ಅಸಂಭವ (1986) – ಯಾರಿಗೆ ಬಂತು? ಎಲ್ಲಿಗೆ ಬಂತು?

ಸಾಹಿತ್ಯ : ಸಿದ್ಧಲಿಂಗಯ್ಯ
ಸಂಗೀತ : ಶಂಕರ್-ಗಣೇಶ್
ಗಾಯನ : ರಮೇಶ್

ಯಾರಿಗೆ ಬಂತು ಎಲ್ಲಿಗೆ ಬಂತು
ನಲವತ್ತೇಳರ ಸ್ವಾತಂತ್ರ್ಯ
ಟಾಟಾ ಬಿರ್ಲಾ ಜೋಬಿಗೆ ಬಂತು
ಜನಗಳ ತಿನ್ನುವ ಬಾಯಿಗೆ ಬಂತು

ಕೋಟ್ಯಾಧೀಶನ ಕೋಣೆಗೆ ಬಂತು
ನಲವತ್ತೇಳರ ಸ್ವಾತಂತ್ರ್ಯ
ಬಡವನ ಮನೆಗೆ ಬರಲಿಲ್ಲ
ಬೆಳಕಿನ ಕಿರಣ ತರಲಿಲ್ಲ

ಗೋಳಿನ ಕಡಲನು ಬತ್ತಿಸಲಿಲ್ಲ
ಸಮತೆಯ ಹೂವನು ಅರಳಿಸಲಿಲ್ಲ
ಹಣವಂತರು ಕೈಸನ್ನೆ ಮಾಡಿದರೆ
ಕತ್ತಲೆಯಲ್ಲಿ ಬೆತ್ತಲೆಯಾಯಿತು
ಯಾರೂ ಕಾಣದ ಸ್ವಾತಂತ್ರ್ಯ
ನಲವತ್ತೇಳರ ಸ್ವಾತಂತ್ರ್ಯ

ಸಾವಿರಾರು ಜನ ಗೋರಿಯಾದರು
ಲಕ್ಷ ಲಕ್ಷ ಜನ ಗಲ್ಲಿಗೇರಿದರು
ರೈತ ಕಾರ್ಮಿಕರು ರಕ್ತವ ಕೊಟ್ಟರು
ಯಾರಿಗೆ ಬಂತು ಸ್ವಾತಂತ್ರ್ಯ
ನಲವತ್ತೇಳರ ಸ್ವಾತಂತ್ರ್ಯ

ಪೋಲೀಸರ ಬೂಟಿಗೆ ಬಂತು
ಮಾಲೀಕರ ಚಾಟಿಗೆ ಬಂತು
ಬಂದೂಕದ ಗುಂಡಿಗೆ ಬಂತು
ನಲವತ್ತೇಳರ ಸ್ವಾತಂತ್ರ್ಯ

ಪಾರ್ಲಿಮೆಂಟಿನ ಕುರ್ಚಿಯ ಮೇಲೆ
ವರ್ಷಗಟ್ಟಲೆ ಚರ್ಚೆಗೆ ಕೂತು
ಬಡವರ ಬೆವರು ರಕ್ತವ ಕುಡಿದು
ಏಳಲೇಇಲ್ಲ ಸ್ವಾತಂತ್ರ್ಯ
ನಲವತ್ತೇಳರ ಸ್ವಾತಂತ್ರ್ಯ

ಯಾರಿಗೆ ಬಂತು ಎಲ್ಲಿಗೆ ಬಂತು
ನಲವತ್ತೇಳರ ಸ್ವಾತಂತ್ರ್ಯ?

About sujankumarshetty

kadik helthi akka

Posted on ಆಗಷ್ಟ್ 9, 2009, in ಕವನ, ಚಿತ್ರಗೀತೆ, ಪ್ರೊ. ಸಿದ್ದಲಿಂಗಯ್ಯ. Bookmark the permalink. 1 ಟಿಪ್ಪಣಿ.

ನಿಮ್ಮ ಟಿಪ್ಪಣಿ ಬರೆಯಿರಿ