ಬ್ಲಾಗ್ ಸಂಗ್ರಹಗಳು

ಕೋಪದ ಆವೇಶದಲ್ಲಿ ಕುಯ್ದುಕೊಂಡ ಮೂಗು- Short temper leads to short circuit

0723 Short Temper Leads To Short Circuit

ಸಿಟ್ಟಿನಲ್ಲಿ ಕುಯ್ದುಕೊಂಡ ಮೂಗು ಮತ್ತೆ ಜೋಡಿಸಲು ಬರುವುದಿಲ್ಲ ಎಂಬ ಗಾದೆಯನ್ನು ಮರೆತಿಲ್ಲ ತಾನೆ? ಸಿಟ್ಟು ಸೆಡವು ಬಂದಾಗ ಕೋಪದ ಆವೇಶದಲ್ಲಿ ನಾಲಗೆಯನ್ನು ಹರಿಯಬಿಡುವುದು, ಕೈಗೆ ಸಿಕ್ಕಿದ್ದನ್ನು ಎತ್ತಿಕೊಂಡು ಎದುರಿಗಿದ್ದವರನ್ನು ಹೊಡೆದು ಘಾಸಿಗೊಳಿಸುವುದು, ಆನಂತರ ಅದಕ್ಕೆ ತಾವೇ ಪಶ್ಚಾತ್ತಾಪ ಪಡುವಂಥ ಪರಿಸ್ಥಿತಿ ತಂದುಕೊಳ್ಳುವವರನ್ನು ತಾವು ಕಂಡಿರಬಹುದು. ಅಂಥ ಕೋಪಿಷ್ಠರ ಸಹವಾಸ ಬೇಡಪ್ಪ ಎಂದು ದೂರ ಉಳಿದವರು ನೀವಾಗಿರಬಹುದು. ಇಂಥವರಿಗಾಗಿಯೇ ಮೂಗಿನ ಗಾದೆಯನ್ನು ಯಾರೋ ಮಹಾರಾಯರು ಕೆತ್ತಿದ್ದಾರೆ.

ಕನ್ನಡ ಸುಗಮ ಸಂಗೀತ ಕ್ಷೇತ್ರದ ದಿಗ್ಗಜಗಳ ಗಿರಿಶ್ರೇಣಿಯಲ್ಲಿ ಮೂರನೇ ಮಟ್ಟದಲ್ಲಿ ನಿಲ್ಲುವ ಗಾಯಕ ಸಿ ಅಶ್ವಥ್ ಅವರ ಹೆಸರನ್ನು ನೀವು ಕೇಳಿರಬಹುದು. ಅವರ ಹಾಡುಗಳನ್ನು ಖುದ್ದಾಗಿ ಅಥವಾ ಕ್ಯಾಸೆಟ್, ಸಿಡಿ, ಡಿವಿಡಿಗಳಲ್ಲಿ ಆಲಿಸಿರಬಹುದು. ಕಳೆದ ಡಿಸೆಂಬರ್ ನಲ್ಲಿ ಅವರು ತೀರಿಹೋದರು. ಅವರು ಎಷ್ಟು ಪ್ರಖ್ಯಾತರಾಗಿದ್ದರೆಂದರೆ ಅವರ ನಂತರ ಸುಗಮ ಸಂಗೀತಕ್ಕೆ ಯಾರು ಎಂಬ ಪ್ರಶ್ನೆಗೆ ಎಂಟು ತಿಂಗಳಾದರೂ ಉತ್ತರ ಸಿಕ್ಕಿಲ್ಲ. ಕನ್ನಡವೇ ಸತ್ಯಕ್ಕಿಂತ ಸತ್ಯವಾದ ವಿಚಾರವಿದು.

ಸುಗಮ ಸಂಗೀತ ಪ್ರಪಂಚದಲ್ಲಿ ತಲ್ಲೀನರಾಗಿರುವವರಿಗೂ ಈ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ, ಸುಗಮ ಸಂಗೀತ ಪರಿಷತ್ ಅಧ್ಯಕ್ಷರಿಗೂ ಸಿಕ್ಕಿಲ್ಲ. ಕೆಲವರು ನಾನೇ ಅಶ್ವಥ್ ಉತ್ತರಾಧಿಕಾರಿ ಎಂದು ಹೇಳಿಕೊಂಡು ಅಡ್ಡಾಡುತ್ತಿರುವುದು ನಿಜ. ಆದರೆ, ಅಂಥವರ ತರವಲ್ಲ ತೆಗಿನಿನ್ನ ತಂಬೂರಿ ಸ್ವರಗಳನ್ನು ಕನ್ನಡನಾಡಿನಲ್ಲಾಗಲೀ ವಿದೇಶದಲ್ಲಾಗಲೀ ಆಲಿಸುವವರೇ ಗತಿಯಿಲ್ಲ.

ಅಶ್ವಥ್ ಅವರು ಕೆಲವು ಬಾರಿ ಮಗುವಿನ ಥರಹ ವರ್ತಿಸುತ್ತಿದ್ದರು. ಅರೆಕ್ಷಣದಲ್ಲಿ ವಿಶ್ವಾಮಿತ್ರನ ಅಪರಾವತಾರ ತಾಳುತ್ತಿದ್ದರು. ಕ್ಷಣ ಚಿತ್ತ ಕ್ಷಣ ಪಿತ್ತ. ಮಹಾನ್ ಕಲಾವಿದ ಮತ್ತು ಮಹಾ ಕೋಪಿಷ್ಠ. ಅವರ ಬಳಿ ಒಂದು ಮಾತಾಡಿದರೆ ಕಮ್ಮಿ, ಒಂದು ಮಾತಾಡಿದರೆ ಹೆಚ್ಚು. ಮುಖವನ್ನು ಅಂಗೈಯಲ್ಲಿ ಒರೆಸುಕೊಳ್ಳುತ್ತಾ ಅವರು ಒಂದು ಸಲ ಝಾಡಿಸಿದರೆ ಅಲ್ಲಿದ್ದ ಎಲ್ಲರೂ ಜಾಗ ಖಾಲಿ ಮಾಡುವುದೊಂದೇ ಬಾಕಿ. ಕಲಾವಿದರೂ ಮನುಷ್ಯರೇ ಆಗಿರುವುದರಿಂದ ಅರಿಷಡ್ವರ್ಗಗಳ ಹಾವಳಿಯಿಂದ ಪಾರಾಗುವುದು ನೈಂಟಿನೈನ್ ಪರ್ಸೆಂಟ್ ಜನಕ್ಕೆ ಕಷ್ಟವೇ ಆಗಿರುತ್ತದೆ ಎನ್ನುವುದಕ್ಕೆ ಅವರೇ ಸಾಕ್ಷೀಭೂತರಾಗಿದ್ದರು.

ಮಾಯಾಮೃಗ, ಮುಕ್ತ ಮುಕ್ತ ಮುಕ್ತ ಮುಂತಾದ ಟಿವಿ ಧಾರಾವಾಹಿಗಳನ್ನು ತಾವು ಈ ಟಿವಿ ಛಾನಲ್ಲಿನಲ್ಲಿ ನೋಡುತ್ತಿರಬಹುದು. ನೋಡಿಲ್ಲದಿದ್ದರೆ ಅದರ ಬಗ್ಗೆ ಓದಿಯೋ, ಕೇಳಿಯೋ ನಿಮಗೆ ಗೊತ್ತಿರುತ್ತದೆ. ಆ ಧಾರಾವಾಹಿಗಳ ನಿರ್ದೇಶಕರು ಟಿ ಎನ್ ಸೀತಾರಾಂ. ಕಾನೂನು ಸುತ್ತ ಸುತ್ತುವ ಮುಕ್ತ ಮುಕ್ತ ಧಾರಾವಾಹಿಯ ಕಂತುಗಳಿಗೆ ಗ್ಲಾಮರ್ ಟಚ್ ಕೊಡುವ ಉದ್ದೇಶದಿಂದ ಧಾರಾವಾಹಿಯ ನ್ಯಾಯಾಧೀಶರ ಪಾತ್ರಕ್ಕೆ ಪ್ರತೀಬಾರಿ ಹೊಸ ಹೊಸ ಪ್ರಸಿದ್ಧ ವ್ಯಕ್ತಿಗಳನ್ನು ಆರಿಸಿ ಆರಿಸಿ ತರಲಾಗುತ್ತದೆ.

ಈ ಮಾಲಿಕೆಯಲ್ಲಿ ನ್ಯಾಯಮೂರ್ತಿಗಳಾಗಿ ಸುಧಾಮೂರ್ತಿ ಇದ್ದರು, ರವಿ ಬೆಳಗೆರೆ ಇದ್ದರು, ಸ್ವತಃ ನ್ಯಾಯಮೂರ್ತಿಗಳೇ ಆಗಿದ್ದ ಎ ಜೆ ಸದಾಶಿವ ಅವರಿದ್ದರು, ವೈಕೆ ಮುದ್ದುಕೃಷ್ಣ ಬಂದಿದ್ದರು, ಬರಗೂರು ರಾಮಚಂದ್ರಪ್ಪ ಕಾಣಿಸಿಕೊಂಡಿದ್ದರು, ಮೊನ್ನೆ ಮೊನ್ನೆಯ ಕಂತಿನಲ್ಲಿ ಋತುವಿಲಾಸದ ಕವಿ ಎಚ್ ಎಸ್ವಿ ದಯಮಾಡಿಸಿದ್ದರು. ಇವರೆಲ್ಲರ ನಡುವೆ ನಮ್ಮ ಪ್ರೀತಿಯ ಅಶ್ವಥ್ ಕೂಡ ಒಮ್ಮೆ ಆ ಪಾತ್ರಕ್ಕೆ ಜೀವ ತುಂಬಿದ್ದರು.

ಒಂದು ದಿನ ಏನಾಯಿತೆಂದರೆ ಅಶ್ವಥ್ ಪಾತ್ರ ಮಾಡಿದ ಕಂತು ಈಟಿವಿಯಲ್ಲಿ ಪ್ರಸಾರವಾದದ್ದನ್ನು ನೋಡಿದ ದಂಪತಿಗಳ ಕಣ್ಣಿಗೆ ಅಶ್ವಥ್ ಬಿದ್ದರು. ಮಹಾನ್ ಗಾಯಕನ ಮುದ್ದಾಂ ದರ್ಶನವಾದ ಪುಳಕದಲ್ಲಿ ಆ ದಂಪತಿಗಳು ಅಶ್ವಥ್ ಅವರನ್ನು ಅಭಿನಂದಿಸಲು ಬಳಿಸಾರಿದರು. ‘ಸಾರ್ ನಿನ್ನೆ ನಿಮನ್ನು ಈಟಿವಿನಲ್ಲಿ ನೋಡಿದೆ ಸಖತ್ ಆಗಿ ಆಕ್ಟ್ ಮಾಡಿದಿರಾ ಸಾರ್ ‘ ಎಂದು ಕೈಕಟ್ಟಿ ನಿಂತುಕೊಂಡು ಅಭಿನಂದನೆ ಸಲ್ಲಿಸಿದರು.

ಕೋಪ ಉಕ್ಕಿ ಹರಿಯುವುದಕ್ಕೆ ಅಶ್ವಥ್ ಅವರಿಗೆ ಅಷ್ಟೇ ಸಾಕಿತ್ತು. ‘ಏನ್ರೀ ಇದು, ಮೂವತ್ತು ವರ್ಷಗಳಿಂದ ಗಂಟಲು ಕಿತ್ಕೊಂಡು ಹಾಡುತ್ತಾ ಇದ್ದೀನಿ. ಒಂದ್ಸಲಾನಾದ್ರೂ ಬಂದು ಅಭಿನಂದಿಸಿದ್ದೀರೇನ್ರಿ? ಐದು ನಿಮಿಷ ಟಿವಿನಲ್ಲಿ ಕಾಣಿಸಿದರೆ ಕಂಗ್ರಾಟ್ಸ್ ಹೇಳ್ತೀರಲ್ರಿ ಎಂದು ಏರಿದ ದನಿಯಲ್ಲಿ ದಬಾಯಿಸಿಬಿಟ್ಟರು’

ಏನೋ ಮಾಡಲು ಹೋಗಿ ಓನೋ ಆದದ್ದಕ್ಕಾಗಿ ಬೆಕ್ಕಸ ಬೆರಗಾದ ಆ ದಂಪತಿಗಳು ಅಲ್ಲಿಂದ ಕೂಡಲೇ ಕಾಲಿಗೆ ಬುದ್ಧಿ ಹೇಳಿದವರು ಮತ್ತೆ ಆ ಕಡೆ ತಿರುಗಿ ನೋಡಲಿಲ್ಲ. ಇಂಪಾದ ಹಾಡಿನ ಗುಂಗು ಮತ್ತು ಟಿವಿಯೊಳಗೆ ಮಿಂಚಿ ಮರೆಯಾಗುವ ಕ್ಷಣಭಂಗುರದ ನಡುವಿನ ವ್ಯತ್ಯಾಸ ದಂಪತಿಗಳಿಗೆ ಬಹುಶಃ ಈ ಹೊತ್ತಿಗೆ ವೇದ್ಯವಾಗಿರಬಹುದು.

Advertisements

ಬಾಯಿಲ್ಲಿ ಸಂಭವಿಸುವವರು ಯಾರು?- Who will take c ashwaths vacant slot

1229 Who Will Take C Ashwaths Vacant Slot

ಕನ್ನಡ ಸುಗಮ ಸಂಗೀತ ಕ್ಷೇತ್ರದ ಪಿತಾಮಹರು ಪಿ ಕಾಳಿಂಗರಾಯರು. ಐದೋ ಆರೋ ಪೆಗ್ ಗುಂಡು ಹಾಕಿ ‘ಬ್ರಹ್ಮ ನಿಂಗೆ ಜೋಡಿಸ್ತೀನಿ ಎಂಡ ಮುಟ್ಟಿದ ಕೈನ’ ಎಂದು ಹಾಡುತ್ತಿದ್ದರೆ ಇಡೀ ಸಂಗೀತ ಸಭೆಗೆ ಕಿಕ್ ಹೊಡೆಯುತ್ತಿತ್ತು. ಗಂಟಲು ತುಂಬಿ ಉಕ್ಕಿ ಹರಿದ ಆ ಹಾಡಿನ ಸಾಹಿತ್ಯ, ರಾಗ ಮತ್ತು ಲಯದಿಂದಾಗಿ ಶ್ರೋತೃಗಳಿಗೆ ಖರ್ಚಿಲ್ಲದೆ ಅಮಲು.

ಆನಂತರದ ಹಾಡು ‘ಇಳಿದು ಬಾ ತಾಯೆ ಇಳಿದು ಬಾ’ ಹಾಡುತ್ತಿದ್ದರೆ ಗಂಗೆ ಧರೆಗಿಳಿದು ಬರಲೇಬೇಕು. ಎಂಡ ಎಂಬ ಶಬ್ದ ಕೇಳಿದರೆ ಇರಿಸುಮುರುಸು ಪಟ್ಟುಕೊಳ್ಳುವ ರಸಿಕ ವರ್ಗಕ್ಕೆ ಅಂಬಿಕಾತನಯದತ್ತರ ಗೀತೆ ಆಲಿಸಿದ ನಂತರವೇ ಎಂಡದ ಮೈಲಿಗೆಯಿಂದ ಮುಕ್ತಿ.

ರಾಯರು ಕಾಲವಾದನಂತರ ಆ ಸ್ಥಾನವನ್ನು ತುಂಬಿದವರು ಮೈಸೂರು ಅನಂತಸ್ವಾಮಿಗಳು. ರತ್ನನ ಪದಗಳಿಗೆ ಜೀವ ಮತ್ತು ಜೀವಾತ್ಮ ತುಂಬಿದ ಗಾಯಕರು ಅವರು. ಹಾರ್ಮೋನಿಯಂ ನುಡಿಸುತ್ತಾ ಎದೆ ತುಂಬಿ ಹಾಡುತ್ತಿರುವ ಸ್ವಾಮಿಗಳ ಚಿತ್ರ ನಮ್ಮ ಕಣ್ಣುಂದೆ ಹಾಗೇ ಇರುತ್ತದೆ. ರಾಜು ಅನಂತಸ್ವಾಮಿಯವರು ಖಾಲಿಯಾದ ತಂದೆಯ ಸ್ಥಾನವನ್ನು ಇನ್ನೇನು ತುಂಬಿದರು ಎನ್ನುವಾಗಲೇ ಮದಿರೆಯ ಪಾಲಾಗಿದ್ದು ವಿಧಿ ನಿಯಾಮಕ.

ಕನ್ನಡದ ಪದ್ಯಗಳಿಗೆ ರಾಗ ಮಾಧುರ್ಯ ಬೆರೆಸುವ ಅನೇಕ ಸುಗಮ ಸಂಗೀತ ಗಾಯಕ ಗಾಯಕಿಯರು ನಮ್ಮೊಡನಿದ್ದಾರೆ. ಆದರೆ ಸಮಕಾಲೀನ ಸಂದರ್ಭದಲ್ಲಿ ಅವರ್ಯಾರೂ ಅಶ್ವಥ್ ಅವರು ಏರಿದ ಎತ್ತರಕ್ಕೆ ಏರಲಿಲ್ಲ. ಅದಕ್ಕೆ ಕಾರಣಗಳು ಕನಿಷ್ಠ ಮೂರು. ಶಿಶುನಾಳಾಧೀಶರನ್ನು ಅವರು ಕನ್ನಡಿಗರ ಮನೆಗೆ ಕರೆತಂದದ್ದು, ಇನ್ನೊಂದು ಉಳುವ ಯೋಗಿಯ ರೇರೇರೇ ರಾ ಕಂಚಿನ ಕಂಠ. ಮತ್ತೊಂದು ಅಶ್ವಥ್ ಅವರು ತಮಗೆ ತಾವೇ ಕೊಟ್ಟುಕೊಂಡ ನೆಗೆಟಿವ್ ಟಚ್.

ಅವರ ಹಾಡುಗಳನ್ನು ಜನ ಇಷ್ಟಪಟ್ಟು ಕೇಳುತ್ತಿದ್ದರು ನಿಜ, ಆದರೆ ಅವರ ಕೆಲವು ಮಾತುಗಳು, ಕೆಲವು ಸ್ಟೇಟ್ ಮೆಂಟುಗಳು ಚರ್ಚೆಗೆ ವಸ್ತುಗಳಾಗುತ್ತಿದ್ದವು. ಅನೇಕ ವೇಳೆ ಅಶ್ವಥ್ ಅವರು ಖಡಾಖಂಡಿತವಾಗಿ ಮಾತನಾಡುತ್ತಿದ್ದರು. ಅವರ ಮಾತುಗಳಲ್ಲೇ ವೈರುಧ್ಯಗಳೂ ತಾಂಡವವಾಡುತ್ತಿದ್ದವು. ಹಾಗಾಗಿ ಅವರು ಡಿಬೇಟಬಲ್ ಆದರು, ಸುಗಮ ಸಂಗೀತದ ಮಾಳಿಗೆಯಮೇಲೆ ಇನ್ ಎವಿಟಬಲ್ ಆದರು.

ಮುಂದೆ ಇಲ್ಲಿ ಬಾಯಿಲ್ಲಿ ಸಂಭವಿಸುವವರು ಯಾರು?