Category Archives: ಶ್ರೀನಿಧಿ ಡಿಎಸ್ – ಕಾಡುಹರಟೆ

‘ಕಾಡುಹರಟೆ’ ಹೊಡೆಯಲು ಬಂದಿರುವ ಮಲೆನಾಡಿನ ಹುಡ್ಗ ಶ್ರೀನಿಧಿ ಡಿ.ಎಸ್. ಒಬ್ಬ ಕನಸುಗಾರ. ತನ್ನ ಸುತ್ತಮುತ್ತಲಿನ ಪರಿಸರದಲ್ಲಿನ ಸೂಕ್ಷ್ಮತೆಗಳನ್ನು ಅರ್ಥಪೂರ್ಣವಾಗಿ ಗ್ರಹಿಸಿ, ಅಕ್ಷರ ರೂಪದಿ ನೀಡಬಲ್ಲ ಸಂವೇದನಾಶೀಲ ಯುವ ಲೇಖಕ. ಭಾವನೆಗಳಿಗೆ ತಕ್ಕ ವರ್ಣನೆಗಳನ್ನು ಹೊಂದಿಸಿ ಕವನ ರಚಿಸುವುದರ ಜೊತೆಗೆ, ನಿತ್ಯ ಜೀವನದ ಆಗುಹೋಗುಗಳನ್ನು ಹೊಸ ಆಯಾಮದಿ ಅಕ್ಷರಗಳನ್ನು ಪೋಣಿಸಿ ಕಥನಗಳನ್ನು ಹೆಣೆಯುವ ಕಲಾಕಾರ. ದಕ್ಷಿಣಕನ್ನಡದ ಕಿನ್ನಿಗೋಳಿಯವರಾದ ಇವರು, ಕೊಡಚಾದ್ರಿ ತಪ್ಪಲಿನಲ್ಲಿ, ನಂದಿನಿ ನದೀ ತೀರದಲ್ಲಿ ವಿಹರಿಸುವಾಗಲೆಲ್ಲಾ ಕಂಡದ್ದು ಒಂದೇ ಕನಸು, ಸಮೂಹ ಮಾಧ್ಯಮದಲ್ಲಿ ತೊಡಗಿಸಿಕೊಳ್ಳಬೇಕು ಎಂಬುದು. ತಮ್ಮ ತಂದೆಯ ಜತೆ ಹವ್ಯಾಸದ ಬೇಸಾಯದ ಜೊತೆಗೆ ಅಕ್ಷರ ಕೃಷಿಗೆ ಇಳಿಯಬೇಕು ಎಂಬುದು ಇವರ ಬಾಲ್ಯದ ಕನಸಾಗಿತ್ತು.

ಕೆಲಸ ನಿಮಿತ್ತ ಬೆಂಗಳೂರಿಗೆ ಬಂದ ಮೇಲೂ ಕಾಡು ಮೇಡುಗಳನ್ನು ಸುತ್ತುವುದು, ಒಂದು ಪಕ್ಷ ಬಾಕಿ ಎಲ್ಲಾ ಕೆಲಸಗಳನ್ನು ಮರೆತರೂ ತಿಂಗಳಲ್ಲಿ ಎರಡು ಬಾರಿಯಾದರೂ ತಪ್ಪಿಸುವುದಿಲ್ಲ. ಪರಿಸರ ಬಗೆಗಿನ ಸೆಳೆತ ಸದಾ ಒಳ್ಳೆಯ ಚಿಂತನೆಗೆ, ಬರಹಕ್ಕೆ ಸ್ಫೂರ್ತಿಯಾಗಿದೆ ಎಂದರೆ ತಪ್ಪಾಗಲಾರದು. ಸಾಹಿತ್ಯ, ಸಂಗೀತ, ಪ್ರಕೃತಿಯಲ್ಲ್ಲಿ ತನ್ನಂತೆ ಅಭಿರುಚಿಯುಳ್ಳ ಸಮಾನ ಮನಸ್ಕರ ಜೊತೆ ಸೇರಿ ಪ್ರಣತಿ ಎಂಬ ಸಂಸ್ಥೆ ಚಿಗುರೊಡೆಯಲು ಕಾರಣರಾಗಿದ್ದಾರೆ.

ಕೆಲ ಕಾಲ ಮಾನವ ಸಂಪನ್ಮೂಲ ಅಧಿಕಾರಿಯಾಗಿದ್ದಾಗ ವಿವಿಧ ಬಗೆಯ ಅಭ್ಯರ್ಥಿಗಳನ್ನು ಕಂಡು, ಜನಸಂಪರ್ಕದ ಸವಿವುಂಡು, ಕೆಲಸ ಕಹಿ ಎನಿಸುವ ಮೊದಲೇ ಅಲ್ಲಿಂದ ನೇರ ಇಳಿದಿದ್ದು ಅಕ್ಷರ ಯಜ್ಞಕ್ಕೆ. ಈಗ ಖಾಸಗಿ ಟಿವಿ ವಾಹಿನಿಯಲ್ಲಿ ಸೃಜನಶೀಲ ಕಾರ್ಯಕ್ರಮಗಳ ಸಂಯೋಜಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಬ್ಲಾಗ್ ಲೋಕದ ಬಾಡಿಗೆ ಮನೆಯಿಂದ ಜಿಗಿದು ಆಗಾಗ ಹತ್ತು ಹಲವು ತಾಣಗಳಲ್ಲಿ ಲೇಖನಗಳ ಹನಿಗಳನ್ನು ಸುರಿಸಿದ್ದು ಆದಮೇಲೆ ಈಗ ದಟ್ಸ್ ಕನ್ನಡದಲ್ಲಿ ಪ್ರತಿ ಮಂಗಳವಾರ ‘ಕಾಡುಹರಟೆ’ ಎಂಬ ಹೊಸ ಅಂಕಣದಲ್ಲಿ ಹರಟೆ ಕೊಚ್ಚಲಿದ್ದಾರೆ. ಜೊತೆಗೆ ಸ್ವಲ್ಪ ಚಿಂತನೆಗೂ ನಿಮ್ಮನ್ನು ನೂಕಲಿದ್ದಾರೆ.

ಈ ಯುವ ಬರಹಗಾರನನ್ನು ಪ್ರೋತ್ಸಾಹಿಸಿ ವಸ್ತುನಿಷ್ಠವಾಗಿ ಅಭಿಪ್ರಾಯಗಳನ್ನು ಮಂಡಿಸುವ ಜವಾಬ್ದಾರಿ ಈಗ ಓದುಗರ ಮೇಲಿದೆ. ಲೇಖಕರ ಇಮೇಲ್ ವಿಳಾಸ : shreenidhids@gmail.com

Summer camp | Children | Personality development | Creativity – ಬೇಸಿಗೆ ಶಿಬಿರವೆಂಬ ಮಕ್ಕಳ ಮನೋವಿಕಸನ ಕೇಂದ್ರ

Summer camp for children

ಬೇಸಿಗೆ ಶಿಬಿರಗಳಲ್ಲಿ ಮಕ್ಕಳ ವ್ಯಕ್ತಿತ್ವ ವಿಕಸನ ಮಾತ್ರವಲ್ಲ ಮನೋವಿಕಸನ ಕೂಡ ಆಗುತ್ತದೆ. ಎಲ್ಲ ಬಗೆಯ ಮಕ್ಕಳೊಂದಿಗೆ ಕಲೆತು, ಕಲಿತು ಬೆಳೆಯುವುದರಿಂದ ಸಾಂಘಿಕ ಜೀವನದ ಅರಿವೂ ಆಗುತ್ತದೆ. ಇತ್ತಿತ್ತಲಾಗಿ ನಗರಗಳಲ್ಲಿ ನಾಯಿಕೊಡೆಗಳಂತೆ ಬೇಸಿಗೆ ಶಿಬಿರಗಳು ಹುಟ್ಟಿಕೊಳ್ಳುತ್ತಿವೆ. ಇವೆಲ್ಲ ಬರೀ ಕಾಸು ಮಾಡುವ ಕೇಂದ್ರಗಳು ಅಂತ ಮೂಗು ಮುರಿಯದೇ ಸೂಕ್ತವಾದ ಶಿಬಿರ ಹುಡುಕಿ ಮಕ್ಕಳನ್ನು ಶಿಬಿರಗಳಿಗೆ ಕಳಿಸುವ ಜವಾಬ್ದಾರಿ ಪಾಲಕರದ್ದು.

ಬೇಸಿಗೆ ರಜೆ ಅರಂಭವಾಯಿತೆಂದರೆ, ಅಪ್ಪ ಅಮ್ಮಂದಿರಿಗೆ, ತಮ್ಮ ಮಕ್ಕಳನ್ನು ಕಂಟ್ರೋಲು ಮಾಡುವುದು ಹೇಗಪ್ಪಾ ಅನ್ನುವ ಚಿಂತೆ ಶುರು. ಇತ್ತೀಚಿನ ವರುಷಗಳಲ್ಲಿ, ಪಾಶ್ಚಾತ್ಯ ಪ್ರಭಾವದಿಂದ ದೇಶದಾದ್ಯಂತ ಹುಟ್ಟಿಕೊಂಡಿರುವ ಸಮ್ಮರ್ ಕ್ಯಾಂಪುಗಳು, ಹೆತ್ತವರ ತಲೆಬಿಸಿ ಕಡಿಮೆ ಮಾಡಿವೆ.

ಬೇಸಿಗೆ ಶಿಬಿರ ಎಂದರೆ, ಬೇಸಿಗೆ ರಜೆಯಲ್ಲಿ ಹೆಚ್ಚಾಗಿ ಎಪ್ರಿಲ್ ಮತ್ತು ಮೇ ತಿಂಗಳಲ್ಲಿ, ಅನುಭವಿ ತರಬೇತುದಾರರಿಂದ ಮಕ್ಕಳಿಗಾಗಿ ನಡೆಯುವ ಶಿಬಿರಗಳು. ಈ ಶಿಬಿರಗಳಲ್ಲಿ, ಮಕ್ಕಳ ದೈನಂದಿನ ಕಲಿಕೆಯ ಬದಲಾಗಿ, ಬೇರೆಯದೇ ರೀತಿಯ ಶಿಕ್ಷಣ ನೀಡಲಾಗುತ್ತದೆ. ಇವುಗಳು ಅಟಗಳು, ಮನಸ್ಸನ್ನು ವೃದ್ಧಿಸುವ ಮೈಂಡ್ ಗೇಮ್ ಗಳು, ಕಲೆ ಸಂಸ್ಕೃತಿಯ ಪರಿಚಯ- ಇತ್ಯಾದಿಗಳನ್ನು ಒಳಗೊಂಡಿದೆ. ಮಕ್ಕಳಲ್ಲಿ ಸಾಂಸ್ಕೃತಿಕ ಮತ್ತು ಸಮಾಜಿಕ ಬೆಳವಣಿಗೆ ಮಾಡಿಸುವುದು, ಈ ತರಹದ ಶಿಬಿರಗಳ ಮುಖ್ಯ ಉದ್ದೇಶ.

ಬೇಸಿಗೆ ಶಿಬಿರಗಳು, ಮಕ್ಕಳ ಮನೋವಿಕಾಸಕ್ಕೆ ಸಹಕಾರಿ. ಪ್ರತಿ ಬೇಸಿಗೆಯಲ್ಲೂ, ಅದೆಷ್ಟೋ ಮಕ್ಕಳು ಶಿಬಿರಗಳಲ್ಲಿ ಪಾಲ್ಗೊಂಡು, ತಮ್ಮ ಜೀವನಾನುಭವ ಹೆಚ್ಚಿಸಿಕೊಳ್ಳುತ್ತಾರೆ. ಮಕ್ಕಳನ್ನು ಇಂತಹ ಶಿಬಿರಗಳಿಗೆ ಕಳುಹಿಸುವುದರಿಂದಾಗುವ ಅನುಕೂಲಗಳು ಬಹಳಷ್ಟು. ಹೊಸ ಸಂಗತಿಗಳ ಅಧ್ಯಯನ, ಹೊಸ ಸ್ನೇಹಿತರು, ಹೊಸ ವಿಚಾರಗಳು.. ಹೀಗೆ ಮಗುವೊಂದರ ನಿಜವಾದ ವಿಕಾಸದ ವೇದಿಕೆಯಾಗಬಲ್ಲವು ಬೇಸಿಗೆ ಶಿಬಿರಗಳು. ಇಲ್ಲಿ ಮಕ್ಕಳಿಗೆ ಅತ್ಯಂತ ಅಗತ್ಯವಾದ ಸ್ವಾತಂತ್ರ್ಯದ ಪರಿಚಯವಾಗುತ್ತದೆ. ತಾವಾಗಿಯೇ ತಮ್ಮ ಕೆಲಸಗಳನ್ನು ಹೇಗೆ ಮಾಡಿಕೊಳ್ಳಬೇಕು ಎಂಬುದರ ಅರಿವಾಗುತ್ತದೆ. ತಂದೆ ತಾಯಿಗಳಿಲ್ಲದ ಸಂದರ್ಭದಲ್ಲಿ, ಹೇಗೆ ತಮ್ಮನ್ನು ತಾವು ಅರಿತುಕೊಳ್ಳಬೇಕೆಂಬುದು ತಿಳಿಯುತ್ತದೆ. ಹೊಸ ಜವಾಬ್ದಾರಿಗಳು ಬೆಳೆಯುತ್ತದೆ.

ಶಿಬಿರಗಳಲ್ಲಿ, ಕಲೆ-ಸಂಸ್ಕೃತಿಗಳ ವಿಚಾರಗಳು, ಅಟೋಟಗಳಲ್ಲಿ ಎಲ್ಲರೂ ಒಂದಾಗಿ ಪಾಲುಗೊಳ್ಳುತ್ತಾರೆ. ಇಂತಹ ಸಂದರ್ಭಗಳಲ್ಲಿ, ಒಂದು ಸಮುದಾಯದಲ್ಲಿ ಮಗು, ತಾನು ಹೇಗೆ ಇತರರೊಡನೆ ಬೆರೆಯಬೇಕು- ಉಳಿದವರೊಡನೆ ಒಟ್ಟಾಗಿ ಹೇಗೆ ಕೆಲಸ ಮಾಡಬೇಕು ಎನ್ನುವುದನ್ನು ಅರಿತುಕೊಳ್ಳುತ್ತದೆ. ಸಣ್ಣಪುಟ್ಟ ಕೆಲಸಗಳ ಮೂಲಕ, ತನ್ನ ಪರಿಣತಿಯನ್ನೂ ಬೆಳಸಿಕೊಳ್ಳುತ್ತದೆ. ವಿನೂತನ ಅನುಭವಗಳು, ಮಕ್ಕಳಲ್ಲಿನ ಪರಿಣಿತಿಯನ್ನು ಬೆಳೆಸುತ್ತದೆ. ಇಲ್ಲಿ ಮಕ್ಕಳಿಗೆ ಪರಿಣತಿ ಹೆಚ್ಚಿಸುವ ಅಟಗಳು, ಇತರ ಚಟುವಟಿಕೆಗಳನ್ನು ಹೇಳಿಕೊಡಲಾಗುತ್ತದೆ. ಇದು ಜೀವನದ ಹಾದಿಯಲ್ಲಿ ಮಕ್ಕಳಿಗೆ ಹೊಸ ದಾರಿಗಲ್ಲಾಗುತ್ತದೆ. ಇಲ್ಲಿನ ಕಲಿಕೆ, ಮುಂದಿನ ದಿನಗಳಲ್ಲಿ ಮಕ್ಕಳ ಅಸಕ್ತಿಗೆ ಹೊಸ ರೂಪ ನೀಡಬಹುದು.

ಬೇರೆ ಬೇರೆ ಕಡೆಗಳಿಂದ ಬಂದ ಹೊಸ ಮುಖಗಳ ಪರಿಚಯ ನಿಮ್ಮ ಮಕ್ಕಳಿಗಾಗುತ್ತದೆ. ಪ್ರತಿ ದಿನ ಅದೇ ಶಾಲೆ, ಅದೇ ಸ್ನೇಹಿತರನ್ನು ಹೊಂದಿದ್ದ ಮಗುವಿಗೆ, ಇಲ್ಲಿ ಹೊಸ ಸ್ನೇಹಿತರು ದೊರಕುತ್ತಾರೆ, ಹೊಸ ವಿಚಾರಗಳು ತಿಳಿಯುತ್ತವೆ. ಯಾರೊಂದಿಗೂ ಮಾತನಾಡದೇ, ತನ್ನ ಪಾಡಿಗೆ ತಾನಾಗೇ ಇರುವ ಮಕ್ಕಳೂ ಕೂಡ, ಇಂತಹ ಕಡೆಗಳಲ್ಲಿ ತಮ್ಮ ಚಿಪ್ಪಿನಿಂದ ಹೊರಬಂದು, ಸಮಾಜದಲ್ಲಿ ಎಲ್ಲರೊಂದಿಗೆ ಹೇಗೆ ಬದುಕಬೇಕು ಎನ್ನುವ ಕಲೆಯನ್ನು ಕಲಿಯುತ್ತಾರೆ.

ಮಕ್ಕಳು ಇಲ್ಲಿ ಬಹಳಷ್ಟು ಚಟುವಟಿಕೆಗಳಲ್ಲಿ ಪಾಲುಗೊಳ್ಳುವುದರಿಂದ, ತಮ್ಮ ಅಸಕ್ತಿಯೇನು ಎಂಬುದನ್ನು ಅರಿಯುತ್ತಾರೆ. ಅಲ್ಲಿ ಕಲಿಸುವ ಬೇರೆ ಬೇರೆ ಅಟಗಳಲ್ಲಿ, ಮೆದುಳಿನ ಕೆಲಸ ಹೆಚ್ಚಿಸುವ ಕ್ರಿಯೆಗಳಲ್ಲಿ ತಮಗೆ ಯಾವುದು ಇಷ್ಟ ಎಂಬುದನ್ನು ತಿಳಿದುಕೊಳ್ಳುತ್ತಾರೆ. ಇದು, ಮುಂದೆ ಅವರ ಅಸಕ್ತಿಯ ಕ್ಷೇತ್ರವನ್ನು ಅಯ್ದುಕೊಳ್ಳಲು ಉಪಕಾರಿ. ಬೇಸಿಗೆ ಶಿಬಿರಗಳು ಮಕ್ಕಳಲ್ಲಿ ನಾಯಕತ್ವದ ಗುಣಗಳನ್ನು ಕೂಡ ಬೆಳೆಸುತ್ತವೆ. ಪ್ರತಿ ದಿನ ಕೇವಲ ಶೈಕ್ಷಣಿಕ ವಿಚಾರಗಳ ಸುತ್ತ ಸುತ್ತುತ್ತಿದ್ದ ಮನಸ್ಸಿಗೆ, ಹಿತಕಾರಕ ಎನ್ನಿಸುವ ಸರಳ ಚಟುವಟಿಕೆಗಳು, ಹೊಸ ಹುರುಪು ನೀಡುತ್ತದೆ. ಗುಂಪು ಚಟುವಟಿಕೆಗಳು ಮಕ್ಕಳಲ್ಲಿ ಕೂಡಲೇ ನಿರ್ಧಾರಗಳನ್ನು ತೆಗೆದುಕೊಳ್ಳುವ. ನಾಯಕತ್ವ ವಹಿಸಿಕೊಳ್ಳುವ ಅನಿವಾರ್ಯತೆಯನ್ನು ಸೃಷ್ಟಿಸುತ್ತವೆ. ಇದು ಮುಂದಿನ ಬದುಕಿಗೆ ಸಹಕಾರಿ.

ಭಾಷಾ ಬೆಳವಣಿಗೆ ಮಾಡುವುದರಲ್ಲಿ, ಧೈರ್ಯ ಹೆಚ್ಚಿಸುವಿಕೆಯಲ್ಲಿ, ಹೊಣೆಕಾರಿಕೆ ಅರಿತುಕೊಳ್ಳುವುದರಲ್ಲಿ, ಎಲ್ಲರ ಜೊತೆಗಿನ ಪಾಲ್ಗೊಳ್ಳುವಿಕೆಯಲ್ಲಿ, ಕರ್ತವ್ಯಪ್ರಜ್ಞೆ ಮತ್ತು ನಂಬಿಕೆ ಬೆಳೆಸುವುದರಲ್ಲೂ ಈ ಕ್ಯಾಂಪ್ ಗಳ ಮಹತ್ವ ಹೆಚ್ಚಿನದು. ಸ್ವಗೌರವ ಹೆಚ್ಚಿಸಿ, ಕೀಳರಿಮೆ ಹೋಗಲಾಡಿಸುವುದರಲ್ಲೂ ಇವುಗಳ ಪಾತ್ರ ಪ್ರಮುಖ. ಯಾವುದೇ ಜಾತಿ, ಧರ್ಮಗಳ ಹಂಗಿಲ್ಲದೇ, ಬೆರೆತು ಬಾಳುವುದನ್ನು ಕೂಡ ಈ ಶಿಬಿರಗಳ ಕಲಿಸುತ್ತವೆ. ಇಲ್ಲಿ ನಡೆಸುವ ಚಟುವಟಿಕೆಗಳಲ್ಲಿ ಯಾವುದೇ ಬೇಧಭಾವ ಇರುವುದಿಲ್ಲ. ಮಕ್ಕಳು ಇಲ್ಲಿ ಎಲ್ಲರೊಂದಿಗೆ ಸಮಾನವಾಗಿ ವರ್ತಿಸುವುದನ್ನು ಕಲಿತುಕೊಳ್ಳುತ್ತಾರೆ.

ಈ ಶಿಬಿರಗಳು ಶಿಕ್ಷಣ- ಅಂಕಗಳು- ಗ್ರೇಡ್ ಪದ್ಧತಿಯಿಂದ ಹೊರತಾಗಿರುವುದರಿಂದ, ಮಕ್ಕಳ ಮನಸ್ಸಿನ ಭಾರವನ್ನು ಇಳಿಸುತ್ತವೆ. ವರುಷವಿಡೀ ಪರೀಕ್ಷೆಗಳ ಜಂಜಡದಿಂದ ನೊಂದ ಮನಸ್ಸಿಗೆ ಇವು ಸಹಾಯ ಮಾಡುತ್ತವೆ. ಕ್ಯಾಂಪ್ ಗಳಲ್ಲಿ ಭಾಗವಹಿಸುವುದರಿಂದ, ದೈಹಿಕ ಕ್ಷಮತೆ ಹೆಚ್ಚುತ್ತದೆ. ಹೊಸ ಬಗೆಯ ಅಟಗಳು, ಈಜು ಇತ್ಯಾದಿಗಳಲ್ಲಿ ಪಾಲ್ಗೊಳ್ಳುವುದರಿಂದ ಅರೋಗ್ಯ ಕೂಡ ವೃದ್ಧಿಸುತ್ತದೆ. ಮಕ್ಕಳಲ್ಲಿ ಕ್ರಿಯಾಶೀಲತೆಯನ್ನು ಅರಿತುಕೊಳ್ಳಲು ಇಂತಹ ಶಿಬಿರಗಳು ಸರಿಯಾದ ವೇದಿಕೆ ಒದಗಿಸಬಲ್ಲದು. ಕಲೆ, ಪೇಂಟಿಗ್, ನೃತ್ಯ ಇತ್ಯಾದಿ ಸಾಂಸ್ಕೃತಿಕ ಚಟುವಟಿಕೆಗಳು, ಮಕ್ಕಳಿಗೆ ಸಾಧ್ಯವಾಗಬಹುದಾದ ಹೊಸ ನೆಲೆಗಟ್ಟನ್ನು ಒದಗಿಸಬಲ್ಲವು.

ಇಂದು ಭಿನ್ನ ಭಿನ್ನ ಬಗೆಯ ಬೇಸಿಗೆ ಶಿಬಿರಗಳು ನಡೆಯುತ್ತವೆ. ಕೇವಲ ಕ್ರೀಡೆಗೆ ಸಂಬಂಧಿಸಿದವು, ಕಲಿಕೆ, ಸಾಹಸ ಕ್ರೀಡೆಗಳು, ಸಾಂಸ್ಕೃತಿಕ ಬೆಳವಣಿಗೆಗೆ ಸಹಕಾರಿಯಾಗಬಲ್ಲವು ಹೀಗೆ ಮಕ್ಕಳ ಅಭಿರುಚಿಗೆ ತಕ್ಕ ಹಾಗಿನ ಬೇಸಿಗೆ ಶಿಬಿರಗಳು ಲಭ್ಯವಿದೆ. ಕಂಪ್ಯೂಟರ್, ಫೋಟೋಗ್ರಫಿ, ನಾಟಕ ಇತ್ಯಾದಿಗಳನ್ನು ಕಲಿಸುವ ಶಿಬಿರಗಳೂ ಇವೆ. ಇದುವರೆಗೆ ಕೇಳಿರದ, ನೋಡಿರದ, ಅನುಭವಿಸಿರದ ಹೊಸ ಅನುಭೂತಿಯನ್ನು ಮಕ್ಕಳಿಗೆ ನೀಡುತ್ತವೆ. ಹೊಸ ಪ್ರಯೋಗಗಳನ್ನು ಮಾಡಲು ಸಂಪೂರ್ಣ ಅನುಮತಿ ನೀಡುತ್ತವೆ. ಇಲ್ಲಿ ಮಕ್ಕಳಿಗೆ ಹೆಜ್ಜೆ ಹೆಜ್ಜೆಗೂ ಪ್ರೋತ್ಸಾಹ ದೊರಕುತ್ತದೆ. ಸರಿಯಾದ ಬೇಸಿಗೆ ಶಿಬಿರಗಳನ್ನು ಹುಡುಕಿ- (ಕಿಸೆಗೆ ಭಾರವಾಗದ ಹಾಗಿನವು ಮತ್ತು ನಿಜಕ್ಕೂ ಉಪಯೋಗಿಯಾಗಬಲ್ಲವು) ಮಕ್ಕಳನ್ನು ಸೇರಿಸಿ ನೋಡಿ- ಅವರ ಕ್ಷಿತಿಜ ವಿಸ್ತಾರವಾದೀತು.

ದಿನಗಳೆದಂತೆ, ಅಥವಾ ವರುಷಗಳು ಕಳೆದ ಹಾಗೆ, ನಿಮ್ಮ ಮಕ್ಕಳಿಗೆ ತಾವು ಹೋದ ಬೇಸಿಗೆ ಶಿಬಿರದ ನೆನಪು ಮಾಸಿಹೋಗಬಹುದು. ಅದರೆ, ಅಲ್ಲಿ ಕಲಿತ ವಿಚಾರಗಳು, ಮನಸಿನಾಳಕ್ಕಿಳಿದು, ಜೀವನವಿಡೀ ಜೊತೆ ನೀಡುತ್ತವೆ, ಅವರಿಗೆ ತಿಳಿಯದ ಹಾಗೆ.

Advertisements

Rainwater Harvesting | Useful Tips | Solution to water crisis – ನೀರಿನ ಸದ್ಬಳಕೆಗೆ ಮನೆಯಲ್ಲಿ ಮಳೆನೀರು ಕೊಯ್ಲು

Rainwater harvesting, solution to water crisis

ಬೆಂಗಳೂರಿನಂಥ ನಗರವಷ್ಟೇ ಏಕೆ ಹಳ್ಳಿಗಳಲ್ಲಿಯೂ ಈಗ ನೀರಿನ ಕೊರತೆ ಕಾಣುತ್ತಿದೆ. ಯದ್ವಾತದ್ವಾ ಬೆಳೆಯುತ್ತಿರುವ ನಗರಗಳಲ್ಲಿ ನಾಯಿಕೊಡೆಗಳಂತೆ ನಿಂತುಕೊಳ್ಳುತ್ತಿರುವ ಅಪಾರ್ಟ್ ಮೆಂಟುಗಳಿಂದಾಗಿ ಮುಂದೊಂದು ದಿನ ನೀರಿಗಾಗಿ ಹಾಹಾಕಾರ ಎದ್ದರೂ ಆಶ್ಚರ್ಯವಿಲ್ಲ. ಗಡ್ಡಕ್ಕೆ ಬೆಂಕಿ ಹತ್ತಿದ ಮೇಲೆ ಬಾವಿ ತೋಡುವ ಬದಲು ಈಗಲೇ ನೀರಿನ ಉಳಿತಾಯಕ್ಕಾಗಿ ಸಿದ್ಧತೆ ಮಾಡಿಕೊಂಡರೆ ಒಳ್ಳೆಯದಲ್ಲವೆ? ಮಳೆನೀರು ಕೊಯ್ಲು ಅಥವಾ ರೇನ್ ವಾಟರ್ ಹಾರ್ವೆಸ್ಟಿಂಗ್ ಕುರಿತು ಶ್ರೀನಿಧಿ ಡಿಎಸ್ ವಿವರ ನೀಡಿದ್ದಾರೆ.

ನಮ್ಮ ಅಗತ್ಯಗಳಿಗೆ ಬೇಕಾದ ಸಿಹಿನೀರು ದೊರಕುವುದು ಅಂತರ್ಜಲದಿಂದ ಮತ್ತು ಕೆರೆ, ನದಿ, ಬಾವಿಗಳಿಂದ. ಬೆಂಗಳೂರಿನಂತಹ ಮಹಾನಗರಗಳಲ್ಲಿ ಅಲ್ಲಿ ಮಾತ್ರ ದೊರಕುವ ನೀರಿನ ಮೂಲಗಳು ಬಳಕೆಗೆ ಸಾಲುತ್ತಿಲ್ಲ. ನೀರಿಗಾಗಿ ಹೊರಗಿನ ಮೂಲಗಳನ್ನು ಅವಲಂಬಿಸಬೇಕಾದ ಪರಿಸ್ಥಿತಿ ಉದ್ಭವವಾಗಿದೆ.

ಹಳ್ಳಿಗಳ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗೇನೂ ಇಲ್ಲ. ಹಿಂದಿನಂತೆ ಕೆರೆ- ಕೊಳ್ಳಗಳು ತುಂಬುತ್ತಿಲ್ಲ. ಮಳೆ ಮೊದಲಿನಂತೆ ತಿಂಗಳಾನುಗಟ್ಟಲೆ ಹೊಯ್ಯವುದಿಲ್ಲ. ನೀರಿನ ಅಭಾವ ಗ್ರಾಮಗಳಲ್ಲೂ ತಲೆದೋರಿದೆ. ಹೀಗಾಗಿ ನಮಗೆ ದೊರಕುವ ಸಿಹಿನೀರ ಪ್ರಮಾಣ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ. ಹನಿ ನೀರೂ ಕೂಡಾ ಅತ್ಯಂತ ಅಮೂಲ್ಯವಾಗಿ ಪರಿಣಮಿಸುತ್ತಿದೆ. ಆದರೆ ನೀರಿನ ಲಭ್ಯತೆ ಎಷ್ಟಿದೆ ಎಂಬುದರ ಬಗ್ಗೆ ಅರಿವು ಎಲ್ಲರಿಗಿಲ್ಲ.

ಜನಸಂಖ್ಯೆ ಜಾಸ್ತಿಯಾದಂತೆ ಭೂಮಿಯಿಂದ ಮೇಲೆತ್ತುವ ನೀರಿನ ಪ್ರಮಾಣವೂ ಜಾಸ್ತಿಯಾಗುತ್ತದೆ. ಕೊಳವೆ ಬಾವಿಗಳನ್ನು ಮನೆಗೊಂದರಂತೆ ತೋಡಲಾಗುತ್ತಿದೆ. ನೀರು ಸಿಗುವವರೆಗೆ ಭೂಮಿಯ ಒಡಲಿಗೆ ಕನ್ನಹಾಕುವ ತಂತ್ರಜ್ಞಾನದಿಂದಾಗಿ ಅಂತರ್ಜಲದ ಮಟ್ಟ ದಿನೇದಿನೇ ಕುಸಿಯುತ್ತಿದೆ.

ಅಂತರ್ಜಲದ ಮಟ್ಟ ಹೆಚ್ಚಿಸಲು ರೈನ್ ವಾಟರ್ ಹಾರ್ವೆಸ್ಟಿಂಗ್ ಅಥವಾ ಮಳೆಕೊಯ್ಲಿನ ಮೂಲಕ ಎಲ್ಲರೂ ತಮ್ಮ ಅಳಿಲುಸೇವೆ ನೀಡಬಹುದು. ಹೆಚ್ಚು ಖರ್ಚಿಲ್ಲದೆ ಸರಳವಿಧಾನದಲ್ಲಿ ಮಳೆಕೊಯ್ಲು ಮಾಡಬಹುದು. ಆಗಸದಿಂದ ಬೀಳುವ ಶುದ್ಧ ಮಳೆ ನೀರು ಸುಮ್ಮನೇ ಹರಿದು, ಚರಂಡಿ ಸೇರಿ ಮುಂದೆ ಕೊಳಚೆ ನೀರಾಗಿ ಎಲ್ಲೋ ವ್ಯರ್ಥವಾಗಿ ಹೋಗುತ್ತದೆ. ಅದರ ಬದಲಿಗೆ ಮಳೆ ನೀರನ್ನು ಹಿಡಿದಿಟ್ಟು ಬಳಕೆ ಮಾಡುವುದು ಅಥವಾ ಅಂತರ್ಜಲಕ್ಕೆ ಅದನ್ನು ಸೇರಿಸುವುದು ಮಳೆಕೊಯ್ಲಿನ ಹಿಂದಿರುವ ಸಿದ್ಧಾಂತ.

ಒಮ್ಮೆ ಮಳೆ ನೀರ ಕೊಯ್ಲನ್ನು ಆರಂಭಿಸಿದರೆ, ಸಣ್ಣ – ಪುಟ್ಟ ನಿರ್ವಹಣೆಗಳ ಹೊರತಾಗಿ ಬೇರೆ ಖರ್ಚು ಇರುವುದಿಲ್ಲ. ಇದಕ್ಕೆ ನಿಮ್ಮ ಸಮಯ ಹೆಚ್ಚೇನೂ ಬೇಕಾಗಿಲ್ಲ. ಬೆಂಗಳೂರನ್ನು ಉದಾಹರಣೆಗೆ ತೆಗೆದುಕೊಳ್ಳುವುದಾದರೆ, ಇಲ್ಲಿ ಒಂದು ಲೆಕ್ಕಾಚಾರದ ಪ್ರಕಾರ ಅರವತ್ತರಿಂದ ಅರವತ್ತೈದು ಮಳೆ ದಿನಗಳು ಸಿಗುತ್ತವೆ. ದಿನವೊಂದಕ್ಕೆ ಸರಾಸರಿ 30 ಮಿಲಿಮೀಟರ್ ಮಳೆ ಆಗುತ್ತದೆ. ಮೂವತ್ತು ಅಡಿ ಉದ್ದ ನಲವತ್ತು ಚದರಡಿ ವಿಸ್ತೀರ್ಣದ ನೆಲದ ಮೇಲೆ ವರ್ಷಕ್ಕೆ ಸುಮಾರು ಒಂದು ಲಕ್ಷ ಲೀಟರ್ ನೀರಿನಷ್ಟು ಮಳೆ ಸುರಿಯುತ್ತದೆ. ಒಮ್ಮೆ ಆಲೋಚಿಸಿ ನೋಡಿ, ಎಷ್ಟೊಂದು ನೀರು ಪೋಲಾಗುತ್ತಿದೆ!

ಈ ರೀತಿ ಹರಿದು ಹೋಗುವ ಮಳೆ ನೀರನ್ನು ಸಂಗ್ರಹ ಮಾಡುವ ಬಗೆ ಬಲು ಸುಲಭ. ನಿಮ್ಮ ಬಳಿ ಇರುವ ಸೀಮಿತ ಸಂಪನ್ಮೂಲಗಳಿಂದಲೇ ಮಳೆಕೊಯ್ಲು ಮಾಡಬಹುದು. ನೀವಿರುವುದು ಸಣ್ಣ ಮನೆಯಾಗಿದ್ದು , ಮಳೆ ನೀರಿನ ಸಂಗ್ರಹಕ್ಕೆ ಜಾಗದ ಕೊರತೆ ಬರಬಹುದು ಎಂಬ ಸಂಶಯವಿರಬಹುದು. ಆದರೆ, ಮಳೆ ಕೊಯ್ಲಿಗೆ ಎಷ್ಟು ಸಣ್ಣ ಜಾಗ ಸಿಕ್ಕಿದರೂ ಸಾಕು.

ಮಳೆಕೊಯ್ಲು ಮಾಡುವ ಸರಳ ರೀತಿ ಹೀಗಿದೆ:

1. ತಾರಸಿ ಮನೆ ನಿಮ್ಮದಾಗಿದ್ದರೆ, ಮನೆಯ ತಾರಸಿಯಿಂದ ಮಳೆ ನೀರು ಹೊರ ಹೋಗಲು ಪೈಪ್ ಇದ್ದೇ ಇರುತ್ತದೆ. ಆ ಪೈಪನ್ನು ನೇರವಾಗಿ ಪ್ಲಾಸ್ಟಿಕ್ ಡ್ರಮ್ ಅಥವಾ ಸಿಮೆಂಟಿನ ಸಂಪಿಗೆ ಜೋಡಿಸಿ.
2. ನಿಮ್ಮದು ಹೆಂಚಿನ ಮನೆಯಾದರೆ ಅಡ್ಡಡ್ಡ ಕತ್ತರಿಸಿದ ದೊಡ್ಡ ಪಿವಿಸಿ ಪೈಪುಗಳನ್ನು ಹೆಂಚುಗಳ ಕೊನೆಗೆ ಜೋಡಿಸಿ, ನೀರನ್ನು ಡ್ರಮ್ ಅಥವಾ ಸಂಪಿನೊಳಗೆ ಹೋಗುವಂತೆ ಮಾಡಿ.
3. ಜಾಳಿಗೆಯೊಂದನ್ನು ಅಳವಡಿಸುವ ಮೂಲಕ ಪೈಪಿನಿಂದ ಬರುವ ನೀರಿನಲ್ಲಿರುವ ಕಸ ಕಡ್ಡಿ ಡ್ರಮ್-ಗೆ ಅಥವಾ ಸಂಪಿನೊಳಗೆ ಸೇರುವುದನ್ನು ತಡೆಯಿರಿ.
4. ನೀರನ್ನು ಬಳಸಲು ಆರಂಭಿಸಿ.

ನೆಲ ಮಟ್ಟಕ್ಕಿಂತ ಕೆಳಗಿರುವ ನೀರು ಸಂಗ್ರಹಿಸುವ ತೊಟ್ಟಿ ಅಥವಾ ಸಂಪು ನಿಮ್ಮ ಮನೆಯಲ್ಲಿದ್ದರೆ, ದೊಡ್ಡ ಪ್ರಮಾಣದಲ್ಲಿ ಮಳೆಕೊಯ್ಲು ಮಾಡಬಹುದು.

1. ಸಂಗ್ರಹವಾದ ಮಳೆನೀರನ್ನು ಪೈಪೊಂದರಲ್ಲಿ ಬರುವಂತೆ ಮಾಡಬೇಕು.
2. ನೆಲಮಟ್ಟದಲ್ಲಿ 4ರಿಂದ 6 ಅಡಿ ಎತ್ತರ – 3 ಅಡಿ ಅಗಲದ ಫಿಲ್ಟರ್ ನಿರ್ಮಿಸಬೇಕು.
3. ನೀರನ್ನು ಶುದ್ಧಗೊಳಿಸಲು 4 ಇಂಚು ಇದ್ದಿಲು ಮತ್ತು 4 ಇಂಚು ಮರಳನ್ನು ಫಿಲ್ಟರ್ ಗೆ ಸೇರಿಸಬೇಕು.
4. ಇದರ ಮೂಲಕ ಹಾದ ಮಳೆ ನೀರು ಶುದ್ಧಗೊಂಡು ಪೈಪ್ ಮುಖಾಂತರ ಸಂಪನ್ನು ಸೇರುತ್ತದೆ.
5. ಸಂಪಿನಲ್ಲಿ ಸಂಗ್ರಹಗೊಂಡ ನೀರನ್ನು over head tankಗೆ ಸೇರಿಸಿ ಬಳಸಬಹುದು.

ಹೊಸದಾಗಿ ಮನೆ ಕಟ್ಟುತ್ತಿರುವವರು 6,000 ಲೀಟರ್ ನಿಂದ 9,000 ಲೀಟರ್ ಸಾಮರ್ಥ್ಯವಿರುವ ಸಂಪನ್ನು ಕಟ್ಟಿಸುವುದು ಒಳ್ಳೆಯದು. ಒಮ್ಮೆ ಬೀಳುವ ಸಾಧಾರಣ ಮಳೆಗೆ ಮೂರರಿಂದ ಮೂರೂವರೆ ಸಾವಿರ ಲೀಟರ್ ನೀರು ಸಂಪಲ್ಲಿ ಸಂಗ್ರಹವಾಗುತ್ತದೆ. ನಿಮ್ಮ ಬಳಿ ಸಂಪು ಇಲ್ಲದಿದ್ದರೂ ಚಿಂತೆ ಮಾಡಬೇಕಿಲ್ಲ. ಮನೆಯ ಪಕ್ಕದಲ್ಲೇ 8-12 ಅಡಿಗಳ ಎತ್ತರದಲ್ಲಿ ಟ್ಯಾಂಕೊಂದನ್ನು ನಿರ್ಮಿಸಿ, ನೀರೆಲ್ಲವನ್ನು ಅಲ್ಲಿ ಸಂಗ್ರಹಿಸಿ ನಂತರ ಆ ನೀರನ್ನು ಬಳಸಿಕೊಳ್ಳಬಹುದು. ಈ ವ್ಯವಸ್ಧೆಯಲ್ಲಿ ಟ್ಯಾಂಕ್ ನಿಂದ ನಲ್ಲಿಗಳಿಗೆ ಸಂಪರ್ಕ ಕೊಟ್ಟು, ನೀರನ್ನು ನೇರವಾಗಿ ನಿಮ್ಮ ಬಳಕೆಗೆ ಉಪಯೋಗಿಸಿಕೊಳ್ಳಬಹುದಾಗಿದೆ.

ಮಳೆಕೊಯ್ಲು ಮಾಡುವವರಿಗೆ ಸಲಹೆಗಳು:

1. ಮನೆಯ ಹಂಚು, ತಾರಸಿಯ ಮೇಲ್ಮೈಯನ್ನು ಗಲೀಜಾಗದಂತೆ ನೋಡಿಕೊಳ್ಳಿ.
2. ತಾರಸಿಯಲ್ಲಿ ರಾಸಾಯನಿಕಗಳು, ಕ್ರಿಮಿನಾಶಕಗಳನ್ನು ಸಂಗ್ರಹಿಸಬೇಡಿ.
3. ಮಳೆಗಾಲದ ಆರಂಭಕ್ಕೆ ಮುನ್ನ ಹಂಚು, ತಾರಸಿಯನ್ನು ಗುಡಿಸಿ ಚೊಕ್ಕಟವಿರಿಸಿಕೊಳ್ಳಿ.
4. ಮೊದಲ ಮಳೆಯ ನೀರಿನ ಸಂಗ್ರಹ ಬೇಡ.
5. ಮಳೆಗಾಲ ಮುಗಿದ ನಂತರ ಪೈಪುಗಳನ್ನು ಕಳಚಿಡಿ.
6. ಎರಡು ವರ್ಷಗಳಿಗೊಮ್ಮೆ ಫಿಲ್ಟರ್ ನ ಇದ್ದಿಲು ಮತ್ತು ಮರಳು ಬದಲಾಯಿಸಿ.
7. ಕುಡಿಯಲು ಮಳೆ ನೀರನ್ನು ಬಳಸುತ್ತೀರಾದರೆ:
a. ಪಾದರಕ್ಷೆ ಬಳಸಿ ತಾರಸಿಯಲ್ಲಿ ಓಡಾಡಬೇಡಿ.
b. ಡಿಟರ್ಜಂಟ್ ಯುಕ್ತ ನೀರು ಇರುವ ಬಟ್ಟೆಗಳನ್ನು ತಾರಸಿಯಲ್ಲಿ ಒಣಗಿಸಬೇಡಿ.

ಮಳೆಕೊಯ್ಲಿನಿಂದ ಸಂಗ್ರಹಿಸಿದ ಮಳೆನೀರನ್ನು ಎಷ್ಟುದಿನ ಬೇಕಾದರೂ ಇಡಬಹುದು. ಗಾಳಿ, ಬೆಳಕು ಬೀಳದ ಜಾಗದಲ್ಲಿ ನೀರನ್ನು ಸಂಗ್ರಹಿಸಿಟ್ಟು ನಿಮಗೆ ಬೇಕಾದಾಗ ಉಪಯೋಗಿಸಿಕೊಳ್ಳಬಹುದು. ಮಳೆ ಬರುತ್ತಿರುವಾಗ ಅದರ ಪ್ರಾಮುಖ್ಯತೆ ತಿಳಿಯುವುದಿಲ್ಲ. ಹೀಗಾಗಿ, ಈ ಬಿರು ಬೇಸಗೆಯಲ್ಲೇ, ಮಳೆ ನೀರು ಕೊಯ್ಲಿಗೆ ಬೇಕಾದ ಸಿದ್ಥತೆ ಮಾಡಿಕೊಂಡರೆ ಮುಂದೆ ಅನುಕೂಲವಾದೀತು.

Summer vacation | Childrens’ game | Childhood | – ಬೇಸಿಗೆ ರಜೆಯಲ್ಲಿ ಮಕ್ಕಳ ರಸ್ತೆಯ ಆಟಗಳು!

Let the children enjoy their childhood (courtesy : chaayakannadi.blogspot.com)

ಪರೀಕ್ಷೆ ಮುಗಿದು ಬೇಸಿಗೆ ರಜಾ ಶುರುವಾದದ್ದೇ ರಸ್ತೆ, ವಠಾರಗಳೆಲ್ಲ ಜೀವಕಳೆಯಿಂದ ತುಂಬಿಬಿಡುತ್ತವೆ. ಮಕ್ಕಳ ತಂಟೆ, ತಕರಾರು, ಅಳು, ಕಿರುಚಾಟ ನೋಡಿದರೆ ಶಾಲೆಯೇ ಇದ್ದಿದ್ದರೆ ಚೆನ್ನಾಗಿತ್ತು ಅನ್ನಿಸುತ್ತದೆ ಕೆಲಬಾರಿ. ಆದರೆ, ಮಕ್ಕಳಾಡುವ ಲಗೋರಿ, ಕುಂಟೆಬಿಲ್ಲೆ, ಕಣ್ಣಾಮುಚ್ಚಾಲೆ, ಬುಗುರಿ, ಕ್ರಿಕೆಟ್ಟು ಆಟಗಳನ್ನು, ಚಿಲಿಪಿಲಿ ಕಲರವ, ಅವರ ನಲಿದಾಟವನ್ನು ನೋಡುವುದೇ ಒಂದು ಮಜಾ. ಮಕ್ಕಳು ಬಾಲ್ಯವನ್ನು ಸಖತ್ತಾಗಿ ಎಂಜಾಯ್ ಮಾಡಲಿ, ಅವರನ್ನು ತಡೆಯಬೇಡಿ.

“ಯೇ ಮಹೇಶಾ, ನಾ ಹೇಳ್ಕೊಡ್ತೀನಿ ನೋಡೋ ಹೆಂಗೆ ಅಂತ” ಎಂದು ಯಾವನೋ ಹುಡುಗ ಕೀರಲು ದನಿಯಲ್ಲಿ ಕಿರುಚುವಾಗ ಎಚ್ಚರಾಯಿತು. ದಿನ ಬೆಳಗೂ ಈಗೀಗ ಇದೇ ಆಗಿದೆ. ನಾನೇನೋ ಸ್ವಲ್ಪ ಹೊತ್ತು ಮಲಗೋಣ ಅಂತ ವಿಚಾರ ಮಾಡಿಕೊಂಡು, ಹೊದ್ದು ಮಲಗಿದ್ದರೆ, ಫ್ಯಾನಿನ ಜೋರು ತಿರುಗುವಿಕೆಯನ್ನೂ ಭೇದಿಸಿಕೊಂಡು ಕೆಳಗೆ ಆಟವಾಡುವ ಹುಡುಗರ ದನಿ ಬಂದು ನನ್ನ ಕಿವಿ ಸೀಳುತ್ತದೆ, ಬೆಳಗ್ಗೆ ಎಂಟು ಗಂಟೆಗೇ. ಬೇಸಿಗೆ ರಜೆ ಈಗಾಗಲೇ ಶುರು ಅವರಿಗೆ. ಹಾಗಾಗಿ ಹಬ್ಬ!

ಈಗೊಂದು ತಿಂಗಳಿಂದ ಖಾಲಿ ಹೊಡೆಯುತ್ತಿದ್ದ ರಸ್ತೆ, ಈಗ ಮತ್ತೆ ತುಂಬಿಕೊಂಡು ಬಿಟ್ಟಿದೆ. ನಮ್ಮ ರೋಡಲ್ಲಿ ಸುಮಾರು ಒಂದೇ ವಾರಿಗೆಯ, ಅಂದರೆ ಆರರಿಂದ ಎಂಟೊಂಬತ್ತನೇ ಕ್ಲಾಸಿಗೆ ಹೋಗುವ ಮಕ್ಕಳ ಪುಟ್ಟ ದಂಡೇ ಇದೆ. ಪ್ರಾಯಶ: ಎಲ್ಲರಿಗೂ ಪರೀಕ್ಷೆಗಳು ಮುಗಿದಿರಬೇಕು ಅನ್ನಿಸುತ್ತದೆ, ಹಾಗಾಗಿ ನಮ್ಮ ರಸ್ತೆಯ ಮೇಲಿಂದ ಹೋಗುವ ವಾಹನಗಳೂ ದಾರಿ ಬದಲಿಸಿಕೊಂಡು ಹೋಗುವ ಸ್ಥಿತಿ ನಿರ್ಮಾಣವಾಗಿದೆ. ಆಚೆ ಮನೆಯ ಅಂಕಲ್ಲು ತಮ್ಮ ಸ್ವಿಫ್ಟನ್ನ ಮಕ್ಕಳಿಗೆ ಅನುಕೂಲವಾಗಲಿ ಎಂದೋ, ಅಥವ ಗಾಜು ಒಡೆಯದಿರಲಿ ಎಂದೋ, ಪಕ್ಕದ ರಸ್ತೆಯ ಮರದ ಕೆಳಗೆ ನಿಲ್ಲಿಸಿ ಬರುವುದನ್ನು ರೂಢಿಸಿಕೊಂಡಿದ್ದಾರೆ.

ಬೆಳಗ್ಗಿನಿಂದ ಸಂಜೆಯವರೆಗೆ, ಪುರುಸೊತ್ತೇ ಇಲ್ಲದ ಹಾಗೆ, ಒಂದಾದ ಮೇಲೊಂದರಂತೆ ಆಟಗಳೇ ಆಟಗಳು! ಮಧ್ಯಾಹ್ನ ಊಟಕ್ಕೆ ಅವರವರ ಅಮ್ಮಂದಿರು ಕರೆದು, ಆದರೂ ಬರದಿದ್ದಾಗ, ಖುದ್ದು ಸೌಟಿನ ಸಮೇತ ಅವರುಗಳು ರೋಡಿಗೇ ಇಳಿದು ಎಳೆದುಕೊಂಡು ಹೋದಾಗಿನ ಅರ್ಧ ಗಂಟೆ ಮಾತ್ರ ರಸ್ತೆ ಖಾಲಿ ಇರುತ್ತದೆ. ಮತ್ತೆ ಯಥಾ ಪ್ರಕಾರ- ಬಿಸಿಲು,ಮಳೇ ಏನೂ ಲೆಕ್ಕಿಸಿದೇ ಆಟವೋ ಆಟ.

ಬೆಳಗ್ಗೆ ಎಂಟು ಗಂಟೆಗೆ ಮಾಮೂಲಾಗಿ ಕ್ರಿಕೆಟ್ ನಿಂದ ಆಟಗಳ ಸರಣಿ ಆರಂಭವಾಗುತ್ತದೆ. ಏಳೋ, ಒಂಬತ್ತೋ ಹುಡುಗರಿದ್ದಾಗ, ಒಬ್ಬನಿಗೆ ಜೋಕರಾಗುವ ಭಾಗ್ಯ. ಅಂದರೆ ಎರಡೂ ಟೀಮಿಗೆ ಆಡುತ್ತಾನೆ ಅವನು! ಮೊದಮೊದಲು ಜೋಕರಾಗುವುದು ಅಂದರೆ ಬೇಜಾರಾಗುತ್ತಿತ್ತು ಹುಡುಗರಿಗೆ. ಆದರೆ ಈಗ ಜೋಕರು ತಾನಾಗುತ್ತೇನೆ ಅಂತಲೇ ಗಲಾಟೆ ಆರಂಭ. ಏಕೆಂದರೆ ಎರಡೂ ಟೀಮುಗಳಲ್ಲಿ ಬ್ಯಾಟಿಂಗು, ಬೌಲಿಂಗು ಎಲ್ಲ ಸಿಗುತ್ತದೆ, ಯಾರಿಗುಂಟು ಯಾರಿಗಿಲ್ಲ. ಅದಕ್ಕೇ ಈಗ ಜೋಕರಾದವನಿಗೆ ಒಂದು ಟೀಮಲ್ಲಿ ಬೌಲಿಂಗು-ಇನ್ನೊಂದರಲ್ಲಿ ಬ್ಯಾಟಿಂಗು ಅಂತ ಮಾಡಿಕೊಂಡಿದ್ದಾರೆ- ಎಷ್ಟು ದಿನಕ್ಕೆ ಈ ನಿಯಮವೋ, ಗೊತ್ತಿಲ್ಲ.

ಹುಡುಗರು ಕ್ರಿಕೆಟ್ [^] ಆಡುತ್ತಿದ್ದಾರೆ ಅಂದುಕೊಂಡು ಒಳ ಹೋದರೆ, ಹೊರಬರುವಷ್ಟರಲ್ಲಿ ತಟಕ್ಕನೆ ಹೊರಗಿನ ಮಾಹೋಲು ಬದಲಾಗಿ ಬಿಟ್ಟಿರುತ್ತದೆ. ಹತ್ತು ಗಂಟೆಯ ಏರು ಬಿಸಿಲಿಗೆ, ಬ್ಯಾಟು ಬಾಲುಗಳೆಲ್ಲ ಕೇರ್ಲೆಸ್ಸಾಗಿ ಅಲ್ಲೇ ರಸ್ತೇ ಮೇಲೆ ಅನಾಥವಾಗಿ ಬಿದ್ದಿರುತ್ತವೆ. ಏನಾಗುತ್ತಿದೆ ಅಂತ ನೋಡಿದರೆ, ಕಣ್ಣಾಮುಚ್ಚಾಲೆ! ನಾನು ಎರಡನೇ ಮಹಡಿಯಲ್ಲಿರುವುದರಿಂದ, ಯಾರ್ಯಾರು ಎಲ್ಲೆಲ್ಲಿ ಅಡಗಿ ಕೂತಿದ್ದಾರೆ ಅನ್ನುವುದೂ ನಿಚ್ಚಳವಾಗಿ ಕಾಣುತ್ತಿರುತ್ತದೆ.

ಎದುರಿನ ಮನೆಯ ಸಿಡುಕಿ ಮೂತಿ ಅಜ್ಜಿ ದಿನಾ ನೀರು ಹಾಕಿ, ಪೊದೆಯಂತಾಗಿರುವ ದಾಸವಾಳ ಗಿಡದ ಮರೆ, ಖಾಲಿ ಸೈಟಲ್ಲಿ ಪೇರಿಸಿಟ್ಟ ಕಟ್ಟಿಗೆ ರಾಶಿ- ಹೀಗೆ ಈ ಕೀರ್ತನ್ನು, ಮಹೇಶ, ಅನಿತ ಎಲ್ಲರೂ ತಮ್ಮದೇ ಆದ ಸ್ಪೆಷಲ್ಲು ಜಾಗಗಳನ್ನ ಹೊಂದಿದ್ದು, ಅಲ್ಲಲ್ಲಿ ಅವರವರೇ ಅಡಗಿಕೊಂಡಿರುತ್ತಾರೆ. ಅಪ್ಪಿತಪ್ಪಿ ಯಾರಾದರೂ ಇನ್ನೊಬ್ಬರ ಜಾಗಕ್ಕೆ ಹೋಗಿಬಿಟ್ಟರೆ, ಅಲ್ಲೇ ತಿಕ್ಕಾಟ ಆರಂಭವಾಗಿ, ಮೌನವಾಗೇ ಹೊಡೆದಾಡಿಕೊಳ್ಳುತ್ತಾರೆ. ಅದರಲ್ಲೂ ಗುಂಪು ರಾಜಕೀಯ ಬೇರೆ- ತಮ್ಮ ಆಪ್ತರು ಅಡಗಿಕೊಂಡಿದ್ದು ಕಂಡಿದ್ದರೂ, ತಮಗಾಗದವರನ್ನೇ ಹುಡುಕಿ ಔಟ್ ಮಾಡುವ ಕುತಂತ್ರ.

ಕಣ್ಣಾ ಮುಚ್ಚಾಲೆ ಬೇಜಾರು ಬರುವಷ್ಟು ಹೊತ್ತಿಗೆ, ನಾಲ್ಕೆಂಟು ಶಟಲ್ ರ‌್ಯಾಕೆಟ್ಟುಗಳು ಹೊರಬಂದು, ಇಡೀ ರಸ್ತೆಯ ತುಂಬ ಟಕಾಟಕ್ ಸದ್ದಿನ ಅನುರಣನ. ನಮ್ಮ ಕೋರ್ಟ್ಗೆ ನಿಮ್ಮ ಶಟ್ಲು ಬೀಳುವ ಹಾಗಿಲ್ಲ, ನೀನ್ಯಾಕೆ ನನ್ನ ಕೋರ್ಟೊಳಗೆ ಬಂದೆ-ಜಗಳವೋ ಜಗಳ. ಅಷ್ಟು ಹೊತ್ತಿಗೆ ಯಾರಿಗಾದರೂ ಸಂಬಂಧಿಸಿದ ಅಮ್ಮನೊಬ್ಬಳು ಹೊರಬಂದು, ತಮ್ಮ ಮಗನದೋ ಮಗಳದೋ ಹೆಸರಿಡಿದು ಕರೆದು, ಕಣ್ಣು ಬಿಟ್ಟಳು ಅಂದರೆ, ಎಲ್ಲರೂ ಗಪ್ ಚುಪ್.

ಅಷ್ಟೊತ್ತಿಗೆ ಮಧ್ಯಾಹ್ನ ಊಟದ ಸಮಯ. ಈ ಹುಡುಗರು ಊಟ ಮಾಡಿಕೊಂಡು ಬರುವಷ್ಟರಲ್ಲಿ ಒಂದಿಬ್ಬರು ಹುಡುಗಿಯರು ಬಂದು, ರೋಡಲ್ಲೇ ಮನೆಗಳನ್ನು ಹಾಕಿಕೊಂಡು, ಕುಂಟಾಬಿಲ್ಲೆ ಆಡುತ್ತಿರುತ್ತಾರೆ, ಅವರ ಪಾಡಿಗೆ. ಹುಡುಗ ಪಾಳಯ ಬಂದಿದ್ದೇ, ಹೋಗ್ರೇಲೇ, ಹೆಣ್ ಮಕ್ಳಾಟ ಇದು, ಬೇರೆ ಕಡೆ ಹೋಗಿ ಆಡ್ಕಳಿ, ಈ ಜಾಗ ನಮಗೆ ಬೇಕು ಅಂತ ಕಿರಿಕ್ ಶುರು ಹಚ್ಚಿದ್ದೇ, ಹೋಗ್ರೋಲೋ, ಧಮ್ ಇದ್ರೆ ನಮ್ ಹಾಂಗೆ ಆಡಿ ತೋರ್ಸಿ, ಅಂತೆಲ್ಲ ಕಿಚಾಯಿಸಿ, ಅವರೂ ಕುಂಟಾಕಿ ಆಡಲೆಲ್ಲ ಹೋಗಿ, ಆಗದೇ ಒದ್ದಾಡಿ- ಹುಡುಗೀರೆಲ್ಲ ನಕ್ಕು , ಹುಡುಗರ ಗುಂಪಿನ ಯಾರಿಗಾದರೂ ಜೋರು ಸಿಟ್ಟು ಬಂದು, ಹೊಡೆದು, ಈ ಪುಟ್ಟ ಹುಡುಗಿ ಬಾಯಿಗೆ ಕೈ ಇಟ್ಟುಕೊಂಡು ಅತ್ತು- ಎಲ್ಲ ಸೇರಿ ಸಮಾಧಾನ ಮಾಡಿ.. ಅಬ್ಬಬ್ಬ.

ಮೂರು ಗಂಟೆ ಹೊತ್ತಿಗೆ ಲಗೋರಿ ಶುರು! ಈ ಪುಟಾಣಿ ಏಜೆಂಟ್ ಪಾಳಯ ಅತ್ಯಂತ ಉತ್ಸಾಹದಿಂದ ಆಡುವ ಆಟ ಇದು. ಅಲ್ಲೆಲ್ಲೋ ಕಟ್ಟುತ್ತಿರುವ ಮನೆ ಹತ್ತಿರದಿಂದ, ಹನ್ನೊಂದು ನುಣುಪಾದ ಟೈಲ್ಸ್ ತುಂಡುಗಳನ್ನ ತಂದಿಟ್ಟುಕೊಂಡಿದ್ದಾರೆ. ಮಧ್ಯ ರಸ್ತೆಯಲ್ಲಿ ಚಾಕ್ಪೀಸ್‌ನಿಂದ ವೃತ್ತ ಬರೆದು, ಟೀಮು ಮಾಡಿಕೊಂಡು ಲಗೋರಿ ಶುರು ಹಚ್ಚಿಕೊಂಡರು ಅಂದರೆ, ಇನ್ನು ಮೂರು ತಾಸಿಗೆ ತೊಂದರೆ ಇಲ್ಲ. ಮೊದಲೇ ನಮ್ಮ ರಸ್ತೆ ಕಿಷ್ಕಿಂದೆ, ಅದರಲ್ಲಿ ಈ ಲಗೋರಿ ಶುರುವಾದರೆ, ಕೆಲಬಾರಿ ರಸ್ತೆ ಮೇಲೆ ಸುಮ್ಮನೇ ನಡೆದುಕೊಂಡು ಹೋಗುತ್ತಿರುವ ಬಡಪಾಯಿಗಳೂ ಚೆಂಡಿನೇಟು ತಿಂದುಬಿಡುತ್ತಾರೆ. ಪೆಟ್ಟು ತಿಂದಾತ ಕಣ್ಣು ಕೆಂಪು ಮಾಡಿಕೊಂಡು ಅವರನ್ನ ನೋಡಿದರೆ, ಅತ್ಯಂತ ದೈನ್ಯ ಮುಖ ಹೊತ್ತು, ಸಾರೀ ಅಂಕಲ್ ಅನ್ನುವ ಹುಡುಗನನ್ನು ಕಂಡಾಗ- ಹೊಡೆಸಿಕೊಂಡವನೇ ಅಯ್ಯೋ ಪಾಪ ಅಂದುಕೊಂಡು ಹೋಗಿಬಿಡುತ್ತಾನೆ. ಆತ ರಸ್ತೆ ತಿರುವು ದಾಟಿದ್ದಾನೋ ಇಲ್ಲವೋ- ಇಲ್ಲಿ ಜೋರು ನಗೆಯ ಊಟೆ!

ಇದು ನಮ್ಮ ರಸ್ತೆಯ ಮಕ್ಕಳ ನಿತ್ಯದ ದಿನಚರಿ. ಹಾಗೆಂದು ಈ ದಿನಚರಿಗೆ ಅಡಚಣೆಗಳು ನಿತ್ಯವೂ ಬರುತ್ತದೆ. ಕೀರ್ತನ್ ಅಣ್ಣನ ಹೊಸ ಮೊಬೈಲಿನ ಗೇಮು, ಅರ್ಚನಾಗೆ ಅವಳಪ್ಪ ತೆಗಿಸಿಕೊಟ್ಟಿರೋ ಹೊಸ ಸೈಕಲ್ಲು, ಕೆಲ ಬಾರಿ ರೊಟೀನ್ ಆಚರಣೆಗಳನ್ನ ತಪ್ಪಿಸುತ್ತವೆ. ಆದರೂ- ಸ್ವಲ್ಪೊತ್ತು ಬಿಟ್ಟು ಮತ್ತೆ ಎಲ್ಲರೂ ಅದೇ ರಸ್ತೆಗೆ ವಾಪಸ್ಸು! ಹೊಸ ಸೈಕಲ್ಲು ಕೊಡಿಸಿದರಾದರೂ ಮಗಳು ಬಿಸಿಲಿಗೆ ಅಲೆಯುವುದು ತಪ್ಪುತ್ತದೆ ಅಂದುಕೊಂಡಿದ್ದ ಅರ್ಚನಾಳ ಅಪ್ಪನ ಮುಖ ನೋಡಬೇಕು ನೀವು ಆವಾಗ!

ಇವತ್ತು ಎದ್ದಾಗ, ಏನಪ್ಪಾ ಇದು ಈತರ ಕಿರುಚಾಟ ಅಂತ ನೋಡಿದರೆ, ಯಾವನೋ ಮಹಾನುಭಾವ ಬುಗರಿಗಳನ್ನು ತಂದುಬಿಟ್ಟಿದ್ದ! ಪೆಕರು ಪೆಕರಾಗಿ ಬುಗರಿಗೆ ಹಗ್ಗ ಸುತ್ತುತ್ತಿದ್ದ ಮಹೇಶಂಗೆ, ಇನ್ನೊಬ್ಬ ಪೋರ, ಯೇ ಮಹೇಶಾ, ನಾ ಹೇಳ್ಕೊಡ್ತೀನಿ ನೋಡೋ ಹೆಂಗೆ ಅಂತ ಬುಗರಿ ತಿರುಗಿಸೋ ಬೇಸಿಕ್ಸು ಹೇಳಿ ಕೊಡುತ್ತಿದ್ದ. ಅಲ್ಲೇ ಪಕ್ಕದಲ್ಲಿ ಕೀರ್ತನ್ನು, ಗಾಳಿಪಟ ಮಾಡುತ್ತ ಕೂತಿದ್ದ. ಮತ್ತೊಂದಿಷ್ಟು ಹೊಸ ಆಟಗಳು ಸೇರಿಕೊಂಡವಲ್ಲಪ್ಪ ಅಂದಕೊಂಡು, ನಾನೂ ಖುಷಿಯಿಂದ ಒಳಬಂದೆ.

Health is wealth | Food culture | Eat to live | ಮಾತು ಬಲ್ಲವಗೆ ಜಗಳವಿಲ್ಲ ಊಟ ಬಲ್ಲವಗೆ ರೋಗವಿಲ್ಲ

Health is wealth

ಮಾತು ಬಲ್ಲವನಿಗೆ ಜಗಳವಿಲ್ಲ, ಊಟ ಬಲ್ಲವನಿಗೆ ರೋಗವಿಲ್ಲ’ ಎಂಬ ಗಾದೆ ಎಲ್ಲರೂ ಕೇಳಿಯೇ ಇರುತ್ತಾರೆ, ಆದರೆ ಆಚರಣೆಗೆ ತರುವವರು ತುಂಬಾ ಕಡಿಮೆ. ಬದಲಾಗುತ್ತಿರುವ ಜೀವನಶೈಲಿ ಕೂಡ ನಮ್ಮ ಆಹಾರವಿಧಾನದಲ್ಲಿ ಸಾಕಷ್ಟು ಬದಲಾವಣೆ ತಂದಿದೆ. ಇದೆಲ್ಲಕ್ಕಿಂತ ಹೆಚ್ಚಾಗಿ ಆಹಾರ ಸಂಸ್ಕೃತಿಯ ಬಗ್ಗೆ ನಿರ್ಲಕ್ಷ, ತಿಳಿವಳಿಕೆ ಇಲ್ಲದಿರುವುದು ನಮ್ಮ ದೇಹವನ್ನು ರೋಗರುಜಿನಗಳ ಗುಡಾಣವನ್ನಾಗಿ ಮಾಡಿದೆ. ಆರೋಗ್ಯವೇ ಭಾಗ್ಯವೆಂಬುದನ್ನು ನೆನಪಿನಲ್ಲಿಡಿ.

ನಿತ್ಯ ನಾವು ಸೇವಿಸುವ ಆಹಾರ, ಭಿನ್ನ ಭಿನ್ನ. ಪ್ರತಿ ಆಹಾರಕ್ಕೆ ಅದರದೇ ಆದ ರುಚಿ. ನಮ್ಮ ಆಹಾರದಲ್ಲಿ ಒಟ್ಟ ಆರು ಬಗೆಯ ರಸಗಳ ಬಳಕೆಯಾಗುತ್ತದೆ. ಸಿಹಿ, ಈ ಆರು ರಸಗಳಲ್ಲೊಂದು. ಸಿಹಿಯನ್ನು ಇಷ್ಟಪಡದವರು ಬಲು ಕಡಿಮೆ. ಮಕ್ಕಳಿಂದ ಹಿಡಿದು ವೃದ್ಧರವರೆಗೂ ಸಿಹಿಯೆಂದರೆ ಎಲ್ಲರೂ ಖುಷಿಯಿಂದ ತಿನ್ನುವವರೇ. ಸಿಹಿ, ನಮ್ಮ ಆಹಾರದಲ್ಲಿ ಬಳಸುವ ಮೊದಲ ಪ್ರಮುಖ ರಸ.

ನಮ್ಮ ಅಡುಗೆಗಳಿಗೆ ರುಚಿ ತಂದುಕೊಡುವಲ್ಲಿ ಮತ್ತೊಂದು ಮುಖ್ಯ ಪಾತ್ರ ಹುಳಿಯದು. ಹುಣಸೇ ಹಣ್ಣು, ನಿಂಬೆ ಹಣ್ಣುಗಳ ರೂಪದಲ್ಲಿ ಲಭ್ಯವಿರುವ ಹುಳಿಯನ್ನು ಭಾರತೀಯ ಅಡುಗೆಯಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ. ಹುಳಿಯ ಅಂಶ ಜೀರ್ಣಕ್ರಿಯೆಗೆ ಸಹಕಾರ ನೀಡುತ್ತದೆ. ದೇಹದ ಕೆಲಸ ಕಾರ್ಯಗಳಿಗೆ ಶಕ್ತಿ ನೀಡುವುದು, ಬಾಯಾರಿಕೆ ದೂರ ಮಾಡುವುದು, ದೇಹದಲ್ಲಿನ ಖನಿಜಾಂಶಗಳನ್ನು ಹಿಡಿದಿಟ್ಟುಕೊಳ್ಳುವುದು, ಜೀವಕೋಶಗಳನ್ನು ಬೆಳೆಸುವುದು – ಇವೆಲ್ಲ ಆಹಾರದಲ್ಲಿ ಹುಳಿಯ ಸೇವನೆಯ ಉಪಯೋಗಗಳಾಗಿವೆ.

ಇನ್ನೊಂದು ಮುಖ್ಯ ರುಚಿ, ಉಪ್ಪು. ಜಗತ್ತಿನ ಬೇರಾವುದೇ ಅಡುಗೆ ಪದಾರ್ಥವನ್ನು ಉಪ್ಪಿನ ಜೊತೆ ಹೋಲಿಸಲಾಗದು. ಉಪ್ಪು ಮತ್ತು ಉಪ್ಪಿನಿಂದ ತಯಾರಿಸಲ್ಪಟ್ಟ ಉಪ ಉತ್ಪನ್ನಗಳು ನಮ್ಮ ದೇಹದ ಜೀವಕೋಶಗಳಲ್ಲಿನ ನೀರಿನ ಅಂಶದ ಸಮತೋಲನಕ್ಕೆ ಸಹಕರಿಸುತ್ತವೆ. ಅಲ್ಲದೇ ದೇಹದಲ್ಲಿರುವ ಖನಿಜಾಂಶಗಳ ಸಮರ್ಪಕ ನಿರ್ವಹಣೆಯಲ್ಲಿ ಉಪ್ಪಿನ ಪಾತ್ರ ಮಹತ್ವದ್ದು. ಚರ್ಮದ ಮತ್ತು ದೇಹದ ಮೂಳೆಗಳ ಆರೋಗ್ಯವಂತ ಬೆಳವಣಿಗೆಯಲ್ಲಿ ಉಪ್ಪು ಪ್ರಮುಖ ಪಾತ್ರ ವಹಿಸುತ್ತದೆ.

ಆಹಾರಕ್ಕೊಂದು ಅನನ್ಯ ಸ್ವಾದ ಬರುವಂತೆ ಸಹಕರಿಸುವುದು ಖಾರವೆಂಬ ರಸ. ಖಾರದ ಪದಾರ್ಥಗಳು ದೇಹದ ರೋಗನಿರೋಧಕ ಶಕ್ತಿಯನ್ನು ಒದಗಿಸುತ್ತವೆ. ಇವುಗಳು ಜೀರ್ಣಕಾರಿ ಅಲ್ಲದೇ ದೇಹದ ಮಾಂಸಖಂಡಗಳ ಚೈತನ್ಯ ನೀಡುವ ಕೆಲಸವನ್ನೂ ಮಾಡುತ್ತದೆ.

ಅಧರಕ್ಕೆ ಕಹಿಯಾಗಿದ್ದು ಉದರಕ್ಕೆ ಸಿಹಿ ಅನ್ನೋ ಮಾತಿದೆ. ಆರು ರಸಗಳಲ್ಲಿ ಒಂದಾದ ಕಹಿ ಎನ್ನುವುದು ಒಂದು ಪ್ರಮುಖ ರಸಗಳಲ್ಲೊಂದು. ಯಾವುದೇ ಔಷಧ ಅಥವಾ ಮಾತ್ರೆಯಾದರೂ ಸಾಧಾರಣವಾಗಿ ಕಹಿರುಚಿ ಹೊಂದಿರುತ್ತದೆ. ನಮ್ಮ ದೇಹಕ್ಕೆ ಹೊರಗಿನಿಂದ ಪೂರೈಕೆಯಾಗುವ ಕಹಿಯ ಅಂಶ, ಸೊಪ್ಪು ತರಕಾರಿಗಳ ಮೂಲಕ ಸಿಗುತ್ತದೆ.

ನಾವು ಸೇವಿಸುವ ಆಹಾರದಲ್ಲಿ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಲಭ್ಯವಿರುವುದು ಒಗರಿನ ಅಥವಾ ಕಟು ಎಂಬ ರಸ. ಕಾಲಿ ಫ್ಲವರ್ ನಂತಹ ತರಕಾರಿಗಳಲ್ಲಿ, ಅರಸಿನ ಮೊದಲಾದ ಗಿಡಮೂಲಿಕೆಗಳಲ್ಲಿ ಒಗರಿನ ಅಂಶ ಕಂಡುಬರುತ್ತದೆ. ಒಗರು ದೇಹದಲ್ಲಿನ ನೀರಿನ ಮಟ್ಟ ಕಾಪಾಡುತ್ತದೆ ಅಲ್ಲದೇ ಹೆಚ್ಚಾದ ಕೊಬ್ಬನ್ನು ಒಣಗಿಸುವ ಕೆಲಸವನ್ನೂ ಮಾಡುತ್ತದೆ.

ಈ ಎಲ್ಲ ರಸಗಳನ್ನು ಸೇರಿಸಿಕೊಂಡಿರುವ ಊಟತಿಂಡಿಗಳು ಮನುಷ್ಯನ ನಿತ್ಯ ಸಹಚರಿಗಳು. ಇವುಗಳ ಮೂಲಕ ಮನುಷ್ಯ ಬೆಳೆಯುತ್ತಾನೆ, ಇವುಗಳ ಮೂಲಕವೇ ಆತನ ಸ್ವಭಾವವನ್ನೂ ಕಂಡುಹಿಡಿಯಬಹುದು ಕೂಡ. ಆದರೆ ಇಂದು ಬದುಕಿಗೆ ವೇಗ ಬಂದುಬಿಟ್ಟಿದೆ. ಎಲ್ಲರೂ ಅಕ್ಷರಸ್ಥರಾಗುತ್ತಿದ್ದಾರೆ, ಹೆಚ್ಚು ಹೆಚ್ಚು ವಿಷಯಗಳನ್ನು ಅರಿತುಕೊಂಡು ಪ್ರಜ್ಞಾವಂತರಾಗುತ್ತಿದ್ದಾರೆ. ಆದರೆ, ಈ ಪ್ರಜ್ಞಾವಂತಿಕೆ ಎನ್ನುವುದು ಕೆಲವೇ ಕ್ಷೇತ್ರಗಳಿಗೆ ಮಾತ್ರ ಸೀಮಿತವಾಗುತ್ತಿದೆ. ನಮ್ಮ ಜೀವನದ ಹಲವು ಮುಖ್ಯ ವಿಚಾರಗಳ ಬಗ್ಗೆ ಗಮನ ಹರಿಸುವುದನ್ನು ಬಿಟ್ಟು ಬಿಟ್ಟಿದ್ದೇವೆ. ಆಹಾರವೂ ಅವುಗಳಲ್ಲಿ ಸೇರಿದೆ.

ಆಹಾರದ ದುರ್ಬಳಕೆಯಂತೂ ಇಂದಿನ ದಿನಗಳಲ್ಲಿ ಅತ್ಯಂತ ಹೆಚ್ಚಾಗಿದೆ. ಹಣವಿರುವ ಪ್ರತಿಯೊಬ್ಬನಿಗೂ ಆಹಾರ ಒಂದು ಸಮಸ್ಯೆಯೇ ಅಲ್ಲ. ಹಾಗಾಗಿಯೇ ಅದರ ಕಡೆಗೊಂದು ಪ್ರೀತಿ ಯಾರಿಗೂ ಇಲ್ಲ. ಜಗತ್ತಿನ ಎಷ್ಟೋ ರಾಷ್ಟ್ರಗಳಲ್ಲಿ ದುಡ್ಡು ಕೊಟ್ಟರೂ ಸರಿಯಾದ ಆಹಾರ ಸಿಗದಷ್ಟು ಕ್ಷಾಮದ ಪರಿಸ್ಥಿತಿ ಇದೆ ಎನ್ನುವುದು ಹೆಚ್ಚಿನವರಿಗೆ ತಿಳಿದಿಲ್ಲ. ತಿಳಿದಿದ್ದರೂ ತಮ್ಮ ಪಾಲಿಗೆ ಆ ಪರಿಸ್ಥಿತಿ ಬರಲಾರದು ಅನ್ನುವ ಅತಿಯಾದ ಆತ್ಮವಿಶ್ವಾಸ ಇದ್ದರೂ ಇರಬಹುದು.

ದೊಡ್ಡ ದೊಡ್ಡ ನಗರಗಳಲ್ಲಿ ದಿನನಿತ್ಯ ಬಳಸಲ್ಪಡುವ ಆಹಾರ ಮತ್ತು ಚೆಲ್ಲಲ್ಪಡುವ ಆಹಾರದ ಪ್ರಮಾಣ ಹೆಚ್ಚೂ ಕಡಿಮೆ ಒಂದೇ ಅಂದರೆ ತಪ್ಪಾಗಲಾರದು. ಹೋಟೇಲುಗಳು, ಮದುವೆಯ ಛತ್ರಗಳಲ್ಲಿ ದಿನನಿತ್ಯ ಲೆಕ್ಕ ಹಾಕಲಾರದಷ್ಟು ಆಹಾರ ಚೆಲ್ಲಲ್ಪಡುತ್ತಿದೆ. ಅದ್ದೂರಿತನ ಮತ್ತು ಪ್ರತಿಷ್ಠೆಯ ಹೆಸರಿನಲ್ಲಿ ಅನವಶ್ಯಕವಾಗಿ ಉಣ್ಣುವ ಅನ್ನವನ್ನು ಎಸೆಯುತ್ತಿದ್ದಾರೆ.

ಇಂದು “ಗೆಟ್ ಟುಗೆದರ್” ಹೆಸರಲ್ಲಿ ಸೇರುವ ಸ್ನೇಹಿತರು, ಬಂಧು ಬಳಗ ಎಲ್ಲ ತಮ್ಮ ದೇಹಕ್ಕೆ ಒಗ್ಗುತ್ತದೆಯೋ ಇಲ್ಲವೋ ಎಂಬ ವಿಚಾರ ಮಾಡದೇ, ಪಾಶ್ಚಾತ್ಯ ಸಂಸ್ಕೃತಿಯ ಅಥವಾ ತಮ್ಮ ದೇಹಕ್ಕೆ ಸೇರದ ಆಹಾರಗಳನ್ನು ಸೇವಿಸುವ ಅಪಾಯಕಾರೀ ಹವ್ಯಾಸಗಳಿಗೆ ಬಲಿಯಾಗುತ್ತಿದ್ದಾರೆ. ಇದಕ್ಕೆ ಮುಖ್ಯ ಕಾರಣ ಪ್ರತಿಷ್ಠೆಯ ಸೋಗು.

ಹೇಗು ಹೇಗೋ ಆಹಾರವನ್ನು ಸೇವನೆ ಮಾಡುತ್ತಿರುವುದರಿಂದ ಇಂದಿನ ಜನಾಂಗ ಹೊಸದೊಂದು ಭೀತಿಯಿಂದ ನರಳುತ್ತಿದೆ. ತಮಗೆ ಆಹಾರ ಸಂಬಂಧೀ ಕಾಯಿಲೆಗಳು ಬರಬಹುದು, ಬೊಜ್ಜಿನ ತೊಂದರೆ ಉಂಟಾಗಬಹುದು ಎಂಬೆಲ್ಲ ಹೆದರಿಕೆಯಿಂದ ಬಳಲುತ್ತಿದೆ. ಜನ ತಮಗೆ ತಾವೇ ಕಡಿವಾಣ ಹಾಕಿಕೊಳ್ಳಲೂ ಹೊರಡುತ್ತಿದ್ದಾರೆ. ಸ್ವಯಂ ವೈದ್ಯ ಮಾಡಿಕೊಳ್ಳುವ ನೂತನ ಪ್ರವೃತ್ತಿ ಆರಂಭವಾಗಿದೆ. ಒಮ್ಮಿದೊಂಮ್ಮೆಗೇ ತಮ್ಮ ಆಹಾರ ಕ್ರಮವನ್ನು ಬದಲು ಮಾಡುವುದು, ಸಮೃದ್ಧ ಆಹಾರ ಸೇವಿಸುವುದರ ಬದಲು ಮಿತ ಆಹಾರವನ್ನು ತೆಗೆದುಕೊಳ್ಳಲು ಶುರು ಮಾಡುವುದೇ ಮೊದಲಾದ ನಿರ್ಧಾರ ಕೈಗೊಳ್ಳುತ್ತಾರೆ. ಆದರೆ ಇದು ಬಹಳ ತಪ್ಪು ಎನ್ನುತ್ತಾರೆ ವೈದ್ಯರು.

ಯಾರು ಏನೇ ಅಂದರೂ ನಿಮ್ಮ ಆಹಾರ ಸೇವನೆಯ ಕ್ರಮವನ್ನು, ಬದಲಿಸಲು ಹೋಗದಿರಿ. ಪ್ರತಿ ವ್ಯಕ್ತಿಯ, ಕುಟುಂಬದ ಆಹಾರ ಮತ್ತೊಬ್ಬರದ್ದಕ್ಕಿಂತ ಭಿನ್ನವಾಗಿಯೇ ಇರುತ್ತದೆ. ಅದಕ್ಕಾಗಿ ಚಿಂತಿಸಬೇಕಾಗಿಲ್ಲ. ಒಂದೊಂದು ಜನಾಂಗದ, ಪ್ರದೇಶದ ಆಹಾರ ಭಿನ್ನವಾಗಿದ್ದರೂ, ಅವುಗಳು ಬಹುಕಾಲ ಉರುಳಿದರೂ ಹಾಗೆಯೇ ಇದ್ದು ಸಮಯದ ಜೊತೆಗಿನ ಹೋರಾಟದಲ್ಲಿ ಗೆದ್ದು ಬಂದವು. ಅದರೆ ಯಾರಿಗಿದು ನೆನಪಿದೆ ಹೇಳಿ?

Save water | Water scarcity | Drought | Bengaluru | ನೀರುಳಿಸಿ, ಮುಂದೆ ಅದು ನಮ್ಮನ್ನುಳಿಸಬಹುದು

Save waer today, it will save you tomorrowಕಾಂಬೋಡಿಯಾ, ಕೀನ್ಯಾದಂಥ ರಾಷ್ಟ್ರಗಳಲ್ಲಿ ಮಾತ್ರವಲ್ಲ ಬೆಂಗಳೂರಿನಂಥ ಬೆಂಗಳೂರೇ ನೀರಿನ ಭೀಕರ ಕೊರತೆ ಎದುರಿಸುವ ದಿನ ದೂರವಿಲ್ಲ. ನೀರಿನಂತೆ ಹರಿದುಬರುತ್ತಿರುವ ಸುತ್ತಲಿನ ರಾಜ್ಯಗಳ ಜನ, ಬರಿದಾಗುತ್ತಿರುವ ಹಳ್ಳಿಗಳು, ನಗರದ ಕೆರೆಗಳು ನೀರಿನ ಒರತೆಯನ್ನು ಒರೆಸಿಹಾಕುತ್ತಿವೆ. ಹಾಗಾದರೆ, ನೀರನ್ನು ಉಳಿಸುವುದೊಂದೇ ಇದಕ್ಕೆ ಪರಿಹಾರವಾ? ಸಮಸ್ಯೆ ಇನ್ನಷ್ಟು ಕ್ಲಿಷ್ಟವಾಗುತ್ತಾ ಸಾಗುತ್ತಿದೆ. ಇದಕ್ಕೆ ಮಾರ್ಗೋಪಾಯಗಳೇನು?

ಇತ್ತೀಚಿಗೆ ಯಾವುದೋ ಡಾಕ್ಯುಮೆಂಟರಿ ನೋಡುತ್ತಿದ್ದೆ. ಅದು, ಕಾಂಬೋಡಿಯಾ, ಕೀನ್ಯಾ ದೇಶಗಳ ಕುರಿತಾಗಿದ್ದು. ಅದರಲ್ಲಿ ನೋಡಿದ ಪ್ರಕಾರ, ಅಲ್ಲಿನ ಜನರ ಬರಗಾಲದಿಂದ ತತ್ತರಿಸುತ್ತಿದ್ದಾರೆ. ನೀರೇ ಇಲ್ಲದೆ ಇಲ್ಲಿನ ಭೂಮಿ ಬಾಯ್ಬಿಟ್ಟಿದೆ. ಎಲ್ಲಿ ನೋಡಿದರಲ್ಲಿ ಬಿಸಿಲ ಧಗೆ, ನೀರ ಹುಡುಕಾಟದಲ್ಲಿರುವ ಜನರು ಮತ್ತು ಪ್ರಾಣಿಗಳು. ಭೂಮಿಯ ಆಳದ ಅಂತರ್ಜಲ ಬತ್ತಿ ಬರಿದಾಗಿದೆ. ನೀರೇ ಇಲ್ಲವಾದ್ದರಿಂದ ಯಾವುದೇ ಬೆಳೆಯನ್ನೂ ಬೆಳೆಯಲು ಸಾಧ್ಯವಾಗುತ್ತಿಲ್ಲ. ಜನರು ತಮ್ಮ ಹಸಿವನ್ನು ನೀಗಿಸಿಕೊಳ್ಳಲು ನೀರಿಲ್ಲದೆಯೂ ಬೆಳೆಯಬಲ್ಲ ವಿಷಜಾತಿಗೆ ಸೇರಿದ ಗಡ್ಡೆಗಳನ್ನು ತಿನ್ನುತ್ತಿದ್ದಾರೆ. ಈ ವಿಷಕಾರಿ ಗಡ್ಡೆ ಅವರ ಜೀವಕ್ಕೆ ಅಪಾಯವನ್ನು ತರಬಲ್ಲದು. ಆದರೆ ಅದನ್ನು ತಿನ್ನದಿದ್ದರೆ ಆ ಜನರು ಹಸಿವಿನಿಂದ ನರಳುತ್ತಾ ಸಾಯುಬೇಕಾಗುತ್ತದೆ. ಹಾಗಾಗಿ ಅವರು ಇದನ್ನೇ ತಿನ್ನುವುದನ್ನು ಅಭ್ಯಾಸ ಮಾಡಿಕೊಂಡಿದ್ದಾರೆ. ಹೀಗಿದೆ ಇವರ ಬದುಕಿನ ಸ್ಥಿತಿ.

ಇಂದು ನಗರಗಳು ಅತೀ ವೇಗವಾಗಿ ಬೆಳೆಯುತ್ತಿವೆ. ಆಧುನೀಕರಣ, ನಗರೀಕರಣ, ಕೈಗಾರಿಕೀಕರಣಗಳು ನಮ್ಮ ನೈಸರ್ಗಿಕ ಸಂಪತ್ತಿನ ಮೇಲೆ ದುಷ್ಪರಿಣಾಮ ಬೀರುತ್ತಿವೆ. ಕಾರ್ಖಾನೆಗಳ ಮತ್ತಿತರ ತ್ಯಾಜ್ಯ ವಸ್ತುಗಳನ್ನು ನೇರವಾಗಿ ನದಿಗಳಿಗೆ ಬಿಡುವುದರಿಂದ ನೀರು ಕಲುಷಿತಗೊಳ್ಳುತ್ತಿದೆ. ಬೆಂಗಳೂರಿನಂತಹ ಬೃಹತ್ ನಗರದಲ್ಲಿ ದಿನೇ ದಿನೇ ಜನಸಂಖ್ಯೆ ಮಿತಿ ಮೀರಿ ಹೆಚ್ಚುತ್ತಿದ್ದು ಇಲ್ಲಿ ಕುಡಿಯುವ ನೀರಿನ ಸಮಸ್ಯೆ ಅಪಾಯದ ಮಟ್ಟವನ್ನು ದಾಟುತ್ತಿದೆ. ಸಂಶೋಧನೆಯೊಂದರ ಪ್ರಕಾರ, ಇಂದು ಜಗತ್ತಿನಾದ್ಯಂತ ಸುಮಾರು ಒಂದು ಬಿಲಿಯನ್ ಜನರು ಸ್ವಚ್ಛ ಕುಡಿಯುವ ನೀರು ಸಿಗದೆ ನರಳಾಡುತ್ತಿದ್ದಾರೆ. ಒಂದು ವೇಳೆ ಪರಿಸ್ಥಿತಿ ಹೀಗೆಯೇ ಮುಂದುವರೆದರೆ 2025 ವೇಳೆಗೆ ಈ ಸಂಖ್ಯೆ 2.3 ಬಿಲಿಯನ್ ತಲುಪುತ್ತದೆ.

ಬೆಂಗಳೂರನ್ನು ಉದಾಹರಣೆಗೆ ತೆಗೆದುಕೊಂಡರೆ ಇಲ್ಲಿನ ನೀರಿನ ಅತಿದೊಡ್ಡ ಮೂಲ ನೂರು ಕಿಲೋಮೀಟರ್ ದೂರದಲ್ಲಿರುವ ಕಾವೇರಿ ನದಿ. ಪ್ರತಿನಿತ್ಯ ಲಕ್ಷಾಂತರ ಲೀಟರ್ ನೀರನ್ನು ಕಾವೇರಿ ನದಿಯಿಂದ ಇಲ್ಲಿಗೆ, ವಾರ್ಷಿಕ 350ರಿಂದ 400 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಸರಬರಾಜು ಮಾಡಲಾಗುತ್ತದೆ. ಇಲ್ಲಿನ ಮತ್ತೆರಡು ಪ್ರಮುಖ ಮೂಲಗಳೆಂದರೆ ತಿಪ್ಪಗೊಂಡನ ಹಳ್ಳಿ ಜಲಾಶಯ ಮತ್ತು ಅಂತರ್ಜಲ. ಆದರೆ ಇತ್ತೀಚಿನ ದಿನಗಳಲ್ಲಿ ತಿಪ್ಪಗೊಂಡನ ಹಳ್ಳಿ ಜಲಾಶಯದ ನೀರು ಗಣನೀಯವಾಗಿ ಕಡಿಮೆ ಆಗುತ್ತಿದ್ದು, ಮುಂದೊಂದು ದಿನ ಒಣಗಿ ಹೋಗುವ ಸಾಧ್ಯತೆ ಇದೆ. ಇನ್ನು ಅಂತರ್ಜಲದ ಮಟ್ಟವಂತೂ ದಿನೇ ದಿನೇ ಕುಸಿಯುತ್ತಿದೆ. ಇಡೀ ಬೆಂಗಳೂರಿನ ಜನರು ಕೇವಲ ಒಂದೇ ಕಾವೇರಿ ನದಿಯ ನೀರಿನ ಮೇಲೆ ಅವಲಂಬಿತರಾದರೆ, ಆ ನದಿ ಹೆಚ್ಚು ದಿನ ಆಸರೆ ನೀಡಲು ಸಾಧ್ಯವಿಲ್ಲ.

ಹಿಂದೆ ಬೆಂಗಳೂರು ಹಾಗೂ ಸುತ್ತಮುತ್ತ ಸುಮಾರು 200ಕ್ಕೂ ಹೆಚ್ಚು ದೊಡ್ಡ ಕೆರೆಗಳಿದ್ದವು. ಆದರೆ ಬೆಂಗಳೂರು ಬೆಳೆದಂತೆಲ್ಲಾ ಕೆರೆಗಳ ಸಂಖ್ಯೆ ಕಡಿಮೆ ಆಗುತ್ತಾ ಬಂತು. ಇತ್ತೀಚಿನ ವರದಿಯೊಂದರ ಪ್ರಕಾರ ಇಂದು ಕೇವಲ 81 ಕೆರೆಗಳು ಮಾತ್ರ ಉಳಿದಿವೆ. ಅಂದರೆ ಉಳಿದ 119 ಕೆರೆಗಳನ್ನು ಬೆಂಗಳೂರು ನುಂಗಿಬಿಟ್ಟಿದೆ.

ಅಂಕಿ ಅಂಶವೊಂದರ ಪ್ರಕಾರ ಭಾರತದಲ್ಲಿ ಪ್ರತಿ ವರ್ಷ 50,000ಕ್ಕೂ ಹೆಚ್ಚು ಮಕ್ಕಳು ತಮ್ಮ 5ನೇ ವರ್ಷ ದಾಟುವುದರೊಳಗಾಗಿ ಸಾಯುತ್ತಿದ್ದಾರೆ. ಇದಕ್ಕೆ ಕಾರಣ ಕಲುಷಿತ ನೀರಿನಿಂದ ಉಂಟಾಗುವ ಬೇಧಿ, ಜಠರ-ಕರುಳುಗಳ ಉರಿಯೂತ, ಹೆಪಟೈಟಿಸ್ ನಂತಹ ರೋಗಗಳು. ನಮ್ಮ ದೇಶದಲ್ಲಿ ಇಂದು ಸುಮಾರು 224 ದಶಲಕ್ಷ ಜನರು ನೀರಿನ ಕೊರತೆ ಎದುರಿಸುತ್ತಿದ್ದಾರೆ.

ಭೂಮಿಯ ಮೂರನೇ ಎರಡು ಭಾಗ ನೀರಿನಿಂದಾವೃತವಾಗಿದೆ. ಆದರೆ, ಈ ಎಲ್ಲಾ ನೀರೂ ಬಳಕೆಗೆ ಯೋಗ್ಯವಲ್ಲ. ಭೂಮಿಯ ಒಟ್ಟು ನೀರಿನ ಸೆಲೆಯ 3 ಶೇಕಡಾ ಮಾತ್ರ ಸಿಹಿನೀರು ಲಭ್ಯ. ಸಿಹಿನೀರಿನ 30 ಶೇಕಡಾ ಪಾಲು ಅಂತರ್ಜಲದಿಂದ ದೊರೆತರೆ, 0.3 ಶೇಕಡಾ ಪಾಲು ನದಿ, ಕೆರೆ, ಮತ್ತಿತರ ಮೂಲಗಳಿಂದ ದೊರೆಯುತ್ತದೆ. ಉಳಿದ ಸಿಂಹಪಾಲು ಮಂಜುಗಡ್ಡೆಗಳ ರೂಪದಲ್ಲಿದ್ದು, ಅವುಗಳ ಬಳಕೆ ಕಷ್ಟ.

ನೀರಿನ ಅತಿಯಾದ ಬೇಡಿಕೆ, ಅಂತರ್ಜಲವನ್ನು ಹೆಚ್ಚು ಹೆಚ್ಚು ಉಪಯೋಗಿಸುವಂತೆ ಮಾಡುತ್ತಿದೆ. ಇದು, ನೀರಿನ ಎಲ್ಲ ಮೂಲಗಳ ಮೇಲೂ ಕೆಟ್ಟ ಪರಿಣಾಮ ಬೀರುತ್ತಿದೆ. ಭೂಮಿಯೊಳಗೆ ಇಂಗುವ ನೀರಿಗಿಂತ ಅಲ್ಲಿಂದ ಹೊರತೆಗೆಯುವ ನೀರಿನ ಪ್ರಮಾಣವೇ ಹೆಚ್ಚಾಗಿರುವುದು ಅಂತರ್ಜಲದ ಪ್ರಮಾಣ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿರುವುದಕ್ಕೆ ಕಾರಣ. ಅಂತರ್ಜಲದ ಅಭಾವದಿಂದಾಗಿ ಬೆಂಗಳೂರಿನಂತಹ ಮಹಾ ನಗರಗಳಲ್ಲಿ ನೀರಿನ ಬೆಲೆ ಏರುತ್ತಿದೆ. ನೀರಿನ ಸಮಸ್ಯೆ ಹೀಗೆಯೇ ಮುಂದುವರೆದರೆ ದೇಶಾದ್ಯಂತ ಜಲಕ್ಷಾಮ ತಲೆದೂರುವ ಅಪಾಯವಿದೆ. ಬೃಹತ್ ನಗರಗಳಲ್ಲಿ ಬಹುರಾಷ್ಟ್ರೀಯ ಕಂಪನಿಗಳ, ಅಪಾರ್ಟ್ ಮೆಂಟ್ ಗಳ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿವೆ. ಒಂದೊಂದು ಕಟ್ಟಡಕ್ಕೂ ಹತ್ತಾರು ಬೋರ್ ವೆಲ್ ಗಳನ್ನು ಕೊರೆಯಲಾಗುತ್ತಿದೆ. ಬೆಂಗಳೂರಿನಲ್ಲೇ ಪ್ರತಿ ದಿನ ಸುಮಾರು 290 ಮಿಲಿಯನ್ ಲೀಟರ್ ಅಂತರ್ಜಲವನ್ನು ಹೊರ ತೆಗೆಯಲಾಗುತ್ತಿದೆ.

ಅನಿಯಂತ್ರಿತವಾಗಿ ನೀರನ್ನು ಹೊರತೆಗೆಯುವುದರಿಂದ ಅಂತರ್ಜಲದ ಮಟ್ಟ ದಿನೇ ದಿನೇ ಕುಸಿಯುತ್ತಿದೆ. ಹಲವಾರು ಕಡೆಗಳಲ್ಲಿ ಅಂತರ್ಜಲ 1000ದಿಂದ 1500 ಅಡಿಗಳಷ್ಟು ಆಳಕ್ಕೆ ಇಳಿದಿದೆ. ನಿರ್ದಿಷ್ಟ ಮಟ್ಟಕ್ಕಿಂತ ಆಳದಲ್ಲಿರುವ ನೀರಿನ ಬಳಕೆ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುತ್ತದೆ.

ನೀರಿನ ಕುರಿತು ಒಂದಿಷ್ಟು ಮಾಹಿತಿ:

* ನಮ್ಮ ದೇಹದಲ್ಲಿನ ನೀರಿನ ಪ್ರಮಾಣ, ನಿಗದಿತ ಪ್ರಮಾಣಕ್ಕಿಂತ 20 ಶೇಕಡಾ ಕಡಿಮೆಯಾದರೆ ನಾವು ಸಾಯುತ್ತೇವೆ.
* ಜಗತ್ತಿನಲ್ಲಿ ಪ್ರತಿ ವರ್ಷ ಸುಮಾರು ಸರಾಸರಿ ಹದಿನಾಲ್ಕು ಲಕ್ಷ ಜನರು ಕುಡಿಯುವ ನೀರಿನ ಸಮಸ್ಯೆಯಿಂದ ಸಾಯುತ್ತಿದ್ದಾರೆ.
* ನಮ್ಮ ದೇಶದ ಒಂದು ಲಕ್ಷದ ನಲವತ್ತೆಂಟು ಸಾವಿರ ಹಳ್ಳಿಗಳಲ್ಲಿ ಕುಡಿಯುವ ನೀರಿನ ಮೂಲಗಳು ಸಂಪೂರ್ಣವಾಗಿ ಬತ್ತಿ ಹೋಗಿವೆ.
* ವಿಶ್ವ ಆರೋಗ್ಯ ಸಂಸ್ಥೆ ನಡೆಸಿದ ಸಮೀಕ್ಷೆಯ ಪ್ರಕಾರ ವಿಶ್ವದ ಅರ್ಧದಷ್ಟು ಜನರು ಶುದ್ಧ ಕುಡಿಯುವ ನೀರಿನ ಕೊರತೆಯಿಂದಾಗಿ ನೀರಿಗೆ ಸಂಬಂಧಿಸಿದ ಹಲವು ಕಾಯಿಲೆಯಿಂದ ಬಳಲುತ್ತಿದ್ದಾರೆ.
* ನೀರಿನ ಸಮಸ್ಯೆ ಹೀಗೆಯೇ ಮುಂದುವರೆದರೆ 2025ನೇ ಇಸ್ವಿಯ ವೇಳೆಗೆ ವಿಶ್ವಾದ್ಯಂತ ಸುಮಾರು 270 ಕೋಟಿ ಜನರು ನೀರಿಗಾಗಿ ಹಗಲಿರುಳೂ ಪರದಾಡುವ ಪರಿಸ್ಥಿತಿ ಬರಬಹುದು.

ಪರಿಸ್ಥಿತಿ ಹೀಗಿರುವಾಗ ಮನೆಯ ನಲ್ಲಿಯಿಂದ ಒಂದೊಂದೇ ಹನಿ ಸೋರುತ್ತಿದ್ದರೂ ಆ ಬಗ್ಗೆ ನಿರ್ಲಕ್ಷ್ಯ ಸಲ್ಲದು. ಪ್ರತಿ ನಿಮಿಷಕ್ಕೆ ಒಂದು ಹನಿ ನೀರು ಪೋಲಾಗುತ್ತಾ ಹೋದರೆ, ಒಂದು ವರ್ಷಕ್ಕೆ ಸುಮಾರು 45,000 ಲೀಟರ್ ನೀರು ಸೋರಿ ಹೋಗುತ್ತದೆ. ಈ ನೀರಿನಲ್ಲಿ ಒಬ್ಬ ಮನುಷ್ಯ ಸುಮಾರು 15 ತಿಂಗಳ ಕಾಲ ಬದುಕಬಹುದು. ಆದ್ದರಿಂದ ಹನಿ ಹನಿ ನೀರಿಗೂ ಅದರದ್ದೇ ಆದ ಮಹತ್ವವಿದೆ. ನೀರುಳಿಸಿ ನೋಡೋಣ,ಮುಂದೆ ಅದು ನಮ್ಮನ್ನುಳಿಸಬಹುದು.


Summer | Season | Vacation | Holidays | – ಬೇಸಿಗೆಯೆಂದರೆ ಉಲ್ಲಾಸದ ಋತುಗಾನ

Wish you happy summer

ಬೇಸಿಗೆಯೆಂದರೆ ಬೇಗೆ ಮಾತ್ರವಲ್ಲ ಬಂಧುಗಳೊಡನೆ ಕೂಡಿ ಆಡಿ ಮಜಾ ಮಾಡುವ ಕಾಲ. ಮಕ್ಕಳಿಗೆ ರಜಾ ದಿನಗಳಲ್ಲಿ ಅಜ್ಜಿ ಮನೆಗೆ ಹೋಗುವ ಕನಸು, ಯುವಕರಿಗೆ ಚಾರಣದ ಹುಮ್ಮಸ್ಸು, ಹಿರಿಯರಿಗೆ ಮಕ್ಕಳ ಮದುವೆ ಮಾಡಿ ಜವಾಬ್ದಾರಿ ಇಳಿಸಿಕೊಳ್ಳುವ ವಯಸ್ಸು. ರೋಗರುಜಿನಗಳಿಂದ ದೂರವಾಗಿ ಮನಸು ಕೂಡ ಉಲ್ಲಾಸದಾಯಕವಾಗಿರುತ್ತದೆ. ಹಿತಮಿತವಾದ ಆಹಾರ ಮತ್ತು ಸರಿಯಾದ ಕಾಳಜಿ ವಹಿಸಿದರೆ ಬೇಸಿಗೆ ನಿಮಗೆ ನಿಜಕ್ಕೂ ಆರಾಮದಾಯಕವಾಗಬಲ್ಲುದು. ಸೋ ಎಂಜಾಯ್ ಬೇಸಿಗೆ.

ಕಾಲ ಅಥವಾ ಸಮಯ ಎನ್ನುವುದು ಯಾರ ಕೈಗೂ ಸಿಗದ ಮಾಯಾಜಿಂಕೆ. ಇನ್ನೇನು ಕಾಲದ ವೇಗಕ್ಕೆ ನಾವು ಹೊಂದಿಕೊಳ್ಳುತ್ತಿದ್ದೇವೆ ಎನ್ನುವಷ್ಟರಲ್ಲಿ ತನ್ನ ಗತಿಯನ್ನು ಬದಲಿಸುವ ಕಾಲ ಮರೀಚಿಕೆ. ಆದರೂ ಮಾನವ ಬದಲಾಗುವ ಸಮಯದ ಸ್ವಭಾವವನ್ನು ಅಧ್ಯಯನ ಮಾಡಿ ವರ್ಷ, ತಿಂಗಳು ಎಂದೆಲ್ಲ ವಿಭಾಗಿಸಿದ್ದಾನೆ.

ಭಾರತೀಯ ಸಂಪ್ರದಾಯದಲ್ಲಿ, ಉತ್ತರಾಯಣ ಮತ್ತು ದಕ್ಷಿಣಾಯಣ ಎಂದು ವರ್ಷವನ್ನು ಎರಡು ಭಾಗಗಳನ್ನಾಗಿ ಮಾಡಲಾಗುತ್ತದೆ. ಪ್ರತಿ ಭಾಗಕ್ಕೂ ಮೂರು ಋತುಗಳನ್ನು ಸೇರಿಸಲಾಗಿದೆ. ಹೀಗೆ ಆಗುವ ಋತುಚಕ್ರದ ಬದಲಾವಣೆ ಮನುಷ್ಯನನ್ನು ಬದುಕಿನ ಹೋರಾಟಕ್ಕೆ, ಉಳಿವಿಗೆ ಮನುಷ್ಯನನ್ನು ದೈಹಿಕವಾಗಿ, ಮಾನಸಿಕವಾಗಿ ಸಜ್ಜುಗೊಳಿಸುತ್ತದೆ. ಸೂರ್ಯನ ಗತಿಯನ್ನು ಆಧರಿಸಿ ಮಾಡಿದ ಈ ವಿಭಾಗದ ಮೊದಲಿಗೆ ಬರುವಂತಹದ್ದು ಬೇಸಿಗೆ ಕಾಲ. ಮಾಲಿನ್ಯ ಮತ್ತು ಜಾಗತಿಕ ತಾಪಮಾನ ಹೆಚ್ಚಾದ ಈ ಯಾಂತ್ರಿಕ ಯುಗದಲ್ಲಿ ಬಹುತೇಕರಿಗೆ ಬೇಸಿಗೆ ಎನ್ನುವುದು ಬೇಗೆಯೇ.

ಭಾರತೀಯ ಪಂಚಾಂಗದ ಪ್ರಕಾರ ವರ್ಷದ 12 ತಿಂಗಳುಗಳನ್ನು ಮಾಸವಾಗಿ ವಿಭಾಗಿಸಿದ್ದಾರೆ. ಪ್ರತಿ ಎರಡು ಮಾಸಗಳಿಗೆ ಒಂದರಂತೆ ಆರು ಋತುಗಳನ್ನು ಮಾಡಿದ್ದಾರೆ. ಎರಡು ಋತುಗಳನ್ನು ಸೇರಿಸಿ ಮೂರು ಕಾಲಗಳನ್ನು ಮಾಡಿದ್ದಾರೆ. ಇವುಗಳಲ್ಲಿ ವಸಂತ ಮತ್ತು ಗ್ರೀಷ್ಮ ಋತುಗಳನ್ನು ಬೇಸಿಗೆಕಾಲ ಎನ್ನಲಾಗುತ್ತದೆ. ಅವುಗಳಲ್ಲಿ ಬಿಸಿಲಿನ ತಾಪ ಗ್ರೀಷ್ಮ ಋತುವಿನಲ್ಲಿ ಹೆಚ್ಚಾಗಿರುತ್ತದೆ. ವೇದಗಳಲ್ಲಿ ಬೇಸಿಗೆಯನ್ನು ದೇಹಶುದ್ಧಿಗೊಳಿಸುವ, ವಾತಾವರಣ ಅತ್ಯಂತ ಶುಭ್ರ ಮತ್ತು ಶುಚಿಯಾಗಿರುವ ಕಾಲ ಎಂದು ವರ್ಣಿಸಲಾಗಿದೆ.

ಪ್ರಾಚೀನ ಕವಿಗಳು ಉಳಿದ ಕಾಲಗಳಿಗೆ ಹೋಲಿಸಿದರೆ ಬೇಸಿಗೆಯ ಬಗ್ಗೆ ವರ್ಣಿಸಿರುವುದು ಕಡಿಮೆಯೇ. ಆದರೂ ಬೇಸಿಗೆಯಲ್ಲಿ ಹತ್ತಿ ಬಟ್ಟೆ ತೊಡುವುದು ಅನುಕೂಲ ಎಂದು ಭೋಜರಾಜನ ಕ್ಷೇಮಕುತೂಹಲ ಹೇಳುತ್ತದೆ. ಸೋಮೇಶ್ವರನ ಮಾನಸೋಲ್ಲಾಸ ಎನ್ನುವ ಗ್ರಂಥದಲ್ಲಿ ಅಭ್ಯಂತರ ಕ್ರೀಡಾ ಎಂದು ಸುಮಾರು 20 ಬಗೆಯ ಒಳಾಂಗಣ ಆಟಗಳನ್ನು ಉಲ್ಲೇಖಿಸಲಾಗಿದೆ. ಹಿಂದೆಲ್ಲ ರಾಜ ಮಹಾರಾಜರು ಜನರಿಗಾಗಿ ವಸಂತೋತ್ಸವ ಎಂದು ಏರ್ಪಡಿಸುತ್ತಿದ್ದರು. ಆ ಮೂಲಕ ಲಲಿತಕಲೆಗಳನ್ನು ಬೆಳೆಸುತ್ತಿದ್ದರು.

ಇನ್ನು ನಮ್ಮ ಹಳ್ಳಿಗಾಡಿನ ಜನರು ಬೇಸಿಗೆಯನ್ನು ಅನುಭವಿಸುವ ರೀತಿ ಬೇರೆ. ಅವರಿಗೆ ಮುಂದೆ ಬರುವ ಮಳೆಗಾಲಕ್ಕೆ ತಯಾರಿ ಮಾಡುವುದು ಬೇಸಿಗೆಯ ಬಹುಮುಖ್ಯ ಕೆಲಸ. ಬೇಸಿಗೆಯಲ್ಲಿ ಮದುವೆ, ಮಂಗಲ ಕಾರ್ಯಗಳು ನಡೆಯುವ ಪ್ರಮಾಣ ಜಾಸ್ತಿ. ಎಲ್ಲ ರೀತಿಯ ಕೌಟುಂಬಿಕ ಸಮಾರಂಭಗಳು ಈ ಬೇಸಿಗೆಯಲ್ಲೇ ಹೆಚ್ಚಾಗಿ ನಡೆಯುತ್ತವೆ.

ಚಳಿಗಾಲದಲ್ಲಿ ಹೂಬಿಟ್ಟ ಹಲವು ಕಾಡುಗಿಡಗಳು ಈ ಕಾಲದಲ್ಲಿ ವಿಶಿಷ್ಟವಾದ ಹಣ್ಣುಗಳನ್ನು ಬಿಡುತ್ತವೆ. ಮಲೆನಾಡು ಹಾಗೂ ಪಶ್ಚಿಮ ಘಟ್ಟಗಳಲ್ಲಿ ಬಿಡುವ ಹಣ್ಣುಗಳು ಹೆಚ್ಚು ರುಚಿಯಾಗಿರುವುವಲ್ಲದೇ ಆರೋಗ್ಯಕ್ಕೂ ಪೂರಕ.

ಮಳೆಗಾಲದ ಬಿತ್ತನೆ, ನಾಟಿ ತೊಂದರೆಯಿಲ್ಲದ, ಜಿಟಿಜಿಟಿ ಮಳೆಯ ಕಾಟವಿರದ, ಚಳಿಗಾಲದ ಕೆಟ್ಟ ಛಳಿಯಿಲ್ಲದ, ಬೆಳೆದ ಫಸಲನ್ನು ಕಟಾವು ಮಾಡಿ ಕಣಜ ತುಂಬುವ ಜವಾಬ್ದಾರಿ ಯಾವುದೂ ಇಲ್ಲದ ವಿಶ್ರಾಂತಿಯ, ಮನೋರಂಜನೆಯ ಕಾಲ ಬೇಸಿಗೆ. ಹಾಗಾಗಿ ಜಾತ್ರೆ, ಉರುಸ್ ಮೊದಲಾದ ಉತ್ಸವಗಳೆಲ್ಲ ನಡೆಯುವುದು ಬೇಸಿಗೆಯಲ್ಲೇ. ಉರಿಉರಿ ಬಿಸಿಲಲ್ಲಿ ಊರ ಜನರೆಲ್ಲ ಸೇರಿ ಈ ಕಾರ್ಯಕ್ರಮಗಳಲ್ಲಿ ಪಾಲುಗೊಳ್ಳುತ್ತಾರೆ. ಸುಗ್ಗಿ ಮುಗಿಸಿದ ಜನರಿಗೆ ಸಂಭ್ರಮಿಸಲು, ಜೀವನಕ್ಕೆ ಹೊಸ ಉತ್ಸಾಹ ತುಂಬಿಕೊಳ್ಳಲು ಇವು ಅವಕಾಶ ಕಲ್ಪಿಸುತ್ತವೆ.

ಆದ್ದರಿಂದ ಬೇಸಿಗೆಯನ್ನು ಸಹಜವಾಗಿ ಸ್ವೀಕರಿಸುವುದು ಅತ್ಯವಶ್ಯ. ಇಂದಿನ ಬೇಸಿಗೆಯ ತೊಂದರೆಗೆ ಹಿಂದಿನವರು ಮತ್ತು ಜಾನಪದರು ಕಂಡುಕೊಂಡ ಉಪಾಯಗಳು ಆಧುನಿಕರಿಗೆ ಉಪಯೋಗವಾಗಬಲ್ಲವು. ಬೇಸಿಗೆಯಲ್ಲಿ ಮಕ್ಕಳಿಗೆ ಶಾಲೆಗೆ ಯಾವಾಗ ರಜೆ ಕೊಡುತ್ತಾರೋ ಎಂಬ ಕಾತುರ. ಹದಿವಯಸ್ಸಿನವರಿಗೆ ಚಾರಣದ ಹುಮ್ಮಸ್ಸು. ವಯಸ್ಸಿಗೆ ಬಂದವರಿಗೆ ಮದುವೆಯಾಗುವ ಕಾಲ. ನಡುವಯಸ್ಸಿನವರಿಗೆ ಮಳೆಗಾಲಕ್ಕೆ ತಯಾರಿ ಮಾಡಬೇಕಾದ ಜವಾಬ್ದಾರಿ. ಹಿರಿಯರಿಗೆ ಪುಣ್ಯಕ್ಷೇತ್ರಗಳನ್ನು ಸಂದರ್ಶಿಸುವ ಕಾಲ.

ಬೇಸಿಗೆಯೆಂದರೆ ವರ್ಷದ ಕೆಲಸಕಾರ್ಯಗಳ ನಡುವೆ ದೇಹ-ಮನಸುಗಳಿಗೆ ಒಂದಿಷ್ಟು ವಿಶ್ರಾಂತಿ ತೆಗೆದುಕೊಳ್ಳುವ ಕಾಲ. ಹಿತಮಿತವಾದ ಆಹಾರ ಮತ್ತು ಸರಿಯಾದ ಕಾಳಜಿ ವಹಿಸಿದರೆ ಬೇಸಿಗೆ ನಿಮಗೆ ನಿಜಕ್ಕೂ ಆರಾಮದಾಯಕವಾಗಬಲ್ಲುದು.

Lok Sabha | Election 2009 | Politics | – ಮತ್ತೊಂದು ಲೋಕಸಭೆ ಚುನಾವಣೆ ಬಂದಿದೆ

Photo courtesy : Business Line
ವಿಧಾನಸಭೆಯೇ ಆಗಲಿ, ಲೋಕಸಭೆಯೇ ಆಗಲಿ ಪ್ರತಿ ಬಾರಿ ಚುನಾವಣೆ ಬಂದಾಗ ಮಾನ್ಯ ಮತದಾರರದು ಒಂದೇ ಉದಾಸೀನತೆ. ಎಲ್ಲಾ ಪಕ್ಷಗಳೂ ಅಷ್ಟೇ, ಅಭ್ಯರ್ಥಿಗಳಂತೂ ಅಷ್ಟಕ್ಕಷ್ಟೇ ಅಂತ ದೇಶಾವರಿ ಮಾತನಾಡುತ್ತ, ನಾನಂತೂ ಈ ಬಾರಿ ಓಟು ಹಾಕಲ್ಲಪ್ಪ ಅಂದ್ಕೊಳ್ತಾನೆ, ಹಣ-ಹೆಂಡ-ಸೀರೆ ಹಂಚ್ತಾ ಇದ್ದಾರಾ ಅಂತ ಆಸೆಯಿಂದ ನೋಡೋರೆ ಜಾಸ್ತಿ. ಆದರೆ, ಈಬಾರಿ ಹಾಗಾಗದಿರಲೆಂದು ಅತಿಯಾಸೆಯಿಂದ ನೋಡೋಣ. ಗುರುತಿನ ಚೀಟಿ ಮಾಡಿಸಿ, ಆಮಿಷಗಳಿಗೆ ಬಲಿಯಾಗದೆ ಸರತಿಯಲ್ಲಿ ನಿಂತು ಮತ ಚಲಾಯಿಸುತ್ತಾರೆಂದು ಬಯಸೋಣ.
ಮತ್ತೆ ಚುನಾವಣೆ ಬರುತ್ತಿದೆ. ಎಪ್ರಿಲ್ ಹದಿನಾರರಿಂದ ಮೇ ಹದಿಮೂರರವರೆಗೆ ಲೋಕಸಭಾ ಚುನಾವಣೆಗಳು ನಡೆಯಲಿವೆ ಎಂದು ಚುನಾವಣಾ ಅಯೋಗ ನಿನ್ನೆ ಘೋಷಣೆ ಮಾಡಿದೆ. ಇನ್ನೇನು, ನಿಧಾನವಾಗಿ ಚುನಾವಣಾ ಕಾವು ದೇಶದಾದ್ಯಂತ ಹಬ್ಬುತ್ತದೆ. ಹಳ್ಳಿಗಳ ಅರಳಿಕಟ್ಟೆಯ ಮಧ್ಯಾಹ್ನದ ಉರಿಬಿಸಿಲು, ನಗರಗಳ ಚಾದುಕಾನಿನ ಸಂಜೆಗಳು, ಚುನಾವಣೆಗಳನ್ನೇ ಜಪಿಸಲು ತೊಡಗುತ್ತವೆ. ಕೂಲಿ ಕಾರ್ಮಿಕರಿಂದ ಹಿಡಿದು, ಬ್ಯಾಂಕ್ ಮ್ಯಾನೇಜರುಗಳವರೆಗೂ ಬರೀ ಇದೇ ಚರ್ಚೆ.

ಇಷ್ಟು ದಿನ, ಅದೆಲ್ಲಿ ಹೋಗಿದ್ದರೋ? ನೋಡಿ, ಇನ್ನು ಮಿರಮಿರ ಮಿರುಗುವ ಬಿಳಿಬಿಳಿ ಧೋತರ ಉಟ್ಟ ರಾಜಕಾರಣಿಗಳು ತಮ್ಮ ತಮ್ಮ ಊರುಗಳ ಗಲ್ಲಿಗಲ್ಲಿಗಳಲ್ಲಿ ತಿರುಗಲಾರಂಭಿಸುತ್ತಾರೆ. ನೀವು ಹೋಗಿ ಮದುವೆಗೋ ಮುಂಜಿಗೂ ಕರೆದು ಬನ್ನಿ ಬಂದುಬಿಡುತ್ತಾರೆ. ತಾವು ಕಳೆದ ಐದು ವರುಷಗಳಿಂದ ಏನಂದರೆ ಏನೂ ಮಾಡಿರದಿದ್ದರೂ, ಮತ್ತೆ ನಮ್ಮನಿಮ್ಮೆದುರು ಅತ್ಮವಿಶ್ವಾಸದಿಂದ ನಿಂತು ಹೊಸ ಕಥೆಗಳನ್ನು ನಂಬುವಂತೆ ಹೇಳತೊಡಗುತ್ತಾರೆ.

ಜನರೂ ಹೊಸ ಉಮೇದಿನಿಂದ ತಮ್ಮೂರ ಹಳೆಯ ಕ್ಯಾಂಡಿಡೇಟು ಅದೇನು ಕಡಿದು ಕಟ್ಟೆ ಹಾಕಿದ್ದ ಎಂಬುದನ್ನು ಚರ್ಚೆ ಮಾಡೀ ಮಾಡೀ..ಒಬ್ಬೊಬ್ಬರು ಒಂದೊಂದು ತರಾ ನಿರ್ಧಾರಕ್ಕೆ ಬರುತ್ತಾರೆ. ಕೆಲ ಊರುಗಳ ಜನ, ತಮ್ಮೂರಲ್ಲಿ ಇಲ್ಲಿಯತನಕ ಯಾವುದೇ ಅಭಿವೃದ್ಧಿ ಕಾರ್ಯಗಳಾಗಿಲ್ಲ, ಹಾಗಾಗಿ ನಾವ್ಯಾರೂ ಮತ ಹಾಕುವುದಿಲ್ಲ ಅಂತ ಬೋರ್ಡು ಬರೆಸಿ, ಊರ ಹೊರಗೆ ಜೋತಾಡಿಸಿ ರಾಜಕಾರಣಿಗಳಿಗೆ ಬಹಿಷ್ಕಾರವನ್ನೂ ಹಾಕುತ್ತಾರೆ.

ಎಲ್ಲರಿಗೂ ಗೊತ್ತಿರುವ ಹಾಗೆ- ಹಣ-ಹೆಂಡ-ಪಂಚೆ-ಸೀರೆ ಅಕ್ಕಿಮೂಟೆಗಳ ಸಂಗ್ರಹ ಭರದಿಂದ ಸಾಗುತ್ತದೆ. ನಗರಗಳ ಹೊರವಲಯದ ಖಾಲಿ ಬಿಲ್ಡಿಂಗುಗಳು ಇವುಗಳಿಗೆ ಅಶ್ರಯ ನೀಡುತ್ತವೆ. ಯಾರ್ಯಾರೋ ಹೆಂಡ ಹಂಚುವಾಗ ದುಡ್ಡು ಸಾಗಿಸಬೇಕಿದ್ದರೆ ಸಿಕ್ಕಿ ಬೀಳುತ್ತಾರೆ. ಅರಳಿ ಕಟ್ಟೆಗಳಲ್ಲಿ ಅವೂ ಚರ್ಚೆಯಾಗುತ್ತವೆ- ಛೇ, ತಮಗೆ ಸಿಗಲಿಲ್ಲವಲ್ಲ ಎಂಬ ಬೇಜಾರಿನೊಂದಿಗೆ.

ಊರೊಳಗೆ ಯಾವ ಕಾರು ಸ್ಕಾರ್ಪಿಯೋಗಳು ಬಂದರೂ, ನಿರುದ್ಯೋಗಿ ಜನ ಯಾವುದೋ ರಾಜಕೀಯ ಪಕ್ಷದವರೇ ಬಂದಿರಬೇಕು ಎಂದು ಉದ್ದ ಕತ್ತು ಚಾಚುತ್ತಾರೆ. ಬಂದವರು ಪಕ್ಷಗಳವರೇ ಆದರೆ, ಒಂದಿಷ್ಟು ದಿನಗಳ ಉದ್ಯೋಗ ದೊರಕುತ್ತದೆ. ಇಲ್ಲವಾದರೆ ಹಿಡಿಶಾಪ ಇದ್ದೇ ಇದೆ. ಇನ್ನು ಯಾವನಿಗಾದರೂ, ಜನ ಒಟ್ಟು ಮಾಡುವ ತಾಕತ್ತಿದ್ದರೆ, ತನ್ನ ಬಳಿ ಇರುವ ಯುವಶಕ್ತಿಯನ್ನು ಪ್ರದರ್ಶಿಸಿ, ನಿಮಗೇ ನಮ್ಮೇರಿಯಾದ ಓಟು ಎಂದು ಅಭ್ಯರ್ಥಿಗಳನ್ನು ನಂಬಿಸಿ ದುಡ್ಡು ಮಾಡಿಕೊಳ್ಳುವ ಹೋಲ್ಸೇಲ್ ದಂಧೆಯೂ ನಡೆಯುತ್ತದೆ.

ಯಾವುದೇ ದಿನಪತ್ರಿಕೆಗಳನ್ನು ತೆಗೆದು ನೋಡಿದರೂ, ಪೇಜುಪೇಜುಗಟ್ಟಲೇ ಜಾಹೀರಾತುಗಳು ಕಾಣುತ್ತವೆ ತಮ್ಮ ಪಕ್ಷದ್ದು ಮಾತ್ರ ಸಾಧನೆ ಎಂಬಹಾಗೆ. ಟೀವೀ ಚಾನಲುಗಳಿಗಂತೂ ಇನ್ನು ಹಬ್ಬ. ರಾಜಕೀಯ ಪಕ್ಷಗಳು, ಚುನಾವಣಾ ಆಯೋಗದ ನಿಯಮಗಳಲ್ಲಿ ಎಲ್ಲೆಲ್ಲಿ ಕುಂದು-ಕೊರತೆಗಳಿವೆ, ಹೇಗೆ ಅಯೋಗದ ಮೂಗಿನಡಿಯಲ್ಲಿ ಅಕ್ರಮಗಳನ್ನು ಮಾಡಿಯೂ ಸಿಕ್ಕಿಹಾಕದೇ ಉಳಿಯಬಹುದು ಎಂಬುದರ ಬಗ್ಗೆ ತಲೆಕೆಡಿಸಿಕೊಳ್ಳುತ್ತವೆ.

ಇವಿಷ್ಟರ ಮಧ್ಯೆ, ದೇಶ ಹಾಳಾಗುತ್ತಿದೆ, ಎಕ್ಕುಟ್ಟೋಗುತ್ತಿದೆ ಎಂದೆಲ್ಲ ಮಾತನಾಡುವ ಮಂದಿ ಮತದಾನ ಮಾಡುವುದೋ ಬಿಡುವುದೋ ಎಂಬ ಗೊಂದಲದಲ್ಲೇ ಕಾಲ ಕಳೆಯುತ್ತಾರೆ. ಇಲ್ಲಿಯ ತನಕ ಒಂದು ಬಾರಿ ಕೂಡ ಮತದಾನ ಮಾಡದೇ ಹೋದರೂ ದೇಶದ ಪರಿಸ್ಥಿತಿ ರಾಜಕಾರಣಿಗಳ ಭ್ರಷ್ಟಾಚಾರ ಇತ್ಯಾದಿ ವಿಚಾರಗಳ ಬಗ್ಗೆ ಪುಂಖಾನುಪುಂಖವಾಗಿ ಮಾತನಾಡುತ್ತಾರೆ. ಮನೆ ಬಾಗಿಲಿಗೇ ಜನಗಣತಿಯವರು ಬಂದಿದ್ದರೂ, ಮತ್ತೆ ಮತ್ತೆ ಮಂಡಲ ಪಂಚಾಯತಿಗಳಿಂದ ಹಿಡಿದು ಮಹಾನಗರ ಪಾಲಿಕೆಗಳವರೆಗೆ- ಮತದಾರರ ಗುರುತು ಪತ್ರ ಮಾಡಿಸಿಕೊಳ್ಳುವ ಮಾಹಿತಿಗಳನ್ನು ನೋಡಿದ್ದರೂ, ಅರಾಮಾಗಿ ಕೂತು ಕಾಲ ಕಳೆದ ಕಾರಣ ಇನ್ನೂ ವೋಟರ್ ಐಡಿ ಬಂದಿಲ್ಲ. ಮತದಾನ ಮಾಡಲು ವೋಟರ್ ಐಡಿ ಇಲ್ಲದಿದ್ದರೂ ಪರವಾಗಿಲ್ಲ ಉಳಿದ ಕೆಲ ಅವಶ್ಯಕ ದಾಖಲೆಗಳಿದ್ದರೆ ಎಂಬ ಮಾಹಿತಿಯೂ ಇವರಿಗೆ ತಿಳಿದಿದೆಯೋ ಇಲ್ಲವೋ- ಗೊತ್ತಿಲ್ಲ.

ಮನೆಯೆದುರಿನ ಶಾಲೆಯಲ್ಲಿ ಸರತಿ ಸಾಲಲ್ಲಿ ನಿಂತು, ಮತದಾನ ಮಾಡುವ ಗೋಳು ಯಾರಿಗೆ ಬೇಕು ಅನ್ನುವ ಕಾರಣಕ್ಕೆ, ನಾಳೆಯ ದಿನ ವೋಟ್ ಮಾಡುವುದೂ ಸಂಶಯವೇ. ಯಾಕೆ ನಮ್ಮ ದೇಶದಲ್ಲಿ ನಾವು ಅಂರ್ತಜಾಲದ ಮೂಲಕ ಮತದಾನ ಮಾಡಬಾರದು ಮೊಬೈಲ್ ಗಳ ಮೂಲಕವೂ ಅದ್ಯಾವುದೋ ದೇಶದಲ್ಲಿ ಮತದಾನ ಮಾಡುವ ಸೌಲಭ್ಯ ಇದೆಯಂತೆ ಎಂದೆಲ್ಲ ಮಾತಾಡುತ್ತಾರೆಯೇ ಹೊರತು ತಮ್ಮಲ್ಲಿ ಇರುವ ಸೌಲಭ್ಯಗಳ ಬಳಕೆ ಮಾಡಿಕೊಂಡು ಮತದಾನ ಮಾಡುವುದಿಲ್ಲ.

ಮೇ ಕೊನೆಯ ಹೊತ್ತಿಗೆ ಯಾವುದಾದರೂ ಅಲಯನ್ಸು ಸರಕಾರ ನಿರ್ಮಿಸುತ್ತದೆ. ಭಾರತದ ಅಮೂಲ್ಯ ಯುವಪಡೆಯ ಅರ್ಧದಷ್ಟು ಮಂದಿ ಕೂಡ ಮತದಾನ ಮಾಡದೇ, ಮಾಡದೇ ಇರುವುದಕ್ಕೆ ತಮಗೆ ತಾವೇ ಕಾರಣಗಳನ್ನು ಕೊಟ್ಟು ಕೊಳ್ಳುತ್ತ ಸಮಾಧಾನ ಪಟ್ಟುಕೊಳ್ಳುತ್ತಾರೆ. ಮತ್ತೆ ಇನ್ನೈದು ವರುಷಗಳ ಬಳಿಕ – ಇವೇ ಸೀನುಗಳು ಮರುಕಳಿಸುತ್ತವೆ.

Alemane| Sugarcane Juice | Malenadu | – ಮಲೆನಾಡ ಆಲೆಮನೆಯತ್ತ ಹೋಗೋಣ ಬನ್ನಿ

Alemane in Malenadu

ಸಂಕ್ರಾಂತಿ ಹಬ್ಬ ಮುಗಿಯುತ್ತಿದ್ದಂತೆ ಕರ್ನಾಟಕದ ಹಳ್ಳಿಗಳಲ್ಲಿ, ಅದರಲ್ಲಿಯೂ ಮಲೆನಾಡ ಹಳ್ಳಿಗಳಲ್ಲಿ ಆಲೆಮನೆಗಳು ಜೀವ ಪಡೆಯಲು ಶುರುಮಾಡುತ್ತವೆ. ಮುಸ್ಸಂಜೆ ಹೊತ್ತಲ್ಲಿ ಮಂಡಕ್ಕಿ, ಮಿರ್ಚಿ ಮೆಲ್ಲುತ್ತ ಗಿಂಡಿಗಟ್ಟಲೆ ತಾಜಾತಾಜಾ ಕಬ್ಬಿನಹಾಲನ್ನು ಗಂಟಲಿಗಿಳಿಸುತ್ತಿದ್ದರೆ… ಅದರ ಆನಂತ, ರಸಾಸ್ವಾದವನ್ನು ಪದಗಳಲ್ಲಿ ವರ್ಣಿಸುವುದು ಅಸಾಧ್ಯ. ಸಾಧ್ಯವಾದರೆ ಹಳ್ಳಿಗಳಲ್ಲಿ ಸಿಗುವ ಆಲೆಮನೆಗೆ ಭೇಟಿ ನೀಡಿ ಕಬ್ಬಿನರಸ ಹೀರಿರಿ.

ಮತ್ತೆ ಮಲೆನಾಡಿನ ಸುದ್ದಿ ಬರೀತಿದೀನಿ ಅಂತ ಓದುಗ ಮಹಾಶಯರುಗಳು ಬೇಜಾರು ಮಾಡಿಕೊಳ್ಳಬಾರದು. ಏನು ಮಾಡಲಿ ಹೇಳಿ? ನನ್ನ ಭಾವ ಮತ್ತು ಬಾಂಧವ್ಯಗಳ ಲಿಂಕು ಅತ್ತ ಕಡೆಗೇ ಇರುವುದರಿಂದ, ಅಲ್ಲಿನ ಸಂಸ್ಕೃತಿ ವಿಶೇಷಣಗಳು ಹೆಚ್ಚು ಹೆಚ್ಚು ಸೆಳೆಯುತ್ತವೆ. ನೀವೋ, ಏನಯ್ಯ ಮಾಡೋಕೆ ಕೆಲಸವಿಲ್ಲದವನ ಹಾಗೆ ಬರೀ ಮಲೆನಾಡು [^] ಆಚಾರ ವಿಚಾರ ಎಂತೆಲ್ಲ ಬರೆಯುತ್ತ ಕೂರುತ್ತೀಯಾ ಅಂತ ಝಾಡಿಸಿ ಬಿಡುತ್ತೀರಿ. ಇರ್ಲಿ, ಬರೆಯದೇ ವಿಧಿ ಇಲ್ಲ.

ಇತ್ತೀಚಿಗಷ್ಟೇ ಶಿರಸಿ ಕಡೆ ಹೋಗಿ ಬಂದಿದ್ದರಿಂದ, ಮತ್ತು ಅಲ್ಲೆಲ್ಲ ಆಲೆಮನೆ ಸೀಸನ್ ಆಗಿದ್ದರಿಂದ, ಅದರ ಬಗ್ಗೆ ಒಂದಿಷ್ಟು ಸುದ್ದಿ ನಿಮ್ಮ ಜತೆಗೂ ಹಂಚಿಕೊಳ್ಳುವ ಅಂತನಿಸಿತು. ಆಲೆಮನೆ ಅಂತಂದ್ರೆ, ಕಬ್ಬರೆದು ಬೆಲ್ಲ ಮಾಡುವ ಜಾಗ. ವರ್ಷ ಪೂರ್ತಿ ಬಿಸಿಲಲ್ಲಿ ಒದ್ದಾಡಿ, ಮೈಕಪ್ಪಾಗಿಸಿ ದುಡಿದ ನಂತರ ಬಾಯಿಸಿಹಿ ಮಾಡಿಕೊಳ್ಳುವ ತಾಣ.

ಆಲೆಮನೆಯ ಕೆಲಸ ಹೇಗಾಗುತ್ತದೆ ಅನ್ನೋದನ್ನ ಸರಳವಾಗಿ ಹೇಳಿಬಿಡ್ತೀನಿ.

ಸಾಮಾನ್ಯವಾಗಿ ಡಿಸೆಂಬರ್ ಕೊನೆಯಿಂದ ಫೆಬ್ರವರಿ ಕೊನೆಯೊಳಗೆ ಮಲೆನಾಡಿನಲ್ಲಿ ಕಬ್ಬರೆದು ಬೆಲ್ಲ ತಯಾರು ಮಾಡುವ ಕೆಲಸ ನಡೆಯುತ್ತದೆ. ಹತ್ತಾರು ಊರುಗಳಲ್ಲಿ ಯಾರಾದರೊಬ್ಬರ ಮನೆಯಲ್ಲಿ ಕಬ್ಬು ಅರೆವ ಯಂತ್ರ ಇರುತ್ತದೆ. ಅದು ಊರಿಂದೂರಿಗೆ ಅವಶ್ಯಕತೆ ಇರುವವರ ಮನೆಗೆ ಪ್ರಯಾಣ ಬೆಳೆಸುತ್ತ ಸಾಗುತ್ತದೆ, ಅಶ್ವಮೇಧದ ಕುದುರೆಯ ಹಾಗೆ. ಸಲ್ಲಬೇಕಾದ ಕಾಣಿಕೆ ಮತ್ತೆ ಸಲ್ಲಿಸಿದರಾಯಿತು.

ಕಬ್ಬರೆವ ಯಂತ್ರ(ಕಣೆ) ಮನೆಯಂಗಳಕ್ಕೆ ಬಂದು ನಿಂತಮೇಲೆ ಸಂಭ್ರಮ ಶುರು. ಅದನ್ನ ನಿಲ್ಲಿಸಿ ಫಿಕ್ಸ್ ಮಾಡುವುದು ಒಂದಿಷ್ಟು ಜನರ ಕೆಲಸವಾದರೆ, ಮತ್ತಷ್ಟು ಜನ ಗದ್ದೆಯಲ್ಲಿ ಕಬ್ಬು ಕಡಿದು, ಆಲೆಮನೆಯಂಗಣಕ್ಕೆ ತಂದು ಹಾಕುತ್ತಾರೆ. ಕಬ್ಬಿನ ಕಣೆ ಸ್ವಲ್ಪ ಎತ್ತರ ಜಾಗದಲ್ಲಿದ್ದು, ಹಾಲು ದೊಡ್ಡ ಪಾತ್ರೆ(ಬಾನಿ)ಗೆ ಸರಗ ಹರಿದುಹೋಗಲು ಅನುಕೂಲವಾಗುವಂತೆ ಇರುತ್ತದೆ. ಮೊದಲು ಅರೆದ ಹಾಲನ್ನ ದೇವರಿಗೆ ಸಮರ್ಪಿಸಿ, ನಂತರ ಕೊಪ್ಪರಿಗೆ ತುಂಬುವಷ್ಟು ಹಾಲನ್ನ ರೆಡಿ ಮಾಡಿಕೊಂಡು, ತುಂಬಿ, ಅದನ್ನು ಆರು-ಎಂಟು ತಾಸುಗಳಷ್ಟು ಹೊತ್ತು ಕುದಿ ಕುದಿಸಿದ ನಂತರ ಹಾಲಿಂದ ರೆಡಿ.

ಮಲೆನಾಡಿನ ಕಡೆಗಳಲ್ಲಿನ ಆಲೆಮನೆ ಇತರೆಡೆಗಳಷ್ಟು ದೊಡ್ಡ ಮಟ್ಟದ್ದಲ್ಲ. ಹೆಚ್ಚಾಗಿ ತಮ್ಮ ಮನೆ ಖರ್ಚಿನ ಲೆಕ್ಕಕ್ಕೆ ಜೋನಿಬೆಲ್ಲ ಮಾಡಿಕೊಳ್ಳುವವರೇ ಎಲ್ಲ. ಎಲ್ಲೋ ಅಲ್ಪ ಸ್ವಲ್ಪ ಬೆಲ್ಲ ಹೊರಗೆ ಮಾರಿಯಾರು, ಅಷ್ಟೆ, ಅದೇ ನೀವು ಮೈಸೂರು [^], ಮಂಡ್ಯದ ಕಡೆ ಹೋದರೆ, ಟನ್ನುಗಟ್ಟಲೆ ಕಬ್ಬುಗಳು ರಾಶಿ ಬಿದ್ದ ನೂರಾರು ಆಲೆಮನೆಗಳು ದಾರಿಯುದ್ದಕ್ಕೂ ಸಿಗುತ್ತವೆ. ಅಲ್ಲಿ ನಾವು ನೀವು ಅಂಗಡಿಯಲ್ಲಿ ಕೊಳ್ಳುವ ಹಳದಿ ಬೆಲ್ಲದುಂಡೆಗಳು ತಯಾರಾಗುತ್ತವೆ.

ನಗರಗಳಲ್ಲಿನ ಕಬ್ಬಿನ ಹಾಲನ್ನ ಕುಡಿದು ಅದರ ರುಚಿಗೇ ಬಾಯಿ ಚಪ್ಪರಿಸಿಕೊಳ್ಳುವವರು ಆಲೆಮನೆಯ ತಂಪಲ್ಲಿ ಕೂತು, ಆಗ ತಾನೆ ಬಾನಿಗೆ ಬೀಳುತ್ತಿರುವ ಹಾಲನ್ನ ಚೊಂಬೊಂದರಲ್ಲಿ ಹಿಡಿದು ಕುಡಿಯಬೇಕು. ಆಲೆಮನೆಯಲ್ಲಿ ಮತ್ತೊಂದು ವಿಶೇಷತೆ ಅಂದರೆ ಅಲ್ಲಿನ ತಿಂಡಿಗಳು-ಕುರುಕುಗಳು. ಅವಲಕ್ಕಿ-ಚುಡ್ವಾ, ಮಂಡಕ್ಕಿ ಮಸಾಲೆ, ಮಿರ್ಚಿಭಜಿ, ಇವುಗಳ ಜೊತೆಗೆ ಕಬ್ಬಿನಾಲು.. ರಾತ್ರಿಯ ಚಳಿಯಲ್ಲಿ ಆಲೆಮನೆಯ ಒಲೆಯೆದುರು ಕುಳಿತು, ಕಥೆ ಹೊಡೆಯುತ್ತ , ಇವುಗಳನ್ನು ಮೆಲ್ಲುತ್ತ ಕಬ್ಬಿನ ಹಾಲು ಕುಡಿಯುತ್ತ ಕೂತರೆ, ಅದೆಷ್ಟು ಗಿಂಡಿ ಹಾಲು ಹೊಟ್ಟೆ ಸೇರುವುದೋ ಭಗವಂತ ಬಲ್ಲ! ಇನ್ನು ಭಂಗಿ ಸುದ್ದಿ ಇದ್ದರಂತೂ, ಬಿಡಿ,ಅದರ ಕಥೆ ಬೇರೆಯದೇ!

ಈ ಆಲೆಮನೆಗಳು, ಒಂಥರಾ ಊರಿನ ಸಂಭ್ರಮವಿದ್ದ ಹಾಗೆ. ಯಾರು ಬೇಕಾದರೂ ಎಷ್ಟು ಹೊತ್ತಿಗೆ ಬೇಕಾದರೂ ಆಲೆಮನೆಗೆ ಬರಬಹುದು, ಹಾಲು ಕುಡಿಯಬಹುದು, ಕಬ್ಬು ತಿನ್ನಬಹುದು. ಮನೆಗೂ ಒಯ್ಯಬಹುದು! ಯಾರಿಗಾದರೂ ಮಲೆನಾಡ ಕಡೆಯದೋ ಮಂಡ್ಯ ಕಡೆಯದೋ ಸ್ನೇಹಿತರ ಬಳಗವಿದ್ದರೆ ಒಮ್ಮೆ ಆಲೆಮನೆಗೆ ಹೋಗಿ ಬನ್ನಿ!

Marriage rituals in Malenadu/Karnataka – ಮಲೆನಾಡ ಮದುವೆಯೆಂದರೆ.. ಸುಮ್ನೆನಾ?

Marriage rituals in Malenadu (Photo by Vasanth)
ನಗರಗಳಲ್ಲಿ ಮದುವೆಗಳೆಂದರೆ ಧಾರ್ಮಿಕ ಕಾರ್ಯಗಳಿಂದ ಹಿಡಿದು ಪ್ರತಿಯೊಂದನ್ನು ಕಾಂಟ್ರಾಕ್ಟ್ ಕೊಟ್ಟು ಕೈಬೀಸಿ ಮದುವೆ ಮಂಟಪಕ್ಕೆ ನಡೆದು ಬರುವಷ್ಟರ ಮಟ್ಟಕ್ಕೆ ಯಾಂತ್ರಿಕವಾಗಿವೆ. ಎಲ್ಲ ಮದುವೆಗಳೂ ಹೀಗೇ ಇಲ್ಲದಿದ್ದರೂ ಕಷ್ಟ ತಪ್ಪಿದರೆ ಸಾಕಪ್ಪ ಅನ್ನುವಂತಾಗಿವೆ. ಆದರೆ, ಮಲೆನಾಡುಗಳಲ್ಲಿ ಮದುವೆಗಳೆಂದೆ ಹೀಗಲ್ಲ. ಅಲ್ಲಿಯ ಸಂಭ್ರಮಕ್ಕೆ ಎಲ್ಲೆಯೇ ಇಲ್ಲ. ಊರಿನ ಪ್ರತಿಯೊಬ್ಬರೂ ಬಂಧುಗಳೇ. ಇಷ್ಟೊಂದು ಜನರನ್ನ ಹೇಗಪ್ಪ ಸಂಭಾಳಿಸುವುದು ಅಂದುಕೊಂಡರೂ ಮದುವೆ ಮುಗಿಸಿ ನೆಂಟರಿಷ್ಟರನ್ನು ಸಾಗಹಾಕಿದಾಗ ಏನೋ ಒಂಥರ ಖಾಲಿಖಾಲಿ.
ಸಿಕ್ಕಾಪಟ್ಟೆ ಬಿಸ್ಲು, ಮಕ್ಳಿಗೆಲ್ಲ ರಜೆ. ಹೊರಗೆ ತಿರುಗಾಡೋಕೆ ಹೊರಟರೆ ಬೆವ್ರು- ಸೆಖೆ. ಬಿಸಿ ಗಾಳಿ. ಮನೆ ಹಂಚಿನ್ ಮೇಲೆ, ಚಪಾತಿ ಸುಡಬಹುದು. ಊರಲ್ಲಿ ಜಾತ್ರೆ , ದಿನಾ ದೇವಸ್ಥಾನಕ್ಕೆ ಬೇರೆ ಹೋಗ್ಬೇಕು. ಹಲಸಿನ ಹಪ್ಳ ಮಾಡೋ ಚಿಂತೆ, ಮಳೆಗಾಲಕ್ ಕಟ್ಗೆ ಒಟ್ ಮಾಡೋ ಕಷ್ಟ, ಕರೆಂಟಿಲ್ದೇ ಒದ್ದಾಡೋ ರಾತ್ರೆ, ಒಂದಾ ಎರಡಾ? ಎಲ್ಲ ಈ ಬೇಸಿಗೆಯ ಜೊತೆ ಜೊತೆಗೇ ಬರತ್ತೆ. ಅದೇನೋ ಹೇಳ್ತಾರೆ ನಮ್ಮಲ್ಲಿ, “ಬಕನ್ ಬಾರಿ, ಮಗನ್ ಮದ್ವೆ, ಹೊಳಿಂದಚೀಗ್ ಪ್ರಸ್ಥ, ಎಲ್ಲ ಒಟ್ಟಿಗೇ ಬಂದಿತ್ತಡ” ಅಂತ.

ಹಾ! ಮದ್ವೆ ಅಂದ್ ಕೂಡ್ಲೆ ನೆನ್ಪಾಯ್ತು, ಈ ಮದ್ವೆ ಗೌಜು ಗಲಾಟೇನೂ ಬರೋದು ಬೇಸ್ಗೇಲೆ. ಪ್ರತೀ ವರ್ಷ ಎಪ್ರೀಲು ಮೇ ತಿಂಗ್ಳಲ್ಲಿ ಕಡ್ಮೆ ಅಂದ್ರೂ 10 ಮದ್ವೆ ಇದ್ದಿದ್ದೆ. ಅದರಲ್ಲಿ 4-5 ನಮ್ಮ ಅತ್ಯಂತ ಹತ್ತಿರದೋರ್ದು. ಮನೇಲಿ ನೀರಿರಲ್ಲ, ನಮಗೇ ಪರದಾಟ, ಅದ್ರ್ ಜೊತೆಗೆ, ಒಂದಿಷ್ಟ್ ಜನ ನೆಂಟ್ರು – ನಮ್ ಮನೆ ಹತ್ರ ಅಂತ ಬಂದು ಉಳ್ಕೊಂಡಿರೋರು, ಚಿಳ್ಳೆ ಪಿಳ್ಳೆಗಳ ಸಮೇತ. ಮೂರು ಟ್ಯೂಬ್ ಲೈಟು, ಒಂದಿಷ್ಟ್ ಗ್ಲಾಸು, ಒಡಿಯೋದೆ. ನಮಗೆ ಬೈಯೋ ಹಾಂಗೂ ಇಲ್ಲ, ಬಿಡೋ ಹಾಂಗೂ ಇಲ್ಲ, ಬಿಸಿ ತುಪ್ಪ!

ಹೊರಗಡೆ ತೋಟದಲ್ಲಿ ಕೆಲ್ಸಕ್ ಬಂದಿರೋರು ಒಂದಿಷ್ಟ್ ಜನ . ಅವ್ರ್ಗೂ ಮಾಡ್ ಹಾಕಿ, ಬಂದೊರ್ನ ಸುಧಾರ್ಸಿ, ಉಫ್, ಅಮ್ಮ ಕಂಗಾಲು. ಮದ್ವೆ ಮನೆಗೆ ಬೇರೆ ಹೋಗ್ಬೇಕು, 2 ದಿನಾ ಮುಂಚೆ! ಮಂಗಳ ಪತ್ರ ಕೊಟ್ ಕೂಡ್ಲೆ ಧಮಕೀನೂ ಬಂದಿರುತ್ತದೆ, “ಎರಡು ದಿನ ಮುಂಚೆ ಬಂದು ಎಲ್ಲಾ ಸುಧಾರ್ಸಿಕೊಡಕು” ಅಂತ. ಏನೇ ರಗ್ಳೆ ಇದ್ರೂ, ಮದ್ವೆ ಮನೆ ಅಂದ್ರೆ ಖುಷಿನೇ ಬಿಡ್ರೀ! ನಂಗೆ, ನಿಮ್ಗೆ ಮತ್ತೆ ಎಲ್ಲರಿಗೂ, ಅಲ್ವಾ?

ಮದ್ವೆ ಮನೆ ಓಡಾಟದಲ್ಲಿರೋ ಸಂತೋಷ ಮತ್ ಎಲ್ಲೂ ಇಲ್ಲ! ಎಲ್ಲರೂ ಕೆಲ್ಸ ಮಾಡೋರೆ. ನಾನ್ ಹೇಳ್ತಿರೋದು ಮನೇಲೇ ನಡಿಯೋ ಮಲೆನಾಡಿನ ಮದ್ವೆ ಬಗ್ಗೆ, ಈ ಪೇಟೆ ಛತ್ರದ್ ಮದ್ವೇ ಅಲ್ಲಾ ಮತ್ತೆ. ಚಪ್ಪರ ಹಾಕೋರೇನೂ, ಪಾತ್ರೇ ಸಾಗ್ಸೋರೇನು, ಹೂವು, ಹಣ್ಣು ತರೋರೇನು, ಓಡಾಟವೇ ಓಡಾಟ. ಮಕ್ಳಿಗಂತೂ ದೊಡ್ಡೋರ್ ಕೈ ಕಾಲಡಿಗೆ ಸಿಗೋದೆ ಸಂಭ್ರಮ. ಉಮೇದಲ್ಲಿ ಕೆಲಸ ಮಾಡೋ ಯುವಕರ ಒಂದು ಪಂಗಡ ಆದ್ರೆ, ಕೆಲ್ಸ ಮಾಡ್ಸೋ ಹಿರೀರದು ಇನ್ನೊಂದು. “ತಮ್ಮಾ, ಆ ಬದಿ ಸ್ವಾಂಗೆ ಹೊಚ್ಚಿದ್ದು ಸರಿ ಆಯ್ದಿಲ್ಲೆ ನೋಡು, ಹಾನ್, ಸ್ವಲ್ಪ ಇತ್ಲಾಗ್ ತಗ, ಹಾ, ಹಾಂಗೆ.. ಈಗ್ ಸರಿ ಆತು”, “ಒಲೆ ಸ್ವಲ್ ವಾರೆ ಆದಾಂಗ್ ಇದ್ದು, ಆ ತಿಮ್ಮಣ್ಣನ್ ಕರಿ”, “ಬೆಳ್ಗೆ ಹಾಲ್ ತಪ್ಪವು ಯಾರು, ಬೇಗ್ ಹೋಗ್ ಬನ್ನಿ” ಉಸ್ತುವಾರಿ ಕೆಲ್ಸ! ಕೆಲ್ಸಾ ಮಾಡ್ತಾ ಇರೋ ಹುಡುಗ್ರು ಇವ್ರ್ ಮೇಲೆ ಸೇಡ್ತೀರ್ಸ್ಕೊಳಕ್ಕೆ ಸರಿಯಾದ್ ಟೈಮ್ ಗೆ ಕಾಯೋದಂತೂ ಸುಳ್ಳಲ್ಲ.

ಇಡೀ ಊರಿನ ಹುಡುಗ ಪಾಳಯಕ್ಕೆ ಈ ಮದ್ವೆ, ಒಂದು ನೆಪ. ಮದ್ವೆ ಮುಗಿಯೋ ತಂಕ ಇವರ ಹಾರಾಟನ ಯಾರೋ ಕೇಳೋ ಹಾಂಗಿಲ್ಲ! ಪರೀಕ್ಷೆ, ಮಾಷ್ಟ್ರು, ಅಪ್ಪ ಯಾರ್ ಕಾಟನೂ ಇರಲ್ಲ ಬೇರೆ. ಮನೆ ಹಿಂದಿನ ಬ್ಯಾಣದ ಗೇರು , ಮಾವುಗಳೆಲ್ಲ ಇವರದೇ ಪಾಲು. ಹುಡುಗೀರ ಪ್ರಪಂಚ ಬೇರೆಯದೇ, ಹೊಸ ಬಟ್ಟೆ, ಮದರಂಗಿ, ಹೂವು, ಅಮ್ಮನ ಹೊಸ ರೇಷ್ಮೆ ಸೀರೆಯ ಚಂದ, ಬೆಂಗಳೂರಿಂದ ಬಂದ ಅಕ್ಕ ಕಲಿಸಿಕೊಟ್ಟಿರೋ ಜಡೆ ಹಾಕುವ ನೂತನ ವಿಧಾನ..

ಇಷ್ಟೆಲ್ಲ ಗಡಿಬಿಡಿ ಎಲ್ಲರಿಗೆ ಇದ್ದರೂ, ಎಲ್ಲೋ ಒಂದು ಜೊತೆ ಕಣ್ಣು ಇನ್ನೊಂದನ್ನ ಸಂಧಿಸಿಯೇ ಸಂಧಿಸುತ್ತವೆ ಮತ್ತು ಚಿಗುರು ಪ್ರೇಮವೊಂದು ಹುಟ್ಟುತ್ತದೆ, ಮತ್ತದು ಅವರಿಬ್ಬರಿಗೆ ಮಾತ್ರ ತಿಳಿದಿರುತ್ತದೆ! ಅದೇ ಊರಿನ್ ಹುಡ್ಗಿ ಇರಬಹುದು, ವರ್ಷಗಟ್ಲೆ ಅವಳು ಇವನ್ನ – ಇವನು ಅವಳನ್ನ ನೋಡ್ತಾ ಇದ್ರೂ, ಈ ಮದ್ವೆ ಮನೆ ಅವರಲ್ ಹೊಸ ಭಾವ ಹುಟ್ಟಿಸುತ್ತದೆ. ಎಲ್ಲೋ ಅಟ್ಟದ ಮೇಲಿನ ಬಾಳೆಗೊನೆಯನ್ನ ಕೆಳಗಿಳ್ಸೋವಾಗ, ಪಾತ್ರೆ ದಾಟಿಸುವಾಗ, ತರಕಾರಿ ಹೆಚ್ಚುವಾಗ, ತೋಟದಲ್ಲಿ ವೀಳ್ಯದೆಲೆ ಏಣಿಯನ್ನ ಅವನು ಹತ್ತಿದ್ದಾಗ, ಒತ್ತಾಯ ಮಾಡಿ ಹೋಳಿಗೆ [^] ಬಡಿಸುವಾಗ!..

ತಲೆ ಮೇಲೆ ಸುಡೋ ಬಿಸ್ಲಿದ್ರೂ, ಗಾಳಿ ಬೀಸೋದು ನಿಲ್ಸಿದ್ರೂ, ಸಿಕ್ಕಾಪಟ್ಟೆ ಜನ ಅತ್ತಿಂದಿತ್ತ ಓಡಾಡ್ತಾ ಇದ್ರೂ, ಯಾವ್ದೋ ಒಂದು ಮಸ್ತ್ ಘಳಿಗೆಯಲ್ಲಿ ಹುಟ್ಟಿ ಬಿಡುತ್ತದೆ ಈ ಭಾವ. ದೂರದೂರಿಂದ ಬಂದ ಹುಡುಗನಾದರೆ ಅಥವ ಹುಡುಗಿಯಾದರೆ ಕತ್ತಲ ಮೂಲೆಯವರೆಗೆ ಸಾಗೀತೇನೋ, ಇಲ್ಲವಾದರೆ ಹೆಚ್ಚಿನ ಸಂದರ್ಭಗಳಲ್ಲಿ, ಕಣ್ಣ ಆರಾಧನೆಯಲ್ಲೇ ಕಳೆಯುತ್ತದೆ. ಪರಸ್ಪರ ನೋಟದಲ್ಲೇ ಅಚ್ಚರಿ- ನಗು.

ಮದುವೆ ಬರಿಯ ಇಬ್ಬರದಲ್ಲ , ಹಲವು ಬಂಧಗಳನ್ನ ಬೆಸೆಯುತ್ತದೆ. ನಾಲ್ಕು ವರ್ಷದಿಂದ ಮಾತಾಡ್ದೇ ಇರೋ ಗಣಪಣ್ಣ- ಮಾಬ್ಲೇಶ್ವರ ಈ ಮದುವೇಲಿ ಒಟ್ಟಿಗೇ ಅನ್ನದ ಕೌಳಿಗೆ ಹಿಡ್ದ್ರೂ ಆಶ್ಚರ್ಯ ಇಲ್ಲ! ಪಾಲಾಗಿ, ಅಡ್ಡ ಬಾಗಿಲುಗಳನ್ನ ಮುಚ್ಚಿದ್ದ ಮನೆಗಳು, ಈಗ ತೆರೆದುಕೊಳ್ಳುತ್ತವೆ, ಎಲ್ಲರ ಮನೆಯ ಬಾಳೇ ಎಲೆಗಳೂ ಸಾಲಾಗಿ ಹಾಕಲ್ಪಡುತ್ತವೆ, ಸಾಲುಮನೆಗಳ ಅಟ್ಟದ ಮೇಲೆ ಹಾಸಿರುವ ಕಂಬಳಿಗಳು, ಇಡಿಯ ಊರಿನದು!. ಎಲ್ಲ ಕೊಟ್ಟಿಗೆಗಳ ಗಿಂಡಿ ನೊರೆ ಹಾಲು ಬಂದು ಬೀಳುವುದು ಒಂದೇ ಪಾತ್ರೆಗೆ. ವೆಂಕಣ್ಣನ ಮನೆಯ ಚಾಲಿಯೂ, ಗಿರಿ ಭಟ್ಟರ ಕೆಂಪಡಕೆಯೂ, ಒಂದೇ ವೀಳ್ಯದ ಬಟ್ಟಲೊಳಗೆ.

ಮದುವೆ, ಇಡಿಯ ಊರನ್ನ ಒಗ್ಗೂಡಿಸಿರುತ್ತದೆ. ಮದುವೆ ಮುಗಿದ ಮೇಲೆ, ಎಲ್ಲ ತೆರಳಿದ ಮೇಲೆ, ಊರಿಗೂರೇ ಆ ಖಾಲಿತನವನ್ನ ಅನುಭವಿಸುತ್ತದೆ. ಚಪ್ಪರ, ಮನೆಯ ಮೆತ್ತು ಎಲ್ಲ ಖಾಲಿ. ಬಾಡಿದ ಹೂವಿನ ರಾಶಿ, ಸುತ್ತಿಟ್ಟ ಚಾಪೆಗಳು, ತಮ್ಮ ತಮ್ಮ ಮನೆಗಳಿಗೆ ತೆರಳಲು ಸಿದ್ಧವಾಗಿ ನಿಂತ ಪಾತ್ರೆ- ಕಂಬಳಿಗಳ ಗಂಟು, ಪೆಚ್ಚು ಮೋರೆಯಲ್ಲಿ ಮತ್ತೆ ತೋಟದ ಕಡೆಗೆ ಹೊರಟು ನಿಂತ ಆಳು.. ಮಗಳನ್ನ ಕಳುಹಿಸಿ ಕೊಟ್ಟ ಅಪ್ಪ- ಅಮ್ಮ ಮಾತ್ರವಲ್ಲ, ಮದುವೆ ಮನೆಯಲ್ಲಿ ಸಿಕ್ಕಿದ್ದ ಹೊಸ ಗೆಳೆಯನನ್ನ ಕಳೆದುಕೊಂಡ ಹುಡುಗಿಯೂ ಅಷ್ಟೇ ನೋವನುಭವಿಸುತ್ತಾಳೆ. ಇನ್ನು ಯಾವಾಗ ಬರುವವನೋ ಅವನು..

ಎಲ್ಲರ ಮನೆಯ ಪಾತ್ರೆ ಪಗಡ, ಕಂಬಳಿಗಳು ಅವರ ಮನೆಯ ಮೇಲುಪ್ಪರಿಗೆಯಲ್ಲಿ ಕುಳಿತಾದ ಮೇಲೆ, ಕರೆದ ನೊರೆಹಾಲು ಮತ್ತೆ ತಮ್ಮ ತಮ್ಮ ಮನೆಯ ಗಿಂಡಿಗಳೊಳಗೇ ಕಲಕಲು ಶುರುವಾದ ಮೇಲೆ, ಸಾಲು ಸಾಲಾಗಿ ಎಲ್ಲರ ಮನೆಯ ಚಿಟ್ಟೆಗಳನ್ನ ನೆಗೆದೋಡುತ್ತಿದ್ದ ಪುಟ್ಟ ಪೋರಿಯ ಕಾಲ್ಗೆಜ್ಜೆ ಶಬ್ದ, ಮುಂದೆಷ್ಟೋ ದಿನಗಳವರೆಗೆ ಅನುರಣಿಸುತ್ತಿರುತ್ತದೆ, ಬಿಸಿಲ ಮಧ್ಯಾಹ್ನಗಳಲ್ಲಿ.

E-mail spam | Hoax emails | Junk email – ಈ ಮೇಲ್ ಭಯೋತ್ಪಾದನೆ!

E-mail spam | Hoax emails | Junk email
ಜನ ಇವತ್ತಿಗೂ ಐವತ್ತು ಜನಕ್ಕೆ ಫಾರ್ವರ್ಡು ಮಾಡಿದರೆ ಕ್ಯಾನ್ಸರು ಪೇಶಂಟಿಗೆ 10 ಸೆಂಟು ಸಿಗುತ್ತದೆ ಅನ್ನುವ ತರಹದ ಈ-ಮೇಲ್ ಗಳನ್ನು ಕಳಿಸುತ್ತಲೇ ಇದ್ದಾರೆ. ನನ್ನ ಪರಿಚಿತರೊಬ್ಬರು ಹೇಳಿದ ಹಾಗೆ, ಸೀಮನ್ಸ್ನಲ್ಲಿ ಕೆಲಸ ಮಾಡುವ ಅದ್ಯಾವುದೋ ಹೆಂಗಸು- ಅವಳಿಗೇನೋ ರೋಗ ಇರುವ ಈ ಮೇಲ್, ಕಳೆದ ಆರು-ಏಳು ವರುಷಗಳಿಂದ ಬರುತ್ತಲೇ ಇದೆಯಂತೆ!
ಇತ್ತೀಚಿನ ದಿನಗಳಲ್ಲಿ ಕೆಲಬಾರಿ ದಿನವೂ ಈ ಮೇಲ್ ಚೆಕ್ ಮಾಡಲು ಆಗುತ್ತಿಲ್ಲ. ಎಲ್ಲಾದರೂ ಎರಡು ದಿನ ಬಿಟ್ಟು ಇನ್ಬಾಕ್ಸು ನೋಡಿದರೆ ಅದು ಪಕ್ಕಾ ನಮ್ಮ ಊರಿನ ಮಣ್ಣಿನ ರಸ್ತೆ ಮಳೆ ಬಂದು ಹಾಳಾಗಿ ಕೊಚ್ಚೆಗುಂಡಿ ಆಗಿರುತ್ತದಲ್ಲ – ಹಾಗಿರುತ್ತದೆ. ಯಾಕಾದರೂ ಇಷ್ಟೊಂದು ಸೋಶಿಯಲ್ ನೆಟ್ವರ್ಕು ತಾಣಗಳಿವೆಯೇನೋ ಏನೋ. ಒಬ್ಬರಲ್ಲ ಒಬ್ಬರು – ಯಾರೀ, ಲಿಂಕ್ಡಿನ್ನು, ಕೋಲ್ಡ್ರಿಂಕು, ಮತ್ತಿನ್ನೇನೋ ಸುಡುಗಾಡು ತಾಣಗಳಿಂದ ರಿಕ್ವೆಸ್ಟುಗಳನ್ನ ಕಳುಹಿಸುತ್ತಲೇ ಇರುತ್ತಾರೆ. ಅವುಗಳನೆಲ್ಲ ಡಿಲೀಟು ಮಾಡಿ ಇನ್ ಬಾಕ್ಸು ಕ್ಲೀನು ಮಾಡುವ ಹೊತ್ತಿಗೆ ಸರಿಯಾಗಿ ಮತ್ತೆರಡು ಹಾಗಿನದೇ ಮೇಲ್ ಗಳು ಬಂದು, ನೀನೇನು ಮಾಡಿದರೂ ಅಷ್ಟೇ, ನಾವು ಸತ್ತು ಹುಟ್ಟೋ ರಕ್ತಬೀಜಾಸುರರು ಅಂತ ಗಹಗಹಿಸಿ ನಗುತ್ತವೆ.

ಬರೀ ರಿಕ್ವೆಸ್ಟ್ ಮೇಲ್ ಗಳು ಮಾತ್ರವಲ್ಲ, ನೀವು ಮತ್ತೆ ಮತ್ತೆ ಆ ಮೇಲ್ ಗಳನ್ನು ಕಡೆಗಣಿಸುತ್ತಲೇ ಇದ್ದರೂ, ನೋಡಿ ಸ್ವಾಮಿ ಶ್ರೀಯುತರು ಕಳುಹಿಸಿದ ಪತ್ರಕ್ಕೆ ನಿಮ್ಮ ಉತ್ತರ ತಲುಪಿಲ್ಲ, ನೀವು ಉತ್ತರಿಸದಿದ್ದರೆ ಅವರಿಗೆ ಬೇಜಾರಾಗುತ್ತದೆ, ದಯವಿಟ್ಟು ಉತ್ತರಿಸಿ ಎಂಬ ನೆನಪು ಮಾಡಿಕೊಡೋ ಅಂಚೆಗಳು ಬೇರೆ.

ಇವತ್ತು ಸ್ನೇಹಕೊಂಡಿ ಬೆಸವ ನೂರಾರು ತಾಣಗಳು ಅಂತರ್ಜಾಲ ಪ್ರಪಂಚದಲ್ಲಿವೆ ಮತ್ತು ನನಗೆ ಬರುವ ಮೈಲ್ಗಳಲ್ಲಿ ಹೆಚ್ಚಿನವು ಕೇವಲ ಅದದೇ ವ್ಯಕ್ತಿಗಳಿಂದಲೇ ಮತ್ತೆ ಮತ್ತೆ ಬರುತ್ತದೆ. ಅಲ್ಲಾ, ಅಷ್ಟೊಂದು ವೆಬ್ಸೈಟುಗಳಿಗೆಲ್ಲ ಮೆಂಬರುಗಳಾಗಿ ಜನ ಅದೇನು ಮಾಡುತ್ತಾರೋ ಭಗವಂತನೇ ಬಲ್ಲ. ಅವರಾದರೆ ಆಗಿಕೊಳ್ಳಲಿ, ನಮಗೇಕೆ ತೊಂದರೆ ಕೊಡುತ್ತಾರೆ ಅನ್ನುವುದು ಮತ್ತೂ ಸೋಜಿಗವೇ.

ಮೊದಲೆಲ್ಲ, ಹೆಚ್ಚಿನವರು ಹೊಸದಾಗಿ ಇಂಟರ್ನೆಟ್ ಬಳಸುವಾಗ ಈ ತೆರನಾದ ವೆಬ್ ತಾಣಗಳಿಗೆ ದಾಳಿ ಇಡುತ್ತಿದ್ದರು. ಯಾವುದೋ ಚಂದದ ಹುಡುಗಿಯ ಫೋಟೋ, ಅವಳದೇ ಎಂದು ನಂಬಿಸಲಾದ ಮೇಲ್ ಐಡಿ, ಇತ್ಯಾದಿಗಳನ್ನು ಕಂಡು ಪುಳಕಿತರಾಗಿ ಅಂತಹ ತಾಣಗಳ ಮೆಂಬರುಗಳಾಗುತ್ತಿದ್ದರು. ಇವತ್ತೋ, ಹೆಚ್ಚಿನವರಿಗೆ ಅವುಗಳ ಸತ್ಯಾಸತ್ಯತೆಯ ಅರಿವಾಗಿದೆ, ಬುದ್ದಿ ಬಂದಿದೆ ಎಂದುಕೊಂಡಿದ್ದರೆ, ಊಹೂಂ, ಹುಚ್ಚು ಹೆಚ್ಚಾಗಿದೆ!

ಒಂದೊಂದು ತಾಣಕ್ಕೂ ಒಂದೊಂದು ವಿಶೇಷತೆ. ವ್ಯವಹಾರಕ್ಕೊಂದಾದರೆ, ಸ್ನೇಹಕ್ಕೊಂದು- ಆಟಕ್ಕೊಂದು- ಪಾಠಕ್ಕೊಂದು, ಬೇಟಕ್ಕೊಂದು. ಹೀಗಾಗಿ ಕಂಡಕಂಡ ಸೈಟುಗಳಿಗೆಲ್ಲ ಮೆಂಬರುಗಳಾಗಿ, ಚೈನ್ ಸ್ಕೀಮಿನ ಏಜೆಂಟರಂತೆ ನೀವೂ ಸದಸ್ಯರಾಗಿ ದಮ್ಮಯ್ಯ ಅಂತ ಗೋಳು ಹೊಯ್ಕೊಳುತ್ತಾರೆ ಬೇರೆ. ಇವರಿಗೆಲ್ಲ ಗೊತ್ತಿಲ್ಲದ ಅಥವ ಗೊತ್ತಿದ್ದರೂ ಗಮನಹರಿಸದ ವಿಷ್ಯ ಒಂದಿದೆ. ಈ ತಾಣಗಳಿಗೆ ಅಗತ್ಯವಿರುವ ಮಾಹಿತಿ ತುಂಬುವ ಪೇಜುಗಳಲ್ಲಿ ಒಂದೆಡೆ, ನಿಮ್ಮ ಸಂಬಂಧಪಟ್ಟ ಇನ್ಬಾಕ್ಸಿಗೆ ಆ ತಾಣ ಅಕ್ಸೆಸ್ ಕೇಳುತ್ತದೆ, ಅದನ್ನ ಸುಮ್ಮನೆ ಕ್ಲಿಕ್ ಮಾಡಿ ಓಕೆ ಅಂದುಬಿಟ್ಟರೆ ನಿಮ್ಮ ಬಳಿ ಇರುವ ಎಲ್ಲರಿಗೂ, ಆ ತಾಣದ ಜಾಹೀರಾತು ನಿಮ್ಮ ಮೇಲ್ ಐಡಿಯಿಂದಲೇ ಹೋಗಿರುತ್ತದೆ. ಮತ್ತು ಅಷ್ಟು ಸಾಲದೇ, ತನಗೆ ಬೇಕಾದಾಗೆಲ್ಲ ರಿಮೈಂಡರು ಮೇಲ್ಗಳನ್ನು ಕಳುಹಿಸುತ್ತಲೇ ಇರುತ್ತದೆ.

ಸಿಕ್ಕಸಿಕ್ಕ ತಾಣಗಳಿಗೆಲ್ಲ ಸದಸ್ಯರಾಗುವವರು ಒಂದು ವಿಷಯ ನೆನಪಲ್ಲಿಟ್ಟುಕೊಳ್ಳಬೇಕು. ನಿಮ್ಮ ಮೇಲ್ ಐಡಿಗೆ ನುಗ್ಗಲು ಕೇಳುವ ಅನುಮತಿ ನಿರಾಕರಿಸಿ ಬಿಟ್ಟರೆ, ಅದೆಷ್ಟೋ ಜನಕ್ಕೆ ಆಗುವ ತೊಂದರೆ ತಪ್ಪುತ್ತದೆ. ಪದೇ ಪದೇ ನಿಮ್ಮನ್ನು ಬೈದುಕೊಳ್ಳುವುದು ಕೂಡ.

ಇನ್ನು ಮೇಲ್ಬಾಕ್ಸು ತುಂಬಿಕೊಳ್ಳುವ ಸ್ಪಾಮು, ಫೇಕ್ ಮೇಲುಗಳ ಬಗ್ಗೆ ಹೇಳಿ ಪ್ರಯೋಜ್ನವೇ ಇಲ್ಲದ ಹಾಗಾಗಿದೆ. ಜನ ಇವತ್ತಿಗೂ ಐವತ್ತು ಜನಕ್ಕೆ ಫಾರ್ವರ್ಡು ಮಾಡಿದರೆ ಕ್ಯಾನ್ಸರು ಪೇಶಂಟಿಗೆ 10 ಸೆಂಟು ಸಿಗುತ್ತದೆ ಅನ್ನುವ ತರಹದ ಈ-ಮೇಲ್ ಗಳನ್ನು ಕಳಿಸುತ್ತಲೇ ಇದ್ದಾರೆ. ನನ್ನ ಪರಿಚಿತರೊಬ್ಬರು ಹೇಳಿದ ಹಾಗೆ, ಸೀಮನ್ಸ್ನಲ್ಲಿ ಕೆಲಸ ಮಾಡುವ ಅದ್ಯಾವುದೋ ಹೆಂಗಸು- ಅವಳಿಗೇನೋ ರೋಗ ಇರುವ ಈ ಮೇಲ್, ಕಳೆದ ಆರು-ಏಳು ವರುಷಗಳಿಂದ ಬರುತ್ತಲೇ ಇದೆಯಂತೆ!

ಹೆಣ್ಣಿನಾಕಾರದ ಕಾಯಿ ಬಿಡುವ ಸುಡುಗಾಡು ಮರ! ಮನುಷ್ಯನ ದೇಹ- ಮೀನಿನ ತಲೆ, 18 ಆಡಿಯ ರಾಕ್ಷಸಾಕಾರದ ದೇಹ ಅಲ್ಲೆಲ್ಲೋ ಸಿಕ್ಕಿದೆ, ಇವುಗಳನೆಲ್ಲ ಯಾವುದೇ ಮುಲಾಜೂ ಇಲ್ಲದೆ ಕಳುಹಿಸುತ್ತಲೇ ಇರುತ್ತಾರೆ. ಇವುಗಳೆಲ್ಲ ಸತ್ಯವೇ, ಅಲ್ಲವೇ ಎಂಬ ಕಿಂಚಿತ್ ಯೋಚನೇ ಮಾಡೋ ಕ್ರಮವೂ ಇಲ್ಲ. ಬೇಕಾದರೆ ನೋಡುವವರು ತಲೆ ಕೆಡಿಸಿಕೊಳ್ಳಲಿ ಅನ್ನುವುದು ಇವರ ಅಂದಾಜಿರಬೇಕು. 1098 ನಂಬರಿಗೆ ಕಾಲ್ ಮಾಡಿದರೆ ಬಂದು ನಿಮ್ಮನೇಲಿ ಉಳಿದ ಆಹಾರ ತಗಂಡು ಹೋಗ್ತಾರೆ ಅನ್ನೋ ಮೇಲ್ ಕಾಲದಲ್ಲಿ ಪಾಪ, ಚೈಲ್ಡ್ ಲೈನ್ ಸಂಸ್ಥೆಯ ಪರಿಸ್ಥಿತಿ ಬ್ಯಾಡ. ಸಿಕ್ಕಸಿಕ್ಕವರೆಲ್ಲ ಫೋನಾಯಿಸಿ, ನಮ್ಮನೇಲಿ ಅನ್ನ ಇದೆ, ಇಡ್ಲಿ ಇದೆ ಅನ್ನುವವರೇ. ಅದೊಂದು ಮಕ್ಕಳ ರಕ್ಷಣೆಗಿರುವ ಸಂಸ್ಥೆ. ಬೇಕಷ್ಟು ಸಹಾಯಧನ ದೇಶವಿದೇಶಗಳಿಂದ ಬರುತ್ತದೆ ಅವರಿಗೆ!

ನಿಮಗೆ ಬಂದಿರುವ ಅದ್ಭುತ ಎನ್ನಿಸಿಕೊಳ್ಳುವ ಈ ಮೇಲ್, ಸತ್ಯವೇ ಅಲ್ಲವೇ ಎಂಬುದನ್ನು ತಿಳಿದುಕೊಳ್ಳಲು ಬೇಕಾದಷ್ಟು ತಾಣಗಳಿವೆ. ಫಾರ್ವರ್ಡು ಮಾಡುವ ಮುನ್ನ ಒಮ್ಮೆ, www.hoax-slayer.com, www.snopes.comಗಳಂತಹ ಅದೆಷ್ಟೋ ವೆಬ್ ಸೈಟುಗಳಲ್ಲಿ ಅವುಗಳ ಸತ್ಯಾಸತ್ಯತೆ ಪರೀಕ್ಷಿಸಿಕೊಳ್ಳಿ. ನೀವೂ ಸತ್ಯ ತಿಳಿದುಕೊಂಡಂತಾಗುತ್ತದೆ, ಮತ್ತು ಇತರರಿಗೂ ಕಿರಿಕಿಕಿ ತಪ್ಪಿಸಿದಂತಾಗುತ್ತದೆ!