Category Archives: ವಿಶ್ವೇಶ್ವರ ಭಟ್ – ನೂರೆಂಟುಮಾತು

ಲೋಕದ ಜನ, ಜನರ ನಡಾವಳಿ, ವಿನೋದಾವಳಿ.. ಇತ್ಯಾದಿ ಸಂಗತಿ- ಸ್ವಾರಸ್ಯ- ಮಾಹಿತಿಯನ್ನು ಅಕ್ಷರಗಳಲ್ಲಿ ತುಂಬಿ, ಓದುಗ ಬಳಗದೊಂದಿಗೆ ಮಾತಿಗೆ ಕೂರುತ್ತಿದ್ದಾರೆ ಭಾರತದ ನಂ.1 ಕನ್ನಡ ದೈನಿಕ ‘ವಿಜಯ ಕರ್ನಾಟಕ” ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕ ವಿಶ್ವೇಶ್ವರ ಭಟ್‌.

‘ನೂರೆಂಟು ಮಾತು” ಅಂಕಣ ವಿಶ್ವೇಶ್ವರ ಭಟ್‌ರ ಸಮೃದ್ಧ ಓದು, ಅಲೆದಾಟ, ಅನುಭವದ ಅಭಿವ್ಯಕ್ತಿ . ಪ್ರತಿ ಶನಿವಾರ ಮಾತು ನೂರೆಂಟು ; ನೀವುಂಟು ಮಾತುಗಾರ ಭಟ್ಟರುಂಟು !

ಬಂಗಾರ ಗೆದ್ದವನೂ ಬಹಳ ದಿನ ನೆನಪಲ್ಲಿ ಉಳಿಯಲಾರ, ಹೀಗಾಗಿ…

ಕೆಲ ವರ್ಷಗಳ ಹಿಂದೆ ರಾಬಿನ್ ಎಸ್. ಶರ್ಮ ಎಂಬ ಆಧುನಿಕ ವ್ಯಕ್ತಿತ್ವ ವಿಕಸನ (Personality Developmentಿ) ಗುರುವನ್ನು ಭೇಟಿ ಮಾಡಿದ್ದೆ. ಭಲೇ ಲವಲವಿಕೆಯ ಮನುಷ್ಯ. ಆಪ್ತವಾಗಿ ಮಾತನಾಡುತ್ತಾನೆ. ಪುಟ್ಟ ಪುಟ್ಟ ಪ್ರಸಂಗಗಳನ್ನು ಹೇಳಿ ಗಮನ ಸೆಳೆಯುತ್ತಾನೆ. ವ್ಯಕ್ತಿತ್ವ ವಿಕಸನಕ್ಕೆ ಸಂಬಂಧಿಸಿದ ಚರ್ವಿತಚರ್ವಣಗಳನ್ನು ಬಡಬಡಿಸುವುದಿಲ್ಲ. ಹಳೇ ಜೋಕುಗಳನ್ನು ಹೇಳಿ ಹಿಂಸಿಸುವುದಿಲ್ಲ. ವ್ಯಕ್ತಿತ್ವ ವಿಕಸನ ಪಾಠ, ಕಾರ್ಯಾಗಾರಗಳನ್ನೇ ಕಸುಬಾಗಿ ಮಾಡಿಕೊಂಡ ಶಿವಖೇರ, ಆ್ಯಂಥೋನಿ ವಿಲಿಯೆಮ್ಸ್, ಡಾ. ಭರತಚಂದ್ರ, ಯಂಡಮೂರಿ ವೀರೇಂದ್ರನಾಥ (ಹೊಸ ಸೇರ್ಪಡೆ) ಮುಂತಾದವರೊಂದಿಗೆ ಮಾತನಾಡುವಾಗ ಸಿದ್ಧ ಪಾಶ್ಚಿಮಾತ್ಯ ಮಾದರಿಯನ್ನು ನಮ್ಮ ಮೇಲೆ ಹೇರಲು ಪ್ರಯತ್ನಿಸುತ್ತಿದ್ದಾರಾ ಎಂಬ ಗುಮಾನಿಯಾಗುತ್ತದೆ.

ಇದ್ದುದರಲ್ಲಿ ನಮ್ಮ ಯಂಡಮೂರಿ, ಡಾ. ಭರತ್್ಚಂದ್ರ ಪರವಾಗಿಲ್ಲ. ಪಾಶ್ಚಾತ್ಯ ನಿದರ್ಶನಗಳಿಗೆ ಹೋಲುವ ಭಾರತದ ಉದಾಹರಣೆಗಳನ್ನು ಸಾಕಷ್ಟು ಸಂಗ್ರಹಿಸಿದ್ದಾರೆ. ಫುಲ್್ಟೈಮ್ ಕಥೆ, ಕಾದಂಬರಿ ಬರೆಯುವುದನ್ನು ಬಿಟ್ಟು ಯಂಡಮೂರಿ ಈಗ ಫುಲ್್ಟೈಮ್ ವ್ಯಕ್ತಿತ್ವ ವಿಕಸನ ಗುರುವಾಗಿದ್ದಾರೆ. ಕಳೆದ ಐದಾರು ವರ್ಷಗಳಲ್ಲಿ ಅವರು ಈ ವಿಷಯಕ್ಕೆ ಸಂಬಂಧಿಸಿದ ಪುಸ್ತಕಗಳನ್ನೇ ಬರೆದಿದ್ದಾರೆ. ಪರ್ಸನಾಲಿಟಿ ಡೆವಲಪ್್ಮೆಂಟ್ ಕುರಿತ ಅವರ ಕಾರ್ಯಾಗಾರದಲ್ಲಿ ಪಾಲ್ಗೊಂಡವರಿಗೆ ಈ ಪುಸ್ತಕಗಳನ್ನು ಓದುವವರಿಗೆ ‘ಕತೆಗಾರ ಯಂಡಮೂರಿ ಕಳೆದುಹೋದರಾ?’ ಎಂಬ ಬೇಸರ ಮುತ್ತಿಕೊಳ್ಳುತ್ತದೆ. ಯಂಡಮೂರಿ ‘ವ್ಯಕ್ತಿತ್ವ ವಿಕಸನ’ ಕುರಿತು ಹತ್ತಾರು ಒಳ್ಳೆಯ ಕೃತಿಗಳನ್ನು ಬರೆದಿದ್ದಾರೆ.

ವ್ಯಕ್ತಿತ್ವ ವಿಕಸನ ಗುರುಗಳ ದೊಡ್ಡ ಸಮಸ್ಯೆಯೆಂದರೆ ತಮ್ಮ ವ್ಯಕ್ತಿತ್ವವನ್ನೇ ವಿಕಸನಗೊಳಿಸಿಕೊಳ್ಳದಿರುವುದು. ಇವರ್ಯಾರ ಮಾತುಗಳನ್ನು ಎರಡನೆ ಸಲ ಕೇಳುವುದೆಂದರೆ ಕಿವಿಗೆ ಕಾದ ಸೀಸ ಹುಯ್ದಂತೆ. ಒಂದೆಡೆ ಹೇಳಿದ್ದನ್ನೇ ಎಲ್ಲ ಕಡೆ ಉಸುರುತ್ತಾರೆ. ಹದಿನೈದು ವರ್ಷಗಳ ಹಿಂದೆ ಆ್ಯಂಥೋನಿ ವಿಲಿಯಮ್ಸ್ ಎಂಬುವವರ ಕಾರ್ಯಾಗಾರ ಪ್ರವೇಶ ಉಪನ್ಯಾಸವನ್ನು ಕೇಳಿದ್ದೆ. ಮೂರು ವರ್ಷಗಳ ಹಿಂದೆ ಅದನ್ನು ಕೇಳಿದಾಗ ಅದನ್ನೇ ಬಡಬಡಿಸುತ್ತಿದ್ದರು. ಸ್ವಲ್ಪವೂ ವ್ಯತ್ಯಾಸವಿಲ್ಲ. ಎರಡನೇ ಸಲಕ್ಕೆ ಕಿವಿಗೊಟ್ಟರೆ ಇವರೆಂಥ ಖಾಲಿ ಖಾಲಿ ಎನಿಸುತ್ತದೆ. (ನಮ್ಮ ಈಶ್ವರಪ್ಪ, ಯಡಿಯೂರಪ್ಪ ಅವರೇ ವಾಸಿ ಅನಿಸುತ್ತಾರೆ.)

ನಾನು ರಾಬಿನ್ ಶರ್ಮನನ್ನು ಭೇಟಿ ಮಾಡಿದ್ದು ಮೊದಲ ಬಾರಿಯಾಗಿದ್ದರಿಂದ ಆತ ಇಷ್ಟವಾದ. ಇದು ಎರಡನೆಯ ಸಲ ಭೇಟಿಯಾಗುವ ಹೊತ್ತಿಗೆ ಏನಾಗಿರುತ್ತದೋ ಗೊತ್ತಿಲ್ಲ. ವ್ಯಕ್ತಿತ್ವ ವಿಕಸನ ಎಂಬ ಕೋರ್ಸು, ಡಿಸ್ಕೋರ್ಸುಗಳಲ್ಲಿ ಹೇರಳ ಹಣವಿದೆ. ಏನೇ ಪುಸ್ತಕ ಬರೆದರೂ ಖರ್ಚಾಗುತ್ತದೆ. ರೇಸ್ ಪುಸ್ತಕಕ್ಕಿಂತ ಬೇಗ ಮಾರಾಟವಾಗುವ ಪುಸ್ತಕಗಳೆಂದರೆ ಇವೇ! ಹೀಗಾಗಿ ವಿಚಿತ್ರ ಪುಸ್ತಕಗಳು ಬಂದಿವೆ. ಹಾಸಿಗೆ ಮೇಲೆ ಗಂಡನನ್ನು ರಮಿಸುವುದು ಹೇಗೆ? ಒಳ್ಳೆಯ ಗಂಡನಾಗುವುದು ಹೇಗೆ? ಉತ್ತಮ ತಂದೆಯಾಗುವುದು ಹೇಗೆ? ಇಲ್ಲ ಅಂತ ಹೇಳುವಾಗಲೆಲ್ಲ ಹೌದು ಅಂತ ಏಕೆನ್ನುತ್ತೀರಿ? ನಿಮ್ಮೊಳಗಿನ ನೀವು ಏಕೆ ಅಲ್ಲಿಯೇ ಇದ್ದಾನೆ? ಉತ್ತಮ ಅತ್ತೆ-ಸೊಸೆಯಾಗುವುದು ಹೇಗೆ?…ಹೀಗೆ ವಿಶಿಷ್ಟ (!) ಹಾಗೂ ಅಸಂಬದ್ಧ ಪುಸ್ತಕಗಳೆಲ್ಲ ದಂಡಿಯಾಗಿ ಮಾರಾಟವಾಗುತ್ತವೆ. (ಈ ಸಾಲಿಗೆ ನನ್ನದೂ ಎರಡು ಕೊಡುಗೆಗಳಿವೆ). ಹಾಗಂತ ನಾನು ಈ ಕೋರ್ಸ್್ಗಳನ್ನಾಗಲಿ, ಪುಸ್ತಕಗಳನ್ನಾಗಲಿ ಸಾರಾಸಗಟು ತಿರಸ್ಕರಿಸುತ್ತಿಲ್ಲ. ವ್ಯಕ್ತಿತ್ವ ವಿಕಸನಕ್ಕೆ ಪೂರಕವಾಗುವ ಕೆಲವು ಹೊಳಹುಗಳನ್ನು ಈ ಕೃತಿಗಳು ಚಿಮ್ಮಿಸಬಲ್ಲವು. ನಮ್ಮಲ್ಲೊಂದು ಸ್ಫೂರ್ತಿಯ ಚಿಲುಮೆಯನ್ನು ಹೊತ್ತಿಸಬಲ್ಲವು. ಅಲ್ಲಿಗೆ ಅವುಗಳ ಕೆಲಸ ಮುಗಿಯಿತು. ಆ ಪ್ರೇರಣೆಯನ್ನು ರಕ್ಷಿಸಿಕೊಂಡು ಮುಂದೆ ಬೆಳೆಯುವುದಿದ್ದರೆ, ಅದೇನಿದ್ದರೂ ನಮ್ಮ ಪ್ರಯತ್ನದಿಂದಲೇ ಆಗಬೇಕು. ಇದು ವ್ಯಕ್ತಿತ್ವ ವಿಕಸನ ಪುಸ್ತಕ, ಕಾರ್ಯಾಗಾರಗಳ ಹೆಚ್ಚುಗಾರಿಕೆ ಹಾಗೂ ಮಿತಿಯೂ ಹೌದು.

ಈ ಹಿನ್ನೆಲೆಯಲ್ಲಿ ರಾಬಿನ್ ಶರ್ಮ ಭೇಟಿ ಮಾಡಿದ್ದು. ಹೀಗಾಗಿ ಮೊದಲ ಭೇಟಿಯಲ್ಲಿ ಬೆರಗಾಗುವುದಕ್ಕಿಂತ ಬರಿದಾಗಿರುವ ತುಡಿತವೇ ಹೆಚ್ಚಾಗಿತ್ತು. ನಿಮಗೆ ಗೊತ್ತಿರಬಹುದು ರಾಬಿನ್ ಶರ್ಮ The monk who sold his Ferari ಪುಸ್ತಕ ಬರೆದಾಗ ಬಹಳ ಬೇಗ ಜನಪ್ರಿಯರಾದರು. ಅದಾದ ಬಳಿಕ Family Wisdom, Mega Living, Leadership Wisdom ಬರೆದರು. ಅಷ್ಟೊತ್ತಿಗೆ ಶರ್ಮ ಎಲ್.ಎಲ್.ಬಿ., ಎಲ್.ಎಲ್.ಎಂ. ಮಾಡಿ ಕೆಲಕಾಲ ವಕೀಲರಾಗಿದ್ದರು. ಈಗ ಫುಲ್್ಟೈಮ್ ವ್ಯಕ್ತಿತ್ವ ವಿಕಸನ ಗುರು. ಅವರನ್ನು ಭೇಟಿಯಾದ ಸಂದರ್ಭದಲ್ಲಿ ಶರ್ಮ Who will cry when you die?(ನೀವು ಸತ್ತಾಗ ಅಳುವವರು ಯಾರು?) ಎಂಬ ತಮ್ಮ ಕೃತಿಯನ್ನು ಕೊಟ್ಟರು. ಎರಡು ವರ್ಷಗಳಲ್ಲಿ 24 ಆವೃತ್ತಿಗಳನ್ನು ಕಂಡ ಪುಸ್ತಕವಿದು! ನಾಲ್ಕೈದು ತಾಸುಗಳಲ್ಲಿ ಓದಿಡಬಹುದಾದ 225 ಪುಟಗಳ ಕೃತಿ. ನೂರೊಂದು ಜೀವನಪಾಠಗಳನ್ನು ಶರ್ಮ ಪಟ್ಟಿ ಮಾಡಿದ್ದಾರೆ. ನಾವು ನಿತ್ಯವೂ ನಿರ್ಲಕ್ಷಿಸುವ, ಅಷ್ಟೊಂದು ಪ್ರಾಮುಖ್ಯ ಕೊಡದ ಸಂಗತಿಗಳ ಬಗ್ಗೆ ಚರ್ಚಿಸಲಾಗಿದೆ. ಕೆಲವು ಇಷ್ಟವಾದ ಪುಟ್ಟ ಪುಟ್ಟ ಹನಿಗಳನ್ನು ಇಲ್ಲಿ ಹಿಡಿದಿಟ್ಟಿದ್ದೇನೆ.

* ನಮ್ಮ ಜೀವನದಲ್ಲಿ ಸಂಭವಿಸಬಹುದಾದ ದೊಡ್ಡ ದುರಂತವೆಂದರೆ ಖಂಡಿತವಾಗಿಯೂ ಸಾವು ಅಲ್ಲ. ನಾವು ಬದುಕಿರುವಾಗ ನಮ್ಮೊಳಗಿನ ಅಂತಃಸತ್ವವನ್ನು ಸಾಯಗೊಟ್ಟಿರುತ್ತೇವಲ್ಲ, ಅದು ನಿಜವಾಗಿಯೂ ದೊಡ್ಡ ದುರಂತ.

* ಪರ್ಶಿಯನ್ ಗಾದೆ ಮಾತೊಂದನ್ನು ಕೇಳಿದ ಬಳಿಕ ನನ್ನ ಜೀವನದಲ್ಲಿ ಕೊರಗು ಎಂಬುದು ಇಲ್ಲವೇ ಇಲ್ಲ. ಅದೇನಪ್ಪಾ ಅಂದ್ರೆ- ನನಗೆ ಬೂಟುಗಳೇ ಇಲ್ಲವಲ್ಲಾ ಎಂದು ಅಳುತ್ತಿದ್ದೆ. ಅಪ್ಪನನ್ನು ಕೇಳಿದೆ. ಆತ ತೆಗೆಸಿಕೊಡಲಿಲ್ಲ. ಒಂದು ಜೊತೆ ಬೂಟು ಖರೀದಿಸಲಾಗದ ದರಿದ್ರ ಜೀವನ ಎಂದು ಬೇಸರಿಸಿಕೊಂಡೆ. ಇದು ಜೀವನವಾ ಅನಿಸಿತು. ಹಾಗೆ ಯೋಚಿಸುತ್ತಿರುವಾಗ ಎರಡೂ ಕಾಲುಗಳೇ ಇಲ್ಲದ, ಆದರೆ ಸಂತಸದಿಂದ ಇರುವ ವ್ಯಕ್ತಿಯೊಬ್ಬನನ್ನು ನೋಡಿಕೊಂಡೆ. ನಾನು ಪರಮಸುಖಿಯೆನಿಸಿತು.

* ಅಪರಿಚಿತರಾದವರಿಗೆ ಪುಟ್ಟ ಸಹಾಯ ಮಾಡಿ. ಅವರು ತಟ್ಟನೆ ನಿಮ್ಮ ಸ್ನೇಹಿತರಾಗುತ್ತಾರೆ. ಟೋಲ್್ಗೇಟ್್ನಲ್ಲಿ ನಿಮ್ಮ ಹಿಂದಿನ ಕಾರಿನವರ ಹಣವನ್ನೂ ನೀವೇ ಪಾವತಿಸಿ ನೋಡಿ. ನೀವ್ಯಾರೆಂದು ಆತ ಪರಿಚಯಿಸಿಕೊಳ್ಳದೇ ಹೋಗಲಿಕ್ಕಿಲ್ಲ. ಪುಟ್ಟ ಕಾರಣಕ್ಕೆ ನಿಮಗೊಂದು ಸ್ನೇಹ ದೊರಕಬಹುದು.

* ಹೇಳುವುದು ಸುಲಭ. ಆದರೆ ಆಚರಣೆಗೆ ತರುವುದು ಕಷ್ಟ. ಅದೇನೆಂದರೆ ಚಿಂತೆ ಬಿಡಿ ಎಂಬ ಉಪದೇಶ. ಆದರೂ ಈ ನಿಯಮ ಪಾಲಿಸಿ. ಯಾವುದಕ್ಕೆ ನಾವು ಚಿಂತಿಸುತ್ತೇವೋ ಬಹುತೇಕ ಸಂದರ್ಭಗಳಲ್ಲಿ ಅವು ಘಟಿಸುವುದೇ ಇಲ್ಲ. ಚಿಂತಿಸಿದ್ದೊಂದೇ ‘ಲಾಭ’!

* ನೀವು ನಿಮ್ಮ ಮಕ್ಕಳಿಗೆ ಕೊಡಬಹುದಾದ ದೊಡ್ಡ ಕೊಡುಗೆಯೆಂದರೆ ಆಟಿಕೆಯಲ್ಲ. ಚಾಕೋಲೇಟ್ ಅಲ್ಲ. ಆದರೆ ನಿಮ್ಮ ಸಮಯ. ನಾವು ಅದೊಂದನ್ನು ಬಿಟ್ಟು ಮಿಕ್ಕಿದ್ದೆಲ್ಲವನ್ನೂ ಕೊಡುತ್ತೇವೆ. ಅಲ್ಲಿಗೆ ನಮ್ಮ ಕರ್ತವ್ಯ ಮುಗಿಯಿತೆಂದು ತಿಳಿಯುತ್ತೇವೆ. ನಿಮ್ಮ ಸಮಯಕ್ಕಿಂತ ದೊಡ್ಡ ಕೊಡುಗೆ ಮತ್ತೊಂದಿಲ್ಲ.

* ಜೀವನದಲ್ಲಿ ದೊಡ್ಡ ಕೆಲಸ, ಕಾರ್ಯವೆಂಬುದು ಇಲ್ಲವೇ ಇಲ್ಲ. ದೊಡ್ಡ ಪ್ರೀತಿಯಿಂದ ಮಾಡಿದ ಎಷ್ಟೇ ಸಣ್ಣ ಕೆಲಸವಾದರೂ ಅದು ದೊಡ್ಡ ಕೆಲಸ, ಕಾರ್ಯವೇ.

* ಜೀವನದಲ್ಲಿ ಸಣ್ಣ ಸಂಗತಿಗಳೇ ದೊಡ್ಡವು. ಮನೆಗೆಲಸದಾಕೆಗೆ ಸಂಬಳ ಕೊಡದವ ಕಚೇರಿಯಲ್ಲಿ ಸಿಬ್ಬಂದಿಯನ್ನೂ ಸತಾಯಿಸುತ್ತಾನೆ. ನಿಮ್ಮ ಸ್ನೇಹಿತರಿಗೆ ನೀವು ಸೈಟು, ಮನೆ ಕೊಡದಿರಬಹುದು. ಆದರೆ ಒಂದು ಪುಟ್ಟ ಕೈಗಡಿಯಾರ, ಪುಸ್ತಕ, ಪೆನ್ನು ಕೊಡದಿರುವಷ್ಟು ಯಾರೂ ಬಡವರಲ್ಲ. ಆಗಾಗ ಗಿಫ್ಟ್್ಗಳನ್ನು ಕೊಡುತ್ತೀರಿ.

* ನಿಮ್ಮ ಜೊತೆಗೆ ಸದಾ ಒಂದು ಪುಸ್ತಕವನ್ನಿಟ್ಟುಕೊಳ್ಳಿ. ಎಂದಿಗೂ ನೀವು ಏಕಾಂಗಿ ಎಂದೆನಿಸುವುದಿಲ್ಲ. ಬೋರು ನಿಮ್ಮ ಸನಿಹ ಸುಳಿಯುವುದಿಲ್ಲ.

* ನೀವು ಎಷ್ಟು ದಿನ ಬದುಕಿರುತ್ತೀರೋ, ಏನಾದರೂ ಹೊಸತನ್ನು ಕಲಿಯುತ್ತಿರಿ. ನೂರು ವರ್ಷ ಬಾಳಿದರೂ ಅದೆಷ್ಟು ಕಡಿಮೆ ವರ್ಷ ಬದುಕಿನೆಂದು ನಿಮಗನಿಸುತ್ತದೆ.

* ಸಾಧ್ಯವಾದರೆ ನಿಮ್ಮ ಚಪ್ಪಲಿ, ಬೂಟು ತೆಗೆದಿಟ್ಟು ಹಸಿರು ಹುಲ್ಲಿನ ಮೇಲೆ ನಡೆಯಿರಿ. ಸ್ವಲ್ಪ ದೂರ ನಡೆಯುತ್ತಿರುವಂತೆ ನಿಮಗೆ ಹಿತವೆನಿಸುತ್ತದೆ. ಈ ಪುಟ್ಟ ಹುಲ್ಲಿನ ಗಿಡಗಳನ್ನು ನಾನು ಸಾಯಿಸುತ್ತಿದ್ದೇನಲ್ಲ ಎಂದು ನಿಮಗೆ ಬೇಸರವಾಗುತ್ತದೆ. ಈ ಬೇಸರವೇ ನಿಜವಾದ ಕಾಳಜಿ.

* ಹೂಗಳು ಗಿಡದಲ್ಲಿದ್ದರೆ ಚೆಂದ. ಅವನ್ನು ಕೊಯ್ದ ಬಳಿಕ ಗಿಡದ ಸೌಂದರ್ಯ ಕುಗ್ಗುತ್ತದೆ. ಹೂವುಗಳು ಬಾಡುತ್ತವೆ. ಪ್ರಕೃತಿಯ ಸಣ್ಣ ಸಣ್ಣ ವಿಚಿತ್ರಗಳು ನಮ್ಮಲ್ಲಿ ಬೆರಗನ್ನುಂಟು ಮಾಡಬಲ್ಲವು.

* ಕುರಿಮಂದೆಯಂತಿರುವ ಜನಜಂಗುಳಿಯನ್ನು ಎಂದಿಗೂ ಅನುಸರಿಸಿ ನಡೆಯಬೇಡಿ. ಸಿನಿಮಾದಲ್ಲಿನ ಜನಜಂಗುಳಿಯನ್ನು ಅನುಸರಿಸಿದರೆ ಊ್ಢ್ಝಡಿ(ನಿರ್ಗಮನ ಬಾಗಿಲು) ತಲುಪಿರುತ್ತೀರಿ. ಎಲ್ಲರೂ ಕೈ ಎತ್ತುವಾಗ ನಾವೂ ಕೈ ಎತ್ತುವುದು ಬಹಳ ಸುಲಭ. ಎತ್ತದಿರುವುದೇ ಕಷ್ಟ.

* ಸದಾ ಒಳ್ಳೆಯ ಕೆಲಸವನ್ನೇ ಏಕೆ ಮಾಡಬೇಕು? ಹೂವುಗಳನ್ನು ಕೊಡುವ ಕೈ ಸದಾ ಪರಿಮಳವನ್ನು ಸೂಸುತ್ತಿರುತ್ತದೆ. ಕೈಗೆ ಜೇನುತುಪ್ಪ ಅಂಟಿಕೊಂಡಿದ್ದರೆ ಯಾರೂ ಕೈ ನೆಕ್ಕದೇ ತೊಳೆದುಕೊಳ್ಳುವುದಿಲ್ಲ.

* ನಿಮ್ಮೊಂದಿಗೆ ಸದಾ ಇಬ್ಬರು ವೈದ್ಯರಿದ್ದಾರೆ. ನಿಮಗೆ ಗೊತ್ತಿಲ್ಲದಂತೆ. ಒಬ್ಬರು ಬಲಗಾಲು, ಮತ್ತೊಬ್ಬರು ಎಡಗಾಲು. ಇವರಿಬ್ಬರ ಜತೆ ನೀವು ದಿನಕ್ಕೆ ಎರಡು ಮೈಲಿ ಹೆಜ್ಜೆ ಹಾಕಿ. ರೋಗ ನಿಮ್ಮ ಹತ್ತಿರ ಸುಳಿದರೆ ನೋಡಿ.

* ನೀವೆಷ್ಟೇ ಪ್ರಸಿದ್ಧರಾಗಿ. ಅದು ಶಾಶ್ವತವಲ್ಲ. ಒಲಿಂಪಿಕ್ಸ್ ಕ್ರೀಡಾಕೂಟ ಮುಗಿದ ಸ್ವಲ್ಪ ದಿನಗಳ ನಂತರ ಬಂಗಾರ ಗೆದ್ದ ಕ್ರೀಡಾಪಟುಗಳನ್ನೂ ಜನ ಮರೆಯುತ್ತಾರೆ. ಚಂದ್ರನ ಮೇಲೆ ಮೊದಲಿಗೆ ಕಾಲಿಟ್ಟವರೂ ಕೆಲ ದಿನಗಳ ಬಳಿಕ ನೇಪಥ್ಯಕ್ಕೆ ಸರಿಯುತ್ತಾರೆ. ಜನಮಾನಸದಿಂದ ದೂರವಾದ ಮಾತ್ರಕ್ಕೆ ಜೀವನ ಮುಗಿಯಿತು ಎಂದಲ್ಲ. ಅದಕ್ಕಾಗಿ ಹೊಸ ಹೊಸ ಸಾಹಸಕ್ಕೆ ನಮ್ಮನ್ನು ಅಣಿಗೊಳಿಸಿಕೊಳ್ಳಬೇಕು.

* ಸದಾ ಮನೆ, ಮಂದಿಯ, ನಿಮ್ಮ ಮಕ್ಕಳ ಹಾಗೂ ನಿಮ್ಮ ಫೋಟೋ ತೆಗೆಯುತ್ತೀರಿ. ವರ್ಷಕ್ಕೆ ಕನಿಷ್ಠ ಐದಾರು ಆಲ್ಬಮ್್ಗಳನ್ನು ಸಂಗ್ರಹಿಸಿಡಿ. 20-30 ವರ್ಷಗಳ ಬಳಿಕ ಇದೊಂದು ಅಮೂಲ್ಯ ನೆನಪುಗಳ ಆಗರವಾಗಿರುತ್ತದೆ. ನೀವು ನಿಮ್ಮ ಮಕ್ಕಳಿಗೆ ಕೊಡಬಹುದಾದ ಉತ್ತಮ ಕೊಡುಗೆಗಳಲ್ಲಿ ಸಿಹಿ ನೆನಪು ಸಹ ಒಂದು.

* ಸರಿಯಾದ ಸಮಯ, ಸಂದರ್ಭ, ವ್ಯಕ್ತಿಗಳ ಮುಂದೆ ಸಿಟ್ಟು ಮಾಡಿಕೊಳ್ಳುವುದನ್ನು ಕಲಿತರೆ ನಿಮ್ಮ ಮನಸ್ಸನ್ನು ಹಿಡಿತದಲ್ಲಿಟ್ಟುಕೊಂಡಿದ್ದೀರೆಂದೇ ಅರ್ಥ. ಸಿಟ್ಟು ಸಹ ಸುಂದರ ಹಾಗೂ ಸಾರ್ಥಕವೆನಿಸುವುದು ಆಗಲೇ.

* ವರ್ಷದಲ್ಲಿ ಒಂದು ವಾರ ಮರ, ಗಿಡ, ನದಿ, ಗುಡ್ಡ, ಬೆಟ್ಟದಲ್ಲಿ ಕಳೆಯಿರಿ. ಮನುಷ್ಯರಿಗಿಂತ ಇವು ಇಷ್ಟೊಂದು ಸುಂದರವಾಗಿವೆಯೆಂಬುದು ಗೊತ್ತಾಗುತ್ತದೆ.

* ನಿದ್ದೆ ಮಾಡಬೇಕೆನಿಸಿದಾಗ ಮತ್ತೇನನ್ನೂ ಮಾಡಬೇಡಿ. ಚೆನ್ನಾಗಿ ನಿದ್ದೆ ಮಾಡಿ. ನಿದ್ದೆಗಿಂತ ಸುಖ ಇನ್ನೊಂದಿಲ್ಲ. ಆದರೆ ಇದನ್ನು ಎಷ್ಟು ಮಾಡಬೇಕೆಂಬುದು ಗೊತ್ತಿರಲಿ.

* ಮಳೆಗಾಗಿ ಪ್ರಾರ್ಥನೆ, ಜಪ, ಯಾಗ ಮಾಡುವುದು ತಪ್ಪಲ್ಲ. ಆದರೆ ಹೀಗೆ ಮಾಡುವಾಗ ಕೈಯಲ್ಲೊಂದು ಕೊಡೆಯಿರಲಿ. ನಾವು ಮಾಡುವ ಕೆಲಸದ ಪರಿಣಾಮವೇನೆಂಬುದು ನಮಗೆ ತಿಳಿದಿರಬೇಕು.

* ಸಾಧ್ಯವಾದರೆ ಕೊಟೇಷನ್ ಸುಪ್ರಭಾತಗಳನ್ನು ಸಂಗ್ರಹಿಸಿಟ್ಟುಕೊಳ್ಳಿ. ಇವುಗಳಲ್ಲಿರುವಷ್ಟು ಜೀವನಾಮೃತ ಬೇರೆಲ್ಲೂ ಸಿಗಲಿಕ್ಕಿಲ್ಲ. ಒಂದು ಕಾದಂಬರಿ, ಪುಸ್ತಕದ ಸತ್ವ ಸುಭಾಷಿತವೊಂದರಲ್ಲಿ ಅಡಗಿರುತ್ತದೆ.

* ನಿಮಗೆಷ್ಟೇ ಸ್ನೇಹಿತರಿರಬಹುದು. ಸಲಹೆಗಾರರಿರಬಹುದು. ಆದರೆ ನಿಮ್ಮ ಆಪ್ತ ಸ್ನೇಹಿತ, ಆಪ್ತ ಸಲಹೆಗಾರ ನೀವೇ ಎಂಬುದನ್ನು ಮರೆಯಬೇಡಿ. ನಿಮ್ಮ ವೈರಿಯೂ ನೀವೇ.

– ವಿಶ್ವೇಶ್ವರ ಭಟ್

Advertisements

ನಾನು ನುಜೂದ್, ವಯಸ್ಸು 10 ಹಾಗೂ ವಿಚ್ಛೇದಿತೆ!

Nujood Ali (Pic : Digital Journal)
ಕಳೆದ ಒಂದು ವಾರದಿಂದ ಯಡಿಯೂರಪ್ಪನವರು ಮುಖ್ಯಮಂತ್ರಿ ಹುದ್ದೆಯಲ್ಲಿ ಮುಂದುವರಿಯುತ್ತಾರಾ, ಇಲ್ಲವಾ ಎಂಬ ಪ್ರಶ್ನೆ ದೇಶದಾದ್ಯಂತ ಚರ್ಚೆಯಾಗುತ್ತಿದ್ದರೆ, ನಾನು ನನ್ನ ಐಪ್ಯಾಡ್‌ನಲ್ಲಿ ಡೌನ್‌ಲೋಡ್ ಮಾಡಿಕೊಂಡ ಒಂದು ಅದ್ಭುತ ಪುಸ್ತಕದೊಳಗೆ ತೂರಿಕೊಂಡಿದ್ದೆ. I am Nujood, Age 10 and Divorced! ಹಾಗಂತ ಪುಸ್ತಕದ ಹೆಸರು. ಪುಸ್ತಕವನ್ನು ಓದಿ ಮುಗಿಸುವ ಹೊತ್ತಿಗೆ ಬಿಜೆಪಿ ಹೈಕಮಾಂಡ್ ಯಡಿಯೂರಪ್ಪನವರನ್ನು ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರಿಸಲು ನಿರ್ಧರಿಸಿತ್ತು. ಆದರೆ ಮನಸ್ಸಿನಲ್ಲಿ ನುಜೂದ್ ಎಂಬ ಬಾಲೆ ದೊಡ್ಡ ನಾಯಕಿಯಂತೆ ಕಂಗೊಳಿಸುತ್ತಿದ್ದಳು. ಅವಳ ಹೋರಾಟ ಸ್ಥಾಯಿಯಾಗಿ ನಿಂತಿತ್ತು. ಅವಳ ಹೋರಾಟ ಲಕ್ಷಾಂತರ ಅಪ್ರಾಪ್ತ, ಮುಗ್ಧ ಹೆಣ್ಣುಮಕ್ಕಳಿಗೆ ಭರವಸೆಯ ಜೀವಸೆಲೆಯಾಗಿತ್ತು. ಹತ್ತು ವರ್ಷದ ಬಾಲಕಿ, ಇನ್ನೂ ಜಗತ್ತನ್ನೇ ನೋಡದ ಅಮಾಯಕಿ ಅಂದು ತನ್ನ ದಿಟ್ಟತನ, ಕೆಚ್ಚು, ಕಿಚ್ಚಿನಿಂದ ಇಡೀ ವಿಶ್ವಕ್ಕೆ ಒಂದು ಅಮರ, ಅಮೋಘ ಸಂದೇಶ ಸಾರಿದ್ದಳು.ನುಜೂದ್‌ಳ ಕರುಳು ಹಿಂಡುವ, ಕರುಣಾಜನಕ ಕತೆ ಹೀಗೆ ಸಾಗುತ್ತದೆ.ಕೋರ್ಟ್ ದೃಶ್ಯ: `ನಾನು ನ್ಯಾಯಾಧೀಶರನ್ನು ಭೇಟಿ ಮಾಡಬೇಕು. ದಯವಿಟ್ಟು ನನಗೆ ಅವಕಾಶ ಮಾಡಿಕೊಡಿ. ಕೈ ಮುಗೀತಿನಿ. ಯಾರೂ ಇಲ್ಲ ಎನ್ನಬೇಡಿ’ ಎಂದು ಹತ್ತು ವರ್ಷದ ಬಾಲಕಿ ನುಜೂದ್ ಕಿರುಚುತ್ತಾ ಓಡಿ ಬಂದಾಗ ಇಡೀ ಕೋರ್ಟ್‌ಹಾಲ್ ದಂಗುಬಡಿದಿತ್ತು. ಆ ಪುಟ್ಟ ಮುದ್ದು ಹುಡುಗಿಯ ಕೂದಲು ಕೆದರಿದ್ದವು. ಕಣ್ಣಿನ ಗುಳಿಂಪು ನಿದ್ದೆಯಿಲ್ಲದೇ ಕಪ್ಪಾಗಿತ್ತು. ಯಾವುದೋ ಭಾರೀ ತೊಂದರೆಯಲ್ಲಿ ಆಕೆ ಸಿಲುಕಿಕೊಂಡಿದ್ದಾಳೆಂದು ಯಾರು ಬೇಕಾದರೂ ಹೇಳಬಹುದಿತ್ತು. ಆಕೆಯ ಕೂಗಿಗೆ ಎಲ್ಲರೂ ಅವಳತ್ತಲೇ ದಿಟ್ಟಿಸಿದರು. `ಯಾವ ನ್ಯಾಯಾಧೀಶರು ಬೇಕು? ಏನಾಗಬೇಕು? ನಿನ್ನ ಸಂಕಷ್ಟಗಳೇನು? ಯಾಕೆ ಕಿರುಚುತ್ತಿದ್ದೀಯಾ?’ ಎಂದು ಅಲ್ಲಿದ್ದ ಕೆಲವು ವಕೀಲರು ಆಕೆಯನ್ನು ಕೇಳಿದರು. ಅದಕ್ಕೆ ಆಕೆ `ನಾನು ನ್ಯಾಯಾಧೀಶರನ್ನು ಭೇಟಿ ಮಾಡಬೇಕು. ದಯವಿಟ್ಟು ಸಹಾಯ ಮಾಡಿ’ ಎಂದು ಹೇಳುತ್ತಾ ಅಳಲಾರಂಭಿಸಿದಳು. ಅಲ್ಲಿದ್ದವರೆಲ್ಲ ಕಕ್ಕಾಬಿಕ್ಕಿ. ಹತ್ತು ವರ್ಷದ ಬಾಲಕಿಗೆ ನ್ಯಾಯಾಧೀಶರನ್ನು ಭೇಟಿ ಮಾಡುವಂಥ ಜರೂರತ್ತೇನಿದೆ? ಅವಳ ಸಂಕಟವೇನೋ? ಏನೇ ಇರಲಿ, ನ್ಯಾಯಾಧೀಶರ ಬಳಿ ಕರೆದುಕೊಂಡು ಹೋದರು.

ಎಲ್ಲರ ಗಮನವೂ ಆ ಪುಟ್ಟ ಹುಡುಗಿಯ ಮೇಲೆ ಇತ್ತು. ನ್ಯಾಯಾಧೀಶರು ಪೀಠದಲ್ಲಿ ಆಸೀನರಾಗುತ್ತಿದ್ದಂತೆ ಇಡೀ ಹಾಲ್‌ನಲ್ಲಿ ಮೌನ. ನ್ಯಾಯಾಧೀಶರು `ಏನಮ್ಮಾ, ಏನು ಬೇಕು ನಿನಗೆ?’ ಎಂದು ಕೇಳಿದರು. ನುಜೂದ್ ಹೇಳಿದಳು- `ಡೈವೋರ್ಸ್!’ ನ್ಯಾಯಾಧೀಶರ ಬಾಯಿಂದ ಮಾತೇ ಹೊರಡಲಿಲ್ಲ. ಇಡೀ ಕೋರ್ಟ್ ಹಾಲ್ ಸ್ತಂಭೀಭೂತ. ಒಂದು ನಿಮಿಷ ಸಾವರಿಸಿಕೊಂಡ ನ್ಯಾಯಾಧೀಶರು, `ಏನು ಡೈವೋರ್ಸಾ?’ ಎಂದು ಕೇಳಿದ್ದಕ್ಕೆ ನುಜೂದ್ ಹೌದೆಂಬಂತೆ ತಲೆಯಾಡಿಸಿದಳು. ಅದಕ್ಕೆ ನ್ಯಾಯಾಧೀಶರು `ಹಾಗಂದ್ರೆ ನಿನಗೆ ಮದುವೆ ಆಗಿದೆ ಅಂದಂತಾಯಿತು’ ಎಂದರು ಅಚ್ಚರಿಯಿಂದ. ಆಗ ನುಜೂದ್ ಜೋರಾಗಿ ಅಳಲಾರಂಭಿಸಿದಳು. `ನನ್ನ ಮದುವೆಯಾಗಿ ಮೂರು ತಿಂಗಳಾಯಿತು. ನಾನು ನಾಲ್ಕನೇ ಕ್ಲಾಸಿನಲ್ಲಿ ಓದುತ್ತಿದ್ದೇನೆ. ಈ ಮದುವೆ ನನಗೆ ಇಷ್ಟವಿಲ್ಲ. ನನಗೆ ಡೈವೋರ್ಸ್ ಕೊಡಿಸಿ’ ಎಂದು ಗೋಳಿಡಲಾರಂಭಿಸಿದಳು.

ಕಲ್ಲವಿಲಗೊಂಡ ನ್ಯಾಯಾಧೀಶರು ಆಕೆಯನ್ನು ಸಂತೈಸಲು ಮುಂದಾದರು. ಆದರೆ ಅವರಿಗೆ ಕರ್ತವ್ಯಪ್ರಜ್ಞೆ ಕಟ್ಟಿಹಾಕಿತು. `ನಿನ್ನ ವಕೀಲರ ಜತೆ ಬಾ. ನಿನ್ನ ಸಂಕಷ್ಟಗಳನ್ನು ಅವರು ವಿವರಿಸಲಿ. ಆಗ ನಿನ್ನ ಸಮಸ್ಯೆಗಳಿಗೆ ಪರಿಹಾರ ಹುಡುಕೋಣ’ ಎಂದರು ನ್ಯಾಯಾಧೀಶರು.

ನುಜೂದ್ ಕುಟುಂಬದ ದೃಶ್ಯ: ಯಮನ್ ದೇಶದ ಸಾನಾ ಎಂಬ ನಗರದ ಕೊಳೆಗೇರಿಯಂಥ ಪ್ರದೇಶದಲ್ಲಿ ಅಲಿ ಮಹಮದ್ ಅಲ್ ಅಹ್ದೇಲ್ ಒಬ್ಬ ಬೇಜವಾಬ್ದಾರಿ ಮನುಷ್ಯನಿದ್ದ. ಅವನಿಗೆ ಒಂದು ನೌಕರಿಯಿತ್ತಾದರೂ ಸರಿಯಾಗಿ ಅದನ್ನು ಮಾಡದ್ದರಿಂದ ಕೆಲಸದಿಂದ ಕಿತ್ತು ಹಾಕಿದ್ದರು. ಮನೆಯಲ್ಲಿ ಸದಾ ಕುಡಿಯುವುದು, ತಿನ್ನುವುದೇ ಅವನ ಕೆಲಸ. ಆತ ಶೋಯಾ ಎಂಬುವವಳನ್ನು ಮದುವೆಯಾದಾಗ ಅವನಿಗೆ ಇಪ್ಪತ್ತೆಂಟು ವರ್ಷ. ಶೋಯಾಗೆ ಹದಿನಾರು ವರ್ಷ. ನಾಲ್ಕು ವರ್ಷಗಳ ಬಳಿಕ ಅಹ್ದೇಲ್ ಎರಡನೆಯ ಮದುವೆಯಾದ. ಮದುವೆಯಾದ ಹದಿನೆಂಟು ವರ್ಷಗಳಲ್ಲಿ ಶೋಯಾ ಹದಿನಾರು ಮಕ್ಕಳಿಗೆ ಜನ್ಮ ನೀಡಿದಳು! ಆ ಪೈಕಿ ಒಬ್ಬಳು ನುಜೂದ್. ಈ ಅವಧಿಯಲ್ಲಿ ಶೋಯಾಗೆ ಎರಡು ಸಲ ಗರ್ಭಪಾತವಾಯಿತು. ಒಂದು ಮಗು ಹುಟ್ಟುವಾಗಲೇ ಸತ್ತು ಹೋಯಿತು. ನುಜೂದ್ ಹುಟ್ಟಿದಾಗ ಮನೆಯಲ್ಲಿ ಅದೆಂಥ ಬಡತನವೆಂದರೆ ಅವಳ ತಾಯಿಗೆ ಎರಡು ಹೊತ್ತು ತಿನ್ನಲು ಗತಿಯಿರಲಿಲ್ಲ. ಶೀತದ ಹೊಡೆತಕ್ಕೆ ನುಜೂದ್ ನಡುಗುತ್ತಿದ್ದರೆ ತಂದೆ ಅಹ್ದೇಲ್ ಗಡಂಗಿನಲ್ಲಿ ಕುಳಿತು ಕುಡಿಯುತ್ತಿದ್ದ. ಕೊನೆಕೊನೆಗೆ ಆತನಿಗೆ ಮಾಡಲು ಬೇರೇನೂ ಕೆಲಸವಿಲ್ಲದೇ ಎಂಟು ಕುರಿ ಹಾಗೂ ನಾಲ್ಕು ದನ ಕರುಗಳನ್ನು ಮೇಯಿಸಿಕೊಂಡಿರುತ್ತಿದ್ದ. ಅವುಗಳ ಹಾಲು ಹಿಂಡಿ ಮಾರಿದ ಹಣದಿಂದ ಇಪ್ಪತ್ನಾಲ್ಕು ಮಂದಿಯ ಕುಟುಂಬ ಸಾಗಬೇಕಿತ್ತು ಅಂದ್ರೆ ಆ ಕುಟುಂಬದ ದಾರಿದ್ರ್ಯವೇನೆಂಬುದನ್ನು ಊಹಿಸಬಹುದು.

ಮಕ್ಕಳಿಗೆ ಏಳು ವರ್ಷ ತುಂಬಿದರೆ ಸಾಕು, ಅಹ್ದೇಲ್ ಅವರನ್ನೆಲ್ಲ ಕೆಲಸಕ್ಕೆ ಅಟ್ಟುತ್ತಿದ್ದ. ತನ್ನ ಮಕ್ಕಳನ್ನೇ ಜೀತಕ್ಕಿಟ್ಟುಕೊಂಡವರಂತೆ ಗೇಯಿಸುತ್ತಿದ್ದ. ಮಕ್ಕಳು ದುಡಿದು ಹಣ ಕೊಡದಿದ್ದರೆ ಬಡಿಯುತ್ತಿದ್ದ. ಶಾಲೆಗೆ ಹೋಗುವ ಮಾತಾಡಿದರೆ ಲತ್ತೆ ಗ್ಯಾರಂಟಿ. ಗಂಡನ ಕ್ರೌರ್ಯಕ್ಕೆ ಹೆಂಡತಿಯರಿಬ್ಬರು ಗುಮ್ಮನಗುಸುಕನಂತಿರುತ್ತಿದ್ದರು. ಇಬ್ಬರು ಹೆಣ್ಣುಮಕ್ಕಳ ಅಪಹರಣವಾದಾಗ ಅವರನ್ನು ಹುಡುಕುವ ಗೋಜಿಗೂ ಹೋಗದ ನಿರ್ದಯಿ ತಂದೆ ಆತ.

ಮದುವೆಯ ದೃಶ್ಯ: ಅಹ್ದೇಲ್‌ಗೆ ಅವನ ಮಕ್ಕಳೇ ಭಾರವಾಗಿದ್ದರು. ಒಂದು ದಿನವೂ ಆತ ಅವರನ್ನು ಪ್ರೀತಿ ಮಾಡಿದ್ದಿಲ್ಲ, ಅಪ್ಪಿ ಮುದ್ದಾಡಿದ್ದಿಲ್ಲ. ಅಂಥ ಮನೆಯಲ್ಲಿ ಬೆಳೆಯುವ ಮಕ್ಕಳು ಹೇಗಿದ್ದಾರು? ಆದರೆ ನುಜೂದ್ ಮಾತ್ರ ಭಿನ್ನವಾಗಿದ್ದಳು. ಆಕೆ ತಂದೆಯ ಕಣ್ತಪ್ಪಿಸಿ, ಕೆಲಸಕ್ಕೆ ಹೋಗುವ ನೆಪದಲ್ಲಿ ಸ್ಕೂಲ್‌ಗೆ ಹೋಗುತ್ತಿದ್ದಳು. ತಂದೆಯ ಎರಡನೆ ಹೆಂಡತಿ ಆಕೆ ಸ್ಕೂಲಿಗೆ ಹೋಗಲು ಪರೋಕ್ಷ ನೆರವಾಗಿದ್ದಳು. ಒಂದು ದಿನ ಅದು ಹೇಗೋ ಅಹ್ದೇಲ್‌ಗೆ ಈ ಸಂಗತಿ ಗೊತ್ತಾಯಿತು. ಆ ದಿನ ಅವಳನ್ನು ಆತ ಜೀವಸಹಿತ ಬಿಟ್ಟಿದ್ದೇ ದೊಡ್ಡದು. ಅಂದೇ ಅವನಿಗೆ ಅನಿಸಿತು ಇವಳನ್ನು ಮದುವೆ ಮಾಡಬೇಕು ಎಂದು. ಅದೇ ಸಮಯಕ್ಕೆ ಒಬ್ಬ ಬಂದ. ಅವನ ಹೆಸರು ಫೈಯಜ್ ಅಲಿ ತಾಮೆರ್. ಆತ ಮೋಟರ್‌ಸೈಕಲ್ ಇಟ್ಟುಕೊಂಡಿದ್ದ. ಅದರ ಮೇಲೆ ಪಾರ್ಸೆಲ್, ಪೊಟ್ಟಣಗಳನ್ನು ಇಟ್ಟುಕೊಂಡು ಮನೆಮನೆಗೆ ಬಟವಾಡೆ ಮಾಡುವ ಕೆಲಸ. ಆತನಿಗೆ ನುಜೂದ್‌ಗಿಂತ ಮೂರು ಪಟ್ಟು ಜಾಸ್ತಿ ವರ್ಷ. ಮೂವತ್ತರ ಹರೆಯದ ಹಲ್ಲುಗೊಗ್ಗ. ಆತ ಹುಡುಗಿಯನ್ನು ನೋಡಿದವನೇ ಮದುವೆಗೆ ಒಪ್ಪಿದ. ಯಮನ್ ದೇಶದ ಕಾನೂನಿನ ಪ್ರಕಾರ, ಒಂಬತ್ತು ವರ್ಷವಾದ ಬಳಿಕ ಹೆಣ್ಣು ಮಕ್ಕಳನ್ನು ಮದುವೆಯಾಗಬಹುದು. ಆದರೆ ಅವರ ಜತೆ ಲೈಂಗಿಕ ಸಂಬಂಧ ಹೊಂದುವಂತಿಲ್ಲ, ಆಕೆ ಋತುಮತಿಯಾಗುವ ತನಕ. ಆದರೆ ಈ ಫೈಯಜ್ ಅಲಿ ತಾಮೆರ್ ನುಜೂದ್‌ಳನ್ನು ಮದುವೆಯಾದ ದಿನವೇ ತನ್ನ ಲೈಂಗಿಕ ವಾಂಛೆಯನ್ನು ಪ್ರದರ್ಶಿಸಿದ. ಮದುವೆ, ಗಂಡ, ಸಂಸಾರ, ಸೆಕ್ಸ್ ಅಂದ್ರೆ ಎನೇನೂ ಗೊತ್ತಿಲ್ಲದ ಆಕೆಯ ಪಾಡು ಹೇಗಿದ್ದಿರಬಹುದು?

ಗಂಡನ ಮನೆಯ ದೃಶ್ಯ: ನುಜೂದ್‌ಗೆ ಗಂಡನೆಂದರೆ ಒಂಥರಾ ತಿರಸ್ಕಾರ. ಆತ ಕರೆದರೆ ಸಾಕು ಷಾಕ್ ಹೊಡೆದ ಅನುಭವ. ತಾನೇಕೆ ಅವನ ಜತೆಗಿರಬೇಕು ಎಂದು ಕೇಳಿದ ಪ್ರಶ್ನೆಗೇ ಉತ್ತರ ಸಿಕ್ಕಿರಲಿಲ್ಲ. ಈ ಮಧ್ಯೆ ತಾಮೆರ್ ರಾತ್ರಿಯಾಗುತ್ತಿದ್ದಂತೆ ನುಜೂದ್ ಮೇಲೆ ಎರಗುತ್ತಿದ್ದ. ಗಂಡನ ಕಾಮತೃಷೆ ಅರ್ಥವಾಗದೇ ಜೋರಾಗಿ ಕಿರುಚಿಕೊಂಡರೆ ಬಾಯಿಗೆ ಬಟ್ಟೆ ತುರುಕುತ್ತಿದ್ದ. ತಾನು ಹೇಳಿದಂತೆ ಕೇಳದಿದ್ದರೆ ಹೊಡೆಯುತ್ತಿದ್ದ. ಸಿಗರೇಟಿನ ತುದಿಯಿಂದ ಸುಡುತ್ತಿದ್ದ. ನುಜೂದ್ ರೌದ್ರಾವತಾರದಿಂದ ಕಿರುಚಿದರೆ ಅದನ್ನು ನೋಡಿ ಸಂಭ್ರಮಿಸುತ್ತಿದ್ದ. ಅತ್ತೆಯ ಕಾಟವೂ ಸಹಿಸಲು ಅಸಾಧ್ಯವಾಗಿತ್ತು. ಮಾತೆತ್ತಿದರೆ `ನಿನ್ನನ್ನು ನನ್ನ ಮಗ ಸುಮ್ಮನೆ ಮದುವೆಯಾಗಿಲ್ಲ, ನಿನ್ನ ಅಪ್ಪನಿಗೆ ಹಣಕೊಟ್ಟು ಮದುವೆಯಾಗಿದ್ದಾನೆ. ಆತ ಹೇಳಿದಂತೆ ಕೇಳದಿದ್ದರೆ ಬಡಿಯುತ್ತೇನೆ ‘. ಎಂದು ಗದರುತ್ತಿದ್ದಳು. ಮದವೆಯಾದ ಎರಡು ತಿಂಗಳೊಳಗೆ ನುಜೂದ್ ಮಾನಸಿಕವಾಗಿ ಜರ್ಝರಿತಳಾಗಿ ಹೋದಳು. ಈ ಅವಧಿಯಲ್ಲಿ ಹತ್ತಾರು ಬಾರಿ ಅತ್ಯಾಚಾರಕ್ಕೊಳಗಾದಳು. ಗಂಡನೆಂದರೆ ರಾಕ್ಷಸನ ಪ್ರತಿರೂಪ ಅವಳ ಕಣ್ಣೆದುರು ಧುತ್ತೆಂದು ಪ್ರತ್ಯಕ್ಷವಾಗಿ ಕುಂತಲ್ಲಿ ನಿಂತಲ್ಲಿ ಕಿಟಾರನೆ ಕಿರುಚುತ್ತಿದ್ದಳು. ರಾತ್ರಿಯಾಗುತ್ತಿದ್ದಂತೆ ಭಯ, ನಡುಕ. ಗಂಡ ಹತ್ತಿರ ಬಂದರೆ ಹಾವು ಸಮೀಪಿಸಿದ ಅನುಭವ.

ತವರಿನ ದೃಶ್ಯ: ತವರಿಗೆ ಬಂದು ತಾಯಿಯ ಮುಂದೆ ತನ್ನ ಗೋಳನ್ನೆಲ್ಲ ತೋಡಿಕೊಂಡರೆ, `ಅಪ್ಪನಿಗೆ ಗೊತ್ತಾದರೆ ನಿನಗೇ ಬಡಿಯುತ್ತಾನೆ. ಸಂಸಾರವೆಂದ ಮೇಲೆ ಗಂಡ ಹೇಳಿದಂತೆ ಕೇಳಬೇಕಾದುದು ಹೆಂಡತಿ ಕರ್ತವ್ಯ. ಮದುವೆ ಆರಂಭದಲ್ಲಿ ಇವೆಲ್ಲ ಸಾಮಾನ್ಯ. ಕ್ರಮೇಣ ಎಲ್ಲ ಸರಿಹೋಗುತ್ತದೆ. ಅಲ್ಲಿ ತನಕ ಗಂಡನ ಜತೆಗೆ ಹೊಂದಿಕೊಂಡು ಹೋಗಬೇಕು’ ಎಂದು ಮಗಳಿಗೇ ಬುದ್ಧಿಮಾತು ಹೇಳಿ ಕಳಿಸಿದಳು. ಗಂಡನ ಮನೆಗೆ ಹೋದರೆ ಅದೇ ಪೈಶಾಚಿಕ ವರ್ತನೆ. ತವರಿಗೆ ಬಂದರೆ ತಂದೆ-ತಾಯಿ ಬೆದರಿಕೆ.

ಒಂದು ಸಲ ಗಂಡನ ಮನೆಯಿಂದ ತವರಿಗೆ ಬಂದಾಗ, ಎರಡು ದಿನ ಸಹ ಆಗಿರಲಿಲ್ಲ, ತಂದೆ ಜಬರ್‌ದಸ್ತಿ ಮಾಡಿ ಮಗಳನ್ನು ಗಂಡನ ಮನೆ ತನಕ ಹೋಗಿ ಬಿಟ್ಟು ಬಂದಿದ್ದ. ಮದುವೆ ಮಾಡಿಕೊಟ್ಟ ಬಳಿಕ ತವರಿಗೇಕೆ ಬರುತ್ತೀಯಾ? ಎಂದು ಗದರಿದ್ದ. ಇನ್ನೊಂದು ಸಲ ಬಂದರೆ ಹುಷಾರ್ ಎಂದು ಗದರಿದ್ದ. ಕೊನೆಗೆ ಬೇರೆ ದಾರಿ ಕಾಣದೇ ನುಜೂದ್ ತನ್ನೆಲ್ಲ ತಾಪತ್ರಯಗಳ ಕಟ್ಟನ್ನು ತನ್ನ ಮಲತಾಯಿ (ಅಪ್ಪನ ಎರಡನೇ ಹೆಂಡತಿ) ಮುಂದೆ ಬಿಚ್ಚಿಟ್ಟಳು. ನುಜೂದ್ ಮೈಮೇಲೆ ಕಂಡ ಸುಟ್ಟ ಗಾಯ, ಬಾಸುಂಡೆ, ಕನ್ನೆತ್ತರಗಟ್ಟಿದ ಹುಬ್ಬುಗಳು, ಹರಿದಬಟ್ಟೆಯನ್ನು ನೋಡಿದ ಮಲ ತಾಯಿಗೆ ಆಕೆಯ ಪರಿಸ್ಥಿತಿ ಎಷ್ಟು ಗಂಭೀರವಾಗಿದೆಯೆಂಬುದು ಗೊತ್ತಾಯಿತು. ಗಂಡನ ಮನೆಯಿಂದ ಓಡಿ ಬರಲು ಸೂಚಿಸಿದಳು. ಹಾಗೆಂದು ತವರಿನಲ್ಲಿ ಇರುವಂತಿರಲಿಲ್ಲ. ಹತ್ತು ವರ್ಷದ ಬಾಲೆ ಎಲ್ಲಿಗೆ ಹೋದಾಳು?

ಆದರೆ ನುಜೂದ್ ಒಂದು ಗಟ್ಟಿ ನಿರ್ಧಾರಕ್ಕೆ ಬಂದಿದ್ದಳು. ಏನೇ ಆದರೂ ಗಂಡನ ಮನೆಗೆ ಪುನಃ ಹೋಗದಿರುವಂತೆ ತೀರ್‍ಮಾನಿಸಿದಳು. ಆದರೆ ಗಂಡ ಬಿಡಬೇಕಲ್ಲ. ನುಜೂದ್ ಹುಡುಕಿಕೊಂಡು ಬಂದ. ಬಿಲ್‌ಕುಲ್ ಬರುವುದಿಲ್ಲ ಎಂದು ಬಿಟ್ಟಳು. ಚೋಟುದ್ದ ಹುಡುಗಿ ತನಗೆ ತಿರುಗೇಟು ಕೊಡುವಷ್ಟರ ಮಟ್ಟಿಗೆ ಬೆಳೆದಳಾ ಎಂದ ಗಂಡ, ಹೆಂಡತಿಗೆ ಹೊಡೆಯಲು ಕೈಯೆತ್ತಿದ. ಅದೇ ಬಾಲೆ ಗಂಡನ ವಿರುದ್ಧ ತಿರುಗಿ ಬಿದ್ದಳು. ಹೆಂಡತಿಯ ಆಟಾಟೋಪಕ್ಕೆ ಆತ ಒಂದು ಕ್ಷಣ ಪೆಕರನಂತಾಗಿ ಹೋದ. ಬಲಾತ್ಕಾರವಾಗಿ ತನ್ನ ಮನೆಗೆ ಕೆರೆದೊಯ್ಯಲು ಪ್ರಯತ್ನಿಸಿದ. ಆ ಹೊತ್ತಿಗೆ ನುಜೂದ್ ಕಲ್ಲಿನಂತಾಗಿ ಹೋಗಿದ್ದಳು. ಗಂಡ ಅವಳಿಗಾಗಿ ಇನ್ನಿಲ್ಲದ ಪ್ರಯತ್ನ ಮಾಡಿ ಎಳೆದುಕೊಂಡು ಹೋಗಲು ಹುನ್ನಾರ ನಡೆಸಿದಾಗ…… ಆಕೆ ಡೈವೋರ್ಸ್ ಭಿಕ್ಷೆ ಬೇಡಿ ನ್ಯಾಯಾಧೀಶರ ಮುಂದೆ ನಿಂತಿದ್ದಳು!

ಕೋರ್ಟ್ ದೃಶ್ಯ: ನ್ಯಾಯಾಧೀಶರ ಕೋರಿಕೆಯಂತೆ ನುಜೂದ್ ವಕೀಲರ ಹುಡುಕಾಟದಲ್ಲಿದ್ದಾಗ ಆಕೆಗೆ ಆಕಸ್ಮಿಕವಾಗಿ ಸಿಕ್ಕವಳು ಶಾದಾನಸೀರ್. ಅಪ್ರಾಪ್ತವಯಸ್ಸಿನ ಹುಡುಗಿಯರು ವೃದ್ಧ ಶ್ರೀಮಂತರ ಕಾಮದಾಹಕ್ಕೆ ಬಲಿಯಾಗುವುದರ ವಿರುದ್ಧ ಕಾನೂನು ಸಮರ ನಡೆಸುತ್ತಿರುವ ದಿಟ್ಟ ಕಾನೂನು ಹೋರಾಟಗಾರ್ತಿ. ಡೈವೋರ್ಸ್ ಬಯಸಿ ಜಡ್ಜ್ ಮುಂದೆ ಅಂಗಲಾಚಿದ ನುಜೂದ್‌ಳ ದೈನೇಸಿ ಸ್ಥಿತಿ ಶಾದಾ ಗಮನಕ್ಕೆ ಬಂತು. ಅವಳು ತಕ್ಷಣ ನುಜೂದ್‌ಳನ್ನು ಸಂಪರ್ಕಿಸಿ ತಾನು ನಿನ್ನ ಪರವಾಗಿ ಕೋರ್ಟಿನಲ್ಲಿ ವಾದಿಸುವುದಾಗಿ ಹೇಳಿದಳು. ಈ ಹೊತ್ತಿಗೆ ನುಜೂದ್‌ಳಲ್ಲಿ ಅದೆಂಥ ದಿಟ್ಟತನ ಮನೆಮಾಡಿತ್ತೆಂದರೆ ತಾನು ಕೈಹಿಡಿದ ಗಂಡನ ವಿರುದ್ಧವೇ ಕಾನೂನು ಹೋರಾಟಕ್ಕೆ ನಿಂತಳು.

ಹೇಳಿಕೇಳಿ ಹತ್ತು ವರ್ಷದ, ಜಗತ್ತಿನ ಕ್ರೂರತನ, ಕರಾಮತ್ತು ಗೊತ್ತಿಲ್ಲದ ಬಾಲಕಿ! ಯೆಮೆನಿ ಕಾನೂನು ಪ್ರಕಾರ ಮದುವೆ ಆಗಿದ್ದರೂ, ಮೈನೆರೆಯುವ ಮುನ್ನವೇ ಅತ್ಯಾಚಾರಕ್ಕೊಳಗಾಗಿದ್ದಾಳೆ ಎಂದು ಶಾದಾ ವಾದಿಸಿದಳು. `ಋತುಮತಿಯಾದ ಬಳಿಕ ಗಂಡನ ಮನೆಗೆ ಹೋಗಬಹುದು, ಅಲ್ಲಿಯ ತನಕ ತವರಿನಲ್ಲಿರಬಹುದು’ ಎಂದು ನ್ಯಾಯಾಧೀಶರು ಸಮಾಧಾನಪಡಿಸಿದರೆ, `ಸಾಧ್ಯವೇ ಇಲ್ಲ. ನನಗೆ ಡೈವೋರ್ಸ್ ಬೇಕೇ ಬೇಕು’ ಎಂದು ಹಟ ಹಿಡಿದಳು. 2008ರ ಏಪ್ರಿಲ್ 15 ರಂದು, ಅಂದರೆ ಮದುವೆಯಾದ ಸುಮಾರು ಮೂರು ತಿಂಗಳ ಬಳಿಕ ನ್ಯಾಯಾಲಯ ಅವಳಿಗೆ ಡೈವೋರ್ಸ್ ನೀಡಿತು.

ಆನಂತರದ ದೃಶ್ಯಗಳು: ರಾತ್ರಿ ಬೇಳಗಾಗುವುದರೊಳಗೆ ನುಜೂದ್ ವಿಶ್ವದ ಗಮನಸೆಳೆದಳು. ನಿನ್ನ ಮುಂದಿನ ಹೆಜ್ಜೆಯೇನು ಎಂದು ಪತ್ರಕರ್ತರು ಕೇಳಿದಾಗ ನಾನು ಸ್ವಂತ ದುಡಿದು, ವಿದ್ಯಾಭ್ಯಾಸ ಮುಗಿಸಿ ಲಾಯರ್ ಆಗುತ್ತೇನೆ. ನನ್ನ ತಂದೆ-ತಾಯಿಯನ್ನು ಸಾಕುತ್ತೇನೆ’ ಎಂದಳು. ಆ ಕಂದಮ್ಮನ ಮಾತು, ಕೇಳಿ ಇಡೀ ವಿಶ್ವವೇ ನಿಬ್ಬೆರಗಾಯಿತು. ಯೆಮನ್‌ನಲ್ಲಿ ಆಚರಣೆಯಲ್ಲಿರುವ ಅಮಾನವೀಯ ಕಾನೂನಿನ ವಿರುದ್ಧ ವಿಶ್ವವ್ಯಾಪಿ ವ್ಯಾಪಕ ಟೀಕೆ ವ್ಯಕ್ತವಾಯಿತು. 2009ರ ಫೆಬ್ರವರಿಯಲ್ಲಿ ಅಲ್ಲಿನ ಪಾರ್ಲಿಮೆಂಟ್ ಸಭೆ ಸೇರಿ ವಿವಾಹಕಾಯ್ದೆಗೆ ತಿದ್ದುಪಡಿ ತಂದಿತು. ಹುಡುಗ-ಹುಡುಗಿಗೆ ಹದಿನೇಳು ತುಂಬಿದ ನಂತರವೇ ಮದುವೆಯಾಗತಕ್ಕದ್ದು ಎಂದು ಹೇಳಿತು. ತಾನು ಸಾಕಷ್ಟು ಆರ್ಥಿಕವಾಗಿ ಸಬಲನಾಗಿದ್ದೇನೆ ಎಂಬುದನ್ನು ಖಾತ್ರಿಪಡಿಸಿದ ನಂತರ ಎರಡನೇ ಮದುವೆಯಾಗಬಹುದು ಎಂಬ ಕಾನೂನು ಸಹ ಜಾರಿಗೆ ಬಂತು. ಒಬ್ಬ ನುಜೂದ್, ಅಫಘಾನಿಸ್ತಾನ, ಇರಾನ್, ಇರಾಕ್, ಈಜಿಪ್ತ್, ಪಾಕಿಸ್ತಾನ ಮುಂತಾದ ದೇಶಗಳಲ್ಲಿ ನುಜೂದ್‌ಳ ಹಾಗೆ ಬದುಕುತ್ತಿರುವ ಅಸಂಖ್ಯ ಹೆಣ್ಣು ಮಕ್ಕಳಿಗೆ ಆಶಾಕಿರಣವಾಗಿ ಗೋಚರಿಸಿದಳು. ನುಜೂದ್ ಪ್ರದರ್ಶಿಸಿದ ಅಸಾಧಾರಣ ಧೈರ್ಯ, ಸಾಹಸ ಹಾಗೂ ಹೋರಾಟ ಮನೋಭಾವ ಕಂಡು ಅದೇ ವರ್ಷದ (2008) ನವೆಂಬರ್‌ನಲ್ಲಿ ಅಮೆರಿಕದ `ಗ್ಲಾಮರ್ ‘ ಪತ್ರಿಕೆ `ವರ್ಷದ ಮಹಿಳೆ’ ಪ್ರಶಸ್ತಿ ನೀಡಿತು. ಸ್ವತಃ ಹಿಲರಿ ಕ್ಲಿಂಟನ್, ಕಾಂಡೊಲಿಸಾರೈಸ್ ಅವಳ ದಿಟ್ಟತನವನ್ನು ಕೊಂಡಾಡಿದರು. ನುಜೂದ್‌ಳ ವಿದ್ಯಾಭ್ಯಾಸಕ್ಕಾಗಿ ಜಗತ್ತಿನೆಲ್ಲೆಡೆಯಿಂದ ಹಣ ಹರಿದುಬಂತು.

ಸದ್ಯದ ದೃಶ್ಯ: ಗಂಡನಿಂದ ಎಲ್ಲ ಸಂಪರ್ಕ ಕಡಿದುಕೊಂಡ ನುಜೂದ್, ಆತ್ಮಕತೆ ಬರೆದಿದ್ದರಿಂದ ಬಂದ ಹಣದಿಂದ ಒಂದು ಅಪಾರ್ಟಮೆಂಟ್ ನಲ್ಲಿ ತನ್ನ ತಂದೆ-ತಾಯಿಯೊಂದಿಗೆ ನೆಮ್ಮದಿ ಬದುಕು ಸಾಗಿಸುತ್ತಿದ್ದಾಳೆ. ಅಣ್ಣ, ತಮ್ಮ, ಅಕ್ಕಂದಿರನ್ನೆಲ್ಲ ಓದಿಸುತ್ತಿದ್ದಾಳೆ. ತಾನೂ ಹೆಗಲಿಗೆ ಬ್ಯಾಗನ್ನೇರಿಸಿಕೊಂಡು ನಿತ್ಯ ಶಾಲೆಗೆ ಹೋಗುತ್ತಿದ್ದಾಳೆ. ದಿಟ್ಟೆ! ಕ್ಷಮಿಸಿ, ರಾಜ್ಯ ರಾಜಕೀಯಕ್ಕಿಂತ ಈಕೆಯ ಕತೆಯೇ ಹೆಚ್ಚು ಸ್ಫೂರ್ತಿ ನೀಡಬಹುದೆಂದು ಇವನ್ನೆಲ್ಲ ಬರೆಯಬೇಕಾಯಿತು.

ಜೆಆರ್‌ಡಿ ಪರಿಚಯ ಬೇಕೆಂದರೆ ಈ ಪತ್ರಗಳನ್ನು ಓದಿ

J R D Tata

ಎಲ್ಲರೂ ಓದುವ ಸಾಹಿತ್ಯ ಅಂದ್ರೆ ಪತ್ರ ಸಾಹಿತ್ಯ! ಯಾರೂ ಓದದ, ಪೂರ್ತಿ ಓದದ ಪುಸ್ತಕಗಳು ಸಿಗಬಹುದು, ಆದರೆ ಪತ್ರಗಳು ಮಾತ್ರ ಸಿಗಲಿಕ್ಕಿಲ್ಲ. ಪತ್ರವನ್ನು ಓದುವುದೆಂದರೆ ಎಲ್ಲರಿಗೂ ಅಷ್ಟೊಂದು ಇಷ್ಟ. ಈ ವಿಷಯದಲ್ಲಿ ಪ್ರತಿಯೊಬ್ಬರೂ Man of letters. ಅದರಲ್ಲೂ ಬೇರೆಯವರಿಗೆ ಬಂದ ಪತ್ರಗಳನ್ನು ಓದುವುದೆಂದರೆ ಬಲು ಇಷ್ಟ. ಅದು ಲವ್ ಲೆಟರ್‌ಗಳಾಗಿದ್ದರೆ ಇನ್ನೂ ಇಷ್ಟ. ಅಲ್ಲದೇ ಪತ್ರಗಳನ್ನು ಯಾರೂ ಅರ್ಧ ಓದಿ ನಿಲ್ಲಿಸುವುದಿಲ್ಲ. ಕೆಲವರು ಒಂದೆರಡು ಬಾರಿ, ಪುನಃ ಪುನಃ ಓದುವುದುಂಟು. ಪತ್ರಗಳ ಮಹಿಮೆ ಅಂಥದು. ನನ್ನ ಬಳಿ ಪತ್ರಗಳ ಕಟ್ಟು, ಇವನ್ನೆಲ್ಲ ಸಂಗ್ರಹಿಸಿ ಸಂಕಲನವಾಗಿ ಪ್ರಕಟಿಸಿದ ಪುಸ್ತಕಗಳಿವೆ. ಇತ್ತೀಚೆಗೆ ಅಮೆರಿಕದ ಅಧ್ಯಕ್ಷರು ಅಧಿಕಾರದಲ್ಲಿದ್ದಾಗ, ಬೇರೆ ಊರುಗಳಿಗೆ ಹೋದಾಗ ತಮ್ಮ ಪತ್ನಿಯರಿಗೆ ಬರೆದ ಪತ್ರಗಳನ್ನೆಲ್ಲ ಸಂಗ್ರಹಿಸಿ ಪುಸ್ತಕರೂಪದಲ್ಲಿ ಪ್ರಕಟಿಸಿದ್ದನ್ನು ಸ್ನೇಹಿತರೊಬ್ಬರು ಕಳಿಸಿಕೊಟ್ಟಿದ್ದರು.

ಗಂಡ-ಹೆಂಡತಿಗೆ, ಹೆಂಡತಿ-ಗಂಡನಿಗೆ ಬರೆದ ಪತ್ರಗಳೆಂದ ಮೇಲೆ ಅವು ಸ್ವಾರಸ್ಯವಾಗಿರಲೇಬೇಕು. ಈ ಪುಸ್ತಕವನ್ನು ಸಂಪಾದಿಸಿದ ಪುಣ್ಯಾತ್ಮ ಪತ್ರಗಳ ಅತ್ಯಂತ ಕುತೂಹಲದ ಭಾಗಗಳನ್ನೇ ಎಡಿಟ್ ಮಾಡಿ, ಕತ್ತರಿಸಿ `ಮಾನವಕುಲಕ್ಕೇ ದ್ರೋಹ’ ಎಂದು ಬಣ್ಣಿಸುವಂಥ ಅಪಚಾರ ಮಾಡಿದ್ದಾನೆಂಬುದು ನನ್ನ ಆರೋಪ. ಎಡಿಟ್ ಮಾಡದೇ ಹೋಗಿದ್ದರೆ ಇನ್ನೆಂಥ `ದ್ರೋಹ’ವಾಗುತ್ತಿತ್ತೋ ಗೊತ್ತಿಲ್ಲ. ಅಂತೂ ಆ ಪತ್ರಗಳ ಕಟ್ಟು ಸ್ವಾರಸ್ಯವಾಗಿದೆ. ಇತ್ತೀಚೆಗೆ ಟಾಟಾ ಕಂಪನಿಯ ಮಹಾನ್ ವ್ಯಕ್ತಿಗಳಲ್ಲೊಬ್ಬರಾದ ಜೆ.ಆರ್.ಡಿ. ಟಾಟಾ ಅವರ ಪತ್ರಗಳ ಸಂಕಲನವನ್ನು ಎರಡನೇ ಬಾರಿ (ಮರುಓದು) ಓದುತ್ತಿದ್ದೆ. ನಾಲ್ಕೈದು ವರ್ಷಗಳ ಹಿಂದೆ ಅವರ ಕೆಲವು ಪತ್ರಗಳನ್ನು ಪ್ರಸ್ತಾಪಿಸಿದ್ದೆ. ಈ ಸಲ ಮತ್ತಷ್ಟು ಪತ್ರಗಳು ಸಿಕ್ಕವು- ನಿಮಗೆ ಗೊತ್ತಿರಬಹುದು ಜೆಆರ್‌ಡಿ ಟಾಟಾ ಪ್ರತಿದಿನ ಕನಿಷ್ಠ 50 ಪತ್ರಗಳನ್ನಾದರೂ ಬರೆಯುತ್ತಿದ್ದರು. ಅವರಿಗೆ ಯಾರೇ ಬರೆದರೂ ಉತ್ತರಿಸದೇ ಹೋಗುತ್ತಿರಲಿಲ್ಲ. ಪತ್ರಗಳಿಂದ ಅದನ್ನು ಬರೆದ ವ್ಯಕ್ತಿ ಯಾರು, ಹೇಗೆ ಎಂಬುದನ್ನು ಅರಿಯಬಹುದು. ಜೆಆರ್‌ಡಿ ಹೇಗಿದ್ದರು? ಅವರ ಪತ್ರಗಳನ್ನೇ ಓದಿ, ಬೇರೆಯವರ ಪತ್ರಗಳನ್ನು ಓದುವುದು ಒಳ್ಳೆಯ ಅಭ್ಯಾಸ ಅಲ್ಲ ಎಂಬ ಸಂಗತಿ ಗೊತ್ತಿದ್ದರೂ!

***

ಜನ ಜೆಆರ್‌ಡಿ ಅವರಂಥ ವ್ಯಕ್ತಿಗಳು ಹೇಗೆ ನಡೆದುಕೊಳ್ಳಬೇಕು ಎಂದು ಬಯಸುತ್ತಾರೆ ಹಾಗೂ ಜೆಆರ್‌ಡಿ ಅಂಥವರು ಅಂಥ ಚಿಕ್ಕ ಅಪೇಕ್ಷೆ ಹಾಗೂ ಚಿಕ್ಕ ಸಂಗತಿಗಳಿಗೂ ಪ್ರತಿಕ್ರಿಯಿಸಿ ಹೇಗೆ ದೊಡ್ಡವರೆನಿಸಿಕೊಳ್ಳುತ್ತಾರೆ ಎಂಬುದಕ್ಕೆ ತಮ್ಮ ಆ ಕ್ಷಣದ ಸಿಟ್ಟಿಗೆ ತುತ್ತಾದ ಗಗನಸಖಿಯೊಬ್ಬರಿಗೆ ಅವರು ಕ್ಷಮೆ ಕೇಳಿದ ಘಟನೆಯೊಂದು ತಿಳಿಸಿ ಕೊಡುತ್ತದೆ. ಪತ್ರ ವ್ಯವಹಾರದಲ್ಲೇ ಬಿಚ್ಚಿಕೊಳ್ಳುವ ಆ ಘಟನೆಯನ್ನು ಓಲೆಯ ಒಕ್ಕಣೆಯಲ್ಲೇ ಸವಿದರೆ ಚೆಂದ.

ಗೌರವಾನ್ವಿತ ಟಾಟಾ ಅವರೇ,

ಈ ಪತ್ರದ ಮೂಲಕ ನಿಮಗೆ ಒಂದು ವಿವರಣೆಯನ್ನು ಕೊಡಲಿಕ್ಕಿದೆ ಹಾಗೂ ಕ್ಷಮೆಯನ್ನೂ ಕೇಳಬೇಕಿದೆ. ಮಾರ್ಚ್ 18ರ ಸೋಮವಾರ ಸಂಜೆ 8 ಗಂಟೆಯ ಸಮಯದಲ್ಲಿ ನಾನು ಸ್ಟರ್ಲಿಂಗ್ ರಸ್ತೆಯಿಂದ ಹೊರಬಿದ್ದು ಪೆದ್ದಾರ್ ರೋಡ್ ಕಡೆ ವಾಹನ ಚಲಾಯಿಸಿಕೊಂಡು ಹೋಗುತ್ತಿದ್ದೆ. ಉಲ್ಟಾ ತಿರುವು ಪಡೆದುಕೊಳ್ಳುವುದಕ್ಕೆ ಯಾವಾಗಲೂ ಎಡಬದಿ ಸಾಲಿನ ತುದಿಯಲ್ಲೇ ಇರುತ್ತಿದ್ದ ನಾನು ಆ ದಿನ ಹಾಗೆ ಮಾಡಲಿಕ್ಕೆ ಆಗದೇ ಹೋಯಿತು. ಆ ಸಂದರ್ಭದಲ್ಲಿ ಹಸಿರು ಸಿಗ್ನಲ್ ಬಿದ್ದೊಡನೆ ನನ್ನಿಂದಾಗಿ ಮುಂದೆ ಹೋಗಲಿಕ್ಕಾಗುತ್ತಿಲ್ಲ ಎಂದು ನಿಮ್ಮ ಕಾರಿನ ಚಾಲಕ ಅಸಹನೆ ವ್ಯಕ್ತಪಡಿಸಲು ಶುರು ಮಾಡಿದ. ಸುಮಾರು ಐದು ಸೆಕೆಂಡ್‌ಗಳ ನಿಮ್ಮ ಸಮಯ ಇದರಿಂದ ವ್ಯಯವಾಯಿತು. ಮನೆಗೆ ಹೋಗಲು ತಡವಾಗುತ್ತಿದೆ ಎಂಬ ಅಸಹನೆಯಿಂದಲೋ ಏನೋ ಆ ಅವಧಿಯಲ್ಲಿ ನೀವು ನಿಮ್ಮ ಕಾರಿನಿಂದ ಹೊರಗೆ ಮುಖ ಹಾಕಿ ಅಸಭ್ಯವಾಗಿ ಕೂಗಿದಿರಿ.

ತಪ್ಪು ಸಾಲಿನಲ್ಲಿ ನಿಂತು ನಿಮ್ಮ ಅಮೂಲ್ಯ ಐದು ಸೆಕೆಂಡ್‌ಗಳನ್ನು ವ್ಯಯಿಸಿದ ತಪ್ಪಿಗೆ ನಾನು ಕ್ಷಮೆಯಾಚಿಸುತ್ತೇನೆ. ಆದರೆ ಟಾಟಾ ಅವರೇ ಆ ಸಮಯದಲ್ಲಿ ನಿಮ್ಮಿಂದ ವ್ಯಕ್ತವಾದ ವರ್ತನೆ ಇದೆಯಲ್ಲ, ಅದು ನನ್ನನ್ನು ಸಿಟ್ಟಿಗೇಳಿಸಿತು ಅನ್ನುವುದಕ್ಕಿಂತ ಅಚ್ಚರಿಯ ಮಡುವಿಗೆ ತಳ್ಳಿತು. ಚಾಲಕನನ್ನು ಹೊಂದಿರುವ ಐಷಾರಾಮಿ ಕಾರಿನಲ್ಲಿ ಕುಳಿತ ನೀವೇ ಅಷ್ಟೊಂದು ರೊಚ್ಚಿಗೇಳುತ್ತೀರಿ ಎಂದಾದರೆ, ಮುಂಬೈನಂಥ ಕೆಟ್ಟ ಸಂಚಾರ ವ್ಯವಸ್ಥೆಯ ನಗರದಲ್ಲಿ ನೌಕರಿ ಮಾಡುವ ಗೃಹಿಣಿಯ ಪರಿಸ್ಥಿತಿ ಏನಿರಬಹುದು ಹಾಗೂ ಅಸಹನೆಯಲ್ಲಿ ಆಕೆಯಿಂದ ಆಗುವ ತಪ್ಪುಗಳು ಸಹಜವೇ ಆಗಿರುತ್ತವೆ ಎಂಬುದನ್ನು ನೀವು ಅರ್ಥ ಮಾಡಿಕೊಳ್ಳಬಲ್ಲಿರಿ.

ನಿಮ್ಮ ಕಾರಿಗೆ ಅಡ್ಡಿಯಾಗಿದ್ದಕ್ಕೆ ನಾನು ಖಂಡಿತ ಕ್ಷಮೆಯಾಚಿಸುತ್ತೇನಾದರೂ ನನ್ನ ಕಡೆಯಿಂದ ಈ ವಿವರಣೆಯನ್ನೂ ಮುಂದಿಡುತ್ತಿದ್ದೇನೆ. ನಿಮ್ಮಿಂದ ವ್ಯಕ್ತವಾದ ಸಹ್ಯವಲ್ಲದ ನಡವಳಿಕೆಗೆ ವಿಷಾದವಿದೆ. ಏಕೆಂದರೆ ನಿಮ್ಮನ್ನು ಯಾವತ್ತೂ ಒಬ್ಬ ಅತ್ಯಂತ ಸಭ್ಯಸ್ತ ಎಂದೇ ಭಾವಿಸಿಕೊಂಡು ಬಂದವಳು ನಾನು.

ಇತಿ, ಶ್ರೀಮತಿ ಆರ್. ಲಾಲ್ವಾನಿ

ಇದಕ್ಕೆ ಜೆಆರ್‌ಡಿ ಟಾಟಾ ಕೊಟ್ಟ ಉತ್ತರ ಹೀಗಿತ್ತು-
ಆತ್ಮೀಯ ಶ್ರೀಮತಿ ಲಾಲ್ವಾನಿ, ನಿಮ್ಮ ಪತ್ರ ತಲುಪುತ್ತಲೇ ನನ್ನಲ್ಲಿ ಆಶ್ಚರ್ಯ ಹಾಗೂ ಪಶ್ಚಾತ್ತಾಪಗಳು ಒಮ್ಮೆಗೇ ಹುಟ್ಟಿದವು. ನನಗೆ ಇದನ್ನು ಬರೆಯುವ ಶ್ರಮ ತೆಗೆದುಕೊಂಡ ನಿಮ್ಮನ್ನು ಅಭಿನಂದಿಸುತ್ತೇನೆ. ನಾನು ಈಗಷ್ಟೇ ವಿದೇಶದಿಂದ ಹಿಂತಿರುಗಿದ್ದರಿಂದ ಹಾಗೂ ಅದುವರೆಗೂ ನಿಮ್ಮ ಪತ್ರ ನನ್ನ ಮನೆಯಲ್ಲಿ ವಾರಗಟ್ಟಲೇ ಹಾಗೆ ತೆರೆಯದ ಸ್ಥಿತಿಯಲ್ಲಿ ಇದ್ದಿದ್ದರಿಂದ ಉತ್ತರಿಸಲು ತಡವಾಗುತ್ತಿರುವುದಕ್ಕೆ ವಿಷಾದಿಸುತ್ತೇನೆ.

ನನಗೆ ಆಶ್ಚರ್‍ಯವಾಗಿದ್ದೇಕೆಂದರೆ ನೀವು ವಿವರಿಸಿದ ಘಟನೆ ನನಗೆ ನೆನಪಿನಲ್ಲಿಲ್ಲ. ಪಶ್ಚಾತ್ತಾಪ ಏಕೆಂದರೆ ನೀವು ಹೇಳಿರುವ ಪ್ರಕಾರ ನಾನು ಹಾಗೆ ಅಸಭ್ಯವಾಗಿ ಕೂಗಿಕೊಂಡಿದ್ದೆ ಎನ್ನುವುದಕ್ಕೆ. ಮಹಿಳೆಯರ ಬಗ್ಗೆ ನಾನು ರಜಪೂತರು ಹೊಂದಿದ್ದಂಥ ಅಭಿಮಾನಪೂರ್ವಕ ಗೌರವವನ್ನು ಹೊಂದಿರುವವನು. ಅಂಥದ್ದರಲ್ಲಿ ಅದ್ಯಾಕೆ ಒಬ್ಬರ ವಿಷಯದಲ್ಲಿ ಹಾಗೆ ಸಭ್ಯತೆಯಿಲ್ಲದೇ ನಡೆದುಕೊಳ್ಳಬೇಕಾದ ಪರಿಸ್ಥಿತಿ ಬಂತು ಎಂದು ಅರ್ಥವಾಗುತ್ತಿಲ್ಲ. ಅದೇನೇ ಪ್ರಚೋದನೆ ಉಂಟಾಗಿದ್ದರೂ ಆ ವರ್ತನೆ ಸಮರ್ಥನೀಯವಲ್ಲ. ಈಗ ನಾನು ಮಾಡಬಹುದ್ದಾಗಿದ್ದೇನೆಂದರೆ ನಿಮಗೆ ನನ್ನ ತಪ್ಪೊಪ್ಪಿಗೆ ತಿಳಿಸುತ್ತ ಕ್ಷಮೆಯಾಚಿಸುವುದು. ಇದರೊಂದಿಗೆ ಕಳುಹಿಸಿಕೊಡುತ್ತಿರುವ ಹೂಗುಚ್ಛವನ್ನು ಸ್ವೀಕರಿಸಿ ನೀವು ನನ್ನನ್ನು ಮನ್ನಿಸುತ್ತೀರಿ ಹಾಗೂ ಈ ಘಟನೆಗೂ ಮೊದಲು ನನ್ನ ವಿಷಯದಲ್ಲಿ ಯಾವ ಭಾವನೆ ಹೊಂದಿದ್ದಿರೋ ಅದನ್ನೇ ಇಟ್ಟುಕೊಳ್ಳುತ್ತೀರಿ ಎಂದು ಭಾವಿಸುತ್ತೇನೆ.

ನಿಮ್ಮ ವಿಶ್ವಾಸಿ,
ಜೆಆರ್‌ಡಿ ಟಾಟಾ

***

ಜೆಆರ್‌ಡಿಯವರು ಜಿ.ಡಿ. ಬಿರ್ಲಾ ಅವರಿಗೆ ಬರೆದ ತುಂಬ ಚಿಕ್ಕ ಪತ್ರವೊಂದು ಆತ್ಮೀಯತೆಯ ದೊಡ್ಡ ಅಧ್ಯಾಯವೊಂದನ್ನೇ ನಮ್ಮೆದುರು ತೆರೆದಿಟ್ಟಂತೆ ಭಾಸವಾಗುತ್ತದೆ. ಓದಿ.

ನನ್ನ ಪ್ರೀತಿಯ ಘನಶ್ಯಾಮದಾಸ್,
ನನಗೊಂದು ಲೇಖನ ಕಳುಹಿಸಿಕೊಟ್ಟಿದ್ದಕ್ಕಾಗಿ ಧನ್ಯವಾದ. ಅದನ್ನು ತುಂಬ ಆಸಕ್ತಿಯಿಂದ ಓದಿಕೊಂಡು ಹಿಂತಿರುಗಿಸುತ್ತಿದ್ದೇನೆ. ನಾನು ನಿಕೋಟಿನ್ ಬಿಟ್ಟಾಗಿದೆ. ಕಾಫಿ ಇಲ್ಲವೇ ಮದ್ಯವನ್ನು ಸೇವಿಸುವುದೂ ತುಂಬ ಅಪರೂಪ. ಬೇರೆಯವರು ಹೇಳುವ ಪ್ರಕಾರ ನಾನು ಮಾಂಸವನ್ನೂ ತ್ಯಜಿಸಬೇಕು. ಆದರೆ ನಾನು ಬಿಡಬೇಕು ಎಂದುಕೊಳ್ಳುವುದು ಕೆಲಸವನ್ನು!…
ನಿಮ್ಮ ವಿಶ್ವಾಸಿ,
ಜೇ

ಟಾಟಾ ಅವರ ಮತ್ತೊಂದಿಷ್ಟು ಪತ್ರಗಳ ನಮೂನೆ

J R D Tata

ಆಗಿನ ಬಾಂಬೆಯಿಂದ ಪ್ರಕಟಗೊಳ್ಳುತ್ತಿದ್ದ `ಕರೆಂಟ್’ ವಾರಪತ್ರಿಕೆಯ ಸಂಪಾದಕ ಡಿ.ಎಫ್. ಕಾರಕರಿಗೆ ಬರೆದ ಪತ್ರದಲ್ಲಿ ಭಾಷೆಗೆ ಸಂಬಂಧಿಸಿದಂತೆ ಕಾಯ್ದುಕೊಳ್ಳಬೇಕಾದ ಸಭ್ಯತೆಯ ಬಗ್ಗೆ ಟಾಟಾ ಅವರಿಗಿದ್ದ ಕಾಳಜಿ ವ್ಯಕ್ತವಾಗಿದೆ.

ಪ್ರಿಯ ದೊಸೋ,
`ನೌ ಲೆಟ್ ದೆಮ್ ಡೈ’ ಎಂಬ ಶೀರ್ಷಿಕೆ ಅಡಿ ಪ್ರಕಟವಾದ ಕರೆಂಟ್ ನಿಯತಕಾಲಿಕದ ಅಗ್ರ ಲೇಖನವನ್ನು ಓದಿ ನನಗೆ ಖೇದವುಂಟಾಯಿತು. ಬೇಸರವಾಗಿದ್ದು ನೀವು ಭಾರತ ಸರಕಾರದ ಆಹಾರ ನೀತಿಯನ್ನು ಟೀಕೆ ಮಾಡಿರುವುದಕ್ಕಲ್ಲ, ಬದಲಿಗೆ ಜವಹಾರ್‌ಲಾಲ್ ನೆಹರು ಅವರ ಬಗ್ಗೆ ನೀವು ಉಪಯೋಗಿಸಿದ ಭಾಷೆಯಿಂದ. ಪ್ರಜಾಪ್ರಭುತ್ವದಲ್ಲಿ ಸರಕಾರದ ನೀತಿಗಳ ವಿರುದ್ಧ ಅಭಿಪ್ರಾಯ ವ್ಯಕ್ತಪಡಿಸುವ ಸ್ವಾತಂತ್ರ್ಯ ಪತ್ರಿಕೆಗಳಿಗೆ ಇರುವುದು ಹೌದಾದರೂ ಅದನ್ನೇ ಸಭ್ಯ ಭಾಷೆಯಲ್ಲಿ, ವೈಯಕ್ತಿಕ ನಿಂದನೆಗಿಳಿಯದೇ ಮಾಡುವುದಕ್ಕೆ ಅಡ್ಡಿ ಏನಿದೆ…
ನಿಮ್ಮ ವಿಶ್ವಾಸಿ
ಜೇ

***

`ಬ್ಲಿಟ್ಜ್’ ಪತ್ರಿಕೆಯ ಸಂಪಾದಕ ರುಸ್ಸಿ ಕರಂಜಿಯಾ ಯಾವತ್ತೂ ಟಾಟಾ ವಿರುದ್ಧ ಕಟುವಾಗಿಯೇ ಬರೆದುಕೊಂಡು ಬಂದವರು. ಯಾವುದೋ ಹಂತದಲ್ಲಿ ರುಸ್ಸಿಗೆ ಕದನಕ್ಕೆ ಟಾಟಾ ಹೇಳಿ ಸ್ನೇಹ ಮಾಡಿಕೊಳ್ಳುವ ಬಯಕೆ ಬಂತೆನಿಸುತ್ತದೆ. ಅದಕ್ಕಾಗಿ ಟಾಟಾ ಅವರೊಂದಿಗೆ ಭೇಟಿ ಬಯಸಿ ಪತ್ರ ಬರೆದರು. ಅದನ್ನು ಟಾಟಾ ಸುಮ್ಮನೇ ಬದಿಗಿಡಲೂ ಇಲ್ಲ, ಹಾಗಂತ ರುಸ್ಸಿ ಆಸೆಗೆ ನೀರೆರೆಯಲೂ ಇಲ್ಲ. ಪ್ರತಿಕ್ರಿಯೆಯನ್ನಂತೂ ನೀಡಿದರು. ಟಾಟಾ ಅವರ ಖಡಕ್‌ತನದ ಝಲಕ್ ಆ ಮರು ಉತ್ತರದ ಪತ್ರದಲ್ಲಿ ಜಾಹೀರಾಗಿದೆ.

ಪ್ರೀತಿಯ ರುಸ್ಸಿ,
ಜುಲೈ 28ರ ಪತ್ರಕ್ಕೆ ಧನ್ಯವಾದ. ನಮ್ಮ ಹಳೆಯ ಬಾಂಧವ್ಯವನ್ನು ಮತ್ತೆ ಸ್ಥಾಪಿಸಿಕೊಳ್ಳೋಣ ಎಂದು ನೀವು ಹೇಳಿರುವುದೇನೋ ಚೆನ್ನಾಗಿದೆಯಾದರೂ ನಮ್ಮಿಬ್ಬರ ಭೇಟಿ ಯಾವ ಉದ್ದೇಶವನ್ನು ಈಡೇರಿಸಲಿದೆ ಎಂಬುದು ನನಗರ್ಥವಾಗುತ್ತಿಲ್ಲ. ನಾವಿಬ್ಬರೂ ನಂಬುವ ಸಂಗತಿಗಳು ಹಾಗೂ ಜೀವನದ ಆದ್ಯತೆಗಳ ವಿಷಯದಲ್ಲಿ ಇಬ್ಬರ ನಡುವೆ ಅದೆಂಥ ಕಂದಕ ಇದೆ ಎಂದರೆ `ಮನಸುಗಳ ಬೆಸುಗೆ’ ಇಲ್ಲಿ ಸಾಧ್ಯವೇ ಇಲ್ಲ. ಕಮ್ಯುನಿಸ್ಟ್ ತತ್ತ್ವವನ್ನು ಬೆಂಬಲಿಸುತ್ತಲೇ ಪ್ರಜಾಪ್ರಭುತ್ವದ ಆದರ್ಶಗಳನ್ನು ಕಾಪಾಡುವ ಬಗೆಗಿನ ನಿಮ್ಮ ರೀತಿ ರಿವಾಜುಗಳು ನಿಮಗೆ ಹಾಗೂ ನಿಮ್ಮ ಅಂತಃಸಾಕ್ಷಿಗೆ ಬಿಟ್ಟ ವಿಚಾರ. ಪ್ರಕಾಶಕ ಹಾಗೂ ಸಂಪಾದಕರಾಗಿ ನಿಮ್ಮ ಜವಾಬ್ದಾರಿ ಹಾಗೂ ರೂಢಿಸಿಕೊಂಡಿರುವ ಮೌಲ್ಯಗಳೂ ನಿಮಗೆ ಬಿಟ್ಟಿದ್ದು. ಇವೆಲ್ಲ ವಿಷಯಗಳ ಬಗ್ಗೆ ನನಗೆ ನನ್ನದೇ ಆದ ಅಭಿಪ್ರಾಯಗಳಿವೆ ಹಾಗೂ ನನ್ನನ್ನು ಭೇಟಿ ಮಾಡಿ ಇದನ್ನೆಲ್ಲ ಬದಲಿಸುವ ನಿರೀಕ್ಷೆ ನಿಮಗೆ ಬೇಡ.

ನನಗಂತೂ ನಿಮ್ಮ ಅಭಿಪ್ರಾಯಗಳನ್ನು ಬದಲಿಸುವ ಅಪೇಕ್ಷೆಯೂ ಇಲ್ಲ, ಆ ಬಗ್ಗೆ ಯಾವ ಪ್ರಯತ್ನಕ್ಕೂ ಇಳಿಯುವುದಿಲ್ಲ. ಹೀಗಾಗಿ ನಾವಿಬ್ಬರು ಪರಸ್ಪರರ ಸಮಯವನ್ನು ವ್ಯರ್ಥ ಮಾಡಿದಂತಾಗುತ್ತದೆ ಅಷ್ಟೆ. ಬದುಕು ಚಿಕ್ಕದು ಹಾಗೂ ದುಸ್ತರ ಸಹ. ವ್ಯಕ್ತಿಗಳು, ಜನರ ನಡುವೆ ಈಗಾಗಲೇ ಸಾಕಷ್ಟು ಆತಂಕದ ವಾತಾವರಣ ಮನೆ ಮಾಡಿದೆ. ಅದನ್ನು ಇನ್ನಷ್ಟು ಹೆಚ್ಚು ಮಾಡುವ ಸಂದರ್ಭವನ್ನು ಸೃಷ್ಟಿಸುವ ಅಗತ್ಯವಿಲ್ಲ…
ನಿಮ್ಮ ವಿಶ್ವಾಸಿ,
ಜೇ

***

ಜೆಆರ್‌ಡಿ ಟಾಟಾ ಅವರಂತೆ ಯಶಸ್ವಿ ಕೈಗಾರಿಕೋದ್ಯಮಿ ಆಗಬೇಕು ಎಂದು ಕನಸು ಕಾಣುವವರಿಗೆ ಬರವೇ? ಜೆಆರ್‌ಡಿಯವರನ್ನು ಮಾದರಿಯಾಗಿಟ್ಟುಕೊಳ್ಳುವ ಯುವಕರು ಅವರೆದುರು ತಮ್ಮ ಆಸೆಯನ್ನು ಹರವಿಡಬೇಕು ಎಂದೂ ಬಯಸುತ್ತಿದ್ದರು. ಕಾಲೇಜು ಹುಡುಗನೊಬ್ಬ ಇಂತದೇ ಬಯಕೆಯಲ್ಲಿ ಟಾಟಾ ಅವರಿಗೆ ಪತ್ರ ಬರೆಯುತ್ತಾನೆ. ಹೇಗೆಂದರೂ ಅದು ಕಸದ ಬುಟ್ಟಿಗೆ ಸೇರುವ ಸಾಧ್ಯತೆಯೇ ಹೆಚ್ಚು ಎಂದುಕೊಂಡಿದ್ದವನಿಗೆ ಜೆಆರ್‌ಡಿ ಅವರಿಂದ ಸಿಕ್ಕ ಮಾರುತ್ತರ ಹೇಗಿದೆ ಓದಿ.

ಪ್ರಿಯ ಪ್ರವೀಣ್ ದಯಾಳ್,
ಏಪ್ರಿಲ್ 28ರ ನಿಮ್ಮ ಪತ್ರಕ್ಕೆ ಧನ್ಯವಾದ. ನಾನೀಗ ನೀಡುತ್ತಿರುವ ಪ್ರತಿಕ್ರಿಯೆಯಿಂದ- ನಿಮ್ಮ ಪತ್ರ ಕಸದ ಬುಟ್ಟಿ ಸೇರಬಹುದು, ನೋವುಣ್ಣಬೇಕಾದ ಪ್ರಮೇಯ ಬರಬಹುದು ಹಾಗೂ ನನ್ನಂಥ ಕೈಗಾರಿಕೋದ್ಯಮಿಗೆ ನಿಮಗೆ ಪ್ರತಿಕ್ರಿಯಿಸಲು ಸಮಯವಿರುವುದಿಲ್ಲ ಎಂಬ ನಿಮ್ಮ ಕಲ್ಪನೆಗಳೆಲ್ಲ ಸುಳ್ಳಾಗಿವೆ!

ಕೈಗಾರಿಕೋದ್ಯಮಿ ಆಗುವುದು ಖಚಿತ ಎಂದು ನಿರ್ಧರಿಸಿರುವ ನೀವು ನನ್ನ ಸಲಹೆ ಅಪೇಕ್ಷಿಸಿರುವುದು ತಿಳಿಯಿತು. ಬದುಕಿನ ಪ್ರಾರಂಭಿಕ ಹಂತದ ವಯೋಮಾನದಲ್ಲಿರುವ ನಿಮಗೆ ಈಗ ತಕ್ಷಣಕ್ಕೆ ನಾನು ನೀಡಬಹುದಾದ ಸಲಹೆ ಎಂದರೆ, ಮುಂದಿನ ನಿಮ್ಮ ಕೈಗಾರಿಕಾ ವೃತ್ತಿಗೆ ಸಹಾಯವಾಗುವ ನಿಟ್ಟಿನಲ್ಲಿ ಕಾಲೇಜು ವಿದ್ಯಾಭ್ಯಾಸವನ್ನು ಸಮರ್ಪಕವಾಗಿ ಮಾಡಿ. ಗಣಿತ ಹಾಗೂ ತಾಂತ್ರಿಕ ವಿಷಯಗಳಲ್ಲಿ ನಿಮಗೆ ಆಸಕ್ತಿ ಇದೆ ಎಂದಾದರೆ ನೀವು ಎಂಜಿನಿಯರ್ ಆಗಿ ಎಂದು ನಾನು ಸಲಹೆ ನೀಡುತ್ತೇನೆ. ಅದಿಲ್ಲದಿದ್ದರೆ ಬಿ.ಕಾಂ. ಇಲ್ಲವೇ ಕಾನೂನು ಪದವಿ ಪಡೆದುಕೊಳ್ಳಿ. ಇದರಲ್ಲಿ ಯಾವುದನ್ನೇ ಆಯ್ದುಕೊಂಡರೂ ಭವಿಷ್ಯದಲ್ಲಿ ಸಹಕಾರಿಯಾಗುತ್ತದೆ. ನಿಮ್ಮ ತಂದೆ ಕಂಪನಿ ಕಾರ್‍ಯಾಧಿಕಾರಿ ಎಂದು ತಿಳಿಸಿರುವಿರಿ. ಹಾಗಿರುವಾಗ ಸಲಹೆ ನೀಡುವುದಕ್ಕೆ ಯಾರೂ ಇಲ್ಲ ಎಂದು ನೀವೇಕೆ ಬೇಜಾರು ಮಾಡಿಕೊಳ್ಳುತ್ತಿದ್ದೀರಿ ಎಂಬುದೇ ಅರ್ಥವಾಗುತ್ತಿಲ್ಲ. ಈ ವಿಷಯದಲ್ಲಿ ನಿಮ್ಮ ತಂದೆಯ ಸಲಹೆಯನ್ನೂ ಪಡೆಯಿರಿ.

ಕೊನೆಯದಾಗಿ, ನಿಮ್ಮ ಭವಿಷ್ಯಕ್ಕೆ ತುಂಬಾ ನಿರ್ಣಾಯಕವಾಗಿರುವ ಇಂಗ್ಲಿಷ್ ಭಾಷೆ ಕುರಿತಾದ ನಿಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಿ. ನೀವು ಏನನ್ನೇ ಮಾಡುವುದಿದ್ದರೂ ಅದರಲ್ಲಿ ಸಂಕ್ಷಿಪ್ತತೆ ಹಾಗೂ ನಿಯಮ ಬದ್ಧತೆ ರೂಢಿಸಿಕೊಳ್ಳಲು ಪ್ರಯತ್ನಿಸಿ. ಈ ವಿಷಯದಲ್ಲಿ ನೀವು ಪಳಗಬೇಕಿದೆ ಎಂಬುದನ್ನು ನಿಮ್ಮ ಪತ್ರವೇ ತಿಳಿಸುತ್ತದೆ. ಉದಾಹರಣೆಗೆ, ನಾನು ನಿಮ್ಮ ಪತ್ರವನ್ನು ಏಪ್ರಿಲ್ 22ರಂದೇ ಪಡೆದೆನಾದರೂ ಅದರ ಮೇಲೆ ಏಪ್ರಿಲ್ 28ರ ದಿನಾಂಕವಿತ್ತು!
ನಿಮ್ಮ ಯಶಸ್ವಿ ವೃತ್ತಿಗೆ ಶುಭ ಹಾರೈಸುತ್ತ,
ನಿಮ್ಮ ವಿಶ್ವಾಸಿ,
ಜೆ. ಆರ್. ಡಿ. ಟಾಟಾ

ಆಗಿನ ಬಾಂಬೆಯಿಂದ ಪ್ರಕಟಗೊಳ್ಳುತ್ತಿದ್ದ `ಕರೆಂಟ್’ ವಾರಪತ್ರಿಕೆಯ ಸಂಪಾದಕ ಡಿ.ಎಫ್. ಕಾರಕರಿಗೆ ಬರೆದ ಪತ್ರದಲ್ಲಿ ಭಾಷೆಗೆ ಸಂಬಂಧಿಸಿದಂತೆ ಕಾಯ್ದುಕೊಳ್ಳಬೇಕಾದ ಸಭ್ಯತೆಯ ಬಗ್ಗೆ ಟಾಟಾ ಅವರಿಗಿದ್ದ ಕಾಳಜಿ ವ್ಯಕ್ತವಾಗಿದೆ.

ಪ್ರಿಯ ದೊಸೋ,
`ನೌ ಲೆಟ್ ದೆಮ್ ಡೈ’ ಎಂಬ ಶೀರ್ಷಿಕೆ ಅಡಿ ಪ್ರಕಟವಾದ ಕರೆಂಟ್ ನಿಯತಕಾಲಿಕದ ಅಗ್ರ ಲೇಖನವನ್ನು ಓದಿ ನನಗೆ ಖೇದವುಂಟಾಯಿತು. ಬೇಸರವಾಗಿದ್ದು ನೀವು ಭಾರತ ಸರಕಾರದ ಆಹಾರ ನೀತಿಯನ್ನು ಟೀಕೆ ಮಾಡಿರುವುದಕ್ಕಲ್ಲ, ಬದಲಿಗೆ ಜವಹಾರ್‌ಲಾಲ್ ನೆಹರು ಅವರ ಬಗ್ಗೆ ನೀವು ಉಪಯೋಗಿಸಿದ ಭಾಷೆಯಿಂದ. ಪ್ರಜಾಪ್ರಭುತ್ವದಲ್ಲಿ ಸರಕಾರದ ನೀತಿಗಳ ವಿರುದ್ಧ ಅಭಿಪ್ರಾಯ ವ್ಯಕ್ತಪಡಿಸುವ ಸ್ವಾತಂತ್ರ್ಯ ಪತ್ರಿಕೆಗಳಿಗೆ ಇರುವುದು ಹೌದಾದರೂ ಅದನ್ನೇ ಸಭ್ಯ ಭಾಷೆಯಲ್ಲಿ, ವೈಯಕ್ತಿಕ ನಿಂದನೆಗಿಳಿಯದೇ ಮಾಡುವುದಕ್ಕೆ ಅಡ್ಡಿ ಏನಿದೆ…
ನಿಮ್ಮ ವಿಶ್ವಾಸಿ
ಜೇ

***

`ಬ್ಲಿಟ್ಜ್’ ಪತ್ರಿಕೆಯ ಸಂಪಾದಕ ರುಸ್ಸಿ ಕರಂಜಿಯಾ ಯಾವತ್ತೂ ಟಾಟಾ ವಿರುದ್ಧ ಕಟುವಾಗಿಯೇ ಬರೆದುಕೊಂಡು ಬಂದವರು. ಯಾವುದೋ ಹಂತದಲ್ಲಿ ರುಸ್ಸಿಗೆ ಕದನಕ್ಕೆ ಟಾಟಾ ಹೇಳಿ ಸ್ನೇಹ ಮಾಡಿಕೊಳ್ಳುವ ಬಯಕೆ ಬಂತೆನಿಸುತ್ತದೆ. ಅದಕ್ಕಾಗಿ ಟಾಟಾ ಅವರೊಂದಿಗೆ ಭೇಟಿ ಬಯಸಿ ಪತ್ರ ಬರೆದರು. ಅದನ್ನು ಟಾಟಾ ಸುಮ್ಮನೇ ಬದಿಗಿಡಲೂ ಇಲ್ಲ, ಹಾಗಂತ ರುಸ್ಸಿ ಆಸೆಗೆ ನೀರೆರೆಯಲೂ ಇಲ್ಲ. ಪ್ರತಿಕ್ರಿಯೆಯನ್ನಂತೂ ನೀಡಿದರು. ಟಾಟಾ ಅವರ ಖಡಕ್‌ತನದ ಝಲಕ್ ಆ ಮರು ಉತ್ತರದ ಪತ್ರದಲ್ಲಿ ಜಾಹೀರಾಗಿದೆ.

ಪ್ರೀತಿಯ ರುಸ್ಸಿ,
ಜುಲೈ 28ರ ಪತ್ರಕ್ಕೆ ಧನ್ಯವಾದ. ನಮ್ಮ ಹಳೆಯ ಬಾಂಧವ್ಯವನ್ನು ಮತ್ತೆ ಸ್ಥಾಪಿಸಿಕೊಳ್ಳೋಣ ಎಂದು ನೀವು ಹೇಳಿರುವುದೇನೋ ಚೆನ್ನಾಗಿದೆಯಾದರೂ ನಮ್ಮಿಬ್ಬರ ಭೇಟಿ ಯಾವ ಉದ್ದೇಶವನ್ನು ಈಡೇರಿಸಲಿದೆ ಎಂಬುದು ನನಗರ್ಥವಾಗುತ್ತಿಲ್ಲ. ನಾವಿಬ್ಬರೂ ನಂಬುವ ಸಂಗತಿಗಳು ಹಾಗೂ ಜೀವನದ ಆದ್ಯತೆಗಳ ವಿಷಯದಲ್ಲಿ ಇಬ್ಬರ ನಡುವೆ ಅದೆಂಥ ಕಂದಕ ಇದೆ ಎಂದರೆ `ಮನಸುಗಳ ಬೆಸುಗೆ’ ಇಲ್ಲಿ ಸಾಧ್ಯವೇ ಇಲ್ಲ. ಕಮ್ಯುನಿಸ್ಟ್ ತತ್ತ್ವವನ್ನು ಬೆಂಬಲಿಸುತ್ತಲೇ ಪ್ರಜಾಪ್ರಭುತ್ವದ ಆದರ್ಶಗಳನ್ನು ಕಾಪಾಡುವ ಬಗೆಗಿನ ನಿಮ್ಮ ರೀತಿ ರಿವಾಜುಗಳು ನಿಮಗೆ ಹಾಗೂ ನಿಮ್ಮ ಅಂತಃಸಾಕ್ಷಿಗೆ ಬಿಟ್ಟ ವಿಚಾರ. ಪ್ರಕಾಶಕ ಹಾಗೂ ಸಂಪಾದಕರಾಗಿ ನಿಮ್ಮ ಜವಾಬ್ದಾರಿ ಹಾಗೂ ರೂಢಿಸಿಕೊಂಡಿರುವ ಮೌಲ್ಯಗಳೂ ನಿಮಗೆ ಬಿಟ್ಟಿದ್ದು. ಇವೆಲ್ಲ ವಿಷಯಗಳ ಬಗ್ಗೆ ನನಗೆ ನನ್ನದೇ ಆದ ಅಭಿಪ್ರಾಯಗಳಿವೆ ಹಾಗೂ ನನ್ನನ್ನು ಭೇಟಿ ಮಾಡಿ ಇದನ್ನೆಲ್ಲ ಬದಲಿಸುವ ನಿರೀಕ್ಷೆ ನಿಮಗೆ ಬೇಡ.

ನನಗಂತೂ ನಿಮ್ಮ ಅಭಿಪ್ರಾಯಗಳನ್ನು ಬದಲಿಸುವ ಅಪೇಕ್ಷೆಯೂ ಇಲ್ಲ, ಆ ಬಗ್ಗೆ ಯಾವ ಪ್ರಯತ್ನಕ್ಕೂ ಇಳಿಯುವುದಿಲ್ಲ. ಹೀಗಾಗಿ ನಾವಿಬ್ಬರು ಪರಸ್ಪರರ ಸಮಯವನ್ನು ವ್ಯರ್ಥ ಮಾಡಿದಂತಾಗುತ್ತದೆ ಅಷ್ಟೆ. ಬದುಕು ಚಿಕ್ಕದು ಹಾಗೂ ದುಸ್ತರ ಸಹ. ವ್ಯಕ್ತಿಗಳು, ಜನರ ನಡುವೆ ಈಗಾಗಲೇ ಸಾಕಷ್ಟು ಆತಂಕದ ವಾತಾವರಣ ಮನೆ ಮಾಡಿದೆ. ಅದನ್ನು ಇನ್ನಷ್ಟು ಹೆಚ್ಚು ಮಾಡುವ ಸಂದರ್ಭವನ್ನು ಸೃಷ್ಟಿಸುವ ಅಗತ್ಯವಿಲ್ಲ…
ನಿಮ್ಮ ವಿಶ್ವಾಸಿ,
ಜೇ

***

ಜೆಆರ್‌ಡಿ ಟಾಟಾ ಅವರಂತೆ ಯಶಸ್ವಿ ಕೈಗಾರಿಕೋದ್ಯಮಿ ಆಗಬೇಕು ಎಂದು ಕನಸು ಕಾಣುವವರಿಗೆ ಬರವೇ? ಜೆಆರ್‌ಡಿಯವರನ್ನು ಮಾದರಿಯಾಗಿಟ್ಟುಕೊಳ್ಳುವ ಯುವಕರು ಅವರೆದುರು ತಮ್ಮ ಆಸೆಯನ್ನು ಹರವಿಡಬೇಕು ಎಂದೂ ಬಯಸುತ್ತಿದ್ದರು. ಕಾಲೇಜು ಹುಡುಗನೊಬ್ಬ ಇಂತದೇ ಬಯಕೆಯಲ್ಲಿ ಟಾಟಾ ಅವರಿಗೆ ಪತ್ರ ಬರೆಯುತ್ತಾನೆ. ಹೇಗೆಂದರೂ ಅದು ಕಸದ ಬುಟ್ಟಿಗೆ ಸೇರುವ ಸಾಧ್ಯತೆಯೇ ಹೆಚ್ಚು ಎಂದುಕೊಂಡಿದ್ದವನಿಗೆ ಜೆಆರ್‌ಡಿ ಅವರಿಂದ ಸಿಕ್ಕ ಮಾರುತ್ತರ ಹೇಗಿದೆ ಓದಿ.

ಪ್ರಿಯ ಪ್ರವೀಣ್ ದಯಾಳ್,
ಏಪ್ರಿಲ್ 28ರ ನಿಮ್ಮ ಪತ್ರಕ್ಕೆ ಧನ್ಯವಾದ. ನಾನೀಗ ನೀಡುತ್ತಿರುವ ಪ್ರತಿಕ್ರಿಯೆಯಿಂದ- ನಿಮ್ಮ ಪತ್ರ ಕಸದ ಬುಟ್ಟಿ ಸೇರಬಹುದು, ನೋವುಣ್ಣಬೇಕಾದ ಪ್ರಮೇಯ ಬರಬಹುದು ಹಾಗೂ ನನ್ನಂಥ ಕೈಗಾರಿಕೋದ್ಯಮಿಗೆ ನಿಮಗೆ ಪ್ರತಿಕ್ರಿಯಿಸಲು ಸಮಯವಿರುವುದಿಲ್ಲ ಎಂಬ ನಿಮ್ಮ ಕಲ್ಪನೆಗಳೆಲ್ಲ ಸುಳ್ಳಾಗಿವೆ!

ಕೈಗಾರಿಕೋದ್ಯಮಿ ಆಗುವುದು ಖಚಿತ ಎಂದು ನಿರ್ಧರಿಸಿರುವ ನೀವು ನನ್ನ ಸಲಹೆ ಅಪೇಕ್ಷಿಸಿರುವುದು ತಿಳಿಯಿತು. ಬದುಕಿನ ಪ್ರಾರಂಭಿಕ ಹಂತದ ವಯೋಮಾನದಲ್ಲಿರುವ ನಿಮಗೆ ಈಗ ತಕ್ಷಣಕ್ಕೆ ನಾನು ನೀಡಬಹುದಾದ ಸಲಹೆ ಎಂದರೆ, ಮುಂದಿನ ನಿಮ್ಮ ಕೈಗಾರಿಕಾ ವೃತ್ತಿಗೆ ಸಹಾಯವಾಗುವ ನಿಟ್ಟಿನಲ್ಲಿ ಕಾಲೇಜು ವಿದ್ಯಾಭ್ಯಾಸವನ್ನು ಸಮರ್ಪಕವಾಗಿ ಮಾಡಿ. ಗಣಿತ ಹಾಗೂ ತಾಂತ್ರಿಕ ವಿಷಯಗಳಲ್ಲಿ ನಿಮಗೆ ಆಸಕ್ತಿ ಇದೆ ಎಂದಾದರೆ ನೀವು ಎಂಜಿನಿಯರ್ ಆಗಿ ಎಂದು ನಾನು ಸಲಹೆ ನೀಡುತ್ತೇನೆ. ಅದಿಲ್ಲದಿದ್ದರೆ ಬಿ.ಕಾಂ. ಇಲ್ಲವೇ ಕಾನೂನು ಪದವಿ ಪಡೆದುಕೊಳ್ಳಿ. ಇದರಲ್ಲಿ ಯಾವುದನ್ನೇ ಆಯ್ದುಕೊಂಡರೂ ಭವಿಷ್ಯದಲ್ಲಿ ಸಹಕಾರಿಯಾಗುತ್ತದೆ. ನಿಮ್ಮ ತಂದೆ ಕಂಪನಿ ಕಾರ್‍ಯಾಧಿಕಾರಿ ಎಂದು ತಿಳಿಸಿರುವಿರಿ. ಹಾಗಿರುವಾಗ ಸಲಹೆ ನೀಡುವುದಕ್ಕೆ ಯಾರೂ ಇಲ್ಲ ಎಂದು ನೀವೇಕೆ ಬೇಜಾರು ಮಾಡಿಕೊಳ್ಳುತ್ತಿದ್ದೀರಿ ಎಂಬುದೇ ಅರ್ಥವಾಗುತ್ತಿಲ್ಲ. ಈ ವಿಷಯದಲ್ಲಿ ನಿಮ್ಮ ತಂದೆಯ ಸಲಹೆಯನ್ನೂ ಪಡೆಯಿರಿ.

ಕೊನೆಯದಾಗಿ, ನಿಮ್ಮ ಭವಿಷ್ಯಕ್ಕೆ ತುಂಬಾ ನಿರ್ಣಾಯಕವಾಗಿರುವ ಇಂಗ್ಲಿಷ್ ಭಾಷೆ ಕುರಿತಾದ ನಿಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಿ. ನೀವು ಏನನ್ನೇ ಮಾಡುವುದಿದ್ದರೂ ಅದರಲ್ಲಿ ಸಂಕ್ಷಿಪ್ತತೆ ಹಾಗೂ ನಿಯಮ ಬದ್ಧತೆ ರೂಢಿಸಿಕೊಳ್ಳಲು ಪ್ರಯತ್ನಿಸಿ. ಈ ವಿಷಯದಲ್ಲಿ ನೀವು ಪಳಗಬೇಕಿದೆ ಎಂಬುದನ್ನು ನಿಮ್ಮ ಪತ್ರವೇ ತಿಳಿಸುತ್ತದೆ. ಉದಾಹರಣೆಗೆ, ನಾನು ನಿಮ್ಮ ಪತ್ರವನ್ನು ಏಪ್ರಿಲ್ 22ರಂದೇ ಪಡೆದೆನಾದರೂ ಅದರ ಮೇಲೆ ಏಪ್ರಿಲ್ 28ರ ದಿನಾಂಕವಿತ್ತು!
ನಿಮ್ಮ ಯಶಸ್ವಿ ವೃತ್ತಿಗೆ ಶುಭ ಹಾರೈಸುತ್ತ,
ನಿಮ್ಮ ವಿಶ್ವಾಸಿ,
ಜೆ. ಆರ್. ಡಿ. ಟಾಟಾ

ಕನಸು ಕಾಣುವುದು ತಪ್ಪಲ್ಲ, ಆದರೆ ನನಸಾಗಿಸದಿರುವುದು!

‘ನೀವು ನಮಗೆ ರಿಚರ್ಡ್ ಬ್ರಾನ್‌ಸನ್‌ನ ಹುಚ್ಚನ್ನು ಹತ್ತಿಸಿಬಿಟ್ರಿ. ನಮಗಂತೂ ಅವನ ಹಿಡಿತದಿಂದ ತಪ್ಪಿಸಿಕೊಳ್ಳಲು ಆಗುತ್ತಿಲ್ಲ. ದಯವಿಟ್ಟು ಅವನ ಬಗ್ಗೆ ಇನ್ನೇನಾದರೂ ಇದ್ದರೆ ಬರೆಯಿರಿ. ನಾನು ನನ್ನ ವಿದ್ಯಾರ್ಥಿಗಳನ್ನೆಲ್ಲ ಕುಳ್ಳಿರಿಸಿಕೊಂಡು ಅವನ ಬಗ್ಗೆ ಹೇಳುತ್ತೇನೆ’ ಎಂದು ಮೈಸೂರಿನ ಹೈಸ್ಕೂಲ್ ಶಿಕ್ಷಕಿ ಶಾಂತಲಾ ಐದಾರು ವಿದ್ಯಾರ್ಥಿಗಳೊಂದಿಗೆ ನಮ್ಮ ಕಾರ್ಯಾಲಯಕ್ಕೆ ಬಂದಿದ್ದರು. ‘ಈ ಮಾತನ್ನು ಫೋನಿನಲ್ಲಿ ಹೇಳಬಹುದಿತ್ತು, ಆದರೆ ನಾವು ಅವನ ಬಗ್ಗೆ ಎಷ್ಟು ಆಸಕ್ತಿ ಹೊಂದಿದ್ದೇವೆಂಬುದನ್ನು ಈ ಮೂಲಕ ತಿಳಿಸಲು ಖುದ್ದಾಗಿ ಬಂದಿದ್ದೇವೆ’ ಎಂದರು ಶಾಂತಲಾ ಮೇಡಂ. ಫೇಸ್‌ಬುಕ್‌ನಲ್ಲೂ ಇದೇ ವರಾತ. ‘ಬ್ರ್ಯಾನ್‌ಸನ್ ಬಗ್ಗೆ ಯಾಕೆ ನಿಲ್ಲಿಸಿದಿರಿ. ದಯವಿಟ್ಟು ಮುಂದುವರಿಸಿ’ ಎಂದವರು ಅವೆಷ್ಟೋ ಮಂದಿ. ಕಟ್ಟುಪಾಡಿಗೆ ಅಂಟಿಕೊಂಡವನಂತೆ ಒಂದೇ ವಿಷಯದ ಬಗ್ಗೆ ನಾನು ಬರೆಯುವುದಿಲ್ಲ. ಆದರೆ ಓದುಗರೇ ಬೇಕು ಅಂದ್ರೆ ಇಲ್ಲವೆಂದು ಹೇಳುವುದಾದರೂ ಹೇಗೆ? ಈ ಸಂದರ್ಭದಲ್ಲಿ ಆತ ಬರೆದ ಒಂದು ಬರಹ ಸಿಕ್ಕಿತು. ಶಾಂತಲಾ ಮೇಡಂ ಹಾಗೂ ಅವರ ವಿದ್ಯಾರ್ಥಿಗಳು ನೆನಪಾದರು. ಇನ್ನು ನೀವುಂಟು ಹಾಗೂ ಬ್ರ್ಯಾನ್‌ಸನ್. ನಡುವೆ ನಾನ್ಯಾಕೆ?

***

ಹೋದಲ್ಲಿ ಬಂದಲ್ಲಿ ಜನ ನನ್ನನ್ನು ಕೇಳುತ್ತಾರೆ- ‘ಯಾವಾಗಲೂ ನೀವು ಉತ್ಸಾಹದಲ್ಲಿರುತ್ತೀರಾ. ಸದಾ ನಗುನಗುತ್ತೀರಾ. ಬೇರೆಯವರನ್ನೂ ಸಂತಸಪಡಿಸುತ್ತೀರಾ. ಬಿಲಿಯನರ್ ಆಗಿದ್ದರೂ ಸ್ವಲ್ಪವೂ ಟೆನ್‌ಶನ್ ಮಾಡಿಕೊಳ್ಳುವುದಿಲ್ಲ. ಸಿಬ್ಬಂದಿ ಮೇಲೆ ರೇಗುವುದಿಲ್ಲ. ಯಾವತ್ತೂ ಹೊಸ ಹೊಸ ಸಾಹಸಕ್ಕೆ ಮುಂದಾಗುತ್ತೀರಾ. ಸವಾಲುಗಳನ್ನು ಸಲೀಸಾಗಿ ಎದುರಿಸುತ್ತೀರಾ. ಬ್ರ್ಯಾನ್‌ಸನ್ ಯಾವ ಹೊಸ ಸಾಹಸಕ್ಕೆ ಸ್ಕೆಚ್ ಹಾಕುತ್ತಿರಬಹುದು ಎಂದು ಯೋಚಿಸುತ್ತಿರುವಾಗಲೇ ಅದನ್ನು ಮಾಡಿ ಮುಗಿಸಿ ಮುಂದಿನದಕ್ಕೆ ಯೋಚಿಸುತ್ತಾ ಕುಳಿತಿರುತ್ತೀರಾ. ಇವೆಲ್ಲ ಹೇಗೆ ಸಾಧ್ಯವಾಗುತ್ತದೆ ನಿಮಗೆ? ನೀವು ಹೇಗೆ ಕೆಲಸ ಮಾಡುತ್ತೀರಾ? ಕೆಲಸದ ಹೊರತಾಗಿ ಹೇಗೆ ಸಮಯ ಕಳೆಯುತ್ತೀರಾ? ನಿಮ್ಮ ಖಯಾಲಿಗಳೇನು? ನಮಗೂ ಸ್ವಲ್ಪ ಹೇಳಬಾರದಾ?’ ತಕ್ಷಣ ನಾನು ನಕ್ಕು ಸುಮ್ಮನಾಗುತ್ತೇನೆ. ಆದರೆ ಅವರು ಸುಮ್ಮನೆ ಬಿಡುವುದಿಲ್ಲ. ಹೇಳಲೇಬೇಕೆಂದು ಪ್ರೀತಿಯಿಂದ ಜಗಳ ತೆಗೆಯುತ್ತಾರೆ, ಮುನಿಸಿಕೊಳ್ಳುತ್ತಾರೆ.

ನನಗೆ ಅತ್ಯಂತ ಸಂತಸವಾಗುವುದು ಯಾವಾಗ ಅಂದ್ರೆ ಆ ಹಣವನ್ನು ಚಾರಿಟಿಗೋ, ಸಮಾಜ ಕಾರ್ಯಕ್ಕೋ ದಾನ ನೀಡಿದಾಗ!

ಆಗ ನಾನು ಅವರಿಗೆ ಹೇಳುತ್ತೇನೆ- ನಿಮ್ಮಲ್ಲಿ ಏನಿದೆಯೋ ನನ್ನಲ್ಲಿ ಇರುವುದೂ ಅದೇ. ಎಲ್ಲರಲ್ಲೂ ಒಂದು ಅದಮ್ಯ ಶಕ್ತಿಯಿರುತ್ತದೆ. ಅದೇನೆಂಬುದು ನಮಗೆ ಗೊತ್ತಿರುತ್ತದೆ. ನಮ್ಮ ಶಕ್ತಿಯೇನೆಂಬುದು ನಮಗೆ ಗೊತ್ತಿಲ್ಲದಿದ್ದಾಗ ಮಾತ್ರ ಇಂಥ ಪ್ರಶ್ನೆಗಳು ಏಳುತ್ತವೆ. ನಾವೆಲ್ಲರೂ ಒಂದು ವಿಚಿತ್ರ ಕಾಯಿಲೆಯಿಂದ ನರಳುತ್ತೇವೆ. ಅದೇನೆಂದರೆ `ನನ್ನಿಂದ ಇವೆಲ್ಲ ಸಾಧ್ಯನಾ?’ ಎಂಬ ನಕಾರಾತ್ಮಕ ಪ್ರಶ್ನಾರೋಗ. `ನನ್ನಿಂದ ಸಾಧ್ಯವಿಲ್ಲವೇಕೆ? ನನ್ನಿಂದ ಇದು ಸಾಧ್ಯ!’ ಎಂದು ಕೇಳಿಕೊಂಡರೆ, ಮನವರಿಕೆ ಮಾಡಿಕೊಂಡರೆ ಎಲ್ಲವೂ ಸಲೀಸು. ಅರ್ಧ ಕೆಲಸ ಮುಗಿದಂತೆ. ಹಾಟ್‌ಏರ್ ಬಲೂನ್‌ನಲ್ಲಿ ನನಗೆ ವಿಶ್ವಪರ್ಯಟನೆ ಮಾಡಬೇಕೆಂದು ಅನಿಸಿತು. ಗೆಳೆಯರ ಮುಂದೆ ಇದನ್ನು ಹೇಳಿಕೊಂಡಾಗ ಎಲ್ಲರೂ ನಿರುತ್ಸಾಹದ ಗಾಳಿಯನ್ನೇ ಊದಿದರು. ನೂರರಲ್ಲಿ ಒಬ್ಬನೂ `ಯಸ್, ಫೆಂಟಾಸ್ಟಿಕ್, ಗೋ ಅಹೆಡ್’ ಅಂತ ಹೇಳಲಿಲ್ಲ. `ಯಾರು ಏನನ್ನು ಮಾಡಬೇಕೋ ಅದನ್ನೇ ಮಾಡಬೇಕು. ನೀನು ಹೋಗಿ ಹೋಗಿ ಹಾಟ್‌ ಏರ್ ಬಲೂನ್‌ನಲ್ಲಿ ಹಾರುತ್ತೀನಿ ಅಂತಿದೀಯಲ್ಲಾ, ನಿನಗೆ ತಲೆಕೆಟ್ಟಿದೆಯಾ? ಏನಾದರೂ ಅನಾಹುತವಾದ್ರೆ? ನಿನ್ನ ಜೀವಕ್ಕೆ ಅಪಾಯವಾದ್ರೆ?’ ಎಂದೇ ಎಲ್ಲರೂ ರಾಗ ಎಳೆದರು. ಇನ್ನು ಸಾವಿರ ಮಂದಿಯನ್ನು ಕೇಳಿದ್ದರೂ ಅವರೆಲ್ಲ ಹಾಗೇ ಹೇಳುತ್ತಿದ್ದರು. ಜೀವಕ್ಕೆ ಅಪಾಯವಾದ್ರೆ, ಸತ್ತು ಹೋದ್ರೆ ಎಂಬ ಪ್ರಶ್ನೆಯೇ ಅವರಿಗೆ ದೊಡ್ಡದಾಗಿ ಕಾಣುತ್ತಿತ್ತು.

ಈ ಪ್ರಶ್ನೆಗಳೇ ಎಲ್ಲರನ್ನೂ ಬಾಧಿಸಿದರೆ ವಿಮಾನ ಇರುತ್ತಿರಲಿಲ್ಲ, ಕ್ಷಿಪಣಿಗಳನ್ನು ಕಂಡುಹಿಡಿಯುತ್ತಿರಲಿಲ್ಲ, ಹಡಗನ್ನು ಯಾರೂ ನಿರ್ಮಿಸುತ್ತಿರಲಿಲ್ಲ, ಆಕಾಶದಿಂದ ಯಾರೂ ನೆಗೆಯುತ್ತಿರಲಿಲ್ಲ, ಆಳ ಸಮುದ್ರದ ರಹಸ್ಯ ಭೇದಿಸುತ್ತಿರಲಿಲ್ಲ, ಅಂಟಾರ್ಟಿಕಾಕ್ಕೆ ಹೋಗುತ್ತಿರಲಿಲ್ಲ, ಹಿಮಾಲಯ ಏರುತ್ತಿರಲಿಲ್ಲ, ಕಾಡಿನಲ್ಲಿ ಬೇಟೆಗೆ ಹೋಗುತ್ತಿರಲಿಲ್ಲ, ಬಹುಮಹಡಿ ಕಟ್ಟಡ ಕಟ್ಟುತ್ತಿರಲಿಲ್ಲ. ಎಲ್ಲರೂ ಮನೆಯಲ್ಲಿ ಸುಮ್ಮನೆ ಕೈಕಾಲು ಚೆಲ್ಲಿ ಕುಳಿತಿರುತ್ತಿದ್ದರು. ಸಾಹಸಕ್ಕೆ ಯಾರೂ ಮುಂದಾಗುತ್ತಿರಲಿಲ್ಲ. ಹೀಗೆ ಹೇಳುವವರನ್ನು ಕಂಡರೆ ಅವರ ತಲೆಮೇಲೆ ಹಿಡಿದು ಮೊಟಕಬೇಕು ಎಂದೆನಿಸುತ್ತಿತ್ತು. ನನ್ನಿಂದ ಏನಾದರೂ ಅಲ್ಪಸ್ವಲ್ಪ ಸಾಹಸವಾಗಿದ್ದರೆ, ಈ ನೆಗೆಟಿವ್ ಪ್ರತಿಕ್ರಿಯೆಗೆ ನನ್ನ ಪ್ರತಿಭಟನೆಯ ಸಂಕೇತವಾಗಿ ಮೂಡಿದ ಉತ್ತರ- `ನಾನು ಸಾಧಿಸಿ ತೋರಿಸುತ್ತೇನೆ ನೋಡ್ತಾ ಇರಿ. ನೀವು ರಾಂಗ್ ಎಂದು ನಾನು ಸಾಬೀತು ಮಾಡಬಲ್ಲೆ.’ ಯಾರಾದರೂ ನನ್ನ ಬಳಿ ಬಂದು `ನಿನ್ನಿಂದ ಇದು ಸಾಧ್ಯ ಇಲ್ಲ’ ಎಂದು ಹೇಳುವ ಧೈರ್ಯ ಮಾಡುವುದಿಲ್ಲ. ಹೇಳಿದ ಕ್ಷಣದಲ್ಲೇ ಸಾಧ್ಯ ಮಾಡಿ ತೋರಿಸಲು ಪಣತೊಡುತ್ತೇನೆ ಹಾಗೂ ಸಾಧ್ಯ ಮಾಡಿ ತೋರಿಸುತ್ತೇನೆ.

`ಚಂದ್ರಲೋಕಕ್ಕೆ ಹೋಗ್ತೀಯಾ’ ಅಂತ ಕೇಳಿದರೆ `ಹೂಂ, ರೆಡಿ’ ಅಂದುಬಿಡುತ್ತೇನೆ. ಈಗ ನಾನು ಚಂದ್ರಲೋಕಕ್ಕೆ ಹೋಗುವ ಎಲ್ಲ ತಯಾರಿ ಮಾಡುತ್ತಿದ್ದೇನೆ, ನಿಮಗೆ ಗೊತ್ತಿರಲಿ. ನಿಮ್ಮನ್ನು ನಿಲ್ಲಿಸುವ, ನಿಯಂತ್ರಿಸುವ ಶಕ್ತಿಯಿರುವುದು ನಿಮಗೆ ಮಾತ್ರ. ಈ ಕೆಲಸವನ್ನು ನಾವು ಬಹುತೇಕ ಸಂದರ್ಭಗಳಲ್ಲಿ ಬೇರೆಯವರಿಗೆ ಕೊಟ್ಟುಬಿಡುತ್ತೇವೆ. ಹೀಗಾಗಿ ಅವರು ನಮ್ಮನ್ನು ಆಳುತ್ತಾರೆ. ನಮ್ಮ ಸಾಮರ್ಥ್ಯ, ಶಕ್ತಿಯನ್ನು ಕುಗ್ಗಿಸಿಬಿಡುತ್ತಾರೆ. ಹಿಮಾಲಯ ಏರುವ ತನಕ ಅದೇ ದೊಡ್ಡ ಸಾಹಸವೆನಿಸುತ್ತದೆ. ಒಮ್ಮೆ ಏರಿದ ಬಳಿಕ ಅದಕ್ಕೂ ಎತ್ತರದ ಪರ್ವತವನ್ನೇರಬಹುದು ಎಂಬ ವಿಶ್ವಾಸ ಮೂಡುತ್ತದೆ. ಚಿಕ್ಕ ಬೆಟ್ಟವೇರದವನಿಗೆ ಹಿಮಾಲಯ ಕನಸಿನ ಮಾತೇ ಸರಿ. ಮೊದಲು ಮನೆಯಿಂದ ಹೊರಬಿದ್ದು ಪರ್ವತವೇರಲು ತೊಡಗಬೇಕು. ಹಿಮಾಲಯದ ತುತ್ತತುದಿಯಿಂದ ನೋಡಿದಾಗ ಜಗತ್ತು ನಮಗೆ ಬೇರೆ ರೀತಿಯಲ್ಲೇ ಕಾಣಿಸುತ್ತದೆ. ಅದನ್ನು ಮನೆಯಲ್ಲಿ ಆಲಸಿಯಾಗಿ ಬಿದ್ದುಕೊಂಡವನಿಗೆ ಹೇಳಿದರೆ ಅರ್ಥವಾಗುವುದಿಲ್ಲ. ಅಂಥವರಿಗೆ ಹೇಳಲೂಬಾರದು. ಹೀಗಾಗಿ ಯಾರಾದರೂ ನನ್ನನ್ನು `ನಿಮಗೆ ಇವೆಲ್ಲ ಹೇಗೆ ಸಾಧ್ಯವಾಯಿತು?’ ಎಂದು ಕೇಳಿದರೆ ನಕ್ಕು ಸುಮ್ಮನಾಗುತ್ತೇನೆ.

ಬನ್ನಿ ನನ್ನ ಜತೆ, ತೋರಿಸುತ್ತೇನೆ ನೀವು ಅಂದುಕೊಂಡಂತೆ ಜಗತ್ತು ವಿಶಾಲವಾಗಿಲ್ಲ, ಬಹಳ ಚಿಕ್ಕದಾಗಿದೆ. ಮನೆಯಲ್ಲಿ ಕುಳಿತವನಿಗೆ ಮಾತ್ರ ಹಾಗೆ ಅನಿಸಬಹುದು. ಜಗತ್ತು ಸುತ್ತುವವನಿಗೆ ಅದು ಚಿಕ್ಕದೇ. ಸಮುದ್ರದ ತಳ ಮುಟ್ಟಿ ಬಂದವ, ಆಳವಾದ ಬಾವಿಯಲ್ಲಿ ನಡೆದು ಹೋಗುತ್ತಾನೆ ಎಂಬ ಮಾತನ್ನು ಕೇಳಿರಬಹುದು. ಮೋಡದ ಮೇಲಿಂದ ಜಿಗಿದವನಿಗೆ ಮಾತ್ರ ಹಕ್ಕಿಯ ಸ್ವಾತಂತ್ರ್ಯವೇನೆಂಬುದು ಅರ್ಥವಾದೀತು. ನೀವು ಮೇಲಿಂದ ಜಿಗಿಯುವ ತನಕ ನಿಮ್ಮ ಜೀವ ಉಳಿಸಿಕೊಳ್ಳುವುದು ಎಷ್ಟು ಮುಖ್ಯ ಎಂಬುದೂ ಗೊತ್ತಾಗುವುದಿಲ್ಲ. ನನಗೆ ಪ್ರತಿಕ್ಷಣವೂ ಅದ್ಭುತವೆನಿಸುತ್ತದೆ. ಏನೂ ಮಾಡದೇ ಸುಮ್ಮನೆ ಕಳೆದರೆ ನನಗೇ ನಾನು ದ್ರೋಹ ಮಾಡಿಕೊಂಡಷ್ಟು ಬೇಸರವಾಗುತ್ತದೆ. ಆದ್ದರಿಂದ ನಾನು ಹೊಸ ಉದ್ಯಮಕ್ಕೆ ಕೈಹಾಕುತ್ತೇನೆ, ಸಾಹಸಕ್ಕೆ ಮುಂದಾಗುತ್ತೇನೆ, ಆಕಾಶದಿಂದ ಜಿಗಿಯುತ್ತೇನೆ, ಹಡಗಿನಲ್ಲಿ ಜಗತ್ತು ಸುತ್ತುತ್ತೇನೆ, ಚಂದ್ರಲೋಕದ ಕನಸು ಕಾಣುತ್ತೇನೆ. ಇದು ನನಗೊಂದೇ ಸಾಧ್ಯವಾಗುತ್ತದೆಯೆಂದು ಭಾವಿಸಿದರೆ ಅದು ತಪ್ಪು. ಇದು ಪ್ರತಿಯೊಬ್ಬರಿಂದಲೂ ಸಾಧ್ಯ. ನನಗೆ ಇರುವಂತೆ ಉಳಿದವರಿಗೂ ಯೋಚಿಸುವ, ನಿರ್ಧಾರ ತೆಗೆದುಕೊಳ್ಳುವ ಶಕ್ತಿಯಿದೆ. ಹಾಗೆಂದು ಇವನ್ನೆಲ್ಲ ಸಾಧಿಸಿದ ಮೊದಲ ವ್ಯಕ್ತಿ ನಾನಲ್ಲ. ನಾನೂ ಸಹ ಸಾಧನೆ ಮಾಡಿದವರಿಂದ ಪ್ರೇರಣೆ ಪಡೆದವ. ಸಾಧನೆಗೆ ಮಿತಿಯಿಲ್ಲವೆಂಬುದು ನನಗೆ ಬಹಳ ಬೇಗ ಅರಿವಾಯಿತು. ಅದೇ ಪ್ರೇರಣೆ ನನ್ನನ್ನು ಕೈಹಿಡಿದು ಮುನ್ನುಗ್ಗುವಂತೆ ಮಾಡುತ್ತಿದೆ.

ಪ್ರತಿದಿನ ಹೊಸ ಸಂಗತಿಗಳನ್ನು ತಿಳಿಯುವುದು, ಹೊಸ ಹೊಸ ಜನರನ್ನು ಭೇಟಿ ಮಾಡುವುದು, ಹೊಸತನಕ್ಕೆ ಮುಖಮಾಡುವುದು ಖುಷಿಯ ಅಂಶಗಳೇ. ಇದೇ ನನಗೆ ವಿಭಿನ್ನ ಕ್ಷೇತ್ರಗಳಲ್ಲಿ ಉದ್ಯಮ ಮಾಡುವುದಕ್ಕೆ ಕಾರಣ. ಹಣ ಮಾಡುವುದೇ ಮುಖ್ಯ ಅಲ್ಲ. ಹಣ ಹೇಗಿದ್ದರೂ ಬಂದೇ ಬರುತ್ತದೆ. ಹಣ ಮಾಡುವುದನ್ನು ಮೀರಿದ ಆಕರ್ಷಣೆ ನಮ್ಮನ್ನು ಅಂಥ ಚಟುವಟಿಕೆಗಳಲ್ಲಿ ತೊಡಗುವಂತೆ ಮಾಡುತ್ತದೆ. ನನಗೆ ಯಾವುದು ಸಂತಸ, ನೆಮ್ಮದಿ ತಂದುಕೊಡುತ್ತದೋ ಅದನ್ನು ಎದೆಗವುಚಿಕೊಂಡು ಮಾಡುತ್ತೇನೆ. ಅದರಿಂದ ಎಷ್ಟು ಹಣ ಬರುತ್ತದೆಂಬುದು ನನಗೆ ಮುಖ್ಯವಾಗುವುದಿಲ್ಲ. ಯಾವುದೇ ಕೆಲಸವನ್ನು ಹೀಗೆ ಭಾವಿಸಿದರೆ ಅದು ವಿಫಲವಾಗಲು ಸಾಧ್ಯವೇ ಇಲ್ಲ. ಈ ಸಂಗತಿ ನನಗೆ ಎಲ್ಲ ಉದ್ಯಮವನ್ನು ಆರಂಭಿಸಿದಾಗಲೂ ಮನವರಿಕೆಯಾಗಿದೆ.

ಎಲ್ಲರಂತೆ ನಾನೂ ಹಣವನ್ನು ಪ್ರೀತಿಸುತ್ತೇನೆ

Richard Branson

 

ನಾನು ಇಲ್ಲಿ ನಿಮಗೆ ಇನ್ನೊಂದು ಸಂಗತಿಯನ್ನು ಹೇಳಬೇಕು. ನನಗೆ ಹಣ ಬಂದಾಗ ಎಲ್ಲರಿಗೂ ಆಗುವಂತೆ ನನಗೂ ಅತೀವ ಸಂತಸವಾಗುತ್ತದೆ. ಎಲ್ಲರಂತೆ ನಾನು ಸಹ ಹಣವನ್ನು ಪ್ರೀತಿಸುತ್ತೇನೆ. ಏನೇ ಆದರೂ ಹಣ ಮಾಡಿಯೇ ತೀರಬೇಕು ಎಂಬುದು ನನ್ನ ಧ್ಯೇಯ ಅಲ್ಲ. ಹಣದ ವಿಷಯದಲ್ಲಿ ನನಗೆ ಅತ್ಯಂತ ಸಂತಸವಾಗುವುದು ಯಾವಾಗ ಅಂದ್ರೆ ಅದನ್ನು ಚಾರಿಟಿಗೋ, ಸಮಾಜ ಕಾರ್ಯಕ್ಕೋ ದಾನ ನೀಡಿದಾಗ! ಅದು ಒಳ್ಳೆಯ ಕಾರ್ಯಕ್ಕೆ ಉಪಯೋಗವಾದಾಗ!

ನಿಮಗೆ ಯಾರೆಂದ್ರೆ ಬಲು ಇಷ್ಟ? ವೈಯಕ್ತಿಕವಾಗಿ ಹಾಗೂ ವೃತ್ತಿಯ ದೃಷ್ಟಿಯಿಂದ ಯಾರನ್ನು ಇಷ್ಟಪಡುತ್ತೀರಿ? ಎಂದು ಅನೇಕರು ಕೇಳುತ್ತಾರೆ. ಇದಕ್ಕೆ ನನ್ನ ಉತ್ತರ ಇಷ್ಟೇ- ನಾನು ವೈಯಕ್ತಿಕವಾಗಿ ಹಾಗೂ ವೃತ್ತಿಯಿಂದಾಗಿ ಅನೇಕರನ್ನು ಹಚ್ಚಿಕೊಂಡಿದ್ದೇನೆ. ನನ್ನ ಹುಚ್ಚು, ಸಾಹಸ, ಹವ್ಯಾಸ ಹಾಗೂ ಉದ್ಯಮದ ದೆಸೆಯಿಂದ ನನಗೆ ಹೋದಲ್ಲೆಲ್ಲ ಸ್ನೇಹಿತರೇ, ವರ್ಜಿನ್ ಸಂಸ್ಥೆಯಲ್ಲಿ ಈಗ ವಿಶ್ವದಾದ್ಯಂತ 50 ಸಾವಿರ ಮಂದಿ ಕೆಲಸ ಮಾಡುತ್ತಿದ್ದಾರೆ. ಯಾವುದೇ ಊರಿಗೆ ಹೋದರೂ ನಾನು ನಮ್ಮ ಕಚೇರಿಗೆ ಹೋಗಿ, ಸಿಬ್ಬಂದಿ ಜತೆ ಮಾತಾಡುತ್ತೇನೆ. ನನಗೆ ಅತೀವ ಸಮಾಧಾನ ಸಿಗುತ್ತದೆ. ಅವರು ನನ್ನ ವಿಸ್ತರಿತ ಬಾಹುಗಳು. ಸಂಬಳಕ್ಕಾದರೂ ನಾನು ರೂಪಿಸಿದ ಧ್ಯೇಯಕ್ಕಾಗಿ ದುಡಿಯುವವರು. ನನ್ನಲ್ಲಿ ನಂಬಿಕೆ ಹೊಂದಿರುವವರು. ಆ ಮೂಲಕ ನನ್ನ ನಂಬಿಕೆ ಸಾಕಾರಗೊಳಿಸುವವರು.

ನನ್ನ ಸಿಬ್ಬಂದಿ, ಕುಟುಂಬ ಹಾಗೂ ಸ್ನೇಹಿತರಂತೆ ನನಗೆ ಇಷ್ಟವಾಗುವವರೆಂದರೆ ಲಾಕರ್ ಏರ್‌ವೇಸ್ ಸಂಸ್ಥಾಪಕ ಫ್ರೆಡ್ಡಿ ಲಾಕರ್, 27 ವರ್ಷ ಜೈಲುವಾಸ ಅನುಭವಿಸಿದ ದಕ್ಷಿಣ ಆಫ್ರಿಕಾದ ನೆಲ್ಸನ್ ಮಂಡೇಲಾ, ದಕ್ಷಿಣ ಆಫ್ರಿಕಾದ ಮೊದಲ ಆಂಗ್ಲಿಕನ್ ಆರ್ಚ್‌ಬಿಶಪ್ ಡೆಸ್ಮಂಡ್ ಟುಟು, ಇಂಗ್ಲಿಷ್ ಮ್ಯೂಸಿಶಿಯನ್, ಗೀತರಚನೆಕಾರ ಹಾಗೂ ಮಾನವೀಯ ಉದ್ದೇಶಕ್ಕಾಗಿ ಕೆಲಸ ಮಾಡುತ್ತಿರುವ ಪೀಟರ್ ಗೇಬ್ರಿಯಲ್, ಬಾಹ್ಯಾಕಾಶ ಕ್ಷೇತ್ರದ ಜೀನಿಯಸ್ ಬರ್ಟ್‌ರುಟಾನ್… ಹೀಗೆ ಅನೇಕರು. ನನಗೆ ಎಲ್ಲ ದೇಶಗಳಲ್ಲೂ ಗೆಳೆಯರಿದ್ದಾರೆ. ಸಾಹಸ, ಬುದ್ಧಿವಂತಿಕೆ, ಲವಲವಿಕೆ, ಮಾನವೀಯ ಸಂಬಂಧಕ್ಕೆ ಬೆಲೆ ಕೊಡುವವರು ಎಲ್ಲಿಯೇ ಇರಲಿ, ಅವರು ಹೇಗೋ ನನಗೆ ಸ್ನೇಹಿತರಾಗುತ್ತಾರೆ. ಅವರಿಂದ ನಾನು ಪ್ರಭಾವಿತನಾಗುತ್ತೇನೆ.

ಕನಸು ಕಾಣುವುದು ತಪ್ಪಲ್ಲ, ಆದರೆ ನನಸಾಗಿಸದಿರುವುದು : ರಿಚರ್ಡ್ ಬ್ರಾನ್‌ಸನ್

ನನಗೆ ಜೀವನವನ್ನು ಕಾಲುಮಡಚಿಕೊಂಡು, ಕೈಕಟ್ಟಿಕೊಂಡು ನಡೆಸುವುದರಲ್ಲಿ ನಂಬಿಕೆ ಇಲ್ಲ. ನಾನು ಕೋಟ್ಯಧೀಶನಾಗಿದ್ದೇನೆಂಬ ಅಹಂನಿಂದ ಈ ಮಾತನ್ನು ಹೇಳುತ್ತಿಲ್ಲ. 12-15 ವರ್ಷ ವಯಸ್ಸಾಗಿದ್ದಾಗಲೂ ನಾನು ಹಾಗೆಯೇ ಇದ್ದೆ. ಬದುಕು `ಕಿಂಗ್‌ಸೈಜ್’ ಆಗಿರಬೇಕು ಎಂದು ಹೇಳುತ್ತಿದ್ದೆ. ಕೆಲವರು ನನ್ನನ್ನು ನೋಡಿ ಜೋಕ್ ಮಾಡುತ್ತಿದ್ದರು. ಅದು ನನಗೆ ವಿಚಿತ್ರ ಕಿಕ್ ಕೊಡುತ್ತಿತ್ತು. ಹಾಗೆಂದು ನನ್ನ ಬಳಿ ಹಣವಿರಲಿಲ್ಲ. ಬದುಕಿದರೆ ಕಿಂಗ್‌ಸೈಜ್‌ನಲ್ಲೇ ಬದುಕಬೇಕು ಎಂದು ಪಟಾಕಿಕೊಚ್ಚುತ್ತಿದ್ದೆ.

ಪ್ರತಿಯೊಬ್ಬನಿಗೂ ತಾನು ಪಡೆಯುವ ಸಂಬಳ ತೃಪ್ತಿ ಕೊಡುವುದಿಲ್ಲ. ಇನ್ನೂ ಹೆಚ್ಚು ಹಣ ಬೇಕು. ಮನೆ ಇನ್ನಷ್ಟು ದೊಡ್ಡದಿರಬೇಕು, ಇನ್ನೂ ಒಳ್ಳೆಯ ಕಾರು ಬೇಕು ಎಂದೆಲ್ಲ ಅನಿಸುತ್ತದೆ. ಆದರೆ ಅದನ್ನು ಪಡೆಯಲು ನಾನೇನು ಮಾಡಬೇಕು, ನನ್ನ ಆಸೆಯನ್ನು ತೀರಿಸಿಕೊಳ್ಳುವುದು ಹೇಗೆ ಎಂದು ಯೋಚಿಸಿ ಕಾರ್ಯಪ್ರವೃತ್ತರಾಗುವುದಿಲ್ಲ. ಹೇಗೋ ಬದುಕನ್ನು ಸಾಗಿಸುತ್ತಾರೆ ಆದರೆ ಕನಸನ್ನು ಹಾಗೆ ಬೆಚ್ಚಗೆ ಇಟ್ಟುಕೊಂಡು ಒಳಗೊಳಗೇ ಕೊರಗುತ್ತಿರುತ್ತಾರೆ. ಕೊನೆಗೆ ಸಾಯುವಾಗ ಈ ಕೊರಗು ಕೊರಗಾಗಿಯೇ ಇರುತ್ತದೆ. ಎಷ್ಟೋ ಸಲ ಈ ಕೊರಗೇ ಅವರನ್ನು ಸಾಯಿಸುತ್ತದೆ. ನಾನು ಹೇಳೋದೇನೆಂದ್ರೆ ಜೀವನವನ್ನು ಇಡಿಯಾಗಿ ಬದುಕಿ. ಹಾಗೆ ಬದುಕುವ ಎಲ್ಲ ಸಾಧ್ಯತೆಗಳನ್ನು ಈಡೇರಿಸದೇ ಬಿಡಬೇಡಿ. ಕನಸು ಕಾಣುವುದು ತಪ್ಪಲ್ಲ. ಅದನ್ನು ಈಡೇರಿಸಿಕೊಳ್ಳದಿರುವುದು ತಪ್ಪು. ನಿಮಗೆ ನೀವು ಮೋಸ ಮಾಡಿಕೊಳ್ಳಬೇಡಿ. ಹುಸಿ ಕಾರಣ ನೀಡಿ ನಿಮಗೆ ನೀವೇ ನಂಬಿಸಿಕೊಳ್ಳುವ ಪ್ರಯತ್ನವನ್ನು ಮಾಡಬೇಡಿ. ಈ ಜಗತ್ತು ಹಣವಂತರದು ಮಾತ್ರ ಅಲ್ಲ. ಜಗತ್ತಿನ ವೈಭವಗಳನ್ನು ಸವಿಯಲು ನಿಮಗೆ ಹಣ ಬೇಕಾಗಬಹುದು. ಹಣ ಗಳಿಸದಿರುವಂತೆ ನಿಮಗೆ ನಿರ್ಬಂಧವನ್ನು ಯಾರೂ ಹಾಕುವುದಿಲ್ಲವಲ್ಲಾ?!

`ಜೀವನದಲ್ಲಿ ಹಣವೊಂದೇ ಮುಖ್ಯ ಅಲ್ಲ’ ಎಂದು ನಿಮಗೆ ನೀವು ನಂಬಿಸಿಕೊಳ್ಳುತ್ತೀರಿ. ಹಣವಂತರನ್ನು ಕಂಡು ಕರುಬುತ್ತೀರಿ. ಇಲ್ಲಿ ಹಣವನ್ನು ಸಾಧನೆಗೂ ಹೋಲಿಸಬಹುದು. ನನ್ನ ಅಪ್ಪ-ಅಮ್ಮ ನನಗಾಗಿ ವಿದ್ಯೆ, ಸಂಸ್ಕಾರ ನೀಡಿದ್ದನ್ನು ಬಿಟ್ಟರೆ ಏನನ್ನೂ ಕೊಡಲಿಲ್ಲ, ಕೂಡಿಡಲಿಲ್ಲ. ಆದರೆ ನನಗೆ ಹಣ, ಸಾಧನೆ, ಖ್ಯಾತಿ ಗಳಿಸಬೇಕೆಂಬ ತೆವಲು, ಗುಂಗು ಇತ್ತು. ಅದಕ್ಕಾಗಿ ಕಾರ್ಯತತ್ಪರನಾದೆ. ಕಟ್ಟಿದರೆ ಮಹಲನ್ನೇ ಕಟ್ಟಬೇಕು, ಇಡಿಯಾಗಿಯೇ ಬದುಕಬೇಕು ಎಂದು ಬ್ರಿಟನ್‌ನಲ್ಲಿಯೇ ಅತ್ಯಂತ ಅಪರೂಪವಾದ `ನೆಕರ್ ಐಲ್ಯಾಂಡ್’ನ್ನು ಖರೀದಿಸಿದೆ. 74 ಎಕರೆ ದ್ವೀಪವೇ ನನ್ನ ಸಾಮ್ರಾಜ್ಯ. ಈ ದ್ವೀಪವನ್ನು 175,000 ಪೌಂಡ್ ನೀಡಿ ಖರೀದಿಸಿದೆ. ಆಗ ನನಗೆ ಬರೀ 28 ವರ್ಷ! ಈ ದ್ವೀಪದಲ್ಲಿ ನನ್ನ ಅತಿಥಿಗಳಿಗಾಗಿ 28 ರೂಮುಗಳಿವೆ. ಬಾಡಿಗೆಗೂ ರೂಮುಗಳನ್ನು ನೀಡುತ್ತೇನೆ. ಒಂದು ದಿನಕ್ಕೆ 25 ಲಕ್ಷ ರೂ. ಬಾಡಿಗೆ! ನಾನು ಅನುಭವಿಸುವ ಸುಖವನ್ನು ಇತರರೂ ಅನುಭವಿಸಬಹುದು. ಮನುಷ್ಯನಿಗೆ ಬದುಕಲು ತುಂಡುಭೂಮಿ ಇದ್ರೆ ಸಾಕು, ಕೊನೆಗೂ ಬೇಕಾಗಿರುವುದು ಆರಡಿ ನಾಲ್ಕಡಿ ತಾನೆ ಎಂದು ಹೇಳುವವರ ಜತೆ ನಾನು ವಾದ ಮಾಡುವುದಿಲ್ಲ, ಅದು ವೇಸ್ಟ್ ಆಫ್ ಟೈಮ್. ನನ್ನನ್ನು ನೋಡಿ ಸಂತಸಪಡಿ, ಕರುಬಬೇಡಿ. ನನ್ನ ಹಾಗೇ ಯಾರೂ ಬೇಕಾದರೂ ಆಗಬಹುದು. ಅದೇನು ಮಹಾ ಅಲ್ಲ. ಹಾಗೆ ಅಂದುಕೊಂಡು ಮಾತ್ರ ಕಾಲಕಳೆಯಬೇಡಿ. ಸಾಧನೆಯ ಶಿಖರದಲ್ಲಿ ನಿಮ್ಮನ್ನು ಭೇಟಿ ಮಾಡುತ್ತೇನೆ. ಸಿಗುತ್ತೀರಿ ತಾನೆ?

ಜನಸೇವೆಗೆ ರಾಜಕೀಯವೇ ಬೇಕಾಗಿಲ್ಲ, ಹೀಗೂ ಮಾಡಬಹುದು!

Anand Kumar, Mathematics teacher

ಬಿಹಾರ, ಪಾಟ್ನಾ! ಹೀಗೆಂದ ತಕ್ಷಣ ನಮ್ಮ ಕಣ್ಮುಂದೆ ಲಾಲೂ ಪ್ರಸಾದ್ ಯಾದವ್, ರಾಬ್ಡಿದೇವಿಯ ಚಿತ್ರಗಳು ಬಂದು ನಿಲ್ಲುತ್ತವೆ. ಅದರ ಹಿಂದೆಯೇ, ಬಿಹಾರದ ರಾಜಕೀಯದಲ್ಲಿ ದೊಡ್ಡ ಹೆಸರು ಮಾಡಿರುವ ಕಳ್ಳರು, ಸುಳ್ಳರು, ಕೊಲೆಗಡುಕರು, ಕ್ರಿಮಿನಲ್‌ಗಳ ಮುಖಗಳೂ ಮೆರವಣಿಗೆ ಹೊರಡುತ್ತವೆ. ಇದೇ ಕಾರಣಕ್ಕೆ ಬಿಹಾರವನ್ನು `ಗೂಂಡಾರಾಜ್ಯ’ ಎಂದು ಕರೆಯುವ ಪರಿಪಾಠವೂ ಇದೆ. ಬಿಹಾರ ಅಂದ್ರೆ ಎಲ್ಲ ಅಕ್ರಮ, ಅವ್ಯವಹಾರಗಳಿಗೆ ಪರ್ಯಾಯ ಪದವೆನ್ನುವಂತಾಗಿದೆ. ಆದರೆ, ಈಗ ಅದೇ ಪಾಟ್ನಾದಿಂದ ದೇವರಂಥ ವ್ಯಕ್ತಿಯೊಬ್ಬ ಎದ್ದು ಬಂದಿದ್ದಾನೆ. ಅವನ ಹೆಸರು ಆನಂದಕುಮಾರ್.

ಇವತ್ತು ಪಾಟ್ನಾದ ಬಸ್‌ನಿಲ್ದಾಣ ಅಥವಾ ರೈಲು ನಿಲ್ದಾಣದಲ್ಲಿ ನಿಂತು- ನಾಲ್ಕು ಮಂದಿಯ ಮುಂದೆ ಆನಂದಕುಮಾರ್ ಅಂದು ನೋಡಿ; ಜನ ಕಣ್ಣರಳಿಸುತ್ತಾರೆ. ನಿಂತಲ್ಲೇ ಕೈಮುಗಿಯುತ್ತಾರೆ. `ಓಹ್, ನಿಮ್ಗೆ ಮೇಷ್ಟ್ರು ಬೇಕಿತ್ತಾ’ ಎನ್ನುತ್ತಾರೆ. ಮರುಕ್ಷಣದಲ್ಲೇ ಈ ಆನಂದಕುಮಾರ್ ಅವರ ವಿಳಾಸವನ್ನು ಹೇಳುತ್ತಾರೆ. ಆನಂತರವೂ ಒಂದೆರಡು ನಿಮಿಷ ಅಲ್ಲಿಯೇ ನಿಂತರೆ- ಆನಂದಕುಮಾರ್ ಅವರನ್ನು ಹೊಗಳುತ್ತ ಹೊಗಳುತ್ತಾ ಮೈಮರೆಯುತ್ತಾರೆ. ಸ್ವಾರಸ್ಯವೇನೆಂದರೆ- ಹೀಗೆ ಎಲ್ಲರಿಂದಲೂ ಹೊಗಳಿಸಿಕೊಳ್ಳುವ ಆನಂದಕುಮಾರ್ ರಾಜಕಾರಣಿಯಲ್ಲ. ಹಣವಂತನಲ್ಲ. ಯೋಗ ಗುರುವಲ್ಲ. ಚಿತ್ರನಟನಲ್ಲ. ರಾಬ್ಡಿದೇವಿಯ ಮಾವನಲ್ಲ. ಲಾಲೂ ಪ್ರಸಾದನಿಗೂ ಅವನಿಗೂ ಸಂಬಂಧವಿಲ್ಲ. ನಿತೀಶ್‌ಕುಮಾರನ ನೆಂಟನೂ ಅಲ್ಲ. ಅಸಲಿಗೆ, ರಾಜಕೀಯದ ನೆರಳನ್ನು ಆತ ತನ್ನೆಡೆಗೆ ಬಿಟ್ಟುಕೊಂಡವನಲ್ಲ. ಆತ ಪೊಲೀಸ್ ಅಧಿಕಾರಿಯಲ್ಲ, ಕರಾಟೆ ಮಾಸ್ಟರ್ ಕೂಡ ಅಲ್ಲ. ಜ್ಯೋತಿಷಿಯೂ ಅಲ್ಲ. ಬದಲಿಗೆ, ಒಬ್ಬ ಟ್ಯೂಶನ್ ಮಾಸ್ಟರ್!

ನಂಬಿ ಮಹಾರಾಯರೆ, ಈ ಟ್ಯೂಶನ್ ಮಾಸ್ಟರ್, ಇವತ್ತು ಬಿಹಾರದಲ್ಲಿ ದೊಡ್ಡದೊಂದು ಕ್ರಾಂತಿ ಉಂಟುಮಾಡಿದ್ದಾನೆ. ವಿದ್ಯಾರ್ಥಿಗಳ ಪಾಲಿಗೆ ರೋಲ್‌ಮಾಡೆಲ್ ಆಗಿದ್ದಾನೆ. ತೀರಾ ಕಡಿಮೆ ಹಣ ಪಡೆದು ಎಲ್ಲರಿಗೂ ಟ್ಯೂಶನ್ ಮಾಡುತ್ತ ಶೈಕ್ಷಣಿಕ ಕ್ರಾಂತಿಯ ಹರಿಕಾರ ಎನಿಸಿಕೊಂಡಿದ್ದಾನೆ. ಅಷ್ಟೇ ಅಲ್ಲ, ಸೂಪರ್-30 ಎಂಬ ಖಾಸಗಿ ಟ್ಯೂಶನ್ ಕೇಂದ್ರವನ್ನೂ ಆರಂಭಿಸಿದ್ದಾನೆ. ಆ ಕೇಂದ್ರದ ಮುಂದೆ ಆನೆಗಾತ್ರದ ಅಕ್ಷರದಲ್ಲಿ- ‘ಇಲ್ಲಿ ಬಡವರ ಮಕ್ಕಳಿಗೆ ಉಚಿತವಾಗಿ ಪಾಠ ಹೇಳಲಾಗುವುದು’ ಎಂದು ಬೋರ್ಡ್ ಹಾಕಿದ್ದಾನೆ. ಅಷ್ಟೇ ಅಲ್ಲ, ನುಡಿದಂತೆಯೇ ನಡೆದುಕೊಂಡಿದ್ದಾನೆ. ಈತನ ಬಳಿ ಟ್ಯೂಶನ್ ಹೇಳಿಸಿಕೊಂಡ ಹುಡುಗರು- ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯವರು ನಡೆಸುವ ಐಐಟಿ-ಜೆಇಇ ಪರೀಕ್ಷೆಗಳಲ್ಲಿ ಅತ್ಯುತ್ತಮ ಅಂಕ ಪಡೆದಿದ್ದಾರೆ. ಕೆಲವರು ಐಎಎಸ್ ನಲ್ಲೂ ಪಾಸಾಗಿದ್ದಾರೆ. ಒಂದಷ್ಟು ಮಂದಿ ಬ್ಯಾಂಕ್ ಪರೀಕ್ಷೆ ಬರೆದು ಮ್ಯಾನೇಜರ್‌ಗಳಾಗಿದ್ದಾರೆ. ಹೀಗೆ, ದೊಡ್ಡ ದೊಡ್ಡ ಸ್ಥಾನ ತಲುಪಿಕೊಂಡವರೆಲ್ಲ ಕ್ಷಣಕ್ಷಣಕ್ಕೂ ತಮ್ಮ ಗುರು ಆನಂದಕುಮಾರ್ ಅವರನ್ನು ಸ್ಮರಿಸಿಕೊಂಡಿದ್ದಾರೆ. ಗುರುಗಳಿಗೆ ಜೈ ಹೋ ಎಂದು ಸಂತೋಷದಿಂದ ಹೇಳಿದ್ದಾರೆ.

ಅಲ್ಲ, ಮೊನ್ನೆಮೊನ್ನೆಯವರೆಗೂ ರಕ್ತಸಿಕ್ತ ರಾಜಕಾರಣವನ್ನೇ ಉಸಿರಾಡುತ್ತಿದ್ದ ನಾಡು ಬಿಹಾರ. ಅಂಥ ಊರಿನಲ್ಲಿ ಆನಂದಕುಮಾರ್ ಥರದ ಜನ ಎದ್ದುನಿಲ್ಲಲು ಕಾರಣವಾದದ್ದು ಏನು? ಇಷ್ಟಕ್ಕೂ ಈ ಹುಡುಗ ಯಾರು? ಅವನ ಹಿನ್ನೆಲೆ ಏನು? ಅವನು ಟ್ಯೂಶನ್ ತರಗತಿ ಆರಂಭಿಸಲು ಕಾರಣವಾದರೂ ಏನು? ತೀರಾ ಬಡವರ ಮಕ್ಕಳಿಗೇ ಪಾಠ ಹೇಳುತ್ತೇನೆ ಎಂಬ ಆದರ್ಶದ ಹಂಬಲವಾದರೂ ಆ ಹುಡುಗನ ತಲೆಗೇರಿದ್ದೇಕೆ?

ಸ್ವಾರಸ್ಯಕರ ಕಥೆ : ಇಂಥ ಎಲ್ಲ ಕುತೂಹಲಗಳಿಗೂ ಇಲ್ಲಿ ಸ್ವಾರಸ್ಯಕರ ಉತ್ತರವಿದೆ. ಈ ಆನಂದಕುಮಾರ್, ಬಿಹಾರದ ಒಂದು ಸಾಮಾನ್ಯ ಕುಟುಂಬದಿಂದ ಬಂದವನು. ಅವನ ತಂದೆ ಅಂಚೆ ಕಚೇರಿಯಲ್ಲಿ ಸೆಕೆಂಡ್ ಡಿವಿಜನ್ ಕ್ಲರ್ಕ್ ಆಗಿದ್ದ. ಬರುತ್ತಿದ್ದ ಸಂಬಳ ಹೊಟ್ಟೆ- ಬಟ್ಟೆಗೇ ಆಗಿಹೋಗುತ್ತಿತ್ತು. ಹಾಗಾಗಿ ಮಕ್ಕಳನ್ನು ಟ್ಯೂಶನ್‌ಗೆ ಕಳುಹಿಸುವ ಯೋಚನೆಯನ್ನೇ ಆನಂದ್‌ಕುಮಾರನ ತಂದೆ ಮಾಡಲಿಲ್ಲ. ಈ ಹುಡುಗ ಆನಂದ್, ಹಿಂದಿ ಮಾಧ್ಯಮದಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿದ. ಮನೆಯಲ್ಲಿ ಕಡುಬಡತನವಿತ್ತು ನಿಜ. ಆದರೆ, ಅದು ಈ ಹುಡುಗನ ಜ್ಞಾನದಾಹಕ್ಕೆ ಅಡ್ಡಿಯಾಗಲಿಲ್ಲ. ಚಿಕ್ಕಂದಿನಲ್ಲಿಯೇ ಗಣಿತದತ್ತ ಆಕರ್ಷಿತನಾದ ಆನಂದಕುಮಾರ್, ಹೈಸ್ಕೂಲಿಗೆ ಬರುವ ವೇಳೆಗೆ ಕಾಲೇಜು ತರಗತಿಗಳ ಸಮಸ್ಯೆಗಳನ್ನೆಲ್ಲ ಬಿಡಿಸುವಷ್ಟು ಪ್ರಾವೀಣ್ಯ ಪಡೆದ. ಅಷ್ಟಕ್ಕೆ ಸುಮ್ಮನಾಗದೆ, ಗಣಿತ ಲೋಕದ ಪ್ರೊಫೆಸರ್‌ಗಳಿಗೇ ಸವಾಲು ಹಾಕುವಂತಿದ್ದ ಅವೆಷ್ಟೋ ಸಮಸ್ಯೆಗಳಿಗೆ ಉತ್ತರ ಕಂಡುಹಿಡಿದ. ಅವುಗಳನ್ನು ಇಂಗ್ಲೆಂಡಿನ ಮ್ಯಾಥಮೆಟಿಕಲ್ ಸ್ಪೆಕ್ಟ್ರಂ ಮತ್ತು ದಿ ಮ್ಯಾಥಮೆಟಿಕಲ್ ಗೆಜೆಟ್ ಪತ್ರಿಕೆಗಳಿಗೆ ಕಳಿಸಿಕೊಟ್ಟ.

ದಶಕಗಳ ಕಾಲದಿಂದಲೂ ಗಣಿತದ ಪ್ರೊಫೆಸರ್‌ಗಳಿಗೆ ಅರ್ಥವೇ ಆಗದಿದ್ದ ಸಮಸ್ಯೆಗಳನ್ನು, ಇನ್ನೂ ಮೀಸೆ ಚಿಗುರದ ಭಾರತದ ಹೈದನೊಬ್ಬ ಪರಿಹಾರ ಹುಡುಕಿದ್ದು ಕಂಡು ಅಮೆರಿಕ, ಇಂಗ್ಲೆಂಡಿನ ಪಂಡಿತರೆಲ್ಲ ಖುಷಿಯಾದರು. ಕೇಂಬ್ರಿಡ್ಜ್ ವಿಶ್ವವಿದ್ಯಾಲಯ ಈ ಹುಡುಗನಿಗೆ ಪ್ರವೇಶ ನೀಡಲೂ ಮುಂದಾಯಿತು. ಇನ್ನು ಕೆಲವೇ ವರ್ಷಗಳಲ್ಲಿ ನಾನೂ ಒಬ್ಬ ಗಣಿತದ ಪ್ರೊಫೆಸರ್ ಆಗುತ್ತೇನೆ ಎಂಬ ಖುಷಿಯಲ್ಲಿ ಈ ಆನಂದಕುಮಾರ್ ಪಾಸ್‌ಪೋರ್ಟ್, ವೀಸಾ ಮಾಡಿಸಿಕೊಳ್ಳಲು ಓಡಾಡತೊಡಗಿದ. ಅಷ್ಟರಲ್ಲಿ ಆಗಬಾರದ ಅನಾಹುತವೊಂದು ಆಗಿಹೋಯಿತು. ಅದೊಂದು ದಿನ, ಕಚೇರಿಯಿಂದ ಮನೆಗೆ ಬಂದ ಆನಂದ್‌ಕುಮಾರನ ತಂದೆ, ಯಾಕೋ ಎದೆನೋವು ಎಂದು ಕುಸಿದು ಕೂತವರು ಮತ್ತೆ ಮೇಲೇಳಲಿಲ್ಲ!

ಅದುವರೆಗೂ ಕುಟುಂಬ ನಿರ್ವಹಣೆಗೆ ಆಧಾರವಾಗಿದ್ದುದೇ ತಂದೆಯ ಸಂಬಳ. ಅದೇ ಇಲ್ಲವೆಂದಮೇಲೆ, ಬದುಕಲು ಏನಾದರೂ ಮಾಡಲೇಬೇಕಿತ್ತು. ಈ ಸಂದರ್ಭದಲ್ಲಿ ಆನಂದಕುಮಾರ್, ಅನಿವಾರ್ಯವಾಗಿ ತನ್ನ ಉನ್ನತ ವ್ಯಾಸಂಗದ ಕನಸನ್ನು ಕೈಬಿಟ್ಟ. ಆನಂದ್‌ನ ತಾಯಿ, ಜೀವನ ನಿರ್ವಹಣೆಗೆಂದು ಹಪ್ಪಳ ತಯಾರಿಕೆಗೆ ನಿಂತಳು. ಬೆಳಗಿನಿಂದಲೂ ಮನೆಯಲ್ಲಿದ್ದುಕೊಂಡೇ ಗಣಿತದ ಸಮಸ್ಯೆಗಳನ್ನು ಬಿಡಿಸುತ್ತ, ಹೊಸ ಹೊಸ ಥಿಯರಿಗಳನ್ನು ಸೃಷ್ಟಿಸುತ್ತ ಕಾಲ ಕಳೆಯುತ್ತಿದ್ದ. ಸಂಜೆಯಾಗುತ್ತಿದ್ದಂತೆಯೇ ಮನೆಮನೆಯ ಬಾಗಿಲು ತಟ್ಟಿ ಹಪ್ಪಳ ಮಾರುತ್ತಿದ್ದ. ಹೀಗಿದ್ದಾಗಲೇ, ಹೀಗೆ ಮನೆಮನೆಗೂ ಹೋಗಿ ಹಪ್ಪಳ ಮಾರುವ ಬದಲು ಖಾಸಗಿಯಾಗಿ ಯಾಕೆ ಟ್ಯೂಶನ್ ಹೇಳಬಾರದು? ಹೇಗಿದ್ರೂ ನಿಂಗೆ ಗಣಿತ ಚೆನ್ನಾಗಿ ಗೊತ್ತಿದೆಯಲ್ಲ? ಅದೇ ವಿಷಯವನ್ನು ಯಾಕೆ ಹೇಳಿಕೊಡಬಾರದು ಎಂದು ಹಿತೈಷಿಯೊಬ್ಬರು ಸಲಹೆ ಮಾಡಿದರು. ಆಗ ಈ ಆನಂದಕುಮಾರ್‌ನ ವಯಸ್ಸೆಷ್ಟು ಗೊತ್ತೆ? ಬರೀ 22 ವರ್ಷ. ಅಂದಹಾಗೆ, ಇದು 1995ರ ಮಾತು!

ಒಂದೆರಡು ದಿನ ಬಿಟ್ಟು ಯೋಚಿಸಿದಾಗ- ಹೌದಲ್ವಾ? ನಾನು ಹಾಗೇಕೆ ಮಾಡಬಾರದು ಎಂದು ಆನಂದ್‌ಕುಮಾರನಿಗೂ ಅನಿಸಿತು. ತಕ್ಷಣವೇ 500 ರೂ. ಬಾಡಿಗೆಗೆ ಒಂದು ಪುಟ್ಟ ರೂಮ್ ಪಡೆದು ಅಲ್ಲಿ ಟ್ಯೂಶನ್ ಆರಂಭಿಸಿಯೇ ಬಿಟ್ಟ. ಗಣಿತದ ಮೇಲಿನ ಪ್ರೀತಿಯಿಂದ ತನ್ನ ಟ್ಯೂಶನ್ ಕೇಂದ್ರಕ್ಕೆ ಪ್ರಸಿದ್ಧ ಗಣಿತಜ್ಞ ಶ್ರೀನಿವಾಸ ರಾಮಾನುಜನ್ ಹೆಸರಿನಲ್ಲಿ- `ರಾಮಾನುಜನ್ ಸ್ಕೂಲ್ ಆಫ್ ಮ್ಯಾಥಮೆಟಿಕ್ಸ್’ ಎಂದು ಹೆಸರಿಟ್ಟ. ಮೊದಲ ವರ್ಷ ಟ್ಯೂಶನ್‌ಗೆಂದು ಬಂದವರು ಇಬ್ಬರೇ ಇಬ್ಬರು. ಆ ವರ್ಷ ಅವರಿಬ್ಬರೂ ಗಣಿತದಲ್ಲಿ ನೂರಕ್ಕೆ ನೂರು ಅಂಕ ಪಡೆದರು. ಮರುವರ್ಷ, ಟ್ಯೂಶನ್‌ಗೆ ಬಂದವರ ಸಂಖ್ಯೆ 25 ದಾಟಿತು. ಹಾಗೆ ಪಾಠ ಹೇಳಿಸಿಕೊಂಡವರೆಲ್ಲ ನೂರಕ್ಕೆ ತೊಂಬತ್ತಕ್ಕೂ ಹೆಚ್ಚು ಅಂಕ ಪಡೆದರು. ಪರಿಣಾಮ, ಮೂರು ವರ್ಷ ತುಂಬುವುದರೊಳಗೆ, ಆನಂದಕುಮಾರ್ ಬಳಿ ಟ್ಯೂಶನ್‌ಗೆ ಬಂದವರ ಸಂಖ್ಯೆ 500ನ್ನು ದಾಟಿತು. ಒಂದು ವರ್ಷ ಟ್ಯೂಶನ್ ಹೇಳಿಸಿಕೊಳ್ಳಲು 1500 ರೂ. ಶುಲ್ಕ ಎಂದು ಈ ವೇಳೆಗೆ ಆನಂದಕುಮಾರ್ ಪ್ರಕಟಿಸಿದ್ದ. ಅಷ್ಟು ದುಡ್ಡು ಕೊಡಲು ವಿದ್ಯಾರ್ಥಿಗಳೂ ಸಿದ್ಧರಾಗಿದ್ದರು. ಹೀಗಿದ್ದಾಗಲೇ, ಅದೊಂದು ದಿನ ಆನಂದ್ ಬಳಿಗೆ ಬಂದ ಒಬ್ಬ ಹುಡುಗ- `ಸಾರ್, ನಾನು ತುಂಬಾ ಬಡವರ ಮನೆಯ ಹುಡುಗ. ನನಗೆ ಓದುವ ಆಸೆಯಿದೆ. ದೊಡ್ಡ ಅಧಿಕಾರಿ ಆಗಬೇಕೆಂಬ ಹಂಬಲವಿದೆ. ಗಣಿತದಲ್ಲಿ ತುಂಬಾ ಆಸಕ್ತಿಯಿದೆ. ಆದರೆ, ಟ್ಯೂಶನ್‌ಗೆ ಕೊಡುವಷ್ಟು ಹಣವಿಲ್ಲ’ ಎಂದನಂತೆ.

`ಆ ಹುಡುಗನ ಮಾತು ಕೇಳಿ ತುಂಬಾ ಬೇಸರವಾಯಿತು. ನನ್ನ ತಂದೆ ಆಕಸ್ಮಿಕವಾಗಿ ಸತ್ತುಹೋದಾಗ ನಾನು ಎದುರಿಸಿದ ಪರಿಸ್ಥಿತಿ ನೆನಪಾಯಿತು. ತುಂಬಾ ಬಡಕುಟುಂಬದಿಂದ ಬಂದ ಮೂವತ್ತು ಮಂದಿಗೆ ಉಚಿತವಾಗಿ ಊಟ, ವಸತಿ, ಟ್ಯೂಶನ್ ಹೇಳುವ ನಿರ್ಧಾರಕ್ಕೆ ನಾನು ಬಂದದ್ದೇ ಆಗ. ಈ ವಿಷಯವನ್ನು ಅಮ್ಮನಿಗೆ ಹೇಳಿದಾಗ- `ನಾನು ಆ ಮಕ್ಕಳಿಗೆ ಅಡುಗೆ ಮಾಡಿಕೊಡ್ತೇನೆ ಕಂದಾ’ ಎಂದಳು ಅಮ್ಮ. ಆ ವಿದ್ಯಾರ್ಥಿಗಳ ವಸತಿ ವ್ಯವಸ್ಥೆಯನ್ನು ನನಗೆ ಬಿಡು, ಆ ಜವಾಬ್ದಾರಿಯನ್ನು ನಾನು ತಗೋತೇನೆ ಎಂದು ವೃತ್ತಿಯಿಂದ ಸಂಗೀತಗಾರನಾಗಿರುವ ನಮ್ಮ ಅಣ್ಣ ಪ್ರಣವ್‌ಕುಮಾರ್ ಹೇಳಿದ. ಈ ಇಬ್ಬರ ಬೆಂಬಲದಿಂದ ನನ್ನ ಕೆಲಸ ಹಗುರಾಯಿತು. ಹೀಗೆ ಶುರುವಾದ ತರಗತಿಗೆ ಸೂಪರ್-30 ಎಂಬ ಹೆಸರು ಕೊಟ್ಟೆ ಎನ್ನುತ್ತಾನೆ ಆನಂದಕುಮಾರ್.

ಬೆದರಿಕೆ ಮೆಟ್ಟಿನಿಂತ ಧೀರ : ನೀವು ಪಾಠ ಹೇಳುವುದರಲ್ಲಿ ಅಂಥದೇನಿದೆ ವಿಶೇಷ? ನಿಮ್ಮಲ್ಲಿ ಕಲಿತವರೆಲ್ಲ ಗಣಿತದಲ್ಲಿ ಪಂಡಿತರೇ ಆಗಿಬಿಡ್ತಾರಲ್ಲ? ಈ ಪವಾಡ ಹೇಗೆ ನಡೆಯುತ್ತೆ ಎಂದು ಪ್ರಶ್ನಿಸಿದರೆ ಆನಂದಕುಮಾರ್ ಹೇಳುವುದಿಷ್ಟು- `ಗಣಿತ ಎಂದರೆ, ಹೆಚ್ಚುಕಮ್ಮಿ ಎಲ್ಲ ವಿದ್ಯಾರ್ಥಿಗಳಿಗೂ ಭಯ. ಆ ಭಯವನ್ನು ನಾವು ಮೊದಲ ದಿನವೇ ಹೋಗಲಾಡಿಸುತ್ತೇವೆ. ಕೂಡುವುದು, ಕಳೆಯುವುದು, ಗುಣಿಸುವುದು ಮತ್ತು ಭಾಗಿಸುವುದು ಇದಿಷ್ಟೇ ಗಣಿತ ಎಂದು ಒತ್ತಿ ಹೇಳುತ್ತೇವೆ. ಮುಖ್ಯವಾಗಿ, ಮೊದಲು ತುಂಬ ಸುಲಭವಾಗಿ ಅರ್ಥವಾಗುವ ಐವತ್ತರವತ್ತು ಸಮಸ್ಯೆಗಳನ್ನು ಬಿಡಿಸಿ, ನಂತರವಷ್ಟೇ ಕಷ್ಟದ ಸಮಸ್ಯೆಗಳಿಗೆ ಕೈಹಾಕುತ್ತೇವೆ. ಸಾಧ್ಯವಾದಷ್ಟೂ ವಿದ್ಯಾರ್ಥಿಗಳಿಗೆ ಹೋಂವರ್ಕ್ ನೀಡುವುದಿಲ್ಲ. ಎಲ್ಲ ಸಮಸ್ಯೆಗಳನ್ನೂ ತರಗತಿಯಲ್ಲೇ ಬಿಡಿಸುತ್ತೇವೆ. ಇದಿಷ್ಟೇ ನಮ್ಮ ಯಶಸ್ಸಿನ ಸೂತ್ರ…’

ಇವತ್ತು ಒಂದು ವಿಷಯಕ್ಕೆ ಭರ್ತಿ ಹತ್ತು ಸಾವಿರ ರೂ. ತಗೊಂಡು ಪಾಠ ಹೇಳುವ ಶಿಕ್ಷಕರಿದ್ದಾರೆ. ಟ್ಯೂಶನ್ ಮಾಫಿಯಾ ಕೂಡ ಎಲ್ಲ ನಗರಗಳಲ್ಲೂ ಇದೆ. ಹೀಗಿರುವಾಗ ಕಡಿಮೆ ಶುಲ್ಕ ಪಡೆಯುವುದರಿಂದ ನಿಮಗೆ ನಷ್ಟ ಆಗಿಲ್ಲವಾ? ಟ್ಯೂಶನ್ ಮಾಫಿಯಾದಿಂದ ಬೆದರಿಕೆ ಬಂದಿಲ್ಲವಾ ಎಂಬ ಪ್ರಶ್ನೆಗೆ ಆನಂದಕುಮಾರ್ ಹೇಳುತ್ತಾನೆ- ಇವತ್ತು ಬಿಹಾರದಲ್ಲಿ ಟ್ಯೂಶನ್ ಕೇಂದ್ರಗಳನ್ನು ಹೆಸರಾಂತ ಕ್ರಿಮಿನಲ್‌ಗಳು ನಡೆಸುತ್ತಿದ್ದಾರೆ, ನಿಯಂತ್ರಿಸುತ್ತಿದ್ದಾರೆ. ನಾನು ತುಂಬಾ ಕಡಿಮೆ ಹಣಕ್ಕೆ ಟ್ಯೂಶನ್ ಮಾಡುತ್ತಿರುವುದರಿಂದ ಅವರ ವ್ಯಾಪಾರಕ್ಕೆ ಕೊಡಲಿಪೆಟ್ಟು ಬಿದ್ದಿದೆ. ಈ ಕಾರಣದಿಂದಲೇ ನನ್ನ ಮೇಲೆ ಹಲವರಿಗೆ ಸಿಟ್ಟಿದೆ. ಈಗಲೂ ನನಗೆ ದಿನಕ್ಕೆ ಎರಡಾದರೂ ಜೀವಬೆದರಿಕೆಯ ಕರೆಗಳು ಬರುತ್ತವೆ. ನನ್ನ ಮೇಲೆ ಒಂದೆರಡು ಬಾರಿ ಹಲ್ಲೆಯಾಗಿದೆ. ಒಮ್ಮೆ ಬಾಂಬ್ ದಾಳಿ ಕೂಡ ನಡೆದಿದೆ. ನನ್ನ ಬಳಿ ಪಾಠ ಹೇಳಿಸಿಕೊಂಡ ವಿದ್ಯಾರ್ಥಿಯೊಬ್ಬನಿಗೆ ಚೂರಿಯಿಂದ ಇರಿಯಲಾಗಿದೆ. ಇವೆಲ್ಲ ನನ್ನನ್ನು ಹೆದರಿಸುವ ತಂತ್ರಗಳೇ. ದೈವಕೃಪೆಯಿಂದ, ಎಲ್ಲ ಸಂದರ್ಭಗಳಲ್ಲೂ ನಾನು ಪ್ರಾಣಾಪಾಯದಿಂದ ಪಾರಾಗಿದ್ದೇನೆ. ಈಗ ಗನ್‌ಲೈಸೆನ್ಸ್ ಪಡೆದಿದ್ದೇನೆ. ಬೆಂಗಾವಲಿಗೆ ಅಂಗರಕ್ಷಕರನ್ನು ಇಟ್ಟುಕೊಂಡೇ ಓಡಾಡುತ್ತಿದ್ದೇನೆ. ಒಂದಂತೂ ನಿಜ, ದುಡ್ಡು ನನಗೆ ಮುಖ್ಯವಲ್ಲ. ಬಡವರ ಮಕ್ಕಳಿಗೆ ಉಚಿತವಾಗಿ ಪಾಠ ಹೇಳಬೇಕು ಎಂಬುದು ನನ್ನ ಕನಸಾಗಿತ್ತು. ಅದನ್ನು ನನಸು ಮಾಡಿಕೊಂಡಿದ್ದೇನೆ. ಮೊನ್ನೆ ಮೊನ್ನೆಯವರೆಗೂ ಕ್ರೈಂ ಸಿಟಿ ಎಂದು ಕರೆಸಿಕೊಂಡಿದ್ದ ಪಾಟ್ನಾವನ್ನು ಈಗ `ಎಜುಕೇಷನ್ ಸಿಟಿ’ಎಂದು ಕರೆಯುವಂತೆ ಮಾಡಿದ್ದೇನೆ. ಇಂಥದೊಂದು ಅಪರೂಪದ ಬದಲಾವಣೆ ತಂದ ಹೆಮ್ಮೆ ನನಗಿದೆ…

ಈಗ ಏನಾಗಿದೆ ಗೊತ್ತೆ? : ಪಾಟ್ನಾದ ಆ ಹಳ್ಳಿಹೈದನ ಯಶೋಗಾಥೆ ದೇಶದ ಗಡಿದಾಟಿ ಅಮೆರಿಕ ತಲುಪಿ ಅಲ್ಲೂ ಸುದ್ದಿಯಾಗಿದೆ. ಜಗತ್ತಿನ ಅತ್ಯುತ್ತಮ ಕೋಚಿಂಗ್ ತರಗತಿಗಳ ಪೈಕಿ ಆನಂದಕುಮಾರ್‌ನ ಸೂಪರ್-30 ಶಾಲೆಯೂ ಸ್ಥಾನ ಪಡೆದುಕೊಂಡಿದೆ. ಅದನ್ನು ಭಾರತದ ಅತ್ಯುತ್ತಮ ಕೋಚಿಂಗ್ ಕ್ಲಾಸ್ ಎಂದೇ ಬಣ್ಣಿಸಲಾಗಿದೆ. ಈ ಅಪರೂಪದ ಸಾಧನೆಗೆ ಅಮೆರಿಕ ಸರಕಾರ ಒಂದು ವಿಶೇಷ ಪ್ರಶಸ್ತಿಯನ್ನೂ ನೀಡಿದೆ. ಒಬಾಮಾ ಅವರ ವಿಶೇಷ ಕಾರ್ಯದರ್ಶಿ ರಶೀದ್ ಹುಸೇನ್, ಈ ಪ್ರಶಸ್ತಿಯನ್ನು ಆನಂದಕುಮಾರ್‌ಗೆ ತಲುಪಿಸಿ ಬೆನ್ನುತಟ್ಟಿದ್ದಾರೆ. ಕೈ ಮುಗಿದಿದ್ದಾರೆ. ಆ ಮಹಾರಾಯ ಒಬಾಮಾ ಅಷ್ಟಕ್ಕೇ ಸುಮ್ಮನಾಗಿಲ್ಲ. ಅಮೆರಿಕಕ್ಕೆ ಬರುವಂತೆ ಆಹ್ವಾನ ನೀಡಿದ್ದಾರೆ. ಇದೇ ಸಂದರ್ಭದಲ್ಲಿ ಗಣಿತದ ಹಲವು ಸಮಸ್ಯೆಗಳ ಬಗ್ಗೆ ವಿಶೇಷ ಉಪನ್ಯಾಸ ನೀಡುವಂತೆ ಅಮೆರಿಕದ ವಿಶ್ವವಿದ್ಯಾಲಯಗಳೂ ಆನಂದಕುಮಾರ್ ಅವರಿಗೆ ಆಹ್ವಾನ ನೀಡಿವೆ. ಅಮೆರಿಕದಲ್ಲಿ ಗಣಿತದ ಅಭ್ಯಾಸ ಮಾಡಬೇಕು ಎಂದುಕೊಂಡಿದ್ದ ಹುಡುಗ, ಇವತ್ತು ಅಲ್ಲಿನ ಅಧ್ಯಾಪಕರುಗಳಿಗೇ ಉಪನ್ಯಾಸ ನೀಡುವ ಮಟ್ಟ ತಲುಪಿಕೊಂಡಿದ್ದಾನೆ, ಕೇವಲ ಸ್ವಸಾಮರ್ಥ್ಯದಿಂದ!

ಇಂದು ಆನಂದನಿಂದಾಗಿ ಬಡಮಕ್ಕಳು ಉನ್ನತ ಹುದ್ದೆಗೇರುವಂತಾಗಿದೆ. ಗಣಿತ ಸುಲಿದ ಬಾಳೆಹಣ್ಣಿನಂತಾಗಿದೆ. ಜನಸೇವೆ ಮಾಡಲು ರಾಜಕೀಯವೇ ಬೇಕಾಗಿಲ್ಲ. ದುರ್ದೈವವೆಂದರೆ ಜನ ಸೇವೆಯ ಹೆಸರಿನಲ್ಲಿ ರಾಜಕೀಯಕ್ಕೆ ಬರುವವರು ಟ್ಯೂಶನ್ ಹೇಳಿಸಿ ಕೊಂಡೂ ಎಲ್ಲಾ ವಿಷಯಗಳಲ್ಲೂ ಫೇಲಾದವರೇ. ಇರಲಿ ಬಿಡಿ. ಆನಂದನಂಥವರು ಸ್ಫೂರ್ತಿಯ ಚಿಲುಮೆಯಾಗುತ್ತಾರೆ

ಜೀವನ ಪ್ರೀತಿ ಮೆರೆವ ಅಕ್ಷರಗಳ ಸಾನ್ನಿಧ್ಯದಲ್ಲಿ

Love for life - Kannada short stories
ಆಕೆಯ ಪತ್ರ ಓದಿ ಒಂದು ಕ್ಷಣ ಕಣ್ಮುಂದೆ ಕತ್ತಲೆಯ ಪರದೆ ಜಾರಿಬಿದ್ದಂತಾಯಿತು. ಮನಸ್ಸು ಏಟು ತಿಂದ ಹಾವಿನಂತೆ ತಿರುಚಿಕೊಂಡು, ಹೊರಳಿಕೊಂಡು ಬಿದ್ದಿತ್ತು. ಆಕೆ ಬರೆದಿದ್ದಳು- `ಸರ್, ನನ್ನ ಹೆಸರು ಭಾರತಿ ಹಿರೇಮಠ ಅಂತ. ವರ್ಷ ಇಪ್ಪತ್ತಾದರೂ ಹತ್ತನೇ ಕ್ಲಾಸಿನಲ್ಲಿ ಓದುತ್ತಿದ್ದೇನೆ. ಕಾರಣವಿಷ್ಟೇ, ನಾನು ಹುಟ್ಟು ಕುರುಡಿ. ಹೀಗಾಗಿ ನನ್ನ ಅಪ್ಪ-ಅಮ್ಮ ನನ್ನನ್ನು ಶಾಲೆಗೆ ಕಳಿಸಲಿಲ್ಲ. ಒಂದು ದಿನ ಅಮ್ಮ ಅಪ್ಪನೊಂದಿಗೆ ಜಗಳವಾಡಿ ನನ್ನನ್ನು ಶಾಲೆಗೆ ಕಳಿಸಲೇಬೇಕೆಂದು ಹಠ ಹಿಡಿದೆ. ಆಯಿತು, ಮುಂದಿನ ವರ್ಷದಿಂದ ಕಳಿಸಿದರಾಯಿತು ಎಂದು ಅಪ್ಪ ಸಮಾಧಾನ ಹೇಳಿದರು. ಅದಾಗಿ ನಾಲ್ಕು ತಿಂಗಳಿಗೆ ನನ್ನ ಅಪ್ಪ ರಸ್ತೆ ಅಪಘಾತದಲ್ಲಿ ನಿಧನರಾದರು. ನಾನು ನನ್ನ ಅಮ್ಮ ನಿರ್ಗತಿಕರಾಗುವುದೊಂದು ಬಾಕಿ. ಅಂದಿನಿಂದ ನನ್ನ ಅಮ್ಮ ಮೈಕೊಡವಿ ಎದ್ದು ನಿಂತಳು. ಕೆಲಸಕ್ಕೆ ಹೋಗಲಾರಂಭಿಸಿದಳು. ನನ್ನನ್ನು ನೋಡಿಕೊಳ್ಳಲು ಹೆಂಗಸೊಬ್ಬಳನ್ನು ನೇಮಿಸಿದಳು. ಆಕೆ ನನಗೆ ಎಲ್ಲವನ್ನೂ ಓದಿ ಹೇಳುತ್ತಿದ್ದಳು. ಅವಳೇ ನನ್ನ ಗುರು ನಿಮ್ಮ ಪತ್ರಿಕೆಯನ್ನು ನಾನು ಕಳೆದ ಏಳು ವರ್ಷಗಳಿಂದ ಓದಿಸಿಕೊಳ್ಳುತ್ತಿದ್ದೇನೆ.

ಷಡಕ್ಷರಿಯವರು ಬರೆಯುವ `ಕ್ಷಣಹೊತ್ತು ಆಣಿಮುತ್ತು’ ಅಂಕಣದಿಂದ ಹಿಡಿದು ಎಲ್ಲ ಅಂಕಣಗಳನ್ನೂ ಪ್ರತಿದಿನ ಓದಿಸಿಕೊಳ್ಳುತ್ತೇನೆ. ನಾನು ನನ್ನ ಜೀವನದಲ್ಲಿ ಹುಟ್ಟಾ ಕುರುಡಿಯಾಗಿಯೂ ಬದುಕಬಹುದು ಹಾಗೂ ಹಾಗೆ ಬದುಕಿ ಸಾಧನೆ ಮಾಡಬಹುದು ಎಂಬ ಆತ್ಮವಿಶ್ವಾಸ ಕುದುರಿಸಿಕೊಂಡಿದ್ದೇ ನಿಮ್ಮ ಪತ್ರಿಕೆಯ ಬರಹಗಳಿಂದ. ನನಗೆ ನಿಮ್ಮ ಪತ್ರಿಕೆ ಕಣ್ಣು ಹಾಗೂ ದೃಷ್ಟಿ ಎರಡನ್ನೂ ನೀಡಿದೆ. ನನಗೆ ಜೀವನದಲ್ಲಿ ಮಹತ್ತರವಾದುದನ್ನು ಸಾಧಿಸುವ ಹಂಬಲವಿದೆ. ಹಿಂದಿನವಾರದ ಅಂಕಣದಲ್ಲಿ ನೀವು ಬರೆದ ಕೆಲವು ಪುಟ್ಟ ಪುಟ್ಟ ಕತೆಗಳನ್ನು ಓದಿ ತುಂಬಾ ತುಂಬಾ ಖುಷಿಯಾಯಿತು. ಸರ್, ಈ ವಾರವೂ ಇನ್ನಷ್ಟು ಕತೆಗಳನ್ನು ನನಗಾಗಿ ಬರೆಯುತ್ತೀರಾ? ರಾಜಕಾರಣಿಗಳ ಕತೆಯಂತೂ ದಿನಾ ಇದ್ದೇ ಇರುತ್ತದೆ. ಪ್ಲೀಸ್ ಸರ್, ನನಗೆ ನಿರಾಸೆ ಮಾಡಬೇಡಿ.’

ಭಾರತಿಯ ಪತ್ರವನ್ನು ಮೂರ್‍ನಾಲ್ಕು ಬಾರಿ ಓದಿದೆ. ಮನಸ್ಸು ಒದ್ದೆಯಾಗಿತ್ತು. ನಾವು ಎಲ್ಲೋ ಕುಳಿತು ಬರೆಯುವ ನಾಲ್ಕಕ್ಷರ ಯಾರದೋ ಅಂತಃಕರಣ ತಟ್ಟಿ ಒಂದಷ್ಟು ನೆಮ್ಮದಿ, ಸಂತಸ, ಬೆಳಕು ನೀಡುತ್ತದೆ ಅಂದ್ರೆ ಅದಕ್ಕಿಂತ ಆನಂದ, ಧನ್ಯತೆಯೇನಿದೆ? ಕರ್ನಾಟಕದ ಪ್ರಸಕ್ತ ರಾಜಕಾರಣದ ಬಗ್ಗೆ ಬರೆಯಲಾರಂಭಿಸಿದವನಿಗೆ ಕೈಹಿಡಿದು ಎಳೆದಂತಾಯಿತು. ಅದನ್ನು ಕಸದಬುಟ್ಟಿಗೆ ಎಸೆದೆ. ಭಾರತಿಯ ಕೋರಿಕೆ ಕರೆದಂತಾಯಿತು. ಈ ಬರಹ ಅವಳಿಗೇ ಅರ್ಪಣೆ!

***

ಇಂಗ್ಲಿಷ್ ಲೇಖಕ ಸಾಮರ್‌ಸೆಟ್ ಮಾಮ್ ಬರೆದ ಕತೆಯಿದು. ಲಂಡನ್‌ನ ಸೇಂಟ್‌ಪೀಟರ್‍ಸ್ ಚರ್ಚ್‌ನಲ್ಲಿ ಒಬ್ಬ ಕೆಲಸಗಾರನಿದ್ದ. ಚರ್ಚನ್ನು ಸ್ವಚ್ಛ ಹಾಗೂ ಅಂದಚೆಂದವಾಗಿ ಇಡುವುದು ಅವನ ಕೆಲಸ, ಜವಾಬ್ದಾರಿ. ಆತ ತನ್ನ ಹೊಣೆಗಾರಿಕೆಯನ್ನು ಅಚ್ಚುಕಟ್ಟಾಗಿಯೇ ನಿಭಾಯಿಸುತ್ತಿದ್ದ. ಅದೇ ಚರ್ಚ್‌ನಲ್ಲಿ ತರಲೆ ಪಾದ್ರಿಯೊಬ್ಬನಿದ್ದ. ಅವನು ಎಲ್ಲದರಲ್ಲೂ ತಪ್ಪು ಹುಡುಕುವ ಕಿರು`ಕುಳ’. ಒಂದು ದಿನ ಈ ಕೆಲಸಗಾರನನ್ನು ಕಿತ್ತುಹಾಕಿದ. ಅದಕ್ಕೆ ಪಾದ್ರಿ ನೀಡಿದ ಕಾರಣ- ಆ ಕೆಲಸಗಾರನಿಗೆ ಓದಲು, ಬರೆಯಲು ಬರೊಲ್ಲ ಅಂತ. ನಿರುದ್ಯೋಗಿಯಾದ ಆತ ತಾನು ಕೂಡಿಟ್ಟ ಹಣದಿಂದ ಚಹದ ಅಂಗಡಿ ತೆರೆದ. ಅವನ ಅಂಗಡಿಗೆ ಟೀ ಕುಡಿಯಲು ಬಹಳ ಮಂದಿ ಬರುತ್ತಿದ್ದರು. ಅದು ಬಹಳ ಬೇಗನೆ ಜನಪ್ರಿಯವಾಯಿತು. ಹಣವೂ ಬಂತು. ಆ ದುಡ್ಡಿನಿಂದ ಮತ್ತೊಂದು ಅಂಗಡಿ ತೆರೆದ. ಅದೂ ಯಶಸ್ಸಾಯಿತು. ಮೂರನೆ ಅಂಗಡಿಯೂ ಜನಪ್ರಿಯವಾಯಿತು. ಕ್ರಮೇಣ ಲಂಡನ್‌ನ ಎಲ್ಲೆಡೆ ಅವನ ಚಹದಂಗಡಿ ತಲೆಯೆತ್ತಿತು. ಆತ ಶ್ರೀಮಂತನಾಗಿಬಿಟ್ಟ.

ಒಂದು ದಿನ ಅವನಿಗೆ ಹಣ ಕೊಟ್ಟ ಬ್ಯಾಂಕರ್ ಕೇಳಿದ- `ಚಹದಂಗಡಿಗಳ ಮಾಲೀಕನಾಗಿ ನಿಮ್ಮ ಸಾಧನೆ ಅದ್ಭುತ. ಆದರೆ ನೀವು ಅನಕ್ಷರಸ್ಥರು. ಒಂದು ವೇಳೆ ಬರೆಯಲು, ಓದಲು ಕಲಿತು ವಿದ್ಯಾವಂತರಾಗಿದ್ದರೆ ನೀವು ಎಲ್ಲಿರುತ್ತಿದ್ದಿರೋ ಏನೋ?’ ಅದಕ್ಕೆ ಚಹದಂಗಡಿ ಮಾಲೀಕ ಹೇಳಿದ- `ಸೇಂಟ್ ಪೀಟರ್‍ಸ್ ಚಚ್ ನಲ್ಲಿ ಕಸ ಹೊಡೆಯುತ್ತಾ ಇರುತ್ತಿದ್ದೆ.’

***

ಅವರಿಬ್ಬರೂ ಮಾಜಿ ಸೈನಿಕರು. ವಯಸ್ಸಾದ ಕಾರಣದಿಂದ ಕಾಯಿಲೆಗೆ ತುತ್ತಾಗಿ ಆಸ್ಪತ್ರೆ ಸೇರಿದ್ದರು. ಬದುಕುತ್ತೇವೆ ಎಂಬ ಭರವಸೆ ಇಬ್ಬರಿಗೂ ಇರಲಿಲ್ಲ. ಆದರೂ ದೂರದ ಆಸೆಯೊಂದಿಗೆ ಆಸ್ಪತ್ರೆ ಸೇರಿದ್ದರು. ಈ ಪೈಕಿ ಒಬ್ಬನಿಗೆ ಎದ್ದೇಳುವ ತ್ರಾಣವೂ ಇರಲಿಲ್ಲ. ಆತ ಯಾವಾಗಲೂ ಅಂಗಾತ ಮಲಗಿಯೇ ಇರಬೇಕಿತ್ತು. ಇನ್ನೊಬ್ಬನ ಬೆಡ್ ಕಿಟಕಿಯ ಪಕ್ಕದಲ್ಲಿತ್ತು. ಈತ ದಿನವೂ ಸಂಜೆ ಒಂದು ಗಂಟೆಯ ಕಾಲ ಎದ್ದು ಕೂಡುತ್ತಿದ್ದ. ಪರಿಚಯವಾದ ಒಂದೆರಡೇ ದಿನಗಳಲ್ಲಿ ಈ ಇಬ್ಬರೂ ಆಪ್ತರಾದರು. ಮೊದಲು ತಮ್ಮ ವೃತ್ತಿಯ ಬಗ್ಗೆ, ಆ ದಿನಗಳಲ್ಲಿ ಇದ್ದ ಉತ್ಸಾಹ, ಆವೇಶದ ಬಗ್ಗೆ ಮಾತಾಡಿದರು. ನಂತರ ಹೆಂಡತಿ, ಮಕ್ಕಳು ಬಂಧು-ಬಳಗದ ಬಗ್ಗೆ ಮಾತಾಡಿಕೊಂಡರು.

ಕುಟುಂಬದ ವಿಷಯವನ್ನೇ ಅವೆಷ್ಟು ಬಾರಿ ಹೇಳಿಕೊಳ್ಳಲು ಸಾಧ್ಯ? ಅದೊಂದು ದಿನ, ಆ ಕಿಟಕಿಯ ಪಕ್ಕದ ಬೆಡ್‌ನಲ್ಲಿದ್ದವನು ಇದೇ ವಿಷಯ ಪ್ರಸ್ತಾಪಿಸಿದ. ನಂತರ- ನಾಳೆ ಸಂಜೆಯಿಂದ ಒಂದು ಗಂಟೆಯ ಅವಧಿಯಲ್ಲಿ ಇಲ್ಲಿಂದ ನನಗೆ ಕಾಣುವ ಪ್ರತಿ ಸಂಗತಿಯನ್ನೂ ಕಾಮೆಂಟರಿ ಥರಾ ನಿನಗೆ ಹೇಳ್ತೇನೆ’ ಎಂದ. ಸರಿ, ಮರುದಿನದಿಂದಲೇ ಈ ಗೆಳೆಯರ ಕಾಮೆಂಟರಿ ಶುರುವಾಯ್ತು: ಇಲ್ಲಿ ನೋಡು, ಈ ಕಿಟಕಿಯಿಂದಾಚೆಗೆ ಒಂದು ವಿಶಾಲ ಬಯಲಿದೆ. ಅದರ ಪಕ್ಕದಲ್ಲೇ ಒಂದು ಕೊಳವಿದೆ. ಅದರೊಳಗೆ ಎರಡು ಹಂಸಗಳಿವೆ. ಕೊಳದ ಮೇಲಿರುವ ಕಲ್ಲು ಬೆಂಚಿನ ಮೂಲೆಯಲ್ಲಿ ಪ್ರೇಮಿಗಳ ಹಿಂಡು ಕೂತಿದೆ. ಆ ಹುಡುಗಿ ಯಾವುದೋ ಕಾರಣಕ್ಕೆ ಸಿಟ್ಟಾಗಿದ್ದಾಳೆ. ಹುಡುಗ ಅವಳಲ್ಲಿ ಕ್ಷಮೆ ಕೇಳುತ್ತಿದ್ದಾನೆ. ಈ ಕೊಳದ ನೀರು, ಸಂಜೆಯ ಸೂರ್ಯಕಿರಣದ ಬೆಳಕನ್ನು ಪ್ರತಿಫಲಿ ಸುತ್ತಿದೆ… ಉದ್ಯಾನದಲ್ಲಿ ತರಹೇವಾರಿ ಹೂಗಳು ಅರಳಿವೆ. ಆ ಹೂಗಳನ್ನು ನೋಡುತ್ತಾ ಚಿಕ್ಕ ಮಕ್ಕಳು ಮೈಮರೆತಿವೆ. ಬಯಲಿನ ಇನ್ನೊಂದು ಮೂಲೆಯಲ್ಲಿ ವಯಸ್ಸಾದ ದಂಪತಿ ಏನನ್ನೋ ನೆನಪು ಮಾಡಿಕೊಂಡು ಕಂಬನಿ ಸುರಿಸುತ್ತಿದ್ದಾರೆ. ಅಲ್ಲಿಂದ ಕೂಗಳತೆಯ ದೂರವಿರುವ ಮರದ ಕೆಳಗೆ ಪ್ರೇಮಿಗಳಿಬ್ಬರು ಮುದ್ದು ಮಾಡುತ್ತಿದ್ದಾರೆ…

ದಿನವೂ ಹೀಗೇ ಸಾಗುತ್ತಿತ್ತು ರನ್ನಿಂಗ್ ಕಾಮೆಂಟರಿ. ಅವನು ಕಿಟಕಿಯ ಪಕ್ಕ ಕೂತು ಆಗಿಂದಾಗ್ಗೆ ಮುಖ ಅರಳಿಸುತ್ತಾ, ಕೈಯಾಡಿಸುತ್ತಾ ಒಂದೊಂದೇ ವಿವರಣೆ ಹೇಳುತ್ತಿದ್ದರೆ, ಹಾಸಿಗೆಯಲ್ಲಿ ಅಂಗಾತ ಮಲಗಿದ್ದ ವ್ಯಕ್ತಿ, ಅವನ್ನೆಲ್ಲ ಇದ್ದಲ್ಲೇ ಅಂದಾಜು ಮಾಡಿಕೊಂಡು ಖುಷಿಪಡುತ್ತಿದ್ದ. ಪ್ರೇಮಿಗಳಿಬ್ಬರೂ ಮುದ್ದಾಡುತ್ತಿದ್ದಾರೆ ಎಂದಾಗ, ತನ್ನ ಹರೆಯದ ಆಟಗಳ ನೆನಪಾಗಿ ನಸುನಗುತ್ತಿದ್ದ.

ಮುಂದೊಂದು ದಿನ- ಕಾಮೆಂಟರಿ ಕೊಡುತ್ತಿದ್ದ ಗೆಳೆಯ- ಈಗ ನೋಡು ಗುರೂ, ಮೈದಾನದಲ್ಲಿ ದೊಡ್ಡದೊಂದು ಮೆರವಣಿಗೆ ಹೋಗ್ತಾ ಇದೆ. ಮುಂದೆ ಆನೆಗಳಿವೆ. ಹಿಂದೆ ಕುದುರೆಗಳ ಹಿಂಡು. ಅದರ ಹಿಂದೆ ಒಂಟೆಗಳು ಎಂದ! ಅಷ್ಟು ದೊಡ್ಡ ಮೆರವಣಿಗೆ ಅಂದ ಮೇಲೆ ಭಾರೀ ಸದ್ದು-ಗದ್ದಲ ಕೇಳಿಸಬೇಕು ತಾನೆ? ಹಾಗೇನೂ ಕೇಳಿಸಲಿಲ್ಲ. ಹಾಸಿಗೆಯಲ್ಲೇ ಮಲಗಿದ್ದವನು, ಕಾಮೆಂಟರಿ ಕೊಡುತ್ತಿದ್ದ ಗೆಳೆಯನಿಗೆ ಇದನ್ನೇ ಹೇಳಬೇಕು ಅಂದುಕೊಂಡ. ಆದರೆ ವಯಸ್ಸಿನ ಕಾರಣ, ಕಾಯಿಲೆಯ ಕಾರಣದಿಂದ ನನಗೇ ಕಿವುಡುತನ ಉಂಟಾಗಿರಬಹುದು ಎಂದುಕೊಂಡು ಸುಮ್ಮನಾಗಿಬಿಟ್ಟ.

ಹೀಗೆಯೇ ದಿನ, ವಾರ, ತಿಂಗಳುಗಳೂ ಕಳೆದವು. ಒಂದು ಬೆಳಗ್ಗೆ, ರೋಗಿಗಳ ಬೆಡ್‌ಶೀಟ್ ಬದಲಿಸಲೆಂದು ಬಂದ ನರ್ಸ್, ಮೊದಲಿಗೆ ಕಿಟಕಿಯ ಬಳಿ ಇದ್ದ ರೋಗಿಯ ಬಳಿ ಹೋದಳು. ಆತ ನಿದ್ರೆ ಮಾಡುತ್ತಿದ್ದ ವೇಳೆಯಲ್ಲೇ ಸತ್ತುಹೋಗಿದ್ದ. ಅದುವರೆಗೂ ಕಾಮೆಂಟರಿ ಹೇಳುತ್ತಿದ್ದ ಗೆಳೆಯ ಜತೆಗಿಲ್ಲ ಎಂಬ ಕಾರಣದಿಂದ ಇನ್ನೊಬ್ಬನಿಗೆ ತುಂಬಾ ಸಂಕಟವಾಯಿತು. ಹೊರಗಿನ ದೃಶ್ಯ ನೋಡಿಕೊಂಡು ಎಲ್ಲ ಸಂಕಟ ಮರೆಯೋಣ ಎಂದು ಯೋಚಿಸಿದ ಆತ, ತನಗೆ ಕಿಟಕಿ ಪಕ್ಕದ ಬೆಡ್ ಕೊಡುವಂತೆ ನರ್ಸ್‌ಗೆ ಕೇಳಿದ. ಕೆಲವೇ ನಿಮಿಷಗಳಲ್ಲಿ ಆ ವ್ಯವಸ್ಥೆಯೂ ಆಯಿತು. ಅದುವರೆಗೂ ಕಾಮೆಂಟರಿಯಲ್ಲಿ ಕೇಳಿದ್ದ ದೃಶ್ಯಗಳನ್ನು ಮತ್ತೆ ಮತ್ತೆ ನೆನಪಿಸಿಕೊಂಡು ಈತ ಸಡಗರದಿಂದಲೇ ಕಿಟಕಿಯಿಂದಾಚೆ ನೋಡಿ ಬೆಚ್ಚಿಬಿದ್ದ. ಏಕೆಂದರೆ, ಅಲ್ಲಿ ಒಂದು ಗೋಡೆಯನ್ನು ಬಿಟ್ಟರೆ ಬೇರೇನೂ ಇರಲಿಲ್ಲ.

ಈಗ ಗಾಬರಿಗೊಂಡು ನರ್ಸ್‌ಗಳನ್ನು ಕರೆದ. ಬಂದವರಿಗೆಲ್ಲ ತನ್ನ ಗೆಳೆಯ ಹೇಳುತ್ತಿದ್ದ ರನ್ನಿಂಗ್ ಕಾಮೆಂಟರಿ ನೆನಪಿಸಿ ಪಾರ್ಕು, ಹೂಗಿಡ, ಈಜುಕೊಳ, ಮೆರವಣಿಗೆಯ ರಸ್ತೆ, ಪ್ರೇಮಿಗಳ ಪಿಸುಮಾತು… ಇದೆಲ್ಲ ಎಲ್ಲಿ ಮಾಯವಾಯ್ತು ಎಂದು ಬೆರಗಿನಿಂದ ಕೇಳಿದ. ಆಗ ಅವನನ್ನೇ ಅನುಕಂಪದಿಂದ ನೋಡುತ್ತಾ ನರ್ಸೊಬ್ಬಳು ಹೀಗೆಂದಳು: ಈಗ ನೀವು ನೋಡ್ತಾ ಇದೀರಲ್ಲ, ಇದೇ ಸತ್ಯ. ಒಂದು ವಿಷಯ ಗೊತ್ತಾ? ರನ್ನಿಂಗ್ ಕಾಮೆಂಟರಿ ಕೊಡುತ್ತಿದ್ದ ನಿಮ್ಮ ಗೆಳೆಯನಿಗೆ ಕಣ್ಣು ಕಾಣ್ತಾ ಇರಲಿಲ್ಲ. ಯುದ್ಧದಲ್ಲಿ ಅವರು ಕಣ್ಣುಗಳನ್ನು ಕಳಕೊಂಡಿದ್ರು. ನಿಮ್ಮಲ್ಲಿ ಜೀವನೋತ್ಸಾಹ ಹೆಚ್ಚಿಸಬೇಕೆಂಬ ಆಸೆಯಿಂದ ಅವರು ಹಾಗೆಲ್ಲ ಹೇಳ್ತಾ ಇದ್ರು. ನಾವೆಂಥ ಸ್ಥಿತಿಯಲ್ಲೇ ಇರಲಿ ಬೇರೆಯವರನ್ನು ಖುಷಿಪಡಿಸುವುದರಲ್ಲೂ ನೆಮ್ಮದಿ, ಸಮಾಧಾನವಿದೆ.

***

ಪ್ರಸಿದ್ಧ ನಟ, ನಿರ್ದೇಶಕ ಮೈಕೆಲ್ ಡಾಗ್ಲಸ್ ಹೆಸರನ್ನು ಕೇಳಿಯೇ ಕೇಳಿರುತ್ತೀರಿ. ಆತನ ಐದು ಸಿನಿಮಾಗಳು ಗಲ್ಲಾಪೆಟ್ಟಿಗೆಯಲ್ಲಿ ದಾಖಲೆ ಹಣ ಸಂಗ್ರಹಿಸಿದವು. ಅವನಿಗೆ ವಿಶ್ವದೆಲ್ಲೆಡೆಯಿಂದ ಅಪಾರ ಜನಪ್ರಿಯತೆಯನ್ನು ತಂದುಕೊಟ್ಟಿತು.

ಇವನ್ನೆಲ್ಲ ಕಂಡು ಆತನ ತಂದೆ ಹಾಗೂ ನಟ ಕಿರ್ಕ್ ಡಾಗ್ಲಸ್ ಒಂದು ಸಾಲಿನ ಪತ್ರ ಬರೆದ- Michael, I am more proud of how you handle success than I am of your success. (ಮೈಕೆಲ್, ನಾನು ನಿನ್ನ ಯಶಸ್ಸನ್ನು ನಿಭಾಯಿಸಿದ್ದಕ್ಕಿಂತ ಚೆನ್ನಾಗಿ ನೀನು ನಿನ್ನ ಯಶಸ್ಸನ್ನು ನಿಭಾಯಿಸಿದ್ದನ್ನು ಕಂಡು ನನಗೆ ಹೆಮ್ಮೆಯೆನಿಸಿದೆ.)

***

ಬಿರುಬಿಸಿಲಲ್ಲಿ ರಸ್ತೆಗಿಳಿದಿದ್ದ ಆ ಹುಡುಗನ ಬಗಲಲ್ಲಿ ಥರೇವಾರಿ ಆಟಿಕೆ ಸಾಮಾನುಗಳು, ಅಲಂಕಾರಿಕ ಸಾಮಾನುಗಳು. ತನ್ನ ಬದುಕಿಗೆ ಒಂದು ರಂಗು ತಂದುಕೊಳ್ಳಬೇಕು ಅಂತಾದರೆ ಆ ಹುಡುಗನಿಗೆ ಆ ಬಣ್ಣ ಬಣ್ಣದ ಸರಂಜಾಮುಗಳನ್ನೆಲ್ಲ ಬಿಕರಿಯಾಗಿಸಲೇಬೇಕಾದ ಜರೂರತ್ತಿತ್ತು. ಶಾಲೆಯ ಫೀಸು ತುಂಬಲು ಬೇಕಾದ ಹಣ ಗಳಿಸಿಕೊಳ್ಳಲು ಆ ಹುಡುಗನ ಎದುರಿಗಿದ್ದ ಮಾರ್ಗವದು. ಆ ದಿನ ಆತ ತುಂಬ ಬಳಲಿಹೋಗಿದ್ದ. ಏನನ್ನಾದರೂ ಖರೀದಿಸಿ ತಿನ್ನೋಣ ಎಂದರೆ ಜೇಬಲ್ಲಿದ್ದ ಪುಡಿಗಾಸು ಏನಕ್ಕೂ ಸಾಕಾಗುವಂತಿರಲಿಲ್ಲ. ಬೇಡಿ ಪಡೆಯುವುದು ಆತನ ಜಾಯಮಾನವಲ್ಲ. ಅಷ್ಟಾಗಿಯೂ ಇನ್ನೇನು ತಲೆ ತಿರುಗಿ ಬಿದ್ದು ಬಿಡುತ್ತೀನೇನೊ ಎಂಬಂತಾದಾಗ ಮನೆಯೊಂದರ ಬಾಗಿಲು ಬಡಿದ. ಊಟ ಕೊಡುತ್ತೀರಾ ಎಂದು ಕೇಳಬೇಕೆಂದುಕೊಂಡ. ಬಾಗಿಲು ತೆರೆದು ಪ್ರಸನ್ನ ವದನಳಾಗಿ ನಿಂತಿದ್ದ ಯುವತಿಯನ್ನು ನೋಡಿ ಅವನಿಗೇನೋ ಮುಜುಗರ ಕಾಡಿಬಿಟ್ಟಿತು. `ಒಂದು ಲೋಟ ನೀರು ಸಿಗಬಹುದಾ?’ ಎಂದು ಕೇಳಿದ. ಆತನ ಬಳಲಿಕೆಯ ಮುಖವನ್ನು ಓದಿಕೊಂಡು ಹೋದಳೇನೋ ಎಂಬಂತೆ ಆಕೆ ಮನೆಯೊಳಗೆ ಹೋಗಿ ನೀರಿನ ಬದಲು ಉದ್ದ ಲೋಟದಲ್ಲಿ ಹಾಲು ತಂದುಕೊಟ್ಟಳು. ತುಂಬು ಸಂತೃಪ್ತಿಯೊಂದಿಗೆ ಕೊನೆಯ ಬಿಂದುವನ್ನೂ ಕುಡಿದು ಮುಗಿಸಿದ ಆ ಹುಡುಗ. `ಇದಕ್ಕೆ ಪ್ರತಿಯಾಗಿ ನಾನೇನು ಕೊಡಲಿ?’ ಎಂದ. `ನೀನೇನೂ ಕೊಡಬೇಕಿಲ್ಲ. ನಮ್ಮ ಉದಾರತೆಗೂ ಒಂದು ಬೆಲೆ ಸಿಗಬೇಕು ಎಂದು ಅಪೇಕ್ಷಿಸಬಾರದು ಅಂತ ನಮ್ಮಮ್ಮ ನಂಗೆ ಯಾವಾಗ್ಲೂ ಹೇಳ್ತಿರ್ತಾಳೆ’ ಎಂದವಳು ಮೆಲುವಾಗಿ ನಕ್ಕು ಮನೆಯೊಳಗೆ ಹೋದಳು.

ಆ ಮನೆಯಿಂದ ಮುಂದೆ ಸಾಗುತ್ತಿದ್ದ ಆ ಹುಡುಗನ ಹೃದಯದಲ್ಲಿ ಒಂಥರದ ಸಂಭ್ರಮ. ವ್ಯಾಸಂಗಕ್ಕಾಗಿ ಕಷ್ಟಪಡಬೇಕಾದ ತನ್ನ ಸ್ಥಿತಿಯನ್ನು ಅವಲೋಕಿಸಿಕೊಳ್ಳುತ್ತ ಆತ ಹಲವು ಬಾರಿ `ಇದೇನಪ್ಪಾ ದೇವರೇ’ ಎಂದು ಹತಾಶ ಉಸಿರು ಹೊರಹಾಕಿದ್ದ. ಆದರೀಗ ಒಂದು ಲೋಟ ಹಾಲು ಕೇವಲ ಹೊಟ್ಟೆ ತುಂಬಿಸಿರಲಿಲ್ಲ, ಬದಲಿಗೆ ದೇವರ ಮೇಲೆ ಹಾಗೂ ಜನರ ಮೇಲೆ ನಂಬಿಕೆ ಇಟ್ಟುಕೊಳ್ಳುವುದನ್ನು ಕಲಿಸಿತ್ತು. ಆ ಹುಡುಗನ ಮುಖದಲ್ಲಿ ಹೊಸತೊಂದು ಜೀವನಪ್ರೀತಿ. ಆತ ಮುಂದೆ ದೊಡ್ಡ ಪಟ್ಟಣ ಸೇರಿ ಪ್ರಖ್ಯಾತ ವೈದ್ಯನಾಗಿ ಉಲ್ಲಸಿತ ವೃತ್ತಿ ಜೀವನ ನಡೆಸುತ್ತಿದ್ದ. ಹಾಗೊಂದು ದಿನ ಆತನೆದುರು ಒಂದು ಪ್ರಕರಣ ಬಂತು. ಹೆಂಗಸೊಬ್ಬಳಿಗೆ ಯಾವುದೋ ವಿಚಿತ್ರ ರೋಗ. ಅವಳಿದ್ದ ಚಿಕ್ಕ ಪಟ್ಟಣದ ವೈದ್ಯರುಗಳಿಗೆಲ್ಲ ಅದೇನೆಂದು ಬಗೆ ಹರಿಯದೇ ಇಲ್ಲಿ ಕಳುಹಿಸಿದ್ದರು. ಚಿಕಿತ್ಸೆಯ ವೆಚ್ಚವನ್ನೆಲ್ಲ ಭರಿಸುವ ಆರ್ಥಿಕ ಚೈತನ್ಯವೂ ಅವಳಿಗೆ ಇರಲಿಲ್ಲ. ಸಹಜ ವಿಚಾರಣೆಯ ಧಾಟಿಯಲ್ಲಿ ಆತ ಕೇಳಿದ, `ಆಕೆ ಎಲ್ಲಿಂದ ಬಂದವಳು?’. ಅದಕ್ಕೆ ಉತ್ತರ ಸಿಗುತ್ತಿದ್ದಂತೆ ಆತನ ಕಣ್ಣುಗಳು ಮಿನುಗಿದವು! ಆಕೆಯ ವೈದ್ಯಕೀಯ ವರದಿಗಳನ್ನು ಹುರುಪಿನಿಂದ ಪರಿಶೀಲಿಸುತ್ತಲೇ ಆಕೆಯ ವಾರ್ಡ್‌ಗೆ ಹೋದ. ಅವನಂದುಕೊಂಡಿದ್ದು ನಿಜವಾಗಿತ್ತು. ಅವಳಿಗೇನೂ ಈತನ ಮುಖ ನೆನಪಿರಲಿಲ್ಲ, ಆದರೆ ಇವನಿಗೆ ಆ ಮುಖ ಮರೆತೀತಾದರೂ ಹೇಗೆ? ಅವಳೇ.. ಒಂದು ಲೋಟ ಹಾಲಿನ ದೇವತೆ!

ಅವಳಿಗೆ ಬಂದಿರುವ ರೋಗ ಅದೇನೇ ಆಗಿರಲಿ, ಇದು ತನ್ನ ವೈದ್ಯಕೀಯ ಜೀವನದ ಸವಾಲು ಎಂದೇ ಆತ ಅಂದುಕೊಂಡ. ಪರೀಕ್ಷೆ, ಚಿಕಿತ್ಸೆ ಎಲ್ಲ ಶುರುವಾಯಿತು. ಕೊನೆಗೂ ಒಂದು ದಿನ ಗೆಲುವಿನ ನಗೆ ಅವನದಾಗಿತ್ತು. ಚಿಕಿತ್ಸೆ ಫಲಕಾರಿಯಾಗಿತ್ತು. ಆಕೆಯ ಚಿಕಿತ್ಸೆಯ ವೆಚ್ಚದ ಬಿಲ್ ಆತನ ಅಂಕಿತಕ್ಕಾಗಿ ಬಂತು. ಆ ಬಿಲ್‌ಗೆ ಒಂದು ಸಾಲಿನ ಒಕ್ಕಣೆ ಬರೆದು ಆತ ಸಹಿ ಮಾಡಿದ. ಇತ್ತ ಬಿಲ್ಲು ತಲುಪುತ್ತಲೇ ಆ ಹೆಂಗಸು ತುಂಬ ದುಗುಡದಿಂದ ಅದನ್ನು ತೆರೆದುನೋಡಲು ಎತ್ತಿಕೊಂಡಳು. ಕಾಯಿಲೆ ವಾಸಿಯಾಗಿದ್ದ ಖುಷಿ ಅವಳದಾಗಿದ್ದರೂ ಆಸ್ಪತ್ರೆಯ ಬಿಲ್ ಪಾವತಿಸಲು ಮತ್ತೆ ಜೀವವನ್ನೇ ತೇಯಬೇಕಾಗುತ್ತದೆ ಎಂಬ ವಾಸ್ತವದ ಅರಿವು ಅವಳಿಗಿತ್ತು. ಹಾಗಂದುಕೊಂಡೇ ಪಾವತಿಯ ಪದರ ತೆಗೆದರೆ ಬಿಲ್‌ನ ಮೊತ್ತಕ್ಕಿಂತ ಮೊದಲು ಆ ಒಕ್ಕಣೆ ಕಣ್ಣಿಗೆ ರಾಚಿತು. `ಒಂದು ಲೋಟ ಹಾಲಿನೊಂದಿಗೆ ಎಲ್ಲವೂ ಸಂದಾಯವಾಗಿದೆ.’ ಮುಂದೇನೂ ಗಮನಿಸಲಾಗದಂತೆ ಆಕೆಯ ಕಣ್ಣುಗಳು ಮಂಜಾಗಿದ್ದವು.

ಜೀವನದಲ್ಲಿ ತುಂಬ ಹಿತ ನೀಡುವ ನಂಬಿಕೆ ಅಂದರೆ- ನಾವು ಮಾಡುವ ಒಳ್ಳೆಯ ಕೆಲಸ ನಮ್ಮನ್ನು ಕಾಯುತ್ತೆ ಅನ್ನೋದು. ಈ ಮೇಲಿನ ಕತೆಯಂತೆ ಒಬ್ಬರಿಂದ ಪ್ರೀತಿ ಪಡೆದುಕೊಂಡವರೇ ಮತ್ತೊಂದು ಸಂದರ್ಭದಲ್ಲಿ ಆ ಕಾಳಜಿಯನ್ನು ಮೆರೆಯುತ್ತಾರೆ ಅಂತೇನಲ್ಲ. ಆದರೆ ತುಂಬ ದುರ್ಭರ ಕ್ಷಣದಲ್ಲಿ ಎಲ್ಲಿಂದಲೋ ಅಂಥದೊಂದು ಸಹಾಯ ಒಲಿದು ಬರುತ್ತದೆ. ಒಳ್ಳೆಯತನಕ್ಕೆ ಪ್ರತಿಫಲ ಸಿಗುತ್ತದೆ ಎಂಬ ನಂಬಿಕೆ ಸುಳ್ಳು ಎಂದೇ ಇಟ್ಟುಕೊಂಡರೂ ಅದರಿಂದ ನೀವು ಕಳೆದುಕೊಳ್ಳುವುದೇನಿಲ್ಲ. ಏಕೆಂದರೆ ಆ ಕ್ಷಣದ ನಿಮ್ಮ ಪ್ರೀತಿ- ಕಾಳಜಿಗಳಿಂದ ಜಗತ್ತನ್ನು ಸುಂದರವಾಗಿಸಿದ ಶ್ರೇಯಸ್ಸು ನಿಮ್ಮ ಖುಷಿಯ ಆಯಸ್ಸನ್ನಂತೂ ಹೆಚ್ಚಿಸುತ್ತದೆ. ಅಂಥ ದಿವ್ಯ ಆನಂದಕ್ಕಿಂತ ಹೆಚ್ಚಿನದು ಏನಿದೆ?

ಗೋಪಿನಾಥನೆಂಬ ಹಳ್ಳಿ ರೈತ ಏರ್‌ಲೈನ್ಸ್ ಕಟ್ಟಿದ ಅಂದ್ರೆ!

Captain Gopinath

ಹಳ್ಳಿ ರೈತನಾಗಿ ವಿಮಾನಯಾನ ಕಂಪನಿ ಕಟ್ಟಿ ಜನಸಾಮಾನ್ಯರ ಕನಸು ಸಾಕಾರಗೊಳಿಸಿದ ಅಪ್ಪಟ ಕನ್ನಡಿಗ ಕ್ಯಾಪ್ಟನ್ ಗೋಪಿನಾಥ್ ಅವರ ಆತ್ಮಚರಿತ್ರೆ ‘ಬಾನಯಾನ’ ಇಂದು ಬೆಂಗಳೂರಿನಲ್ಲಿ ಬಿಡುಗಡೆಯಾಗಿದೆ. ಅವರ ಆತ್ಮಚರಿತ್ರೆ Simply Flyಯನ್ನು ವಿಶ್ವೇಶ್ವರ ಭಟ್ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಇದು ಅಪ್ರತಿಮ ಕನ್ನಡಿಗನೊಬ್ಬನ ರೋಚಕ ಜೀವನಗಾಥೆ.

ಸುಮಾರು ಮೂರು ವರ್ಷಗಳ ಹಿಂದೆ ಏರ್ ಡೆಕ್ಕನ್ ಮುಖ್ಯಸ್ಥ ಕ್ಯಾಪ್ಟನ್ ಗೋಪಿನಾಥ್ ತಮ್ಮ ಆತ್ಮಕತೆ ಬರೆಯುತ್ತಿರುವ ಸಂಗತಿ ಗೊತ್ತಾದಾಗ ಕೆಲವು ಅಧ್ಯಾಯಗಳನ್ನು ಓದಲು ಕೊಟ್ಟಿದ್ದರು. ಅವರ ಹೆಲಿಕಾಪ್ಟರ್ ಹಾಗೂ ವಿಮಾನಗಳಲ್ಲಿ ಪಯಣಿಸಿದ್ದ ನನಗೆ ಅವರ ಬಗ್ಗೆ ತೀವ್ರ ಕುತೂಹಲವಿತ್ತು. ಒಬ್ಬ ಅಪ್ಪಟ ಕನ್ನಡಿಗ, ಹಳ್ಳಿಹೈದನೊಬ್ಬ ಆಕಾಶಕ್ಕೆ ನೆಗೆದ ಸಾಹಸ ಬೆರಗುಗೊಳಿಸಿತ್ತು. ಅವರ ಕುರಿತು ಆಗಲೇ ಕೆಲವು ಕತೆಗಳು, ದಂತಕತೆಗಳು, ಅಡಾಪಡಾ ಸುದ್ದಿ ಹಬ್ಬಿತ್ತು. ಕ್ಯಾಪ್ಟನ್ ಗೋಪಿನಾಥ್ ಆಗಲೇ `ಸಿಲಬ್ರಿಟಿ’ ಆಗಿದ್ದರು. ಅವರ ಅಗ್ಗದ ದರದ ವಿಮಾನಯಾನ ದೇಶಾದ್ಯಂತ ಜನಸಾಮಾನ್ಯನಲ್ಲೂ ರೋಮಾಂಚನ ಹುಟ್ಟಿಸಿತ್ತು. ನಮ್ಮ ಮನೆಯ ಕೆಲಸದ ಹೆಂಗಸು ಹುಬ್ಬಳ್ಳಿಯಿಂದ ಬೆಂಗಳೂರಿಗೆ ಕೇವಲ ಐನೂರು ರೂ. ತೆತ್ತು ಡೆಕ್ಕನ್ ವಿಮಾನದಲ್ಲಿ ಬಂದ ಕತೆಯನ್ನು ರಸವತ್ತಾಗಿ ನಾಲ್ಕೈದು ತಿಂಗಳವರೆಗೆ ಮನೆಗೆ ಬಂದವರ ಮುಂದೆಲ್ಲ ಹೇಳುತ್ತಿದ್ದಳು. ಅವಳ ಪಾಲಿಗೆ ಈ ಜನ್ಮದಲ್ಲಿ ಅಸಾಧ್ಯವೆನಿಸುವ ಕನಸೊಂದು ನನಸಾಗಿತ್ತು.

ಇಂಥ ಸಹಸ್ರಾರು ಜನರ ಮನೋ`ರಥ’ವನ್ನು ಕ್ಯಾಪ್ಟನ್ ಗೋಪಿನಾಥ್ ಆಕಾಶಕ್ಕೆ ಚಿಮ್ಮಿಸಿದ್ದರು. ಈ ದೇಶದ ಕಟ್ಟಕಡೆಯ ವ್ಯಕ್ತಿ ಕೂಡ ವಿಮಾನದಲ್ಲಿ ಪ್ರಯಾಣಿಸಬಹುದೆಂಬುದನ್ನು ಗೋಪಿನಾಥ್ ಸಾಧಿಸಿ ತೋರಿಸಿದ್ದರು. ವಿಮಾನ ಪ್ರಯಾಣವೆಂದರೆ ಕೇವಲ ಶ್ರೀಮಂತರಿಗೆ ಮಾತ್ರ ಸೀಮಿತವೆಂಬುದನ್ನು ಅವರು ಧಿಕ್ಕರಿಸಿ ಅದನ್ನು ಎಲ್ಲರಿಗೂ ಮುಕ್ತಗೊಳಿಸಿದ್ದರು. ಆ ಮೂಲಕ ಭಾರತದ ಆಕಾಶವನ್ನು ಸಮಸ್ತರಿಗೂ ತೆರೆದಿಟ್ಟಿದ್ದರು. ಕ್ಯಾಪ್ಟನ್ ಗೋಪಿನಾಥ್ ಹೀಗೆ ದೇಶದೆಲ್ಲೆಡೆ ಒಬ್ಬ ಅಸಾಮಾನ್ಯ ಸಾಧಕನಾಗಿ, ಹಲವಾರು ಸಾಧ್ಯತೆಗಳನ್ನು ಸಾಕಾರಗೊಳಿಸಿದ್ದರು. ಸಹಜವಾಗಿ ಅವರು ಸುದ್ದಿಯಲ್ಲಿದ್ದರು. ಅವರ ಏರ್‌ಲೈನ್ ಸಂಸ್ಥೆಗೆ ಡಾ. ವಿಜಯ ಮಲ್ಯ ಅವರ ಬಂಡವಾಳವನ್ನೂ ಆಹ್ವಾನಿಸಿದ್ದರಿಂದ ಕಾರ್ಪೊರೇಟ್ ಜಗತ್ತಿನಲ್ಲಿ ಗೋಪಿನಾಥ್ ಸಂಚಲನವನ್ನುಂಟು ಮಾಡಿದ್ದರು.

ಆ ಸಂದರ್ಭದಲ್ಲಿ ಗೋಪಿನಾಥ್ ಆತ್ಮಕಥನ SIMPLY FLY ಇನ್ನೂ ಪುಸ್ತಕವಾಗಿ ಹೊರಬಂದಿರಲಿಲ್ಲ. ಅವರು ಕೊಟ್ಟ ಹಸ್ತಪ್ರತಿಗಳನ್ನೆಲ್ಲ ಓದಲಾರಂಭಿಸಿದೆ. ಕ್ಯಾಪ್ಟನ್ ಹೆಲಿಕಾಪ್ಟರ್ ಹಾಗೂ ವಿಮಾನಯಾನ ಸಂಸ್ಥೆಯನ್ನು ಆರಂಭಿಸಿದ ನಂತರದ ವಿದ್ಯಮಾನಗಳು ಚೂರುಪಾರು ಗೊತ್ತಿದ್ದರೂ, ಅದಕ್ಕಾಗಿ ಅವರು ಪಟ್ಟ ಪರಿಶ್ರಮ, ಅನುಭವಿಸಿದ ಕಷ್ಟ, ಹೋರಾಟ, ಕಾಲುಜಗ್ಗಾಟ, ಕಲಿತ ಪಾಠ, ಅಂದುಕೊಂಡಿದ್ದನ್ನು ಈಡೇರಿಸುವ ಹಠ, ಸಾಧಿಸುವ ಛಲ… ಗೊತ್ತಿರಲಿಲ್ಲ. ಅದಕ್ಕಿಂತ ಮುಖ್ಯವಾಗಿ ಹೆಲಿಕಾಪ್ಟರ್, ಏರ್‌ಲೈನ್ಸ್ ಶುರುಮಾಡುವುದಕ್ಕಿಂತ ಮೊದಲಿನ ಅವರ ಬದುಕಿನ ಹೆಜ್ಜೆಗಳ ಬಗ್ಗೆ ಹೆಚ್ಚಾಗಿ ಗೊತ್ತಿರಲಿಲ್ಲ.

ಸಾಮಾನ್ಯವಾಗಿ ನಮ್ಮವರೊಬ್ಬರು ಅಸಾಧ್ಯವೆನಿಸಿದ್ದನ್ನು ಸಾಧಿಸಿದಾಗ ಅವರ ಬಗ್ಗೆ ನಾವು ಇರುವುದಕ್ಕಿಂತ ತುಸು ಹೆಚ್ಚಿನದನ್ನೇ ಯೋಚಿಸುತ್ತೇವೆ ಹಾಗೂ ಹಾಗೇ ನಾಲ್ಕು ಜನರ ಮುಂದೆ ಹೇಳುತ್ತೇವೆ. ಅವರು ಹಾಗಿದ್ದರು, ಹೀಗಿದ್ದರು, ಇಪ್ಪತ್ತು ವರ್ಷಗಳ ಹಿಂದೆ ನೋಡಬೇಕಿತ್ತು ತೋಪ್ಡಾ ಆಗಿದ್ದರು, ಆಗ ನೋಡಿದ್ದರೆ ಏನು ಹೇಳುತ್ತಿದ್ದೆಯೋ… ಎಂದೆಲ್ಲ ನಮ್ಮ ಪರಿಚಯದವರ ಮುಂದೆ, ಸ್ವಲ್ಪ ಅತಿಯಾಗಿಯೇ ಬಣ್ಣಿಸುತ್ತೇವೆ. ಕ್ಯಾಪ್ಟನ್ ಗೋಪಿನಾಥ್ ಬಗ್ಗೆ ಸಹ ಇಂಥ ಕತೆಗಳು ಚಾಲ್ತಿಯಲ್ಲಿದ್ದವು. ಇವೆಲ್ಲ ವಾಸ್ತವಕ್ಕಿಂತ ಹೆಚ್ಚು ರಂಜಿತವಾಗಿರಬಹುದು, ಅತಿಶಯೋಕ್ತಿಯಿರಬಹುದು ಎಂದು ಒಳಮನಸ್ಸು ಹೇಳುತ್ತಿತ್ತು. ಸಾರ್ವಜನಿಕ ಜೀವನದಲ್ಲಿರುವ ವ್ಯಕ್ತಿಗಳಿಗೆ ಒಳ ಹಾಗೂ ಹೊರ ವ್ಯಕ್ತಿತ್ವದ ಹಾಗೆ ಕಲ್ಪಿತ ವ್ಯಕ್ತಿತ್ವವೂ ಇರುತ್ತದೆ. ಇದು ಸುಖಾಸುಮ್ಮನೆ ಅನಗತ್ಯ ಪ್ರಭಾವಳಿಯನ್ನು ನಿರ್ಮಿಸಿರುತ್ತದೆ.

ಆದರೆ ಕ್ಯಾಪ್ಟನ್ ಗೋಪಿನಾಥ್ ಪುಸ್ತಕವನ್ನು ಓದಿದ ಬಳಿಕ ಅನಿಸಿದ್ದೇ ಬೇರೆ. ನಮಗೆ ಗೊತ್ತಿರುವುದಕ್ಕಿಂತ, ನಾವು ಭಾವಿಸಿರುವುದಕ್ಕಿಂತ ಅಥವಾ ತಿಳಿದುಕೊಂಡಿರುವುದಕ್ಕಿಂತ ಒಂದು ಕೈ ಜಾಸ್ತಿಯೇ ಇವರಿದ್ದಾರೆ ಎಂಬುದು. ಅಷ್ಟೇ ಅಲ್ಲ, ನಾವು ಇವರ ಬಗ್ಗೆ ತಿಳಿದುಕೊಂಡಿರುವುದು ಅತಿ ಕಡಿಮೆ. ಈ ಕೃತಿಯನ್ನು ಓದಿದ ಬಳಿಕ ಅದನ್ನು ಕನ್ನಡಕ್ಕೆ ಅನುವಾದಿಸಲೇಬೇಕೆಂದು ಅನಿಸಿತು. ಗೋಪಿನಾಥ್ ಕೂಡ ಸಮ್ಮತಿಸಿದರು. ಇಂಥದೊಂದು ಪುಸ್ತಕ ಕನ್ನಡದ ಹುಡುಗರಿಗೆ, ಅದರಲ್ಲೂ ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿರುವ ಯುವಕರಿಗೆ ತೀರಾ ಅಗತ್ಯವಿತ್ತು. ಹಳ್ಳಿಗಳಲ್ಲಿ ಹುಟ್ಟಿ, ಬೆಳೆದು, ಕನ್ನಡದಲ್ಲಿಯೇ ಓದಿದವರು ಮನಸ್ಸು ಮಾಡಿದರೆ ಏನು ಬೇಕಾದರೂ ಆಗಬಹುದೆಂಬುದಕ್ಕೆ ಗೋಪಿನಾಥ್ ನಿದರ್ಶನ. ಈ ಪುಸ್ತಕ ಇನ್ನೊಂದು ದೃಷ್ಟಿಯಿಂದಲೂ ಬಹಳ ಮುಖ್ಯ ಎನಿಸಲು ಕಾರಣ, ಇದರ ಹೀರೊ ಕನ್ನಡಿಗ, ಅವರ ಭಾಷೆ ಕನ್ನಡ, ಅವರ ಸಾಧನೆಯ ಪರ್ವ ಶುರುವಾಗುವುದು ಕನ್ನಡದ ಮಣ್ಣಿನಲ್ಲಿ, ನಮ್ಮ ಮಧ್ಯದಲ್ಲಿಯೇ. ಆದರೆ ಅದರ ಫಲ ಸಿಗುವುದು ಇಡೀ ಮನುಕುಲಕ್ಕೆ. ಹೀಗಾಗಿ ಗೋಪಿನಾಥ್ ಆತ್ಮಕತೆಯೆಂದರೆ, ಕೇವಲ ಅವರದ್ದೊಂದೇ ಕತೆ ಅಲ್ಲ. ಅವರು ನಿಮಿತ್ತ ಮಾತ್ರ. ಹೀಗಾಗಿ ಇದು ಅಪ್ರತಿಮ ಕನ್ನಡಿಗನೊಬ್ಬನ ರೋಚಕ ಜೀವನಗಾಥೆ.

ಕ್ಯಾಪ್ಟನ್ ಗೋಪಿನಾಥ್ ಹಾಸನ ಜಿಲ್ಲೆಯ ಗೊರೂರಿನವರು. ಅವರ ತಂದೆ ಕನ್ನಡ ಶಾಲೆಯ ಮೇಷ್ಟ್ರು. ಗೋಪಿನಾಥ್ ಕೂಡ ಅದೇ ಹಳ್ಳಿಯಲ್ಲಿ ಓದಿದರು. ಅಪ್ಪಟ ಗ್ರಾಮೀಣ ಪರಿಸರದಲ್ಲಿ ವಿದ್ಯಾರ್ಜನೆ. ಕನ್ನಡ ಮಾಧ್ಯಮದಲ್ಲೇ ವಿದ್ಯಾಭ್ಯಾಸ. ಹೈಸ್ಕೂಲು ಶಿಕ್ಷಣ ವಿಜಾಪುರದ ಸೈನಿಕ ಶಾಲೆಯಲ್ಲಿ. ಆನಂತರ ಪುಣೆಯ ಖಡಕ್ ವಾಸ್ಲಾದಲ್ಲಿರುವ ನ್ಯಾಷನಲ್ ಡಿಫೆನ್ಸ್ ಅಕಾಡೆಮಿ ಸೇರಿ ಅಲ್ಲಿ ತರಬೇತಿ ಪಡೆದು ಭಾರತೀಯ ಸೇನೆಯನ್ನು ಸೇರಿದರು. ಅಲ್ಲಿ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದರು. ಬಾಂಗ್ಲಾ ವಿಮೋಚನಾ ಯುದ್ಧದಲ್ಲಿ ಸಮರಾಂಗಣದಲ್ಲಿ ನಿಂತು ಹೋರಾಡಿದರು. ಸೇನೆಯಲ್ಲಿನ ಇತಿ-ಮಿತಿಗಳನ್ನು ಅರಿತು, ತಮಗೆ ಅನಿಸಿದ್ದನ್ನು ಮಾಡುವ ವಿಶಾಲ ಅವಕಾಶ ಹೊರಜಗತ್ತಿನಲ್ಲಿ ತೆರೆದಿರುವುದನ್ನು ಗಮನಿಸಿ ಅದನ್ನು ಸಾಧಿಸಲು ಸೇನೆಗೆ ರಾಜೀನಾಮೆ ನೀಡಿ ಮನೆಗೆ ಬಂದುಬಿಟ್ಟರು.

ಹಳ್ಳಿ ಹೈದ ವಿಮಾನಯಾನ ಸಂಸ್ಥೆ ಕಟ್ಟಿದ್ದು ಹೇಗೆ?

 

Captain Gopinath's autobiography Simply Fly

ಆಗ ಕ್ಯಾಪ್ಟನ್ ಗೋಪಿನಾಥ್ ರಿಗೆ ಕೇವಲ 27 ವರ್ಷ. ಮುಂದೇನು ಮಾಡಬೇಕೆಂಬ ಬಗ್ಗೆ ಸ್ಪಷ್ಟ ಕಲ್ಪನೆಯಿರಲಿಲ್ಲ. ಪಿತ್ರಾರ್ಜಿತ ಆಸ್ತಿಯೆಲ್ಲ ಗೊರೂರಿಗೆ ಸನಿಹದ ಹೇಮಾವತಿ ಅಣೆಕಟ್ಟೆ ನಿರ್ಮಾಣದ ಬಳಿಕ ಮುಳುಗಡೆಯಾಗಿತ್ತು. ಜಮೀನು ಕಳೆದುಕೊಂಡವರಿಗೆ ಸರಕಾರ ಪರಿಹಾರ ರೂಪದಲ್ಲಿ ಊರಿನಿಂದ ಬಹಳ ದೂರದಲ್ಲಿ ಭೂಮಿ ನೀಡಿತ್ತು. ಆದರೆ ಆ ಬರಡು ಭೂಮಿಯಲ್ಲಿ ಕೃಷಿ ಚಟುವಟಿಕೆ ಕೈಗೆತ್ತಿಕೊಳ್ಳಲು ಯಾರೂ ಸಿದ್ಧರಿರಲಿಲ್ಲ. ಆಗ ತಾನೆ ಸೇನೆಯಿಂದ ಹಿಂದಿರುಗಿ ಬಂದ ಯೋಧನಿಗೆ ಊರ ಜನರೆಲ್ಲ ಸೇರಿ ಬುದ್ಧಿ ಹೇಳಿದರು. ಆದರೆ ಗೋಪಿನಾಥ್ ಕೇಳಲಿಲ್ಲ. ಅದನ್ನೇ ತಮ್ಮ ಕಾರ್ಯಕ್ಷೇತ್ರವನ್ನಾಗಿಸಿಕೊಳ್ಳಲು ನಿರ್ಧರಿಸಿದರು. ಸಹಾಯಕನೊಬ್ಬನನ್ನು ಜತೆಗೆ ಕರೆದುಕೊಂಡು ಅಲ್ಲಿಯೇ ಗುಡಿಸಲು ಕಟ್ಟಿಕೊಂಡು ವಾಸಿಸಲಾರಂಭಿಸಿದರು. ಮನುಷ್ಯ ಮಾತ್ರದವರು ಅಲ್ಲಿ ವಾಸಿಸಲು ಹೆದರುತ್ತಿದ್ದರೆ, ಅಲ್ಲಿ ತೋಟ ಮಾಡಲು ಗೋಪಿನಾಥ್ ನಿರ್ಧರಿಸಿದ್ದರು. ಗುಡಾರದ ಪುಟ್ಟ ಡೇರೆ ನಿರ್ಮಿಸಿ ಅದರೊಳಗೆ ವಾಸಿಸುತ್ತಾ, ಭೂಮಿಯಲ್ಲಿ ತೆಂಗಿನ ಸಸಿಗಳನ್ನು ನೆಡಲು ಶುರುಮಾಡಿದರು. ಸುತ್ತಮುತ್ತ ಕರೆಂಟು ಕೂಡ ಇರಲಿಲ್ಲ. ಸ್ವತಃ ಅವರೇ ಕೊಡದಲ್ಲಿ ನೀರು ಹೊತ್ತು ತೆಂಗಿನ ಸಸಿಗಳಿಗೆ ಸುರಿಯುತ್ತಿದ್ದರು. ಹೀಗೆ ನೆಟ್ಟಿದ್ದು ಒಂದೆರಡಲ್ಲ, ಸುಮಾರು ಸಾವಿರಕ್ಕೂ ಹೆಚ್ಚು ಸಸಿಗಳು. ತಾವೇ ಅಡುಗೆ ಮಾಡಿಕೊಂಡು, ದನ ಸಾಕಿಕೊಂಡು ಅಲ್ಲಿಯೇ ಕಠೋರ ತಪಸ್ವಿಯಂತೆ ಕೃಷಿ ಕಾರ್ಯದಲ್ಲಿ ತೊಡಗಿಬಿಟ್ಟರು. ಅವರಿಗೆ ಬಾಹ್ಯ ಪ್ರಪಂಚದ ಸಂಪರ್ಕವೇ ಕಡಿದುಹೋಗಿತ್ತು.

ಅಷ್ಟೊಂದು ಗಾಢವಾಗಿ ಕೃಷಿಯಲ್ಲಿ ತನ್ಮಯರಾಗಿದ್ದರು. ಇದೇ ತೋಟದಲ್ಲಿ ರೇಷ್ಮೆ ಕೃಷಿಯನ್ನೂ ಆರಂಭಿಸಿದರು. ಈ ಮಧ್ಯೆ ಹಲವಾರು ಬೆಳೆಗಳನ್ನು ಹಾಕಿ ವಿಫಲರಾದರು. ಆದರೂ ಅವರು ಧೃತಿಗೆಡಲಿಲ್ಲ. ರೇಷ್ಮೆ ಸಾಕಾಣಿಕೆಯಲ್ಲಿ ಸಾಕಷ್ಟು ಪ್ರಯೋಗಗಳನ್ನು ಮಾಡಿದರು. ರೇಷ್ಮೆ ಕೃಷಿ ಮಾಡುವಾಗ ಸಾಮಾನ್ಯವಾಗಿ ರೇಷ್ಮೆ ಹುಳುಗಳ ಆಹಾರಕ್ಕೆಂದು ಹಿಪ್ಪುನೇರಳೆ ಗಿಡಗಳನ್ನು ಬೆಳೆಯುತ್ತಾರೆ. ಇದಕ್ಕಾಗಿ ಎಲ್ಲರೂ ನೆಲವನ್ನು ಉಳುಮೆ ಮಾಡುತ್ತಾರೆ. ಆದರೆ ಗೋಪಿನಾಥ್ ಹಾಗೆ ಮಾಡಲಿಲ್ಲ. ಬದಲಿಗೆ ತಮ್ಮ ಜಮೀನನ್ನೆಲ್ಲ ಸೊಪ್ಪು ಸದೆಗಳಿಂದ ಮುಚ್ಚಿದರು. ರೇಷ್ಮೆಹುಳುಗಳನ್ನು ಕಾಪಾಡಲು ಸೋಂಕುನಾಶಕ ಔಷಧವನ್ನು ಬಳಸಲಿಲ್ಲ. ರೇಷ್ಮೆ ಹುಳುಗಳನ್ನು ಸಂರಕ್ಷಿಸಲು ಅವರೇ ಅನೇಕ ಗಾಂವಟಿ ವಿಧಾನಗಳನ್ನು ಶೋಧಿಸಿದರು. ಇವು ಕ್ರಾಂತಿಕಾರಕ ಕ್ರಮಗಳೇ ಆಗಿದ್ದವು. ಕೃಷಿಯಲ್ಲಿ ಅವರ ಆಸಕ್ತಿ, ತಾದಾತ್ಮ್ಯತನ ಹಾಗೂ ಹೊಸ ಪ್ರಯೋಗಗಳನ್ನು ಕಂಡು ರೊಲ್ಯಾಕ್ಸ್ ವಾಚ್ ಕಂಪನಿ ಅವರಿಗೆ ರೊಲ್ಯಾಕ್ಸ್ ಪ್ರಶಸ್ತಿ ನೀಡಿತು. ಅಷ್ಟೊತ್ತಿಗೆ ಅವರು ಹಾಸನ ಜಿಲ್ಲೆಯಲ್ಲಷ್ಟೇ ಅಲ್ಲ, ರಾಜ್ಯದಲ್ಲಿಯೇ ಅತ್ಯಂತ ಪ್ರಗತಿಪರ ಕೃಷಿಕ ಎಂಬ ಅಗ್ಗಳಿಕೆಗೆ ಪಾತ್ರರಾಗಿದ್ದರು. ಕೇವಲ ಹತ್ತು ವರ್ಷಗಳಲ್ಲಿ ಅವರ ತೋಟ ಹಾಗೂ ಆಸುಪಾಸಿನ ದೃಶ್ಯಗಳೆಲ್ಲ ಪವಾಡಸದೃಶವಾಗಿ ಬದಲಾಗಿದ್ದವು. ರಾಜ್ಯದ ಬೇರೆ ಬೇರೆ ಊರುಗಳಿಂದ ಗೋಪಿನಾಥ್ ತೋಟ ನೋಡಲು, ಅವರ ಸಲಹೆ ಪಡೆಯಲು ಜನ ಆಗಮಿಸುತ್ತಿದ್ದರು. ಅವರು ಸಾಧಿಸಿದ ಪರಿಣತಿ ಅಂಥದ್ದು.

ಒಮ್ಮೆ ತಮ್ಮ ಬೈಕು ಕೈಕೊಟ್ಟಾಗ ಅದನ್ನು ರಿಪೇರಿ ಮಾಡಿಸಲು ಹಾಸನಕ್ಕೆ ತೆಗೆದುಕೊಂಡು ಹೋದರು. ಆದರೆ ಮೆಕ್ಯಾನಿಕ್ ಆಟ ಆಡಿಸಿದ್ದರಿಂದ ಗೋಪಿನಾಥ್ ತೊಂದರೆ ಅನುಭವಿಸುವಂತಾಯಿತು. ಹಾಸನದಲ್ಲಿ ವಿಚಾರಿಸಿದಾಗ ಅಲ್ಲಿ ಯಾವುದೇ ಬೈಕ್ ಡೀಲರ್‌ಶಿಪ್ ಇಲ್ಲದಿರುವುದು ಗೊತ್ತಾಯಿತು. ತಾನೇಕೆ ಈ ಡೀಲರ್‌ಶಿಪ್ ತೆಗೆದುಕೊಳ್ಳಬಾರದೆಂದು ಅವರಿಗೆ ಅನಿಸಿತು. ಅಷ್ಟೊತ್ತಿಗೆ ತೋಟ ಒಂದು ಹಂತಕ್ಕೆ ಬಂದಿತ್ತು. ಅವರಿಗೆ ಇನ್ನಿತರ ಚಟುವಟಿಕೆ ಮಾಡಲು ತುಸು ಸಮಯ ಸಿಗುತ್ತಿತ್ತು. ಬೈಕ್ ಡೀಲರ್‌ಶಿಪ್ ತೆಗೆದುಕೊಂಡರೆ ಅದರಿಂದ ಲಾಭ ಮಾಡಬಹುದೆಂದು ಅನಿಸಿದ್ದರಿಂದ ಮದರಾಸಿಗೆ ಹೋಗಿ ಎನ್‌ಫೀಲ್ಡ್ ಬುಲೆಟ್ ಬೈಕ್ ಕಂಪನಿಯ ಡೀಲರ್‌ಶಿಪ್ ತೆಗೆದುಕೊಂಡರು. ಕೈಯಲ್ಲಿ ಹಣವಿರಲಿಲ್ಲ. ಹಾಗೂಹೀಗೂ ಹಣ ಹೊಂದಿಸಿಕೊಂಡು ಈ ದಂಧೆ ಆರಂಭಿಸಿದರು. ತೋಟ ಮಾಡಲು ಏಕಾಂಗಿಯಾಗಿ ಹೊರಟಾಗಲೂ ಕೈಯಲ್ಲಿ ಹಣವಿರಲಿಲ್ಲ. ಬ್ಯಾಂಕಿನವರು ಸಾಲ ಕೇಳಿದರೆ ದಮಡಿ ಬಿಚ್ಚಲಿಲ್ಲ. ಪಂಪ್‌ಸೆಟ್ ಖರೀದಿಗೆ ಕೆಲವೇ ಕೆಲವು ಸಾವಿರ ಕೊಡಿ ದಮ್ಮಯ್ಯ ಎಂದರೂ ಅವರ ಮನಸ್ಸು ಕರಗಲಿಲ್ಲ. ಆದರೆ ಗೋಪಿನಾಥ್ ಉತ್ಸಾಹವೂ ಕರಗಲಿಲ್ಲ. ತೆಂಗಿನ ಸಸಿಗಳಿಗೆ ನೀರು ಹಾಕಲು ಪಂಪ್ ಸೆಟ್ ಖರೀದಿಗೆ ಸಾಲ ಸಿಗದಿದ್ದಾಗ ನೀರನ್ನು ಎತ್ತಿಕೊಂಡು ಹೋಗುವುದಕ್ಕಾಗಿ ಗೋಪಿನಾಥ್ ಕತ್ತೆಗಳನ್ನು ಸಾಕಿದರು!

ಬೈಕ್ ಡೀಲರ್‌ಶಿಪ್ ತೆಗೆದುಕೊಂಡ ಸಂದರ್ಭದಲ್ಲಿ ಪಕ್ಕದ ಕಟ್ಟಡ ಖಾಲಿ ಇತ್ತು. ಅಲ್ಲೊಂದು ಹೋಟೆಲನ್ನು ಏಕೆ ಆರಂಭಿಸಬಾರದೆಂದು ಸ್ವತಃ ಹೋಟೆಲಿಗರೂ ಆಗಿದ್ದ ಕಟ್ಟಡದ ಮಾಲೀಕರು ಹೇಳಿದರು. ಗೋಪಿನಾಥ್ ತಡಮಾಡಲಿಲ್ಲ. `ಯಗಚಿ ಟಿಫಿನ್ಸ್’ ಹೆಸರಿನಲ್ಲಿ ಹೋಟೆಲನ್ನು ಸ್ಥಾಪಿಸಿದರು. ಯಾವುದನ್ನೇ ಮಾಡಲಿ, ಅದರಲ್ಲಿ ಪಾಂಗಿತರಾಗಿ ಯಶಸ್ಸು ಗಳಿಸುವ ತನಕ ಅವರು ಸುಮ್ಮನಾಗುವವರಲ್ಲ. `ಹೋದ ಪುಟ್ಟ ಬಂದ ಪುಟ್ಟ’ ಎಂಬ ಮನೋಭಾವವಂತೂ ಇಲ್ಲವೇ ಇಲ್ಲ. ಕೈಗೆತ್ತಿಕೊಂಡ ಕೆಲಸ ಯಶಸ್ಸಾಗುತ್ತಿದ್ದಂತೆ, ಅದನ್ನು ಮುನ್ನಡೆಸಲು ಬಿಟ್ಟು ಹೊಸ ಸಾಹಸಕ್ಕೆ ಅಣಿಯಾಗುವುದು ಅವರ ಜಾಯಮಾನ.

ಈ ಗುಣವೇ ಅವರಿಂದ ಹತ್ತಾರು ಸಾಹಸಗಳಿಗೆ ಅಣಿಯಾಗುವಂತೆ ಪ್ರೇರೇಪಿಸಿದೆ. ತೋಟ ಮಾಡಲು ಕೃಷಿಕರಾದ ಗೋಪಿನಾಥ್, ದನ ಕಟ್ಟಿದರು, ಡೇರಿ ಮಾಡಿದರು. ಕೋಳಿ ಫಾರ್ಮ್ ಶುರುಮಾಡಿದರು. ರೇಷ್ಮೆ ಸಾಕಿದರು. ತೆಂಗಿನ ಮಂಡಿ ಇಟ್ಟರು. ಬೈಕ್ ಡೀಲರ್ ಆದರು. ಸ್ಟಾಕ್ ಬ್ರೋಕರ್ ಆದರು, ನೀರಾವರಿ ಪಂಪ್‌ಸೆಟ್‌ಗಳ ಡೀಲರ್ ಆದರು. ಸಾವಯವ ಕೃಷಿಯಲ್ಲಿ ವ್ಯವಸಾಯ ಮಾಡಿದರು. ಕೈತೋಟ ವಿನ್ಯಾಸಕಾರರಾದರು. ಕೃಷಿ ಸಲಹಾ ಕೇಂದ್ರ ತೆರೆದರು. ರೈತರಿಗೆ ಮಾರ್ಗದರ್ಶನ ನೀಡುವ ಸಂಸ್ಥೆ ತೆರೆದರು. ಹಾಸನದಲ್ಲಿ ಈ ಎಲ್ಲ ಕಾರ್ಯಗಳಿಂದ ಹೆಸರುವಾಸಿಯಾದಾಗ ಬಿಜೆಪಿ ಮುಖಂಡರು ರಾಜಕೀಯ ಸೇರುವಂತೆ ಒತ್ತಾಯಿಸಿದಾಗ ಆ ಪಕ್ಷದ ಹಾಸನ ಜಿಲ್ಲಾ ಅಧ್ಯಕ್ಷರಾದರು. ಗಂಡಸಿ ಕ್ಷೇತ್ರದಿಂದ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿದರು. (ಪ್ರಾಯಶಃ ಅವರು ಸೋಲು ಅಂತ ಕಂಡಿದ್ದೇನಾದರೂ ಇದ್ದರೆ ಅದು ರಾಜಕೀಯದಲ್ಲಿ ಮಾತ್ರ.)

ಆನಂತರ ಬೆಂಗಳೂರಿಗೆ ತಮ್ಮ ಕಾರ್ಯಕ್ಷೇತ್ರವನ್ನು ಬದಲಿಸಿದ ಗೋಪಿನಾಥ್, ಡೆಕ್ಕನ್ ಹೆಲಿಕಾಪ್ಟರ್ ಸಂಸ್ಥೆಯನ್ನು ಸ್ಥಾಪಿಸಿದರು! ಇಲ್ಲಿ ಯಶಸ್ವಿಯಾದ ಬಳಿಕ `ಏರ್ ಡೆಕ್ಕನ್’ ವಿಮಾನಯಾನ ಸಂಸ್ಥೆಯನ್ನು ಆರಂಭಿಸಿ ಅಲ್ಲಿಯೂ ಯಶಸ್ವಿಯಾದರು. ಪ್ರಗತಿಪರ ರೈತನೊಬ್ಬ ಹೆಲಿಕಾಪ್ಟರ್ ಸಂಸ್ಥೆ ಆರಂಭಿಸಿದ್ದೇ ಒಂದು ಅದ್ಭುತ ಸಾಹಸಗಾಥೆ. ಅದರಲ್ಲೂ ವಿಮಾನಯಾನ ಸಂಸ್ಥೆ ಸ್ಥಾಪಿಸಿದ್ದು ಭಾರತದ ವೈಮಾನಿಕ ಇತಿಹಾಸದಲ್ಲಿ ಒಂದು ಅಪೂರ್ವ ಮೈಲಿಗಲ್ಲು. ಹೆಲಿಕಾಪ್ಟರ್ ಹಾಗೂ ವಿಮಾನಯಾನ ಸಂಸ್ಥೆ ಆರಂಭಿಸುವಾಗ ನೂರಾರು, ಸಾವಿರಾರು ಕೋಟಿ ರೂ. ಬಂಡವಾಳ ಬೇಕು. ಆದರೆ ಸ್ವಂತ ವ್ಯಕ್ತಿತ್ವ ಹಾಗೂ ಛಲವನ್ನೇ ಬಂಡವಾಳವಾಗಿಸಿಕೊಂಡು ಅವರು ಬೆಳೆದ ಪರಿ ಎಂಥವರಿಗೂ ಮಾದರಿ. ಒಂದು ಕಾಲಕ್ಕೆ ಸರಕಾರಿ ಸ್ವಾಮ್ಯದ ಇಂಡಿಯನ್ ಏರ್‌ಲೈನ್ಸ್‌ನ್ನೂ ಹಿಂದಕ್ಕೆ ಹಾಕಿ ಆಗಸದಲ್ಲಿ ಪ್ರಭುತ್ವ ಸಾಧಿಸುವಂಥ ಎತ್ತರಕ್ಕೆ ಬೆಳೆದಿದ್ದನ್ನು ಗಮನಿಸಿದರೆ ರೋಮಾಂಚನವಾಗುತ್ತದೆ.

ಹೆಲಿಕಾಪ್ಟರ್ ಹಾಗೂ ಏರ್‌ಲೈನ್ಸ್ ವ್ಯವಹಾರದಲ್ಲಿ ಸ್ವಲ್ಪವೂ ಅನುಭವ ಹಾಗೂ ಜ್ಞಾನ ಇಲ್ಲದಿದ್ದರೂ ಕೇವಲ ಸಾಮಾನ್ಯಜ್ಞಾನ ಹಾಗೂ ಹಠ, ಜೀವನಪ್ರೀತಿಯಿಂದಲೇ ಅಸಾಧ್ಯವಾದುದನ್ನೂ ಸಾಧ್ಯವಾಗಿ ತೋರಿಸಿದ ಗೋಪಿನಾಥ್ ನಿಜಕ್ಕೂ ಕ್ಯಾಪ್ಟನ್! ಏರ್ ಡೆಕ್ಕನ್ ವಿಮಾನದಲ್ಲಿ ಒಂದು ರೂ.ಗೆ ಪ್ರಯಾಣಿಸಬಹುದೆಂಬುದನ್ನು ತೋರಿಸಿದಾಗ ಇಡೀ ವಿಶ್ವವೇ ಬೆರಗಾಗಿತ್ತು. ಇದಕ್ಕಿಂತ ಕಡಿಮೆ ಬೆಲೆಯ ಟಿಕೆಟ್ ವಿಶ್ವದಲ್ಲೇ ಇರಲಿಲ್ಲ. ಕೊನೆಗೆ ಏರ್‌ಡೆಕ್ಕನ್ ಅನ್ನು ಮಲ್ಯ ಅವರಿಗೆ ಒಪ್ಪಿಸಿದ ನಂತರ ಸಿಕ್ಕ ದೊಡ್ಡ ಮೊತ್ತವನ್ನು ಇಟ್ಟು ಕೊಂಡು ಗೋಪಿನಾಥ್ ಹಾಯಾಗಿರಬಹುದೆಂದು ಅಂದುಕೊಂಡರೆ ಆಗಲೇ ಮತ್ತೊಂದು ಸವಾಲನ್ನು ಮೈಮೇಲೆ ಎಳೆದುಕೊಂಡಿದ್ದರು. ಅದು ಡೆಕ್ಕನ್ 360! ವಿಮಾನದ ಮೂಲಕ ಪಾರ್ಸಲ್ ಸೇವೆ!

ಒಬ್ಬನ ಜೀವನದಲ್ಲಿ ಎಷ್ಟೆಲ್ಲ ಘಟನೆಗಳು ನಡೆಯಬಹುದು ಹಾಗೂ ಅವನ್ನೆಲ್ಲ ಹೇಗೆ ಸಕಾರಾತ್ಮಕವಾಗಿ ಪರಿವರ್ತಿಸಿಕೊಳ್ಳಬಹುದೆಂಬುದಕ್ಕೆ ಕ್ಯಾಪ್ಟನ್ ಗೋಪಿನಾಥ್ ಕಣ್ಮುಂದಿನ ನಿದರ್ಶನ. ಅವರ ಬೃಹತ್ ಆತ್ಮಕತೆಯನ್ನು ಅನುವಾದಿಸಿ, ಕರಡು ತಿದ್ದಿ ಮುದ್ರಣಕ್ಕೆ ಕಳಿಸುವ ಹೊತ್ತಿಗೆ ನಾನು ಹೊಸ ವ್ಯಕ್ತಿಯಾಗಿದ್ದೆ. ನನ್ನ ಮೇಲೆ ನನಗೇ ಹೆಚ್ಚು ವಿಶ್ವಾಸ, ನಂಬಿಕೆ ಮೂಡಿತ್ತು. ಜೀವನಪ್ರೀತಿ ಹರಡಿಕೊಂಡಿತ್ತು. ಒಂದು ಪುಸ್ತಕದಿಂದ ಇನ್ನೇನನ್ನು ನಿರೀಕ್ಷಿಸಬಹುದು? ಅಂಥ ಅನುಭವ ನಿಮ್ಮದೂ ಆಗಲಿ.