ಬ್ಲಾಗ್ ಸಂಗ್ರಹಗಳು

ಪ್ರತಿಭಾವಂತರಿಗೆ ಬೇಡವಾದ ಗುರುಸ್ಥಾನ- None of them want to become teachers

0507 None Of Them Want To Become Teachers

ಕರ್ನಾಟಕ ಎಸ್ ಎಸ್ ಎಲ್ ಸಿ ಮತ್ತು ಎರಡನೇ ಪದವಿ ಪೂರ್ವ ಪರೀಕ್ಷೆಗಳ ಫಲಿತಾಂಶಗಳು ಇದೀಗ ಲಭ್ಯವಾಗಿವೆ. ನಮ್ಮ ಹುಡುಗರಿಗೆ ಮತ್ತು ಹುಡುಗಿಯರಿಗೆ ಅವರವರ ಪ್ರಯತ್ನ ಮತ್ತು ಶ್ರದ್ಧೆಗೆ ತಕ್ಕಂತೆ ಅಂಕಗಳು ಉದುರಿವೆ. ಪಿಯುಸಿ ಸೇರಬಯಸುವ ವಿದ್ಯಾರ್ಥಿಗಳ ಕಾಲೇಜು ಪ್ರವೇಶ ಧಾವಂತ ಆರಂಭವಾಗಿದೆ.

ಸಿಇಟಿ, ಕಾಮೆಡ್ ಕೆ ಗೇಟುಗಳನ್ನು ದಾಟಿ ಇಂಜಿನಿಯರಿಂಗ್ ಅಥವಾ ಮೆಡಿಕಲ್ ಅಥವಾ ಡೆಂಟಲ್ ಕಾಲೇಜಿನಲ್ಲಿ ಸೀಟು ಗಿಟ್ಟಿಸುವುದು ಎರಡನೇ ಪಿಯುಸಿಯಲ್ಲಿ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳ ಮೊದಲ ಆದ್ಯತೆ. ಮೆರಿಟ್ನಲ್ಲಿ ಪಾಸಾದವರಿಗೆ ಸೀಟು ಮತ್ತು ಅವರು ಬಯಸಿದ ಕಾಲೇಜು ಆಯ್ಕೆ ಸುಸೂತ್ರ. ಮೆರಿಟ್ ಇಲ್ಲದಿದ್ದರೂ ತಾಂತ್ರಿಕ ಕೋರ್ಸುಗಳನ್ನು ತೆಗೆದುಕೊಳ್ಳಲೇಬೇಕೆಂದು ಪಣ ಮತ್ತು ಹಠ ತೊಟ್ಟ ವಿದ್ಯಾರ್ಥಿಗಳು ಹಾಗೂ ಅವರ ತಂದೆ ತಾಯಿಯರಿಗೆ ಮಾತ್ರ ಡೊನೇಷನ್, ಶಿಕ್ಷಣ ಶುಲ್ಕ, ಹಾಸ್ಟೆಲ್ ಶುಲ್ಕ ಮತ್ತು ಐದು ವರ್ಷಗಳ ಅವಧಿಗೆ ಮಕ್ಕಳ ಖರ್ಚುವೆಚ್ಚಕ್ಕೆ ಹಣ ಹೊಂದಿಸುವ ಯೋಚನೆ.

ಫೇಲು ಆದ ಮಕ್ಕಳಿಗೆ ಆದ್ಯತೆಗಳು ಹೆಚ್ಚಿಲ್ಲ. ಇದೇ ಜೂನ್ 28ರಿಂದ ಆರಂಭವಾಗುವ ಸಪ್ಲಿಮೆಂಟರಿ ಪರೀಕ್ಷೆಗೆ ಮೈ ಬಗ್ಗಿಸಿ ಓದುವುದು ಮೊದಲ ಆಯ್ಕೆ. ತಮ್ಮ ಸಾಮರ್ಥ್ಯಕ್ಕೆ ತಕ್ಕ ಅಂಕಗಳು ಬಂದಿಲ್ಲ ಎಂದು ಭಾವಿಸುವವರು ಮರು ಎಣಿಕೆ, ಮರುಮೌಲ್ಯಮಾಪನಕ್ಕೆ ಅರ್ಜಿ ಹಾಕುವುದು ಎರಡನೇ ಆಯ್ಕೆ.

ಅತಿಹೆಚ್ಚು ಅಂಕಗಳಿಸಿ ತಮ್ಮ ಕಾಲೇಜು ಮತ್ತು ಊರಿಗೆ ಕೀರ್ತಿ ಹಾಗೂ ತಂದೆತಾಯಿರ ಶ್ರಮಕ್ಕೆ ಸಾರ್ಥಕತೆ ತಂದುಕೊಟ್ಟ ಪ್ರತಿಭಾವಂತ ವಿದ್ಯಾರ್ಥಿಗಳ ಸಂಭ್ರಮಾಚರಣೆ ಈಗಾಗಲೇ ಮುಗಿದಿದೆ. ಇದೊಂದು ತುಂಬಾ ಚಿಕ್ಕ ಗುಂಪು. ಈ ಗುಂಪಿನ ಸದಸ್ಯರಿಗೆ ಈಗಿಂದಲೇ ಮುಂದಿನ ವ್ಯಾಸಂಗದತ್ತ ಗಮನ. ಅದು ಅವರ ಜಾಯಮಾನವಾಗಿರುತ್ತದೆ.

ಅತಿಹೆಚ್ಚು ಅಂಕಗಳಿಸಿದ ವಿದ್ಯಾರ್ಥಿ, ವಿದ್ಯಾರ್ಥಿನಿಯರ ಸಂದರ್ಶನಗಳು ನಾಡಿನ ಅನೇಕ ಪತ್ರಿಕೆಗಳಲ್ಲಿ ಇಂದು ಪ್ರಕಟಗೊಂಡಿವೆ. ‘ನೀವು ಮುಂದೆ ಏನು ಆಗಬೇಕು ಎಂದುಕೊಂಡಿದ್ದೀರಿ’ ಎಂಬ ವರದಿಗಾರರ ಪ್ರಶ್ನೆಗಳಿಗೆ ಅವರೆಲ್ಲರ ಉತ್ತರಗಳು ಬಹುತೇಕ ಒಂದೇ ದಿಕ್ಕಿನಲ್ಲಿವೆ. nothing less than a doctor ಎಂಬ ಉತ್ತರ ಒಬ್ಬರಿಂದ, ಇಂಜಿನಿಯರಿಂಗ್ ಆಗುತ್ತೀನಿ, ಅಕೌಂಟೆನ್ಸಿ ವ್ಯಾಸಂಗ ಮಾಡಿ ಚಾರ್ಟೆಡ್ ಅಕೌಂಟೆಂಟ್ ಆಗುತ್ತೀನಿ, ಅತ್ಯುತ್ತಮ ಶಿಕ್ಷಣ ನೀಡುವ ಲಾ ಕಾಲೇಜಿಗೆ ಸೇರಿ ಮುಂದೆ ಕಾರ್ಪೋರೇಟ್ ಅಡ್ವೋಕೇಟ್ ಆಗುತ್ತೀನಿ ಎಂಬಿತ್ಯಾದಿ ಉತ್ತರಗಳು ಪ್ರತಿಭಾವಂತರಿಂದ ಬಂದಿವೆ. ಈ ಪ್ರತಿಕ್ರಿಯೆಗಳಲ್ಲಿ ಹೊಸದು ಎನ್ನುವಂಥದ್ದೇನೂ ಕಾಣಿಸುವುದಿಲ್ಲ. ಸಾಧನೆಗೈದ ವಿದ್ಯಾರ್ಥಿ ವೃಂದದಿಂದ ಬರುವ ಉತ್ತರಗಳು ಪ್ರತಿವರ್ಷ ಹೀಗೇ ಇರುತ್ತವೆ.

ನಮ್ಮ ಸಮಾಜ ಗಮನಿಸಬೇಕಾದ ಸಂಗತಿಯೆಂದರೆ ಇಲ್ಲಿ ಯಾವೊಬ್ಬ ವಿದ್ಯಾರ್ಥಿಯೂ ತಾನು ಹೆಚ್ಚು ಓದಿ, ಕಲಿತು, ಮುಂದೊಂದುದಿನ ಉಪಾಧ್ಯಾಯ ವೃತ್ತಿಯನ್ನು ಆರಿಸಿಕೊಳ್ಳುತ್ತೇನೆ ಎಂದು ಹೇಳುವುದಿಲ್ಲ. ‘ನಿಮ್ಮ ಸಾಧನೆಗೆ ಪ್ರೇರಣೆ ಯಾರು’ ಎಂಬ ಪ್ರಶ್ನೆಗೆ ತಾಯಿ ತಂದೆ ಅಥವಾ ಪಾಠಮಾಡಿದ ಗುರುವೃಂದ ಎಂದು ಹೇಳುತ್ತಾರೆಯೇ ವಿನಾ ತಮಗೆ ಆದರ್ಶಪ್ರಾಯವಾದ ಗುರುಗಳು ತುಳಿದ ಹಾದಿಯಲ್ಲಿ ನಡೆಯಲು ಅವರಾರೂ ಸಿದ್ಧರಿಲ್ಲ.

ಹರಿದ ಪಂಚೆ, ತೇಪೆ ಹಾಕಿದ ಜುಬ್ಬ, ತೂತು ಬಿದ್ದಿರುವ ಹಳೆಕೋಟು ಧರಿಸಿದ ಮೇಷ್ಟುಗಳ ಕಾಲ ಈಗೀಗ ಮರೆಯಾಗುತ್ತಿದೆ. ಶಾಲೆ ಕಾಲೇಜುಗಳ ಮೇಷ್ಟು ಮತ್ತು ಉಪನ್ಯಾಸಕರುಗಳಿಗೆ ಈಗ ಕೈತುಂಬ ಸಂಬಳ ಬರುತ್ತದೆ. ಕಳೆದ ವರ್ಷ ಯುಜಿಸಿ ಮಾಡಿರುವ ವೇತನ ವಿಮರ್ಶೆಯಿಂದ ಕಾಲೇಜು ಉಪನ್ಯಾಸಕರ ಸಂಬಳ 13,000 ರೂ.ಗಳಷ್ಟು ಹೆಚ್ಚಾಗಿದೆ. ಜಿಲ್ಲಾಧಿಕಾರಿಗಿಂತ ಹೆಚ್ಚಿಗೆ ಸಂಬಳ ಅವರ ಕೈಸೇರುತ್ತದೆ. ಮೇಷ್ಟ್ರ ನೌಕರಿಗೆ ಸಂಬಳ ಕಡಿಮೆ ಎಂಬ ಕೂಗು ಈಗಿಲ್ಲವಾದರೂ ನಮ್ಮ ಪ್ರತಿಭಾವಂತಗಳಿಗೆ ಈ ನೌಕರಿ, ಈ ವೃತ್ತಿ, ಈ ಬಗೆಯ ಬದುಕು ಇಷ್ಟವಿಲ್ಲ.

ಪಾಠ ಮಾಡುತ್ತೇನೆ, ಒಳ್ಳೆ ವಿದ್ಯಾರ್ಥಿಗಳನ್ನು ತಯ್ಯಾರು ಮಾಡುತ್ತೇನೆ ಎಂಬ ಕನಸನ್ನು ಕಟ್ಟಿಕೊಂಡ ಒಬ್ಬೇಒಬ್ಬ ಪ್ರತಿಭಾವಂತ ವಿದ್ಯಾರ್ಥಿ ನನ್ನ ಕಣ್ಣಿಗೆ ಬಿದ್ದಿಲ್ಲ.