ಬ್ಲಾಗ್ ಸಂಗ್ರಹಗಳು

ಮಜವಾಗಿ ಕೆಲಸ ಮಾಡೋದೇ ಯಶಸ್ಸಿನ ಗುಟ್ಟು

Richard Branson`ಉಲ್ಲಾಸದಿಂದಿರಿ, ಬೆವರು ಹರಿಯೆ ದುಡಿಯಿರಿ, ಹಣ ತಂತಾನೇ ಹರಿದು ಬರುತ್ತದೆ. ಸಮಯವನ್ನು ಕೊಲ್ಲಬೇಡಿ- ಅವಕಾಶವನ್ನು ಬಾಚಿಕೊಳ್ಳುವುದರಲ್ಲಿ ಹಿಂದೆ ಬೀಳಬೇಡಿ. ಜೀವನದ ಕುರಿತು ಒಂದು ಸಕಾರಾತ್ಮಕ ನೋಟವಿರಲಿ. ಯಾವತ್ತು ಕೆಲಸದಲ್ಲಿ ಉಲ್ಲಾಸ ಇರುವುದಿಲ್ಲವೋ ಆಗ ಅದನ್ನು ಬಿಟ್ಟು ಮುನ್ನಡೆಯಿರಿ’ ಹೀಗೆನ್ನುವ ವರ್ಜಿನ್ ಏರ್‌ವೇಸ್‌ನ ಮಾಲೀಕ ರಿಚರ್ಡ್ ಬ್ರಾನ್ಸನ್ ಬಗ್ಗೆ ನಾನು ಪ್ರತಿ ಬಾರಿ ಬರೆದಾಗಲೂ ಓದುಗರಿಂದ ಅಭೂತಪೂರ್ವ ಪ್ರತಿಕ್ರಿಯೆ ಬಂದಿದ್ದಿದೆ. ಆತನ ಬಗ್ಗೆ ಯಾವುದಾದರೂ ಪುಸ್ತಕಗಳಿವೆಯೇ, ಆತ ಏನನ್ನಾದರೂ ಬರೆದಿದ್ದಾನಾ, ಅವನ ಬಗ್ಗೆ ತಿಳಿದುಕೊಳ್ಳಬೇಕು ಎಂದು ಓದುಗರು ಕೇಳಿಕೊಂಡಿದ್ದಿದೆ.

ಆತನೊಬ್ಬ ವಿಮಾನಯಾನ ಕಂಪನಿಯ ಮಾಲೀಕನಿರಬಹುದು, ಆತ ಸಾಗಿಬಂದ ಹಾದಿ ಮಾತ್ರ ನಿತ್ಯ ಬೆರಗು ಹುಟ್ಟಿಸುವಂಥದ್ದು. ಅದನ್ನು ಓದಿ ಮರೆಯದೆ, ಸ್ಫೂರ್ತಿ ಪಡೆದುಕೊಂಡು, ನಿಮ್ಮ ಜೀವನದಲ್ಲೂ ಅಳವಡಿಸಿಕೊಳ್ಳಬೇಕೆಂಬುದೇ ನನ್ನ ಇಚ್ಛೆ, ಆಶಯ. ಆ ಯಶೋಗಾಥೆಯನ್ನು ಅವನ ಮಾತಲ್ಲೇ ಕೇಳಿ…

ನಾನು ಯಶಸ್ವಿ ಪುರುಷ ಅನ್ನುವುದನ್ನು ಇಲ್ಲ ಎನ್ನಲಾರೆ. ನಾನು ಮುಟ್ಟಿದ್ದೆಲ್ಲ ಚಿನ್ನವಾಯಿತು ಎಂದು ಬಹಳಷ್ಟು ಮಂದಿ ಮಾತಾಡಿಕೊಳ್ಳುತ್ತಾರೆ. ಅದೇ ಬೆರಗನ್ನು ಇಟ್ಟುಕೊಂಡು ನನ್ನ ಬಳಿ ಬರುವವರು ಕೇಳುವ ಪ್ರಶ್ನೆ ಎಂದರೆ, ನೀವು ಹಣ ಮಾಡಿದ್ದು ಹೇಗೆ? ವಾಸ್ತವವಾಗಿ, ಈ ಪ್ರಶ್ನೆಗೆ ಉತ್ತರ ದೊರಕಿಸಿಕೊಂಡು ತಾವು ಹಣ ಮಾಡುವುದನ್ನು ತಿಳಿದುಕೊಳ್ಳುವುದಕ್ಕಾಗಿ ಅವರೆಲ್ಲರ ಧಾವಂತ. ಪ್ರತಿಯೊಬ್ಬರ ಕಣ್ಣಲ್ಲೂ ಕೋಟ್ಯಧಿಪತಿಗಳಾಗುವ ಕನಸು!

ಆಗೆಲ್ಲ ನಾನು ಹೇಳುವುದು `ಉಲ್ಲಾಸದಿಂದಿರಿ..’ ಎಂಬ ಮೇಲಿನ ಮಾತುಗಳನ್ನೆ. ನನ್ನಲ್ಲಿ ಯಾವ ಸಿಕ್ರೆಟ್‌ಗಳೂ ಇಲ್ಲ. ಉದ್ಯಮದಲ್ಲಿ ಅನುಸರಿಸಬೇಕಾದ `ಇದಮಿತ್ಥಂ’ ಎಂಬ ನಿಯಮಗಳ್ಯಾವವೂ ಇಲ್ಲ. ನಾನಿದನ್ನು ಮಾಡಬಲ್ಲೆ ಎಂಬ ದೃಢ ವಿಶ್ವಾಸ ಹಾಗೂ ಕಠಿಣ ಪರಿಶ್ರಮಗಳೇ ನನ್ನನ್ನು ಕೈ ಹಿಡಿದು ನಡೆಸಿವೆ. ಇವೆಲ್ಲಕ್ಕಿಂತ ಹೆಚ್ಚಾಗಿ, ಕೆಲಸದಲ್ಲಿ ನಾನೊಂದು ಫನ್ ಅನ್ನು, ಉಲ್ಲಾಸವನ್ನು, ಮಜವನ್ನು ಅನುಭವಿಸುತ್ತೇನೆ. ಅದೇ ಮುಖ್ಯ.

ಮಜವಾಗಿ, ಮುದವಾಗಿರಿ, ಹಣ ತಾನಾಗೇ ಹುಡುಕಿಕೊಂಡು ಬರುತ್ತದೆ : ರಿಚರ್ಡ್ ಬ್ರಾನ್ಸನ್

1997ರಲ್ಲಿ ಬಿಸಿಗಾಳಿ ಬಲೂನ್‌ನಲ್ಲಿ ಜಗತ್ತು ಸುತ್ತುವ ಕಾರ್‍ಯಕ್ಕೆ ಮುಂದಾದಾಗ ಅದು ತುಂಬ ರಿಸ್ಕಿ ಅಂತ ಗೊತ್ತಿತ್ತು. ಹೊರಡುವುದಕ್ಕಿಂತ ಮೊದಲು ನನ್ನ ಮಕ್ಕಳಾದ ಸ್ಯಾಮ್ ಹಾಗೂ ಹೊಲಿ ಇವರಿಗೆ ಒಂದು ಪತ್ರ ಬರೆದೆ. `ಜೀವನವನ್ನು ಇಡಿ ಇಡಿಯಾಗಿ ಬದುಕಿ. ಅದರ ಪ್ರತಿ ಕ್ಷಣವನ್ನೂ ಅನುಭೂತಿಗೆ ತಂದುಕೊಳ್ಳಿ. ಪ್ರೀತಿಸಿ, ತಾಯಿಯನ್ನು ಕಾಳಜಿಯಿಂದ ನೋಡಿಕೊಳ್ಳಿ.’- ಹೀಗೆ ನಾನು ಬರೆದ ಪತ್ರವೇ ನನ್ನ ನಿಲುವನ್ನು ಸ್ಪಷ್ಟಪಡಿಸುತ್ತದೆ. ಸಮಯ ವ್ಯರ್ಥಗೊಳಿಸಕೂಡದು, ಮಜವಾಗಿರಬೇಕು ಹಾಗೂ ಕುಟುಂಬವನ್ನು ಪ್ರೀತಿಸಬೇಕು. ನೀವು ಗಮನಿಸಿ- ಅಲ್ಲೆಲ್ಲೂ ನಾನು ಹಣದ ಪ್ರಸ್ತಾಪವನ್ನೇ ಮಾಡಿಲ್ಲ.

ಶ್ರೀಮಂತನಾಗಿಬಿಡಬೇಕು ಎಂದೇ ಹೊರಟವನು ನಾನಲ್ಲ. ಬದುಕಿನಲ್ಲಿ ಉಲ್ಲಾಸ ಹಾಗೂ ಸವಾಲುಗಳನ್ನು ಅರಸಿಕೊಂಡು ಹೋದೆನಷ್ಟೆ. ಹಾಗಂತ ಹಣ ಬೇಕಾಗಿಲ್ಲ ಎಂದು ವಾದಕ್ಕೆ ಬೀಳುವವನು ನಾನಲ್ಲ. ಗೆಡ್ಡೆ-ಗೆಣಸುಗಳನ್ನು ತಿಂದು ಹೊಟ್ಟೆ ತುಂಬಿದೆ ಸಾಕು ಎಂದು ತೃಪ್ತಿಪಟ್ಟುಕೊಳ್ಳಲು ನಾವು ಗುಹೆಯಲ್ಲಿ ವಾಸಿಸುವ ಜೀವಿಗಳಾಗಿ ಉಳಿದುಕೊಂಡಿಲ್ಲ. ಬದುಕಲು ಹಣ ಅವಶ್ಯ ಎನ್ನುವ ಕಾಲಘಟ್ಟದಲ್ಲಿ ನಾವಿದ್ದೇವೆ. ಬೆಳಗಿನ ಉಪಹಾರ, ಮಧ್ಯಾಹ್ನದ ಊಟ ಹಾಗೂ ರಾತ್ರಿಯ ಭೋಜನ ಇವಿಷ್ಟೆ ನನಗೆ ಹಸಿವು ತೀರಲು ಬೇಕಾಗಿರುವುದು ಎಂದು ಹಿಂದೊಮ್ಮೆ ನಾನು ಹೇಳಿದ್ದೆ. ಈಗಲೂ ನಾನು ಹಾಗೆಯೇ ಬದುಕುತ್ತಿರುವುದು. ಆದರೆ ಕೆಲಸದಲ್ಲಿ ಉಲ್ಲಾಸ ಕಂಡುಕೊಂಡಿದ್ದೇ ಆದಲ್ಲಿ ಹಣ ತಂತಾನೇ ಹರಿದುಬರುತ್ತದೆ ಎಂಬುದನ್ನು ನಾನು ಕಂಡುಕೊಂಡೆ. ನನಗೆ ಆಗಾಗ ಹಾಕಿಕೊಳ್ಳುವ ಪ್ರಶ್ನೆಗಳೇ ಅವು- ನನ್ನ ಕೆಲಸದಲ್ಲಿ ಮಜವಿದೆಯೇ? ಅದರಿಂದ ಸಂತೋಷ ಸಿಗುತ್ತಿದೆಯೇ? ಯಾವುದಾದರೂ ಉಲ್ಲಾಸ ಕೊಡುತ್ತಿಲ್ಲ ಅಂತಾದರೆ ನಾನು ಮತ್ತೆ ಹಾಕಿಕೊಳ್ಳುವ ಪ್ರಶ್ನೆ- ಇದನ್ನು ನಾನು ಸರಿ ಮಾಡಿಕೊಳ್ಳಬಲ್ಲೆನೇ? ಇಲ್ಲ ಎಂದು ಅರಿವಾದೊಡನೆ ಆ ಕೆಲಸವನ್ನು ಬಿಡುತ್ತೇನೆ.

ಸುಮ್ನಿರಪ್ಪಾ, ಕೆಲಸದಲ್ಲಿನ ಉಲ್ಲಾಸ ಪ್ರತಿಬಾರಿಯೂ ಹಣ ತಂದುಕೊಡುತ್ತದೆಯಾ ಎಂದು ನೀವು ಕೇಳಬಹುದು. ಯು ಆರ್ ರೈಟ್. ನನ್ನ ಬದುಕಿನಲ್ಲೂ ಯಶಸ್ಸು ಒಲಿದಂತೆಯೇ ವೈಫಲ್ಯಗಳೂ ಕಾಡಿಸಿವೆ. ಆದರೆ ಒಟ್ಟಾರೆಯಾಗಿ ನಾನು ಅದೃಷ್ಟವಂತ. ಮೊದಲಿಗೆ ನನ್ನನ್ನು ಯಶಸ್ಸು ಚುಂಬಿಸಲಿಲ್ಲ; ವೈಫಲ್ಯವೇ ತಪರಾಕಿ ಕೊಟ್ಟಿತ್ತು. ಆದರೆ ಅದರಿಂದ ನಾನು ಪಾಠ ಕಲಿತೆ. ತೀರ ಒಂಬತ್ತನೇ ವಯಸ್ಸಿನಲ್ಲಿರುವಾಗಲೇ ನಾನು ಹಣ ಮಾಡಬೇಕು ಎಂದು ಹೊರಟೆ. ಕ್ರಿಸ್‌ಮಸ್ ಗಿಡಗಳನ್ನು ಬೆಳೆಯುವ ಮಹಾ ಯೋಜನೆಯೊಂದು ನನ್ನ ತಲೆಯಲ್ಲಿ ಮೊಳಕೆ ಒಡೆದಿತ್ತು. ಗೆಳೆಯನೊಬ್ಬನ ಸಹಾಯ ತೆಗೆದುಕೊಂಡು ಮನೆಯಂಗಳದಲ್ಲೇ 400 ಬೀಜ ನೆಟ್ಟೆ. ಆ ಕೆಲಸದುದ್ದಕ್ಕೂ ನಾವು ಖುಷಿ ಕಂಡೆವು. ಶಾಲೆಯಲ್ಲಿ ಗಣಿತದಲ್ಲಿ ಅಷ್ಟೇನೂ ಚುರುಕಿಲ್ಲದ ನಾನು, ಲೆಕ್ಕ ಹಾಕುವುದನ್ನು ಆಗಲೇ ಕಲಿತೆ. ಬೀಜಗಳ ಭರ್ತಿ ಬ್ಯಾಗು 5 ಪೌಂಡ್ ಗೆಲ್ಲ ಸಿಗುತ್ತಿತ್ತು. ಆದರೆ ಪ್ರತಿ ಕ್ರಿಸ್‌ಮಸ್ ಗಿಡವನ್ನು 2 ಪೌಂಡ್‌ಗಳಿಗೆ ಮಾರಬಹುದಾಗಿತ್ತು. ಒಟ್ಟಾರೆ 795 ಪೌಂಡ್ ನಮ್ಮ ಕೈ ಸೇರುತ್ತಿತ್ತು. ಇದಕ್ಕೆ 18 ತಿಂಗಳು ಕಾಯಬೇಕಾಗಿತ್ತು. ಆಗಲೇ ನಾನು ಪ್ರತಿಫಲಕ್ಕಾಗಿ ತಾಳ್ಮೆಯಿಂದ ಕಾಯಬೇಕು ಎಂಬ ಪಾಠ ಕಲಿತುಕೊಂಡೆ. ಅಷ್ಟೆಲ್ಲ ಆಗಿ ನಂತರ ಕಲಿತ ಪಾಠ ಏನೆಂದರೆ -`ಹಣ ಮರದಲ್ಲಿ ಬೆಳೆಯುವುದಿಲ್ಲ’ ಅನ್ನೋದು! ಯಾಕೆಂದರೆ ಬೀಜಗಳನ್ನೆಲ್ಲ ಮೊಲಗಳು ತಿಂದುಹಾಕಿದ್ದವು. ನಾವು ಆ ಮೊಲಗಳನ್ನು ಶೂಟ್ ಮಾಡುವುದರ ಮೂಲಕ ಸೇಡು ತೀರಿಸಿಕೊಂಡೆವು ಎಂಬ ಕ್ರೌರ್‍ಯದ ಸತ್ಯವನ್ನೂ ನಾನು ಹೇಳಬೇಕು. ಅವನ್ನು ಸ್ಥಳೀಯ ವ್ಯಾಪಾರಿಗೆ ಮಾರಿ ಸ್ವಲ್ಪ ಹಣ ಮಾಡಿಕೊಂಡೆವು

Advertisements

ಕೆಲಸದಲ್ಲಿ ಮಜ ಕಂಡುಕೊಳ್ಳುವುದು ತಿಳಿದರೆ…

Virgin airways of Richard Bransonನೀವು ರಜಾದಿನವಾಗಿ ಕಳೆಯುತ್ತಿರುವ ಒಂದು ಶುಭ್ರ ಮುಂಜಾನೆಯೇ ನಿಮಗೆ ಏನನ್ನೋ ಹುಡುಕಿಕೊಟ್ಟು ಬಿಡಬಹುದು. ಇದನ್ನು ಯಾಕೆ ಹೇಳುತ್ತಿದ್ದೀನಿ ಅಂದರೆ, ನನ್ನ ಪಾಲಿಗೆ ಸ್ವಂತ ಏರ್ ಲೈನ್ ಹಾಗೂ ದ್ವೀಪ ಒಲಿದಿದ್ದು ರಜಾದಿನದ ಉಲ್ಲಾಸದ ಸಮಯದಲ್ಲೇ. 1976ರ ಅವಧಿಯಲ್ಲಿ ನಾನು `ವರ್ಜಿನ್ ಮ್ಯೂಸಿಕ್’ ಕಟ್ಟುವುದರಲ್ಲಿ ವ್ಯಸ್ತನಾಗಿದ್ದೆ. 1973ರಲ್ಲಿ ಬೇರೊಂದು ಕಂಪನಿ ಜತೆ ಸೇರಿಕೊಂಡು ಪಡೆದ ಯಶಸ್ಸು ಬೆನ್ನಿಗಿದ್ದದ್ದು ವಿಶ್ವಾಸ ನೀಡಿತ್ತು. ಆದರೂ ಕೆಲವೇ ಜನ ಸೇರಿಕೊಂಡು ರೂಪಿಸಿದ್ದ ಇದನ್ನು ಅಗ್ರಸ್ಥಾನಕ್ಕೆ ಏರಿಸುವುದು ಸುಲಭದ ಮಾತೇನೂ ಆಗಿರಲಿಲ್ಲ. ಟಿವಿ ಶೋ ಒಂದನ್ನು ನಡೆಸುತ್ತಿದ್ದ ಜಾನ್ ಪೀಲ್‌ಗೆ ನಮ್ಮ ಆಲ್ಬಂ ಅನ್ನು ಬಳಸಿಕೊಳ್ಳಲು ವಿನಂತಿಸಿದೆವು. ಅದು ಪ್ರಸಾರವಾಗುತ್ತಿದ್ದಂತೆ ಮಾರುಕಟ್ಟೆಯಲ್ಲಿ ಬೇಡಿಕೆ ಕುದುರಿತು. ಆಲ್ಬಂನ ವಿಡಿಯೋ ಪ್ರತಿಯನ್ನು ಪ್ರಸಾರ ಮಾಡುತ್ತಿದ್ದಂತೆ ಮಾರಾಟ ಮುಗಿಲು ಮುಟ್ಟಿತು. ಹೊಸ ಪ್ರತಿಭೆಗಳನ್ನು ಬಳಸಿಕೊಳ್ಳುತ್ತ ನಾವು ಮುನ್ನುಗ್ಗಿದೆವು.

ಅಷ್ಟಾಗಿ, 1977ರ ವೇಳೆಗೆ ನನಗೊಂದು ವಿರಾಮ ಬೇಕಾಯಿತು. ಗೆಳತಿ ಜೋನ್ ಜತೆ ನನ್ನ ಸಂಬಂಧ ಹದಗೆಡುತ್ತಿತ್ತು. ಸಂಗೀತ, ಸೂರ್ಯನ ಹೂ ಬಿಸಿಲು ಹಾಗೂ ಸಮುದ್ರ ತೀರ ನನಗೆ ಸಾಂತ್ವನ ನೀಡುವ ಅಂಶಗಳಾಗಿದ್ದವು. ಲಂಡನ್‌ನಿಂದ ಹೊರಗೆ ಹೋಗುವುದು ನನಗೆ ಹೊಸ ಹೊಸ ಐಡಿಯಾಗಳ ಗರ್ಭ ಧರಿಸುವ ಅವಕಾಶ ಮಾಡಿಕೊಡುತ್ತದೆ. ರಜಾಕ್ಕಾಗಿ ನಾನು ಹೋಗಿ ಇಳಿದಿದ್ದು ಜಮೈಕಾದ ಕಡಲ ತೀರದಲ್ಲಿ. ಬೀಚ್‌ನಲ್ಲಿ ಮೈಚೆಲ್ಲಿ ಕುಳಿತಿದ್ದ ನನಗೆ ಹೊಸ ಬಗೆಯ ಸಂಗೀತವೊಂದು ಕಿವಿಗೆ ಬಡಿಯಿತು. ಸ್ಥಳೀಯ ಡಿಜೆಗಳು ಹಾಗೂ ರೆಡಿಯೋ ಜಾಕಿಗಳು ರೂಪಿಸಿದ್ದ ಸಂಗೀತವಾಗಿತ್ತದು. ಕೂಡಲೇ ಆ ಸಂಗೀತಗಳನ್ನು ನಾನು ಅವರಿಗೆ ಹಣ ಸುರಿದು ಬಾಚಿಕೊಂಡೆ. ಆ ರೆಕಾರ್ಡ್‌ಗಳನ್ನು ನಾವು ಭರ್ಜರಿಯಾಗಿ ಮಾರಿದೆವು. ಮಜವಾಗಿ, ಮುದವಾಗಿರಿ- ಹಣ ಹುಡುಕಿಕೊಂಡು ಬರುತ್ತದೆ ಎಂಬ ನನ್ನ ನಂಬಿಕೆಗೆ ಉತ್ತಮ ಉದಾಹರಣೆ ಇದು.

ಜಮೈಕಾದಲ್ಲಿದ್ದಾಗಲೇ ನನಗೊಂದು ಕರೆ ಬಂತು. ಅತ್ತಲಿಂದ ಮಾತಾಡುತ್ತಿದ್ದವಳು ಗೆಳತಿ ಜೋನ್. `ನ್ಯೂಯಾರ್ಕ್‌ನಲ್ಲಿ ಭೇಟಿ ಯಾಗ್ತೀಯಾ?’ ಆಕೆ ಕೇಳಿದಳು. ನ್ಯೂಯಾರ್ಕ್‌ನಲ್ಲಿ ನಾವಿಬ್ಬರೂ ಮಜವಾಗಿ ಕಾಲ ಕಳೆಯುತ್ತಿದ್ದೆವಾದರೂ ಫೋನ್ ಕರೆಗಳಿಂದ ತಪ್ಪಿಸಿಕೊಳ್ಳಲು ಅಲ್ಲಿಂದ ಹೊರಬೀಳಲೇಬೇಕಿತ್ತು. ನಾವು ಮುಖ ಮಾಡಿದ್ದು ಬ್ರಿಟಿಷ್ ವರ್ಜಿನ್ ಐಲ್ಯಾಂಡ್‌ಗಳ ಕಡೆ. ಬಹಳ ಮಂದಿ ನನ್ನನ್ನು ಕೇಳಿದ್ದಾರೆ- ವರ್ಜಿನ್ ಐಲ್ಯಾಂಡ್‌ಗಳನ್ನು ಗಮನದಲ್ಲಿಟ್ಟುಕೊಂಡೇ ನೀವು ಮ್ಯೂಸಿಕ್ ಬ್ರಾಂಡ್‌ಗೆ ವರ್ಜಿನ್ ಅಂತ ಹೆಸರಿಟ್ಟಿದ್ದೀರಾ ಅಂತ. ಉಹುಂ, ನಾವು ಎಲ್ಲ ವಿಧದ ಉದ್ಯಮಗಳಲ್ಲೂ ವರ್ಜಿನ್ ಆಗಿಯೇ ಇರುತ್ತೇವಾದ್ದರಿಂದ ಆ ಹೆಸರು ಅಂತ ನಾನು ಸಮಜಾಯಿಷಿ ನೀಡಿದ್ದೇನೆ.

ನಾನಿದನ್ನು ಮಾಡಬಲ್ಲೆ ಎಂಬ ದೃಢ ವಿಶ್ವಾಸ ಹಾಗೂ ಕಠಿಣ ಪರಿಶ್ರಮಗಳೇ ನನ್ನನ್ನು ಕೈ ಹಿಡಿದು ನಡೆಸಿವೆ.

ಜಮೈಕಾದ ಸಂಗೀತಗಾರರಿಗೆ ನೀಡುವುದಕ್ಕೆ ನಾನು ಎಲ್ಲ ಹಣವನ್ನು ವ್ಯಯಿಸಿಬಿಟ್ಟಿದ್ದೆ. ಆದರೆ ಈ ಬ್ರಿಟಿಷ್ ಐಲ್ಯಾಂಡ್‌ನ ಮಜಾ ಏನಪ್ಪಾ ಅಂದ್ರೆ, ನೀವು ಅಲ್ಲೊಂದು ಮನೆ ಖರೀದಿಸಲು ಹೊರಟರೆ ನಿಮ್ಮನ್ನು ಎಸ್ಟೇಟ್ ಏಜೆಂಟ್‌ಗಳು ಉಚಿತವಾಗಿ ದ್ವೀಪ ಸುತ್ತಿಸುತ್ತಾರೆ. ಇದರ ಉಪಯೋಗ ಪಡೆದುಕೊಳ್ಳುವಲ್ಲಿ ನಾನು ಹಿಂದೆ ಬೀಳಲಿಲ್ಲ. ರೆಕಾರ್ಡಿಂಗ್ ಕಂಪನಿಯ ಮುಖ್ಯಸ್ಥನಾಗಿ ನನ್ನನ್ನು ಪರಿಚಯಿಸಿಕೊಂಡು, ದ್ವೀಪದಲ್ಲಿ ಸ್ಟುಡಿಯೋ ಒಂದನ್ನು ನಿರ್ಮಿಸಲು ಜಾಗ ಹುಡುಕುತ್ತಿರುವುದಾಗಿ ಹೇಳಿದೆ. ನಮ್ಮನ್ನು ಅತಿಥಿಯಂತೆ ಕಂಡ ಏಜೆಂಟ್ ವಿಲ್ಲಾ ಒಂದರಲ್ಲಿ ವಾಸ್ತವ್ಯದ ವ್ಯವಸ್ಥೆ ಮಾಡಿ ಮರುದಿನದಿಂದ ಹೆಲಿಕಾಪ್ಟರ್‌ನಲ್ಲಿ ದ್ವೀಪಗಳ ಪ್ರದಕ್ಷಿಣೆ ಆರಂಭವಾಯಿತು. ಒಂದಕ್ಕಿಂತ ಒಂದು ಚೆಂದದ ದ್ವೀಪಗಳನ್ನೆಲ್ಲ ನೋಡುತ್ತ ಬಲು ಹಿತವಾಗಿ ರಜಾ ಮಜಾ ಅನುಭವಿಸಿದೆವು. ಇದು ಹೀಗೆಯೇ ಮುಂದುವರಿದುಕೊಂಡಿರಲಿ ಎಂಬುದು ನಮ್ಮ ಆಸೆಯಾಗಿತ್ತಾದರೂ ದ್ವೀಪಗಳನ್ನೆಲ್ಲ ನೋಡಿ ಮುಗಿಯುತ್ತ ಬಂತು. ನಾವು ನೋಡದೇ ಇರುವಂಥದ್ದು ಯಾವುದಾದರೂ ಇದೆಯೇ ಎಂದು ಏಜೆಂಟ್‌ನನ್ನು ವಿಚಾರಿಸಿದಾಗ ಆತ ಹೇಳಿದ ಹೆಸರು `ನೆಕರ್’. ತುಂಬ ದೂರದಲ್ಲಿರುವ ಆ ದ್ವೀಪ ನಿಜಕ್ಕೂ ಒಂದು ಹೊಳೆಯುವ ಆಭರಣವಿದ್ದಂತೆ. ಅಲ್ಲಿಗೆ ಭೇಟಿಯನ್ನೇ ನೀಡದ ಇಂಗ್ಲಿಷ್ ಯಜಮಾನನೊಬ್ಬನ ಒಡೆತನದಲ್ಲಿ ಆ ದ್ವೀಪವಿದೆ. ಉಪಯೋಗಿಸದ ಜಾಗವಾದ್ದರಿಂದ ಬಹಳ ಸಹಜ ಸ್ಥಿತಿಯಲ್ಲಿದೆ ಎಂದು ಆತ ಮಾಹಿತಿ ನೀಡಿದ.

ಒಳ್ಳೆ ನಿಸರ್ಗ ಸೌಂದರ್‍ಯವನ್ನು ಸವಿಯಬಹುದು ಅಲ್ಲದೇ ಅದು ಇನ್ನೂ ಉಪಯೋಗಿಸದ ದ್ವೀಪವಾದ್ದರಿಂದ ಖರೀದಿಗೆ ಕಡಿಮೆ ಬೆಲೆಗೆ ಎಟಕಬಹುದು ಎಂದು ಅತ್ತ ಪ್ರಯಾಣ ಬೆಳೆಸಿದೆವು. ಪ್ರಾರಂಭದಲ್ಲಿ ಅದೊಂದು ಆಟವಾಗಿತ್ತು. ದ್ವೀಪವನ್ನು ಖರೀದಿಸುವ ಗಂಭೀರ ಯೋಚನೆಯೇನೂ ಇರಲಿಲ್ಲ. ಆದರೆ, ಅದಾಗಲೇ ಆ ಸ್ವರ್ಗವನ್ನು ನನ್ನದಾಗಿಸಿಕೊಳ್ಳುವ ಉಮೇದು ಹುಟ್ಟಿಯಾಗಿತ್ತು. ಅರ್ಥಾತ್, ನನ್ನ ಮುಂದೆ ಮತ್ತೊಂದು ಗುರಿ ಪ್ರತ್ಯಕ್ಷವಾಗಿತ್ತು! ನೆಕರ್ ಎಂಬ ಅದ್ಭುತ ದ್ವೀಪಕ್ಕೆ ನಾನು ಹುಚ್ಚನಂತೆ ಮನಸೋತಿದ್ದೆ. ಆ ದ್ವೀಪವನ್ನು ನಾವು ಕೊಂಡುಕೊಂಡಿದ್ದೇ ಆದರೆ ಸಮುದ್ರದಿಂದಲೇ ಸಿಹಿನೀರು ಪರಿವರ್ತನೆ ಮಾಡಿಕೊಳ್ಳಬೇಕು ಎಂದು ಏಜೆಂಟ್ ಹೇಳಿದ್ದರಿಂದ ದ್ವೀಪದ ಬೆಲೆ ಅಷ್ಟೇನೂ ಇರಲಿಕ್ಕಿಲ್ಲ ಎಂದು ನಾನೆಣಿಸಿದ್ದೆ. ಆದರೆ, ಬೆಲೆ ವಿಚಾರಿಸಿದಾಗ ಆತ ಮೂವತ್ತು ಲಕ್ಷ ಪೌಂಡ್ ಎಂದ! ಅದು ನನ್ನ ನಿಲುಕಿನಿಂದ ತುಂಬ ದೂರದಲ್ಲಿತ್ತು. 1 ಲಕ್ಷ 50 ಸಾವಿರ ಪೌಂಡ್ ಕೊಡಬಹುದಪ್ಪ ಎಂದೆ. ಆತ ಹೇಳಿದ್ದ ಶೇ.5ರಷ್ಟು ಬೆಲೆಗೆ ನಾನು ಕೇಳುತ್ತಿದ್ದೆ. ಗಂಭೀರವಾಗಿ ಹೇಳಿದ್ದನ್ನು ಕಿವಿಗೆ ಹಾಕಿಕೊಳ್ಳದ ಏಜೆಂಟ್ ಮೂವತ್ತು ಲಕ್ಷ ಪೌಂಡ್ ಎಂದು ಮತ್ತೆ ಮೌಲ್ಯ ಹೇಳಿದ. ಕೊನೆಯದಾಗಿ 2 ಲಕ್ಷ ಪೌಂಡ್ ಕೊಡಬಹುದು ಎಂದು ನಾನೆಂದೆ. ನಾವು ಹೆಲಿಕಾಪ್ಟರ್ ಏರಿ ವಿಲ್ಲಾಕ್ಕೆ ಬರುವ ವೇಳೆಗೇ ನಮ್ಮ ಲಗೇಜುಗಳನ್ನು ಹೊರಗಿರಿಸಲಾಗಿತ್ತು. ಹಳ್ಳಿಯೊಂದ ರಲ್ಲಿ ನಾವು ರಾತ್ರಿ ಕಳೆದು ಮರಳಿದೆವು.

ಜೋನ್ ಜತೆ ಲಂಡನ್‌ಗೆ ಮರಳಿದರೂ ನೆಕರ್ ದ್ವೀಪವನ್ನು ಖರೀದಿಸುವ ಕನಸು ನನ್ನ ಕಣ್ಣುಗಳಿಂದ ಚದುರಿರಲಿಲ್ಲ. ಆ ಬಗ್ಗೆ ಅಧ್ಯಯನಕ್ಕಿಳಿದೆ. ನೆಕರ್‌ನ ಯಜಮಾನ ತುಂಬ ಶ್ರೀಮಂತನೇನೂ ಅಲ್ಲ. ಹಾಗಾಗಿಯೇ ಅವನಿಗೆ ದ್ವೀಪವನ್ನು ಅಭಿವೃದ್ಧಿಗೊಳಿಸುವುದು ಸಾಧ್ಯವಾಗಿಲ್ಲ ಎಂಬಂಶ ನನ್ನ ಗಮನಕ್ಕೆ ಬಂತು. ಅಲ್ಲದೇ ಸದ್ಯಕ್ಕೆ ಅದನ್ನು ಮಾರಾಟ ಮಾಡುವ ತುರ್ತು ಅವನಿಗಿದೆ. ಏಕೆಂದರೆ ಲಂಡನ್‌ನಲ್ಲಿ ಮನೆ ಕಟ್ಟಿಕೊಳ್ಳಲು ಆತನಿಗೆ 2 ಲಕ್ಷ ಪೌಂಡ್ ಬೇಕಾಗಿದೆ ಎಂಬುದು ನನ್ನ ಗಮನಕ್ಕೆ ಬಂತು. ಆಗ ನನಗನಿಸಿತು, ನಾನು ಆ ಏಜೆಂಟ್‌ಗೆ ನೀಡಿದ್ದ ಆಫರ್ ಸರಿಯಾಗಿಯೇ ಇತ್ತು ಅಂತ. ಸಮಸ್ಯೆ ಏನಪ್ಪಾ ಅಂದರೆ ಆಗಲೂ ಅಷ್ಟು ಹಣವೂ ನನ್ನಲ್ಲಿರಲಿಲ್ಲ. 1 ಲಕ್ಷ 75 ಸಾವಿರ ಪೌಂಡ್ ನೀಡುವುದಾಗಿ ಹೇಳಿದೆ. ಖರೆ ಅಂದರೆ ಅಷ್ಟೂ ನನ್ನಲ್ಲಿರಲಿಲ್ಲ. ವ್ಯವಹಾರ ಕುದುರಲಿಲ್ಲವಾದ್ದರಿಂದ ನಾನು ಕೆಲಸದಲ್ಲಿ ಮೈಮರೆತೆ. ಮೂರು ತಿಂಗಳ ನಂತರ ನನಗೆ ಕರೆ ಬಂತು. 1 ಲಕ್ಷ 80 ಸಾವಿರ ಪೌಂಡ್‌ಗೆ ಒಪ್ಪಂದಕ್ಕೆ ಸಿದ್ಧ ಎಂಬ ಸಂದೇಶ ಅದಾಗಿತ್ತು.

ನಾನು ಅಲ್ಲಿ ಮನೆ ಕಟ್ಟಿ, ಉಪ್ಪು ನೀರಿನ ತೀವ್ರತೆ ಕಡಿಮೆ ಮಾಡುವ ಮರಗಳನ್ನು ನೆಡಬೇಕಿತ್ತು. ಇದಕ್ಕೆಲ್ಲ ತುಂಬ ಹಣ ವೆಚ್ಚವಾಗುತ್ತಿತ್ತು. ನಾನು ಹಿಂತೆಗೆಯಲಿಲ್ಲ. ಬ್ಯಾಂಕು, ಪರಿಚಿತರು ಹಾಗೂ ಸ್ನೇಹಿತರ ಬಳಿ ಹಣ ಒಟ್ಟುಗೂಡಿಸಿ `ನೆಕೆರ್’ ದ್ವೀಪವನ್ನು ಖರೀದಿಸಿಯೇ ಬಿಟ್ಟೆ. ಇವತ್ತು ನನ್ನ ಸ್ನೇಹಿತರು ಹಾಗೂ ಕುಟುಂಬವೆಲ್ಲ ವಿರಾಮಕ್ಕೆ ತುಂಬ ಇಷ್ಟಪಡುವ ಜಾಗವಾಗಿ ಬೆಳೆದಿದೆ ಅದು. ನನ್ನ ಟಿವಿ ಧಾರಾವಾಹಿಯ ಕೊನೆ ಭಾಗ `ದ ರೆಬೆಲ್ ಬಿಲೇನಿಯರ್’ ಅನ್ನು ಅಲ್ಲೇ ಚಿತ್ರೀಕರಿಸಲಾಯಿತು. ವರ್ಷಗಳ ಹಿಂದೆ ನಾನು ಮತ್ತು ಜೋನ್ ಟೆರೇಸ್ ಮೇಲೆ ನಿಂತು ಬೀಚ್‌ನ ಯಾವ ಸುಂದರ ದೃಶ್ಯಕ್ಕೆ ಸಾಕ್ಷಿಯಾಗಿದ್ದೆವೋ ಅದೇ ಆಯಾಮವನ್ನೇ ಆ ಧಾರಾವಾಹಿ ತುಣುಕಲ್ಲಿ ಸೆರೆಹಿಡಿಯಲಾಯಿತು.

ನನಗೆ `ವರ್ಜಿನ್ ಏರ್‌ವೇಸ್’ನ ಕನಸು ಟಿಸಿಲೊಡೆದಿದ್ದೂ ಜೋನ್ ಜತೆಗಿನ ಮತ್ತೊಂದು ರಜಾದಿನದ ವಿಹಾರದಲ್ಲಿ. ನಾವು ಪ್ಯೂರ್‍ಟೊ ರಿಕೋಕ್ಕೆ ಹೋಗುವವರಿದ್ದೆವು. ಆದರೆ ನಿಲ್ದಾಣ ತಲುಪುತ್ತಲೇ ವಿಮಾನ ರದ್ದಾಗಿದ್ದು ತಿಳಿಯಿತು. ಜನರು ಹತಾಶರಾಗಿ ಅತ್ತಿತ್ತ ತಿರುಗಾಡಿದ್ದು ಬಿಟ್ಟರೆ ಮತ್ತೇನೂ ಮಾಡುತ್ತಿರಲಿಲ್ಲ. ಎರಡು ಸಾವಿರ ಡಾಲರ್‌ಗೆ ಚಿಕ್ಕ ವಿಮಾನವೊಂದನ್ನು ಖರೀದಿಸಿದರೆ ಅಲ್ಲಿರುವಷ್ಟು ತಲೆಗಳಿಗೆ ಆ ಮೊತ್ತವನ್ನು ಒಡೆದು ನೋಡಿದರೆ ಪ್ರತಿಯೊಬ್ಬರಿಗೆ ಎಷ್ಟು ತಗಲುತ್ತದೆ ಎಂದು ಲೆಕ್ಕ ಹಾಕಿದೆ. 39 ಡಾಲರ್ ಎಂಬ ಉತ್ತರ ಬಂತು. ಆ ಕ್ಷಣವೇ ಒಂದು ಕಪ್ಪು ಬೋರ್ಡ್ ಅನ್ನು ಕೇಳಿ ಪಡೆದುಕೊಂಡು ಅದರಲ್ಲಿ ನನ್ನ ಕನಸು ಬಿತ್ತಿಯೇ ಬಿಟ್ಟೆ: ವರ್ಜಿನ್ ಏರವೇಸ್, ಸಿಂಗಲ್ ಫೈಟ್ ಟು ಪೋರ್‍ಟೊರಿಕೊ, ಡಾಲರ್ 39. ಅದಾಗಿ ಕೆಲ ವರ್ಷಗಳ ನಂತರ ಆ ಕನಸು ಸಾಕಾರವಾಗಿದ್ದು ನಿಜವಾದರೂ ಆಸೆ ಅವತರಿಸಿದ್ದು ಮಾತ್ರ ರಜಾ ವಿಹಾರದಲ್ಲಿ. ಇವತ್ತು ವರ್ಜಿನ್ ವಿಮಾನಗಳು ಜಗತ್ತಿನ 30 ಜಾಗಗಳಿಗೆ ಹಾರಾಡುತ್ತಿದೆ! ಇದೀಗ ವರ್ಜಿನ್ ಗ್ಲಾಗ್ಟಿಕ್ ಎಂಬ ವಿಮಾನ ಬಾಹ್ಯಾಕಾಶ ಯಾನಕ್ಕೂ ಲಭ್ಯವಾಗುತ್ತಿದೆ.

ಜಮೈಕಾದಲ್ಲಿ ಸಂಗೀತದ ಬ್ಯಾಂಡ್‌ಗಳನ್ನು ಕೊಂಡುಕೊಳ್ಳುವುದರಿಂದ ಆರಂಭವಾದ ವಿಹಾರ ದ್ವೀಪ ಹಾಗೂ ಏರ್‌ಲೈನ್ ಕೊಂಡುಕೊಳ್ಳುವವರೆಗೆ ಮುಂದುವರೆಯಿತು. ಇವೆಲ್ಲ ಸಸಾರಕ್ಕೆ ಆಗಿದ್ದು ಎಂದು ಹೇಳುತ್ತಿಲ್ಲ. ಆದರೆ ಬದುಕಿನ ಬಗ್ಗೆ ಒಂದು ಸಕಾರಾತ್ಮಕ ನೋಟವಿದ್ದರೆ, ಕಣ್ಮುಂದೆ ಗುರಿಯಿದ್ದರೆ, ಪರಿಶ್ರಮ ನಿಮ್ಮದಾದರೆ, ಕೆಲಸದಲ್ಲಿ ಮಜ ಕಂಡುಕೊಳ್ಳುವುದು ತಿಳಿದರೆ… ಅಷ್ಟೇ ಜೀವನ ಅಂತಂದ್ರೆ.