ಬ್ಲಾಗ್ ಸಂಗ್ರಹಗಳು

ಬಾಯಿಲ್ಲಿ ಸಂಭವಿಸುವವರು ಯಾರು?- Who will take c ashwaths vacant slot

1229 Who Will Take C Ashwaths Vacant Slot

ಕನ್ನಡ ಸುಗಮ ಸಂಗೀತ ಕ್ಷೇತ್ರದ ಪಿತಾಮಹರು ಪಿ ಕಾಳಿಂಗರಾಯರು. ಐದೋ ಆರೋ ಪೆಗ್ ಗುಂಡು ಹಾಕಿ ‘ಬ್ರಹ್ಮ ನಿಂಗೆ ಜೋಡಿಸ್ತೀನಿ ಎಂಡ ಮುಟ್ಟಿದ ಕೈನ’ ಎಂದು ಹಾಡುತ್ತಿದ್ದರೆ ಇಡೀ ಸಂಗೀತ ಸಭೆಗೆ ಕಿಕ್ ಹೊಡೆಯುತ್ತಿತ್ತು. ಗಂಟಲು ತುಂಬಿ ಉಕ್ಕಿ ಹರಿದ ಆ ಹಾಡಿನ ಸಾಹಿತ್ಯ, ರಾಗ ಮತ್ತು ಲಯದಿಂದಾಗಿ ಶ್ರೋತೃಗಳಿಗೆ ಖರ್ಚಿಲ್ಲದೆ ಅಮಲು.

ಆನಂತರದ ಹಾಡು ‘ಇಳಿದು ಬಾ ತಾಯೆ ಇಳಿದು ಬಾ’ ಹಾಡುತ್ತಿದ್ದರೆ ಗಂಗೆ ಧರೆಗಿಳಿದು ಬರಲೇಬೇಕು. ಎಂಡ ಎಂಬ ಶಬ್ದ ಕೇಳಿದರೆ ಇರಿಸುಮುರುಸು ಪಟ್ಟುಕೊಳ್ಳುವ ರಸಿಕ ವರ್ಗಕ್ಕೆ ಅಂಬಿಕಾತನಯದತ್ತರ ಗೀತೆ ಆಲಿಸಿದ ನಂತರವೇ ಎಂಡದ ಮೈಲಿಗೆಯಿಂದ ಮುಕ್ತಿ.

ರಾಯರು ಕಾಲವಾದನಂತರ ಆ ಸ್ಥಾನವನ್ನು ತುಂಬಿದವರು ಮೈಸೂರು ಅನಂತಸ್ವಾಮಿಗಳು. ರತ್ನನ ಪದಗಳಿಗೆ ಜೀವ ಮತ್ತು ಜೀವಾತ್ಮ ತುಂಬಿದ ಗಾಯಕರು ಅವರು. ಹಾರ್ಮೋನಿಯಂ ನುಡಿಸುತ್ತಾ ಎದೆ ತುಂಬಿ ಹಾಡುತ್ತಿರುವ ಸ್ವಾಮಿಗಳ ಚಿತ್ರ ನಮ್ಮ ಕಣ್ಣುಂದೆ ಹಾಗೇ ಇರುತ್ತದೆ. ರಾಜು ಅನಂತಸ್ವಾಮಿಯವರು ಖಾಲಿಯಾದ ತಂದೆಯ ಸ್ಥಾನವನ್ನು ಇನ್ನೇನು ತುಂಬಿದರು ಎನ್ನುವಾಗಲೇ ಮದಿರೆಯ ಪಾಲಾಗಿದ್ದು ವಿಧಿ ನಿಯಾಮಕ.

ಕನ್ನಡದ ಪದ್ಯಗಳಿಗೆ ರಾಗ ಮಾಧುರ್ಯ ಬೆರೆಸುವ ಅನೇಕ ಸುಗಮ ಸಂಗೀತ ಗಾಯಕ ಗಾಯಕಿಯರು ನಮ್ಮೊಡನಿದ್ದಾರೆ. ಆದರೆ ಸಮಕಾಲೀನ ಸಂದರ್ಭದಲ್ಲಿ ಅವರ್ಯಾರೂ ಅಶ್ವಥ್ ಅವರು ಏರಿದ ಎತ್ತರಕ್ಕೆ ಏರಲಿಲ್ಲ. ಅದಕ್ಕೆ ಕಾರಣಗಳು ಕನಿಷ್ಠ ಮೂರು. ಶಿಶುನಾಳಾಧೀಶರನ್ನು ಅವರು ಕನ್ನಡಿಗರ ಮನೆಗೆ ಕರೆತಂದದ್ದು, ಇನ್ನೊಂದು ಉಳುವ ಯೋಗಿಯ ರೇರೇರೇ ರಾ ಕಂಚಿನ ಕಂಠ. ಮತ್ತೊಂದು ಅಶ್ವಥ್ ಅವರು ತಮಗೆ ತಾವೇ ಕೊಟ್ಟುಕೊಂಡ ನೆಗೆಟಿವ್ ಟಚ್.

ಅವರ ಹಾಡುಗಳನ್ನು ಜನ ಇಷ್ಟಪಟ್ಟು ಕೇಳುತ್ತಿದ್ದರು ನಿಜ, ಆದರೆ ಅವರ ಕೆಲವು ಮಾತುಗಳು, ಕೆಲವು ಸ್ಟೇಟ್ ಮೆಂಟುಗಳು ಚರ್ಚೆಗೆ ವಸ್ತುಗಳಾಗುತ್ತಿದ್ದವು. ಅನೇಕ ವೇಳೆ ಅಶ್ವಥ್ ಅವರು ಖಡಾಖಂಡಿತವಾಗಿ ಮಾತನಾಡುತ್ತಿದ್ದರು. ಅವರ ಮಾತುಗಳಲ್ಲೇ ವೈರುಧ್ಯಗಳೂ ತಾಂಡವವಾಡುತ್ತಿದ್ದವು. ಹಾಗಾಗಿ ಅವರು ಡಿಬೇಟಬಲ್ ಆದರು, ಸುಗಮ ಸಂಗೀತದ ಮಾಳಿಗೆಯಮೇಲೆ ಇನ್ ಎವಿಟಬಲ್ ಆದರು.

ಮುಂದೆ ಇಲ್ಲಿ ಬಾಯಿಲ್ಲಿ ಸಂಭವಿಸುವವರು ಯಾರು?

ನಮ್ಮ ಇಂಜಿನಿಯರುಗಳಿಗೆ ದೊಡ್ಡ ನಮಸ್ಕಾರ- Tribute to brilliant engineers September 15

0915 Tribute To Brilliant Engineers September 15 Aid0037

ಈ ವರ್ಷದ ಇಂಜಿನಿಯರ್ಸ್ ದಿನಾಚರಣೆ ನಿಮಿತ್ತ ಒನ್ ಇಂಡಿಯ ಕನ್ನಡ ವಿಶೇಷ ಏನು ಸಾರ್ ಎಂದು ನಮ್ಮ ಆಫೀಸ್ ಬಾಯ್ ಮಂಜುನಾಥ ರೆಡ್ಡಿ ಬುಧವಾರ ಸಂಜೆ ಮನೆಗೆ ಹೋಗುವಾಗ ಕೇಳಿದ್ದ. ಓ! ಹೌದಲ್ಲ, ನೋಡೋಣ ರೆಡ್ಡಿ ಎಂದು ಹೇಳಿ, ನಾಳೆಯ ಮಹತ್ವವನ್ನು ಇಂದೇ ನೆನಪಿಸಿದ್ದಕ್ಕೆ ಅವನಿಗೆ ಮನಸ್ಸಿನಲ್ಲೇ ಒಂದು ಥ್ಯಾಂಕ್ಸ್ ಹೇಳಿಕೊಂಡು ಆಟೋ ಹತ್ತಿದ್ದೆ.

ಗುರುವಾರ ಬೆಳಗಾಮುಂಚೆ ಎದ್ದು ಇಂಜಿನಿಯರ್ಸ್ ಡೇ ಮಾಹಿತಿಗೆ ಗೂಗಲ್ ತಡಕಾಡಿದೆ. ಐಟಿ ಇಂಜಿನಿಯರುಗಳೇ ಕಂಡುಹಿಡಿದ ಇಂಟರ್ ನೆಟ್ಟಿನಲ್ಲಿ ಅಂಥದೇನೂ ಮಾಹಿತಿ ಸಿಗಲಿಲ್ಲ. ವಿಕಿಪೀಡಿಯದಲ್ಲಿ ಒಂದಿಷ್ಟು ಮಾಹಿತಿ ಶೇಖರವಾಗಿದ್ದು, ಅದರ ಪ್ರಕಾರ ಕೆಲವೇ ದೇಶಗಳಲ್ಲಿ ಈ ದಿನಾಚರಣೆಯನ್ನು ಆಚರಿಸಲಾಗುತ್ತದಂತೆ.

ಅರ್ಜೆಂಟೀನಾ, ಮೆಕ್ಸಿಕೊ, ಕೊಲಂಬಿಯ, ಇರಾನ್ ಮತ್ತು ಭಾರತದಲ್ಲಿ ಮಾತ್ರ ಇಂಜಿನಿಯರ್ಸ್ ಡೇ ಆಚರಿಸಲಾಗುತ್ತದೆ ಎಂಬ ಸಾಲುಗಳನ್ನು ಓದಿ ಅವಾಕ್ಕಾದೆ. ಎಲಾ ಇವನಾ, ವ್ಯಾಲಂಟೈನ್ಸುಗಳಿಗೆ ಇರೋ ಇಂಪಾರ್ಟೆನ್ಸ್ ಇಂಜಿನಿಯರುಗಳಿಗೆ ಇಲ್ಲವಾಯಿತೇ ಎಂದು ದಂಗಾದೆ. ಈ ಬಗ್ಗೆ ಸ್ವತಃ BE, ME, MSಗಳೇ ತಲೆಕೆಡಿಸಿಕೊಳ್ಳದೇ ಇರೋವಾಗ BA ಪರೀಕ್ಷೆ ಬರೆದಿರೋ ನನಗ್ಯಾಕೆ ತಲೆಬಿಸಿ ಅಂತ ಸುಮ್ಮನಾಗಿಬಿಟ್ಟೆ.

ಕರ್ನಾಟಕ ಸರಕಾರಿ ಕನ್ನಡ ನಿಘಂಟಿನ ಪ್ರಕಾರ ಇವತ್ತು ಸೆ. 15 ಗುರುವಾರ ಅಭಿಯಂತರ ದಿನಾಚರಣೆ. ಎಂಥ ಕನ್ನಡಪ್ರೇಮಿಗೂ ಅಭಿಯಂತರ ಪದಬಳಕೆ ವಿಚಿತ್ರವಾಗಿ ಕೇಳಿಸುತ್ತದೆ. 1983ರಲ್ಲಿ ಸುಬೇದಾರ್ ಛತ್ರಂ ರಸ್ತೆಯ ಗಂಗಾರಾಂ ಕಟ್ಟಡ ಬಿದ್ದು ನೂರಾರು ಜನ ಸತ್ತಾಗ ‘ಮುಂಜಾನೆ’ ದಿನಪತ್ರಿಕೆಯಲ್ಲಿ ನನ್ನ ಒಡನಾಡಿಗಳು “ಈ ಕಟ್ಟಡವನ್ನು ಕಟ್ಟಿದ್ದು ಅಭಿಯಂತರ ಅಲ್ಲ, ಅರಿಭಯಂಕರ” ಎಂದು ಗೇಲಿ ಮಾಡುತ್ತಿದ್ದದ್ದು ನೆನಪಾಯಿತು.

ನಮ್ಮ ಒನ್ ಇಂಡಿಯ ಕಾರ್ಪೋರೇಟ್ ಕಚೇರಿಯಲ್ಲಿ 130 ಜನ ಸಿಬ್ಬಂದಿ ಇದ್ದಾರೆ. ಅವರಲ್ಲಿ ಇಂಜಿನಿಯರುಗಳ ಲೆಕ್ಕ 26. ನಾನು ಬರೆದ ಕನ್ನಡ ಅಕ್ಷರಗಳನ್ನು ಅಂತರ್ ಜಾಲದಲ್ಲಿ ನೀವೀಗ ಓದುತ್ತಿದ್ದರೆ ಅದಕ್ಕೆ ಇಂಥ ಇಂಜಿನಿಯರುಗಳೇ ಕಾರಣ. ಸರಿ, ಅವರಿಗೆಲ್ಲ ಒಂದು ಥ್ಯಾಂಕ್ಸ್ ರೂಪದಲ್ಲಿ ಗ್ರೀಟಿಂಗ್ಸ್ ಕಳಿಸೋದಕ್ಕೆ ನಮ್ಮ ಕಚೇರಿಯ ಫೇಸ್ ಬುಕ್ ಯಮ್ಮರ್ ಪೇಜ್ ತೆಗೆದೆ. https://www.yammer.com/

All, 

India is one among very few DEVELOPED countries which enjoys a dedicated a day to salute it`s Engineers.

Each country have their own day to celebrate the day. India Engineer`s day is celebrated on 15th September every year.

The day is the birth day of Sir Mokshagundam Visvesvarayya (1860-1961), (Popularly known as Sir MV). An eminent Indian engineer (‘Mysore Engineer’) from the College of Engineering, Pune and a Statesman born in Muddenahalli in Karnataka. The place is about 50 KM from Bangalore.

Wishing happy Engineers day to all Engineers in Oneindia/NetCore. Have a great day.

 

ಇದನ್ನು ಓದಿ ಲೈಕ್ ಬಟನ್ ಒತ್ತಿದನಂತರ ಒಬ್ಬ ಫ್ರೆಷರ್ ನನ್ನ ಬೇ ತನಕ ಬಂದು ವಿಶ್ವೇಶ್ವರಯ್ಯ ಅವರ ಬಗ್ಗೆ ಹೆಚ್ಚು ಮಾಹಿತಿ ಬೇಕು ಎಲ್ಲಿ ಸಿಕ್ಕತ್ತೆ ಎಂದು ವಿಚಾರಿಸಿದ. ನನಗೆ ತಿಳಿದಿರುವಷ್ಟು ಹೇಳಿ ಹೆಚ್ಚಿನ ಓದಿಗೆ ಇಂಟರ್ನೆಟ್ ನೋಡು, ಕನ್ನಡದಲ್ಲೇ ಬೇಕಿದ್ದರೆ ಇವತ್ತಿನ “ಕನ್ನಡಪ್ರಭ” ಓದು ಎಂದು ಸಂಚಿಕೆ ತೆಗೆದು ಕೈಗಿಟ್ಟೆ.

ನಾವು ನಿತ್ಯ ಬರೆಯುವ ಹಾಳೂಮೂಳೂ ಈಮೇಲು, ಎಸ್ಎಂಎಸ್ಸುಗಳನ್ನು ಅವಳಿಗೆ ತಲುಪಿಸುವುದು, ಅವಳು ಕಳಿಸುವ ಮೆಸೇಜುಗಳನ್ನು ತಪ್ಪದೇ ನಮ್ಮ ಮೊಬೈಲಿಗೆ ಡೆಲಿವರಿ ಮಾಡುವುದಕ್ಕೆ ತಾಂತ್ರಿಕ ಪರಿಕರಗಳನ್ನು ಸೃಷ್ಟಿಸುವವರು ಇಂಥ ಹುಡುಗರೇ. ಸದಾಕಾಲ ಅಪ್ಲಿಕೇಷನ್, ಪ್ರೊಗ್ರಾಮು, ಕೋಡಿಂಗ್, ಎಂಬೆಡ್ಡಿಂಗ್, ಬಗ್ಗು, ಪಿಎಚ್ ಪಿ, ಎಎಸ್ ಪಿ, ಸಿಸಿಎಸ್, ಸಿಎಂಎಸ್, ಸರ್ವರ್, ವೈರಸ್, ಡೌನ್ ಲೋಡ್ ಟೈಂ and ಟೆಸ್ಟಿಂಗ್ ಅಂತ ಕೆಲ್ಸ ಮಾಡ್ತಾನೇ ಇರ್ತಾರೆ, ಮಾಡ್ತಾನೇ ಇರ್ತಾರೆ.

ಈ ಹುಡುಗರ ಐಟಿ ಕಸುಬುದಾರಿಕೆ ಶುರುವಾಗಿ ಒಂದಿಪ್ಪತ್ತು ವರ್ಷವಾಗಿರಬಹುದು. ಲಾಂಗ್ ವೇ ಟು ಗೊ ಅನ್ಸತ್ತೆ. ಐಟಿ ಬಿಟಿ ಇಟೇಸ್ ಹುಡುಗ ಹುಡುಗಿಯರಿಗಿಂತ ತುಂಬಾ ಮುಂಚೆ ಇಟ್ಟಿಗೆ, ಗಾರೆ, ಮರಳು, ಸಿಮೆಂಟು ಇಟ್ಕೊಂಡು ಉರಿ ಬಿಸಿಲು ಮಳೆಯಲ್ಲಿ ನಿಂತು ಮಹೋನ್ನತವಾದ ನಿರ್ಮಾಣಗಳನ್ನು ಮಾಡಿದ ಇಂಜಿನಿಯರುಗಳನ್ನು ನಾವು ಇವತ್ತು ಸ್ಮರಿಸಬೇಕು.

ನಾನು ನೋಡಿ ಬೆರಗಾಗಿರುವ ಕೃಷ್ಣರಾಜಸಾಗರ ಅಣೆಕಟ್ಟು (1924), ಹೂವರ್ ಡ್ಯಾಂ (1935), ಗೋಲ್ಡನ್ ಗೇಟ್ ಬ್ರಿಡ್ಜ್ (1937), ಭಾಕ್ರಾ ನಾಂಗಲ್ ಅಣೆಕಟ್ಟು (1963) ಮುಂತಾದ ಮಹೋನ್ನತ aquatic ಸಾಹಸಕ್ಕೆ ಕೈಹಾಕಿ ಗೆದ್ದ ಸಿವಿಲ್ ಇಂಜಿನಿಯರುಗಳಿಗೆ ಅಭಿನಂದನೆ ಮತ್ತು ಧನ್ಯವಾದಗಳನ್ನು ನಾವೆಲ್ಲ ಕೂಡಿ ಅರ್ಪಿಸೋಣ.

ಧನ್ಯವಾದ ಅರ್ಪಣೆಯ ಈ ತಂಪನೆ ಹೊತ್ತಿನಲ್ಲಿ ಕಡುಬಡವರಿಗೆ ಈಗಲೋ ಆಗಲೋ ಬೀಳತ್ತೆ ಎನಿಸುವ “ಆಸರೆ” ಗೃಹ ಕಟ್ಟಿಕೊಡುವ, ಪುತಪುತನೆ ಉದುರುವ ಹೌಸಿಂಗ್ ಬೋರ್ಡ್ ಮನೆಗಳನ್ನು ಕಟ್ಟುವ, ಇಲ್ಲದ ನದಿಗೆ ಸುಳ್ಳುಸುಳ್ಳೇ ಸೇತುವೆ ಕಟ್ಟುವ ಛೀಫ್ ಎಕ್ಸಿಕ್ಯುಟಿವ್ ಇಂಜಿನಿಯರುಗಳನ್ನು ಮತ್ತು ರಸ್ತೆಗೆ ಟಾರ್ ಹಾಕ್ರೋ ಎಂದರೆ ಅಲ್ಲೇ ಗಣಿಗಾರಿಕೆ ಮಾಡ್ತೀನಿ ಅನ್ನೋ ಮುನ್ಸಿಪಾಲ್ಟಿ ಇಂಜಿನಿಯರ್ ಗಳನ್ನು ನೆನಪಿಸಿಕೊಳ್ಳಬಾರದು.