Category Archives: ಕತೆ

ದೇಸಾಯಿಯ ಭಗವದ್ಗೀತೆ : ಜೋಗಿ ಸಣ್ಣ ಕಥೆ : Bhagavad Gita

ಸಮಕಾಲೀನ ಕನ್ನಡ ಸಾಹಿತ್ಯದ ವಿವಿಧ ಮಜಲುಗಳನ್ನು ಆಸಕ್ತಿಯಿಂದ ಗಮನಿಸುವವರಿಗೆ ಜೋಗಿ ಅಥವಾ ಗಿರೀಶ್ ರಾವ್ ಅವರನ್ನು ಮತ್ತೆ ಪರಿಚಯಿಸುವ ಅಗತ್ಯವಿಲ್ಲ. ಇತ್ತೀಚೆಗೆ ಅಮೆರಿಕಾದಲ್ಲಿ ಜರುಗಿದ ಅಕ್ಕ ಸಮ್ಮೇಳನದಿಂದ ಮರಳಿ ಬಂದ ನಂತರ ಜೋಗಿ ಅವರು ಬರೆದ ಸಣ್ಣ ಕಥೆ ‘ದೇಸಾಯಿಯ ಭಗವದ್ಗೀತೆ’ ಈಗ ನಿಮ್ಮ ಪಾಲು.

ದೇಶಭಕ್ತ ದೇಸಾಯಿ ಸಾವಿರದ ಎಂಟು ಬಾರಿ ಭಗವದ್ಗೀತೆಯ ಹದಿನೆಂಟೂ ಅಧ್ಯಾಯಗಳನ್ನೂ ಬರೆದ ಪುಸ್ತಕಗಳ ಕಟ್ಟನ್ನು ಹೊತ್ತುಕೊಂಡು ಮಠಕ್ಕೆ ಕಾಲಿಡುವ ಹೊತ್ತಿಗೆ ಸಂಜೆಯಾಗಿತ್ತು. ಗುರುಗಳು ವಿಶ್ರಾಂತಿ ಪಡೆಯುತ್ತಿದ್ದಾರೆ ಎಂದೂ ಮಾರನೆಯ ದಿನ ಬೆಳಗ್ಗೆ ಅವರನ್ನು ನೋಡಬಹುದೆಂದೂ ಮಠದ ಆಡಳಿತಾಧಿಕಾರಿ ಕೇಶವದಾಸರು ಅಸಹನೆಯ ಧ್ವನಿಯಲ್ಲಿ ಹೇಳಿ, ದೇಸಾಯಿಯನ್ನು ಜಗಲಿಯಲ್ಲಿ ಮಲಗುವುದಕ್ಕೆ ಸೂಚಿಸಿ ತಮ್ಮ ಪಾಡಿಗೆ ತಾವು ಎಲ್ಲಿಗೋ ಹೋಗಿಬಿಟ್ಟರು.

ದೇಸಾಯಿಗೆ ತುಂಬ ಬೇಸರವೇನೂ ಆಗಲಿಲ್ಲ. ಆದರೆ ತಾನು ಮೂರು ವರ್ಷ ಕಷ್ಟಪಟ್ಟು ಭಗವದ್ಗೀತೆಯನ್ನು ಸಾವಿರದ ಎಂಟು ಸಲ ಬರೆದಿದ್ದನ್ನು ಕೇಶವದಾಸರು ನಿಕೃಷ್ಟವಾಗಿ ಕಂಡರು ಎನ್ನುವ ದುಃಖ ಮಾತ್ರ ಅವನನ್ನು ಬಾಧಿಸುತ್ತಲೇ ಇತ್ತು. ಅವರಿಗೆ ಅದರ ಮಹತ್ವ ಎಲ್ಲಿಂದ ತಿಳೀಬೇಕು. ಅವರು ಆಡಳಿತಾಧಿಕಾರಿಗಳು. ದುಡ್ಡಿನ ಲೆಕ್ಕಾಚಾರ ನೋಡಿಕೊಳ್ಳುವವರು. ಗುರುಗಳಿಗೆ ತನ್ನ ಕಾರ್ಯ ಎಷ್ಟು ಅಗಾಧ ಎನ್ನುವುದು ಗೊತ್ತಾಗುತ್ತದೆ ಎಂದು ದೇಸಾಯಿ ಸಮಾಧಾನಪಟ್ಟುಕೊಂಡು ಮಠದ ಜಗಲಿಯಲ್ಲಿ ಬಿದ್ದುಕೊಂಡ.

ಮಧ್ಯಾಹ್ನದಿಂದ ದೇಸಾಯಿ ಏನೂ ತಿಂದಿರಲಿಲ್ಲ. ಮಠದಲ್ಲಿ ಪುಷ್ಕಳ ಭೋಜನದ ವ್ಯವಸ್ಥೆಯಿರುತ್ತದೆ ಎಂದು ದೇಸಾಯಿಗೆ ಯಾರೋ ಹೇಳಿದ್ದರು. ಮಠದ ಆವರಣದೊಳಗೆ ಕಾಲಿಟ್ಟು, ಭೋಜನಶಾಲೆ ಎಲ್ಲಿದೆ ವಿಚಾರಿಸುವ ಹೊತ್ತಿಗೇ, ಹುಳಿತೇಗಿನಿಂದ ಒದ್ದಾಡುತ್ತಿದ್ದ ಆಚಾರ್ಯರೊಬ್ಬರು ಈಗ ಭೋಜನಶಾಲೆಗೆ ಹೋಗಿ ಏನ್ಮಾಡ್ತೀರಿ, ನಿಮ್ಮ ಪಿಂಡ. ಏಕಾದಶಿ ಅಲ್ವೇ ಇವತ್ತು..’ ಎಂದು ಹಸಿವಿನಿಂದ ಕಂಗೆಟ್ಟ ದನಿಯಲ್ಲಿ ಹೇಳಿ ಹೊಟ್ಟೆ ನೇವರಿಸಿಕೊಂಡು ಮರೆಯಾಗಿದ್ದರು.

ನೀರಾದರೂ ಸಿಗಬಹುದೇನೋ ಎಂದು ದೇಸಾಯರು ಅತ್ತಿತ್ತು ನೋಡಿದರು. ಮಠದ ನಿರ್ಜನ ಜಗಲಿಯಲ್ಲಿ ಒಂದು ಹೂಜಿ ಕೂಡ ಕಾಣಿಸಲಿಲ್ಲ. ಆಗಲೇ ಕತ್ತಲು ದಟ್ಟವಾಗುತ್ತಿತ್ತು. ಬಾವಿಕಟ್ಟೆ ಎಲ್ಲಿದೆ ಎಂದು ಹುಡುಕಿಕೊಂಡು ಹೋಗುವ ಶಕ್ತಿಯೂ ತನ್ನಲ್ಲಿ ಉಳಿದಿಲ್ಲ ಎನ್ನಿಸಿ ದೇಸಾಯಿ ಮುದುಡಿ ಮಲಗಲು ಯತ್ನಿಸಿದರು. ಅವರು ಮಲಗಿದ ಜಾಗದಿಂದ ಹೊರಳಿ ನೋಡಿದರೆ ಮೂಲದೇವರ ಸನ್ನಿಧಿಯೂ, ಅದರ ಮುಂಚೆ ಹಚ್ಚಿಟ್ಟ ನಂದಾದೀಪವೂ ಕಾಣಿಸುತ್ತಿತ್ತು. ದೇವರು ಕೂಡ ಏಕಾದಶಿಯಾದ್ದರಿಂದ ಉಪವಾಸ ಬಿದ್ದಿರಬಹುದಾ ಎಂದುಕೊಂಡು ದೇಸಾಯಿಗೆ ನಗು ಬಂತು.

ಇದ್ದಕ್ಕಿದ್ದ ಹಾಗೆ ದೇಸಾಯಿಗೆ ತನ್ನ ಚೀಲದಲ್ಲಿರುವ ದ್ರಾಕ್ಷಿ ಗೋಡಂಬಿ ನೆನಪಾಯಿತು. ಕೃಷ್ಣಾಪುರದ ಜನ ದೇಸಾಯಿಗೆ ಸನ್ಮಾನ ಮಾಡಿ ಕಳುಹಿಸಿಕೊಟ್ಟಿದ್ದರು. ಗೀತಯಜ್ಞ ಪಾರಂಗತ ಎಂದು ಬಿರುದು ಕೊಟ್ಟಿದ್ದರು. ಕೃಷ್ಣಾಪುರಕ್ಕೆ ಗುರುಗಳು ಬಂದು ಗೀತಯಜ್ಞದಲ್ಲಿ ಎಲ್ಲರೂ ಪಾಲುಗೊಳ್ಳಬೇಕು ಎಂದು ಅಪ್ಪಣೆ ಕೊಡಿಸಿ ಮೂರು ವರ್ಷ ಕಳೆದಿದ್ದವು. ಉತ್ಸಾಹದಿಂದ ಭಗವದ್ಗೀತೆ ಬರೆಯಲು ಆರಂಭಿಸಿದ್ದ ಅನೇಕರು, ಅದನ್ನು ಅರ್ಧಕ್ಕೇ ಕೈಬಿಟ್ಟು ಸುಮ್ಮನಾಗಿದ್ದರು. ದೇಸಾಯಿ ಮಾತ್ರ ಪಟ್ಟುಬಿಡದೇ ಭಗವದ್ಗೀತೆ ಬರೆಯಲು ಆರಂಭಿಸಿ, ಮೂರು ವರ್ಷದಲ್ಲಿ ಸಾವಿರದ ಎಂಟು ಸಾರಿ ಭಗವದ್ಗೀತೆ ಬರೆದು ಮುಗಿಸಿದ್ದರು.

ಹಾಗಂತ ದೇಸಾಯರು ನಿರುದ್ಯೋಗಿ ಎಂದು ಭಾವಿಸಬಾರದು. ಅವರು ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಸಂಸ್ಕೃತ ಉಪಾಧ್ಯಾಯರಾಗಿ ಕೆಲಸ ಮಾಡುತ್ತಿದ್ದರು. ತಿಂಗಳಿಗೆ ನಾನ್ನೂರೈವತ್ತು ರುಪಾಯಿ ಸಂಬಳವನ್ನು ಕಾಲೇಜಿನ ಆಡಳಿತ ಮಂಡಳಿ ಕೊಡುತ್ತಿತ್ತು. ಸರ್ಕಾರದಿಂದ ನೇಮಕಗೊಂಡ ಮೇಷ್ಟ್ರುಗಳು ತಿಂಗಳಿಗೆ ಹತ್ತು ಹದಿನೈದು ಸಾವಿರ ಸಂಬಳ ಪಡೆಯುತ್ತಿದ್ದರೆ, ದೇಸಾಯಿ ಮುಂದೊಂದು ದಿನ ತನ್ನ ವೃತ್ತಿ ಖಾಯಂ ಆಗಬಹುದು ಎಂದು ನಂಬಿಕೊಂಡು ಸುಖವಾಗಿದ್ದರು. ಕೆಲಸ ಖಾಯಂ ಆದ ತಕ್ಷಣ ಅನಸೂಯಳಿಗೊಂದು ಒಂದೆಳೆ ಸರ ಮಾಡಿಸಬೇಕು, ಮಗಳಿಗೊಂದು ಬೆಂಡೋಲೆ ಕೊಡಿಸಬೇಕು ಮತ್ತು ಕೇವಲ ಮಳೆಗಾಲದಲ್ಲಿ ಮಾತ್ರ ಸೋರುತ್ತಿದ್ದ ಮನೆಗೆ ಹೆಂಚು ಹೊದಿಸಿ ರಿಪೇರಿ ಮಾಡಿಸಬೇಕು ಎಂಬ ಸಣ್ಣ ಆಸೆಯನ್ನಿಟ್ಟುಕೊಂಡು ದೇಸಾಯರು ವೃತ್ತಿಪಾಲನೆ ಮಾಡುತ್ತಾ ಬಂದಿದ್ದರು.

ಅವರು ಭಗವದ್ಗೀತೆಯ ಮೊರೆ ಹೊಕ್ಕಿದ್ದಕ್ಕೆ ಮತ್ತೊಂದು ಕಾರಣವೂ ಇತ್ತು. ಅವರಿಗೀಗ ಏಳರಾಟ ಶನಿ ನಡೆಯುತ್ತಿತ್ತು. ಆ ಅವಧಿಯಲ್ಲಿ ಇದ್ದಬದ್ಧ ಸಂಪತ್ತೆಲ್ಲ ಸೊರಗಿಹೋಗಿ, ಕಾಣದ ಕಷ್ಟಗಳು ಎದುರಾಗುತ್ತವೆ ಎಂದು ಅವರಿಗೆ ಹೊಟೆಲ್ ಪೂರ್ಣಿಮಾದ ನೂರಾ ಒಂದನೇ ರೂಮಿನಲ್ಲಿ ಶಾಶ್ವತವಾಗಿ ಬೀಡುಬಿಟ್ಟಿದ್ದ ಹಸ್ತಸಾಮುದ್ರಿಕಾ ತಜ್ಞ ಶಿವಶಂಕರ ಶಾಸ್ತ್ರಿ ಹೇಳಿಬಿಟ್ಟಿದ್ದ. ಅವನ ಮಾತನ್ನು ನಿಜಮಾಡುವಂತೆ, ಅನಸೂಯ ಬಚ್ಚಲುಮನೆಯಲ್ಲಿ ಕಾಲುಜಾರಿ ಬಿದ್ದು ಕಾಲು ಮುರಿದುಕೊಂಡಿದ್ದಳು. ಅವಳು ಹಾಸಿಗೆ ಹಿಡಿದ ಮೂರು ತಿಂಗಳ ಕಾಲ ದೇಸಾಯಿಯೇ ಅಡುಗೆ ಮಾಡಿ, ಮಗಳ ಬಟ್ಟೆ ಒಗೆದು ಅವಳನ್ನು ಶಾಲೆಗೆ ಕಳುಹಿಸಬೇಕಾಗಿತ್ತು. ಆಗಾಗ ಬ್ಯಾಂಡೇಜು ಬಿಚ್ಚಿಸುವುದಕ್ಕೆ ಮತ್ತು ಕಟ್ಟುವುದಕ್ಕೆ ಅನಸೂಯಾಳನ್ನು ಜಟಕಾದಲ್ಲಿ ಆಸ್ಪತ್ರೆಗೆ ಕರೆದೊಯ್ಯಬೇಕಾಗಿತ್ತು. ಈ ತಾಪತ್ರಯಗಳಿಂದ ಕಂಗಾಲಾಗಿದ್ದ ದೇಸಾಯಿ, ಇದಕ್ಕೆಲ್ಲ ಏಕೈಕ ಪರಿಹಾರ ಎಂಬಂತೆ ಗೀತಯಜ್ಞದಲ್ಲಿ ಮನಸ್ಸು ನೆಟ್ಟು, ಐಹಿಕದ ಸಂಕಷ್ಟಗಳನ್ನು ಮರೆಯುವುದಕ್ಕೊಂದು ದಾರಿ ಕಂಡುಕೊಂಡಿದ್ದ.

ಭಗವದ್ಗೀತೆಯನ್ನು ಬರೆಯುತ್ತಾ ಬರೆಯುತ್ತಾ ದೇಸಾಯಿಗೆ ಒಮ್ಮೊಮ್ಮೆ ಶ್ರೀಕೃಷ್ಣನೇ ತನ್ನ ಮುಂದೆ ನಿಂತು ತನಗೆ ಸಾಂತ್ವನ ಹೇಳುತ್ತಿದ್ದಾನೇನೋ ಅನ್ನಿಸುತ್ತಿತ್ತು. ಒಂದೊಂದು ಸಲ ಅರ್ಜುನ ಕೇಳಿದ ಒಂದೇ ಒಂದು ಪ್ರಶ್ನೆಗೆ ಎಷ್ಟೆಲ್ಲ ಮಾತಾಡಿಬಿಟ್ಟ ಕೃಷ್ಣರಾಯ. ಆ ಯುದ್ಧಭೂಮಿಯ ಮಧ್ಯೆ ನಿಂತು ಹದಿನೆಂಟು ಅಧ್ಯಾಯ ಹೇಳುವಷ್ಟು ಪುರುಸೊತ್ತಾದರೂ ಎಲ್ಲಿತ್ತು ಎಂದು ಅನುಮಾನವಾಗುತ್ತಿತ್ತು. ಸಂಜಯ ಅದನ್ನೆಲ್ಲ ಕುರುಡ ಧೃತರಾಷ್ಟ್ರನಿಗೆ ಹೇಳಿದ್ದಾದರೂ ಹೇಗೆ? ಅದನ್ನು ಕೇಳಿದ ನಂತರ ಧೃತರಾಷ್ಟ್ರ ಯಾಕೆ ಬದಲಾಗಲಿಲ್ಲ? ಶ್ರೀಕೃಷ್ಣನ ವಿಶ್ವರೂಪ ದರ್ಶನ ಅರ್ಜುನನಿಗೆ ಮಾತ್ರ ಕಂಡಿರಬೇಕಾದರೆ, ಅದನ್ನು ಸಂಜಯ ಹೇಗೆ ಧೃತರಾಷ್ಟ್ರನಿಗೆ ವರ್ಣಿಸಿದ ಎಂಬಿತ್ಯಾದಿ ಪ್ರಶ್ನೆಗಳು ಉದ್ಭವಾಗುತ್ತಿದ್ದವು. ದೇಸಾಯಿ ಅಂಥ ದ್ವಂದ್ವ ಕಾಡಿದಾಗಲೆಲ್ಲ ತನ್ನ ತಲೆಯನ್ನು ತಾನೇ ಮೊಟಕಿಗೊಂಡು ಅನನ್ಯ ಭಕ್ತಿಯಿಂದ ಯತ್ರ ಯೋಗೇಶ್ವರ ಕೃಷ್ಣೋ, ಯತ್ರ ಪಾರ್ಥೋ ಧನುರ್ಧರಃ …’ ಎಂದು ಬರೆಯುತ್ತಾ ತನ್ನ ಅನುಮಾನವನ್ನು ಮರೆಯಲು ಯತ್ನಿಸುತ್ತಿದ್ದ.

ನಡುರಾತ್ರಿ ದಾಟಿದಂತೆಲ್ಲ ದೇಸಾಯಿಯ ಹಸಿವು ಹೆಚ್ಚಾಗತೊಡಗಿತು. ಗೀತೆಯ ಮಾತುಗಳು ಮತ್ತೆ ಮತ್ತೆ ನೆನಪಿಗೆ ಬಂದವು. ಹಸಿದವನೂ ನಾನೇ, ತಿನ್ನುವವನೂ ನಾನೇ, ನೀನು ನೆಪ ಮಾತ್ರ ಎಂದು ಗೀತೆಯನ್ನು ತನ್ನ ಹಸಿವಿಗೆ ಹೊಂದಿಸಿಕೊಳ್ಳುತ್ತಾ ದೇಸಾಯಿ ಎದ್ದು ಕೂತ. ಹಸಿವೆ ಎಂಬುದು ಕೇವಲ ದೈಹಿಕ ಸ್ಥಿತಿ ಮಾತ್ರ. ಅದನ್ನು ಮಾನಸಿಕ ಸ್ಥೈರ್ಯದಿಂದ ಮೀರಬಹುದು ಎಂದು ಹೇಳಿಕೊಂಡು ಮನಸ್ಸಿಗೆ ಸಮಾಧಾನ ತಂದುಕೊಂಡ. ಎಲ್ಲರೂ ಮಲಗಿರುವ ಹೊತ್ತಿಗೆ, ಎದ್ದಿರುವವನು ಯೋಗಿ ಎಂಬ ಮತ್ತೊಂದು ಸಾಲು ಹೊಳೆದು ಮನಸ್ಸಿಗೆ ಖುಷಿಯಾಯಿತು. ಎಲ್ಲವನ್ನೂ ಕೃಷ್ಣಾರ್ಪಣವೆಂದು ದೇವರಿಗೇ ಒಪ್ಪಿಸಿ ಸುಮ್ಮಗಿರುವ ಏಕೋಭಾವ ತನಗೆ ಯಾಕೆ ಸಾಧ್ಯವಾಗಲಿಲ್ಲ ಎಂದು ದೇಸಾಯಿಗೆ ಆಶ್ಚರ್ಯವಾಯಿತು. ಗೀತೆಯ ಪ್ರತಿಯೊಂದು ಸಾಲೂ ತನಗೆ ಗೊತ್ತಿದೆ. ಕರ್ಮಯೋಗವೂ ಗೊತ್ತು, ಭಕ್ತಿಯೋಗವೂ ಗೊತ್ತು, ಜ್ಞಾನಯೋಗವೂ ಗೊತ್ತು. ಆದರೂ ಏನೋ ತಳಮಳ. ನಿಜವಾಗಿಯೂ ಭಗವದ್ಗೀತೆ ತನ್ನೊಳಗೆ ನೆಲೆಯಾಗಿದ್ದರೆ ಈ ತಳಮಳದಿಂದ ಮುಕ್ತಿ ಸಿಗಬೇಕಾಗಿತ್ತಲ್ಲ ಎಂದುಕೊಂಡ. ಕರ್ಮ ತೊಳೆದುಹೋಗದೇ ಇದರಿಂದ ಮುಕ್ತಿ ಸಾಧ್ಯವಿಲ್ಲವೇನೋ ಎನ್ನಿಸತೊಡಗಿತು, ಹಾಗಿದ್ದರೆ ಕರ್ಮದಿಂದ ಜೀವಿ ಮುಕ್ತನಾಗುವುದು ಹೇಗೆ? ಕರ್ಮೇಂದ್ರಿಯಾಣಿ ಸಂಯಮ್ಯ ಯ ಅಸ್ತೆ ಮನಸಾ ಸ್ಮರನ್. ಇಂದ್ರಿಯಾರ್ಥಾನ್ವಿಮೂಢಾತ್ಮಾ ಮಿಥ್ಯಾಸಾರ ಸ ಉಚ್ಯತೆ…

***

ಯಾರೋ ಗಲಾಟೆ ಮಾಡುತ್ತಿದ್ದರು. ದೇಸಾಯಿ ಕಣ್ಣುತೆರೆದರೆ ಜಗಲಿ ಗುಡಿಸುತ್ತಿದ್ದ ಮುದುಕನೊಬ್ಬ ದೇಸಾಯಿಯನ್ನು ಎಬ್ಬಿಸಲು ಹರಸಾಹಸ ಮಾಡುತ್ತಿದ್ದ. ತನಗೆ ಯಾವಾಗ ನಿದ್ದೆ ಬಂತು, ಯಾವಾಗ ಬೆಳಗಾಯಿತು ಅನ್ನುವುದು ತಿಳಿಯದೇ ಕಂಗಾಲಾಗಿ ದೇಸಾಯಿ ಎದ್ದು ಕೂತ. ಅಷ್ಟರಲ್ಲಾಗಲೇ ಮುದುಕ, ದೇಸಾಯಿಯ ಬಟ್ಟೆಗಂಟುಗಳನ್ನು ಎತ್ತಿ ಅತ್ತ ಎಸೆದುಬಿಟ್ಟಿದ್ದ. ದೇಸಾಯಿ ಅವನ ಮುಖವನ್ನೇ ನೋಡುತ್ತಾ ಸಿಟ್ಟಿನಿಂದ ಏನೋ ಹೇಳಬೇಕು ಅನ್ನುವಷ್ಟರಲ್ಲಿ ಆತ ದೇಸಾಯಿಯ ಕೈ ಹಿಡಿದು ಪಕ್ಕಕ್ಕೆ ಎಳೆದು, ಅವನು ಮಲಗಿದ್ದ ಜಾಗವನ್ನು ಗುಡಿಸುತ್ತಾ ಮುಂದೆ ಹೋದ. ದೇವಾನ್ ಭಾವಯತಾನೇನಾ ತೇ ದೇವಾ ಭಾವಯಂತು ವಃ .. ಪರಸ್ಪರಂ ಭಾವಯಂತಾ ಶ್ರೇಯಃ ಪರಮವಾಪ್ಯ್ಸಥ ಎಂಬ ಸಾಲುಗಳನ್ನು ನೆನಪಿಸಿಕೊಳ್ಳುತ್ತಾ ದೇಸಾಯಿ ಅಂಗಳದಲ್ಲಿ ಬಿದ್ದಿದ್ದ ಭಗವದ್ಗೀತೆಯ ಕಟ್ಟುಗಳನ್ನು ಎತ್ತಿಕೊಂಡು ಗುರುಗಳ ದರ್ಶನಕ್ಕೆಂದು ಹೊರಟ.

ಗುರುಗಳ ದರ್ಶನ ಸುಲಭದಲ್ಲೇನೂ ಆಗಲಿಲ್ಲ. ಇಬ್ಬರು ಶಿಷ್ಯಂದಿರು ದೇಸಾಯಿಯನ್ನು ದಾರಿಯಲ್ಲೇ ತಡೆದು ನಿಲ್ಲಿಸಿದರು. ದೇಸಾಯಿ ತನ್ನ ಗೀತಯಜ್ಞವನ್ನು ಸಾವಿರದ ಎಂಟು ಸಲ ಭಗವದ್ಗೀತೆ ಬರೆದುದನ್ನೂ ಹೆಮ್ಮೆಯಿಂದ ಹೇಳಿಕೊಂಡು ಗುರುಗಳಿಗೆ ಅದನ್ನು ಅರ್ಪಿಸಬೇಕು ಎಂದು ನಿವೇದಿಸಿಕೊಂಡ. ಶಿಷ್ಯರು ಅದರಿಂದೇನೂ ಪ್ರಭಾವಿತರಾದಂತೆ ಕಾಣಲಿಲ್ಲ. ಗುರುಗಳು ದ್ವಾದಶಿ ನೈವೇದ್ಯ ಸ್ವೀಕಾರ ಮಾಡಿದ ನಂತರವೇ ದರ್ಶನ ನೀಡುತ್ತಾರೆಂದು ಹೇಳಿ, ದೇಸಾಯಿಯನ್ನು ಅಲ್ಲೇ ಕಾಯುತ್ತಿರುವಂತೆ ಸೂಚಿಸಿದರು.

ದೇಸಾಯಿ ಮಧ್ಯಾಹ್ನದ ತನಕ ಕಾದರೂ ಗುರುಗಳ ದರ್ಶನಭಾಗ್ಯ ಸಿಗಲಿಲ್ಲ. ಶಿಷ್ಯಂದಿರು ಗಲಾಟೆ ಮಾಡಬಾರದು, ಕಾಯಬೇಕು, ಗುರುಗಳು ವಿಶ್ರಾಂತಿಯಲ್ಲಿದ್ದಾರೆ ಎಂದೆಲ್ಲ ಹೇಳಿ ಹೇಳಿ ಹೋಗುತ್ತಿದ್ದರು. ಹಾಗೇ ಕೂತು ಕೂತು ದೇಸಾಯಿಗೆ ಒಂಥರ ಮಂಪರು ಬಂದಂತಾಯಿತು. ಅಲ್ಲೇ ಸತ್ತು ಹೋಗುತ್ತೇನೇನೋ ಎಂದು ಭಯವಾಯಿತು. ಆದರೂ ಗುರುಗಳ ದರ್ಶನವಾಗದೇ ಹೊರಡುವುದಿಲ್ಲ ಎಂಬ ಹಠದಲ್ಲಿ ದೇಸಾಯಿ ಕಾಯುತ್ತ ಕೂತ. ತಲೆಯೊಳಗೆ ಕುರುಕ್ಷೇತ್ರ ನಡೆಯುತ್ತಿತ್ತು. ಎರಡೂ ಸೇನೆಗಳ ನಡುವೆ ಅರ್ಜುನನ ರಥವನ್ನು ಕೃಷ್ಣ ತಂದು ನಿಲ್ಲಿಸಿಕೊಂಡಿದ್ದ. ಅತ್ತ ಕಡೆ ಸಾಗರದಂತೆ ಹಬ್ಬಿದ ಸೈನ್ಯ, ಇತ್ತಕಡೆ ಸಾಗರದಂತೆ ಹಬ್ಬಿದ ಸೇನೆ. ರಥ, ಆನೆ, ಕುದುರೆ, ಕಾಲಾಳು, ಕಿರೀಟ, ಗಡ್ಡದ ಮುದುಕ ಭೀಷ್ಮ, ಯಾರೋ ಶಂಖ ಊದಿದರು. ಸೇನೆ ಇದ್ದಕ್ಕಿದ್ದಂತೆ ನುಗ್ಗಿತು. ಯಾರೋ ಮೂಕಂ ಕರೋತಿ ವಾಚಾಲಂ, ಪಂಗುಂ ಲಂಘಯತೇ ಗಿರೀ… ಎಂದು ಜೋರಾಗಿ ಅರಚಿಕೊಳ್ಳುತ್ತಿದ್ದರು.

***

ಸಂಜೆಯ ಹೊತ್ತಿಗೆ ಗುರುಗಳು ದೇಸಾಯಿಯನ್ನು ನೋಡಿದರು. ಸಾವಿರದ ಎಂಟು ಸಾರಿ ಭಗವದ್ಗೀತೆ ಬರೆದದ್ದನ್ನು ಕೊಂಡಾಡಿದರು. ದೇಸಾಯಿಯ ಹತ್ತಿರ ಅವೆಲ್ಲವನ್ನೂ ತೆಗೆದುಕೊಂಡು ಹೋಗಿ ನಮ್ಮ ಸಂಗ್ರಹದಲ್ಲಿಡಿ ಎಂದು ದೇಸಾಯಿಗೆ ಪ್ರಸಾದ ಕೊಟ್ಟರು. ಉತ್ತರೋತ್ತರ ಅಭಿವೃದ್ಧಿಯಾಗುತ್ತದೆ ಎಂದು ಹರಸಿದರು.

ದೇಸಾಯಿ ಕಷ್ಟಪಟ್ಟು ಆ ಪುಸ್ತಕಗಳ ಗಂಟನ್ನು ಹೊತ್ತುಕೊಂಡು, ಶಿಷ್ಯ ತೋರಿಸಿದ ಉಗ್ರಾಣದ ಕಡೆಗೆ ಹೆಜ್ಜೆಹಾಕಿದ. ಶಿಷ್ಯ ಮುಂದೆ ಮುಂದೆ ನಡೆದುಕೊಂಡು ಹೋಗಿ ಒಂದು ಉಗ್ರಾಣದಂತಿದ್ದ ಕೋಣೆಯ ಮುಂದೆ ನಿಂತು ಬೀಗ ಕೈ ಗೊಂಚಲು ತೆಗೆದ. ಅದರಲ್ಲಿದ್ದ ಬೀಗದ ಕೈಗಳನ್ನು ಒಂದೊಂದಾಗಿ ಹಾಕಿ ಹದಿನೆಂಟನೇ ಪ್ರಯತ್ನಕ್ಕೆ ಬೀಗ ತೆರೆದುಕೊಂಡಿತು. ‘ಅಲ್ಲಿ ಒಳಗಿಡಿ’ ಎಂದು ಶಿಷ್ಯೋತ್ತಮ ದೇಸಾಯಿಗೆ ಜಾಗ ತೋರಿಸಿದ.

ದೇಸಾಯಿ ಬಾಗಿಲ ಎದುರು ನಿಂತು ಒಳಗೆ ಕಣ್ಣುಹಾಯಿಸಿದರು. ಒಳಗೆ ದೇಸಾಯಿ ಹೆಗಲ ಮೇಲಿದ್ದಂಥ ಬಟ್ಟೆಯ ನೂರಾರು ಕಟ್ಟುಗಳು ಅಸ್ತವ್ಯಸ್ತ ಬಿದ್ದಿದ್ದವು. ಅವುಗಳ ಮೇಲೆ ಅಷ್ಟೆತ್ತರ ಧೂಳು ಅಂಟಿಕೊಂಡಿತ್ತು. ಒಳಗಿನಿಂದ ಕಮಟು ವಾಸನೆ ಮೂಗಿಗೆ ಬಡಿಯುತ್ತಿತ್ತು. ದೇಸಾಯಿ ಒಳಗೆ ಕಾಲಿಡುತ್ತಿದ್ದ ಹಾಗೆ, ಬಾಗಿಲಿಗೆ ಅಡ್ಡಡ್ಡ ಕಟ್ಟಿಕೊಂಡಿದ್ದ ಜೇಡರಬಲೆ, ದೇಸಾಯಿಯ ಮುಖಕ್ಕೂ ಕಣ್ಣಿಗೂ ಅಂಟಿಕೊಂಡಿತು. ಅದನ್ನು ಬಿಡಿಸಿಕೊಳ್ಳುವ ಯತ್ನದಲ್ಲಿ ದೇಸಾಯಿಯ ಹೆಗಲ ಮೇಲಿದ್ದ ಗಂಟು ನೆಲಕ್ಕೆ ಬಿತ್ತು.

ಶಿಷ್ಯ ಅಲ್ಲೇ ಇರ್ಲಿ ಬಿಡಿ, ಒಳಗೆ ಧೂಳಿದೆ, ಬನ್ನಿ ಬನ್ನಿ ಎಂದು ಅವಸರಿಸಿದ. ದೇಸಾಯಿಗೆ ಆ ಕೋಣೆ ಆ ಕ್ಷಣ ಕೊನೇ ದಿನದ ಕುರುಕ್ಷೇತ್ರದ ಹಾಗೆ ಕಂಡಿತು.

* ಜೋಗಿ, ಬೆಂಗಳೂರು

Advertisements

ದೀಪ ತೋರಿದೆಡೆಗೆ…

ಅಕ್ಕ ಸಮ್ಮೇಳನದ ಸಣ್ಣಕಥಾ ಸ್ಪರ್ಧೆಯಲ್ಲಿ ಮೊದಲ ಬಹುಮಾನ ಪಡೆದ ನವೀನ್ ಭಟ್ ರಚಿತ ಕಥೆ ‘ದೀಪ ತೋರಿದೆಡೆಗೆ’. ಯುವ ಬರಹಗಾರರನ್ನು ಪ್ರೋತ್ಸಾಹಿಸುವ ಉದ್ದೇಶದಿಂದ 6ನೇ ಅಕ್ಕ ವಿಶ್ವ ಕನ್ನಡ ಸಮ್ಮೇಳನದಲ್ಲಿ ಕಥಾಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ತೀರ್ಪುಗಾರರ ಮೆಚ್ಚುಗೆ ಗಳಿಸಿದ ಶೃಂಗೇರಿಯ ನವೀನ್ ಭಟ್ ಅವರ ನೀಳ್ಗಥೆ.

ಆರತಿ ತಟ್ಟೆಯಲ್ಲಿ ಗಡಿಬಿಡಿಯೇ ಇಲ್ಲದೆ ಉರಿಯುತ್ತಿರುವ ಕರ್ಪೂರದ ಜ್ವಾಲೆಯ ಮೇಲೆ ಆ ಅವನು ಭಕ್ತಿಯಿಂದ ಕೈ ತೋರಿಸುತ್ತಿರುವಾಗ, ಮಿನುಗುವ ಒಟ್ಟೂ ಆರು ಉಂಗುರಗಳು ಕೇದಾರನ ಬದುಕಿನ ಯಾವ ಮಹಾ ವಿಷಾದವನ್ನು ತಮ್ಮೊಳಗೆ ಬಿಂಬಿಸಿ ತೋರಿಸುತ್ತಿವೆಯೋ… ಅದು ಕೇದಾರನಿಗೊಬ್ಬನಿಗೇ ಗೊತ್ತು. ಆ ಅವನು ಆರತಿಗೆ ಅಂಗೈ ತೋರಿಸಿ ಬೆರಳುಗಳನ್ನು ಕಣ್ಣಿಗೊತ್ತಿಕೊಂಡ. ಅವನ ಬೆನ್ನಿಗಂಟಿಕೊಂಡಂತೆ ನಿಂತಿದ್ದ ಆ ಅವಳು ಕೂಡ ತನ್ನ ನೀಳ ಬೆರಳುಗಳನ್ನು ಕಣ್ಣಿಗೊತ್ತಿಕೊಂಡಳು. ಕುತ್ತಿಗೆಯನ್ನು ಕೊಂಚವೇ ಬಾಗಿಸಿ, ಗರ್ಭಗುಡಿಯಲ್ಲಿದ್ದ ದೇವರಿಗೆ ಆಕೆ ಕೈ ಮುಗಿದು, ಕಣ್ಮುಚ್ಚಿ ನಿಂತಾಗ, ನೆತ್ತಿಯಿಂದ ಕಿವಿಗಳ ಮೇಲೆ ನಿರಾಯಾಸ ಬಿದ್ದುಕೊಂಡ ರೇಷ್ಮೆ ಕೂದಲುಗಳ ಮಧ್ಯೆಯಿಂದ ಕಿವಿಗೆ ಧರಿಸಿದ್ದ ಚಿನ್ನದೋಲೆ ಮಿರುಗಿ ಕಿರುನಕ್ಕಂತೆ ಕಂಡಾಗ ಕೇದಾರನಲ್ಲಿ ಯಾಕೋ ಎಂದೂ ಇಲ್ಲದ ಮೃದಂಗನಾದ. ಇಲ್ಲ, ಬಹುಶಃ ಈ ಚಿನ್ನದೋಲೆಗಳಿಗಿಂತ ಅವರಿಬ್ಬರೂ ಒಟ್ಟೊಟ್ಟಿಗೆ ಕೂತು ಬಂದಿಳಿದ ಆ ಬಿಳಿಯ Swift ಕಾರು ಬೆಲೆ ಬಾಳಬಹುದು. ಆ ಕಾರಿನ ನುಣುಪು ಅಂಗಾಂಗಗಳು ತಮ್ಮಲ್ಲಿ ಈ ಹಳ್ಳಿಯ ಕಚ್ಚಾ ಚಿತ್ರಗಳು ಪ್ರತಿಬಿಂಬಿತವಾಗುವುದನ್ನೂ ಸಹಿಸುವುದಿಲ್ಲವೇನೋ ಎಂಬಷ್ಟು ಶುಭ್ರವಾಗಿತ್ತು ಅದು! ಊಹೂಂ, ಈ ಚಿನ್ನದೋಲೆಗಳಾಗಲೀ, ಉಂಗುರಗಳಾಗಲೀ ಬೆಳ್ಳಗೆ ನಿಂತ ಕಾರಾಗಲೀ, ಕೇದಾರನಿಗೊಂದು ವಿಷಯವೇ ಅಲ್ಲ. ಅಷ್ಟಕ್ಕೂ ಅವನ ದೇವಾಲಯದ ಅಂಗಳಕ್ಕೆ ತಿಂಗಳಿಗೆ ಎರಡು ಮೂರು ಬಾರಿಯಾದರೂ ಇಂಥ ಕಾರುಗಳು ಬಂದು ಹೋಗುತ್ತಿರುತ್ತವೆ. ತೀರ ಮುಂಚಿನ ದಿನಗಳಲ್ಲಿ ಅಂಥ ಕಾರುಗಳು ಬಂದು ಮರಳಿ ಹೋದಮೇಲೂ ಒಂದಷ್ಟು ಹೊತ್ತು ಉಳಿದಿರುತ್ತಿದ್ದ ಸುಟ್ಟ ಪೆಟ್ರೋಲಿನ ನವಿರುಘಮವನ್ನು ಆಸ್ವಾದಿಸಲಿಕ್ಕೆ ದೇವಾಲಯದ ಹೆಬ್ಬಾಗಿಲು ದಾಟಿ ಆತ ಹೊರಬರುವುದಿತ್ತು. ಆದರೆ, ಇತ್ತೀಚೆಗೆ… ಯಾಕೋ, ಈ LPG ಉಪಯೋಗಿಸಲು ಶುರುವಾದಾಗಿನಿಂದ ಪೆಟ್ರೋಲಿನ ಘಮ ಉಳಿದಿಲ್ಲ; ಅಥವಾ ಅಷ್ಟರಮಟ್ಟಿಗೆಕೇದಾರನೂ ಬೆಳೆದಿದ್ದಾನೆ ಎಂದರೆ ಸರಿಯಾದೀತು.

2
ಆ ಅವನು ಮತ್ತು ಕೇದಾರ ಇಬ್ಬರೂ ಬೆಳೆದಿದ್ದು ಒಟ್ಟಿಗೇನೇ. ಆದರೆ ಊರಿನ ಜನಗಳೆಲ್ಲ ಹೇಳುವುದು ಗಿರಿ ಹೇಗೆ ಬೆಳೆದ ನೋಡು! ಎಂದೇ ಹೊರತು, ಅವನಿಗಿಂತ ಎರಡು ವರ್ಷಕ್ಕೆ ಹಿರಿಯವನಾದ ಈ ಕೇದಾರ ಬೆಳೆದನೆಂದಲ್ಲ. ಯಾಕೆಂದರೆ ಕೇದಾರ ಎಸ್ಸೆಸ್ಸೆಲ್ಸಿಯ ನಂತರ ಗಿರಿಯಂತೆ ಪಟ್ಟಣದ ಹೈಬ್ರೀಡು ಗಾಳಿಯನ್ನು ಉಸಿರಾಡಲಿಲ್ಲ; ಮಾತ್ರವಲ್ಲ, ನಿಂಬೆಹಣ್ಣು ಕುಯ್ಯಬಹುದಾದಷ್ಟು ಹರಿತದ ಇಸ್ತ್ರಿಯಿರುವ ಬಟ್ಟೆ ಹಾಕಿಕೊಂಡು ಓಡಾಡುವುದು ಇಂದಿಗೂ ಅವನಿಗೆ ಗೊತ್ತಿಲ್ಲ. ಮನೆಯಿಂದ ದೇವಸ್ಥಾನಕ್ಕೆ ಹೋಗುವ ಹಾದಿಯ ಮಧ್ಯೆ ಅವನ ಎಣ್ಣೆಗಪ್ಪು ಮೈಯನ್ನೂ ಎದೆಯ ರೋಮಗಳನ್ನೂ ಅರ್ಧಂಬರ್ಧ ಮುಚ್ಚುತ್ತಿದ್ದುದು ಹಳೆಯದೊಂದು ಶಾಲು ಮಾತ್ರ. ಇವತ್ತಿಗಾದರೂ ಅಷ್ಟೆ, ಕೇದಾರ ತಾನು ಬೆಳೆದೆನೆಂದರೂ ಎಷ್ಟು ಬೆಳೆದ ಮಹಾ? ಗಿರಿ, ನೆರಿಗೆ ಮುರಿಯದ ಪ್ಯಾಂಟಿನೊಳಗೆ ತೂರಿಕೊಳ್ಳಲು ಕಲಿತಾಗ, ಇವ ತೊಡೆ ಕಾಣಿಸುವ ಪಂಚೆ ಉಡಲು ಕಲಿತಿದ್ದ, ಅಷ್ಟೆ. ಅಂಗಿಯ ಚುಂಗಿನಲ್ಲಿ ಮೂಗೊರಿಸಿಕೊಳ್ಳುತ್ತಿದ್ದ ಗಿರಿ ಕರ್ಚೀಫು ಬಳಸಲು ಶುರುಮಾಡಿದಾಗಿನ್ನೂ, ಕೇದಾರ ಎಡಗೈಯನ್ನು ಮೂಗಿನ ತುದಿಯುದ್ದಕ್ಕೂ ಎಳೆದು ಕೊಂಡು ಮೂಗು ಕೆಂಪಾಗಿಸಿಕೊಳ್ಳುತ್ತಿದ್ದ; ಅದಕ್ಕಿಂತ ಮುಂದೆ ಬೆಳೆಯುವದನ್ನು ಮರೆತ ಮರದಂತೆ ಉಳಿದುಬಿಟ್ಟ ಅವನು. ಅಥವಾ ಮುಜರಾಯಿ ಇಲಾಖೆಯ ದೇವಸ್ಥಾನದ ಪೂಜಾರಿ ಕೆಲಸವೇ ಅವನನ್ನು ಆ ಪರಿ ಮರಗಟ್ಟಿಸಿತು.

ಹಾಗೊಂದು ಇಪ್ಪತ್ತೆರಡು ವರ್ಷಗಳಾಗುವ ಹೊತ್ತಿಗೆ ಕೇದಾರನಲ್ಲಿ ಎದ್ದು ತೋರುತ್ತಿದ್ದ ಒಡ್ಡತನವನ್ನು ಕಂಡವರ್‍ಯಾರೋ; ದೇವಸ್ಥಾನದ ಮೆಟ್ಟಿಲಿಳಿದು ಹೋಗುವ ಹೊತ್ತಿಗೆ ಹೇಳಿ ಹೋಗಿದ್ದರು, ಕೇದಾರ, ನೀನಿನ್ನೂ ಬೆಳೆಯಬೇಕು. ಆಗೆಲ್ಲ ಅವನಿಗರ್ಥವಾದದ್ದು ಬೆಳೆಯುವುದೆಂದರೆ ತೊಲೆಯಂಥ ತೋಳುಗಳು ಮತ್ತು ಮರದ ದಿಮ್ಮಿಯಷ್ಟೇ ಬಲಿಷ್ಠ ತೊಡೆಗಳನ್ನು ಪಡೆಯುವುದು ಎಂದು. ಅಂದಿನಿಂದ ಕೇದಾರ ಚಪ್ಪಲಿ ಹಾಕುವುದು ಬಿಟ್ಟು ಬರಿಗಾಲಲ್ಲಿ ತಿರುಗಿದ. ಅಂಗಾಲು ಟಾರುರಸ್ತೆಯಷ್ಟು ಒರಟಾಯಿತು. ದೇವಸ್ಥಾನದಿಂದ ಮನೆಗೆ ಓಡಾಡುವ ಹಾದಿಯ ಮಧ್ಯೆ ಕೇದಾರ ನಡೆದರೆ ಚಿಕ್ಕಪುಟ್ಟ ಕಲ್ಲುಗಳೂ ನಲುಗುತ್ತಿದ್ದವು. ತಗ್ಗಿನ ಬಾವಿಯಿಂದ ನೀರು ಹೊರುವ ತಾಮ್ರದ ಕೊಡ ಕೂತು ಕೂತು, ಹೆಗಲು ಆಮೆಚಿಪ್ಪಿನಷ್ಟೇ ಒರಟಾಯ್ತು. ದೇವಸ್ಥಾನದ ನಂದಾದೀಪದ ಕುಡಿಯ ಕಪ್ಪು ತೆಗೆದು ತೆಗೆದು, ಕರ್ಪೂರದ ಉರಿ ತಾಗಿ ತಾಗಿ, ಕೈ ಬೆರಳುಗಳು ಹೆಗಡೇರ ಮನೆಯ ಗರಗಸ ಚೂಪುಗೊಳಿಸುವ ಅರದಷ್ಟೇ ಒರಟಾದವು. ಮೀಸೆ ಹಸಿರೊಡೆದು, ಕಪ್ಪಾಗಿ, ಅಷ್ಟಷ್ಟೇ ಬ್ಲೇಡು ಬಳಸಲು ಶುರು ಮಾಡಿದಾಗಂತೂ ಕೇದಾರ ಅಂದುಕೊಂಡೇ ಅಂದುಕೊಂಡ ತಾನು ಬೆಳೆದೆ ಎಂದು! ಅದಕ್ಕಿಂತ ಮುಂದೆ ಮತ್ತೆಂದೂ ಕೇದಾರ ಯಾವ ಬಗೆಯಲ್ಲೂ ಬೆಳೆಯಲು ಹೋಗಲಿಲ್ಲ. ಇದ್ದಲ್ಲೇ ಮಡುಗಟ್ಟಿದ; ಮರಗಟ್ಟಿದ. ಗುಡ್ಡದ ತುದಿಯ ದೇವಾಲಯದಿಂದ ದಿಗಂತದೆಡೆಗೆ ಚಾಚಿ ನಿಂತ ಹಸಿರು ಕಾಡನ್ನೂ, ಆ ಶೈಲಗಳನ್ನೂ ಒಮ್ಮೊಮ್ಮೆ ತಿಂಗಳ ಬೆಳಕಿನ ಇರುಳಲ್ಲಿ ಸುರಿದ ಮಂಜನ್ನೂ, ಅಬ್ಬರದ ಬಿಸಿಲನ್ನೂ, ಕವಿದು ಬೀಳೋ ಮಳೆಯನ್ನೂ ತನ್ಮಯತೆಯಿಂದ ದಿನಾ ನೋಡುವ ಇನ್ನೊಂದು ಜೀವ ಇಲ್ಲ, ಕೇದಾರನನ್ನು ಬಿಟ್ಟು. ಕೇದಾರನ ಪಾಲಿಗೆ ಆ ದೃಶ್ಯಗಳೆಂದರೆ ಎಸ್ಸೆಸ್ಸೆಲ್ಸಿಯವರೆಗೆ ಓದಿಕೊಂಡಿದ್ದ, ಅಷ್ಟಷ್ಟು ಕನ್ನಡ ಪದ್ಯಗಳನ್ನೂ, ಕವಿತೆಗಳನ್ನೂ ಮೈ ತುಂಬ ಸಾಕಾರವಾಗಿಸಿಕೊಂಡಿದ್ದ ದೃಶ್ಯಕಾವ್ಯಗಳು. ಒರಟೊರಟಿನ ಅವನ ಒಳಗುಗಳಲ್ಲಿ ಅತಿ ವಿರಳವಾಗಿ ಸೆಲೆಯೊಡೆಯುವ ಮೃದುತನದ ಪರಿಚಯವಿರುವ ಒಂದೇ ಒಂದು ಅಸ್ತಿತ್ವವೆಂದರೆ ಈ ದೇವಾಲಯವೆತ್ತರದ ದೃಶ್ಯವೈಭವ ಮಾತ್ರ. ಅದವನ ಖಾಸಗಿ ಕ್ಷಣದ ಜೀವಂತ ಒಡನಾಡಿ. ಕೇದಾರ ಇನ್ನೊಂಚೂರೇ ಚೂರು classic ಅನ್ನಿಸಿಕೊಂಡಿದ್ದರೂ ಸಾಕಿತ್ತು. ಮೃದುಮೃದುಲ ಕಾವ್ಯ ಅವನೊಂದಿಗಿರುತ್ತಿತ್ತು. ಆದರೆ, ಅವನ ಒರಟುತನಗಳು ಅವನ ಏಕಾಂತ ಕ್ಷಣಗಳಲ್ಲೂ ಬಿಡುವಂತಿರಲಿಲ್ಲ. ಹಾಗಾಗಿ ಹಸಿರು ವನರಾಶಿಯ ಚಿತ್ರದ ಜೀವಂತಿಕೆ. ಅವನ ಎದೆಯ ಕದ ತಟ್ಟಿದಾಗೆಲ್ಲ ತೆರೆದುಕೊಂಡಿದ್ದು ಕಾವ್ಯವಲ್ಲ; ಬದಲಿಗೆ ಒಂಟಿ ಬಂಗಲೆಯ ನಡುರಾತ್ರಿಯಲ್ಲಿ ಹಲ್ಲಿ ಲೊಚಗುಟ್ಟಿದಂಥ ಅಸ್ಪಷ್ಟ ಕನಲು.

* * *
ಕಾರ್ತೀಕದ ತುಳಸಿಹುಣ್ಣಿಮೆ ಮುಗಿಯುವುದಕ್ಕೇ ಕಾಯುತ್ತಿದ್ದರೇನೋ ಎಂಬಂತೆ, ಕಾರ್ತೀಕದ ಹಣತೆ ಆರಿದ ಬೆನ್ನಿಗೇ, ಲಗ್ನಪತ್ರಿಕೆ ಹಿಡಿದುಕೊಂಡು ಮಗನದ್ದೋ ಮಗಳದ್ದೋ ಮದುವೆ ಎಂದು ಕರೆಯಲು ಬರುವ ಜನಗಳ ಮುಖದಲ್ಲಿ ತನ್ನ ಕಣ್ಣಿಗೆ ಕಾಣುತ್ತಿದ್ದ ಕೊಂಚ ಕುಹಕವನ್ನು ಎಷ್ಟೇ ಕಷ್ಟಪಟ್ಟರೂ ಕಾಣದೇ ಇರಲೇ ಆಗುತ್ತಿರಲಿಲ್ಲ ಅವನಿಗೆ. ಜಾನಕಮ್ಮ ಸಂಜೆಯ ಹೊತ್ತಿನಲ್ಲಿ ಮನೆಯಂಗಳದ ಕಟ್ಟೆಬದಿಯ ಮಲ್ಲಿಗೆ ಮೊಗ್ಗು ಕೊಯ್ಯುತ್ತಾ, ಕಟ್ಟೆಯ ಆ ಕಡೆ ನಿಂತಿರುತ್ತಿದ್ದ ಪಕ್ಕದ ಮನೆಯ ವಸುಧಮ್ಮನ ಜೊತೆ ಹರಟುತ್ತಿದ್ದ ಬಹುಪಾಲು ಸುದ್ದಿಯೆಲ್ಲ ಕೇದಾರನ ವಯಸ್ಸು, ಮತ್ತು ಅವನಿಗೊಂದು ಮದುವೆ ಮಾಡಬೇಕೆಂದು ಬಹುಕಾಲದ ಬೇಗುದಿಯ ಸುತ್ತವೇ ಇರುತ್ತಿದ್ದವು. ಹಾಗೆ ಮಗನಿಗೊಂದು ಹೆಣ್ಣು ಸಿಕ್ಕು ಮದುವೆಯಾದರೆ, ಜಾನಕಮ್ಮನಿಗೆ ಬರೀ ಹಣತೆಗಳನ್ನು ಕೊಳ್ಳುವುದಕ್ಕೆ ಸಾವಿರ ರೂಪಾಯಿ ಬೇಕಾಗಬಹುದು ಆ ಪರಿಯ ಹರಕೆ ಹೊತಿದ್ದಾರೆ ಆಕೆ. ಕೇದಾರನ ಇಪ್ಪತ್ತಾರನೇ ವಯಸ್ಸಿನಿಂದ ಮದುವೆಯ ಪ್ರಯತ್ನಗಳು ಶುರುವಾಗಿದ್ದರೂ, ಇಪ್ಪತ್ತೆಂಟಕ್ಕಾದರೂ ಹೆಣ್ಣು ಸಿಗದೇ ಹೋದಾಳಾ ಎಂಬ ಉಡಾಫೆಭರಿತ ವಿಶ್ವಾಸದಲ್ಲಿಯೇ ನೆಮ್ಮದಿಯಾಗಿದ್ದರು ಜಾನಕಮ್ಮ. ಆದರೆ … ಮೂವತ್ತಕ್ಕೂ ಮದುವೆ ಕನಸಾಗಿಯೇ ಉಳಿದಾಗ ನಿಜಕ್ಕೂ ಭಯಪಟ್ಟರು. ನೆನಪಾದ ದೇವರುಗಳಿಗೆಲ್ಲ ಹರಕೆ ಹೊತ್ತರೂ ಈ ಮೂವತ್ತೆರಡನೆಯ ವಯಸ್ಸಿಗೂ ಮಗ ಕೇದಾರನಿಗೆ ಹೆಣ್ಣು ಸಿಗಲಿಲ್ಲ. ಖರೆ ಅಂದರೆ ಜಾನಕಮ್ಮ ಇಷ್ಟು ವಯಸ್ಸಾದವರಂತೆ ಕಾಣುತ್ತಿರುವುದೇ ಈ ನಾಲ್ಕು ವರ್ಷಗಳಿಂದೀಚೆಗೆ. ಹಾಗಾಗಿಯೇ ಯಾವುದರಲ್ಲಿಯೂ ಆಸಕ್ತಿ ಉಳಿದಿಲ್ಲ. ಮನೆಯಲ್ಲಿರುವುದು ಮೂವರೇ ಆದರೂ, ಅಡುಗೆ ಮಾಡಲೂ ಬೇಜಾರು. ಲಗ್ನಪತ್ರಿಕೆ ಹಿಡಕೊಂಡು ಮದುವೆಗೆ ಕರೆಯಲು ಬರುವವರ ಮೇಲೆ ತನಗೇ ಅರ್ಥವಾಗದಂಥ ಸಿಟ್ಟು. ಒಂದು ಕಾಲದಲ್ಲಿ ಆತಿಥ್ಯಕ್ಕೆ ಹೆಸರಾಗಿದ್ದ ಜಾನಕಮ್ಮ ಇವತ್ತು, ಮದುವೆಗೆ ಕರೆಯಲು ಬರುವ ಜನಗಳೆದುರಿಗೆ ಅರೆಮನಸಿ ನಿಂದಲೇ ಕಾಫಿಯನ್ನೋ, ಟೀಯನ್ನೋ ಕೊಡುವಾಗ ಅಯಾಚಿತವಾಗಿ ಲೋಟವನ್ನು ಕುಕ್ಕುತ್ತಾರೆ. ಕೆಲವೊಮ್ಮೆ ಲೋಟದೊಳಗಿನ ಬಿಸಿಯ ಚಹ ತುಳುಕಿ ಬೆರಳಿಗೆ ಬಿಸಿ ತಟ್ಟಿದಾಗಲೇ, ಇಟ್ಟಿದ್ದು ಕುಕ್ಕಿದಂತಾಯ್ತೆಂಬ ಎಚ್ಚರ, ತನ್ನೊಳಗಿನ ಅಸಹನೆ ಇಂಥಾದ್ದು … ಎಂಬ ವಿಷಾದ. ಹೊಸ ಸೀರೆ ಬೇಕೆಂದು ಪತಿಯೆದುರು ಬೇಡಿಕೆಯನ್ನೇ ಇಡದೆ ಎರಡು ವರ್ಷವಾಯಿತು. ಯಾಕೋ ಹೊಸತುಗಳು ಆಕರ್ಷಕವೆನಿಸುತ್ತಿಲ್ಲ.

ತೀರಾ ಹೋಗದೇ ಇರಲಾಗದಷ್ಟು ಹತ್ತಿರದ ಸಂಬಂಧಿಕರ ಮನೆಯ ಮಂಗಲಕಾರ್ಯಗಳಿಗೆ ಹೋದಾಗೆಲ್ಲ, ಅತ್ತಿಂದಿತ್ತ ಹಾಯುವ ಹದಿನೆಂಟರಿಂದಿಪ್ಪತ್ತೆರಡು ವಯಸ್ಸಿನ ತರುಣಿಯರ ಹೆಸರು, ಮನೆ, ಗೋತ್ರ ನಕ್ಷತ್ರಗಳನ್ನೆಲ್ಲ ಹೇಗೆಹೇಗೋ ಸಂಗ್ರಹಿಸುವುದು ಜಾನಕಮ್ಮನಿಗೆ ಅಭ್ಯಾಸವಾಗಿಹೋಗಿತ್ತು. ಊಟಕ್ಕೆ ಕುಳಿತಾಗ ಉಪ್ಪನ್ನೋ, ಉಪ್ಪಿನ ಕಾಯಿಯನ್ನೋ ಬಡಿಸಲು ಬಂದಿರುತ್ತಿದ್ದ ಆ ಹುಡುಗಿಯರಲ್ಲಿಯೇ ಖುದ್ದಾಗಿ ವಿಚಾರಿಸಿದ್ದು ಸಹ ನಡೆದಿತ್ತು. ಒಟ್ಟಾರೆ, ಮಗ ಕೇದಾರನಿಗೆ ಮದುವೆ ಮಾಡುವುದಕ್ಕೆ ಹೆಣ್ಣು ಸಿಗದ ದಾರಿದ್ರ್ಯಕ್ಕೆ ಎಲ್ಲಕ್ಕಿಂತ ಹೆಚ್ಚಾಗಿ ಜಾನಕಮ್ಮನ ಲವಲವಿಕೆಯನ್ನು ತಿಂದುಹಾಕುವ ತಾಕತ್ತಿತ್ತೆಂದು ಕಾಣುತ್ತದೆ. 45ಕ್ಕೆ ಮುಟ್ಟು ನಿಂತ ಬಳಿಕ ಅತ್ತ ಪೂರ್ತಿಯಾಗಿ ಹೆಂಗಸರ ಗುಂಪಿನೊಂದಿಗೆ ಬೆರೆತುಬಿಡುವುದೂ ಒಗ್ಗುತ್ತಿರಲಿಲ್ಲ. ಒಟ್ಟಾರೆಯಾಗಿ ಮಗನಿಗೊಬ್ಬಳು ಮಡದಿ ಬೇಕು, ತನ್ನ ಹೆಣ್ತನಕ್ಕೊಂದು ಹೆಣ್ಮನಸು ಬೇಕೆಂಬುದು ಜಾನಕಮ್ಮನ ಸರ್ವಪ್ರಥಮ ಇಚ್ಛೆಯಾಗಿಹೋಯ್ತು. ಮನೆಯೆದುರಿನ ಸಾಧಾರಣ ಮಣ್ಣುರಸ್ತೆಯಲ್ಲಿ ಸಂಜೆಯ ಹೊತ್ತಿಗೆ ದನಕರುಗಳು ಗುಂಪಾಗಿ ಹಾದುಹೋಗುವ ಕ್ಷಣಗಳಲ್ಲಿ, ಮನೆಯ ಜಗುಲಿಯ ಮೇಲೆ ತಲೆಗೂದಲು ಬಾಚಿಕೊಳ್ಳುತ್ತಿರುವಾಗ, ಬೆಳಿಗ್ಗೆಯ ಹೊತ್ತಿನ ದೋಸೆ ಮಾಡುವಾಗ ಕಾವಲಿಯ ಮೇಲೆ ದೋಸೆ ಬೇಯುವಷ್ಟು ಹೊತ್ತಿನಲ್ಲಿ, ಒಲೆ ಮುಂದೆ ಕುಳಿತಿರುವಾಗ, ಹಿತ್ತಲಿನ ಗಿಡಗಳಿಗೆ ನೀರೆತ್ತಿ ಹಾಕುವಾಗಿನ ವಿಚಾರಗಳಲ್ಲಿ ಅವರ ಕೋರಿಕೆಯೆಲ್ಲ ಒಂದೇ ಕೇದಾರನಿಗೆ ಮದುವೆ ಮಾಡಬೇಕು. ಅದಕ್ಕೆ ಹೆಣ್ಣು ಸಿಗಬೇಕು. ಹೆಣ್ಣು ಸಿಗುತ್ತಿಲ್ಲವೆಂಬ ಖೇದದ ಮಧ್ಯೆ ಯಾರ್‍ಯಾರಿಗೋ, ಎಂಥೆಂಥವರಿಗೋ ಹೆಣ್ಣು ಸಿಕ್ಕು, ಮದುವೆಯಾಗಿ, ಸುಖವಾಗಿದ್ದಾರೆ ಎನ್ನುವಲ್ಲಿ ಸಣ್ಣಗೆ ಹೊಟ್ಟೆಯುರಿಯೂ ಇದ್ದಿರಬಹುದು ಜಾನಕಮ್ಮನಿಗೆ.

ಎಲ್ಲಾ ಬಿಟ್ಟು ಆ ನರಪೇತಲ ಗಿರಿಗೆ, ಕೇದಾರನಿಗಿಂತ ಎರಡು ವರ್ಷಕ್ಕೆ ಸಣ್ಣವನಿಗೆ ಮೊನ್ನೆ ಮದುವೆಯಾಯ್ತಲ್ಲ … ಕೇದಾರನಲ್ಲಿ ಕಡಿಮೆಯಿರುವುದಾದರೂ ಏನು? ಇಂಥ ಪ್ರಶ್ನೆಯೆದ್ದಾಗೆಲ್ಲ ಕೇದಾರ ತನ್ನ ಮಗುವೆಂಬ ಮುದ್ದು, ಅವನೆಡೆಗಿನ ಕರುಣೆಯಾಗಿ ಬದಲಾಗಿ, ಗಿರಿಯ ವಿಷಯದಲ್ಲಿನ ಈರ್ಷ್ಯೆಯೇ ಅವರ ಕಂಗಳಲ್ಲಿ ಅವನನ್ನು ಸಲ್ಲದ ಅಪರಾಧಗೈದ ಅಪರಾಧಿಯ ಸ್ಥಾನದಲ್ಲಿ ನಿಲ್ಲಿಸಿಬಿಡುತ್ತಿರುವುದು ಅರಿವಿಗಿದ್ದೂ ಇಲ್ಲದಂಥ ಸಂಗತಿ. ಈ ತರ್ಕಕ್ಕೆ ತಳಬುಡವಿಲ್ಲ – ಖರೆ. ಆದರೆ ಮನಸೆಂಬುದು ತರ್ಕವನ್ನು ಕೇಳುವುದಿಲ್ಲವಲ್ಲ! ಇಂಥ ಕೆಲವು ಪಕ್ಕಾ ಖಾಸಗಿ ಸಂಗತಿಗಳನ್ನು ಮತ್ತೆಲ್ಲಿಯೂ ಹೇಳಲಾಗದೆ ಜಾನಕಮ್ಮ ಅನುಭವಿಸುವ ವಿಚಿತ್ರ ತಳಮಳಗಳು ಅವರಿಗೆ ಮಾತ್ರ ಗೊತ್ತು.

ಒಮ್ಮೊಮ್ಮೆಯಂತೂ, ತಾನೇ ಪ್ರಾಯದ ಹೆಣ್ಣಿನ ಸ್ಥಾನದಲ್ಲಿ ನಿಂತುಕೊಂಡು, ತಾನು ಮದುವೆಯಾಗುವುದಾದರೆ ಕೇದಾರನಂಥ ಒಬ್ಬ ಗಂಡಸನ್ನು ಮದುವೆಯಾಗಿರುತ್ತಿದ್ದೆನಾ ಇಲ್ಲವಾ ಎಂದೆಲ್ಲ ವಿಚಾರ ಮಾಡಿ, ಪ್ರಾಮಾಣಿಕ, ಅಪ್ರಾಮಾಣಿಕ ಅನಿಸಿಕೆಗಳನ್ನೆಲ್ಲ ಹಾದು ಬಂದು, ಮತ್ತೆ ಕೊನೆಯಲ್ಲಿ ತಾಯ ಸಹಜ ಮಮತೆಯಿಂದಲೋ ಎಂಬಂತೆ ಕೇದಾರನ ವಿಷಯದಲ್ಲಿ ಅಗಾಧ ಮೆಚ್ಚುಗೆಯೇ ಹಿರಿದಾಗಿ ನಿಲ್ಲುತ್ತಿತ್ತು. ಅಂತೂ, ಏನೆಲ್ಲ ಎಂತೆಲ್ಲ ಪರೀಕ್ಷೆಗೆ ಒಡ್ಡಿಕೊಂಡರೂ, ಹೆಣ್ಣುಗಳು ತನ್ನ ಮಗನನ್ನು ಒಪ್ಪದಿರುವ ಯಾವ ಕಾರಣವೂ ಸಿಗದೆ, ಜೊತೆಗೇ ಕೇದಾರನಿಗೆ ಮದುವೆಯಾಗದಿರುವ ವಾಸ್ತವವನ್ನು ಸುಳ್ಳೆನ್ನಲಾಗದೆ, ಜಾನಕಮ್ಮ ಪ್ರಪಂಚದ ಕಂಗಳಿಗೆ ತೋರಿಕೊಳ್ಳಬಾರದು ಎಂಬ ತಮ್ಮದೇ ಸಂಕಲ್ಪದ ಹಿಂದೆ ತಾವೇ ಅಡಗುತ್ತ ಕುಬ್ಜವಾಗುತ್ತಿದ್ದರು. ದಿನದ ಕೊನೆಯಲ್ಲಿ ಮಾತ್ರ, ಹೆಣ್ಣು ಮನಸ್ಸು ಹೇಗೋ, ಎಲ್ಲಿಂದಲೋ ಒಂದಿಷ್ಟು ನೆಮ್ಮದಿಯನ್ನು ತಾನಾಗಿ ಕಂಡುಕೊಳ್ಳುತ್ತಿದ್ದುದಕ್ಕೋ ಏನೋ, ಬದುಕು ಬದುಕಲಾಗದಷ್ಟು ಅಸಹನೀಯವೆನಿಸಲಿಲ್ಲ.

* * *
ಸದಾಶಿವರಾಯರು ತಮ್ಮ ಮದುವೆಯ ವಿಷಯದಲ್ಲಿಯೂ ಇಷ್ಟು ತಲೆ ಕಾಯಿಸಿಕೊಂಡಿರಲಿಲ್ಲ. ಬದುಕಿನಲ್ಲಿ ಅವರದ್ದು ಈವರೆಗೆ ದೊಡ್ಡ ಸಂಗತಿಗಳು ಎರಡು; ಒಂದನೆಯದು ಅವರ ಮದುವೆ ; ಎರಡನೆಯದು ಇದೀಗ ಎದುರಿಗೆ ಪ್ರಶ್ನೆಯಾಗಿ ನಿಂತ ಕೇದಾರನ ಮದುವೆ. ಅವರ ಬದುಕಿನ ಎಲ್ಲ ಸಂಗತಿಗಳ ಹಿಂದೆಯೂ ಅವರೇ ರಚಿಸಿಕೊಂಡ ರೋಚಕ ಕಥೆಗಳಿವೆ. ಮಧ್ಯಾಹ್ನದ ಊಟದ ಬಳಿಕ ಮನೆಯ ಜಗುಲಿಯಂಚಿನ ಪುಟ್ಟ ಮಂಚದ ಮೇಲೆ ಕಾಲು ಮೇಲೆ ಕಾಲು ಹಾಕಿ ಕುಳಿತು ಅಡಕತ್ತರಿಯಲ್ಲಿ ಅಡಕೆ ಕತ್ತರಿಸುವಾಗ, ಕುಳಿತಲ್ಲೇ ತಮ್ಮ ಬದುಕಿನ ಕಥೆಯನ್ನು ರೋಚಕವಾಗಿಸುವ ಬಗೆಯನ್ನೇ ಚಿಂತಿಸುವವರು ರಾಯರು. ಇತ್ತೀಚೆಗೆ ಆ ಎಲ್ಲಾ ಪುರಾಣಗಳ ಕೊನೆಗೆ ಹೊಸ ಭರತವಾಕ್ಯ ಸೇರಿಕೊಂಡಿದೆ : ನಾನಿಷ್ಟೆಲ್ಲ ಮಾಡಿದ್ದು ಯಾರಿಗಾಗಿ? ಮಗನಿಗಾಗಿ ಮತ್ತು ನಾಳೆ ಬರೋ ಸೊಸೆಗಾಗಿ … ರಾಯರ ಈ ಪುರಾಣಕಥೆಗಳನ್ನು ಹೊಸದಾಗಿ ಕೇಳಿಸಿಕೊಳ್ಳುವವರಿಗೆ ಅವರೊಬ್ಬ ಮಹಾನುಭವಿಯಂತೆ ತೋರುತ್ತದೇನೋ; ಆದರೆ ಈ ಊರಿನ ಎಲ್ಲರಿಗೂ ಗೊತ್ತಿದೆ, ಆ ಕಥೆಗಳು ಕೇವಲ ತಾಂಬೂಲ ಮೆಲ್ಲುವಾಗಿನ ಖಾಲಿ ಮನಸಿನ ಉತ್ಪನ್ನಗಳೆಂದು. ರಾಯರ ಇತ್ತೀಚಿನ ಬಹು ಪ್ರಚಾರದ ವಸ್ತುವೆಂದರೆ ಹೊಸದಾಗಿ ತಾವು ಕಟ್ಟಿಸಿರುವ ಮನೆ. ಇಟ್ಟಿಗೆ ಗೋಡೆಗಳ ಜಿಂಕ್‌ಶೀಟಿನ ಮನೆ ಅದು; ಸ್ವಂತದ ಮನೆಯೆಂಬುದಿದ್ದರೆ ಕೇದಾರನಿಗೆ ಹೆಣ್ಣು ಸಿಗದೆ ಎಲ್ಲಿ ಹೋದಾಳು ಎಂಬ ವಿವರಣೆ ಅದಕ್ಕೆ. ಗೊತ್ತಿಲ್ಲ, ಲೆಕ್ಕ ಇಟ್ಟವರ್‍ಯಾರು ! ಕೇದಾರನಿಗೆ ಬಂದಿದ್ದ ಜಾತಕಗಳನ್ನೆಲ್ಲ ಪಂಚಾಂಗದ ಕೋಷ್ಟಕಗಳ ಮಧ್ಯೆ ಇಟ್ಟು, ಜಾಲಾಡಿ, ಒಂದೂ ಸರಿಹೋಗದೆನಿಸಿ ನಿರಾಕರಿಸಿದ್ದೆಷ್ಟೋ!

ಎಲ್ಲಾ ಸರಿಹೋಯ್ತೆಂದು ಹೆಣ್ಣು ನೋಡುವ ತವಕದಲ್ಲಿ ಅತಿ ಮಾತಿನಿಂದಾಗಿ ವ್ಯವಹಾರ ಮುರಿದಿದ್ದೂ ಇದೆ. ಹೆಣ್ಣುಮಗುವೊಂದರ ತಂದೆಯಾಗದ ಹೊರತು ಹಲವಷ್ಟು ಸೂಕ್ಷ್ಮಗಳನ್ನು ಮನುಷ್ಯ ಕಲಿಯೋದಿಲ್ಲ ಎಂಬ ಮಾತು ರಾಯರ ಮಟ್ಟಿಗಂತೂ ಸತ್ಯ. ಕೇದಾರ ಆ ಪರಿ ಒಡ್ಡೊಡ್ಡಾಗಿ ಬೆಳೆಯುವುದಕ್ಕೆ ಮನೆಯಲ್ಲಿ ಅಕ್ಕತಂಗಿಯರೆಂಬ ಹೆಣ್ಣು ಜೀವಗಳು ಇಲ್ಲದಿದ್ದುದೂ ಕಾರಣವಿದ್ದೀತು. ರಾಯರ ಅಸೂಕ್ಷ್ಮತೆಯನ್ನೆಲ್ಲ ಪಡಿಯಚ್ಚಾಗಿ ಉಳಿಸಿಕೊಂಡು ಅವ ಹುಟ್ಟಿದ್ದ. ಮನೆ ನಡೆಸಿದ್ದೇನಿದ್ದರೂ ಜಾನಕಮ್ಮ. ರಾಯರದು ಅಂದಿನಿಂದ ಇಂದಿನವರೆಗೂ ಇದೇ ಕಂತೆಪುರಾಣಗಳ ಹಳೆ ಅಕ್ಕಿ ಮೂಟೆ, ಮಗನಿಗಿನ್ನೂ ಮದುವೆಯಾಗಿಲ್ಲವೆಂಬ ಚಿಂತೆಯ ಬಿಸಿ, ಇಷ್ಟಾದರೂ ಅವರನ್ನು ತಟ್ಟಿದ್ದೇ ದೊಡ್ಡದು. ಆದರೂ ಒಮ್ಮೊಮ್ಮೆ ತಮಗಷ್ಟೇ ಕೇಳುವಂತೆ ಸಮಾಧಾನ ಹೇಳಿಕೊಳ್ಳುತ್ತಿದ್ದರು, ಈ ಕಾಲದಲ್ಲಿ, ಮನೆಯಲ್ಲೇ ಇರುವ ಬ್ರಾಹ್ಮಣ ಹುಡುಗರಿಗೆ ಹೆಣ್ಣು ಸಿಗೋದಿಲ್ಲ ಎಂದು. ತೀರ ಎರಡು-ಮೂರು ತಿಂಗಳ ಈಚೆಗಿನ ಮಾತು ಹೇಳುವುದಾದರೆ ಕೇದಾರನಿಗೆಂದೂ ಮದುವೆಯೇ ಆಗುವುದಿಲ್ಲ ಎಂಬ ನಿರ್ಧಾರಕ್ಕೆ ಬಂದವರಂತೆ ಪದೇಪದೇ ರಾಯರು ಈ ಮಾತನ್ನು ಹೇಳಿಕೊಳ್ಳುತ್ತಿದ್ದರು.

ಕಳೆದ ಮೂರು ವರ್ಷಗಳಿಂದ ಅಪ್ಪ, ಮಗ, ತಾಯಿ ಮನೆಯಲ್ಲಿ ಒಟ್ಟಾಗಿರುತ್ತಿದ್ದುದೇ ರಾತ್ರಿಯೂಟದ ಸಂದರ್ಭದಲ್ಲಿ ಮಾತ್ರ. ಸೌಟಿನಿಂದ ಅಡುಗೆ ಬಡಿಸುವಾಗ ಪಾತ್ರೆ ತಗುಲಿ ಆಗುತ್ತಿದ್ದ ಶಬ್ದ ಬಿಟ್ಟರೆ ಉಳಿದಂತೆ ಊಟವೂ ಮೌನ; ನಿಶ್ಶಬ್ದ. ಎಷ್ಟೋ ಸಲ ಸುಮ್ಮನೇ ಹುಸಿ ಕೆಮ್ಮು. ಕೆಮ್ಮಿ ಜಾನಕಮ್ಮ ಮೌನವೊಡೆಯುವ ವ್ಯರ್ಥಪ್ರಯತ್ನ ಮಾಡುತ್ತಿದ್ದರು. ಆದರೆ ಮೌನದ ಪರದೆ ಅಷ್ಟೇನೂ ತೆಳುವಾದ್ದಾಗಿರಲಿಲ್ಲ. ಮೊದಲೆಲ್ಲ ಅಡುಗೆಯನ್ನು ಆಡಿಕೊಳ್ಳಲೆಂದಾದರೂ, ಅತಿ ಖಾರದ ಸಾರಿನ ಉರಿಯ ತಡೆಯದೆ ಸಿಟ್ಟಿನಿಂದಾದರೂ ರಾಯರು ಹೆಂಡತಿಯನ್ನು ಲಕ್ಷಿಸುವುದಿತ್ತು. ಆದರೆ ಇವತ್ತಿಗೆ ಅದೂ ಉಳಿದಿಲ್ಲ. ಪ್ರತಿದಿನ ಬಡಿಸುವಾಗಲೂ ಜಾನಕಮ್ಮ ಅಂದುಕೊಳ್ಳುತ್ತಾರೆ, ಇಂದಾದರೂ ರಾಯರಿಗೆ ಸಿಟ್ಟು ಬರಲಿ, ಆ ಕಾರಣದಿಂದಾದರೂ ಎರಡು ಮಾತಾಡಲಿ ಎಂದು. ಆದರೆ, ಊಹೂಂ, ಅದೆಂದಿಗೂ ಸಂಭವಿಸಲಿಲ್ಲ. ಮಗರಾಯನದು ಎಂದಿಗಿದ್ದರೂ ಗುಮ್ಮಕ್ಕಿ ಊಟವೇ ತಮ್ಮೊಳಗೇ ತಾವು ಕುಸಿದು ಕುಳಿತಿದ್ದಾರೆ ಜಾನಕಮ್ಮ. ದೂರದ ಬೆಂಗಳೂರಿನಲ್ಲಿ ನೌಕರಿ ಹಿಡಿದಿರುವ ಗಿರೀಶ ಹದಿನೈದೇ ದಿನದ ಹಿಂದೆ ಊರಿಗೆ ಬಂದಿದ್ದು, ಬಂದು ದಣಿವಾರಿಸಿಕೊಳ್ಳುವಷ್ಟರಲ್ಲೇ ಬಂಗಾರದಂಥ ಹುಡುಗಿಯೊಟ್ಟಿಗೆ ಮದುವೆಯಾದದ್ದು, ಇಂದೋ ನಾಳೆಯೋ ಬೆಂಗಳೂರಿಗೆ ಮರಳಿ ಹೊರಟು ನಿಂತಿದ್ದು … ಇದ್ಯಾವುದೂ ಜಾನಕಮ್ಮನಿಗೆ ತಿಳಿಯದ ವಿಷಯವೇನಲ್ಲ. ಕೇದಾರನ ಒಟ್ಟೊಟ್ಟಿಗೇ ಬೆಳೆದ ಗಿರಿಯ ವಿಷಯದಲ್ಲಿ ಮೊನ್ನೆಮೊನ್ನೆಯವರೆಗೂ ಇದ್ದುದು ಪುತ್ರವಾತ್ಸಲ್ಯವೇ. ಈಗಷ್ಟೇ – ಹದಿನೈದು ದಿನದಿಂದೀಚೆ ಮಾತ್ರ – ಭಾವಗಳ ಬಣ್ಣವೇ ಬದಲಾಗಿಹೋಗಿದೆ.

ಆ ಪೆದ್ದು ಮುಂಡೇದಕ್ಕೆ ಮದ್ವೆಯಾಗತ್ತೆ, ನನ್ ಮಗಂಗೆ ಮದ್ವೆ ಹೆಣ್ಣೂಂತ ಇಟ್ಟಿಲ್ವಾ ದೇವ್ರೆ ? – ಎಷ್ಟನೆಯ ಸಲವೋ ತಮ್ಮಲ್ಲೇ ಗೊಣಗಿಕೊಂಡದ್ದು ಇದು. ಯಾಕೋ ಗಿರಿಯ ವಿಚಾರದಲ್ಲಿ ರಾಯರದು ಎದೆ ತುಂಬ ಅಭಿಮಾನ; ಊರಿಗೆ ಬಂದಾಗೆಲ್ಲ ಇವರ ಮನೆಗೂ ಬಂದು ಬಾಯ್ತುಂಬ ನಮಸ್ಕಾರ ರಾಯಪ್ಪಣ್ಣ ಅನ್ನುತ್ತಿದ್ದುದಕ್ಕೋ, ಅಥವಾ ಸೆಂಟು ಆರದಿರುವ ಅವನ ನಿಲುವಿಗೋ ಅಥವಾ ಇನ್ನೇನಕ್ಕೋ ಗೊತ್ತಿಲ್ಲ. ಸುಬ್ಬುವಿನ ಮದುವೆ ಸುದ್ದಿ ಕೇಳಿದಾಗಲಿಂದ ರಾಯರ ಮುಖದಲ್ಲಿ ಎಂಥದೋ ಕಳೆ! ಹಾಗಂತ ಹೇಳಿಕೊಳ್ಳಲಾಗದ ತಮ್ಮದೇ ಮನಸಿನ ಬೇಲಿಗಳು. ರಾಯರು ಖುಷಿಖುಷಿಯಾದದ್ದು. ಜಾನಕಮ್ಮನಿಗೂ ಗೊತ್ತು. ಕೇದಾರನಿಗೆ ಮಾತ್ರ , ಅಪ್ಪನ ಈ ಕುಣಿತಗಳು ಮೈ ಉರಿಯನ್ನು ಹೆಚ್ಚಿಸಿದ್ದವು. ಋಣಾನುಬಂಧರೂಪೇಣ… ಎಂದು ರಾಯರು ವೇದಾಂತ ನುಡಿದಾಗಲಂತೂ ಪೂರ್ತಿ ಉರಿದುಹೋಗಿದ್ದ ಕೇದಾರ. ಒಟ್ಟಿನಲ್ಲಿ ಮದುವೆ ಮುಗಿದಾಗ ರಾಯರಲ್ಲಿದ್ದ ನಿರಾಳತೆ, ಒಳಮನೆಯ ಅಂತರಂಗದ ಪ್ರಶ್ನೆಯಾಗಿ ಉಳಿದುಹೋಗಿತ್ತು.

* * *
ಗಿರಿಯ ಜೊತೆ ಕೇದಾರನಿಗೆಂದೂ ವೈರ ಇರಲಿಲ್ಲ. ಹಾಗಂತ ಆ ಹಳೆಯ ಬಾಲ್ಯದ ದಿನಗಳಲ್ಲಿ ಸಮಾ ಜಗಳವಾದ ದಿನಗಳು ಇಲ್ಲವೆಂದೇನಲ್ಲ. ಆದರೆ ಮರುದಿನ ಬೆಳಿಗ್ಗೆ ಇಂಗ್ಲೀಷು ಟೀಚರಿಗೆ ಒಪ್ಪಿಸಬೇಕಿರುತ್ತಿದ್ದ ಹೋಂವರ್ಕ್ ಮಾಡಿಕೊಳ್ಳಲು ಕೇದಾರನಿಗೆ ಗಿರಿಯನ್ನು ಬಿಟ್ಟರೆ ಅನ್ಯ ಗತಿ ಇದ್ದಿರಲಿಲ್ಲ. ಬೆಳಗಿಂದ ಮಧ್ಯಾಹ್ನದವರೆಗೆ ಜಗಳವಾಡಿ, ಒಟ್ಟಿಗೇ ಕೂರುತ್ತಿದ್ದ ಶಾಲೆಯ ಬೆಂಚಿನಲ್ಲಿ ಪರಸ್ಪರರ ಜಾಗದ ಅತಿಕ್ರಮಣದ ಆರೋಪಗಳು ಮೊಳಗಿ, ಕೊನೆಯಲ್ಲಿ ಕಂಪಾಸ್ ಮೊನೆಯಿಂದ ಬೆಂಚಿನ ಮೇಲೆ ಗಡಿರೇಖೆ ಬರೆದುಕೊಂಡು… ಓಹ್, ಎಷ್ಟೆಲ್ಲ ರಂಪವಾಗುತ್ತಿದ್ದವಲ್ಲ! ಅಷ್ಟೇ ಹೊತ್ತಿನ ವೈರಗಳು ಅವೆಲ್ಲ. ಆಮೇಲೆ ಮತ್ತೆ ಸಂಜೆಯ ಹೊತ್ತಿಗೆ ಮನೆಗೆ ನಡಕೊಂಡು ಮರಳುವಾಗ ಹಾದಿಬದಿಯ ಬೆಟ್ಟದ ನೆಲ್ಲಿಕಾಯಿ ಮರ ಹತ್ತುವುದಕ್ಕೆ ಗಿರೀಶನಿಗೂ ಕೇದಾರನೇ ಬೇಕಿತ್ತು. ಮರ ಹತ್ತುವುದರಲ್ಲಿ ಕೇದಾರ ಆ ವಯಸ್ಸಿಗೇ ಆ ಪರಿಯ ಪರಿಣತಿ ಇಟ್ಟುಕೊಂಡವ. ಬೇಸಿಗೆಯ ದಿನಗಳಲ್ಲಿ ಮನೆಯ ಜನಗಳ ಕಣ್ಣು ತಪ್ಪಿಸಿ ನದಿಯಲ್ಲಿ ಈಜಲು ಹೋಗುವುದಕ್ಕೆ, ಮನೆಯಂಗಳದಲ್ಲಿ ಒಣಹಾಕಿದ್ದ ಹಲಸಿನಕಾಯಿ ಹಪ್ಪಳವನ್ನೋ, ಹುಣಸೆಹಣ್ಣನ್ನೋ ತಿನ್ನುವುದಕ್ಕೆ ಇಬ್ಬರಿಗೆ ಇಬ್ಬರೂ ಬೇಕಾಗಿದ್ದ ದಿನಗಳು ಅವು. ಗದ್ದೆಯಲ್ಲಿ ಮೇಯುತ್ತಿದ್ದ ಎಮ್ಮೆಯ ಬಾಲಕ್ಕೆ ಪಟಾಕಿ ಅಂಟಿಸಿ, ಬೆಂಕಿಯಿಟ್ಟ ರಭಸಕ್ಕೆ ಎಮ್ಮೆ ಕಂಗಾಲುಬಿದ್ದು, ಹೆಗಡೇರ ಮನೆಯ ಬಾಳೆತೋಟಕ್ಕೆ ನುಗ್ಗಿ ಅವಾಂತರ ಎಬ್ಬಿಸಿತ್ತು. ಆಗ ಸಣ್ಣಪ್ಪ ಹೆಗಡೇರ ಹತ್ರ ಹಿಗ್ಗಾಮುಗ್ಗಾ ಬೈಸಿಕೊಳ್ಳುವಾಗ ಇಬ್ಬರೂ ಇದ್ದರು. ಇನ್ನೊಂದಿನ ನಡುರಸ್ತೆಯಲ್ಲಿ ಬಿದ್ದಿದ್ದ ಆಕಳ ಸಗಣಿಯ ಮಧ್ಯೆ ಪಟಾಕಿ ಇಟ್ಟು ಸಿಡಿಸಿದ ರಭಸಕ್ಕೆ, ಸಗಣಿಯೆಲ್ಲಾ ಅಕ್ಕಪಕ್ಕಕ್ಕೆ ಸಿಡಿದು, ಹಾದು ಹೊರಟಿದ್ದ ಅಂಗನವಾಡಿ ಶಿಕ್ಷಕಿ ಶಾಂತಾಬಾಯಿಯ ಹೊಸ ಸೀರೆ ಪೂರ್ತಿ ಸಗಣಿಮಯವಾದಾಗ… ಆಗಲೂ ತಾವಿಬ್ಬರೂ ಒಟ್ಟಿಗೇ ಓಡಿ ಕಣ್ಮರೆಯಾಗಿದ್ದೆ ವಲ್ಲ! ನೆಲ್ಲಿಮರಕ್ಕೆ ಜೋತುಬಿದ್ದಿದ್ದ ಕೋಲ್ಜೇನು ತೆಗೆಯುವ ಸಾಹಸಕ್ಕೆ ಹೋಗಿ, ಜೇನುಹುಳುಗಳು ಕಡಿದು ತಾನು ಕೆಳಗೆ ಬಿದ್ದಿದ್ದಾಗ ಗಿರಿ ಎಷ್ಟೊಂದು ಅರ್ತಿಯಿಂದ ಉಪಚರಿಸಿದ್ದನಲ್ಲವಾ? ಮಳೆಗಾಲದಲ್ಲೊಂದು ದಿನ ಛತ್ರಿಯಿರದೆ ಬಂದಿದ್ದ ಕೇದಾರನೊಟ್ಟಿಗೆ ತನ್ನ ಹೊಸ ಕೊಡೆಯ ಅಡಿಯಲ್ಲಿ ಕರಕೊಂಡು ಹೊರಟಿದ್ದ ಗಿರಿ, ಹೋಗ್ಲಿ ಬಿಡು ಎಂದುಕೊಂಡು ಇದ್ದೊಂದೇ ಕೊಡೆಯನ್ನೂ ಮಡಿಸಿಟ್ಟು ಇಬ್ಬರೂ ಮಳೆಯಲ್ಲಿ ತೊಯ್ದಿದ್ದು… ಎಷ್ಟೆಲ್ಲಾ ನೆನಪುಗಳು ಆ ಒಟ್ಟೊಟ್ಟಿನ ದಿನಗಳದ್ದು!!

ಅರಿವಿಗೇ ಬರದಂತೆ ಸೂರ್ಯ ಎಷ್ಟೋ ಸಲ ಭೂಮಿಗೆ ಬಂದು ಹೋದ. ವರ್ಷಗಳೇ ಉರುಳಿದವು. ಒಟ್ಟೊಟ್ಟಿನ ದಿನಗಳು ಎಸ್ಸೆಸ್ಸೆಲ್ಸಿ ಮುಗಿದಲ್ಲಿಯೇ ಮುಗಿದುಹೋದವು. ಬಹುಶಃ ಆ ಬೇಸಗೆಯ ಒಂದು ರಾತ್ರಿ, ಊರ ಜಾತ್ರೆಯಲಿ ಗಿರಿ ಮತ್ತು ಕೇದಾರ ಒಟ್ಟೊಟ್ಟಿಗೇ ನಿಂತು ಕಡ್ಲೆಹಿಟ್ಟಿನ ಮಿರ್ಚಿ ತಿಂದಿದ್ದೇ ಕೊನೆ. ಆ ಮರುದಿವಸ ಗಿರಿ ಅಧ್ಯಯನದ ಹೆಸರಲ್ಲಿ ಊರು ಬಿಟ್ಟು ಪೇಟೆ ಸೇರಿದ. ಹಾಗೆ ಹೊರಟು ನಿಂತವನನ್ನು ಕಣ್ತುಂಬಿಕೊಂಡಂದು ಯಾಕೋ ಎಂದಿಗೂ ಇಲ್ಲದ ಕಣ್ಣೀರನ್ನು ತಂದುಕೊಂಡಿದ್ದರು ರಾಯರು ಎಂಬುದು ಜಾನಕಮ್ಮನವರ ಬಲವಾದ ಅನುಮಾನ. ಹೋಗಿಬರುತ್ತೇನೆಂದು ಹೇಳಲು ಬಂದಿದ್ದ ಗಿರಿಯನ್ನು ಪೂರ್ಣ ಪೂರ್ಣ ಮನಸ್ಸಿನಿಂದ ತಲೆ ನೇವರಿಸಿ ಆಶೀರ್ವದಿಸಿ ಕಳುಹಿಸಿದ್ದರು ರಾಯರು ಎಂಬುದು ಮಾತ್ರ ಕೇದಾರನಿಗೂ ನೆನಪಿದೆ. ಆದರೆ ಹಾಗ್ಯಾಕಾಯಿತೋ ಗೊತ್ತಿಲ್ಲ. ಕೇದಾರನ ವಿಷಯದಲ್ಲಿ ಮಾತ್ರ ಅಂಥ ಮೃದುತನ ರಾಯರಿಗೆ ಎಂದಿಗೂ ಬಂದೇ ಇಲ್ಲ, ಸ್ವಂತ ಮಗನೇ ಆದರೂ!!

ಊರಿನ ಗಾಳಿಯೊಂದಿಗೆ ಮಾತ್ರವೇ ಮಾತಾಡುತ್ತಾ ಕೇದಾರ ಇಲ್ಲಿಯೇ ಉಳಿದುಬಿಟ್ಟ. ಗಿರೀಶ ಹಾಗೆ ಓದಲು ಹೋದ ಬಳಿಕವೂ ಎರಡೆರಡು ವರ್ಷ ಈತ ಮತ್ತೆ ಊರಂಚಿನ ಆಲದ ಮರದ ಬಿಳಲುಗಳನ್ನು ಜೋತ; ನೆಲ್ಲಿ ಮರದ ಕೊಂಬೆಗಳ ಮೇಲೆ ತಾಸುತಾಸು ಕಳೆದ. ಕಾಲ ಅಷ್ಟಷ್ಟೇ ಉರುಳಿಹೋಯ್ತು. ಊರ ದೇವಸ್ಥಾನದ ಅರ್ಚಕರು ಗದ್ದೆಯಂಚಿನಲ್ಲಿ ಹಾವು ಕಚ್ಚಿ ಸತ್ತುಹೋದ ಬಳಿಕ ಕಾಳಕ್ಷರ ಮಂತ್ರ ಕಲಿತ್ತಿದ್ದ ಕೇದಾರ, ಬರೀ ಉಂಡಾಡಿ ಗುಂಡನಾಗಿರುವುದರ ಬದಲಿಗೆ ಹಾಗೇ ನಿತ್ಯಪೂಜೆ ಮಾಡತೊಡಗಿದ. ಅಂತೂ ಆ ದಿವಸ, ಊರಿನ ಎಷ್ಟೋ ಮಂದಿ ನಿರಾಳ ಉಸಿರಾಡಿದರು, ಕಪಿಯೊಂದಕ್ಕೆ ಕಡಿವಾಣ ಬಿತ್ತೆಂಬ ಭಾವದಲ್ಲಿ – ಅಷ್ಟೆ; ಅದಕ್ಕಿಂತ ಮುಂದೆ ಕೇದಾರನ ಬಗ್ಗೆ ಯಾರೆಂದರೆ ಯಾರೂ ವಿಚಾರ ಮಾಡಲಿಲ್ಲ. ಯಾರೇಕೆ, ಸ್ವತಃ ಅವನೂ ಮಾಡಲಿಲ್ಲ. ಈ ಮಧ್ಯೆ ದೂರಕ್ಕಿದ್ದ ಗಿರೀಶ, ಹಬ್ಬಕೊಮ್ಮೆ ಹುಣ್ಣಿಮೆಗೊಮ್ಮೆ ಊರಿಗೆ ಬರುತ್ತಿದ್ದ. ಪ್ರತಿ ಸಲ ಬಂದಾಗಲೂ, ಕೇದಾರನ ನೆನಪುಗಳ ಕಡತದಲ್ಲಿನ ಗಿರೀಶನಿಗೂ, ಈ ನೀಟಾಗಿ ಇಸ್ತ್ರಿಯಾಗಿರುವ, ಮಿರುಗುವ ಕೈಗಡಿಯಾರದ, ಕಟಕಟವೆನ್ನುವ ಬೂಟುಗಾಲುಗಳ ಗಿರಿಗೂ ತಾಳೆಯಾಗದೆ, ಇಬ್ಬರಿಗೂ ತಿಳಿಯದಂತೆ ಆಳಆಳದ ಭಿನ್ನತೆಯ ನದಿ ಹರಿಯಿತು ಅವರ ಮಧ್ಯೆ.

ಹಳೆಯ ದಿನಗಳಲ್ಲಿ ಇಬ್ಬರೂ ಜೀಕಿ ಬಿಟ್ಟ ಜೋಕಾಲಿ, ಹಾಗೇ ನಿಧಾನಕ್ಕೆ ತೂಗಿತೂಗಿ ನಿತ್ರಾಣವಾಗಿ, ಈಗ ನಿಂತುಬಿಟ್ಟಿತ್ತು. ಒಂದಷ್ಟು ಕಾಲ ಗಿರಿ ಊರಿಗೆ ಬಂದು ದೇವಸ್ಥಾನಕ್ಕೆ ಬಂದಾಗ ದೇವರನ್ನೂ, ಕೇದಾರನನ್ನೂ ಮಾತಾಡಿಸಿಕೊಂಡು ಹೋಗುತ್ತಿದ್ದನಾದರೂ ಬರಬರುತ್ತಾ ಅವೆಲ್ಲ ಮುಗುಳುನಗೆಗೆ ಸೀಮಿತವಾದದ್ದೂ ನಿಜವೇ. ಕಳೆದೊಂದು ವರ್ಷದ ಈಚೆಯಿಂದಂತೂ ಗಿರಿ, ಬಟ್ಟೆಗಳಿಗೆ ಮಾತ್ರವಲ್ಲ, ಮುಖಕ್ಕೂ ಇಸ್ತ್ರಿ ಹಾಕಿಕೊಂಡಿದ್ದನೋ ಎಂಬುವವನಂತೆ ನಗೆಯನ್ನೇ ಅರಳಿಸುತ್ತಿರಲಿಲ್ಲ. ಕೇದಾರನಾದರೂ, ಇನ್ನೇನು… ಆತ ಸೌಜನ್ಯದ ವರ್ತನೆ ತೋರದಿದ್ದರೆ ಅದು ಗಿರಿಯ ಬಳಿ ಮಾತ್ರವೇ. ಅವನು ದೂರವೇ ನಿಂತಂದಿನಿಂದ ಕೇದಾರನಿಗೆ ತುಟಿಯರಳಿಸುವ ಪ್ರಮೇಯವೇ ಬರಲಿಲ್ಲ. ಇವತ್ತಿಗಾದರೂ ವಸ್ತುತಃ ಮದುವೆಯೆಂಬುದು ಕೇದಾರನ ಮನಸಿನ ಬಯಕೆಯೇನೂ ಅಲ್ಲ; ಸುತ್ತಲಿನವರ ಒತ್ತಾಯಕ್ಕೆ, ಹೇರಿಕೆಗೆ ಅವ ಹೊತ್ತುಕೊಂಡಿರುವ ಹೊರೆ ಅದು. ಬಹುಶಃ ಅವನು ತನ್ನ ಗುನುಗುಗಳೊಂದಿಗೆ ಜೆಡ್ಡುಗಟ್ಟಿದ ನಿಶ್ಶಬ್ದದೊಂದಿಗೆ ಏಕಾಂಗಿಯಾಗಿಯೇ ಇದ್ದುಬಿಡಬಲ್ಲ. ಸಂಚಲನೆ ಅವನ ಶೈಲಿಯಲ್ಲ. ಬದುಕೆಂಬುದನ್ನು ಹಂಚಿಕೊಂಡು ಬದುಕೋಣ ಬಾ ಎಂದು ಸಂಗಾತಿಯನ್ನು ಕರೆಯುವುದಕ್ಕೆ ಅವನಲ್ಲಿ ಅಂಥ ಪರಿಯ ಯಾವ ಭಾವನೆಯೂ ಇಲ್ಲ. ಅಪ್ರೌಢ ವಯಸ್ಸಿನಲ್ಲೇ ಆಗಿದ್ದಿದ್ದರೂ ಆತ ಈವರೆಗೆ ಮನಸೆಂಬುದನ್ನು ತೆರೆಯುವ ಪ್ರಯತ್ನ ಮಾಡಿದ್ದಿದ್ದರೆ ಅದು ಗಿರಿಯ ಹತ್ತಿರ ಮಾತ್ರವೇ. ಇವತ್ತಿಗೆ ಗಿರಿಯ ಬದುಕು ಹರಿಯುತ್ತಿರುವ ಮಾರ್ಗವೇ ಬೇರೆ, ಕೇದಾರನದೇ ಬೇರೆ, ಕೇದಾರನೆಂದರೆ ಅಕಸ್ಮಾತ್ ಅರ್ಧಕ್ಕೆ ನಿಂತ ಮಧುರ ಗಾಯನದಂಥವನು; ಅರೆನಿದ್ರೆಯಲ್ಲೇ ಎಚ್ಚರವಾದ ಪುಟ್ಟ ಮಕ್ಕಳ ಅಸಹನೆಯಂಥವನು. ಅವನ ವಿಕ್ಷಿಪ್ತ ಶೃತಿಯನ್ನು ತಿಳಿದು ಮರುನುಡಿಸುವ ಮಾಯಾವಿ ಬರುವವರೆಗೂ ಆತ ಬದಲಾಗಲಾರ.

3
ಅವನಿಗೆಂದೂ ಇಂಥ ಭಾವಗಳು ಎದೆ ತುಂಬ ಹಾದುಹೋದದ್ದಿಲ್ಲ. ಇವತ್ತೇ ಇದೇ ಕ್ಷಣವೇ ಮೊದಲು; ಅಷ್ಟು ನವಿರುತನವೊಂದು ರೇಷ್ಮೆಯ ನುಣುಪಿನಂತೆ ತನ್ನ ಮನಸನ್ನು ಎಷ್ಟು ಅಪ್ತವಾಗಿ ನೇವರಿಸುತ್ತಿದೆ ಎಂದೆನಿಸಿತು. ಕೇದಾರ ಹಿಂದೆಂದೂ ಅರಿಯದಿದ್ದ ವಿಚಿತ್ರ ಮೃದು ಕಂಪನಕ್ಕೆ ಅಚ್ಚರಿಗೊಂಡ. ದೇವಾಲಯದ ಗರ್ಭಗೃಹದ ಬಾಗಿಲ ಮುಂದೆ ನಿಂತು, ಆರತಿಗೆ ಕೈ ನೀಡಿ ಕಣ್ಣಿಗೊತ್ತಿಕೊಂಡು, ದೇವರಿಗೆ ಕೈ ಮುಗಿಯುತ್ತಾ ತುಸುವೇ ಕತ್ತು ಬಾಗಿಸಿದ ಅವಳು. ಅವಿರತವಾಗಿ ನೆತ್ತಿಯಿಂದಿಳಿದುಬಿದ್ದ ಕಪ್ಪು ನೀಳ ಕೇಶರಾಶಿ, ಕೈ ಮುಗಿಯಲೆಂದು ಜೋಡಿಸಿದ ಬೆಣ್ಣೆಯಷ್ಟೇ ಮುದ್ದು ಬೆರಳುಗಳು, ಮೈ ತುಂಬ ಉಟ್ಟ ಸೀರೆ, ಕಾರಣವಿರದೆ ನಾಚಿಕೊಂಡಂತಿದ್ದ ಕಂಗಳು… ಪುಟ್ಟ ಹಣತೆಯೊಂದು ಹುಬ್ಬುಗಳ ಮಧ್ಯೆ ಬೆಳಗುತ್ತಿರುವಂಥ ತಿಲಕ, ಎಳೆಶಿಶುವೊಂದನ್ನು ಈಗಷ್ಟೇ ಮಲಗಿಸಿ ಎದ್ದುಬಂದು ಹೀಗಿಲ್ಲಿ ಕೈ ಮುಗಿಯುತ್ತಿರುವಳೇನೋ ಎಂಬಂಥ ಅವಳ ನಿಲುವು…

ಕೇದಾರನಾಳದಲ್ಲಿ ಕಾವ್ಯವೇನೂ ಹುಟ್ಟಲಿಲ್ಲ. ಆದರೆ ಅವನೆಂದೂ ತೆರೆದು ನೋಡಿರದ ಮನಸಿನ ಅಜ್ಞಾತ ಕದಗಳನ್ನು ಯಾರೋ ತಟ್ಟುತ್ತಿರುವ ಅನುಭವ. ಪ್ರಜ್ಞೆ ಮೂಡಿದಂದಿನಿಂದ ಇಂದಿನವರೆಗೂ ಸುಳಿಯದೊಂದು ಮೃದುಲತೆ ಅವನಲ್ಲಿ ಸುಳಿದುಹೋಯ್ತು. ಬದುಕಿನ ಉಳಿದಾವ ಭಾಗವೂ ಅವನಿಗೆ ಈ ಕ್ಷಣಕ್ಕೆ ವಿಷಯವಾಗಲಿಲ್ಲ. ಇದುವರೆಗೆ ಬದುಕಿಗಿಳಿದಿರದಿದ್ದ ಮೃದುಲತೆಯನ್ನು ಈ ಕ್ಷಣ, ಒಂದು ಹನಿಯನ್ನೂ ಬಿಡದಂತೆ ತನ್ನೊಳಗೆ ಬಿಟ್ಟುಕೊಳ್ಳುವ ಧ್ಯಾನದಂಥ ಮನಸು. ಆಕೆ ತಿರುಗಿ ಹೋಗುವಾಗ ತುಟಿಯಂಚಿನಲ್ಲಿ ಕಿರುನಕ್ಕಳಾ ಕೇದಾರನೆಡೆಗೆ? ನಿಶ್ಚಿತವಿಲ್ಲ. ಆದರೆ ಇದೇ ಇದೇ ಮೊದಲ ಬಾರಿಗೆ ಕೇದಾರನೆದೆಯಲ್ಲಿ ಅರಳಿದೊಂದು ಜೀವಂತ ನಗೆ, ಅವನ ತುಟಿಗಳ ಮೇಲೆ ಸುಳಿದದ್ದು ಮಾತ್ರ, ಸತ್ಯ. ನಿಜವೆಂದರೆ ಸ್ತ್ರೀತ್ವವೆಂಬ ಮಾರ್ದವತೆಯನ್ನು ಅವನೆಂದಿಗೂ ಮನಸಾ ನೋಡಿರಲೇ ಇಲ್ಲ. ಇವತ್ತಿದು ಅವನೊಳಗಿನ ಹೊಸ ಯುಗ, ಹೊಸ ಪರ್ವ! ಒಡ್ಡುತನದ ಜಿಡ್ಡನ್ನೆಲ್ಲ ಒಡೆದು ಒಮ್ಮಿಂದೊಮ್ಮೆಲೇ ಹೂಬನಕ್ಕೆ ಜಿಗಿದಂಥ ಆನಂದ!! ಬಿಳಲುಗಳು ಹೆಣೆದಿದ್ದ ಬದುಕಿನ ಆವರಣಗಳ ಕಳಚಿ, ಮುಕ್ತ ಸ್ವಚ್ಛಂದ ಮಳೆಗೆ ಮೈಯೊಡ್ಡಿದಂಥ ಮನಸು. ನಿಂತನಿಂತಲ್ಲೇ ಕೇದಾರ ಬದುಕೆಲ್ಲ ಹೊಸದೆಂಬಂತೆ ಸಂಭ್ರಮಿಸಿದ.

ಕೈಲಿದ್ದ ಅರತಿ ತಟ್ಟೆಯಲ್ಲಿ ಕರ್ಪೂರದ ಜ್ವಾಲೆ ಉರಿದುರಿದು, ಇದೀಗ ನೀರಿನಿಂದ ಹೊರ ತೆಗೆದ ಮೀನು ಬದುಕಲು ಪ್ರಯತ್ನಿಸುತ್ತಾ ಒದ್ದಾಡುವಂತೆ ಆರಿಹೋಗದೇ ಇರುವ ಪ್ರಯತ್ನಕ್ಕೆ ತೊಡಗಿತ್ತು. ತನ್ನನ್ನು ಪುನೀತಗೊಳಿಸಿದ ಈ ನವವಧುವಿನ ಮುಗ್ಧ ಕಂಗಳಿಂದ ದೂರ ಸರಿಯಲು ಕೇದಾರನಿಗೇನೂ ಮನಸಿರಲಿಲ್ಲ. ಆದರೆ ಹಿಡಿದುಕೊಂಡಿದ್ದ ಅರತಿ ತಟ್ಟೆಯ ಬಿಸಿ ಕೈಬೆರಳುಗಳನ್ನು ಚುರುಗುಟ್ಟಿಸಿತು. ಇವ ಹೀಗೇ ನಿಂತಿದ್ದು ಕಂಡು, ಗಿರಿಗೆ ಏನೆನ್ನಿಸಿತೋ ಪರ್ಸಿನಿಂದ ಹಸಿರು ಗಾಂಧಿ ನೋಟೊಂದನ್ನು ತೆಗೆದು ಆರತಿ ತಟ್ಟೆಗೆ ಹಾಕಿದ. ಕೇದಾರನಿಗೆ ಪಿಚ್ಚೆನಿಸಿತು. ಹೀಗೆ ಏಳು ನಿಮಿಷ ಅರತಿ ತಟ್ಟೆ ಹಿಡಿದು ಎದುರಿಗೆ ನಿಂತಿದ್ದು ನಿನ್ನ ನೋಟಿಗಾಗಿ ಅಲ್ಲ ಎಂದು ಅರಚಬೇಕೆನ್ನಿಸಿತು… ಆದರೆ ಅದೇ ಕ್ಷಣ… ತಾನು ಹಾಗೇ ನಿಂತಿದ್ದರೆ ಬೇರೆ ಅರ್ಥ ಬರುವುದಕ್ಕೂ ಸಾಧ್ಯವಿಲ್ಲವೆನಿಸಿ ಅವನು ಸುಮ್ಮನೇ ಉಳಿದ. ಅಷ್ಟೊತ್ತಿಗಾಗಲೇ ಆ ಅವಳು, ಸಂಗಾತಿಯ ಕೈಯಲ್ಲಿ ಕೈಯಿಟ್ಟು ನಿಧಾನಕ್ಕೆ ಮರಳಿ ಹೊರಟು ನಿಂತಿದ್ದಳು; ಸಂಜೆ ಹೊತ್ತಿಗೆ ಬಂದು ಕತ್ತಲ ಗುಡಿಯಲ್ಲಿ ಮಂಗಳದೀಪ ಬೆಳಗಿ, ಅಷ್ಟೇ ನಿಸ್ವೃಹತೆಯಿಂದ ಮರಳುವ ತಾಪಸ ಕನ್ಯೆಯಂತೆ, ಅವಳ ಕಂಗಳಲ್ಲಿ ಇದ್ದುದು, ಕೇದಾರನೆದೆಯಲ್ಲಿ ಹೊತ್ತಿದ ಮಂಗಳದೀಪ ಆರದೆ ಉರಿಯಲಿ ಎಂಬ ಇಚ್ಛೆ!? ಕೇದಾರ ಕಂಗಳ ತುಂಬ ಹೇಳತೀರದ ಗೌರವಭಾವವನ್ನಿಟ್ಟುಕೊಂಡು, ದೇವಾಲಯದ ಶಿಲಾಸ್ತಂಭದೊಂದಿಗೆ ಇನ್ನೊಂದು ಕಂಭವೇ ಆಗಿ ನಿಂತುಬಿಟ್ಟ. ಮುಚ್ಚಿದ ಕಂಗಳ ಹಿಂದೆ, ಸಂಧ್ಯಾವಂದನೆಯ ಅರ್ಘ್ಯದ ಜೊತೆಗೆಲ್ಲೋ ಈ ದೀಪದ ಹೆಣ್ಣು ಸಜೀವ ಅರಾಧನೆಯ ಮೂರ್ತಿಯಾದಂಥ ಚಿತ್ರ. ಅಮ್ಮನನ್ನು ಅಮ್ಮಾ ಎಂದು ಎದೆ ತುಂಬಿ ಕರೆವ ಭಾವ. ದೀಪದ ಹೆಣ್ಣು ಕೇದಾರನನ್ನು ಯಾವ ಭಾವಕ್ಕೂ ಅಂಟಿಸಿ ನಿಲ್ಲುತ್ತಿಲ್ಲ. ಬದಲಿಗೆ, ಅಂಗೈಯಗಲದ ಆಗಸದಲ್ಲಿ ಬ್ರಹ್ಮಾಂಡ ಕಾಣುವ ಕಲಾವಂತಿಕೆ ಹೇಳಿಕೊಟ್ಟು ಹೊರಟಿದ್ದಾಳೆ. ಹೊರಗೆ, ಅವರಿಬ್ಬರೂ ಕುಳಿತು ಬಂದಿದ್ದ ಸ್ವಿಫ್ಟ್ ಕಾರು ಸಣ್ಣದೊಂದು ಕೆಮ್ಮು ಕೆಮ್ಮಿ ಹೊರಟ ಸದ್ದಾಯಿತು. ಕೇದಾರ ಹೊರಗೋಡಿ ಬಂದ, ಕವಿದು ನಿಂತಿರುವ ಪೆಟ್ರೋಲಿನ ಘಮವನ್ನು ಆಸ್ವಾದಿಸಲಿಕ್ಕೆಂದಲ್ಲ. ಬದಲಿಗೆ, ದೀಪ ಬೆಳಗಿದಾಕೆಯ ಪಾದದ ಗುರುತು ಮಣ್ಣ ಮೇಲೆ ಉಳಿದಿರಬಹುದಾ ಎಂದು ನೋಡಲಿಕ್ಕೆ. ಅವಳನ್ನು ಹೊತ್ತ ಕಾರು ಉದ್ದ ದಾರಿಯಲ್ಲಿ ಸಾಗಿ ಕಣ್ಮರೆಯಾಯಿತು.

 

* ನವೀನ ಭಟ್ ‘ಗಂಗೋತ್ರಿ’, ಶೃಂಗೇರಿ

ದಯಾಮರಣ : Euthanasia : Mercy killing

Dayamarana, short story by Triveni
ಡಾ. ಸುದರ್ಶನ್‌ರ ರೌಂಡ್ಸ್‌ ಅದೇ ತಾನೇ ಪ್ರಾರಂಭವಾಗಿತ್ತು. ಪ್ರತಿ ರೋಗಿಯನ್ನೂ ಮೆಲುವಾದ ದನಿಯಲ್ಲಿ ಆತ್ಮೀಯವಾಗಿ ವಿಚಾರಿಸುತ್ತಾ, ಅವರ ದೇಹಸ್ಥಿತಿಯ ಏರುಪೇರುಗಳನ್ನು ಗಮನಿಸುತ್ತಾ ಬರುತ್ತಿದ್ದರು. ಆ ನರ್ಸಿಂಗ್‌ ಹೋಂನ ರೋಗಿಗಳ ಪಾಲಿಗೆ ಸುದರ್ಶನ್‌ ಎಂದರೆ ಸಾಕ್ಷಾತ್‌ ಧನ್ವಂತರಿ. ಅವರ ಕೈಗುಣದ ಮೇಲೆ ಅಷ್ಟು ವಿಶ್ವಾಸ ಅವರಿಗೆ.

ಸುದರ್ಶನರ ವ್ಯಕ್ತಿತ್ವವೂ ಹಾಗೆಯೇ ಇತ್ತು. ತುಂಬಾ ಸಮಾಧಾನಿ. ಕರುಣೆ, ಸಾಂತ್ವನವನ್ನು ಹೊರಚೆಲ್ಲುವ ಶಾಂತ ಮುಖಭಾವ. ತಮ್ಮ ಸ್ನೇಹಮಯ ವ್ಯಕ್ತಿತ್ವದಿಂದ ಎಂತಹ ಅಪರಿಚಿತರನ್ನೂ ತಮ್ಮತ್ತ ಆಯಸ್ಕಾಂತದಂತೆ ಸೆಳೆದುಕೊಂಡುಬಿಡುತ್ತಿದ್ದರು. ಎಷ್ಟೇ ಕೆಲಸದ ಒತ್ತಡವಿದ್ದರೂ ತಮ್ಮ ಮನಸ್ಸಿನ ನೆಮ್ಮದಿಯನ್ನು ಕಳೆದುಕೊಳ್ಳುತ್ತಿರಲಿಲ್ಲ.

ತಾವೇ ಆ ನರ್ಸಿಂಗ್‌ಹೋಮಿನ ಮಾಲೀಕರಾಗಿದ್ದರೂ ಇತರ ಸಹೋದ್ಯೋಗಿಗಳ ಮೇಲೆ ದರ್ಪ ದಬ್ಬಾಳಿಕೆಯನ್ನು ತೋರಿಸದೆ ಅವರ ಸಲಹೆಗಳನ್ನೂ ಮನ್ನಿಸುತ್ತಿದ್ದರು. ಸರಕಾರಿ ವೈದ್ಯರಾಗಿ ಅನೇಕ ಸ್ಥಳಗಳಲ್ಲಿ ಸೇವೆ ಸಲ್ಲಿಸಿ, ಅಪಾರ ಅನುಭವ ಪಡೆದು ನಿವೃತ್ತಿಯ ವಯಸ್ಸು ಸಮೀಪಿಸಿದಂತೆ ಆ ಕೆಲಸಕ್ಕೆ ರಾಜಿನಾಮೆ ಸಲ್ಲಿಸಿ ತಮ್ಮದೇ ಸ್ವಂತ ‘ಅಶ್ವಿನಿ ನರ್ಸಿಂಗ್‌ ಹೋಂ’ ತೆರೆದಿದ್ದರು. ಅವರು ಈ ನರ್ಸಿಂಗ್‌ ಹೋಂ ಪ್ರಾರಂಭಿಸಿದ್ದು ಜನಸೇವೆಯ ಉದ್ದೇಶದಿಂದಲೇ ಹೊರತು ಹಣ ಮಾಡಲಲ್ಲ. ಸುದರ್ಶನ್‌ ನಿಜಕ್ಕೂ ಒಬ್ಬ ಬಲು ಅಪರೂಪದ ವೈದ್ಯರು.

ಕೆಲವು ವೃದ್ಧ ರೋಗಿಗಳು ಹೇಳಿದ್ದನ್ನೇ ಮತ್ತೆ ಮತ್ತೆ ಹೇಳುತ್ತಾ ತಮ್ಮ ಅಮೂಲ್ಯ ಸಮಯವನ್ನು ವ್ಯರ್ಥ ಮಾಡುತ್ತಿದ್ದರೂ, ಆ ಭಾವನೆಯ ಛಾಯೆಯನ್ನೂ ಕೂಡ ಮೊಗದಲ್ಲಿ ಹಾಯಬಿಡದೆ, ಅವರ ದೂರುಗಳನ್ನು ಅತಿ ಆಸಕ್ತಿಯಿಂದ ಅಲಿಸುತ್ತಾ ಸೂಕ್ತ ಸಮಾಧಾನ ಹೇಳುತ್ತಿದ್ದರು. ಇದರಿಂದ ಆ ರೋಗಿಗಳಿಗೆ ಡಾಕ್ಟರಿಗೆ ತಾವು ತುಂಬಾ ಆಪ್ತರೆಂಬುವ ಧನ್ಯತಾಭಾವ ಮೂಡುತ್ತಿತ್ತು.

ಆ ವಾರ್ಡಿನ ಕೊನೆಯ ಮಂಚದಲ್ಲಿದ್ದ ಮಂಜುನಾಥಯ್ಯನವರು ಡಾಕ್ಟರು ತಮ್ಮ ಬಳಿ ಬರುವುದನ್ನೇ ನಿರೀಕ್ಷಿಸುತ್ತಾ ಮಲಗಿದ್ದರು. ‘ಹೇಗಿದ್ದೀರಾ? ಮಂಜುನಾಥಯ್ಯನವರೇ, ನಿಮ್ಮ ಕೊನೆಯ ಮಗ ಅಮೆರಿಕಾದಿಂದ ಇಲ್ಲಿಗೆ ಬಂದ ಮೇಲೆ ನಿಮ್ಮ ಕಾಯಿಲೆ ಅರ್ಧ ವಾಸಿ ಆದ ಹಾಗಿದೆ’ ಎಂದು ಅವರನ್ನು ಹಾಸ್ಯ ಮಾಡಿದರು ಡಾಕ್ಟರ್‌.

ಶರಮಂಚದ ಮೇಲಿನ ಭೀಷ್ಮನಂತೆ ನೋವುಣ್ಣುತ್ತಾ ಮಲಗಿದ್ದ ಮಂಜುನಾಥಯ್ಯನವರ ತುಟಿಯ ಮೇಲೆ ಶುಷ್ಕ ನಗೆಯಾಂದು ಹಾದು ಹೋಯಿತು.

‘ಡಾಕ್ಟರೇ, ನಿಮಗೂ ನನ್ನ ಸ್ಥಿತಿ ತಮಾಷೆ ಅಗಿದೆಯೇ? ನಾನೊಂದು ಮಾತು ಕೇಳ್ತೀನಿ, ದಯವಿಟ್ಟು ನಡೆಸಿಕೊಡಿ. ಜನ್ಮಾಂತರದಲ್ಲೂ ನಾನು ನಿಮಗೆ ಋಣಿಯಾಗಿರ್ತೀನಿ’ ಎಂದರು ದೈನ್ಯದಿಂದ ಮಂಜುನಾಥಯ್ಯ.

ಡಾಕ್ಟರಿಗೆ ಈ ರೋಗಿ ತಮ್ಮಿಂದ ಬೇಡುತ್ತಾ ಇರುವ ಉಪಕಾರವೇನೆಂಬುದು ಗೊತ್ತಿತ್ತು. ಅದು ಆಗದ ಹೋಗದ ಮಾತೆಂಬುದೂ ಗೊತ್ತು. ಆದ್ದರಿಂದಲೇ ಹೆಚ್ಚು ಮಾತು ಬೆಳೆಸದೆ, ‘ಹೆಚ್ಚು ಯೋಚನೆ ಮಾಡಿ ಆಯಾಸ ಮಾಡಿಕೊಳ್ಳಬೇಡಿ, ಮಾತ್ರೆಗಳನ್ನೆಲ್ಲಾ ತೆಗೆದುಕೊಂಡಿರಿ ತಾನೇ?’ ಎಂದು ಔಪಚಾರಿಕವಾಗಿ ಕೇಳುತ್ತಾ ಆ ವಾರ್ಡಿನಿಂದ ಹೊರಬಿದ್ದರು.

***

ಮಂಜುನಾಥಯ್ಯನವರನ್ನು ಡಾ.ಸುದರ್ಶನ್‌ ಸುಲಭದಲ್ಲಿ ಮರೆಯಲಾರರು. ಏಕೆಂದರೆ ಅವರ ರೋಗದ ಚರಿತ್ರೆಯೇ ಹಾಗಿದೆ. ಎರಡು ವರ್ಷಗಳ ಹಿಂದೆ ಅವರು ಮೊದಲ ಬಾರಿಗೆ ಅಶ್ವಿನಿ ನರ್ಸಿಂಗ್‌ ಹೋಮಿನಲ್ಲಿ ದಾಖಲಾಗಿದ್ದರು.

ತಮ್ಮದೇ ಆದ ಸ್ವಂತ ಉದ್ಯಮ ಹೊಂದಿದ್ದು, ಸಾಕಷ್ಟು ಸ್ಥಿತಿವಂತರಾಗಿದ್ದರು ಮಂಜುನಾಥಯ್ಯನವರು. ಆರೋಗ್ಯವಂತರಾಗಿದ್ದು ಚಟುವಟಿಕೆಯಿಂದಿದ್ದ ಅವರಿಗೆ ಇದ್ದಕ್ಕಿದ್ದಂತೆ ಒಂದು ದಿನ ಕೈಕಾಲುಗಳಲ್ಲಿ ಸ್ವಲ್ಪ ನೋವು ಪ್ರಾರಂಭವಾಯಿತು. ವಾಯುನೋವಿರಬೇಕು ಎಂದು ಅವರು ಉದಾಸೀನದಿಂದಲೇ ಇದ್ದರು. ಆದರೆ ಆ ನೋವು ತೋಳು, ತೊಡೆ, ಸೊಂಟ, ಕುತ್ತಿಗೆ ಎಂದು ಇಡೀ ದೇಹವನ್ನೇ ವ್ಯಾಪಿಸಿಕೊಂಡಿತು.

ಹೆಜ್ಜೆಗಳನ್ನೂ ಎತ್ತಿಡಲೂ ಅಗದಂತಹ ಯಮನೋವು ಅದು. ಹೀಗಾದ ಮೇಲೆ ಮಂಜುನಾಥಯ್ಯ ತೀರಾ ಪರಾವಲಂಬಿ ಆಗಿಬಿಟ್ಟರು. ಮಲಮೂತ್ರ ವಿಸರ್ಜನೆಯೆಲ್ಲಾ ಮಲಗಿದ ಕಡೆಯೇ ಆಗಬೇಕಾಗಿತ್ತು. ಇಷ್ಟು ಸಾಲದೆಂಬಂತೆ ಮೈಮೇಲೆಲ್ಲಾ ಸಣ್ಣ ಸಣ್ಣ ಹುಣ್ಣುಗಳಾಗಿ ಕೀವು ತುಂಬತೊಡಗಿತು. ಅವರೇ ಸಹಿಸಲಾಗದಂತಹ ದುರ್ನಾತ.

ಇಂತಹ ಸ್ಥಿತಿಯಲ್ಲಿ ಸುದರ್ಶನರ ಬಳಿಗೆ ಬಂದಿದ್ದರು ಮಂಜುನಾಥಯ್ಯ. ಅವರನ್ನು ಸುದರ್ಶನ್‌ ಎಲ್ಲಾ ತರಹದ ತಪಾಸಣೆಗಳಿಗೆ ಒಳಪಡಿಸಿದ್ದರು. ಆದರೆ ಯಾವುದರಿಂದಲೂ ಅವರಿಗೆ ಬಂದಿರುವ ರೋಗವೇನೆಂಬುದು ಮಾತ್ರ ಪತ್ತೆಯಾಗಲಿಲ್ಲ. ಸುದರ್ಶನ್‌ ತಮ್ಮ ಅಷ್ಟೂ ವರ್ಷಗಳ ವೈದ್ಯಕೀಯ ಸೇವೆಯ ಅವಧಿಯಲ್ಲಿ ಇಂತಹ ರೋಗಿಯನ್ನು ನೋಡುತ್ತಿರುವುದು ಇದೇ ಮೊದಲು. ಅವರ ಜಾಣ್ಮೆ, ಕೌಶಲ್ಯ, ಅನುಭವಗಳಿಗೇ ಮಂಜುನಾಥಯ್ಯನವರ ಕಾಯಿಲೆ ಸವಾಲಾಗಿ ಹೋಗಿತ್ತು. ತಮಗೆ ತಿಳಿದ ಬೇರೆ ಕೆಲವು ನುರಿತ ತಜ್ಞರನ್ನು ಕರೆಸಿಕೊಂಡು ಮಂಜುನಾಥಯ್ಯನವರನ್ನು ಅವರಲ್ಲಿಯೂ ಪರೀಕ್ಷೆಗೊಡ್ಡಿದ್ದರು. ಆದರೆ ಯಾವುದರಿಂದಲೂ ಪ್ರಯೋಜನ ದೊರೆತಿರಲಿಲ್ಲ.

ಕೊನೆಗೆ ಕೆಲವು ತಾತ್ಕಾಲಿಕ ನೋವು ನಿವಾರಕಗಳನ್ನು, ಶಕ್ತಿದಾಯಕ ಟಾನಿಕ್‌ಗಳನ್ನು ಮಾತ್ರ ಬರೆದುಕೊಟ್ಟು ಮಂಜುನಾಥಯ್ಯನವರನ್ನು ಮನೆಗೆ ಕಳಿಸಿಬಿಟ್ಟಿದ್ದರು. ಕಳಿಸುವ ಮುನ್ನ ಮಂಜುನಾಥಯ್ಯನವರ ಪತ್ನಿ ಚಂದ್ರಮತಿಯಲ್ಲಿ ಅವರ ಪತಿಯ ಕಾಯಿಲೆಯನ್ನು ಗುಣಪಡಿಸುವಲ್ಲಿ ತಮ್ಮ ವೈಫಲ್ಯವನ್ನು ಪ್ರಾಮಾಣಿಕವಾಗಿ ಒಪ್ಪಿಕೊಂಡು, ಅವರನ್ನು ಬೇರೆ ಕಡೆ ಚಿಕಿತ್ಸೆಗೆ ಕರೆದುಕೊಂಡು ಹೋಗುವುದಾದಲ್ಲಿ ತಮ್ಮ ಅಭ್ಯಂತರ ಏನಿಲ್ಲವೆಂದು ಹೇಳಿದ್ದರು.

ಚಂದ್ರಮತಿ ಕಾಲೇಜೊಂದರಲ್ಲಿ ಉಪನ್ಯಾಸಕಿ. ಸೂಕ್ಷ್ಮಮತಿಯ ಹೆಂಗಸು. ಅವರ ಜೀವನದಲ್ಲಿ ಸುಖ ಸಮೃದ್ಧಿಗಳಿಗೇನೂ ಕೊರತೆ ಇರಲಿಲ್ಲ. ಮಂಜುನಾಥಯ್ಯನವರು ತಮ್ಮ ಬುದ್ಧಿಬಲ, ಪರಿಶ್ರಮಗಳಿಂದ ಅಪಾರ ಸಂಪತ್ತನ್ನು ಕೂಡಿಸಿದ್ದರು. ಉನ್ನತ ಪದವಿಗಳಲ್ಲಿರುವ ಮೂರುಜನ ಗಂಡುಮಕ್ಕಳು ಅವರಿಗೆ. ಸೊಸೆಯರು, ಮೊಮ್ಮಕ್ಕಳಿಂದ ತುಂಬಿದ ಸುಂದರ ಸಂಸಾರ ಅವರದಾಗಿತ್ತು. ಬದುಕಿನ ಸಮಸ್ತ ಸುಖಗಳನ್ನೂ ಹನಿಹನಿಯಾಗಿ ಸವಿಯುತ್ತಿದ್ದಾಗಲೇ ಮಂಜುನಾಥಯ್ಯನವರ ಅನಾರೋಗ್ಯ ಅವರ ಮೇಲೆ ಸಿಡಿಲಿನಂತೆ ಬಂದೆರಗಿತ್ತು.

ತಮ್ಮ ಪ್ರೀತಿಯ ಸಂಗಾತಿಯನ್ನು ಮತ್ತೆ ಮೊದಲಿನಂತೆ ಆರೋಗ್ಯವಂತರನ್ನಾಗಿ ನೋಡಬೇಕೆಂದು ಬೇಕಾದಷ್ಟು ಶ್ರಮಿಸಿದ್ದರು. ಡಾ. ಸುದರ್ಶನ್‌ ಶಿಫಾರಸು ಮಾಡಿದ್ದ ಮತ್ತೆ ಕೆಲವು ವೈದ್ಯರುಗಳಲ್ಲಿ ಪತಿಯನ್ನು ಕರೆದೊಯ್ದಿದ್ದರು. ಹಗಲು ರಾತ್ರಿಗಳೆನ್ನದೆ, ನಿದ್ರೆ ಆಹಾರವಿಲ್ಲದೆ ಊರೂರು ಸುತ್ತಾಡಿದ್ದರು. ಆದರೆ ಎಲ್ಲಾ ಕಡೆಯೂ ಅವರಿಗೆ ನಿರಾಸೆಯೇ ಕಟ್ಟಿಟ್ಟ ಬುತ್ತಿಯಾಗಿತ್ತು. ಎಲ್ಲಾ ಪ್ರಯತ್ನಗಳೂ ಮುಗಿದ ನಂತರ – ‘ಇನ್ನು ಯಾವ ಆಸ್ಪತ್ರೆಯೂ ಬೇಡ. ಚಿಕಿತ್ಸೆಯೂ ಬೇಡ. ಬದುಕಿರುವವರೆಗೂ ನನ್ನ ಯಜಮಾನರು ನನ್ನ ಬಳಿಯಲ್ಲಿಯೇ ಇರಲಿ’ ಎಂದು ಮಂಜುನಾಥಯ್ಯನವರನ್ನು ಮನೆಯಲ್ಲೇ ಇರಿಸಿಕೊಂಡು ತಮ್ಮ ಕಣ್ಣಿನಂತೆ ಕಾಪಾಡಿಕೊಂಡು ಬಂದಿದ್ದರು.

ಎರಡು ಮೂರು ತಿಂಗಳಿಗೊಮ್ಮೆ ನಗರದ ಹೊರವಲಯದಲ್ಲಿದ್ದ ತಮ್ಮ ಬೃಹತ್‌ ಬಂಗಲೆಗೆ ಸುದರ್ಶನ್‌ ಅವರನ್ನು ವಿನಂತಿಸಿ, ಕರೆಸಿಕೊಳ್ಳುತ್ತಿದ್ದರು. ಸುದರ್ಶನ್‌ ರೋಗಿಯನ್ನು ಪರೀಕ್ಷಿಸಿ ಇಂಜೆಕ್ಷನ್‌, ಮಾತ್ರೆಗಳನ್ನು ಕೊಟ್ಟು ರೋಗಿಯ ನೋವು ಹತೋಟಿಯಲ್ಲಿರುವಂತೆ, ಸಹನೀಯವಾಗಿರುವಂತೆ ನೋಡಿಕೊಳ್ಳುತ್ತಿದ್ದರು. ಇದಕ್ಕಿಂತ ಹೆಚ್ಚಿನದು ಅವರಿಂದ ಸಾಧ್ಯವಾಗಿರಲಿಲ್ಲ.

ಪ್ರತಿಬಾರಿ ಅವರ ಮನೆಗೆ ಹೋದಾಗಲೂ ಸುದರ್ಶನರಿಗೆ ನರಕದರ್ಶನವಾದಂತಾಗುತ್ತಿತ್ತು. ಮಂಜುನಾಥಯ್ಯನವರ ಕೋಣೆಯನ್ನೆಲ್ಲಾ ವ್ಯಾಪಿಸಿದ ದುರ್ಗಂಧವನ್ನು ನಿವಾರಿಸಲು ಅಲ್ಲಿ ಉರಿಸಿರುತ್ತಿದ್ದ ಸುಗಂಧ ಬತ್ತಿಗಳಿಂದಲೂ ಸಾಧ್ಯವಾಗುತ್ತಿರಲಿಲ್ಲ. ಮೈಯ ಅಂಗುಲ ಅಂಗುಲದಲ್ಲೂ ಸೂಜಿಯಿಂದ ಚುಚ್ಚಿದಂತೆ ನೋವು ಅನುಭವಿಸುತ್ತಿದ್ದ ಅವರು ವಿಕಾರವಾಗಿ ಕಿರುಚಾಡುತ್ತಿದ್ದರು. ಇದನ್ನೆಲ್ಲಾ ಪ್ರತಿದಿನವೂ ಅನಿವಾರ್ಯವಾಗಿ ಅನುಭವಿಸುತ್ತಿದ್ದ ಅವರ ಕುಟುಂಬದ ಯಾರೊಬ್ಬರ ಮುಖದಲ್ಲೂ ಜೀವಕಳೆಯೇ ಇದ್ದಂತೆ ಅನಿಸುತ್ತಿರಲಿಲ್ಲ ಸುದರ್ಶನರಿಗೆ.

ಇದೇ ರೀತಿ ಎರಡು ವರ್ಷಗಳು ಮಂಜುನಾಥಯ್ಯನವರನ್ನು ಮನೆಯಲ್ಲೇ ಇರಿಸಿ ಚಿಕಿತ್ಸೆ ನೀಡುತ್ತಿದ್ದರು. ಈಗ ಎರಡು ವಾರಗಳ ಹಿಂದೆ ಅವರ ಗಂಟಲಿನಲ್ಲಿ ಏನೋ ತೊಂದರೆಯಾಗಿ ನೀರು, ಆಹಾರ ಏನೂ ಇಳಿಯದಂತಾದಾಗ ಪುನಃ ಅವರನ್ನು ಸುದರ್ಶನರ ನರ್ಸಿಂಗ್‌ ಹೋಂಗೆ ತಂದು ಸೇರಿಸಿದ್ದರು. ಅವರ ಅನ್ನನಾಳದಲ್ಲಿದ್ದ ಅಡೆತಡೆಯನ್ನು ಶಸ್ತ್ರಚಿಕಿತ್ಸೆಯ ಮೂಲಕ ನಿವಾರಿಸಿದ ಮೇಲೆ ಈಗೆರಡು ದಿನದಿಂದ ದ್ರವಾಹಾರವನ್ನು ನಳಿಕೆಯ ಸಹಾಯ ಇಲ್ಲದೆ ನೀಡಲು ಸಾಧ್ಯವಾಗಿತ್ತು. ಇನ್ನು ನಾಲ್ಕುದಿನಗಳ ನಂತರ ಮೊದಲಿನಂತೆ ಗಟ್ಟಿ ಆಹಾರವನ್ನು ಸೇವಿಸಬಹುದೆಂದೂ, ಅಮೇಲೆ ಮನೆಗೆ ಕಳಿಸುವುದಾಗಿಯೂ ಸುದರ್ಶನ್‌ ಹೇಳಿದ ಮೇಲೆಯೇ ಪ್ರಾರಂಭವಾದದ್ದು ಮಂಜುನಾಥಯ್ಯನವರ ವಿಚಿತ್ರ ಕೋರಿಕೆ.

ಎರಡು ವರ್ಷಗಳಿಂದ ಸತತವಾಗಿ ನೋವನುಭವಿಸುತ್ತಿದ್ದರೂ ಮಂಜುನಾಥಯ್ಯನವರ ವಿಚಾರಶಕ್ತಿ , ಬುದ್ಧಿಶಕ್ತಿಗಳೇನೂ ಕುಂಠಿತವಾಗಿರಲಿಲ್ಲ. ಆ ನೋವಿನಿಂದ ಮೈಮೇಲಿನ ಪ್ರಜ್ಞೆ ತಪ್ಪಿದ್ದರಾದರೂ ಅವರು ಎಷ್ಟೋ ಸುಖಿಯಾಗಿರುತ್ತಿದ್ದರೇನೋ. ಬೆಂಬಿಡದ ಘೋರ ನೋವಿನಿಂದಾಗಿ ಅವರಿಗೆ ನಿದ್ರೆ ಕೂಡಾ ಬರುತ್ತಿರಲಿಲ್ಲ. ಎಷ್ಟೇ ನಿದ್ರಾಕಾರಕಗಳನ್ನು ಕೊಟ್ಟರೂ ಅದರಿಂದ ಫಲವಿರಲಿಲ್ಲ.

ಡಾಕ್ಟರು ನಾಲ್ಕು ದಿನಗಳ ನಂತರ ಡಿಸ್‌ಚಾರ್ಜ್‌ ಮಾಡುತ್ತೇನೆಂದು ಹೇಳಿದಾಗಿನಿಂದ ಅವರ ಚಿಂತೆ ಹೆಚ್ಚಾಗಿತ್ತು. ಮನೆಗೆ ಹೋಗಿ ನಾನು ಏನು ಮಾಡುವುದಿದೆ? ಈ ನೋವಿನ ಬೆಟ್ಟವನ್ನು ಹೊತ್ತು ನಾನು ಅಲ್ಲಿ ಏಕಾಂಗಿಯಾಗಿ ಇರುವುದಾದರೂ ಹೇಗೆ? ಅದರಿಂದ ಲಾಭವಾದರೂ ಏನು? ಎಂದು ಅವರ ಮನಸ್ಸು ರೋದಿಸುತ್ತಿತ್ತು.

ಮನೆಯಲ್ಲಿ ಮಂಜುನಾಥಯ್ಯನವರ ಮೇಲೆ ಯಾರಿಗೂ ತಾತ್ಸಾರ ಮನೋಭಾವವಿರದಿದ್ದರೂ, ಎಲ್ಲರಿಗೂ ಇವರಲ್ಲಿ ಪ್ರೀತಿ, ಕನಿಕರಗಳಿದ್ದರೂ ಎಷ್ಟೆಂದು ಅವರು ಇವರ ಮುಂದೆಯೇ ಕುಳಿತಿರಲು ಸಾಧ್ಯ? ಇವರ ನೋವನ್ನು ಇವರ ಹೊರತಾಗಿ ಮತ್ತೊಬ್ಬರು ಹಂಚಿಕೊಳ್ಳಲಾರರಲ್ಲ! ಚಂದ್ರಮತಿಯೂ ಬಹುಕಾಲದ ರಜೆಯ ನಂತರ ಮತ್ತೆ ತಮ್ಮ ಉದ್ಯೋಗವನ್ನು ಮುಂದುವರೆಸಿದ್ದರು. ಅವರಿಗೇನೂ ಅದರಿಂದ ಬರುವ ಹಣದ ಅಗತ್ಯ ಇರದಿದ್ದರೂ ಮನಸ್ಸಿನ ಕೊರಗನ್ನು ಮರೆಯಲು, ಮನೆಯಿಂದ ಸ್ವಲ್ಪ ಕಾಲವಾದರೂ ಹೊರಗಿರಲು ಅವರಿಗೆ ಆ ಉದ್ಯೋಗ ಒಂದು ಆಸರೆಯಾಗಿತ್ತು.

ಎಲ್ಲರೂ ಅವರವರ ಕೆಲಸ ಕಾರ್ಯಗಳಲ್ಲಿ ನಿರತರಾಗಿದ್ದಾಗ ಮಂಜುನಾಥಯ್ಯ ತಮ್ಮ ವಿಶಾಲವಾದ ಕೋಣೆಯಲ್ಲಿ ಜೀವ ಹಿಂಡುವ ಈ ನೋವಿನ ಸಂಗಾತಿಯಾಡನೆ ನವೆದು ಹೋಗುತ್ತಿದ್ದರು. ಮತ್ತೆ ಮನೆಗೆ ಹೋಗಿ ಆ ಕೋಣೆಯಲ್ಲಿ ಕೊಳೆಯಬೇಕಾದ ಕಲ್ಪನೆಯೇ ಅವರಿಗೆ ನಡುಕ ತರಿಸುತ್ತಿತ್ತು.

ಸುದರ್ಶನ್‌ ಆದಿನ ಬಂದಿದ್ದಾಗ ಆರ್ತರಾಗಿ ಹೇಳಿದ್ದರು ಮಂಜುನಾಥಯ್ಯ-

‘ಡಾಕ್ಟರೇ, ನನ್ನ ಸ್ಥಿತಿ ನೀವೇ ನೋಡ್ತಾ ಇದೀರಾ. ನಾನು ಈ ರೀತಿ ಬದುಕಿರೋದನ್ನು ಬದುಕು ಅಂತೀರಾ? ನಾನು ಈ ಭಯಂಕರ ಯಾತನೆಯನ್ನು ಸಹಿಸಿಕೊಳ್ಳುತ್ತಲೇ ನೂರುವರ್ಷ ಇದ್ದೇಬಿಡ್ತೀನೇನೋ ಅಂತ ನನಗೆ ಭಯವಾಗ್ತಿದೆ. ನನ್ನನ್ನು ಹೇಗಾದರೂ ಮಾಡಿ ಸಾಯಿಸಿಬಿಡಿ ಡಾಕ್ಟರ್‌. ಅದಕ್ಕೆ ಸಂಬಂಧಿಸಿದ ಕಾಗದಪತ್ರಗಳಲ್ಲಿ ನಾನೇ ಸಹಿ ಹಾಕಿ ಕೊಟ್ಟು, ನಿಮಗೆ ಯಾವ ತೊಂದರೆಯೂ ಆಗದ ಹಾಗೆ ವ್ಯವಸ್ಥೆ ಮಾಡ್ತೀನಿ.’ ತಮ್ಮ ಎರಡು ಕೈಗಳನ್ನೂ ಹಿಡಿದು ದೀನರಾಗಿ ಯಾಚಿಸುತ್ತಿರುವ ಮಂಜುನಾಥಯ್ಯನವರನ್ನು ಕಂಡು ಸುದರ್ಶನರ ಕಣ್ಣೂ ಹನಿಗೂಡಿತ್ತು.

ಮಂಜುನಾಥಯ್ಯನವರು ಹೇಳಿದ್ದು ಸರಿಯಾಗಿಯೇ ಇತ್ತು. ಅವರು ಇಷ್ಟು ದಾರುಣವಾದ ಬಾಧೆ ಅನುಭವಿಸುತ್ತಿದ್ದರೂ ಅವರ ಜೀವಕ್ಕೆ ಯಾವುದೇ ರೀತಿಯಲ್ಲಿಯೂ ಧಕ್ಕೆಯಾದಗಿರಲಿಲ್ಲ. ಅವರ ಹೃದಯ, ಶ್ವಾಸಕೋಶಗಳು, ಮೂತ್ರಪಿಂಡಗಳು, ಜೀರ್ಣಾಂಗ ವ್ಯವಸ್ಥೆ ಯಾವುದೇ ಆರೋಗ್ಯವಂತ ವ್ಯಕ್ತಿಯಲ್ಲಿರುವಂತೆಯೇ ಅತ್ಯಂತ ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿದ್ದವು. ಸದ್ಯಕ್ಕೇನೂ ಅವರು ಸಾಯುವಂತಿರಲಿಲ್ಲ. ಮಂಜುನಾಥಯ್ಯನವರು ಭಯಪಟ್ಟಂತೆ ಅವರು ಹಾಸಿಗೆಯ ಮೇಲೆ ಹೀಗೆಯೇ ನವೆಯುತ್ತಾ ಹತ್ತಾರು ವರ್ಷ ಬದುಕುವ ಸಾಧ್ಯತೆಯೇ ಹೆಚ್ಚಾಗಿತ್ತು.

ಆದರೆ ವೈದ್ಯರಾಗಿ ಇದನ್ನೆಲ್ಲಾ ಸುಮ್ಮನೆ ಅಸಹಾಯಕರಾಗಿ ನೋಡುವ ಬದಲು ತಾವಾದರೂ ಏನು ಮಾಡುವ ಹಾಗಿದೆ? ‘ಮರ್ಸಿ ಕಿಲ್ಲಿಂಗ್‌’ಗೆ ವಿದೇಶಗಳಲ್ಲಿ ಅನುಮತಿ ಇರುವ ಹಾಗೆ ನಮ್ಮಲ್ಲೂ ಇರಬಾರದಿತ್ತೇ? ಎಂದು ಮರುಗುವುದರ ಹೊರತಾಗಿ.

ಔಟ್‌ ಪೇಷಂಟ್‌ ವಿಭಾಗದಲ್ಲಿದ್ದ ರೋಗಿಗಳನ್ನೆಲ್ಲ ಪರೀಕ್ಷಿಸಿ ಕಳಿಸಿದ ಮೇಲೆ ವಿಶ್ರಾಂತಿಗೆಂಬಂತೆ ಕಣ್ಣುಗಳನ್ನು ಮುಚ್ಚಿಕೊಂಡು ಮೇಜಿನ ಮೇಲೆ ತಲೆಯೂರಿದ್ದರು ಸುದರ್ಶನ್‌. ಅಷ್ಟರಲ್ಲಿ ಅಲ್ಲಿಗೆ ಬಂದ ಸಿಸ್ಟರ್‌ ಭಾರತಿ-

‘ಡಾಕ್ಟರ್‌, ಎಂಟನೆ ನಂಬರ್‌ ವಾರ್ಡಿನಲ್ಲಿರುವ ಮಂಜುನಾಥಯ್ಯನವರ ಪತ್ನಿ ಚಂದ್ರಮತಿ ನಿಮ್ಮೊಡನೆ ಮಾತನಾಡಬೇಕಂತೆ. ನೀವು ರಿಲ್ಯಾಕ್ಸ್‌ ಮಾಡುವುದಾದರೆ ಅವರಿಗೆ ಆಮೇಲೆ ನೋಡಲು ಹೇಳುತ್ತೇನೆ’ ಎಂದಳು.

‘ಬೇಡ ಈಗಲೇ ಬರಲು ಹೇಳು’ ಎಂದು ಮುಖವನ್ನು ಕರವಸ್ತ್ರದಿಂದ ಒತ್ತಿಕೊಂಡು ಸರಿಯಾಗಿ ಕುಳಿತರು

ಚಂದ್ರಮತಿ ಒಳಬಂದರು. ಈಚೆಗೆ ಗಂಡನ ಅನಾರೋಗ್ಯದಿಂದ ಕಂಗೆಟ್ಟಿದ್ದರೂ ಆಕೆ ಸುಂದರಿಯೆಂದು ಧಾರಾಳವಾಗಿ ಹೇಳಬಹುದಿತ್ತು. ಹೊಂಬಣ್ಣದ ಮೈಕಾಂತಿ, ಎತ್ತರದ ನಿಲುವು, ಮುಖದಲ್ಲಿ ತುಂಬಿತುಳುಕುತ್ತಿದ್ದ ಪ್ರೌಢತೆಯಿಂದ ಅವರು ನೋಡುಗರಲ್ಲಿ ಗೌರವದ ಭಾವ ಮೂಡಿಸುತ್ತಿದ್ದರು. ಚಂದ್ರಮತಿ ಡಾಕ್ಟರರ ಮುಂದಿದ್ದ ಕುರ್ಚಿಯಲ್ಲಿ ಅವರ ಅಪ್ಪಣೆ ಪಡೆದು ಕುಳಿತುಕೊಂಡರು.

‘ಡಾಕ್ಟರೇ, ನನ್ನ ಯಜಮಾನರನ್ನು ಈ ಗುರುವಾರ ಮನೆಗೆ ಕಳಿಸುವುದಾಗಿ ಹೇಳಿದಿರಂತೆ, ಹೌದೇ?’ ಎಂದು ಮಾತಿಗೆ ಪೀಠಿಕೆ ಹಾಕಿದರು ಚಂದ್ರಮತಿ.

‘ಹೌದು, ಅವರು ಈಗ ಮೊದಲಿನಂತೆ ಯಾವುದೇ ಆಹಾರವನ್ನು ಸೇವಿಸಬಹುದು. ಆದರೆ ಅವರ ನೋವು ಮಾತ್ರ ಕಡಿಮೆಯಾಗುವಂತಹದಲ್ಲ. ಅದಕ್ಕೂ ಸಾಕಷ್ಟು ಉಪಶಮನದ ಬೇರೆ ಬೇರೆ ಮಾತ್ರೆಗಳನ್ನು ಬರೆದುಕೊಡುತ್ತೀನಿ. ತೆಗೆದುಕೊಳ್ಳಿ. ನನ್ನನ್ನು ಕ್ಷಮಿಸಿ, ಈ ವಿಷಯದಲ್ಲಿ ಅವರಿಗೆ ನಾನು ಹೆಚ್ಚೇನೂ ಮಾಡಲಾರೆ’ ಎಂದರು ಸುದರ್ಶನ್‌ ತಮ್ಮ ಕನ್ನಡಕವನ್ನು ಸರಿಪಡಿಸಿಕೊಳ್ಳುತ್ತಾ.

‘ಅದೆಲ್ಲ ಸರಿ ಡಾಕ್ಟರ್‌. ಆದರೆ ಅವರು ಈ ವೇದನೆಯಿಂದ ಕ್ಷಣಕ್ಷಣವೂ ಸಾಯುವುದನ್ನು ನನ್ನಿಂದ ನೋಡಲಾಗುವುದಿಲ್ಲ. ನೀವು ಮನಸ್ಸು ಮಾಡಿದರೆ ಅವರನ್ನು ಈ ಯಾತನೆಯಿಂದ ಮುಕ್ತಗೊಳಿಸಬಹುದು’ ಎಂದರು ಕೊಂಚ ತಡವರಿಸುತ್ತಲೇ ಚಂದ್ರಮತಿ.

‘ನಿಮ್ಮ ಮಾತಿನ ಅರ್ಥ?’ ಅರ್ಥವಾದಂತೆಯೇ ಪ್ರಶ್ನಿಸಿದರು ಡಾಕ್ಟರ್‌.

‘ನಿಮಗೆ ತಿಳಿಯದುದು ಇದರಲ್ಲಿ ಏನಿದೆ ಡಾಕ್ಟರೇ? ಅವರನ್ನು ಯಾವುದಾದರೂ ಇಂಜೆಕ್ಷನ್‌ ಕೊಟ್ಟು ಮುಗಿಸಿಬಿಡಿ. ಬದುಕಿನಲ್ಲಂತೂ ಸುಖ ಕಾಣದ ಆ ಜೀವಕ್ಕೆ ಸಾವಿನಿಂದಾದರೂ ನೆಮ್ಮದಿ ದೊರೆಯಲಿ.’

ಚಂದ್ರಮತಿಯ ಮಾತಿನ ಅರ್ಥ ನಿಧಾನವಾಗಿ ಮೆದುಳಿಗೆ ಹೊಳೆದಂತೆ ತಟಕ್ಕನೆ ತಲೆ ಎತ್ತಿ ನೋಡಿದರು ಸುದರ್ಶನ್‌. ಆ ನೋಟದ ಬಿರುಸಿಗೆ ತತ್ತರಿಸಿಹೋದರು ಚಂದ್ರಮತಿ. ಆದರೂ ಭಂಡಧೈರ್ಯದಿಂದ- ‘ನಿಮ್ಮ ಮೇಲೆ ಯಾರಿಗೂ ಅನುಮಾನ ಬರದ ಹಾಗೆ ನಾನು ನೋಡಿಕೊಳ್ತೀನಿ’ ಎಂದರು.

ಸುದರ್ಶನ್‌ ತಮ್ಮ ಕುರ್ಚಿಯಿಂದ ರಭಸವಾಗಿ ಮೇಲೆದ್ದು, ‘ನೀವು ಹೇಳುತ್ತಿರುವುದೇನು ಮಿಸೆಸ್‌ ಮಂಜುನಾಥಯ್ಯನವರೇ ? ಒಂದು ವೇಳೆ ನಾನೇನಾದರೂ ನೀವು ಹೇಳಿದಂತೆ ಮಾಡಿದರೆ ಅದರ ಪರಿಣಾಮವೇನಾಗುತ್ತದೆ ಗೊತ್ತೇ? ಕೊಲೆಯ ಆರೋಪ ಹೊತ್ತು ನಾನು ಜೈಲಿಗೆ ಹೋಗಬೇಕಾಗುತ್ತದೆ. ಇಷ್ಟು ವರ್ಷ ನಾನು ಈ ವೃತ್ತಿಯಲ್ಲಿ ಗಳಿಸಿದ ಘನತೆ, ಗೌರವಗಳೆಲ್ಲಾ ಮಣ್ಣುಪಾಲಾಗಿ ಹೋಗುವುದಷ್ಟೇ ಅಲ್ಲ, ಇದಕ್ಕೆ ಸಂಬಂಧಿಸಿದ ಕಾನೂನು ನನ್ನನ್ನು ಈ ವೃತ್ತಿಯನ್ನೇ ಮುಂದುವರಿಸದಂತೆ ಪ್ರತಿಬಂಧಕ ತರಬಹುದು.’

ಎಂದೂ ಯಾರಿಗೂ ಒರಟಾಗಿ ಮಾತನಾಡದ ಸುದರ್ಶನ್‌ ಚಂದ್ರಮತಿಯ ಮೇಲೆ ಬೆಂಕಿಯ ಮಳೆಯನ್ನೇ ಕರೆದರು. ಒಂದು ನಿಮಿಷ ಸುಮ್ಮನಿದ್ದು-

‘ನನಗೆ ಹೇಳುವ ನೀವೇ ಏಕೆ ಈ ಕೆಲಸ ಮಾಡಬಾರದಿತ್ತು? ಹೇಗೂ ಊರಾಚೆಯ ನಿರ್ಜನ ಪ್ರದೇಶದಲ್ಲಿರುವ ಬಂಗಲೆಯಲ್ಲಿ ನಿಮ್ಮ ಅಧೀನದಲ್ಲೇ ಇರುವ ಮಂಜುನಾಥಯ್ಯನವರಿಗೆ ಕೊಡುವ ಹಾಲಿನಲ್ಲೋ, ನೀರಿನಲ್ಲೋ ವಿಷ ಬೆರೆಸಿ ಕುಡಿಸಿದ್ದರೆ ಅವರ ಕಥೆ ಮುಗಿದೇ ಹೋಗಿರುತ್ತಿತ್ತಲ್ಲಾ?’ ಎಂದರು ವ್ಯಂಗ್ಯವಾಗಿ ವೈದ್ಯರು.

ಕ್ಷಣಕಾಲ ಇಬ್ಬರೂ ಏನೂ ಮಾತನಾಡಲಿಲ್ಲ . ಸುದರ್ಶನರಿಗೆ ತಮ್ಮ ಮಾತು ಅಗತ್ಯಕ್ಕಿಂತ ಹೆಚ್ಚು ಬಿರುಸಾಯಿತು ಅನ್ನಿಸಿತು. ಚಂದ್ರಮತಿಯ ಕಣ್ಣಾಲಿಗಳು ಕಂಬನಿಯ ಕೊಳಗಳಾಗುತ್ತಿರುವುದನ್ನು ಗಮನಿಸಿ ತಮ್ಮನ್ನು ತಾವು ಸಾವರಿಸಿಕೊಂಡು ಸಂತೈಸುವ ದನಿಯಲ್ಲಿ-

‘ಐಯಾಮ್‌ ವೆರಿ ಸ್ಸಾರಿ, ನಿಮ್ಮ ಫೀಲಿಂಗ್ಸ್‌ ನನಗೆ ಅರ್ಥ ಆಗುತ್ತದೆ. ಇಷ್ಟು ವರ್ಷ ಪ್ರೇಮದಿಂದ ಒಡನಾಡಿದ ಪತಿಯನ್ನು ಕೊಲ್ಲುವಂತೆ ಕೇಳಿಕೊಳ್ಳುತ್ತಿರುವ ನಿಮ್ಮ ಮನಸ್ಸು ಅದೆಷ್ಟು ಘಾಸಿಗೊಂಡಿದೆ ಎಂದು ನಾನು ಊಹಿಸಬಲ್ಲೆ’

‘………..’

‘ಆದರೆ ಪ್ರತಿಯಾಂದು ಕೆಲಸಕ್ಕೂ ಒಂದು ನೀತಿ ನಿಯಮವಿರುತ್ತದೆ. ಈ ಕೆಲಸ ನಿಮ್ಮಿಂದ ಹೇಗೆ ಸಾಧ್ಯವಿಲ್ಲವೋ ನನ್ನಿಂದಲೂ ಅದು ಸಾಧ್ಯವಿಲ್ಲ. ನೀವು ವಿಧಿಯನ್ನು ನಂಬುವವರು ಅಲ್ಲವೇ? ಮಂಜುನಾಥಯ್ಯನವರನ್ನು ಅವರ ಹಣೆಯಬರಹಕ್ಕೆ ಬಿಟ್ಟು ಬಿಡಿ. ಅವರ ಮೃತ್ಯು ವಿಧಿ ಬರೆದಂತೆಯೇ ಬರಲಿ. ಅದು ನಮ್ಮಿಂದ ಸಂಭವಿಸುವುದು ಬೇಡ. ನಿಮಗೆ ಈ ಘೋರವನ್ನು ನೋಡಲು ಕಷ್ಟವಾಗಬಹುದು. ಆದರೆ ಇಂತಹ ಕಷ್ಟಗಳು ಬಂದಾಗ ಕಲ್ಲಾಗಿರುವುದೇ ಈ ಜೀವನದ ಮರ್ಮ’ ಎಂದು ನಿಧಾನವಾಗಿ ವೇದಾಂತಿಯಂತೆ ನುಡಿದರು.

ಚಂದ್ರಮತಿ ಸೆರಗಿನಿಂದ ಕಂಬನಿ ಒರೆಸಿಕೊಂಡು- ‘ಬರ್ತೀನಿ ಡಾಕ್ಟರ್‌, ನನ್ನಿಂದ ನಿಮಗೆ ತುಂಬಾ ತೊಂದರೆಯಾಯಿತು, ಮತ್ತೆ ಭೇಟಿಯಾಗೋಣ’ ಎಂದು ಅಲ್ಲಿಂದ ಎದ್ದು ಸರಸರ ನಡೆದು ಕಣ್ಮರೆಯಾದರು.

ರಾತ್ರಿ ಹನ್ನೊಂದು ಹೊಡೆದಿದ್ದರೂ ಭಗವದ್ಗೀತೆಯನ್ನು ಕೈಯಲ್ಲಿ ಹಿಡಿದು ಕೂತಿದ್ದರು ಸುದರ್ಶನ್‌. ಈಚೆಗೆ ಅವರಿಗೆ ಇದೊಂದು ಪ್ರೀತಿಯ ಹವ್ಯಾಸವಾಗಿ ಹೋಗಿತ್ತು. ದಿನದಿನವೂ ತಮ್ಮ ವೃತ್ತಿಕ್ಷೇತ್ರದಲ್ಲಿ ಸಾವುನೋವುಗಳನ್ನು ಧಾರಾಳವಾಗಿ ಕಂಡು ಅಶಾಂತಿಯ ಕುಂಡವಾಗಿ ಹೋಗುತ್ತಿದ್ದ ಅವರ ಹೃದಯಕ್ಕೆ ಗೀತೆ ಅಮೃತಸಿಂಚನ ಮಾಡುತ್ತಿತ್ತು. ಹಾಲಿನ ಲೋಟವನ್ನು ಅವರ ಮುಂದಿನ ಟೀಪಾಯಿಯ ಮೇಲಿಟ್ಟ ಸುದರ್ಶರನ ಪತ್ನಿ ವೈಜಯಂತಿ ಗಂಡನ ಚಿಂತಾಕ್ರಾಂತ ಮುಖವನ್ನು ಕಂಡು ಏನೊಂದೂ ಮಾತಾಡದೆ ಅಲ್ಲಿಂದ ಮೆಲ್ಲನೆ ಸರಿದುಹೋದರು. ಪತಿಯ ಈ ಪರಿ ಆಕೆಗೆ ಹೊಸದೇನಲ್ಲವಲ್ಲ?

ಸುದರ್ಶನರ ಕೈಯಲ್ಲಿ ಪುಸ್ತಕವಿದ್ದರೂ ಅವರ ಮನಸ್ಸು ಮಾತ್ರ ಅದರಲ್ಲಿ ತೊಡಗಿರಲಿಲ್ಲ. ಸುಖದುಃಖಗಳನ್ನು ಸಮಾನವಾಗಿ ಸ್ವೀಕರಿಸಿ ಸ್ಥಿತಪ್ರಜ್ಞನಾಗಿರುವುದು ನನ್ನಂತಹ ಹುಲುಮಾನವನಿಗೆ ಸಾಧ್ಯವಿಲ್ಲವೋ ಪರಮಾತ್ಮ! ಎಂದುಕೊಳ್ಳುತ್ತಾ ಪುಸ್ತಕ ತೆಗೆದಿಟ್ಟರು. ಕಟುವಾದ ನುಡಿಗಳಿಂದ ಚಂದ್ರಮತಿಯ ಕೋರಿಕೆಯನ್ನು ನಿರಾಕರಿಸಿದ್ದರೂ ಅವರ ಮನಸ್ಸು ಅದನ್ನೇ ಮತ್ತೆ ಮತ್ತೆ ಮೆಲುಕು ಹಾಕುತ್ತಿತ್ತು. ಅಲ್ಲ, ಅವರು ಕೇಳಿಕೊಂಡಿದ್ದರಲ್ಲಿ ತಪ್ಪಾದರೂ ಏನಿದೆ? ಒಬ್ಬ ವೈದ್ಯನಾಗಿ ರೋಗಿಯನ್ನು ಸಾವಿನ ದವಡೆಯಿಂದ ಪಾರುಮಾಡುವಂತೆ ಅವನ ನೋವು ದೂರ ಮಾಡುವುದು ಕೂಡ ತನ್ನ ಕರ್ತವ್ಯ [^] ವಾಗಬೇಡವೇ?

ಮಂಜುನಾಥಯ್ಯನವರ ಕಾಯಿಲೆ ವಾಸಿಯಾಗುವಂತಹದಲ್ಲ. ಹಾಗೆಂದು ಮರಣ ಕೂಡ ತನಗೆ ತಿಳಿದಂತೆ ಅವರ ಸನಿಹದಲ್ಲೆಲ್ಲೂ ಸುಳಿದಾಡುತ್ತಿಲ್ಲ. ಹೀಗಿರುವಾಗ ಅವರು ಕೀವು, ಹುಣ್ಣುಗಳ ದುರ್ನಾತದಲ್ಲಿ ಜುಗುಪ್ಸೆ ಅನುಭವಿಸುತ್ತಾ, ದಿನವಿಡೀ ಕಾಡುವ ನೋವಿನೊಡನೆ ಸೆಣೆಸುತ್ತಾ, ತನ್ನನ್ನು ಪ್ರೀತಿಸುವ ಜೀವಗಳೆಲ್ಲವನ್ನೂ ಪ್ರತಿಕ್ಷಣವೂ ವಿಷಾದದಲ್ಲಿ ಮುಳುಗಿಸುತ್ತಾ ಜೀವನವನ್ನು ಹೆಣಭಾರವಾಗಿ ಹೊತ್ತು ತೆವಳುವುದಕ್ಕಿಂತಾ ಮಿಗಿಲಾದ ಹಿಂಸೆ ಬೇರೇನಿದೆ? ಬದುಕಿನ ಕ್ರೌರ್ಯ ಮಡುಗಟ್ಟಿರುವುದೇ ಇಲ್ಲಿ. ನನ್ನ ಒಂದೇ ಒಂದು ಚಿಕ್ಕ ಕ್ರಿಯೆಯಿಂದ ಈ ಎಲ್ಲಾ ನೋವು, ದುಃಖಗಳು ಮಂತ್ರದಂಡ ಸೋಕಿದಂತೆ ಫಕ್ಕನೆ ಮಾಯವಾಗಿ ಹೋಗುವುದೆಂದರೆ? ಅದಕ್ಕಿಂತ ಸಾಧನೆ ಬೇರೇನಿದೆ?

ಚಂದ್ರಮತಿ ತನ್ನ ಶ್ರೀಮಂತಿಕೆಯ ಪ್ರಭಾವದಿಂದ ನನಗೆ ಯಾವ ತೊಂದರೆಯಾಗದಂತೆ ನೋಡಿಕೊಳ್ಳಬಹುದು. ಅಲ್ಲದೆ ಎಷ್ಟೋ ದಿನಗಳಿಂದ ಹಾಸಿಗೆ ಹಿಡಿದು ಮಲಗಿರುವ ಮಂಜುನಾಥಯ್ಯನ ಸಾವು ಯಾರಿಗೂ ಅನುಮಾನ ಕೂಡ ಉಂಟುಮಾಡಲಾರದು. ಒಂದು ವೇಳೆ ಈ ವಿಷಯ ಬಹಿರಂಗವಾದರೆ ತಾನೇ ಏನು?

ನನ್ನನ್ನು ಈ ವೃತ್ತಿಯಿಂದಲೇ ಉಚ್ಚಾಟಿಸಬಹುದು, ಕೆಲವಾರು ವರ್ಷಗಳ ಕಾಲ ಸೆರೆವಾಸ ವಿಧಿಸಲೂಬಹುದು. ಆಗಲಿ, ಒಂದು ನೋಯುತ್ತಿರುವ ಜೀವಕ್ಕೆ ನಿರಂತರವಾದ ನೆಮ್ಮದಿ ನೀಡಿದ ಆತ್ಮಸಂತೋಷದ ಮುಂದೆ ಯಾವುದೇ ಕಷ್ಟ ಕೋಟಲೆಗಳು ಒದಗಿದರೂ ಅವೆಲ್ಲವೂ ಕ್ಷಣಿಕ, ಗೌಣ! ಬಹಳ ಹೊತ್ತು ಚಿಂತಿಸುತ್ತಿದ್ದ ಸುದರ್ಶನರ ಮನಸ್ಸು ಸರಿ ತಪ್ಪುಗಳ ನಡುವೆ ಹೊಯ್ದಾಡುತ್ತಿತ್ತು. ಕೊನೆಗೆ ಅವರ ಚಿತ್ತದಲ್ಲಿ ಯಾವುದೊ ಒಂದು ನಿರ್ಧಾರ ಗಟ್ಟಿಯಾಗಿ ರೂಪಗೊಂಡಿತು. ದೀಪವಾರಿಸಿ ಮಲಗಿಕೊಂಡ ಅವರಿಗೆ ಮರುಕ್ಷಣದಲ್ಲಿಯೇ ನಿದ್ರೆ ಆವರಿಸಿಕೊಂಡಿತು.

***

ಬೆಳಗಿನ ಜಾವ ಐದರ ಸಮಯ. ಸುದರ್ಶನರ ಮಂಚದ ಸಮೀಪವಿದ್ದ ದೂರವಾಣಿ ಎಚ್ಚರಗೊಂಡಿತು. ಸುದರ್ಶನ್‌ ಫೋನ್‌ ಕೈಗೆತ್ತಿಕೊಂಡರು. ರಾತ್ರಿ ತುಂಬಾ ತಡವಾಗಿ ಮಲಗಿದ್ದರಿಂದ ನಿದ್ರೆಯ ಮಂಪರು ಇನ್ನೂ ಅವರ ಕಣ್ಣಿನಲ್ಲಿ ತುಳುಕಾಡುತ್ತಿತ್ತು.

‘ಹಲೋ, ಡಾ. ಸುದರ್ಶನ್‌ ಹಿಯರ್‌, ಏನಾಗಬೇಕಿತ್ತು?’

‘ಡಾಕ್ಟರ್‌, ನಾನು ಹೆಡ್‌ನರ್ಸ್‌ ಪಂಕಜ. ಎಂಟನೆ ನಂಬರ್‌ ವಾರ್ಡಿನಲ್ಲಿದ್ದ ಮಂಜುನಾಥಯ್ಯನವರು ತೀರಿಕೊಂಡಿದ್ದಾರೆ.’

ಸುದರ್ಶನ್‌ ಕಣ್ಣಿನಲ್ಲಿದ್ದ ನಿದ್ರೆಯ ತೆರೆ ಸರಿದುಬಿದ್ದಿತ್ತು.

‘ಪಂಕಜಾ, ಇದು ಹೇಗಾಯಿತು? ಅವರನ್ನು ನಾನು ನಿನ್ನೆ ಸಂಜೆ ನೋಡಿದಾಗ ಸಾಯುವ ಲಕ್ಷಣವೇ ಅವರಲ್ಲಿ ಇರಲಿಲ್ಲವಲ್ಲಾ? ಚೆನ್ನಾಗಿಯೇ ಮಾತನಾಡಿದರು’

‘ಹೌದು ಡಾಕ್ಟರ್‌, ನಾನು ನಿನ್ನೆ ರಾತ್ರಿ ಅವರಿಗೆ ಇಂಜೆಕ್ಷನ್‌, ಮಾತ್ರೆಗಳನ್ನು ಕೊಡಲು ಹೋದಾಗಲೂ ಅಷ್ಟೆ. ನೋವು ಮಾತ್ರ ತುಂಬಾ ಹೆಚ್ಚಾಗಿದ್ದು ನರಳಾಡುತ್ತಿದ್ದರು. ಅವರ ಪತ್ನಿ ಕುಡಿಸಿದ ರವೆಗಂಜಿಯನ್ನು ದಿನಕ್ಕಿಂತ ಸ್ವಲ್ಪ ಹೆಚ್ಚಾಗಿಯೇ ಕುಡಿದರು. ಬೆಳಗ್ಗೆ ನನಗೆ ಅನುಮಾನವಾಗಿ ಡ್ಯೂಟಿ ಡಾಕ್ಟರನ್ನು ಕರೆದುಕೊಂಡು ಬಂದಾಗ ಅವರ ಜೀವ ಹೋಗಿ ಬಹಳ ಕಾಲವಾಗಿತ್ತು.’

ಪಂಕಜ ಒಂದೇ ಉಸಿರಿನಲ್ಲಿ ವಿವರಗಳನ್ನು ನೀಡುತ್ತಿದ್ದರೆ ಸುದರ್ಶನರ ಮನೋವಾರಿಧಿಯಲ್ಲಿ ಅಲ್ಲೋಲ ಕಲ್ಲೋಲ. ಪಂಕಜಳಿಗೆ ಏನು ಹೇಳುವುದೋ ತಿಳಿಯದೆ ಸುಮ್ಮನೆ ಗರಬಡಿದವರಂತೆ ನಿಂತುಬಿಟ್ಟರು.

ಪಂಕಜ ಇತ್ತ ಕಡೆಯಿಂದ ಏನೂ ಪ್ರತಿಕ್ರಿಯೆ ಬಾರದಿರಲು- ‘ಹಲೋ, ಹಲೋ ಡಾಕ್ಟರ್‌, ಲೈನಿನಲ್ಲಿ ಇದೀರಾ ತಾನೇ?’ ಎಂದಳು. ಇವರು ‘ಎಸ್‌ ಹೇಳು’ ಎಂದ ಮೇಲೆ ಮುಂದುವರೆಸಿದಳು.

‘ಡಾಕ್ಟರ್‌, ನನಗೇನೋ ಅನುಮಾನ…..ಈ ಸಾವು…..’ ಎಂದೇನೋ ಹೇಳಹೊರಟವಳ ಮಾತನ್ನು ಅರ್ಧದಲ್ಲಿಯೇ ತುಂಡರಿಸಿ-

‘ಇದರಲ್ಲಿ ಅನುಮಾನ ಪಡೋದೇನಿಲ್ಲ. ಇಂತಹ ಕೇಸ್‌ನಲ್ಲಿ ಸಾವು ಹೇಗೆ ಬೇಕಾದರೂ ಬರಬಹುದು. ನೀನು ಸುಮ್ಮನೆ ಇಲ್ಲದ ಹಗರಣಗಳಿಗೆ ಕಾರಣಳಾಗಬೇಡ…. ನನಗಾಗಿ ಕಾಯದೆ ಮನೆಯವರಿಗೆ ಡೆಡ್‌ಬಾಡೀನ ಒಪ್ಪಿಸಿಬಿಡಿ. ನಾನು ಇವತ್ತು ನರ್ಸಿಂಗ್‌ಹೋಮಿಗೆ ಬರಲು ಸಾಧ್ಯವಾಗುತ್ತದೆಯೋ ಇಲ್ಲವೊ. ಈ ವಿಷಯವನ್ನು ಡಾ. ಸುವ್ರತ್‌ ರಾವ್‌ಗೂ ತಿಳಿಸಿಬಿಡು’ ಎಂದು ಫೋನ್‌ ಕೆಳಗಿಟ್ಟುಬಿಟ್ಟರು. ಅವರ ಮನದ ಗೊಂದಲಗಳನ್ನು, ತಲ್ಲಣಗಳನ್ನು ಅರಿತವನಂತೆ ಗೋಡೆಯ ಮೇಲಿದ್ದ ಚಿತ್ರಪಟದಲ್ಲಿ ಅರ್ಜುನನಿಗೆ ಗೀತೋಪದೇಶ ಮಾಡುತ್ತಿದ್ದ ಯೋಗೀಶ್ವರ ಕೃಷ್ಣ ಮಂದಹಾಸ ಬೀರುತ್ತಿದ್ದ !

* ತ್ರಿವೇಣಿ

ಬಕಾಸುರನ ಸಂತೃಪ್ತಿ; ನೀತಿ ಕತೆ : Glutton | Moral Story

ಒಂದು ಉರಿನಲ್ಲಿ ಒಬ್ಬ ಯುವಕನಿದ್ದ. ಅವನಿಗೆ ಅಗಾಧವಾದ ಹಸಿವಿನ ರೋಗವಿತ್ತು. ಎಷ್ಟು ತಿಂದರೂ ತೃಪ್ತಿ ಇಲ್ಲ. ತಳವಿಲ್ಲದ ಬಾವಿಯಂತಹ ಹೊಟ್ಟೆ, ಎಷ್ಟು ತಿಂದರೂ ಇಂಗದ ಹಸಿವು! ಮನೆ ಮದ್ದಾಯಿತು, ಆಲೋಪತಿ, ಹೋಮಿಯೋಪತಿ, ನಾಟಿ ಔಷಧಿ ಎಲ್ಲಾ ಪ್ರಯತ್ನಿಸಿದರು, ಹಲವು ದೇವರಿಗೆ ಹರಕೆ ಹೊತ್ತರು. ಯಾವುದೂ ಫಲ ನೀಡಲಿಲ್ಲ. ಅವನಿಗೆ ಆಹಾರ ಹೊಂದಿಸುವುದೇ ಒಂದು ಸಮಸ್ಯೆಯಾಯಿತು. ಕೊನೆಗೆ ಅವನ ತಂದೆ ತಾಯಿ, ಅವನ ಬಂಧು ಬಳಗ ಎಲ್ಲಾ ಕೈ ಚೆಲ್ಲಿದರು!

ಈಗಿನ ಕಾಲದವರಂತಲ್ಲ, ಆಗಿನ ಕಾಲದ ಜನ. ಅವನ ಊರಿನವರು ಯುವಕನ ಕುಟುಂಬಕ್ಕೆ ತುಂಬಾ ಸಹಾಯ ಮಾಡಿದರು. ಕೊನೆಕೊನೆಗೆ ಇದು ಊರಿನವಗೂ ಸಮಸ್ಯೆಗಯಾಗತೊಡಗಿತು. ಇಡಡೀ ಊರಿನಲ್ಲಿ ಆಹಾರದ ಕೊರತೆ ಕಂಡುಬಂತು. ಊರವರು ಅಸಮಧಾನ ಸೂಚಿಸುವ ಮೊದಲೇ ಅವನ ತಂದೆತಾಯಿ ಅವನನ್ನು ಊರಿಂದ ಹೊರಕಳಿಸುವ ವಿಚಾರ ಮಾಡಿದರು. ಎಲ್ಲೋ ದೂರದ ಆಶಾಭಾವನೆ ಮತ್ತು ಕರುಳಿನ ಸಂಕಟ ಇಷ್ಟು ದಿನ ಅವರನ್ನು ತಡೆಯುತಿತ್ತು. ಆದರೆ ಆಹಾರದ ಕೊರತೆ ಇಡೀ ಊರನ್ನೇ ವ್ಯಾಪಿಸಿದಾಗ ಅವರು ಗಟ್ಟಿ ನಿರ್ಧಾರ ತೆಗೆದುಕೊಳ್ಳಲೇ ಬೇಕಾಯಿತು.

ದೇವರ ದಯೆಯೋ ಅವರ ಪೂರ್ವ ಜನ್ಮದ ಪುಣ್ಯವೋ, ಸಮಯಕ್ಕೆ ಸರಿಯಾಗಿ ಆ ಊರಿಗೆ ಒಬ್ಬ ಸನ್ಯಾಸಿಯ ಅಗಮನವಾಯಿತು. ಅವರ ಸಾಧನೆ ಸಾರ್ಮಥ್ಯದ ಬಗ್ಗೆ, ಅವರಿಗಿರುವ ವಿಶೇಷ ಶಕ್ತಿ ಬಗ್ಗೆ ಅನೇಕ ದಂತಕತೆಗಳಿದ್ದವು. ಕೊನೆಯ ಪ್ರಯತ್ನವೆಂಬಂತೆ ಯುವಕನ ತಂದೆತಾಯಿ ಸನ್ಯಾಸಿಯ ಹತ್ತಿರ ಯುವಕನ ಸಮಸ್ಯೆಯನ್ನು ನಿವೇದಿಸಿಕೊಂಡರು.

ಸಮಸ್ಯೆಯನ್ನು ಆಲಿಸಿದ ಸನ್ಯಾಸಿ ಸಾವಧಾನದಿಂದ ಹೀಗೆಂದರು: “ಚಿಂತಿಸಬೇಡಿ, ಪರಿಹಾರವಿದೆ! ಈ ಯುವಕ ಇನ್ನು ಜೀವನ ಪೂರ್ತಿ ಒಬ್ಬನೆ ಕುಳಿತು ತಿನ್ನುವ ಹಾಗಿಲ್ಲ. ಪ್ರತಿಸಾರಿ ಊಟಕ್ಕೆ ಕುಳಿತಾಗ ನಾಲ್ಕು ಜನರೊಂದಿಗೆ ಹಂಚಿ ತಿನ್ನಬೇಕು. ಈ ನಿಯಮ ತಪ್ಪಿಸಿದರೆ ಮತ್ತೆ ಅಗಾಧವಾದ ಹಸಿವಿನ ರೋಗಕ್ಕೆ ಬಲಿಯಾಗುವ ಸಾಧ್ಯತೆಯಿದೆ.”

ಸನ್ಯಾಸಿ ತೋರಿದ ಪರಿಹಾರದ ಬಗ್ಗೆ ಅನುಮಾನವಿದ್ದರೂ, ವಿಚಿತ್ರವೆನಿಸಿದರೂ, ಕೊನೆ ಪ್ರಯತ್ನವಾಗಿ ಅವರ ಸಲಹೆಯನ್ನು ಪಾಲಿಸಿತೊಡಗಿದರು. ಯುವಕನೂ ಸನ್ಯಾಸಿಗಳು ಹೇಳಿದ ಹಾಗೆ ಮಾಡಲು ತೊಡಗಿದ. ಆಶ್ಚರ್ಯವೆಂಬಂತೆ ಯುವಕನ ಅಗಾಧವಾದ ಹಸಿವಿನ ರೋಗ ಪರಿಹಾರವಾಯಿತು. ಯುವಕ ಸ್ವಲ್ಪವೇ ತಿಂದರೂ ಸಂತೃಪ್ತಿಯನ್ನು ಅನುಭವಿಸಿದ.

ಊರಿನವರೆಲ್ಲ ಹರ್ಷದಿಂದ ಸನ್ಯಾಸಿಯನ್ನು ಕೊಂಡಾಡಿದರು. ತಮ್ಮ ಆಶೀರ್ವಾದ ವಚನ ಸಭೆಯಲ್ಲಿ ಸನ್ಯಾಸಿಗಳು ಹೀಗೆ ಹೇಳಿದರು “ಅತಿ ಶ್ರೀಮಂತಿಕೆಯ ಅಥವಾ ಅತಿ ಹಣದಾಹವಿರುವವರು ಕೂಡ ಈ ಪರಿಹಾರವನ್ನು ಬಳಸಿ ಜೀವನದಲ್ಲಿ ಸಂತೃಪ್ತಿ ಹೊಂದಬಹುದು!” ಆ ಹೊತ್ತಿಗೆ ಕಾರ್ಲ್ ಮಾಕ್ಸ್ ಇನ್ನೂ ಹುಟ್ಟಿರಲಿಲ್ಲ.

 

* ವಿದ್ಯಾಶಂಕರ, ಹರಪನಹಳ್ಳಿ

ಒಬ್ಬನೇ ಕೂತು ಎಣ್ಣೆ ಹಾಕೋವಾಗ ಹೊಳೆದ ಕಥೆ

ಅವನಿಗೆ ಮೂವತ್ನಾಲ್ಕು ವರ್ಷ. ಮದುವೆಯಾಗಿ ಎಂಟು ವರ್ಷ ಆಗಿದೆ. ಒಂದು ಮಗುವೂ ಇದೆ. ದೊಡ್ಡ ಕೆಲಸ.. ಅವನ ಡ್ರೈವರ್‌ಗೇ ತಿಂಗಳಿಗೆ ಏಳು ಸಾವಿರ ಸಂಬಳ ಅಂದ್ರೆ ಇನ್ನು ನೀವೇ ಲೆಕ್ಕ ಹಾಕಿ. ಅವನ ಹೆಸರು ಹೇಳಲು ಮರೆತೆ.. ‘ಜಾಣ’, ಎಲ್ಲ ಗಂಡಸರಂತೆ.

***

ಜಾಣ ಒಂದು ದಿನ ಬೆಳಿಗ್ಗೆ ಏಳ್ತಾನೆ. ಎದ್ದು ನೋಡ್ತಾನೆ.. ಮುಖ ಒಣಗಿ ಹೋದ ಬದನೇಕಾಯಿಯಂತಾಗುತ್ತದೆ.. ಅವನು ನೋಡಿದ್ದು ಅವನ ಹೆಂಡತಿಯನ್ನ.. ರಾತ್ರಿ ಮಲಗಿದಾಗ ಕತ್ತಲಿದ್ದುದರಿಂದ ಬಹುಶಃ ಅವಳು ಸುಂದರವಾಗಿ ಗೋಚರಿಸಿರಬೇಕು.. ಅಥವಾ ತನ್ನ ಆ ಹೊತ್ತಿನ ಅವಶ್ಯಕತೆಗೆ ಹಾಗೆ ತನ್ನ ಕಣ್ಣಿಗೆ ಕಂಡಳೇನೋ.. ಈಗ ನೋಡಿದರೆ ಕೆದರಿರೋ ಕೂದಲು.. ಬಾಯಿವಾಸನೆ.. ಗೀಜು.. ಬೆವರು ನಾತ.. ಮುಖ ಸಿಂಡರಿಸಿಕೊಳ್ತಾನೆ ಜಾಣ. ಅವನಿಗೆ ನಗು ಬರುತ್ತದೆ. ಏನಪ್ಪಾ ದೇವರೇ ನಿನ್ನ ಲೀಲೆ.. ಈ ಕೊಳಕಿಯ ಜೊತೆಯಲ್ಲಾ ರಾತ್ರಿ ನಾನು ಮಲಗಿದ್ದು.. ನಿದ್ದೆ ಮಾಡ್ತಿದ್ದಾಗ ವಾಸನೆ ಯಾಕೆ ಗೊತ್ತಾಗಲ್ಲ..? ತನಗೆ ದಿನಂಪ್ರತಿ ಕನಸಿನಲ್ಲಿ ಬೀಳ್ತಿದ್ದ ಛತ್ರದ ಪಕ್ಕದ ಕೊಳೆ ತೊಟ್ಟಿಗೂ ಇವಳ ಗಬ್ಬಿಗೂ ಏನಾದ್ರೂ ಸಂಬಂಧ ಇರಬಹುದಾ..?

***

ಟವಲು ಸುತ್ತಿಕೊಂಡು ರೂಮಿನಿಂದ ಹೊರಬರುತ್ತಿರುವ ಜಾಣ ಕಣ್ಣಿನ ಗೀಜನ್ನು ಬೆರಳುಗಳಲ್ಲಿ ಪುಡಿಮಾಡುತ್ತಾ ಪಕ್ಕದಲ್ಲೇ ಇರೋ ದೇವರ ಕೋಣೆಯನ್ನು ಹಾದು ಹೋಗುವಾಗ ಅವನಿಗೆ ಇವತ್ತು ಏನೋ ತೋಚಿದಂತಾಗಿ ದೇವರ ಕೋಣೆಯ ಮುಂದೆ ಅರೆಕ್ಷಣ ನಿಲ್ತಾನೆ.. ಅಲ್ಲಿಂದಲೇ ರೂಮಿನಲ್ಲಿ ಅಸ್ತವ್ಯಸ್ತವಾಗಿ ಮಲಗಿರೋ ಹೆಂಡತಿಯ ಕಡೆ ಒಮ್ಮೆ ನೋಡಿ ಇನ್ನು ಸಾಧ್ಯವೇ ಇಲ್ಲಾ ಎನ್ನುವಂತೆ ದೇವರ ಕಡೆ ತಿರುಗಿ ಕೈ ಮುಗಿದು ಕೊಂಡು ಪ್ರಾರ್ಥಿಸಲಾರಂಭಿಸುತ್ತಾನೆ.

***

ಅಯ್ಯಾ.. ಭಗವಂತ.. ನಂಗೊಂದು ಸಹಾಯ ಮಾಡ್ತೀಯಾ.. ಮಾಡ್ತೀನಿ ಅಂದ್ರೆ ಹೇಳ್ತೀನಿ.. ದಿನಾ ಒಂದೇ ಮುಖವಾ.. ನನಗೆ ಸಾಕಾಗಿ ಹೋಗಿದೆ.. ದಿನಾ ನಾನು ಕೆಲಸದಿಂದ ಬರುವಷ್ಟರಲ್ಲಿ ನನ್ನ ಹೆಂಡತಿ ಬೇರೆ ಮುಖದಲ್ಲೇ ಇದ್ದರೆ ಹೇಗಿರ್ತಿತ್ತು..? ರಾತ್ರಿ ಮಲಗುವಾಗ ಒಂದು ಮುಖ.. ಬೆಳಿಗ್ಗೆ ಎದ್ದಾಗ ಬೇರೆಯೇ ಮುಖ.. ಡಬಲ್ ಧಮಾಕ.. ಇದೊಂದು ವರ ನನಗೆ ಕೊಡು.. ತುಂಬಾ ದಿನದಿಂದ ಕೇಳಬೇಕು ಅಂತಿದ್ದೆ.. ಇವತ್ತು ಕಾಲ ಕೂಡಿ ಬಂದಿದೆ ಅನ್ಸುತ್ತೆ.. ಯೋಚನೆ ಮಾಡು.. ನಾನು ಸ್ನಾನ ಮುಗಿಸಿ ಬರ್ತೀನಿ.. ಏನಂತೀ..? ಜಾಣ ಸ್ನಾನಕ್ಕೆ ಹೊರಡ್ತಾನೆ. ಮತ್ತೆ ತನ್ನ ರೂಮಿನೆಡೆಗೆ ನೋಡುವ ಧೈರ್ಯವನ್ನೂ ಮಾಡಲ್ಲ..

***

‘ಸಾರ್.. ಇವತ್ತು ಮಧ್ಯಾಹ್ನ ಹನ್ನೆರಡಕ್ಕೆ ನಿಮ್ಮ ಮಿಸಸ್ ಅವ್ರು ಬ್ಯೂಟಿ ಪಾರ್ಲರ್‌ಗೆ ಡ್ರಾಪ್ ಮಾಡು ಅಂತಿದ್ರು.. ನಿಮ್ಮ ಪ್ರೋಗ್ರಾಮ್ ಏನು ಸಾರ್…?’ ಜಾಣನನ್ನು ಡ್ರೈವರ್ ಕೇಳ್ತಾನೆ.. ಕಾರ್ ಚಲಿಸುತ್ತಿದೆ. ಲ್ಯಾಪ್ ಟಾಪ್‌ನಲ್ಲಿ ಮುಳುಗಿ ಹೋಗಿದ್ದ ಜಾಣ ‘ರಾಷ್ಟ್ರಪತಿಗಳ ಜೊತೆ ಮೀಟಿಂಗ್ ಇದ್ರೂ ನಾನು ಆಟೋದಲ್ಲಿ ಹೋಗ್ತೀನಿ, ಮೊದಲು ಅವಳನ್ನ.. ಐ ಮೀನ್ ಮೇಡಂನ ಬ್ಯೂಟಿ ಪಾರ್ಲರ್‌ಗೆ ಕರ್ಕೊಂಡ್ ಹೋಗಿ ಬಿಡು..’

‘ಆಯ್ತು ಸಾರ್..’

***

ಜಾಣನಿಗೆ ಅವತ್ತು ಆಫೀಸ್‌ನಲ್ಲಿ ಅಂಥ ತಲೆ ಹೋಗೋ ಕೆಲಸ ಏನೂ ಇರಲಿಲ್ಲ.. ತನ್ನ ಸೆಕ್ರೆಟರಿ ಬಂದು ಬೇಕಾದ ಫೈಲ್ಸ್‌ಗೆ ತನ್ನ ಸಹಿ ತೊಗೊಂಡು ಹೋದ ನಂತರ ಆತ ಯೋಚಿಸಲಾರಂಭಿಸುತ್ತಾನೆ. ಈ ಸೆಕ್ರೆಟರಿ ಎಷ್ಟು ಅದ್ಭುತವಾಗಿದಾಳೆ.. ಇವಳಿಗೆ ಬರ್ತಿರೋ ಸಂಬಳಕ್ಕೆ ನಾಲ್ಕು ಪಟ್ಟು ಸಂಬಳ ಕೊಡ್ತೀನಿ ನನ್ನ ಹೆಂಡತಿ ಕೆಲಸ ಮಾಡು ಅಂದ್ರೆ ಇವಳು ಏನು ಅನ್ನಬಹುದು..? ನಾನು ಯಾವ ಹೊತ್ತಿನಲ್ಲಿ ನಿನ್ನ ನೋಡಿದ್ರೂ ನೀನು ಅದ್ಭುತವಾಗಿ ನನಗೆ ಕಾಣಬೇಕು ಅನ್ನೋ ಶರತ್ತೂ ಹಾಕಬೇಕು.. ಆದ್‌ಹಂಗೆ ಆಗಿಬಿಡಲಿ ಇವತ್ತು ಕೇಳೇ ಬಿಡ್ತೀನಿ.. ಇಂಟರ್‌ಕಾಮನಲ್ಲಿ ಅವಳನ್ನು ಕರೆದೇ ಬಿಡ್ತಾನೆ ಜಾಣ..

***

ಸಾರ್.. ಕರೆದ್ರೀ..?

ನೀನು ಈಗ ಇಲ್ಲಿ ಬರೋ ಮುಂಚೆ ಲಿಪ್‌ಸ್ಟಿಕ್ ಹಾಕ್ಕೊಂಡ್ ಬಂದ್ಯಾ..?

ಹೌದು ಸಾರ್.. ಯಾಕೆ.. ಕೇಳ್ತಿದ್ದೀರಿ..?

ನಾನು ಮಾತಾಡ್ತೀನಿ.. ನೀನು ಬರ್ಕೋತೀ.. ನಿನ್ನ ತುಟಿಗಳಿಗೆ ಹಾಗೆ ನೋಡಿದ್ರೆ ಕೆಲಸವೇ ಇಲ್ಲ.. ಮತ್ಯಾಕೆ.. ಲಿಪ್‌ಸ್ಟಿಕ್..?

ಹಲೋ.. ಹೇಳಿ ಸಾರ್..

ಏನಿಲ್ಲಮ್ಮಾ.. ಅಕೌಂಟ್ ಸೆಕ್ಷನ್‌ಗೆ ಮಾಡೋಕೆ ಹೋದೆ ನಿಂಗೆ ಬಂತಾ..? ಸಾರಿ..

***

‘ಊಟ ಬಂತಾ..?’ ಬ್ರೇಕ್‌ನಲ್ಲಿ ಹೆಂಡತಿ ಫೋನ್..

‘ಬ್ಯೂಟಿ ಪಾರ್ಲರ್‌ಗೆ ಹೋಗಿದ್ಯಾ..?’

‘ಇಲ್ಲ.. ಇವತ್ತು ಯಾಕೋ ಹೊಟ್ಟೆ ಸರೀ ಇರ್ಲಿಲ್ಲಾ.. ತುಂಬಾ ಗ್ಯಾಸ್‌ಉ.. ಅದಕ್ಕೆ ಹೋಗ್ಲಿಲ್ಲಾ..’

ನೆನ್ನೆಯ ಕೊಳೆಯ ತೊಟ್ಟಿ ಇವತ್ತು ನಾರಬಹುದೇನೋ.. ‘ಅದ್ಭುತ.. ಆರೋಗ್ಯ ಹುಷಾರು.. ಟೇಕ್ ಕೇರ್.. ಓಕೇ.. ಬಾಯ್..’

‘ಒಂದ್ನಿಂಷ.. ಬರುವಾಗ ಕ್ರ್ಯಾಕ್ ತೊಗೊಂಡ್ ಬನ್ನಿ.. ಕಾಲು ಒಡೆದು ಸಾಲ್ಟ್ ಪೇಪರ್ ಥರಾ ಆಗಿ ಹೋಗಿದೆ.. ಮರೀಬೇಡೀ..’

‘ನಿನ್ನನ್ನು ಮರೆತು ಬಿಟ್ಟೇನು.. ಅದನ್ನ ಮರೀತೀನ್ಯೇ..? ಖಂಡಿತಾಮ್ಮಾ.. ಬಾಯ್..’

***

ಜಾಣನಿಗೆ ಇವತ್ತು ಯಾಕೋ ಕ್ಲಬ್‌ಗೆ ಹೋಗಬೇಕು ಅಂತ ಅನ್ನಿಸ್ತಿಲ್ಲ.. ಸೀದಾ ಮನೆಗೆ ಹೋಗಿ ಬಿಡೋಣಾ ಅಂತ ಅಂದ್ಕೋತಾನೆ. ಹೆಂಡತಿ ನೆನಪಾಗ್ತಾಳೆ. ಒಂದಿಷ್ಟು ಫೈಲ್ಸ್ ತೊಗೊಂಡು ಹೋಗಬೇಕು.. ಅದರಲ್ಲಿ ಮುಳುಗಿ ಹೋದರೆ ಬಚಾವ್.. ಸಾಧ್ಯವಾದರೆ ವೀಡಿಯೋ ಪಾರ್ಲರ್‌ನಲ್ಲಿ ಯಾವುದಾದ್ರೂ ರೊಮ್ಯಾಂಟಿಕ್ ಸಿನಿಮಾ ಇಸ್ಕೋಬೇಕು.. ಮನೇಲೇ ಕೂತು ಎರಡು ಪೆಗ್ ಹಾಕ್ತಾ ಸಿನೆಮಾ ನೋಡಬೇಕು.. ಜಾಣ ಡ್ರೈವರ್‌ಗೆ ಕಾರ್ ತೆಗೆಯಲು ಹೇಳ್ತಾನೆ.

***

ಜಾಣ ಕಾಲಿಂಗ್ ಬೆಲ್ ಒತ್ತುತ್ತಾನೆ.. ಬಾಗಿಲನ್ನು ಹೆಂಡತಿ ತೆಗೆಯುತ್ತಾಳೆ.

ಹೆಂಡತಿ ಥೇಟ್ ಚಿತ್ರನಟಿ ರಮ್ಯನ ಥರಾ ಕಾಣ್ತಿದ್ದಾಳೆ.. ಅವಳು ಹಾಕಿರೋ ಪರ್‌ಫ್ಯೂಮ್ ಅವನನ್ನ ಹುಚ್ಚನನ್ನಾಗಿಸುತ್ತದೆ.. ಆಗ ತಾನೇ ಸ್ನಾನ ಮಾಡಿದ್ದಾಳೆ, ಜಾಣೆ. ಕಾಲಿನಿಂದ ತಲೆಯವರೆಗಿನ ಅಣು ಅಣುವಿನಲ್ಲೂ ಆಹ್ವಾನ ಕೊಡ್ತಿದಾಳೆ..

‘ನೀವು ಇವತ್ತು ಕ್ಲಬ್‌ಗೆ ಹೋಗಲ್ಲಾಂತ ನನಗೆ ಗೊತ್ತಿತ್ತು..’ ಮಾದಕ ಧ್ವನಿಯಲ್ಲಿ ಹೇಳ್ತಾಳೆ ಜಾಣೆ.

‘ಹೇಗೆ.. ಗೊತ್ತಿತ್ತು..?’

ಅವಳ ಮುಖವನ್ನು ಅವನ ಮುಖಕ್ಕೆ ತಂದು ಅವನ ತುಟಿಯನ್ನು ಮುದ್ದಾಗಿ ಕಚ್ಚಿ ..’ಹೀಗೆ..’ ಹಾಗೆ ಮುದ್ದಿಸುತ್ತಲೇ ಅವನನ್ನು ಸ್ನಾನದ ಮನೆಗೆ ತಲುಪಿಸುತ್ತಾಳೆ. ಕಣ್ಣಲ್ಲಿ ಬೇಗ ಸ್ನಾನ ಮುಗಿಸಿ ಬಾ, ಸ್ವರ್ಗದ ಅಡ್ರೆಸ್ ಗೊತ್ತಾಗಿದೆ.. ನಿನ್ನ ಕರ್‍ಕೊಂಡು ಹೋಗಿ ಹಾಗೇ ನಾಲ್ಕು ಸುತ್ತು ಹಾಕಿಸಿಕೊಂಡು ಬರ್ತೀನಿ ಅನ್ನೋ ಇನ್ವಿಟೇಷನ್ ಕಾರ್ಡ್ ತಲುಪಿಸುತ್ತಾಳೆ.. ಜಾಣನಿಗೆ ಮಹದಾನಂದ.. ತಾನು ಮುಂದೆ ಮಾಡಬಹುದಾದ ಎಲ್ಲವನ್ನೂ ನೆನೆನೆನೆಸಿ ಕೊಂಡು.. ಕಾಮ ವಾಸ್ತವಕ್ಕಿಂತ ಕಲ್ಪನೆಯಲ್ಲಿ ಹೆಚ್ಚು ಚೆನ್ನಾಗಿರುತ್ತಂತೆ.. ಕಲ್ಪನೆಗೆ ಕಾಲದ ಮಿತಿಯಿಲ್ಲದ ಕಾರಣ..

***

ಜಾಣ ಸ್ನಾನ ಮಾಡ್ತಿದ್ದಾನೆ.. ದೇವರೇ ಬೆಳಿಗ್ಗೆ ಕೇಳಿದ ವರವನ್ನು ಏನು ಅದ್ಭುತವಾಗಿ ಕರುಣಿಸಿದ್ದೀಯಪ್ಪಾ.. ತುಂಬಾ ಥ್ಯಾಂಕ್ಸ್.. ಭಗವಂತಾ.. ನೀನು ಕೊಟ್ಟ ವರವನ್ನು ತುಂಬಾ ಸಮರ್ಥವಾಗಿ ದುಡಿಸಿಕೊಳ್ತೇನೆ.. ನೊ ಟೈಂ ವೇಸ್ಟ್.. ಅಂದ ಹಾಗೆ ಭಗವಂತಾ.. ಒಂದು ಪ್ರಶ್ನೆ.. ನಾಳೆ ನನ್ನ ಹೆಂಡತಿಯ ಮುಖ ಯಾರಂತಿರಬಹುದು.. ಮಾಹಿತಿ ಇಂಟರ್‌ನೆಟ್‌ನಲ್ಲಿ ಸಿಗಬಹುದಾ..? ತುಂಬಾ ವರ್ಷದಿಂದ ಮಾಧುರಿ ದೀಕ್ಷಿತ್ ಕಾಡ್ತಿದ್ದಾಳೆ.. ಅದೊಂದು ವ್ಯವಸ್ಥೆ ಮಾಡು.. ನಿನಗೆ ಪುಣ್ಯ ಬರುತ್ತೆ..

***

ಅವನ ಎಂಟು ವರ್ಷದ ದಾಂಪತ್ಯ ಜೀವನದಲ್ಲಿ ಅವನ ಹೆಂಡತಿ ಅವನಿಗೆ ಅಷ್ಟು ಅದ್ಭುತವಾಗಿ ಸ್ಪಂದಿಸಿರುವುದೇ ಇಲ್ಲ.. ಜಾಣ, ಮ್ಯಾನೇಜರ್ ಆದ ನಂತರ ಓ.ಟಿ ಮಾಡೇ ಇಲ್ಲ.. ಇವತ್ತು ಮಾಡ್ತಾನೆ.. ಅದ್ಭುತವಾಗಿ.. ಓ.ಟಿ. ರಾತ್ರಿಯೆಲ್ಲಾ..!

***

ಕಳೆದ ಹದಿನಾಲ್ಕು ದಿನದಿಂದ ಅವನ ಆನಂದಕ್ಕೆ ಪಾರವೇ ಇಲ್ಲ.. ಹೆಂಡತಿಯಲ್ಲಿ ದಿನವೂ ಬೇರೆ ಬೇರೆ ಮುಖಗಳು.. ಇನ್ನೇನು ಬೇಕು ಗಂಡಸಿಗೆ..? ಇವತ್ತು ಹೆಂಡತಿ ಬೇಗ ಬರುವಂತೆ ಹೇಳಿದ್ದಾಳೆ. ಏನು ಕಾದಿದೆಯೋ..? ಅವಳು ಕಳಿಸಿದ್ದ ಊಟ ಇತ್ತೀಚೆಗೆ ತುಂಬಾ ರುಚಿಸುತ್ತಿದೆ.. ಯಾಕೋ..?

***

ಗಂಡ ಹೆಂಡತಿ ಹೊರಗೆ ಬಂದಿದ್ದಾರೆ.. ಇವನನ್ನು ಒಂದು ಪ್ರಶ್ನೆ ತುಂಬಾ ಕಾಡ್ತಿದೆ.. ತನ್ನ ಹೆಂಡತಿಯ ಮುಖ ಬದಲಾಗುತ್ತಿರುವುದು ತನಗೆ ಮಾತ್ರ ಗೋಚರಿಸುತ್ತಿದೆಯೋ.. ಅಥವಾ ಅದು ಅವಳಿಗೂ ಗೊತ್ತಿದೆಯೋ..? ಬಹುಶಃ ಗೊತ್ತಿರಲಾರದು.. ಗೊತ್ತಾಗಿದ್ದಿದ್ರೆ ಇಷ್ಟು ಹೊತ್ತಿಗೆ ಪ್ರಸ್ತಾಪ ಮಾಡಿರ್‍ತಿದ್ಳು.. ಮಗಳಾದ್ರೂ ಗುರುತಿಸುತ್ತಿದ್ಳಲ್ಲಾ..?

***

ಕಾರ್ ನಿಲ್ಲಿಸಿ ಮುಚ್ಚಿರೋ ಅಂಗಡಿಯ ಮುಂದಿನ ಮೆಟ್ಟಿಲ ಮೇಲೆ ಇಬ್ಬರೂ ಕೂತಿದ್ದಾರೆ.. ಚುರುಮುರಿ ತಿನ್ನುತ್ತಾ..

‘ನಾನು ನಿನಗೆ ಒಂದು ಹೇಳಬೇಕು..’

‘ಒಂದಲ್ಲಾ.. ಹತ್ತು ಹೇಳಿ.. ಅಂಗಡಿಯೋರು ಬೆಳಿಗ್ಗೆವರ್‍ಗೂ ಬಾಗಿಲೇನೂ ತೆಗೆಯಲ್ಲಾ..’

‘ಒಂದಿನ ನಾನು ದೇವರನ್ನ ಕೇಳ್ಕೊಂಡೆ.. ನಂಗೊಂದು ವರ ಬೇಕೂಂತ.. ಅದನ್ನು ಅವನು ಕೊಟ್ಟ.. ಕ್ಯಾನ್ ಯು ಬಿಲೀವ್ ಇಟ್..? ಅದಕ್ಕೆ ನಾನು ಈ ಹದಿನೈದು ದಿನದಿಂದ ಆನಂದವಾಗಿರೋದು..’

ಅವಳು.. ‘ಅದಾ.. ನಾನು ಈ ವಿಚಾರ ನಿಮ್ಮ ಹತ್ರ ಮಾತಾಡಬೇಕೂ ಅಂತಿದ್ದೆ.. ಇವತ್ತು ಟೈಂ ಬಂತು.. ನಾನು ಈ ಹದಿನೈದು ದಿನಗಳಿಂದ ತುಂಬಾ ಆನಂದವಾಗಿರೋದಕ್ಕೂ ಅದೇ ಕಾರಣ.. ನೀವು ದಿನಾ ಬೇರೆ ಬೇರೆ ಮುಖದಲ್ಲಿ ಮನೆಗೆ ಬರೋದು.. ಮೊದಲ ದಿನ ನಿಮ್ಮ ಸ್ನೇಹಿತ ಶೇಖರ್ ಥರಾ ಬಂದ್ರಲ್ಲಾ.. ನನ್ನ ಹಳೆಯ ಕನಸು ಅದು.. ಅವನು ಎಷ್ಟು ನೀಟ್ ಆಗಿದ್ದಾನೆ.. ಯಾವಾಗ್ಲೂ ಘಮ್ ಅಂತಿರ್ತಾನೆ.. ಅವನು ಕುಡಿಯಲ್ಲ.. ಮಲಗೋ ಮುಂಚೆ ಹಲ್ಲು ಉಜ್ಜಿ ಮಲಗ್ತಾನೆ.. ಅದಕ್ಕೇ ನಾನು ಅವತ್ತು ಹಾಗೆ ಸ್ಪಂದಿಸಿದ್ದು..

ಮಾರನೆಯ ದಿನ ನಿಮ್ಮ ಸೇಲ್ಸ್ ಟೀಂನ ಸುಧಾಕರನಂತೆ ಬಂದಾಗಲಂತೂ ನನಗೆ ಅಣು ಅಣುವಿನಲ್ಲಿ ಹೂ ಕಂಪನ.. ಇನ್ನೂ ಮದುವೆಯಾಗದ ಹುಡುಗನಲ್ಲಿರಬಹುದಾದ ಎಲ್ಲಾ ಕುತೂಹಲಗಳನ್ನೂ ನೀವು ಅವತ್ತು ಪ್ರದರ್ಶಿಸಿದಿರಿ.. ಥೇಟ್ ಸುಧಾಕರನ ಥರಾ.. ನನಗೆ ಸ್ಪಂದಿಸದೇ ಇರಲು ಆಗುತ್ತ್ಯೇ..? ಒಂದಿನ ಅಂತೂ ನೀವು ನನ್ನನ್ನು ಮುಟ್ಟಲೇ ಇಲ್ಲ.. ಬರೀ ಮಾತಾಡಿದಿರಿ.. ಹಳೆಯ ಘಝಲ್‌ಗಳ ಸಾಲುಗಳನ್ನು ಹಾಡ್ತಾ.. ನಿಮ್ಮ ಸ್ನೇಹಿತ ಅಮರ್ ಥರಾ.. ದಟ್ ವಾಸ್ ದ ಬೆಸ್ಟ್.. ದೂರದಲ್ಲಿದ್ದರೂ ಸುರತಿ ಸಾಧ್ಯ ಅಂತ ಅರ್ಥವಾಗಿದ್ದೇ ಅವತ್ತು.. ಅದು ಬಿಡಿ.. ಮೊನ್ನೆ ಒಂದಿನ ಮಧ್ಯಾಹ್ನ ನಾನು ನಿರೀಕ್ಷಿಸದ ಹೊತ್ತಿನಲ್ಲಿ ನನ್ನನ್ನು ಹಿಂದಿನಿಂದ ಬಂದು ಹಿಡ್ಕೊಂಡು ನನ್ನನ್ನು ಹಿಂಡಿ ಹಿಪ್ಪೆ ಮಾಡಿಬಿಟ್ರಲ್ಲಾ ರಾಕ್ಷಸನ ಥರಾ.. ದಟ್ ವಾಸ್ ದ ಅಲ್ಟಿಮೇಟ್.. ನಿಮ್ಮ ಡ್ರೈವರ್ ಚಂದ್ರನ ಥರಾ.. ಏನು ಸ್ಪೀಡು.. ಏನು ಶಕ್ತಿ.. ವಾಹ್…’

***

ಜಾಣ ದೇವರ ಮುಂದೆ ಕೈ ಮುಗಿದುಕೊಂಡು ನಿಂತಿದ್ದಾನೆ.. ತುಂಬಾ ಗಂಭೀರವಾಗಿ.. ಭಗವಂತಾ.. ನನ್ನ ತಪ್ಪಿನ ಅರಿವಾಗಿದೆ.. ನಾನು ಕೊಟ್ಟಷ್ಟೇ ನನಗೂ ಸಿಗೋದು ಅನ್ನೋ ನೀತಿ.. ನನ್ನಲ್ಲಿನ ತಪ್ಪುಗಳನ್ನು ನಾನು ಗುರುತಿಸದೇ ಅವಳನ್ನು ದೂರುತ್ತಿದ್ದೆ.. ಅದಕ್ಕಾಗಿ ನನ್ನನ್ನು ಕ್ಷಮಿಸು.. ನನ್ನ ಮುಖದಲ್ಲಿ ಯಾರ್‍ಯಾರು ಬಂದು ಹೋಗಿದ್ದಾರೋ.. ಅತಿಥಿಗಳು.. ಭಗವಂತಾ.. ನನಗೆ ಈ ವರ ಬೇಡಾ.. ವಾಪಸ್ ತೊಗೊಂಡು ಬಿಡು.. ಪ್ಲೀಸ್..

***

ದೇವರು ಹಿಂದಿನ ಸಲ ವರ ಕೊಡುವಾಗ ಮಾತಾಡಿರಲಿಲ್ಲ.. ಆದರೆ ಈ ಸಲ ತುಂಬಾ ಸ್ಪಷ್ಟವಾಗಿ ಮಾತಾಡಿದ.. .. ‘ಇಲ್ಲ.. ಮಗನೇ.. ನಾನು ಕೊಟ್ಟ ವರ ನಾನು ವಾಪಸ್ ತೊಗೊಳಲ್ಲ.. ಅನುಭವಿಸು..’

***

ಈ ಕಥೆಯನ್ನು ಹೇಳಿದವರಿಗೂ, ಕೇಳಿದವರಿಗೂ, ಓದಿದವರಿಗೂ, ಅರ್ಥೈಸಿಕೊಂಡವರಿಗೂ, ಅಳವಡಿಸಿಕೊಂಡವರಿಗೂ, ಈ ಕಥೆಯನ್ನು ಓದುವಂತೆ ಬೇರೆ ಸ್ನೇಹಿತರಿಗೆ ಹೇಳಿದವರಿಗೂ ಆ ಪ್ರೇಮಮಯಿ ಭಗವಂತ ಸನ್ಮಂಗಳವನ್ನುಂಟುಮಾಡಲಿ..

 

* ಗುರುಪ್ರಸಾದ್, ಬೆಂಗಳೂರು

ಗಾಂಧಿ ವೇಷ

ಜಾತ್ರೆಯ ಆ ಸದ್ದು ಗದ್ದಲ, ಧೂಳು, ಬಿಸಿಲು, ತೂಗುವ ತೊಟ್ಟಿಲಲ್ಲಿ ನಲಿದಾಡುವ ಮುದ್ದು ಮಕ್ಕಳ ಕಿರುಚಾಟ, `ಇಲ್ಲ’ ಎಂದರೂ ಕೇಳದೇ ಹಾಗೆ ಮೈಮೇಲೆ ಬೀಳುತ್ತಿದ್ದ ಹಿಜಿಡಾಗಳ ಕಾಟ, ‘ಸಾಕಪ್ಪಾ ಸಾಕು’ ಎಂದು, ಗಾಳಿಗೆ ಹೊಟ್ಟೆಯನ್ನು ಹಾರಿಹಾಕಿಕೊಂಡು ಕುಂತಿದ್ದವನ ಬಳಿ ಪಳವಾರ ಹಾಕಿಸಿಕೊಂಡು, ಅಜ್ಜಿ ಹಾಕುತ್ತಿದ್ದ ಬಿಸಿ ಬಿಸಿ ಮಿರ್ಚಿಗಳನ್ನು ಕಟ್ಟಿಸಿಕೊಂಡು ‘ಯಾವಾಗ ಈ ಜಾತ್ರೆಯಿಂದ ಹೊರಗ ಹೋದೇನೋ’ ಎಂಬಂತಾಗಿತ್ತು ಹಣಿಮೇಶನಿಗೆ. ಜಾತ್ರೆಯ ಹೊರಗ ಬಂದರೂ ಕೂಡ ‘ಕೇಳ್ರಪ್ಪೋ…  ಯಾವ ಖಾರ ಬಿಸಿ ಐತ್ಯೋ ಅದು ಮಾತ್ರ ಚನ್ನಬಸಪ್ಪಂದೂ, ಅದು ಆರಿದ್ರ ಚನ್ನಬಸಪ್ಪಂದಲ್ಲ. ನೋಡ್ರಿ ಮೂರುವರೆ ಲಕ್ಷ ಕೊಟ್ಟು ಮಿಷನ್ ತಂದೀವ್ರಿ. ಅದನ್ನೆಲ್ಲ ಜೋಡ್ಸತಿಗೆ ನಾಲ್ಕು ಲಕ್ಷ ರೂಪಾಯಿ ಆಗೈತಿ. ಅಂಥ ಮಿಷನ್ ನ್ಯಾಗಿಂದ ಬಂದ ಖಾರನ ಒಂದು ಸಲ ತಿಂದು ನೋಡ್ರಿ. ಇದು ಬಿಜಾಪುರದ ಚನ್ನಬಸಪ್ಪನ ಮಿಷನ್ನು. ಖಾರ ಆರಿದ್ರ ಅದು ಚನ್ನಬಸಪ್ಪಂದು ಅಲ್ಲ ಅಂತ ತಿಳಿರಿ.’ ಎಂಬುದು ಮಾತ್ರ ಆ ಎಲ್ಲಾ ಸದ್ದು ಗದ್ದಲದ ನಡುವ ಆಗಾಗ ಕಿವ್ಯಾಗ ಗುಂಯ್ ಗುಡುತ್ತಿತ್ತು. ಆ ರೆಕಾರ್ಡನ್ನ ಮೊದ್ಲಸಲ ಆ ಹೋಟ್ಲಮುಂದ ಕೇಳಿದಾಗ ಸ್ವಲ್ಪ ಹೊತ್ತು ಅಲ್ಲೇ ನಿಂತು ಕೇಳಿ ಮುಸಿ-ಮುಸಿ ನಕ್ಕು ಮುಂದಕ್ಕ ಹೋಗಿದ್ದ ಹಣಿಮೇಶ.

ಆಗ್ಲೆ ಅವರವರ ನೆರಳು ಅವರವರ ಕಾಲಿಗೆ ತೊಡರು ಬರುತ್ತಿತ್ತು. ನೆಲ ಕಾಯ್ದ ಹಂಚಿನಂಗಾಗಿತ್ತು. ಚಪ್ಲಿ ಇರ್ಲಾರ್ದ ನಡೆದರ ಅಂಗಾಲು ತಗಂಡು ಬಾಯೊಳಗ ಇಟ್ಗಬಕು ಅಂಬಗಾಗ್ತ್ತಿತ್ತು. ಅಂಥ ಹೊತ್ತಿನ್ಯಾಗ ಬಿಸಿಲು ಅಂಬ ಖಬುರು ಇಲ್ದಂಗ ಜನರು ಒಬ್ರಮ್ಯಾಲ ಒಬ್ರು ಬಿದ್ಕಂತ, ನೂಕ್ಯಾಡ್ಕೆಂತ ನಿಂತಿದ್ರು. ‘ಇಲ್ಲೇನು ದೊಂಬರಾಟ ಐತೆನು ಇಲ್ಲ, ಹಾವು-ಗೀವು ಆಡ್ಸಾಕತ್ತ್ಯಾರನು’ ಅಂತ ಹಣಮೇಶ ಆ ಸೇರಿದ್ದ ಜನರ ಗುಂಪಿನ್ಯಾಕ ಒದ್ದ್ಯಾಡ್ಕೆಂತ ತನ್ನ ಗೋಣು ತುರಿಕಿ ನೋಡಿದ. ಒಬ್ಬ ಹೆಣುಮಗಳು ಬರೀ ಒಂದು ಕುಬುಸ, ಒಂದು ಲಂಗ ಹಾಕ್ಕೆಂಡಿದ್ದ ಆಕಿ, ಲುಂಗಿನ ಒಳಗಿನ ಚಣ್ಣ ಕಾಣಂಗ ಮ್ಯಾಲ ಎತ್ತಿಕಟ್ಟಿದ್ದಾತನ ಕುಡ `ಅಲ್ಲಿಗಿಲ್ಲಿ ಬರ್ತಿಯಾ, ರೈಲು ಮಾಮ ಬರ್ತಿಯಾ, ರೈಲೋ ಮಾಮ, ರೈಲೋ ಮಾಮ…’ ಅಂಬ ಹಾಡಿಗೆ ನಾಚಿಗಿ ಇಲ್ದಂಗ ಮೈ ಬಗ್ಗಿಸಿ ಎದಿ ಕುಣಿಸಕತ್ತಿದ್ಲು. ಅದರಾಗ ಒಬ್ಬಾತ ಆಕಿ ಮುಖಮಾಡಿ ಕುಣಿತಿದ್ದ ಜನರ ಕಡೆಗೆ ಏರಿಸಿದ ಛತ್ರಿನ ಉಲ್ಟಾ ಹಿಡ್ಕಂಡು ನಿಂತಿದ್ದ. ಬಗ್ಗಿದಾಗ ಕುಬುಸದೊಳಗ ಇಳೆಬೀಳ್ತಿದ್ದ ಆಕಿಯ ಎದೆ ನೋಡಿ ಅಲ್ಲಿ ನಿಂತ ಜನ್ರು ಕೇಕೆ ಹೊಡೆದು ಸಿಳ್ಳೆ ಹಾಕ್ತಿದ್ರು. ಅದ ಟೈಂಗೆ ಛತ್ರಿ ಮುಂದ ಬಂದುಬುಡ್ತಿತ್ತು. ತಮಗರಿವಿಲ್ದಂಗ ಕೆಲ ಮಂದಿ ದೋತರ, ಲುಂಗಿ ಮ್ಯಾಲ ಎತ್ತಿ ಚಣ್ಣದ ಬಕುಣದಾಕ ಕೈ ಹಾಕಿದರ, ಇನ್ನೂ ಕೆಲ ಮಂದಿ ಪ್ಯಾಂಟಿನ ಹಿಂದಿನ ಬಕುಣದಾಕ ಕೈ ಹಾಕಿ ಅದೆಷ್ಟು ಕೈಯಾಕ ಬಂದೈತಿ ಅಂಬ ಖಬುರು ಇಲ್ದಂಗ ಆ ಛತ್ರಿ ಒಳಗ ಹಾಕ್ತಿದ್ರು. ಇನ್ನು ಕೆಲ ಮಂದಿ ‘ಪ್ಯಾಂಟಿನ್ಯಾಗ ಪರ್ಸ ಕಾಣವಲ್ತು’ ಅಂತ ಹೌಹಾರಿ ಅಂಗಿ ಬಕುಣ, ಪ್ಯಾಂಟಿನ ಬಗಲ ಬಕುಣ ಚೆಕ್ ಮಾಡ್ಕೆಂಡು ಆ ಗುಂಪಿನಿಂದ ‘ಮುಂದೆಂಗ ಮಾಡಾದು’ ಅಂತ ಆತಂಕದಿಂದ ಹೊರಗ ಬರ್ತಿದ್ರು. ಆ ಒಂದು ರಿಕಾಡು ಮುಗಿವತಿಗೆ ಛತ್ರಿ ಒಳಗ ರೊಕ್ಕ ತುಂಬಿಕೊಂಡಿರ್ತಿದ್ವು. ಮತ್ತ್ಯೊಂದು ರಿಕಾಡಿಗೆ ಅವರಿಬ್ರು ಮತ್ತ್ಯೊಂದಿಷ್ಟು ಸ್ನೋ-ಪೌಡರ್ ಹಚಿಗಣಕತ್ತಿದ್ರು. ಈ ಕಡೆ ಛತ್ರಿ ಒಳಗಿನ ರೊಕ್ಕ ಚೀಲ ಸೇರಿ ಮತ್ತ್ಯೊಂದು ರಿಕಾಡಿಗೆ ಛತ್ರಿ ರೆಡಿಯಾಗ್ತಿತ್ತು.

‘ಏನ್ ನಡೆಕತ್ತೈತ್ರಲೆ ಅಲ್ಲ್ಯಾ’ ಗಡಸು ಧ್ವನಿ ಮಾಡ್ಕೆಂತ ಬಂದು ಖಾಕಿ ಖದರು ತೋರಿಸಿದಾಗ ಜನ ಸ್ವಲ್ಪ ಅಂಜಿಕೆಂತ ಅಕ್ಕಾಡೆ ಇಕ್ಕಾಡೆ ಸರ್ಕಂಡ್ರು. ಪೌಡ್ರ ಹಚಿಗಂಡು ತುಟಿಗೆ ಕೆಂಪನ ಬಣ್ಣ ಮೆತಿಗಂಡು ‘ಉಮ್ಮಾ’ ಹಂದಿ ಮೂತಿಯಂಗ ಮಾಡಿ ಸ್ವಲ್ಪ ಎದೆ ಕುಣಿಸಿದಳು. ಅವಾಗ ಕೈಯ್ಯಾಗ ಟೋಪಿಗಿ ಹಿಡ್ಕಂಡು, ಕೊಂಕಳದಾಕ ಬಡಿಗೆ ಇಟ್ಗಂಡು ಹಿಂದಕ್ಕೊಮ್ಮೆ ನೋಡಿ ‘ಜಲ್ದಿ ಒಂದು ಡ್ಯಾನ್ಸು ಹಾಕಬೇ’ ಅಂದ. ಅವಾಗ ಜನ್ರಿಗೆ ದೈರ್ಯ ಬಂತು. `ಮುದ್ದಾಡು ಬಾರೋ ಮುದ್ದಾಡು ಬಾರೋ ಮುತ್ತಂತ ಮೈಯ್ಯಾ ರಸಿಕ ರಸಿಕ’ ಹಾಡಿಗೆ ಖಾಕಿ ಒಳಗಿದ್ದ ಕರಿನೋಟು ಆ ಕರಿ ಛತ್ರಿ ಸೇರಿದವು. ಮೊದ ಮೊದಲು ಸ್ವಲ್ಪ ಜೊಲ್ಲು ಸುರಿಸಿದ ಹಣಿಮೇಶ. ಬಕುಣದ ನೆನಪಾಗಿ ಬಕುಣ ಮುಟಿಗಂಡ. ‘ಬ್ಯಾಡಪ ಇವರ ಸವಾಸ, ಮೊದ್ಲ ಎಲ್ಲ್ಯಾರ ನೆಳ್ಳಾಗ ಕುಂತ್ಗಂಡು ಪಳವಾರ ತಿಂದು ಬುಡಾಮ’ ಬಾಯಿ ಒರೆಸಿಗಂತ ಹೊರಗ ಬಂದ.

‘ಬಿಡುವುದಿಂದಾಗ ಈ ಕಡೆ ಬಂದಾಗ ಇಲ್ಲೇ ಸನೆಪ್ರದಾಗ ಒಂದು ಪಾರ್ಕು ನೋಡಿದ್ನ್ಯಾ’ ಅಂತ ಪಾರ್ಕನ್ನ ಹುಡಿಕ್ಕೆಂಡು ಹೊಂಟ. ‘ಅಬ್ಬಬ್ಬಾ ದೇವರ ಜಾತ್ರಿಗೆ ಅಂತ ಬಂದ್ರ ದೊಡ್ಡ ದೇವರ ದರ್ಶನವೇ ಆತುಬುಡು. ಥುತ್ ಇನ್ನವ್ನು, ದೇವಸ್ಥಾನ ಅನ್ನಂಗಿಲ್ಲ, ಗುಡಿಗುಂಡಾರ ಅನ್ನಂಗಿಲ್ಲ ಎಲ್ಲಿಬೇಕಲ್ಲಿ ಬಿಚ್ಚಿ ಕುಣಿತ್ಯಾರ. ನಾವು ಎಲ್ಲಿಗಿ ಬಂದೀವಿ, ಈಗ ಏನುಮಾಡಕತ್ತೀವಿ ಅಂಬ ಖಬುರು ಇಲ್ದಂಗ ನಿಂತಾವ ಇವು’ ಒಬ್ಬಾತ ಮಾತಾಡ್ಕೆಂತ ಹೊಂಟ. ಮಹಾನಗರ ಪಾಲಿಕೆಯ ದೊಡ್ಡ ಗೇಟಿನ ಸಣ್ಣ ಸಣ್ಣ ಸಂದಿ ಒಳಗ ಕಾಣ್ತಿದ್ದ ಅಚ್ಚನ ಹಾಸಿಗಿ ಕಂಡು ಖುಷಿಪಟ್ಟ. ಅಲ್ಲ್ಯೊಂದು ಗುಂಪು ಇಲ್ಲ್ಯೊಂದು ಗುಂಪು, ಒಬ್ರು ಇಬ್ಬಿಬ್ರು, ಹಿಂಗ ಕುಂತ್ಗಂಡಿದ್ರು. ಕೆಲವ್ರು ಚಿಂತೆ ಇಲ್ದಂಗ ಹಾಸಿಗೆಮ್ಯಾಲ ಮಕ್ಕಂಡಿದ್ರು. ‘ಇಲ್ಲಿ ಬೇಸೈತಿ’ ಚಪ್ಲಿ ಬುಟ್ಟು ಕಾಲು ಸವರ್ಯಾಡಿದ. ‘ಮುಂಜಾನೆ ನೀರು ಬುಟ್ಟಿದ್ರು ಅಂತ ಕಾಣುತ್ತ, ಇನ್ನು ಸ್ವಲ್ಪ-ಸ್ವಲ್ಪ ಹಸಿ ಐತಿ’ ಅಂದ್ಕಂಡು ಕುಂತ. ಪ್ಲಾಸ್ಟಿಕ್ ಚೀಲದಾಗ ಹಾಕಿಸಿಕೊಂಡು ಬಂದಿದ್ದ ಪಳವಾರ ಹೊರಗ ತಕ್ಕಂಡು ತಿನ್ನಕತ್ತಿದ. ಆಮ್ಯಾಲ ನೆನಪು ಮಾಡ್ಕೆಂಡು ಎಣ್ಣಿ ಎಣ್ಣಿ ಆಗಿದ್ದ ರದ್ದಿ ಹಾಳಿನ ಬಿಚ್ಚಿದ. ಅದರಾಗಿನ ಮಿರ್ಚಿ ತಗಂಡು ಅರ್ಧ ಕಡ್ಕಂದ. ಒಳಗಿದ್ದ ಮೆಣಸಿನಕಾಯಿ ಭಾರಿ ಬೆರಿಕಿತ್ತು. ಖಾರ ನೆತ್ತಿಗೇರಿ ಕೆಮ್ಮಕತ್ತಿದ. ಕಣ್ಣಾಗ ನೀರು ಬಂದುಬುಟ್ವು. ‘ತಗ ಮಗಾ ನೀರು ಕುಡಿ’ ಅಳ್ಳೆತ್ತಿ ಬಡ್ದು ಹೇಳಿದ ಮುದುಕ. ಅವರ್ಯಾರು ಅಂತ ಒಳ್ಳಿ ನೋಡ್ಲಾರ್ದ ಮೊದ್ಲು ‘ಗಟ್ ಗಟ್’ ನೀರು ಕುಡಿದ. ಸ್ವಲ್ಪ ಹೊತ್ತು ಸುಧಾರಿಸ್ಗೆಂಡು ‘ಯಪ್ಪಾ ದ್ಯಾವ್ರು ಬಂದಂಗ ಬಂದೆಪ’ ಹಿಂದಕ್ಕ ಒಳ್ಳಿಕೆಂತ ಹೇಳಿದ. ಬಿಳೆ ದೋತ್ರ, ಬೋಳು ತೆಲಿ, ಕಣ್ಣಿಗೆ ಕನ್ನಡಕ, ಸೊಂಟದಾಗೊಂದು ಗಡಿಯಾರ, ಕಾಲಾಗ ಚಪ್ಲಿ, ಬಲಗೈಯ್ಯಾಗ ಬಡಿಗಿ, ಎಡಗೈಯ್ಯಾಗ ಒಂದು ಕೈಚೀಲ ಹಿಡ್ಕಂಡು, ಬರಿ ಮೈಯ್ಯಾಗ ನಿಂತಿದ್ದ ಆ ಮುದುಕನನ್ನ ನೋಡಿ ‘ಅರೇ ತಾತ ನೀವಾ?’ ಅಂತ ತನ್ನ ಕಣ್ಣು ತಾನು ನಂಬಲಾರ್ದ ಕಣ್ಣು ತಿಕ್ಕೆಂಡ. ಕೈಗೆ ಅತ್ತಿದ್ದ ಉಪ್ಪು-ಖಾರ ಕಣ್ಣಿಗೆ ಅತ್ತಿ ಕಣ್ಣು ಉರ್ಯಾಕತ್ತಿಬುಡ್ತಿ. ‘ಈಗ ಕಣ್ಣು ಉರಿಬಕನು’ ಅಂತ ಉರಿವ ಕಣ್ಣನ್ನ ಕೇರ್ ಮಾಡ್ಲಾರ್ದ ಕಣ್ಣು ಅಗಲ ಮಾಡಿದ. ನೀರು ತುಂಬಿದ್ದ ಮಬ್ಬುಗಣ್ಣಿನ್ಯಾಗ ಸಾಕ್ಷಾತ್ ಗಾಂಧಿ ತಾತ ಕಂಡಂಗಾದ. ‘ಯಪ್ಪ ತಾತ ನಿನ್ನ ಪಾದ ಕೊಡಪೊ, ಅವತ್ತು ದೇಶ ಉಳಿಸಿದಿ, ಇವತ್ತು ನನ್ನನ್ನ ಉಳಿಸಿದಿ’ ಅಂತ ಕಾಲಿಗೆ ಬಿದ್ದ. ‘ಏಯ್ ತಮ್ಮಾ ಎದ್ದೇಳು ನಾನು ಗಾಂಧಿ ಅಲ್ಲ. ನಾನು ಲಿಂಗಪ್ಪ.’

‘ಸಾಕ್ಷಾತ್ ಗಾಂಧಿ ತಾತ ಕಂಡಂಗ ಕಾಣ್ತೀರಿ ನಿಮ್ಮನ್ನ ಗಾಂಧಿ ವೇಷದಾಗ ನೋಡಿ ಭಾಳ ಸಂತೋಷ ಆತು. ನಿಮ್ಮನ್ನ ತಾತ ಅಂತ ಕರಿತೀನಿ. ಬಾ ತಾತ ಪಳವಾರ ತಿನ್ನಾಮ.’

‘ನೀನು ತಿನ್ನಪಾ ಈಗ ನಾ ತಿನ್ನ ಸಮಯ ಮೀರೈತಿ ನನ್ನ ಕ್ಯಲ್ಸ ಇನ್ನೂ ಭಾಳ ಐತಿ’ ಬಲಗೈಯ್ಯಾಗ ಬಡಿಗಿ, ಎಡಗೈಯ್ಯಾಗ ಕೈಚೀಲ ಹಿಡ್ಕಂಡು ಮೆತ್ತಗ ನಡೆದುಕೊಂಡು ಹೊಂಟ. ಲಿಂಗಪ್ಪ ತಾತನ್ನ ಕಣ್ಣುಮರೆ ಆಗತನಕ ನೋಡ್ಕೆಂತ ಕುಂತ. ಕಣ್ಮರೆ ಆಗಿಂದ ನಿದ್ದಿ ಒತ್ತರಿಸಿಗಂಡು ಬಂತು. ಮ್ಯಾಲಿಂದ ಮ್ಯಾಲ ಆಕಳಿಕೆಗಳು ಸುರುವಾದ್ವು. ಉಳಿದ ಇನ್ನಂದಿಷ್ಟು ಪಳವಾರ, ಮಿರ್ಚಿನ ಒಂದು ಹಾಳ್ಯಾಗ ಹಾಕಿ ಕಟ್ಟಿಟ್ಟ. ಕುಂತಲ್ಲೇ ನೆಲಕ್ಕ ಉಳ್ಳಿದ. ಜಾತ್ರ್ಯಾಗ ತಿರುಗಾಡಿ ದಣಿದ ದೇಹಕ್ಕ ಸಿಕ್ಕ ಆಸರೆಯಿಂದ ಕಣ್ಣುಗಳು ಒಂದಕ್ಕೊಂದು ಒಲಿದುಕೊಂಡ್ವು. ರಾತ್ರಿ ಎಂಟುಗಂಟೆಗೆ ಕೂಗಿದ ಮುಲ್ಲಾನ ಹಜ ಕಿವಿಯೊಳಕ್ಕ ಇಳಿದು ದಡಕ್ಕನ ಎದ್ದು ನೋಡಿದ. ಸುತ್ತ ಎಲ್ಲಾ ಕತ್ಲಗಡುಗು ಆಗಿತ್ತು. ಪಾರ್ಕಿನ್ಯಾಗ ಇದ್ದ ಒಂದು ಟ್ಯೂಬ್ ಲೈಟ್ ‘ಜಿಂಯ್’ ಅಂತ ಮಂದ ಬೆಳಕಿನ ನಗೆ ಬೀರಿತ್ತು. ಬಗಲಾಗ ಕೈಯ್ಯಾಡಿಸಿದ ಪಳವಾರದ ಪ್ಲಾಷ್ಟಿಕ್ ಚೀಲ ಕೈಗೆ ಅತ್ಲಿಲ್ಲ. ಬಾಟ್ಲಿ ಅಲ್ಲೇ ಇತ್ತು. ‘ಸಾಯಂಕಾಲ ಪಳವಾರ ತಿಂದುಬುಟ್ಟೀನಿ ಅಷ್ಟೊಂದು ಹಸುವು ಆಗವಲ್ತು. ಅದರಾಗ ಬ್ಯಾರೆ ಇದು ಸಿಟಿ, ಎಲ್ಲಿ ಹೋಟ್ಲು ಅದಾವನು ಗೊತ್ತಿಲ್ಲ. ಎದಕ ಬೇಕು ಇವ ನೀರು ಕುಡ್ಕಂಡು ಮತ್ತ್ಯ ಇಲ್ಲ್ಯಾ ಕಾಲು ಚಾಚಿಬುಡಾಮ, ಪೋಲಿಸ್ ಗೀಲಿಸ್ ಬಂದ್ರ ಎದ್ದು ಬ್ಯಾರೆಕಡೆ ಜಾಗ ನೋಡ್ಕೆಂಡ್ರಾತು.’ ಅಂದ್ಕಂಡು ಬಾಟ್ಲಿ ನೀರು ಕುಡಿದು ಮತ್ತೇ ಹಸಿರ ಹಾಸಿಗೆ ಮ್ಯಾಲ ಕಾಲು ಚಾಚಿದ.

`ಬಾರೋ ಬಾರೋ ಬಾರಯ್ಯ ಕಲಬುರಗಿ ಶರಣ…’ ಅಂಬ ಹಾಡು ಕೇಳಿ ಹಣಿಮೇಶ ದಿಡಗ್ಗನ ಎದ್ದುಕುಂತ. ಪಾರ್ಕನ್ಯಾಗ ಆಗ್ಲೇ ಜನರು ವಾಕಿಂಗ್, ಯೋಗಾಸನ ಮಾಡಕತ್ತಿದ್ರು. ಎದ್ದಾತನ ಹೋಗಿ ಪಾರ್ಕನ್ಯಾಗಿದ್ದ ಬೇವಿನಗಿಡದಾಗ ಒಂದು ಕೊಲ್ಲಿ ಕಿತಿಗಂಡು ಹಲ್ಲು ತಿಕ್ಕಿದ. ಪಾರ್ಕಿಗೆ ಅತಿಗಂಡಿದ್ದ ಸಾರ್ವಜನಿಕರ ಶೌಚಾಲಯದೊಳಗ ತನ್ನ ಪಾಪ ಕರ್ಮ ಮುಗಿಸಿಗಂಡ. ‘ಇಲ್ಲೆಲ್ಲಿ ಮೈತಕ್ಕಣಾಕ ಆಗಲ್ಲ ಇರ್ಲಿ ಬುಡು ಅಪ್ಪನಕೆರೆ ನೀರು ತಗಂಡು ಚಿಮ್ಮಿಸಿಗಂಡ್ರ ಆತು’ ಅಂತ ಮಹಾನಗರ ಪಾಲಿಕೆಯ ಗೇಟಿಗೆ ಇದ್ದ ತಗಡಿನ ಹೋಟ್ಲದೊಳಗ ಇಡ್ಲಿ ತಿಂದು ಚಹಾ ಕುಡಿದ. ಅಲ್ಲಿಂದ ಗುಡಿಕಡೆಗೆ ಹೊಂಟ. ನಡುವ ಅಪ್ಪನ ಕೆರ್ಯಾಗಿನ ನೀರು ಚಿಮ್ಮಿಸಿಗಂಡ. ಆಗಲೇ ಸೂರ್ಯ ಬಲಿತಿದ್ದ. ಶರಣಬಸಪ್ಪ ಅಪ್ಪನ ಗುಡಿ ಮುಂದ ಬಂದ ಹಣಿಮೇಶಗ ಆಶ್ಚರ್ಯ ಆತು. ‘ಅರೆ ನಿನ್ನೆ ಇದ್ದಿಲ್ಲ ಈ ಗಾಂಧಿ ಮೂರ್ತಿ ಇವತ್ತು ಆಗ್ಲೇ ತಂದಿಟ್ಟಾರಲ್ಲ’ ಸನೆಕತ ಹೊಂಟ.

ಹಣಿಮೇಶ ಹೋಗುವತಿಗೆ ಆ ಮೂರ್ತಿ ಬಗಲಾಗ ನಿಂತ್ಗಂಡು ಫೋಟೊ ತೆಗಿಸಿಗಂಡು ಹೊಂಟಿತ್ತು ಒಂದು ಗುಂಪು. ಹಾಸಿದ ಟವಲ್ ಮ್ಯಾಲ ಒಂದಿಷ್ಟು ಚಿಲ್ರ ಬಿದ್ದಿದ್ವು. ‘ಈ ಮೂರ್ತಿನ ಒಂದು ಕಟ್ಟಿಮ್ಯಾಲರ ಇಡ್ಬೇಕಾಗಿತ್ತು. ಅದನ್ನ ಬುಟ್ಟು ಈ ನೆಲದ ಮ್ಯಾಲ ಇಟ್ಟಿದ್ರಿಂದ ಯಾವರ ದನ-ಕರ ಬಂದು ತಿಕ್ಕಿದರ ಹೆಂಗ’ ಅಂತ ಪೂರ್ತಿ ಸನೆಕ ಬಂದು ನಿಂತ. ಅದರ ಮುಂದ ರೊಕ್ಕ ಹಾಕಿರದು ನೋಡಿ ಆಶ್ಚರ್ಯ ಆತು. ಅದು ಅಲ್ದ ಮೂರ್ತಿಯ ನಿಜರೂಪಕ್ಕ ಕಲಾಕಾರನ ಕುಂಚದಲ್ಲಿ ಅರಳಿದ್ದ ಮೂರ್ತಿ ಬಗ್ಗೆ ಮನಸಿನ್ಯಾಗ ಹೊಗಳಕತ್ತಿದ್ದ. ತೊಡೆಯಮ್ಯಾಲ ರಕ್ತ ಸೋರ್ತಿತ್ತು. ಅದನ್ನ ಕಂಡು ಸ್ವಲ್ಪ ಅಂಜಿಕೆ ಬಂತು. ‘ಇದೇನಪ ಕಲ್ಲಿನ ಮೂರ್ತಿ ಒಳಗ ರಕ್ತ ಬರುತ್ತಲ’ ಅಕ್ಕಾಡೆ ಇಕ್ಕಾಡೆ ನೋಡಿದ. ಜನರು ಆ ಮೂರ್ತಿಯ ಕಡೆ ಕೇರ್ ಮಾಡ್ಲಾರ್ದ ಅಡ್ಯಾಡ್ತಿದ್ರು. ಒಬ್ಬೊಬ್ರು ಬಕುಣದಾಕ ಕೈ ಹಾಕಿ ಹಾಸಿದ್ದ ಟವಲ್ ಮ್ಯಾಲ ಎಂಟಾಣಿ, ಒಂದು ರೂಪಾಯಿ ಚಿಲ್ರ ಹೊಗದು ಹೋಗ್ತಿದ್ರು. ಮೆಲ್ಲಕ ಅಂಜಿಕೆಂತ ಸೋರುತ್ತಿದ್ದ ರಕ್ತ ಮುಟ್ಟಿದ. ಅದು ಖರೆವಂದ್ರ ರಕ್ತ ಆಗಿತ್ತು. ಒಂದು ಕಡೆ ರಕ್ತ ಕುಡ್ದು ಇನ್ನೊಂದು ಕಡೆ ಕುಂತಿದ್ದ `ಉಣ್ಣಿ’ನ ಹಿಡ್ದು ಕಿತ್ತಿ ದೂರ ಹೊಗೆದ. ಈಗ ಮೂರ್ತಿನ ಬೇಸು ನೋಡಿದ. ಪಾರ್ಕಲ್ಲಿ ತಾನು ನೋಡಿದ್ದ ಆ ಲಿಂಗಪ್ಪ ತಾತನೇ ಈ ಗಾಂಧಿ ಮೂರ್ತಿ ಅಂಬೋದು ಅರಿವಿಗೆ ಬಂತು. ಆದ್ರ ಈಗ ಮೈ ಕೈಗೆಲ್ಲಾ ಸಿಲ್ವರ್ ಪೇಂಟ್ ಹಚಿಗಂಡಿದ್ದ, ಕಣ್ಣು ಮುಚಿಗಂಡಿದ್ದ, ‘ತಾತ ಕಾಲಿಗೆ ಉಣ್ಣಿ ಕಡ್ದು ರಕ್ತ ಸೋರಕತ್ತೈತಿ ಇಲ್ಲಿ ನೋಡು’ ಎಂದ. ತಾತ ಮಾತಾಡ್ಲಿಲ್ಲ. ಹಣಿಮೇಶನ ಮಾತುಗಳು ತಾತನ ಕಿವಿಗೆ ಬೀಳಲಿಲ್ಲ. ಎದಕಂದ್ರ ಬ್ಯಾರೆಯವರ ಮಾತುಗಳು ಕೇಳ್ಬಾರ್ದು ಅಂತ ಕಿವಿಗೆ ಅರಳೆ ಇಟ್ಗಂಡಿದ್ದ. ರೊಕ್ಕ ಬಿದ್ದಿದ್ದ ಟವಲ್ ತಗಂಡು ಸೋರಕತ್ತಿದ್ದ ರಕ್ತ ಒರೆಸಿದ. ಅಷ್ಟಾದ್ರೂ ಅಲ್ಲಾಡ್ಲಿಲ್ಲ. ‘ತಾತ ತಾತ’ ರಟ್ಟಿ ಹಿಡಿದು ಅಲ್ಲಾಡಿಸಿದ. ‘ಯಾರು’ ಕಣ್ಣು ತೆರಿಲಾರ್ದ ಸಿಟ್ಟಿನಿಂದ ಅಂದ. ‘ತಾತ ನಾನು ಪಾರ್ಕನ್ಯಾಗ ನನಗ ಖಾರ ನೆತ್ತಿಗೇರಿದ್ದಾಗ ನೀರು ಕೊಟ್ಟಿದ್ದೆಲ್ಲ’.

‘ಇನ್ನೊಂದು ಸಲ ಹೇಳು’ ಅಂತ ಒಂದು ಕಿವಿಯ ಅರಳೆ ತೆಗೆದ.
‘ನಾನು ಪಾರ್ಕಿನ್ಯಾಗ ಖಾರ ನೆತ್ತಿಗೇರಿದ್ದಾಗ ನೀರು ಕೊಟ್ಟಿದ್ದೆಲ್ಲ.’
‘ಅಂಥಾವ್ರು ಅದೆಷ್ಟು ಮಂದಿ ಅದಾರನು, ಅದರಾಗ ಯಾರು ಅಂತ ತಿಳಕಲ್ಲಿ? ಅದಿರ್ಲಿ ನನ್ನನ್ನ್ಯಾಕ ಮಾತಾಡ್ಸಿದಿ?’
‘ತಾತ ನಿನ್ನ ಕಾಲಿಗೆ ಉಣ್ಣಿ ಕಡ್ದು ರಕ್ತ ಸೋರಕತ್ತೈತಿ.’
‘ಹಂಗೆಲ್ಲಾ ಕಣ್ಣು ಬುಡಂಗಿಲ್ಲ. ಟವಲ್ಲಿನ್ಯಾಗ ಎಷ್ಟು ರೊಕ್ಕ ಆಗ್ಯಾವ ಮೊದ್ಲು ಹೇಳು.’
‘ಇಪ್ಪತ್ತು ಮೂವತ್ತು ಆಗಿರ್ಬಹುದು.’

‘ಹಂಗಾದ್ರ ಇನ್ನೂ ರೊಕ್ಕ ಜಮಾ ಆಗ್ಬಕು ಅಲ್ಲಿವರಿಗೆ ಕಣ್ಣು ತೆರೆಂಗಿಲ್ಲ, ಮಾತು ಆಡಂಗಿಲ್ಲ, ಇನ್ಮುಂದ ನೀನಾಡ ಮಾತು ನನಗ ಕೇಳಂಗಿಲ್ಲ’ ಮತ್ತೇ ಕಿವಿಗೆ ಅರಳೆ ತುರಿಕಿಕೊಂಡು ನಿಂತ. ‘ಈ ವಯಸ್ಸಿನ್ಯಾಗೂ ರೊಕ್ಕ ಮಾಡ್ಬಕಂಬ ಅದೆಷ್ಟು ಆಸೆ ಐತಿ ನೋಡು. ಕಾಲಿಗೆ ಉಣ್ಣಿ ಕುಂತು ಇರುವ ಅದೊಂದಿಷ್ಟು ರಕ್ತ ಕುಡಿದ್ರೂ ಖಬುರು ಇಲ್ದಂಗ ನಿಂತಾನ’ ಅಂದ್ಕಂಡ. ‘ಖಾರ ನೆತ್ತಿಗೇರಿದಾಗ ಕುಡ್ಯಾಕ ನೀರು ಕೊಟ್ಟಾನ’ ಅಂಬೋದು ತಟ್ಟನ ನೆನಪಾತು. ‘ಆತನ ಋಣ ನಿನ್ನ ಮ್ಯಾಲೈತಿ ನೀನು ಹಂಗೆಲ್ಲಾ ಮಾತಾಡ್ಬ್ಯಾಡ’ ಅಂತ ಹೇಳಿತು ಹಣಿಮೇಶನ ಅಂತರಾತ್ಮ.

‘ಹೌದು ಆ ಋಣ ತೀರಿಸ್ಬೇಕಲ್ಲ’ ಯೋಚ್ನೆ ಮಾಡ್ಕೆಂತ ದೇವಸ್ಥಾನದೊಳಕ್ಕ ಹೋದ. ದೇವರ ದರ್ಶನ ಮಾಡಿ ಅಲ್ಲೇ ಕುಂತ. ಕುಂತುಗಂಡಲ್ಲೇ ಬಗ್ಗಿ ಹೊರಗ ನೋಡಿದ ತಾತ ಅಲ್ಲಿ ನಿಂತಿರುವುದು ಕಾಣ್ತಿತ್ತು.

ಬಿಸಿಲು ಬಲುಕಂತ ಹೊಂಟಿತು. ಆಗ್ಲೆ ಜನ ಬಿಸಿಲಿಗೆ ‘ಉಸ್ಸಂತ’ ತಲಿ ಅಲ್ಲಾಡಿಸ್ತಿದ್ರು. ಆದ್ರ ಲಿಂಗಪ್ಪ ತಾತ ಮಾತ್ರ ಅಂಥ ರಣ ರಣ ಬಿಸಿಲಿಗೆ ಅಲ್ಲಾಡ್ಲಾರ್ದಂಗ ನಿಂತಿದ್ದ. ಇದರಿಂದ ಹಣಿಮೇಶನ ಜೀವ ಚುರ್ ಅಂತು. ಗುಡಿಯಾಗಿಂದ ಎದ್ದು ಹೋಗಿ ಐದು, ಹತ್ತರ ನೂರು ರೂಪಾಯಿಯ ಚಿಲ್ರ ಆ ಟವಲ್ಲಿನ್ಯಾಕ ಹಾಕಿದ. ಈಗ ಮತ್ತೊಮ್ಮೆ ಕೈ ಹಿಡಿದು ಅಲ್ಲಾಡಿಸಿದ.

‘ಯಾರು?’
‘ತಾತ ನಾನು ಅವಾಗ್ಲೆ ಬಂದಿದ್ನೆಲ್ಲ.’
ಮತ್ತೇ ಕಿವಿಯ ಅರಳೆ ತೆಗೆದು ಸಿಟ್ಟಿನಿಂದ ‘ಯಾರು’ ಎಂದ.
‘ತಾತ ನಾನು ಅವಾಗ್ಲೆ ಬಂದಿದ್ನೆಲ್ಲ.’
‘ಮತ್ತೆ ಈಗ ಎದಕ ಬಂದಿ?’
‘ಬಿಸಿಲು ಬ್ಯಾರೆ ಆಗೈತಿ, ರೊಕ್ಕ ಆಗ್ಲೆ ನೂರಿಪ್ಪತ್ತು, ನೂರಮೂವತ್ತು ಆಗಿರ್ಬಹುದು.’

‘ಹೌದಾ’ ಕಣ್ಣು ಬುಟ್ಟ. ಟವಲ್ಲಿನ್ಯಾಗ ನೂರಾರು ರೂಪಾಯಿ ಜಮಾ ಆಗಿದ್ದು ನೋಡಿ ‘ಪರವಾಗಿಲ್ಲ ಇವತ್ತಿನ ಎಣ್ಣಿ(ಬಾಟ್ಲಿ)ಗೆ ಸಾಕಾಗ್ಬಹುದು.’ ಅಂತ ಅದನ್ನೆಲ್ಲಾ ಗಂಟು ಕಟಿಗಂಡ. ಮುಂದ ನಿಂತಿದ್ದ ಹಣಿಮೇಶನನ್ನ ಕೇರ್ ಮಾಡ್ಲಾರ್ದ ಹೊಂಟ. ‘ತಾತ ತಾತ’ ಹೊದರಿದ. ತಾತ ನಿಂದ್ರಲಿಲ್ಲ. ಒಳ್ಳಿಕೂಡ ನೋಡ್ಲಿಲ್ಲ. ‘ಎಷ್ಟು ಸೊಕ್ಕೈತಿ ನೋಡು ಈ ಮುದುಕಗ, ರೊಕ್ಕಕ್ಕ ಅಂದ್ರ ಜನ ಬಡ್ಕಂಡು ಸಾಯ್ತಾರ. ಬಿಟ್ಟಿ ರೊಕ್ಕಕ್ಕ ಅಂದ್ರ ಅದೇನು ಬೇಕಾದ್ರ ಮಾಡಾಕ ತಯ್ಯಾರು ಅದಾರ. ಹಂಗು ಹಿಂಗು ಮಾಡಿ ಕುಡ್ಯಾಕ ರೊಕ್ಕ ಮಾಡ್ಕೆಂದ. ಇಂಥ ಕೆಲ್ಸ ಮಾಡಾಕ ಇವ್ರಿಗೆ ಗಾಂಧಿ ತಾತನ ವೇಷ ಬೇಕಿತ್ತನು? ಇಂಥವ್ರಿಂದ ಗಾಂಧಿ ತಾತನ ಹೆಸರಿಗೆ ಮಸಿ ಬಡ್ತ್ಯಾರ. ಅದೆಂಗರ ಇರ್ಲಿಬುಡು ನನ್ನ ಮ್ಯಾಲಿದ್ದ ಆತನ ಋಣ ತೀರಿಬುಡ್ತಿ’ ಅಂತ ಲಿಂಗಪ್ಪ ತಾತ ಹೋದ ದಾರಿಕಡಿಗೆ ಹೊಂಟ.

ದಾರ್ಯಾಗ ಸರಾಯಿ ಅಂಗಡಿ ಕಂಡ್ತಿ. ಅದರ ಹೊರಗ ಒಂದು ಉದ್ದನ ಬಡಿಗಿ ಇತ್ತು. ‘ಆ ಮುದುಕ ಆಗ್ಲೆ ಇದರಾಗ ಕುಂತ್ಗಂಡು ಕಂಠದಮಟ ಎಣ್ಣಿ ಏರಿಸಿಗಂತಿರ್ತಾನ. ಹೋಗ್ಲಿ ಬುಡು ಆ ಮುದುಕಂದೇನು’ ಅಂತ ಜಗತ್ ಸರ್ಕಲ್ಲಿಗೆ ಬಂದ. ಬಸ್ಸಿಗೆ ಅಂತ ಕಾಯ್ಕಂತ ನಿಂತ. ನಿಂತ ಐದು ನಿಮಿಷದಾಗ ಇಪ್ಪತ್ತು ಮೂವತ್ತು ಆಟೊಗಳು ಬಂದು ‘ಎಲ್ಲಿಗ್ರಿ’ ಅಂತ ಕೇಳಿ ಹೋಗಿದ್ವು. ‘ಇಲ್ಲ’ ಅಂತ ಗೋಣು ಅಲುಗಾಡಿಸಿ ಸಾಕಾಗಿತ್ತು. ದರ್ಗಾ ರೋಡಿಗಿದ್ದ ಮಹಾವೀರ ಮೆಡಿಕಲ್ ಸ್ಟೋರ್ ನೊಳಗ ಲಿಂಗಪ್ಪ ತಾತ ಕಂಡ. ‘ಅರೆ ಸರಾಯಿ ಅಂಗಡ್ಯಾಗ ಎಣ್ಣಿ ಏರಿಸ್ತಾನ ಅಂದ್ಕಂಡಿದ್ದ್ಯ ಇಲ್ಲೇನು ಮಾಡ್ತಾನ’ ಅಂದ್ಕಂಡ. ಕೈಯ್ಯಾಗ ಟಾನಿಕ್ ಬಾಟ್ಲಿ, ಒಂದಿಷ್ಟು ಗುಳಿಗಿ, ರದ್ದಿ ಹಾಳ್ಯಾಗಿದ್ದ ಎರಡು ಪಾರ್ಸಲ್ ಹಿಡ್ಕಂಡು ಮಹಾನಗರ ಪಾಲಿಕೆಯ ಪಾರ್ಕಿನ ಕಡೆಗೆ ಹೊಂಟ. ಹಣಿಮೇಶನಿಗೆ ಕುತೂಹಲ ಹೆಚ್ಚಾಗಿ ಸರ್ಕಲ್ ದಾಟಿ ತಾತನ ಹಿಂದ ಹೊಂಟ.

ಹೆಚ್ಚಾಗಿದ್ದ ಕೆಮ್ಮು ತಡಿಲಾರ್ದ ಆ ಹೆಣುಮಗಳು ಕೆಮ್ಮಿಗೊಂದುಸಲ ‘ಸತ್ನೆಪ್ಪೋ’ ಅಂತ ಅಳಕತ್ತಿದ್ಲು. ಹೋಗಿ ಆಕಿಯ ಬಗಲಾಗ ಕುಂತು, ಇದರಾಗ ಇಡ್ಲಿ ಅದಾವ ಅದನ್ನ ತಿಂದು, ಗುಳಿಗಿ ನುಂಗು. ಆಮ್ಯಾಲ ಈ ಎಣ್ಣಿ ಕುಡ್ದು ಇಲ್ಲೇ ಮಕ್ಕ ನಾಳೆ ಅಂಬತಟಿಗೆ ಬೇಸಾತೀದಿ’ ಅಂದ. ‘ಓ ಇದು ತಾತನ ಸೆಟಪ್ಪು ಆಗಿರ್ಬಹುದು. ನೋಡು ಇಂಥ ವಯಸ್ಸಿನ್ಯಾಗ ಸೆಟಪ್ಪು ಬ್ಯಾರೆ ಇಟ್ಗಂದಾನ. ನೋಡಿದ್ರ ಗಾಂಧಿ ತಾತ ಕಂಡಂಗ ಕಾಣ್ತಾನ, ಮಾಡಾದು ಎಂಥಾ ಉದ್ಯೋಗ. ಆ ಸೆಟಪ್ಪಿನಮ್ಯಾಲ ಅದೆಷ್ಟೊಂದು ಕಾಳ್ಜಿ ಮಾಡ್ತಾನ ನೋಡು’ ಅಂದ್ಕಂತ ದೂರದಿಂದ ಮರಿಗೆ ನಿಂತು ನೋಡಿದ. ಆಮ್ಯಾಲ ಸನೆಕತ ಹೋಗಿ ನೋಡಿದ… ಕೆಮ್ಮು ಹೆಚ್ಚಾಗಿ ಸಾಯ್ ಸಾಯಂಗ ಆಡ್ತಿದ್ದಾಗ ಯಾರೋ ಬಂದು ‘ಯದಕಮ ಇಂಥ ಕೆಮ್ಮಾಗಿದ್ರ ಡಾಕ್ಡ್ರತಕ ತೋರ್ಸಬಕು. ಇಲ್ಲೇಳು ನಾನದಿನಿ ಎಲ್ಲಾ ಸರಿ ಆಗುತ್ತ’ ಅಂತ ಹೇಳಿದ ಒಂದೆರಡು ಮಾತುಗಳು ನಿದ್ದ್ಯಾಗಿದ್ರೂ ಕಿವ್ಯಾಗ ಬಿದ್ದಿದ್ವು. ‘ಸರಿ ಬುಡು ಹೋಗ್ಲಿ’ ಅಂತ ಮತ್ತ್ಯ ಮಕ್ಕಂಡಿದ್ನ್ಯಾ. ‘ರಾತ್ರಿ ಒಂದಸನ ಕೆಮ್ತಿದ್ದವ್ರು ಯಾರು ಅಂತ ಮುಂಜಾನೆ ಎದ್ದು ನೋಡಿದಾಗ ಕೆಮ್ಮಿಕಂತ ಮಕ್ಕಂಡಿದ್ಲಲ್ಲ ಅದ ಹೆಣುಮಗಳು ಈಕಿ’ ಅಂತ ನಿನ್ನೆ ರಾತ್ರಿದು ನೆನೆಸಿಗಂಡ. ಅಷ್ಟೊತ್ತಿಗೆ ಸೊಂಟದಾಗಿನ ಟೈಂ ನೋಡ್ಕೆಂಡ ಲಿಂಗಪ್ಪ ತಾತ ‘ನಾನು ಹೋಗ್ತೀನಿ ನಾ ಹೇಳ್ದಂಗ ಮಾಡು’ ಅಂತ ಹೇಳಿ ಇನ್ನೊಂದು ಪಾರ್ಸಲ್ ಹಿಡ್ಕಂಡು ಮಿನಿ ವಿಧಾನ ಸೌಧದ ಕಡೆಗೆ ಹೊಂಟ. ಹಣಿಮೇಶನ ಕುತೂಹಲ ಹೆಚ್ಚಾತು. ಊರಿಗೆ ಹೋಗ್ಬಕು ಅಂಬದನ್ನ ಆತನ ಕುತೂಹಲ ಮರೆಸಿ ತಾತನ ಹಿಂದ ನಡೆಯುವಂಗ ಮಾಡ್ತಿ.

ವಿಧಾನ ಸೌಧದ ಕಡೆಗೆ ಹೊಂಟಿದ್ದ ತಾತನ ಕಾಲುಗಳ ನಡಿಗೆ ಫಾಸ್ಟಾಗಿತ್ತು. ಹಣಮೇಶನೂ ತಾತನಂಗ ಹೆಜ್ಜೆ ಹಾಕ್ಕೆಂತ ಹೊಂಟಿದ್ದ. ತಾತ ಸೀದಾ ಸೌಧದ ಹಿಂದುಗಡೆ ಹೋದ. ಅಲ್ಲಿ ಕೈ, ಕಾಲು, ಬಾಯಿಗೆ ಲಕ್ವಾ ಹೊಡೆದು ಬಿದ್ಕಂಡಲ್ಲೇ ಬಿದ್ದಿದ್ದ ಆ ಮುದುಕನ ಸನೆಕ ಹೋದ. ಲಿಂಗಪ್ಪ ತಾತನನ್ನ ನೋಡಿದ ತಕ್ಷಣ ‘ಪ್ಯಾ ಪ್ಯಾ’ ಅಂತ ಕಣ್ಣಗಲಿಸಿ ನಾಲಿಗೆ ಹೊರಗ ತೆಗೆದು ಎದ್ದೇಳಾಕ ಬಡುದಾಡ್ತಿದ್ದ. ಅಲ್ಲಿಗೆ ಹೋದಾತನ ಕೈಯ್ಯಾಗಿದ್ದ ಪಾರ್ಸಲ್ ಬಿಚ್ಚಿದ. ಚಿತ್ರನ್ನವನ್ನ ನೋಡಿ ಮುದುಕ ಜೊಲ್ಲು ಸುರ್ಸಕತ್ತಿದ. ಆಮ್ಯಾಲ ಮುದುಕನ ಬಾಯಿಗೆ ಇಟ್ಟ. ಅರ್ಧದಷ್ಟು ತಿಂದ ಮುದುಕ ‘ನೀನು ತಿನ್ನು’ ಅಂತ ಒತ್ತಾಯದ ಸನ್ನೇ ಮಾಡಿದ. ಅವಾಗ ಲಿಂಗಪ್ಪ ತಾತ ತಾನೊಂದೆರಡು ತುತ್ತು ಬಾಯಿಗೆ ಇಟ್ಗಂಡ. ಉಳಿದಿದ್ದನ್ನೆಲ್ಲಾ ಆ ಮುದುಕಗ ತಿನ್ನಿಸಿದ. ಆಮ್ಯಾಲ ಆ ಮುದುಕನ ಬಗಲಾಗ ಇದ್ದ ಬಾಟ್ಲಿ ತಗಂಡು ನೀರು ಕುಡಿಸಿದ. ಬಾಯಿ ಒರೆಸಿ ತಾನೂ ನೀರು ಕುಡ್ದ. ಅಲ್ಲಿಂದ ಮತ್ತೇ ಲಿಂಗಪ್ಪ ತಾತ ಬ್ಯಾರೆಕಡೆ ಹೊಂಟ… ಬಿದ್ದಲ್ಲೇ ಬಿದ್ದಿದ್ದ ಆ ಮುದುಕನ ಸನೆಕತ ಬಂದ ಹಣಿಮೇಶ ವಾಸನೆ ತಡಿಲಾರ್ದ ಮೂಗು ಮುಚಿಗಂಡ.

ಸೂರ್ಯನಿಗಾಗ್ಲೇ ನೆತ್ತಿಮ್ಯಾಲೆ ನಿಂತು ಸಾಕಾದಂಗಾಗಿತ್ತು. ಅಲ್ಲಿಂದ ಮೆಲ್ಲಕ ಜಾರ್ಕೆಂತ ತನ್ನ ಗೂಡಿನ್ಯಾಕ ಹೊಕ್ಕಣಕತ್ತಿದ್ದ. ‘ಊರಿಗೆ ಹೋಗಾಕ ಇವತ್ತೂ ಕೂಡ ಹೊತ್ತಾತು’ ಅಂತ ಮತ್ತೇ ಆ ಮಹಾನಗರ ಪಾಲಿಕೆ ಪಾರ್ಕಿನ ಕಡೆಗೆ ಹೊಂಟ. ದಾರ್ಯಾಗಿದ್ದ ಹೋಟ್ಲದಾಗ ಉಂಡು ಪಾರ್ಕಿನ್ಯಾಗ ಹೋಗಿ ಮಕ್ಕಂಡ.

ಮುಂಜಾನೆ ಎದ್ದು ನೋಡಿದ ಹಣಿಮೇಶಗ ಬಗಲಾಗ ಒಂದು ಕೈ ಚೀಲ ಇತ್ತು. ‘ಇದರಾಗ ಏನೈತಿ’ ಅಂತ ನೋಡಿದ. ಕನ್ನಡಕ, ಗಡಿಯಾರ, ಸಿಲ್ವಾರ ಪೇಂಟಿನ ಡಬ್ಬಿ, ಟವಲ್ ಮತ್ತು ಭಗವಧ್ಗೀತೆ ಪುಸ್ತಕ ಇವೆಲ್ಲವೂ ಇದ್ವು. ಅದನ್ನೆಲ್ಲಾ ನೋಡಿ, ‘ಅರೇ ಇವು ಲಿಂಗಪ್ಪ ತಾತನವು. ಇದನ್ನ ಇಲ್ಲ್ಯಾ ಬುಟ್ಟು ಎಲ್ಲಿಗೆ ಹೋಗ್ಯಾನ’ ಅಂತ ಅಕ್ಕಾಡೆ ಇಕ್ಕಾಡೆ ನೋಡಿದ. ತಾತ ಟಾನಿಕ್, ಗುಳಿಗೆ ಕೊಟ್ಟು ಹೋಗಿದ್ದ ಆ ಹೆಣುಮಗಳು ಇವತ್ತು ಬೇಸಾಗಿದ್ಲು. ವಾಕಿಂಗ್ ಗೆ ಅಂತ ಬಂದು ಬುಟ್ಟು ಹೋಗಿದ್ದ ಪೇಪರನ್ನ ತಗಂಡು ಅದರಾಗಿನ ಚಿತ್ರ ನೋಡ್ಕೆಂತ ಕುಂತಿದ್ಲು. ಅದರಾಗ ಲಿಂಗಪ್ಪ ತಾತನ ಫೋಟೊ ಬಂದಿದ್ದನ್ನ ನೋಡಿ, ‘ಈ ಬಡ ಭಿಕ್ಷುಕರು ಕೇಳಿದರ ಒಂದು ರೂಪಾಯಿ ರೊಕ್ಕ ಕೊಡ್ಲಾರ್ದಂತ ಕಾಲ್ದಾಗ, ಯಾರೋ ಏನೊ ಎಲ್ಲಿಂದ ಬಂದ ಪುಣ್ಣ್ಯಾತ್ಮನೋ ಏನೊ ಥೇಟ್ ಗಾಂಧಿ ತಾತ ಬಂದಂಗ ಬಂದು ನನಗ ಎಣ್ಣಿ, ಗುಳಿಗಿ, ಅನ್ನ ಕೊಟ್ಟು ಅರಾಮ ಮಾಡ್ದೆಪ. ಇದರಂಗ ಅದೆಷ್ಟು ಮಂದಿಗೆ ನೀನು ಹೊಟ್ಟೆ ಕಟ್ಟಿ ಉಣಿಸಿದೆನಪ. ನಿಮ್ಮಂಥವ್ರೇ ನಮಗ ದ್ಯಾವ್ರು ಕಣಪ್ಪ. ನಿಮ್ಮಂಥವರ ಪೋಟ ದಿನಾ ಪೇಪರ್ನ್ಯಾಗ ಬರ್ಬಕಪ’ ಅಂತ ಆನಂದಭಾಷ್ಪ ಸುರಿಸಕತ್ತಿದ್ಲು. ಅದನ್ನ ನೋಡಿದ ಹಣಮೇಶ ಆ ಹೆಂಗಸಿನ ಸನೆಕತ ಬಂದ. ಪೇಪರ್ನ್ಯಾಗಿನ ಲಿಂಗಪ್ಪ ತಾತನ ಫೋಟೊ ನೋಡಿ, ‘ಇಲ್ಲ್ಯ ಕೊಡಮ ಸ್ವಲುಪ ನೋಡಿ ಕೊಡ್ತಿನಿ’ ಅಂದ. ‘ಏಯ್ ನಾನು ಕೊಡಲ್ಲಪ’ ಪೇಪರನ್ನ ಎದಿಗೆ ಒತ್ತಿಕೊಂಡ್ಲು. ಅಲ್ಲಿಂದ ಒಡೆ ಹೋಗಿ ರೊಕ್ಕ ಕೊಟ್ಟು ಪೇಪರ್ ತಗಂಡುಬಂದ.

`ವೇಷಧಾರಿ ಗಾಂಧಿಯ ಬಂಧನ’
ಕಲ್ಬುರ್ಗಿ; ನಗರದ ಶರಣಬಸಪ್ಪ ಅಪ್ಪ ದೇವಸ್ಥಾನದ ಮುಂದೆ ಗಾಂಧಿ ವೇಷ ಹಾಕಿಕೊಂಡು ಭಿಕ್ಷೆ ಬೇಡುತ್ತಿದ್ದ ಮುದುಕನೋರ್ವನನ್ನು ನಿನ್ನೆ ರಾತ್ರಿ ಬ್ರಹ್ಮಪುರ ಪೋಲಿಸ್ ಠಾಣಾ ಪಿಎಸ್ಐ ಚೇತನ ಕುಮಾರರವರು ಬಂಧಿಸಿದ್ದಾರೆ.

ಗಾಂಧಿ ವೇಷ ಹಾಕಿಕೊಂಡು ಭಿಕ್ಷೆ ಬೇಡುತ್ತಿರುವುದು ರಾಷ್ಟ್ರಪಿತನಿಗೆ ಅಷ್ಟೇ ಅಲ್ಲ ಇಡೀ ದೇಶಕ್ಕೇ ಅವಮಾನದ ಸಂಗತಿ. ಅದಕ್ಕಾಗಿ ಇಂಥವರನ್ನು ಕೂಡಲೇ ಬಂಧಿಸಿ ಜೈಲಿಗೆ ತಳ್ಳಿ ಎಂದು ವಿವಿಧ ರೀತಿಯ ಸಂಘ ಸಂಸ್ಥೆಗಳು ಒತ್ತಾಯಿಸಿದ್ದರ ಹಿನ್ನೆಲೆಯಲ್ಲಿ ಕಾರ್ಯಪ್ರವೃತ್ತರಾದ ಪೋಲಿಸರ ಈ ಕ್ರಮಕ್ಕೆ ಆ ಎಲ್ಲಾ ಸಂಘ ಸಂಸ್ಥೆಗಳು ಮೆಚ್ಚುಗೆ ವ್ಯಕ್ತಪಡಿಸಿವೆ.

ಹಣಮೇಶನಿಗೆ ಆಶ್ಚರ್ಯ ಆತು. ನಿಂತಗಂಡಲ್ಲೇ ನಿಂತ. ಕೈಯ್ಯಾಗ ಹುಸಿರಿಲ್ದಂಗಾತು. ಗಾಳಿ ಬಂದು ಪೇಪರ್ ಕಸ್ಗಂಡು ಹೋತು. ಕೈಯ್ಯಾಗಿದ್ದ ಚೀಲ ಕೆಳಗ ಬಿತ್ತು. ಆ ಚೀಲದಾಕ ಕೈ ಹಾಕಿದ. ಅದರಾಗಿದ್ದ ಕನ್ನಡಕ, ಸಿಲ್ವಾರ್ ಪೇಂಟಿನ ಡಬ್ಬಿ, ಗಡಿಯಾರ, ಭಗವದ್ಗೀತೆ ಪುಸ್ತಕ ಅವೆಲ್ಲವನ್ನ ಹೊರಗ ತಗೆದಿಟ್ಟ. ಅವೆಲ್ಲದರಾಗ ಆ ಗಾಂಧಿ ತಾತ ನಗುತ್ತಿದ್ದ ಚಿತ್ರಗಳೇ ಕಾಣಕತ್ತಿದ್ವು…

 

 

 

ವಿಶ್ವನಾಥ ಪಾಟೀಲಗೋನಾಳ

ವಂದೇ ಮಾತರಂ

 

“ಬೋಲೊ ಮಾತಾ ಕೀ… ಜೈ
ಮಹಾತ್ಮಾ ಗಾಂಧಿ ಕೀ… ಜೈ
ಜವಾಹರಲಾಲ ನೆಹರೂ ಕೀ… ಜೈ
ಸುಭಾಸಚಂದ್ರ… ಮಾತರಂ. ಒಂದೇ… ಮಾತರಂ”

ಜಿಟಿ ಜಿಟಿ ಸುರಿವ ಮಘಾ ಮಳೆಯಲ್ಲಿ ನೆನೆಯುತ್ತ ಕೋಲೂರಿಕೊಂಡೇ ತುಂಗಜ್ಜಿ ಅಂಗಳದಲ್ಲಿ ಪ್ರಭಾತ ಫೇರಿ ನಡೆಸಿದ್ದಳು. ಅಂಗಳದ ಆ ತುದಿಯಿಂದ ಈ ತುದಿಗೆ ಟಕ ಟಕ ನಡೆಯುತ್ತ, ಭಾರೀ ಉತ್ಸಾಹದಿಂದ ಜೈ ಜೈ ಕೂಗುತ್ತ ಕೈ ಎತ್ತಿ ಮುಷ್ಠಿ ಕಟ್ಟಿ ಗಾಳಿಗೆ ಗುದ್ದುತ್ತ ತನ್ನೊಳಗೇ ಮುಳುಗಿ ಹೋಗಿದ್ದಳು. ಅದೇ ಹೊತ್ತಿಗೆ ಯಾಕೊ ಹೊರಗೆ ಬಂದ ಸೊಸೆ ಸಾವಿತ್ರಿ “ಅಯ್ಯೊ ಅಯ್ಯೊ! ಮಳೆಯಲ್ಲಿ ತೋಯ್ತಾ ಇದ್ದೀರಲ್ಲ ಮಕ್ಕಳ ಹಾಂಗೆ! ನಿಮ್ಮ ತಲೆ ಏನು ಪುರಾಯ ಹನ್ನೆರಡಾಣೆ ಆಗ್ಹೋಯ್ತಾ ಹೆಂಗೆ? ನಾಳೆ ಜ್ವರ ಬಂದು ಮಲಗಿದ್ರೆ ಓದ್ದಾಡುವವ್ಳು ನಾನು… ಬನ್ನಿ ಸುಮ್ನೆ ಮೇಲೆ…” ಅನ್ನುತ್ತ ಅಜ್ಜಿಯ ಕೈ ಹಿಡಿದೆಳೆದು ಮನೆಯೊಳಗೆ ಕರೆತರುತ್ತಿದ್ದಾಗ ಆಗಷ್ಟೇ ಎಚ್ಚರಾದಂತೆ ಪಿಳಿ ಪಿಳಿ ಸೊಸೆಯನ್ನೇ ನೋಡಿ, ಏನೊ ತಪ್ಪು ಮಾಡಿ ಸಿಕ್ಕಿಬಿದ್ದ ಹುಡುಗಿಯಂತೆ ನಾಚಿ, ತಲೆ ಕೆಳಗೆ ಹಾಕಿದ್ದು ಕಂಡು ಯಾಕೊ ಸಾವಿತ್ರಿಯ ಕರುಳು ಗಂಟಲಿಗೇ ಬಂತು. ಅಜ್ಜಿಯ ಮಳ್ಳಿಗೆ ನಗೆಯೂ ಉಕ್ಕಿತು.

ಅಖಂಡ ಎಂಬತ್ತೆಂಟು ಮಳೆಗಾಲ ಕಂಡು ನುಗ್ಗು ನುರಿಯಾದ ಜೀವ! ಎಲುಬು ಚರ್ಮ ಮಾತ್ರವಾಗಿರುವ ಗೂಡನ್ನು ತೊರೆಯಲಾರದ ವ್ಯಾಮೋಹದಿಂದ ಆತ್ಮ ಪಕ್ಷಿ ಅದಕ್ಕಂಟಿಕೊಂಡಿರಬೇಕು. ಬೆಳ್ಳಿ ಸರಿಗೆಯಾದ ನೂರೊಂದು ತಲೆಗೂದಲನ್ನು ಬಾಚಿ ಹಿಂದೆ ಕಟ್ಟದ ಬೆಳ್ಳುಳ್ಳಿ ಗಂಟು. ಬೆಳ್ಳಕ್ಕಿಯಷ್ಟು ಬೆಳ್ಳಗಿನ ಸೀರೆ ಪಲಕ. ಹಸಿರು ಹಣೆ-ಖಾಲಿ ಕೊರಳು-ನರ ನರ ಮೇಲೆದ್ದ ಬರಿಗೈ. ಆದರೆ ಕಣ್ಣೊ?… ಕರೆಂಟಿಲ್ಲದ ಜಗುಲಿಗೆ ಹಚ್ಚಿಟ್ಟ ಹಣತೆ ದೀಪ. ಆ ಕಣ್ಣಲ್ಲಿ ಇಡೀ ಜಗತ್ತನ್ನೇ ಒಂದೇ ಉಸಿರಿಗೆ ಊದಿ ಹಾರಿಸಿಬಿಡುವ ಭಾವ. ಮುಖದ ನೂರು ನಿರಿಗೆಗಳಲ್ಲಿ ನೂರಾರು ಸುಖದುಃಖಗಳನ್ನು-ಸಾವಿರ ಸೋಲು ಗೆಲವುಗಳನ್ನು ನುಂಗಿ ನೀರು ಕುಡಿದು ಬಚ್ಚಲಲ್ಲಿ ಬಿಟ್ಟ ಧೈರ್ಯ. ದೇಹಕ್ಕೆ ಬಂದ ಮುಪ್ಪನ್ನೂ-ಮನಸಿಗೆ ಆಗೀಗ ಅಡರಿಕೊಳ್ಳುವ ಮರೆವನ್ನೂ ಗುಡಿಸಿ ಒಲೆಗೆ ಹಾಕುವ ಆತ್ಮವಿಶ್ವಾಸ.

…ಸಾವಿತ್ರಿ ಮತ್ತೊಮ್ಮೆ ಅತ್ತೆಯ ಮುಖವನ್ನೇ ದಿಟ್ಟಿಸಿದಳು… ಹೇಳಿಕೇಳಿ ಅತ್ತೆ ಸೊಸೆ ಸಂಬಂಧ. ಒಬ್ರು ಒಂದು ಮಾತು ಹೇಳಿದ್ರೆ ಸಾಕಾಗ, ಎರಡು ಹೇಳಿದ್ರೆ ಹೆಚ್ಚು. ಅವರೆಂದಾದ್ರೂ ತಾಯಿ ಮಗಳಾಗಲು ಸಾಧ್ಯವಾ? ಅದೇನೊ ಒಂದು ನಮೂನಿ ವಾರೆ ವಾರೆ ಮಾತು. ದುರು ದುರು ಬೆಂಕಿ ನೋಟ. ಎಲ್ಲೊ ಒಮ್ಮೊಮ್ಮೆ ಪರಸ್ಪರ ಪ್ರೀತಿ ಉಕ್ಕಿ ಹರಿಯುವದೂ ಉಂಟು. ಸಾವಿತ್ರಿ ಈ ಮನೆಗೆ ಬಂದ ಮೂವತ್ತೈದು ವರ್ಷಗಳಲ್ಲಿ ಅತ್ತೆ ಸೊಸೆ ನಡುವೆ ಅದೆಷ್ಟು ಸಾವಿರ ಜಗಳಗಳಾಗಿವೆಯೊ ಅವರಿಬ್ಬರಿಗೂ ಲೆಕ್ಕವಿಲ್ಲ. ಆದರೆ ಆ ಜಗಳಗಳಲ್ಲಿ ಅವರಿಬ್ಬರ ಬಾಯಿಂದ ಇಬ್ಮರ ಕುಲಗೋತ್ರಗಳೂ ಉದ್ಧಾರವಾಗಿವೆಯೆಂಬುದಷ್ಟು ಸತ್ಯ. ರಟ್ಟೆಗಿಳಿಯಲಾರದೆ ಹೊಟ್ಟೆಯಲ್ಲೇ ಉಳಿದ ಯಾವ್ಯಾವುದೊ ಸಿಟ್ಟುಗಳು-ಯಾವ್ಯಾವುದೊ ನಿರಾಶೆ ಅವಮಾನಗಳು-ಇನ್ಯಾವುದೊ ಭೀತಿ ಅಸಹನೆಗಳು ಕಿಡಿನುಡಿಗಳಾಗಿ ಛಟ ಛಟಿಲ್ಲನೆ ಸಿಡಿದಿದ್ದಷ್ಟು ಸತ್ಯ. ಆ ಝಳದಲ್ಲಿ ಮನೆ ಮಗನೂ-ಮೊಮ್ಮಕ್ಕಳೂ ಬೆಂದು ಬಸವಳಿದದ್ದೂ ನಿಜ.

ಆದರೆ ಮತ್ತೊಂದು ತಾಸಿಗೆ ಏನೂ ಆಗಿಯೇ ಇಲ್ಲವೆಂಬಂತೆ `ಅತ್ತೆ, ನಿಮಗೆ ಫಳಾರಕ್ಕೇನು ಮಾಡ್ಲಿ?’ ಸೊಸೆ ಕೇಳಬೇಕು. `ಒಂದು ತುತ್ತು ಅವಲಕ್ಕಿ ಮಜ್ಜಿಗೆ ತಿಂತೇನೆ ಅಂತ ಗೊತ್ತಿದ್ರೂ ದಿನಾ ಕೇಳ್ತೀಯಲ್ಲೆ ಮಾರಾಯ್ತಿ, ನಾ ನಿಂಗೇನ ಹೇಳ್ಲಿ?’ ಅತ್ತೆ ಅಲವತ್ತುಕೊಳ್ಳಬೇಕು. `ಅಲ್ವೆ ಸಾವಿತ್ರಿ, ಸೌಂತೆ ಬಳ್ಳಿಯಲ್ಲಿ ಹೂ ಮಿಡಿ ಕಚ್ಚಿರ್‍ಬೇಕಲ್ಲ. ಸುಟ್ಟ ಮಂಗ ಗಿಂಗ ಬಂದಾವು. ಒಂದು ಬೆಚ್ಚನ್ನಾದ್ರೂ ಮಾಡಿ ನಿಲ್ಲಿಸ್ಲಿಕ್ಹೇಳು ಕನ್ನನಿಗೆ.’ ಮೇಲೊಂದು ಸಲಹೆಯನ್ನೂ ಕೊಡಬೇಕು. ಅಜ್ಜಿಗೊಮ್ಮೆ ಶೀಕು ಪಾಕು ಆದರಂತೂ ಮತ್ಯಾರು ಬರುತ್ತಾರೆ? ಮೀಸಲಿಕ್ಕೂ ಒಗೆಯಲಿಕ್ಕೂ ಬಡಿಸಲಿಕ್ಕೂ ಸೊಸಿ ಮುದ್ದೇ ಗತಿ. ಆ ಸೊಸೆಯ ಮುಖಾರವಿಂದವೊ? ಕೆಲವೊಮ್ಮೆ ದುಮು ದುಮು ಉಮಿಯೊಳಗಿನ ಬೆಂಕಿ. ಕೆಲವೊಮ್ಮೆ ಕರಿ ಕಲ್ಲರೆ. ಇನ್ನೂ ಕೆಲವು ಬಾರಿ ಕಲ್ಲು ಕರಗಿದ ಕರುಣಾರಸ ಧಾರೆ ಧಾರೆ ಅತ್ತೆಯ ಮೇಲೆ. ಅಂತೂ ಒಂದು ನಮೂನಿ ಸಂಭಾಳಿಸಿಕೊಂಡು ಹೋಗುವದು ಯಾಕೇಂದ್ರೆ ನಾಳೆ ಅವಳ ಸೊಸೆಯೂ ಇಷ್ಟರ ಮಟ್ಟಿಗಾದರೂ ನೋಡಿಕೊಳ್ಳಬೇಕಲ್ಲ. ಕೈಕಾಲು ನಡುಗೊ ಕಾಲಕ್ಕೆ ಯಾರ ಕತೆ ಹ್ಯಾಂಗೊ?…

ಹಾಗೆ ಅಜ್ಚಿಯೂ ತನ್ನ ಪ್ರಾಯ ಕಾಲದಲ್ಲಿ ಸೊಸೆಯದೆರಡು ಬಾಣಂತನ ಮಾಡಿ ಮದ್ದು ಕಾಸಿಕೊಟ್ಟಿದ್ದಾಳೆ. ಇಲ್ಲವೆಂದಲ್ಲ. ಮೊನ್ನೆ ಮೊನ್ನೆ ಅಂದರೆ ತನ್ನ ಎಂಬತ್ತನೇ ವಯಸ್ಸಿನವರೆಗೂ ಒಪ್ಪತ್ತು ಗಟ್ಲೆ ಅಡಿಕೆ ಚಾಲಿ ಸುಲಿದಿದ್ದಾಳೆ. ಇವತ್ತಿಗೂ ಉಂಡ ಎಂಜಲು ಪಾತ್ರೆ ತೊಳೆಯದೆ ಹೊರಗೆ ಹೋಗಿದ್ದೇ ಇಲ್ಲ. ಯಾರಾದ್ರೂ ಕೇಳಿದರೆ ಮಾತ್ರ ತನ್ನ ಕಾಲದ ಕತೆಯ ಸಂಚಿ ಬಿಚ್ಚುವ-ಇಲ್ಲೆಂದರೆ ತನ್ನ ಪಾಡಿಗೆ ತಾನು ಪೇಪರು ಓದುತ್ತ ಇಲ್ಲಾ ರಾಮನಾಮ ಬರೆಯುತ್ತ ಹೆಬ್ಬಾಗಿಲ ಕಟ್ಟೆಯಲ್ಲಿ ಸ್ಥಾಪಿತಳಾಗುವ ತುಂಗಜ್ಜಿಗೆ ಕಳೆದ ನಾಲ್ಕಾರು ವರ್ಷಗಳಿಂದ ಆಗಸ್ಟ್ ಹದಿನೈದರಂದು ಮಾತ್ರ ಏನೋ ಆಗಿಬಿಡುತ್ತದೆ.

ಬೆಳಿಗ್ಗೆ ಕಾಗೆ ಕಾಗುಟ್ಟಲು ಪುರಸೊತ್ತಿಲ್ಲದೆ ಎದ್ದು ಗಡಬಡಿಸಿ ಮಿಂದು ಟ್ರಂಕಿನಿಂದ ಖಾದಿಯ ಬಿಳಿಸೀರೆ ತೆಗೆದುಟ್ಟುಕೊಂಡು ಬೋಲೊ ಭಾರತ ಮಾತಾಕೀ ಶುರು ಹಚ್ಚಿ ಬಿಡುತ್ತಾಳೆ. ಆದರೆ ಅವಳ ಜೈಕಾರ ನೆಹರೂಗಿಂತ ಮುಂದೆ ಬರುವದೇ ಇಲ್ಲ. ಮುಂದಿನ ಲಾಲ ಬಹಾದುರ ಶಾಸ್ತ್ರಿ, ಇಂದಿರಾಗಾಂಧಿ, ರಾಜೀವಗಾಂಧಿ ಮುಂತಾದವರಿಗೆ ಅಲ್ಲಿ ಜಾಗವೇ ಇಲ್ಲ. ಆದರೆ ಮಳೆಯಿರಲಿ-ಬಿಸಿಲಿರಲಿ ಯಾರೂ ಕರೆಯದಿದ್ದರೆ ತಾಸುಗಟ್ಲೆ ಬೇಕಾದರೂ ತನ್ನ ಫೇರಿಯನ್ನು ಮುಂದವರಿಸುತ್ತಲೇ ಇರುತ್ತಾಳೆ.

….ಸೊಸೆ ಬಡಿಸಿದ ಉಪ್ಪಿಟ್ಟು ತಿಂದು ಎಂಜಲು ಪಾತ್ರೆಯನ್ನಷ್ಟು ತಿಕ್ಕಿ ತೊಳೆದಿಟ್ಟು ಹೊರಗೆ ಬಂದು ಕುಂತ ತುಂಗಜ್ಜಿಯ ಮುಖದಲ್ಲಿ ನಾಚಿಕೆ ಇನ್ನೂ ಹನಿಯುತ್ತಿದೆ. ಛೆಛೆ! ಎಂಥಾ ಕೆಲ್ಸ ಆಗಿಹೋಯ್ತಲ್ಲ ಎಂಬ ಹಳಹಳಿಕೆ ಜೀವ ಹಿಂಡುತ್ತಿದೆ. ದಿನಪತ್ರಿಕೆಯಲ್ಲೂ ಕಣ್ಣು ಕೂರುತ್ತಿಲ್ಲ. ರಾಮನಾಮ ಪುಸ್ತಕದಲ್ಲೂ ಕೈ ಓಡುತ್ತಿಲ್ಲ. ಅಂಗಳದಲ್ಲಿ ರಪರಪ ಬಾರಿಸುತ್ತಿರುವ ಮಳೆ ಹನಿಗಳಾಚೆ- ಮಬ್ಬು ಮೋಡದ ಆಕಾಶದಾಚೆ-ಪಾಗಾರದಾಚೆ- ರಸ್ತೆಯಾಚೆ- ತೋಟದಾಚೆಗಿರುವ ಕತ್ತಲೆ ಕಾಗಿನಾಚೆಗಿರುವ ಏನನ್ನೊ ಆಕೆ ಹುಡುಕುತ್ತಿದ್ದಾಳೆ. ಆ ಕಾಲಾತೀತದ ಹಾದಿಯ ರಸ ರೂಪ ಗಂಧ ಸ್ಪರ್ಶಗಳನ್ನು ಮತ್ತೆ ಅನುಭವಿಸುತ್ತಿದ್ದಾಳೆ.

…ಅಜ್ಜ-ಅಜ್ಜಿ-ಮಕ್ಕಳು-ಸೊಸೆಯಂದಿರು-ಮೊಮ್ಮಕ್ಕಳು-ಮರಿಮಕ್ಕಳು-ಚಿಕ್ಕಪ್ಪ-ದೊಡ್ಡಪ್ಪಗಳಿಂದೊಡಗೂಡಿದ ಮೂವತ್ತು ಜನರ ತುಂಬು ಕುಟುಂಬದಲ್ಲಿ ಆರನೆ ಸೊಸೆಯಾಗಿ ಕಾಲಿಟ್ಟ ತುಂಗಾ ಎಂಬ ಹದಿನೈದರ ಬಾಲೆ, ದೊಡ್ಡವರು ನಿಲ್ಲು ಅಂದರೆ ನಿಲ್ಲುತ್ತ-ಕೂಡ್ರು ಅಂದಾಗ ಕೂಡ್ರುತ್ತ- ಹಿರಿ ಹೆಂಗಸರ ಗುಸು ಗುಸು ಪಿಸಿ ಪಿಸಿಗೆ ಸುಮ್ಮನೆ ಕಿವಿಯಾಗುತ್ತ- ಹಗೂರಾಗಿ ಓಡಾಡಿಕೊಂಡಿದ್ದ ಕಾಲ. ಮನೆಯ ಗಂಡಸರು ಗಾಂಧೀಜಿಯವರ ಕರೆಗೆ ಓಗೊಟ್ಟು ಸವಿನಯ ಕಾಯಿದೆ ಭಂಗ-ಅರಣ್ಯ ಸತ್ಯಾಗ್ರಹ-ಕರಬಂದಿ ಚಳುವಳಿ ಮುಂತಾಗಿ ತೊಡಗಿಕೊಂಡಿದ್ದ ಕಾಲ. ಊರ ಜನರೆಲ್ಲ ಸೇರಿ ಬಾವುಟ ಹಿಡಿದು ವಂದೇ ಮಾತರಂ ಕೂಗುತ್ತ ಹಳೆಸಾಲೆ ಮನೆಯಿಂದ ಅಳ್ಳಿಕಟ್ಟೆವರೆಗೆ ದಿನಾ ಮುಂಜಾನೆ ಮೆರವಣಿಗೆ ನಡೆಸುತ್ತಿದ್ದ ಕಾಲ. ಅವಳ ಸಣ್ಣ ಮಾವನಂತೂ ಅಂಕೋಲೆವರೆಗೆ ನಡೆದುಕೊಂಡೇ ಹೋಗಿ, ಸಮುದ್ರ ದಂಡೆಯಲ್ಲಿ ಉಪ್ಪು ನೀರು ಕಾಯಿಸಿ, ಪುಡಿಕೆ ಉಪ್ಪು ತಯಾರಿಸಿ ಜೈಲಿಗೆ ಹೋಗಿದ್ದ.

ರಾತ್ರಿ ಯಾವುದೊ ಹೊತ್ತಿನಲ್ಲಿ ಕರಪತ್ರದ ಗಂಟು ಹಿಡಿದು ಯಾರೊ ಬಂದು ಬಾಗಿಲು ತಟ್ಟಿದರೆ ಹೆಂಗಸರೂ ಮೇಲೆದ್ದು ಇದ್ದರೆ ಅನ್ನ, ಇಲ್ಲಂದರೆ ಅವಲಕ್ಕಿ ಮಜ್ಜಿಗೆ ಬಡಿಸಬೇಕು, ಲಾಠಿ ಏಟು ತಿಂದು ಗಾಯಗೊಂಡವರನ್ನು ಯಾರೊ ರಾತ್ರೊರಾತ್ರಿ ಹೊತ್ತು ತಂದರೆ ಅವಳ ದೊಡ್ಡ ಮಾವ ಸೂಡಿ ಬೆಳಕಲ್ಲೇ ಶಿವಣೆ ಸೊಪ್ಪು ತಂದು ಅರೆದು ಕುಡಿಸಿ ಬೋಳು ಕಾಳಿನ ಪೋಟೀಸು ಕಟ್ಟಿ ಬೆಚ್ಚಗೆ ಹೊದೆಸಿ ಮಲಗಿಸಬೇಕು. ಹೊತ್ತು ಹೊತ್ತಿನ ಅನ್ನಕ್ಕೆ ಅಕ್ಕಿ ಅಳೆಯುವ ಹೆಂಗಸರು ಸಿದ್ಧಗೊಂದು ಮುಷ್ಠಿಯಂತೆ ಸತ್ಯಾಗ್ರಹಿಗಳ ಮುಷ್ಠಿ ಅಕ್ಕಿ ಫಂಡಿಗೆ ತೆಗೆದಿಡಬೇಕು. ಪ್ರತಿಯೊಬ್ಬರಲ್ಲೂ ಅದೇನೊ ಉತ್ಸಾಹ. ಅದೇನೊ ಕಾತರ. ಬೆಳ್ಚಾ ಮಂಗನ ಮುಖದ ಬ್ರಿಟಿಷರನ್ನು ಭಾರತದಿಂದ ಒದ್ದೋಡಿಸಲೇಬೇಕೆಂಬ ಆಗ್ರಹ. ಕರಪತ್ರಗಳ ಮೂಲಕ ಮತ್ತು ಹರಿಜನ ಪತ್ರಿಕೆಯ ಮೂಲಕ ಮನೆ ಮನೆ ತಲುಪುತ್ತಿದ್ದ ಗಾಂಧೀಜಿಯವರ ಸತ್ಯ ನಿಷ್ಠೆಯ ಸಂದೇಶ. ಪ್ರಾಮಾಣಿಕ ಧೈರ್ಯದ ಸಂದೇಶ, ಅನ್ಯಾಯಕ್ಕೆ ಹೆದರದೆ ಗುಂಡಿಗೆ ಗುಂಡಿಗೆಯೊಡ್ಡಿ ನಿಲ್ಲುವಂಥ ಅಚಲ ಆತ್ಮವಿಶ್ವಾಸ! ಗಾಂಧೀಜಿ ಅಂದರೆ ದೇವರಿಗಿಂತ ಹೆಚ್ಚು. ಬಾಪು ಅಂದರೆ ಭಾರತ ಭಾಗ್ಯವಿಧಾತ. ಆತ ಹೂಂ ಅಂದಕೂಡಲೇ ಹಾಂ ಅನ್ನುತ್ತ ಎದ್ದು ನಿಲ್ಲುವ ಮೂವತ್ತು ಮೂರು ಕೋಟಿ ಜನರು…

ಅರೆ ಅರೆ ಅರೆ!! ಇವೆಲ್ಲ ಗಂಡಸರ ಪ್ರಪಂಚದ ಮಾತಾಯಿತೊ. ಅಸಲಿಗೆ ಹಿತ್ತಿಲು-ಅಂಗಳ-ತೋಟ ಬಿಟ್ಟರೆ ಇಪ್ತತ್ನಾಲ್ಕು ತಾಸೂ ಮನೆಯೊಳಗೇ ಜೀವ ತೆಮೆಯುವ ಹೆಂಗಸರು ಕೆಂಪು ಮೋತಿ ಬ್ರಿಟಿಷರನ್ನು ಹಾಗಿರಲಿ, ರಾಷ್ಟ್ರಪತಿ ಗಾಂಧಿಯವರನ್ನಾದರೂ ಎಲ್ಲಿ ಕಂಡಿದ್ದಾರೆ? ಕಾಳಕ್ಷರ ಬರೆಯಲಾರದೆ ಓದಲಾರದ ಅವರಿಗೆ ಮಹಾತ್ಮನ ಮಾತುಗಳು ಅರ್ಥವಾದೀತಾದರೂ ಹೇಗೆ? ಅಂದರೆ ಮನೆಯ ಗಂಡಸರು ಊಟ ಆಸರಿಗೆ ಕುಂತಾಗ ತಮ್ಮ ತಮ್ಮಲ್ಲಿ ಮಾತಾಡಿಕೊಳ್ಳುತ್ತಿದ್ದುದನ್ನು ಕೇಳಿ ಅಷ್ಟಿಷ್ಟು ತಿಳಿದುಕೊಂಡರು. ಅದನ್ನು ತನಗೆ ತಿಳಿದಂತೆ ಇನ್ನೊಬ್ಬಳಿಗೆ ಹೇಳಿ ಅವಳು ಮಗುದೊಬ್ಬಳಿಗೆ ಹೇಳಿ ಆಯಾ ಮನೆಯ ಗಂಡಸರ ಮಾತುಕತೆಗಳು ಊರೆಲ್ಲ ಮರು ಪ್ರಸಾರಗೊಂಡು ಪ್ರತಿಯೊಬ್ಬನಲ್ಲೂ ಸತ್ಯಾಗ್ರಹದ ಹುರುಪು ತುಂಬಿದ್ದು ಸುಳ್ಳಲ್ಲ.

…ದೇಶದ ತುಂಬಾ ಚಲೇಜಾವ್ ಚಳುವಳಿಯಂತೆ. ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ಎಂದು ಗಾಂಧೀಜಿ ಹಟ ಹಿಡಿದು ಕುಂತಿದ್ದಾರಂತೆ, ಹಳ್ಳಿ ಹಳ್ಳಿಯ ಮನೆ ಮನೆಯ ಹೆಂಗಸರು ಗಂಡಸರು ಅಲ್ಲಲ್ಲೇ ಅಲ್ಲಲ್ಲೇ ಸತ್ಯಾಗ್ರಹ-ಪಿಕೇಟಿಂಗ್ ಮಾಡಬೇಕಂತೆ… ಎರಡು ವರ್ಷದ ಮಗನನ್ನು ಎದೆಗವಚಿಕೊಂಡು ಅಕ್ಕಿ ಗೇರುತ್ತಿದ್ದ ತುಂಗೆಯ ಎದುರು ಕರಪತ್ರ ಓದಿದ ಅವಳ ಸಣ್ಣ ಮಾವ. ಕೇಳಿದ ಅವಳಿಗೇನಾಯಿತೊ, ಮಗನನ್ನೆತ್ತಿಕೊಂಡೇ ಧಡಕ್ಕನೆ ಎದ್ದು ನಿಂತಳು. ನಿಂತವಳು ಮತ್ತಲ್ಲೇ ಕುಸಿದು ಕುಂತಳು.

ವರ್ಷದ ಹಿಂದಷ್ಟೇ ತುಂಗೆಯ ಗಂಡ ಸೊಪ್ಪಿನ ಮರದಿಂದ ಬಿದ್ದು ಕುಡ್ತೆ ನೀರಿಗೆ ಬಾಯಿ ತೆಗೆಯದೆ ಸತ್ತು ಹೋಗಿದ್ದ. ಕೇವಲ ಇಪ್ಪತ್ತು ವರ್ಷದ ಬಾಲೆಯ ತಲೆಯ ಸಿರಿ ಕತ್ತರಿಸಿ ಬಿದ್ದಲ್ಲಿ ಕೆಂಪು ಸೆರಗು ಮುಚ್ಚಿಕೊಂಡಿತ್ತು. ಆ ಅಸಹನೀಯ ದುಃಖ ಹೊತ್ತುಕೊಂಡು ಗಂಡನಿಲ್ಲದ ಗಂಡನ ಮನೆಯಲ್ಲಿ ಅವಳು ಹೇಗೆ ಬದುಕುತ್ತಿದ್ದಾಳೆಂದು ಅವಳಿಗೇ ಗೊತ್ತಿರಲಿಲ್ಲ.

ಮರುದಿನದ ಪ್ರಭಾತಫೇರಿಯಲ್ಲಿ ಎಲ್ಲರಿಗಿಂತ ಮುಂದೆ ನಿಂತು ಬಾವುಟ ಹಿಡಿದುಕೊಂಡಾಗ “ಅಯ್ಯೊ ಅಪಶಕುನ! ನಿನ್ನಾಂಥವ್ಳು ಹಿಡಿಯೋದಲ್ಲ ಅದು. ಇಲ್ಕೊಡು ಅದನ್ನ” ಮಾವ ಕಸಿದುಕೊಳ್ಳುವ ಅಬ್ಮರದಲ್ಲಿ ಅವಳನ್ನು ದೂಡಿಬಿಟ್ಟ. ಮುಖ ಮುಚ್ಚಿ ಅಳುತ್ತ ಕೂತ ಅವಳು ಮತ್ತೈದೇ ನಿಮಿಷಕ್ಕೆ ಮೇಲೆದ್ದು ಸೀರೆಗಂಟಿದ ಧೂಳು ಕೊಡವಿಕೊಳ್ಳುತ್ತ ಫೇರಿಯ ಹಿಂದೆ ಹಿಂದೇ ಹೋಗಿ ತಾನೂ ಧ್ವಜಕ್ಕೆ ವಂದಿಸಿ ಜೈಕಾರ ಹಾಕಿದಳು.
“ವಿಜಯೀ ವಿಶ್ವತಿರಂಗಾ ಪ್ಯಾರಾ
ಝಂಡಾ ಊಂಚಾ ರಹೇ ಹಮಾರಾ
ಸದಾ ಶಕ್ತಿ ಸರಸಾನೇ ವಾಲಾ
ಪ್ರೇಮಸುಧಾ ಬರಸಾನೇ ವಾಲಾ
ವೀರೋಂ ಕೊ ಹರಷಾನೇ ವಾಲಾ
ಮಾತೃಭೂಮಿ ಕಾ ತನಮನ ಸಾರಾ”…

“ಕಸ್ತೂರಾ ಬಾಯಿಯರೆ
ಕಮಲಾ ದೇವಿಯರೆ
ಚಳುವಳಿ ಮಾಡುವರೆ ನಾವ್
ಚಳುವಳಿ ಮಾಡುವರೆ”…

-ಮುಂತಾದ ಸತ್ಯಾಗ್ರಹದ ಹಾಡುಗಳಿಗೆ ತಾನೂ ದನಿಗೂಡಿಸಿದಳು. ಗಂಡಸರು ತಿರು ತಿರುಗಿ ನೋಡುತ್ತ ಮೂಗು ಮುರಿದರೂ-ನಾಲ್ಕಾರು ಸಂಖ್ಯೆಯಲ್ಲಿದ್ದ ಹೆಂಗಸರು ಬಾಯಿ ವಾರೆ ಮಾಡಿದರೂ ಅವೆಲ್ಲ ತನಗಲ್ಲವೇ ಅಲ್ಲ, ಅದೇ ಆ ಮರಕ್ಕೆ, ಎಂಬಂತೆ ಹೋಗುವದೊಂದೇ ಮಾಡಿದಳು. “ಮಾನಗೇಡಿ, ಎಲ್ಲಾರೆದ್ರಿಗೆ ನಮ್ಮ ಮಂತಾನದ ಮರ್‍ಯಾದೆ ತೆಗೆದೆ, ಗಂಡ ಸತ್ತ ಹೆಣ್ಣಿಗ್ಯಾಕೆ ಚಳುವಳಿ ಗಿಳುವಳಿ ಎಲ್ಲ? ನಡಿಯೇ ಒಳಗೆ… ಕತ್ತೆ ಹ್ವೊತಂದು…” ಮಾವ ಬೈದ. “ಯನ್ನ ಬಂಗಾರದಂಥಾ ಮಗನನ್ನಂತೂ ತಿಂದು ಹಾಕಿದೆ. ಈಗೀ ನಮನಿ ಉರೆ ಹೊಯ್ತಾ ಇದ್ದೀಯೆ. ಸುಮ್ನೆ ಮನೇಲಿದ್ರೇನಾಗತ್ತೆ ನಿಂಗೆ?” ಅತ್ತೆ ಅಲವತ್ತುಕೊಂಡು ಅತ್ತಳು. ತುಂಗೆ ಯಾರಿಗೂ ಕಂ ಕಿಂ ಉತ್ತರಿಸಲೂ ಇಲ್ಲ, ದಿನಾ ಮಗನೊಂದಿಗೆ ಚಳುವಳಿಗೆ ಹೋಗುವದನ್ನು ನಿಲ್ಲಿಸಲೂ ಇಲ್ಲ… ಅವಳಲ್ಲಿ ಆಗ ನಿಜಕ್ಕೂ ಅಂಥ ಉತ್ಕಟ ದೇಶಾಭಿಮಾನವಿತ್ತೆ? ಮಹಾತ್ಮನ ಮಾತುಗಳಲ್ಲಿ ಅಂಥಾ ಅಚಲ ಶ್ರದ್ಧೆಯಿತ್ತೆ? ಅಥವಾ ಸತ್ಯಾಗ್ರಹ ಎಂಬುದು ವೈಧ್ಯವ್ಯದ ನರಕದಿಂದ ಪಾರಾಗಲು ಇರುವ ಒಂದೇ ಒಂದು ಕಿರುದಾರಿಯಾಗಿತ್ತೆ?… ಇಲ್ಲ, ಇಂದಿಗೂ ಹೇಳಲಾರಳು.

…ಮರುದಿನವೇ ಗಾಂಧೀಜಿಯವರನ್ನು ಹಿಡಿದು ಹಾಕಿದರಂತೆ. ಯಾರೂ ಸತ್ಯಾಗ್ರಹ ನಿಲ್ಲಿಸಬೇಡಿರೆಂದು ಅವರು ಜೈಲಿನಿಂದಲೇ ಕರೆಕೊಟ್ಟರಂತೆ. ಇಡೀ ದೇಶದ ಹೆಂಗಸರು-ಗಂಡಸರು-ಮಕ್ಕಳು-ಮುದುಕರು ಇಂಗ್ಲಿಷರ ವಿರುದ್ಧ ಘೋಷಣೆ ಕೂಗಿ, ಕಾನೂನು ಮುರಿದು ಜೈಲು ಸೇರುತ್ತಿದ್ದಾರಂತೆ… ಮತ್ಯಾರೊ ಪೋಸ್ಟ್ ಆಫೀಸು ಸುಟ್ಟರಂತೆ… ಇನ್ನೆಲ್ಲೊ ಸೇತುವೆಗೆ ಬಾಂಬು ಹಾಕಿ ಉರುಳಿಸಿಬಿಟ್ಟರಂತೆ… ಯಾವುದೊ ಹೆಂಗಸು ಪೊಲೀಸರಿಗೇ ಬಡಿಗೆಯಿಂದ ಹೊಡೆದಳಂತೆ… ಇನ್ನೆಲ್ಲೊ ಮಾಮತೀದಾರರ ಟಾಂಗಾ ಅಡ್ಡಗಟ್ಟಿ ಅವರಿಗೇ ಚೆನ್ನಾಗಿ ಬಡಿದರಂತೆ… ಕರಿಗತ್ತಲ ರಾತ್ರಿಗಳಲ್ಲಿ ಕಂಬಳಿ ಹೊದ್ದು-ಸೂಡಿ ಹಿಡಿದು ಕೊಳ್ಳಿದೆವ್ವಗಳಂತೆ ಸಂಚರಿಸುವ ಬಾತ್ಲಿದಾರರು ತರುತ್ತಿದ್ದ ಕರಪತ್ರಗಳಿಂದ ಹಾಹಾ ಹಾಹಾ ಹರಡುವ ಸುದ್ದಿಗಳು! ಮೂಲೆ ಮೂಲೆಯ ಒಂಟಿಮನೆಗಳಲ್ಲೂ ಕೋಲಾಹಲ!… ಇಂದು ಮೇಲಿನ ಕೇರಿಗೆ ಪೋಲೀಸ್ರು ಬಂದು ಗಂಡಸರನ್ನೆಲ್ಲ ಹಿಡಿದುಕೊಂಡು ಹೋದರಂತೆ…. ಕಾನುಬೈಲಲ್ಲಿ ಗಂಡಸ್ರು ಹೆಂಗಸ್ರು ಹೇಳಿಲ್ದೆ ಪ್ರಾಯದವರನ್ನೆಲ್ಲ ಎಳ್ಕೊಂಡ್ಹೋದ್ರಂತೆ… ಎಲ್ರಿಗೂ ಬಡಿದು ಬಡಿದು ಮೋಟಾರು ತುಂಬಿದರಂತೆ… ಅಯ್ಯೊ! ಅಕ್ಕಯ್ಯ, ಈಗೆಂತಾ ಮಾಡಕಾತೆ?… ಅಣ್ಣಯ್ಯ, ಈ ಬ್ರಿಟಿಷರು ಏನೇನ್ಮಾಡ್ತಾರೊ ಮಾಡ್ಲಿ ನೋಡುವಾ ಹಂ, ಗುಂಡು ಹಾರ್‍ಸಿ ದೇಶದ ಅಷ್ಟೂ ಜನರನ್ನು ಸುಟ್ಟು ಹಾಕ್ತಾರಾ? ಹಾಕ್ಲಿ ಹಂ… ನಾವೇನು ಸುಮ್ನೆ ಬಿಡೋದಿಲ್ಲ. ಅವ್ರೀ ದೇಶ ಬಿಟ್ಟು ಓಡಿ ಹೋಗ್ಬೇಕೆ ನಾವು ಚಳವಳಿ ನಿಲ್ಲಿಸ್ಬೇಕೆ…. ಹಂ, ಏನಂತ ತಿಳ್ದೀದಾರೆ ನಮ್ಮ?…

…ಊರೆಲ್ಲ ಗದ್ದಲವೊ ಗದ್ದಲ. ಪ್ರತಿಯೊಂದು ಹಳ್ಳಿಯೂ ಧಗ ಧಗಿಸುವ ಅಗ್ನಿಗುಂಡ. ದಿನಕ್ಕೊಂದು ಸುದ್ಧಿ-ತಲಿಗೊಂದು ಮಾತು.

…ಐದನೇ ದಿನ ಪೋಲೀಸರು ಸಂಕದಳ್ಳಿಗೂ ಬಂದೇ ಬಂದರು. ಬಂದವರು ಲಾಠಿಯಿಂದ ಬಡಿ ಬಡಿದು ಸತ್ಯಾಗ್ರಹಿಗಳನ್ನು ಮೂರು ಜೀಪಿಗೆ ತುಂಬಿಕೊಂಡು ನೆಲದ ಪುಣ್ಯವನ್ನೇ ಬಳಿದುಕೊಂಡು ಹೊಂಟಂತೆ ತುಂಗೆ ಮತ್ತು ಅವಳ ಮಗನೂ ಸೇರಿದಂತೆ ಮೂವತ್ತು ಮಂದಿಯನ್ನು ಹೊತ್ತೊಯ್ದರು. ಹಾಗೆ ಡುರ್ರಬುರ್ರನೆ ಅಲ್ಲಿಂದ ಹೊರಟ ಗಾಡಿಗಳು ಮಹಾರಾಷ್ಟ್ರದ ಯರವಡಾ ಜೈಲಿನೆದುರು ಹೋಗಿ ನಿಂತವು. ಅಲ್ಲಿ ಸಂಕದಳ್ಳಿಯ ಜನರನ್ನೆಲ್ಲ ಬೇರೆ ಬೇರೆಯಾಗಿ ವಿಂಗಡಿಸಿ ಎಲ್ಲೆಲ್ಲಿಗೊ ಕಳಿಸಿದರು. ಅಲ್ಲಿಗೆ ತುಂಗೆ ಮತ್ತು ಅವಳ ಮಾಣಿ ಅಕ್ಷರಶಃ ಪರದೇಸಿಗಳಾದರು.

…ಜೈಲಿನಲ್ಲಿರುವ ಕಳ್ಳ ಕಳ್ಳಿಯರು-ಸುಳ್ಳ ಸುಳ್ಳಿಯರು-ಮುಖ ನೋಡಿದರೆ ಎಚ್ಚರ ತಪ್ಪಬೇಕಾದಂಥ ಭಯಂಕರ ಆಕಾರದ ಕೊಲೆಗಾರರು-ಬಡಿದೇ ಮಾತಾಡುವ ಜೈಲು ಅಧಿಕಾರಿಗಳು. ಇಂಥವರ ನಡುವೆ, ಒಬ್ಬರ ಮಾತು ಒಂದಕ್ಷರವೂ ಅರ್ಥವಾಗದ ಜಾಗದಲ್ಲಿ, ರಾಗಿ ಬೀಸುತ್ತ-ರೊಟ್ಟಿ ಸುಡುತ್ತ-ಜಲ್ಲಿ ಒಡೆಯುತ್ತ ಎರಡೂವರೆ ವರ್ಷದ ಮಗನನ್ನು ಬೆನ್ನಿಗೆ ಕಟ್ಟಿಕೊಂಡು ಎಂಟು ತಿಂಗಳುಗಳ ಕಾಲವನ್ನು ಹೇಗೆ ಕಳೆದಳೆಂಬುದು ಅವಳೊಬ್ಬಳಿಗೇ ಗೊತ್ತು. ವಾರಕ್ಕೊಮ್ಮೆ ಮೀಯುತ್ತ-ತಿಂಗಳಿಗೊಮ್ಮೆ ಮುಟ್ಟಿನ ಅಲವರಿಕೆ ಸಹಿಸುತ್ತ-ಅಲ್ಲೇ ಮತ್ತೆ ಗಂಡಸರ ಒಂಥರಾ ನೋಟಕ್ಕೆ ತಲೆ ತಗ್ಗಿಸುತ್ತ-ಹೇಗೆ ಬದುಕಿದಳೆಂಬುದು ಆ ಪರಮಾತ್ಮನಿಗೇ ಗೊತ್ತು.

ಆದರೂ ಒಂದು ದೃಢ ನಿರ್ಧಾರ, ದೇಶದ ಸ್ವಾತಂತ್ರ್ಯಕ್ಕಾಗಿ ಏನನ್ನೂ ಸಹಿಸಬಲ್ಲೆನೆಂಬ ಧೈರ್ಯ. ದೇಶಕ್ಕಾಗಿ ನಾವು-ನಮಗಾಗಿ ದೇಶವಲ್ಲ. ದೇಶವಿದ್ದರೆ ನಾನು-ನಾನಿದ್ದರೆ ದೇಶವಲ್ಲ. ಇಡೀ ದೇಶದ ದೇಶ ಬಾಂಧವರ ಸಂಕಷ್ಟದೆದುರು ತನ್ನೊಬ್ಬಳ ಕಷ್ಟಗಳು ಏನೇನೂ ಅಲ್ಲ ಎಂಬ ಅಸ್ಪಷ್ಟ ತಿಳುವಳಿಕೆ… ದಿನಕ್ಕೊಮ್ಮೆಯಾದರೂ ಮನೆಯ ನೆನಪು. ಮನೆ ತುಂಬ ಓಡಾಡುವ ಜನರ ನೆನಪು. ಕರುಣೆಯ ಶಕಾರ ಶಬ್ದವಿಲ್ಲದ ಆ ಮನೆಯೆಂಬ ಜೈಲಿಗೂ ಇಲಿಲ್ನ ಈ ಖರೆ ಕಾರಾಗೃಹಕ್ಕೂ ವ್ಯತ್ಯಾಸ ಯಾವುದೆಂದು ಸ್ಪಷ್ಟವಾಗುತ್ತಿಲ್ಲ. ಇಲ್ಲಿನ ಕ್ರೂರ ಜೈಲರು-ದರ್ಪಿಷ್ಟ ವಾರ್ಡನ್ ಗಳಿಗಿಂತ ಅತ್ತೆ-ಮಾವ-ಮೈದುನ-ನಾದಿನಿಯರು ಹೇಗೆ ಒಳ್ಳೆಯವರು ಎಂಬುದೂ ಅರ್ಥವಾಗುತ್ತಿಲ್ಲ. ಆ ಮನೆಗಿಂತ ಈ ಸೆರೆವಾಸವೇ ಲೇಸಾಗಿರಬಹುದೆ? ಗೊತ್ತಾಗುತ್ತಿಲ್ಲ. ತಂದೆ-ತಾಯಿ ಹುಟ್ಟಿದ ಮನೆಯನ್ನಂತೂ ಯಾವತ್ತೊ ತೊರೆದು ಬಂದಾಗಿದೆ. ಈಗ ತಾನಿದ್ರೂ ಸೈ-ಸತ್ರೂ ಸೈ. ಯಾರಿಗೇನು ನಷ್ಟವಿಲ್ಲ. ಆದರೆ ಸುಳ್ಳು ಮುಳ್ಳೂ ಒಂದೂ ಅರಿಯದ ಈ ಹಸುಕಂದನನ್ನು ತಬ್ಬಲಿಯಾಗಿಸುವ ಹಕ್ಕು ತನಗಿಲ್ಲ. ಅವನಿಗಾಗಿಯಾದರೂ ಬದುಕಲೇಬೇಕು. ಅದಕ್ಕಿಂತಲೂ ಮುಖ್ಯವಾಗಿ ದೇಶದ ಸ್ವಾತಂತ್ರ್ಯ ಹೋರಾಟದ ಮಹಾಯಜ್ಞದಲ್ಲಿ ತನ್ನದೊಂದು ಮರಳ ಕಣವನ್ನಾದರೂ ಅರ್ಪಿಸಲೇಬೇಕೆಂಬ ತುಡಿತ.

ಸ್ಪಷ್ಟವಾಗಿ ಇವೇ ಮಾತುಗಳು ಎಂದಲ್ಲ. ಇಂಥ ಧೋರಣೆಯ ಹತ್ತೆಂಟು ತುಂಡು ತುಂಡು ವಿಚಾರಗಳು ಅವಳೊಳಗೆ ದಿಗಣ ಹಾಕುತ್ತಿದ್ದುದಂತೂ ಸತ್ಯವಾಗಿತ್ತು. ಜೊತೆಗೆ ಜೈಲಿನಂಗಳದಲ್ಲಿದ್ದ ಮರಳ ರಾಶಿಯಲ್ಲಿ ಚಳುವಳಿಗಾರ್‍ತಿಯರಿಂದ ಅಕ್ಷರ ಬರೆಸಿಕೊಂಡು ತಿದ್ದಿ ತಿದ್ದಿ ಕನ್ನಡ ಮತ್ತು ಮರಾಠಿ ಬರೆಯಲು ಕಲಿತಳಲ್ಲದೆ ಅಕ್ಷರಕ್ಷರ ಕೂಡಿಸಿ ಓದಲಿಕ್ಕೂ ಕಲಿತು ಗಾಂಧೀಜಿಯವರ ಸತ್ಯ-ಅಹಿಂಸೆ-ಪ್ರಾಮಾಣಿಕತೆ-ಗ್ರಾಮ ಸ್ವರಾಜ್ಯ-ಹರಿಜನೋದ್ಧಾರ-ಹಿಂದಿ ಪ್ರಚಾರ-ಖಾದಿ ಪ್ರಸಾರ ಮುಂತಾದ ವಿಚಾರಗಳನ್ನು ಅಷ್ಟಿಷ್ಟು ಅರ್‍ಥಮಾಡಿಕೊಳ್ಳುತ್ತಿದ್ದಂತೆ ಅವಳ ಮನ ಉಬ್ಬುಬ್ಬಿ ಬರುತ್ತಿತ್ತು. ತಾನ್ಯಾವುದೊ ಮಹತ್ಕಾರ್ಯದಲ್ಲಿ ತೊಡಗಿಕೊಂಡಿದ್ದೇನೆಂಬ ಭಾವ ಮೈಯ್ಯಿಡೀ ತುಂಬಿ ನಿಂತಿರುತ್ತಿತ್ತು.

ಎಂಟು ತಿಂಗಳ ನಂತರ ಎಲ್ಲ ಸತ್ಯಾಗ್ರಹಿಗಳೊಂದಿಗೆ ಅವಳನ್ನು ಬಿಡುಗಡೆಗೊಳಿಸಿದ್ದು ಹೌದಾದರೂ ಅವಳು ಹೋಗಿ ಸೇರಿದ್ದು ಮಾತ್ರ ಸಾಬರಮತಿ ಆಶ್ರಮಕ್ಕೆ. ತಾನಿಂಥಲ್ಲಿಗೆ ಹೋಗುತ್ತಿದ್ದೇನೆಂದು ಮಾವನ ವಿಳಾಸಕ್ಕೊಂದು ಕಾರ್ಡು ಬರೆದು ಹಾಕಿ, ಜೈಲಿನಲ್ಲಿ ಹೆಂಗಸರಿಗೆ ಕ್ಷೌರ ಮಾಡುವವರಿಲ್ಲದೆ ಉದ್ದ ಬೆಳೆದ ಕೂದಲು ಬಾಚಿಕಟ್ಟಿ, ಬಿಳಿಯ ಖಾದಿ ಸೀರೆ ಉಟ್ಟು, ಸಹವಾಸಿನಿ ಗೋದೂತಾಯಿಯೊಂದಿಗೆ ಮಗನ ಕೈಹಿಡಿದುಕೊಂಡೇ ಆಶ್ರಮದಲ್ಲಿ ಕಾಲಿಟ್ಟಳು. ಅಲ್ಲಿ ಗಾಂಧೀಜಿ ಎಂಬ ಬೊಚ್ಚು ಬಾಯಿಯ ಕಡ್ಡಿ ದೇಹದ- ತುಂಡು ಪಂಚೆಯ ಅಜ್ಜನಲ್ಲಿ ಅಡಗಿರುವ ಮಹಾನ್ ಶಕ್ತಿಯೆದುರು ಬೆರಗಾಗಿ ಬಾಯಿ ಬಿಟ್ಟುಕೊಂಡು ನಿಂತಳು. ಅಲ್ಲಿ ಎಲ್ಲರೊಂದಿಗೆ ಇಡೀ ದಿನ ದುಡಿಯುತ್ತ ಭಜನೆ ಮಾಡುತ್ತ ಪ್ರವಚನ ಕೇಳುತ್ತ-ನೂಲು ತೆಗೆಯುತ್ತ-ಬಂದು ಹೋಗುವ ನೂರಾರು ಜನರನ್ನು ಬಿಟ್ಟ ಕಣ್ಣಿಂದ ನೋಡುತ್ತ ಅವಳು ಬೆಳೆದಳೆ? ಅವಳ ಮಗ ಬೆಳೆದನೆ? ಅಥವಾ ಬೆಳವಣಿಗೆಯ ಹಾದಿಯಲ್ಲಿ ಸೇವಾದೀಕ್ಷೆ ತೊಟ್ಟಳೆ?… ಅವಳಿಗೇ ಗೊತ್ತಿಲ್ಲ.

ಆಶ್ರಮವಾಸಿಕ ಪರ್ವದ ಎರಡು ವರ್ಷ ಕಳೆಯುತ್ತಿದ್ದಂತೆ ಸತ್ಯಾಗ್ರಹಿಗಳೆಲ್ಲ ರಚನಾತ್ಮಕ ಕಾರ್ಯಗಳಲ್ಲಿ ತೊಡಗಿಕೊಳ್ಳಿರೆಂಬ ಬಾಪೂಜಿಯವರ ಕರೆಯಂತೆ, ಗೋದೂತಾಯಿಯೊಂದಿಗೇ ಸೊಲ್ಲಾಪುರಕ್ಕೆ ಬಂದು ಆಸ್ಪತ್ರೆಯೊಂದರಲ್ಲಿ ದಾಯಿಯಾಗಿ ಸೇರಿಕೊಂಡು, ಮಗನನ್ನು ಶಾಲೆಗೆ ಸೇರಿಸಿ ರೋಗಿಗಳ ಸೇವೆಯಲ್ಲಿ ತನ್ನನ್ನು ತಾನು ಮರೆತರೂ ಹುಟ್ಟೂರ ನೆನಪು ಮರೆಯಲಾಗಲಿಲ್ಲ.

ತುಂಗೆಯ ಬದುಕು ಒಂದು ನಮೂನಿ ದಿಡ ಹತ್ತಿತು ಅನ್ನುವಾಗಲೇ ದೇಶಕ್ಕೆ ಸ್ವಾತಂತ್ರ ಸಿಕ್ಕಿತು. ದೇಶ ವಿಭಜನೆಯಾಯಿತು. ಮನುಷ್ಯರೊಳಗಿನ ರಾಕ್ಷಸ ಹೊರಬಿದ್ದು ಹುಚ್ಚೆದ್ದು ಕುಣಿದು ಲಕ್ಷಾಂತರ ಜನರ ಹತ್ಯೆಯಾಯಿತು. ಗಲ್ಲಿ ಗಲ್ಲಿಗಳಲ್ಲಿ ನೆತ್ತರು ಕೋಡಿ ಹರಿಯಿತು. ತಾಯಿಯ ಎದೆ ಸೀಳಿದ ಗಾಯ ಮಾಯುವ ಮೊದಲೇ ಗಾಂಧೀಜಿಯವರ ಹತ್ಯೆಯಾಯಿತು. ಆ ಆಘಾತದಲ್ಲಿ ಇಡೀ ದೇಶವೇ ಅಲ್ಲೋಲ ಕಲ್ಲೋಲಗೊಂಡಿತು. ಆ ಹೊತ್ತಿನಲ್ಲಿ ತುಂಗಾ ಎಂಬ ಬಡಪಾಯಿ ಹೆಂಗಸು ಹೆದರಿ ಕಂಗಾಲಾಗಿ ಇನ್ನು ಇಲ್ಲಿರಲಾರನೆಂದು ಮರಳಿ ಊರ ದಾರಿ ಹಿಡಿದಳು ಎಂಬಲ್ಲಿಗೆ ಅವಳ ಬದುಕಿನ ಬಹುದೊಡ್ಡ ಅಧ್ಯಾಯವೊಂದು ಮುಗಿಯಿತು…

“ಸುಜಲಾಂ ಸುಫಲಾಂ ಮಲಯಜ ಶೀತಲಾಂ
ಸಸ್ಯ ಶ್ಯಾಮಲಾಂ-ಮಾತರಂ. ವಂದೇ ಮಾತರಂ”

…ಮರಿಮಗ ದೀಪು ಕೂಗುತ್ತ ಓಡಿಬಂದಾಗ ತುಂಗಜ್ಜಿ ಬೆಚ್ಚಿ ಕಣ್ಣು ತಿಕ್ಕಿ ತಿಕ್ಕಿ ನೋಡಿದಳು. ಇಲ್ಲ, ಗಾಂಧಿಯೂ ಇಲ್ಲ ಆಶ್ರಮವೂ ಇಲ್ಲ-ತನ್ನೆದುರು ರಾಷ್ಟ್ರಧ್ವಜವೂ ಇಲ್ಲ. ದೀಪು ಮಾಣೆ ತನ್ನ ಶಾಲೆಯ ಧ್ವಜ ವಂದನೆಯ ಪ್ರಸಂಗವನ್ನೇ ಕೂಗುತ್ತ ಬರುತ್ತಿದ್ದಾನಷ್ಟೆ. ಬಂದವನೇ “ಅಜ್ಜಿ ತಗಾ ಪೆಪ್ಪರಮೆಂಟು” ಅಂದ. ಅಜ್ಜಿ ಒಂದನ್ನು ತೆಗೆದು ಬಾಯಿಗೆ ಹಾಕಿಕೊಂಡಳು. ಪೆಪ್ಪರಮೆಂಟು ಹುಳಿ ಶೀಂ ಹುಳಿ ಶೀಂಯಾಗಿ ತುಂಬಾ ರುಚಿಯಾಗಿತ್ತು ಅವತ್ತಿನಂತೆಯೆ. ನಿಂಬೆರಸದ ಪರಿಮಳವಿತ್ತು ಆವತ್ತಿನಂತೆಯೆ. ಮಗನ ಶಾಲಾದಿನಗಳಲ್ಲಿ ಆತ ತಂದುಕೊಡುತ್ತಿದ್ದ ಪೆಪ್ಪರಮೆಂಟಿನಂತೆಯೇ ಇದೂ ತಿಳಿ ಗುಲಾಬಿ ಬಣ್ಣ ಹೊಂದಿತ್ತು.

“ಏ ಪುಟ್ಟು ಇವತ್ತು ಧ್ವಜ ಹಾರಿಸ್ಲಿಕ್ಕೆ ಯಾರು ಬಂದಿದ್ರೊ?” ಅಜ್ಜಿಯ ಕುತೂಹಲ.
“ಮತ್ಯಾರು? ಅವ್ನೇ ಇದ್ದಾನಲ್ಲೆ ಪ್ರತಿವರ್ಷ ಬರೋನು, ದೊಡ್ಡ ಮನೆ ಸತ್ನಾರಣ ಮಾಮ. ಅವ್ನೇ ಧ್ವಜ ಹಾರಿಸಿ ಭಾಷಣ ಮಾಡಿದ.”
“ಏನಂದನೊ ಭಾಷಣದಲ್ಲಿ?”
“ಏನೇನೊ ಹೇಳಿದ್ನಪಾ. ನಂಗೊಂದೂ ಗೊತ್ತಾಗ್ಲಿಲ್ಲ… ಅಮಾ ಹಶವೂ…” ಕೂಗುತ್ತ ಮಾಣಿ ಒಳಗೋಡಿಯೇ ಬಿಟ್ಟ.
ಅಜ್ಜಿ ತಾನೂ ಒಳಗೇಳಲು ಹೊರಟವಳು ಯಾಕೊ ಮತ್ತಲ್ಲೇ ಕುಳಿತಳು.

ಸತ್ಯ ನಾರಾಯಣನಂತೆ ಸತ್ಯನಾರಾಯಣ! ಆವ ಪುಣ್ಯಾತ್ಗಿತ್ತಿ ಅವಂಗೀಹೆಸರಿಟ್ಲೊ… ಅವ್ನ ಹೊಟ್ಯಲ್ಲಿ ತುಂಬಿಕೊಂಡಿದ್ದಷ್ಟೂ ಬರೀ ಸುಳ್ಳೇಯ. ಅಲ್ಲಿ ಎಳ್ಳು ಕಾಲು ಮುಳ್ಳು ಮೊನೆಯಷ್ಟಾದ್ರೂ ಖರೆ ಅನ್ನೋದಿದ್ರೆ ಕೇಳು… ಊರೆಲ್ಲಾ ಉದ್ಧಾರ ಮಾಡ್ತಾನಂತೆ. ಜನರ ಸೇವೆ ಮಾಡ್ಲಿಕ್ಕೆಂದೇ ತಾನು ಬದುಕಿರೋದಂತೆ. ತನ್ನನ್ನು ಆರಿಸಿತಂದ್ರೆ ಜನರ ಕೈಗೆ ಸ್ವರ್ಗಾನೇ ತಂದುಕೊಡ್ತಾನಂತೆ… ಯಾವಾಗ ಆಯ್ಕೆಗೊಂಡು ಛೇರ್‍ಮನ್ ಖುರ್ಚಿ ಏರಿದ್ನೊ ತಗ. ಉದ್ಧಾರಾಗಿದ್ದು ತಾನೊಬ್ಬ ಮಾತ್ರ. ಅಲ್ಲಲ್ಲ, ತನ್ನ ಮಕ್ಕಳು ಮೊಮ್ಮಕ್ಕಳು ನೆಂಟರಿಷ್ಟರೂ ಕೂಡ… ಅಲ್ಲಿ ರಸ್ತೆ ರಿಪೇರಿ ಅಂದಪ. ಇಲ್ಲಿ ಕಾಲು ಸಂಕ ಅಂದ. ಅಲ್ಲಿ ಕೆರೆ ಏರಿ ಅಂದ. ಇಲ್ಲಿ ಕಿರು ನೀರಾವರಿ ಅಂದ, ಅಲ್ಲೊಂದು ಬಾವಿ-ಇಲ್ಲೊಂದು ಟ್ಯಾಂಕು. ಆ ಶಾಲೆಗಿಷ್ಟು ಈ ಆಸ್ಪತ್ರೆಗಷ್ಟು… ಸರ್ಕಾರದಿಂದ ಬಂದ ದುಡ್ಡನ್ನೆಲ್ಲ ಅಧ್ಯಕ್ಷ ಕಾರ್ಯದರ್ಶಿ ಸೇರಿ ತೆಕ್ಕರ್ಧ-ಮಕ್ಕರ್ಧ ಹಂಚಿಕೊಂಡು ಜನರ ಕಣ್ಣೊರೆಸಲು ಅಷ್ಟಿಷ್ಟು ತೊಜರಾಣಿ ಕೆಲ್ಸ ಮಾಡಿ, ಕಟ್ಟಿ ನಾಲ್ಕೇ ತಿಂಗಳಿಗೆ ಶಾಲೆಯ ಗೋಡೆ ಕುಸಿದು ಬಿದ್ದು ಯಾರೊ ತಳ್ಳಿ ಅರ್ಜಿ ಹಾಕಿದಾಗ, ಸೆಕ್ರೆಟರಿ ಛೇರ್‍ಮನನನ್ನೂ-ಛೇರ್‍ಮನ್ನ ಸೆಕೆಟ್ರರಿಯನ್ನೂ ತೋರಿಸುತ್ತ ಯಾರ್‍ಯಾರಿಗೆಷ್ಟೆಷ್ಟು ತಿನ್ನಿಸಿದರೊ-ಅಂತೂ ಪಾರಾಗಿ ಬಂದಿದ್ದು ಹಳೆ ಕತೆ.

ಇನ್ನು ಚುನಾವಣೆ ಗೆದ್ದ ಸಡಗರವಂತೂ ಯಾವ ಪಾಪಿಗೂ ಬ್ಯಾಡ.

ಆಗಿನ್ನೂ ಸ್ವಾತಂತ್ರ್ಯ ಸಿಕ್ಕ ಹೊಸದು. ಹಳ್ಳಿ ಹಳ್ಳಿಗಳಲ್ಲೂ ಗ್ರಾಮ ಪಂಚಾಯ್ತಿಗಳ ಹೊಸ ಹುರುಪು. ಅವಳಿಗಾಗ ಮೂವತ್ತೈದರ ಹುಮ್ಮಸು. ತನ್ನ ಮಗನ ಪಾಲಿಗೆ ಬಂದ ಒಂದೆಕರೆ ಅಡಿಕೆ ತೋಟದಲ್ಲಿ ಬೆವರು ಬಸಿದು ಬಂಗಾರ ಬೆಳೆವ ಕನಸು. ಕಲಿಯಲು ಹುಶಾರಿ ಇದ್ದ ಮಗನನ್ನು ಸಮೀಪದ ಪೇಟೆಯ ಹಾಸ್ಟೆಲ್ಲಿನಲ್ಲಿಟ್ಟು ಕಾಲೇಜು ಕಲಿಸಿ ಮುಂದೊಂದು ದಿನ ಆತ ಮಾಮಲೇದಾರನಾಗಿ ಬರಲೆಂಬ ಆಸೆ.

“ಹಿರಿಬ್ಬೆ, ಈ ಚುನಾವಣೆಗೆ ನೀ ನಿಲ್ಲಲೇಬೇಕು. ಈ ಸಲ ಪಂಚಾಯ್ತಕ್ಕೆ ಮಹಿಳಾ ಸೀಟು ನೀನೇಯ. ಸುತ್ತಾ ಹತ್ತೂರಲ್ಲಿ ಮತ್ಯಾವ ಹೆಂಗ್ಸಿಗೆ ನಿನ್ನ ಯೋಗ್ತೆಯಿದೆ? ಏನ್ಕತೆ?… ನೀ ಏನು ಹೆದರಬೇಡ. ನಿಂಜೊತೆ ನಾವೆಲ್ಲ ಇದ್ದೇ ಇರ್‍ತೇವಲ್ಲ” ಎಂದೆಲ್ಲಾ ಉಬ್ಬಿಸಿ ಉಬ್ಬಿಸಿ ತುಂಗೆ ಬ್ಯಾಡ ಬ್ಯಾಡಂದ್ರೂ ಬಿಡದೆ ನಾಮಪತ್ರ ತುಂಬಿ ಕೊಟ್ಟವನು ಅವನೇಯ. ಅವಳು ಅರೆ ಮನಸ್ಸಿನಿಂದಲೇ ಒಪ್ಪಿಕೊಂಡಿದಕ್ಕೂ ಕೆಲವು ಕಾರಣಗಳಿದ್ದವು. ತನ್ನೂರಿನ ಶಾಲಾ ಮಕ್ಕಳು ದಿನಂಪ್ರತಿ ಓಡಾಡುವ ಹಾದಿಯ ಹಳ್ಳಕ್ಕೊಂದು ಕಾಲು ಸಂಕಬೇಕು. ಊರಲ್ಲಿ ಯಾರಿಗೆ ಆರಾಮಿಲ್ದಿದ್ರೂ ಗೋವಿಂದ ಗೌಡನ ನೋಟವೇ ಗತಿ. ಮಕ್ಕಳು-ಮುದುಕ್ರು-ಬಸರಿ-ಬಾಣಂತೇರ ಗತಿಯಂತೂ ದೇವ್ರಿಗೇ ಪ್ರೀತಿ. ಹೀಂಗಾಗಿ ತಮ್ಮೂರಿಗೊಂದು ಆಸ್ಪತ್ರೆ ಬೇಕೇಬೇಕು. ವಕ್ಕಲ ಕೇರಿ ಹೆಂಗಸ್ರು ಫರ್‍ಲಾಂಗ್ ದೂರದ ಹಳ್ಳದಿಂದ ನೀರು ಹೊತ್ತು ತರಬೇಕು. ಆ ಕೇರಿ ಮಧ್ಯದಲ್ಲೊಂದು ಬಾವಿ ಬೇಕು. ಎಲ್ಲಕ್ಕಿಂತ ಮೊದಲು ತಮ್ಮೂರಿನ ಹೊಂಡ ಗುಂಡಿಯ ಕಚ್ಚಾ ರಸ್ತೆಯನ್ನು ಪಕ್ಕಾ ಮಾಡಿಸ್ಬೇಕು. ಪಂಚಾಯ್ತ ಮೆಂಬರಿಕೆಯ ಅಧಿಕಾರ ಸಿಕ್ಕರೆ ಇವೆಲ್ಲವುಗಳ ಪ್ರಯತ್ನವನ್ನಾದರೂ ಮಾಡಲು ಸಾಧ್ಯವಾಗಬಹುದೆಂಬ ಆಸೆಯಿಂದ ಆಕೆ ಹೂಂಗುಟ್ಟಿದ್ದಳು.

ಆದರೆ ಈ ಸುಳ್ಳು ನಾರಾಯಣನೊ? ಹಿರಿಬ್ಬೆಯಿಂದ ನಾಮಪತ್ರ ಕೊಡಿಸಿದವನು ಸೀದಾ ತನ್ನಕ್ಕ ನೆಲ್ಲಿಬೀಡಿನ ಶಾರದೆಯ ಮನೆಗ್ಹೋಗಿ ಅವಳಿಗೂ ಬುಲ್ತಾಫು ಮಾಡಿ ಇವಳ ವಿರುದ್ಧ ಅವಳನ್ನು ನಿಲ್ಲಿಸಿದ್ದ. ಹಗಲು ರಾತ್ರಿ ಅವಳ ಪರವಾಗಿ ಪ್ರಚಾರ ಮಾಡಿದ್ದಷ್ಟೇ ಅಲ್ಲ. ವಕ್ಕಲೀರ ಕೇರಿಗೆಲ್ಲಾ ತಲಾ ಒಂದೊಂದು ಕೊಟ್ಟೆ ಹಂಚಿ. ಮೇಲಿಂದ ಇಪ್ಪತ್ತರ ಒಂದೊಂದು ನೋಟನ್ನೂ ಹಿಡಿಸಿ ಶಾರದೆಯೇ ಗೆದ್ದು ಬರುವಂತೆ ಮಾಡಿದ್ದ. “ಹ್ಯಂಗಾತೊ ಭಾವ? ತಾನು ಅಂದ್ರೆ ದೊಡ್ಡ ಗಾಂಧಿ ತುಂಡು ಅಂದ್ಕೊಂಬಿಟ್ಟಿದೆ ಆ ಹೆಂಗ್ಸು. ಈಗ ಸಮಾ ಮಂಗಳಾರ್‍ತಿ ಆಯ್ತೊ ಇಲ್ವೊ?” ಮನೆ ಮನೆ ಹೊಕ್ಕು ಆತ ಸಾರಿದ ಸುದ್ದಿ ತುಂಗೆಯ ಕಿವಿಗೂ ಬಂದು ಮುಟ್ಟಿದಾಗ ಅವಳ ಇಡೀ ಮೈ ಒಂದಾಗಿ ಧಗ ಧಗಿಸಿತ್ತು. ಅವನೊಮ್ಮೆ ಎದುರು ಸಿಕ್ಕರೆ ಕಣ್ಣಿಂದಲೇ ಅವನ ಸುಟ್ಟು ಬೂದಿ ಹಾರಿಸುವಷ್ಟು ಸಿಟ್ಟು ಬಂದಿತ್ತು. ಆದರೆ ಮತ್ತೊಂದು ತಾಸಿಗೆ ತಲೆ ತಂಪಾದಾಗ ಹಯ್ಯ! ಇಷ್ಟೇನಾ? ಇದ್ರಿಂದ ನನ್ನದೇನು ಹೋಯ್ತು ಮಹಾ ಬೋಳಮಟೆಕಾಯಿ? ತಾನು ಆರಿಸಿ ಬಂದಿದ್ದಿದ್ರೇ ಮುಂದೆ ತುಬಾ ಕಷ್ಟವಿತ್ತು. ಮನೆ ಕೆಲ್ಸ-ತೋಟದ ಕೆಲಸದ ಸಂಗ್ತಿಗೆ ಸಾರ್ವಜನಿಕ ಕೆಲಸವೂ ಸೇರಿ ಕುಂಡೇ ತುರಿಸಲು ತೆರಪಿಲ್ದಿದ್ಹಾಂಗೆ ಆಗ್ತಿತ್ತು. ಇರ್‍ಲಿ, ಸೋತಿದ್ದೇ ಒಳ್ಳೇದಾತು ತಗ, ಇನ್ನೆಂದೆಂದೂ ಆ ಕೊಳಕು ರಾಜಕೀಯದ ಉಸಾಬರಿಗೇ ಹೋಗದಂತೆ ಒಂದು ಪಾಠ ಕಲಿತ್ಹಾಂಗಾತು ಎಂಬ ಸಮಾಧಾನದಲ್ಲಿ ತಾನಾಯ್ತು. ತನ್ನ ಕೆಲಸವಾಯ್ತು. ಕೆಂದೆ ದನದ ವಾಗಾತಿಯಾಯ್ತು. ವಾರಕ್ಕೊಮ್ಮೆ ಬರುವ ಮಗನೊಂದಿಗೆ ಮಾತುಕತೆಯಾಯ್ತು. ಅಕ್ಕಪಕ್ಕದ ಹೆಂಗಸರು ಕಂಡರೆ ನಿಂತು ನಾಲ್ಕಾರು ಸುಖದುಃಖ ಕೇಳುವದಾಯ್ತು… ಇನ್ನೇನು ಬೇಕಾಗಿದೆ ಬದುಕಿಗೆ?

ಅಂದರೂ ಅವಳೊಳಗಿನ ನಾಕು ಜನರಿಗೆ ಒಳ್ಳೇದಾಗಲಿ ಅನ್ನೋ ಮನೋಭಾವವೇನೂ ತೊಲಗುತ್ತಿಲ್ಲ. ಆದರೆ ಇದು ಗಾಂಧಿಯುಗವಲ್ಲ, ನೆಹರೂ ಯುಗ. ಗಾಂಧೀಜಿಯವರ ಸತ್ಯದೊಂದಿಗಿನ ಪ್ರಯೋಗಗಳೆಲ್ಲ ಅವರೊಂದಿಗೇ ಹೋಗಿ ಬಿಟ್ಟವು. ಅವರ ಪ್ರಾಮಾಣಿಕತೆ-ಸತ್ಯ ನಿಷ್ಠೆ-ಅಹಿಂಸೆಗಳೆಲ್ಲ ಅವರೊಂದಿಗೇ ಹಳ್ಳ ಹಿಡಿದವು. ಅವರ ಪ್ರಮುಖ ಧ್ಯೇಯಗಳಲ್ಲೊಂದಾದ ಪಾನನಿಷೇಧ ಕೋಟಿಗಳ ಆಸೆಗೆ ಮಾಯವಾಗಿ ಊರೂರಲ್ಲಿ ಹೆಂಗದಂಗಡಿಗಳು ತಲೆಯೆತ್ತಿದ್ದವು. ಅವರ ಗ್ರಾಮಸ್ವರಾಜ್ಯ-ಸ್ವದೇಶಿ ಮಂತ್ರಗಳು ಬುಡಮೇಲಾಗಿ ನೆಹರೂ ಅವರ ವಿದೇಶಿ ಸಹಾಯ ಬೃಹತ್ ಕೈಗಾರಿಕೆಗಳ ನೀತಿ ಚಾಲನೆಯಲ್ಲಿತ್ತು. ಸ್ವಾತಂತ್ರ್ಯಕ್ಕಾಗಿ ಅಷ್ಟೆಲ್ಲ ಶ್ರಮಪಟ್ಟ ಕಾಂಗ್ರೆಸ್ಸಿನ ಗಾಂಧಿಟೋಪಿಗಳು ತಮ್ಮನ್ನಾರಿಸಿ ಗದ್ದುಗೆ ಗೇರಿಸಿದ ಜನ ಸಾಮಾನ್ಯರಿಗೆ ಚೆಂದಾಗಿ ಜರಿ ಟೋಪಿ ಹಾಕತೊಡಗಿದ್ದವು. “ಗಾಂಧಿ ತತ್ವ” “ಗಾಂಧಿ ಕ್ಲಾಸ್” “ಗಾಂಧಿ ಮೊಮ್ಮಗ” ಎಂಬಲ್ಲ ಕುಹಕಗಳು ಜನರ ಬಾಯಲ್ಲಿ ನಲಿದಾಡತೊಡಗಿದ್ದವು. ಅಸೆಂಬ್ಲಿ-ಪಾರ್ಲಿಮೆಂಟ್ ಚುನಾವಣೆಗಳಲ್ಲೂ ನಡೆವ ಭ್ರಷ್ಟಾಚಾರಗಳನ್ನು ದಿನನಿತ್ಯದ ಜನಜೀವನದಲ್ಲಿ ಹಾಸುಹೊಕ್ಕಾಗುತ್ತಿರುವ ಲಂಚಾವತಾರಗಳನ್ನು ಊರಿಗೆ ಅವಳೊಬ್ಬಳೇ ತರಿಸಿಕೊಳ್ಳುತ್ತಿದ್ದ ದಿನಪತ್ರಿಕೆ ಓದಿ ತುಂಗೆ ಅರ್ಥಮಾಡಿಕೊಳ್ಳುತ್ತಿದ್ದಳು. ಒಟ್ಟಿನಲ್ಲಿ ಅವಳದೇ ಭಾಷೆಯಲ್ಲಿ ಹೇಳುವದಾದರೆ “ಹೆಂಚು ಕಾಣದ ಮೂಳಿ ಕಂಚು ಕಂಡ್ಹಾಂಗಾಗಿತ್ತು” ರಾಜಕಾರಣಿಗಳ ಕತೆ. ಅಂಥ ಹೊಲಸಿನಲ್ಲಿ ತಾನು ಕಾಲು ಹಾಕದಿದ್ದುದೇ ಒಳ್ಳೆದಾತು ಬಿಡು ಎಂದು ತನ್ನ ತೋಟ ಮನೆ ಕೆಲಸದಲ್ಲಿ ಮುಳುಗಿ ಹೋದಳು…

“ಅಬೇ ಅಲ್ನೋಡು, ಜೀಪು ಬಂದೇ ಬಿಡ್ತು” ಅಂದ ರಾಘು ಅಂದರೆ ತುಂಗಜ್ಜಿಯ ಮಗ.

“ಹೌದು. ಕರ್ನಾಟಕ ಸರ್ಕಾರ ಅನ್ನೋ ಬೋಡಿದೆ. ಅಜ್ಜೀ ನೀನೀಗ ಫೋಟೋಕ್ಕೆ ಛಲೊ ಫೋಜು ಕೊಡ್ಬೇಕು. ನಿನ್ನ ಹಿಂದೆ ನಾನು ನನ್ನ ಹೆಂಡ್ತಿ-ಮಗ. ನಿನ್ನ ಅಕ್ಕಪಕ್ಕದಲ್ಲಿ ಅಪ್ಪ ಅಮ್ಮ… ಹಾಂ…” ಮೊಮ್ಮಗ ದಿನಕರ ತಮಾಷೆ ಮಾಡುತ್ತಿದ್ದಂತೆಯೇ ಜೀಪು ಅಂಗಳಕ್ಕೆ ಬಂದು ನಿಂತಿತು. ಅದರಿಂದಿಳಿದವರು ತಹಶೀಲ್ದಾರರು-ಒಂದಿಬ್ಬರು ಸಹಾಯಕರು-ಒಬ್ಬ ಪೋಲೀಸು-ಜೊತೆಗೆ ಊರ ಫುಡಾರಿ ಸತ್ಯ ನಾರಾಯಣನೂ. ಅವರೆಲ್ಲ ಧಡ ಧಡ ಮೆಟ್ಟಿಲೇರಿ ಬರುತ್ತಿದ್ದಂತೆ ಗಾಬರಿ ಬಿದ್ದ ರಾಘು “ಏ ತಮ್ಮಾ, ಇನ್ನೆರಡು ಖುರ್ಚಿ ತಗಂಬಾ… ಬನ್ನಿ ಸರ್, ಬನ್ನಿ ಕೂತ್ಗೊಳ್ಳಿ” ಉಪಚರಿಸುತ್ತ ಕೈ ಕಟ್ಟಿ ನಿಂತ.

“ನಮ್ಮ ಲೆಟರು ಬಂದಿರ್‍ಬೇಕಲ್ಲ. ನಮ್ಮೆಲ್ಲರ ಹೆಮ್ಮೆಯ ಸ್ವಾತಂತ್ರ್ಯ ಹೋರಾಟಗಾರ್‍ತಿ ತುಂಗಜ್ಜಿಯವರಿಗೆ ಸರ್ಕಾರದ ಪರವಾಗಿ ಸನ್ಮಾನ ಮಾಡೋಣಂತ…” ತಹಶೀಲ್ದಾರರು ಅರ್ಧಕ್ಕೆ ಮಾತು ನಿಲ್ಲಿಸಿ ತುಂಗಜ್ಜಿ ಕಡೆ ನೋಡಿದರೆ ಅವಳು ತುಳಸಿ ಮಣಿಯೊಂದಿಗೆ ರಾಮ ಜಪ ಮಾಡುತ್ತಿದ್ದಳು. ನಾಲ್ಕು ದಿನದ ಹಿಂದೆ ತುಂಗಜ್ಜಿಗೆ ಸ್ವಾತಂತ್ರ್ಯೋತ್ಸವ ಸನ್ಮಾನ ಮಾಡ್ತೇವೆಂದು ತಾಲ್ಲೂಕಾಫೀಸಿನಿಂದ ಪತ್ರ ಬಂದಾಗ ಇವಳೆಲ್ಲಿ ಮಾಸಾಶನ ತಿರಸ್ಕರಿಸಿದಂತೆ ಸನ್ಮಾನವನ್ನೂ ತಿರಸ್ಕರಿಸಿಬಿಡುತ್ತಾಳೊ? ಎಂಬ ಭಯದಿಂದಲೇ ಮಗ ತಾಯಿಗೆ ಪತ್ರ ಕೊಟ್ಟಾಗ ಓದಿ ಒಂದೂ ಮಾತಾಡದೆ ಸುಮ್ಮನಿದ್ದವಳು ಈಗ…

ಸಾಹೇಬರ ಮಾತಿಗೆ ಅತ್ತ ತಿರುಗಿದವಳೇ ಯಾಕೊ ಧಡಕ್ಕನೆ ಎದ್ದು ನಿಂತಳು.

“ಬ್ಯಾಡ. ನನಗ್ಯಾವ ಸನ್ಮಾನವೂ ಬ್ಯಾಡ-ಬಹುಮಾನವೂ ಬ್ಯಾಡ. ಈ ಸುಟ್ಟ ಜನ್ಮಕ್ಕೆ ವಿನಾಕಾರಣ ಆದ ಅವಮಾನವೊಂದೇ ಸಾಕು… ನನ್ನ ಸಂಗ್ತಿಗೇ ಸತ್ಯಾಗ್ರಹ ಮಾಡಿ ಜೈಲಿಗೆ ಹೋಗಿ ಬಂದ ಗಂಡಸ್ರಿಗೆಲ್ಲ ಮಾಲೆ ಹಾಕಿ ಮೆರವಣಿಗೆ ಮಾಡಿದ್ರಂತೆ. ನಾ ಹೆಂಗ್ಸಾದ ಕಾರಣಕ್ಕೆ ಮನೆ ಒಳಗೇ ಸೇರಿಸಿಕೊಳ್ಳದೆ ಹೊರ ಜಗುಲಿಯಲ್ಲೇ ಕುಂಡ್ರಿಸಿ ಅನ್ನ ಹಾಕಿದ್ರು… ಇವ್ಳು ಎಲ್ಲೆಲ್ಲಿ ತಿರುಗಿ ಏನೇನು ಮಾಡ್ಕೊಂಡ್ ಬಂದಿದ್ದಾಳೊ. ಇವ್ಳನ್ನ ಒಳಗೆ ಬಿಟ್ರೆ ವಾಸ್ತು ಕೆಟ್ಹೋಗತ್ತೆ ಅಂತ ಇದೇ ಈ ಠೊಣಪನ ಅಪ್ಪನೇ ಹೇಳಿದ್ದ. ಹೇಳಲಿ. ಹೇಳಿಕೊಂಡು ಹಾಳಾಗಿ ಹೋಗ್ಲಿ… ನನ್ನ ಎದೆ ಒಳಗನ ಸತ್ಯ ನನಗೆ ಗೊತ್ತು. ನನ್ನ ಖರೆತನ ನನ್ನ ಹುಟ್ಟಿಸಿದ ದೇವ್ರಿಗೆ ಗೊತ್ತು… ಇದು, ಈ ಮಾಣಿ ಎರಡು ವರ್ಷದ ಶಿಶುವಾಗಿತ್ತು ಆವಾಗ. ಅದನ್ನು ಬೆನ್ನಿಗೆ ಕಟ್ಟಿಕೊಂಡೇ ಓಡ್ಯಾಡಿದೆ. ಇದಕೆ ಬೇರೆ ಹಾಲಿಲ್ದೆ ಐದು ವರ್ಷದ ತನಕ ಮೊಲೆ ಉಣ್ಸಿದೆ… ಅದನ್ನೆಲ್ಲಾ ಯಾರಿಗ್ಹೇಳ್ಲಿ?… ಆದ್ರೆ ಯಾರೆಷ್ಟೇ ಕುತಂತ್ರ ಮಾಡಿದ್ರೂ ನನ್ನ ಮಗನ ಪಾಲಿನ ತೋಟ ತಗೊಳ್ಳದೇ ಬಿಡ್ಲಿಲ್ಲ ಅನ್ನೋದು ಬೇರೆ ವಿಷ್ಯ… ಇರ್‍ಲಿ. ನನಗಿನ್ನೇನೇನೂ ಬ್ಯಾಡ. ಹೊಂಟ್ಹೋಗಿ ನೀವೆಲ್ಲ…” ಅಜ್ಜಿ ನಡುಗುತ್ತ ಕೋಲೂರಿಕೊಂಡು ಒಳಗೆ ತಿರುಗಿದಾಗ ಮೊಮ್ಮಗ ಅವಳನ್ನು ಹಿಡಿದು ನಿಲ್ಲಿಸಿದ.

“ಸ್ಸಾರಿ ಸರ್, ವ್ಹೆರಿ ವ್ಹೆರಿ ಸಾರಿ. ನಮ್ಮಜ್ಜಿಗೆ ವಯಸ್ಸಾಯ್ತಲ್ಲ, ಏನೇನೊ ಮಾತಾಡ್ತಿದ್ದಾಳೆ. ಅವ್ಳ ಪರವಾಗಿ ನಾವು ಕ್ಷೆಮೆ ಕೇಳ್ತಿದ್ದೇವೆ. ದಯವಿಟ್ಟು ಕ್ಷಮ್ಸಿ ಸರ್… ಅಜ್ಜಿ ನಿನ್ನ ತಲೆ ಏನು ಪೂರ್ತಿ ಕೆಟ್ಟೇಹೋಯ್ತಾ?…ಊರಿಗೇ ದೊಡ್ಡವರು ತಹಶೀಲ್ದಾರ್ರು. ಅವ್ರು ನಮ್ಮನೆವರ್‍ಗೂ ಬಂದಿದ್ದೇ ದೊಡ್ಡ ಮಾತು. ಅಂಥಾದ್ರಲ್ಲಿ ನೀ ಹೀಂಗೆಲ್ಲ ಹೇಳಬಹುದಾ? ಯಾವತ್ತೊ ನಿಂಗಾದ ಅವಮಾನವನ್ನು ನೀನಿವತ್ತು ಇವ್ರ ಮೇಲೆ ತೀರಿಸಿಕೊಳ್ಳೋದ ಸರಿಯಾ?…

ಅಜ್ಜಿ ತಲೆ ತಗ್ಗಿಸಿದಳು.

“ಇಲ್ಲ ಇಲ್ಲ. ಸರಿಯಲ್ಲ. ತಪ್ಪಾಯ್ತು ಮಾಸ್ವಾಮಿ ತಪ್ಪಾಯ್ತು. ಮಳ್ಳು ಮುದುಕಿ ಏನೇನೊ ಹಲುಬಿಬಿಟ್ಟೆ. ದಯವಿಟ್ಟು ನಿಮ್ಮ ಹೊಟ್ಯಲ್ಲಿಟ್ಟುಕೊಳ್ಳಿ… ಆದ್ರೆ ಸನ್ಮಾನ ಪಡೀವಂಥದ್ದೇನನ್ನೂ ಮಹಾನಾ ಮಾಡ್ಲಿಲ್ಲ. ಆ ಚಳುವಳಿಯಲ್ಲಿ ನನ್ನಂಥವ್ರೇ ನೂರಾರು ಜನ ಮನೆ ಮಾರು ಕಳಕೊಂಡ್ರು. ನೂರಾರು ಜನ ಗಂಡ-ಹೆಂಡತಿ-ಮಕ್ಕಳು-ತಂದೆ ತಾಯಿ ಕಳಕೊಂಡ್ರು. ನೂರಾರು ಜನ ಜೀವ ಕಳಕೊಂಡ್ರು. ಹಾಗೆ ಏನೆಲ್ಲ ಕಳಕೊಂಡಿದ್ದು ಮಾಸಾಶನದ ಆಸೆಗಾಗಿಯಲ್ಲ, ಸನ್ಮಾನದ ಆಸೆಗಾಗಿಯೂ ಅಲ್ಲ, ಹೆಸರಿನಾಸೆಗಾಗಿಯೂ ಅಲ್ಲ. ಆ ಚಳುವಳಿ-ಸತ್ಯಾಗ್ರಹ-ಆ ಬವಣೆ ಏನಿದ್ರೂ ನಾವು ಹುಟ್ಟಿದ ನೆಲದ ಋಣಕ್ಕಾಗಿ-ನಾವುಂಬೊ ಅನ್ನದ ಋಣಕ್ಕಾಗಿ-ನಾವು ಕುಡಿಯೊ ನೀರಿನ ಋಣಕ್ಕಾಗಿ-ಉಸಿರಾಡೊ ಗಾಳಿಯ ಋಣಕ್ಕಾಗಿ-ನಮ್ಮೆಲ್ಲರ ಒಳಗಿರೊ ಪರಮಾತ್ಮನ ಋಣಕ್ಕಾಗಿ ನಡೆದಿದ್ದಾಗಿತ್ತು. ಇರ್‍ಲಿ. ಅವ್ರೆಲ್ರ ನೆನಪಿಗೆ ಈ ಸನ್ಮಾನ ತಗೋತೇನೆ. ಕೊಡಿ, ಅದೇನು ಕೊಡ್ತೀರೊ ಕೊಡಿ…”

ಮಗ ಮೊಮ್ಮಗ ಕೂಡಿ ಅವಳನ್ನು ಹಿಡಿದು ಖುರ್ಚಿಯಲ್ಲಿ ಕುಂಡ್ರಿಸಿ ಸಾಹೇಬರು ಫಲತಾಂಬೂಲದ ಹರಿವಾಣ ಕೊಟ್ಟು ಶಾಲು ಹೊದೆಸಿ ಅವಳ ಕಾಲಿಗೆ ಬಿದ್ದು ಮೇಲೇಳುವಾಗ ಅವರ ಕಣ್ಣಿಂದುದುರಿದ ಎರಡು ಹನಿ ಠಪ್ಪನೆ ಅಜ್ಜಿಯ ಕಾಲಿಗೆ ಬಿತ್ತು. ಅವಳೂ ತನ್ನ ಕಣ್ಣೊರೆಸಿಕೊಳ್ಳುತ್ತ “ಎಲ್ಲಿದ್ರೂ ನೂರ್ಕಾಲ ಚೆಂದಾಗಿರು ಕಂದಾ” ಎಂದು ಅವರ ತಲೆ ಮುಟ್ಟಿ ಆಶೀರ್ವದಿಸಿದಾಗ ಅಲ್ಲಿದ್ದವರೆಲ್ಲ ಹನಿಗಣ್ಣಾದರು.

 

 

 

 

 

 

ಭಾಗೀರಥಿ ಹೆಗಡೆ

ಗಾಂಧಿಕಟ್ಟೆ

ಚಿತ್ರಗಳು: ವಿಷ್ಣು

ಸುತ್ತಲಿನ ಹತ್ತಾರು ಊರುಗಳಲ್ಲೆ ಗಾಂಧಿಕಟ್ಟೆಗೆ ವಿಶೇಷ ಹೆಗ್ಗಳಿಕೆ. ಊರಿನ ಹಿರಿತಲೆಮಾರಿನ ಜನರಿಗೆ ಬಿಟ್ಟರೆ ಗಾಂದಿಕಟ್ಟೆಗೆ ಮುಂಚೆ ಮಲ್ಲಾಪುರ ಎಂಬ ಹೆಸರಿತ್ತೆಂಬುದು ಬಹುತೇಕರಿಗೆ ಗೊತ್ತಿಲ್ಲ. ಗಾಂಧಿಕಟ್ಟೆ ಎಂಬ ಹೆಸರು ಬಂದಿದ್ದಕ್ಕೆ ಜನ ಎರಡು ರೀತಿಯಲ್ಲಿ ಹಿನ್ನೆಲೆ ಹೇಳುತ್ತಾರೆ. ಮಹಾತ್ಮಗಾಂಧಿಯವರು ಬೆಳಗಾವಿಯ ಕಾಂಗ್ರೆಸ್ ಅಧಿವೇಶನಕ್ಕೆ ಬಂದಾಗ ಜಿಲ್ಲಾ ಪಂಚಾಯಿತಿ ಹಾಲಿ ಅಧ್ಯಕ್ಷ ಶರಣೇಗೌಡನ ತಾತ ಶಿವನಗೌಡ ಮಲ್ಲಾಪುರದಿಂದ ಹೋಗಿ ಗಾಂಧಿಯನ್ನು ನೋಡಿಬಂದಿದ್ದನಂತೆ. ಗಾಂಧಿಯನ್ನು ತೀರಾ ಹತ್ತಿರದಿಂದ ನೋಡುವ ಅವಕಾಶ ಸಿಕ್ಕಿದ್ದಲ್ಲದೆ ಗಾಂಧಿ ಕಾಲುಗಳಿಗೆ ಹೊಸ ಚಪ್ಪಲಿಗಳನ್ನು ತಮ್ಮ ಕೈಗಳಿಂದ ತೊಡಿಸಿ, ಆ ಚಪ್ಪಲಿಗಳನ್ನು ತನಗೆ ಆಶೀರ್ವಾದ ರೂಪದಲ್ಲಿ ಕೊಡಬೇಕೆಂದು ಬೇಡಿ ಪಡೆದು ತಂದಿದ್ದನಂತೆ. ಗ್ರಾಮದಲ್ಲಿರೊ ಹಿರಿಯ ತಲೆಯೆನಿಸಿರುವ ನೂರರ ಆಸುಪಾಸಿನ ಶಿವಯ್ಯತಾತ ಕಿವಿ ಸರೀಗಿ ಕೇಳದಿದ್ದರೂ, ಕಣ್ಣು ಮಸುಕು-ಮಸುಕು ಕಂಡರೂ ಯಾರಾದ್ರೂ ಕಿವಿ ಸಮೀಪ ಬಾಯಿಯಿಟ್ಟು, ‘ಗಾಂಧಿ… ಗಾಂಧಿ ಕಟ್ಟೆ’ ಅಂತ ಇಡೀ ಊರಿಗೆ ಕೇಳುವಂತೆ ಕೂಗಿದರೆ ಸಾಕು. ಅಂದಿನ ಕಥೆಯನ್ನು ಬೊಚ್ಚುಬಾಯಿಯಿಂದ ನುಡುಗುವ ದನಿಯಲ್ಲಿ ಹೇಳುವುದು ರೂಢಿ.

‘ಶಿವನಗೌಡಗ ನನಗ ವಯಸ್ಸಿನ್ಯಾಗ ಹದಿನೈದಿಪ್ಪತ್ತು ವರ್ಷ ಫರಕು. ದೊಡ್ಡ ಪುಣ್ಯಾತ್ಮ. ಆತನ ಪುಣ್ಯಾನೇ ನಮ್ಮೂರನ್ನ, ನಮ್ಮನ್ನ ಕಾಪಾಡಾಕ ಹತ್ತೈತಿ. ಈಗೆಲ್ಲಾ ಬರೀ ಕರ್ಮಗೇಡಿಗಳೇ ಊರಾಗ ತುಂಬ್ಯಾರ. ನಮ್ ಗೌಡ ಸಾಕ್ಷಾತ್ ದೇವರು ಇದ್ದಂಗ ಇದ್ದ. ತಂದಿ-ತಾಯಿ ಕುಡ ಹೊಲಕ್ಕ ಹೋಗುತ್ತಿದ್ದ ಮಕ್ಕಳಿಗೆ ಸಮೇತ ನೆರಳಿಗೆ ಕುಂದ್ರಿಸಿ, ಉಣಿಸಿ, ಅರ್ಧದಷ್ಟು ಕೂಲಿಕೊಡ್ತಿದ್ದ. ಬಾಣಂತಿಯರು ಕೆಲಸಕ್ಕೆ ಹೋದ್ರ ಅವರಿಗೆ ಹೊಟ್ಯಾಗಿನ ಕೂಸಿಗೆ ಸೇರಿ ದುಪ್ಪಟ್ಟು ಕೂಲಿಕೊಡ್ತಿದ್ದ….’ ಶಿವಯ್ಯತಾತನ ಕಿವಿ ಸಮೀಪ, ‘ಗಾಂಧಿ…. ಗಾಂಧಿ ತಾತ’ ಅಂತ ಮತ್ತೊಮ್ಮೆ ಕೂಗಿದಾಗಲೇ ವಿಷಯಕ್ಕೆ ಬರುವುದು ವಾಡಿಕೆಯಾಗಿತ್ತು. ‘ಅವಸರ ಮಾಡಬ್ಯಾಡ್ರಿ… ಅಲ್ಲಿಗೇ ಬರಾಕ ಹತ್ತೀನಿ…’ ಅಂತ ಹೇಳಿ ಕೇಳುಗರು ಹಾಗೆ ಕುತೂಹಲದಿಂದ ಕೇಳುವಂತೆ ಮಾಡುತ್ತಿದ್ದ. ‘ಶಿವನಗೌಡ ಬೆಳಗಾವಿಯಿಂದ ಗಾಂಧಿ ಮಹಾತ್ಮ ಹಾಕಿಕೊಂಡ ಚಪ್ಪಲಿಗಳನ್ನು ತಂದು ಪೂಜೆಮಾಡ್ತಿದ್ರು. ಊರ ನಡುವಿದ್ದ ಬೇವಿನ ಮರದ ಸುತ್ತ ಕಟ್ಟೆ ಕಟ್ಟಿ ಗಿಡದ ಬುಡಕ್ಕೆ ಸಣ್ಣದು ಗುಣೇವು ಮಾಡಿ ಅದರಾಗ ಗಾಂಧಿ ಮಹಾತ್ಮನ ಚಪ್ಪಲಿಗಳನ್ನು ಇಟ್ಟಿದ್ರು. ಗೌಡ ಇರತನಕ ದಿನ ಮುಂಜೇನಿ ಸಂಜೀಕಿ ಹೋಗಿ ಚಪ್ಪಲಿಗಳಿಗೆ ಹಣಿಹಚ್ಚಿ ನಮಸ್ಕಾರ ಮಾಡಿ ಬರುತ್ತಿದ್ದ. ಒಂದು ದಿನ ಯಾರೊ ಆ ಚಪ್ಪಲಿಗಳನ್ನು ಕದ್ದು ಹೊಯ್ದುಬುಟ್ರು. ಉಟ್ಗಂಡ ಬಟ್ಟೆ ಸಮೇತ ಜ್ವಾಪಾನ ಇಟ್ಟುಕೊಳ್ಳೊ ಕಾಲ ಬಂದೈತಿ. ಮರೆಪಟ್ಲೆ ಇದ್ವಿ ಅಂದ್ರ ಬಟ್ಟೀನು ಬಿಚ್ಚಿಕೊಂಡು ಹೋಗೊ ಕಳ್ಳರು ಹೆಚ್ಚಾಗ್ಯಾರ. ಆವತ್ನಿಂದ ಶಿವನಗೌಡ ಸರೀಗಿ ಉಣಲಿಲ್ಲ. ನಿದ್ದೀನೂ ಮಾಡಲಿಲ್ಲ. ಕಟ್ಟೆಗೆ ಬಂದು ರಾತ್ರಿಯೆಲ್ಲಾ ಎರಡ್ಮೂರು ದಿನ ಹಂಗೆ ಜಾಗರಣೆ ಮಾಡಿದ. ಆಮ್ಯಾಲ ಮನೆಯವರೆ ಆತನ್ನ ಎತ್ತಿಕೊಂಡು ಮನಿಗೆ ಕರ್ಕಂಡು ಬಂದ್ರು. ನಾಲ್ಕಾರು ದಿವಸ ಹಾಸಿಗೆ ಹಿಡಿದ ಗೌಡ ಮೇಲೇಳಲಿಲ್ಲ…’ ಶಿವಯ್ಯತಾತ ಇಷ್ಟು ನೆನಪಿಸಿಕೊಳ್ಳುತ್ತಿದ್ದಂತೆ ಕಣ್ಣುಗಳು ನೆನೆದು ಮುಖದ ನೆರಿಗೆಗಳಲ್ಲಿ ಕಣ್ಣೀರು ಝರಿಯಾಗಿ ಹರಿಯುತ್ತಿತ್ತು.

‘ಕಳ್ಳರಿಗೆ ಮಹಾತ್ಮರ ಚಪ್ಪಲಿಗಳಾದ್ರೇನು… ಸಾಮಾನ್ಯರ ಚಪ್ಪಲಿಗಳಾದ್ರೇನು? ಬೆಲಿನ ಗೊತ್ತಿಲ್ದ ಮಂದಿ. 25-30 ವರ್ಷ ಆದ್ವು ಕಟ್ಟೆ ಮ್ಯಾಲಿನ ಗುಣೇವು ಖಾಲೀನ ಐತಿ. ಶಿವನಗೌಡ ಹಣಿಹಚ್ಚಿ ನಮಸ್ಕಾರ ಮಾಡುತ್ತಿದ್ದ ಜಾಗದಾಗ ಈಗ ಕಾಸಬಾಳದ ಉದ್ರಿ ಪುರಾಣ ಹೇಳೊಮಂದಿ, ಚೌಕಬಾರ, ಹುಲಿಮನಿ ಆಡೊ ಖಾಲಿ ಪುರಾಟಮಂದಿ ಗುಣೇದಾಗ ತಮ್ಮ ಕೆರವು ಬಿಟ್ಟು ಕುಂದ್ರುತಾರ. ಹಿಂದಿನದು ನೆನೆಸ್ಗೆಂಡ್ರ ಹೊಟ್ಯಾಗ ಕೆಂಡ ಕಲಿಸಿದಂಗ ಆಗುತ್ತ…’ ತಾತಗ ಕೆಮ್ಮು ಬಂದೆಂತೆನಿಸಿ ಸಮೀಪ ಇಟ್ಟಿದ್ದ ಹಿತ್ತಾಳಿ ಗಂಗಾಳದ ಬೂದಿಯಲ್ಲಿ ಕ್ಯಾಕರಿಸಿ ಲೊಟ್ಟೆ ಉಗುಳಿದ. ‘ಗಾಂಧಿಕಟ್ಟೆ ಬಗ್ಗೆ ಕೇಳಬ್ಯಾಡ್ರಿ… ನನಗ ಹೇಳಾಕ ಮನಸ್ಸಿಲ್ಲ. ತಗಂಡಾದ್ರೂ ಏನ್ ಮಾಡ್ತೀರಿ. ಮಹಾತ್ಮರ ಮಾತುಗಳನ್ನ ಪಾಲಿಸಂಗಿದ್ರ ಆ ಕಟ್ಟೆಗೆ ಬೆಲಿ ಬರುತ್ತ. ನಡ್ರಿ ನಡ್ರಿ ನನ್ನ ಮುಂದ ನಿಂದ್ರಬ್ಯಾಡ್ರಿ…’ ಅಂತ ಹೊಟ್ಟೆಯೊಳಗಿನ ಕರಳು ಕಿತ್ತಿಹೊರಬರುವಂತೆ ಮತ್ತೆ ಮತ್ತೆ ಜೋರಾಗಿ ಕೆಮ್ಮಲು ಶುರುಮಾಡಿದರೆ ಕೇಳಲು ಬಂದವರು ಜಾಗ ಖಾಲಿಮಾಡಬೇಕು ಎಂದೇ ಅರ್ಥ.

ಶಿವನಗೌಡನ ಕುಟುಂಬದ ಕುಡಿಯಾದ ಶರಣೇಗೌಡ ಹೇಳೋದೆ ಬೇರೆ. ‘ಶಿವಯ್ಯತಾತಗ ಬುದ್ಧಿ ಕೆಟ್ಟೈತಿ. ಅರವತ್ತಕ್ಕ ಅರಳು ಮರಳು ಅಂತಾರ. ನೂರು ವರ್ಷ ಆಗಾಕ ಬಂದಾವಲ್ಲ ಅದಕ್ಕ ಆತಗ ಹುಚ್ಚು ಹಿಡದೈತಿ. ಇದ್ದುದ್ದು ಇಲ್ಲದ್ದು ಮಾತಾಡುತ್ತ ಕೋಡಿ ಅಯ್ನೇರ. ನಮ್ಮಪ್ಪ ನೀಲನಗೌಡಗ ಸಮೇತ ನಮ್ಮ ತಾತ ಗಾಂಧಿಮಹಾತ್ಮನ ಚಪ್ಪಲಿಗಳನ್ನು ತಂದಿದ್ದು ಹೇಳಲಾರ್ದ ಈ ಅಯ್ನೇರಗ ಹೇಳಿ ಸತ್ತಿರಬೇಕು. ಹನ್ನೊಂದು ಮನಿ ಉಂಡು ಇನ್ನೊಂದು ಮನಿ ಅಂಬ ಜಂಗಮಗ ಏನು ತಿಳಿತೈತಿ ಅಂತ ಬಾಯಿಗೆ ಬಂದಂತೆ ಮಾತನಾಡುತ್ತಿದ್ದ. ತಮ್ಮ ದೊಡ್ಡಪ್ಪ ಬಸನಗೌಡ ಚಿನ್ನೂರು ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ್ದಾಗ, ಇಂದಿರಾಗಾಂಧಿಯವರು ಈ ಕಡೆ ಪ್ರಚಾರಕ್ಕೆಂದು ಬಂದಿದ್ದರು. ಕಾರಿನ ಮೂಲಕ ಪಕ್ಕದ ಪಟ್ಟಣದಲ್ಲಿರೊ ಹೆಲಿಪ್ಯಾಡಿಗೆ ತೆರಳುವ ಮಾರ್ಗದಲ್ಲಿರೊ ನಮ್ಮೂರಿಗೆ ಬಂದು ಒಂದ್ಹತ್ತು ನಿಮಿಷ ಕಟ್ಟೆ ಮೇಲೆ ಕುಳಿತಿದ್ರು. ಸಮೀಪದ ಪಂಪನಗೌಡರ ಮನೆಯಿಂದ ತಂಬಿಗೆ ನೀರು ತರಿಸಿಕೊಂಡು ಕುಡಿದು ಹೋಗಿದ್ರು. ಆವತ್ತಿನಿಂದ ಆ ಕಟ್ಟೆಗೆ ಗಾಂಧಿ ಕಟ್ಟೆ ಅಂತ ಕರೆಯಲಾಗುತ್ತಿದೆ. ಅದು ಇಂದಿರಮ್ಮನ ಕಟ್ಟೆ ಹೊರ್ತಾಗಿ ಗಾಂಧಿಮಹಾತ್ಮನ ಕಟ್ಟೆ ಅಲ್ಲ ಎಂದೇ ಶರಣೇಗೌಡ ವಾದಿಸುತ್ತಿದ್ದ. ಮೂರು ವರ್ಷಗಳ ಹಿಂದೆ ಊರಿನ ಕೆಲವರು ಶಿವಯ್ಯತಾತನಿಂದ ಪೂಜೆ ಮಾಡಿಸಿ, ಗಾಂಧಿತಾತನ ಹೆಸರು ಹೇಳಿ ಇಟ್ಟಿದ್ದ ಕಟ್ಟಿಗೆಯ ಹೊಸ ಆವುಗೆಗಳನ್ನು ಶರಣೇಗೌಡನ ಪಕ್ಷದ ಕೆಲವರು ಬೆಂಕಿಹಚ್ಚಿ ಸುಟ್ಟುಬಿಟ್ಟಿದ್ದರು. ಇದರ ಸಲುವಾಗಿ ಆವತ್ತಿನಿಂದ ಊರಾಗ ಎರಡು ಬಣ ಆದ್ವು. ಶರಣೇಗೌಡ ಮತ್ತು ಶಿವಯ್ಯತಾತನ ಮೊಮ್ಮಗ ಮಲ್ಲಿನಾಥ ಈ ಕಟ್ಟೆಯ ಸಲುವಾಗಿ ವರ್ಷದಾಗ ನಾಲ್ಕಾರು ಸಲ ಜಗಳಾಡುವುದು ಸಾಮಾನ್ಯವಾಗಿತ್ತು. ಹೋದ ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಶರಣೇಗೌಡನ ವಿರುದ್ಧ ರೈತಪಕ್ಷದಿಂದ ಸ್ಪರ್ಧಿಸಿದ್ದ ಮಲ್ಲಿನಾಥ ಭಾರಿ ಅಂತರದಿಂದ ಸೋತಿದ್ದ. ಸೋತ ದಿನದಿಂದ ಶರಣೇಗೌಡನ ತಂಟೆಗೆ ಹೋಗುವುದನ್ನೂ ಸ್ವಲ್ಪ ಕಡಿಮೆಮಾಡಿದ್ದ.

ರಾಜ್ಯದಲ್ಲಿ ತಮ್ಮ ಪಕ್ಷ ಅಧಿಕಾರದಲ್ಲಿರದಿದ್ದರೂ ಕೇಂದ್ರ ಸರ್ಕಾರದ ಅನುದಾನ ಪಡೆದಾದರೂ ಗಾಂಧಿಕಟ್ಟೆ ಉದ್ಧಾರಮಾಡಬೇಕು ಅಂತ ಶರಣೇಗೌಡ ಪಣತೊಟ್ಟಿದ್ದ. ಕಟ್ಟೆ ಮೇಲೆ ಇಂದಿರಾಗಾಂಧಿ ಮೂರ್ತಿಯನ್ನು ನಿಲ್ಲಿಸಬೇಕು. ಸುತ್ತ ಪಾರ್ಕ್ ಮಾಡಬೇಕು. ನಾಲ್ಕು ದಿಕ್ಕುಗಳಿಗೂ ದೊಡ್ಡ ದೊಡ್ಡ ನಿಯಾನ್ ಲೈಟ್ ಗಳನ್ನು ಹಾಕಿಸಬೇಕೆಂದು ತಮ್ಮ ಸಂಬಂಧಿಕನಾದ ಕೇಂದ್ರ ಸಚಿವ ಶಿವರಾಜಪ್ಪನ ಪ್ರಭಾವದಿಂದ 50 ಲಕ್ಷ ರೂ. ಬಿಡುಗಡೆ ಮಾಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದ. ಅದೇ ವರ್ಷ ಶರಣೇಗೌಡ ಚಿನ್ನೂರಲ್ಲಿ ಒಂದ್ ಪೆಟ್ರೊಲ್ ಬಂಕ್ ಖರೀದಿಸಿದ್ದ. ಊರಾಗ ಮಲ್ಲಿನಾಥನ ಬಳಗದಿಂದ ವಾರಗಟ್ಟಲೆ ಸ್ಟ್ರೈಕ್, ಧರಣಿ ನಡೆದರೂ ಅಂಜಿಕೊಳ್ಳದೇ ಊರ ಹೊರಗಿದ್ದ ಗುಡ್ಡದ ಸಮೀಪ, ಸರ್ಕಾರಿ ಪದವಿಪೂರ್ಷ ಕಾಲೇಜಿನ ಹಿಂಭಾಗದ ತಮ್ಮ ಜಮೀನಿನಲ್ಲಿ ತಮ್ಮ ತಾತನ ಹೆಸರಿನಲ್ಲಿ ಶಿವು ಬಾರ್ ಅಂಡ್ ರೆಸ್ಟೊರೆಂಟ್ ಚಾಲೂಮಾಡಿದ್ದ. ‘ಇದೆಲ್ಲಾ ಒಳ್ಳೆಯದಲ್ಲ. ಗಾಂಧಿತಾತನ ಆದರ್ಶಗಳ ಪ್ರಭಾವಕ್ಕೆ ಒಳಗಾಗಿ ಅವರು ಮೆಟ್ಟಿದ್ದ ಚಪ್ಪಲಿಗಳನ್ನು ಭಯ-ಭಕ್ತಿಯಿಂದ ಪೂಜಿಸುತ್ತಿದ್ದ ಶಿವನಗೌಡನ ರಕ್ತನೇ ನಿನ್ನ ಮೈಯಾಗ ಹರಿಯೋದು. ನಿಮ್ಮ ತಾತ ಇರೋತನಕ ಸುತ್ತ ನಾಲ್ಕು ಊರುಗಳಲ್ಲಿ ಮದ್ಯಂದಗಡಿಗಳು ತೆರೆಯದಂತೆ ನೋಡಿಕೊಂಡಿದ್ದ. ಕುಡಿಯುವ ಚಟ ಇದ್ದೋರು ಇದುವರೆಗೆ ಕದ್ದುಮುಚ್ಚಿ ಮಸ್ಕಿಗೆ ಹೋಗಿ ಕುಡುದುಬಂದು ಗಪ್ ಚುಪ್ ಮನ್ಯಾಗ ಒದರಲಾರ್ದಂಗ ಮಲಗುತಿದ್ರು…. ಇದು ಒಳ್ಳೇಯದಲ್ಲ. ನಿಮ್ಮಪ್ಪ ನೀಲನಗೌಡನೂ ಶಿವನಗೌಡನ ಮಾತು ಕೇಳಲಾರದೆ ಮಾಡಬಾರದ ಚಟ ಮಾಡಿ, ದೊಡ್ಡ ರೋಗ ಹಚ್ಚಿಕೊಂಡು ಇನ್ನಾ ನೀನು ಮೂರು ವರ್ಷದವ ಇದ್ದಾಗನ ಸತ್ತುಹೋಗಿಬುಟ್ಟ. ನಾವು ಊರಿನ ಹೀರೇರು ಹೇಳೋದಕ್ಕೆ ಬೆಲೆ ಕೊಡು…’ ಅಂತ ಶಿವಯ್ಯತಾತ ತನ್ನ ವಯಸ್ಸಿನ ಹಮ್ಮುಬಿಮ್ಮು ಮೀರಿ ದಯನೀಯವಾಗಿ ಬೇಡಿಕೊಂಡಿದ್ದ. ‘ಹೋಗೋ ಅಯ್ನೇರ. ನಿನಗೇನು ಬದುಕೋದು ಗೊತ್ತೈತಿ. ಮೊದ್ಲು ನಿನ್ನ ಮಕ್ಕಳು, ಮೊಮ್ಮಕ್ಕಳಿಗೆ ದುಡಿಯೋದು ಕಲಿಸಿಕೊಡು. ಅವ್ರು ಚೆಲೊತ್ನ್ಯಾಗಿ ಬದುಕೋದು ಕಲೀಲಿ. ಮನಿಗೆದ್ದು ಮಾರು ಗೆಲ್ಲಬೇಕು….’ ಅಂತ ಶಿವಯ್ಯತಾತನಿಗೆ ಮರಳಿ ಬುದ್ಧಿ ಹೇಳಿದ್ದ. ಇದನ್ನು ಸಹಿಸದ ಮಲ್ಲಿನಾಥ ‘ಸಿಗಬೇಕು ಈ ಗೌಡ’ ಅಂತ ಕಾಯುತ್ತಿದ್ದಾಗಲೇ ಜಿಲ್ಲಾ ಪಂಚಾಯತಿ ಚುನಾವಣೆ ಬಂದಿತ್ತು. ಹಣ ಬಲ ಇಲ್ಲದಿದ್ದರೂ ಶರಣೇಗೌಡನ ವಿರುದ್ಧ ಮಲ್ಲಿನಾಥ ಸ್ಪರ್ಧಿಸಿದ್ದ.

ಗಾಂಧಿಕಟ್ಟೆ ತನಗೇ ಸೇರಿದ್ದು ಎಂಬಂತೆ ಶರಣೇಗೌಡ ಕಟ್ಟೆಯನ್ನು ಚುನಾವಣೆ ಸಂದರ್ಭದಲ್ಲಿ ತನ್ನ ಸುಪರ್ದಿಗೆ ತೆಗೆದುಕೊಂಡಿದ್ದ. ಮತದಾನಕ್ಕೆ ಇನ್ನೂ ಹದಿನೈದು ದಿನ ಇರುವಾಗಲೇ ಇಂದಿರಾಗಾಂಧಿ ಸೇರಿದಂತೆ ರಾಜ್ಯ ಮತ್ತು ರಾಷ್ಟ್ರ ಮಟ್ಟದ ತಮ್ಮ ಪಕ್ಷದ ಹಿರಿ-ಕಿರಿ ಮುಖಂಡರು ಹಾಗೆ ಇನ್ನೂ ಹುಟ್ಟಲಿರುವ ಕೂಸು ಕುನ್ನಿಗಳ ಫೋಟೊಗಳನ್ನು ಡಿಜಿಟಲ್ ಬ್ಯಾನರ್ ನಲ್ಲಿ ಬರೆಯಿಸಿ ಕಟ್ಟೆಮೇಲೆ ಗುಣೇವು ಕಾಣಲಾರದಂಗ ಕಟ್ಟಲಾಗಿತ್ತು. ಊರಿಗೆ ಕೇಳುವಂತೆ ದೊಡ್ಡ ಮೈಕ್ ಗಳನ್ನು ಹಚ್ಚಿ ಪಕ್ಷ ಮತ್ತು ತನ್ನ ಪರ ಭರ್ಜರಿ ಪ್ರಚಾರ ನಡೆಸಿದ್ದ್ದ. ಕಟ್ಟೆಯ ಬಲಭಾಗದಲ್ಲಿ ಪ್ಲ್ಯಾಸ್ಟಿಕ್ ಕವರ್ ನಿಂದ ಶೆಡ್ ಮಾಡಲಾಗಿತ್ತು. ಟೆಂಟಿನಲ್ಲಿ ದಿನಕ್ಕೆ ಮೂರ್ನಾಲ್ಕು ಒಪ್ಪತ್ತು ತಯಾರಿಸುತ್ತಿದ್ದ ಒಗ್ಗಣಿ, ಉಪ್ಪಿಟ್ಟು, ಮಿರ್ಜಿಗಳ ಘಮಲು ಇಡೀ ಊರಿಗೆ ಹರಡುತ್ತಿತ್ತು. ಮತದಾನದ ದಿನವಂತೂ ಕಟ್ಟೆ ಎಂಬುದು ಸುಡುಗಾಡಾಗಿತ್ತು. ಅದರ ಮೇಲೆ ಕುಳಿತು ಕುಡಿದವರು ಯಾರೊ? ತಿಂದವರು ಯಾರೊ? ಎಲ್ಲಿಬೇಕಲ್ಲಿ ವಾಂತಿಮಾಡಿಕೊಂಡು ಕಟ್ಟಿ ಸಮೀಪ ಮೂಗು, ಬಾಯಿ, ಕಣ್ಣು ಮುಚ್ಚಿಕೊಂಡೇ ಹೋಗುವಂತಾಗಿತ್ತು. ‘ಪ್ರಜಾಪ್ರಭುತ್ವ ಎಂಬ ಅರ್ಥವೇ ಕೆಟ್ಟುಹೋಗೈತಿ’ ಊರಿನ ಕೆಲವು ಬುದ್ಧಿವಂತ ಜನ ಮಾತಿಗೊಮ್ಮೆ ಹೇಳುತ್ತಿದ್ದರು. ‘ರಾಜಕಾರಣಿಗಳು ಕೆಟ್ಟಿದ್ರ ಅವರಿಗೆ ಹೆಂಗಾದ್ರೂ ಬುದ್ಧಿ ಕಲಿಸಬೋದಾಗಿತ್ತು. ಅವರ ಎಂಜಲಿನ ಆಸೆಗೆ ಚುನಾವಣೆ ಸಂದರ್ಭದಲ್ಲಿ ಅವರು ಕೊಡೊ ಹಣಕ್ಕ, ಹಂಚೊ ಹೆಂಡ, ಬಟ್ಟೆ, ಬರೆಗೆ ಜನರೂ ಮಳ್ಳು ಆಗ್ಯಾರ. ಈಗ ಏನಿದ್ರೂ ರೊಕ್ಕ ಇದ್ದವರದೇ ಕಾಲ. ರೊಕ್ಕ ಕೊಟ್ಟು ಓಟು ಖರೀದಿಸಿ, ಮತ್ತೆ ಖರ್ಚುಮಾಡಿದ ರೊಕ್ಕಕ್ಕ ಸಾವಿರಾರು ಪಟ್ಟು ಹೊಡಕೊಳ್ಳೊ ದಂಧೆ ಆಗೈತಿ ರಾಜಕೀಯ ಅಂಬದು…’ ಶಿವಯ್ಯ ತಾತ ತನ್ನ ಮೊಮ್ಮಗ ಮಲ್ಲಿನಾಥನಿಗೆ ಓಟು ಹಾಕಿರಿ ಅಂತ ಪರೋಕ್ಷವಾಗಿ ಹೀಗೆ ಪ್ರಚಾರ ನಡೆಸಿದ್ದ. ಶಿವಯ್ಯತಾತ ಅಂದ್ರ ಸಾಮಾನ್ಯ ಅಲ್ಲ. ಊರಿಗೆ ಇನ್ನೂ ಸರ್ಕಾರಿ ಸಾಲಿ ಅಂಬದು ಬರೋ ಮುಂಚೆ ಊರಿನ ನೂರಾರು ಮಕ್ಕಳಿಗೆ ಈಶ್ವರ ಗುಡಿಯಲ್ಲಿ ಅಕ್ಷರ ಕಲಿಸಿದ ವಿದ್ಯಾಗುರು. ಆತನಿಂದ ವಿದ್ಯೆ ಕಲಿತ ಮಂದಿಯೂ ಆತನ ಮಾತುಗಳನ್ನು ಕಿವಿಗೆ ಹಾಕಿಕೊಳ್ಳಲಿಲ್ಲ. ಶಿವಯ್ಯತಾತ ತನ್ನ ಮೊಮ್ಮಗ ಮಲ್ಲಿನಾಥನಿಗೆ ಚುನಾವಣೆಗೆ ನಿಲ್ಲುವ ಮೊದಲು ‘ಬ್ಯಾಡ ಮಲ್ಲಿನಾಥ, ನಮ್ಮಂತಾ ಕಾಯಕದ ಮಂದಿಗೆ ಈ ರಾಜಕೀಯ ಸಹವಾಸನ ಬ್ಯಾಡ. ನಮಗ ಬೇಕಾತಿ ಒಬ್ಬರಿಗೆ ಓಟು ಹಾಕಿ ಮನ್ಯಾಗ ಕುಂದ್ರೋದು ಬೇಸು. ನಾವ ಹೋಗಿ ಹೇಸಿಗ್ಯಾಗ ಬಿದ್ದು ಒಳ್ಯಾಡದು ಬ್ಯಾಡ…’ ಅಂತ ಗಿಣಿಗೆ ಹೇಳಿದಂತೆ ಹೇಳಿದ್ದರೂ ಮಲ್ಲಿನಾಥ ಜಿದ್ದು ಸಾಧಿಸಲೆಂಬಂತೆ, ಒಳ್ಳೆಯದಕ್ಕೆ, ಒಳ್ಳೆಯ ವ್ಯಕ್ತಿಗೆ ಜನರು ಬೆಲೆ ಕೊಡುತ್ತಾರೆ ಎಂದೇ ಭಾವಿಸಿ ಚುನಾವಣೆಗೆ ನಿಂತಿದ್ದ. ಆದರೆ ಆದದ್ದೆ ಬೇರೆ.

ನಾಳೆ ಅಂತ ಮತದಾನ ಇದ್ದಾಗ, ಶರಣೇಗೌಡ ಊರಾಗಿನ ಕೆಲವು ಪುಂಡರನ್ನು ಕಳಿಸಿ ಮಲ್ಲಿನಾಥನನ್ನು ತಮ್ಮ ಜೀಪಿನ್ಯಾಗ ಒತ್ತಾಯದಿಂದ ಕೂಡಿಸಿಕೊಂಡು ದೂರದ ಧರ್ಮಸ್ಥಳಕ್ಕೆ ಕರೆದುಕೊಂಡುಹೋಗಿದ್ದರು. ಮತದಾನದ ಸಮಯ ಮುಗಿದ ಮೇಲೆಯೇ ಮಲ್ಲಿನಾಥನನ್ನು ಊರಿಗೆ ಮರುದಿನ ಕರೆದುಕೊಂಡು ಬರಲಾಗಿತ್ತು. ಶರಣೇಗೌಡ ತಮ್ಮ ಆಳುಗಳನ್ನು ತನ್ನ ಕಡೆಗೆ ಸೆಳೆದುಕೊಂಡು ಮಲ್ಲಿನಾಥನೇ ಅವರನ್ನು ಕರೆದುಕೊಂಡು ತನ್ನ ಮೇಲೆ ಹಲ್ಲೆಮಾಡಿಸಲು ಸಂಚು ನಡೆಸಲೆಂದೆ ಊರುಬಿಟ್ಟು ಹೋಗಿದ್ದ ಎಂದು ಚಿನ್ನೂರು ಗ್ರಾಮೀಣ ಪೊಲೀಸ್ ಠಾಣೆಗೆ ಕಂಪ್ಲೇಂಟ್ ಕೊಟ್ಟಿದ್ದ. ಶಿವಯ್ಯತಾತ ತನಗೆ ಬೇಕಾದ ಒಂದಿಬ್ಬರನ್ನು ಠಾಣೆಗೆ ಕರೆದುಕೊಂಡು ಕ್ಯಾಂಡೇಟ್ ಆಗಿದ್ದ ಮಲ್ಲಿನಾಥನನ್ನು ಶರಣೇಗೌಡನ ಕಡೆಯವರು ಅಪಹರಿಸಿದ್ದಾರೆಂದು ಕೊಟ್ಟ ಕಂಪ್ಲೇಂಟ್ ಅನ್ನು ಪಿಎಸ್ಐ ಕಾಂತನಗೌಡ ತೆಗೆದುಕೊಳ್ಳಲಿಲ್ಲ. ಸರಿಯಾದ ಕಾರಣ ತೋರಿಸಿಲ್ಲ. ಸುಳ್ಳು ಕಂಪ್ಲೇಂಟ್ ಕೊಡಲು ಬಂದಿದ್ದೀರಿ. ನೀವೇ ಬಚ್ಚಿಟ್ಟು ನಾಟಕಮಾಡಲು ಬಂದಿದ್ದೀರಿ ಎಂದು ಹೋದವರನ್ನೇ ಗದರಿಸಿ, ಠಾಣೆಯಲ್ಲೆ ಮರುದಿನದವರೆಗೆ ಕೂಡಿಹಾಕಿ ಮರುದಿನ ಕಂಪ್ಲೇಂಟ್ ಅನ್ನೂ ತೆಗೆದುಕೊಳ್ಳದೇ, ಕಾಯುವಂತೆ ಹೇಳಿ ಮಲ್ಲಿನಾಥನನ್ನು ಊರಿಗೆ ಕರೆದುಕೊಂಡು ಬಂದ ಸುದ್ದಿ ತಿಳಿದ ಮೇಲೆಯೇ ಅವರನ್ನೂ ಊರಿಗೆ ಎಚ್ಚರಿಸಿ ಕಳಿಸಿದ್ದ. ಶಿವಯ್ಯ ತಾತ ಊರಿಗೆ ಬರುವವರೆಗೆ ಒಂದೇ ಸವನೇ ಮಂದಿಯನ್ನು ಮತ್ತು ತನ್ನನ್ನು ಬೈಯ್ಯುತ್ತಲೆ ಬಂದಿದ್ದ. ‘ಋಣಗೇಡಿಗಳು, ಶರಣೇಗೌಡನ ಅಪ್ಪಗ ಅಕ್ಷರ ಕಲಿಸಿದಾತನೇ ನಾನು. ನಮ್ಮ ಶಿವನೌಡನ ಮಗ ಅಂತೇಳಿ ಅದೆಷ್ಟು ಕಾಳಜಿಮಾಡಿ ಓದಿಸಿದ್ದು, ಬರೆಯಿಸಿದ್ದು. ಅಪ್ಪನ ಗುರು ಅಂಬದು ಮರೆತು, ಮುದುಕರಿಗೆ ಇಂಥಾ ಕಷ್ಟ ಕೊಡಾಕ ಮನಸ್ಸಾದ್ರೂ ಹೆಂಗ ಬರುತ್ತೊ ಏನೋ ಮೂರೂ ಬಿಟ್ಟ ಈ ಮಂದಿಗೆ… ಊರ ಜನರ ವಿಶ್ವಾಸ ಗಳಿಸಿ ಶರಣೇಗೌಡಗ ಸರಿಯಾಗಿ ಬುದ್ಧಿ ಕಲಿಸ್ಬೇಕು…’ ಅಂತ ಯೋಚನೆ ಮಾಡುತ್ತಾ ಊರಿಗೆ ಮರಳಿದ್ದ.

ಊರಾಗಿನ ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಬಂದ ಕಾರಣ, ಶರಣೇಗೌಡ ತನ್ನ ಕೈ, ಬಾಯಿ ಮಾತು ಕೇಳುತ್ತಿದ್ದ ಮಾದರ ಹನುಮನ ಹೆಂಡತಿ ಹನುಮಂತಿಯನ್ನೇ ಅಧ್ಯಕ್ಷ ಸ್ಥಾನಕ್ಕೆ ಕೂಡಿಸಿದ್ದ. ತನ್ನ ಹೆಂಡತಿಯ ತಮ್ಮ ತಿಮ್ಮನಗೌಡನನ್ನೇ ಉಪಾಧ್ಯಕ್ಷ ಸ್ಥಾನಕ್ಕೆ ಕೂಡಿಸಿ ಇಡೀ ಗ್ರಾಮ ಪಂಚಾಯಿತಿ ಆಡಳಿತವನ್ನೂ ತನ್ನ ಕಂಟ್ರೋಲ್ ನಲ್ಲಿ ಇಟ್ಟುಕೊಂಡಿದ್ದ. ಗ್ರಾಮ ಪಂಚಾಯಿತಿ ಸೆಕ್ರೆಟರಿ, ಉಳಿದ ನೌಕರರು ವಾರಗಟ್ಟಲೆ, ತಿಂಗಳುಗಟ್ಟಲೆ ಪಂಚಾಯಿತಿಗೆ ಹೋಗದಿದ್ದರೂ ನಡೆಯುತ್ತಿತ್ತು. ಆದರೆ ಶರಣೇಗೌಡನ ಮನೆಗೆ ಪ್ರತಿದಿನ ಸೂಟಿಯಿದ್ದಾಗಲೂ ಬಂದು ಭೇಟಿಕೊಡಬೇಕಾಗಿತ್ತು. ಆತ ಹೇಳಿದ ಮಾತುಗಳನ್ನು ಕೇಳುವುದು, ಆತ ಕೊಟ್ಟದ್ದನ್ನು ತಿನ್ನೋದು, ಕೇಳಿದಲ್ಲಿ ಸಹಿಮಾಡೋದು, ಚೆಕ್ ಬರೆದುಕೊಡೋದೇ ತಮ್ಮ ಕೆಲಸವೆಂದು ಭಾವಿಸಿದ್ದರು. ಶರಣೇಗೌಡ ಗ್ರಾಮ ಪಂಚಾಯಿತಿಗೆ ಬಿಡುಗಡೆಯಾಗಿದ್ದ ಅನುದಾನದಲ್ಲೆ ಬಸ್ ಸ್ಟ್ಯಾಂಡಿನಿಂದ ತಮ್ಮ ಮನೆಗೆ ಹೋಗುವ ರಸ್ತೆಯನ್ನು ಸಿಮೆಂಟ್ ರೋಡ್ ಆಗಿ ಪರಿವರ್ತಿಸಿದ್ದ, ತನ್ನ ಮನೆಯ ಸುತ್ತ ಸುಸಜ್ಜಿತ ಚರಂಡಿ ವ್ಯವಸ್ಥೆಯನ್ನೂ ಕಲ್ಪಿಸಿಕೊಂಡಿದ್ದ. ನೂರಾರು ಮನೆಗಳಿಗೆ ಬಿಡುಗಡೆಯಾಗಿದ್ದ ಶೌಚಾಲಯ ನಿರ್ಮಾಣದ ಅನುದಾನದಲ್ಲಿ ತನ್ನ ಭವ್ಯ ಬಂಗಲೆಯಲ್ಲಿ ಫಾರಿನ್ ಸಿಸ್ಟಮ್ ಮತ್ತು ಇಂಡಿಯನ್ ಸಿಸ್ಟಮ್ ಪಾಯಿಖಾನೆ ಕಟ್ಟಿಸಿದ್ದ. ಪಾಯಿಖಾನೆ ಹೊರಗೆ ಒಳಗೂ ನುಣುಪಾದ ಕಲ್ಲುಗಳನ್ನೇ ಜೋಡಿಸಿದ್ದ. ಊರ ಮಂದಿ ಮಾತ್ರ ಹೆದ್ದಾರಿಯ ಇಕ್ಕೆಲಗಳಲ್ಲಿ, ಜಾಲಿಪೊದೆಗಳ ಮರೆಗೆ ತಮ್ಮ ತುರ್ತು ಕೆಲಸಗಳನ್ನು ಪೂರೈಸಿಕೊಳ್ಳಬೇಕಾಗಿತ್ತು. ಒಂದಿಬ್ಬರು ಹುಡುಗರು ಎರಡು ವರ್ಷಗಳ ಹಿಂದೆ ಹೆದ್ದಾರಿ ಪಕ್ಕದಲ್ಲಿ ರಾತ್ರಿ ಎರಡಕ್ಕೆಂದು ಕುಳಿತಾಗ ಲಾರಿಯೊಂದು ಮೇಲೆ ಹಾಯ್ದು ಕೇರಿಯ ಹುಡಗರಿಬ್ಬರು ನೆಲಕ್ಕೆ ಅಪ್ಪಚ್ಚಿಯಾಗಿದ್ದರು. ಊರಿನ ಹೆಣ್ಣುಮಕ್ಕಳಿಗೆ ಸಂಡಾಸಿಗೆ ಹೋಗುವುದೆಂದರೆ ಕುತ್ತಿಗೆಗೇ ಬರುತ್ತಿತ್ತು. ಊರಿನ ಹೊರಗಿದ್ದ ಹೊಲದ ರಸ್ತೆಯ ಪಕ್ಕದಲ್ಲಿದ್ದ ನಾಲು, ಅಲ್ಲಿ ಬೆಳೆದ ಗಿಡ-ಗಂಟೆಗಳೆ ಅವರನ್ನು ಮರೆಮಾಡಬೇಕು. ಹೊಲಕ್ಕೆಂದು ಹೋಗುವ ಮಂದಿ ಇದೇ ದಾರಿಗೆ ಬಂದರೆ, ಅದೆಷ್ಟೇ ತುರ್ತಿದ್ದರೂ ಹಾಗೆ ಸಹಿಸಿಕೊಂಡು ದಡಗ್ಗನೆ ಎದ್ದುನಿಲ್ಲಬೇಕು. ಹಲವು ಬಾರಿ ಹೆಣ್ಣುಮಕ್ಕಳು ಎದ್ದೇಳುವಾಗ ಜೋಲಿ ಸಾಲದೆ ಹಿಂದಕ್ಕೆ ಬಿದ್ದವರೆಷ್ಟು, ಮೈ ಕೈಗೆ, ಬಟ್ಟೆಗೆ ಸಂಡಾಸು ಮೆತ್ತಿಕೊಂಡು ಊರಿನ ಪರಿಸ್ಥಿತಿಗೆ ಹಿಡಿಶಾಪ ಹಾಕಿದ್ದುಂಟು. ಇತ್ತೀಚೆಗೆ ಜನ ಸುಧಾರಿಸಿದ್ದರಿಂದ ತಮ್ಮ ಮಗಳನ್ನು ಗಾಂಧಿಕಟ್ಟೆಗೆ ಕೊಡಲು ಹಿಂದೆಮುಂದೆ ನೋಡುತ್ತಾರೆ.

* * * * *

ಹೆಸರಷ್ಟೆ ಗಾಂಧಿಕಟ್ಟೆ, ಗಾಂಧಿಮಹಾತ್ಮನ ಆದರ್ಶಗಳಿಗೆ ಎಳ್ಳಷ್ಟೂ ಬೆಲೆ ಇರಲಿಲ್ಲ. ನಡುವಿನ ಶ್ರಾವಣ ಸೋಮವಾರ ಊರಿನ ಅದರಲ್ಲೂ ಶರಣೇಗೌಡರ ಮನೆ ದೇವರಾದ ಕೆರಿಬಸವಣ್ಣ ದೇವರ ಜಾತ್ರಿ. ಒಂದು ಸಲ ಜಾತ್ರೆ ಸಂದರ್ಭದಲ್ಲಿ ಚಿನ್ನೂರು, ಮಸ್ಕಿಯಲ್ಲಿ ಡಿಎಸ್ಎಸ್ ಹೋರಾಟಗಳಲ್ಲಿ ಪಾಲ್ಗೊಂಡು, ಚೂರು ಪಾರು ತಮ್ಮ ಹಕ್ಕು, ಕರ್ತವ್ಯಗಳ ಬಗ್ಗೆ ತಿಳಿದುಕೊಂಡಿದ್ದ ಊರಿನ ಕೆಲ ದಲಿತ ಯುವಕರು ಮುದಕಪ್ಪನ ನೇತೃತ್ವದಲ್ಲಿ ಕೆರಿಬಸವಣ್ಣನ ಗುಡಿ ಪ್ರವೇಶಲು ಮುಂದಾದರು. ಶರಣೇಗೌಡ ಆ ಸುದ್ದಿ ಕೇಳಿ ಕೆಂಡಾಮಂಡಲವಾಗಿದ್ದ. ‘ಲೇ… ಕುಂಡಿ ತುಂಬೈತನಲೇ. ಇದುವರೆಗೆ ನಿಮ್ಮ ಅಪ್ಪ, ಅವ್ವ ಹೆಂಗ ತಗ್ಗಿ ಬಗ್ಗಿ ನಡೆದುಕೊಂಡು ಬಂದಾರೊ ಹಂಗೆ ನೀವು ನಮಗೆ ಅಂಜಿಕೊಂಡು ಬದುಕ್ಬಕು. ಊರಿನ ನೀತಿ, ನಿಯಮಗಳಿಗೆ ಬೆಲೆ ಕೊಡೋದು ಕಷ್ಟ ಅನ್ನಿಸ್ತು ಅಂದ್ರ ಊರುಬಿಟ್ಟು ಎಲ್ಲಿಗನ ಹಾಳಾಗಿ ಹೋಗ್ರಿ…’ ಅಂತ ಗದರಿದ್ದ. ಸ್ವಲ್ಪ ಕುಡಿದಿದ್ದ ಮುದುಕಪ್ಪ ಕೈಯಲ್ಲಿ ಕಾಲ್ಮರಿ ಹಿಡಕಂಡು, ‘ಲೇ ಗೌಡ. ಎಂಥಾ ಮಹಾತ್ಮನ ಹೊಟ್ಟೆಯಲ್ಲಿ ಎಂಥಾತ ಹುಟ್ಟೀದಿ. ದೊಡ್ಡ ಪುಣ್ಯಾತ್ಮ ನೀನು. ನಿನ್ನಂಥವನ್ನ ಝಡ್ಪಿ ಪ್ರೆಸಿಡೆಂಟ್ ಮಾಡಿಕೂಡಿಸ್ಯರಲ್ಲಾ ಅವ್ರಿಗೆ ಮೊದ್ಲು ಕಾಲ್ಮರಿ ತಗಂಡು ಬಡಿಬೇಕು. ಮಾತಿಗೊಮ್ಮೆ ಇಂದಿರಮ್ಮ ಅಂತ ಹೊಯ್ಕೊಳ್ತೀರಿ. ನಮ್ದು ಬಡವರು, ದೀನ್ರು, ದಲಿತರ ಪಕ್ಷ. ದೇಶಕ್ಕೆ ಸ್ವಾತಂತ್ರ್ಯ ಗಳಿಸಿಕೊಟ್ಟ ಪಕ್ಷ ಅಂತ ಬಾಯಿ ಬಾಯಿ ಬಡಕೊಂತೀರಿ. ಕಾಲೇಜಿನ ಗ್ರೌಂಡಿನ್ಯಾಗ ಮುಂಜೇನಿ ಬಡಿಗೆ ತಿರುಗಿಸುವ, ಮೊಣಕಾಲು ಕಾಣಂಗ ಚೆಡ್ಡಿ ತೊಟಗಂಡು ಉಟಾಬೈಸ್ ತೆಗೆದು, ಬೆದಿಬಂದ ನಾಯಿ ಒದರಿದಂಗ ಒದರ್ತಾರಲ್ಲ, ಆ ಮಂದಿಗೂ, ಅವರ ಪಕ್ಷಕ್ಕೂ ನಿಮಗೂ, ನಿಮ್ಮ ಪಕ್ಷಕ್ಕೂ ವ್ಯತ್ಯಾಸನ ಇಲ್ಲ. ಯಾವ ಪಕ್ಷಾನೂ ದಲಿತರ ಪರ ಇಲ್ಲ. ಈ ಊರಾಗಿನ ದಲಿತರಿಗ್ಯಾಕ ಇನ್ನೂ ಸ್ವಾತಂತ್ರ್ಯ ಕೊಟ್ಟಿಲ್ಲ. ದೇಶಕ್ಕನ ಸ್ವಾತಂತ್ರ್ಯ ಬಂದು ಅರವತ್ತು ವರ್ಷ ಆದ್ರೂ ನಮಗ ಮಾತ್ರ ಸ್ವಾತಂತ್ರ್ಯ ಬಂದಿಲ್ಲ. ಇದಕ್ಕೆಲ್ಲಾ ನಿಮ್ಮಂತಾ ಬದ್ಮಾಷರೇ ಕಾರಣ…’ ಮುದುಕಪ್ಪ ಹಲ್ಲುಕಡಿಯುತ್ತಾ, ಅಷ್ಟು ದೂರ ನಿಂತಿದ್ದ ಶರಣೇಗೌಡನ ಸಮೀಪ ಓಡಿಹೋಗಿ ಮುಖಕ್ಕ ಚಪ್ಲಿ ಎಸೆದು ಬಂದಿದ್ದ. ‘ನಿಮ್ಮ ತಾತನಿಗೆ ಗಾಂಧಿ ಮಹಾತ್ಮ ಮೆಟ್ಟಿದ್ದ ಚಪ್ಲಿಗಳು ಬೇಕಾಗಿದ್ದವು. ನಿನ್ನಂಥಾ ನೀಚನಿಗೆ ನನ್ನಂತಾ ನರಪಿಳ್ಳೆಯ ಚಪ್ಲಿನ ಸಾಕು…’ ಅಂತ ಕೂಗಾಡುತ್ತಿದ್ದವನನ್ನು ಶರಣೇಗೌಡನ ಆಳು ಮಾದರ ದೇವ ಗಟ್ಟಿಯಾಗಿ ಹಿಡಕ್ಕಂಡು ನೆಲಕ್ಕೆ ಕೆಡವಿ ಸಿಕ್ಕ ಸಿಕ್ಕಲ್ಲಿ ಒದೆಯತೊಡಗಿದ. ಮುದುಕಪ್ಪನ ಹಿಂದೆ ಬಂದಿದ್ದ ನಾಲ್ಕಾರು ಯುವಕರು ಬಿಡಿಸಿಕೊಳ್ಳಲು ಪ್ರಯತ್ನಪಟ್ಟರೂ ಸಾಧ್ಯವಾಗಲಿಲ್ಲ. ‘ಲೇ ನಮ್ಮ ಗೌಡ್ಗ ಬೈಯ್ತಿಯೇನಲೆ. ನಿನ್ನ ನಾಲಿಗೀನ ಕಿತ್ತಿ ಹೊರಗ ಒಗಿತೀನಿ. ನಿನ್ನಂತವನ್ನ ಹಂಗೆ ಬುಟ್ರ ಬುದ್ಧಿ ಬರಲ್ಲ. ಗಾಂಧಿಕಟ್ಟೆ ಮ್ಯಾಲಿನ ಬೇನೆಗಿಡಕ್ಕ ಕಟ್ಟಿಹಾಕಿ, ಒದ್ದರ, ಆವಾಗ ಹೆಂಗ ಇರಬಕು ಅಂಬದು ಗೊತ್ತಾಗುತ್ತ…’ ಅಂತ ಮುದುಕಪ್ಪನನ್ನು ದರ-ದರ ಎಳೆದುಕೊಂಡು ಗಾಂಧಿಕಟ್ಟೆಯತ್ತ ಹೊರಟ. ‘ಲೇ ದೇವ, ಗೌಡ್ರಂತ ದೊಡ್ಡ ಮಂದಿ ನಾಟಕ ನಿನಗ ಅರ್ಥ ಆಗಲ್ಲ. ಅವರ ಎಂಜಲು ಕೂಳು ತಿನ್ನೊ ನಿನ್ನ ಕಣ್ಣಿಗೆ ಮಬ್ಬು ಮುಚ್ಚೈತಿ. ನಾವಿಬ್ರೂ ಅಣ್ಣ-ತಮ್ರು ಇದ್ದಂಗ. ನಿನ್ನ ಮ್ಯಾಲ ನನಗ ಸಿಟ್ಟಿಲ್ಲ. ನನ್ನ ಬುಟ್ಟುಬಡು…’ ಅಂತ ಬೇಡಿಕೊಂಡ. ಮುದುಕಪ್ಪನ ಮಾತನ್ನು ದೇವ ಕಿವಿಗೆ ಹಾಕಿಕೊಳ್ಳದೆ ನಡೆದ. ಶರಣೇಗೌಡನ ಬಲಗೈಯ ಬೆರಳುಗಳ ಮಧ್ಯೆ ಸಿಗರೇಟು ನಿಗಿನಿಗಿ ಕೆಂಡದಂತೆ ಉರಿಯುತ್ತಿತ್ತು.

ಊರಲ್ಲಿ ಇಷ್ಟೆಲ್ಲಾ ನಡೆಯುತ್ತಿದ್ದರೂ ಚಿನ್ನೂರಿನಿಂದ ಬಂದಿದ್ದ ಪೇದೆಗಳಿಬ್ಬರು ಶರಣೇಗೌಡನ ಬಾರಿನಲ್ಲಿ ಕಂಠದ ಮಟ ಕುಡಿದು ಅಲ್ಲೆ ಬಾರಿನ ಹೊರಗೆ ನೆಲದ ಮೇಲೆ ಈ ಲೋಕದ ಪರಿವೆ ಇಲ್ಲದಂತೆ ಮಲಗಿದ್ದರು. ಬಾರಿನ ಸುತ್ತ ಗಸ್ತು ತಿರುಗುವ ಗೌಡರ ಗಂಡು ನಾಯಿ ರಾಜಾ ಪೊಲೀಸರನ್ನು ಏನೆಂದು ತಿಳಿಯಿತೊ ಅವರ ಬೆನ್ನಿಗೆ ಒಂದು ಕಾಲೂರಿ ಮತ್ತೊಂದು ಕಾಲನ್ನು ಆಕಾಶದತ್ತ ತೋರಿಸಿ, ತನ್ನ ತುರ್ತು ಕೆಲಸವನ್ನು ಮುಗಿಸಿತು. ಹೋಗುವ ಮುಂಚೆ ಅವರಿಬ್ಬರ ಬಾಯಿ ಸಮೀಪ ತನ್ನ ಮೂತಿ ಒಯ್ದು. ‘ಥೂ… ಕೆಟ್ ನಾರ್ತಾರ… ಹೊಟ್ಟೀಗಿ ನಮ್ಮಂತಾ ನಾಯಿಗಳು, ಹಂದಿಗಳು ತಿನ್ನೋದು ತಿಂದಾರೋ, ಇಲ್ಲಾ ಅದಕ್ಕಿಂತ ಕೆಟ್ಟದ್ದು ಏನನ ತಿಂದು, ಕುಡುದಾರೊ’ ಎಂಬಂತೆ ಭಾವಿಸಿದಂತೆ ಕೆಟ್ಟ ಮುಖಮಾಡಿದ ನಾಯಿ ಬಾರಿನ ಸುತ್ತ ಬಿದ್ದ ಮಬ್ಬು ಬೆಳಕಿನಲ್ಲಿ ಹಾಯಾಗಿ ತಿರುಗಾಡತೊಡಗಿತು.

ಅತ್ತ ಜಾತ್ರೆ ನಡೆಸಲು ಸಿದ್ಧತೆ ನಡೆದಿರುವಾಗಲೆ ಇತ್ತ ಗಾಂಧಿಕಟ್ಟೆ ಮೇಲಿದ್ದ ಬೇವಿನಗಿಡಕ್ಕೆ ಮುದುಕಪ್ಪನನ್ನು ದೇವ ದೊಡ್ಡ ಹಗ್ಗದಿಂದ ಕಟ್ಟಿಹಾಕಿದ. ಅವನ ಮುಖಕ್ಕೆ ಕ್ಯಾಕರಿಸಿ ಉಗುಳುತ್ತಾ, ಮತ್ತೊಂದು ಹಗ್ಗವನ್ನು ನಾಲ್ಕು ಮಡಿಪು ಮಡಿಸಿ ಹಿಡಿದುಕೊಂಡು ಮೈಮೇಲೆ ಎಲ್ಲಿ ಬೇಕಲ್ಲಿ ಬಡಿಯತೊಡಗಿದ. ಜಾತ್ರೆ ನೋಡಲು ಎಷ್ಟು ಮಂದಿ ಸೇರಿದ್ದರೊ ಅಷ್ಟೇ ಮಂದಿ ಗಾಂಧಿಕಟ್ಟೆ ಸಮೀಪ ಸೇರಿದ್ದರು. ‘ಹಾಕಲೇ ದೇವ. ಇವನಿಗೆ ಬೇಸು ಬಡ್ದು ಬುದ್ಧಿ ಕಲಸು. ಎಷ್ಟು ಎಗರ್ಯಾಡ್ತಾನ. ಇಮಾಮ್ ಸಾಬ್, ಮೆಕ್ಕೆಸಾಬ್ ನ ಜೊತೆಗೂಡಿ ನಮ್ ಧರ್ಮಕ್ಕ ಕಳಂಕ ಬರಂಗ ಮಾತಾಡ್ತಾನ. ಈಶ್ವರ ಗುಡಿಗೆ ಹತ್ತಿಕೊಂಡಿರೊ ಮಸೀದೀನ ಬೇರೆ ಕಡೆ ಸ್ಥಳಾಂತರಿಸಬೇಕು. ನಮ್ ಮಂದಿ ಪೂಜೆ, ಪುನಸ್ಕಾರ ಮಾಡಲು ಮಸೀದಿ ಮುಂದ್ಲಾಸಿ ಹೋಗಲು ಮುಜಗರ ಆಗುತ್ತ ಅಂತ ಹೇಳಿದ್ರ ಅವರ ಪರವಹಿಸಿ ಮಾತಾಡ್ತಾನ…’ ಆಗಲೂ ಮೊಣಕಾಲು ಕಾಣಂಗ ಚೆಡ್ಡಿಯನ್ನು ತೊಟ್ಟು, ಕೈಯಲ್ಲಿ ತನಗಿಂತಲೂ ಉದ್ದವಿದ್ದ ಬಿದಿರಿನ ಕೋಲು ಹಿಡಿದು, ಕಣ್ಣು ಹುಬ್ಬು ಕೂಡುವ ಜಾಗದಿಂದ ಕೂದಲಿನವರೆಗೆ ಉದ್ದೂಕ ಕುಂಕುಮ ಹಚ್ಚಿಕೊಂಡಿದ್ದ ಕೃಷ್ಣ, ದೇವನ ಸಿಟ್ಟಿನ ಬೆಂಕಿಗೆ ತುಪ್ಪ ಸುರಿಯುತ್ತಿದ್ದ. ಅಲ್ಲಿಗೆ ಬಂದ ಮಲ್ಲಿನಾಥ, ಕೃಷ್ಣನ ಮಾತುಗಳನ್ನು ಕೇಳಿಸಿಕೊಂಡು, ‘ಲೇ ಸನಾತನ ನಾಯಿ, ಬಾಯಿಮುಚ್ಚಿಕೆಂಡು ಸುಮ್ನಿರು. ನಿಮ್ಮಂತೋರಿಗೆ ಊರಿನ ಸಮಸ್ಯೆಗಳು ಕಾಣಂಗಿಲ್ಲ. ಜಾತಿ, ಧರ್ಮದ ವಿಷಯಗಳೇ ದೊಡ್ಡದಾಗಿ ಕಾಣ್ತಾವ. ಊರ ಮಂದಿ ಮರ್ಯಾದಿಯಿಂದ ಹೇಲಾಕಂತ ಸರ್ಕಾರ ಕೊಟ್ಟ ಹಣಾನ ಸಮೇತ ನೆಕ್ಕಿಬಿಟ್ಟ ಶರಣೇಗೌಡ. ಅದನ್ನ ಕೇಳಾಕ ನಿಮ್ತಲ್ಲಿ ದಮ್ಮು ಇಲ್ಲ. ಇಂಥಾ ಬಡಪಾಯಿಗಳ ಮ್ಯಾಲನ ನಿಮ್ಮ ಸಿಟ್ಟು. ಊರ ಮಂದಿ ಹೆಣ್ಮಕ್ಳೆಲ್ಲಾ ಸೇರಿ ನಿಮ್ಮಂತೋರಿಗೆ ಹಂಗೆ ಆ ಗೌಡಗ ನಾಲಾಗಿನ ಎಲ್ಲಾ ಹೇಲು ಬಳಕಂಡು ಬಾಯಾಗ ತುಂಬಿದ ಮ್ಯಾಲನ ನಿಮ್ಮಂತೋರಿಗೆ ಬುದ್ಧಿ ಬರೋದು. ಹೇಲ್ತಿಂಬ ಮಂದಿಗೆ, ಯಪ್ಪಾ, ಯಣ್ಣಾ ಅಂದ್ರ ಬುದ್ಧಿ ಬರಲ್ಲ… ನಡಿಯಲೇ ನಾಯಿ… ಅಲ್ಲಿ ಜಾತ್ರಿ ನಡಿತೈತಿ ಹೋಗಿ ಗಂಟೆ ಬಾರಿಸ್ಗೆಂತ ನಿಂದ್ರು…’ ಅಂತ ಕೃಷ್ಣನಿಗೆ ಬಾಯಿಗೆ ಬಂದಂತೆ ಉಗುಳಿದ. ಮಲ್ಲಿನಾಥನ ಸಹವಾಸಕ್ಕ ಒಂಟಿ ಇದ್ದಾಗ ಹೋಗಬಾರದು. ಹೇಳಾಕ ಬರಲ್ಲ ಈ ಅಸಾಮಿ ಎಂದು ಮನಸ್ಸಿನಲ್ಲಿ ಅಂದು ಕೊಳ್ಳುತ್ತಾ ಕೆರಿಬಸವಣ್ಣನ ಗುಡಿ ಕಡೆ ನಡೆದ. ‘ಲೇ ದೇವ ಬಡಿಯೋದು ನಿಲ್ಸಿ. ಮೊದ್ಲು ಮುದಕಪ್ಪಗ ಕಟ್ಟಿದ ಹಗ್ಗ ಬಿಚ್ಚಿ ಕಳಿಸು. ಲೇ… ಹನುಮ, ಲಚುಮ, ಶಂಕ್ರ, ಇಮಾಮ್ ಏನ್ ನೋಡಾಕ ಹತ್ತೀರಿ ಕಟ್ಟೆ ಏರಿ ಮುದುಕಪ್ಪನ ಬಿಡಿಸಿಕೊಳ್ರಿ…’ ಮಲ್ಲಿನಾಥ ಇಷ್ಟು ಹುರಿದುಂಬಿಸುವುದನ್ನೇ ಕಾಯುತ್ತಿದ್ದರು ಎಂಬಂತಿದ್ದ ಹತ್ತಾರು ಮಂದಿ ಕಟ್ಟೆ ಏರಿ ದೇವನ ಕೈಯಲ್ಲಿದ್ದ ಹಗ್ಗವನ್ನು ಕಸಿದು ದೂರ ಎಸೆದರು. ಒಂದಿಬ್ಬರು ಮುದುಕಪ್ಪನ ಸುತ್ತ ಕಟ್ಟಿದ್ದ ಹಗ್ಗ ಬಿಚ್ಚಿದರು. ಮುದುಕಪ್ಪ ಹಗ್ಗ ಬಿಚ್ಚುತ್ತಲೆ ಕಟ್ಟೆಯ ಮೇಲೆ ಕುಸಿದುಬಿದ್ದ.

ತೇಲುಗಣ್ಣು ಮೇಲಗಣ್ಣು ಮಾಡಿದ್ದ ಮುದುಕಪ್ಪ ಇನ್ನೇನು ಸತ್ತುಬುಡ್ತಾನ ಅಂತ ತಿಳಿದ ಕೇರಿಯ ನಾಲ್ಕಾರು ಹಡುಗರು, ಮಲ್ಲಿನಾಥನ ಸಲಹೆಯಂತೆ ಮಸ್ಕಿ ದವಾಖಾನೆಗೆ ಕರೆದುಕೊಂಡು ಹೋದರು. ಕಟ್ಟೆ ಮೇಲೆ ನಿಂತು ಬಿಸಿಯುಸಿರು ಬಿಡುತ್ತಿದ್ದ ದೇವನನ್ನು ಒಂದಿಬ್ಬರು ಕೆಳಗೆ ದಬ್ಬಿದರು. ದೇವ ಬಿದ್ದಕೂಡಲೇ ಸುತ್ತ ನಿಂತ ಮಂದಿ, ದೇವನಿಗೆ ಎಲ್ಲಿಬೇಕಲ್ಲಿ ಬಡಿದರು, ಒದ್ದರು. ಒಂದಿಬ್ಬರು ಅವನ ಮುಖಕ್ಕೆ ಕ್ಯಾಕರಿಸಿ, ‘ಲೇ ನೀವು ಒಂದಾ ಮಂದಿ ಆಗಿ ಬಡದಾಡಿದ್ರ ಹೆಂಗ. ಅವನು ಮುದುಕಪ್ಪ ನಿಮ್ಮಂತೋರು ಸಲುವಾಗಿನ ಈ ಶಿಕ್ಷೆ ಅನುಭವಿಸಿಬೇಕಾಗಿ ಬಂತು. ನಿನ್ನಂತೋರಿಗೆ ಯಾವಾಗ ಬುದ್ಧಿ ಬರುತ್ತೋ ಏನ್ ಕಥಿಯೋ?’ ಅಂತ ದೇವನಿಗೆ ಬಾಯಿಗೆ ಬಂದಂತೆ ಬೈಯ್ಯತೊಡಗಿದರು. ದೇವ ನೆಲದ ಮೇಲೆ ಬಿದ್ದು ಉರುಳಾಡುತ್ತಿದ್ದ. ‘ಲೇ ಎಷ್ಟು ಬೈಯ್ತೀರಿ ಬೈಯ್ರಿ. ನಮ್ ಗೌಡ ಬರ್ಲಿ. ನಿಮ್ಮ ಮ್ಯಾಲ ಕೇಸು ಹಾಕಸ್ತೀನಿ. ನಿಮ್ಮನ್ನ ಜೈಲಿಗೆ ಕಳಿಸ್ತೀನಿ…’ ಎದ್ದು ಕುಂತು ನೆಲಕ್ಕ ಗುದ್ದಿ ಗುದ್ದಿ ಮಾತನಾಡುತ್ತಿದ್ದ. ನಿಧಾನವಾಗಿ ಕತ್ತಲಾಗುತ್ತಿದ್ದಂತೆ ಜನ ಗಾಂಧಿಕಟ್ಟೆಯಿಂದ ಕೆರಿಬಸವಣ್ಣನ ಉಚ್ಛ್ರಾಯವನ್ನು ನೋಡಬೇಕೆಂದು ಗುಡಿಯತ್ತ ಹೊರಟರು.

ಕೆರಿಬಸವಣ್ಣನ ಉಚ್ಛ್ರಾಯ ಆಗಲೇ ಎದುರು ಬಸವಣ್ಣನ ತಲುಪಿ ಮತ್ತೆ ಗುಡಿಯತ್ತ ಹಿಂದಿರುಗುತ್ತಿತ್ತು. ಮಹಿಳೆಯರು, ಮಕ್ಕಳು ಉಚ್ಛ್ರಾಯ ಬರುವ ದಾರಿಯ ಇಕ್ಕೆಲಗಳಲ್ಲಿ ಸಾಲಾಗಿ ನಿಂತು ಕೆರಿಬಸವಣ್ಣನಲ್ಲಿ ಬೇಡಿಕೊಳ್ಳುತ್ತಿದ್ದರು. ಉಚ್ಛ್ರಾಯದ ಮುಂದೆ ನಡ್ಲಮನಿ ಸಿದ್ದಣ್ಣನವರ ಗುಂಪು ರಾಗಬದ್ಧವಾಗಿ ಹಾಡುತ್ತಿದ್ದ ಶಿಶುನಾಳ ಶರೀಫರ, ‘ಸೋರುತಿಹುದು ಮನೆಯ ಮಾಳಿಗೆ. ಅಜ್ಞಾನದಿಂದ…. ಸೋರುತಿಹುದು ಮನೆಯ ಮಾಳಿಗೆ’ ಹಾಡಿಗೆ ತಕ್ಕಂತೆ ಶರಣೇಗೌಡ ಮತ್ತವರ ಗುಂಪು ಹೆಜ್ಜೆಹಾಕುತ್ತಿತ್ತು. ಒಂದಿಬ್ಬರು ಶರಣೇಗೌಡನ ಕಿವಿಯಲ್ಲಿ ಏನೋ ಹೇಳಿದರು. ‘ಗಾಂಧಿಕಟ್ಟೆ ಕಡೆ ನಡೀರಿ…’ ಎಂದು ಪಕ್ಕದಲ್ಲಿದ್ದ ಬಸವರಾಜ, ಶೇಖರ್, ಮಹ್ಮದ್ ನ ಜೊತೆಗೆ ಅವಸರದಿಂದ ಶರಣೇಗೌಡ ನಡೆದ.

ಶರಣೇಗೌಡ ಮತ್ತು ಹತ್ತಾರು ಜನ ಕಟ್ಟೆಯತ್ತ ಬರುವುದನ್ನು ಕಂಡ ದೇವ, ಕುಳಿತವನು ನೆಲಕ್ಕ ದೊಪ್ಪನೆ ಬಿದ್ದು ಉರುಳಾಡುತ್ತಾ, ‘ಯಪ್ಪಾ, ಯವ್ವಾ…’ ಅಂತ ಒದರತೊಡಗಿದ. ‘ಹೇ ಮಹ್ಮದ್ ಕಾರು ತಗಂಡ್ಬಾ. ಚಿನ್ನೂರಿಗೆ ಹೋಗಿ ಕಂಪ್ಲೇಂಟ್ ಕೊಟ್ಟುಬರ್ತೀವಿ. ಹಂಗೆ ಬಾಯಿಲಿ ಹೇಳಿದ್ರ ಇವರಿಗೆ ಬುದ್ಧಿ ಬರಲ್ಲ….’ ಕರ ಕರ ಹಲ್ಲು ಕಡಿಯುತ್ತಾ ಗಾಂಧಿಕಟ್ಟೆಗೆ ಕಾಲುಚಾಚಿ ನಿಂತ. ಮಹ್ಮದ್ ಕಾರು ತರುತ್ತಿದ್ದಂತೆ, ‘ಲೇ ದೇವ ನೀನು ಇಲ್ಲೆ ಊರಾಗಿನ ಹುಸೇನ್ ಸಾಬ್ ಡಾಕ್ಟ್ರತಲ್ಲಿ ತೋರ್ಸಿಗಂಡು ಬುಡು. ಠಾಣೆಯಲ್ಲಿ ಕಂಪ್ಲೇಂಟ್ ಕೊಟ್ಟು, ಪಿಎಸ್ಐ ಕಾಂತನಗೌಡನ್ನ ಕರ್ಕಂಡು ಬರ್ತೀನಿ…’ ಎನ್ನುತ್ತಾ ಕಾರುಹತ್ತಿ ಹೊರಟರು. ಕಾರು ಚಿನ್ನೂರಿನತ್ತ ಭರ್ರಂತ ಸಾಗಿತು.

ಒಂದು ಗಂಟೆಯೊಳಗೆ ಬಂದ ಪೊಲೀಸ್ ಜೀಪ್ ಸೀದಾ ಬಂದು ಶಿವಯ್ಯತಾತನ ಮನೆ ಮುಂದೆ ನಿಂತಿತು. ಮನೆಯಲ್ಲಿ ಮಲ್ಲಿನಾಥ ಊಟ ಮಾಡುತ್ತಿದ್ದ. ‘ಲೇ ಹೊರಗ ಬಾರಲೇ…’ ಎಂದು ಪಿಎಸ್ಐ ಹೊರಗೆ ನಿಂತು ಕೂಗಿದ. ಮಲ್ಲಿನಾಥ ಉಣ್ಣುವ ಕೈಯನ್ನು ಹಿಂದೆಹಿಡಿದು ಹೊರಗೆ ಬಂದ. ಶಿವಯ್ಯತಾತ ಬಂಕದಲ್ಲಿ ಹಾಗೆ ಕಣ್ಣುತೆರೆದುಕೊಂಡು ಮಲಗಿದಾತ ಎದ್ದುಕುಳಿತ. ಮಲ್ಲಿನಾಥ ಹೊರಗೆ ಬರುತ್ತಿದ್ದಂತೆ ಪಿಎಸ್ಐ ಅವನ ಕೈಹಿಡಿದು ಜೋರಾಗಿ ಎಳೆದು, ‘ಏನಲೇ ಎಸ್ಸಿ ಮಂದಿಗಿ ಬಡಿಯಾಕ ಕುಂಡಿ ಕಡಿತೈತಿ ಏನ್ ನಿಂದು. ಅವರವರಿಗೆ ಜಗಳ ಹಚ್ಚಿ ಬಡಿದಾಡಿ ಸಾಯಂಗ ಮಾಡಿಯೇನು. ಆ ಮುದುಕಪ್ಪ ಮತ್ತೆ ದೇವ ಏನಾದ್ರೂ ಸತ್ರ, ನಿನ್ನ ಮೇಲೆ ಕೊಲೆ ಕೇಸು ಮಾಡಿ, ಸಾಯತನಕ  ಜೈಲಿನ್ಯಾಗ ಕೊಳೆಯಂಗ ಮಾಡ್ತೀನಿ…. ಜೀಪ್ ಹತ್ತಲೆ’ ಅಂತ ಒಂದೆರಡು ಏಟು ಒದ್ದರು. ಮುಂದಕ್ಕೆ ಬಿದ್ದು ಎದ್ದ ಮಲ್ಲಿನಾಥ, ‘ಸಾಹೇಬರೆ, ನಿಮಗೆ ಯಾರೊ ಸುಳ್ಳು ಹೇಳ್ಯಾರ. ಝಡ್ಪಿ ಪ್ರೆಸಿಡೆಂಟ್ ಶರಣೇಗೌಡನೇ ಮುದಕಪ್ಪಗ ಸಾಯಂಗ ಬಡಿಸಿದ್ದು. ದಲಿತ ಜನಾಂಗದ ನಾಲ್ಕಾರು ಯುವಕರು ಗುಡಿಯೊಳಗ ಹೋಗಿದ್ದನ್ನೇ ನೆವಮಾಡಿ ತನ್ನ ಆಳು ದೇವನಿಂದ ಬಡಿಸಿದ್ದು… ಈ ಘಟನೆಗೆ ನನಗೂ ಸಂಬಂಧ ಇಲ್ಲ. ನಾನು ಬುದ್ಧಿಹೇಳಾಕ ಹೋಗಿದ್ದು ಖರೆ ಹೊರ್ತಾಗಿ… ಯಾರಿಗೂ ಬಡಿದಾಡಾಕ ಹಚ್ಚಿಲ್ಲ…’ ಒಂದೆ ಸವನೆ ಗೋಗರೆದರೂ ಪಿಎಸ್ಐ ಅವನನ್ನು ಜೀಪಿನತ್ತ ದಬ್ಬತೊಡಗಿದ.

ಏನು ನಡೆಯುತ್ತಿದೆ ಎಂಬುದನ್ನು ಅರ್ಥಮಾಡಿಕೊಳ್ಳುವಲ್ಲಿ ವಿಫಲನಾದ ಶಿವಯ್ಯತಾತ, ‘ಮಲ್ಲಿ, ಮಲ್ಲಿನಾಥ ಏನ್ ನಡೆಯಾಕ ಹತ್ತೈತಿ…. ಯಾರೊ ಬಾಯಿಗೆ ಬಂದಂಗ ನಿನಗ ಬೈಯಾಕ ಹತ್ಯಾರಲ್ಲ. ನಿನ್ನ ಎಲ್ಲಿಗೆ ಕರ್ಕಂಡು ಹೋಗಾಕ ಹತ್ಯಾರಲ್ಲ…’ ಶಿವಯ್ಯ ತಾತ ಕಣ್ಣು ಸರಿಯಾಗಿ ಕಾಣಿಸದಿದ್ದರೂ, ಮೊಮ್ಮಗಳ ಸಹಾಯದಿಂದ ಒರಸಿನಿಂದ ಇಳಿದು, ನಿಧಾನವಾಗಿ ಹೆಜ್ಜೆಯಿಡುತ್ತಾ ಅಂಗಳದಲ್ಲಿ ಬಂದು ನಿಂತ. ಜೀಪಿನ ಸಮೀಪ ನಿಂತಿದ್ದ ಪೇದೆಗೆ, ಮಲ್ಲಿನಾಥನನ್ನು ಎಳೆದುಕೊಂಡು ಹೋಗಿ ಜೀಪಿನಲ್ಲಿ ಕೂಡಿಸುವಂತೆ ಸನ್ನೆಮಾಡಿದ ಪಿಎಸ್ಐ ಕಾಂತನಗೌಡ, ಸ್ವಲ್ಪ ದೂರದಲ್ಲಿ ನಿಂತಿದ್ದ ಶರಣೇಗೌಡನಿಂದ ಸಿಗರೇಟ್ ತೆಗೆದುಕೊಂಡು ಗಾಂಧಿಕಟ್ಟೆಯ ಬೇವಿನಗಿಡದ ತುದಿ ಮುಟ್ಟುವಂತೆ ಹೊಗೆ ಬಿಡುತ್ತಾ ಸೇದತೊಡಗಿದ. ‘ಆಯ್ತೇಳ್ರಿ ಗೌಡ್ರೆ ನೀವೇನೂ ಚಿಂತಿ ಮಾಡಬ್ಯಾಡ್ರಿ. ಇವನಿಗೆ ಬೇಸು ಮೈಮೆತ್ತಗ ಆಗಂಗ ಒದಿತೀವಿ’ ಆಕಾಶಕ್ಕೆ ಮುಖಮಾಡಿ ಹೇಳಿದ. ಜೀಪಿನ ಸಮೀಪ ಬಂದಾಗ ಶಿವಯ್ಯತಾತಗ ಸ್ವಲ್ಪ ಮಸುಕು-ಮಸುಕು ಕಂಡು, ಕೂಗಾಡಿದ. ‘ಲೇ ಏನ್ ವಾರಂಟ್ ಐತಿ ನಿಮ್ತಲ್ಲಿ. ಈ ಗೌಡನ ಮಾತು ಕೇಳಿ ಹೀಂಗ ಅಮಾಯಕರನ್ನ ಬಡ್ದು, ಹೊಡ್ದು ಸ್ಟೇಷನ್ನಿಗೆ ಕರೆದುಕೊಂಡು ಹೋಗೊ ಅಧಿಕಾರ ನಿಮಗ ಯಾರು ಕೊಟ್ಟಾರ. ಇದೇನು ಗುಂಡಾರಾಜ್ಯ ಅಂತ ತಿಳಿದಿರೇನು? ಉಣಕಂತ ಕುಂತ ಮೊಮ್ಮಗನ್ನ ಎಬ್ಬಿಸಿಕೊಂಡು ಬಂದೀರಿ. ಅರುವು ಎಲ್ಲಿ ಐತಿ. ನಿಮ್ಮಂತಾ ಎಂಜಲು ನೆಕ್ಕೊ ಪೊಲೀಸರ ಜೊತೆ ನನ್ನ ಮೊಮ್ಮಗನ್ನ ಕಳಿಸಲ್ಲ. ನಾಳೆ ಚಿನ್ನೂರಿನಿಂದ ನಮ್ ಬಸಣ್ಣ ವಕೀಲರನ್ನ ಕರೆಯಿಸಿ ಅವರ ಜೊತೆ ಕಳ್ಸಿತೀನಿ. ಆವಾಗ ಏನ್ ಮಾಡಿಕೆಂತೀರಿ. ಮಾಡಿಕ್ಯರ್ರಿ….’ ಪಿಎಸ್ಐ ನಿಂತ ಜಾಗಕ್ಕೆ ಹೋಗಲು ಇನ್ನೇನು ಸಿದ್ಧವಾಗಿದ್ದ ಜೀಪಿಗೆ ಅಡ್ಡನಿಂತ ಶಿವಯ್ಯತಾತ ಊರು ಒಂದಾಗುವಂತೆ ಕೂಗಿದ. ಪಿಎಸ್ಐ ದನಿ ಕೇಳಿಯೇ ಸುತ್ತಲಿನ ಹತ್ತಾರು ಮನಿ ಮಂದಿ ಬಂದು ನಾಟಗ ನೋಡುವಂತೆ ಬಾಯಿಗೆ ಬೀಗ ಹಾಕಿಕೊಂಡು ನಿಂತಿದ್ದರು. ‘ಯಾರ್ ಹೇಳೋರು ಅದ್ಯಾರ ಈ ಗೌಡ್ಗ. ಸೊಕ್ಕು ನೆತ್ತಿಗಿ ಏರೈತಿ. ದೀಪ, ಆರುವ ಹೊತ್ತಿನಲ್ಲಿ ಜೋರಾಗಿ ಉರಿತೈತಿ. ಉರುದೋರಿಗೆ ಅರ್ಧಹೋಳಿಗಿ ಅಂತಾರ… ಇವನಿಗೆ ಒಳ್ಳೆ ಸಾವು ಬರಲ್ಲ… ಮಲ್ಲಿನಾಥನಂತ ಒಳ್ಳೇತನ ಮೇಲೆ ಕೇಸು ಮಾಡಿಸಿದ್ದು ತಪ್ಪು….’ ಅಂತ ಮನಸ್ಸಿನಲ್ಲೆ, ಪರಸ್ಪರ ಕಿವಿಗಳಲ್ಲಿ ಪಿಸುಗುಟ್ಟಿದರು.

ಊರಹೊರಗಿದ್ದ ಕೇರಿಯ ಮಂದಿ ಶಿವಯ್ಯ ತಾತನ ದನಿ ಕೇಳಿ ಓಡೋಡಿ ಬಂದರು. ಮೊದ ಮೊದಲು ಧೈರ್ಯ ಸಾಲದಂತೆ ಹಾಗೆ ನೋಡುತ್ತಾ ನಿಂತಿದ್ದರು. ಇನ್ನೇನು ಜೀಪ್ ಹೊರಳಿಸಿದಾಗ, ಕೇರಿಯ ನಾಲ್ಕಾರು ಹುಡುಗರು, ‘ಈ ಮಲ್ಲಿನಾಥಂದು ಏನೂ ತಪ್ಪಿಲ್ಲ ಸಾಹೇಬ್ರೆ. ಎಲ್ಲಾ ಇವನೇ ಈ ಗೌಡನೇ ಮಾಡಿಸಿದ್ದು. ನೀವಾ ಹೇಳ್ರಿ. ನಾವು ಗುಡಿಯಾಕ ಹೋಗೋದು ತಪ್ಪೇನು? ಪೂಜೆ ಮಾಡೋದು ತಪ್ಪೇನು? ನೀವೇ ಬರ್ರಿ ಈಗ ನಿಮ್ ಜೊತಿಗಿ ಗುಡಿಗಿ ಬರ್ತೀವಿ… ಗೌಡ ಸುಮ್ನಿದ್ರ ನಾವೇನೂ ನಿಮ್ಮ ಕುಡ ಜಗಳಕ್ಕ ಬರಲ್ಲ. ಇಲ್ಲಂದ್ರ ಮಲ್ಲಿನಾಥನ್ನ ಕರ್ಕಂಡು ಹೋದ್ರ ತಿಪ್ಲ ಆಗುತ್ತ ನೋಡ್ರಿ… ಬೇಕಾದ್ರ ನಮ್ಮನ್ನು ಕರ್ಕಂಡು ಹೋಗ್ರಿ ನಾವೂ ಬರ್ತೀವಿ. ನಾವೂ ಒಂದ್ ಕಂಪ್ಲೇಂಟ್ ಕೊಡ್ತೀವಿ… ಈ ಗೌಡನ ದೌರ್ಜನ್ಯ ಮಿತಿಮೀರೈತಿ…’ ಹೊಟ್ಟೆಯೊಳಗಿನ ಸಿಟ್ಟೆನ್ನೆಲ್ಲಾ ಒಂದೇ ಸವನೆ ಕಾರಿದರು. ‘ಇದು ಸೂಕ್ಷ್ಮ ವಿಚಾರ ಐತಿ. ನೀವು ತಲಿ ಹಾಕಬ್ಯಾಡ್ರಿ. ನಿಮಗ ತಿಳಿಯಂಗಿಲ್ಲ. ನಾಳೆ ಸ್ಟೇಷನ್ನಿಗೆ ಬಂದು ನನ್ನ ಕಾಣ್ರಿ… ಮಾತಾಡಿ ಬಗೆಹರಿಸಬೋದು…’ ‘ಅಲ್ಲೇನು ಬಗೆಹರಿಸುತ್ತಿ. ಇಲ್ಲಿಗೆ ಬಂದಿದಿ ಇಲ್ಲೇ ಬಗೆಹರಿಸು. ಶಿವಯ್ಯತಾತನ ಕುಟುಂಬಕ್ಕ ಮತ್ತು ನಮ್ಮ ಕುಟುಂಬಗಳಿಗೆ ಸೂಕ್ತ ರಕ್ಷಣೆ ಕೊಡಬೇಕು. ಇಲ್ಲಾ ಅಂದ್ರ ನೋಡ್ರಿ…. ನಮ್ ಮ್ಯಾಲ ಹೊಡಕಂಡು ಹೋಗಂಗ ಇದ್ರ… ಹೊಡಕಂಡು ಹೋಗ್ರಿ…’ ಕೇರಿಯ ಹನುಮ, ಬಸವಂತ, ಲಚುಮ, ಅಮರಪ್ಪ ಜೀಪಿಗೆ ಅಡ್ಡ ನಿಂತರು. ಶಿವಯ್ಯ ತಾತನೂ, ‘ನನ್ನ ಮ್ಯಾಲ ಹೊಡಕಂಡು ಹೋಗ್ತೀರೇನು? ನನ್ನ ಹೊಡ್ಕಂಡು ಹೋಗಿಬುಡ್ರಿ. ಏನೂ ತಪ್ಪ ಮಾಡಲಾರ್ದ ಮೊಮ್ಮಗನ್ನ ಕರ್ಕಂಡು ಹೋಗಬ್ಯಾಡ್ರಿ. ಇಲ್ಲಾ ಊರು ಜನ ತಿರುಗಿ ಬಿದ್ರ ನಿಮ್ ಕಥಿ ಮುಗಿಸಿಬುಡ್ತೀವಿ….’ ಎಂದು ಜೀಪಿಗೆ ಅಡ್ಡ ಬರುತ್ತಿದ್ದ ತಾತನಿಂದ ದೂರ ಸರಿಯಲೆಂಬಂತೆ ಡ್ರೈವರ್ ಜೀಪನ್ನು ಹಿಂದಕ್ಕೆ ಸರಿಸಿದ. ಪಿಎಸ್ಐ ಚಂಗನೇ ಜಿಗಿದು ಜೀಪಿನಲ್ಲಿ ಕೂಡುವ ಕ್ಷಣಾರ್ಧದಲ್ಲೆ ಜೀಪು ಬಸ್ ಸ್ಟ್ಯಾಂಡಿನತ್ತ ವೇಗವಾಗಿ ಸಾಗಿತು.

ಶರಣೇಗೌಡ ಗಾಂಧಿಕಟ್ಟೆಯ ಮುಂಭಾಗದಲ್ಲಿ ನಿಂತು ಸೇದುತ್ತಿದ್ದ ಸಿಗರೇಟಿನ ತುದಿಯಲ್ಲಿದ್ದ ಕೆಂಡದ ಕಿಡಿಗಳು ಗಾಳಿಗೆ ಹಾರಿದಂತೆ ಕಂಡವು. ಶಿವಯ್ಯ ತಾತ ಜೀಪ್ ಹೋದ ದಿಕ್ಕಿನತ್ತ ನಾಲ್ಕಾರು ಹೆಜ್ಜೆ ನಡೆದು ನೆಲದ ಮೇಲೆ ಕುಳಿತುಕೊಂಡ. ಮನೆಯ ಸುತ್ತಲಿನ ಒಂದಿಬ್ಬರು ಶಿವಯ್ಯತಾತನನ್ನು ಎದ್ದುನಿಲ್ಲಿಸಿ, ‘ಮನೆಗೆ ಹೋಗಾಮು ನಡಿ ತಾತ… ನಾಳಿ ಚಿನ್ನೂರಿಗೆ ಹೋಗಿ ತಹಸೀಲ್ ಕಚೇರಿ ಮುಂದೆ ಸ್ಟ್ರೈಕ್ ಮಾಡೋಣ. ಮಲ್ಲಿನಾಥನ್ನ ಬುಡಿಸಿಕೊಂಡೇ ಬರೋಣ…’ ಅಂತ ಹೇಳಿದರು. ‘ನನ್ನ ಗಾಂಧಿಕಟ್ಟೆ ಕಡೆ ಕರೆದುಕೊಂಡು ಹೋಗ್ರಿ… ಜಿಲ್ಲಾಧಿಕಾರೀನೇ ಊರಿಗೆ ಬರಬೇಕು. ಜಿಲ್ಲಾ ಉಸ್ತುವಾರಿ ಸಚಿವ ಮತ್ತು ಎಮ್ಮೆಲ್ಲೆ ಬಂದು ಪರಿಸ್ಥಿತೀನ ಖುದ್ದಾಗಿ ಅರ್ಥಮಾಡಿಕೊಂಡು, ಮಲ್ಲಿನಾಥನ್ನ ವಾಪಾಸ್ ಕಳಿಸೋದಲ್ದ ರಾಜಕೀಯ ಹೆಸರಲ್ಲಿ ಎಲ್ಲಾ ಹೊಲಸು ಕೆಲಸ ಮಾಡೋ ಶರಣೇಗೌಡನ್ನ ಜೈಲಿಗೆ ಹಾಕ್ಬಕು… ಅಲ್ಲಿ ತನಕ ನಾ ಒಂದು ಹನಿ ನೀರು ಕುಡಿಯಲ್ಲ…. ಒಂದು ತುತ್ತು ಅನ್ನ ತಿನ್ನಲ್ಲ… ಹಂಗೆ ಗಾಂಧಿ ಮಹಾತ್ಮನ ಚಪ್ಲಿಗಳನ್ನು ಇಟ್ಟ ಜಾಗದಲ್ಲಿ ಕುಂತು ಸತ್ಯಾಗ್ರಹ ಮಾಡ್ತೀನಿ…’ ದುಃಖಮಿಶ್ರಿತ ಸಿಟ್ಟಿನೊಂದಿಗೇ ಮಾತನಾಡುತ್ತಾ ಗಾಂಧಿಕಟ್ಟೆಯತ್ತ ಹೆಜ್ಜೆಹಾಕಿದ. ನೆರೆಮನೆಯ ನಾಲ್ಕಾರು ಮಂದಿ, ಕೇರಿಯ ಹತ್ತೆನ್ನರಡು ಮಂದಿ, ‘ನಾವೂ ನಿನ್ನ ಜೊತೆಗೆ ಉಪವಾಸ ಕುಂದ್ರುತೀವಿ… ನೋಡಾಮು ನಾವೆಲ್ಲ ಸತ್ತ ಮ್ಯಾಲಾದ್ರೂ ಬರ್ತಾರೊ ಇಲ್ಲೊ? ನಮ್ಮ ಗೋರಿಗಳನ್ನು ಇಲ್ಲೇ ಕಟ್ಟಿದ್ರ ಚಿಂತಿಲ್ಲ. ಸತ್ಯ, ನ್ಯಾಯಕ್ಕೆ ನಾವು ಒಗ್ಗಟ್ಟಿನಿಂದ ಹೋರಾಟ ಮಾಡೋಣ…’ ಎಂದು ಶಿವಯ್ಯ ತಾತನ ಜೊತೆಗೆ ಕಟ್ಟೆಯ ಮೇಲೆ ಕುಳಿತುಕೊಂಡರು.

* * * * * * * *

ಎರಡು ದಿನ ಉಪವಾಸ ಕುಳಿತ ಶಿವಯ್ಯ ತಾತ ಮತ್ತು ಊರಿನ ಇಪ್ಪತ್ತು ಜನರ ಸುದ್ದಿ ಕೆಲವೇ ಸ್ಥಳೀಯ ಪತ್ರಿಕೆಗಳಲ್ಲಿ ತುಣುಕು ಸುದ್ದಿಯಾಗಿ ಪ್ರಕಟವಾಯಿತು. ಮರುದಿನ ಬಂದ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ, ಎಮ್ಮೆಲ್ಲೆ ಮಲ್ಲಿಕಾರ್ಜುನ, ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೇರಿಯ ಜನರನ್ನು ಗಾಂಧಿಕಟ್ಟೆಗೆ ಕರೆಯಿಸಿ ಸಾಂತ್ವನ ಹೇಳಿದರು. ನಾಳೆಯೇ ಮಲ್ಲಿನಾಥನನ್ನು ಬಿಡುಗಡೆಮಾಡಿ ಊರಿಗೆ ಕಳಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠರಿಗೆ ತಿಳಿಸಿದ್ದೇವೆ. ಮಲ್ಲಿನಾಥನನ್ನು ಸುರಕ್ಷಿತವಾಗಿ ಕರೆದುಕೊಂಡು ಬರುವುದು ನಮ್ಮ ಜವಾಬ್ದಾರಿ ಅಂತ ಭರವಸೆ ನೀಡಿದಾಗ ಕೇರಿಯ ಮಂದಿ ಧರಣಿಯನ್ನು ವಾಪಾಸು ತೆಗೆದುಕೊಂಡರು. ಆದರೆ ಶಿವಯ್ಯ ತಾತ, ‘ಮೊಮ್ಮಗನ ಮುಖನೋಡದೆ ಮನೆಗೆ ಮರಳುವುದಿಲ್ಲ’ ಎಂದು ಹಟವಿಡಿದ. ‘ಮೊಮ್ಮಗನ ಜೊತೆಗೇ ಮನೆಗೆ ಹೋಗುವುದು. ಅಲ್ಲಿಯತನಕ ಗಾಂಧಿಮಹಾತ್ಮನ ಕಟ್ಟೆ ಮೇಲೆ ಕೂಡುತ್ತೇನೆ’ ಎಂದ. ಅಂತೂ ಇಂತು ಬೀಸೋ ದೊಣ್ಣಿಯನ್ನು ತಪ್ಪಿಸಿಕೊಂಡೆವು ಎಂಬ ಖುಷಿಯಲ್ಲಿ ಸಚಿವರು, ಎಮ್ಮೆಲ್ಲೆ, ಜಿಲ್ಲಾಧಿಕಾರಿ ಅವರ ಹಿಂದೆ ಬಂದಿದ್ದ ಹದಿನೈದಿಪ್ಪತ್ತು ಮಂದಿಗೆ  ಊರ ಹೊರಗಿದ್ದ ಶರಣೇಗೌಡರ ಬಾರ್ ಅಂಡ್ ರೆಸ್ಟೋರೆಂಟ್ ನಲ್ಲಿ ಆ ರಾತ್ರಿ ಭರ್ಜರಿ ಖಂಡ, ತುಂಡು, ಗುಂಡಿನ ಪಾರ್ಟಿ ಏರ್ಪಡಿಸಲಾಗಿತ್ತು. ಶರಣೇಗೌಡ ಕುಡಿದ ಮಬ್ಬಿನಲ್ಲಿ ಎಸ್ಪಿ ಸಾಹೇಬರ ಎರಡೂ ಮುಂಗೈಹಿಡಿದು, ‘ಎಷ್ಟು ಲಕ್ಷ ಕೇಳ್ತೀರಿ ಕೇಳ್ರಿ ಸಾಹೇಬ್ರೆ…. ಮಲ್ಲಿನಾಥನ ಮ್ಯಾಲಿನ ಕೇಸ್ ಸ್ಟ್ಯಾಂಡ್ ಮಾಡ್ರಿ. ಅವನು ಮತ್ತೆಂದೂ ಊರಿಗೆ ಮುಖ ತೋರಿಸಾಕ ಬರ್ಲಾರ್ದಂಗ ಮಾಡ್ರಿ…’ ಎಂದು ತೊದಲುತ್ತಾ ಹೇಳಿದ. ಎಸ್ಪಿ ಸಾಹೇಬರು, ಉಳಿದವರತ್ತ ನೋಡುತ್ತಾ, ‘ಇವರೆಲ್ಲಾ ನನ್ನ ಬೆನ್ನಿಗೆ ಇದ್ದ ಮ್ಯಾಲ ನಂದೇನು ಐತ್ರಿ ಗೌಡ್ರೆ… ನೀವೇನೂ ಚಿಂತಿಮಾಡಬ್ಯಾಡ್ರಿ… ಇನ್ನಾ ಏನಾದ್ರೂ ಇದ್ರ ಫೋನ್ ಮಾಡ್ರಿ… ಮೂರು ರಿಜರ್ವ್ ವ್ಯಾನ್ ಕಳಿಸ್ತೀನಿ. ಊರಾಗ ಯಾವುನ್ಯಾವನು ಧಿಮಾಕು ಮಾಡ್ತಾನೊ ಅವರನ್ನೆಲ್ಲಾ ಒದ್ದು ಎಳಕೊಂಡು ಹೋಗ್ತೀವಿ….’ ಅವರೆಲ್ಲರೂ ಎಷ್ಟೊತ್ತಿಗೆ ಅಲ್ಲಿಂದ ಹೋದರೊ ಗೊತ್ತಿಲ್ಲ.

ಬೆಳಕು ಹರಿಯುವುದನ್ನೆ ಕಾಯುತ್ತಾ ಕುಳಿತ ಶಿವಯ್ಯತಾತ ಬೆಳಿಗ್ಗೆ ಸೂರ್ಯೋದಯವಾಗುತ್ತಿದ್ದಂತೆಯೇ ಬೇವಿನಗಿಡದ ಬೊಡ್ಡೆ ಹಿಡಿದುಕೊಂಡು ನಿಧಾನವಾಗಿ ಎದ್ದುನಿಂತು ಬಸ್ ಸ್ಟ್ಯಾಂಡಿನತ್ತ ನೋಡಿದ. ಥೇಟ್ ಗಾಂಧಿತಾತನನ್ನೇ ಹೋಲುತ್ತಿದ್ದ ಶಿವಯ್ಯತಾತ ತನ್ನ ಕೋಲಿಗಾಗಿ ಸುತ್ತ ಹುಡುಕಾಡಿದ. ಕೋಲು ಕಣ್ಣಿಗೆ ಕಾಣಲಿಲ್ಲ. ಕೈಮುಂದೆಮಾಡಿ, ಹುಟ್ಟುತ್ತಿರುವ ಸೂರ್ಯನನ್ನೇ ದಿಟ್ಟಿಸಿದ. ಎಂದಿಗಿಂತಲೂ ಇಂದು ಸೂರ್ಯ ಇಷ್ಟೊತ್ತಿಗೇ ಕೆಂಡದಂತೆ ನಿಗಿ ನಿಗಿ ಉರಿಯುತ್ತಿದ್ದಂತೆ ಕಂಡ. ಕಣ್ಣಿನ ಮುಂದೆ ಸಿಡಿಲಿನ ಬೆಳಕು ಝಳಪಿಸಿದಂತೆ ಅನ್ನಿಸಿ ಬೊಡ್ಡೆಗೆ ಹಿಡಿದ ಕೈ ಜಾರುತ್ತಿದ್ದಂತೆ ಶಿವಯ್ಯ, ‘ಯವ್ವೊ…’ ಅಂತ ಕೆಟ್ಟ ದನೀಲಿ ಚೀರಿದ. ಗಾಂಧಿಮಹಾತ್ಮನ ಚಪ್ಪಲಿಗಳನ್ನು ಇಟ್ಟ ಗುಣೇವಿಗೆ ಹಣಿಹಚ್ಚಿ ಉದ್ದೂಕ ಮಲಗಿದ….

 

ಕಲಿಗಣನಾಥ ಗುಡದೂರು

ಎಂಕೆಗಾಂಧಿ ಕಥಾಸ್ಪರ್ಧೆ ಬಹುಮಾನ ವಿಜೇತರು

Mahathma Gandhi
ವಿಕ್ರಾಂತ ಕರ್ನಾಟಕ ವಾರಪತ್ರಿಕೆಯ ಸಂಸ್ಥಾಪಕರಾದ ರವಿ ಕೃಷ್ಣಾ ರೆಡ್ಡಿಯವರು 1009-10ರ ಸಾಲಿನ ಗಾಂಧಿಜಯಂತಿ ಕಥಾಸ್ಪರ್ಧೆಯನ್ನು ಏರ್ಪಡಿಸಿದ್ದರು. ಗಾಂಧೀಜಿಯ ಮೌಲ್ಯವನ್ನಾಧರಿಸಿ ವಾಸ್ತವವನ್ನು ಸ್ಪಷ್ಟವಾಗಿ ಪ್ರತಿಬಿಂಬಿಸುವ, ಅದೇ ಸಮಯದಲ್ಲಿ ಕಲಾತ್ಮಕವಾಗಿರುವ, ಸಮಕಾಲೀನ ವ್ಯವಸ್ಥೆಯನ್ನು ಭವಿಷ್ಯಕ್ಕೂ ಕಟ್ಟಿಕೊಡುವ ಕತೆಗಳನ್ನು ನಾಡಿನ ಸೃಜನಶೀಲ ಮನಸ್ಸುಗಳಿಂದ ಆಹ್ವಾನಿಸಿದ್ದರು. ಅವರ ಆಹ್ವಾನಕ್ಕೆ ನಾಡಿನ ಉತ್ಸಾಹಿ ಲೇಖಕರಿಂದ ಕತೆಗಳ ಮಹಾಪೂರವೇ ಹರಿದುಬಂದಿತ್ತು.
ನಾಡಿನ ಹೆಸರಾಂತ ಸಾಹಿತಿಗಳು, ಲೇಖಕರು ಭಾರೀ ಉತ್ಸಾಹದಿಂದಲೇ ಕಥಾಸ್ಪರ್ಧೆಯಲ್ಲಿ ಪಾಲ್ಗೊಂಡು ಕತೆಗಳನ್ನು ಬರೆದು ಕಳುಹಿಸಿಕೊಟ್ಟಿದ್ದರು. ಆ ಕತೆಗಳನ್ನು ಕತೆಗಾರರಾದ ಡಾ.ನಟರಾಜ್ ಹುಳಿಯಾರ್, ಕೃಷ್ಣ ಮಾಸಡಿ ಮತ್ತು ಅನಿತಾ ಹುಳಿಯಾರ್‌ರವರು ಓದಿ, ಕೂತು ಚರ್ಚಿಸಿ, ಉತ್ತಮವಾದ ಮೂರು ಕತೆಗಳನ್ನು ಆಯ್ಕೆ ಮಾಡಿದರು. ಆ ಮೂರು ಬಹುಮಾನಿತ ಕತೆಗಳು ಇಂತಿವೆ :

* ಮೊದಲ ಬಹುಮಾನ ರೂ. 6,000, ಬಹುಮಾನಿತ ಕತೆ > ಗಾಂಧಿಕಟ್ಟೆ >ಕತೆಗಾರರು > ಕಲಿಗಣನಾಥ ಗುಡದೂರು
* ಎರಡನೆಯ ಬಹುಮಾನ ರೂ. 4,000, ಬಹುಮಾನಿತ ಕತೆ > ವಂದೇಮಾತರಂ > ಕತೆಗಾರರು > ಭಾಗೀರಥಿ ಹೆಗಡೆ
* ಮೂರನೆಯ ಬಹುಮಾನ ರೂ. 3,000 ಬಹುಮಾನಿತ ಕತೆ > ಗಾಂಧಿ ವೇಷ > ಕತೆಗಾರರು> ವಿಶ್ವನಾಥ ಪಾಟೀಲಗೋನಾಳ

ಬಣ್ಣದ ಮೋಹದ ಶುಕ್ರಿ : Shukri

ಸಿನೆಮಾ ಹುಚ್ಚಿನ ಮನೆಗೆಲಸದ ಶುಕ್ರಿ ಹೇಳದೇ ಕೇಳದೇ ಇದ್ದಕ್ಕಿದ್ದಂತೆ ಮಾಯವಾಗಿ ಹೋದದ್ದಾದರೂ ಎಲ್ಲಿಗೆ? ಆಕೆಯ ಗೆಳೆತನ, ಬಣ್ಣದ ಮೋಹ ನಾನಾ ಅನುಮಾನಗಳಿಗೆ, ಊಹಾಪೋಹಗಳಿಗೆ ಕಾರಣವಾಗಿತ್ತು. ಶುಕ್ರಿ ಕೊನೆಗೂ ಸಿಕ್ಕಳಾ?

“ಶುಕ್ರಿ ಬಂದಿದೆನ್ರಾ ಅಮ್ಮ ಇಲ್ಲಿ?” ಎನ್ನುತ್ತಾ ದೇವಿ ವಿಚಿತ್ರ ಚಹರೆ ಮಾಡಿಕೊಂಡು ಬೆಳ್ಳಂಬೆಳಿಗ್ಗೆ ಬಂದಿದ್ದಳು. ಎಲ್ಲೇ ಅವಳು? ನಿನ್ನೆ ಬರ್ಲೆ ಇಲ್ವಲೆ? ಒಂದ್ ಕೆಲ್ಸನೂ ಆಗ್ಲಿಲ್ಲ? ನಿನ್ನೆ ಪಾತ್ರೆ, ಬಟ್ಟೆ, ಮನೆ ಕೆಲಸ ಎಲ್ಲ ನಾನೇ ಮಾಡ್ಕಂಡೆ. ಅದ್ರ ಕಾಲದಲ್ಲಿ ಆಫಿಸಿಗ್ ಅರ್ಧ ದಿವ್ಸ ರಜೆ ಹಾಕ್ಬೇಕಾಯ್ತಲ್ಲೇ? ಎಂದು ವಾಪಸ್ ದೇವಿಗೆ ದಬಾಯಿಸಿದ್ದೆ. ಆದ ಕತೆ ಇಷ್ಟು. ಮೊನ್ನೆ ಸಂಜೆಯಿಂದ ಶುಕ್ರಿ ಕಾಣಿಸುತ್ತಿಲ್ಲ. ಅವಳ ತಾಯಿ ದೇವಿ ಕೇರಿಯೆಲ್ಲ ಹುಡುಕಿ ಮುಗಿಸಿ, ಇಲ್ಲಿ ಬಂದಿದ್ದಾಳೆ. ಶುಕ್ರಿ ದಿನವೂ ನಮ್ಮ ಮನೆಯ ಕಸ ಮುಸುರೆ ಅದು ಇದು ಎಂದು ಬೆಳಿಗ್ಗೆಯೇ ಬಂದು ಮುಗಿಸಿಕೊಟ್ಟು, ನಮ್ಮಲ್ಲಿಯೇ ಊಟ ಮಾಡಿ, ರಾಮ ನಾಯ್ಕರ ಮನೆಯಲ್ಲಿ ಸಂಜೆಯ ಒಂದಿಷ್ಟು ಕೆಲಸ ಮುಗಿಸಿ 5 ಗಂಟೆಗೆಲ್ಲ ಮನೆ ಸೇರುವದು ದಿನಚರಿ. ಮೊನ್ನೆ ಸಂಜೆ ಮನೆಗೆ ಹೋಗಿಲ್ಲ. ಎಲ್ಲಿಯೋ ಯಾರದೋ ಮನೆಯಲ್ಲಿ ಸಿನಿಮಾ ಹುಚ್ಚಿನ ಹುಡುಗಿ ಕುಳಿತಿರಬೇಕೆಂದು ಹೆಚ್ಚು ತಲೆಕೆಡಿಸಿಕೊಳ್ಳದೆ ದೇವಿ ಮೀನುಸಾರು, ಗಂಜಿಯೂಟ ಮುಗಿಸಿದ್ದಳು. ಆಗ ಸಣ್ಣಗೆ ಎದೆ ಹೊಡೆದುಕೊಳ್ಳಲು ಶುರುವಾಗಿ, ಅಲ್ಲಿ ಇಲ್ಲಿ ಹೋಗಿ ಕೇಳತೊಡಗಿದ್ದು, ಈಗ ಬೆಳಬೆಳಿಗ್ಗೆ ನಮ್ಮ ಮನೆಗೆ ಬಂದಿತ್ತು ಸವಾರಿ.

“ರಾಮ ನಾಯ್ಕರ ಮನೆಲ್ಲಿ ಕೆಳಿದ್ಯೆನೆ?”
“ಹೌದ್ರಾ, ಅಲ್ಲಿಂದ ಸಂಜೀಗೆ ಯಾವಗ್ನಂಗೆ ಹೊಂಟಿತ್ತನ್ತ್ರಾ, ಎಲ್ಲಿಗ್ ಹೋಗಿರುದ್ರಾ ಈ ಹುಡ್ಗೀ? ಮತ್ತೆ ಯಾರೆನ್ತರೂ ಮಾಡೀರೆ, ಅಮ್ಮ ಎಂತ ಮಾಡ್ಲರಾ….” ಎನ್ನುತ್ತಲೇ ಹೋ ಎಂದು ಅಳತೊಡಗಿದಳು.

ತಡಿಯೇ, ಈಗಲೇ ಎಂತ ಅಳ್ತೀ? ನಾ ಇವ್ರಿಗೆ ಹೇಳಿ ನೋಡ್ತೆ ಹುಡುಕ್ವಾ ಎಂದು ಅವಳಿಗೆ ಸಮಾಧಾನ ಮಾಡಿ ಕಳಿಸಿದರೂ, ನಂಗೂ ಚಿಂತೆಗಿಟ್ಟುಕೊಂಡಿತ್ತು, ಈ ಮಳ್ಳು ಹುಡುಗಿ ಎಲ್ಲಿ ಹೋದಳೋ ಏನೋ ಎಂದು ದುಗುಡವಾದರೂ ಜೊತೆಗೇ ಮತ್ತೊಂದು ಪ್ರಶ್ನೆ ಎದ್ದಿತು ನಾಳೆಗೆ ಮನೆಗೆಲಸಕ್ಕೆ ಯಾರು? ಅಲೆ ದೇವಿ, ನಿಮ್ಮ ಕೇರಿಲ್ಲಿ ಯಾರಾರೂ ಇದ್ರೆ, ಇಲ್ಲ ಅಂದ್ರೆ ನಾಳೆ ದಿನ ನೀನೆ ಕೆಲ್ಸಕ್ಕೆ ಬಂದು ಹೋಗು ಮಾರಾಯ್ತಿ, ಇಲ್ದಿದ್ರೆ ಸಂಭಾಳ್ಸುಕ್ಕಾಗ, ತಲೆಕೆಡಿಸ್ಕಬೇಡ, ಶುಕ್ರಿ ನಾಳೀಕ್ ಬರೂದ್ ಬಿಡು ಎಂದಿದ್ದಕ್ಕೆ ಹ್ನೂ ಅನ್ನುವಂತೆ ತಲೆಯಲುಗಿಸಿ ಗೇಟಿನತ್ತ ಸಾಗುತ್ತಿದ್ದವಳನ್ನೇ ನೋಡುತ್ತಾ ನಿಂತಳು ಸುಮನ.

ಶುಕ್ರಿ ಸುಮಾರು ಹದಿನೇಳು ವರ್ಷದ ಹಾಲಕ್ಕಿ ಒಕ್ಕಲರ ಹುಡುಗಿ. ಅವರ ಕೇರಿಯಲ್ಲಿ ನೋಡಿದರೆ, ಸ್ವಲ್ಪ ಹೆಚ್ಚೇ ಎನ್ನುವಂತ ಬಿಳಿ ಬಣ್ಣದ ಹುಡುಗಿ. ಜೊತೆಗೆ ಅಲಂಕಾರದ ಹುಚ್ಚು ಬೇರೆ. ಹಾಗಾಗಿ ಎದ್ದು ಕಾಣುವಂತಿದ್ದಳು. ವಾರವಿಡೀ, ಮನೆಗೆಲಸ ಮಾಡಿಕೊಂಡಿರುವ ಅವಳಿಗೆ ರವಿವಾರ ರಜೆಯ ದಿನ. ಪ್ರತಿ ರವಿವಾರವೂ ತಪ್ಪದೆ ಸಿನಿಮಾ ಥೇಟರಿನಲ್ಲಿ ಹಾಜರ್. ಅವಳಿಗೆ ಸಿನಿಮಾದ ಕತೆಗಿಂತಲೂ, ಹೀರೋಯಿನ್ ಬಟ್ಟೆಬರೆ, ಅಲಂಕಾರ, ಕೇಶವಿನ್ಯಾಸ, ಬಳೆ, ಸರ, ಎಂಬಿತ್ಯಾದಿ ಚಕಪಕ ಡೀಟೆಲ್ಸ್ಗಳಲ್ಲಿ ಆಸಕ್ತಿ. ಸಿನಿಮಾ ಮುಗಿಸಿ ಮಾರನೆ ದಿನ ಕೆಲಸಕ್ಕೆ ಬಂದವಳು, ಇಡೀ ದಿನ “ಅಮ್ಮ, ಹೀರೋಹಿಣಿ ಎಷ್ಟ್ ಚಂದ ಇತ್ರಾ? ಹೊಸಾ ನಂನಿ ಸೀರೆ ಉಟ್ಕನ್ಡಿತ್ರಾ, ಒಂದ್ ಹಾಡಲ್ಲಿ ಎಷ್ಟ್ ಚಂದ ಚಪ್ಪಲ ಹಾಕಂಡಿತ್ರಾ” ಇದೆ ಬಗೆಯ ವರದಿಗಳು. ಸಿನೆಮ ಕತೆ ಎಂತದೆ? ಎಂತ ಸಿನೆಮಾನೇ? ಎಂದು ಕೇಳಿದರೆ “ಎಂತದೋ ಇತ್ರಾ, ಕತೆ ಸಮ ಅರ್ಥ ಆಗ್ಲಿಲ್ರಾ, ಅದು ಬಿಟ್ಟಾಕಿ, ನೀವು ಸೇಲೀಮ್ಕೆ ಹೋಗಬರ್ರ, ಹೊಸ ಹೀರೋಹಿನಿರಾ….” ಎಂದು ಮತ್ತೆ ಹೀರೋಯಿನ್ಗೆ ಬರುತ್ತಿತ್ತು ಅವಳ ಮಾತು. ತನ್ನ ಸಂಬಳದಲ್ಲಿ, ಬರೀ ಬಳೆ, ಕ್ಲಿಪ್ಪು, ರಿಬ್ಬನ್, ಪೌಡರ್ ಎಂದು ಹಾಳು ಮಾಡುತ್ತಾಳೆ ಎಂದು ದೇವಿಗೆ ಹೇಳಿ, ನಮ್ಮ ಬ್ಯಾಂಕಿನಲ್ಲೇ, ಅವಳ ಹೆಸರಲ್ಲಿ ಒಂದು ಅಕೌಂಟ್ ತೆಗೆಸಿ, ಅವಳ ಸಂಬಳದ ಅರ್ಧ ಭಾಗವನ್ನು, ಖಾತೆಗೆ ಕಟ್ಟಿ, ಅರ್ಧವನ್ನಷ್ಟೇ ಅವಳಿಗೆ ಕೊಡುತ್ತಿದ್ದೆ. ದೇವಿಗೂ ಸಮಾಧಾನ, ನಾಳೆ ಅವಳ ಮದುವೆಗಾದರೂ ಆಯಿತು ಬ್ಯಾಂಕಿನಲ್ಲಿಟ್ಟಿರುವ ದುಡ್ಡು ಎಂದು.

ಈ ಶುಕ್ರಿಯ ಇನ್ನೊಂದು ವಿಶೇಷವೆಂದರೆ, ಅವಳಿಗೆ ತನ್ನ ಹಳೆಯ ಬಗೆಯ ಒಕ್ಕಲರ ಹೆಸರಾದ ಶುಕ್ರಿ ಎಂಬುದರ ಬಗೆಗಿನ ಅಸಮಾಧಾನ. ಈಗೀಗ, ಅವಳ ವಾರಗೆಯ ಹುಡುಗಿಯರಿಗಿರುವಂತೆ ಮಾಲಿನಿ, ಶಾಲಿನಿ, ಮಂಜುಳಾ, ರೂಪಾ ಎನ್ನುವಂತ ಹೆಸರಿದ್ದರೆ ಎಷ್ಟು ಚೆನ್ನಾಗಿತ್ತು, “ನನ್ಗೆಂತ ನಮ್ಮಜ್ಜಿ ಹೆಸರಿಟ್ಟೀರೋ ಏನೋ” ಎಂದು ಯಾವಾಗಲೂ ಹಲುಬುತ್ತಿದ್ದಳು. ಹೋದ ತಿಂಗಳು, ಮಗ ಸೊಸೆ ಅಮೆರಿಕೆಯಿಂದ ಬಂದಾಗ ಸೊಸೆಯ ಅಲಂಕಾರಗಳನ್ನೆಲ್ಲ ಕಂಡು ಸೂಕ್ಷ್ಮವಾಗಿ ಗಮನಿಸುತ್ತಿದ್ದಳು. ಸೊಸೆ ಇವಳನ್ನು, ಶುಕ್ರೀ, ಬಾರೆ ಇಲ್ಲಿ ಎಂದು ಯಾವುದೋ ಕೆಲಸಕ್ಕೆ ಕರೆದಾಗ, ಮುಖ ದುಮ್ಮಿಸಿಕೊಂಡು “ಸಣ್ಣಮ್ಮ, ನೀವು ಶುಕ್ರಿ ಅನ್ಬ್ಯಾಡ್ರ” ಎಂದಿದ್ದಳು. ಮತ್ತೆ ನಿನಗೆಂತ ಶಕೀರಾ ಎನ್ಬೇಕೆನೆ. ನಿನ್ನೆಸ್ರು ಶುಕ್ರಿ ಅಲ್ವನೆ ಎಂದು ಸೊಸೆ ನುಡಿದಾಗ, ಅಡಿಗೆಮನೆಯಲ್ಲಿದ್ದ ನನಗೆ ನಗು. ಅವಳು, ಒಂದಿಷ್ಟು ಬಣ್ಣದ ಹೇರ್ಬ್ಯಾನ್ಡ್, ಒಂದು ನೆಲ್ಪಾಲಿಶ್, ಲಿಪ್ ಸ್ಟಿಕ್ಕನ್ನು ಇವಳಿಗೆ ಕೊಟ್ಟಾಗ ಶುಕ್ರಿ ಮುಖ ಊರಗಲವಾಗಿತ್ತು. ಅವತ್ತಿಂದ ನನ್ನ ಸೊಸೆ ಇವಳ ಫೆವರಿಟ್ ಪರ್ಸನ್. ಅವರು ವಾಪಸ್ ಹೋದಮೇಲೆ ತುಂಬಾ ದಿನಗಳವರೆಗೆ ಕೇಳುತ್ತಿದ್ದಳು, “ಮತ್ಯಾವಾಗ ಬರ್ತೀರು ಸಣ್ಣಮ್ಮ” ಎಂದು.

ಇದೆ ಯೋಚನೆಯಲ್ಲಿಯೇ ಬೆಳಗಿನ ಕೆಲಸಗಳನ್ನು ಪೂರೈಸಿಕೊಂಡು, ಸುಮನ ಕೆಲಸಕ್ಕೆ ಹೊರಡುವ ತರಾತುರಿಯಲ್ಲಿರುವಾಗ, ವಾಕಿಂಗ್ ಹೋಗಿದ್ದ ಮನೋಹರ್ “ಸುದ್ದಿ ಗೊತ್ತೇನೆ” ಎಂದು ಕೂಗುತ್ತಲೇ ಒಳಬಂದರು. ಶುಕ್ರಿ ಕತೆ ಇವರಿಗೆ ಇಷ್ಟುಬೇಗ ಹೇಗೆ ತಿಳಿಯಿತು ಎಂದು ಆಶ್ಚರ್ಯಪಡುತ್ತಲೇ ದೋಸೆ ಹುಯ್ಯುತ್ತಿದ್ದ ಸುಮನ ಕಾವಲಿಸಟ್ಟುಗವನ್ನು ಕೈಯ್ಯಲ್ಲಿ ಹಿಡಿದುಕೊಂಡೆ ಹೊರಬಂದಾಗ, ಮನೋಹರ್ ಹೇಳಿದ್ದೆ ಬೇರೆ. “ಸುದ್ದಿ ಕೇಳಿದ್ಯೇನೆ? ಪೇಟೆಯಲ್ಲಿ, 2 ಆಭರಣದಂಗಡಿ, 3 ಪೆಟ್ರೋಲ್ ಬಂಕ್ ದರೋಡೆಯಾಗಿದೆ! ಒಂದು ಆಭರಣದಂಗಡಿಯ ಸೆಕ್ಯುರಿಟಿ ಗಾರ್ಡ್ ಮತ್ತು ಬೀಟ್ ಪೋಲೀಸರಿಬ್ಬರೂ ಆಸ್ಪತ್ರೆಯಲ್ಲಿದ್ದಾರೆ. 4-5 ಜನ ಇದ್ದರಂತೆ ಒಂದು ಏಕೆ-47 ಬೇರೆ ಇತ್ತಂತೆ.” ದರೋಡೆಯ ಕತೆ ತಿಂಡಿ ತಿನ್ನುವಾಗಲೂ ಮುಂದುವರಿದಿದ್ದರಿಂದ ಶುಕ್ರಿ ಪರದೆಯ ಹಿಂದೆ ಸರಿದು ಹೋಗಿಬಿಟ್ಟಳು. ಆದರೆ, ತಟ್ಟೆ ತೊಳೆದುಬಿಡಿ ಶುಕ್ರಿ ಇವತ್ತು ಬರ್ತಾ ಇಲ್ಲ ಎನ್ನುವಾಗ ಮತ್ತೆ ನೆನಪಾಯಿತು, ಒಹ್ ಇವರಿಗೆ ಹೇಳಲೇ ಇಲ್ಲ ಎಂದು. ಶುಕ್ರಿಯ ನಾಪತ್ತೆಯ ವಿಷಯ ಹೇಳಿ, ಕೋರ್ಟಿಗೆ ಹೋಗುವಾಗ ಸ್ವಲ್ಪ ಸ್ಟೇಷನ್ನಿನಲ್ಲಿ ಹೇಳಿ ಹೋಗಿ. ನೀವು ಹೇಳಿದರೆ ಸ್ವಲ್ಪ ಅಲ್ಲಿ ಇಲ್ಲಿ ವಿಚಾರಿಸಬಹುದು.

“ಅಯ್ಯೋ ಆ ಮಳ್ಳು ಹುಡುಗಿ ಇಲ್ಲೇ ಎಲ್ಲೋ ನೆಂಟರ ಮನೆಗೆ ಹೋಗಿರಬೇಕು, ಮನೆಲ್ಲಿ ಜಗಳವಾಯಿತೋ ಏನೋ, ಬರ್ತಾಳೆ ಬಿಡು, ಈಗ ಅವರೆಲ್ಲ ದರೋಡೆ ಗದ್ದಲದಲ್ಲಿರ್ತಾರೆ, ಇದೆಂತ ವಿಷಯನೇ, ಇನ್ನೊಂದ್ ನಾಲಕ್ಕು ದಿನ ಆದರೂ ಬರದೆ ಇದ್ರೆ ಹೇಳಿದರಾಯಿತು” ಎಂದುಬಿಟ್ಟರು. ಇದೆ ಸರಿ ಎನ್ನಿಸಿ ಸುಮನಳೂ ತಯಾರಾಗಿ ಬ್ಯಾಂಕಿಗೆ ಹೊರಟಳು. ಆ ದಿನವಿಡೀ ಎಲ್ಲರ ಬಾಯಲ್ಲೂ ಬರೀ ದರೋಡೆಯದೆ ಸುದ್ದಿ. ನಿಜವೆಷ್ಟೋ, ರೆಕ್ಕೆಪುಕ್ಕ ಹಚ್ಹ್ಚಿದ್ದೆಷ್ಟೋ? ಸಂಜೆಯಾಗುವುದರೊಳಗೆ ಹೊಸ ಹೊಸ ಆಯಾಮಗಳು ಹುಟ್ಟಿಕೊಂಡುಬಿಟ್ಟಿದ್ದವು.

ಇವೆಲ್ಲ ಆಗಿ ಈಗ ಸುಮಾರು ಒಂದು ತಿಂಗಳಾಗಿದೆಯೇನೋ, ಶುಕ್ರಿಯ ಪತ್ತೆ ಹತ್ತಿಲ್ಲ. ಮನೆಗೆಲಸಕ್ಕೆ ಒಕ್ಕಲ ಕೇರಿಯಿಂದಲೇ ಇನ್ನೊಬ್ಬ ಹುಡುಗಿ ಬರುತ್ತಿದ್ದಾಳೆ. ಚುರುಕು ಹುಡುಗಿ. ಎಸ್ಸೆಲ್ಸಿವರೆಗೆ ಓದಿದವಳು. ಗದ್ದೆ ಕೆಲಸ ಎಲ್ಲ ಬೇಡ ಎಂಬ ಬಿಗುಮಾನ. ಅದಕ್ಕೆ ಚೂರುಪಾರು ಮನೆಗೆಲಸವಾದರೆ ಸರಿ ಎಂದುಕೊಂಡು ಬರುತ್ತಾಳೆ. ಆವಾಗಾವಾಗ ದೇವಿ ಬಂದು ಎಂತಾರೂ ತಿಳೀತ್ರ ಅಮ್ಮಾ ಎಂದು ವಿಚಾರಿಸಿಕೊಂಡು ಹೋಗುತ್ತಾಳೆ. ಅವತ್ತು ಸಂಜೆ ಮನೆಗೆ ಬಂದ ಮನೋಹರ್ ಸ್ವಲ್ಪ ದುಗುಡದಿಂದ ಕೂತಿದ್ದರು.

“ಎಸ್ಆಯ್ ಫೋನ್ ಮಾಡಿದ್ದರು. ಒಂದ್ಸಲ ಸ್ಟೇಷನ್ನಿಗೆ ಬಂದು ಹೋಗಿ ಅಂತ. ಹೋಗಿದ್ದೆ . ಆ ದರೋಡೆಕೋರರ ಸುಳಿವು ಸಿಕ್ಕಿದೆಯಂತೆ. ನಿಮ್ಮ ಕೆಲಸದ ಹುಡಿಗಿ ಆಗಲೇ ಅಲ್ಲವ ಕಾಣೆಯಾಗಿದ್ದು?” ಅಂದರು. “ನಿಮಗೆ ತಲೆ ಸರಿ ಇದೆಯೇನ್ರೀ? ಆ ಇನ್ಸ್ಪೆಕ್ಟರ್ ತಲೆ ಸರಿ ಇದೆಯೇನ್ರೀ?”

ಇಲ್ಲಿ ಕೇಳು, ಆ ಗುಂಪಿನ ಮುಂದಾಳು ಒಬ್ಬ ಸೈನಿಕನಂತೆ, ಏಕೆ-47 ಅವನತ್ರ ಅದಕ್ಕೆ ಬಂದಿದ್ದು. ಸೈನ್ಯದ್ದು ಅದು. ಅಲ್ಲಿಯೂ ಅವನ ನಡತೆ ಸರಿ ಇಲ್ಲ ಎಂದು ಸಸ್ಪೆಂಡ್ ಮಾಡಿದ್ದರಂತೆ. ಇಲ್ಲೇ ಪಕ್ಕದೂರಿನ ಹಾಲಕ್ಕಿ ಹುಡುಗನಂತೆ ಮಾರಾಯ್ತಿ ಅವನು! ಶುಕ್ರಿಯ ನೆಂಟರ ಪೈಕಿಯ ಊರಿನವನು!

ಅದಕ್ಕೆ ನಮ್ಮ ಶುಕ್ರಿ ಹೇಗೆ ಸಂಬಂಧಾರೀ?

ಅಲ್ವೇ? ಈ ಶುಕ್ರಿಗೂ ಆ ಹುಡುಗನಿಗೂ ಹೇಗೋ ಫ್ರೆಂಡ್ಶಿಪ್ ಆಗಿರಬೇಕು. ಊರಿಗೆ ಬಂದಾಗ ಓಡಿ ಹೋಗುವ ಎಂದು ಪುಸಲಾಯಿಸಿರ್ಬೇಕು. ಈ ಮಳ್ಳಿ ಏನೂ ಗೊತ್ತಿಲ್ಲದೇ ಸಿಕ್ಕಿ ಹಾಕ್ಕೊಂಡಿರ್ಬೇಕು ಆ ಜಾಲದಲ್ಲಿ.

ಅಯ್ಯೋ ನಿಮ್ಮ ಲಾಯರ್ ಬುದ್ಧಿ ಎಲ್ಲಿ ಹೋಗುತ್ತದೆಯಲ್ಲವೇ? ಬೇಡದ ದಾರಿಯಲ್ಲಿ ಓಡುವುದೇ ಸೈ ಅದು.

ನೀವೆಲ್ಲ ಏನೇ ಹೇಳಿ, ನಾನಂತೂ ನಿಮ್ಮ ವಾದವನ್ನು ಒಪ್ಪುವುದಿಲ್ಲ. ಶುಕ್ರಿಗೆ ಅಂತ ಗೆಳೆತನ ಇದ್ದರೆ ಆ ಬಾಯ್ಬಡುಕಿ ನನಗೆ ಹೇಳಿರುತ್ತಿದ್ದಳು. ಎಂದು ಸುಮನ ಮಾತು ಮುಗಿಸಿದರೂ ಮನಸ್ಸು ನೋವು ಭಯದಿಂದ ಕುಗ್ಗಿಹೋಗಿತ್ತು. ಇವರ ಲಾಜಿಕ್ ನಿಜವೇ ಆಗಿದ್ದರೆ? ಪಾಪ ಆ ಹೆಣ್ಣುಹುಡುಗಿ ಎಷ್ಟು ಮೋಸಹೊದಳೊ, ನಿಜವಾಗಿಯೂ ಅವಳು ಹಾಗೆ ಓಡಿಹೊಗಿದ್ದಿರಬಹುದೇ? ಇಬ್ಬರೂ ಹಾಲಕ್ಕಿ ಒಕ್ಕಲರೆ. ಓಡಿ ಹೋಗುವ ಪ್ರಸಂಗ ಬರುತ್ತಿರಲಿಲ್ಲ. ಛೆ ಇರಲಿಕ್ಕಿಲ್ಲ. ಸರ ಬಳೆ ಎಂದು ಓಡಾಡುವ ಹುಡುಗಿ ಏನಾದರೂ ಹುಚ್ಚು ಆಸೆಗೆ ಮರುಳಾದಳೆ? ಹಾಗೆಂದು ಇಂತ ಅಪಕಾರ್ಯ ಮಾಡುವಂತ ಮನಸ್ಸಿನವಳಂತೂ ಅವಳಲ್ಲ. ಖಂಡಿತ ಅವಳಿಗೂ ಈ ದರೋಡೆಕೊರರಿಗೂ ಸಂಬಂಧ ಇಲ್ಲ ಎಂದು ತರ್ಕ ವಿತರ್ಕಗಳಲ್ಲಿ ತನ್ನನ್ನು ತಾನೇ ಸಮಧಾನಿಸಿಕೊಳ್ಳುತ್ತಿದ್ದಳು. ಆದರೂ ದೇವಿಗೆ ಏನು ಹೇಳುವುದು. ನಿನ್ನ ಹುಡಿಗಿ ಸಿಕ್ಕರೂ ಸಿಗಬಹುದು ಎಂತಲೇ? ಸಿಕ್ರೆ ಜೈಲಿನಲ್ಲಿರ್ತಾಳೆ ಹೋಗಿ ಬಿಡಿಸಿಕೊಂಡು ಬಾ ಎಂತಲೇ? ಅಯ್ಯೋ ದೇವ್ರೇ ಇದು ಸುಳ್ಳಾಗಲಿ. ಅವಳು ಹೀಗೆ ಸಿಗುವುದಕ್ಕಿಂತಲೂ ಎಲ್ಲೋ ಸುಖವಾಗಿರಲಿ ಎನ್ನಿಸಿಬಿಟ್ಟಿತು.

ಇದಾಗಿ ಸುಮಾರು ಐದಾರು ತಿಂಗಳಾಗಿರಬಹುದೇನೋ. ಮಧ್ಯ ಮಧ್ಯ ದರೋಡೆಯ ಬಗ್ಗೆ ಚಿಕ್ಕಪುಟ್ಟ ಅಪ್ಡೇಟ್ ಬರುತ್ತಿದ್ದರೂ ಮೇಜರ್ ಕನೆಕ್ಷನ್ ಏನೂ ಸಿಕ್ಕಿರಲಿಲ್ಲ. ಒಂದು ಭಾನುವಾರ ಮಧ್ಯಾಹ್ನ ಈ ಹೊಸ ಕೆಲಸದ ಹುಡುಗಿ ಓಡೋಡಿ ಬಂದಳು. ಏನೇ, ರಜೆ ಅಲ್ವೇನೆ ಇವತ್ತು, ಈಗೆಂತಬಂದ್ಯೇ?

ಪಿಚ್ಚರಿಗ್ ಹೋಗಿದ್ದೆ, ಅಲ್ಲಿಂದ ಸೀದಾ ನಿಮ್ಮನೀಗೆ ಓಡ ಬಂದೆ.
ಅಂಥಾದ್ದೇನ್ತಾಯ್ತೆ?
ನೀವು ಹೋಗಿ ಒಂದ್ ಸರ್ತಿ ನೋಡ್ಕಂಬನ್ನಿ ಖರೆ ಹೇಳ್ತೆ, ಆ ಹುಡುಗಿ, ನಮ್ಮ ಶುಕ್ರಿನೆಯ.
ಎಂತದೆ? ತಲೆಬುಡ ಇಲ್ಲ ಸಮ ಬಿಡ್ಸಿ ಹೇಳೇ.
ಪಿಚರ್ ಹೀರೋಯಿನ್ ಗೆಳತಿ ಆಕ್ಟಿಂಗ್ ಮಾಡಿದ ಹುಡುಗಿ ನಮ್ಮ ಶುಕ್ರಿನೆಯ.
ನಿನ್ನ ತಲೆ, ನಿಮಗೆಲ್ಲ ಎಲ್ಲರೂ ಈಗಿತ್ಲಾಗೆ ಶುಕ್ರಿ ಹಾಂಗೆ ಕಾಣ್ತೀರು ಬಿಡು.
ಇಲ್ಲ ಅಮ್ಮ, ನೀವು ಒಂದ್ ಸರ್ತಿ ಹೋಗಿ ನೋಡ್ಕಂಬನ್ನಿ. ದೇವರಾಣೆ ಮಾಡಿ ಹೇಳ್ತೆ. ನಮ್ಮ ಶುಕ್ರಿನೆಯ ಥೇಟ್.

ಪವ್ಡರ್, ಮೇಕಪ್ಪಿನ ಹುಚ್ಚು ಹತ್ತಿದ ಹುಡುಗಿ ಸೀದಾ ಸಿನಮ ಸೇರಿಕೊಂಡಳೆ? ಇರಲಿ, ಇವತ್ತೇ ರಾತ್ರಿ ಶೋಗೆ ಹೋಗಿ ನೋಡುವ ಎಂದುಕೊಂಡು ಮನೋಹರ್ ಬಂದ ಮೇಲೆ ಅವರಿಗೆ ಏನೂ ಹೇಳದೆ, ಒಂದು ಒಳ್ಳೆ ಸಿನಿಮಾವಂತೆ ತುಂಬಾ ದಿನವಾಯಿತು ಹೋಗಿಬರುವ ಎಂದಳು. ಸರಿ, ಹೇಗೂ ಭಾನುವಾರ, ನಡಿ ಎಂದು ಸಿನಿಮಾಕ್ಕೆ ಹೋದರೆ, ಇವಳಿಗೆ ಒಳಗೊಳಗೇ ಆತಂಕ. ಆ ಹುಡುಗಿ ಯಾರು, ತನಗೆ ಗುರುತು ಹತ್ತುವುದೋ, ನಿಜವಾಗಿಯೂ ಶುಕ್ರಿ ತರಾ ಕಾಣುವಳೊ? ಸಿನಿಮಾ ಬಿಟ್ಟ ಮೇಲೆ ಕತೆ ಏನಾಯಿತು ಎಂದು ಒಂದು ಚೂರು ತಲೆಗೆ ಹತ್ತಲಿಲ್ಲ. ಹೌದು, ಅದು ನಮ್ಮ ಶುಕ್ರಿಯೇ ಸೈ. ಆದರೆ ಅಷ್ಟು ಪಾಲಿಶ್ಡ್ ಆಗಿ ಕಾಣುವುದು, ಮಾತನಾಡುವುದು, ಶುಕ್ರಿ ಹೌದಾ? ಮನೆಗೆ ವಾಪಸ್ ಬರುವಾಗ ನಿಧಾನಕ್ಕೆ ಹೇಳಿದಳು, ಆ ಹುಡುಗಿ, ಅದೇ, ಆ ಫ್ರೆಂಡ್ ರೋಲ್ ಮಾಡಿದವಳು ಥೇಟ್ ನಮ್ಮ ಶುಕ್ರಿ ಹಂಗೆ ಇದ್ದಳು ಅಲ್ವ? ಮನೋಹರ್ ಗಹಗಹಿಸಿ ನಕ್ಕುಬಿಟ್ಟರು. “ನಿಂಗೆ ಚಸ್ಮ ನಂಬರ್ ಚೇಂಜ್ ಆಗಿದೆ, ನಾಳೆ ಹೋಗಿ ಸರಿ ಮಾಡಿಸ್ಕೋ.”

ಹೌದು, ಈ ಶುಕ್ರಿ ಸಿನಿಮಾಕ್ಕೆ ಸೇರಿದ್ದಾದರೂ ಹೇಗೆ? ಇದ್ದಕ್ಕಿದ್ದಂತೆ ಅಲ್ಲಿಗೆ ಓಡಿ ಹೋಗುವುದೆಂದರೆ ಏನೂ ಸುಲಭವಲ್ಲ. ಇತ್ತೀಚೆಗೆ ಈ ಮಳೆ, ಮಂಜು , ಮಿಂಚು ಎನ್ನುವ ಸಿನಿಮಾಗಳು ಬರತೋಡಗಿದ ಮೇಲೆ ಈ ಕಡೆಗೆ ಸಿನಿಮಾ ಶೂಟಿಂಗ್ ತಂಡ ಬರುವುದು ಹೆಚ್ಚಾಗಿದೆ. ಎಲ್ಲಿ ಯಾಣ, ಗೋಕರ್ಣದ ಬದಿಗೆ ಬಂದವರು, ಇಲ್ಲಿನ ಬೀಚಿಗೆ ಬಂದಿದ್ದರೋ ಏನೋ, ಇವಳೆಲ್ಲಿ ನೋಡಿದಳೋ ಏನು ಕತೆಯೋ. ಅವರೊಂದಿಗೆ ಹೋಗಿಬಿಟ್ಟಳೇನೋ, ಬಣ್ಣಬಣ್ಣದ ಮಾತಿಗೆ, ಬಟ್ಟೆಗೆ ಮರುಳಾಗಿ, ಮರುಳು ಹುಡುಗಿ. ಹೌದು, ಹಾಗೆ ಎಲ್ಲೋ ಆಗಿರಬೇಕು ಎಂದು ಸಮಜಾಯಿಷಿ ಸಿಕ್ಕಂತೆ ಸಮಾಧಾನವಾಯಿತು.

ಮಾರನೆ ದಿವಸ ಸಂಜೆ ದೇವಿ ಕುಣಿಯುತ್ತ ಬಂದಳು. ನನಗೆ ಸುಳಿವು ಹತ್ತಿತ್ತು. ಅಮ್ಮ ಪಿಚ್ಚರ್ ನೋಡೀರಿ? ನಮ್ಮ ಶುಕ್ರಿ ಸಿಲೀಮ್ ನಟಿ ಆಗೀದು ಅಂದು ಮುಖ ಊರಗಲ ಮಾಡಿಕೊಂಡು. “ಹೌದು ನಂಗೂ ಹಂಗೆ ಕಂಡ್ತು. ಅದು ಶುಕ್ರಿನೆ ಇರುದು. ಯಾವ್ದಕ್ಕೂ ಸರಿ ವಿಚಾರಿಸುವಾ” ಎಂದೆ. ಆ ಎರಡು ದಿನದಲ್ಲಿ ಇಡೀ ಒಕ್ಕಲಕೇರಿ ಸಿನೆಮಾ ನೋಡಿ ಮುಗಿಸಿತ್ತು. ಶುಕ್ರಿ ಸಿನೆಮಾದಲ್ಲಿ ಇದ್ದಳೋ ಇಲ್ಲವೋ, ಟಾಕೀಸ್ ಓನರ್ ರಾಯ್ಕರನಂತೂ ಖುಷಿಯಲ್ಲಿದ್ದ. ಇಡೀ ಕರ್ನಾಟಕದ ಕಲೆಕ್ಷನ್ ಹೇಗೋ, ನಮ್ಮೂರಲ್ಲಂತೂ ಈ ಸಿನಿಮಾ ಕಲೆಕ್ಷನ್ ಜೋರಾಗಿರ್ಬೇಕು ಎನ್ನುತ್ತಾ ಮನೋಹರ್ಗೆ ನಗುವುದೊಂದೇ ಕೆಲಸವಾಗಿತ್ತು.

ಈಗ ಒಕ್ಕಲಕೇರಿಯಿಂದ ಒಂದಿಷ್ಟು ಜನ ಬೆಂಗಳೂರಿಗೆ ಹೂರಟಿದ್ದಾರಂತೆ, ಗಾಂಧಿನಗರದಲ್ಲಿ ಶುಕ್ರಿ ಹುಡುಕಾಟಕ್ಕೆ ಎಂದು ಬೆಳಿಗ್ಗೆ ಕೆಲಸಕ್ಕೆ ಬಂದ ಹುಡುಗಿ ವರದಿ ಒಪ್ಪಿಸಿದಳು. ಮಧ್ಯಾಹ್ನ ಇನ್ಸ್ಪೆಕ್ಟರ್ ಫೋನ್ ಬಂತು, ಮೇಡಂ ಆ ದರೋಡೆಕೋರರ ಗುಂಪು ಮುಂಬೈನಲ್ಲಿ ಸಿಕ್ಕಿಬಿದ್ದಿದೆ. ಅವರ ಗುಂಪಿನಲ್ಲಿ ಒಂದು ಹುಡುಗಿಯೂ ಇದ್ದಾಳೆ, ನೀವು ಒಂದ್ಸರ್ತಿ ನಿಮ್ಮ ಆ ಕಳೆದುಹೋಗಿರುವ ಹುಡುಗಿ ಮನೆ ಜನ ಯಾರಾದ್ರೂ ಇದ್ರೆ ಜೊತೆಗೆ ಕರ್ಕೊಂಡಬನ್ನಿ, ಫೊಟೊ ಇದೆ, ಗುರ್ತು ಸಿಗ್ತದ, ಅದೇ ಹುಡುಗಿಯೋ ನೋಡಿ ಹೋಗಿ ಎಂದರು. ಏನೂ ಹೇಳದೆ ಸುಮ್ಮನೆ ಫೋನಿಟ್ಟುಬಿಟ್ಟೆ. ಮನೋಹರ್ಗೂ ತಿಳಿಸಲಿಲ್ಲ.

ಮಾರನೆ ದಿನ ಒಕ್ಕಲಕೆರಿಯಿಂದ ಬಂದಿದ್ದ ಶುಕ್ರಿಯ ಅಣ್ಣ, ದೇವಿಗೆ, ಶುಕ್ರಿ ಸಿಗ್ಲಿ ನಿಮಗೆ, ಬರೀ ನಟಿ ಅಲ್ಲ, ದೊಡ್ಡ ಹೀರೋಯಿನ್ ಆಗ್ಲಿ, ನಾ ಕೇಳ್ದೆ ಹೇಳು ಎಂದೆಲ್ಲ ಹೇಳಿ. ಶುಕ್ರಿಯ ಹೆಸರಿನಲ್ಲಿಟ್ಟಿದ್ದ ಅಕೌಂಟಿನ ಹಣವನ್ನು ಕೊಟ್ಟು, ಇದೆಲ್ಲ ಶುಕ್ರಿ ದುಡಿದದ್ದಾಗಿತ್ತು, ಅವಳಿಗೆ ಮುಟ್ಟಿಸಿಬಿಡಿ ಎಂದು ಕೊಟ್ಟು, ಅವರ ಬಸ್ ಖರ್ಚಿಗೆಂದು ಮತ್ತೊಂದಿಷ್ಟು ಹಣಾ ಕೊಟ್ಟೆ.
* ವೈಶಾಲಿ ಹೆಗಡೆ