AKKA Convention Souvenirs – An Overview – ಜೀವಿ ಕಂಡಂತೆ ಶಿಕಾಗೋ ವಿಶ್ವ ಕನ್ನಡ ಸಮ್ಮೇಳನ

Manthana
ಸಂಸ್ಮರಣ ಗ್ರಂಥಗಳು ಕನ್ನಡ ಸಮ್ಮೇಳನಗಳ ಅವಿಭಾಜ್ಯ ಅಂಗ. ಗ್ರಂಥಗಳಲ್ಲಿ ಹೆಪ್ಪುಗಟ್ಟುವ ಚಿಂತನೆಗಳು, ವಿಚಾರಗಳು, ಮಾಹಿತಿಗಳು ಸಂಗ್ರಹಯೋಗ್ಯವಾಗಿರಬೇಕು. ಹಾಗಿದ್ದಲ್ಲಿ ಮಾತ್ರ ಒಂದು ಸಮ್ಮೇಳನದ ನೆನಪು ಬಹುಕಾಲ ಮನದಲ್ಲಿ ಉಳಿಯುತ್ತದೆ. ಹಾಗಾಗದಿದ್ದಲ್ಲಿ ವಿದ್ಯಾರಣ್ಯ ಕನ್ನಡ ಸಂಘದವರು ಮೊನ್ನೆ ಪ್ರಕಟಿಸಿದ ಆಕರ್ಷಕ ಪುಸ್ತಕ ‘ಮಂಥನ’ ವಾಗುತ್ತದೆ!
ಶಿಕಾಗೊದಲ್ಲಿ ನಡೆದ ಐದನೆಯ ವಿಶ್ವ ಕನ್ನಡ ಸಮ್ಮೇಲನದ ಮೂರು ದಿವಸದ ಕನ್ನಡಮ್ಮನ ವಿಶ್ವಜಾತ್ರೆ ಉಡುಪಿಯ ಪರ್ಯಾಯದಂತೆ ಎರಡು ವರ್ಷಕ್ಕೊಮ್ಮೆ ಬರುವ ಹಬ್ಬ. ಜಾತ್ರೆಗೆ ಸೇರಿದವರು 3-4 ಸಾವಿರ ಕನ್ನಡಿಗರಾದರೆ ಅದಕ್ಕಾಗಿ ಅಹರ್ನಿಶಿ ದುಡಿದವರು ‘ಅಕ್ಕದ ಕೆಲವು ಸದಸ್ಯರು, ವಿದ್ಯಾರಣ್ಯ ಕೂಟದ ನೂರಾರು ಸ್ವಯಂಸೇವಕರು(ಡಿಂಗರಿಗರು), ಅದರಲ್ಲಿ ಕುತೂಹಲ ತಾಳಿದವರು ಲಕ್ಷಾವಧಿ ಕನ್ನಡಾಂಬೆಯ ಅಭಿಮಾನಿಗಳು(ಭಕ್ತರು).

ಸಮ್ಮೇಲನದ ನೆನಪುಗಳನ್ನು ವಾಚಕರೊಂದಿಗೆ ಹಂಚಿಕೊಳ್ಳುವಾಗ, ಅದರ ಫಲಶ್ರುತಿಯ ಬಗ್ಗೆ ಬರೆಯುವಾಗ, ಈ ಮೊದಲೆ ಭಾಗವಹಿಸಿದ ಮೊದಲ ಎರಡು ಸಮ್ಮೇಲನಗಳ (ಹ್ಯೂಸ್ಟನ್, ಡೆಟ್ರಾಯಿಟ್)ನೆನಪು ಬರುವುದು ಸಹಜ. ವರ್ತಮಾನದ ಸಮ್ಮೇಲನದ ಬಗ್ಗೆ ಕೆಲವು ಮಾತು ಬರೆಯುತ್ತ ಮುಂದೆ ಭವಿಷ್ಯದಲ್ಲಿ ಬರಲಿರುವ ಸಮ್ಮೇಲನದ ಆಯೋಜಕರಿಗೆ ಕೆಲವು ಸಲಹೆಗಳನ್ನು ಕೊಡಲು ಇಷ್ಟಪಡುತ್ತೇನೆ.

ಸಮ್ಮೇಲನ ಶುಕ್ರವಾರ, ಶನಿವಾರ ಮತ್ತು ರವಿವಾರ ಇರುವುದು ರೂಢಿ. ಮೊದಲನೆಯ ದಿನ ದೂರದಿಂದ ಪ್ರತಿನಿಧಿಗಳು ಬರುತ್ತಾರೆ. ಅವರು ತಮ್ಮ ವಸತಿಗೃಹ ಹುಡುಕಿ, ಸಮ್ಮೇಲನದ ಬ್ಯಾಚ್ ಹಾಗೂ ಸ್ಮರಣ ಸಂಚಿಕೆಯ ಜೊತೆಗೆ ಕಾರ್ಯಕ್ರಮದ ಪುಸ್ತಿಕೆ ಪಡೆದು, ಅಲ್ಪೋಪಹಾರ ಸೇವಿಸಿ ಸಭಾಗೃಹಕ್ಕೆ ಬರಲು ಕೆಲಸಲ ತಡವಾಗುವ ಸಂಭವ ಇರುತ್ತದೆ. ಮೊದಲ ದಿನ ದೀಪಪ್ರಜ್ವಲಿಸಿ ಬರಿ ಮನರಂಜನೆ ಮಾತ್ರ ಇಟ್ಟು ಮರುದಿನ ಬೆಳಿಗ್ಗೆ ಉದ್ಘಾಟನಾ ಭಾಷಣ ಇಟ್ಟರೆ ಒಳ್ಳೆಯದು. ಮೆರವಣಿಗೆಯನ್ನು ರವಿವಾರ ಮುಂಜಾನೆ ಇಡಬಹುದು. ಮೊದಲ ಎರಡು ಸಮ್ಮೇಲನಗಳಲ್ಲಿ ಹೀಗೆ ನಡೆದಿತ್ತು.

ಸಮ್ಮೇಳನದ ಸ್ಮರಣ ಸಂಚಿಕೆಗಳನ್ನು ಕುರಿತು ಒಂದೆರಡು ಮಾತು. ಬಹಳ ಹಣ ವೆಚ್ಚಮಾಡಿ, ಅತ್ಯುತ್ತಮ ಕಾಗದ ಬಳಸಿ, ವರ್ಣರಂಜಿತ ಛಾಯಾಚಿತ್ರಗಳನ್ನು ಬಳಸಿ, ಸಂಸ್ಮರಣೀಯವಾಗುವಂತೆ ಗ್ರಂಥ ಪ್ರಕಟಿಸುವುದು ಉದ್ದೇಶ. ಪ್ರಸ್ತುತ ಸ್ಮರಣ ಸಂಚಿಕೆ (ಮಂಥನ) ಬಹಳ ಚೆನ್ನಾಗಿ ಮುದ್ರಣಗೊಂಡಿದೆ. ಎಲ್ಲ ಸಮಿತಿಗಳ, ಉಪಸಮಿತಿಗಳ, ಶುಭಾಶಯ ಕಳಿಸಿದವರ ವರ್ಣರಂಜಿತ ಫೋಟೋಗಳಿವೆ. ಕವಿತೆಗಳು(19), ಲೇಖನಗಳು(35), ಸಂಶೋಧಪರ ಲೇಖನ(2), ನಾಟಕ(1) ಇವೆ. ಇನ್ನಷ್ಟು ವೈವಿಧ್ಯ ತರಬಹುದಾಗಿತ್ತು. ಇಂಗ್ಲಿಷ್ – ಹಿರಿಯರ ವಿಭಾಗದಲ್ಲಿ (7) ಕಿರಿಯರ ವಿಭಾಗದಲ್ಲಿ (ಹಲವಾರು) ಲೇಖನಗಳು ಕವಿತೆಗಳೂ ಇವೆ. ಒಂದೆರಡು ಲೇಖನಗಳು ಉತ್ತಮ ಮಟ್ಟದವು. ಹೆಚ್ಚಿನವು ತೀರ ಸಾಧಾರಣ, ಇನ್ನು ಕೆಲವನ್ನು ಅಚ್ಚುಮಾಡದೆ ಬಿಟ್ಟಿದ್ದರೆ ಸಂಚಿಕೆಗೆ ಕನಿಷ್ಠ 35 ಅಂಕಗಳಾದರೂ ಲಭ್ಯವಾಗುತ್ತಿತ್ತು.

ಚಿಕಾಗೊ ಪ್ರದೇಶದಲ್ಲಿ ನಳಿನಿ ಮಯ್ಯ, ತ್ರಿವೇಣಿ ಶ್ರೀನಿವಾಸರಾವ್, ಅಣ್ಣಾಪುರ ಶಿವಕುಮಾರ್ ಅವರಂಥಹ ಅನುಭವಿ ಬರಹಗಾರರಿದ್ದಾರೆ. ಅವರನ್ನು ಸಂಪಾದನೆಯ ಕೆಲಸದಲ್ಲಿ ತೊಡಗಿಸಿದ್ದರೆ ಸ್ಮರಣ ಸಂಚಿಕೆ ಉತ್ತಮವಾಗಬಹುದಿತ್ತೇನೋ. ಮೊದಲನೆಯ ವಿಶ್ವ ಸಮ್ಮೇಳನದ ಸ್ಮರಣ ಸಂಚಿಕೆಯನ್ನು (ದರ್ಶನ- ಹ್ಯೂಸ್ಟನ್ ಕನ್ನಡ ಸಂಘ) ಶಿಕಾರಿಪುರ ಹರಿಹರೇಶ್ವರರು ಸಂಪಾದಿಸಿದ್ದರು. ನಾಡಿನ, ಹೊರನಾಡಿನ, ಅನಿವಾಸಿ ಲೇಖಕರಿಂದ ಲೇಖನ ಬರೆಸಿದ್ದರು. ಬಹಳ ಚೆನ್ನಾಗಿತ್ತು. ಸಂಗ್ರಹಯೋಗ್ಯ. ಅದರ ಬಗ್ಗೆ ವಿವರವಾಗಿ ಹಿಂದೊಮ್ಮೆ ಬರೆದಿದ್ದೆ. ಎರಡನೆಯ ಸಮ್ಮೇಲನದ ಸ್ಮರಣ ಸಂಚಿಕೆ (ಚಂದನ- ಪಂಪ ಕನ್ನಡ ಕೂಟ, ಡೆಟ್ರಾಯಿಟ್) ಅಷ್ಟಕ್ಕಷ್ಟೆ. ಒಬ್ಬ ಲೇಖಕನ ಹಲವಾರು ಲೇಖನ ಇರುವುದು, ಪೋಲಿ ಜೋಕ್ ಉಳ್ಳ ಅನಾಮಿಕ ಲೇಖನ ಪ್ರಕಟಿಸುವುದು, ಸರಿಯಲ್ಲ ಎಂದು ನಾನು ಆಗ ಟೀಕಿಸಿ ಬರೆದಿದ್ದೆ.

ಮೂರನೆಯ ಸಮ್ಮೇಲನದ ಸ್ಮರಣ ಸಂಚಿಕೆಯನ್ನು ಡಾ|ಡಿ.ಬಿ.ವಾಸುದೇವ್ ಅವರು ಸಂಪಾದಿಸಿದ್ದರು. (ವಿಕಾಸ- ಶ್ರೀಗಂಧ ಕನ್ನಡ ಸಂಘ, ಫ್ಲಾರಿಡಾ) ಹರಿಹರೇಶ್ವರರಿಂದ ಅವರು ಹಲವು ಲೇಖಕರ ವಿಳಾಸ ಪಡೆದು ಲೇಖನ ಅಹ್ವಾನಿಸಿದ್ದರು. ನನಗೂ ಪತ್ರ ಬಂದಿತ್ತು. ವಿಷಯ ಪುನರುಕ್ತಿಯಾಗಬಾರದೆಂದು ನಾವು ಬರೆಯಲಿರುವ ವಿಷಯ ಮೊದಲೇ ತಿಳಿಸಬೇಕೆಂದು ಸಂಪಾದಕರು ಎಚ್ಚರವಹಿಸಿದ್ದರು. ನಾನು ಮೂರು ಲೇಖಕರ ಬಗ್ಗೆ ಬರೆಯಬಹುದೆ? ಎಂದಾಗ ಬೇಂದ್ರೆಯವರ ಬಗ್ಗೆ ಬರೆಯಲು ಕೇಳಿದ್ದರು. ‘ಗಂಗಾವತರಣ ಪದ್ಯದ ವಿವರ ವಿಶ್ಲೇಷಣೆ ಮಾಡಿದ್ದೆ. ಲೇಖನ ಸ್ವಲ್ಪ ದೊಡ್ಡದೇ ಆಗಿತ್ತು. ಪರವಾಗಿಲ್ಲ ಎಂದಿದ್ದರು. ಕರ್ನಾಟಕದ ಲೇಖಕರಿಗೆ ಸ್ಮರಣ ಸಂಚಿಕೆಯ ಗೌರವ ಪ್ರತಿ ಕೊಡಲು ಮಲ್ಲೇಶ್ವರಂ ಕ್ಲಬ್ ನಲ್ಲಿ ಒಂದು ಸಭೆ ಕರೆದು ನನ್ನನ್ನು ಆಮಂತ್ರಿಸಿದ್ದರು. ನನ್ನ ಪ್ರತಿ ಪಡೆಯಲು ಬೆಂಗಳೂರಿನಲ್ಲಿದ್ದ ನನ್ನ ಸೋದರನನ್ನು ಕಳಿಸಿದ್ದೆ. ಅವರು ಗ್ರಂಥದೊಂದಿಗೆ ಸಂಭಾವನೆಯ ಚೆಕ್ ಕಳಿಸಿದ್ದರು. ಅಷ್ಟು ಸಂಭಾವನೆಯನ್ನು ನನ್ನ ಜೀವನದಲ್ಲೇ ಯಾವುದೇ ಲೇಖನಕ್ಕಾಗಿ ಪಡೆದಿಲ್ಲ.(ರೂ.1000). ನಾಲ್ಕನೆಯ ಸಮ್ಮೇಲನ ನಡೆಸಿದವರು (ಸ್ವರ್ಣವಾಹಿನಿ- ಕಾವೇರಿ ಕನ್ನಡ ಸಂಘ, ಬಾಲ್ಟಿಮೋರ್) ಒಂದು ಕಾದಂಬರಿ ಸ್ಪರ್ಧೆ ಏರ್ಪಡಿಸಿ ಬಹುಮಾನಿತ ಲೇಖಕರನ್ನು ಬಾಲ್ಟಿಮೋರ್‌ಗೆ ಕರೆಸಿದ್ದರು. ನನ್ನ ಮಾತಿನ ಉದ್ದೇಶವೆಂದರೆ, ವಿಶ್ವ ಸಮ್ಮೇಲನ ನಡೆಸುವವರು ಮನಸ್ಸು ಮಾಡಿದರೆ ಅಸಾಧ್ಯವನ್ನೂ ಸಾಧಿಸಬಹುದು. ಅಲಕ್ಷ್ಯ ಮಾಡಿದರೆ ಬೇರೆ ಏನೂ ಆಗಬಹುದು.

ಇನ್ನು ರಾಜ್ಯದ ನೂರಾರು ಕಲಾವಿದರನ್ನು ಸರಕಾರದವರು ತಮ್ಮ ವೆಚ್ಚದಿಂದ ಅಮೇರಿಕೆಗೆ ಕಳಿಸುತ್ತಾರೆ. ಇದು ಶ್ಲಾಘನೀಯ ಅಂಶವೇ. ಮೊದಲನೆಯ ಸಮ್ಮೇಲನದಲ್ಲಿ ಸರಕಾರ ಕಳಿಸಿದ ಡೊಳ್ಳು ಕುಣಿತದವರು, ಶತಾವಧಾನಿ ಗಣೇಶ್-ಚಿತ್ರಕಲಾವಿದ ವರ್ಮಾ ಅವರ ಕಾವ್ಯ-ಚಿತ್ರಗಳ ಜುಗಲಬಂದಿ, ಇಬ್ಬರು ಜ್ಞಾನಪೀಠ ಪ್ರಶಸ್ತಿ ಪಡೆದ ಸಾಹಿತಿಗಳ ಉಪಸ್ಥಿತಿ ಮತ್ತು ಭಾಷಣಗಳನ್ನು ನಾನು ಇನ್ನೂ ಮರೆತಿಲ್ಲ. ಎರಡನೆಯ ಸಲ ಮುಖ್ಯ ಅತಿಥಿಯಾಗಿ ಬಂದ ಕವಿ ನಿಸಾರ ಅಹಮದರನ್ನು ನಾಲ್ಕು ಅನಿವಾಸಿ ಕನ್ನಡಿಗರು ಕರೆಸಿಕೊಂಡಿದ್ದರು. ಸರಕಾರದವರು ಪ್ರತಿ ಸಮ್ಮೇಲನಕ್ಕೆ ಜ್ಞಾನಪೀಠ ಪ್ರಶಸ್ತಿ, ಪಂಪ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕೆಡೆಮಿ ಪ್ರಶಸ್ತಿ ವಿಜೇತರನ್ನು ಕರೆಸುವ ಸಂಪ್ರದಾಯ ಇಟ್ಟುಕೊಂಡರೆ ಒಳ್ಳೆಯದು. ಈ ಸಲ ಒಬ್ಬ ಹಿರಿಯ ಸಾಹಿತಿಯನ್ನು ಅವರ ಅಭಿಮಾನಿಗಳು ಕರೆಸಿದ್ದರೆಂದು ಕೇಳಿರುವೆ. ಹಾಗೆಯೇ, ಡಾ|ಚಂದ್ರಶೇಖರ ಕಂಬಾರ, ಜಯಂತ ಕಾಯ್ಕಿಣಿ, ಕುಂ.ವೀರಭದ್ರಪ್ಪ (ಕೇಂದ್ರ ಸಾಹಿತ್ಯ ಅಕೆಡೆಮಿ ಪ್ರಶಸ್ತಿ ಪಡೆದ ಸಾಹಿತಿ) ಆಹ್ವಾನಿತ ಪ್ರಮುಖರು. ಅವರಿಗೆ ಮುಖ್ಯ ವೇದಿಕೆಯಲ್ಲಿ ಭಾಷಣ ಮಾಡಲು ಹೆಚ್ಚು ಕಾಲಾವಕಾಶವನ್ನು ಕಾರ್ಯಕ್ರಮ ಸಮಿತಿಯವರು ದಯಪಾಲಿಸಲಿಲ್ಲ.

ಮನರಂಜನೆಯ ಕಾರ್ಯಕ್ರಮದಲ್ಲಿ ನಾಟಕ, ನೃತ್ಯ, ಯಕ್ಷಗಾನ, ಸಂಗೀತ, ವಾದ್ಯ, ಗಾಯನ-ಗಮಕ, ಜನಪದಗೀತ, ಹಾಸ್ಯರಸಾಯನ ಮೊದಲಾದ ಕಾರ್ಯಕ್ರಮ ನಾಡಿನ ಕಲಾವಿದರಿಂದ, ಅನಿವಾಸಿ ಕನ್ನಡ ಕೂಟಗಳಿಂದ ಪ್ರತಿಸಲ ನಡೆಯುತ್ತದೆ. ಈ ಸಲ ಕೂಡ ಚೆನ್ನಾಗಿಯೇ ನಡೆಯಿತು ಎಂದು ಹೇಳಬೇಕು. ಚಲನಚಿತ್ರ ಕಲಾವಿದರ ಕಾರ್ಯಕ್ರಮ ಮಾತ್ರ ನಿರಾಶಾದಾಯಕವಾಗಿತ್ತು. ಕೆಲವು ನಟರು ಬರಿ ಮುಖತೋರಿಸಲು ಬಂದಂತಿತ್ತು. ಸಿನೆಮಾಗೀತ ಪ್ರತ್ಯಕ್ಷ ಹಾಡಿದರೆ ಚೆನ್ನಾಗಿತ್ತು ಎಂಬ ಟೀಕೆ ಕೇಳಿಬಂತು. ಅಶ್ವತ್ಥ ಅವರ ಸಂಗೀತ ಕೂಡ ಅಷ್ಟು ಪ್ರಭಾವಿಯಾಗಿರಲಿಲ್ಲ. ನನಗೆ ನೆನಪಿದೆ, ಮೊದಲನೆಯ ಸಮ್ಮೇಲನದಲ್ಲಿ (ಹ್ಯೂಸ್ಟನ್) ಕೊನೆಯ ದಿನ ಬ್ಯಾಂಕ್ವೆಟ್ ಹಾಲ್‌ನಲ್ಲಿ ಎಲ್ಲರಿಗೂ ಭೂರಿ ಭೋಜನವಿತ್ತು. ಅಲ್ಲೇ ಸಂಗೀತಕ್ಕಾಗಿ ದೊಡ್ಡ ಸ್ಟೇಜ್ ನಿರ್ಮಿಸಲಾಗಿತ್ತು. ಎಂಟು ಗಣ್ಯ ಜನರಿಗೆ ಸನ್ಮಾನ ಮಾಡಲಾಯಿತು. ಅಂಥ ಸನ್ಮಾನ ನಂತರದ ಸಮ್ಮೇಲನಗಳಲ್ಲಿ ಮಾಡಿದಂತಿಲ್ಲ. ಸಮ್ಮೇಳನ ಆಯೋಜನೆ ವಿಚಾರದಲ್ಲಿ ಅಮೆರಿಕಾದಲ್ಲಿ ಇನ್ನೊಬ್ಬ ಜಯರಾಮ ನಾಡಿಗರು ಹುಟ್ಟಿಬರಬೇಕಾಗಿದೆ!

‘ನಾವು ಮಾಡಿದ ಸಮ್ಮೇಲನದ ವೆಚ್ಚದ ಅಂದಾಜು ತಪ್ಪಿದೆ, 25 ಸಾವಿರ ಡಾಲರಿನ ಕೊರತೆಯಾಗಿದೆ. ದಾನಿಗಳು ಮುಂದೆ ಬರಬೇಕು ಎಂದು ಹ್ಯೂಸ್ಟನ್ ಕನ್ನಡ [^] ಸಮ್ಮೇಳನದ ರೂವಾರಿ ಜಯರಾಮ ನಾಡಿಗರು ಸಭಿಕರಿಗೆ ಕರೆನೀಡಿದರು. ನಂತರ ಕೆಲವೇ ನಿಮಿಷಗಳಲ್ಲಿ, ಮತ್ತೆ ಸಭಿಕರನ್ನು ಉದ್ದೇಶಿಸಿ, ‘ಸಂತಸದ ಸುದ್ದಿ ಇದೆ. ಇಷ್ಟು ಸಣ್ಣ ಮೊತ್ತಕ್ಕಾಗಿ ಎಲ್ಲರನ್ನು ಕೇಳುವ ಅವಶ್ಯಕತೆ ಇರಲಿಲ್ಲ ಎಂದು ಹೇಳಿ ಒಬ್ಬ ದಾನಿಗಳು ಚೆಕ್ ಕೊಟ್ಟಿದ್ದಾರೆ. ಹೆಸರು ಹೇಳಬೇಡಿ ಅಂದಿದ್ದಾರೆ ಎಂದು ಘೋಷಿಸಿದರು. ಆಗ ಸಭಿಕರಿಗೆಲ್ಲ ಹರ್ಷ, ಅನಾಮಿಕ ದಾನಿಯ ಬಗ್ಗೆ ಅಭಿಮಾನ ಉಂಟಾಗಿತ್ತು. ಅಂದು ಅಶ್ವತ್ಥರು ಸ್ಟೇಜಿಗೆ ಹಾಡಲು ಬಂದಾಗ 200 ಜನ ಅವರ ಜೊತೆಗೆ ನಿಂತು ‘ಜಯಹೇ ಕರ್ನಾಟಕ ಮಾತೆ’ ಹಾಡಿದ್ದರು. ನಾವೆಲ್ಲರೂ ಊಟಮಾಡುವುದನ್ನು ಬಿಟ್ಟು ಹಾಡು ಕೇಳುತ್ತಿದ್ದೆವು. ಆದರೆ ಈ ಸಲದ ಅಶ್ವತ್ಥರ ಹಾಡು ಜನಪ್ರಿಯತೆಯ ಬೆನ್ನು ಹತ್ತಿ ಹೊರಟು ನೀರಸವಾಯಿತು.

ನಾನು ಮರೆಯಲಾರದ ಸನ್ನಿವೇಶಗಳು ಇನ್ನೂ ಕೆಲವಿವೆ. 28 ವರ್ಷದ ತರುಣ (ವಿಕ್ರಮ್ ಸಂಪತ್), ಮೈಸೂರು [^] ಒಡೆಯರ ಅಕಥಿತ ಕಥೆಯ ಬಗ್ಗೆ 728 ಪುಟಗಳ ಇಂಗ್ಲಿಷ್ ಗ್ರಂಥ ಬರೆದದ್ದು. ಅದನ್ನು ಬಿಡುಗಡೆ ಮಾಡಲು ಅಮೇರಿಕೆಗೆ ಬಂದದ್ದು. 30 ವರ್ಷಗಳಿಂದ ಕತ್ತಲೆಯಲ್ಲಿ ಕೊಳೆಯುತ್ತಿದ್ದ ‘ಜನಪದ ಮಹಾಭಾರತ ಅಮೇರಿಕೆಯ ಒಬ್ಬ ದಾನಶೂರರ (ಡಾ|ಕೃಷ್ಣೇಗೌಡ) ಸಹಾಯದಿಂದ ಪ್ರಕಾಶಕ್ಕೆ ತಂದು ಅದರ ಬಗ್ಗೆ ಡಾ| ಪಿ.ಕೆ.ರಾಜಶೇಖರ ಮಾತಾಡಿದ್ದು. ಪ್ರಸಿದ್ಧ ವಾಗ್ಮಿಗಳಾದ ಸ್ವಾಮಿ ಸುಖಬೋಧಾನಂದರ ಉಪಸ್ಥಿತರಿದ್ದದ್ದು. ಭಾರತ ವಾಚನ ಪ್ರವಚನ ಖ್ಯಾತಿಯ ವಯೋವೃದ್ಧ ಜ್ಞಾನವೃದ್ಧ ಮತ್ತೂರು ಕೃಷ್ಣ ಮೂರ್ತಿಯವರು ಆಗಮನ. ಚಂದ್ರಶೇಖರ ಕಂಬಾರರು ತಮ್ಮ ಪದ್ಯ ಜಾನಪದ ಶೈಲಿಯಲ್ಲಿ ಹಾಡಿದ್ದು. ಡಾ| ಭೈರಪ್ಪನವರ ತಮ್ಮ ‘ಅನಾವರಣದ’ ಬಗ್ಗೆ ತಮ್ಮ ವಿಚಾರ ಅನಾವರಣಗೊಳಿಸಿದ್ದು. ನಾನು ಕಾವ್ಯವಾಚನ ಮಾಡಿದ ಮೇಲೆ ನಂತರ ಭೇಟಿಯಾದಾಗ ಅವರು ನನ್ನ ಪದ್ಯದ ಬಗ್ಗೆ ಮೆಚ್ಚಿಗೆ ಸೂಚಿಸಿದ್ದು.

ಜಯಂತ್ ಕಾಯ್ಕಿಣಿಯವರು ಡಾ| ರಾಜಕುಮಾರರಲ್ಲಿರುವ ಮಗುವಿನ ಮುಗ್ಧತೆಯ ಹಾಗೂ ತಾಯಿಯ ಕರುಣೆಯ ಗುಣ, ಅದರ ಉದಾಹರಣೆ ಕೊಟ್ಟ ಸನ್ನಿವೇಶ ಮನೋಜ್ಞ. (ವೀರಪ್ಪನ್ ಅವರ ಬಿಡುಗಡೆ ಮಾಡಿದಾಗ ನಿನಗೇನು ಬೇಕು ಕೇಳು ಅಂದಾಗ ‘ನಿನ್ನ ಮೀಸೆ ಮುಟ್ಟಿ ನೋಡಬೇಕು ಎಂದಾಗ ಮಗುವಿನ ಮುಗ್ಧತೆ ಕಂಡಿತ್ತು, ನಂತರ ‘ನನ್ನ ಬಿಡುಗಡೆ ಆಯಿತು, ನಿನ್ನ ಬಿಡುಗಡೆ ಯಾವಾಗ!’ ಎಂಬ ಉದ್ಗಾರ ತೆಗೆದಾಗ ಅದು ತಾಯಿಯ ಕರುಳಿನ ಮಿಡಿತದಂತಿತ್ತು). ಪ್ರೊ. ಕೃಷ್ಣೇ ಗೌಡರ ಹಾಸ್ಯರಸಾಯನಕ್ಕಂತೂ ಸ್ಟ್ಯಾಂಡಿಂಗ್ ಒವೇಶನ್ ದೊರೆತದ್ದು ನನ್ನ ಮನದಲ್ಲಿ ಹಚ್ಚಗೆ ಉಳಿದಿವೆ.

Advertisements

About sujankumarshetty

kadik helthi akka

Posted on ಆಗಷ್ಟ್ 9, 2009, in ಡಾ।‘ಜೀವಿ’ ಕುಲಕರ್ಣಿ - ಜೀವನ ಮತ್ತು ಸಾಹಿತ್ಯ. Bookmark the permalink. ನಿಮ್ಮ ಟಿಪ್ಪಣಿ ಬರೆಯಿರಿ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: