರು ತಂತ್ರಜ್ಞರಾಗಿ ಸೂಪರ್‌ಸ್ಟಾರ್ ಎನ್ನಿಸಿಕೊಂಡಿದ್ದರು. ಅಂದರೆ, ಅವರ ಕೈ ಚಳಕದ ಕರಾಮತ್ತು ಹೇಗಿತ್ತೋ ಊಹಿಸಿಕೊಳ್ಳಿ. ಮುಂದೆ ಜಾನಪದ ಹಾಗೂ ಪೌರಾಣಿಕ ಹಿನ್ನೆಲೆಯ ಸಿನಿಮಾಗಳ ಕಾಲ ಮುಗಿದಾಗ, ಸಹಜವಾಗಿಯೇ ರಾಜಣ್ಣನಿಗೆ ಅವಕಾಶಗಳು ಕಡಿಮೆಯಾದವು. ಕೈ ಚೆನ್ನಾಗಿ ನಡೆಯುತ್ತಿದ್ದಾಗ ಮನೆಯನ್ನೇ ಛತ್ರದಂತೆ ಮಾಡಿಕೊಂಡು, ಸಿಗುತ್ತಿದ್ದ ದಿನಗೂಲಿಯಲ್ಲೇ ಬಂದವರಿಗೆಲ್ಲ ಊಟ ಹಾಕಿಸುತ್ತಿದ್ದ ರಾಜಣ್ಣ, ಮದ್ರಾಸು ತೊರೆದು ಮೈಸೂರಿಗೆ ಬಂದರು. ಕೂಡಿಟ್ಟಿದ್ದ ಹಣದಿಂದ ಆರು ಮಂದಿ ಮಕ್ಕಳಿಗೂ ಮದುವೆ ಮಾಡಿದರು. ಈ ಸಂದರ್ಭದಲ್ಲಿಯೇ `ಮಾತನಾಡುವ ಗೊಂಬೆ’ ಉಮ್ಮೇದಿಯಲ್ಲಿದ್ದ ಉದಯ್ ಜಾದೂಗಾರ್ ಅವರ ಪರಿಚಯವಾಯಿತು. `ಮಗಾ, ನಿಂಗೆ ಮುದ್ ಮುದ್ದಾಗಿ ಕಾಣುವ ಗೊಂಬೆ ಬೇಕು ಅಲ್ವಾ? ಮಾಡಿಕೊಡ್ತೀನಿ ಬಿಡು, ಯೋಚಿಸಬೇಡ’ ಎಂದವರೇ- `ಹ್ಯಾರಿ’ ಹೆಸರಿನ ಗೊಂಬೆಗೆ ರೂಪು ಕೊಟ್ಟರು ರಾಜಣ್ಣ. ಇವತ್ತು ದೇಶದಲ್ಲಿರುವ ಬಹುಪಾಲು ಜಾದೂಗಾರರು `ಮಾತನಾಡುವ ಗೊಂಬೆ’ಯೊಂದಿಗೆ ಆಟಕ್ಕೆ ನಿಲ್ಲುತ್ತಾರೆ ನಿಜ, ಆ ಗೊಂಬೆಗೆ, `ಹೀಗಿದ್ದರೇ ಸರಿ’ ಎಂಬಂಥ shape ನೀಡಿದ್ದು ರಾಜಣ್ಣನ ಕೈಗಳೇ.

* * * *
ಇದಿಷ್ಟೂ ಹಳೆಯ ಕಥೆ. ಒಂದು ಕಾಲದಲ್ಲಿ ಕನ್ನಡ ಚಿತ್ರರಂಗದ ಆಧಾರಸ್ತಂಭದಂತಿದ್ದ ಈ ಮೇರು ಕಲಾವಿದನ ಈಗಿನ ಪರಿಸ್ಥಿತಿ ಕಂಡರೆ ನೋವಾಗುತ್ತದೆ, ಬೇಸರವಾಗುತ್ತದೆ. ಚಿತ್ರರಂಗದ ಹಿರಿಯ ತಲೆಗಳ ಬಗ್ಗೆ, ನಮ್ಮ ಸರಕಾರದ ಬಗ್ಗೆ, ಜನಪ್ರತಿನಿಧಿಗಳ ಬಗ್ಗೆ, ಎಲೆಮರೆಯ ಕಾಯಂತಿರುವ ಕಲಾವಿದರನ್ನು ಗಮನಿಸದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರು ಹಾಗೂ ಅಧಿಕಾರಿಗಳ ವರ್ತನೆಯ ಬಗ್ಗೆ ಸಿಟ್ಟು ಬರುತ್ತದೆ. ಏಕೆಂದರೆ, ಚಿತ್ರರಂಗಕ್ಕಾಗಿ ತನ್ನ ಬದುಕನ್ನೇ ಮುಡಿಪಾಗಿಟ್ಟ ಮೌಲ್ಡ್ ರಾಜಣ್ಣನಿಗೆ ಸರ್ಕಾರದಿಂದ ಒಂದೇ ಒಂದು ಪ್ರಶಸ್ತಿಯೂ ಬಂದಿಲ್ಲ. ಹಿರಿಯ ಕಲಾವಿದರಿಗೆ ಕೊಡಲಾಗುವ ಸಹಾಯಧನವೂ ಸಿಕ್ಕಿಲ್ಲ. ಚಿತ್ರರಂಗದ ಏಳಿಗೆಗಾಗಿ ದುಡಿದವರ ಬಗ್ಗೆ ಪುಸ್ತಕ ಬರೆಸಿದ `ಪುಣ್ಯಾತ್ಮರಿಗೆ’ ಮೌಲ್ಡ್ ರಾಜಣ್ಣನ ನೆನಪಾಗಿಲ್ಲ. ಕಲಾವಿದರ ಕೋಟಾದಲ್ಲಿ ಸಿಗುವ ಸೈಟು, ಪ್ರಶಸ್ತಿ, ಸನ್ಮಾನ… ಉಹುಂ, ಈ ಯಾವುದೂ ರಾಜಣ್ಣನಿಗೆ ಲಭಿಸಿಲ್ಲ.

ಆದರೆ, ಒಂದು ಸರಕಾರ ಮಾಡದ ಕೆಲಸವನ್ನು ಉದಯ ಜಾದೂಗಾರ್ ಮಾಡುತ್ತಿದ್ದಾರೆ. `ಈ ಹಿಂದೆ- ಮಾತನಾಡುವ ಗೊಂಬೆಯನ್ನು ಪರಿಚಯಿಸುವಾಗ- `ಇದರ ಹೆಸರು ಹ್ಯಾರಿ. ಇದನ್ನು ಲಂಡನ್‌ನಿಂದ ತಂದಿದ್ದೀನಿ’ ಎನ್ನುತ್ತಿದ್ದೆ. ಆ ಮೂಲಕ ರಾಜಣ್ಣನ ಪ್ರತಿಭೆಯ ಬಗ್ಗೆ ಹೇಳದೆ ತಪ್ಪು ಮಾಡಿದೆ ಎನ್ನುವ ಉದಯ್, ಆ ತಪ್ಪಿಗೆ ಕ್ಷಮೆ ಕೇಳುವ ರೂಪದಲ್ಲಿ ಕಳೆದ ನಾಲ್ಕು ವರ್ಷಗಳಿಂದಲೂ ಮಾಸಿಕ 2000 ರೂ.ಗಳನ್ನು ರಾಜಣ್ಣನಿಗೆ ಕೊಡುತ್ತಿದ್ದಾರೆ. ಇದನ್ನು ನೆನಪು ಮಾಡಿಕೊಂಡು ಈಗಲೂ ಹನಿಗಣ್ಣಾಗುವ ರಾಜಣ್ಣ `ನನ್ನಿಂದ `ಕಸುಬು’ ಕಲಿತುಕೊಂಡು ಚೆನ್ನಾಗಿ ಸಂಪಾದಿಸಿ ಶೋಕಿಗೆ ಬಿದ್ದಿರುವ ಸ್ವಂತ ಮಕ್ಕಳೇ ನನ್ನನ್ನು ಮರೆತಿದ್ದಾರೆ. ಹಾಗಿರುವಾಗ ಇವನು ಸಹಾಯ ಮಾಡ್ತಿದಾನಲ್ಲಪ್ಪಾ…’ ಎನ್ನುತ್ತ ಗದ್ಗದಿತರಾಗುತ್ತಾರೆ. ಸದ್ಯ, ಉತ್ತರಹಳ್ಳಿಹಳ್ಳಿಯಲ್ಲಿರುವ ಮಗಳು `ಇಂದ್ರಾಣಿಯ ಮನೆಯಲ್ಲಿರುವ ರಾಜಣ್ಣ ತಮ್ಮ ಕಲಾಕೃತಿಗಳನ್ನು ಸ್ವಾಮೀಜಿಯೊಬ್ಬರ ಆಶ್ರಮಕ್ಕೆ ದಾನ ಮಾಡಿದ್ದಾರೆ. ಈಗ ಬಡತನದ ಮಧ್ಯೆ, ಬವಣೆಗಳ ಮಧ್ಯೆ, ಸಂಕಟಗಳ ಮಧ್ಯೆ ಉಳಿದಿದ್ದಾರೆ. ಬದುಕಿನ ಸಂಧ್ಯಾ ಕಾಲದಲ್ಲಿರುವ ಅವರಿಗೆ, ತಮ್ಮ ಪ್ರತಿಭೆಗೆ ಸೂಕ್ತ ಪ್ರತಿಫಲ ಸಿಗಲಿಲ್ಲ ಎಂಬ ನೋವಿದೆ. ತಮ್ಮ ಸಂಕಷ್ಟದ ಮಧ್ಯೆಯೂ ಜತೆಗಿರುವವರ ಏಳಿಗೆಯನ್ನು ಬಯಸುವ, ಕಪ್ಪು-ಬಿಳುಪು ಸಿನಿಮಾಗಳ ಕಾಲದ ಥರಾವರಿ ಕಥೆ ಹೇಳಿ ನಗಿಸುವ ಅವರಿಗೆ ಒಂದು ಪ್ರಶಸ್ತಿ ನೀಡುವ ಮನಸು ರಾಜ್ಯ ಸರಕಾರಕ್ಕೆ ಬರಬಾರದೆ? ಮೌಲ್ಡ್ ರಾಜಣ್ಣನ ಕಣ್ಣಲ್ಲಿ `ಸುಪ್ರೀಂ ಹೀರೋ’ ಅನ್ನಿಸಿಕೊಂಡಿರುವ ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ಅವರಾದರೂ ರಾಜಣ್ಣನಿಗೆ ಪ್ರತಿಭೆಗೆ ಸೂಕ್ತ ಸನ್ಮಾನ ಮಾಡಲು ಮುಂದಾಗಬಾರದೆ? ಅಂದಹಾಗೆ ಮೌಲ್ಡ್ ರಾಜಣ್ಣನೊಂದಿಗೆ ಮಾತಾಡಬೇಕೆಂದರೆ: 92421 42266.

ಒಂದು ಕಾಲದಲ್ಲಿ ಕನ್ನಡ ಚಿತ್ರರಂಗದ ಆಧಾರಸ್ತಂಭದಂತಿದ್ದ ರಾಜಣ್ಣ ಈಗ ಬಡತನದ ಮಧ್ಯೆ, ಬವಣೆಗಳ ಮಧ್ಯೆ, ಸಂಕಟಗಳ ಮಧ್ಯೆ ಉಳಿದಿದ್ದಾರೆ. ಬದುಕಿನ ಸಂಧ್ಯಾ ಕಾಲದಲ್ಲಿರುವ ಅವರಿಗೆ, ತಮ್ಮ ಪ್ರತಿಭೆಗೆ ಸೂಕ್ತ ಪ್ರತಿಫಲ ಸಿಗಲಿಲ್ಲ ಎಂಬ ನೋವಿದೆ.